Thursday, May 7, 2015

ಹೂಲಿ : ಕಾಳಾಮುಖ ಮಹಾಅಗ್ರಹಾರ

ಹೂಲಿ : ಕಾಳಾಮುಖ ಮಹಾಅಗ್ರಹಾರ
ಡಾ. ಕೆ.ಎಸ್. ಪಾಟೀಲ 
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿರುವ ಹೂಲಿ ಗ್ರಾಮವು ಸವದತ್ತಿಯಿಂದ ಪೂರ್ವಕ್ಕೆ 8 ಕಿ.ಮೀ. ಅಂತರದಲ್ಲಿದೆ. ಇದು ಅಂದು ಬೆಳ್ವೊಲ-300 ಆಡಳಿತ ವಿಭಾಗದಲ್ಲಿ ಅಂತರ್ಗತವಾಗಿತ್ತು. ಆ ಆಡಳಿತ ವಿಭಾಗವು ಕ್ರಿ.ಶ. ಸುಮಾರು 10ನೆಯ ಶತಮಾನದಿಂದ 13ನೆಯ ಶತಮಾನದ ಪ್ರಾರಂಭದವರೆಗೂ ಉತ್ತರ ಕರ್ನಾಟಕದಲ್ಲಿ ಮಹತ್ವದ ಆಡಳಿತ ವಿಭಾಗವಾಗಿತ್ತು. ಅದು ಇಂದಿನ ಧಾರವಾಡ, ಬೆಳಗಾವಿ, ಬಾಗಲಕೋಟ, ಕೊಪ್ಪಳ ಮತ್ತು ಗದಗ ಜಿಲ್ಲೆಗಳ ಕೆಲವು ಪ್ರದೇಶಗಳನ್ನೊಳಗೊಂಡು, ಕರ್ನಾಟಕದ ಇತಿಹಾಸದುದ್ದಕ್ಕೂ ರಾಜಕೀಯ, ಆಡಳಿತ, ಸಾಂಸ್ಕøತಿಕ, ಧಾರ್ಮಿಕ ಚಟುವಟಿಕೆಗಳ ಆಗರವಾಗಿತ್ತು1. ಈ ವಿಭಾಗದ ವಾಯವ್ಯ ದಿಕ್ಕಿನಲ್ಲಿರುವ ಹೂಲಿ ಪಟ್ಟಣವು ಶಾಸನಗಳಲ್ಲಿ ‘ಪೂಲಿ’, ‘ಪೂವಲ್ಲಿ’, ‘ಪೂಲಿಗ್ರಾಮ’, ‘ಹೂಲಿ’ ‘ಚಾಳುಕ್ಯ ಚಕ್ರವರ್ತಿ ಮಹಾಅಗ್ರಹಾರ’ ಎಂದು ವರ್ಣಿತವಾಗಿದೆ.2 ಇದು ನೇರವಾಗಿ ಅರಸನ ಪ್ರೋತ್ಸಾಹದಲ್ಲಿತ್ತು. ಇಲ್ಲಿಯ ಮಹಾಜನರೇ ಊರೊಡೆಯರಾಗಿದ್ದು, ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಇತ್ಯಾದಿ ಚಟುವಟಿಕೆಗಳಿಗೆ ಅವರ ಮನ್ನಣೆ ಮತ್ತು ಪರವಾನಿಗೆ ಅಗತ್ಯವಾಗಿತ್ತು. ಮೇಲಾಗಿ ಈ ಪಟ್ಟಣವು ಶೈವ ಧರ್ಮದ ಕಾಳಾಮುಖ ಪಂಥದ ಕೇಂದ್ರವೂ ಆಗಿತ್ತು. ಹೂಲಿ ಪರಿಸರದಲ್ಲಿ ಬಾದಾಮಿ ಚಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಳುಕ್ಯರು, ಕಳಚೂರಿಗಳು, ದೇವಗಿರಿಯ ಸೇವುಣರು, ಆಳ್ವಿಕೆ ಮಾಡಿದ ಕುರಿತಾಗಿ ಶಾಸನಾಧಾರಗಳಿವೆ.
ಕಾಳಾಮುಖ ಮಹಾಅಗ್ರಹಾರ
ಹೂಲಿ ಪರಿಸರದಲ್ಲಿ ದೊರೆತ ಶೈವಧರ್ಮದ ಅವಶೇಷಗಳ ಹಿನ್ನೆಲೆಯಲ್ಲಿ ಇದು ಪ್ರಸಿದ್ಧ ಶೈವಪಂಥದ ಕೇಂದ್ರವಾಗಿತ್ತೆಂಬುದು ಸ್ಪಷ್ಟವಾಗುತ್ತದೆ. ಇಲ್ಲಿ ಇದುವರೆಗೆ 12 ಶೈವ ಶಾಸನಗಳು ಬೆಳಕಿಗೆ ಬಂದಿವೆ. ಮದನೇಶ್ವರ ಮತ್ತು ಅಂಧಾಸುರ (ಅಂಧಕಾಸುರ) ದೇವಾಲಯದಲ್ಲಿನ ಶಾಸನಗಳು ಕಾಳಾಮುಖ ಶೈವಪಂಥದ ಆರಾಧನಾ ಚಟುವಟಿಕೆಗಳನ್ನು ಬಿಂಬಿಸುತ್ತವೆ. ಕಾಳಾಮುಖ ಯತಿಗಳನ್ನು ಸಾಮಾನ್ಯವಾಗಿ ಯಮ, ನಿಯಮ, ಸ್ವಾಧ್ಯಾಯ, ಧ್ಯಾನ, ಧಾರಣ, ಮೌನಾನುಷ್ಠಾನ, ಜಪ, ಸಮಾಧಿ, ಶೀಲ, ಗುಣ ಸಂಪನ್ನರೆಂದು ಹೂಲಿ ಶಾಸನಗಳಲ್ಲಿ ವರ್ಣಿಸಿದೆ. ಇವರ ಹೆಸರುಗಳು ಶಕ್ತಿ, ಜೀವ, ರಾಶಿ, ಪಂಡಿತ, ಶಿವಪಂಡಿತ ಇತ್ಯಾದಿಯಾಗಿ ಅಂತ್ಯಗೊಂಡಿವೆ. ಉತ್ತರ ಕರ್ನಾಟಕದಲ್ಲಿ ಕಾಳಮುಖ ಶೈವ ಪರಂಪರೆಗೆ ಸಂಬಂಧಿಸಿದಂತೆ ಕಲ್ಯಾಣದ ಚಾಳುಕ್ಯರ ಕಾಲದಲ್ಲಿ ಅನೇಕಾನೇಕ ಸಂಖ್ಯೆಯಲ್ಲಿ ತ್ರೈಪುರುಷ ದೇವಾಲಯಗಳು ನಿರ್ಮಾಣಗೊಂಡಿದ್ದವು. ಹೂಲಿಯ ವೀರಭದ್ರ ದೇವಾಲಯದ ಕ್ರಿ.ಶ.1097ರ ಶಾಸನದ ಪ್ರಕಾರ ನಾಕಿಮಯ್ಯನು ಶ್ರೀಮನ್ಮಹಾಗ್ರಹಾರ ಪೂಲಿಯ ಊರೊಡೆಯ ಪ್ರಮುಖ ಸಾಸಿರ್ವರ ಸನ್ನಿಧಾನದಲ್ಲಿ ಶ್ರೀ ಹರಿಹರದೇವರ ನೈವೇದ್ಯ, ಚೈತ್ರಪವಿತ್ರ, ಖಂಡಸ್ಘುಟಿತಜೀಣ್ರ್ಣೋದ್ಧಾರ ಮತ್ತು ಪೂಜಾರಿಯ ಜೀವಿತಕ್ಕೆ ಮೂರು ಮತ್ತರು ಭೂಮಿ, 1 ಪಣ, 2 ಹಾಗ ದಾನ ಮಾಡಿದನು.3 ಅಂಧಕೇಶ್ವರ ದೇವಾಲಯದ ಕ್ರಿ.ಶ. 1104ರ ಶಾಸನವು ‘ಮಹಾಸಮನ್ತಾಧಿಪತಿ’, ಮಹಾಪ್ರಚಂಡ ದಂಡನಾಯಕ, ಶ್ರೀಮನ್ಮಹಾಪ್ರಧಾನ ಬಾಣಸುವೆಗ್ರ್ಗಡೆ ಅನಂತಪಾಳರಸರ ಅಳಿಯನಾದ ದಂಡನಾಯಕ ಲಕ್ಕರಸನು ಬೆಳ್ವೊಲನಾಡನ್ನು ಆಳುತ್ತಿರುವಾಗ ಪೆಗ್ರ್ಗಡೆ ಸಿಂಗರಸನು ಪೂಲಿಯ (ಹೂಲಿ) ಅಂಧಾಸುರ ದೇವರ ಅಂಗಭೋಗ ಮತ್ತು ಖಂಡಸ್ಫುಟಿತ ಜೀರ್ಣೋದ್ಧಾರಕ್ಕೆ ಇನ್ತೆನಿಸಿದ ಸ್ಥಾನಾಚಾರ್ಯರಾದ ತತ್ಪುರುಷಪಂಡಿತರ ಸಮಕ್ಷಮದಲ್ಲಿ ಮತ್ತು ಊರೊಡೆಯ ಪ್ರಮುಖಸಾಸಿವ್ರ್ವಮಹಾಜನಂಗಳ ಸನ್ನಿಧಾನದಲ್ಲಿ ನೆಲವತ್ರ್ತಿಗೆ ಸಾಸಿರಕ್ಕೆ ಹನ್ನೊಂದು ಅಡಕೆ, ನೂರು ಎಲೆಯನ್ನು ದಾನ ಮಾಡಿದ್ದನ್ನು ಉಲ್ಲೇಖಿಸುತ್ತದೆ.4 ಅದೇ ರೀತಿಯಾಗಿ ಕ್ರಿ.ಶ.1107ರ ಕೆರೆಸಿದ್ದೇಶ್ವರ ದೇವಾಲಯದಲ್ಲಿನ ಶಾಸನದಲ್ಲಿ ಶ್ರೀಮದ್ ಅಂಧಾಸುರ ದೇವರ ಸ್ಥಾನಾಚಾರ್ಯರಾದ ಶ್ರೀ ಜ್ಞಾನಶಕ್ತಿದೇವರು ಅಗ್ರಹಾರ ಪೂಲಿಯ ಊರೊಡೆಯ ಪ್ರಮುಖಸಾಸಿವ್ರ್ವರನ್ನು ದ್ರವ್ಯಪೂರ್ವಕ ಆರಾಧಿಸಿ ಅಂಧಾಸುರದೇವರ ಸ್ನಾನ, ನೈವೇದ್ಯಕ್ಕೆಂದು, ಕೊಕ್ಕಳಗೇರಿಯ ಹಾಳ ಹಸುಗೆಯೊಳಗೆ ಕೊಂಡು ಬಿಟ್ಟು ಮತ್ತರು ಏಳು ಮತ್ತು ಒಂದು ಹಣವನ್ನು ದಾನ ಮಾಡಿದ ಪ್ರಸ್ತಾಪವಿದೆ.5
ಪಂಚಲಿಂಗೇಶ್ವರ ದೇವಾಲಯದ ಮೂರನೆಯ ಗರ್ಭಗೃಹದ ದ್ವಾರಬಂಧದಲ್ಲಿರುವ ಕ್ರಿ.ಶ. 12-13ನೇ ಶತಮಾನದ ಶಾಸನದಲ್ಲಿ ಶ್ರೀ ಪ್ರಭಾಚಂದ್ರ ಸಿದ್ಧನ್ತದೇವರ ಶಿಷ್ಯರಾದ ಬೋಸಣ್ಣನ ಮಗ ಸೋಮಯ್ಯ ಹೆಗ್ಗಡೆ ಬಮ್ಮಯ್ಯ, ಧಾರವಾಡದ ಬಸವಿಶೆಟ್ಟಿ, ಕಂಬದ ನೇಮಿಸೆಟ್ಟಿ ಮತ್ತು ಬಲ್ಲಿಸೆಟ್ಟಿ ಮುಖ್ಯವಾಗಿ ಸಮಸ್ತಭವ್ಯಜನರು ಹೂಲಿಯ ಮಾಣಿಕ್ಯ ತೀರ್ಥದ (ಜಿನಾಲಯ) ದ್ವಾರಶಾಖೆಯನ್ನು ಮಾಡಿಸಿದನು. ಹಾಗೂ ಈ ದ್ವಾರಶಾಖೆಯನ್ನು ಕುರುವನೂರ ರಾಚೋಜನು ಖಂಡರಿಸಿದನು ಎಂದು ಪ್ರಸ್ತಾಪಿಸಲಾಗಿದೆ.6 ಹಾಗೆಯೇ ಇದೇ ದೇವಾಲಯದಲ್ಲಿರುವ ಕ್ರಿ.ಶ. 12-13ನೆಯ ಶತಮಾನದ ಶಾಸನವು ಉಲ್ಲೇಖಿಸುವ ಹಾಗೆ ಭಾಗಲೆ ಮತ್ತು ಬಾಚಿಸಚ್ಚಿಯರ ಮಗನಾದ ಮತ್ತು ನಾಗರಾಶಿಮುನಿಯ ಶಿಷ್ಯನೂ ಆದ ಕವದಿಯಮಾದಿಗೌಡನು ಪಂಚಲಿಂಗೇಶ್ವರ ದೇವಾಲಯದ ಸಭಾಮಂಟಪದ ಮಧ್ಯದ ನಾಲ್ಕು ಕಂಬಗಳಲ್ಲಿ ನಾಗರಾಶಿಯ ಕಂಬದ ದಕ್ಷಿಣಕ್ಕಿರುವ ಕಂಬವನ್ನು ಮಾಡಿಸಿದನು.7 ಹೀಗೆ ಅನೇಕ ಕಾಳಾಮುಖ ಪಂಡಿತರು ದೇವಾಲಯಗಳಿಗೆ ದಾನ, ದತ್ತಿಗಳನ್ನು ನೀಡಿದ್ದನ್ನು ಗಮನಿಸಬಹುದು.
ಶೈವ ಆಚಾರ್ಯರು (ಪಂಡಿತರು)
ಶೈವ ಆಚಾರ್ಯ ಅಥವಾ ಪಂಡಿತರು ಪ್ರಾಚೀನ ಕಾಲದಿಂದಲೂ ತಮ್ಮನ್ನು ವಿವಿಧ ನಾಮಾಂಕಿತಗಳಿಂದ ಗುರುತಿಸಿಕೊಳ್ಳುತ್ತಾ ಬಂದಿದ್ದಾರೆ. ಇಂತಹ ನಾಮಾಂಕಿತ ಶೈವಪಂಡಿತರು ಹೂಲಿ ಪರಿಸರದಲ್ಲಿಯೂ ಗೋಚರಿಸುತ್ತಾರೆ. ಇಲ್ಲಿಯ ಶೈವಶಾಸನಗಳಲ್ಲಿ ಶಕ್ತಿ, ಪಂಡಿತ, ಆಚಾರ್ಯ ಇವುಗಳ ಉಲ್ಲೇಖಗಳಿವೆ.
ಶ್ರೀ ಜ್ಞಾನಶಕ್ತಿ : ಕ್ರಿ.ಶ. 12ನೆಯ ಶÀತಮಾನದ ಶಾಸನದಲ್ಲಿ ಉಲ್ಲೇಖಿತಗೊಳ್ಳುತ್ತಾರೆ. ಪಂಚಲಿಂಗೇಶ್ವರ ದೇವಾಲಯದ ಅಗ್ರಮಂಟಪದಲ್ಲಿರುವ ಮೊದಲನೆಯ ಸ್ತಂಭವನ್ನು ಇವರ ಶಿಷ್ಯನಾದ ನಾಗರಾಶಿಯು ಮಾಡಿಸಿದನು.
ತತ್ಪುರುಷ ಪಂಡಿತ : ಕ್ರಿ.ಶ. 1104ರ ಶಾಸನದಲ್ಲಿ ಉಲ್ಲೇಖಿತ ಈ ಪಂಡಿತರು ಅಂಧಕೇಶ್ವರ ದೇವಾಲಯದ ಸ್ಥಾನಾಚಾರ್ಯರಾಗಿದ್ದರು. ಇವರ ಸಮಕ್ಷಮದಲ್ಲಿ ಶ್ರೀಮದ್ ಅಂಧಾಸುರದೇವರಿಗೆ ಪೆಗ್ರ್ಗಡೆಸಿಂಗರಸನು ಹನ್ನೊಂದು ಅಡಕೆ, ನಾಲ್ಕುನೂರು ಎಲೆಯನ್ನು ದಾನ ಮಾಡಿದನು.
ಸಿದ್ದೇಶ್ವರ ಪಂಡಿತ : ಕ್ರಿ.ಶ. 1107ರ ಶಾಸನದಲ್ಲಿ ಉಲ್ಲೇಖಿತ ಈ ಪಂಡಿತರು ಕಳಶೇಶ್ವರ ದೇವರ ಆಚಾರ್ಯರಾಗಿದ್ದರು. ಕಳಸವಳ್ಳಿಗೇರಿಯ ಮಹಾಜನಗಳು ಕಳಸೇಶ್ವರ ದೇವರ ಖಂಡಸ್ಫುಟಿತಜೀರ್ಣೋದ್ಧಾರಕ್ಕೆ, ನೈವೇದ್ಯ ಮತ್ತು ತಪೆÇೀಧನರ ಆಹಾರ ದಾನಕ್ಕೆ ಇವರ ಸಮ್ಮುಖದಲ್ಲಿ ನಾಲ್ಕು ಕಮ್ಮ (ಭೂಮಿ) ದಾನ ಮಾಡಿದನು.
ವಾಮಶಕ್ತಿ ದೇವರು : ಕ್ರಿ.ಶ. 1224ರ ಶಾಸನದಲ್ಲಿ ಉಲ್ಲೇಖಿತ ಈ ಪಂಡಿತದೇವರು ಅಂಧಾಸುರ ದೇವರ ಸ್ಥಾನಾಚಾರ್ಯರಾಗಿದ್ದರು.
ನಾಗರಾಶಿ ಪಂಡಿತ : ಕ್ರಿ.ಶ. 11-12ನೆಯ ಶತಮಾನದ ಶಾಸನದಲ್ಲಿ ಉಲ್ಲೇಖಿತ ಈ ಪಂಡಿತರು ಶ್ರೀ ಜ್ಞಾನಶಕ್ತಿ ಗುರುಗಳ ಶಿಷ್ಯರಾಗಿದ್ದಾರೆ. ಇವರು ಪಂಚಲಿಂಗೇಶ್ವರ ದೇವಾಲಯದ ಅಗ್ರಮಂಟಪದ ಆಶ್ರಮದಲ್ಲಿರುವ ನೈಋತ್ಯ ಕಂಬವನ್ನು ಮಾಡಿಸಿದರು.
ಶೈವ ದೇವಾಲಯಗಳು : ಹೂಲಿಯಲ್ಲಿ ಒಟ್ಟು ಎಂಟು ದೇವಾಲಯಗಳಿವೆ. ಅದರಲ್ಲಿ ಅಂಧಾಸುರ ದೇವಾಲಯ ಮತ್ತು ಮಧುಕೇಶ್ವರ ದೇವಾಲಯ ಕಾಳಾಮುಖಶೈವ ಪಂಥದ ಆರಾಧನಾ ಚಟುವಟಿಕೆಯ ಕೇಂದ್ರಗಳಾಗಿವೆ. ಅಂಧಕೇಶ್ವರ ದೇವಾಲಯವು ದ್ವಿಕೂಟ ಮಾದರಿಯಲ್ಲಿದ್ದು, ಎರಡೂ ಗರ್ಭಗೃಹಗಳು ಎದುರು ಬದುರಾಗಿವೆ. ಎರಡು ಅಂತರಾಳಗಳು ಮತ್ತು ಒಂದೇ ಗೂಢಮಂಟಪವಿದೆ. ದಕ್ಷಿಣಕ್ಕೆ ಪ್ರವೇಶದ್ವಾರವಿದೆ. ಗರ್ಭಗೃಹದ ಪ್ರವೇಶದ್ವಾರದ ಮೇಲ್ಭಾಗದಲ್ಲಿರುವ ಉತ್ತರಾಂಗದಲ್ಲಿ ಕಾಳಾಮುಖ ಯತಿಗಳನ್ನು ಚಿತ್ರಿಸಲಾಗಿದೆ. ಅಂತರಾಳದಲ್ಲಿರುವ ಮಕರತೋರಣವನ್ನು ಅಂಧಕಾಸುರ ದೇವಾಲಯದ ಆಚಾರ್ಯರಾದ ಶ್ರೀ ಜ್ಞಾನಶಕ್ತಿಯು ಮಾಡಿಸಿದರು. ಇದನ್ನು ಕಂಡರಿಸಿದವನು ಮಾರ್ತಾಂಡ. ಮಕರತೋರಣದಲ್ಲಿ ಶಿವನತಾಂಡವ ನೃತ್ಯವಿದೆ. ಶಿವನು ಅಷ್ಟಭುಜಗಳನ್ನು ಹೊಂದಿದ್ದು, ಅಪಸ್ಮಾರನ ಮೇಲೆ ನಿಂತುಕೊಂಡು ನೃತ್ಯ ಮಾಡುತ್ತಿದ್ದಾನೆ. ಕೈಗಳಲ್ಲಿ ಖಡ್ಗ, ತ್ರಿಶೂಲ, ಖಟ್ವಾಂಗ, ಪಾನಪಾತ್ರ, ಅಗ್ನಿ, ಲೋಲ, ಜಪಮಾಲೆಯನ್ನು ಹಿಡಿದುಕೊಂಡಿದ್ದಾನೆÉ. ಶಿವನ ಬಲಭಾಗದಲ್ಲಿ ಚತುರ್ಮುಖ ಬ್ರಹ್ಮನು ಹಂಸದ ಮೇಲೆ ಲಲಿತಾಸನದಲ್ಲಿ ಆಸೀನನಾಗಿದ್ದಾನೆ. ಈತನು ಪಕ್ಕದಲ್ಲಿರುವ ವೈಕುಂಠ ವಿಷ್ಣುವಿಗೆ ಮೂರು ತಲೆಗಳಿರುವುದು ವಿಶೇಷವಾಗಿದೆ. ಈತನು ಪದ್ಮಪೀಠದ ಮೇಲೆ ಮಹಾರಾಜಾ ಲೀಲಾಸನದಲ್ಲಿ ಕುಳಿತಿದ್ದು, ಕೈಗಳಲ್ಲಿ ತಾಳ, ಪ್ರಯೋಗಚಕ್ರ, ಪದ್ಮವನ್ನು ಹಿಡಿದುಕೊಂಡಿದ್ದಾನೆ. ವಿಷ್ಣುವಿನ ಮೂರು ಮುಖಗಳಲ್ಲಿ 1. ಪೂರ್ವಕ್ಕೆ ಮುಖವಾಗಿ (ಮಧ್ಯದಲ್ಲಿ ಸೌಮ್ಯ), 2. ದಕ್ಷಿಣಕ್ಕೆ ಮುಖವಾಗಿ ನರಸಿಂಹ, 3. ಉತ್ತರಕ್ಕೆ ಮುಖವಾಗಿ ವರಾಹ ಮುಖಗಳಿರುವುದು ವಿಶೇಷವಾಗಿದೆ. ಈ ಮಕರತೋರಣದ ಕೆಳಪಟ್ಟಿಯಲ್ಲಿ ಎರಡು ಸಾಲಿನ ಶಾಸನವಿದೆ.
ಶಿಲ್ಪಗಳು : ಹೂಲಿಯಲ್ಲಿ ದೊರೆತ ಶಿಲ್ಪಗಳಲ್ಲಿ ಕಾರ್ತಿಕೆಯ ಗಣೇಶ, ನಟರಾಜ ಮತ್ತು ಭೈರವನ ಶಿಲ್ಪಗಳು ಪ್ರಮುಖವಾಗಿವೆ. ಇವೆಲ್ಲವೂ ಕ್ರಿ.ಶ. 11-12ನೆಯ ಶತಮಾನದ್ದಾಗಿವೆ.
ಹೂಲಿಯು ವಾಸ್ತುಕಲೆಯ ದೃಷ್ಟಿಯಿಂದ ವಿಭಿನ್ನ ಪರಂಪರೆಯ ಪ್ರತೀಕವಾಗಿದೆ. ಆದ್ದರಿಂದ ಆ್ಯಡಮ್ ಹಾರ್ಡಿ ಎಂಬ ವಿದ್ವಾಂಸರು ‘ಹೂಲಿ ಶೈಲಿ’ (ಊuಟi Sಛಿhooಟ) ಎಂಬ ವೈಶಿಷ್ಟ್ಯ ಸೂಚಕ ವರ್ಣನೆಯನ್ನು ಗುರುತಿಸಿದ್ದಾರೆ. ಈ ಗ್ರಾಮವು ಬೆಳ್ವೊಲ-300 ಆಡಳಿತ ವಿಭಾಗದಲ್ಲಿದ್ದರೂ ವಾಸ್ತು ವಿವರಗಳಲ್ಲಿ ಸಾಕಷ್ಟು ವೈಷಮ್ಯ ಕಾಣುತ್ತಿರುವುದು ವಿಶೇಷ. ಶೈವ ಶಾಸನಗಳಲ್ಲಿ ಆಚಾರ್ಯರ ಮತ್ತು ಪಂಡಿತರ ಉಲ್ಲೇಖಗಳಿದ್ದು, ಅವರೆಲ್ಲರುಗಳು ಸ್ಥಾನಾಚಾರ್ಯರಾಗಿದ್ದುಕೊಂಡು ಧರ್ಮವನ್ನು ಪುನರುಜ್ಜೀವನಗೊಳಿಸಿದ್ದಾರೆ. ಹೀಗಾಗಿ ಹೂಲಿ: ಒಂದು ಕಾಳಮುಖ ಮಹಾಅಗ್ರಹಾರವಾಗಿತ್ತೆಂದು ಹೇಳಬಹುದು.

ಆಧಾರಸೂಚಿ ಮತ್ತು ಅಡಿಟಿಪ್ಪಣಿ
1. ರಿತ್ತಿ ಶ್ರೀನಿವಾಸ, “ಬೆಳ್ವೊಲ ಮುನ್ನೂರು,” (1969) ಕರ್ನಾಟಕ ಭಾರತಿ, ಸಂಪುಟ-6, ಸಂಚಿಕೆ-1, ಪುಟ 80.
2. ಇ.I. ಸಂಪುಟ ಘಿಗಿIII, ಶಾ.ಸಂ. 22/ಂ, ಪುಟ 172-172.
3. ಇ.I. ಸಂಪುಟ ಘಿಗಿIII, ಶಾ.ಸಂ. 22/ಆ, ಪುಟ 183-186.
4. ಇ.I. ಸಂಪುಟ ಘಿಗಿIII, ಶಾ.ಸಂ. 22/ಇ, ಪುಟ 189-193.
5. ಇ.I. ಸಂಪುಟ ಘಿಗಿIII, ಶಾ.ಸಂ. 22/ಇ, ಪುಟ 197-198.
6. ಂ.ಖ.S.I.ಇ., 1940-41, ಂಠಿಠಿeಟಿಜix-ಇ, ಓo-25, P. 242.
7. S.I.I. ಸಂಪುಟ ಗಿ, ಶಾ.ಸಂ. 843, ಪುಟ 343.

  ಇತಿಹಾಸ ಸಹಾಯಕ ಪ್ರಾಧ್ಯಾಪಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಕುಂದಗೋಳ, ಜಿಲ್ಲೆ ಧಾರವಾಡ-581113.