Sunday, September 8, 2013

ಪ್ರೊ. ಶ್ರೀನಿವಾಸ ರಿತ್ತಿಯವರಿಗೆ ರಾಷ್ಟ್ರಕವಿ ಗೋವಿಂದಪೈ ಪ್ರಶಸ್ತಿ

ದಣಿವರಿಯದ ಸಂಶೋಧಕ ಪ್ರೊ.ಶ್ರೀನಿವಾಸ ರಿತ್ತಿಯವರಿಗೆ ಪ್ರಥಮ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ

     ಇದೇ ದಿ.೬ರಂದು ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಪ್ರಥಮ ಪ್ರಶಸ್ತಿ-೨೦೧೩ನ್ನು ಖ್ಯಾತ ಶಾಸನತಜ್ಞ  ಧಾರವಾಡದ ಡಾ.ಶ್ರೀನಿವಾಸ ಎಚ್.ರಿತ್ತಿಯವರಿಗೆ ಉಡುಪಿಯಲ್ಲಿ  ಪ್ರದಾನ ಮಾಡಲಾಗುವುದು. ತನ್ನಿಮಿತ್ತ ಈ ವಿಶೇಷ ಲೇಖನ.

ಡಾ.ಬಾಲಕೃಷ್ಣ ಹೆಗಡೆ
ಶಾಸನಶಾಸ್ತ್ರ ಸಂಶೋಧನೆಯಲ್ಲಿ ಡಾ.ಶ್ರೀನಿವಾಸ್‌ಎಚ್.ರಿತ್ತಿಯವರದು ದೊಡ್ಡ ಹೆಸರು. ೯೪ವರ್ಷದ ಇಳಿಪ್ರಾಯದಲ್ಲೂ ಸಂಶೋಧನೆಯ ಬಗ್ಗೆ ಬತ್ತದ ಉತ್ಸಾಹ. ಇಂಥಹ ಪ್ರೇರೇಪಕ ವಿದ್ವಾಂಸರಿಗೆ  ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಪ್ರಥಮ ಪ್ರಶಸ್ತಿ-೨೦೧೩ನ್ನು ನೀಡುತ್ತಿರುವುದು ಇತಿಹಾಸ ಮಂಡಲದ ಕಿರೀಟಕ್ಕೆ ಇಟ್ಟ ಗರಿಯಂತಾಗಿದೆ.
೧೯೨೯ರ ಜೂನ್ ೮ರಂದು ಅಂದಿನ ಅವಿಭಜಿತ ಧಾರವಾಡ ಜಿಲ್ಲೆಯ ಹಾವೇರಿಯಲ್ಲಿ ಜನಿಸಿದ ಡಾ.ರಿತ್ತಿ ತಮ್ಮ ಪದವಿಯನ್ನು ಧಾರವಾಡದ ಕರ್ನಾಟಕ ಕಾಲೇಜಿನಲ್ಲೂ ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯದಿಂದಲೂ ಪೂರೈಸಿದ್ದಾರೆ ೧೯೫೩ರಲ್ಲಿ ಅಂದಿನ ಬಾಂಬೆ ಸರ್ಕಾರದ ಕಾನೂನು ಇಲಾಖೆಯಲ್ಲಿ ಸಣ್ಣ ನೌಕರಿಗೆ ಸೇರಿದ ಇವರು ೧೯೫೫ರ ವರೆಗೆ ಅವರು ಸೇವೆ ಸಲ್ಲಿಸಿ ನಂತರ ಉದಯಕಮಂಡಲದಲ್ಲಿರುವ ಭಾರತೀಯ ಪುರಾತತ್ವ ಸರ್ವೆಕ್ಷಣಾಲಯದ ಭಾರತ ಸರ್ಕಾರದ ಶಾಸನ ಇಲಾಖೆಯಲ್ಲಿ ಶಾಸನ ತಜ್ಞರಾಗಿ ಕೆಲಸ ಆರಂಭಿಸಿದವರು. ೧೯೬೪ರ ವರೆಗೆ ಅಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದ ಇವರು ಅದೇ ವರ್ಷ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಚೀನ ಭಾರತದ ಇತಿಹಾಸ ಮತ್ತು ಶಾಸನ ವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ನಿಯುಕ್ತಿ ಹೊಂದಿದವರು. ಅಲ್ಲಿ ವಿಭಾಗದ ಮುಖ್ಯಸ್ಥರಾಗಿದ್ದಲ್ಲದೆ, ವಿ.ವಿ.ಯ ವಿವಿದ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ೧೯೮೯ರಲ್ಲಿ ಸೇವಾನಿವೃತ್ತಿ ಹೊಂದಿದ್ದಾರೆ.


ಉದಕಮಂಡಲದಲ್ಲಿನ ಶಾಸನಶಾಸ್ತ್ರ ಇಲಾಖೆಗೆ ಸೇರಿದಾಗಿನಿಂದ ಸಂಶೋಧನೆಯನ್ನು ತಮ್ಮ ಉಸಿರನ್ನಾಗಿಸಿಕೊಂಡ ಡಾ.ರಿತ್ತಿಯವರಿಗೆ ತಮ್ಮ ಕ್ಷೇತ್ರದಲ್ಲಿ ನಿವೃತ್ತಿಯೆಂಬುದೇ ಇಲ್ಲ. ಅಜ್ಞಾತ ಸ್ಥಳಗಳಲ್ಲಿ ಹುದುಗಿರುವ ಶಿಲಾಶಾಸನ ಇತ್ಯಾದಿಗಳನ್ನು ನಕಲು ಮಾಡುವ ಹಾಗೂ ಅವುಗಳನ್ನು ಸಂಪಾದಿಸುವ (ಎಡಿಂಟಿಂಗ್) ಕೆಲಸ ಅವರದ್ದಾಗಿದ್ದು, ವಿಶ್ವವಿದ್ಯಾಲಯಕ್ಕೆ ಸೇರಿದಾಗಲೂ ಅದನ್ನು ಮುಂದುವರಿಸಿದ್ದಾರಲ್ಲದೆ ಇಂದಿಗೂ ಅದೇ ಕಾಯಕದಲ್ಲಿ ನಿರತರಾಗಿದ್ದಾರೆ.
ವಿಶ್ವವಿದ್ಯಾಲಯದಲ್ಲಿನ ತಮ್ಮ ಸುದೀರ್ಘ ಸೇವಾ ಅವಧಿಯಲ್ಲಿ ಸಾವಿರಾರು ಇತಿಹಾಸ ವಿದ್ಯಾರ್ಥಿಗಳು ಇವರ ಪಾಠಕೇಳಿ ಪುನೀತರಾಗಿದ್ದಾರೆ. ಅಶೋಕನ ಶಾಸನಗಳು ಹಾಗೂ ಕೌಟಿಲ್ಯನ ಅರ್ಥಶಾಸ್ತ್ರ ಪಾಠಗಳನ್ನು ಇವರಿಂದ ಕೇಳಲು ವಿದ್ಯಾರ್ಥಿಗಳು ತುದಿಗಾಲ ಮೇಲೆ ನಿಲ್ಲುತ್ತಿದ್ದೆವೆಂದು ಈಗಲೂ ಆ ವಿದ್ಯಾರ್ಥಿಗಳು ಮೆಲುಕು ಹಾಕುತ್ತಿರುತ್ತಾರೆ.
ಶಾಸನಗಳ ಸಂಪಾದನೆ, ಅವುಗಳ ಅಧ್ಯಯನ ಕ್ರಮ, ಅವುಗಳ ಅರ್ಥೈಸುವಿಕೆ ಅಲ್ಲದೆ ಆ ಶಾಸನಗಳಿಂದ ಪ್ರಯೋಜನವಾಗುವ ಬಗೆ ಮುಂತಾದವುಗಳ ಕುರಿತು ಅನೇಖ ಲೇಖನಗಳನ್ನು ಇವರು ಪ್ರಕಟಿಸಿ ಉಪಕರಿಸಿದ್ದಾರೆ. ಈ ಲೇಖನಗಳು ಪ್ರತಿಷ್ಠಿತ ನಿಯತಕಾಲಿಕೆಗಳಾದ ಎಫಿಗ್ರಾಫಿಯಾ ಇಂಡಿಕಾ, ಮದ್ರಾಸಿನಿಂದ ಪ್ರಕಟವಾಗುತ್ತಿದ್ದ ಜರ್ನಲ್ ಅಫ್ ಓರಿಯಂಟಲ್ ರಿಸರ್ಚ್, ಬೆಂಗಳೂರಿನ ಮಿಥಿಕ್ ಸೊಸೈಟಿ ಜರ್ನಲ್, ಕರ್ನಾಟಕ ವಿಶ್ವವಿದ್ಯಾಲಯದ ನಿಯತಕಾಲಿಕೆಗಳು ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ, ಪ್ರಬುದ್ಧ ಕರ್ನಾಟಕ ಗಳಲ್ಲದೆ ಅನೇಕ ಅಭಿನಂದನಾ ಗ್ರಂಥಗಳಲ್ಲಿ, ಸಂಸ್ಮರಣ ಗ್ರಂಥಗಳಲ್ಲಿ ಇವರ ಮೌಲಿಕ ಲೇಖನಗಳು ಪ್ರಕಟವಾಗಿವೆ.
ಇನ್ಸ್ಕ್ರಿಪ್‌ಷನ್ ಫ್ರಾಂಮ್ ನಾಂದೇಡ್ ಡಿಸ್ಟ್ರಿಕ್ಟ್, ಇನ್ಸ್ಕ್ರಿಪ್‌ಷನ್ ಫಾಂಮ್ ಸೊಲಾಪುರ ಡಿಸ್ಟ್ರಿಕ್ಟ್, ಇನ್ಸ್ಕ್ರಿಪ್‌ಷ್‌ನ್ ಫ್ರಾಂಮ್ ಕೊಲ್ಲಾಪುರ ಡಿಸ್ಟ್ರಿಕ್ಟ್ ಇವು ಬೇರೆ ಬೇರೆ ವಿದ್ವಾಂಸರು ಪೂರೈಸಿದ ಶಾಸನ ನಕುಲಗಳ ಸಹಾಯದಿಂದ ಪ್ರಕಟಿಸಿದ ಪ್ರಮುಖ ಶಾಸನಗಳ ಪ್ರಕಟಣೆಗಳಾಗಿವೆ.
ಭಾರತದ ಇತಿಹಾಸ ಸಂಶೋಧನೆ ಹಾಗೂ ಶಾಸನಗಳ ಅಧ್ಯಯನಕ್ಕಾಗಿ ಪ್ರೋತ್ಸಾಹ ನೀಡಲೆಂದು ಇರುವ ನವದೆಹಲಿಯ ಪ್ರತಿಷ್ಠಿತ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ (ಆಯ್‌ಸಿ‌ಎಚ್‌ಆರ್) ನೊಡನೆ ನಿಕಟ ಸಂಪರ್ಕ ಹೊಂದಿದ ಇವರು ೧೯೮೦-೮೭ರ ಅವಧಿಯಲ್ಲಿ ಅದರ ಸದಸ್ಯರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಈ ಸಂಸ್ಥೆ ಆರಂಭಿಸಿರುವ ವಿಜಯ ನಗರ ಶಾಸನಗಳು ಎಂಬ ಬೃಹತ್ ಯೋಜನೆಯ ಸಂಚಾಲಕರಾಗಿಯೂ ಕಾರ್ಯ ನಿರ್ವಹಿಸುತ್ತಿರುವ ಇವರುಇವರ ಸಹೋದ್ಯೋಗಿಯಾಗಿದ್ದ ಡಾ.ಬಿ.ಆರ್. ಗೋಪಾಲ್ ಅವರ ಸಹಯೋಗದೊಂದಿಗೆ ಸವಿಸ್ತಾರ ಪ್ರಾಸ್ತಾವಿಕದೊಂದಿಗೆ ಮೂರು ಸಂಪುಟಗಳನ್ನು ಪೂರ್ಣಗೊಳಿಸಿದ್ದಾರೆ. ಈ ಸಂಪುಟಗಳು ೧,೮೮೯ ಶಾಸನಗಳ ಸಾರಾಂಶದಲ್ಲಿ ಪಠ್ಯಗಳನ್ನು ಹೊಂದಿವೆ. ವಿಜಯನಗರ ಅರಸರ ಸಂಸ್ಕೃತ ಶಾಸನಗಳ ಸಂಪುಟ ತರುವ ಕಾರ್ಯವೂ ಇವರಿಂದ ಆಗುತ್ತಿರುವುದು ಶ್ಲಾಘನನೀಯ ಅಂಶವಾಗಿದೆ. ಮೈಸೂರು ವಿಶ್ವವಿದ್ಯಾಲಯ ಹಮ್ಮಿಕೊಂಡ ಡಾ.ಬಿ.ಎಲ್ ರೈಸ್ ಅವರ  ಮೂಲ ಸಂಪಾದನೆಯ ಪ್ರಸಿದ್ದ ಎಪಿಗ್ರಾಫಿಯಾ ಕರ್ನಾಟಕದ ಪರಿಷ್ಕೃತ ಕಾರ್ಯದಲ್ಲಿ ಪಾಲ್ಗೊಂಡ ಇವರು ತುಮಕೂರು ಜಿಲ್ಲೆಗೆ ಸಂಬಂಧಿಸಿದ ಶಾಸನಗಳನ್ನು ಪರಿಷ್ಕರಿಸಿದ್ದಾರೆ. ಆರಂಭದ ಕಾಲದಿಂದ ಕ್ರಿ.ಶ. ೧೮ನೇ ಶತಮಾನದ ವರೆಗಿನ ವಿವಿಧ ರಾಜ ಸಂತತಿಯ ಆಳ್ವಿಕೆಯ ಸುಮಾರು ೪೨೩ ಕನ್ನಡ ಹಾಗೂ ಸಂಸ್ಕೃತ ಶಾಸನಗಳು ಇದರಲ್ಲಿವೆ.ಈ ಸಂಪುಟ ಶಾಸನ ಆಧ್ಯಯನಕ್ಕೆ ಉಪಯುಕ್ತವಾಗಿದ್ದು, ಮುದ್ರಣದ ಹಂತದಲ್ಲಿದೆ. ಇದಲ್ಲದೆ ದಕ್ಷಿಣ ಭಾರತದ ಶಾಸನಗಳ ಸರಣಿ ಸಂಪುಟ ರಚನೆಯ ಕಾರ್ಯವನ್ನು ಮೈಸೂರಿನಲ್ಲಿರುವ ಶಾಸನಶಾಸ್ತ್ರ ನಿರ್ದೇಶನಾಲಯ ಡಾ.ರಿತ್ತಿಯವರಿಗೆ ವಹಿಸಿದ್ದು, ಅವರ ಕಾರ್ಯತತ್ಪರತೆಗೆ ನಿದರ್ಶನವಾಗಿದೆ.
ತಾವು ಶಾಸನ ಸಂಶೋಧನೆ ಪ್ರಕಟಣೆ ಕ್ಷೇತ್ರದಲ್ಲಿ ಉತ್ತುಂಗಕ್ಕೇರಲು ಶಾಸನಶಾಸ್ತ್ರ ದಿಗ್ಗಜರಾಗಿದ್ದ ಡಾ.ಡಿ.ಸಿ ಸರ್ಕಾರ, ಡಾ.ಬಿ.ಚಿ.ಚಾಬ್ರಾ, ಶ್ರೀ‌ಎನ್.ಲಕ್ಷ್ಮೀನಾರಾಯಣರಾವ್ ಮತ್ತು ಡಾ.ಪಿ.ಬಿ. ದೇಸಾಯಿವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದೇ ಕಾರಣ ಎಂಬುದನ್ನು ನೆನಪಿಸಿಕೊಳ್ಳಲು ಅವರು ಮರೆಯುವುದಿಲ್ಲ. ಡಾ.ಎಸ್.ಆರ್.ರಾವ್, ಶ್ರೀ‌ಎಚ್.ಕೆ. ನರಸಿಂಹಸ್ವಾಮಿ, ಡಾ.ಜಿ.ಎಸ್.ಘಾಯಿ, ಡಾ.ಟಿ.ವಿ. ಮಹಾಲಿಂಗಂ ಮತ್ತು ಕೆ.ಜಿ.ಕೃಷ್ಣನ್ ಮೊದಲಾದ ಪ್ರಖ್ಯಾತ ಶಾಸನ ತಜ್ಞರ ಜತೆ ಕೆಲಸ ಮಾಡಿದ ಅನುಭವವನ್ನು ಮೆಲುಕು ಹಾಕುತ್ತಾರೆ.
ಶಾಸನಶಾಸ್ತ್ರ ಕ್ಷೇತ್ರದಲ್ಲಿ ಹೆಸರು ಮಾಡಿದ ಡಾ.ಬಿ.ಆರ್. ಗೋಪಾಲ. ಡಾ.ಕೆ.ವಿ. ರಮೇಶ್, ಡಾ.ಎಸ್. ಶಂಕರನಾರಾಯಣನ್ ಮತ್ತು ಡಾ.ಅಜಯಮಿತ್ರ ಶಾಸ್ತ್ರಿಯವರ ಜತೆ ಕೆಲಸ ನಿರ್ವಹಿಸಿದ ತೃಪ್ತಿ ಇದೆ ಎಂಬುದನ್ನು ವಿನೀತ ಭಾವದಿಂದ ಡಾ.ರಿತ್ತಿ ಸ್ಮರಿಸುತ್ತಾರೆ.ಕ.ವಿ.ವಿ.ಯಲ್ಲಿ ಪ್ರಾದ್ಯಾಪಕರಾಗಿದ್ದ ಅವಧಿಯಲ್ಲಿ ಪ್ರಾಚೀನ ಭಾರತದ ಇತಿಹಾಸ, ಅಂದಿನ ರಾಜನೀತಿ ಮತ್ತು ಲಿಪಿಶಾಸ್ತ್ರ, ಕರ್ನಾಟಕ ಇತಿಹಾಸ ವಿಷಯಗಳನ್ನು ಬೋಧಿಸಿದ ಅವರ ಮಾರ್ಗದರ್ಶನದಲ್ಲಿ ಜಪಾನ್ ದೇಶದ ಓರ್ವ ಪಿ‌ಎಚ್‌ಡಿ ವಿದ್ಯಾರ್ಥಿ ಸೇರಿದಂತೆ ದೇಶದ ಬೇರೆ ಬೇರೆ ಭಾಗದ ಸುಮಾರು ೨೦ವಿದ್ಯಾರ್ಥಿಗಳು ಡಾಕ್ಟ್‌ರೇಟ್ ಪದವಿ ಪಡೆದಿದ್ದಾರೆ.
ಶಾಸನ ವಿಜ್ಞಾದ ಅಧ್ಯಯನ, ಸಂಶೋಧನೆಗೆ ಪ್ರೋತ್ಸಾಹ ನೀಡುತ್ತಿರುವ ಎಫಿಗ್ರಾಫಿಕಲ್ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷರಾಗಿ ಇವರು ಕಳೆದ ಅನೇಕ ವರ್ಷದಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ೧೫ವರ್ಷಗಳಿಂದ ಅಲೂರು ವೆಂಕಟರಾವ್ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಇವರು ಆಲೂರರ ಸಮಗ್ರ ಸಾಹಿತ್ಯ ಸಂಪುಟದ ಸಂಪಾದನೆ, ಪ್ರಕಟಣೆಯ ಜನಬ್ದಾರಿಯನ್ನು ಹೊತ್ತವರಾಗಿದ್ದಾರೆ. ಮುಂಬೈನಲ್ಲಿ ಜರುಗಿದ್ದ ಇಂಡಿಯನ್ ಹಿಸ್ಟರಿ ಕಾಂಗ್ರೆಸ್‌ನ ವಾರ್ಷಿಕ ಅಧಿವೇಶನದ ಅಧ್ಯಕ್ಷರಾಗಿಯೂ ಇವರು ಆಯ್ಕೆಯಾಗಿದ್ದರು. ಮರಾಠಾವಾಡಾ ಹಿಸ್ಟರಿ ಕಾಂಗ್ರೆಸ್‌ನ ವಾರ್ಷಿಕ ಅಧಿವೇಶನದ ಅಧ್ಯಕ್ಷತೆ ವಹಿಸಲು ಇವರಿಗೆ ಅಹ್ವಾನ ಬಂದಿದ್ದು ಇವರ ವಿದ್ವತ್ತಿಗೆ ಸಾಕ್ಷಿಯಾಗಿದೆ. ಜಪಾನಿನ ಟೋಕ್ಯೊ ವಿಶ್ವವಿದ್ಯಾಲಯಕ್ಕೆ ಮೂರು ಬಾರಿ ಹಾಗೂ ಜರ್ಮನಿಯ ಪಶ್ಚಿಮ ಬರ್ಲಿನ ವಿ.ವಿ.ಗಳಲ್ಲಿ ಜರುಗಿದ ವಿಚಾರ ಸಂಕೀರಣಗಳಲ್ಲಿ ಭಾಗವಹಿಸಿ ವಿದ್ವತ್ ಪೂರ್ಣ ಪ್ರಭಂದ ಮಂಡಿಸಿದ ಹೆಗ್ಗಳಿಕೆ ಇವರದ್ದಾಗಿದೆ.
     ಇವರಿಗೆ ಸಂದ ಗೌರವ ಪ್ರಶಸ್ತಿಗಳು: ೧) ಬೆಂಗಳೂರಿನ ಮಿಥಿಕ್ ಸೊಸೈಟಿ. ೨) ಶ್ರವಣಬೆಳಗೊಳದ ಶ್ರೀಚಾರುಕೀರ್ತಿ ಭಟ್ಟಾರಕ ಸ್ವಾಮಿಗಳಿಂದ ಪ್ರಶಸ್ತಿ ೩) ಕರ್ನಾಟಕ ಇತಿಹಾಸ ಅಕಾಡೆಮಿ ನೀಡುವ ಡಾ.ಬಾ.ರಾ.ಗೋಪಾಲ್ ಪ್ರಶಸ್ತಿ. ೪) ಮಂತ್ರಾಲಯದ ಶ್ರೀರಾಘವೇಂದ್ರ ಮಠದಿಂದ ಸುಜಯಶ್ರೀ ವಿಶೇಷ ಪ್ರಶಸ್ತಿ ೫) ೨೦೦೭ರಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ೬) ಶ್ರೀಕೃಷ್ಣದೇವರಾಯನ ೫೦೦ನೇ ಪಟ್ಟಾಭಿಷೇಕ ಮಹೋತ್ಸವ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ಗೌರವ ೭) ೨೦೧೦ರಲ್ಲಿ ಗುಲ್ಬರ್ಗ ವಿ.ವಿ.ಯಿಂದ ಗೌರವ ಡಿ.ಲಿಟ್ ೮) ಚಿಂದಾನಂದ ಪ್ರಶಸ್ತಿ ೯) ಶಿವಮೊಗ್ಗ ಕರ್ನಾಟಕ ಸಂಘ ನೀಡುವ ಶಂ.ಭಾ.ಜೋಷಿ ಸಂಶೋಧನಾ ಪ್ರಶಸ್ತಿ ೧೦) ಕರ್ನಾಟಕ ಸರ್ಕಾರದಿಂದ ಪುರಾತತ್ವ ರತ್ನ ಪ್ರಶಸ್ತಿ ಇವು ಕೆಲ ಪ್ರಮುಖ ಪ್ರಶಸ್ತಿಗಳು ಡಾ.ರಿತ್ತಿಯವರನ್ನು ಅರಸಿ ಬಂದವುಗಳು.
     ಏನಿದು ಪ್ರಶಸ್ತಿ? ಬೆಂಗಳೂರಿನ ಶ್ರೀ ಟಿ.ವಿ.ಮೋಹನದಾಸ್ ಪೈ ಅವರು ತಮ್ಮ ಮಾತೃಶ್ರೀ ಶ್ರೀಮತಿ ವಿಮಲಾ ವಿ.ಪೈ ಅವರ ಹೆಸರಿನಲ್ಲಿ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ವಾಹಕತ್ವದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಪ್ರಶಸ್ತಿಯನ್ನು ವರ್ಷಂಪ್ರತಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ನೆಲೆಯಲ್ಲಿ ವಿದ್ವತ್ ಪ್ರಪಂಚದಲ್ಲಿ ಗಣನೀಯ ಸಾಧನೆ ಗೈದ ವಿದ್ವಾಂಸರೊಬ್ಬರಿಗೆ ನೀಡಿ ಅವರನ್ನು ಗ್ಣರವಿಸುವ ಸಲುವಾಗಿ ಹತ್ತು ಲಕ್ಷ ರೂ.ಗಳ ದತ್ತಿ ನಿಧಿಯನ್ನು ಸಂಶೋಧನ ಕೇಂದ್ರದಲ್ಲಿ ಮೂಲ ಧನವಾಗಿರಿಸಿದ್ದಾರೆ. ಈ ವಾರ್ಷಿಕ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ಮೊತ್ತದ್ದಾಗಿದ್ದು ಕನ್ನಡ ಸಾಹಿತ್ಯ, ಇತಿಹಾಸ, ಭಾಷಾಶಾಸ್ತ್ರ, ಶಾಸನಶಾಸ್ತ್ರ, ಸಂಶೋಧನೆ ಮೊದಲಾದ ಕ್ಷೇತ್ರಗಳಲ್ಲಿ ಖ್ಯಾತನಾಮರಾದ ವಿದ್ವಾಂಸರಿಗೆ ಮೀಸಲಿರಿಸಿದ್ದು, ಕೇಂದ್ರವು ತಜ್ಞರ ಶಿಫಾರಸ್ಸನ್ನು ಅನುಲಕ್ಷಿಸಿ ವಿದ್ವಾಂಸರನ್ನು ಆಯ್ಕೆ ಮಾಡುತ್ತದೆ.
    ಈ ಹಿನ್ನೆಲೆಯಲ್ಲಿ ಇವರ ವಿದ್ವತ್ತನ್ನು ಗುರುತಿಸಿ ಇದೇ ದಿ.೬ರಂದು ಉಡುಪಿಯಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಪ್ರಥಮ ಪ್ರಶಸ್ತಿ-೨೦೧೩ನ್ನು ಪ್ರದಾನ ಮಾಡುತ್ತಿರುವುದು ಇಡೀ ಶಾಸನ ಲೋಕಕ್ಕೆ ಸಂದ ಗೌರವವಾಗಿದೆ ಎಂಬುದು ಇತಿಹಾಸ ಆಸಕ್ತರ ಅಭಿಮತ.






No comments:

Post a Comment