Wednesday, June 25, 2014

ಭಾರತೀಯ ಮಹಾಕಾವ್ಯಗಳಲ್ಲಿ ವೈಜ್ಞಾನಿಕ ಹೊಳಹು

ರಾಮಾಯಣ ಮತ್ತು ಮಹಾಭಾರತದಲ್ಲಿ ಕಂಡುಬರುವ ಕೆಲವು ವಿಜ್ಞಾನಕಲ್ಪನೆಗಳು












  ಡಾ.  ಸಿ.ಎಂ. ರಾಮಕೃಷ್ಣ..Ph.D
4 Cricket Lane, Cherry Hill
, NJ 08003-1810

Tel. No: 856-751-0486 
e-mail : ramroja@gmail.com 

(   ಡಾ.ಸಿ..ಎಂ.ರಾಮಕೃಷ್ಣ  ಬೆಂಗಳೂರಲ್ಲಿ ಹುಟ್ಟಿ ಬೆಳೆದವರು.ಇಂಡಿಯನ್‌ ಇನಸ್ಟಿಟ್ಯೂಟ್‌ ಅಫ್ ಸೈನ್ಸ್‌ನಲ್ಲಿ ಎಂಎಸ್‌ ಮುಗಿಸಿ ಭಾಭಾ ಅಣುಶಕ್ತಿ   ಕೇಂದ್ರದಲ್ಲಿ  ಕೆಲಸ ಮಾಡಿ ಉನ್ನತ ಶಿಕ್ಷಣಕ್ಕಾಗಿ ಅಮೇರಿಕಕ್ಕೆ ಬಂದವರು  ಹಲವು ದಶಕಗಳಿಂದ ಅನಿವಾಸಿ ಭಾರತಿಯರು.ಮಾತೃಭಾಷೆ ತಮಿಳು, ಪತ್ನಿಭಾಷೆ ತೆಲುಗು,ಬಾಲ್ಯದ ಭಾಷೆಯಾದ ಕನ್ನಡದಲ್ಲಿ ಆಸಕ್ತಿ.  ಈಗ ಇಲ್ಲಿಯೇ ನಿವೃತ್ತ ಜೀವನ ಸಾಗಿಸುತಿದ್ದಾರೆ. ವಿಚಾರವಾದಿಯಾದ ಇವರ ಹಲವು ಬರಹಗಳು ಪ್ರಕಟವಾಗಿವೆ. ಅನಿವಾಸಿ ಕನ್ನಡಿಗರ ಕೂಟದಲ್ಲಿ ಸಕ್ರಿಯರು. ಇವರದೊಂದು ಲೇಖನ ನಿಮ್ಮಮುಂದಿದೆ.)


 ರಾಮಾಯಣ ಮತ್ತು ಮಹಾಭಾರತಗಳೆರಡೂ ಭಾರತದೇಶದ ಇತಿಹಾಸಗಳೆಂದು ಪ್ರಸಿದ್ಧವಾಗಿವೆ. ಇಲ್ಲಿ ಇತಿಹಾಸವೆಂದರೆ ಒಂದು (ವಾಸ್ತವಿಕ) ಚರಿತ್ರೆಯೇ ಆಗಿರಬೇಕಾಗಿಲ್ಲ. ಇತಿಹಾಸ (ಇತಿ-ಹ-ಆಸ = ಸಂಪ್ರದಾಯದ ಪ್ರಕಾರ ಹಾಗಿತ್ತು.) ಎಂದರೆ, ಪ್ರಾಚೀನ ಪ್ರಸಂಗಗಳ ಸಾಂಪ್ರದಾಯಿಕ ಉಪಾಖ್ಯಾನಗಳು, ಎಂದು. ಆದುದರಿಂದ, ಇತಿಹಾಸದಲ್ಲಿ ಕಾಲ್ಪನಿಕ ಕಥೆಗಳು, ಪೌರಾಣಿಕ ಕಥೆಗಳು, ಪ್ರಾಚೀನದ ಸಾಮಾನ್ಯ ಘಟನೆಗಳ ಸಾಂಪ್ರದಾಯಿಕ ನಿರೂಪಣೆ, ಇತ್ಯಾದಿ ಅಡಗಿರಬಹುದು. ರಾಮಾಯಣವೂ, ಮಹಾಭಾರತವೂ ಈ ಗುಂಪಿಗೆ ಸೇರಿದ ಕೃತಿಗಳು. ರಾಮಾಯಣ, ಮಹಾಭಾರತ ಕಥೆಗಳಲ್ಲಿ ಕೆಲವು ಭಾಗಗಳು, ಕೆಲವು ಪ್ರಸಂಗಗಳು ಯಥಾರ್ಥವಾಗಿರಬಹುದು. ಆದರೆ, ಅದು ನಮಗೆ ತಿಳಿಯದು; ಏಕೆಂದರೆ, ಆ ವಿಚಾರವಾಗಿ ನಿರ್ದಿಷ್ಟವಾದ ಯಾವ ಆಧಾರಗಳೂ ನಮಗೆ ದೊರೆತಿಲ್ಲ. ಅಲ್ಲಿ ಇಲ್ಲಿ ಸ್ಥಳಪುರಾಣಗಳೆಂದು ಪ್ರಸಿದ್ಧವಾದ ಕೆಲವು ಕಥೆಗಳನ್ನು ಕೇಳುತ್ತೇವೆ. ಆದರೆ ಅವುಗಳೂ ಸಹ ಕೇವಲ ಪುರಾಣಕಥೆಗಳೇ.  ಅವುಗಳಿಗೆ ಆರ್ಖಿಯಲಾಜಿಕಲ್ಪ್ರಾಪ್ತಿಗಳ ಆಸರೆಯಿಲ್ಲ. ಆದುದರಿಂದ, ರಾಮಾಯಣವೂ, ಮಹಾಭಾರತವೂ ಬಹುಮಟ್ಟಿಗೆ ಕಾಲ್ಪನಿಕ ಅಥವಾ ಪೌರಾಣಿಕ ಕಥೆಗಳೇ. ಈ ಕಥೆಗಳಲ್ಲಿ ಅನೇಕ ಅಪ್ರಾಕೃತ ಘಟನೆಗಳು, ಅಸಾಧ್ಯಕರವಾದ ದೃಷ್ಟಾಂತಗಳು ವರ್ಣಿಸಲ್ಪಟ್ಟಿವೆ. ಉದಾಹರಣೆಗೆ,

ರಾಮಾಯಣದಲ್ಲಿ:  ಸಗರ ಮಹಾರಾಜನ ಅರವತ್ತು ಸಾವಿರ ಮಕ್ಕಳು ಭೂಮಿಯನ್ನು ಅಗೆದು ಸಾಗರವನ್ನು ನಿರ್ಮಾಣ ಮಾಡಿದುದು, ಅಗ್ನಿಕುಂಡದಿಂದ ಅಗ್ನಿಪುರುಷನೆದ್ದುಬಂದು ದಶರಥನಿಗೆ "ದಿವ್ಯ" ಪಾಯಸವನ್ನು ಕೊಡುವುದು, ಶಿಶು ಆಂಜನೇಯನು ಉಷಃಕಾಲದ ಹೊಂಬಣ್ಣದ ಸೂರ್ಯವನ್ನು ಹಣ್ಣೆಂದು ಭ್ರಮಿಸಿ ಅದನ್ನು ಕೀಳಲು ಆಕಾಶಕ್ಕೆ ಹಾರಿದುದು, ಹತ್ತುತಲೆಗಳುಳ್ಳ ರಾವಣ, ಸಂಜೀವಿನಿ ಮೂಲಿಕೆಗಳು, ಅಂತರಿಕ್ಷದಲ್ಲಿ ಸಂಚರಿಸುವ ಶಕ್ತಿಯುಳ್ಳ ಪುಷ್ಪಕವಿಮಾನ, ಬ್ರಹ್ಮಾಸ್ತ್ರ, ಸರ್ಪಾಸ್ತ್ರ, ಮುಂತಾದ ನಾನಾ ಅಸ್ತ್ರಗಳು, ಇತ್ಯಾದಿ.   ಹಾಗೆಯೇ,
ಮಹಾಭಾರತದಲ್ಲಿ:  ಗಾಂಧಾರಿ ನೂರು ಮಕ್ಕಳನ್ನು ಪಡೆಯುವುದು, ಅರ್ಜುನನು ದೇವಲೋಕದಿಂದ ಐರಾವತವನ್ನು ಭೂಲೋಕಕ್ಕೆ ಕರೆತಂದುದು, ವಿಷಸರ್ಪಗಳಿಂದ ಕಚ್ಚಿಸಲ್ಪಟ್ಟರೂ ಭೀಮನು ಸುರಕ್ಷಿತವಾಗಿರುವುದು, ಸಂಜಯನು, ಕುರುಕ್ಷೇತ್ರ ರಣರಂಗದಲ್ಲಿ ನಡೆಯುತ್ತಿರುವ ಕೌರವ-ಪಾಂಡವರ ಯುದ್ಧವನ್ನು ಪ್ರತ್ಯಕ್ಷವಾಗಿಯೇ ನೋಡುತ್ತಿರುವನೋ ಎಂಬಂತೆ, ಅರಮನೆ ಯಲ್ಲಿಯೇ ಕುಳಿತು ಧೃತರಾಷ್ಟ್ರನಿಗೆ ಯುದ್ಧಘಟನೆಗಳ ಪ್ರವಹವರದಿಯನ್ನು (running commentary).ಕೊಡುವುದು, ಶಿಖಂಡಿ ಪ್ರಕರಣ, ಭೀಷ್ಮನ ಇಚ್ಛಾಮರಣ, ಇತ್ಯಾದಿ.

 
ಈ ಕಲ್ಪನಾಕಥೆಗಳಲ್ಲಿ ಕೆಲವು "ವಿಜ್ಞಾನಕಲ್ಪನೆಗಳು" ಎಂದು ವ್ಯಾಖ್ಯಾನಿಸುವುದೇ ಈ ಲಘು ಬರವಣಿಗೆಯ ಉದ್ದೇಶ. ಹಾಗೆಯೇ, ಈ ಕಥೆಗಳಲ್ಲಿ ಕಂಡುಬರುವ ಕೆಲವು ವೈಜ್ಞಾನಿಕಾಂಶಗಳ ಮತ್ತು ಮಾನವೀಯ ಮನಶ್ಶಾಸ್ತ್ರದ, ಅಂದರೆ ಹ್ಯೂಮನ್ ಸೈಕಾಲಜಿ, ವಿಚಾರವಾಗಿಯೂ ಸ್ವಲ್ಪ ಚರ್ಚಿಸಲಾಗುವುದು.
 ರಾಮಾಯಣ-ಮಹಾಭಾರತ ಕಥೆಗಳನ್ನು ಓದಿದ ಅನೇಕರು, ಅದರಲ್ಲೂ ಸಂಪ್ರದಾಯಸ್ಥರು, ಮತಶ್ರದ್ಧೆಯುಳ್ಳವರು, ಮತ್ತು ಕೆಲವು ವಿದ್ವಾಂಸರು, ವಿಜ್ಞಾನಿಗಳೂ ಸಹ, ಅಲ್ಲಿ ವಿವರಿಸಿರುವ ಅಸಾಧ್ಯ ಘಟನೆಗಳು "ಆಗಿನ ಕಾಲದಲ್ಲಿ" ನಿಜವಾಗಿಯೂ ನಡೆದುವೆಂದು ನಂಬುತ್ತಾರೆ. ನಮ್ಮ ಹಿರಿಯರಿಂದ "ರಾಮಾಯಣಕಾಲದಲ್ಲಿ  (ತ್ರೇತಾಯುಗದಲ್ಲಿ)  ಕೋತಿ, ಕರಡಿ ಮೊದಲಾದ ಪ್ರಾಣಿಗಳು ಮಾತಾಡುತ್ತಿದ್ದುವು", "ರಾಮಾಯಣದ ಕಾಲದಲ್ಲಿ ಪುಷ್ಪಕ ವಿಮಾನವಿತ್ತು", "ಹಿಂದಿನ ಕಾಲದಲ್ಲಿ ಜನರೂ, ದೇವತೆಗಳೂ ಸ್ವರ್ಗಲೋಕಕ್ಕೂ ಭೂಲೋಕಕ್ಕೂ ಹೋಗಿಬಂದು ಮಾಡುತ್ತಿದ್ದರು" - ಇವೇ ಮುಂತಾದ ಹೇಳಿಕೆಗಳನ್ನು ನಾವೆಲ್ಲರೂ ಕೇಳಿದ್ದೇವೆ. ಸ್ವರ್ಗ ಎಂದರೇನು? ಸ್ವರ್ಗಲೋಕ ಇರುವುದು ನಿಜವೇ? ಇದ್ದರೆ, ಎಲ್ಲಿರಲು ಸಾಧ್ಯ? ನರಕವಂತೂ ಒಂದಲ್ಲ, ಎರಡಲ್ಲ! ಅತಲ, ವಿತಲ, ಸುತಲ, ತಲಾತಲ, ರಸಾತಲ, ಮಹಾತಲ, ಪಾತಾಲ ಎಂಬ ಏಳು ನರಕಗಳು ಭೂತಲದಲ್ಲಿರುವುದಾಗಿ ನಮ್ಮ ಶಾಸ್ತ್ರ, ಪುರಾಣಗಳಲ್ಲಿ ಹೇಳಿದೆ. ಇಂತಹ ಹೇಳಿಕೆಗಳು ಯಥಾರ್ಥವೇ, ಅಲ್ಲವೇ ಎನ್ನುವುದನ್ನು ಪರಿಶೀಲಿಸಬೇಕು. ಹಿಂದೆ, ಜನಗಳು ಭೂಮಿ ಚಪ್ಪಟೆಯಾಗಿದೆಯೆಂದೂ, ಆ ಚಪ್ಪಟೆ ನೆಲದಮೇಲೆ ಆಕಾಶವು ಒಂದು ದೊಡ್ಡ ಮೇಲ್ಛಾವಣಿಯೆಂದೂ ತಿಳಿದಿದ್ದರು. ಹಾಗೆ ಭಾವಿಸಿದ ಆಕಾಶದ ಮೇಲೆ ಸ್ವರ್ಗಾದಿ ದೇವಲೋಕಗಳೂ, ಚಪ್ಪಟೆಯಾದ ಭೂಮಿಯ ಕೆಳಗೆ ಎಲ್ಲಾ ನರಕಗಳೂ ಇರುವುವೆಂದು ಆಗಿನ ಜನರು ನಂಬಿದ್ದರು. ಈಗ ನಮಗೆ ವಿಜ್ಞಾನದಿಂದ ಸತ್ಯವು ತಿಳಿದಿದೆ. ಭೂಮಿಯು ಚಪ್ಪಟೆಯಾಗಿಲ್ಲ.  ಅದೊಂದು ಗೋಳ. ಆಕಾಶವು ಭೂಮಿಯ ಮೇಲೆ ಹೊದಿಸಿರುವ ಮೇಲ್ಛಾವಣಿಯಲ್ಲ; ವಸ್ತುತಃ, ಅದೊಂದು ಕೋಟಿಕೋಟಿ ಕೋಟ್ಯಾಂತರ ಸೂರ್ಯಗಳು, ಗ್ರಹಗಳು, ಗಾ~ಲಕ್ಸಿಗಳು, ಕ್ವೇಸ್ಹಾರ್ಗಳು, ಕಾಳರಂಧ್ರಗಳು, ಮುಂತಾದ ನಾನಾವಿಧ ನಭೋಮಂಡಲಗಳನ್ನು ಒಳಗೊಂಡ ಅಪಾರ ಶೂನ್ಯಪ್ರದೇಶ. ಆದುದರಿಂದ, ಸ್ವರ್ಗವು ಒಂದು ಕಾಲ್ಪನಿಕ ಪ್ರದೇಶ ಮಾತ್ರ. ಹಾಗೆಯೇ, ಭೂತಲದಲ್ಲಿರುವುದು ಕೇವಲ ದ್ರವೀಭೂತಶಿಲೆ, ಅಂದರೆ ಮ್ಯಾಗ್ಮ’, ಅಷ್ಟೆ; ನರಕಗಳಲ್ಲ! ಹಾಗೆಯೇ, ಇಂದಿನ ಆಕಾಶ - ಹಿಂದಿನ ಆಕಾಶ, ಇಂದಿನ ಭೂತಲ - ಹಿಂದಿನ ಭೂತಲ ಎಂದು ಬೇರೆ ಬೇರೆಯಾಗಿರುವುದು ಸಾಧ್ಯವೇ? ಪ್ರಕೃತಿನಿಯಮಗಳಿಗೆ ಆಗಿನ ಕಾಲ - ಈಗಿನ ಕಾಲ ಎಂಬ ಕಾಲಭೇದವುಂಟೆ? ಕೃತ, ತ್ರೇತಾ, ದ್ವಾಪರ ಮತ್ತು ಕಲಿಯುಗ ಎಂಬುವು ಸಹ ಕೇವಲ ಪೌರಾಣಿಕ ಕಾಲಭೇದವಲ್ಲದೆ ಚಾರಿತ್ರಿಕವಾದುವೇ? ಎಂಬೀ ಪ್ರಶ್ನೆಗಳನ್ನು "ನಂಬುವ" ಜನರು ಕೇಳುವುದೂ ಇಲ್ಲ, ಸ್ವತಃ ವಿಚಾರಿಸುವುದೂ ಇಲ್ಲ. ಈ ಕಾರಣದಿಂದ, ಮತ್ತೆ ಕೆಲವು ವೈಚಾರಿಕ ಚಿಂತನಶೀಲರು ಪುರಾಣ, ಇತಿಹಾಸಗಳಲ್ಲಿ ಸ್ವಲ್ಪವೂ ಯಥಾರ್ಥತೆ ಇಲ್ಲವೆಂದು ಅವುಗಳನ್ನು ಸಂಪೂರ್ಣವಾಗಿ ತೊರೆದು ಬಿಡುತ್ತಾರೆ. ಈ ಎರಡು ವಿಪರೀತ ಅಭಿಪ್ರಾಯಗಳೂ ಸರಿಯಾದುದಲ್ಲ.
 ಇತಿಹಾಸ, ಪುರಾಣಗಳಲ್ಲಿ ಬರುವ ಹಲವಾರು ಘಟನೆಗಳು, ಪ್ರಕರಣಗಳು ಅಸಾಧ್ಯವೂ, ಅಪ್ರಾಕೃತವೂ ಆದರೂ, ಅವುಗಳಲ್ಲಿ ಅರ್ಥವಿಲ್ಲದೇ ಇಲ್ಲ, ಅವುಗಳಿಂದ ನಮಗೆ ಪ್ರಯೋಜನವಿಲ್ಲದೆಯೂ ಇಲ್ಲ. ರಾಮಾಯಣ, ಮಹಾಭಾರತದಂತಹ ಮಹಾಕೃತಿಗಳಲ್ಲಿ, ಕವಿಗಳು ತಮ್ಮ ತಮ್ಮ ಕಲ್ಪನಾಶಕ್ತಿಯನ್ನೂ, ಕವಿಸ್ವಾತಂತ್ರ್ಯವನ್ನೂ ಯಥೇಚ್ಛವಾಗಿ ಉಪಯೋಗಿಸಿಕೊಂಡು, ಅನೇಕ ದೃಷ್ಟಾಂತಗಳನ್ನೂ, ಉಪಕಥೆಗಳನ್ನೂ ಅತಿ ಚಮತ್ಕಾರದಿಂದ ಸ್ವಾರಸ್ಯವಾಗಿ ವರ್ಣಿಸಿ, ಆ ಮೂಲಕ ಜನರಿಗೆ ಉಪದೇಶವನ್ನೂ, ಮಾರ್ಗದರ್ಶನವನ್ನೂ ನೀಡಿರುತ್ತಾರೆ. ಆ ಗತಕಾಲದಲ್ಲಿನ ಜನಗಳ ನಡೆನುಡಿ, ಜೀವನಕ್ರಮ, ಸಂಪ್ರದಾಯ, ಪದ್ಧತಿ ಇತ್ಯಾದಿಗಳನ್ನು ಓದುಗರಿಗೆ ಮಂದಟ್ಟಾಗುವಂತೆ ವರ್ಣಿಸಿದ್ದಾರೆ. ಅವುಗಳಲ್ಲಿ ಕೆಲವು ಉಪಮೇಯಗಳು, ಇನ್ನು ಕೆಲವು ರೂಪಕಗಳು, ಮತ್ತೆ ಕೆಲವು ಲಕ್ಷಣಗಳು , ಇತ್ಯಾದಿ. ಅಲ್ಲಿ ವರ್ಣಿಸಿರುವ ಅನೇಕ ಘಟನೆ, ಪ್ರಸಂಗಗಳಲ್ಲಿ, ಮಾನವನ ದೌರ್ಬಲ್ಯ, ಆಕಾಂಕ್ಷೆ, ಅಭಿಲಾಷೆ, ಮುಂತಾದ ಪ್ರಕೃತಿಸಹಜವಾದ ಸ್ವಭಾವಗಳು ಕಂಡುಬರುವುವು. ಅಂತಹ ದೌರ್ಬಲ್ಯಗಳನ್ನು ಜಯಿಸಲು, ಆಶಾಭಿಲಾಷೆಗಳನ್ನು ಪೂರೈಸಿಕೊಳ್ಳಲು, ಅಂದಿನ ಮಾನವನು ಕೈಗೊಳ್ಳುವ ಕಾಲ್ಪನಿಕ ಕಾರ್ಯಯೋಜನಾಕ್ರಮವನ್ನು ಕುರಿತಾದ ಕಥೆಗೆ  "ವೈಜ್ಞಾನಿಕ ಕಲ್ಪನಾಕಥೆ"  ಅಥವಾ  "ವಿಜ್ಞಾನಕಲ್ಪನೆ" " (science fiction)  ಎಂದು ಹೇಳುತ್ತೇವೆ.

ಮೊದಲು, ರಾಮಾಯಣದಲ್ಲಿ ಬರುವ ಕೆಲವು ವಿಜ್ಞಾನಕಲ್ಪನೆಗಳನ್ನು ಪರಾಮರ್ಶಿಸೋಣ:
 ಈಗಿನ ಕಾಲದಲ್ಲಿ, ಹೇಗೆ ಬಹು ಮಂದಿ ದಂಪತಿಗಳು ಮಕ್ಕಳಾಗಲಿಲ್ಲವೆಂದು ಕಳವಳಿಸುವರೋ, ಅದೇ ರೀತಿ, ಹಿಂದಿನ ಕಾಲದಲ್ಲಿಯೂ ಅನೇಕ ದಂಪತಿಗಳು ಸಂತಾನಪಡೆಯಲಾಗದೆ ಪರಿತಪಿಸುತ್ತಿದ್ದರು. ರಾಮಾಯಣದಲ್ಲಿ, ದಶರಥಮಹಾರಾಜನಿಗೆ ಮೂರು ಮಂದಿ ಮಡದಿಯರಿದ್ದರೂ, ಅವನು ಪುತ್ರಸಂತಾನವಿಲ್ಲದೆ ಕೊರಗುತ್ತಿದ್ದನು. ತನ್ನ ಕುಲಗುರು ವಸಿಷ್ಠಮಹರ್ಷಿಗಳ ಆದೇಶದಂತೆ, ಋಷ್ಯಶೃಂಗಮಹರ್ಷಿಗಳನ್ನು ತನ್ನರಮನೆಗೆ ಬರಮಾಡಿಕೊಂಡು, ಅವರ ಸಲಹೆಯ ಪ್ರಕಾರ, ದಶರಥರಾಜನು ಪುತ್ರಕಾಮೇಷ್ಠಿ ಯಾಗವನ್ನು ಮಾಡುತ್ತಾನೆ. ಆ ಯಾಗದಲ್ಲಿ ಪೂರ್ಣಾಹುತಿಯಾದಮೇಲೆ, ಅಗ್ನಿಕುಂಡದಿಂದ ಅಗ್ನಿದೇವನೇ ಪ್ರತ್ಯಕ್ಷನಾಗಿ ಬಂದು, ದಿವ್ಯಪಾಯಸದಿಂದ ತುಂಬಿದ ಒಂದು ಪಾತ್ರೆಯನ್ನು ದಶರಥನ ಕೈಗಿತ್ತು, ಆ ಪಾಯಸವನ್ನು ರಾಜನ ಮಡದಿಯರು ಭುಜಿಸಿದರೆ, ಅವನಿಗೆ ಅವರಲ್ಲಿ ಪುತ್ರಪ್ರಾಪ್ತಿಯಾಗುವುದೆಂದು ಹೇಳಿ ಅಂತರ್ಧಾನವಾಗುತ್ತಾನೆ. ಇದೊಂದು ಸಂಪೂರ್ಣ ಕಲ್ಪನಾಕಥೆ. ಆದರೆ, ಅದು ಸಾಮಾನ್ಯ ಕಲ್ಪನೆಯಲ್ಲ. ಅದೊಂದು ವಿಜ್ಞಾನಕಲ್ಪನೆ! ಅಗ್ನಿ ಇತ್ತ ಪಾಯಸವು ಆಧುನಿಕ ವೈದ್ಯಶಾಸ್ತ್ರದ "ಸಾಫಲ್ಯಮಾತ್ರೆ" ಅಂದರೆ ಫ಼ರ್ಟಿಲಿಟಿ ಪಿಲ್ನ ಪುರೋಗಾಮಿ (forerunner). . ಈ ದೃಷ್ಟಾಂತವು ಯಥಾರ್ಥವಲ್ಲದಿದ್ದರೂ, ಆ ಪ್ರಾಚೀನ ಕಾಲದಲ್ಲಿಯೂ ಜನರಿಗೆ (ಹೆಂಗಸರ) ಅಫಲತೆಗೆ (infertility ಗೆ)  ಒಂದು ಪರಿಹಾರವನ್ನು ಕಂಡು ಹಿಡಿಯಬೇಕೆಂಬ ಅಭಿಲಾಷೆಯಿತ್ತೆಂದು ತೋರಿಸುವುದು. ಇಲ್ಲಿ, ಒಂದಂಶವನ್ನು ಗಮನಿಸಬೇಕು. ಅಗ್ನಿಯು ಪಾಯಸವನ್ನು ನಿನ್ನ "ಮಡದಿಯರಿಗೆ ಕೊಡು" ಎಂದು ಹೇಳಿದನೇ ಹೊರತು, ದಶರಥನಿಗೆ "ನೀನು ಸೇವಿಸು" ಎಂದು ಹೇಳಲಿಲ್ಲ! ಅದರಿಂದ, ಅಫಲತೆಗೆ ಹೆಂಡತಿಯೇ ಕಾರಣ, ಗಂಡನಲ್ಲ, ಎಂಬ ತಪ್ಪು ನಂಬಿಕೆ, ತಪ್ಪು ಅಭಿಪ್ರಾಯವು ರಾಮಾಯಣಕಾಲದಲ್ಲೂ ಇತ್ತು, ಅಥವಾ ಆ ಅಭಿಪ್ರಾಯವು ನಮಗೆ ರಾಮಾಯಣಕಾಲದಿಂದಲೂ ಬಂದಿದೆ, ಎಂದು ತಿಳಿಯುವುದು.  ಈಗ ವಿಜ್ಞಾನದಿಂದ ನಮಗೆ ಸತ್ಯವು ತಿಳಿದಿದೆ: ಒಂದು ದಾಂಪತ್ಯದ ಅಫಲತೆಗೆ ಹೆಂಡತಿಯಾದರೂ ಕಾರಣವಿರಬಹುದು ಅಥವಾ ಗಂಡನಾದರೂ ಕಾರಣವಿರಬಹುದು. ವಾಸ್ತವವಾಗಿ, ದಶರಥನ ಮೂರು ಹೆಂಡತಿಯರೂ ಒಟ್ಟಿಗೆ ಬಂಜೆಯರಾಗಿರುವುದು ಹೆಚ್ಚು ಅಸಂಭವ. (ಇದರ ಸಾಮಾನ್ಯ ಸಂಭಾವ್ಯತೆ: ೧೨.೫ %. ಅದೇ, ದಶರಥನು ಅಫಲವತ್ತಾಗಿರುವ ಸಂಭಾವ್ಯತೆ: ೫೦ %.) ಆದುದರಿಂದ, ಬಹುಶಃ, ದಶರಥನೇ ತನ್ನ ಆನಪತ್ಯಕ್ಕೆ ಅಥವಾ ಅಸಂತಾನತೆಗೆ ಕಾರಣನಾಗಿದ್ದಿರಬಹುದು. (ಉದಾ: ಅತಿಯಾಗಿ ಅಡಿಗಡಿಗೆ ಸಂಭೋಗಿಸುವುದರಿಂದ ವೀರ್ಯಕಣದೆಣಿಕೆಯು ಕಡಿಮೆಯಾಗಿ, ಪುರುಷನ ಆನಪತ್ಯದ ಸಂಭಾವ್ಯತೆಯು ಹೆಚ್ಚಾಗುವುದು.) ಇಲ್ಲಿ, ಇನ್ನೊಂದು ವಿಷಯವು ಗಮನಾರ್ಹ ವಾದುದು: ಅಗ್ನಿದೇವನು ದಶರಥರಾಜನಿಗೆ ಇತ್ತುದು ಮಾತ್ರೆಯಲ್ಲ, ಭಸ್ಮವಲ್ಲ, ಲೇಹ್ಯವೂ ಅಲ್ಲ; ಕೇವಲ ಪಾಯಸ, ಒಂದು ತಿನಿಸು, ಆಹಾರ. ಇತ್ತೀಚೆಗೆ, ಕೆಲವು ಹಾರ್‌ವರ್ಡ್ಸಂಶೋಧಕರು ಹೇಗೆ ಸೂಕ್ತವಾದ ಆಹಾರಪದ್ಧತಿಯು ಸಫಲತೆಯನ್ನು (fertility) ) ಪರಿಣಾಮಿಸುವುದು (affects),  ಎಂಬುದನ್ನು ಕಂಡುಹಿಡಿದಿದ್ದಾರೆ  (Fertility & Diet – “Fat, Carbs And the Science of Conception”, Newsweek, December 10, 2007). ಕೆಲವು ವಿದ್ವಾಂಸರು ಅಗ್ನಿದತ್ತಪಾಯಸವನ್ನೇ ಪುರುಷವೀರ್ಯ ಎಂದು ಹೇಳುತ್ತಾರೆ. (ಹಾಗೆಂದರೆ, ದಶರಥನೇ ಅಫಲನೆಂದು ಹೇಳಿದಂತಾಯಿತು.) ಹಾಗೆ, ಪಾಯಸವನ್ನೇ ಪುರುಷವೀರ್ಯವೆಂದು ಭಾವಿಸಿದರೆ, ಅದು ದತ್ತವೀರ್ಯಗರ್ಭಾದಾನದ (conception by donor sperm)  ಅಥವಾ ಕೃತಕ ಗರ್ಭಾದಾನದ (artificial insemination ನಿನ) ಪುರೋಗ ಎಂದು ಪರಿಗಣಿಸಬಹುದು.
 ದಶರಥಮಹಾರಾಜನು ಗತಿಸಿದಾಗ, ರಾಮಲಕ್ಷ್ಮಣರು ದಂಡಕಾರಣ್ಯದ ಕಡೆಗೆ ಹೊರಟಿದ್ದರು. ಭರತಶತೃಘ್ನರು ಕೈಕೇಯಿಯ ತಂದೆ, ಕೇಕಯರಾಜನ ಮನೆಯಲ್ಲಿದ್ದರು. ಈ ಇಬ್ಬರು ಅಣ್ಣತಮ್ಮಂದಿರೂ ತಂದೆಯ ಅಂತ್ಯ ಸಂಸ್ಕಾರ ಮಾಡಲು ಕೇಕಯರಾಜ್ಯದಿಂದ ಅಯೋಧ್ಯೆಗೆ ಹಿಂತಿರುಗಿ ಬರುವವರೆಗೂ ರಾಜನ ದೇಹವನ್ನು ಕೊಳೆಯುವುದಕ್ಕೆ ಬಿಡದೆ ಕಾಪಾಡಬೇಕು. ಅದಕ್ಕಾಗಿ, ದಶರಥನ ದೇಹವನ್ನು ತೈಲದ್ರೋಣಿಯಲ್ಲಿ ಇಡುತ್ತಾರೆ.  ತೈಲವು ರಕ್ಷಣಕಾರಿ (preservative)  ಎನ್ನುವುದು ರಾಮಾಯಣಕಾಲದಲ್ಲಿ ಗೊತ್ತಿಲ್ಲದಿದ್ದ ಪಕ್ಷದಲ್ಲ್ಲಿ, ಮೇಲೆ ಹೇಳಿದಂತೆ ಮೃತದೇಹವನ್ನು ತೈಲದ್ರೋಣಿಯಲ್ಲಿ ಇಡುವುದು ಇಂದಿನ ಶವರಕ್ಷಣತಂತ್ರದ (embalming technique ನ) ಒಂದು ಪುರೋಗ ಆಗುವುದು. ಆದರೆ, ಬಹುಶಃ, ತೈಲವು ರಕ್ಷಣಕಾರಿ ಎನ್ನುವುದು ರಾಮಾಯಣದ ಕಾಲದಲ್ಲಿ ಜನರಿಗೆ ತಿಳಿದಿತ್ತೆಂದು ತೋರುವುದು. ಹಿಂದೆ, ಈಜಿಪ್ಟ್‍ನಲ್ಲಿಯೂ ಶವಗಳನ್ನು ಮಮ್ಮಿಕರಿಸುವುದಕ್ಕೆ ಕಚ್ಚಾತೈಲದ ಭಟ್ಟಿಯನ್ನು (asphalt)  ಉಪಯೋಗಿಸುತ್ತಿದ್ದರು. ಈಗಲೂ, ಬೀಜಗಳಿಂದ ತೆಗೆದ ಎಣ್ಣೆಯನ್ನು ಕೆಲವು ರಾಸಾಯನಿಕ ಪದಾರ್ಥಗಳೊಡನೆ ಬೆರೆಸಿ, ಶವರಕ್ಷಣೆಗೆ ಉಪಯೋಗಿಸುತ್ತಾರೆ.
 ಲಂಕಾಯುದ್ಧದಲ್ಲಿ, ಮೊದಲು ರಾಮಲಕ್ಷ್ಮಣರಿಬ್ಬರೂ ಇಂದ್ರಜಿತುವಿನ ಬ್ರಹ್ಮಾಸ್ತ್ರಕ್ಕೆ ಮಣಿದು ಮರಣಮೂರ್ಛೆ ಹೊಂದಿದಾಗ, ನಂತರ ಲಕ್ಷ್ಮಣನು ರಾವಣನ ಶಕ್ತ್ಯಾಯುಧದಿಂದ ಘಾಸಿಪಟ್ಟು ಮೂರ್ಛೆಹೊಂದಿದಾಗ, ಆ ಮೂರ್ಛೆನಿವಾರಣೆಗೆ, ಜಾಂಬವಂತನಿಂದ ಪ್ರೇರಿತನಾದ ಆಂಜನೇಯನು, ಹಿಮವತ್ಪರ್ವತದ ತಪ್ಪಲಿನಿಂದ ತಂದ ಸಂಜೀವಿನಿ ಮೂಲಿಕೆಗಳು - ವಿಶಲ್ಯಕರಣಿ, ಸಂಧಾನಕರಣಿ, ಸಾವರ್ಣ್ಯಕರಣಿ ಮತ್ತು ಸಂಜೀವಕರಣಿ - ಸಹ ಒಂದು ವಿಜ್ಞಾನಕಲ್ಪನೆಯೇ. ಅದು ಇಂದಿನ ಸೈನಿಕವೈದ್ಯಶಾಸ್ತ್ರದ ಪುರೋಗಾಮಿ. ಆದರೆ, ನಮ್ಮ ಆಧುನಿಕ ವೈದ್ಯಶಾಸ್ತ್ರಕ್ಕೆ ಆ ಸಂಜೀವಿನಿ ಸಾಮರ್ಥ್ಯವು ಇನ್ನೂ ಸಂಪೂರ್ಣವಾಗಿ ಕರಗತವಾಗಿಲ್ಲ. ಆಧುನಿಕ ಶಸ್ತ್ರಚಿಕಿತ್ಸಾವಿಧಾನಗಳಿಂದ ವಿಶಲ್ಯಕರಣಿ ಮತ್ತು ಸಂಧಾನಕರಣಿಗಳು ಬಹುಮಟ್ಟಿಗೆ ಕರಗತವಾಗಿದೆ; ಇತ್ತೀಚಿನ ಪ್ಲಾ~ಸ್ಟಿಕ್ ಸರ್ಜರಿಆವಿಷ್ಕಾರದಿಂದ ಸಾವರ್ಣ್ಯಕರಣಿಯು ಸ್ವಲ್ಪ ಮಟ್ಟಿಗೆ ಕರಗತವಾಗಿರುವುದು. ಅಭೇದಜೀವಕಣಚಿಕಿತ್ಸೆ  (stem cells therapy)  ಸಮಗ್ರವಾದಾಗ, ಈ ಮೂರು ಕರಣಿಗಳೂ ಮತ್ತಷ್ಟು ಉತ್ತಮಗೊಳಬಹುದು. ಸಂಜೀವಕರಣಿಯಾದರೋ ಬಹುಶಃ ಎಂದಿಗೂ ಮಾನವನಿಗೆ ಕಾರ್ಯಗತವಾಗಲಾರದೆಂದು ತೋರುವುದು.
 ಮಾನವನು ಭೂರಂಗದ ಮೇಲೆ ಬಂದ ನಂತರ, ಎಂದು ಅವನು ಮೊಟ್ಟಮೊದಲಿಗೆ ಹಕ್ಕಿಗಳು ಸ್ವೇಚ್ಛೆಯಾಗಿ ಅಂತರಿಕ್ಷದಲ್ಲಿ ಹಾರಾಡುವುದನ್ನು ನೋಡಿದನೋ, ಅಂದಿನಿಂದಲೇ ತಾನೂ ಆ ಪಕ್ಷಿಗಳ ಹಾಗೆ ಆಕಾಶದಲ್ಲಿ ಸ್ವತಂತ್ರವಾಗಿ ಹಾರಾಡಬೇಕೆಂದು ಇಚ್ಛಿಸಿದನೆಂದು ತೋರುವುದು. ವ್ಯಕ್ತವಾಗಿ, ಆ ಆಕಾಂಕ್ಷೆಯು ನಮ್ಮ ಪೂರ್ವಜರನ್ನೂ ಬಿಟ್ಟಿರಲಿಲ್ಲ. ರಾಮಾಯಣದಲ್ಲಿ ಹೇಳಿರುವ ಪುಷ್ಪಕವಿಮಾನವು ಆ ಹಾರೈಕೆಯ ಪೂರೈಕೆಯಲ್ಲದಿದ್ದರೂ, ಆ ಪೂರೈಕೆಯ ಒಂದು ಮಹಾಕಲ್ಪನೆ, ಒಂದು ವಿಜ್ಞಾನಕಲ್ಪನೆಯೇನೋ ಹೌದು. ಅಂದಿನ ಪುಷ್ಪಕವಿಮಾನವು ಇಂದು ಪ್ರಪಂಚದಾದ್ಯಂತ ಬಳಕೆಯಲ್ಲಿರುವ ಆಕಾಶಯಾನಗಳನ್ನು ಅಧಿಕತರವಾಗಿ ಪ್ರವೇಕ್ಷಿಸಿತು(anticipated) ಎಂದರೆ ಅತಿಶಯೋಕ್ತಿಯಲ್ಲ. ಆದರೆ, ಆಧುನಿಕ ನಭೋಯಾನವು ಪುಷ್ಪಕ ವಿಮಾನದ ಅಪೂರ್ಣ ಪೂರೈಕೆ. ಏಕೆಂದರೆ, ರಾಮಾಯಣದಲ್ಲಿ ಹೇಳಿರುವ ಪುಷ್ಪಕ ವಿಮಾನದ ಮೇಲೆ ಎಷ್ಟು ಜನರು ಏರಿ ಕುಳಿತರೂ ಮತ್ತೂ ಒಬ್ಬರಿಗೆ ಕೂರಲು ಸ್ಥಳವಿರುವಂತೆ ಆ ವಿಮಾನವು ವಿಸ್ತರವಾಗುತ್ತಿತ್ತಂತೆ. ಆ ಸಾಧ್ಯತೆಯು ನಮ್ಮ ಈಗಿನ ಯಾವ ತೆರನಾದ ಆಕಾಶವಾಹದಲ್ಲೂ ಇಲ್ಲ. ಬಹು ಪ್ರಾಯಕವಾಗಿ, ಅದೊಂದು ಅಸಾಧ್ಯಕಾರ್ಯ.
 ಹೀಗೆಯೇ, ನಲನು ಸಮುದ್ರದ ಮೇಲೆ ಸೇತುವೆ ಕಟ್ಟಿದುದೂ ಒಂದು ವಿಜ್ಞಾನಕಲ್ಪನೆ. ಹಿಂದಿನ ಕಾಲದಲ್ಲಿ, ಸಣ್ಣ ಹೊಳೆ, ತೊರೆ, ಕಾಲುವೆಗಳ ಮೇಲೆ ಅಡ್ಡಲಾಗಿ ಮರದ ದಿಮ್ಮಿಗಳನ್ನು ಬೀಳಿಸಿ ನೀರನ್ನು ದಾಟುವ ಸೌಲಭ್ಯವನ್ನು ಏರ್ಪಡಿಸಿಕೊಳ್ಳುವ ಚಾತುರ್ಯವು ಆ ಕಾಲದ ಜನರಲ್ಲಿ ಸಾಮಾನ್ಯವಾಗಿದ್ದಿರಬಹುದು. ಆದರೆ, ದೊಡ್ಡ ನದಿ, ಅದೂ ಸಮುದ್ರದ, ಮೇಲೆ ಸೇತುವೆ ಕಟ್ಟುವುದು ಸಂಕಲ್ಪಮಾತ್ರವಾಗಿತ್ತೆಂದು ತೋರುವುದು. ಏಕೆಂದರೆ, ಸೇತುವೆಯನ್ನು ಕಟ್ಟಲು ಶ್ರೀರಾಮನು ಸಮುದ್ರದೇವನನ್ನು ಪ್ರಾರ್ಥಿಸಿ ಅವನ ಅನುಮತಿಯನ್ನು ಪಡೆಯುತ್ತಾನೆ. ಹಾಗೆಯೇ, ಶ್ರೀರಾಮನ ಕೋರಿಕೆಯಂತೆ, ಸಮುದ್ರರಾಜನ ಸ್ನೇಹಿತನಾದ ವರುಣನು, ನಲನು ಸಮುದ್ರದ ಮೇಲೆ ಜೋಡಿಸಿದ ಕಲ್ಲುಬಂಡೆಗಳು ನೀರಿನಲ್ಲಿ ಮುಳುಗದಂತೆ ನೋಡಿಕೊಳ್ಳುವೆನೆಂದು ಶ್ರೀರಾಮನಿಗೆ ಭರವಸೆ ಕೊಡುತ್ತಾನೆ. ಇಲ್ಲಿ ಸಮುದ್ರರಾಜ, ವರುಣದೇವ ಮುಂತಾದ ದೇವರುಗಳೇ ಕೇವಲ ಮಾನವಕಲ್ಪನೆ - ಪ್ರಾಕೃತಭೂತಗಳ ಮೂರ್ತೀಕರಣ. ಮತ್ತು, ಬಂಡೆಕಲ್ಲುಗಳನ್ನು ನೀರಿನ ಮೇಲೆ ತೇಲಿಬಿಟ್ಟು ಜೋಡಿಸುವುದು ಕೇವಲ ಅಸಾಧ್ಯ ಕಾರ್ಯ - ಭೌತಶಾಸ್ತ್ರ ನಿಯಮಗಳಿಗೆ ವಿರುದ್ಧವಾದುದು. ಆದುದರಿಂದ, ರಾಮಾಯಣದಲ್ಲಿನ ಸೇತುಬಂಧನಯೋಜನೆಯು ಸಂಪೂರ್ಣ ಸಾಂಕಲ್ಪಿಕ, ಆಭ್ಯಾಸಿಕವಲ್ಲ ಎಂದು ಖಚಿತವಾಗುವುದು. (ಇತ್ತೀಚೆಗೆ, ಕೆಲವು ಹಿಂದು ಮೂಲವಾದಿಗಳು, ಕೇವಲ ರಾಜಕೀಯ ಕಾರಣಕ್ಕಾಗಿ, ಈ ವೈಜ್ಞಾನಿಕ ಸತ್ಯವನ್ನು ಅಂಗೀಕರಿಸಲು ಒಪ್ಪುವುದಿಲ್ಲವೆನ್ನಿ!) ಇಲ್ಲಿ, ಇನ್ನೊಂದಂಶವನ್ನು ಗಮನಿಸಬೇಕು. ಹಿಂದೆ ಸೀತಾನ್ವೇಷಣೆಗೆ ಸಮುದ್ರೋಲ್ಲಂಘನ ಮಾಡಲು ಹನುಮಂತನು ಏಕಾಕಿಯಾಗಿ ಹಾರಿದ. ಅದು ಮಾನವನ ಸ್ವಯಂ ಉತ್ಪತನದ ಸ್ವಾಭಿಲಾಷೆಯ ವಿಜ್ಞಾನಕಲ್ಪನೆಯೆಂದು ಪರಿಗಣಿಸಬಹುದು. ಆದರೆ, ಅದು ಒಂದು ಸುದ್ದಿಸಂಗ್ರಾಹಕ ಕೌಶಲ್ಯವೂ (intelligence gathering strategy) ಹೌದು. ರಾವಣನ ಅರಮನೆಯನ್ನು ಗುಪ್ತವಾಗಿ ಹೊಕ್ಕು, ಗೂಢಚಾರನಾಗಿ ರಹಸ್ಯದಿಂದ ಸೀತೆಯನ್ನು ಕಂಡು ಬರುವುದಕ್ಕೆ ಒಬ್ಬನೇ ಹೋಗುವುದು ಉಚಿತವೂ, ಆವಶ್ಯಕವೂ ಆಗಿತ್ತು. ಆದರೆ ಪ್ರಸ್ತುತದಲ್ಲಿ, ಒಂದು ದೊಡ್ಡ ವಾನರಭಲ್ಲೂಕಸೈನ್ಯವನ್ನು ಭಾರತದ ದಕ್ಷಿಣದಡದಿಂದ ಲಂಕಾದ್ವೀಪದ ಉತ್ತರದಡಕ್ಕೆ ರವಾನಿಸಬೇಕಾಗಿದೆ. ಆದುದರಿಂದಲೇ ಸಮುದ್ರದ ಮೇಲೆ ಸೇತುವೆ ಕಟ್ಟುವ ಆವಶ್ಯಕತೆ ಮತ್ತು ಅದಕ್ಕೆ ತಕ್ಕ ಕಾಲ್ಪನಿಕ ಯೋಜನೆ.
  ಇನ್ನೊಂದು ಮಾತು. ಕಥೆ, ಕವನಗಳಲ್ಲಿ ಪ್ರಾಣಿಗಳನ್ನು ಪಾತ್ರಗಳನ್ನಾಗಿ ಉಪಯೋಗಿಸುವುದು ಪ್ರಾಚೀನಕಾಲದಿಂದಲೂ ಬಂದ ಒಂದು ಸಾಹಿತ್ಯ ವಿಧಾನ ಮತ್ತು ಸಂಪ್ರದಾಯ. ಸೋಮಾರಿಗಳಾದ ಕೆಲವು ರಾಜಪುತ್ರರನ್ನು ನೀತಿವಂತರನ್ನಾಗಿಯೂ, ರಾಜ್ಯಾಡಳಿತ ವಿಚಾರಗಳಲ್ಲಿ ನಿಪುಣರನ್ನಾಗಿಯೂ ಪರಿವರ್ತಿಸಲು ಹೇಳಿದ ಪಂಚತಂತ್ರ ಕಥೆಗಳಲ್ಲಿ ಬರುವ ಪಾತ್ರಗಳೆಲ್ಲವೂ ಪ್ರಾಣಿಗಳೇ. ಹೀಗೆ ಕಥೆಗಳಲ್ಲಿ, ನಾಟಕಗಳಲ್ಲಿ ಪ್ರಾಣಿಗಳನ್ನು ಪಾತ್ರಗಳನ್ನಾಗಿ ಉಪಯೋಗಿಸುವುದರಿಂದ ಕಥಾನಾಟಕಗಳಿಗೆ ಒಂದು ವಿಶೇಷ ಸೊಗಸನ್ನು ತಂದು, ಓದುಗರಲ್ಲಿ ಹೆಚ್ಚು ಆಸಕ್ತಿಯನ್ನುಂಟುಮಾಡುವುದು. ಅಷ್ಟೇ ಅಲ್ಲದೆ, ಕವಿಯು ಹೇಳ- ಬಯಸುವ ಮಾತು, ನೀತಿ ಹೆಚ್ಚು ಪರಿಣಾಮಕಾರಿ ಆಗುವಂತೆಯೂ ಮಾಡುವುದು. ಬಾಲ್ಯದಲ್ಲಿ ಪುಣ್ಯಕೋಟಿ ಕಥೆಯ ಗೋವಿನ ಹಾಡನ್ನು ಕೇಳಿ, ಓದಿ, ಕಣ್ಣೀರು ಬಿಟ್ಟು ಎಷ್ಟು ಮಂದಿ ಮಕ್ಕಳು ಮುಂದೆ ಪ್ರಾಣಿದಯೆ, ಸತ್ಯಶೀಲತೆಯಲ್ಲಿ ಪ್ರವರ್ತಕರಾಗಿ ಬೆಳೆದಿಲ್ಲ! ಆದುದರಿಂದ, ರಾಮಾಯಣದಲ್ಲಿ ಹೇಳಿರುವುದೆಂದ ಮಾತ್ರಕ್ಕೇ ಕೋತಿ, ಕರಡಿ ಮುಂತಾದ ಪ್ರಾಣಿಗಳು ಹಿಂದಿನ ಕಾಲದಲ್ಲಿ ಮಾತಾಡುತ್ತಿದ್ದುವೆಂದು ತೀರ್ಮಾನಿಸುವುದು ವ್ಯಕ್ತವಾಗಿ ಅನುಚಿತ. ವಿಕಸನಪ್ರಗತಿಯು ಹಿಂದಿನ ಕಾಲದಿಂದ ಮುಂದಿನ ಕಾಲಕ್ಕೆ ವೃದ್ಧಿಸುವುದೇ ಹೊರತು, ವ್ಯತ್ಯಸ್ತವಾಗುವುದಿಲ್ಲ.

ಈಗ, ಮಹಾಭಾರತದಲ್ಲಿ ಕಂಡುಬರುವ ಕೆಲವು ವಿಜ್ಞಾನಕಲ್ಪನಾಕಥೆಗಳನ್ನು ವಿಮರ್ಶಿಸೋಣ:
 ಧೃತರಾಷ್ಟ್ರನ ಮಕ್ಕಳಾದ ನೂರುಮಂದಿ ಕೌರವರು ಹುಟ್ಟಿದುದು ಒಂದು ಬಹು ಸ್ವಾರಸ್ಯವಾದ ವೈಜ್ಞಾನಿಕ ಕಲ್ಪನೆ. ವಾಸ್ತವವಾಗಿಯೂ, ಅದೊಂದು ವಿಜ್ಞಾನಕಲ್ಪನಾಸಮೂಹ! ಗಾಂಧಾರಿ ಗರ್ಭಿಣಿಯಾಗಿ ನವಮಾಸಗಳು ತುಂಬಿ ಬಹಳ ದಿವಸಗಳಾದರೂ ಪ್ರಸುವಾಗಲೇ ಇಲ್ಲ. ಆಗ, ಪ್ರಸೂತಿಕಾವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಗರ್ಭವನ್ನು ಹೊರತೆಗೆಯಬೇಕಾಯಿತು. ಇದು ಇಂದಿನ ಸಿಸ್ಹೇರಿಯನ್ ಸೆಕ್ಷನ್ನಿನ ಪುರೋಗ, ಒಂದು ವಿಜ್ಞಾನಕಲ್ಪನೆ. ಅಷ್ಟೇ ಅಲ್ಲ. ಗರ್ಭವನ್ನು ಹೊರತೆಗೆದಾಗ ಅದು ಸಾಮಾನ್ಯ ಶಿಶುವಾಗಿರದೆ, ಒಂದು ದುಂಡುಪಿಂಡವಾಗಿತ್ತು. ಅದನ್ನು ಶಸ್ತ್ರದಿಂದ ಭೇದಿಸಿ ನೂರು ಚೂರು ಮಾಡಿದರಂತೆ. ಆ ನೂರು ಚೂರುಗಳನ್ನೂ ನೂರು ಕುಡಿಕೆಗಳಲ್ಲಿಟ್ಟು, ಜಾಗರೂಕತೆಯಿಂದ ಬಹುಕಾಲ ಪೋಷಿಸಿ ಬೆಳೆಸಿದ ಮೇಲೆ ಒಂದೊಂದು ಚೂರೂ ಒಂದೊಂದು ಮಗುವಾಗಿ ಬೆಳೆಯಿತಂತೆ. ಇದು ಇಂದಿನ ಭ್ರೂಣಾಭೇದಜೀವಕಣ (ಎಂಬ್ರೈಯಾನಿಕ್ ಸ್ಟೆಮ್ ಸೆಲ್ಸ್’)ಗಳಿಂದ ದೇಹದ ನಾನಾ ಜೀವಂತ ಭಾಗಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಬೆಳೆಸುವ ಪ್ರಯೋಗದ ಪುರೋಗ! ಆದರೆ, ಮಹಾಭಾರತದಲ್ಲಿ, ದೇಹದ ಒಂದು ನಿರ್ದಿಷ್ಟ ಭಾಗದ ಬದಲು, ಒಂದು ಜೀವಂತ ದೇಹವನ್ನೇ, ಒಂದು ಚೈತನ್ಯಪೂರ್ಣ ಶಿಶುವನ್ನೇ ಬೆಳೆಸಲಾಯಿತೆಂದು ಹೇಳಿದೆ. ಆ ಕಾರಣ, ಇದೊಂದು ರೀತಿಯ ಕ್ಲೋನಿಂಗ್ ಟೆಕ್ನಿಕ್ನ ಪುರೋಗ ಎಂದೂ ಹೇಳಬಹುದು. ಅಷ್ಟೇ ಅಲ್ಲದೆ, ಮೇಲೆ ಹೇಳಿದ ಅಂದಿನ ಕುಂಭಪೋಷಣೆಯೂ ಸಹ ಒಂದು ವಿಜ್ಞಾನಕಲ್ಪನೆ - ಇಂದಿನ ಪ್ರನಾಳಶಿಶುವಿನ ( test tube baby ಯ), ಹಾಗೂ ಕಾವುಕೋಶಪೋಷಣೆಯ (incubation ) ಪುರೋಗ.
 ಒಂದು ಸಂದರ್ಭದಲ್ಲಿ, ದುರ್ಯೋಧನನು ಕುಯುಕ್ತಿಯಿಂದ ತನ್ನ ಪರಮ ವೈರಿಯಾದ ಭೀಮನನ್ನು ಕೊಲ್ಲಲು ವಿಷ ಸರ್ಪಗಳಿಂದ ಕಚ್ಚಿಸುತ್ತಾನೆ. ಆದರೂ, ಭೀಮನು ಸರ್ಪಗಳ ವಿಷದಿಂದ ಯಾವ ಬಾಧೆಯೂ ಇಲ್ಲದೆ, ಸುರಕ್ಷಿತವಾಗಿರುತ್ತಾನೆ. ಈಗಲೂ ಸಹ, ಕೆಲವು ವೈದ್ಯಪಂಡಿತರು ಚೇಳು ಕಡಿತಕ್ಕೆ, ಹಾವು ಕಡಿತಕ್ಕೆ ಮಂತ್ರಹಾಕಿ ವಿಷದ ಪರಿಣಾಮವನ್ನು ಹೋಗಲಾಡಿಸುವರೆಂದು ಕೆಲವು ಜನರು ನಂಬುತ್ತಾರೆ. ಇಂತಹ ಮಂತ್ರವೈದ್ಯವು ಎಷ್ಟು ಯಥಾರ್ಥವೋ ತಿಳಿಯದು. ಬಹುಶಃ ಈ ಮಂತ್ರವೈದ್ಯವು ಕೇವಲ ಮಾನಸಿಕ ಅಥವಾ ಪ್ಲಸೀಬೊಪರಿಣಾಮಕಾರಿ ಎಂದು ತೋರುವುದು. ಆದರೂ, ಭೀಮನ ದೇಹವು ಸರ್ಪಗಳ ವಿಷವನ್ನು ನಿರೋಧಿಸಿದುದು ಇಂದಿನ ವಿಷನಿವಾರಕ ವಾ~ಕ್ಸೀನ್ (vaccine)ನಿನ ಪುರೋಗಾಮಿ ಇರಬಹುದು. ಹಾಗಿಲ್ಲದಿದ್ದರೆ, ಹಿಂದಿನ ಕಾಲದಲ್ಲಿ ಜನಗಳಿಗೆ ವಿಷನಿರೋಧಕ್ರಮ ಅಥವಾ ವಿಷನಾಶಕವೈದ್ಯವು ತಿಳಿದಿತ್ತೆಂದು ಸೂಚಿತವಾಗುವುದು. ಉದಾಹರಣೆಗೆ: ಪ್ರತಿದಿವಸ ಬೇವಿನ ಸೊಪ್ಪನ್ನು ಅಥವಾ ಚಿಗುರನ್ನು ತಿಂದರೆ, ದೇಹದಲ್ಲಿ ನಾಗಸರ್ಪವಿಷನಿರೋಧಕಶಕ್ತಿಯು ಉಂಟಾಗುವುದೆಂದು ಕೆಲವರು ಹೇಳುತ್ತಾರೆ.
 ಬಹಳ ಹಿಂದಿನ ಕಾಲದಿಂದಲೂ ಮಾನವನಿಗೆ ತನ್ನ ದೃಷ್ಟಿಪರ್ಯಂತವನ್ನು ಆದಷ್ಟು ಹೆಚ್ಚಿಸಿ ಕೊಳ್ಳಬೇಕೆಂಬ ಆಸೆಯಿತ್ತು. ಆ ಆಸೆಯ ಸಂಪೂರ್ಣತೆಯೇ ಇಂದಿನ ದೂರದರ್ಶಕ ಅಥವಾ ಟೆಲೆಸ್ಕೋಪ್’.  ಹಾಗೆಯೇ, ಅವನಿಗೆ ಪಾರದೃಷ್ಟಿಸಾಧ್ಯತೆಯನ್ನು ಪಡೆಯಬೇಕೆಂಬ ಅಭಿಲಾಷೆಯೂ ಇತ್ತು. ಪಾರದೃಷ್ಟಿ ಎಂದರೆ, ದೃಷ್ಟಿಪಥದಲ್ಲಿ ಇರದ ವಸ್ತುಗಳನ್ನು ನೋಡುವ ಸಾಮರ್ಥ್ಯ. ಈ ಪಾರದೃಷ್ಟಿ ಸಾಧ್ಯತೆಯ ವಿಜ್ಞಾನಕಲ್ಪನೆಯು ಮಹಾಭಾರತದಲ್ಲಿ ಈ ರೀತಿ ಸಾಧಿಸಲ್ಪಟ್ಟಿದೆ:  ಪಾಂಡವರು ಪಗಡೆ ದ್ಯೂತದ ಒಪ್ಪಂದದ ಪ್ರಕಾರ ಹನ್ನೆರಡು ವರ್ಷ ವನವಾಸವನ್ನೂ, ಒಂದುವರ್ಷ ಅಜ್ಞಾತವಾಸವನ್ನೂ ಮುಗಿಸಿಬಂದರೂ, ಅವರ ಪಾಲಿನ ರಾಜ್ಯವನ್ನು ಹಿಂತಿರುಗಿ ಕೊಡಲು ದುರ್ಯೋಧನನು ನಿರಾಕರಿಸುತ್ತಾನೆ. ಧೃತರಾಷ್ಟ್ರನು ಹುಟ್ಟುಕುರುಡ. ಪುತ್ರವ್ಯಾಮೋಹದಿಂದ, ನ್ಯಾಯಕ್ಕೆ ವಿರುದ್ಧವಾಗಿ, ಹಟಮಾರಿ ಮಗ ದುರ್ಯೋಧನನ ಛಲವನ್ನು ಅನುಮೋದಿಸಿ, ತಮ್ಮನ ಮಕ್ಕಳಾದ ಪಾಂಡವರು ತಮ್ಮ ಪಾಲಿಗೆ ಹಕ್ಕಿನಿಂದ ಬಂದ ಅರ್ಧ ರಾಜ್ಯವನ್ನು, ತನ್ನ ಮಕ್ಕಳಾದ ಕೌರವರೊಂದಿಗೆ, ಯುದ್ಧಮಾಡಿ ಗೆದ್ದು ಪಡೆಯಬೇಕೆಂಬ ಮಗನ ಸಂಚಿಗೆ ಒಡಂಬಡುತ್ತಾನೆ. ಕುರುಕ್ಷೇತ್ರ ಮೈದಾನದಲ್ಲಿ, ಇನ್ನೇನು ಯುದ್ಧವು ಪ್ರಾರಂಭವಾಗಲಿದೆ. ಕುರುಕ್ಷೇತ್ರವು ಒಂದು ಧರ್ಮಕ್ಷೇತ್ರವೆಂದು ಪ್ರಸಿದ್ಧಿಯಾದುದು.  ಅಂದರೆ, ಅಲ್ಲಿ "ಧರ್ಮಕ್ಕೇ ಜಯವಾಗುವುದು ನಿಶ್ಚಯ"ಎಂದು ಪ್ರತೀತಿ. ತನ್ನ ಮಕ್ಕಳು ಧರ್ಮಬಾಹಿರರು, ಅನ್ಯಾಯಿಗಳು ಎನ್ನುವುದು ಧೃತರಾಷ್ಟ್ರನಿಗೆ ಚೆನ್ನಾಗಿ ತಿಳಿದಿದೆ. ಅದಕ್ಕೇ ಅವನಿಗೆ ಮನಸ್ಸಿನಲ್ಲಿ ಒಂದೇ ಆತಂಕ - ತನ್ನ ಮಕ್ಕಳಿಗೆ ಏನಾಗುವುದೋ, ಯಾವ ಸಮಯದಲ್ಲಿ ಪಾಂಡವರ ಕಡೆಯಿಂದ ಏನು ಅಪಾಯ ಒದಗುವುದೋ, ಎಂದು. ಕಣ್ಣಂತೂ ಕಾಣುವುದಿಲ್ಲ. ಕಿವಿಯಿಂದಲಾದರೂ ಯುದ್ಧದಲ್ಲಿ ನಡೆಯುವ ಘಟನೆಗಳನ್ನು ಆಗಾಗಲೇ ಕೇಳಿ ತಿಳಿದುಕೊಳ್ಳಬೇಕೆಂದು ಆಸೆ. ವ್ಯಾಸಮಹರ್ಷಿಗಳಿಗೆ ಆ ವಿಷಯವು ತಿಳಿದಾಗ, ಅವರು ಸಂಜಯನಿಗೆ "ದಿವ್ಯದೃಷ್ಟಿ"ಯನ್ನು ದಯಪಾಲಿಸಿ, ಸಂಜಯನು ಅರಮನೆಯಲ್ಲಿ ಕುಳಿತಲ್ಲಿಂದಲೇ ಯುದ್ಧಭೂಮಿಯಲ್ಲಿ ನಡೆಯುವ ಯಾವತ್ತೂ  ಘಟನೆಗಳನ್ನು ಪ್ರತ್ಯಕ್ಷವಾಗಿ ನೋಡುವಂತೆಯೇ ಆಗುವ ಸಾಮರ್ಥ್ಯವನ್ನು ಕರುಣಿಸುತ್ತಾರೆ. ಆ ದಿವ್ಯ ದೃಷ್ಟಿಯೇ ಈಗ ನಮ್ಮೆಲ್ಲರಿಗೂ ಚಿರಪರಿಚಿತವಾಗಿರುವ ದೂರದರ್ಶನದ ಅಂದರೆ ಟೆಲೆವಿಷನ್ನಿನ ಪುರೋಗಾಮಿ. ಇಲ್ಲಿ ಒಂದು ಮನಶ್ಶಾಸ್ತ್ರದ ವಿಚಾರವೂ ಇದೆ. ವ್ಯಾಸರು ಧೃತರಾಷ್ಟ್ರನ ಆಸೆಯನ್ನು ತೃಪ್ತಿಪಡಿಸಲು ಏಕೆ ಒಪ್ಪಿದರೆಂದರೆ, ಯುದ್ಧದಲ್ಲಿ ತನ್ನ ಮಕ್ಕಳು ಅನುಭವಿಸುವ ಪರಂಪರ ಪರಾಜಯವನ್ನು ಕೇಳಿಯಾದರೂ, ರಾಜನು ದುರ್ಯೋಧನನಿಗೆ ಪಾಂಡವರೊಡನೆ ಒಪ್ಪಂದ ಮಾಡಿಕೊಳ್ಳುವಂತೆ ಬುದ್ಧಿ ಹೇಳಿ ಆ ಘೋರವಾದ ರಕ್ತಸಿಕ್ತಯುದ್ಧವನ್ನು ನಿಲ್ಲಿಸಬಹುದೆಂಬ ಅಪೇಕ್ಷೆಯಿಂದಿರಬಹುದು. ಇಲ್ಲಿ ಮತ್ತೊಂದು ಸೂಕ್ಷ್ಮವಿಷಯವನ್ನು ಗಮನಿಸಬೇಕು. ಸಂಜಯ’ (ಸಮ್ಯಕ್ ಜಯಃ ಯಸ್ಯ ಸಃ) ಅಂದರೆ, (ಕಾಮಕ್ರೋಧಾದಿ ಅರಿಷಡ್ವರ್ಗವನ್ನು) ಸಂಪೂರ್ಣವಾಗಿ ಗೆದ್ದವನು’, ಸ್ಥಿತಪ್ರಜ್ಞ, ನಿಸ್ಸ್ವಾರ್ಥಿ, ನಿಷ್ಪಕ್ಷಪಾತಿ ಎಂದರ್ಥ. ಆದುದರಿಂದ, ಪಕ್ಷಪಾತವಿಲ್ಲದೆ ಯುದ್ಧದಲ್ಲಿ ನಡೆದದ್ದನ್ನು ನಡೆದಂತೆಯೇ ಯಥಾರ್ಥವಾಗಿ ನಿರೂಪಿಸುತ್ತಾನೆ ಎಂಬ ಭರವಸೆಯಿಂದ ಧೃತರಾಷ್ಟ್ರನು ಸಂಜಯನನ್ನು ಆ ಕೆಲಸಕ್ಕೆ ನಿಯೋಜಿಸುತ್ತಾನೆ. (ಇದೇ ರೀತಿ, ಭೀಷ್ಮ, ಧರ್ಮರಾಯ, ದುರ್ಯೋಧನ, ಭೀಮ, ಶಕುನಿ, ಇತ್ಯಾದಿ ಅನ್ವರ್ಥನಾಮಗಳುಳ್ಳ ಪಾತ್ರಗಳಿಂದಲೂ ಈ ಕಥೆಗಳು ಕಾಲ್ಪನಿಕ ಎಂದು ಅನುಮಾನಿಸಬಹುದು.)
 ಮನುಷ್ಯನಿಗೆ ಕೆಲವು ಸಂದರ್ಭಗಳಲ್ಲಿ ತತ್‍ಕ್ಷಣ ಮರಣವನ್ನು ಹೊಂದಬೇಕೆಂದು ಇಚ್ಛೆಯಾಗುವುದು.   ಉದಾಹರಣೆಗೆ: ಸಹಮಾನವನಿಂದ ಚಿತ್ರಹಿಂಸೆಗೆ ಗುರಿಯಾದಾಗ (ಸ್ಪಾ~ನಿಷ್ ಇನ್‍ಕ್ವಿಸಿಷನ್, ಹೋಲೋಕಾಸ್ಟ್, ಇತ್ಯಾದಿ), ಭೂಕಂಪ, ತ್ಸುನಾಮಿ, ಮುಂತಾದ ಉಪದ್ರವಗಳಲ್ಲಿ ಸಾಯದೆಯೂ, ಯಾರೊಬ್ಬರ ಸಹಾಯವಿಲ್ಲದೆಯೂ ಕಟ್ಟಡಗಳ ಭಗ್ನಾವಶೇಷದ ಕೆಳಗೆ ಸಿಕ್ಕಿಬಿದ್ದಾಗ, ಯಾವುದಾದರೂ ಸಹಿಸಲಸಾಧ್ಯವಾದ ದೀರ್ಘಕಾಲೀನ ಯಾತನೆ, ಆಂತರೋಗ (terminal disease)  ಅಥವಾ ಅಚಿಕಿತ್ಸನೀಯ ವ್ಯಾಧಿಗಳಿಗೆ ತುತ್ತಾದಾಗ, ಇಚ್ಛಿಸಿದ ಕೂಡಲೇ ಸಾವು ಬರಬೇಕೆನ್ನಿಸುವುದು. ಹೀಗೆ, ಜೀವನವು ದುರ್ಭರವಾದಾಗ, ಮನುಷ್ಯನು ತನಗೆ ಬೇಕಾದ ಸಮಯದಲ್ಲಿ, ಇಷ್ಟಪಟ್ಟ ಕೂಡಲೇ ಮರಣ ಹೊಂದುವುದಕ್ಕೆ ಇಚ್ಛಾಮರಣ ಅಥವಾ ಸ್ವೇಚ್ಛಾಮರಣ ಎಂದು ಹೆಸರು. ಮಹಾಭಾರತದಲ್ಲಿ, ಕುರುಕುಲ ಪಿತಾಮಹ ಭೀಷ್ಮಾಚಾರ್ಯರು ಒಬ್ಬ ಇಚ್ಛಾಮರಣಿ. ಅವರಿಗೆ ಈ ಇಚ್ಛಾಮರಣಸಾಮರ್ಥ್ಯವು ತಂದೆ ಶಂತನು ಮಹಾರಾಜನಿಂದ ಒಂದು ವರಪ್ರದಾನವಾಗಿ ಬಂದಿತ್ತು. ಅದೊಂದು ವಿಜ್ಞಾನಕಲ್ಪನೆ. ಆ ವಿಜ್ಞಾನಕಲ್ಪನೆಯನ್ನು ಆಧುನಿಕ ವೈದ್ಯಶಾಸ್ತ್ರವು ಒಂದು ಪರಿವರ್ತಿತ ರೀತಿಯಲ್ಲಿ, ಅಂದರೆ ಸ್ವೇಚ್ಛಾಮರಣದ ಬದಲು ಪರೇಚ್ಛಾಮರಣವನ್ನಾಗಿಸಿದೆ. ಇದಕ್ಕೆ ಭೂವಿಖ್ಯಾತ ಉದಾಹರಣೆ: ೨೦೦೫ ರಲ್ಲಿ, ಅಮೆರಿಕದ ಫ಼್ಲಾರಿಡಾದಲ್ಲಿ ನಡೆದ ಟೆರಿ ಶಾವೋ (Terry Chiao) ಎಂಬ ಒಬ್ಬ ಮಹಿಳೆಯ ಸಾವಿನ ಜೀವನ ನಾಟಕ. ಮಸ್ತಿಷ್ಕಮೃತಳಾದ ಆ ಮಹಿಳೆಯನ್ನು, ಅವಳ ಮತಾಂಧತಾಯಿತಂದೆಯರೂ, ಕೆಲವು ಬಲಪಕ್ಷೀಯ ಸಂಪ್ರದಾಯನಿಷ್ಠ ಕ್ರೈಸ್ತಮತದವರೂ, ಅನುದಾತ್ತ ರಾಜಕಾರಣಿಗಳೂ ಮತ್ತು ಇತರ ಜೀವಪರ (ಪ್ರೊ-ಲೈಫ಼್’) ಪಕ್ಷದವರೂ ಮೊಂಡುತನದಿಂದ ಹದಿನೈದು ವರ್ಷಗಳ ಕಾಲ, ಆಧುನಿಕ ವೈದ್ಯಕೀಯ ಸಾಧನಗಳಿಂದ ನಿಶ್ಚೇಷ್ಟ ಸ್ಥಿತಿಯಲ್ಲಿ ಇರಿಸಿದ್ದರು. ಆದರೆ, ಆ ಮಹಿಳೆಯು ಮಸ್ತಿಷ್ಕಮೃತಳಾದುದರಿಂದ ಯಾವ ಯಾತನೆಯನ್ನೂ ಅನುಭವಿಸಲಿಲ್ಲ, ಏಕೆಂದರೆ ಅವಳ ದೇಹದಲ್ಲಿ ಅನುಭವಶಕ್ತಿಯೇ ಇರಲಿಲ್ಲ!  ಆ ಕಾರಣ, ಅವಳ ವಿಷಯದಲ್ಲಿ ಸ್ವೇಚ್ಛಾಮರಣದ ಆವಶ್ಯಕತೆಯೂ ಇರಲಿಲ್ಲ, ಅದರ ಉಪಯುಕ್ತತೆಯೂ ಇರಲಿಲ್ಲ, ಏಕೆಂದರೆ ಅವಳಲ್ಲಿ ಮೊದಲಿಗೆ ಸ್ವೇಚ್ಛೆಯೇ ಇರಲಿಲ್ಲ. ಆದರೂ, ಆ ಮಹಿಳೆಯ (ಅಂತಿಮ) ಮರಣವು ಪರರ ಇಚ್ಛೆಗೆ ಅಧೀನ ವಾಗಿತ್ತು. ಕೊನೆಗೆ, ಸುಪ್ರೀಂ ಕೋರ್ಟ್ ತೀರ್ಮಾನದಿಂದ ಟೆರಿ ಶಾವೋವಿನ ಅಂತಿಮ ಮರಣವು ಸಾಧ್ಯವಾಯಿತು.
 ಅರ್ಜುನನು ಅಜ್ಞಾತವಾಸಕಾಲದಲ್ಲಿ ಬೃಹನ್ನಳೆಯಾಗಿ ವಿರಾಟರಾಜನ ರಾಣೀವಾಸದಲ್ಲಿರುವುದು, (ಭೀಷ್ಮನ ಪರಾಜಯಕ್ಕಾಗಿ,) ಶಿಖಂಡಿಯು ಹೆಣ್ಣಾಗಿ ಹುಟ್ಟಿ ಗಂಡಾಗುವುದು - ಈ ಪ್ರಸಂಗಗಳು ಲಿಂಗರೂಪಾಂತರದ ಸಮಸ್ಯೆ, ಅವಶ್ಯಕತೆ, ಅಭಿಲಾಷೆಗಳು ಹಿಂದಿನ ಕಾಲದಲ್ಲಿಯೂ ಇದ್ದುವೆಂದು ಸೂಚಿಸುವುವು. ಆ ಅಭಿಲಾಷೆಯ ಪುರೋಗದ ಸಾಫಲ್ಯವು ಈಗ ಆಧುನಿಕ ವೈದ್ಯಶಾಸ್ತ್ರದ ಕರಗತವಾಗಿದೆ. ಶಸ್ತ್ರಚಿಕಿತ್ಸೆಯಿಂದ (ಬಾಹ್ಯ) ಹೆಣ್ಣನ್ನು ಗಂಡಾಗಿ, (ಬಾಹ್ಯ) ಗಂಡನ್ನು ಹೆಣ್ಣಾಗಿ ರೂಪಾಂತರಿಸುವುದು ಈಗ ಸಾಮಾನ್ಯವಾಗಿದೆ. ಶಿಖಂಡಿಯ ವಿಷಯದಲ್ಲಿ ಲಿಂಗರೂಪಾಂತರ ಮಾತ್ರ ಆಯಿತು. ಆದರೆ, ಅರ್ಜುನನಿಗೆ ಮೊದಲು ಸಂದರ್ಭಕ್ಕೆ ಉಪಯುಕ್ತವಾದ ಸ್ತ್ರೀರೂಪಕ್ಕೆ ರೂಪಾಂತರ; ಮತ್ತೆ, ಅವನ ಸಂಧಿಗ್ಧ ಪರಿಸ್ಥಿತಿಯು ಪರಿಹಾರವಾದಮೇಲೆ, ಅವನ ನಿಜರೂಪಕ್ಕೆ ಪ್ರತಿರೂಪಾಂತರ, ಅಂದರೆ ಪರಿವರ್ತನಸಂಸ್ಕರಣ (ರಿವರ್ಸ್ ಪ್ರೊಸೀಜರ್’) ಆದುದನ್ನು ಗಮನಿಸತಕ್ಕದ್ದು. ಇವೆಲ್ಲವೂ ಮಹಾ ವಿಜ್ಞಾನಕಲ್ಪನೆಗಳು.
 ಹೀಗೆಯೇ, ದುರ್ಯೋಧನನು ಜಲಸ್ಥಂಭಮಂತ್ರದಿಂದ ಕೆಲವು ದಿನಗಳು ವೈಶಂಪಾಯನ ಸರೋವರದ ಜಲದಲ್ಲಿ ಮುಳುಗಿ ಭೀಮನಿಗೆ ತಿಳಿಯದಂತೆ ಅವಿತುಕೊಂಡಿದ್ದುದ್ದು ಒಂದು ವಿಜ್ಞಾನಕಲ್ಪನೆ. ಅದು ಈಗಿನ ಡೈವಿಂಗ್ ಬೆಲ್’, ’ಡೈವಿಂಗ್ ಚೇಂಬರ್’, ’ಸ್ಕೂಬ ಡೈವಿಂಗ್ಸಲಕರಣೆ, ಮುಂತಾದುವುಗಳ ಪುರೋಗ.

ಈಗ, ರಾಮಾಯಣ ಮತ್ತು ಮಹಾಭಾರತದಲ್ಲಿರುವ ಕೆಲವು ವಿಜ್ಞಾನಾಂಶ ಮತ್ತು ಮನಶ್ಶಾಸ್ತ್ರದ
ವಿಚಾರಗಳನ್ನು ಪರಿಶೀಲಿಸೋಣ:
 ರಾಮಾಯಣದಲ್ಲಿ ಬರುವ ಅಹಲ್ಯಾವೃತ್ತಾಂತವು ನಮ್ಮೆಲ್ಲರಿಗೂ ತಿಳಿದ ಕಥೆಯೇ ಆಗಿದೆ. ಅಹಲ್ಯೆಯು ಇನ್ನೂ ಋತುವತ್ತಾದ ಅಥವಾ ಫಲವತ್ತಾದ (fertile) ಹೆಂಗಸು. ಆದುದರಿಂದ, ಅವಳಿಗೆ ಇನ್ನೂ ಲೈಂಗಿಕ ಚೋದನೆ ( libido), ರತ್ಯಾಸೆಯು ಬಹಳವಾಗಿದೆ. ಗಂಡ ಗೌತಮನು, ಹೆಂಡತಿಯನ್ನು ಆಶ್ರಮದಲ್ಲಿ ಬಿಟ್ಟು, ತಾನು ಇಂದ್ರಪದವಿಯನ್ನು ಪಡೆಯಬೇಕೆಂದು ತಪಸ್ಸಿನಲ್ಲಿ ನಿರತನಾಗಿದ್ದಾನೆ. (ಇದು, ಒಬ್ಬ ಆಧುನಿಕ ಕಾರ್ಪೊರೇಟ್ ಎಕ್ಸೆಕ್ಯುಟಿವ್ತನ್ನ ಪ್ರಗತಿ, ಪ್ರಖ್ಯಾತಿಗಳಲ್ಲಿ ಆಸಕ್ತನಾಗಿ, ಮನೆಯಲ್ಲಿ ಹೆಂಡತಿಯ ಸ್ತ್ರೀಸಹಜವಾದ ಆಸೆ, ಆಕಾಂಕ್ಷೆಗಳನ್ನು ಉಪೇಕ್ಷಿಸುವಂತೆ.) ಅದುಕಾರಣ, ಅಹಲ್ಯೆಯ ಕಾಮದಾಹಕ್ಕೆ ಉಪಶಮನವಿಲ್ಲದಾಗಿದೆ. ಆ ಸಂದರ್ಭಕ್ಕೆ ಸರಿಯಾಗಿ ಇಂದ್ರನು ಅಹಲ್ಯೆಯ ಸೌಂದರ್ಯಕ್ಕೆ ಮೋಹಗೊಂಡು, ಅವಳು ಏಕಾಂಗಿಯಾಗಿರುವ ಸಮಯವನ್ನು ನೋಡಿ ಆಶ್ರಮಕ್ಕೆ ಬರುತ್ತಾನೆ. ಕಾಮಾತುರಳಾದ ಅಹಲ್ಯೆಯು, ಇಂದ್ರನ ಪ್ರಣಯಸಂಧಾನಗಳಿಗೆ ಸುಲಭವಾಗಿ ಮನಸೋತು ಅವನಿಗೆ ವಶಳಾಗುತ್ತಾಳೆ. ಈ ಪ್ರಕರಣದಿಂದ, ರಾಮಾಯಣಕಾಲದಲ್ಲಿಯೂ ಹತಾಶೆಯ ಗೃಹಿಣಿಯರು (desperate housewives ) ಇದ್ದರು ಎನ್ನುವುದು ವಿದಿತವಾಗುವುದು. ಇಂತಹ ಮನೋವೃತ್ತಿಯು ಮುನಿಜನರಲ್ಲಿಯೇ ಇರಬೇಕಾದರೆ, ಇನ್ನು ಸಾಮಾನ್ಯಜನರ ಅವಸ್ಥೆಯೇನಾಗಿದ್ದೀತು? ಅಲ್ಲದೆ, ರಾಮಾಯಣದ ಕಾಲಕ್ಕೂ, ನಮ್ಮ ಆಧುನಿಕ ಕಾಲಕ್ಕೂ ಏನು ವ್ಯತ್ಯಾಸ? ಈ ಪ್ರಕರಣದಿಂದ, ಪ್ರಕೃತಿಗೆ, ಪ್ರಕೃತಿನಿಯಮಕ್ಕೆ, ಮಾನವಸ್ವಭಾವಕ್ಕೆ  ಕಾಲವ್ಯತ್ಯಾಸವಿಲ್ಲ ಎನ್ನುವುದು ಖಚಿತವಾಗುವುದು. ಮುಂದೆ, ಗೌತಮನ ಶಾಪದಿಂದ, ಇಂದ್ರನು ತನ್ನ ಎರಡು ವೃಷಣಗಳನ್ನೂ (testicles)  ಕಳೆದುಕೊಳ್ಳುತ್ತಾನೆ. ಅದಕ್ಕೆ ಪರಿಹಾರವಾಗಿ, ದೇವತೆಗಳು ಯಜ್ಞಪಶುವಾಗಿದ್ದಒಂದು ಮೇಕೆಯ ವೃಷಣಗಳನ್ನು ತಂದು ಇಂದ್ರನಿಗೆ ಅಂಟಿಸುತ್ತಾರೆ. ಇದನ್ನು ಇಂದಿನ ಪ್ರಾಣಿ-ಮಾನವ ಅಂಗವಿಕ್ಷೇಪದ (organ transplant ನ) ) ಪುರೋಗವೆಂದು ಪರಿಗಣಿಸಬಹುದು .
 ದ್ರೌಪದೀವಸ್ತ್ರಾಪಹರಣದ ಪ್ರಸಂಗದಲ್ಲಿ ಯಾವ ಕಲ್ಪನೆಯೂ ಇಲ್ಲ, ಯಾವ ಅಪ್ರಾಕೃತವೂ ಇಲ್ಲ. ಆದರೂ, ಆ ವೃತ್ತಾಂತದಲ್ಲಿ ಒಂದು ಪುಂಮನಶ್ಶಾಸ್ತ್ರವು  (male psychology ) ಅಡಗಿರುವುದನ್ನು ಕಾಣಬಹುದು. ತುಂಬಿದ ಕೌರವ ರಾಜಸಭೆಯಲ್ಲಿ, ಮಹಿಷಿಯಾದರೂ ಅಬಲೆಯಾದ ದ್ರೌಪದಿಯನ್ನು ಎಳೆತಂದು, ದುರುಳ ದುಶ್ಶಾಸನನು ಅವಳ ಸೀರೆಯನ್ನೆಳೆದು ಮಾನಭಂಗ ಮಾಡುತ್ತಿದ್ದಾಗ, ಭೀಷ್ಮ, ದ್ರೋಣ, ಕೃಪಾದಿ ಮಹಾಪ್ರಾಜ್ಞರು ಯಾವ ಕಾರಣ ಅಥವಾ ನೆಪದಿಂದಲೇ ಆಗಲಿ, ನೀತಿಬಾಹಿರರಂತೆ  ತೆಪ್ಪಗೆ ಕುಳಿತು ನೋಡುತ್ತಿದ್ದುದು, ಹೆಣ್ಣಿನ ನಗ್ನತೆಯನ್ನು ನೋಡಬೇಕೆಂಬ, ಪುರುಷರ ಸ್ವಭಾವಸಿದ್ಧ ವೀಕ್ಷಣವಾಂಛೆಯನ್ನು(voyeurism)  ಉದಾಹರಿಸುವುದು. ಈ ತೆರನಾದ ಖಂಡನೆಯನ್ನು ನಿವಾರಿಸಲೋಸುಗವೋ ಏನೋ, ಕೆಲವರು ದ್ರೌಪದೀವಸ್ತ್ರಾಪಹರಣದ ಪ್ರಸಂಗವು ಮಹಾಭಾರತದ ಮೂಲ, ಜಯಕಾವ್ಯದಲ್ಲಿ ಇಲ್ಲವೆನ್ನುತ್ತಾರೆ. ಆದರೆ, ಅದು ಯಥಾರ್ಥವೋ, ಇಲ್ಲವೋ, ಲೇಖಕರಿಗೆ ತಿಳಿಯದು, ಏಕೆಂದರೆ ಅವರು ಆ ಕಾವ್ಯವನ್ನು ಓದಿಲ್ಲ.
 ಶಂತನು ಮಹಾರಾಜನಿಗೆ ಗಂಗೆಯ ಗರ್ಭದಲ್ಲಿ ಭೀಷ್ಮನು ಜನಿಸಿದನು; ಸತ್ಯವತಿಯಲ್ಲಿ ಚಿತ್ರವೀರ್ಯ, ವಿಚಿತ್ರವೀರ್ಯ ಎಂಬ ಇಬ್ಬರು ಗಂಡುಮಕ್ಕಳು ಹುಟ್ಟಿದರು. ಚಿತ್ರವೀರ್ಯನು ಚಿಕ್ಕ ವಯಸ್ಸಿನಲ್ಲಿಯೇ ಖಾಯಿಲೆಯಿಂದ ಮೃತಿಹೊಂದುತ್ತಾನೆ. ವಿಚಿತ್ರವೀರ್ಯನಿಗೆ ಅಂಬಿಕೆ, ಅಂಬಾಲಿಕೆ ಎಂಬ ಇಬ್ಬರು ಹೆಂಡತಿಯರು. ಆದರೆ, ಅವನೂ ಸಹ ಸಂತಾನವಿಲ್ಲದೆಯೇ ಒಂದು ಯುದ್ಧದಲ್ಲಿ ಮಡಿಯುತ್ತಾನೆ. ತನ್ನ ತಂದೆ, ಶಂತನು ಮಹಾರಾಜನು ಸತ್ಯವತಿಯನ್ನು ಮದುವೆಯಾಗುವ ಮೊದಲು, ರಾಜನಿಗೆ ಸತ್ಯವತಿಯಲ್ಲಿ ಹುಟ್ಟುವ ಮಗನೇ ಮುಂದೆ ರಾಜನಾಗುವುದನ್ನು ಖಾತರಿಸಲು, ಭೀಷ್ಮನು ತಾನು ಎಂದೂ ರಾಜನಾಗುವುದಿಲ್ಲವೆಂದೂ ಮತ್ತು, ಆ ವಚನವನ್ನು ಸಾಧಿಸಲು, ಮದುವೆಯನ್ನು ಸಹ ಮಾಡಿಕೊಳ್ಳುವುದಿಲ್ಲವೆಂದೂ ಸತ್ಯವತಿಯ ತಂದೆಗೆ ಮಾತು ಕೊಟ್ಟಿದ್ದನು. ಆ ಕಾರಣ, ಈಗ ಕುರು ವಂಶದ ರಾಜ್ಯಕ್ಕೆ ಯಾರೂ ವಾರಸುದಾರರಿಲ್ಲವಾಯಿತು. ಹಿಂದೆ, ಸತ್ಯವತಿಗೆ ಪರಾಶರಮಹರ್ಷಿಯಿಂದ ಕೃಷ್ಣದ್ವೈಪಾಯನ ಎಂಬ ಇನ್ನೊಬ್ಬ ಮಗನಿದ್ದನು. ಅವನೇ ಮಹಾಭಾರತವನ್ನು (ಮಹಾಭಾರತದ ಮೂಲ, ಜಯಕಾವ್ಯವನ್ನು) ಬರೆದ ಮಹಾಕವಿ ವ್ಯಾಸಮಹರ್ಷಿ. ಸತ್ಯವತಿಯು, ತನ್ನ ಜ್ಯೇಷ್ಠ ಪುತ್ರ, ವ್ಯಾಸಮಹರ್ಷಿಯನ್ನು ಕರೆದು, ಅಂಬಿಕೆ, ಅಂಬಾಲಿಕೆಯರಲ್ಲಿ ಸಂತಾನೋತ್ಪತ್ತಿ ಮಾಡುವಂತೆ ಕೇಳಿಕೊಳ್ಳುತ್ತಾಳೆ. ತಾಯಿಯ ಆದೇಶಕ್ಕೆ ವ್ಯಾಸರು ಒಪ್ಪುತ್ತಾರೆ. (ಇಲ್ಲಿ, ವ್ಯಾಸರು ವಿಚಿತ್ರವೀರ್ಯನ ಇಬ್ಬರು ವಿಧವೆಯರನ್ನೂ ವಿವಾಹವಾದರು, ಎಂಬ ಪಾಠಾಂತರವಿದೆ.)  ವ್ಯಾಸರ ಶಯ್ಯಾಗೃಹಕ್ಕೆ ಹೋಗುವಾಗ, ಅಂಬಿಕೆ, ಅಂಬಾಲಿಕೆ ಇಬ್ಬರೂ ಹಿಂಜರಿದು, ತಮ್ಮ ಅಂತಃಪುರದ ದಾಸಿಯೊಬ್ಬಳನ್ನು ಒಳಕ್ಕೆ ಕಳುಹಿಸುತ್ತಾರೆ. ಆ ದಾಸಿಯು ಸ್ವಲ್ಪವೂ ಅಳುಕದೆ ಸಂತೋಷದಿಂದ ಭಕ್ತಿಯುತಳಾಗಿ ವ್ಯಾಸರ ಬಳಿಗೆ ಹೋಗುತ್ತಾಳೆ. ಅವಳು ಗರ್ಭವತಿಯಾಗಿ ಪರಮ ಭಾಗವತನಾದ ವಿದುರನನ್ನು ಪಡೆಯುತ್ತಾಳೆ. ಮಾರನೆಯ ದಿನ, ಅಂಬಿಕೆಯು ಒಳಕ್ಕೆ ಹೋಗಲು ಒಪ್ಪುತ್ತಾಳೆ. ಆದರೆ, ಸಂಸರ್ಗದ ಸಮಯದಲ್ಲಿ, ಎರಡು ಕಣ್ಣುಗಳನ್ನೂ ಗಟ್ಟಿಯಾಗಿ ಮುಚ್ಚಿಕೊಂಡು ಬಿಡುತ್ತಾಳೆ. ಆ ಕಾರಣ, ಮುಂದೆ ಅವಳಿಗೆ ಜಾತ್ಯಂಧನಾದ ಧೃತರಾಷ್ಟ್ರನು ಹುಟ್ಟುತ್ತಾನೆ. ಮೂರನೆಯ ದಿವಸ, ಅಂಬಾಲಿಕೆಯ ಸರದಿ. ವ್ಯಾಸರ ಬಳಿಗೆ ಹೋದಾಗ, ಅವಳು ಭಯಪಟ್ಟು ಬಿಳಿಚಿಕೊಂಡು ಬಿಡುತ್ತಾಳೆ; ಭಯಕ್ಕೆ ಅವಳ ಚರ್ಮದಿಂದ ರಕ್ತವೆಲ್ಲಾ ಶೋಷಿತವಾಗಿ ಬಿಡುವುದು. ಅದರಿಂದ, ಅವಳಿಗೆ ಪಾಂಡುರೋಗ, ಅಂದರೆ ಬಿಳಿತೊನ್ನು ರೋಗ, ಇರುವ ಪಾಂಡುರಾಯನು ಜನಿಸುತ್ತಾನೆ. ಇಲ್ಲಿ, ಕೆಲವು ಧರ್ಮಶುದ್ಧಿವಾದಿಗಳು   (puritans) , "ಪ್ರತ್ಯಕ್ಷ ಮೈಥುನವು ನಡೆಯಲಿಲ್ಲ; ವ್ಯಾಸರು ತಮ್ಮ ತಪೋಶಕ್ತಿಯಿಂದಲೇ ಆ ಮೂವರು ಹೆಂಗಸರನ್ನೂ ಗರ್ಭವತಿಯರನ್ನಾಗಿಸಿದರು." ಎಂದು ಅಭಿಪ್ರಾಯಪಡುತ್ತಾರೆ. ಹಾಗಾದರೆ, ಆ ಮಹಿಳೆಯರು ವ್ಯಾಸರ ಶಯ್ಯಾಗೃಹಕ್ಕೆ, ಅದೂ ಒಬ್ಬೊಬ್ಬರೇ, ಏಕೆ ಹೋಗಬೇಕಾಗಿತ್ತು? ಎನ್ನುವ ಪ್ರಶ್ನೆ ಏಳುವುದು. ಇರಲಿ, ಧರ್ಮಶುದ್ಧಿವಾದಿಗಳ ಅಭಿಪ್ರಾಯವನ್ನೇ ಅನುಮೋದಿಸಿದರೂ, ಅದನ್ನು ಇಂದಿನ ಅಸ್ವಾಭಾವಿಕ ಅಥವಾ ಕೃತಕ ವೀರ್ಯನಿಕ್ಷೇಪದ, ಅಂದರೆ artificial insemination , ಪುರೋಗ ಎಂದು ಪರಿಗಣಿಸಬಹುದು.
 ಈಗ, ಇಲ್ಲಿ ವಿಜ್ಞಾನವನ್ನು ಪರಿಶೀಲಿಸುವ ಮೊದಲು, ಕೆಲವು ಸಾಮಾಜಿಕ ಅಂಶಗಳನ್ನು ಗಮನಿಸಬೇಕು. ಹಿಂದೆ ಸಮಾಜದಲ್ಲಿ ಎಷ್ಟು ನಮನೀಯತೆ ಇತ್ತು, ಎಷ್ಟು ಸಹನೆ, ಸಂಧಾನಭಾವ ಇತ್ತು ಎನ್ನುವುದು ಮೇಲೆ ಹೇಳಿರುವ ಪ್ರಸಂಗಗಳಿಂದಲೂ, ಮತ್ತು ಶಾಕುಂತಲೆಯ ಜನನ, ಕರ್ಣನ ಮತ್ತು ಪಾಂಡವರ ಜನನ, ಮುಂತಾದ ಇತರ ಸಂಭವಗಳಿಂದಲೂ ತಿಳಿದುಬರುವುದು. ಧರ್ಮಯುಗ, ಪವಿತ್ರಕಾಲ ಎನ್ನುವ ಆ ಪ್ರಾಚೀನಕಾಲದಲ್ಲಿಯೂ ಈಗಿನ ಕಾಲದ ಸಮಸ್ಯೆಗಳೆಂದು ಪರಿಗಣಿಸಲ್ಪಡುವ ಬಹಿರ್ದಾಂಪತ್ಯಪ್ರಣಯ (extra marital affair), , ವಿವಾಹಪೂರ್ವರತಿ (premarital sex),  ಹದಿವಯರತಿ (teenage sex),  ಹದಿವಯಬಸಿರು  (teenage pregnancy)  ಮುಂತಾದುವು ಸಾಧಾರಣವಾಗಿತ್ತು ಎನ್ನುವುದು ವಿಶದವಾಗುವುದು. ಅಷ್ಟೇ ಅಲ್ಲ. ಪರಸ್ತ್ರ್ರೀಯಲ್ಲಿ ಅಥವಾ ಪರಪುರುಷನಿಂದ ಹುಟ್ಟಿದ ಮಗುವನ್ನು ಅಧರ್ಮಜಶಿಶು, ಅನೌರಸಶಿಶು (illegitimate child)  ಎಂದು ಅನಾದರಿಸುವುದಾಗಲೀ, ನಿರಾಕರಿಸುವುದಾಗಲೀ ಇರಲಿಲ್ಲವೆಂದೂ ತೋರುವುದು. ಮಹರ್ಷಿ ವೇದವ್ಯಾಸರೇ ಒಬ್ಬ ಅನೌರಸ (ವಿವಾಹಪೂರ್ವಜನಿತ) ಶಿಶು! ನಮ್ಮ ಪ್ರಸ್ತುತ ಹಿಂದು ಸಮಾಜದಲ್ಲಿ ಕಾಣ್ಬರುವ ವೈಜಾತ್ಯ, ಹಾದರಜನ್ಮ, ಮತೋತ್ತಮತೆ, ಮೇಲುಜಾತಿ, ಕೀಳುಜಾತಿ ಎನ್ನುವುದೆಲ್ಲವೂ ಕೇವಲ ಇತ್ತೀಚಿನ ವಿದ್ಯಮಾನಗಳೆಂದು ತೋರುವುದು. ಇನ್ನೊಂದು ಗಮನಾರ್ಹವಾದ ವಿಷಯ: ಗಂಡಸರಿಗೆ ಸಾಮಾನ್ಯವಾಗಿ ಬಹುಪತ್ನೀಕಚಿಂತನೆ (polygamous thoughts), ಆಕರ್ಷಣೀಯ ತರುಣಿಯರಮೇಲೆ ತಾತ್ಕಾಲಿಕ ಮೋಹಾವಿಷ್ಟತೆ, ನಿರಂತರವಿಲಾಸಾಲೋಚನೆ ಮುಂತಾದ ಲೈಂಗಿಕವ್ಯಸನಗಳು ಇರುವುದು ಎಲ್ಲರಿಗೂ ತಿಳಿದಿರುವ ರಹಸ್ಯವೇ. ಅದರಂತೆಯೇ, ಹೆಂಗಸರಿಗೂ ಬಹುಪತಿಕಾಲೋಚನೆ (polyandrous  thoughts),  ಇರುವುದು, ದಷ್ಟಪುಷ್ಟ ಪುರುಷರನ್ನು, ಪ್ರತಿಭಾವಂತ, ಬುದ್ಧಿವಂತ ಅಥವಾ ಕಲಾವಂತ ಪುರುಷರನ್ನು ಕಂಡು, ಆಂತರ್ಯವಾಗಿಯಾದರೂ, ಅವರಲ್ಲಿ ಮೋಹಗೊಳ್ಳುವುದು, ಅವರನ್ನು ಇಚ್ಛೆಪಡುವುದು, ಮುಂತಾದ ಮನೋವಿಕಾರಗಳು ನಾವು ಯೋಚಿಸುವಷ್ಟು ಅಪರೂಪವೇನಲ್ಲ ಎನ್ನುವುದೂ ವಿದಿತವಾಗುವುದು. ಉದಾಹರಣೆಗೆ: ಕುಂತಿಯ ಮಾತಿನ ನೆಪಮಾತ್ರದಿಂದಲೇ ದ್ರೌಪದಿಯು, ಯಾವ ಪ್ರತಿಭಟನೆಯೂ ಇಲ್ಲದೆ, ಐದು ಮಂದಿ ಪಾಂಡವರನ್ನೂ ಮದುವೆಯಾಗಲು ಒಪ್ಪಿದುದು ಅವಳ ಬಹುಪತಿಕಾಭಿಲಾಷೆಯನ್ನು ಸೂಚಿಸುವುದು. ಅಷ್ಟೇ ಅಲ್ಲದೆ, ಮುಂದೆ, ಅವಳು ಕರ್ಣನನ್ನು ಕಂಡಾಗ, "ಅವನೂ ನನ್ನ ಗಂಡನಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು" ಎಂದುಕೊಂಡಳಂತೆ. ಇತ್ತೀಚಿನ ವೈಜ್ಞಾನಿಕ ಸಂಶೋಧನೆಗಳಿಂದ, ಅಂಡೋತ್ಸರ್ಜನ (ovulation)  ಸಮಯದಲ್ಲಿ ಹೆಂಗಸರು, ಅದರಲ್ಲೂ ದಾಂಪತ್ಯಸುಖದಲ್ಲಿ ಹತಾಶರಾದ ಅಥವಾ ಅತೃಪ್ತರಾದ ಹೆಂಗಸರು, ಬಾಲವಿಧವೆಯರು ಹಾದರಿಸುವುದು ಅಥವಾ ಮಾನಸಿಕವಾಗಿಯಾದರೂ ಹಾದರ ಯೋಚನೆ ಮಾಡುವುದು ಅವರ ಪ್ರಕೃತಿಸಹಜಶೀಲ ಎನ್ನುವುದು ವರದಿಯಾಗಿದೆ.  (Two New Studies Find Women More Likely to Cheat During Ovulation, ABC News, 4 Jan 2006). ). ದಾಂಪತ್ಯವಿರಸವಿದ್ದಾಗ, ಗಂಡನ ಪ್ರೇಮದಲ್ಲಿ ಅನುಮಾನವಿದ್ದಾಗ, ಗಂಡನಿಂದ ತನ್ನ ರತ್ಯಾಸೆಯು ತೃಪ್ತಿಕರವಾಗಿ ಈಡೇರದಿದ್ದಾಗ, ಇತ್ಯಾದಿ ಪರಿಸ್ಥಿತಿಗಳಲ್ಲಿ ಹೆಂಡತಿಗೆ ಪರಪುರುಷರ ಮೇಲೆ ಮನಸ್ಸಾಗುವುದು ಸಹಜ. ಆದರೆ, ಸಾಮಾಜಿಕ, ಸಾಂಸಾರಿಕ, ವೈಯ್ಯಕ್ತಿಕ ಮುಂತಾದ ನಾನಾ ಕಾರಣಗಳಿಂದಾಗಿ ಹೆಂಗಸರು ತಮ್ಮ ಬಹುಪತಿಕಚಿಂತನೆಯನ್ನಾಗಲೀ, ವಿಲಾಸಾಲೋಚನೆಯನ್ನಾಗಲೀ ಒಪ್ಪಿಕೊಳ್ಳುವುದೂ ಕಷ್ಟ, ವ್ಯಕ್ತಪಡಿಸುವುದು ಮತ್ತೂ ಕಷ್ಟ. ತನ್ನ ಮಕ್ಕಳ ಪುರೋಭಿವೃದ್ಧಿಗಾಗಿ, ತನ್ನ ಸಂಸಾರದ ಹಿತಕ್ಕಾಗಿ ಒಬ್ಬ ಹೆಣ್ಣು ದಾಂಪತ್ಯಸ್ಥಿರತೆಯನ್ನೂ, ಸಂಸಾರಭದ್ರತೆಯನ್ನೂ ಆಶಿಸುತ್ತಾಳೆ. ಆ ಕಾರಣಕ್ಕಾಗಿಯಾದರೂ ಅವಳು ಏಕಪತಿತ್ವವನ್ನು ಅನುಸರಿಸುತ್ತಾಳೆ. ಹಾಗೆಯೇ ಪುರುಷನೂ, ಸಮಾಜದಲ್ಲಿ ತನ್ನ ಗೌರವ, ಗಣ್ಯತೆಯನ್ನು ಕಾಪಾಡಿಕೊಳ್ಳಬೇಕೆಂದು ದಾಂಪತ್ಯಸ್ಥಿರತೆ, ಸಂಸಾರಭದ್ರತೆಯನ್ನಾಶಿಸುವುದು, ಅನುಸರಿಸುವುದು ಬಹಳ ಸಾಮಾನ್ಯವಾದುದು.
 ಇನ್ನು ವಿಜ್ಞಾನಾಂಶವನ್ನು ಪರಿಶೀಲಿಸೋಣ. ದಾಸಿಯು ಶುದ್ಧ ಮನಸ್ಕಳಾಗಿ ಶ್ರದ್ಧಾಭಕ್ತಿಯಿಂದ ವ್ಯಾಸರೊಂದಿಗೆ ಕೂಡಿ ಗರ್ಭಧಾರಣೆ ಮಾಡಿದಳು. ಅದಕ್ಕನುಗುಣವಾಗಿ ಅವಳಿಗೆ ಪ್ರಾಜ್ಞನೂ, ಮಹಾಮೇಧಾವಿಯೂ ಆದ ವಿದುರನು ಜನಿಸಿದನು. ಅದೇ ಅಂಬಿಕೆಯು ವ್ಯಾಸರೊಂದಿಗೆ ಸಂಸರ್ಗವನ್ನು ಕಣ್ಣುಮುಚ್ಚಿಕೊಂಡು ಸಹಿಸಿದಳೇ ಹೊರತು, ನಿರಾಳಮನಸ್ಸಿನಿಂದ, ಆನಂದದಿಂದ ರತಿಸುಖವನ್ನು ಅನುಭವಿಸಲಿಲ್ಲ. ತತ್ಪರಿಣಾಮವಾಗಿ, ಅವಳಿಗೆ ಧೃತರಾಷ್ಟ್ರನು ಅಂಧನಾಗಿ (ಅಲ್ಲದೆ, ಮಂದನೂ ಆಗಿ) ಹುಟ್ಟಿದನು. ಹಾಗೆಯೇ, ಅಂಬಾಲಿಕೆಯೂ ಸಹ ಸುರತಸಮಯದಲ್ಲಿ ಭಯಪಟ್ಟು ಬಿಳಿಚಿಕೊಂಡ ಕಾರಣ, ಅವಳು ದೇಹಾದ್ಯಂತ ಪಾಂಡುರೋಗ ಪೀಡಿತನಾದ ಪಾಂಡುರಾಯನನ್ನು ಹಡೆದಳು.
 ಈ ಮೇಲಿನ ಉದಾಹರಣೆಗಳಿಂದ, ಗರ್ಭಗ್ರಹಣಸಮಯದಲ್ಲಿ ಭಾವಿ ತಾಯಿಯ ಮನೋವೃತ್ತಿಯು ಒಳಗೆ ಬುದ್ಬುದಾಕಾರವನ್ನು ತಳೆಯುತ್ತಲಿರುವ ಶಿಶುವಿನ ಮೇಲೆ ಎಷ್ಟು ಮಟ್ಟಿಗೆ ಪರಿಣಾಮವನ್ನುಂಟುಮಾಡುವುದು ಎಂದು ತಿಳಿಯುವುದು. ಈ ತೆರನಾದ ಪರಿಣಾಮವು ರತಿಸಮಯದಲ್ಲಿನ ತಂದೆಯ ಮನೋಭಾವಕ್ಕೂ ಅನ್ವಯಿಸುವುದು ಎಂದು ಹೇಳಲವಶ್ಯಕತೆಯಿಲ್ಲ. ಈ ಕಾರಣದಿಂದಲೇ, ಶಯ್ಯಾಗೃಹದಲ್ಲಿ ಇರುವ ಯಾವ ವಸ್ತುವೂ ಮನೋಲ್ಲಾಸಕರವೂ, ಆನಂದದಾಯಕವೂ ಆಗಿರಬೇಕೆಂದು ಹಿರಿಯರು ಹೇಳುವುದು. ಇದೇ ಜ್ಞಾನವನ್ನು ಜೂಜು ಕುದುರೆಗಳ ಮತ್ತು ಸೈನ್ಯ ಕುದುರೆಗಳ ತಳಿವರ್ಧನೆಯಲ್ಲಿ ಉಪಯೋಗಿಸುತ್ತಾರೆಂದು ಹೇಳುತ್ತಾರೆ. ಗರ್ಭಧಾರಣೆಯಾದನಂತರವೂ ನಿರೀಕ್ಷಕ (expectant) ತಾಯಿಯ ಮನೋಧರ್ಮವೂ, ಅವಳ ಅಭ್ಯಾಸ, ನಡವಳಿಕೆಗಳೂ ಗರ್ಭದಲ್ಲಿರುವ ಶಿಶುವಿನ ಮೇಲೆ ಸಾಕಷ್ಟು ಪರಿಣಾಮವನ್ನು ಉಂಟುಮಾಡುವುದೆಂದು ತಿಳಿದಿದೆ. ಸುಭದ್ರಾರ್ಜುನರ ಮಗ ಅಭಿಮನ್ಯುವು ಮಹಾಭಾರತಯುದ್ಧದಲ್ಲಿ ಚಕ್ರವ್ಯೂಹವನ್ನು ಭೇದಿಸಿ ಒಳಹೊಕ್ಕು, ಶತ್ರುಗಳನ್ನು ಸದೆಬಡಿದಮೇಲೆ,  ವ್ಯೂಹದಿಂದ ಹೊರಕ್ಕೆ ಬರುವುದು ತಿಳಿಯದೆ, ಶತ್ರುಗಳ ಕೈಗೆ ಸಿಕ್ಕಿ ಮರಣಹೊಂದಿದುದು ಒಂದು ಉದಾಹರಣೆ. ಇದು ನಮ್ಮೆಲ್ಲರಿಗೂ ತಿಳಿದಿರುವ ಗರ್ಭಿಣಿಯಾದ ಸುಭದ್ರಾಳೊಂದಿಗೆ ಅವಳ ಅಣ್ಣ ಶ್ರೀಕೃಷ್ಣನು ಮಾಡಿದ ಸಂವಾದದ ಕಥೆ. ಅದೊಂದು ಪುರಾಣಕಥೆ. ಆದರೆ, ಇತ್ತೀಚಿಗೆ, ಅಂದರೆ ಮೇ ೨೦೦೬ ರಲ್ಲಿ, ಪ್ರಕಟವಾದ ಒಂದು ವಿಜ್ಞಾನ ಸಂಶೋಧನ ವರದಿಯಲ್ಲಿ, ನಿರೀಕ್ಷಕ ತಾಯಿಯ ಕೇವಲ ಅಶನಪದ್ಧತಿಯು ಸಹ ಹೇಗೆ ಅವಳ ಗರ್ಭದಲ್ಲಿರುವ ಶಿಶುವಿನ ಮುಂದಣ ಅಶನಪದ್ಧತಿಯನ್ನು ನಿರ್ಧರಿಸುವುದು ಎಂದು ಹೇಳಿದೆ. ಆದುದರಿಂದಲೇ, ಗರ್ಭಿಣಿಯರು ಸದಾ ಸದ್ಭಾವನೆ, ಸದ್ಯೋಚನೆ, ಸದ್ವರ್ತನೆ ಮತ್ತು ಯೋಗ್ಯಾಹಾರಪದ್ಧತಿಗಳಲ್ಲಿ ಪ್ರವರ್ತಿಸುವುದು ಅವಶ್ಯಕ. ಇಲ್ಲಿ ತಾಯಂದಿರ ಜವಾಬ್ದಾರಿ ಸ್ವಲ್ಪ ಗುರುತರ, ನಿಜ. ಆದರೆ ಅದು ಪ್ರಾದೇಶಿಕಫಲವಷ್ಟೆ.

*         *         *

 
ಮೇಲೆ ನಿರ್ದೇಶಿಸಿರುವುದು ಸರ್ವಸಾರಪಟ್ಟಿಯಲ್ಲ. ಇನ್ನೂ ಅನೇಕ ವಿಜ್ಞಾನಕಲ್ಪನೆಗಳು, ಮಾನವಮನಃಶಾಸ್ತ್ರಾಂಶಗಳು, ವೈಜ್ಞಾನಿಕ ಮತ್ತು ಸಾಮಾಜಿಕಾಂಶಗಳು, ರಾಮಾಯಣ, ಮಹಾಭಾರತ ಕಥೆಗಳಲ್ಲಿ, ಹೇರಳವಾಗಿವೆ. ಕೆಲವು ದೃಷ್ಟಾಂತಗಳು ಕಥೆಯ ಸ್ವಾರಸ್ಯವನ್ನು ಹೆಚ್ಚಿಸಿ, ಓದುಗರಲ್ಲಿ ಹೆಚ್ಚು ಕುತೂಹಲವನ್ನುಂಟುಮಾಡುವುವು. ಮತ್ತೆ ಕೆಲವು ಪ್ರಸಂಗಗಳು ಒಂದು ವ್ಯಕ್ತಿಯ ಅಥವಾ ಒಂದು ಸನ್ನಿವೇಶದ ಮಹತ್ವವನ್ನು ಎತ್ತಿ ತೋರಿಸುವುವು. ಹುಟ್ಟಿದ ಕೂಡಲೇ ಆಂಜನೇಯನು ಸೂರ್ಯವನ್ನು "ಕೀಳಲು" ಆಕಾಶಕ್ಕೆ ಹಾರಿದುದು ಯಥಾರ್ಥವಲ್ಲ. ಆದರೆ, ಅದು ಆಂಜನೇಯನ ವ್ಯಕ್ತಿತ್ವಕ್ಕೆ ಮತ್ತು ರಾಮಾಯಣಕಥೆಗೇ ಒಂದು ಬಗೆಯ ಸೊಗಸನ್ನು ತರುವುದು. ಅಲ್ಲದೆ, ಮುಂದೆ ರಾಮಾಯಣದಲ್ಲಿ ಸೀತಾನ್ವೇಷಣೆಗೆ ಮತ್ತು ಓಷಧಿಪರ್ವತವನ್ನು ತರುವುದಕ್ಕೆ ಉಪಯುಕ್ತವೂ, ಅವಶ್ಯವೂ ಆದ, ಹನುಮಂತನ ಉತ್ಪತನಶಕ್ತಿಯ ಮಹತ್ವವನ್ನು ಮುನ್ಸೂಚಿಸುವುದು. ಹಾಗೆಯೇ, ರಾವಣನಿಗೆ ಹತ್ತು ತಲೆಗಳಿರುವುದು ಒಂದು ಲಕ್ಷಣ ಮಾತ್ರ. ಆ ಹತ್ತು ತಲೆಗಳು ಮಾನವನ ಐದು ಜ್ಞಾನೇಂದ್ರಿಯಗಳನ್ನೂ ಮತ್ತು ಐದು ಕರ್ಮೇಂದ್ರಿಯಗಳನ್ನೂ ಪ್ರತಿನಿಧಿಸುವುವು. ರಾವಣವಧೆಯಾದನಂತರ, ಹನುಮಂತನು, ಸೀತೆಯನ್ನು ರಾಮನ ಸನ್ನಿಧಾನಕ್ಕೆ ಕರೆತರಲು, ಅವಳ ಬಳಿಗೆ ಹೋದಾಗ, ಆ ಸಾಧ್ವಿಯ ಸುತ್ತಲೂ ಕಾವಲಿದ್ದ ಮತ್ತು ಹಿಂದೆ ಅವಳಿಗೆ ಬಹಳವಾಗಿ ಕಿರುಕುಳ ಕೊಡುತ್ತಿದ್ದ, ರಾಕ್ಷಸಿಯರನ್ನು ನೋಡಿ, ಬಹು ರೋಷಯುಕ್ತನಾಗಿ ಅವರನ್ನೆಲ್ಲಾ ಕೊಲ್ಲಲು ಸಿದ್ಧಗೊಳ್ಳುತ್ತಾನೆ. ಆಗ ರಾಕ್ಷಸಿಯರೆಲ್ಲಾ ಭಯದಿಂದ ಸೀತಾದೇವಿಯಲ್ಲಿ ಶರಣು ಹೋಗುತ್ತಾರೆ. ಆ ಸಮಯದಲ್ಲಿ, ಸೀತೆಯು ಆಂಜನೇಯನನ್ನು ತಡೆದು, ಅವನ ಕೋಪಶಮನ ಮಾಡಲು, ಅವನಿಗೊಂದು ಕರಡಿ ಕಥೆಯನ್ನು ಹೇಳುತ್ತಾಳೆ. ಆ ಕಥೆಯು, ಪ್ರಾಣಿಮಾತ್ರವಾದ ಒಂದು ಕರಡಿಯ ನಡತೆಯ ಮೂಲಕ, ಶರಣಾಗತವಾತ್ಸಲ್ಯದ ಶ್ರೇಷ್ಠತೆಯನ್ನು ಒತ್ತಿ ಸಾರುವುದಲ್ಲದೆ, ಮಾನವನ ಸ್ವಾರ್ಥಪರತೆ ಮತ್ತು ಕೃತಘ್ನತೆಯನ್ನು ಎತ್ತಿ ತೋರಿಸುವುದು.
 ಈ ಪ್ರಾಚೀನ ಕೃತಿಗಳಲ್ಲಿ ಹಲವಾರು ಸಾರ್ವ್ವತ್ರಿಕ ಮತ್ತು ಸರ್ವಕಾಲಿಕ ಸತ್ಯಗಳೂ, ಸದ್ಬೋಧನೆಗಳೂ, ನೀತಿಗಳೂ ಹೇಗೆ ತುಂಬಿರುವುವೋ ಹಾಗೆಯೇ ಅನೇಕ ಅಸಂಬದ್ಧ ವೃತ್ತಾಂತಗಳೂ, ವಿರುದ್ಧವಚನಗಳೂ, ಪ್ರಾಕೃತ ಘಟನೆಗಳಿಗೆ ಕಲ್ಪಿತ ವಿವರಣೆಗಳೂ, ಮುಂತಾಗಿ ಸೇರಿಕೊಂಡಿರುವುವು. ಹಿಂದಿನ ಕಾಲದಲ್ಲಿ, ಪ್ರಕೃತಿವಿಚಾರವಾಗಿ ಜನಗಳಿಗಿದ್ದ ಸ್ವಾಭಾವಿಕ ಅಜ್ಞಾನದಿಂದ ಆ ರೀತಿಯ ತಪ್ಪು ತಿಳಿವಳಿಕೆ ಸಮಾಜದಲ್ಲಿದ್ದುದು ಅನಿವಾರ್ಯವಾದುದೇ; ಅದರಲ್ಲಿ ಆಶ್ಚರ್ಯವೇನಿಲ್ಲ. ಆದರೆ, ಈಗ ನಾವು ಅವುಗಳನ್ನೆಲ್ಲಾ ಕೂಲಂಕುಷವಾಗಿ ವಿಚಾರಿಸಿ, ವೈಜ್ಞಾನಿಕವಾಗಿ ವಿಶ್ಲೇಶಿಸಿ ಅರ್ಥಮಾಡಿಕೊಂಡರೆ, ಆ ಕೃತಿಗಳ ಮಹತ್ವವೂ, ಸೌಂದರ್ಯವೂ ಮತ್ತೂ ಹೆಚ್ಚು ವ್ಯಕ್ತವಾಗಿ, ಮನಸ್ಸಿಗೆ ಮಹದಾನಂದವಾಗುವುದು,