Friday, September 13, 2013

ಎಚ್‌ಸಿ.ದಾಸಪ್ಪ-ಹಿರಿಯ ಮುತ್ಸದ್ದಿ

ಡಾ.ಪಿ.ವಿ.ಕೃಷ್ಣ ಮೂರ್ತಿ




ಹಿರಿಯ ರಾಜಕಾರಣಿ ಮುತ್ಸದ್ಧಿ ಎಚ್.ಸಿ. ದಾಸಪ್ಪ
          ಸ್ವತಂತ್ರ್ಯ ಪೂರ್ವದಲ್ಲಿ ಮೈಸೂರು ಸಂಸ್ಥಾನ ಪ್ರದೇಶದ ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಿದವರಲ್ಲಿ ಕೀರ್ತಿಶೇಷ ಎಚ್.ಸಿ. ದಾಸಪ್ಪನವರು ಅಗ್ರಗಣ್ಯರು. ಅಪ್ರತಿಮ ದೇಶಭಕ್ತರಾಗಿದ್ದ ಅವರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರಿಗೆ ಮಹಾತ್ಮ ಗಾಂಧೀಜಿಯವರ ನಿಕಟ ಸಂಪಕವಿದ್ದತು. ಅಂತ್ಯೆಯೇ ಅವರು ಅಪ್ಪಟ್ಟ ಗಾಂಧಿವಾದಿಯಾಗಿ ಸರಳತೆ ಮತ್ತು ಸಮಾಜ ಸೇವೆಯನ್ನು ಮೈಗೂಡಿಸಿಕೊಂಡಿಸದ್ದರು. ಸ್ವಾತಂತ್ರ್ಯದ ಪೂರ್ವೋತ್ತರದ, ಎರಡೂ ಕಾಲಗಳಲ್ಲೂ ಹೆಚ್ಚು ಜನಪ್ರಿಯರಾಗಿದ್ದ ಅವರು ಅಂದಿನ ಖ್ಯಾತ ನ್ಯಾಯಮೂರ್ತಿಗಳಾಗಿದ್ದ ಹಿರಳ್ಳಿ ಚನ್ನಯ್ಯ ಮತ್ತು ತಿಮ್ಮಮ್ಮನವರ ಸುಪುತ್ರರಾಗಿ ೫-೧೨-೧೮೯೪ ರಲ್ಲಿ ಮಡಿಕೇರಿಯಲ್ಲಿ ಚನ್ಮತಾಳಿದರು. ಚನ್ನಯ್ಯನವರು ಬ್ರಿಟಿಷ್ ಸರ್ಕಾರದಿಂದ ರಾವ್ ಸಾಹೇಬ್ ಎಂಬ ಬಿರುದನ್ನು ಪಡೆದ ಗೌರವಾನ್ವಿತ ವ್ಯಕ್ತಿಗಳಾಗಿದ್ದಿರು. ಅವರು ತಮ್ಮ ನಿವೃತ್ತಿಯ ನಂತರ ಬೆಂಗಳೂರಿಗೆ ಬಂದು ನೆಲಸಿದರು. ೧೯೧೭ ರಲ್ಲೇ ಸ್ಥಾಪಿತವಾಗಿದ್ದ ಪ್ರಜಾಮಿತ್ರ ಮಂಡಳಿಯೊಂದಿಗೆ ಅವರು ಸಕ್ರಿಯವಾಗಿ ತೊಡಗಿಕೊಂಡರು. ಅಲ್ಲದೆ ಅವರು ರಾಮಕೃಷ್ಣ ಮಿಷನ್ನಿನೊಂದಿಗೆ ಸಂಪರ್ಕವಿಟ್ಟುಕೊಂಡಿದ್ದರು.
ದಾಸಪ್ಪನವರು ಮೈಸೂರಿನಲ್ಲಿ ಇಂಟರ್ ಮೀಡಿಯೇಟ್ ಪರೀಕ್ಷೆ ಮುಗಿಸಿ ಬಿ.ಎ. ವ್ಯಾಸಂಗಕ್ಕಾಗಿ ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿಗೆ ಸೇರಿದರು. ಆಗ ಅವರಿಗೆ ಅಲ್ಲಿ ಆರ್ಕಾಟ್ ಮೊದಲಿಯಾರ್ ಸೋದರರ ಜಸ್ಟೀಸ್ ಪಾರ್ಟಿಯ ಕಾರ್ಯ ಚಟುವಟಿಕೆಗಳು ಪರಿಚಯವಾಯಿತು. ಮುಂದೆ ಮುಂಬಯಿ ನಗರಕ್ಕೆ ಹೋಗಿ ನ್ಯಾಯಶಾಸ್ತ್ರವನ್ನು ಅಭ್ಯಾಸ ಮಾಡಿ ೧೯೧೯ ರಲ್ಲಿ ತಮ್ಮ ವಕೀಲಿ ವೃತ್ತಿಯನ್ನು ಬೆಂಗಳೂರಿನಲ್ಲಿ ಆರಂಭಿಸಿದರು. ನಂತರ ಮೈಸೂರಿನಲ್ಲಿ ವಕೀಲಿ ವೃತ್ತಿಯನ್ನು ಮುಂದುವರಿಸಿದರು. ೧೯೨೪ ರಲ್ಲಿ ಪ್ರಜಾಮಿತ್ರ ಮಂಡಳಿಗೆ ಸೇರಿ ಮೈಸೂರಿನ ಪುರಸಭೆ ಮತ್ತು ಸಂಸ್ಥಾನದ ನ್ಯಾಯವಿಧಾಯಕ ಸಭೆಯ ಸದಸ್ಯರಾಗಿ ೧೯೨೭ ರಿಂದ ೧೯೩೫ ರವರೆಗೆ ಸೇವೆ ಸಲ್ಲಿಸಿದರು. ಈ ಅವಧಿಯಲ್ಲೇ ಬೆಂಗಳೂರಿನ ಖ್ಯಾತ ಸಮಾಜ ಸುಧಾರಕರೂ ಒಕ್ಕಲಿಗರ ಸಂಘದ ಸಂಸ್ಥಾಪಕರಲ್ಲಿ ಒಬ್ಬರೂ ಆಗಿದ್ದ ಕೆ.ಎಚ್. ರಾಮಯ್ಯನವರ ಮಗಳು ಯಶೋಧರಮ್ಮನವರನ್ನು ಮದುವೆಯಾದರು. ಯಶೋಧರಮ್ಮನವರು ವಿದ್ಯಾವಂತೆಯಾಗಿದ್ದು ಸಮಾಜ ಕಲ್ಯಾಣ ಚಟುವಟಿಕೆಗಳಲ್ಲಿ ಆಸಕ್ತರಾಗಿದ್ದರು. ಗಾಂಧೀಜಿಯವರ ರಚನಾತ್ಮಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವರ ಪ್ರಭಾವದಿಂದಲೇ ದಾಸಪ್ಪನವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.
ಕೆ.ಸಿ. ರೆಡ್ಡಿಯವರು ಮೈಸೂರು ಕಾಂಗ್ರೆಸ್ಸಿನ ಹಿರಿಯ ಧುರೀಣರು. ದಾಸಪ್ಪನವರು ಅವರೊಂದಿಗೆ ಕೂಡಿಕೊಂಡರು. ೧೯೩೮ ರಲ್ಲಿ ಶಿವಪುರದಲ್ಲಿ ಏರ್ಪಟ್ಟ ಮೊದಲ ಮೈಸೂರು ಕಾಂಗ್ರೆಸ್‌ನ ಅಧಿವೇಶನ ನಡೆದ ಸಂದರ್ಭದ ತ್ರಿವರ್ಣ ಧ್ವಜಾರೋಹಣಕ್ಕೆ ಸಂಬಂಧಿಸಿದಂತೆ ಕೆ.ಸಿ. ರೆಡ್ಡಿ, ಪಿ. ವೆಂಕಟಪ್ಪ ಇವರೊಡನೆ ದಾಸಪ್ಪನವರನ್ನೂ ಅಂದಿನ ಸರ್ಕಾರದ ಬಂಧನಕ್ಕೆ ಒಳಪಡಿಸಿತು.
ಶಿವಪುರದಲ್ಲಿ ಅಧಿವೇಶನ ನಡೆದ ಕೆಲವೇ ವಾರಗಳಲ್ಲಿ ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದಲ್ಲಿ ಏರ್ಪಟ್ಟಿದ್ದ ಸತ್ಯಾಗ್ರಹ ಕಾರ್ಯಕ್ರಮದಲ್ಲಿ ಗೋಲಿಬಾರ್ ನಡೆದು, ಒಬ್ಬ ಗರ್ಭಿಣಿ ಮಹಿಳೆಯೂ ಸೇರಿದಂತೆ ಹತ್ತು ಜನರು ಅಸುನೀಗಿದರು. ಈ ಹಿಂಸಾಕಾಂಡವು ಮೈಸೂರಿನ ಜಲಿಯನ್‌ವಾಲ ದುರಂತವೆಂದು ಖ್ಯಾತವಾಯಿತು. ಈ ದುರಂತದ ನಂತರ ಸಂಸ್ಥಾನದ ಜನರಿಗೆ ಮೈಸೂರು ಅರಸರ ಬಗೆಗಿದ್ದ ಗೌರವ ಸಾಕಷ್ಟು ಕುಂದಿತು. ಈ ಸ್ಥಳದಲ್ಲೇ ೧೯೩೯ ರಲ್ಲಿ ಮೈಸೂರು ಕಾಂಗ್ರೆಸ್‌ನ ಎರಡನೇ ಅಧಿವೇಶನ ನಡೆದು, ಎಚ್.ಸಿ. ದಾಸಪ್ಪನವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ನಂತರದಲ್ಲಿ ೧೯೩೯-೪೦ ರಲ್ಲಿ ಮೈಸೂರಿನಲ್ಲಿ ಜವಾಬ್ದಾರಿ ಸರ್ಕಾರದ ರಚನೆಗೆ ಹೋರಾಟ ಪ್ರಾರಂಭವಾಯಿತು. ಈ ಹೋರಾಟದ ಸಂದರ್ಭದಲ್ಲಿ ಮತ್ತೊಬ್ಬ ಖ್ಯಾತ ಕಾಂಗ್ರೆಸ್ ಧುರೀಣರಾಗಿದ್ದ ಟಿ. ಸಿದ್ಧಲಿಂಗಯ್ಯನವರನ್ನು ಬೆಂಗಳೂರಿನ ಬನಪ್ಪ ಪಾರ್ಕಿನಲ್ಲಿ ಅವರು ಸಾರ್ವಜನಿಕ ಭಾಷಣ ಮಾಡುತ್ತಿದ್ದಾಗ ಬಂಧಿಸಲಾಯಿತು. ಈ ಸಂಬಂಧದಲ್ಲೇ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಕೆ.ಜಿ.ಎಫ್.ನ್ನು ಪ್ರವೇಶಿಸಲು ಪ್ರಯತ್ನಿಸಿದ ದಾಸಪ್ಪನವರನ್ನು ಬಂಧಿಸಿ ೧೯೪೦ ರಲ್ಲಿ ಬಿಡುಗಡೆ ಮಾಡಲಾಯಿತು. ಶಿವಮೊಗ್ಗದಲ್ಲಿ ಏರ್ಪಟಿದ್ದ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ಟಿ. ಸಿದ್ಧಲಿಂಗಯ್ಯನವರೊಂದಿಗೆ ದಾಸಪ್ಪನವರ‍್ನೂ ಬಂಧಿಸಿ ೧೮ ತಿಂಗಳುಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಿದರು. ಅಲ್ಲದೆ ಅವರ ವಕೀಲಿ ವೃತ್ತಿಯ ಸನ್ನದನ್ನು ಕಿತ್ತುಕೊಳ್ಳಲಾಯಿತು. ಮಹಾತ್ಮ ಗಾಂಧಿಯವರ ಕರೆಗೆ ಓಗೊಟ್ಟು ನಡೆಸಿದ ಈ ಚಳವಳಿಯ ಫಲವಾಗಿ ಕೆ.ಟಿ. ಭಾಷ್ಯಂ, ಎಸ್. ನಿಜಲಿಂಗಪ್ಪ ಮುಂತಾದವರಿಗೂ ಇದೇ ಗೌರವ ಸಂದಿತು. ಆಗ ಗಾಂಧೀಜಿಯವರು ತಮ್ಮ ಹರಿಜನ ಪತ್ರಿಕೆಯ ಸಂಪಾದಕೀಯದಲ್ಲಿ ಮೈಸೂರು ವಕೀಲರು ಎಂಬ ಶೀರ್ಷಿಕೆಯಡಿಯಲ್ಲಿ ಹೀಗೆ ಬರೆದರು. ದಾಸಪ್ಪನವರು ಮೈಸೂರು ಅತ್ಯಂತ ಗೌರವಾನ್ವಿತ ವ್ಯಕ್ತಿ. ಇಪ್ಪತ್ತು ವರ್ಷಗಳ ವಕೀಲಿ ಕೆಲಸದ ಅನುಭವವುಳ್ಳವರು. ಮೈಸೂರಿನ ಒಂದು ಭಾಗದಲ್ಲಿ ಮ್ಯಾಜಿಸ್ಟೇಡರ ಆಜ್ಞೆಯನ್ನು ಉಲ್ಲಂಘಿಸಿ ಭಾಷಣ ಮಾಡಿದ ಕೆಚ್ಚು  ಅವರದು. ಜಸ್ಟೀಸ್ ನಾಗೇಶ್ವರ ಐಯ್ಯರ್ ಅವರಿಂದ ನಡೆಯಲಿದ್ದ ಅಧಿಕೃತ ವಿಚಾರಣೆಯನ್ನು ಬಹಿಷ್ಕರಿಸಬೇಕೆಂದು ರಾಜಕೀಯ ಕೈದಿಗಳಿಗೆ ತಿಳಿಸಿ ಹೇಳುವ ಸಾಹಸ ಮಾಡಿದ್ದರು. ಆ ಕೆಲಸವನ್ನು ಅವರು ನನ್ನ ಸೂಚನೆಯ ಮೇರೆಗೆ ಮಾಡಿದ್ದರು. ಈ ಗುರುತರ ಅಪರಾಧಗಳಿಗಾಗಿ ದಾಸಪ್ಪನವರು ಎಂದೆಂದಿಗೂ ವಕೀಲಿ ವೃತ್ತಿಯನ್ನು ಕೈಗೊಳ್ಳದಂತೆ ಮಾಡಲಾಗಿದೆ. ದಾಸಪ್ಪನವರನ್ನು ನಾನು ಚೆನ್ನಾಗಿ ಬಲ್ಲೆ. ಅವರು ನಿಷ್ಕಳಂತ ಚಾರಿತ್ರವುಳ್ಳವರು. ಅತ್ಯಂತ ಪ್ರಾಮಾಣಿಕರು. ಅವರು ತಮ್ಮ ಕೈಲಾದ ಮಟ್ಟಿಗೂ ಅಹಿಂಸೆಯನ್ನು ಅನುಸರಿಸಲು ಸೈರ್ಯದಿಂದ ಯತ್ನಿಸುತ್ತಿದ್ದಾರೆ. ಬ್ರಿಟಿಷ್ ಇಂಡಿಯಾದ ದೇಶಭಕ್ತ ವಕೀಲರು ಏನು ಮಾಡಿದ್ದರೂ ಅಥವಾ ಇತರ ವಕೀಲರು ಏನು ಮಾಡಲಿಲ್ಲವೋ ಅದನ್ನು ದಾಸಪ್ಪನವರು ಮಾಡಿದ್ದಾರೆ (ಹರಿಜನ ೧೩-೭-೧೯೪೦).
ದಾಸಪ್ಪನವರು ಹಾಗೂ ಅವರ ಪತ್ನಿ ಯಶೋಧರಮ್ಮನವರು ಒಂದಲ್ಲ ಎರಡು ಬಾರಿ ಗಾಂಧೀಜಿಯವರ ಸೇವಾ ಗ್ರಾಮಕ್ಕೆ ತೆರಳಿ ಸಾಕಷ್ಟು ದೀರ್ಘ ಕಾಲದವರೆಗೆ ತಂಗಿದ್ದರು. ಹೀಗಾಗಿ ಗಾಂಧೀಜಿಯವರ ತತ್ತ್ವ ಮತ್ತು ಜೀವನ ವಿಧಾನವನ್ನು ಹೆಚ್ಚು ನಿಕಟವಾಗಿ ಅರಿಯಲು ಅವರಿಗೆ ಸಾಧ್ಯವಾಗಿತ್ತು. ಅಲ್ಲದೆ ಗಾಂಧೀಜಿಯವರ ಸಾಮಾಜಿಕ ಕಳಕಳಿಯ ಪ್ರಜ್ಞೆಯನ್ನು ಅವರು ಮೈಗೂಡಿಸಿಕೊಳ್ಳಲು ಕಾರಣವಾಗಿತ್ತು.
೧೯೪೭ ರಲ್ಲಿ ನಡೆದ ಮೈಸೂರು ಚಲೋ ಚಳವಳಿಯಲ್ಲಿ ದಾಸಪ್ಪನವರು ಭಾಗವಹಿಸಿ ಸೆರೆಮನೆ ಸೇರಿದರು. ಕಾಂಗ್ರೆಸ್ಸಿಗರ ಸಂಘಟಿತ ಸತ್ಯಾಗ್ರಹವು ಮೈಸೂರು ಮಹಾರಾಜರನ್ನು ಜವಾಬ್ದಾರಿ ಸರ್ಕಾರವನ್ನು ಸ್ಥಾಪಿಸುವಂತೆ ಮಾಡಿತ್ತು. ಕೆಲವೇ ದಿನಗಳಲ್ಲಿ ದಾಸಪ್ಪನವರು ಬಿಡುಗಡೆಯಾಗಿ ಕೆ.ಸಿ. ರೆಡ್ಡಿಯವರ ನೇತೃತ್ವದ ಜವಾಬ್ದಾರಿ ಸರ್ಕಾರದಲ್ಲಿ ಕೈಗಾರಿಕಾ ಮತ್ತು ಹಣಕಾಸಿನ ಸಚಿವರಾಗಿ ನಿಯಮಿತವಾದರು. ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ವಿಸ್ತರಣೆ, ಮೈಸೂರು ಪ್ರಾಂತ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ನೀಲನಕ್ಷೆಯನ್ನು ತಯಾರಿಸಿದರು. ಕೈಗಾರಿಕಾ ವಿಸ್ತರಣೆಯ ಸಹಯೋಗಕ್ಕಾಗಿ ಅಮೇರಿಕ, ಇಂಗ್ಲೆಂಡ್ ದೇಶಗಳಗೆ ಭೇಟಿ ನೀಡಿದರು. ಕಾರ್ಮಿಕ ಸಚಿವರಾಗಿದ್ದ ಭಾಷ್ಯಂ ಅವರಿಗೆ ಕಾರ್ಮಿಕ ಪರವಾದ ಅನೇಕ ಕಾನೂನುಗಳ ರೂಪತಾಳಲು ನೆರವಾದರು. ಬೆಂಗೂರು ನಗರಾಭಿವೃದ್ಧಿ ಮಂಡಳಿಯನ್ನು ಸ್ಥಾಪಿಸುವುದರ ಮೂಲಕ ಜಯನಗರ, ರಾಜಾಜಿನಗರ ಬಡಾವಣೆಗಳ ಸ್ಥಾಪನೆಗೆ ಕಾರಣರಾದರು.
೧೯೫೨ ರಲ್ಲಿ ದಾಸಪ್ಪನವರು ಮೈಸೂರು ಕಾಂಗ್ರೆಸ್ಸಿನ ಅಧ್ಯಕ್ಷರಾದರು ಮತ್ತು ೧೯೫೪ ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು. ಒಮ್ಮೆ ೧೯೫೭ ರಲ್ಲಿ ಮತ್ತೊಮ್ಮೆ ೧೯೬೨ ರಲ್ಲಿ, ಹೀಗೆ ಎರಡು ಬಾರಿ ಲೋಕಸಭೆಗೆ ಚುನಾಯಿತರಾದರು. ೧೯೫೯ ರಿಂದ ೧೯೬೩ ರವರೆಗೂ ಸಂಸತ್ತಿನ ಅಂದಾಜು ಸಮಿತಿಯ ಅಧ್ಯಕ್ಷರಾಗಿ ಮಹತ್ತರ ಸೇವೆ ಸಲ್ಲಿಸಿದರು. ೧೯೬೨ ರಲ್ಲಿ ಹರೇಕೃಷ್ಣ ಮೆಹತಾಬ್ ಅವರನ್ನು ಸೋಲಿಸಿ ಸಂಸತ್ತಿನ ಕಾಂಗ್ರೆಸ್ ಪಕ್ಷದ ಉಪ ನಾಯಕರಾಗಿ ಆಯ್ಕೆಯಾದರು. ೧೯೬೩ ರಲ್ಲಿ ಕೇಂದ್ರ ಮಂತ್ರಿ ಮಂಡಲದ ರೈಲ್ವೆ ಸಚಿವರಾಗಿದ್ದರು. ಹಾಸನ-ಮಂಗಳೂರು ರೈಲ್ವ ಯೋಜನೆ ಇವರ ಪ್ರಯತ್ನದ ಫಲವಾಗಿ ಅಂಗೀಕಾರ ಪಡೆಯಿತು. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮಂತ್ರಿ ಮಂಡಲದಲ್ಲಿ ನೀರಾವರಿ ಮತ್ತು ವಿದ್ಯುತ್ ಸಚಿವರಾಗಿದ್ದರು. ನಂತರ ಕೈಗಾರಿಕಾ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು.
ಆಫ್ರಿಕಾದ ಜಾಂಬಿಯ ಸ್ವಾತಂತ್ರ್ಯ ದಿನೋತ್ಸವಕ್ಕೆ ಭಾರತದ ನಿಯೋಗದ ಮುಖಂಡರಾಗಿ ಹೋಗಿ ಭಾಗವಹಿಸಿದ್ದರು. ಹಾಗೇ ಕೀನ್ಯಾ ಮತ್ತು ಉಗಾಂಡಗಳಿಗೂ ಭೇಟಿ ನೀಡಿದರು. ಆಫ್ರಿಕಾದಿಂದ ಹಿಂತಿರುಗಿದ ನಂತರ ದಿನಾಂಕ ೨೮-೧೦-೬೪ ರಂದು ದೆಹಲಿಯಲ್ಲಿ ಹೃದಯಾಘಾತದಿಂದ ಮರಣ ಹೊಂದಿದರು.
ಒಬ್ಬ ನಿಷ್ಠಾವಂತ ಗಾಂಧಿವಾದಿಯಾದ ದಾಸಪ್ಪನವರು ಶ್ರೀ ರಾಮ ಕೃಷ್ಣಾಶ್ರಮ, ಕಸ್ತೂರಿಬಾ ಗಾಂಧಿ ಸ್ಮಾರಕ ಸಂಸ್ಥೆ, ಗಾಂಧಿ ಸ್ಮಾರಕ ನಿಧಿ, ಹಿಂದಿ ಪ್ರಚಾರ ಸಭೆ ಮುಂತಾದ ಸಂಸ್ಥೆಗಳ ಮೂಲಕ ಜನರಿಗೆ ಸೇವೆ ಸಲ್ಲಿಸಿದರು. ಜೊತೆಗೆ ಸ್ವದೇಶಿ, ಖಾದಿ ಮತ್ತು ದಲಿತೋದ್ಧಾರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿದ್ದರಲ್ಲದೆ ಹರಿಜನ ಬಾಲಕಿಯಬ್ಬಳನ್ನು ದತ್ತು ತೆಗೆದುಕೊಂಡು ಸಾಕಿದ್ದರು. ಅವರಲ್ಲಿದ್ದ ವಿನಯಶೀಲಗುಣ ಮತ್ತು ಸರಳತೆಗಳು ಅವರಿಗೆ ಜನಾನುರಾಗವನ್ನುಗಳಿಸಿಕೊಟ್ಟಿದ್ದವು.





No comments:

Post a Comment