Sunday, September 1, 2013

ಅರಸಿಕೆರೆ ತಾಲೂಕಿನ ಅಗ್ರಹಾರಗಳು


ಅರಸೀಕೆರೆ ತಾಲ್ಲೂಕಿನ ಶಾಸನೋಕ್ತ ಅಗ್ರಹಾರಗಳು: ಒಂದು ವಿಶ್ಲೇಷಣೆ
ಡಾ. ಹನುಮನಾಯಕŸ
ಪೀಠಿಕೆ: ಅಗ್ರಹಾರಗಳು ಮಧ್ಯಕಾಲೀನ ದಕ್ಷಿಣ ಭಾರತದ ಸಮಾಜ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಮಹತ್ತರ ಪಾತ್ರ ವಹಿಸಿದ್ದವು. ಗ್ರಾಮಾಂತರ ಪ್ರದೇಶಗಳಲ್ಲಿ ಬ್ರಾಹ್ಮಣರು ಮತ್ತು ಇತರ ಸಾಮಾಜಿಕ ವರ್ಗದವರೊಂದಿಗೆ ವಾಸಿಸುತ್ತಿದ್ದಂತಹ ನೆಲೆಗಳಿಗೆ ಅಗ್ರಹಾರಗಳೆಂದು ಕರೆಯಲಾಗಿದೆ. ಇವುಗಳನ್ನು ಹೆಚ್ಚಾಗಿ ಅರಸರು, ಬ್ರಾಹ್ಮಣರು ಮಹಾಜನರು ನೀಡುತ್ತಿದ್ದ ಸೇವೆಗೆ ಅಂದರೆ ದೇವಾಲಯಗಳಲ್ಲಿ ಪೂಜೆ, ಮತ್ತು ವಿದ್ಯೆಯನ್ನು ನೀಡುವುದಕ್ಕೆ ಪ್ರತಿಯಾಗಿ ಅವರ ಜೀವಿತಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಸ್ಥಾಪಿಸಿದ ನೆಲೆಗಳಾದ್ದವು. ಅಗ್ರಹಾರಗಳ ಕುರಿತು ಕೆಲವು ಸಂಶೋಧಕರು ಅಧ್ಯಯನ ಮಾಡಿದ್ದರೂ ಸಹ ಅರಸೀಕೆರೆ ತಾಲ್ಲೂಕಿನ ಅಗ್ರಹಾರಗಳ ಕುರಿತು ಆಳವಾದ ಅಧ್ಯಯನ ಆಗಿಲ್ಲ.೧ ಈ ಭಾಗದಲ್ಲಿ ಸುಮಾರು ೧೨ನೆಯ ಶತಮಾನದ ಆರಂಭದ ಕಾಲದಲ್ಲಿ (ಕ್ರಿ.ಶ.೧೧೦೫) ಮೊತ್ತಮೊದಲ ಬಾರಿಗೆ ಅಗ್ರಹಾರದ ಉಲ್ಲೇಖವಾಗಿದ್ದು, ಹದಿನೈದನೆಯ ಶತಮಾನದ ಪ್ರಾರಂಭದ (ಕ್ರಿ.ಶ.೧೪೧೧) ಕಾಲದಲ್ಲಿ ಕೊನೆಯ ಉಲ್ಲೇಖವಾಗಿದೆ. ಸುಮಾರು ಮುನ್ನೂರು ವರ್ಷಗಳ ಅಂತರದಲ್ಲಿ ೨೨ ಅಗ್ರಹಾರಗಳು ಇಲ್ಲಿಯ ಶಾಸನಗಳಲ್ಲಿ ಉಲ್ಲೇಖಗೊಂಡಿವೆ. ಇವುಗಳಲ್ಲಿ ಕೆಲವನ್ನು ಹೊಸತಾಗಿಯೂ ಇನ್ನೂ ಕೆಲವನ್ನು ಈಗಾಗಲೆ ಇದ್ದಂತಹ ಹಳೆಯ ಹಳ್ಳಿಗಳನ್ನು ಅಗ್ರಹಾರಗಳಾಗಿ ಪರಿವರ್ತಿಸಿರುವುದನ್ನು ಕಾಣಬಹುದು. ಅಗ್ರಹಾರಗಳನ್ನು ಕುರಿತು ಎಸ್.ಕೆ. ಕೊಪ್ಪಾರವರು ಕೆಲವು ಗಮನಾರ್ಹ ಪ್ರಶ್ನೆಗಳನ್ನು ಎತ್ತಿರುವುದು ಬಹಳ ಮಹತ್ವದ್ದಾಗಿದೆ. ಅವುಗಳೆಂದರೆ ೧) ಮಧ್ಯಕಾಲೀನ ಕೃಷಿ ಸಮಾಜದ ಆರ್ಥಿಕ ವ್ಯವಸ್ಥೆಯಲ್ಲಿ ಅಗ್ರಹಾರಗಳು ವಹಿಸಿದ ಪಾತ್ರವೇನು? ಹಾಗೂ ೨) ಅಗ್ರಹಾರಗಳು ಕೇವಲ ಶಿಕ್ಷಣ ಸಂಸ್ಥೆಗಳಾಗಿರದೇ ಇತರೆ ಕ್ಷೇತ್ರಗಳಲ್ಲಿ ವಹಿಸಿದ ಪಾತ್ರವೇನು? ಈ ಲೇಖನದಲ್ಲಿ ಇಂತಹ ಪ್ರಶ್ನೆಗಳನ್ನು ಆಧಾರವಾಗಿಟ್ಟುಕೊಂಡು, ಅಗ್ರಹಾರಗಳನ್ನು ಏತಕ್ಕಾಗಿ ಸ್ಥಾಪಿಸಿದರು, ಅವುಗಳ ಸ್ಥಾನಮಾನಗಳು ಏನು, ಮತ್ತು ಅವುಗಳು ಮಧ್ಯಕಾಲೀನ ಕರ್ನಾಟಕದ ಸಮಾಜ, ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಮಾಡಿದ ಪರಿಣಾಮಗಳನ್ನು ಕುರಿತು ವಿಮರ್ಶಿಸಲಾಗುವುದು.
ಚಾರಿತ್ರಿಕ ಹಿನ್ನಲೆ: ಅರಸೀಕೆರೆ ತಾಲ್ಲೂಕಿನಲ್ಲಿ ಮಾನವನ ನೆಲೆಗಳನ್ನು ಹಳೇಶಿಲಾಯುಗದ ಕಾಲದಿಂದಲೂ ಗುರುತಿಸಬಹುದು. ಇಂತಹ ನೆಲೆಗಳು ಬೃಹತ್ ಶಿಲಾಯುಗದ ಕಾಲದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ (೬೬) ಕಂಡುಬಂದಿವೆ. ಇತಿಹಾಸದ ಆರಂಭದ ಕಾಲದಿಂದ ಸುಮಾರು ಕ್ರಿ.ಶ.೧೧ನೆಯ ಶತಮಾನದವರೆಗೆ ಮಾನವನ ನೆಲೆಗಳ ಬಗ್ಗೆ ಶಾಸನಗಳಲ್ಲಿ ಬಹಳ ವಿರಳವಾದ (೧೪) ಮಾಹಿತಿ ಸಿಗುತ್ತದೆ. ಆದರೆ ಕ್ರಿ.ಶ.೧೨-೧೩ ನೆಯ ಶತಮಾನದಲ್ಲಿ ಇವುಗಳ ಸಂಖ್ಯೆ ಅತ್ಯಧಿಕವಾಗಿದ್ದುದನ್ನು (೧೬೦) ಶಾಸನಗಳಲ್ಲಿ ಕಾಣಬಹುದು. ಈ ಭಾಗದ ಮಾನವ ನೆಲೆಗಳು ಯಾವುದೇ ನದಿ ಪಾತ್ರ ಇಲ್ಲದಿರುವುದರಿಂದ ಅದರ ಪ್ರಭಾವಕ್ಕೊಳಗಾಗದೇ ಕೇವಲ ಮಳೆಯಾಧಾರಿತ ಕೆರೆ ನೀರಾವರಿ ಅವಲಂಬಿಸಿ ಅಸ್ತಿತ್ವಕ್ಕೆ ಬಂದವುಗಳಾಗಿವೆ. ಇಂತಹ ನೆಲೆಗಳಲ್ಲಿ ಕೆಲವನ್ನು ಕ್ರಿ.ಶ.೧೨ನೆಯ ಶತಮಾನದಿಂದೀಚೆಗೆ ಆಡಳಿತ ವರ್ಗದವರಾದ ಸಾಮಂತ, ಪೆರ್ಗಡೆ, ಪ್ರಭುಗಾವುಂಡ ಮತ್ತಿತರು ಅಗ್ರಹಾರಗಳನ್ನಾಗಿ ಪರಿವರ್ತಿಸಿರುವುದು ಕಂಡುಬರುತ್ತದೆ.
ಅಗ್ರಹಾರಗಳ ಪ್ರಾಚೀನತೆಯನ್ನು ಪೂರ್ವ ಮೌರ್ಯರ ಕಾಲಕ್ಕೆ ಕೊಂಡೊಯ್ಯಬಹುದು.೩ ಇವುಗಳ ಸಂಖ್ಯೆ ಗುಪ್ತರ ಕಾಲದಲ್ಲಿ ಅಧಿಕಗೊಳ್ಳುತ್ತವೆ.೪ ಕರ್ನಾಟಕದಲ್ಲಿ ಕದಂಬರ ಕಾಲದಲ್ಲಿ ಪ್ರಥಮ ಬಾರಿಗೆ ಅಗ್ರಹಾರಗಳು (ತಾಳಗುಂದ) ಅಸ್ತಿತ್ವದಲ್ಲಿದ್ದುದನ್ನು ಕಾಣಬಹುದು.೪ಅ ಲೀಲಾ ಶಾಂತಕುಮಾರಿಯವರು ಅಗ್ರಹಾರಗಳನ್ನು ಸ್ಥಾಪಿಸಲು ಹಲವಾರು ಕಾರಣಗಳನ್ನು ಗುರುತಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ; ೧) ವಿದ್ಯಾಭ್ಯಾಸ ಮತ್ತು ಸಾಂಸ್ಕೃತಿಕ ಬೆಳವಣಿಗೆಗಾಗಿ, ೨) ಜ್ಞಾನಾರ್ಜನೆಯಲ್ಲಿ ತೊಡಗಿದ್ದವರಿಗೆ ಆಹಾರ ಮತ್ತಿತರ ಸೌಕರ್ಯ ಒದಗಿಸಲು, ೩) ಜನರ ಧಾರ್ಮಿಕ ಭಾವನೆಗಳು, ೪) ಒಬ್ಬ ರಾಜ ಅಥವಾ ಅಧಿಕಾರಿ ಯುದ್ಧದಲ್ಲಿ ಜಯಗಳಿಸಿದಾಗ, ೫) ತಾವು ನೀಡಿದ ಮಾತನ್ನು/ಒಪ್ಪಂದವನ್ನು ಪೂರ್ಣಗೊಳಿಸುವುದಕ್ಕಾಗಿ, ೬) ಪಟ್ಟಾಭಿಷೇಕದ ಸಂದರ್ಭದಲ್ಲಿ, ೭) ಬ್ರಾಹ್ಮಣರಲ್ಲಿದ್ದ ವಿದ್ವತ್ತನ್ನು ಗುರುತಿಸುವುದಕ್ಕಾಗಿ, ೮) ತಮ್ಮ ಹೆಸರನ್ನು ಚಿರಸ್ಥಾಯಿಗೊಳಿಸುವುದಕ್ಕಾಗಿ, ೯) ಬ್ರಾಹ್ಮಣರ ಗುಂಪು ವಲಸೆ ಬಂದು ಅಲ್ಲಿ ನೆಲೆಸಲು ತೀಮಾನಿಸಿದಾಗ, ೧೦) ತಮ್ಮ ಪಾಪಕರ್ಮಗಳನ್ನು ಕಳೆದುಕೊಳ್ಳಲು, ಮತ್ತು ೧೧) ಸ್ಥಳೀಯ ದೇವರ ನಿತ್ಯ ಬೇಡಿಕೆಗಳನ್ನು ಪೂರೈಸುವುದಕ್ಕೋಸ್ಕರವಾಗಿ.೫ ಇವು ಹೊರನೋಟಕ್ಕೆ ಪ್ರಮುಖವಾಗಿ ಕಂಡುಬಂದರೂ ಅಂದಿನ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಗಳು ಅಗ್ರಹಾರಗಳ ಉಗಮಕ್ಕೆ ನೆರವಾಗಿದ್ದ ಅಂಶಗಳನ್ನು ವಿದ್ವಾಂಸರು ಗುರುತಿಸುವಲ್ಲಿ ವಿಫಲರಾಗಿದ್ದಾರೆ.
ಅಗ್ರಹಾರದ ವಿವಿಧ ಹೆಸರುಗಳು: ಅಗ್ರಹಾರಗಳನ್ನು ವಿವಿಧ ಹೆಸರಿನಿಂದ ಕರೆಯಲಾಗಿದೆ. ಅವುಗಳೆಂದರೆ ಮಹಾಅಗ್ರಹಾರ, ಪಿರಿಯ ಅಗ್ರಹಾರ, ಅನಾದಿ ಅಗ್ರಹಾರ, ಪರಮೇಶ್ವರದತ್ತಿ ಅಗ್ರಹಾರ, ಉತ್ತಮ ಅಗ್ರಹಾರ, ಕೇಶವಪುರ, ಮತ್ತು ಭತ್ತಗ್ರಾಮ.೮ ಇದಲ್ಲದೆ ಅಗ್ರಹಾರಗಳಲ್ಲಿ ಶೈವ ಮತ್ತು ವೈಷ್ಣವ ಅಗ್ರಹಾರಗಳಿದ್ದುದನ್ನು ವಿದ್ವಾಂಸರು ಗುರುತಿಸಿದ್ದಾರೆ.೯ ಅಗ್ರಹಾರಗಳಲ್ಲಿ ಎರಡು ರೀತಿಯವು ಕಂಡುಬರುತ್ತವೆ. ಅವುಗಳೆಂದರೆ ಸರ್ವನಮಸ್ಯ ಅಗ್ರಹಾರ ಮತ್ತು ನಿಯತಕಾರಕ ಅಗ್ರಹಾರಗಳು. ಮೊದಲನೆಯದನ್ನು ಯಾವುದೇ ರೀತಿಯ ತೆರಿಗೆಗಳಿಲ್ಲದೆ ದಾನ ನೀಡಿದ ಗ್ರಾಮಗಳು ಮತ್ತು ಎರಡನೆಯದು ನಿಗಧಿತ ಪ್ರಮಾಣದ ತೆರಿಗೆಯನ್ನು ಪಾವತಿಸುವುದಾಗಿತ್ತು.೧೦ ಈ ಮೇಲಿನ ಹೆಸರುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಪುರೋಹಿತಶಾಹಿ ವರ್ಗ (ಶೈವ ಮತ್ತು ವೈಷ್ಣವ) ಗ್ರಾಮೀಣ ಪ್ರದೇಶಗಳಲ್ಲಿ ಆಳವಾದ ಪ್ರಭಾವವನ್ನು ಬೀರಿದ್ದಿದು ಕಂಡುಬರುತ್ತದೆ.
ಶಾಂತಕುಮಾರಿಯವರು ತಮ್ಮ ಕೃತಿಯಲ್ಲಿ ಸುಮಾರು ೧೩ ಅಗ್ರಹಾರಗಳನ್ನು ಕುರಿತು ಚರ್ಚಿಸಿದ್ದು, ಅವುಗಳೆಲ್ಲಾ ಸಾಮಾನ್ಯವಾಗಿ ಉತ್ತರ ಕರ್ನಾಟಕಕ್ಕೆ ಸೇರಿದವುಗಳಾಗಿವೆ. ಆದರೆ ನಕ್ಷೆಯಲ್ಲಿ ಅರಸೀಕೆರೆ ತಾಲ್ಲೂಕಿಗೆ ಸಂಬಂಧಿಸಿದಂತೆ ಕೇವಲ ನಾಲ್ಕು ಅಗ್ರಹಾರಗಳನ್ನು ಮಾತ್ರ ಗುರುತಿಸಿದ್ದಾರೆ. ಅವುಗಳೆಂದರೆ ಕಣಕಟ್ಟೆ, ಬಾಣಾವರ, ಅರಸೀಕೆರೆ ಮತ್ತು ಹಾರನಹಳ್ಳಿ.೧೧ ಆದರೆ ಶಾಸನಗಳಲ್ಲಿ ಬಾಣಾವರ ಅಗ್ರಹಾರವಾಗಿದ್ದುದಕ್ಕೆ ಉಲ್ಲೇಖಗಳಿಲ್ಲ. ವಸಂತಲಕ್ಷ್ಮಿಯವರು ತಮ್ಮ ಲೇಖನದಲ್ಲಿ ಅರಸೀಕೆರೆ ತಾಲ್ಲೂಕಿಗೆ ಸಂಬಂಧಿಸಿದಂತೆ ನಾಲ್ಕು ಅಗ್ರಹಾರಗಳನ್ನು ಗುರುತಿಸಿದ್ದಾರೆ. ಅವುಗಳೆಂದರೆ ಅರಕೆರೆ, ಕೆಲ್ಲಂಗೆರೆ, ಹಾರನಹಳ್ಳಿ ಮತ್ತು ತಳಲೂರು. ಈ ಅಗ್ರಹಾರಗಳಲ್ಲಿ ಕಾಶ್ಮೀರಿ ಬ್ರಾಹ್ಮಣರು ವಾಸವಾಗಿದ್ದರೆಂದು ಅಭಿಪ್ರಾಯಪಟ್ಟಿದ್ದಾರೆ.೧೨ ಆದರೆ ನನ್ನ ಶೋಧನೆಯಲ್ಲಿ ಅರಸೀಕೆರೆ ತಾಲ್ಲೂಕಿನಲ್ಲಿ ೨೨ ಅಗ್ರಹಾರಗಳು ಕಂಡುಬಂದಿವೆ. ಇವುಗಳ ಪೈಕಿ ೧೨ನೇ ಶತಮಾನದಲ್ಲಿ ೭, ೧೩ನೇ ಶತಮಾನದಲ್ಲಿ ೧೩, ೧೪ನೇ ಶತಮಾನದಲ್ಲಿ ೩ ಮತ್ತು ೧೫ನೇ ಶತಮಾನದಲ್ಲಿ ಕೇವಲ ಒಂದು ಅಗ್ರಹಾರ ಉಲ್ಲೇಖಗೊಂಡಿದೆ. ಸ್ಥಳನಾಮ ಮತ್ತು ವ್ಯಕ್ತಿನಾಮಗಳನ್ನು ಆಧರಿಸಿ ಹುಡುಕಿದರೆ ಅತಿರಥಮಂಗಲ ಎಂಬ ಇನ್ನೊಂದು ಅಗ್ರಹಾರವನ್ನು ನಮ್ಮ ಪಟ್ಟಿಗೆ ಸೇರಿಸಬಹುದು. ಹಾಗೇನಾದರು ಪರಿಗಣಿಸಿದರೆ ಅದು ಅರಸೀಕೆರೆ ತಾಲ್ಲೂಕಿನ ಶಾಸನೋಕ್ತ ಪ್ರಥಮ ಅಗ್ರಹಾರವಾಗುತ್ತದೆ. ಈ ಉಲ್ಲೇಖವು ಚಲುವನಹಳ್ಳಿಯ ೯ನೆಯ ಶತಮಾನದ ವೀರಗಲ್ಲು ಶಾಸನದಲ್ಲಿದೆ.೧೩ ಇದನ್ನು ಹೊರತುಪಡಿಸಿದರೆ ಉಳಿದ ಅಗ್ರಹಾರಗಳು ಕ್ರಿ.ಶ.೧೨ನೆಯ ಶತಮಾನದಿಂದ ೧೫ನೆಯ ಶತಮಾನದವರೆಗೆ ಅಸ್ತಿತ್ವದಲ್ಲಿದ್ದುದು ಕಂಡುಬರುತ್ತದೆ. ಇಲ್ಲಿಯ ಅಗ್ರಹಾರಗಳ ಪೈಕಿ ಕೆಲ್ಲಂಗೆರೆಯ ಅಗ್ರಹಾರಕ್ಕೆ ಸಂಬಂಧಿಸಿದಂತೆ ೧೧ ಶಾಸನಗಳು ಮಾಹಿತಿ ನೀಡುವುದರಿಂದ ಇದು ಅತ್ಯಂತ ಪ್ರಸಿದ್ದ ಮತ್ತು ಪ್ರಭಾವಶಾಲಿ ಅಗ್ರಹಾರವಾಗಿತ್ತೆಂದು ಭಾವಿಸಬಹುದು. ಇವುಗಳಲ್ಲಿ ಕೆಲ್ಲಂಗೆರೆಯನ್ನು ಅಗ್ರಹಾರ ಹರಿಹರಪುರ, ಶ್ರೀಮದನಾದಿ ಅಗ್ರಹಾರ ಹರಿಹರಪುರವೆಂದು ವರ್ಣಿಸಲಾಗಿದೆ. ಇವುಗಳ ಉಲ್ಲೇಖವನ್ನು ಕ್ರಿ.ಶ.೧೧೪೨ ರಿಂದ ೧೩೬೭ರವರೆಗೆ ಕಾಣಬಹುದು. ಇದೇ ಸಮಯದಲ್ಲಿ ಅಸ್ತಿತ್ವಕ್ಕೆ ಬಂದ ಮತ್ತೊಂದು ಅಗ್ರಹಾರವೆಂದರೆ ತಳಿರೂರು. ಇದಕ್ಕೆ ಸಂಬಂಧಿಸಿದಂತೆ ಐದು ಶಾಸನಗಳಿದ್ದು, ಅವುಗಳಲ್ಲಿ ಇದನ್ನು ಅಗ್ರಹಾರ ಹರಿಹರಪುರ, ಶ್ರೀಮದ್ ಅಗ್ರಹಾರ, ಶ್ರೀಮದನಾದಿ ಅಗ್ರಹಾರ ಮಧುಸೂಧನಪುರವೆಂದು ಉಲ್ಲೇಖಿಸಲಾಗಿದೆ. ಇದು ಕೂಡಾ ಕೆಲ್ಲಂಗೆರೆಯ ಅಗ್ರಹಾರದ  ರೀತಿಯಲ್ಲಿಯೇ ಅತೀ ಹೆಚ್ಚು ಕಾಲ (೧೧೪೨-೧೩೬೮) ಅಸ್ತಿತ್ವದಲ್ಲಿದ್ದುದು ಕಂಡುಬರುತ್ತದೆ. ಮೂರನೆ ಸ್ಥಾನದಲ್ಲಿ ಹಾರುವನಹಳ್ಳಿ ಅಗ್ರಹಾರ ಕಂಡುಬರುತ್ತದೆ. ಇದಕ್ಕೆ ಸಂಬಂಧಿಸಿದಂತೆ ನಾಲ್ಕು ಶಾಸನಗಳಿದ್ದು, ಅವುಗಳಲ್ಲಿ ಇದನ್ನು ಶ್ರೀಮದನಾದಿ ಅಗ್ರಹಾರ, ಅಗ್ರಹಾರ ಸೋಮನಾಥಪುರ, ಪಿರಿಯಪಟ್ಟದ ಅಗ್ರಹಾರ ಮತ್ತು ಹಿರಿಯ ಸೋಮನಾಥಪುರವೆಂದು ಬಣ್ಣಿಸಲಾಗಿದೆ (೧೨೩೪-೧೨೮೦). ಉಳಿದ ಅಗ್ರಹಾರಗಳಿಗೆ ಸಂಬಂಧಿಸಿದಂತೆ ಕೇವಲ ಒಂದು ಅಥವಾ ಎರಡು ಶಾಸನಗಳಲ್ಲಿ ಮಾಹಿತಿ ಸಿಗುತ್ತದೆ.
ಅಗ್ರಹಾರಗಳಿಗಿದ್ದ ಸ್ಥಾನಮಾನಗಳು: ಆಡಳಿತ ವರ್ಗವು ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮಗಳನ್ನು ಬ್ರಾಹ್ಮಣರ ಜೀವಿತಕ್ಕೋಸ್ಕರ ದಾನ ಮಾಡಲಾಗಿತ್ತು. ಅಂತಹ ಗ್ರಾಮಗಳ ದೇವಾಲಯಗಳಲ್ಲಿ ನಿರಂತರವಾಗಿ ವಿದ್ಯಾದಾನ, ಅರ್ಚನೆ ಮಾಡುವುದಕ್ಕೋಸಕ್ಕರ ಅವರಿಗೆ ಯಾರೂ ಕೂಡ ತೊಂದರೆ ಕೊಡಬಾರದೆಂಬ ಉದ್ದೇಶದಿಂದ ಈ ಕೆಳಕಂಡ ಷರತ್ತುಗಳನ್ನು ಮಾಡಲಾಗಿತ್ತು. ಅವುಗಳೆಂದರೆ; ೧) ಅಗ್ರಹಾರಗಳಿಗೆ ಯಾವುದೇ ಸರ್ಕಾರಿ ಅಧಿಕಾರಿಗಳು, ಸೈನಿಕರು, ಪಲಿಸ್ ಮತ್ತಿತರು ಮಹಾಜನರ ಅನುಮತಿಯಿಲ್ಲದೇ ಪ್ರವೇಶಿಸುವಂತಿರಲಿಲ್ಲ, ೨) ರಾಜನಾಗಲಿ ಅಥವಾ ರಾಜನ ಅಧಿಕಾರಿಗಳಾಗಲಿ ಅಗ್ರಹಾರದ ಭೂಮಿ, ದನಕರುಗಳನ್ನು ವಶಪಡಿಸಿಕೊಳ್ಳುವಂತಿರಲಿಲ್ಲ, ಮಾರುವಂತಿಲ್ಲ ಹಾಗೂ ಕೊಳ್ಳುವಂತಿರಲಿಲ್ಲ, ೩) ಅಗ್ರಹಾರದ ಆಂತರಿಕ ವಿಷಯಗಳಲ್ಲಿ ರಾಜ್ಯದ ಅಧಿಕಾರಿಗಳು ಪಾಲ್ಗೊಳ್ಳುವಂತಿರಲಿಲ್ಲ೧೪. ಇವುಗಳನ್ನು ಸರ್ವನಮಸ್ಯ ಅಗ್ರಹಾರಗಳೆಂದು ಗುರುತಿಸಲಾಗಿದೆ.
ಅಗ್ರಹಾರಗಳ ಮೇಲೆ ವಿಧಿಸಿದ್ದ ಇತಿ-ಮಿತಿಗಳು: ಎರಡನೆ ರೀತಿಯಾದ ನಿಯತಕಾರಕ ಅಗ್ರಹಾರಗಳಲ್ಲಿ ಬ್ರಾಹ್ಮಣರನ್ನು ಆಡಳಿತ ವರ್ಗವು ತನ್ನ ಹಿಡಿತದಲ್ಲಿಟ್ಟುಕೊಳ್ಳುವುದಕ್ಕೋಸ್ಕರ ಈ ಕೆಳಗಿನ ನಿಬಂಧನೆಗಳನ್ನು ಹಾಕಿತ್ತು. ಅವುಗಳೆಂದರೆ; ೧) ಮಹಾಜನರು ತಮಗೆ ಭೂಮಿಯನ್ನು ಬೇರೆಯವರಿಗೆ ಮಾರುವಂತಿರಲಿಲ್ಲ ಹಾಗೂ ಒತ್ತೆಯಿಡುವಂತಿರಲಿಲ್ಲ. ಅದಕ್ಕೆ ಬದಲಾಗಿ ಅವರು ಅಗ್ರಹಾರದಲ್ಲಿರುವವರೆಗೂ ಅಲ್ಲಿಯ ಉತ್ಪನ್ನವನ್ನು ಅನುಭವಿಸಬಹುದಾಗಿತ್ತು. ೨) ಅಗ್ರಹಾರದ ಮಹಾಜನರು ಗೌರವಯುತವಾದ ಜೀವನ ನಡೆಸಬೇಕಾಗಿತ್ತು. ಸ್ಥಳೀಯ ಜಗಳಗಳಲ್ಲಾಗಲಿ, ಹೊಡೆದಾಟಗಳಲ್ಲಾಗಲಿ, ಕೆಟ್ಟ ಭಾಷೆಯಿಂದ ನಿಂದಿಸುವುದು ಅಪರಾಧವಾಗಿದ್ದು, ಅಂತಹವರಿಂದ ದಂಡವನ್ನು ವಸೂಲಿ ಮಾಡಲಾಗುತಿತ್ತು.೧೫
ಅರಸೀಕೆರೆ ತಾಲ್ಲೂಕಿನ ಅಗ್ರಹಾರಗಳು: ಇಲಿಯ ೨೨ ಅಗ್ರಹಾರಗಳ ಪೈಕಿ ಕೇವಲ ಒಂದೇ ಒಂದು ಬ್ರಹ್ಮಪುರಿಯ ಉಲ್ಲೇಖ ಶಾಸನದಲ್ಲಿ ಕಂಡುಬಂದಿದೆ. ಕ್ರಿ.ಶ.೧೧೦೧ರ ಮನಕತ್ತೂರು ಶಾಸನದಲ್ಲಿ ಮಹಾಪ್ರಭು ಸಂಕಗಾವುಂಡನು ತಾನು ಹೊಸದಾಗಿ ಸ್ಥಾಪಿಸಿದ ಮನಗತ್ತೂರು ಗ್ರಾಮ ಮತ್ತು ಚಾವೇಶ್ವರ ದೇವಾಲಯ ನಿರ್ಮಿಸಿದ ಸಂದರ್ಭದಲ್ಲಿ ಬ್ರಹ್ಮಪುರಿಯ ಬ್ರಾಹ್ಮಣರಿಗೆ ಒಂದು ಸಲಗೆ ಗದ್ದೆ ಮತ್ತು ಏಳು ಮತ್ತರು ಹೊಲವನ್ನು ದಾನವಾಗಿ ನೀಡಿದ್ದುದು ತಿಳಿದುಬರುತ್ತದೆ.೧೬ ಬ್ರಹ್ಮಪುರಿ ಎಂದರೆ ನಗರಗಳಲ್ಲಿ ಅಥವಾ ಪಟ್ಟಣಗಳಲ್ಲಿ ಬ್ರಾಹ್ಮಣ ವಿದ್ವಾಂಸರು ವಾಸಿಸುವ ಭಾಗ.೧೭ ಬ್ರಹ್ಮಪುರಿಗಳು ಪಟ್ಟಣದ ಭಾಗಗಳಾಗಿದ್ದವು.೧೮ ಈ ಶಾಸನದಲ್ಲಿ ಬ್ರಹ್ಮಪುರಿ ಯಾವ ಪಟ್ಟಣದಲ್ಲಿತ್ತು ಎಂಬುದು ಸ್ಪಷ್ಟವಾಗಿ ತಿಳಿದುಬರುವುದಿಲ್ಲ. ಆದರೆ ಮನಕತ್ತೂರು ಸಮೀಪದಲ್ಲಿರುವ ಬಾಣಾವರದಲ್ಲಿ ಕ್ಷೇತ್ರಕಾರ್ಯ ಮಾಡಿದಾಗ ಅದು ಕ್ರಿ.ಶ.೧೨ನೆಯ ಶತಮಾನದಲ್ಲಿ ಬ್ರಾಹ್ಮಣರಿಂದ ಕೂಡಿದ್ದ ನೆಲೆಯಾಗಿತ್ತೆಂದು ಊಹಿಸಬಹುದು.
ಅಗ್ರಹಾರಗಳ ಸ್ಥಾಪನೆ: ಮಹಾಪ್ರಧಾನ ಸರ್ವಾಧಿಕಾರಿ ಭೂಚಿದೇವನು ಹೊಯ್ಸಳ ದೊರೆ ಒಂದನೆ ನರಸಿಂಹನಿಂದ ನೀರ್ಗುಂದ ನಾಡಿನಲ್ಲಿ ಹುಲ್ಲೇಕೆರೆ ಗ್ರಾಮವನ್ನು ಪಡೆದು, ಅದನ್ನು ಸೋಮನಾಥಪುರ ಅಗ್ರಹಾರವನ್ನಾಗಿ ನಾಮಕರಣ ಮಾಡಿದ್ದನ್ನು ಕ್ರಿ.ಶ.೧೧೬೨ರ ಹುಲ್ಲೇಕೆರೆ ಶಾಸನವು ತಿಳಿಸುತ್ತದೆ೧೮.ಅ ಕ್ರಿ.ಶ.೧೧೯೪ರ ಬೊಮ್ಮೇನಹಳ್ಳಿ ಶಾಸನವು ದಂಡನಾಯಕ ಮಧುಸೂಧನ ಎಂಬುವವನು ತನ್ನ ಹೆಸರಿನಲ್ಲಿ ಮಧುಸೂಧನಪುರವೆಂಬ ಅಗ್ರಹಾರವನ್ನು ಸ್ಥಾಪಿಸಿ ಅಲ್ಲಿ ಮಲ್ಲಿಕಾರ್ಜುನದೇವರಿಗೆ ತ್ರಿಕೂಟ ದೇವಾಲಯವನ್ನು ಕಟ್ಟಿಸಿದ್ದನ್ನು ತಿಳಿಸುತ್ತದೆ. ನಂತರ ಇವನು ಅಲ್ಲಿಯ ಮಹಾಜನರ ಅನುಮತಿಯೊಂದಿಗೆ ಆ ದೇವಾಲಯಕ್ಕೆ ಭೂದಾನ ಮಾಡಿದನು.೧೯ ಕೇರಳದ ವರ್ತಕ ಮಹಾವಡ್ಡವ್ಯವಹಾರಿ ಬಂಡಿನಾಂಬಿಶೆಟ್ಟಿಯ ಅಳಿಯ ಕಡನಾಂಬಿಶೆಟ್ಟಿಯು ಮುತ್ತನಹೊಸವೂರಿನಲ್ಲಿ (ಹಿರಿಯೂರು) ಅಗ್ರಹಾರವನ್ನು ಸ್ಥಾಪಿಸಿ, ಅಲ್ಲಿಯ ಕುಂಜೇಶ್ವರ ದೇವರಿಗೆ ಕಲ್ಲೆಯನಾಯಕನ ಹಳ್ಳಿಯನ್ನು ದಾನ ಮಾಡಿದನು.೨೦ ಕ್ರಿ.ಶ.೧೨೮೯ರ ನಾಗವೇದಿ ಶಾಸನವು ವಮ್ಮಲಿಗೆಯ ಮಾರಯ್ಯನ ಮುಮ್ಮಡಿ ಬಲ್ಲಾಳನಿಂದ ದಾನವಾಗಿ ಪಡೆದ ನಾಗವೇದಿ ಗ್ರಾಮವನ್ನು ನಂತರ ಅಗ್ರಹಾರವನ್ನಾಗಿ ಪರಿವರ್ತಿಸಿ ೫೫ ಬ್ರಾಹ್ಮಣರಿಗೆ ನೀಡಿ ನಂತರ ಅಲ್ಲಿಯ ಬ್ರಾಹ್ಮಣರು/ಮಹಾಜನರು ಅಲ್ಲಿಯ ದೇವಾಲಯಕ್ಕೆ ಭೂದಾನ ಮಾಡಿದ್ದನ್ನು ತಿಳಿಸುತ್ತದೆ.೨೧ ಈ ಮೇಲಿನ ವಿವರಣೆಗಳಿಂದ ಅಗ್ರಹಾರಗಳನ್ನು ಮುಖ್ಯವಾಗಿ ರಾಜ್ಯದ ಅಧಿಕಾರಿಗಳು ಮತ್ತು ಶ್ರೀಮಂತ ವರ್ತಕರು (ರಾಜಶ್ರೇಷ್ಠಿಗಳು) ಸ್ಥಾಪಿಸಿದ್ದನ್ನು ತಿಳಿಯಬಹುದು. ಇಂತಹ ಕಾರ್ಯಗಳನ್ನು ಮಾಡುವ ಮುಖಾಂತರ ಅಧಿಕಾರಿಗಳು, ಮತ್ತು ವರ್ತಕರು ಸಹ ರಾಜರಂತೆ ಪುರೋಹಿತಶಾಹಿ ವರ್ಗದವರ ನಿಕಟ ಸಂಪರ್ಕ ಹೊಂದಿ ಆ ಮುಖಾಂತರ ತಮ್ಮ ಸಾಮಾಜಿಕ ಸ್ಥಾನಮಾನಗಳನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ತಮ್ಮ ಅಧಿಕಾರದ ಮುದ್ರೆಯನ್ನು ಒತ್ತುವುದಾಗಿತ್ತು.
ಅಗ್ರಹಾರದ ಮಹಾಜನರಿಗೆ ವಿವಿಧ ರೀತಿಯ ದಾನ: ಪುರೋಹಿತಶಾಹಿ ವರ್ಗಕ್ಕೆ ಉತ್ಪನ್ನ/ಆದಾಯವನ್ನು ವರ್ಗಾಯಿಸುವುದರ ಜೊತೆಗೆ ಸಮಾಜದ ಇತರ ವರ್ಗದವರು ವಿವಿಧ ರೀತಿಯ ದಾನ ಮಾಡಿರುವುದನ್ನು ಕಾಣಬಹುದು. ಉದಾಹರಣೆಗೆ ಮಹಾಪ್ರಧಾನ ಸರ್ವಾಧಿಕಾರಿ ಶ್ರೀಕರಣದ ಹೆಗ್ಗಡೆ ಕೇತಣ್ಣನು ಕೆಲ್ಲಂಗೆರೆ ಅಗ್ರಹಾರದ ಬ್ರಾಹ್ಮಣರ ಆಹಾರ ಮತ್ತು ಅವರ ನಿರ್ವಹಣೆಗಾಗಿ ಗದ್ದೆ, ಹೊಲವನ್ನು ನೀಡಿದ್ದನ್ನು ಹಾಗೂ ಅಲ್ಲಿಯ ಚೆನ್ನಕೇಶವ ದೇವರ ಕಾರ್ಯಕ್ಕೆ ಭೂಮಿಯನ್ನು ನೀಡಿದ್ದನ್ನು ಕ್ರಿ.ಶ.೧೧೭೩ರ ಕೆಲ್ಲಂಗೆರೆಯ ಶಾಸನವೊಂದು ತಿಳಿಸುತ್ತದೆ.೨೨ ಮುರುಂಡಿಯ ಕ್ರಿ.ಶ.೧೧೭೪ರ ಶಾಸನವು ಎರಡನೆ ಬಲ್ಲಾಳನು ಹೆಗ್ಗಡೆ ಎರೆಯಣ್ಣನಿಗೆ ಮುರಿಹಿಂಡಿ ಗ್ರಾಮವನ್ನು ಸರ್ವಬಾದಾಪರಿಹಾರವಾಗಿ ನೀಡಿದ್ದನ್ನು, ನಂತರ ಅದನ್ನು ಶ್ರೀ ನರಸಿಂಹಪುರ ಎಂಬ ಅಗ್ರಹಾರವನ್ನಾಗಿ ಮಾಡಿ ಅದನ್ನು ಕನ್ನಡ (ಕರ್ನಾಟ ಬಾಲಶಿಕ್ಷೆ) ಕಲಿಯುವ ೧೨ ವಿದ್ಯಾರ್ಥಿಗಳು, ಕಲಿಸುವ ೨೦ ಗುರುಗಳು ಮತ್ತು ಅಡಿಗೆಯವರ ಜೀವಿತಕ್ಕೆ ದಾನ ಮಾಡಿದ್ದನ್ನು ತಿಳಿಸುತ್ತದೆ.೨೩ ಕ್ರಿ.ಶ.೧೧೭೫ರ ಅಲ್ಲಿಯ ಮತ್ತೊಂದು ಶಾಸನವು ಮಹಾಪ್ರಧಾನ ಸರ್ವಾಧಿಕಾರಿ ಶ್ರೀಕರಣದ ಹೆಗ್ಗಡೆಯ ಕೇತಣ್ಣನು ೧೮೦೦ ಅಡಿಕೆ ಮರಗಳಿದ್ದ ತೋಟವನ್ನು ೨೦೦೦ ಕಂಬ ಹೊಲವನ್ನು ಕ್ರಯಕ್ಕೆ ಕೊಂಡು ನಂತರ ಅದನ್ನು ಇಮ್ಮಡಿ ಬಲ್ಲಾಳನ ಉಪಸ್ಥಿತಿಯಲ್ಲಿ ಕೆಲ್ಲಂಗೆರೆ ಅಗ್ರಹಾರದ ಮಹಾಜನರಿಗೆ ನೀಡಿದ್ದನ್ನು ತಿಳಿಸುತ್ತದೆ.೨೪ ಕೆಲ್ಲಂಗೆರೆಯ ಬ್ರಾಹ್ಮಣರು ಅಲ್ಲಿಯ ಚೆನ್ನಕೇಶವದೇವರ ಕಾರ್ಯಕ್ಕೆ ಭೂಮಿ ಮತ್ತು ಹತ್ತು ಗದ್ಯಾಣಗಳನ್ನು ಅಲ್ಲಿಯ ೨೦೦ ಮಹಾಜನರಿಗೆ ನೀಡಿದ್ದನ್ನು ಕ್ರಿ.ಶ.೧೧೯೦ರ ಕೆಲ್ಲಂಗೆರೆಯ ಶಾಸನ ತಿಳಿಸುತ್ತದೆ.೨೫ ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಬ್ರಾಹ್ಮಣರು ಮಹಾಜನರಿಗೆ ಭೂಮಿ ಮತ್ತು ಹಣವನ್ನು ದಾನ ಮಾಡುವುದು. ಇದರಿಂದ ಕ್ರಿ.ಶ.೧೨ನೆಯ ಶತಮಾನದ ಸಮಯಕ್ಕೆ ಬ್ರಾಹ್ಮಣರು ಪ್ರಬಲ ಭೂಮಾಲೀಕರಾಗಿ ಹೊರಹೊಮ್ಮಿದ್ದುದು ಕಂಡುಬರುತ್ತದೆ. ಕ್ರಿ.ಶ.೧೨೨೦ರ ತಳಲೂರು ಶಾಸನವು ಕೆಲವು ಭಕ್ತರು ಮಧುಸೂದನ ದೇವರ ಕಾರ್ಯಕ್ಕೆ ೩೫ ಗದ್ಯಾಣಗಳನ್ನು ಮತ್ತು ಭೂಮಿಯನ್ನು ಹಾಗೂ ಅಲ್ಲಿಯ ಕೆರೆಯ ನಿರ್ವಹಣೆಗಾಗಿ ಭೂಮಿಯನ್ನು ತಳಲೂರು ಅಗ್ರಹಾರದ ಮಹಾಜನರಿಗೆ ನೀಡಿದ್ದನ್ನು ತಿಳಿಸುತ್ತದೆ.೨೬ ಕ್ರಿ.ಶ.೧೨೪೮ರ ನೇರ್ಲಿಗೆಯ ತಾಮ್ರಶಾಸನವು ಹೊಯ್ಸಳ ದೊರೆ ಸೋಮೇಶ್ವರನು ನೇರ್ಲಿಗೆಯ ಉತ್ಪನ್ನದಲ್ಲಿ ಸ್ವಲ್ಪ ಭಾಗವನ್ನು ಅಲ್ಲಿಯ ಮಹಾಜನಗಳಿಗೆ ನೀಡಿದ್ದನ್ನು ತಿಳಿಸುತ್ತದೆ.೨೭ ಅದೇ ಶಾಸನವು ಈ ಅಗ್ರಹಾರವನ್ನು ವೀರಬಲ್ಲಾಳ ಚತುರ್ವೇದಿಮಂಗಲವೆಂದು ಉಲ್ಲೇಖಿಸಿದೆ.೨೮ ಕ್ರಿ.ಶ.೧೨೬೫ರ ಹಾರನಹಳ್ಳಿ ಶಾಸನವು ಕಂದಾಯ ಅಧಿಕಾರಿಗಳು ಭೂಕಂದಾಯದಿಂದ ಬಂದಂತಹ ಹಣವನ್ನು ಪಿರಿಯಪಟ್ಟದ ಹಿರಿಯ ಸೋಮನಾಥಪುರವಾದ ಹಾರನಹಳ್ಳಿಯ  ಚೆನ್ನಕೇಶವ ದೇವರಿಗೆ ದಾನ ಮಾಡಿದ್ದನ್ನು ತಿಳಿಸುತ್ತದೆ.೨೯ ಕ್ರಿ.ಶ.೧೨೯೪ರ ಕೆಲ್ಲಂಗೆರೆಯ ಶಾಸನವು ದೇವಪ್ಪನ ಮಗ ಚಂದಪ್ಪನು ಕೆರೆಯ ನಿರ್ವಹಣೆಗಾಗಿ ಒಂದು ಎತ್ತಿನ ಗಾಡಿಯನ್ನು ಕೆಲ್ಲಂಗೆರೆಯ ಮಹಾಜನರಿಗೆ ದಾನ ಮಾಡಿದ್ದನ್ನು, ಹಾಗೆಯೇ ಆ ಮಹಾಜನರು ಗಾಡಿಯ ಚಾಲಕನ ಜೀವಿತಕ್ಕೆ ಗದ್ದೆ ಮತ್ತು ಹೊಲವನ್ನು ದಾನ ಮಾಡಿದ್ದನ್ನು ತಿಳಿಸುತ್ತದೆ.೩೦ ಕ್ರಿ.ಶ.೧೩೧೮ರ ಅಲ್ಲಿಯ ಮತ್ತೊಂದು ಶಾಸನ ರಾಮಣ್ಣ ಎಂಬುವವನು ಕೆಲ್ಲಂಗೆರೆ ಅಗ್ರಹಾರದ ಮಹಾಜನರಿಗೆ ಒಂದು ಗದ್ಯಾಣವನ್ನು ದಾನ ಮಾಡಿದ್ದನ್ನು ತಿಳಿಸುತ್ತದೆ. ಇದಕ್ಕೆ ಪ್ರತಿಯಾಗಿ ಮಹಾಜನರು ಅಲ್ಲಿಯ ಸಮಸ್ಯೆಗಳನ್ನು ನಿವಾರಿಸುವುದಾಗಿತ್ತು.೩೧ ಈ ಮೇಲಿನ ವಿವರಣೆಗಳು ಅಗ್ರಹಾರದ ಜವಾಬ್ದಾರಿಯು ಮಹಾಜನರ ಕೈಯಲ್ಲಿದ್ದುದನ್ನು ಸ್ಪಷ್ಟವಾಗಿ ತಿಳಿಸುತ್ತವೆ.
ಮಹಾಜನರಿಂದ ಭೂಮಿ ಮತ್ತಿತರ ದಾನಗಳು: ಅಗ್ರಹಾರದ ಮಹಾಜನರು ಒಂದು ಸಂಘದಂತಿದ್ದು, ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತಿದ್ದುದರಿಂದ ಸಮಾಜದ ಎಲ್ಲಾ ವರ್ಗದವರು ಅವರಿಗೆ ವಿವಿಧ ರೀತಿಯ ದಾನ ಮಾಡುತಿದ್ದರು. ದಾನದ ರೂಪದಲ್ಲಿ ಬಂದಂತಹ ಆಧಾಯವನ್ನು ಮಹಾಜನರು ವಿವಿಧ ಉದ್ದೇಶಗಳಿಗಾಗಿ ವಿನಿಯೋಗಿಸುತ್ತಿದ್ದರು. ಉದಾಹರಣೆಗೆ ಗಾಣಿಗ (ತೆಲ್ಲಿಗ) ಸಮುದಾಯದ ಜಕ್ಕವ್ವೆಯು ಕೆಲ್ಲಂಗೆರೆಯಲ್ಲಿ ಕಟ್ಟಿಸಿದ ಗ್ರಾಮೇಶ್ವರ ದೇವರಿಗೆ ಅಲ್ಲಿಯ ಅಗ್ರಹಾರದ ಮಹಾಜನರು ೫೦೦ ಕಂಬ ಗದ್ದೆ, ೭೦೦ ಕಂಬ ಹೊಲವನ್ನು ನೀಡಿದ್ದನ್ನು ಕ್ರಿ.ಶ.೧೧೪೨ರ ಕೆಲ್ಲಂಗೆರೆ ಶಾಸನವು ತಿಳಿಸುತ್ತದೆ.೩೨ ಕ್ರಿ.ಶ.೧೧೬೧ರ ಕೆಲ್ಲಂಗೆರೆ ಶಾಸನವು ಕೆಲ್ಲಂಗೆರೆ ಅಗ್ರಹಾರದ ಮಹಾಜನಗಳು ಅಲ್ಲಿಯ ಧರ್ಮೇಶ್ವರ ದೇವರ ಅಮೃತಪಡಿಗೆ (ನೈವೇದ್ಯ), ನಂದಾದೀಪ, ಮತ್ತು ಗರ್ಭಗುಡಿಯ ನವೀಕರಣಕ್ಕಾಗಿ ಅಲ್ಲಿಯ ಸ್ಥಾನಿಕ ಶಿವಶಕ್ತಿ ಪಂಡಿತನಿಗೆ ಗದ್ದೆ, ತೋಟ, ಮತ್ತು ಹೊಲವನ್ನು ದಾನ ಮಾಡಿದ್ದನ್ನು ತಿಳಿಸುತ್ತದೆ.೩೩ ೧೨ನೆಯ ಶತಮಾನದ ತಳಲೂರು ಶಾಸನವು ತಳಲೂರು ಅಗ್ರಹಾರದ ಮಹಾಜನರು ಮಧುಸೂದನ ದೇವರಿಗೆ ದೇವಾಲಯವನ್ನು ಕಟ್ಟಿದು, ಹಾಗೂ ಅದರ ವಿಸ್ತರಣೆಗಾಗಿ ಮತ್ತು ಪೂಜಾ ಕೆಲಸಗಳಿಗಾಗಿ ಅಡಿಕೆ ತೋಟ, ಗದ್ದೆ, ಮತ್ತು ಹೊಲವನ್ನು ದಾನ ಮಾಡಿದ್ದನ್ನು ತಿಳಿಸುತ್ತದೆ.೩೪ ಕ್ರಿ.ಶ.೧೧೮೧ರ ಕೆಲ್ಲಂಗೆರೆ ಶಾಸನವು ಒಂದು ಸಾವಿರ ಮಹಾಜನರು, ಅಲ್ಲಿಯ ವರ್ತಕರು, ಉಗುರು-೩೦೦, ಮತ್ತು ಪ್ರಜೆಗಾವುಂಡರೊಡಗೂಡಿ ಧರ್ಮೇಶ್ವರ ದೇವರ ನಂದಾ ದೀಪಕ್ಕೆ ಎಣ್ಣೆಯನ್ನು ಪೂರೈಸುವುದಕ್ಕಾಗಿ ಎರಡು ಎಣ್ಣೆಯ ಕೈಗಾಣಗಳನ್ನು ದಾನವಾಗಿ ನೀಡಿದ್ದನ್ನು ತಿಳಿಸುತ್ತದೆ.೩೫ ಕ್ರಿ.ಶ.೧೨೩೪ರ ಹಾರನಹಳ್ಳಿ ಶಾಸನವು ಹಾರುವನಹಳ್ಳಿ ಅಗ್ರಹಾರದ ಮಹಾಜನರು ಶ್ರೀ ಲಕ್ಷ್ಮೀನರಸಿಂಹ ದೇವರ ದೇವಾಲಯದ ನಿರ್ವಹಣೆಗಾಗಿ ಭೂಮಿಯನ್ನು ದಾನ ಮಾಡಿದ್ದನ್ನು ತಿಳಿಸುತ್ತದೆ.೩೬ ೧೨೩೯ರ ಬಾಗಡೆಯ ಶಾಸನವು ಅಗ್ರಹಾರದ ಅಶೇಷ ಮಹಾಜನಗಳು ಗಡಿ ವಿವಾದದಲ್ಲಿ ಸತ್ತಂತಹ ಜಕ್ಕಯ್ಯನ ಕುಟುಂಬದವರಿಗೆ ೪೦೦ ಕಂಬ ಭೂಮಿಯನ್ನು ಉಂಬಳಿಯಾಗಿ ನೀಡಿದ್ದನ್ನು ತಿಳಿಸುತ್ತದೆ.೩೭ ಕ್ರಿ.ಶ.೧೨೫೪ರ ಹಿರಿಯೂರು ಶಾಸನವು ನಾಗರಹಳ್ಳಿ ಅಗ್ರಹಾರದ ಅಶೇಷ ಮಹಾಜನರು ಮುತ್ತನ ಹೊಸವೂರಿನ ಕುಂಜೇಶ್ವರ ದೇವಾಲಯದ ನವೀಕರಣೆಗಾಗಿ ಭೂಮಿಯನ್ನು ದಾನ ಮಾಡಿದ್ದನ್ನು ತಿಳಿಸುತ್ತದೆ.೩೮ ಕೆಲ್ಲಂಗೆರೆಯ ಮಹಾಜನರು ಯಾವುದೋ ಉದ್ದೇಶಕ್ಕಾಗಿ ಬಮ್ಮಿಹಳ್ಳಿ ಮತ್ತು ಸೂಳೆಕೆರೆಯಲ್ಲಿ ಭೂದಾನ ಮಾಡಿದ್ದನ್ನು ಕ್ರಿ.ಶ.೧೨೯೮ರ ಸೂಳೆಕೆರೆ ಶಾಸನ ತಿಳಿಸುತ್ತದೆ.೩೯ ಕ್ರಿ.ಶ.೧೧೫೮ರ ಕೋಡಿಹಳ್ಳಿ ಶಾಸನವು ತಳಿರೂರು ಅಗ್ರಹಾರದ ಮಹಾಜನರು ಮಲ್ಲಿಕಾರ್ಜುನ ದೇವರ ನೈವೇದ್ಯಕ್ಕಾಗಿ ಭೂಮಿಯನ್ನು ನೀಡಿದ್ದನ್ನು ಹಾಗೂ ಆ ಭೂಮಿಯನ್ನು ನಂತರ ಮಹಾದೇವ ಪಂಡಿತರಿಗೆ ನೀಡಿದ್ದನ್ನು ತಿಳಿಸುತ್ತದೆ.೪೦ ೧೩೨೪ರ ಗಂಡಸಿಯ ಶಾಸನವು ಕಂಚಿಯ ನಾಯಕನು ಬಹುಶಃ ಕೆರೆಯನ್ನು ಕಟ್ಟಿಸಿದ್ದಕ್ಕಾಗಿ ಅವನಿಗೆ ಹಿರಿಯ ಗಂಡಸಿ ಅಗ್ರಹಾರದ ಅಶೇಷ ಮಹಾಜನಗಳು ಭೂಮಿಯನ್ನು ದಾನ ಮಾಡಿದ್ದನ್ನು ತಿಳಿಸುತ್ತದೆ.೪೧ ಕ್ರಿ.ಶ.೧೩೩೫ರ ಮಾಡಾಳು ಶಾಸನವು ಶ್ರೀಮದನಾದಿ ಅಗ್ರಹಾರ ಬಲ್ಲಾಳಪುರವೆಂದು ಪ್ರಸಿದ್ಧವಾಗಿದ್ದ ಕಿತ್ತನಕೆರೆಯು ಹಾಳಾಗಿದ್ದಾಗ ಅಲ್ಲಿಯ ಮಹಾಜನರು ಕಾಮೇಯ ದಣ್ಣಾಯಕನ ಅನುಮತಿಯೊಂದಿಗೆ ಅದನ್ನು ನವೀಕರಿಸಿದ್ದನ್ನು ತಿಳಿಸುತ್ತದೆ.೪೨ ಕ್ರಿ.ಶ.೧೩೬೮ರ ತಳಲೂರು ಶಾಸನವು ತಳಿರೂರು ಅಗ್ರಹಾರದ ಮಹಾಜನರು ಅಲ್ಲಿಯ ಮಧುಸೂದನ ದೇವರ ಕಾರ್ಯಕ್ಕೆ ಉಯ್ಯಗೊಂಡನ ಹಳ್ಳಿಯಲ್ಲಿ ಭೂದಾನ ಮಾಡಿದ್ದನ್ನು ತಿಳಿಸುತ್ತದೆ.೪೩ ಕ್ರಿ.ಶ.೧೩೬೮ರ ಅರಸೀಕೆರೆ ಶಾಸನವು ಮಹಾಗ್ರಹಾರ ಅರಸೀಕೆರೆ ಅಶೇಷ ಮಹಾಜನಗಳು ಅಲ್ಲಿಯ ಸಾವಿರದ ಒಕ್ಕಲುಗಳೊಡನೆ ಸೇರಿ ಮಲ್ಲಿಕಾರ್ಜುನ ದೇವಾಲಯವನ್ನು ಕಟ್ಟಿಸಿ ಅದರ ನಿರ್ವಹಣೆಗಾಗಿ ೪೦ ಕಂಬ ಗದ್ದೆಯನ್ನು ದಾನ ಮಾಡಿದ್ದನ್ನು ತಿಳಿಸುತ್ತದೆ.
ಹಣ ಸಂದಾಯ: ಅಗ್ರಹಾರದ ಮಹಾಜನರು ವಿವಿಧ ಉದ್ದೇಶಗಳಿಗಾಗಿ ಭೂಮಿಯನ್ನು ಕೊಡುವುದು ಜೊತೆಗೆ ಹಣವನ್ನು ಸಂದಾಯ ಮಾಡಿರುವುದು ಶಾಸನಗಳಿಂದ ಕಂಡುಬರುತ್ತದೆ. ಉದಾ: ಕ್ರಿ.ಶ.೧೧೯೧ರ ತಳಲೂರು ಶಾಸನವು ತಳಿರೂರು ಅಗ್ರಹಾರದ ಮಹಾಜನಗಳು ಚೆನ್ನಕೇಶವ ದೇವರಿಗೆ ನಿಗಧಿತ ಪ್ರಮಾಣದ ಶುಲ್ಕವನ್ನು ಪಾವತಿಸಿದ್ದನ್ನು ತಿಳಿಸುತ್ತದೆ.೪೫ ತಳಲೂರಿನ ೧೨೭೧ರ ಶಾಸನವು ಅಲ್ಲಿಯ ಮಹಾಜನರು ತಮ್ಮ ಭೂಮಿಗೆ ನಾರಣಘಟ್ಟ ಕೆರೆಯಿಂದ ನೀರನ್ನು ಪಡೆದುದಕ್ಕೆ ಒಂದು ಗದ್ಯಾಣವನ್ನು ಪಾವತಿಸಿದ್ದನ್ನು ತಿಳಿಸುತ್ತದೆ.೪೬ ಕೆಲ್ಲಂಗೆರೆಯ ೧೩೬೭ರ ಶಾಸನವು ಅಲ್ಲಿಯ ಮಹಾಜನರು ಕೆರೆಯ ಭಂಡಿಯನ್ನು ನಿರ್ವಹಿಸುತ್ತಿದ್ದವನ ಜೀವಿತಕ್ಕಾಗಿ ಮತ್ತು ಎತ್ತುಗಳು, ಕೋಣಗಳು, ಗಾಡಿಯ ಎಣ್ಣೆ, ಕಬ್ಬಿಣದ ಸಲಕರಣೆಗಳಾದ ಹಾರೆ, ಗುದ್ದಲಿ ಮುಂತಾದವುಗಳನ್ನು ಹೊಂದಲು ಅಲ್ಲಿಯ ಸುಂಕದಿಂದ ಬಂದ ಆದಾಯದಿಂದ ಹಣವನ್ನು ದಾನ ಮಾಡಿದ್ದನ್ನು ತಿಳಿಸುತ್ತದೆ.೪೭
ಮಹಾಜನರ ಅನುಮತಿ ಪಡೆದು ಇತರರು ದೇವಾಲಯಗಳನ್ನು ಕಟ್ಟುತಿದ್ದುದು: ಕ್ರಿ.ಶ.೧೨೩೨ರ ಬೆಂಡೆಕೆರೆ ಶಾಸನವು ಮಹಾವಡ್ಡವ್ಯವಹಾರಿ, ಉಭಯ ನಾನಾದೇಶಿ ವರ್ತಕನಾದ ದಾಮೋದರ ಶೆಟ್ಟಿಯು ಶ್ರೀಮದನಾದಿ ಅಗ್ರಹಾರ, ಜಯಗೊಂಡಪುರವೆಂದು ಕರೆಯಲಾಗುತ್ತಿದ್ದ ಬೆಂಡೆಕೆರೆಯಲ್ಲಿ ಅಲ್ಲಿಯ ೫೨ ಮಹಾಜನಗಳ ಅನುಮತಿ ಪಡೆದು ತನ್ನ ಹೆಸರಿನಲ್ಲಿ ದಾಮೋದರೇಶ್ವರ ಎಂಬ ಶಿವಾಲಯವನ್ನು ಕಟ್ಟಿಸಿ ಅದರ ಪೂಜಾ ಕೆಲಸಗಳಿಗೆ (ಅಂಗಭೋಗ, ರಂಗಭೋಗ) ೮೦ ಕಂಬ ಗದ್ದೆಯನ್ನು ಅರಕೆರೆಯ ಕೆರೆಯ ಕೆಳಗೆ ದಾನ ನೀಡಿದ್ದನ್ನು ತಿಳಿಸುತ್ತದೆ.೪೮ ಕ್ರಿ.ಶ.೧೨೩೩ರ ಅರಕೆರೆ ಶಾಸನವು ಕೇರಳದ ಶ್ರೀಮಂತ ವರ್ತಕ ವಡ್ಡವ್ಯವಹಾರಿ ದಾಮೋದರ ಶೆಟ್ಟಿಯು ಸರ್ವಜ್ಞಪುರ, ಪಿರಿಯ ಅಗ್ರಹಾರವೆನಿಸಿದ್ದ ಅರಕೆರೆಯಲ್ಲಿ ಅಲ್ಲಿಯ ಮಹಾಜನರ ಅನುಮತಿ ಪಡೆದು ಚೆನ್ನಕೇಶವ, ಲಕ್ಷ್ಮಿನಾರಾಯಣ ಮತ್ತು ಗೋಪಾಲದೇವರಿಗೆ (ತ್ರಿಕೂಟಾಚಲ) ದೇವಾಲಯವನ್ನು ಕಟ್ಟಿಸಿ ಅದರ ನಿರ್ವಹಣೆಗಾಗಿ ಭೂಮಿಯನ್ನು ದಾನ ಮಾಡಿದ್ದನ್ನು ತಿಳಿಸುತ್ತದೆ.೪೯ ಬೆಂಡೆಕೆರೆ ಮತ್ತು ಅರಕೆರೆ ಗ್ರಾಮಗಳು ಅಗ್ರಹಾರಗಳಾಗಿದ್ದರಿಂದಲೂ ಮತ್ತು ದಾಮೋದರ ಶೆಟ್ಟಿಯು ಕೇರಳದವನಾಗಿದ್ದರಿಂದ ಮಹಾಜನರ ಅನುಮತಿ ಪಡೆದು ದೇವಾಲಯ ಮತ್ತಿತರ ಕೆಲಸ ಕಾರ್ಯಗಳನ್ನು ಮಾಡುವುದು ಅನಿವಾರ್ಯ ವಾಗಿತ್ತೆಂದು ಮೇಲಿನ ಎರಡು ಶಾಸನಗಳಿಂದ ತಿಳಿದು ಬರುತ್ತದೆ. ಇದಲ್ಲದೆ ಈ ಎರಡು ಅಗ್ರಹಾರಗಳು ಸರ್ವನಮಸ್ಯ ಅಗ್ರಹಾರಗಳಾಗಿದ್ದು, ಅಲ್ಲಿಯ ಸಂಪೂರ್ಣ ಜವಾಬ್ದಾರಿ ಮತ್ತು ಹತೋಟಿ ಮಹಾಜನರ ಹಿಡಿತದಲ್ಲಿದ್ದುದನ್ನು ಇಲ್ಲಿ ಸ್ಪಷ್ಟವಾಗಿ ಗುರುತಿಸಬಹುದು.
ಭೂಮಿಯನ್ನು ಕೊಳ್ಳುವುದು ಮತ್ತು ಮಾರುವುದು: ಮಹಾಜನರು ವಿವಿಧ ಕಾರ್ಯಗಳಿಗೆ ಸ್ಥಳೀಯ ಆದಾಯವನ್ನು ವಿನಿಯೋಗ ಮಾಡುವುದರ ಜೊತೆಗೆ ಭೂಮಿಯ ಮೇಲೆ ಬಂಡವಾಳ ಹೂಡುವುದನ್ನು ಗಮನಿಸಿದರೆ ಮಧ್ಯಕಾಲೀನ ಆರ್ಥಿಕ ವ್ಯವಸ್ಥೆಯಲ್ಲಿ ಭೂಮಿಗಿದ್ದ ಸ್ಥಾನ ಮತ್ತು ಮೌಲ್ಯವನ್ನು ಅರಿಯಬಹುದು. ಉದಾ: ಉಂಡಿಗನಾಳಿನ ೧೨೩೮ರ ಶಾಸನವು ಹಾರುವನಹಳ್ಳಿ ಅಗ್ರಹಾರದ ಮಹಾಜನರು ಅಲ್ಲಿಯ ಪ್ರಜೆಗಳೊಡಗೂಡಿ ಉಂಡಿಗನಾಳಿನ ನಿಂಬೇಶ್ವರ ದೇವರ ಸೇವಾಕಾರ್ಯಕ್ಕೆ ಮತ್ತು ಅದರ ನಂದಾದೀವಿಗೆಗೆ, ನೈವೇದ್ಯಕ್ಕೆ  ಮಾಚಜೀಯನಿಂದ ಭೂಮಿಯನ್ನು ಕ್ರಯಕ್ಕೆ ಕೊಂಡು ದಾನ ಮಾಡಿದ್ದನ್ನು ತಿಳಿಸುತ್ತದೆ.೫೦ ಕೆಲ್ಲಂಗೆರೆಯ ೧೨೮೮ರ ಶಾಸನವು ಅಗ್ರಹಾರ ಕೆಲ್ಲಂಗೆರೆಯ ಮಹಾಜನರು ೧೦೦೦ ಕಂಬ ಭೂಮಿಯನ್ನು ಕ್ರಯಕ್ಕೆ ಕೊಂಡಿದ್ದನ್ನು ತಿಳಿಸುತ್ತದೆ.೫೧ ಸೂಳೆಕೆರೆಯ ೧೩೧೦ರ ಶಾಸನವು ಕೆಲ್ಲಂಗೆರೆ ಅಗ್ರಹಾರದ ಮಹಾಜನರು ವಿಠಲಪ್ರಭು ಎಂಬುವವನಿಗೆ ಭೂಮಿಯನ್ನು ಮಾರಿದ್ದನ್ನು ಹಾಗೂ ಅವರು ಕೆಲವು ತೆರಿಗೆಗಳನ್ನು ಪಾವತಿಸಿದ್ದನ್ನು ತಿಳಿಸುತ್ತದೆ.೫೨ ಇದುವರೆಗೂ ಬ್ರಾಹ್ಮಣರು ಭೂಮಿಯನ್ನು ದಾನದ ರೂಪದಲ್ಲಿ ಪಡೆಯುತ್ತಿದ್ದವರು ೧೩ನೆಯ ಶತಮಾನದ ವೇಳೆಗೆ ತಾವೂ ಕೂಡ ದೇವಾಲಯ ಮತ್ತಿತರ ಕಾರ್ಯಗಳಿಗೆ ಭೂಮಿಯನ್ನು ದಾನ ಮಾಡುವುದು, ಕೊಳ್ಳುವುದು ಮತ್ತು ಮಾರುವುದರಲ್ಲಿ ತೊಡಗಿಸಿಕೊಂಡಿರುವುದನ್ನು ಗಮನಿಸಿದರೆ ಪುರೋಹಿತಶಾಹಿ ವರ್ಗವೂ ಸಹ ಭೂಮಿಯನ್ನು ಹೊಂದಿ/ ಭೂಮಾಲೀಕರಾಗಿ ಆ ಮುಖಾಂತರ ತಮ್ಮ ಆರ್ಥಿಕ, ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಉತ್ತಮ ಪಡಿಸಿಕೊಳ್ಳಲು ಹವಣಿಸುತ್ತಿದ್ದುದು ಕಂಡುಬರುತ್ತದೆ.
ಶೈವರಿಗೂ ಮತ್ತು ಬ್ರಾಹ್ಮಣರ ನಡುವೆ ಇದ್ದ ಸಮಸ್ಯೆಗಳು: ೧೨೭೪ರ ಶಾಸನವು ಶೈವ ಮತ್ತು ಬ್ರಾಹ್ಮಣರ ನಡುವೆ ಅಲ್ಲಿಯ ಉತ್ಪನ್ನದ ಬಗ್ಗೆ ಸಮಸ್ಯೆ ಬಂದಾಗ ಅದನ್ನು ಚರ್ಚಿಸಿ ಒಪ್ಪಂದಕ್ಕೆ ಬಂದಿದ್ದನ್ನು ತಿಳಿಸುತ್ತದೆ. ಇದರ ಪ್ರಕಾರ ಕಣಕಟ್ಟೆಯ ಅಗ್ರಹಾರದ ಒಟ್ಟು ಉತ್ಪನ್ನವಾದ ಐದು ಗದ್ಯಾಣದಲ್ಲಿ ಐದು ಹಣವನ್ನು (೧.೧೦) ಶೈವ ದೇವಾಲಯದ (ಕಮ್ಮಟೇಶ್ವರ) ಖರ್ಚಿಗೆ ಬಿಟ್ಟು ಉಳಿದ ೪ ೧/೨ ಗದ್ಯಾಣವನ್ನು ಮಹಾಜನರು ಇಟ್ಟುಕೊಳ್ಳುವಂತೆ ತೀರ್ಮಾನಿಸಲಾಯಿತು.೫೩ ಕಣಕಟ್ಟೆಯ ಅದೇ ಕಾಲದ ಇನ್ನೊಂದು ಶಾಸನವು ಅವರೀರ್ವರ ನಡುವೆ ಭೂಮಿಗೆ ಸಂಬಂಧಪಟ್ಟ ಸಮಸ್ಯೆಯೆಯಿದ್ದುದನ್ನು ತಿಳಿಸುತ್ತದೆ. ಅದರ ಪ್ರಕಾರ ಮಹಾಜನರಿಗೆ ಸೇರಿದ್ದ ಭೂಮಿಯನ್ನು ಅಕ್ರಮವಾಗಿ ಕಮ್ಮಟೇಶ್ವರ ದೇವಾಲಯದ ಶೈವ ಅರ್ಚಕರು ಅನುಭವಿಸುತಿದ್ದರು. ಇದನ್ನು ಅಲ್ಲಿಯ ಗಾವುಂಡರು, ಹುಳಿಯಾರುನಾಡಿನ ಪ್ರಭು ಮತ್ತು ಶ್ರೀಮಂತ ವರ್ತಕ ಪನ್ನಚಶೆಟ್ಟಿ ಪರಿಶೀಲಿಸಿ ಆ ಭೂಮಿಯನ್ನು ಮತ್ತೆ ಮಹಾಜನರಿಗೆ ವಾಪಸ್ಸು ಮಾಡಲಾಯಿತು.೫೪
ಉಪಸಂಹಾರ: ಅಗ್ರಹಾರಗಳು ಮಧ್ಯಕಾಲೀನ ಕರ್ನಾಟಕದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಗಣನೀಯ ಪಾತ್ರವನ್ನು ವಹಿಸಿದ್ದನ್ನು ಮೇಲಿನ ವಿವರಣೆಗಳಿಂದ ತಿಳಿಯಬಹುದು, ಗುಪ್ತರ ಆಳ್ವಿಕೆಯ ನಂತರ ರಾಜಕೀಯ ಅಸ್ತಿರತೆಯಿಂದಾಗಿ ಅವರ ಸ್ಥಾನದಲ್ಲಿ ಸಣ್ಣಪುಟ್ಟ ಅಧಿಕಾರಿಗಳು ಗ್ರಾಮಾಂತರ ಪ್ರದೇಶಗಳಲ್ಲಿ ತಮ್ಮ ಅಧಿಕಾರವನ್ನು ಶಾಶ್ವತ ಹಾಗೂ ವಂಶ ಪಾರಂಪರ್ಯಗೊಳಿಸುವ ನಿಟ್ಟಿನಲ್ಲಿ ಪುರೋಹಿತಶಾಹಿ ವರ್ಗದ ನೆರವನ್ನು ಗಣನೀಯ ಪ್ರಮಾಣದಲ್ಲಿ ಪಡೆಯಲಾರಂಭಿಸಿತ್ತು. ಪುರೋಹಿತಶಾಹಿ ವರ್ಗವು ವೇದ, ಶಾಸ್ತ್ರ, ಪಂಚಾಂಗ ಮತ್ತಿತರ ಕ್ಷೇತ್ರಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರಿಂದ ಅವರು ಶೂದ್ರ ವರ್ಗಕ್ಕೆ ಸೇರಿದ ಆಡಳಿತಗಾರರ ವಂಶಾವಳಿ ಹಾಗೂ ಪ್ರಶಸ್ತಿಗಳನ್ನು ರಚಿಸಿ ಅವರನ್ನು ಸೂರ್ಯ ವಂಶ ಮತ್ತು ಚಂದ್ರ ವಂಶಗಳಿಗೆ ಸೇರಿಸುವುದು ಮತ್ತು ಪೌರಾಣಿಕ ವ್ಯಕ್ತಿ/ನಾಯಕರೊಂದಿಗೆ ಹೋಲಿಕೆ ಮಾಡುವ ಅಥವಾ ಸಂಬಂಧ ಬೆಳೆಸುವ ಮುಖಾಂತರ ಆಳುವ ವರ್ಗದ ಸ್ಥಾನಮಾನಗಳನ್ನು ಕಾನೂನುಬದ್ಧ ಮಾಡುವುದರ ಜೊತೆಗೆ ಅವುಗಳನ್ನು ಪಾವಿತ್ರ್ಯಗೊಳಿಸಿ ಅವರನ್ನು ಅಂದಿನ ಸಮಾಜದಲ್ಲಿ ಉನ್ನತ ಮಟ್ಟಕ್ಕೇರಿಸಿದರು. ಎರಡನೆಯದಾಗಿ ಗುಪ್ತರ ಆಳ್ವಿಕೆ ನಂತರ ಅಂತರರಾಷ್ಟ್ರೀಯ ವ್ಯಾಪಾರ (ರೋಮ್) ಕುಸಿದು ಉತ್ತರ ಭಾರತದಲ್ಲಿ ನಗರಗಳು ಕ್ಷೀಣಿಸಿ ಪುರೋಹಿತಶಾಹಿ ವರ್ಗ ತನ್ನ ಬೆಂಬಲಿಗರನ್ನು ಕಳೆದುಕೊಳ್ಳಲಾರಂಭಿಸಿದಾಗ ಅವರು ನಗರಗಳನ್ನು ತೊರೆದು ಗ್ರಾಮೀಣ ಪ್ರದೇಶಗಳ ಕಡೆ ವಲಸೆ ಬರಲಾರಂಭಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಅವರು ತಮ್ಮ ಪಂಚಾಂಗದ ಮುಖಾಂತರ ಮಳೆ ಬೀಳುವ ಕಾಲ, ಉಳುಮೆಯ ಕಾಲ, ಬೀಜ ಸಂರಕ್ಷಣೆ, ಗೊಬ್ಬರ ತಯಾರಿಕೆ, ನೀರನ್ನು ಸಂಗ್ರಹಿಸಿ ಅದನ್ನು ಕೃಷಿಗೆ ಸದುಪಯೋಗ ಪಡಿಸಿಕೊಳ್ಳುವ ಅರಿವನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಲಾರಂಭಿಸಿದರು. ಇದರಿಂದಾಗಿ ರೈತರು ಹೆಚ್ಚು ಪ್ರಮಾಣದ ಕೃಷಿ ಉತ್ಪನ್ನಗಳನ್ನು ಬೆಳೆದು ಅಧಿಕ ಲಾಭಗಳಿಸಲಾರಂಭಿಸಿದರು. ಇದಲ್ಲದೇ ಇದೇ ಸಮಯದಲ್ಲಿ ಕೃಷಿ ಆಧಾರಿತ ಗುಡಿ ಕೈಗಾರಿಕೆಗಳು ಅಸ್ತಿತ್ವಕ್ಕೆ ಬಂದು ಅರ್ಥಿಕ ಕ್ಷೇತ್ರದಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದನ್ನು ಕಾಣಬಹುದು. ಇಂತಹ ಬೆಳವಣಿಗೆಗಳಿಂದಾಗಿ ಸ್ಥಳೀಯ ವ್ಯಾಪಾರ, ಅಂತರರಾಷ್ಟ್ರೀಯ ವ್ಯಾಪಾರ, ವ್ಯಾಪಾರಕೇಂದ್ರಗಳು, ವ್ಯಾಪಾರ ಸಂಘಗಳು ಅಸ್ತಿತ್ವಕ್ಕೆ ಬಂದವು. ಇದರಿಂದಾಗಿ ಮಧ್ಯಕಾಲೀನ ಕರ್ನಾಟಕದಲ್ಲಿ ಸಾಹಿತ್ಯ, ಶಿಲ್ಪಕಲೆ, ಶಿಕ್ಷಣ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳು ಬೆಳೆದು ಅಂದಿನ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಜೀವನದ ಮೇಲೆ ಗಣನೀಯ ಪ್ರಭಾವವನ್ನು ಬೀರಿದ್ದವು. ಇಂತಹ ಬೆಳವಣಿಗೆಗಳಿಂದಾಗಿ ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ ವಲಸೆ ಬಂದಂತಹ ಆರ್ಯ ವಂಶಕ್ಕೆ ಸೇರಿದ ಬ್ರಾಹ್ಮಣರು ಇಲ್ಲಿಯ ಸ್ಥಳೀಯ ಆಳರಸರ ಸಹಾಯದಿಂದ ಭದ್ರ ನೆಲೆಯೂರಿ ತಮ್ಮ ಸಂಸ್ಕೃತಿಯನ್ನು ಸ್ಥಳೀಯಗೊಳಿಸುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದನ್ನು ಸ್ಪಷ್ಟವಾಗಿ ಕಾಣಬಹುದು.

ಆಧಾರಸೂಚಿ ಮತ್ತು ಟಿಪ್ಪಣಿಗಳು
೧.    ಜಿ.ಎಮ್.ಮೊರೇಸ್‌ರವರ ಕದಂಬಕುಲ, ಮರು ಮುದ್ರಣ, (ಮದ್ರಾಸ್, ೧೯೯೦), ಚಿದಾನಂದ ಮೂರ್ತಿಯವರ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, (ಮೈಸೂರು, ೧೯೭೯), ಲೀಲಾ ಶಾಂತಕುಮಾರಿಯವರ ಹಿಸ್ಟರಿ ಆಫ್ ದಿ ಅಗ್ರಹಾರಾಸ್ ಇನ್ ಕರ್ನಾಟಕ, ೪೦೦-೧೩೦೦, (ಮದ್ರಾಸ್, ೧೯೮೬), ಮತ್ತು ವಸಂತಲಕ್ಷ್ಮಿಯವರ ಲೇಖನ ‘ಹಾಸನ ಜಿಲ್ಲೆಯ ಕೇಶವಪುರಗಳು ಇತಿಹಾಸ ದರ್ಶನ, ಸಂಪುಟ.೧೭, (ಬೆಂಗಳೂರು, ೨೦೦೨) ಮತ್ತಿತರ ಬರಹಗಳು ಮತ್ತು ಲೇಖನಗಳು ಅಗ್ರಹಾರಗಳನ್ನು ಕುರಿತು ಸಾಕಷ್ಟು ಮಾಹಿತಿ ನೀಡುತ್ತವೆ. ಆದರೆ ಅರಸೀಕೆರೆಯ ಅಗ್ರಹಾರಗಳನ್ನು ಕುರಿತು ಸಮಗ್ರವಾದ ಅಧ್ಯಯನಗಳು ಇದುವರೆಗೂ ಆಗಿಲ್ಲ.
೨.    ಎಸ್.ಕೆ. ಕೊಪ್ಪಾ., ‘ಅಗ್ರಹಾರ-ಭತ್ತಗ್ರಾಮ : ಒಂದು ಟಿಪ್ಪಣಿ ಇನ್ ಇತಿಹಾಸ ದರ್ಶನ, ಸಂಪುಟ ೫, (ಬೆಂಗಳೂರು, ೧೯೯೦), ಪು ಟ ೧೦೭.
೩.    ಆರ್.ಎಸ್. ಶರ್ಮಾ., ಇಂಡಿಯನ್ ಫ್ಯೂಡಲಿಸಂ, ೩೦೦-೧೨೦೦, (ಮದ್ರಾಸ್, ೧೯೬೫), ಪುಟ ೨-೩.
೪.    ಅದೇ., ಪುಟ ೪.
೫.    ಕ್ರಿ.ಶ. ೪೫೦ ರ ತಾಳಗುಂದದ ಶಾಸನವು ಕದಂಬ ವಂಶದ ಸ್ಥಾಪಕನಾದ ಮಯೂರ ಶರ್ಮನು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ತಾಳಗುಂದ ಅಗ್ರಹಾರದಲ್ಲಿ ಮುಗಿಸಿದನಂತರ ತನ್ನ ಅಜ್ಜನೊಂದಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಕಂಚಿಯ ಘಟಿಕಾಸ್ಥಾನಕ್ಕೆ ಹೋಗಿದ್ದುದನ್ನು ತಿಳಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ನೋಡಿ.
೬.    ಲೀಲಾ ಶಾಂತಕುಮಾರಿ., ಪೂರ್ವೋಕ್ತ., ಪುಟ ೧೮-೨೧.
೭.    ಅದೇ., ಪುಟ ೨೪.
೮.    ವಸಂತಲಕ್ಷ್ಮಿ ಕೆ., ‘ಹಾಸನ ಜಿಲ್ಲೆಯ ಕೇಶವಪುರಗಳು, ಇನ್ ಇತಿಹಾಸ ದರ್ಶನ, ಸಂಪುಟ.೧೭, (ಬೆಂಗಳೂರು, ೨೦೦೨೦), ಪು೧ ೨೧೨.
೯.    ಕೊಪ್ಪಾ ಎಸ್.ಕೆ., ಪೂರ್ವೋಕ್ತ., ಪುಟ ೧೦೬.
೧೦.   ಸಾಮಕ್ ಎಸ್.ಜಿ. ‘ಬಾಳಗಾರು ಅಗ್ರಹಾರದ ಪ್ರಾಚ್ಯಾವಶೇಷಗಳು, ಇತಿಹಾಸ ದರ್ಶನ, ಸಂಪುಟ ೧೭, (ಬೆಂಗಳೂರು ೨೦೦೨), ಪುಟ ೧೮೧.
೧೧.  ಲೀಲಾ ಶಾಂತಕುಮಾರಿ., ಪೂರ್ವೋಕ್ತ, ಪು೧ ೬೪.
೧೨.   ಅದೇ., ಪು. ೧೨೩.
೧೩.   ವಸಂತಲಕ್ಷ್ಮಿ., ಪೂರ್ವೋಕ್ತ., ಪುಟ ೧೬೮-೬೯.
೧೪.   ಹನುಮನಾಯಕ, ‘ಅರಸೀಕೆರೆ ತಾಲ್ಲೂಕಿನ ಎರಡು ಅಪ್ರಕಟಿತ ಶಾಸನವುಳ್ಳ ವೀರಗಲ್ಲುಗಳು, ಇತಿಹಾಸ ದರ್ಶನ, ಸಂಪುಟ.೧೦, ಬೆಂಗಳೂರು, ೧೯೯೫, ಪುಟ ೯೩-೯೬.
೧೫.  ಲೀಲಾ ಶಾಂತಕುಮಾರಿ, ಪೂರ್ವೋಕ್ತ., ಪುಟ ೭೧-೭೨.
೧೬.   ಅದೇ., ಪು. ೭೨.
೧೭.  ಎಪಿಗ್ರಾಫಿಯ ಕರ್ನಾಟಿಕ., ಸಂಪುಟ ೧೦, (ಪರಿಷ್ಕೃತ), ಅರಸೀಕೆರೆ ೫೭.
೧೮.   ಜಿ.ಎಮ್. ಮೊರೇಸ್, ಪೂರ್ವೋಕ್ತ, ಪುಟ ೨೯೯.
೧೯.   ಚಿದಾನಂದಮೂರ್ತಿ, ಪೂರ್ವೋಕ್ತ., ಪುಟ ೨೧೬.
೨೦ ರಿಂದ ೫೬ ಕ್ರಮವಾಗಿ ಎ.ಕ. ೧೦. ಅರಸೀಕೆರೆ ೧೮೪, ೩೯, ೩೧೮, ೧೨೪, ೧೫೧, ೨೨೭, ೧೫೨, ೧೫೭, ೧೬೬, ೨೮೬, ೨೮೬, ೨೩೩, ೧೫೬, ೧೫೪, ೧೪೯, ೧೭೪, ೧೬೦, ೧೬೩, ೩೨೫, ೨೩೨, ೨೧೩, ೨೧೭, ೧೪೨, ೧೯೭, ೧೧೫, ೧೬೭, , ೧೬೧, ೧೬೫, ೧೫೩, ೫೨, ೩೧೪, ೨೪೯, ೧೫೯, ೧೪೪, ೯೧, ೮೯.

Ÿ ಇತಿಹಾಸ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗ




No comments:

Post a Comment