Monday, June 2, 2014

ನಗರದಲ್ಲಿರುವ ಬಿದನೂರು ಅರಸರ ದೇವಾಲಯದ ಅಧ್ಯಯನ

ಶಿವಮೊಗ್ಗ ಜಿಲ್ಲೆಯ ನಗರದಲ್ಲಿರುವ ಬಿದನೂರು ಅರಸರ ಕಾಲದ ಪ್ರಾಚೀನ ದೇವಾಲಯದ ಅಧ್ಯಯನ
ಡಾ. ಎಸ್. ಹನುಮಂತ ಜೋಯಿಸ್
ಐತಿಹಾಸಿಕವಾಗಿ
ಕರ್ನಾಟಕ ರಾಜ್ಯದ ಇತಿಹಾಸದ ಪುಟಗಳನ್ನು ಅಧ್ಯಯನ ಮಾಡಿದಾಗ, ಈ ರಾಜ್ಯವನ್ನಾಳಿದ ಅರಸರಲ್ಲಿ ವಿಜಯನಗರದ ಅರಸರು ಸುಪ್ರಸಿದ್ಧರು. ಅದರಲ್ಲಿ ಅತ್ಯಂತ ಪ್ರಬಲನೂ, ಜನಪ್ರಿಯನೂ ಆದವನೇ ತುಳುವ ವಂಶದ ಕೃಷ್ಣದೇವರಾಯ. ಈತನ ರಾಜ್ಯಾಡಳಿತದಲ್ಲಿ ಏಕೇಂದ್ರೀಕರಣ ವ್ಯವಸ್ಥೆಯನ್ನು ಜಾರಿಗೆ ತಂದನು. ಅದರಲ್ಲೊಂದು ‘ನಾಯಕ ಪದ್ಧತಿ’ ಪ್ರಾಂತಾಡಳಿತದ ವ್ಯವಸ್ಥೆಯ ಭಾಗವೇ ‘ನಾಯಕ ಪದ್ಧತಿ’. ಅದರಲ್ಲಿ ಪ್ರಾಮುಖ್ಯತೆಯನ್ನು ಪಡೆದದ್ದು ಕೆಳದಿ ನಾಯಕರ ಸಾಮ್ರಾಜ್ಯ. ಇವರ ಮೊದಲ ರಾಜಧಾನಿ ಕೆಳದಿ, ನಂತರ ಇಕ್ಕೇರಿ, ಕೊನೆಯದಾಗಿ ಬಿದನೂರು (ವೇಣುಪುರ)ವಾಗಿತ್ತು.
ಈ ರೀತಿ ಕೆಳದಿಯಿಂದ ಇಕ್ಕೇರಿ ರಾಜ್ಯವನ್ನಾಳಿದ ನಾಯಕ ಹೆದರೆ ಚೌಡಪ್ಪ ನಾಯಕ (ಕ್ರಿ.ಶ.1499-1530), ಸದಾಶಿವನಾಯಕ (ಕ್ರಿ.ಶ.1530-1567), ದೊಡ್ಡ ಸಂಕಣ್ಣನಾಯಕ (ಕ್ರಿ.ಶ.1570-1580), ರಾಮರಾಜನಾಯಕ (ಕ್ರಿ.ಶ.1580-1582), ಅನಂತರ ಹಿರಿಯ ವೆಂಕಟಪ್ಪ ನಾಯಕ (ಕ್ರಿ.ಶ.1582-1629). ಈ ಪ್ರಬಂಧವು ಹಿರಿಯ ವೆಂಕಟಪ್ಪ ನಾಯಕನ ಆಳ್ವಿಕೆಯಿಂದ ಪ್ರಾರಂಭವಾಗುತ್ತದೆ. ಈತನು ಇಕ್ಕೇರಿ ರಾಜ್ಯವನ್ನು 46 ವರ್ಷ, 11 ತಿಂಗಳು ಮತ್ತು 26 ದಿನಗಳವರೆಗೆ ರಾಜ್ಯಭಾರ ಮಾಡಿದನು. (ಕೆಳದಿ ನೃಪ ವಿಜಯದಲ್ಲಿ ಉಲ್ಲೇಖವಾಗಿದೆ) ಈತನು ಗಣೇಶ ದೀಕ್ಷಿತರ ಮಾರ್ಗದರ್ಶನದಲ್ಲಿ ವಾಜಪೇಯ ಯಾಗವನ್ನು ಮಾಡಿದ್ದನು. ಈತನ ಕಾಲದಲ್ಲಿ ರಾಜ್ಯವು ಬಹುವಾಗಿ ವಿಸ್ತರಿಸಲ್ಪಟ್ಟಿದ್ದು, ಆಗಿನ ಕಾಲದ ಪ್ರಬಲ ನಾಯಕನೆಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದನು. ಈತನು ಬಿದನೂರು (ಈಗಿನ ನಗರ) ಕೋಟೆಯನ್ನು ಅಭಿವೃದ್ಧಿ ಪಡಿಸಿದನು. ಶಂಕರನಾರಾಯಣ ಭಟ್ಟರೆಂಬುವವರನ್ನು ಬಿದನೂರಿ (ವೇಣುಪುರ)ನ ಮಂತ್ರಿಯನ್ನಾಗಿ ನೇಮಕ ಮಾಡಿದನು. ಆದರೆ ಈ ಮಂತ್ರಿಯು ಅಕ್ಕ-ಪಕ್ಕದ ಹಲವು ಸೀಮೆಗಳನ್ನು ತನ್ನ ವಶಕ್ಕೆ ತೆಗೆದುಕೊಂಡು, ಬಿದನೂರನ್ನು ಕೇಂದ್ರವನ್ನಾಗಿ ಮಾಡಿಕೊಂಡು ಸ್ವತಂತ್ರ ಪಾಳೆಯಗಾರನಂತೆ ವರ್ತಿಸತೊಡಗಿದನು. ಈ ವಿಚಾರವು ಕರ್ಣಾಕರ್ಣೀಯವಾಗಿ ತಿಳಿದ ಹಿರಿಯ ವೆಂಕಟಪ್ಪನಾಯಕನು ದಳವಾಯಿ ಲಿಂಗಣ್ಣ ನಾಯಕನೊಡನೆ ಕೂಡಿ, ಸೈನ್ಯ ಸಮೇತ ಬಂದು ಬಿದನೂರು ಕೋಟೆಗೆ ಮುತ್ತಿಗೆ ಹಾಕಿದನು. ತಾನು ನೇಮಿಸಿದ ಮಂತ್ರಿಯನ್ನು ಸೆರೆಹಿಡಿದನು. ಪುನಃ ಬಿದನೂರನ್ನು ವಶಪಡಿಸಕೊಂಡನು.
ಈ ಹಿರಿಯ ವೆಂಕಟಪ್ಪ ನಾಯಕನು ದಕ್ಷ ಆಡಳಿತಗಾರನಾಗಿದ್ದನು. ಸರ್ವಧರ್ಮಗಳ ರಕ್ಷಕನಾಗಿದ್ದನು. ಪ್ರಜಾರಂಜಕನಾಗಿದ್ದನು. ವಿದ್ವಜ್ಜನರಿಗೆ ಆಶ್ರಯದಾತನಾಗಿದ್ದನು. ಕಲಾಭಿಮಾನಿಯಾಗಿದ್ದನು. ಈತನ ಆಳ್ವಿಕೆಯಲ್ಲಿ ಸರ್ವಧರ್ಮದವರಿಗೂ ಆರಾಧಿಸಲು ಅನುಕೂಲವಾಗುವಂತೆ, ದೇವಾಲಯಗಳನ್ನು ನಿರ್ಮಾಣ ಮಾಡಿಸಿದನು. ಶಾಸ್ತ್ರೋಕ್ತವಾಗಿ ಆ ದೇವಾಲಯಗಳಲ್ಲಿ ದೇವರುಗಳನ್ನು ಪ್ರತಿಷ್ಠಾಪಿಸಿದನು. ನಿತ್ಯ ಪೂಜೆಯನ್ನು ಮಾಡಲು ಅರ್ಚಕರುಗಳನ್ನು ನೇಮಕ ಮಾಡಿದನು. ದೇವಾಲಯಗಳ ಕಾರ್ಯಕ್ರಮಗಳು ಸುವ್ಯವಸ್ಥೆಯಿಂದ ನಡೆಯುವಂತೆ ಆದಾಯ ಮೂಲಗಳನ್ನು ಏರ್ಪಾಡು ಮಾಡಿದನು. ಈತನ ಕಾಲದಲ್ಲಿ ಬಿದನೂರಿನಲ್ಲಿ ನಿರ್ಮಾಣ ಮಾಡಿದ ದೇವಾಲಯಗಳಲ್ಲಿ ಶ್ರೀಪಂಚಮುಖಿ ಆಂಜನೇಯನ ದೇವಾಲಯ ಪ್ರಸಿದ್ಧವಾಗಿದೆ.
ಈತನ ಕಾಲದಲ್ಲಿ ಶ್ರೀಕ್ಷೇತ್ರ ಕುಂಭಕೋಣ ಮಠದ ಶ್ರೀ ಶ್ರೀ ವಿಜಯೀಂದ್ರತೀರ್ಥರ ವರಕುಮಾರರಾದ ಶ್ರೀ ಶ್ರೀ ಸುಧೀಂದ್ರತೀರ್ಥರು (ಕ್ರಿ.ಶ. 1586-1614) ಈ ಪ್ರಾಂತ್ಯಕ್ಕೆ ಸಂಚಾರತ್ವೇನ ಬಂದಿದ್ದರು. ಆಗ ಈತನು ಶ್ರೀಪಾದಂಗಳವರನ್ನು ಇಕ್ಕೇರಿ ಹಾಗೂ ಬಿದನೂರಿಗೆ ಆಹ್ವಾನಿಸಿದ್ದನು. ಶ್ರೀಗಳವರಿಗೆ ಬಿದನೂರಿನ ಕೋಟೆಯ ಹೊರಗಡೆ ಹರಿಯುತ್ತಿರುವ ಕಲಾವತಿ ನದಿಯ ದಡದ ಮೇಲೆ ವಾಸ್ತವ್ಯವನ್ನು ಹೂಡಲು ಸಕಲ ವ್ಯವಸ್ಥೆಯನ್ನು ಮಾಡಿದನು. ಅದೇ ಸಮಯದಲ್ಲಿ ಶೃಂಗೇರಿ ಪೀಠದ ಶಾಖೆಯಿಂದ ಆಗಿನ ಶ್ರೀರಾಮಚಂದ್ರಾಪುರ ಮಠದ ಶ್ರೀಪಾದಂಗಳನ್ನೂ ಬಿದನೂರಿಗೆ ಆಹ್ವಾನಿಸಿ, ಅದೇ ಕಲಾವತಿ ನದಿಯ ದಡದ ಮೇಲೆ ವಾಸ್ತವ್ಯವನ್ನು ಹೂಡಲು ಸಕಲ ವ್ಯವಸ್ಥೆಯನ್ನು ಮಾಡಿದನು. ಈ ಎರಡು ಮಠಗಳು ಎದುರು-ಬದುರಾಗಿದ್ದು, ಅವುಗಳ ಅವಶೇಷಗಳನ್ನು ಕಲಾವತಿ ನದಿಯ ದಡದ ಮೇಲೆ ಬೇಸಿಗೆಯಲ್ಲಿ ನೋಡಬಹುದು. ಈ ಇಬ್ಬರು ಪೀಠಾಧಿಪತಿಗಳ ನೇತೃತ್ವದಲ್ಲಿ ಶ್ರೀಪಂಚಮುಖಿ ಆಂಜನೇಯ ದೇವರ ಪ್ರತಿಷ್ಠಾಪನೆಯನ್ನು ಕ್ರಿ.ಶ.1600ರಲ್ಲಿ ನೆರವೇರಿಸಿದನು. ಈ ಸಮಾರಂಭಕ್ಕೆ ಆಸುಪಾಸಿನ ಪ್ರಮುಖರೆಲ್ಲರೂ ಬಂದಿದ್ದರೆಂದು ಈ ಪ್ರಾಂತ್ಯ ಹಿರಿಯರು ಹೇಳುತ್ತಾರೆ. ಅನಂತರ ಬಿದನೂರನ್ನು ಆಳಿದ ಶಿಸ್ತಿನ ಶಿವಪ್ಪನಾಯಕ (ಕ್ರಿ.ಶ.1646-1660) ಹಾಗೂ ಚೆನ್ನಮ್ಮಾಜಿ (ಕ್ರಿ.ಶ.1671-1697)ರ ಆಳ್ವಿಕೆಯಲ್ಲಿ ಈ ದೇವಾಲಯವು ಅಭಿವೃದ್ಧಿಯಾಯಿತೆಂದೂ ಹಾಗೂ ಹಿರಿಯ ಬಸವಪ್ಪ ನಾಯಕನು (ಕ್ರಿ.ಶ.1697-1714) ಜನರ ಹಿತಕ್ಕಾಗಿ ಕಲಾವತಿ ನದಿಗೆ ಕಲ್ಲಿನ ಸೇತುವೆಯನ್ನು ಕಟ್ಟಿಸಿದನೆಂದು ಇತಿಹಾಸತಜ್ಞರು ಹೇಳುತ್ತಾರೆ.
ಪೌರಾಣಿಕವಾಗಿ
ಇದಕ್ಕೆ ತ್ರೇತಾಯುಗದಲ್ಲಿ ನಡೆದ ವಿಚಾರವು ಈ ರೀತಿಯಿರುತ್ತದೆ. ಶ್ರೀ ರಾಮಾಯಣ ಕಥಾಭಾಗದಲ್ಲಿ ರಾಮ-ರಾವಣರ ಯುದ್ಧವು ನಡೆಯುತ್ತಿದ್ದಾಗ, ರಾವಣನ ಕೋರಿಕೆಯಂತೆ ಪಾತಾಳ ಲೋಕದಲ್ಲಿ ನೆಲೆಸಿದ್ದ ಅಹಿ-ಮಹಿರಾವಣರು ರಾವಣನಿಗೆ ಸಹಾಯ ಮಾಡಲು ಒಪ್ಪಿಕೊಳ್ಳುತ್ತಾರೆ. ಅವರು ಬ್ರಹ್ಮದೇವರಿಂದ ಅವಧತ್ವ ವರವನ್ನು ಪಡೆದಿರುತ್ತಾರೆ. ಇವರನ್ನು ಸಂಹರಿಸುವುದು ಸುಲಭದ ಕಾರ್ಯವಾಗಿರಲಿಲ್ಲ. ರಾವಣನ ಇಚ್ಛೆಯಂತೆ, ಇವರು ಶ್ರೀರಾಮ-ಲಕ್ಷ್ಮಣರನ್ನು ಪಾತಾಳಲೋಕಕ್ಕೆ ಹೊತ್ತೊಯ್ಯುತ್ತಾರೆ. ಅಲ್ಲಿ ತಾವು ಆರಾಧಿಸುವ ದೇವತೆಗೆ ಬಲಿ ಕೊಡುವುದು ಇವರ ಉದ್ದೇಶವಾಗಿರುತ್ತದೆ. ಈ ವಿಚಾರವು ಶ್ರೀ ಆಂಜನೇಯ ದೇವರಿಗೆ ತಿಳಿಯುತ್ತದೆ. ಅವರಿಗೂ ಈ ರಾಕ್ಷಸರನ್ನು ವಧಿಸುವುದು ಅಸಾಧ್ಯವೆಂಬ ವಿಷಯವು ತಿಳಿದಿರುತ್ತದೆ. ಈ ರಾಕ್ಷಸರನ್ನು ಸಂಹರಿಸಲು ವಿಶಿಷ್ಟವಾದ ಶಕ್ತಿಯೇ ಬೇಕೆಂದು ಮನಗಂಡು ಶ್ರೀಹರಿಯನ್ನು ಕುರಿತು ಪ್ರಾರ್ಥಿಸುತ್ತಾರೆ. ಶಂಖ-ಚಕ್ರಗಳು ಶ್ರೀಹರಿಯ ಮುಖ್ಯ ಚಿಹ್ನೆಗಳಾಗಿದ್ದು, ಅವು ಆತನ ಮುಖ್ಯ ಪ್ರತಿಬಿಂಬಗಳಾದ್ದರಿಂದ ಅವುಗಳನ್ನು ಧರಿಸಲು ಶ್ರೀ ಆಂಜನೇಯನಿಗೆ ಅನುಗ್ರಹಿಸುತ್ತಾರೆ. ಜತೆಯಲ್ಲಿ ಶ್ರೀಹರಿಯು ಶ್ರೀನೃಸಿಂಹ, ಶ್ರೀವರಾಹ, ಶ್ರೀಹಯಗ್ರೀವ ಹಾಗೂ ಶ್ರೀಗರುಡರ ಸರ್ವಶಕ್ತಿಯನ್ನು ಧಾರೆ ಎರೆದು ಆತನಿಗೆ ಇತರ ದಿವ್ಯಾಸ್ತ್ರಗಳನ್ನು ಅನುಗ್ರಹಿಸುತ್ತಾರೆ. ಈ ಎಲ್ಲಾ ಶಕ್ತಿಗಳನ್ನು ಪಡೆದು ಶ್ರೀ ಪಂಚಮುಖಿ ಆಂಜನೇಯನೆಂಬ ಹೆಸರಿನಿಂದ, ಶ್ರೀರಾಮ-ಲಕ್ಷ್ಮಣರನ್ನು ವಧೆ ಮಾಡುವ ಸ್ಥಳದಲ್ಲಿ ಈ ರಾಕ್ಷಸರನ್ನು ಕೊಂದು, ಅವರನ್ನು ರಕ್ಷಿಸಿ ಪಾತಾಳಲೋಕದಿಂದ ಯುದ್ಧರಂಗಕ್ಕೆ ಕರೆದುಕೊಂಡು ಬರುತ್ತಾರೆ. ಆ ಒಂದು ಕ್ಷಣದಲ್ಲಿ ಮಾತ್ರ ಇಲ್ಲಿ ಎಲ್ಲಾ ಶಕ್ತಿಗಳನ್ನು ಬಳಸಿ, ಆ ರಾಕ್ಷಸರ ಸಂಹಾರವಾದ ಮೇಲೆ ತಮ್ಮ ಮೂಲರೂಪಕ್ಕೆ ಪರಿವರ್ತಿತರಾಗುತ್ತಾರೆ (ಈ ವಿಷಯವು ಆನಂದ ರಾಮಾಯಣದಲ್ಲಿ ವರ್ಣಿತವಾಗಿದೆ)
ಆಧ್ಯಾತ್ಮಿಕವಾಗಿ
ಈ ಒಂದು ವಿಶಿಷ್ಟ ರೂಪವು ಪ್ರಾಚೀನ ಆಕರಗಳಲ್ಲೂ, ಸರ್ವಮೂಲ ಗ್ರಂಥಗಳಲ್ಲೂ ಪ್ರಸಿದ್ಧ. ಟೀಕಾ ಟಿಪ್ಪಣಿಗಳಲ್ಲಾಗಲೀ ಇದರ ಉಲ್ಲೇಖವು ಕಂಡುಬರುವುದಿಲ್ಲ. ಆದರೆ ಸುದರ್ಶನ ಸಂಹಿತೆಯಲ್ಲಿ ಮಾತ್ರ ಈ ದೇವರ ಸ್ತೋತ್ರವು ಕಂಡುಬರುತ್ತದೆ. ಪ್ರಾಯಃ ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನವೆಂಬ ಐದು ರೂಪಗಳ ಸಂಕೇತವಾಗಿ ಈ ಪಂಚಮುಖಿ ಆಂಜನೇಯನ ಪರಿಕಲ್ಪನೆ ರೂಪುಗೊಂಡಿರಬೇಕು ಎಂಬುದು ಆಧ್ಯಾತ್ಮಿಕರ ಅಭಿಪ್ರಾಯ.
ಶ್ರೀ ಪಂಚಮುಖಿ ಆಂಜನೇಯನ ದೇಗುಲ
‘ನಗರ’, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿರುವ ಹೋಬಳಿ ಕೇಂದ್ರ. ಇದು ಶಿವಮೊಗ್ಗ ನಗರದಿಂದ ಸುಮಾರು 80 ಕಿ.ಮೀ. ದೂರದಲ್ಲಿದೆ. ಇಲ್ಲಿ ಒಂದು ಲಕ್ಷ ಕುಟುಂಬಗಳು ವಾಸವಾಗಿದ್ದವೆಂದು ಇತಿಹಾಸ ಪುಟಗಳಲ್ಲಿ ದಾಖಲಾಗಿರುತ್ತದೆ. ಈ ದೇಗುಲದ ಹೊರ ಆವರಣದ ಉತ್ತರ ದಿಕ್ಕಿನ 13 ಅಡಿ ಎತ್ತರದ ಮಹಾದ್ವಾರದ ಮೂಲಕ ಪ್ರವೇಶಿಸಿದರೆ ನಮಗೆ ಶಿಲೆಯಿಂದ ನಿರ್ಮಾಣ ಮಾಡಿದ ದೇಗುಲವು ಕಾಣಿಸುತ್ತದೆ. ಈ ದೇಗುಲದಲ್ಲಿ ತೆರೆದ ಮುಖಮಂಟಪ (ಸುಖನಾಸಿ) ಮತ್ತು ಒಂದು ಕಡೆ ಮಾತ್ರ ಪ್ರವೇಶ ದ್ವಾರವಿರುವ ಗರ್ಭಗುಡಿಯಿದೆ. ಗರ್ಭಗುಡಿಯ ಮೇಲೆ ನವನಿರ್ಮಿತ ಗೋಪುರವಿದೆ. ಸುಖನಾಸಿಯ ದ್ವಾರದ ಎರಡು ಬದಿಗಳಲ್ಲೂ ಕುಮುದ, ಕುಮುದಾಕ್ಷರ ಸುಂದರವಾದ ಉಬ್ಬು ಶಿಲ್ಪದ ಮೂರ್ತಿಗಳಿವೆ.
ಗರ್ಭಗುಡಿಯಲ್ಲಿರುವ ವಿಗ್ರಹ
ಗರ್ಭಗುಡಿಯಲ್ಲಿ ಶ್ರೀ ದೇವರ ವಿಗ್ರಹವು ಸುಮಾರು ಮೂರುವರೆ ಅಡಿ ಎತ್ತರದ ಅಖಂಡ ಕರಿಯ ಶಿಲೆಯಲ್ಲಿ ನಿರ್ಮಾಣ ಮಾಡಿದ, ನಿಂತ ನಿಲುವಿನ ಭವ್ಯ ಮೂರ್ತಿಯಾಗಿದೆ. ಉತ್ತರಾಭಿಮುಖವಾಗಿ ಶ್ರೀ ಪ್ರಾಣದೇವರು ಪೂರ್ವಾಭಿಮುಖವಾಗಿ ಶ್ರೀನೃಸಿಂಹದೇವರು, ಪಶ್ಚಿಮಾಭಿಮುಖವಾಗಿ ಶ್ರೀವರಾಹ, ಊಧ್ರ್ವ ಭಾಗದಲ್ಲಿ ಶ್ರೀ ಹಯಗ್ರೀವ, ವಿಗ್ರಹದ ಹಿಂಬದಿಯಲ್ಲಿ ಶ್ರೀ ಪ್ರಾಣದೇವರ ಮುಖದಷ್ಟೇ ಗಾತ್ರದ ಶ್ರೀ ಗರುಡನ ಮುಖವು ದಕ್ಷಿಣಾಭಿಮುಖವಾಗಿ ಕೆತ್ತಲ್ಪಟ್ಟಿದೆ. ಶ್ರೀ ಗರುಡನನ್ನು ದರ್ಶಿಸಲು ವಿಗ್ರಹದ ಹಿಂಬದಿಯಲ್ಲಿ ದೊಡ್ಡ ದರ್ಪಣವನ್ನು ಗೋಡೆಗೆ ತೂಗು ಹಾಕಿದ್ದಾರೆ. ಮುಂಭಾಗದ ಶ್ರೀ ಪ್ರಾಣದೇವರ ಬಲಪಾಶ್ರ್ವದಲ್ಲಿ ಶ್ರೀ ಹರಿಯ ಚಕ್ರವು, ಎಡ ಪಾಶ್ರ್ವದಲ್ಲಿ ಶಂಖಗಳನ್ನು ಕೆತ್ತಿರುತ್ತಾರೆ. ಶ್ರೀ ದೇವರಿಗೆ ಹತ್ತು ಹಸ್ತಗಳಿದ್ದು ಅವುಗಳಲ್ಲಿ ಶ್ರೀ ಹರಿಯು ಅನುಗ್ರಹಿಸಿದ ಎಲ್ಲಾ ಶಕ್ತ್ಯಾಯುಧಗಳನ್ನು ಪ್ರತ್ಯೇಕವಾಗಿ ಕೆತ್ತಲಾಗಿದೆ. ಭವ್ಯವಾದ ಪಾಣಿಪೀಠದ ಮೇಲೆ ನಿಂತಿರುವ ಈ ಸುಂದರ ಮೂರ್ತಿಗೆ ಭವ್ಯವಾದ ಪ್ರಭಾವಳಿಯನ್ನು ಶಿಲ್ಪಿಯು ನಿರ್ಮಾಣ ಮಾಡಿರುತ್ತಾನೆ.
ಈ ದೇಗುಲದ ಜೀರ್ಣೋದ್ಧಾರ
ಭಾರತದಲ್ಲಿಯೇ ಶ್ರೀ ಪಂಚಮುಖಿ ಆಂಜನೇಯ ಶಿಲ್ಪವು ಇಲ್ಲಿರುವುದು ಎರಡನೆಯದೆಂದು ಖ್ಯಾತಿಗೆ ಪಾತ್ರವಾಗಿದೆ. ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾಗಿ ನೇಪಥ್ಯಕ್ಕೆ ಸರಿಯುವ ಮುನ್ನ ಶ್ರೀ ಪಣಿಯಪ್ಪಯ್ಯ, ಶ್ರೀ ಗುಡ್ಡೆ ವೆಂಕಟರಮಣ ದೇವಸ್ಥಾನದ ಅರ್ಚಕರು, ಈ ದೇವಸ್ಥಾನದ ಪೂಜೆಯನ್ನು ಮಾಡುತ್ತಿದ್ದರು. ಈ ಶಿಲಾಮೂರ್ತಿಯ ಆಕಾರz್ದÉೀ ಆದ ಪಂಚಲೋಹದ ಮೂರ್ತಿಯು ಈಗಲೂ ಶ್ರೀ ಗುಡ್ಡೆ ವೆಂಕಟರಮಣ ದೇವಾಲಯದಲ್ಲಿ ನಿತ್ಯವೂ ಪೂಜೆಗೊಳ್ಳುತ್ತಿದೆ. ಈ ದೇವಾಲಯ ಮುಜರಾಯಿ ಇಲಾಖೆಗೆ ಒಳಪಟ್ಟಿರಲಿಲ್ಲ. ಕ್ರಿ.ಶ.1988ರ ಫೆಬ್ರವರಿ ಮಾಹೆಯಲ್ಲಿ ನಗರದ ಇತಿಹಾಸ ಸಂಶೋಧಕರಾಗಿದ್ದ ಕೀರ್ತಿಶೇಷ ಶಂಕರನಾರಾಯಣರಾವ್ ನೇತೃತ್ವದಲ್ಲಿ ಈ ನಗರದ ಉತ್ಸಾಹಿ ಯುವಕರ  ತಂಡದ ಸಹಾಯದಿಂದ, ಈ ದೇವಾಲಯವು ಸುಸ್ಥಿತಿಗೆ ಬಂದಿತು. ಅಲ್ಲಿ ಶ್ರೀ ಸ್ವಾಮಿಯನ್ನು ಪುನರ್ ಪ್ರತಿಷ್ಠೆ ಮಾಡಿ, ಗತಕಾಲದ ಪೂಜೆಯ ವೈಭವವನ್ನು ನೋಡುವಂತೆ ಮಾಡಿದರು. ಇವರ ನಂತರ ಶ್ರೀ ಬಾಲಕೃಷ್ಣ ಭಟ್ ಕಾನಂಗದ್ದೆಯವರು ಸಮಿತಿಯ ಮುಖ್ಯವಾಹಿನಿಯಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಬಂದರು. ಆದರೆ ದೇವಸ್ಥಾನಕ್ಕೆ ಬರುತ್ತಿದ್ದ ಆದಾಯದ ಮೂಲದ ಜನರು ಮುಳುಗಡೆಯಿಂದ ಬೇರೆ ಬೇರೆ ನಗರಗಳಲ್ಲಿ ನೆಲೆಸಿದ್ದರಿಂದ ಸಹಜವಾಗಿ ಆರ್ಥಿಕ ದುಃಸ್ಥಿತಿಗೊಳಗಾಯಿತು. ತದನಂತರ ಶ್ರೀ ರಾಮಚಂದ್ರಾಪುರ ಮಠದ ಶ್ರೀಪಾದಂಗಳವರಿಂದ ಕ್ರಿಯಾಶೀಲವಾದ ಒಂದು ಹೊಸ ಸಮಿತಿಯು ಕ್ರಿ.ಶ.2001ರಲ್ಲಿ ರಚಿತವಾಯಿತು. ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯ ತೊಡಗಿದವು. ಪುನಃ ಕ್ರಿ.ಶ.2006ರ ಮಾರ್ಚ್ ತಿಂಗಳು ದಿನಾಂಕ 9, 10 ಮತ್ತು 11ರಂದು ಈ ದೇವಸ್ಥಾನದ ಗರ್ಭಗುಡಿ ಹಾಗೂ ಗೋಪುರದ ನವನಿರ್ಮಾಣ ಮತ್ತು ಶ್ರೀ ದೇವರ ಪುನರ್ ಪ್ರತಿಷ್ಠಾಪನೆಯು ಶ್ರೀ ಪಾದಂಗಳವರ ನೇತೃತ್ವದಲ್ಲಿ ನಡೆಯಿತು. ಅದೇ ಸಂದರ್ಭದಲ್ಲಿ ದೇವಾಲಯದ ಸಹಾಯಾರ್ಥವಾಗಿ ಶ್ರೀ ಪಂಚಮುಖಿ ಆಂಜನೇಯ ಹಾಗೂ ಬಿದನೂರು ನಗರ ದರ್ಶನವೆಂಬ ಕಿರು ಹೊತ್ತಿಗೆಯನ್ನು ಹೊರತರಲಾಯಿತು. ಈಗ ಇಲ್ಲಿ ದಿನನಿತ್ಯ ಪೂಜಾ ವ್ಯವಸ್ಥೆಯಿದ್ದು ಇಲ್ಲಿ ಶುಭ ಸಮಾರಂಭಗಳನ್ನು ಮಾಡಲು ಸುವ್ಯವಸ್ಥಿತವಾದ ಸಮುದಾಯ ಭವನವಿದೆ.
ಉಪಸಂಹಾರ
ಈ ನಗರದಲ್ಲಿ ಎಲ್ಲಾ ಸಮಾರಂಭಗಳನ್ನು ಎಲ್ಲಾ ಧರ್ಮದವರೂ ಸೇರಿ ಆಚರಿಸುತ್ತಾರೆ. ವಿಶೇಷವಾಗಿ ಈ ನಗರದಲ್ಲಿ ದ್ವೈತ-ಅದ್ವೈತ-ವಿಶಿಷ್ಟಾದ್ವೈತ ಪಂಗಡಗಳು ಸೇರಿ ಎಲ್ಲಾ ಸಮಾರಂಭಗಳನ್ನು ಆಚರಿಸುವುದು ವಿಶೇಷವಾಗಿದೆ. ಸುಮಾರು 125 ವರ್ಷಗಳಲ್ಲಿ 13 ಜನ ಕೆಳದಿ ಅರಸರು ಈ ಬಿದನೂರಿನಲ್ಲಿ ರಾಜ್ಯಭಾರವನ್ನು ಮಾಡಿದ್ದಾರೆ. ಅವರೆಲ್ಲರ ಸಮಾಧಿಗಳು ಇಲ್ಲಿದ್ದು ಅವು ರಕ್ಷಣೆಗಳಿಲ್ಲದೆ ಈಗ ಅವನತಿಯ ಸ್ಥಿತಿಯಲ್ಲಿದೆ. ಇವನ್ನು ರಕ್ಷಿಸುವುದು ನಮ್ಮ-ನಿಮ್ಮೆಲ್ಲರ ಕರ್ತವ್ಯವಾಗಿದೆ. ಈ ರೀತಿ ಬಿದನೂರಿನಲ್ಲಿ ಇನ್ನೂ ಅನೇಕ ಸ್ಮಾರಕಗಳೂ, ಚರಿತ್ರಾರ್ಹವಾದ ವಸ್ತುಗಳಿದ್ದು, ಆ ವಿಚಾರವಾಗಿ ನವ ಸಂಶೋಧಕರು ಇನ್ನು ಮುಂದೆ ಪ್ರಯತ್ನ ಪಟ್ಟರೆ ಈ ಬಿದನೂರು ಅರಸರ ಕಾಲದ ಅನೇಕ ವಿಚಾರಗಳು ಬೆಳಕಿಗೆ ಬರುವುದರಲ್ಲಿ ಯಾವ ಸಂಶಯವೂ ಇಲ್ಲ.
(ಈ ಪ್ರಬಂಧವನ್ನು ಸಿದ್ಧಪಡಿಸಲು ಸಹಾಯ ಮಾಡಿದವರಾದ ನಗರದಲ್ಲಿ ವಾಸವಾಗಿರುವ ನಿವೃತ್ತ ಪ್ರಾಚಾರ್ಯರಾದ ಶ್ರೀ ಹೆಚ್. ಸುಬ್ರಹ್ಮಣ್ಯರವರು, ಶ್ರೀ ಸಿ. ಪಾಂಡುರಂಗರಾವ್, ಶ್ರೀ ಎಸ್. ಪ್ರಕಾಶ್ ಶೇಟ್, ಶ್ರೀ ಎಂ. ಮುಕುಂದ ಕಾಮತ್, ಶ್ರೀ ಬಿ. ಶಿವಪ್ಪಗೌಡರು, ಶ್ರೀ ಹೆಚ್.ಎಸ್. ಅರುಣಾಚಲ, ಶ್ರೀ ಸುಬ್ರಹ್ಮಣ್ಯ ಕೆ. ಭಾಗವತ್ ಮತ್ತು ಹಿರಿಯ ಸಂಶೋಧಕರಾದ ಶ್ರೀ ಅಂಬ್ರಯ್ಯ ಮಠ, ನಗರ, ಇವರುಗಳಿಗೆ ಹೃನ್ಮಸಾ ವಂದನೆಗಳು)

 # 234, ವಾರ್ಡ್ ನಂ. 7, ಬಸವನಗುಡಿ, 3ನೇ ತಿರುವು, ಶ್ರೀ ಸಾಯಿಬಾಬಾ ಮಂದಿರ ರಸ್ತೆ, ಶಿವಮೊಗ್ಗ-577201.

 

1 comment:

  1. ಆಳವಾಗಿ ಅಧ್ಯಯನ ಮಾಡಿ ಬರಹವನ್ನು ಪ್ರಕಟಿಸಿದ್ದೀರಿ. ಧನ್ಯವಾದಗಳು.

    ReplyDelete