Friday, March 21, 2014

ಹೆಗ್ಗೆರೆಯ ವೀರಗಲ್ಲುಗಳು ಮತ್ತು ಮಾಸ್ತಿಗಲ್ಲುಗಳು


ಚಿತ್ರದುರ್ಗ ತಾಲ್ಲೂಕು ಹೆಗ್ಗೆರೆ ಗ್ರಾಮದ ನವಶೋಧಿತ ವೀರಗಲ್ಲು ಹಾಗೂ ಮಾಸ್ತಿಗಲ್ಲುಗಳು
ಡಾ. ಹೆಚ್. ಗುಡ್ಡದೇಶ್ವರಪ್ಪ
ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಹೋಬಳಿ ಕೇಂದ್ರದ ದಕ್ಷಿಣ ಹಾಗೂ ಸಿರಿಗೆರೆ ಮಾರ್ಗದ ಉತ್ತರಕ್ಕೆ ಒಂದೂವರೆ ಕಿ.ಮೀ. ದೂರದಲ್ಲಿರುವ ಹೆಗ್ಗೆರೆ ಗ್ರಾಮದಲ್ಲಿ ಇತ್ತೀಚೆಗೆ ಕ್ಷೇತ್ರಕಾರ್ಯದ ಸಮಯದಲ್ಲಿ ಒಂದು ವೀರಗಲ್ಲು ಎರಡು ಮಹಾಸತಿ ಕಲ್ಲುಗಳು ಪತ್ತೆಯಾಗಿದ್ದು ಅವುಗಳನ್ನು ಅಧ್ಯಯನಕ್ಕೊಳಪಡಿಸಲಾಗಿದೆ.
ಸ್ಥಳೀಯ ಚರಿತ್ರೆ
ಚಿತ್ರದುರ್ಗ ಪಾಳೆಯಗಾರರ ಕಾಲದಲ್ಲಿ ಪ್ರಮುಖ ಪ್ರದೇಶಗಳಲ್ಲೊಂದಾದ ಹೆಗ್ಗೆರೆ ಗ್ರಾಮ ಪಾಳೆಯಗಾರರ ಕಾಲದ ಪರಂಪರೆ, ಸಂಪ್ರದಾಯ ಸಂಸ್ಕೃತಿಯ ನೆನಪನ್ನು ತನ್ನ ಒಡಲಲ್ಲಿ ಇರಿಸಿಕೊಂಡಿದ್ದು, ಈ ಗ್ರಾಮದ ಮೂಲ ಹೆಸರು ಗುರುಪ್ಪನಹಳ್ಳಿ, ಇಲ್ಲಿ ಮೊದಲು ನಾಯಕ ಮತ್ತು ಆದಿಕರ್ನಾಟಕ ಜನಾಂಗದವರು ವಾಸಿಸುತ್ತಿದ್ದರು. ಕಾಲಾಂತರದಲ್ಲಿ ಲಿಂಗಾಯತ, ಆದಿದ್ರಾವಿಡ ಜನಾಂಗದವರು ಬಂದು ನೆಲೆಸಿದರು. ಇಂದಿಗೂ ಇಲ್ಲಿ ನಾಯಕ ಜನಾಂಗದವರು ಬಹುಸಂಖ್ಯಾತರು.
ಈ ಗ್ರಾಮದ ಪಕ್ಕದಲ್ಲಿರುವ ಹಿರಿದಾದ ಕೆರೆಯಿಂದಾಗಿ ಹೆಗ್ಗೆರೆ ಎನ್ನುವ ಹೆಸರು ಬಂದಿರಬಹುದು. ಜನಪದರ ಪ್ರಕಾರ ಭರಮಸಾಗರದ ದೊಡ್ಡಕೆರೆಯ ಅಂಗಳದಲ್ಲಿ ಬೀಡುಬಿಟ್ಟಿದ್ದ ಬ್ರಿಟೀಷರ ದಂಡು ಗುರಪ್ಪನಹಳ್ಳಿಯ ಮೇಲೆ ದಾಳಿ ನಡೆಸಲು ಯತ್ನಿಸುತ್ತದೆ. ಆಗ ಇಲ್ಲಿಯ ಯೋಧರು ಗ್ರಾಮದ ಹೊರಗೆ ಗೆರೆ ಹಾಕಿ ಅದನ್ನು ದಾಟದಂತೆ ಸೂಚಿಸುತ್ತಾರೆ. ಆ ಸಂದರ್ಭದಲ್ಲಿ ಸ್ಥಳೀಯ ಯೋಧರು ಹಾಗೂ ಬ್ರಿಟೀಷ್ ದಂಡಿನ ಮಧ್ಯ ಕಾಳಗವಾಗಿ ಬ್ರಿಟೀಷರನ್ನು ಹೊಡೆದೊಡಿಸಿದ ಕಾರಣ ಈ ಸ್ಥಳಕ್ಕೆ ಗೆದ್ದಗೆರೆ ಎನ್ನುವ ಹೆಸರು ಬಂದು ಕಾಲಕ್ರಮೇಣವಾಗಿ ಹೆಗ್ಗೆರೆ ಎಂದಾಯಿತು. ಈ ಗ್ರಾಮದಲ್ಲಿ ವೀರಗಲ್ಲು ಹಾಗೂ ಮಾಸ್ತಿಕಲ್ಲುಗಳನ್ನು ಕಾಣಬಹುದಾಗಿದೆ.
ಊರಿನ ಹಿತಕ್ಕಾಗಿ, ದುಷ್ಟಸಂಹಾರಕ್ಕಾಗಿ, ಸ್ವಾಮಿ ನಿಷ್ಠೆಯಿಂದಲೂ ಹೋರಾಡಿ ಮಡಿದ ವೀರ ಪುರುಷರ ನೆನಪಿನ ಕುರುಹಾಗಿ ವೀರಗಲ್ಲುಗಳನ್ನು ನಿಲ್ಲಿಸುತ್ತಿದ್ದರು. ಮಹಾಸತಿಗಲ್ಲುಗಳು ಅಂದಿನ ಜನ, ಸಮಾಜದ - ನಾಡಿನ ಸಂರಕ್ಷಣೆಗಾಗಿ ಹೋರಾಡಿ ಮಡಿದ ವೀರನ ಜೊತೆಯಲ್ಲಿ ಆತನ ಮಡದಿ ಸಹಗಮನ ಮಾಡಿದ ನೆನಪಿನ ಕುರುಹಾಗಿ ನಿಲ್ಲಿಸುತ್ತಿದ್ದರು. ವೀರನು ಯುದ್ಧ ಮತ್ತಿತರ ಹೋರಾಟದಲ್ಲಿ ಮಡಿದಾಗ ಅವನು ವೀರಗಲ್ಲಿನ ನಾಯಕನಾಗುತ್ತಾನೆ. ಆತನೊಂದಿಗೆ ಮಡಿದ ಆತನ ಹೆಂಡತಿ ನಾಯಕಿಯಾಗುತ್ತಾಳೆ. ಮಹಾಸತಿಯಾಗುತ್ತಾಳೆ. ಇವುಗಳ ಅಧ್ಯಯನದಿಂದ ಅಂದಿನ ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಸ್ವರೂಪವನ್ನು ಅರ್ಥೈಸಿಕೊಳ್ಳಲು ಸಹಾಯಕವಾಗುತ್ತದೆ. ಹೆಗ್ಗೆರೆಯಲ್ಲಿ ಸಿಕ್ಕಿರುವ ವೀರಗಲ್ಲು ಹಾಗೂ ಮಹಾಸತಿಕಲ್ಲುಗಳು ಬರವಣಿಗೆ ರಹಿತ ಶಿಲ್ಪಗಳಾಗಿರುವುದರಿಂದ ಹೋರಾಡಿದ ವೀರನ ಹೆಸರಾಗಲಿ, ಸಹಗಮನ ಮಾಡಿದ ಸತಿಯ ಹೆಸರಾಗಲಿ, ಕಾಲ, ಯಾರೊಂದಿಗೆ ಹೋರಾಡಿದನೆಂಬ ಬಗ್ಗೆ ತಿಳಿಯುವುದಿಲ್ಲ. ಹಾಗಾಗಿ ನಾವು ವೀರಗಲ್ಲು-ಮಹಾಸತಿ ಕಲ್ಲಿನಲ್ಲಿರುವ ಶಿಲ್ಪಗಳ ಸ್ವರೂಪದ ಮೇಲೆ ಅದರ ಕಾಲ ಮತ್ತು ಉದ್ದೇಶವನ್ನು ತಿಳಿಯಬಹುದಾಗಿದೆ.
ವೀರಗಲ್ಲು
ಇದು ಹೆಗ್ಗೆರೆ ಗ್ರಾಮದ ಕರುವಿನಕಲ್ಲಿನ ಹತ್ತಿರವಿರುವ ಈಶ್ವರ ದೇವಸ್ಥಾನದ ಮುಂಭಾಗದಲ್ಲಿದೆ. ಇದಕ್ಕೆ ಬಳಪದ ಕಲ್ಲನ್ನು ಬಳಸಿದ್ದು, ಸುಮಾರು ೩ ಅಡಿ ಎತ್ತರ ೧.೨೫ ಅಡಿ ಅಗಲ, ಅರ್ಧ ಅಡಿ ದಪ್ಪವಿದೆ. ಇದರಲ್ಲಿ ವೀರಯೋಧನು ಎಡಗೈಯಲ್ಲಿ ಕತ್ತಿ ಹಿಡಿದು, ಬಲಗೈಯಲ್ಲಿ ಖಡ್ಗ ಹಿಡಿದು ನಿಂತಿದ್ದಾನೆ. ಕಂಠಾಭರಣ, ತೋಳ್ಬಂದಿ, ಕಾಲ್ಕಡಗ, ಕಿವಿಯೋಲೆ ಧರಿಸಿದ್ದಾನೆ. ತಲೆಯ ಕೂದಲನ್ನು ಎಡಕ್ಕೆ ತುರುಬು ಕಟ್ಟಲಾಗಿದೆ. ಸೊಂಟದಲ್ಲಿ ಚಾಕುವಿದೆ. ಪ್ರಭಾವಳಿಯಿದೆ, ಪ್ರಭಾವಳಿಯ ಮೇಲ್ಭಾಗದಲ್ಲಿ ಕೀರ್ತಿಮುಖವಿದೆ. ಅದರ ಮೇಲೆ ಕಮಲ ಪುಷ್ಪವಿದ್ದು, ಎಡಬಲ ಭಾಗದಲ್ಲಿ ಹೆಡೆ ಎತ್ತಿರುವ ಸರ್ಪಗಳಿವೆ. ಪ್ರಭಾವಳಿಯ ತಳಭಾಗದಲ್ಲಿ ಪೂರ್ಣ ಕುಂಭಗಳಿವೆ. ಮೇಲ್ಭಾಗದಲ್ಲಿ ಸೂರ್ಯ-ಚಂದ್ರರಿದ್ದಾರೆ. ಇವನೊಬ್ಬ ವೀರಯೋಧನಾಗಿದ್ದು, ಯಾವುದೋ ಹೋರಾಟದಲ್ಲಿ ಮಡಿದಿದ್ದ ನೆನಪಿಗಾಗಿ ಈ ಸ್ಮಾರಕ ಶಿಲ್ಪ ಹಾಕಿಸಲಾಗಿದೆ. ಈ ಶಿಲ್ಪದ ಸ್ವರೂಪವನ್ನು ಗಮನಿಸಿದಾಗ, ಅದು ೧೭ನೇ ಶತಮಾನಕ್ಕೆ ಸೇರಿದ್ದೆಂದು ವರ್ತಿಸಬಹುದಾಗಿದೆ.
ಮಹಾಸತಿಕಲ್ಲು
ಹೆಗ್ಗೆರೆ ಗ್ರಾಮದ ಈಶ್ವರ ದೇವಾಲಯದ ಮುಂಭಾಗದಲ್ಲಿದ್ದು, ಬಳಪದ ಕಲ್ಲನ್ನು ಬಳಸಲಾಗಿದೆ. ಸುಮಾರು ೩ ಅಡಿ ಎತ್ತರ ೧ / ಅಡಿ ಅಗಲ, ಅರ್ಧ ಅಡಿ ದಪ್ಪವಿದೆ. ಈ ಸ್ಮಾರಕ ಶಿಲ್ಪದ ವಿಶೇಷವೆಂದರೆ ವೀರಯೋಧನು ಎಡಗಾಲನ್ನು ಮುಂದೆ ಇಟ್ಟು ಎಡಗೈಯಲ್ಲಿ ಬಿಲ್ಲನ್ನು ಹಿಡಿದು ಬಲಗೈಯಿಂದ ಬಾಣವನ್ನು ಬಿಡುತ್ತಿದ್ದಾನೆ. ತಲೆಯ ಮೇಲ್ಭಾಗದಲ್ಲಿ ಕೂದಲಿನ ತುರುಬು ಬಲಭಾಗಕ್ಕಿದೆ. ಕಿವಿಯೋಲೆ, ಕಂಠಾಭರಣ, ಕಾಲ್ಕಡಗ ಧರಿಸಿ ಸೊಂಟಕ್ಕೆ ಚಾಕುವನ್ನು ಕಟ್ಟಿದ್ದಾನೆ. ಬಲಭಾಗದಲ್ಲಿ ಸುಂದರ ಸ್ತ್ರೀಯು ನಿಂತಿದ್ದಾಳೆ. ಸ್ತ್ರೀಯ ತಲೆಯ ಮೇಲ್ಭಾಗದಲ್ಲಿ ಮೊಗ್ಗು ಮತ್ತು ಕೇದಿಗೆ ಮಾದರಿಯ ಆಭರಣಗಳಿಂದ ಅಲಂಕೃತಗೊಂಡಿದ್ದಾಳೆ. ಕೂದಲಿನ ತುರುಬು ಬಲಭಾಗಕ್ಕಿದೆ. ಕಿವಿಯೋಲೆ, ಕಂಠಾಭರಣ, ತೋಳ್ಬಂದಿ, ಕಾಲ್ಕಡಗ ಧರಿಸಿ ನೆರಿಗೆಯುಳ್ಳ ಸೀರೆಯನ್ನುಟ್ಟಿದ್ದು ಅದರ ಮೇಲೆ ಪಟ್ಟಿಯಿದೆ. ಎಡಗೈಯಲ್ಲಿ ಫಲವನ್ನಿಡಿದು ಬಲಗೈಯಲ್ಲಿ ಕುಂಬವನ್ನಿಡಿದಿದ್ದಾಳೆ. ಇವರಿಬ್ಬರೂ ಪೀಠದ ಮೇಲೆ ನಿಂತಿದ್ದು, ಪೀಠದ ಮಧ್ಯಭಾಗದಲ್ಲಿ ಪದ್ಮದ ಅಲಂಕಾರವಿದೆ. ಕೀರ್ತಿಮುಖವಿದೆ. ಕೀರ್ತಿಮುಖದ ಕೆಳಭಾಗದ ಎರಡೂ ಕಡೆ ಪದ್ಮದ ಅಲಂಕಾರವಿದೆ. ಈ ಶಿಲ್ಪದ ನಿರೂಪಣೆಯಿಂದ ತಿಳಿದುಬರುವ ಅಂಶವೆಂದರೆ ಯಾವುದೋ ಹೋರಾಟದಲ್ಲಿ ವೀರನು ವೀರಮರಣ ಹೊಂದಿದ್ದು ಮಡದಿಯು ಸಹಗಮನ ಆಚರಿಸಿದ್ದರ ನೆನಪಿಗಾಗಿ ಈ ಶಿಲ್ಪವನ್ನು ನಿರ್ಮಿಸಲಾಗಿದೆ.
ಮಹಾಸತಿಕಲ್ಲು ಕಾಲ ೧೭ನೇ ಶತಮಾನ
ಹೆಗ್ಗೆರೆ ಗ್ರಾಮದ ದಕ್ಷಿಣಕ್ಕೆ ಮಟ್ಟಿಮೇಗಳ ಹೊನ್ನಪ್ಪನವರ ಖಣದ ವಾಯವ್ಯ ಮೂಲೆಯಲ್ಲಿ ನಿಲ್ಲಿಸಿದ್ದು, ಬಳಪದ ಕಲ್ಲನ್ನು ಬಳಸಲಾಗಿದೆ. ಸುಮಾರು ೪ ಅಡಿ ಎತ್ತರ ೩ ಅಡಿ ಅಗಲ, ೧ ಅಡಿ ದಪ್ಪವಿದ್ದು, ೫ ಅಡಿ ಎತ್ತರದ ಕಟ್ಟೆಯ ಮೇಲೆ ನಿಲ್ಲಿಸಲಾಗಿದೆ. ಈ ಕಲ್ಲಿನಲ್ಲಿ ಅಲಂಕೃತವಾದ ಮಂಟಪವನ್ನು ಕೊರೆಯಲಾಗಿದೆ. ಮೇಲ್ಭಾಗದಲ್ಲಿ ಸೂರ್ಯ-ಚಂದ್ರರಿದ್ದು, ಒಂದೇ ಒಂದು ದೊಡ್ಡ ಪಟ್ಟಿಕೆಯಿದೆ. ವೀರಯೋಧನು ಕುದುರೆಯ ಪಕ್ಕದಲ್ಲಿ ನಿಂತು ಎಡಗೈಯಿಂದ ಕುದುರೆಯ ಲಗಾಮನ್ನು, ಬಲಗೈಯಲ್ಲಿ ಖಡ್ಗವನ್ನು ಹಿಡಿದಿದ್ದಾನೆ. ವೀರಯೋಧನು ತೋಳುಗಳಿಗೆ ತೋಳ್ಬಂದಿ, ಕಾಲಿಗೆ ಕಡಗ, ಕಿವಿಯೋಲೆ, ಕಂಠಾಭರಣ ಧರಿಸಿ ಕಟಿವಸ್ತ್ರಧಾರಿಯಾಗಿದ್ದಾನೆ. ಇವನ ತಲೆಯ ಮೇಲ್ಭಾಗದಲ್ಲಿ ಕೂದಲಿನ ತುರುಬು ಎಡಕ್ಕೆ ಬಾಗಿದೆ. ಯೋಧನ ಬಲಭಾಗಕ್ಕೆ ಸುಂದರವಾದ ಸ್ತ್ರೀಯ ಶಿಲ್ಪವಿದೆ. ಸ್ತ್ರೀಯ ತಲೆಯ ಮೇಲ್ಭಾಗವನ್ನು ಮೊಗ್ಗು ಹಾಗೂ ಕೇದಿಗೆ ಮಾದರಿಯ ಆಭರಣಗಳು ಅಲಂಕರಿಸಿವೆ. ಬಲಗೈಯನ್ನು ಮೇಲೆತ್ತಿಕೊಂಡು ನಿಂಬೆಹಣ್ಣನ್ನು ಹಿಡಿದಿದ್ದು, ಎಡಗೈಯಲ್ಲಿ ಫಲವನ್ನು ಹಿಡಿದಿದ್ದಾಳೆ. ಕೈಬಳೆ, ಕಾಲ್ಕಡಗ, ನೆರಿಗೆಯುಳ್ಳ ಸೀರೆಯನ್ನುಟ್ಟು ಸೊಂಟದ ಪಟ್ಟಿ, ಕಿವಿಯೋಲೆ ಧರಿಸಿ ಅಲಂಕೃತಳಾಗಿದ್ದಾಳೆ. ಈ ಶಿಲ್ಪವು ಪ್ರಭಾವಳಿಯನ್ನು ಹೊಂದಿದೆ. ಕೀರ್ತಿಮುಖವಿದೆ. ಹೂಬಳ್ಳಿಗಳ ಅಲಂಕಾರವಿದೆ. ಈ ಶಿಲ್ಪದ ನಿರೂಪಣೆಯನ್ನು ಗಮನಿಸಿದರೆ, ವೀರಯೋಧ ಮರಣ ಹೊಂದಿದ ನಂತರ ಸತಿಯು ಅದನ್ನು ಕೇಳಿ ಮರಣ ಹೊಂದಿದ್ದಾಳೆ. ಇದರ ನೆನಪಿಗಾಗಿ ಸ್ಮಾರಕ ಶಿಲ್ಪವನ್ನು ನಿಲ್ಲಿಸಲಾಗಿದೆ.
ಈ ಮೂರು ಸ್ಮಾರಕ ಶಿಲ್ಪಗಳನ್ನು ಅಧ್ಯಯನ ಮಾಡಿದಾಗ ಈ ಭಾಗದಲ್ಲಿನ ಯೋಧರು-ಜನ, ಶೌರ್ಯ, ಪರಾಕ್ರಮಕ್ಕೆ ಹೆಸರಾಗಿದ್ದು, ಗ್ರಾಮದ ರಕ್ಷಣೆ, ತುರುಗಳ ರಕ್ಷಣೆ, ಸ್ತ್ರೀಯರ ರಕ್ಷಣೆಗಾಗಿ ಹೋರಾಡಿ ವೀರ ಮರಣ ಹೊಂದಿದ್ದಾರೆ. ಇಂತಹ ಹೋರಾಟದಲ್ಲಿ ಹೆಚ್ಚಾಗಿ ಬೇಡರು (ನಾಯಕ) ಭಾಗವಹಿಸುತ್ತಿದ್ದರು. ಇದನ್ನು ಇಲ್ಲಿಯ ಸ್ಥಳನಾಮದ ಅಧ್ಯಯನ ಹಾಗೂ ವೀರಗಲ್ಲು ಮತ್ತು ಮಹಾಸತಿಕಲ್ಲುಗಳ ಅಧ್ಯಯನದಿಂದ ದೃಢೀಕರಿಸುತ್ತವೆ. ಹೆಗ್ಗೆರೆ ಗ್ರಾಮದ ಜನಸಂಖ್ಯೆಯನ್ನು ಗಮನಿಸಿದರೆ ನಾಯಕ ಜನಾಂಗದವರೇ ಬಹುಸಂಖ್ಯಾತರಾಗಿರುವುದು ಕಂಡುಬರುತ್ತದೆ. ಹಾಗಾಗಿ ಅನಾದಿಕಾಲದಿಂದಲೂ ಬೇಡರು ಗ್ರಾಮರಕ್ಷಣೆ ಹಾಗೂ ಸ್ವಾಮಿನಿಷ್ಠೆಯ ವಿಷಯದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದುದನ್ನು ದೃಢೀಕರಿಸುತ್ತದೆ. ಹೆಗ್ಗೆರೆ ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಕ್ಷೇತ್ರಕಾರ್ಯ ನಡೆಸಿದರೆ ಇನ್ನೂ ಪೂರಕ ಪುರಾವೆಗಳು ಲಭ್ಯವಾಗಬಹುದು.

 ಮುಖ್ಯಸ್ಥರು, ಸ್ನಾತಕೋತ್ತರ ಇತಿಹಾಸ ವಿಭಾಗ,
ಸರ್ಕಾರಿ ಕಲಾ ಕಾಲೇಜು, ಚಿತ್ರದುರ್ಗ-೫೭೭೫೦೧.

     




No comments:

Post a Comment