Sunday, March 30, 2014

ಹಸ್ತ ಪ್ರತಿ ಅಧ್ಯಯನದಲ್ಲಿ ಹೊಸ ಹೊಳವು


                            

                   ಯುಗಾದಿಯ ಶುಭಾಶಯಗಳು                     


        ರೇವಣ ಸಿದ್ದೇಶ್ವರ ಕಾವ್ಯ                                                  

  

                                ರೇವಣಸಿದ್ಧೇಶ್ವರ ಕಾವ್ಯದ  ಮೊದಲ  ಗರಿ ಲಿಪ್ಯಾಂತರ
೧. ಶ್ರೀ ಗಣಾಧಿಪತೇಯೇನಮಃ.  Ii ಶ್ರೀಗುರ ಪರಬ್ರಹ್ಮೇಣೇಮಃ  II ಶ್ರೀ ಗುರು ರಾಮಗಿರಿ ಕರಿಸಿದ್ದೇಶ್ವರಸ್ವಾಮಿಯ ಪಾದಾರವಿಂದವೇ ಗತೀII  ಪೈಂಗಳ ನಾಮ ಸಂವತ್ಸರದ ಮಾಘಶುದ್ಧ ಪಂಚಮಿ --- ಗತಿಸಿದ ಮಠದ ಸಿದ್ಧವೀರಯ್ಯನವರು
 ೨ .ಲಿಖಿಸಿದ ರೇವಣಸಿದ್ದೇಶ್ವರನ ಕಾವ್ಯ ಪಾಡಿಗಳಿಗೆ ಶುಭ ಮಸ್ತು, ಶೋಭನ ಮಸ್ತು I  ಆಯುರಾರೋಗ್ಯ ಐಶ್ವರ್ಯವೃದ್ಧಿ ರಸ್ತು Iಐದನೂ- I ಶ್ರೀ ಮದ್ಗುರುರಾಮಗಿರಿಯ  ಸಿದ್ದೇಶನ  ಕೋಮಲ ಪಾದಪದ್ಮಗಳಿಗೆ--- ಅಸ್ತು I  
೩. ಹೃದಯ ಕಮಲದಭಿರಾಮ ಕುಸುಮನಿಕೆರಗುವೆನು IIII ಲಂಬೂಜಸಖನನಂಬುIಜಾಕ್ಷನಂಬುಜಸಖ I ಕುಂಬಿನಯೊಳಗುಳ್ಳ ಜನರುII ಜಾಂಬಾರಿ ಮೊದಲಾದ Iಸುರರು ಪೂಜಿಪ ಪಾದಾಂಬುಜಕಾನೆರುಗುವೆನು II  II  ಸಶ್ರಾಗ—
೪. ನನಕ ಪತ್ರನಾಮನ ಪಿತ ಶುಕ್ರಗಾಮನ ಸ್ತೋತ್ರ  ಪಾತ್ರಾ II ಪತ್ರ ಕಾರನಹರಗಾರ್ಧಾಂಗವನಿತತ್ತಾI s ಸತ್ರಾಂಬಕಜಯ ಜಯII  II ಪಾರ್ವತಿ ಸಕಲ ಜನರಿಗೆಲ್ಲ ಮಾತೆಯುII ಸರ್ವೇಶ್ವರನರ್ಧಾಂಗಿ ನೀ II  ಸರ್ನಿಸೆನ್ನಯ ಮಾನದೊಳಗೆ ಸುಮತಿಯಾ
 ೫. ನುI ಪರ್ವತರಾಜ ಕುವರಿ II  IIಮೃಡನುರಿಗಣ್ಣಗಳು ಘುಡು ಘುಡಿಸಿತ ಸುಟ್ಟ Iಖಡ್ಗ ಶೂಲಿಗೆ ಧನು ಶರಧಿII ನಡದು ದಕ್ಷನ ಶಿರ ಕಡಿದ ವೀರೇಶ್ವರI ಕೊಡು ಎನ್ನ ಮತಿಗೆ ಮಂಗಳವಾIIII  ಪಡೆದೇಳು ದಿನದೆಡೆಯೊಳಗೆ ಕಡೆಗಡಿ ಯುತ ತಾರಕನಾ  II ಹೊಡೆದು ಕೆಡವಿದ ಷಣ್ಮುಖನು ಕೊಡು  I
ಯೆಮಗೆ ಈಗ ದೃಡತರ ವರದ ಸನ್ಮತಿಯಾ II II ದಂಡ ಕಮಂಡi  ಕಂಕಾ ಉಪಕರ್ಣ ಕುಂಡಲ ಅಸಿತಾವಧಿರಿಸಿIi  ಕಂಡು  ಇಂಧುಧರನ ಲಿಂಗದಲ್ಲಿ ಉದ್ಭವಿಸಿದ ಉದ್ದಂಡ ರೇವಣ ಕೊಡು ವರವಾ IIII
ಜಲಧಿಯುಕ್ಕಿ I ಜಗವೆಲ್ಲಾ ನುಂಗಲು ಹಲುಬಿ ಸುರರು ಬಾಯಿ ಬಿಡಲು II ಋಜ ಬಲ್ಪಿಯಲಿ ಎಲ್ಲರ ಕಾಯ್ದ ಶೂಲಿಯ ವೃಷಭ ಕೊಡು ವರವಾ  IIII ಸರ್ವಜ್ಞನ ವರ ಕುವರ ಗಣೇಶನೆ ಸರ್ವ ಕಾಲದಿಂದ -----

                                                     ಹಸ್ತ ಪ್ರತಿ ಅಭಿಯಾನ
                         
, ಹಸ್ತ ಪ್ರತಿ ಅಭಿಯಾನದ ಅಂತಿಮ ಗುರಿಯು  ಗರಿಗಳಲ್ಲಿ  ಪಠ್ಯವನ್ನು ಅಧ್ಯಯನ ಮಾಡಿ ಹೊಸ ಗನ್ನಡದಲ್ಲಿ ದಾಖಲಿಸುವುದು, ವಿದ್ವತ್‌ ಮತ್ತು ತಂತ್ರ ಜ್ಞಾನಗಳ ಸಮ್ಮಿಳನದಿಂದ ವರ್ಷಗಟ್ಟಲೆ ಹಿಡಿಯಬಹುದಾದ ಕೆಲಸವನ್ನು  ಕೆಲವೇ ತಿಂಗಳಲ್ಲೆ ಪೂರೈಸುವ ಪ್ರಯತ್ನಾವಾಗಿ ೧೦೦ ಗರಿಗಳಿರುವ ರೇವಣ ಸಿದ್ದೇಶ್ವರ ಕಾವ್ಯವನ್ನು ಕೈಗೆತ್ತಿಕೊಂಡು  ೬  ಗಂಟೆಯಲ್ಲಿ  ಒಂದು ಗರಿಯ ಲಿಪ್ಯಾಂತರ ಮಾಡಿದೆ..ಅಂದರೆ  ಹತ್ತು ಪಟ್ಟು ಕಡಿಮೆ ಅವಧಿಯಲ್ಲಿ ಗ್ರಂಥ ಸಂಪಾದನಾ ಕಾರ್ಯಮಾಡುವ ಸಾಧ್ಯತೆ ಇದೆ. ಯುವ ಸಂಶೋಧಕರ ಗಮನ ಸೆಳೆಯಲು ಹೊಸವರ್ಷದ ಶುಭಾಶಯ ಕೋರುತ್ತಾ ಈ ಕೊಡುಗೆ ನೀಡಿದೆ. ಕಾಂಪ್ಯೂಟರ್‌ ಹೊಂದಿರುವ  ಮತ್ತು ಕನ್ನಡ ಭಾಷೆಲ್ಲಿ ಪರಿಣತೆ ಇರುವವರು ತಾವು ಇದ್ದ ಜಾಗದಲ್ಲೇ ಈ ಅಭಿಯಾನದಲ್ಲಿ ಭಾಗವಹಿಸಿ ಗ್ರಂಥ ಸಂಪಾದನೆ ಮಾಡಬಹುದು. ಈ ಕಾರ್ಯದಲ್ಲಿ ಸಹಕರಿಸಿದ ಪ್ರತಿಷ್ಠಾನದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು,,ಶ್ರೀ ಗುರುಪ್ರಸಾದ ಮತ್ತು ಅವರ ತಂಡ, ಶ್ರೀಮತಿ ಸೀತಾಲಕ್ಷ್ಮಿ  ಮತ್ತು ಆನ್‌ಲೈನ್‌ ನಲ್ಲಿ ಸಹಕರಿಸಿದ ಸಹೃದಯರು ಹಾಗೂ ಆಸಕ್ತಿತೋರಿದ ಎಲ್ಲರಿಗೂ ಆಭಾರಿ. ಮಾಹಿತಿಗೆ  ಅಭಿಯಾನದ ನಿರ್ದೇಶಕರನ್ನು  ಮಿಂಚಂಚೆಯ  ಮೂಲಕ.ಸಂಪರ್ಕಿಸಿ-
                             -   appaaji@gmail.com
                                          ಹೊಸ ವರ್ಷದ  ಶುಭಾಶಯಗಳೊಡನೆ  
ಎಚ್‌.ಶೇಷಗಿರಿರಾವ್‌.
ನಿರ್ದೇಶಕರು
ಹಸ್ತ ಪ್ರತಿ ಅಭಿಯಾನ        
                                                                              

                       

Wednesday, March 26, 2014

ನಂದಿ ಸ್ಮಾರಕ ಸ್ತಂಭ


                              ವಿಜಯನಗರದ ಕಾಲದ
ಕಾಲಕಾಲೇಶ್ವರದ ನಂದಿ ಸ್ಮಾರಕ ಸ್ತಂಭ 
 ಒಂದು ಟಿಪ್ಪಣೆ
    ಪ್ರಾಚೀನರು ತಮ್ಮ ಹೆಸರನ್ನು ಅಜರಾಮರವಾಗಿರಿಸಿಕೊಳ್ಳಲು ಶಾಸನ, ವೀರಗಲ್ಲುಗಳನ್ನು ನಿಲ್ಲಿಸುತ್ತಿದ್ದರು. ಅದರ ಜೊತೆಗೆ ನಂದಿ ಸ್ತಂಭಗಳನ್ನು ಕೂಡಾ ನಿರ್ಮಿಸುವ ಪದ್ದತಿಯನ್ನು ಹಾಕಿಕೊಂಡಿದ್ದರು. ಎತ್ತರವಾದ ಚೌಕಾಕಾರದ ಶಿಲಾ ಸ್ತಂಭದ ಮೇಲೆ ಮಲಗಿದ ನಂದಿಯನ್ನು ಕೆತ್ತಿಸುತ್ತಿದ್ದರು. ಈ ನಂದಿಯು ಕೆಲವು ಸಲ ಮೃತನ ಸ್ಮಾರಕವೂ ಕೂಡಾ ಆಗಿರುತ್ತಿತ್ತು. ಅಂತಹ ಶಿಲ್ಪಗಳು ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಸಿಗುತ್ತವೆ. ಮಹಾರಾಷ್ಟ್ರದಲ್ಲಿ ಚೌಕಾಕಾರದ ಕಂಬಗಳಲ್ಲಿ ವಚನಗಳನ್ನು ಕೆತ್ತಿದ್ದಾರೆ. ಅಂತಹ ಶಿಲ್ಪಗಳು ಸೊಲ್ಲಾಪೂರದಲ್ಲಿವೆ. ಅದರ ಮೇಲೆ ಶರಣ ಸಿದ್ದರಾಮನ ವಚನಗಳನ್ನು ಕೆತ್ತಿದ್ದಾರೆ.
 ಗದಗ ಜಿಲ್ಲೆಯ ರೋಣ ತಾಲೂಕಿನ ಗಜೇಂದ್ರಗಡ ಸನಿಹದ ಕಾಲಕಾಲೇಶ್ವರ  ಕ್ಷೇತ್ರದಲ್ಲಿ ಒಂದೆರಡು ನಂದಿ ಸ್ಮಾರಕ ಶಿಲ್ಪಗಳಿವೆ. ಈ ಶಿಲ್ಪವು ದೇವಾಲಯದ ತಪ್ಪಲಿನ ಮತ್ತು ಕಾಲಕಾಲೇಶ್ವರ ಗ್ರಾಮದ ಸನಿಹದ ಕುರುಚಲು ಗಿಡಗಳ ಮಧ್ಯದಲ್ಲಿವೆ. ಇದನ್ನು ಸ್ಥಳಿಕರು ನಂದಿಕೋಲ ಬಸವಣ್ಣನೆಂದು ಕರೆಯುತ್ತಾರೆ. ಇದರಲ್ಲಿ ಒಂದು ಶಿಲಾಸ್ತಂಭದ ಸುತ್ತಲು ಚೌಕಾಕಾರದ ಕಲ್ಲಿನಕಟ್ಟೆ ಇದೆ. 

ಈ ನಂದಿ ಸ್ತಂಭದ ಎತ್ತರ ೪.೨ ಅಡಿ, ಅಗಲ ೧.೧x೦.೭ ಅಡಿಯುಳ್ಳ ಚೌಕಾಕಾರದ ಸ್ತಂಭದ ನಡುವೆ ಉಬ್ಬು ಶಿಲ್ಪದಲ್ಲಿ ಒಬ್ಬ ವ್ಯಕ್ತಿಯು ಕೈಮುಗಿದು ನಿಂತಿದ್ದಾನೆ. ಆತನ ಎರಡು ಬದಿಗಳಲ್ಲಿ ಇಬ್ಬರು ಸ್ತ್ರೀಯರಿದ್ದಾರೆ. ಅವರು ಆತನ ಪತ್ನಿಯರಾಗಿರಬೇಕು. ಇವರ ಕೆಳಗೆ ನಾಗ ಶಿಲ್ಪವಿದೆ. ಸ್ತಂಭದ ಮೇಲೆ ಮಲಗಿದ ಸುಂದರವಾದ ನಂದಿಯನ್ನು ಕೆತ್ತಲಾಗಿದೆ. ಅದರ ಎತ್ತರ ೧.೧ ಅಡಿ ಇದೆ. ಈ ಶಿಲ್ಪವು ಕಾಲಕಾಲೇಶ್ವರ ದೇವಾಲಯಕ್ಕೆ ಮುಖಮಾಡಿದೆ. ಈ ರೀತಿ ನಂದಿ ಸ್ತಂಭವನ್ನು ನಡೆಸುವದು ಉತ್ತರಕಾಲೀನ ವಿಜಯ ನಗರ ಕಾಲದಿಂದ, ಅದರಲ್ಲೂ ವಿಶೇಷವಾಗಿ ಇದು ವೀರಶೈವರಿಂದ ಆರಂಭಿಸಲಾಯಿತೆಂದು ಖ್ಯಾತ ಇತಿಹಾಸ ತಜ್ಞರಾದ ಡಾ.ಅ.ಸುಂದರ ಅವರು ಅಭಿಪ್ರಾಯಪಡುತ್ತಾರೆ. ಇದಕ್ಕೆ ಪುಷ್ಠಿ ನೀಡುವಂತೆ ಕಾಲಕಾಲೇಶ್ವರದಲ್ಲಿರುವ ಶಾಸನವೊಂದು ವಿಜಯನಗರ ಅರಸರಿಗೆ ಸೇರಿದೆ. ಅವರು ಈ ದೇವಾಲಯವನ್ನು ಜೀರ್ಣೋದ್ದಾರ ಮಾಡಿ ಇದಕ್ಕೆ ಅನೇಕ ದತ್ತಿಗಳನ್ನು ನೀಡಿದ್ದನ್ನು ಶಾಸನವು ಉಲ್ಲೇಖಿಸುತ್ತದೆ. ಇಲ್ಲಿನ ಸನಿಹದ ಕಣಿವೆಯಲ್ಲಿ ವಿಜಯನಗರದ ಕಾಲದ ಆನೆಗುಂದಿ ಬಸವಣ್ಣ ಕರೆಯುವ ಬೃಹದಾಕಾರದ, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವಂತಹ ನಂದಿ ಶಿಲ್ಪವಿದೆ.
 ಈ ಸ್ಮಾರಕ ನಂದಿ ಸ್ತಂಭದಲ್ಲಿ ಯಾವದೇ ಬರಹವಿರದಿದ್ದರೂ ಇಲ್ಲಿರುವ ದ್ವಿಪತ್ನಿ ಸಮೇತನಾಗಿರುವ ವ್ಯಕ್ತಿಯನ್ನು  ಸೂಕ್ಷ್ಮವಾಗಿ ಗಮನಿಸಿದರೆ ಈತನು ವಿಜಯ ನಗರ ಕಾಲಕ್ಕೆ ಸೇರಿದ್ದಾನೆ. ಇಲ್ಲಿರುವ ಶಾಸನವು ವಿಜಯನಗರದ ಎರಡನೆಯ ಹರಿಹರ(೧೩೭೭-೧೪೦೪)ನ ಕಾಲಕ್ಕೆ ಸೇರಿದ್ದರಿಂದ ಈ ನಂದಿ ಸ್ಮಾರಕ ಶಿಲ್ಪವು ೧೪-೧೫ ನೆಯ ಶತಮಾನಕ್ಕೆ ಸೇರುತ್ತದೆ. ಆದರೆ ಆ ವ್ಯಕ್ತಿ ಯಾರೆಂದು ಹೇಳಲಾಗದು. ಇತನು ಆ ಕಾಲದ ರಾಜ ಪ್ರಮುಖ, ಇಲ್ಲವೇ ಕಾಲಕಾಲೇಶ್ವರನ ಅಪ್ಪಟ ಭಕ್ತನಾಗಿರಬೇಕು. 
ಅಂತೆಯೇ ಮೇಲೆ ನಂದಿಯನ್ನು ಹೊತ್ತು ಕೈಮುಗಿದು ನಿಂತು, ದೇವಾಲಯಕ್ಕೆ ಮುಖ ಮಾಡಿದ್ದಾನೆ. ಅಂದಿನ ಕಾಲದಲ್ಲಿ ರಾಜ ಪ್ರಮುಖರು ಮಡಿದಾಗಲೂ ಕೂಡಾ ಅದರ ದ್ಯೋತಕವಾಗಿ ನಂದಿ ಶಿಲ್ಪವನ್ನು ನಿಲ್ಲಿಸುತ್ತಿದ್ದರೆಂಬ ಅಭಿಪ್ರಾಯ ಕೂಡಾ ಇದೆ.  ಈ ಶಿಲ್ಪದ ಪಕ್ಕದಲ್ಲಿಯೇ ಮತ್ತೊಂದು ಇಂತಹದೇ ಸ್ಮಾರಕವುಳ್ಳ ಶಿಲ್ಪವಿದೆ. ಅದು ಭಗ್ನಗೊಂಡಿದ್ದು. ಇದರ ಮೇಲ್ಭಾಗದಲ್ಲಿ ನಂದಿ ಶಿಲ್ಪ ಇಲ್ಲ. ಅದರ ಎತ್ರರ ೩.೬ ಅಡಿ ಇದೆ. ಇದು ವೃತ್ತಾಕಾರದಲ್ಲಿದ್ದು, ಇದರ ಸುತ್ತಳತೆ ೩.೪ ಅಡಿ ಇದೆಅದೂ ಕೂಡಾ ಸನಿಹದ ಸ್ಮಾರಕದಲ್ಲಿರುವಂತೆ ದ್ವಿಪತ್ನಿ ಸಮೇತನಾದ ಕೈಮುಗಿದ ವ್ಯಕ್ತಿಯ ಉಬ್ಬು ಶಿಲ್ಪವಿದೆ. ಇದು ಅಪೂರ್ಣಗೊಂಡ ಒರಟಾಗಿ ಕೆತ್ತಿದ ಶಿಲ್ಪವಾಗಿದೆ.  ಈ ಬಗ್ಗೆ ಸಂಶೋಧನೆ ನಡೆಯಬೇಕಾಗಿದೆ.

                                                                      - ಡಾ.ಮಲ್ಲಿಕಾರ್ಜುನ ಕುಂಬಾರ
* ಫೋಟೊ ವಿವರ,
, ೨) ಕಾಲಕಾಲೇಶ್ವರದಲ್ಲಿರುವ ನಂದಿ ಶಿಲ್ಪ ಸ್ಥಂಭ
೩) ದೇವಸ್ಥಾನಕ್ಕೆ ಮುಖಮಾಡಿರುವ ನಂದಿ ಶಿಲ್ಪ ಸ್ಥಂಭ
೪) ನಂದಿ ಶಿಲ್ಪ ನಂದಿ ಸ್ಥಂಭ ಸನಿಹದಲ್ಲಿರುವ ತುಂಡಾದ ಮತ್ತೊಂದು ಸ್ಥಂಭ


* ವಿಳಾಸ; ಡಾ.ಮಲ್ಲಿಕಾರ್ಜುನ ಕುಂಬಾರ.
          ವಚನ
      ರಾಜೂರ-೫೮೨೨೩೦
      ತಾ;ರೋಣ, ಜಿ;ಗದಗ
ದೂರವಾಣಿ; [೦೮೩೮೧] ೨೬೨೯೨೫, (ಸನಿಹವಾಣಿ::- ೯೭೩೯೩೪೧೭೨೬)
  ಇ ಮೇಲ್; mಚಿಟಟiಞಚಿಡಿರಿuಟಿ೯೨೫@gmಚಿiಟ.ಛಿom








Tuesday, March 25, 2014

ಭೀಮನ ಹಳ್ಳಿಯ ವೀರ ಗಲ್ಲುಗಳು


ಭೀಮನಹಳ್ಳಿಯಲ್ಲಿ ದೊರೆತ ಅಪ್ರಕಟಿತ ವೀರಗಲ್ಲುಗಳು
ಡಾ. ಜಿ. ಕರಿಯಪ್ಪ. ಡಾ. ಹೆಚ್.ಎನ್. ಕಾಳಸ್ವಾಮಿ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಕಂಡುಬರುವ ಭೀಮನಹಳ್ಳಿಯು ಚಾರಿತ್ರಿಕವಾಗಿ ಪ್ರಮುಖ ಸ್ಥಳವಾಗಿದೆ. ಈ ಭಾಗದಲ್ಲಿ ಗಂಗರು, ಚೋಳರು, ಹೊಯ್ಸಳರು, ವಿಜಯನಗರದ ಅರಸರು, ಮೈಸೂರು ಒಡೆಯರು ಮತ್ತು ನಾಗಮಂಗಲದ ಪ್ರಭುಗಳು ಆಳ್ವಿಕೆ ಮಾಡಿದ್ದಾರೆ. ಹೀಗಾಗಿ ಈ ಭಾಗದಲ್ಲಿ ಅನೇಕ ವೀರಗಲ್ಲುಗಳು ದೊರಕಿವೆ.
ವೀರಗಲ್ಲು-೧: ಇದು ಭೀಮನಹಳ್ಳಿಯ ಪೂರ್ವಕ್ಕೆ ಈಶ್ವರ ದೇವಸ್ಥಾನದ ಬಲಭಾಗದಲ್ಲಿ ಕಂಡುಬರುತ್ತದೆ. ಇದು ಗ್ರಾನೈಟ್ ಕಲ್ಲಿನದಾಗಿದ್ದು ಸುಮಾರು ೪ ಅಡಿ ಎತ್ತರ, ೨ ಅಡಿ ಅಗಲ ಮತ್ತು ೪ ಇಂಚು ದಪ್ಪನಾಗಿದೆ. ಇದು ಮೂರು ಪಟ್ಟಿಕೆಗಳಿಂದ ಕೂಡಿದ್ದು ಮೊದಲನೆ ಪಟ್ಟಿಕೆಯಲ್ಲಿ ಶಿಲ್ಪಗಳನ್ನು ಗಮನಿಸಿದರೆ ಯಾರೋ ಬೇರೆ ವ್ಯಕ್ತಿಗಳು ಯುದ್ಧದಲ್ಲಿ ಹೋರಾಡಿ ಮರಣವನ್ನು ಹೊಂದಿದ್ದು ಅವರಿಗೋಸ್ಕರ ದೇವರಲ್ಲಿ ಭಕ್ತಿಪೂರ್ವಕವಾಗಿ ದೇವರನ್ನು ಬೇಡುವುದು ಕಂಡುಬರುತ್ತದೆ. ಎರಡನೇ ಪಟ್ಟಿಕೆಯಲ್ಲಿ ಮೂರು ಜನ ವ್ಯಕ್ತಿಗಳ ಉಬ್ಬು ಶಿಲ್ಪಗಳಿದ್ದು ಒಬ್ಬ ಹೆಂಗಸು, ಒಬ್ಬ ಪ್ರಮುಖ ವ್ಯಕ್ತಿ ಮತ್ತೊಬ್ಬರು ಕೈಮುಗಿದು ಧ್ಯಾನಿಸುತ್ತಿರುವ ದೃಶ್ಯ ಕಾಣಬರುತ್ತದೆ. ಮೂರನೇ ಪಟ್ಟಿಕೆಯಲ್ಲಿ ಶಿವ ಲಿಂಗಕ್ಕೆ ಒಬ್ಬ ಸ್ತ್ರೀಯು ಪೂಜೆ ಸಲ್ಲಿಸುತ್ತಿದ್ದು ಪಕ್ಕದಲ್ಲಿ ರಾಜನು ಕೈಮುಗಿದು ನಿಂತಿರುವುದು ಮತ್ತು ನಂದಿ ಶಿಲ್ಪ ಮೇಲ್ಭಾಗದಲ್ಲಿ ಸೂರ್ಯ ಚಂದ್ರರನ್ನು ಕೆತ್ತಲಾಗಿದೆ. ಒಟ್ಟಾರೆ ಈ ಶಿಲ್ಪದಲ್ಲಿ ಮೂಡಿ ಬಂದಿರುವ ದೇವ-ದೇವತೆಗಳನ್ನು ಪೂಜಿಸುವುದು ಆ ಪ್ರಾಂತದಲ್ಲಿ ಶೈವ ಪರಂಪರೆಯು ಪ್ರಚಲಿತದಲ್ಲಿತ್ತು ಎಂಬುದನ್ನು ತೋರಿಸುತ್ತದೆ.
ವೀರಗಲ್ಲು-೨: ಈ ವೀರಗಲ್ಲು ಮೂರು ಪಟ್ಟಿಕೆಗಳಿಂದ ಕೂಡಿದ್ದು ೩ ಅಡಿ ಎತ್ತರ, ೨ ಅಡಿ ಅಗಲ, ೪ ಇಂಚು ದಪ್ಪನಾಗಿದ್ದು ಗ್ರಾನೈಟ್ ಕಲ್ಲಿನದ್ದಾಗಿದೆ. ಮೊದಲನೆ ಪಟ್ಟಿಕೆಯಲ್ಲಿ ವೀರರು ಯಾವುದೋ ಒಂದು ಯುದ್ಧದಲ್ಲಿ ಆಯುಧಗಳನ್ನಿಡಿದು ವೀರಾವೇಶದಿಂದ ಪರಸ್ಪರ ಹೋರಾಟ ಮಾಡುತ್ತಿರುವ ದೃಶ್ಯ. ಎರಡನೆ ಪಟ್ಟಿಕೆಯಲ್ಲಿ ವೀರ ಯುದ್ಧದಲ್ಲಿ ಮರಣ ಹೊಂದಿದ ವ್ಯಕ್ತಿಯನ್ನು ಮಂಟಪದಲ್ಲಿ ಇರಿಸಿ ಇಬ್ಬರು ದೇವಶೂರರು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಿರುವ ದೃಶ್ಯ. ಮೂರನೇ ಪಟ್ಟಿಕೆಯಲ್ಲಿ ಸ್ವರ್ಗಕ್ಕೆ ಹೋಗಬೇಕಾದರೆ ಧಾರ್ಮಿಕ ವಿಧಿ ಅನ್ವಯ ಭಕ್ತಿಪೂರ್ವಕವಾಗಿ ಪೂಜೆ ಮಾಡುತ್ತಿರುವುದು ಅಲ್ಲದೆ ಋಷಿ ಮುನಿ ಶಿವಲಿಂಗಕ್ಕೆ ಪೂಜೆ ಸಲ್ಲಿಸುತ್ತಿರುವುದು ಕಂಡುಬಂದಿದ್ದು ಜೊತೆಗೆ ಸೂರ್ಯ ಚಂದ್ರರ ಸಾಕ್ಷಿಯಾಗಿ ಈ ವೀರಗಲ್ಲುಗಳನ್ನು ನಿಲ್ಲಿಸಿರುವುದನ್ನು ಕಾಣಬಹುದಾಗಿದೆ.
ವೀರಗಲ್ಲು-೩: ಅದೇ ಸ್ಥಳದಲ್ಲಿರುವ ಮತ್ತೊಂದು ವೀರಗಲ್ಲು ಇದು ೪ ಅಡಿ ಎತ್ತರ, ೨ ಅಡಿ ಅಗಲ ಮತ್ತು ೪ ಇಂಚು ದಪ್ಪನಾಗಿದ್ದು ಮೂರು ಪಟ್ಟಿಕೆಗಳಿಂದ ಕೂಡಿದೆ. ಮೊದಲನೆ ಪಟ್ಟಿಕೆಯಲ್ಲಿ ಇಬ್ಬರು ವೀರಯೋಧರು ಯುದ್ಧದಲ್ಲಿ ಹೋರಾಡಿ ಹಾರವಾಗಿರುವ ದೃಶ್ಯ. ಎರಡನೆ ಪಟ್ಟಿಕೆಯಲ್ಲಿ ಯುದ್ಧದಲ್ಲಿ ಮಡಿದ ಯೋಧನನ್ನು ಮಂಟಪದಲ್ಲಿ ಕುಳ್ಳಿರಿಸಿ ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಿರುವ ದೃಶ್ಯ ಮೂರನೇ ಪಟ್ಟಿಕೆಯಲ್ಲಿ ಶಿವಲಿಂಗಕ್ಕೆ ಒಬ್ಬ ಮುನಿ ಮತ್ತು ನಂದಿ ಶಿಲ್ಪ ಲಿಂಗಕ್ಕೆ ತಲೆ ಎತ್ತಿ ಕೈಮುಗಿಯುತ್ತಿರುವ ಸನ್ನಿವೇಶವನ್ನು ಕಾಣಬಹುದಾಗಿದೆ.
ವೀರಗಲ್ಲು-೪: ಅದೇ ಸ್ಥಳದಲ್ಲಿ ಕಂಡುಬರುವ ಮತ್ತೊಂದು ವೀರಗಲ್ಲು. ಇದು ಸುಮಾರು ೩ ಅಡಿ ಎತ್ತರ, ಒಂದುವರೆ ಅಡಿ ಅಗಲ ಮತ್ತು ೪ ಇಂಚು ದಪ್ಪನಾಗಿದ್ದು ಇದರಲ್ಲಿ ಇಬ್ಬರು ವೀರರು ಬಲವಂತವಾಗಿ ಕುಸ್ತಿಯಲ್ಲಿ ತಲ್ಲೀನರಾಗಿರುವುದನ್ನು ಕಾಣಬಹುದು. ಇವರು ಜಟ್ಟಿಯ ರೀತಿಯಲ್ಲಿ ಪಂಚೆ (ವಸ್ತ್ರ)ಯನ್ನು ಕಟ್ಟಿರುವುದು ಸುಂದರವಾಗಿ ಮೂಡಿಬಂದಿದ್ದು ಕೈಗಳಿಗೆ ತೋಳುಬಂದಿಯನ್ನು ಧರಿಸಿದ್ದಾರೆ ಮತ್ತು ತುಂಬಿದ ಅಗಲವಾದ ದಪ್ಪನೆಯ ಮುಖ, ಕಾಲುಗಳಿಗೆ ಕಾಲುಕಡಗ, ಆಕರ್ಷಕ ಕಣ್ಣುಗಳು ಸುಂದರವಾಗಿ ಶಿಲ್ಪಕಲೆಯಲ್ಲಿ ಮೂಡಿಬಂದಿದೆ. ಒಟ್ಟಾರೆ ಇಲ್ಲಿ ಕಾಣುವ ದೃಶ್ಯವನ್ನು ಗಮನಿಸಿದರೆ ವೀರಯೋಧರ ಶಿಲ್ಪವೆಂದು ಪರಿಗಣಿಸಬಹುದಾಗಿದೆ.
ವೀರಗಲ್ಲು-೫: ಇದು ಸುಮಾರು ೩ ಅಡಿ ಎತ್ತರವಾದ, ಮೇಲೆ ಹೋದಂತೆ ಕಿರಿದಾಗಿದ್ದು ೨.೫ ಅಡಿ ಅಗಲ ೪ ಇಂಚು ದಪ್ಪನಾಗಿದೆ ಇದು ಮೂರು ಪಟ್ಟಿಕೆಗಳಿಂದ ಕೂಡಿದ್ದು ಮೊದಲನೆ ಪಟ್ಟಿಕೆಯಲ್ಲಿ ಇಬ್ಬರು ವೀರರು ವೀರಾವೇಶದಿಂದ ಹೋರಾಡುತ್ತಿರುವ ದೃಶ್ಯ ಕಂಡುಬಂದಿದ್ದು ಆ ಭಾಗ ಅಸ್ಪಷ್ಟವಾಗಿದೆ ಎರಡನೇ ಪಟ್ಟಿಕೆಯಲ್ಲಿ ಇಬ್ಬರು ದೇವಲೋಕದ ಕನ್ಯೆಯರು ಯುದ್ಧದಲ್ಲಿ ಮಡಿದ ವೀರನನ್ನು ವಿಮಾನದಲ್ಲಿ ಕೂರಿಸಿಕೊಂಡು ಚಾಮರಧಾರಣಿಯರಾಗಿ ಸ್ವರ್ಗಕ್ಕೆ ಕರೆದೊಯ್ಯುತ್ತಿರುವ ದೃಶ್ಯ ಮೂರನೇ ಪಟ್ಟಿಕೆಯಲ್ಲಿ ಶಿವಲಿಂಗಕ್ಕೆ ಯತಿಯು ಪೂಜೆ ಸಲ್ಲಿಸುತ್ತಿದ್ದು ಬಲಭಾಗದಲ್ಲಿ ವೀರನ ಪತ್ನಿಯು ಕೈಮುಗಿದು ಕುಳಿತಿರುವ ದೃಶ್ಯ ಹಾಗೂ ನಂದಿ ಶಿಲ್ಪವಿರುವುದು ಜೊತೆಗೆ ಮೇಲ್ಭಾಗದಲ್ಲಿ ಸೂರ್ಯ ಚಂದ್ರ ಕೆತ್ತನೆಯನ್ನು ಕಾಣಬಹುದು.
ವೀರಗಲ್ಲು-೬: ಇದು ಎರಡು ಅಡಿ ಎತ್ತರ ೧.೫ ಅಡಿ ಅಗಲ ೩ ಇಂಚು ದಪ್ಪನಾಗಿದ್ದು ಗ್ರಾನೈಟ್ ಕಲ್ಲಿನದ್ದಾಗಿದೆ. ಇದು ಮೂರು ಪಟ್ಟಿಕೆಗಳಿಂದ ಕೂಡಿದ ಮೊದಲನೆ ಪಟ್ಟಿಕೆಯಲ್ಲಿ ನಾಲ್ಕು ಜನರಿದ್ದು ಇದರಲ್ಲಿ ಇಬ್ಬರು ವೀರರು ತಮ್ಮ ಕೈಯಲ್ಲಿ ಖಡ್ಗವನ್ನು ಹಿಡಿದು ನಿಂತಿರುವುದು ಇವರ ಪಕ್ಕದಲ್ಲಿ ಇವರ ಮಡದಿಯರಿಬ್ಬರು ಸೊಂಟದ ಮೇಲೆ ಕೈಗಳನ್ನು ಇಟ್ಟು ನಿಂತಿರುವುದನ್ನು ಕಾಣಬಹುದು. ಎರಡನೆ ಪಟ್ಟಿಕೆಯಲ್ಲಿ ಯುದ್ಧದಲ್ಲಿ ಮಡಿದ ವೀರನನ್ನು ವಿಮಾನದಲ್ಲಿ ಕುಳ್ಳಿರಿಸಿ ಇಬ್ಬರು ದೇವಕನ್ಯೆಯರು ಸ್ವರ್ಗಕ್ಕೆ ಕರೆದ್ಯೊಯ್ಯುತ್ತಿರುವ ದೃಶ್ಯ ಮೂರನೆ ಹಂತದಲ್ಲಿ ಶಿವಲಿಂಗವಿದ್ದು ಇದಕ್ಕೆ ಯತಿಯು ಪೂಜೆ ಸಲ್ಲಿಸುತ್ತಿರುವುದು ಮತ್ತು ಪಕ್ಕದಲ್ಲಿ ನಂದಿಯ ಶಿಲ್ಪವಿರುವುದು ಹಾಗೂ ಸೂರ್ಯ ಚಂದ್ರರಿರುವುದನ್ನು ಕಾಣಬಹುದು.
ವೀರಗಲ್ಲು-೭: ಇದು ಸಹ ೩ ಅಡಿ ಎತ್ತರ, ೧.೫ ಅಡಿ ಅಗಲ, ೩ ಇಂಚು ದಪ್ಪನಾಗಿದ್ದು ನಾಲ್ಕು ಪಟ್ಟಿಕೆಗಳಿಂದ ಕೂಡಿದೆ. ಮೊದಲನೇ ಪಟ್ಟಿಕೆಯಲ್ಲಿ ೩ ಜನ ವೀರರು ಖಡ್ಗವನ್ನು ಹಿಡಿದು ನಿಂತಿರುವುದು ಎರಡನೆ ಪಟ್ಟಿಕೆಯಲ್ಲಿ ಯುದ್ಧದಲ್ಲಿ ಮಡಿದ ವೀರನನ್ನು ದೇವಕನ್ಯೆಯರು ದೇವಲೋಕಕ್ಕೆ ಕರೆದೊಯ್ಯುತ್ತಿರುವ ದೃಶ್ಯ ಮೂರನೇ ಪಟ್ಟಿಕೆಯಲ್ಲಿ ಶಿವಲಿಂಗಕ್ಕೆ ಯತಿಯು ಪೂಜೆ ಸಲ್ಲಿಸುತ್ತಿದ್ದು ಪಕ್ಕದಲ್ಲಿ ನಂದಿಯ ಶಿಲ್ಪವನ್ನು ಕಾಣಬಹುದು. ನಾಲ್ಕನೆ ಪಟ್ಟಿಕೆಯಲ್ಲಿ ಸೂರ್ಯ ಚಂದ್ರರು ಮತ್ತು ತ್ರಿಶೂಲವಿರುವುದನ್ನು ಕಾಣಬಹುದು. ಇದರಿಂದ ಶೈವಧರ್ಮವು ಈ ಪ್ರಾಂತ್ಯದಲ್ಲಿ ಇದ್ದಿತ್ತೆಂದು ತಿಳಿದುಬರುತ್ತದೆ.
ವೀರಮಾಸ್ತಿಕಲ್ಲು-೮: ಇದು ಸುಮಾರು ೩ ಅಡಿ ಎತ್ತರವಾಗಿದ್ದು ಮೇಲೆ ಹೋದಂತೆ ಕಿರಿದಾಗಿದ್ದು ೨ ಅಡಿ ಅಗಲ, ೪ ಇಂಚು ದಪ್ಪನಾದ ಕಪ್ಪು ಗ್ರಾನೈಟ್ ಕಲ್ಲಿನದಾಗಿದೆ, ಇದು ಮೂರು ಪಟ್ಟಿಕೆಯಿಂದ ಕೂಡಿದ್ದು ದುರಾದೃಷ್ಟವಶಾತ್ ಮೊದಲನೆ ಪಟ್ಟಿಕೆಯು ಭೂಮಿಯಲ್ಲಿ ಹೂತುಹೋಗಿದೆ ಎರಡನೆ ಪಟ್ಟಿಕೆಯಲ್ಲಿ ಇಬ್ಬರು ದೇವಕನ್ಯೆಯರು ಚಾಮರಧಾರಿಣಿಯರಾಗಿ ಯುದ್ಧದಲ್ಲಿ ಮಡಿದ ಇಬ್ಬರು ಮಹಾಸತಿಯರನ್ನು ಕಲಾತ್ಮಕ ಮತ್ತು ಅಲಂಕೃತವಾದ ಮಂಟಪದಲ್ಲಿ ಕೂರಿಸಿಕೊಂಡು ದೇವಲೋಕಕ್ಕೆ ಕರೆದೊಯ್ಯುತ್ತಿರುವ ದೃಶ್ಯ ಕಂಡುಬಂದಿದ್ದು ಇದರ ಮೇಲೆ ಎಡ ಮತ್ತು ಬಲ ಭಾಗದಲ್ಲಿ ಇಬ್ಬರು ದೇವಕನ್ಯೆಯರು ಅಂಜಲಿಬದ್ಧರಾಗಿ ಕುಳಿತಿರುವ ದೃಶ್ಯ ಬಹಳ ಮನೋಹರವಾಗಿ ಮೂಡಿ ಬಂದಿದ್ದು ಮೂರನೇ ಪಟ್ಟಿಕೆಯಲ್ಲಿ ಅಲಂಕೃತನಾದ ಶಿವಲಿಂಗವಿದ್ದು ಇದಕ್ಕೆ ಯತಿಯು ಕೈಮುಗಿದು ಪೂಜೆ ಸಲ್ಲಿಸುತ್ತಿರುವುದು ಬಲಭಾಗದಲ್ಲಿ ಇಬ್ಬರು ದೇವಸೂರರು ಅಂಜಲಿಬದ್ಧರಾಗಿ ಕೈಮುಗಿದು ಕುಳಿತಿರು ವುದು, ಎಡಭಾಗದಲ್ಲಿ ನಂದಿಯ ಶಿಲ್ಪವಿರುವುದು, ಮೇಲ್ಭಾಗದಲ್ಲಿ ಸೂರ್ಯ ಚಂದ್ರರು ಇದಕ್ಕೆ ಸಾಕ್ಷಿಯಾಗಿರುವಂತೆ ಮೂಡಿಬಂದಿರುವುದನ್ನು ಕಾಣಬಹುದು.
ಭೈರವ ಶಿಲ್ಪ-೯: ಭೈರವ ಸಂಸ್ಕೃತಿ ಶೈವ ಪರಂಪರೆಯಲ್ಲಿ ಕಂಡುಬರುವ ಸಂಸ್ಕೃತಿಯಾಗಿದೆ ಅಂದರೆ ಶೈವ ಪರಂಪರೆಯಲ್ಲಿ ಶಿವನು ಆರಾಧನೆ ಪೂಜೆ ಮಾಡುವುದು ಕರ್ನಾಟಕದಾದ್ಯಂತ ಕಂಡುಬರುತ್ತದೆ. ಇದು ಗ್ರಾನೈಟ್ ಕಲ್ಲಿನದಾಗಿದ್ದು, ಮುಖವು ಸಂಪೂರ್ಣ ದುಸ್ಥಿತಿ ಹೊಂದಿದ್ದು ಚತುರ್ಭುಜಾಧಾರಿಯಾಗಿದ್ದಾನೆ. ಕೈಗಳಲ್ಲಿ ತ್ರಿಶೂಲ, ಢಮರುಗ, ಖಡ್ಗ ಮತ್ತು ಒಂದು ಕೈಯಲ್ಲಿ ತಲೆಯ ಬುರುಡೆಯನ್ನು ಹಿಡಿದಿರುವುದು ಕಂಡುಬರುತ್ತದೆ. ಕೊರಳಲ್ಲಿ ರುಂಡಮಾಲೆಯನ್ನು ಧರಿಸಿರುವುದು ಕಂಡುಬರುತ್ತದೆ ಜೊತೆಗೆ ಈ ಶಿಲ್ಪವು ನಗ್ನಾವಸ್ಥೆಯಲ್ಲಿದೆ.
ಒಟ್ಟಾರೆ ಮೇಲಿನ ಎಲ್ಲಾ ವೀರಗಲ್ಲುಗಳನ್ನು ಗಮನಿಸಿದಾಗ ಈ ಪ್ರಾಂತದಲ್ಲಿ ಶೈವ ಧರ್ಮದ ಆಚರಣೆ ಹೆಚ್ಚಾಗಿ ಕಂಡುಬಂದಿದ್ದು ಚಾರಿತ್ರಿಕವಾಗಿ ಮತ್ತು ಐತಿಹಾಸಿಕವಾಗಿ ಹೆಚ್ಚಿನ ಮಹತ್ವವನ್ನು ಹೊಂದಿದೆ ಎಂದು ಹೇಳಬಹುದು. ಜೊತೆಗೆ ಸಂಶೋಧನಾತ್ಮಕವಾಗಿ ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂಬ ಅಂಶವನ್ನು ತಿಳಿಯಪಡಿಲಾಗಿದೆ.

ಆಧಾರಸೂಚಿ
೧.         ಪಾರ್ಥಸಾರಥಿ. ಟಿ.ಎ. (ಪ್ರ.ಸಂ.) ಕರ್ನಾಟಕ ರಾಜ್ಯ ಗ್ಯಾಸೆಟಿಯರ್, ಮಂಡ್ಯ ಜಿಲ್ಲೆ, ಕರ್ನಾಟಕ ಸರ್ಕಾರ, ಬೆಂಗಳೂರು, ೨೦೦೩.
೨.         ಶೇಷಶಾಸ್ತ್ರಿ. ಆರ್., ಕರ್ನಾಟಕದ ವೀರಗಲ್ಲುಗಳು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೨೦೦೪.
೩.         ತಿಪ್ಪೇರುದ್ರಸ್ವಾಮಿ, ಹೆಚ್., ಕರ್ನಾಟಕ ಸಂಸ್ಕೃತಿ ಸಮೀಕ್ಷೆ, ಮೈಸೂರು, ೨೦೧೦.
೪.         ಪರಮಶಿವಮೂರ್ತಿ. ಡಿ.ವಿ., ಕನ್ನಡ ಶಾಸನಶಿಲ್ಪ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯.
೫.         ಚಿದಾನಂದಮೂರ್ತಿ. ಎಂ., ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಬೆಂಗಳೂರು, ೨೦೦೨.
೬.         ಫೋಟೋದಲ್ಲಿನ ಚಿತ್ರವನ್ನು ಗಮನಿಸಿ, ಚಿತ್ರ ಸಂಖ್ಯೆ ೧. ೨. ೩. ೪. ೫. ೬. ೭. ೮. ೯.

ತಿ # ಸಹಾಯಕ ಪ್ರಾಧ್ಯಾಪಕರು, ಪ್ರಾಚೀನ ಮತ್ತು ಪುರಾತತ್ತ್ವ ಅಧ್ಯಯನ ವಿಭಾಗ, ಮಾನಸ ಗಂಗೋತ್ರಿ, ಮೈಸೂರು-೫೭೦೦೦೬.
ತಿತಿ ಉಪನ್ಯಾಸಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಲ್ಲಹಳ್ಳಿ, ನಂಜನಗೂಡು ತಾಲ್ಲೂಕು-೫೭೧೩೧೪.


                 
ವೀರಗಲ್ಲು ಸಂಖ್ಯೆ - ೧           ವೀರಗಲ್ಲು ಸಂಖ್ಯೆ - ೨           ವೀರಗಲ್ಲು ಸಂಖ್ಯೆ - ೩          ವೀರಗಲ್ಲು ಸಂಖ್ಯೆ - ೪            ವೀರಗಲ್ಲು ಸಂಖ್ಯೆ - ೫


           

ವೀರಗಲ್ಲು ಸಂಖ್ಯೆ - ೬             ವೀರಗಲ್ಲು ಸಂಖ್ಯೆ - ೭         ವೀರಗಲ್ಲು ಸಂಖ್ಯೆ - ೮       ವೀರಗಲ್ಲು ಸಂಖ್ಯೆ - ೯




Friday, March 21, 2014

ಹೆಗ್ಗೆರೆಯ ವೀರಗಲ್ಲುಗಳು ಮತ್ತು ಮಾಸ್ತಿಗಲ್ಲುಗಳು


ಚಿತ್ರದುರ್ಗ ತಾಲ್ಲೂಕು ಹೆಗ್ಗೆರೆ ಗ್ರಾಮದ ನವಶೋಧಿತ ವೀರಗಲ್ಲು ಹಾಗೂ ಮಾಸ್ತಿಗಲ್ಲುಗಳು
ಡಾ. ಹೆಚ್. ಗುಡ್ಡದೇಶ್ವರಪ್ಪ
ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಹೋಬಳಿ ಕೇಂದ್ರದ ದಕ್ಷಿಣ ಹಾಗೂ ಸಿರಿಗೆರೆ ಮಾರ್ಗದ ಉತ್ತರಕ್ಕೆ ಒಂದೂವರೆ ಕಿ.ಮೀ. ದೂರದಲ್ಲಿರುವ ಹೆಗ್ಗೆರೆ ಗ್ರಾಮದಲ್ಲಿ ಇತ್ತೀಚೆಗೆ ಕ್ಷೇತ್ರಕಾರ್ಯದ ಸಮಯದಲ್ಲಿ ಒಂದು ವೀರಗಲ್ಲು ಎರಡು ಮಹಾಸತಿ ಕಲ್ಲುಗಳು ಪತ್ತೆಯಾಗಿದ್ದು ಅವುಗಳನ್ನು ಅಧ್ಯಯನಕ್ಕೊಳಪಡಿಸಲಾಗಿದೆ.
ಸ್ಥಳೀಯ ಚರಿತ್ರೆ
ಚಿತ್ರದುರ್ಗ ಪಾಳೆಯಗಾರರ ಕಾಲದಲ್ಲಿ ಪ್ರಮುಖ ಪ್ರದೇಶಗಳಲ್ಲೊಂದಾದ ಹೆಗ್ಗೆರೆ ಗ್ರಾಮ ಪಾಳೆಯಗಾರರ ಕಾಲದ ಪರಂಪರೆ, ಸಂಪ್ರದಾಯ ಸಂಸ್ಕೃತಿಯ ನೆನಪನ್ನು ತನ್ನ ಒಡಲಲ್ಲಿ ಇರಿಸಿಕೊಂಡಿದ್ದು, ಈ ಗ್ರಾಮದ ಮೂಲ ಹೆಸರು ಗುರುಪ್ಪನಹಳ್ಳಿ, ಇಲ್ಲಿ ಮೊದಲು ನಾಯಕ ಮತ್ತು ಆದಿಕರ್ನಾಟಕ ಜನಾಂಗದವರು ವಾಸಿಸುತ್ತಿದ್ದರು. ಕಾಲಾಂತರದಲ್ಲಿ ಲಿಂಗಾಯತ, ಆದಿದ್ರಾವಿಡ ಜನಾಂಗದವರು ಬಂದು ನೆಲೆಸಿದರು. ಇಂದಿಗೂ ಇಲ್ಲಿ ನಾಯಕ ಜನಾಂಗದವರು ಬಹುಸಂಖ್ಯಾತರು.
ಈ ಗ್ರಾಮದ ಪಕ್ಕದಲ್ಲಿರುವ ಹಿರಿದಾದ ಕೆರೆಯಿಂದಾಗಿ ಹೆಗ್ಗೆರೆ ಎನ್ನುವ ಹೆಸರು ಬಂದಿರಬಹುದು. ಜನಪದರ ಪ್ರಕಾರ ಭರಮಸಾಗರದ ದೊಡ್ಡಕೆರೆಯ ಅಂಗಳದಲ್ಲಿ ಬೀಡುಬಿಟ್ಟಿದ್ದ ಬ್ರಿಟೀಷರ ದಂಡು ಗುರಪ್ಪನಹಳ್ಳಿಯ ಮೇಲೆ ದಾಳಿ ನಡೆಸಲು ಯತ್ನಿಸುತ್ತದೆ. ಆಗ ಇಲ್ಲಿಯ ಯೋಧರು ಗ್ರಾಮದ ಹೊರಗೆ ಗೆರೆ ಹಾಕಿ ಅದನ್ನು ದಾಟದಂತೆ ಸೂಚಿಸುತ್ತಾರೆ. ಆ ಸಂದರ್ಭದಲ್ಲಿ ಸ್ಥಳೀಯ ಯೋಧರು ಹಾಗೂ ಬ್ರಿಟೀಷ್ ದಂಡಿನ ಮಧ್ಯ ಕಾಳಗವಾಗಿ ಬ್ರಿಟೀಷರನ್ನು ಹೊಡೆದೊಡಿಸಿದ ಕಾರಣ ಈ ಸ್ಥಳಕ್ಕೆ ಗೆದ್ದಗೆರೆ ಎನ್ನುವ ಹೆಸರು ಬಂದು ಕಾಲಕ್ರಮೇಣವಾಗಿ ಹೆಗ್ಗೆರೆ ಎಂದಾಯಿತು. ಈ ಗ್ರಾಮದಲ್ಲಿ ವೀರಗಲ್ಲು ಹಾಗೂ ಮಾಸ್ತಿಕಲ್ಲುಗಳನ್ನು ಕಾಣಬಹುದಾಗಿದೆ.
ಊರಿನ ಹಿತಕ್ಕಾಗಿ, ದುಷ್ಟಸಂಹಾರಕ್ಕಾಗಿ, ಸ್ವಾಮಿ ನಿಷ್ಠೆಯಿಂದಲೂ ಹೋರಾಡಿ ಮಡಿದ ವೀರ ಪುರುಷರ ನೆನಪಿನ ಕುರುಹಾಗಿ ವೀರಗಲ್ಲುಗಳನ್ನು ನಿಲ್ಲಿಸುತ್ತಿದ್ದರು. ಮಹಾಸತಿಗಲ್ಲುಗಳು ಅಂದಿನ ಜನ, ಸಮಾಜದ - ನಾಡಿನ ಸಂರಕ್ಷಣೆಗಾಗಿ ಹೋರಾಡಿ ಮಡಿದ ವೀರನ ಜೊತೆಯಲ್ಲಿ ಆತನ ಮಡದಿ ಸಹಗಮನ ಮಾಡಿದ ನೆನಪಿನ ಕುರುಹಾಗಿ ನಿಲ್ಲಿಸುತ್ತಿದ್ದರು. ವೀರನು ಯುದ್ಧ ಮತ್ತಿತರ ಹೋರಾಟದಲ್ಲಿ ಮಡಿದಾಗ ಅವನು ವೀರಗಲ್ಲಿನ ನಾಯಕನಾಗುತ್ತಾನೆ. ಆತನೊಂದಿಗೆ ಮಡಿದ ಆತನ ಹೆಂಡತಿ ನಾಯಕಿಯಾಗುತ್ತಾಳೆ. ಮಹಾಸತಿಯಾಗುತ್ತಾಳೆ. ಇವುಗಳ ಅಧ್ಯಯನದಿಂದ ಅಂದಿನ ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಸ್ವರೂಪವನ್ನು ಅರ್ಥೈಸಿಕೊಳ್ಳಲು ಸಹಾಯಕವಾಗುತ್ತದೆ. ಹೆಗ್ಗೆರೆಯಲ್ಲಿ ಸಿಕ್ಕಿರುವ ವೀರಗಲ್ಲು ಹಾಗೂ ಮಹಾಸತಿಕಲ್ಲುಗಳು ಬರವಣಿಗೆ ರಹಿತ ಶಿಲ್ಪಗಳಾಗಿರುವುದರಿಂದ ಹೋರಾಡಿದ ವೀರನ ಹೆಸರಾಗಲಿ, ಸಹಗಮನ ಮಾಡಿದ ಸತಿಯ ಹೆಸರಾಗಲಿ, ಕಾಲ, ಯಾರೊಂದಿಗೆ ಹೋರಾಡಿದನೆಂಬ ಬಗ್ಗೆ ತಿಳಿಯುವುದಿಲ್ಲ. ಹಾಗಾಗಿ ನಾವು ವೀರಗಲ್ಲು-ಮಹಾಸತಿ ಕಲ್ಲಿನಲ್ಲಿರುವ ಶಿಲ್ಪಗಳ ಸ್ವರೂಪದ ಮೇಲೆ ಅದರ ಕಾಲ ಮತ್ತು ಉದ್ದೇಶವನ್ನು ತಿಳಿಯಬಹುದಾಗಿದೆ.
ವೀರಗಲ್ಲು
ಇದು ಹೆಗ್ಗೆರೆ ಗ್ರಾಮದ ಕರುವಿನಕಲ್ಲಿನ ಹತ್ತಿರವಿರುವ ಈಶ್ವರ ದೇವಸ್ಥಾನದ ಮುಂಭಾಗದಲ್ಲಿದೆ. ಇದಕ್ಕೆ ಬಳಪದ ಕಲ್ಲನ್ನು ಬಳಸಿದ್ದು, ಸುಮಾರು ೩ ಅಡಿ ಎತ್ತರ ೧.೨೫ ಅಡಿ ಅಗಲ, ಅರ್ಧ ಅಡಿ ದಪ್ಪವಿದೆ. ಇದರಲ್ಲಿ ವೀರಯೋಧನು ಎಡಗೈಯಲ್ಲಿ ಕತ್ತಿ ಹಿಡಿದು, ಬಲಗೈಯಲ್ಲಿ ಖಡ್ಗ ಹಿಡಿದು ನಿಂತಿದ್ದಾನೆ. ಕಂಠಾಭರಣ, ತೋಳ್ಬಂದಿ, ಕಾಲ್ಕಡಗ, ಕಿವಿಯೋಲೆ ಧರಿಸಿದ್ದಾನೆ. ತಲೆಯ ಕೂದಲನ್ನು ಎಡಕ್ಕೆ ತುರುಬು ಕಟ್ಟಲಾಗಿದೆ. ಸೊಂಟದಲ್ಲಿ ಚಾಕುವಿದೆ. ಪ್ರಭಾವಳಿಯಿದೆ, ಪ್ರಭಾವಳಿಯ ಮೇಲ್ಭಾಗದಲ್ಲಿ ಕೀರ್ತಿಮುಖವಿದೆ. ಅದರ ಮೇಲೆ ಕಮಲ ಪುಷ್ಪವಿದ್ದು, ಎಡಬಲ ಭಾಗದಲ್ಲಿ ಹೆಡೆ ಎತ್ತಿರುವ ಸರ್ಪಗಳಿವೆ. ಪ್ರಭಾವಳಿಯ ತಳಭಾಗದಲ್ಲಿ ಪೂರ್ಣ ಕುಂಭಗಳಿವೆ. ಮೇಲ್ಭಾಗದಲ್ಲಿ ಸೂರ್ಯ-ಚಂದ್ರರಿದ್ದಾರೆ. ಇವನೊಬ್ಬ ವೀರಯೋಧನಾಗಿದ್ದು, ಯಾವುದೋ ಹೋರಾಟದಲ್ಲಿ ಮಡಿದಿದ್ದ ನೆನಪಿಗಾಗಿ ಈ ಸ್ಮಾರಕ ಶಿಲ್ಪ ಹಾಕಿಸಲಾಗಿದೆ. ಈ ಶಿಲ್ಪದ ಸ್ವರೂಪವನ್ನು ಗಮನಿಸಿದಾಗ, ಅದು ೧೭ನೇ ಶತಮಾನಕ್ಕೆ ಸೇರಿದ್ದೆಂದು ವರ್ತಿಸಬಹುದಾಗಿದೆ.
ಮಹಾಸತಿಕಲ್ಲು
ಹೆಗ್ಗೆರೆ ಗ್ರಾಮದ ಈಶ್ವರ ದೇವಾಲಯದ ಮುಂಭಾಗದಲ್ಲಿದ್ದು, ಬಳಪದ ಕಲ್ಲನ್ನು ಬಳಸಲಾಗಿದೆ. ಸುಮಾರು ೩ ಅಡಿ ಎತ್ತರ ೧ / ಅಡಿ ಅಗಲ, ಅರ್ಧ ಅಡಿ ದಪ್ಪವಿದೆ. ಈ ಸ್ಮಾರಕ ಶಿಲ್ಪದ ವಿಶೇಷವೆಂದರೆ ವೀರಯೋಧನು ಎಡಗಾಲನ್ನು ಮುಂದೆ ಇಟ್ಟು ಎಡಗೈಯಲ್ಲಿ ಬಿಲ್ಲನ್ನು ಹಿಡಿದು ಬಲಗೈಯಿಂದ ಬಾಣವನ್ನು ಬಿಡುತ್ತಿದ್ದಾನೆ. ತಲೆಯ ಮೇಲ್ಭಾಗದಲ್ಲಿ ಕೂದಲಿನ ತುರುಬು ಬಲಭಾಗಕ್ಕಿದೆ. ಕಿವಿಯೋಲೆ, ಕಂಠಾಭರಣ, ಕಾಲ್ಕಡಗ ಧರಿಸಿ ಸೊಂಟಕ್ಕೆ ಚಾಕುವನ್ನು ಕಟ್ಟಿದ್ದಾನೆ. ಬಲಭಾಗದಲ್ಲಿ ಸುಂದರ ಸ್ತ್ರೀಯು ನಿಂತಿದ್ದಾಳೆ. ಸ್ತ್ರೀಯ ತಲೆಯ ಮೇಲ್ಭಾಗದಲ್ಲಿ ಮೊಗ್ಗು ಮತ್ತು ಕೇದಿಗೆ ಮಾದರಿಯ ಆಭರಣಗಳಿಂದ ಅಲಂಕೃತಗೊಂಡಿದ್ದಾಳೆ. ಕೂದಲಿನ ತುರುಬು ಬಲಭಾಗಕ್ಕಿದೆ. ಕಿವಿಯೋಲೆ, ಕಂಠಾಭರಣ, ತೋಳ್ಬಂದಿ, ಕಾಲ್ಕಡಗ ಧರಿಸಿ ನೆರಿಗೆಯುಳ್ಳ ಸೀರೆಯನ್ನುಟ್ಟಿದ್ದು ಅದರ ಮೇಲೆ ಪಟ್ಟಿಯಿದೆ. ಎಡಗೈಯಲ್ಲಿ ಫಲವನ್ನಿಡಿದು ಬಲಗೈಯಲ್ಲಿ ಕುಂಬವನ್ನಿಡಿದಿದ್ದಾಳೆ. ಇವರಿಬ್ಬರೂ ಪೀಠದ ಮೇಲೆ ನಿಂತಿದ್ದು, ಪೀಠದ ಮಧ್ಯಭಾಗದಲ್ಲಿ ಪದ್ಮದ ಅಲಂಕಾರವಿದೆ. ಕೀರ್ತಿಮುಖವಿದೆ. ಕೀರ್ತಿಮುಖದ ಕೆಳಭಾಗದ ಎರಡೂ ಕಡೆ ಪದ್ಮದ ಅಲಂಕಾರವಿದೆ. ಈ ಶಿಲ್ಪದ ನಿರೂಪಣೆಯಿಂದ ತಿಳಿದುಬರುವ ಅಂಶವೆಂದರೆ ಯಾವುದೋ ಹೋರಾಟದಲ್ಲಿ ವೀರನು ವೀರಮರಣ ಹೊಂದಿದ್ದು ಮಡದಿಯು ಸಹಗಮನ ಆಚರಿಸಿದ್ದರ ನೆನಪಿಗಾಗಿ ಈ ಶಿಲ್ಪವನ್ನು ನಿರ್ಮಿಸಲಾಗಿದೆ.
ಮಹಾಸತಿಕಲ್ಲು ಕಾಲ ೧೭ನೇ ಶತಮಾನ
ಹೆಗ್ಗೆರೆ ಗ್ರಾಮದ ದಕ್ಷಿಣಕ್ಕೆ ಮಟ್ಟಿಮೇಗಳ ಹೊನ್ನಪ್ಪನವರ ಖಣದ ವಾಯವ್ಯ ಮೂಲೆಯಲ್ಲಿ ನಿಲ್ಲಿಸಿದ್ದು, ಬಳಪದ ಕಲ್ಲನ್ನು ಬಳಸಲಾಗಿದೆ. ಸುಮಾರು ೪ ಅಡಿ ಎತ್ತರ ೩ ಅಡಿ ಅಗಲ, ೧ ಅಡಿ ದಪ್ಪವಿದ್ದು, ೫ ಅಡಿ ಎತ್ತರದ ಕಟ್ಟೆಯ ಮೇಲೆ ನಿಲ್ಲಿಸಲಾಗಿದೆ. ಈ ಕಲ್ಲಿನಲ್ಲಿ ಅಲಂಕೃತವಾದ ಮಂಟಪವನ್ನು ಕೊರೆಯಲಾಗಿದೆ. ಮೇಲ್ಭಾಗದಲ್ಲಿ ಸೂರ್ಯ-ಚಂದ್ರರಿದ್ದು, ಒಂದೇ ಒಂದು ದೊಡ್ಡ ಪಟ್ಟಿಕೆಯಿದೆ. ವೀರಯೋಧನು ಕುದುರೆಯ ಪಕ್ಕದಲ್ಲಿ ನಿಂತು ಎಡಗೈಯಿಂದ ಕುದುರೆಯ ಲಗಾಮನ್ನು, ಬಲಗೈಯಲ್ಲಿ ಖಡ್ಗವನ್ನು ಹಿಡಿದಿದ್ದಾನೆ. ವೀರಯೋಧನು ತೋಳುಗಳಿಗೆ ತೋಳ್ಬಂದಿ, ಕಾಲಿಗೆ ಕಡಗ, ಕಿವಿಯೋಲೆ, ಕಂಠಾಭರಣ ಧರಿಸಿ ಕಟಿವಸ್ತ್ರಧಾರಿಯಾಗಿದ್ದಾನೆ. ಇವನ ತಲೆಯ ಮೇಲ್ಭಾಗದಲ್ಲಿ ಕೂದಲಿನ ತುರುಬು ಎಡಕ್ಕೆ ಬಾಗಿದೆ. ಯೋಧನ ಬಲಭಾಗಕ್ಕೆ ಸುಂದರವಾದ ಸ್ತ್ರೀಯ ಶಿಲ್ಪವಿದೆ. ಸ್ತ್ರೀಯ ತಲೆಯ ಮೇಲ್ಭಾಗವನ್ನು ಮೊಗ್ಗು ಹಾಗೂ ಕೇದಿಗೆ ಮಾದರಿಯ ಆಭರಣಗಳು ಅಲಂಕರಿಸಿವೆ. ಬಲಗೈಯನ್ನು ಮೇಲೆತ್ತಿಕೊಂಡು ನಿಂಬೆಹಣ್ಣನ್ನು ಹಿಡಿದಿದ್ದು, ಎಡಗೈಯಲ್ಲಿ ಫಲವನ್ನು ಹಿಡಿದಿದ್ದಾಳೆ. ಕೈಬಳೆ, ಕಾಲ್ಕಡಗ, ನೆರಿಗೆಯುಳ್ಳ ಸೀರೆಯನ್ನುಟ್ಟು ಸೊಂಟದ ಪಟ್ಟಿ, ಕಿವಿಯೋಲೆ ಧರಿಸಿ ಅಲಂಕೃತಳಾಗಿದ್ದಾಳೆ. ಈ ಶಿಲ್ಪವು ಪ್ರಭಾವಳಿಯನ್ನು ಹೊಂದಿದೆ. ಕೀರ್ತಿಮುಖವಿದೆ. ಹೂಬಳ್ಳಿಗಳ ಅಲಂಕಾರವಿದೆ. ಈ ಶಿಲ್ಪದ ನಿರೂಪಣೆಯನ್ನು ಗಮನಿಸಿದರೆ, ವೀರಯೋಧ ಮರಣ ಹೊಂದಿದ ನಂತರ ಸತಿಯು ಅದನ್ನು ಕೇಳಿ ಮರಣ ಹೊಂದಿದ್ದಾಳೆ. ಇದರ ನೆನಪಿಗಾಗಿ ಸ್ಮಾರಕ ಶಿಲ್ಪವನ್ನು ನಿಲ್ಲಿಸಲಾಗಿದೆ.
ಈ ಮೂರು ಸ್ಮಾರಕ ಶಿಲ್ಪಗಳನ್ನು ಅಧ್ಯಯನ ಮಾಡಿದಾಗ ಈ ಭಾಗದಲ್ಲಿನ ಯೋಧರು-ಜನ, ಶೌರ್ಯ, ಪರಾಕ್ರಮಕ್ಕೆ ಹೆಸರಾಗಿದ್ದು, ಗ್ರಾಮದ ರಕ್ಷಣೆ, ತುರುಗಳ ರಕ್ಷಣೆ, ಸ್ತ್ರೀಯರ ರಕ್ಷಣೆಗಾಗಿ ಹೋರಾಡಿ ವೀರ ಮರಣ ಹೊಂದಿದ್ದಾರೆ. ಇಂತಹ ಹೋರಾಟದಲ್ಲಿ ಹೆಚ್ಚಾಗಿ ಬೇಡರು (ನಾಯಕ) ಭಾಗವಹಿಸುತ್ತಿದ್ದರು. ಇದನ್ನು ಇಲ್ಲಿಯ ಸ್ಥಳನಾಮದ ಅಧ್ಯಯನ ಹಾಗೂ ವೀರಗಲ್ಲು ಮತ್ತು ಮಹಾಸತಿಕಲ್ಲುಗಳ ಅಧ್ಯಯನದಿಂದ ದೃಢೀಕರಿಸುತ್ತವೆ. ಹೆಗ್ಗೆರೆ ಗ್ರಾಮದ ಜನಸಂಖ್ಯೆಯನ್ನು ಗಮನಿಸಿದರೆ ನಾಯಕ ಜನಾಂಗದವರೇ ಬಹುಸಂಖ್ಯಾತರಾಗಿರುವುದು ಕಂಡುಬರುತ್ತದೆ. ಹಾಗಾಗಿ ಅನಾದಿಕಾಲದಿಂದಲೂ ಬೇಡರು ಗ್ರಾಮರಕ್ಷಣೆ ಹಾಗೂ ಸ್ವಾಮಿನಿಷ್ಠೆಯ ವಿಷಯದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದುದನ್ನು ದೃಢೀಕರಿಸುತ್ತದೆ. ಹೆಗ್ಗೆರೆ ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಕ್ಷೇತ್ರಕಾರ್ಯ ನಡೆಸಿದರೆ ಇನ್ನೂ ಪೂರಕ ಪುರಾವೆಗಳು ಲಭ್ಯವಾಗಬಹುದು.

 ಮುಖ್ಯಸ್ಥರು, ಸ್ನಾತಕೋತ್ತರ ಇತಿಹಾಸ ವಿಭಾಗ,
ಸರ್ಕಾರಿ ಕಲಾ ಕಾಲೇಜು, ಚಿತ್ರದುರ್ಗ-೫೭೭೫೦೧.

     




Tuesday, March 18, 2014

ಗುಜರಾತಿನಲ್ಲೊಂದು ವಿಜಯನಗರದ ಕಾಲದ ನಾಟಕ

ಗುಜರಾತಿನಲ್ಲೊಂದು ವಿಜಯನಗರಕಾಲೀನ ಐತಿಹಾಸಿಕ ನಾಟಕ ಗಂಗಾಧರ ಕವಿಯ ಗಂಗದಾಸ ಪ್ರತಾಪ ವಿಲಾಸಮ್
-  ಡಾ. ಜ್ಯೋತ್ಸ್ನಾ ಕಾಮತ್
ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಸಂಸ್ಕೃತ, ಕನ್ನಡ, ತೆಲುಗು ಭಾಷೆಗಳಲ್ಲಿ ಕಾವ್ಯ, ಪ್ರಬಂಧ, ಶಾಸ್ತ್ರಾದಿಗಳ ವೇದ ಸಾಹಿತ್ಯ ಪುರಾಣಾದಿಗಳ ಟೀಕು-ಟಿಪ್ಪಣಿಗಳ ಸಾಹಿತ್ಯ ಸಾಕಷ್ಟು ಬೆಳೆದಿದ್ದರೂ ಈಗ ಲಭ್ಯವಾಗಿರುವ ನಾಟಕ ಪ್ರಕಾರವು ಕಡಿಮೆ. ಅದರಲ್ಲೂ ಸಮಕಾಲೀನ ಇತಿಹಾಸವನ್ನು ಕೆಲಮಟ್ಟಿಗೆ ಬಿಂಬಿಸುವ ಕೃತಿಗಳು ವಿರಳ. ಇಂಥಲ್ಲಿ ವಿಜಯನಗರದ ಎರಡನೆಯ ದೇವರಾಯನ ಕಾಲದಲ್ಲಿ (೧೪೨೪-೧೪೪೬) ಆತನ ಆಸ್ಥಾನದಲ್ಲಿ ಒಳ್ಳೆಯ ಹೆಸರು ಮಾಡಿ, ತೀರ್ಥಯಾತ್ರೆಯ ಜೊತೆಗೆ ಸಾಹಿತ್ಯಯಾತ್ರೆಯನ್ನು ಕೈಕೊಂಡು ಗುಜರಾತ್ ತಲುಪಿ ಅಲ್ಲಿಯ ಚಂಪಾನೇರ ಸಂಸ್ಥಾನದ ಅರಸನ ರಾಜಾಶ್ರಯವನ್ನು ಗಂಗಾಧರ ಕವಿ ಪಡೆಯುತ್ತಾನೆ. ಸಂಸ್ಕೃತದಲ್ಲಿ ಮೀರಿದ ಪಾಂಡಿತ್ಯ ಪಡೆದ ಈತನಿಗೆ ಅಲ್ಲಿಯ ಅರಸು ಗಂಗದಾಸನು, ತಾನು ಅಹ್ಮದಾಬಾದ್‌ನ ಸುಲ್ತಾನನನ್ನು ಸೋಲಿಸಿದ ಸಂದರ್ಭವನ್ನು ನಾಟಕರೂಪದಲ್ಲಿ ಬರೆಯುವಂತೆ ಹೇಳುತ್ತಾನೆ. ಆಗ ರೂಪಗೊಂಡಿದ್ದ ನಾಟಕವೇ ಗಂಗಾಧರನ ಗಂಗದಾಸ ಪ್ರತಾಪ ವಿಲಾಸಮ್ (ಕ್ರಿ.ಶ.ಸು. ೧೪೪೯ರಲ್ಲಿ ರಚಿತವಾಯಿತು).
ಕ್ರಿ.ಶ. ೧೪೪೯ರಲ್ಲಿ ರೂಪ ತಾಳಿರಬಹುದಾದ ಈ ನಾಟಕದ ಒಂದೇ ಪ್ರತಿ, ಲಂಡನ್‌ನ ಇಂಡಿಯಾ ಆಫೀಸ್ ಲೈಬ್ರರಿಯಲ್ಲಿ ಇತ್ತು (ನಂ. ೨೩೮೮) ಬಡೋದಾ ವಿಶ್ವವಿದ್ಯಾಲಯವು, ಬ್ರಿಟಿಷ್ ಕೌನ್ಸಿಲ್ ಮೂಲಕ ಅದನ್ನು ತರಿಸಿ, ಆ ವಿಶ್ವವಿದ್ಯಾಲಯದ ಗುಜರಾತ್ ಭಾಷೆಯ ಪ್ರಾಧ್ಯಾಪಕರೂ, ಓರಿಯಂಟಲ್ ಸಂಸ್ಥೆಯ ನಿರ್ದೇಶಕರೂ ಆಗಿದ್ದ ಃ.ಎ. Sಚಿಟಿಜesಚಿಡಿಚಿ ಅವರು ಸಂಪಾದಿಸುವಂತೆ ಏರ್ಪಾಡು ಮಾಡಿ ೧೯೭೩ರಲ್ಲಿ ಪ್ರಕಟಿಸಿದೆ. ಈ ಅಪರೂಪದ ಸಂಸ್ಕೃತ ನಾಟಕದ ಪ್ರತಿಯನ್ನು ನನ್ನ ವಿನಂತಿಯಂತೆ ಡಾ. ಲೀಲಾ ಅವರು ಮುಂಬೈ ವಿಶ್ವವಿದ್ಯಾಲಯದ ಲೈಬ್ರರಿಯಲ್ಲಿ ಹುಡುಕಿ, ಜೆರಾಕ್ಸ್‌ ಮಾಡಿಸಿ ನನಗೆ ಕಳಿಸಿದರು. ಆ ಬಗ್ಗೆ ಡಾ. ಲೀಲಾಗೆ ಋಣಿ.
ನಾಟಕದ ಸಂಪಾದಕರ ಪ್ರಕಾರ, ನಾಟಕ ಕರ್ತೃ ಗಂಗಾಧರನು ಉಲ್ಲೇಖಿಸಿದ ಸಮಕಾಲೀನ ಘಟನೆಗಳು, ಅದರಲ್ಲಿ ಬರುವ ವ್ಯಕ್ತಿಗಳೆಲ್ಲ ಐತಿಹಾಸಿಕವಾಗಿ ಸಮರ್ಪಕವಾಗಿವೆ. ಆಗ ಗುಜರಾತಿನಲ್ಲಿ ಮುಸ್ಲಿಂರ ಮೇಲೆ ಆಡಳಿತ (ಆಕ್ರಮಣ) ಆಗಿತ್ತು. ಅಹಮ್ಮದಾಬಾದ್ ರೂಪಗೊಂಡು ಸುಲ್ತಾನ ಮಹಮ್ಮದ್ ಶಹನು ಆಳುತ್ತಿದ್ದ. ಆದರೆ ಆ ಪ್ರದೇಶದ ಚಿಕ್ಕ ದೊಡ್ಡ ಸಂಸ್ಥಾನಗಳು ಅಸ್ತಿತ್ವಕ್ಕಾಗಿ ಹೋರಾಡುತ್ತಾ ಇದ್ದವು. ಕೆಲ ಬಾರಿ ಸುಲ್ತಾನನ ಆಕ್ರಮಣಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯೂ ಆಗಿವೆ. ಸ್ಥಳೀಯ ಇತಿಹಾಸದ ಜೊತೆಗೆ ಭೂಗೋಳ, ಪ್ರಾಕೃತಿಕ ಸ್ವರೂಪ, ಸಾಮಾಜಿಕ, ಆಚರಣೆಗಳ ಮೇಲೂ ‘ಗಂಗದಾಸ ಪ್ರತಾಪ ವಿಲಾಸ ಬೆಳಕು ಚೆಲ್ಲುತ್ತದೆ. ಕರ್ನಾಟಕಕ್ಕೆ ಸಂಬಂಧಪಟ್ಟ ಅಂಶಗಳನ್ನು ಮಾತ್ರ ಇಲ್ಲಿ ಎತ್ತಿಕೊಂಡಿದೆ.
ಒಂಬತ್ತು ಅಂಕಗಳ ಗಂಗದಾಸ ಪ್ರತಾಪ ವಿಲಾಸ ನಾಟಕದಲ್ಲಿ ನಡು ನಡುವೆ ಪುಷ್ಟಗಳು ನಷ್ಟವಾಗಿವೆ. ತಾಡಯೋಲೆಯ ಲಿಪಿ, ೧೬ನೇ ಶತಮಾನದಲ್ಲಿ ಗುಜರಾತ್‌ನಲ್ಲಿ ಪ್ರಚಲಿತವಿದ್ದ ದೇವನಾಗರಿ ಸಂಸ್ಕೃತ ನಾಟಕ ರಚನೆಯ ಯಾವತ್ತೂ ಲಕ್ಷಣಗಳನ್ನು ಹೊಂದಿದ್ದು ಭಾಷೆ ಸರಳವಾಗಿದೆ. ಸೂತ್ರಧಾರನ ಪ್ರವೇಶದ ಬಳಿಕ ನಾಟಕಕರ್ತೃ ಗಂಗಾಧರನು ಟೀಂ ಜೊತೆಗೆ ತನ್ನನ್ನು ಪರಿಚಯಿಸುವುದರ ಜೊತೆಗೆ ರಂಗದ ಮೇಲೂ ಬರುವಂತೆ ನೋಡಿಕೊಳ್ಳುತ್ತಾನೆ. ಅವನ ಹೇಳಿಕೆಯ ಪ್ರಕಾರ ಪ್ರತಾಪದೇವರಾಯನು (ಇಮ್ಮಡಿದೇವರಾಯ) ಗತಿಸಿದ ಬಳಿಕ ಅವನ ಮಗ ಮಲ್ಲಿಕಾರ್ಜುನನು (೧೪೪೬-೬೫) ಪಟ್ಟಕ್ಕೆ ಬರುತ್ತಾನೆ. ಆತನು ಬಿದರದ (ದಕ್ಷಿಣ ಸುರತ್ರಾಣ) ಸುಲ್ತಾನ ಮತ್ತು ಓರಿಸ್ಸಾದ ಗಜಪತಿಯನ್ನು ಸೋಲಿಸುತ್ತಾನೆ. ಒಮ್ಮೆ ಓಲಗದಲ್ಲಿ ಮಲ್ಲಿಕಾರ್ಜುನನು ‘ತನ್ನ ತಂದೆಯ ಕಾಲದಲ್ಲಿ ಪ್ರಸಿದ್ಧನಾಗಿದ್ದ ಕವಿಗಂಗಾಧರನು ಎಲ್ಲಿದ್ದಾನೆ? ಎಂದು ಕೇಳಿದಾಗ, ಇಲ್ಲಿಯ ಓಲಗದಲ್ಲಿ ಬಿರುದು, ಬಾವಲಿ, ಧನಕನಕಾದಿಗಳ ಮನ್ನಣೆ ಪಡೆದು, ಇತರೆ ಕವಿಗಳನ್ನು ಸೋಲಿಸುವ ಉದ್ದೇಶದಿಂದ ದೇವರಾಯನ ಅನುಮತಿ ಪಡೆದೇ ಹೊರಟ ಸಾಹಿತ್ಯ ದಿಗ್ವಿಜಯಕ್ಕೆ.
ದಿವ್ಯರತ್ನರಚಿತ ಕುಂಡಲ ಕಟಕ ಹಾರ ಕನಕದಂಡ ಗಂಡಭೇರುಂಡ ಬಿರುದಾಂಕಿತ ಅರಸನ ಅಂಕಿತವಿದ್ದ ತೊಡರಿನಿಂದ ಭೂಷಿತನಾಗಿದ್ದ. ಅದರಲ್ಲಿ ತೋಡರದಲ್ಲಿ ‘ರಾಜಕವಿ ಪುತ್ತಲಾಂಕಿತ ಬಿರುದು ಬೇರೆ ಇತ್ತಂತೆ! ಇದನ್ನು ಕೊಡಮಾಡಿದ ಸನ್ಮಾನವನ್ನು ಪಡೆದೇ ವಿದ್ಯಾಬಲದ ದಿಗ್ವಿಜಯಕ್ಕಾಗಿ ಹೊರಟನೆಂದು ಕೇಳಿದ್ದೆ. ಈಗ ಆತ ಎಲ್ಲಿದ್ದಾನೆ? ಎಂದು ಅರಸು ಕುತೂಹಲದಿಂದ ವಿಚಾರಿಸಿ ಕೊಂಡಾಗುತ್ತರದ ಕಡೆಯಿಂದ ಬಂದು ಆ ಸಭೆಯಲ್ಲಿದ್ದ ವೈತಾಲಿಕನೋರ್ವನು ಗಂಗಾಧರನ ಆ ಮುಂದಿನ ಸಾಹಸ ನಿವೇದಿಸುತ್ತಾನೆ.
ದ್ವಾರಕಾನಗರಿಗೆ ಹೋಗಿ ಅಹಮ್ಮದಾಬಾದನಗರದಲ್ಲಿ ಗುರ್ಜರ ಸುರತ್ರಾಣನ ಮಹಾದ್ವಾರದಲ್ಲಿ ಬಿರುದು ತೊಡರೂ ಇದ್ದ ಎಡಗಾಲನ್ನು ಮುಂದಿಟ್ಟು ಹೋಗಿ ಸಭಾಕೋವಿದರನ್ನೆಲ್ಲ ತನ್ನ ವಿದ್ವತ್ತೆಯಿಂದ ಮೂಕರನ್ನಾಗಿ ಅಲ್ಲಿ ಆರು ತಿಂಗಳು ಇದ್ದು ಪಾವಾಚಲದ ಚಂಪಕನಗರದ ಗಂಗದಾಸ ಭೂಪತಿಯನ್ನು ಕಾಣಲು ಬಂದೆ ಎಂದು ಹೇಳಿಕೊಳ್ಳುತ್ತಾನೆ. ಆತನ ಪಾಂಡಿತ್ಯದಿಂದ ಪ್ರಭಾವತಿನಾಗಿ ಅರಸನು ಅವನನ್ನು ಬಗೆಬಗೆಯಲ್ಲಿ ಸತ್ಕರಿಸುತ್ತಾನೆ. ಬಳಿಕ ತಾನು (ಸೋಲಿಸಿದ ಸುಲ್ತಾನನ ದುಷ್ಕೃತ್ಯವನ್ನು) ಹಿಮ್ಮೆಟ್ಟಿಸಿದ ಸುಲ್ತಾನನ ಬಗ್ಗೆ ಆ ವಿಜಯೋತ್ಸವದ ಬಗ್ಗೆ ಒಂದು ನಾಟಕ ಬರೆ! ಎಂದು ಕವಿ ಗಂಗಾಧರನಿಗೆ ಹೇಳುತ್ತಾನೆ. ಆ ಪ್ರಕಾರ ಗಂಗಾಧರನು ‘ಗಂಗದಾಸ ಪ್ರತಾಪ ವಿಳಾಸವೆಂಬ ನಾಟಕವನ್ನೂ ಬರೆಯುತ್ತಾನೆ. ಆದರೆ ಆ ನಾಟಕದ ಅಭಿನಯವನ್ನು ಏರ್ಪಡಿಸುವುದು ಹೇಗೆ? ಎಂದು ಅರಸನಿಗೆ ಸಮಸ್ಯೆ! ತಿರುಗಿ ಕವಿ ಗಂಗಾಧರನೇ ಸಹಾಯಕ್ಕೆ ಬರುತ್ತಾನೆ. ತನ್ನ ತಾಯ್ನಾಡು ಕರ್ಣಾಟಕದಿಂದ ತರಿಸಿದ ತಂಡ / ಟೀಮ್ ಜೊತೆಗೆ ಈ ನಾಟಕವನ್ನು ರಂಗದ ಮೇಲೆ ತರುತ್ತಾನೆ. ತನ್ನ ಹೆಚ್ಚಿನ ಸುದೈವದಿಂದ ದಸರಾ ಮಹೋತ್ಸವ (‘ಮಹಾಕಾಲೀ ಮಹಾ ಮಹೋತ್ಸವ) ಸಂದರ್ಭದಲ್ಲಿ ಈ ನಾಟಕದ ಪ್ರದರ್ಶನವಾಗುತ್ತದೆ ಎಂದು ಹೇಳಿ ರಂಗದಿಂದ ನೇಪಥ್ಯಕ್ಕೆ ಹೊರಡುವ ದೃಶ್ಯವನ್ನು ಸಂಯೋಜಿಸಿದ್ದಾನೆ. ತನ್ನ ಯಶಸ್ಸಿನ ಬಗ್ಗೆ ಮಲ್ಲಿಕಾರ್ಜುನ ದೊರೆಗೆ ಅರುಹಿದ ವೈತಾಲಿಕನ ವಿವರಣೆಯಿಂದ ಆ ಅರಸನು ಸಂತುಷ್ಟನಾಗಿ ಯೋಗ್ಯ ರೀತಿಯಿಂದ ಆತನನ್ನು ಸನ್ಮಾನಿಸಿದ ವಿಚಾರವನ್ನು ಉಲ್ಲೇಖಿಸಲು ಗಂಗಾಧರನು ಮರೆತಿಲ್ಲ ‘ಸಾಧು ಕಥಿತಂ ! ಅಸ್ಮತ್ ಚಿಂತಾ ದೂರೀಕೃತಾ ಎಂದು ಮಲ್ಲಿಕಾರ್ಜುನ ಹೇಳಿದನಂತೆ. ಒಳ್ಳೇ ಮಾತು ಹೇಳಿದ್ದೆ. ನಮ್ಮ ಚಿಂತೆ ದೂರ ಆಯಿತು.
ಈ ನಾಟಕಕ್ಕೆ ಗಂಗದಾಸ ಪ್ರತಾಪ ವಿಲಾಸವೆಂದು ಕರೆಯಲು ಕಾರಣ ಕವಿಯ ಆಶ್ರಯದಾತ ಈ ಅರಸನ ಗಂಗದಾಸನ, ರಾಜಮಹಿಷಿಯ ಹೆಸರು ಪ್ರತಾಪದೇವಿ. ನಾಟಕದಲ್ಲಿ ಅರಸ-ಅರಸಿಯರ ಪ್ರಣಯ ಕಲಹ, ವಿದೂಷಕನ ಹಾಸ್ಯ, ಅರಸನ ಶೌರ್ಯ, ಸೋತವರ ಕರುಣ ಇತ್ಯಾದಿ ನವರಸಗಳನ್ನು ತರಲು ಕವಿಯು ಶ್ರಮಿಸಿದ್ದಾನೆ.
ಸುಲ್ತಾನನೊಂದಿಗೆ ಯುದ್ಧ ಸಂಭವಿಸಲು ಕಾರಣ ಗುಜರಾತನ್ನು ಆಳುತ್ತಿರುವ ಈ ಅಹಮ್ಮದನ ಮಗ ಮಹಮ್ಮದನು ಗಂಗದಾಸನಿಗೆ ‘ಮಗಳನ್ನು ಕೊಟ್ಟು ಮದುವೆ ಮಾಡು ಎಂದು ಈಗಾಗಲೇ ಆ ರೀತಿ ಮಗಳಂದಿರನ್ನು ಕೊಟ್ಟು ತಮ್ಮ ತಲೆ ಮತ್ತು ರಾಜ್ಯ ಉಳಿಸಿಕೊಂಡ ನಾನು ಮತ್ತು ವೀರಮ ಎಂಬ ತುಂಡರಸರ ಮುಖಾಂತರ ಸಂದೇಶ ಕಳಿಸುತ್ತಾನೆ. ಇದರಿಂದ ಕೋಪಾವಿಷ್ಟನಾದ ಗಂಗದಾಸನು ಮ್ಲೇಚ್ಛರಿಗೆ ಹೊಟ್ಟೆಯ ಮಕ್ಕಳನ್ನು ಕೊಡಮಾಡಿದವರ ಜೊತೆ ಏನು ಮಾತುಕತೆ? ಎಂಬ ಸಂದೇಶವನ್ನು ಕಳಿಸುತ್ತಾನೆ. ಇದನ್ನು ಅವಮಾನವೆಂದು ಆ ಅರಸರು ಸುಲ್ತಾನನ ಬಳಿ ಹೇಳುತ್ತಾರೆ. ಸರಿ ಸುಲ್ತಾನನು ಗಡ್ಡ ನೀವಿಕೊಳ್ಳುತ್ತಲೆ ಶುದ್ಧ ಸಂಸ್ಕೃತದಲ್ಲಿ ಗಂಗದಾಸನಿಗೆ ಬುದ್ಧಿ ಕಲಿಸುವುದಾಗಿ ಪ್ರತಿಜ್ಞೆ ಮಾಡುತ್ತಾನೆ. ಚಂಪಾನೇರ ಅರಸನಾದ ಗಂಗದಾಸನ ವಿರುದ್ಧ ಸೈನ್ಯ ಕಳಿಸುತ್ತಾನೆ.
ಯುದ್ಧಕ್ಕೆ ಗಂಗದಾಸನು ಸಿದ್ಧನಾಗಿಯೇ ಇರುತ್ತಾನೆ. ಇದಕ್ಕೆ ಕಾರಣ ಮಾಳವದ ಸುಲ್ತಾನನು ಅಂದೆ ಮುಹಮ್ಮದ ಖಿಲ್‌ಜಿಯು, ಅಹಮ್ಮದಾಬಾದ ಸುಲ್ತಾನನ ಕಡುವೈರಿ! ಹೀಗಾಗಿ ಗಂಗದಾಸನಿಗೆ ಬೇಕಾದ ಎಲ್ಲ ಬೆಂಬಲ, ಸೈನ್ಯಸಹಿತ ಕೊಡಮಾಡಿರುತ್ತಾನೆ. ಕೊನೆಗೆ ಅಹಮ್ಮಬಾದ ಸುಲ್ತಾನನನ್ನು ಹಿಮ್ಮೆಟ್ಟಿಸುವಲ್ಲಿ ಗಂಗದಾಸನು ಯಶಸ್ವಿ ಆಗುತ್ತಾನೆ.
ಮೊದಲಲ್ಲಿ ಹೇಳಿದಂತೆ ಗುಜರಾತ್‌ನಲ್ಲಿ ಮುಸ್ಲಿಂ ಆಕ್ರಮಣವಾಗಿ ಅವರ ರಾಜ್ಯ ನೆಲೆಗೊಂಡ ಕಾಲದ ಈ ಘಟನೆಯನ್ನು ರೂಪಿಸಿದ ನಾಟಕ ವಿಶ್ವಸನೀಯ ಐತಿಹಾಸಿಕ ವಿವರಗಳನ್ನು ಒಳಗೊಂಡಿದೆ. ಕರ್ನಾಟಕದ ಮಟ್ಟಿಗೆ ವಿಜಯನಗರ ಕಾಲದ ನಾಟಕಕಾರ, ತನ್ನ ಹಿನ್ನೆಲೆಯ ಬಗ್ಗೆ ಅಭಿಮಾನದಿಂದ ಹೇಳಿಕೊಂಡದ್ದು. ತನ್ನ ತಾಯ್ನಾಡಿನ ಇಬ್ಬರು ಅರಸರನ್ನು ಸ್ಮರಿಸಿದ್ದೇ ಅಲ್ಲದೆ ಸಂಸ್ಕೃತದಲ್ಲಿ ಚೆನ್ನಾಗಿ ಅಭಿನಯಿಸಬಲ್ಲ ನಟ ನಟಿಯರ ತಂಡವನ್ನೂ ಕರ್ನಾಟಕದಿಂದ ಕರೆದೊಯ್ದು ಅಲ್ಲಿ ಮಹಾನವಮಿ ಹೊತ್ತಿಗೆ ಆ ನಾಟಕ ಮಾಡಿಸಿದ್ದು ವಿಶೇಷ. ಕರ್ನಾಟಕ-ಗುಜರಾತ್‌ನ ಸಾಂಸ್ಕೃತಿಕ ಸಂಬಂಧದ ಮೇಲೆ ಬೆಳಕು ಚೆಲ್ಲುವ ಈ ನಾಟಕ, ರಾಷ್ಟ್ರಕೂಟರ ಕಾಲದ ತ್ರಿವಿಕ್ರಮಭಟ್ಟನ ನಳಚಂಪು ಮತ್ತು ಚಾಲುಕ್ಯ ಮುಮ್ಮಡಿ ಸೋಮೇಶ್ವರನ ‘ಮಾನಸೋಲ್ಲಾಸದಲ್ಲಿ ಬರುವ ಹಲವಾರು ಸಾಮಾಜಿಕ ಜೀವನದ ನೋಟಗಳನ್ನು ಪ್ರತಿಬಿಂಬಿಸುತ್ತದೆ ಎನ್ನುವುದು ಕುತೂಹಲಕಾರಿಯಾಗಿದೆ.
ನಾಟಕದ ಕೆಲವು ವೈಶಿಷ್ಟ್ಯಗಳು
೧)                 ಸುಲ್ತಾನ ಮಹಮ್ಮದನು ಅವನ ಬಂಟರೆಲ್ಲ ಸಂಸ್ಕೃತದಲ್ಲಿ ಮಾತನಾಡುತ್ತಾರೆ. ಪದ್ಯ ಹಾಡುತ್ತಾರೆ.
೨)                 ರಂಗಸಜ್ಜಿಕೆ ಅಪರೂಪದ್ದು. ಅದು ಕರ್ನಾಟಕದಿಂದ ಎರವಲು ಪಡೆದದ್ದೇ ಆದೆ ಗಂಗಾಧರ ಕವಿಯೇ ಅದರ ರಚನೆಯನ್ನು ಸೂಚಿಸಿದ್ದಾದರೆ, ಎರಡು ಸ್ತರಗಳಲ್ಲಿ ಅಭಿನಯ, ಸೀನು ಸಾಗಿದಂತೆ ತೋರುತ್ತದೆ. ಮೆರವಣಿಗೆ, ದೇವಸ್ಥಾನದಲ್ಲಿ ಪೂಜೆ ಒಂದೆಡೆ ಯುದ್ಧ ದೃಶ್ಯ-ಸೇನೆಗಳ ಸಾಗಾಟ ಅರಸರ ಒಡ್ಡೋಲಗ ಇನ್ನೊಂದೆಡೆ. ಎರಡು ಜೊತೆಗೆ ನಡೆದಿರುವಂತೆ ಅಟ್ಟಾಲಕ ಅಟ್ಟಣಿಗೆ ಅಥವಾ ರಂಗದ ಪಾರ್ಶ್ವದಲ್ಲಿ ದೇವಿಯ ಪೂಜೆ ವಿದೂಷಕ ಸರದಾರರ ಸಂಭಾಷಣೆ ಇತ್ಯಾದಿಗಳು ನಾಟಕದಲ್ಲಿ ಬರುತ್ತವೆ.
೩)                 ೧೫ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಸಂಸ್ಕೃತ ನಾಟಕವಾಡುವ ತಂಡಗಳು ಇದ್ದವು. ಬೇರೆ ರಾಜ್ಯಗಳ ಅರಸರ ಆಮಂತ್ರಣ ಬಂದರೆ ಅಲ್ಲಿ ಹೋಗಿ ಅಭಿನಯಿಸುವ ಪರಿಣತರು ಇದ್ದರು. ಸಂಸ್ಕೃತವು ಅಖಿಲ ಭಾರತ ಸಂಪರ್ಕ ಭಾಷೆಯಾಗಿದ್ದರಿಂದ ದೂರದ ನಾಡುಗಳಲ್ಲೂ ಅವರಿಗೆ ತೊಂದರೆ ಇರಲಿಲ್ಲ. ಎರಡನೆಯ ದೇವರಾಯನ ಕೃತಿಯೆಂದೇ ಖ್ಯಾತವಾದ ಸಂಸ್ಕೃತಗ್ರಂಥ ಮಹಾನಾಟಕ ಸುಧಾನಿಧಿ ರಂಗಸಜ್ಜಿಕೆ ಪರಿಕರಗಳ ಕುರಿತ ಕೃತಿಯಾಗಿದೆ. ನಾಟಕ ಪ್ರಕಾರವು ಸಂಸ್ಕೃತದಲ್ಲಿ ಉತ್ತಮ ಕಲಾ ಮಾಧ್ಯಮವಾಗಿ ಆ ಕಾಲದ ವಿಜಯನಗರದಲ್ಲಿ ಬೆಳೆದರೆ ಸಾಕು.
೪)                 ಕೊನೆಯಲ್ಲಿ ಕೀರ್ತಿ, ಅಪಕೀರ್ತಿಯರೆಂಬ ಇಬ್ಬರು ಬಂದು ಗಂಗದಾ ಮಹಮ್ಮದ ಸುಲ್ತಾನರ ಒಡನಾಡಿಗಳು ತಾವಿದ್ದು ಪರಸ್ಪರ ಪರಿಚಯ ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ.
೫)                 ಕರ್ನಾಟಕದ ವಿಶಿಷ್ಟ ವೇಷಭೂಷಣದಲ್ಲಿದ್ದ ನಾಟಕಕಾರನನ್ನು ಶೋತೃಗಳಿಗೆ ಪರಿಚಯಿಸಲಾಗಿದೆ. ಮುತ್ತಿನ ಹಾರ, ಬಳೆ, ಕಂಠಾಭರಣಗಳು, ಮಲ್ಲಿಗೆ ದಂಡೆಯಿಂದ ಅಲಂಕೃತ ಕೂಲದು ಕಸ್ತೂರಿ ತಿಲಕ ತಾಂಬೂಲರಂಜಿತ ಕೆಂದುಟಿ ಇವೆಲ್ಲ ಗುಜರಾಥಿಗಳಿಗೆ ಅಪರಿಚಿತವಿದ್ದವು.

ಆಧಾರಸೂಚಿ
೧.                           ಗಂಗದಾಸ - ಪ್ರತಾಪವಿಲಾಸ  ನಾಟಕಮ್, (ಸಂಸ್ಕೃತ ನಾಟಕ).
                              ಂ ಊisoಡಿiಛಿಚಿಟ ಠಿಟಚಿಥಿ bಥಿ ಉಚಿಟಿgಚಿಜhಚಿಡಿಚಿ, (ಇಜ) ಃhogiಟಚಿಟ ಎಚಿಥಿಚಿhಚಿಟಿಜ bhಚಿi sಚಿಟಿಜesಚಿಡಿಚಿ ಃಚಿಡಿoಜಚಿ ಔಡಿieಟಿಣಚಿಟ seಡಿies,೧೯೭೩.
೨.                           ಓತ್ತೇಯ ಭಾರತೀಯ ಭಾಷೆ - ಕೃತಿಗಳಲ್ಲಿ ಕರ್ನಾಟಕ ಸಂಸ್ಕೃತಿಯ ಕೆಲವು ಉಲ್ಲೇಖಗಳು : ಡಾ ವಿ. ಶಿವಾನಂದ, ಸಂಶೋಧನ (ಡಾ|| ಎಂ. ಚಿದಾನಂದ ಮೂರ್ತಿ ಗೌರವ ಸಂಪುಟ, (ಸಂ. ಲಕ್ಷ್ಮಣ ತೆಲಗಾವಿ) ಬೆಂಗಳೂರು ೧೯೯೧.
೩.                           ಂ ಅoಟಿಛಿise isoಡಿಥಿ oಜಿ ಏಚಿಡಿಟಿಚಿಣಚಿಞಚಿ, ಆಡಿ. Suಡಿಥಿಚಿಟಿಚಿಣh. ಗಿ. ಏಚಿmಚಿಣh, ಃಚಿಟಿgಚಿಟoಡಿe, ೪ನೇ ಮುದ್ರಣ, ೨೦೦೮.
೪.                           ಕನ್ನಡ ವಿಶ್ವಕೋಶ, ಸಂಪುಟ ೬, ಮೈಸೂರು, ೧೯೭೩.

? ೧೧೦, ‘ಶಶಿಕಿರಣ, ೧೮ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು-೫೬೦೦೫೫.