Friday, March 7, 2014

ಬೆಂಗಳೂರಿನ ಕುವೆಂಪುನಗರ- ಐತಿಹಾಸಿಕ ಹಿನ್ನೆಲೆ


ಕುವೆಂಪುನಗರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣ
              
.
               ಕುವೆಂಪುನಗರ ಒಂದು ವಿಶಿಷ್ಟವಾದ ಪ್ರದೇಶ. ಬೆಂಗಳೂರಿನ ಇತರೆಡೆಗೆ ಇಲ್ಲದ ಒಂದು ಇತಿಹಾಸ ಇದಕ್ಕಿದೆ. ಇಂದು ಬೆಂಗಳೂರಿನ ಪ್ರಮುಖ ಭಾಗವಾಗಿರುವ ಈ ಕುವೆಂಪುನಗರ ಹಿಂದಿನ ಬೆಂಗಳೂರಿನ ಗ್ರಾಮಗಳಾಗಿದ್ದ ಭೈರಸಂದ್ರ, ತಾವರೆಕೆರೆ ಹಾಗೂ ಮಡಿವಾಳ ಪ್ರದೇಶಗಳು ಸೇರಿ ರೂಪಿತವಾಗಿರುವ ಭಾಗ. ಮಡಿವಾಳ ಹಿಂದಿನಿಂದಲೂ ಬೆಂಗಳೂರಿಗೆ ಆಗ್ನೇಯದ ಬಾಗಿಲು. ತಮಿಳುನಾಡಿನಿಂದ ಬರುತ್ತಿದ್ದ ವರ್ತಕರು ಈ ಪ್ರದೇಶದಲ್ಲಿ ವಸತಿ ಮಾಡಿ ನಂತರ ಬೆಂಗಳೂರು ಪೇಟೆಗೆ ಪ್ರವೇಶಿಸುತ್ತಿದ್ದರು. ಶಾಲಿವಾಹನ ಶಕ ೧೭೧೫ರಲ್ಲಿ (ಕ್ರಿ.ಶ. ೧೭೯೩) ಆಟುಪಾಕಂ ಅಂಣಾಮಲೆ ಮೊದಲಿಯಾರರ ಧರ್ಮಪತ್ನಿ ವೆಂಕಟಮ್ಮ ಛತ್ರ ಕಟ್ಟಿಸಿದ್ದರು. ಇವರ ದೊಡ್ಡ ಮಗನೇ ರಾಯ ಬಹದ್ದೂರು ರತ್ನಸಭಾಪತಿ ಮೊದಲಿಯಾರ್ ಎಂಬುವವನು. ಹಳೆಯ ಪೊಲೀಸ್ ಠಾಣೆ ಈ ಛತ್ರದಲ್ಲಿಯೇ ಇತ್ತು. ಈಗ ಈ ಪ್ರದೇಶವೂ ಸಾಕಷ್ಟು ಪ್ರಗತಿ ಹೊಂದಿದೆ. ಬೆಂಗಳೂರಿನ ವ್ಯಾಪಾರಾಭಿವೃದ್ಧಿಯಲ್ಲಿ ಈ ಊರಿನ ಪಾತ್ರ ಗಣನೀಯವಾದುದ್ದು.


               ಹಾಗೆಯೇ ತಾವರೆಕೆರೆ ಇಂದು ಗುರುತಿಸಲಾರದಷ್ಟು ಬದಲಾಗಿದ್ದರೂ ಆ ಗ್ರಾಮದ ಮಧ್ಯೆ ಇರುವ ಹಳೆಯ ಮರ ತನ್ನ ಇರವನ್ನು ಸಾರುತ್ತಿದೆ. ಇದಕ್ಕಿಂತ ಮುಖ್ಯವಾಗಿ ಮಡಿವಾಳದ ಅಸ್ತಿತ್ವಕ್ಕೆ ಇದರದೇ ಕೊಡುಗೆ ಇದೆ. ಮಡಿವಾಳ ಹಿಂದಿನ ಕಾಲದಲ್ಲಿ ತಾವರೆಕೆರೆಯ ಭಾಗವೇ ಆಗಿತ್ತು.
               ಐತಿಹಾಸಿಕವಾಗಿ ತಾವರೆಕೆರೆ ಬೆಂಗಳೂರಿನ ಇತಿಹಾಸ ರಚಿಸುವಲ್ಲಿ ಬಹು ಮುಖ್ಯಪಾತ್ರ ವಹಿಸಿದೆ. ಹೊಯ್ಸಳ ರಾಜನೊಬ್ಬನ ಕಾಲದಲ್ಲಿ ಅಂದರೆ ಈ ತಾವರೆಕೆರೆ ಶೆಬಸುಂಉಡೈಯರಿಗೆ (ಸೋಮೇಶ್ವರ ದೇವರಿಗೆ) ವೆಪ್ಪೂರಿನ ಪೆರುಮತ್ತಿಯಾರ್ ಎಂಬುವವನು ವೆಂಗಳೂರಿನ ಪೆರವರಿಯ (ದೊಡ್ಡ ಕೆರೆ) ಕೆಳಗೆ ಎರಡು ಖಂಡುಗ ಭೂಮಿಯನ್ನು ವೇದಕಂಡಿಕಕ್ಕಾಗಿ ಬಿಟ್ಟಂತೆ ಹೇಳಿದೆ. ಈ ದಾನ ಬಹುಶಃ ಖಿಲವಾದಾಗ ಕೂಡಲ್ ಗ್ರಾಮದ ಅಮಾತ್ತಿಯಾರ್ ಎಂಬುವವನು ಇದನ್ನು ನವೀಕರಿಸಿದ್ದಂತೆ ಹೇಳಿದೆ. ಅಂದರೆ ಕ್ರಿ.ಶ.೧೨೪೭ಕ್ಕಿಂತ ಮೊದಲೇ ತಾವರೆಕೆರೆ ಗ್ರಾಮ ಅಸ್ತಿತ್ವದಲ್ಲಿತ್ತು ಎಂಬುದು ದೃಢವಾಗುತ್ತದೆ. ಮುಖ್ಯವಾದ ಸಂಗತಿಯೆಂದರೆ ಬೆಂಗಳೂರಿನ ದೊಡ್ಡ ಕೆರೆಯ ಉಲ್ಲೇಖವಾಗಿರುವುದು.
               ಇಷ್ಟಾದರೂ ಬೆಂಗಳೂರು ಈ ಕಾಲಕ್ಕೆ ಚಿಕ್ಕ ಗ್ರಾಮವಾಗಿಯೇ ಇತ್ತು ಎಂಬುದು ಸ್ಪಷ್ಟವಾಗುತ್ತದೆ. ವೆಪ್ಪೂರ್‌ನಾಡು ಅಥವಾ ಬೇಗೂರು ನಾಡಿಗೆ ಈ ಪ್ರದೇಶ ಸೇರಿತ್ತೆಂಬುದು ಸ್ಪಷ್ಟ. ಇದಕ್ಕೆ ಆಧಾರವಾಗಿ ಈ ಪ್ರದೇಶದಲ್ಲಿ ದೊರೆತಿರುವ ಶಾಸನಗಳಲ್ಲಿ ಕುವೆಂಪುನಗರದ ಭಾಗವಾದ ತಾವರೆಕೆರೆಯು ವಿಜಯನಗರ ರಾಜ್ಯದ ಆರಂಭದವರೆಗೆ ನಿಗರಿಲಿ ಚೋಳಮಂಡಲವೆಂಬ ದೊಡ್ಡಭಾಗದಲ್ಲಿ ರಾಜೇಂದ್ರಚೋಳ ಒಳನಾಡು ಎಂಬ ಚಿಕ್ಕ ಭಾಗವಿತ್ತು. ಈ ನಾಡಿನಲ್ಲಿ ಮಾಸಾಂಡಿನಾಡಿತ್ತು. ಈ ಮಾಸಾಂಡಿನಾಡಿನಲ್ಲಿ ವೆಪ್ಪೂರ್ (ಬೇಗೂರು) ನಾಡಿತ್ತು. ಇದರ ಭಾಗವಾಗಿ ತಾವರೆಕೆರೆ ಇತ್ತು ಹೇಳಿದೆ.
               ಒಂದನೆಯ ಬುಕ್ಕರಾಯನ ಮಗ ವೀರಕೆಂಪಣ (ಕಂಪಣ)ನಿಗೆ ಈ ರಾಜ್ಯ ಸೇರಿತ್ತು. ವೆಪ್ಪೂರು (ಬೇಗೂರು) ತೋಪ್ಪೂರು (ತೋಗೂರು), ಕೂಡಲ್ (ಕೂಡ್ಲು) ಈ ಕಾಲಕ್ಕೆ ಇದರ ಸಮೀಪ ಗ್ರಾಮಗಳಾಗಿದ್ದವು. ಅಂದಿನಿಂದ ಈ ಪ್ರದೇಶದ ರಚನೆಯಲ್ಲಿ ಅಂತಹ ವ್ಯತ್ಯಾಸಗಳೇನೂ ಇರಲಿಲ್ಲ. ಮುಂದಿನದು ಎಲ್ಲರಿಗೂ ತಿಳಿದಿರುವ ಇತಿಹಾಸವೇ.
               ಮುಂದೆ ಕನ್ನಡ ಭಾಷೆ ಕರ್ನಾಟಕಕ್ಕೆ ಸಂಬಂಧಿಸಿದಂತೆ ಚರ್ಚಿಸೋಣ. ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಇದು ನಿರ್ವಿವಾದ. ಈ ಇತಿಹಾಸ ಊಹಾತ್ಮಕವಾದುದಲ್ಲ. ಸ್ಪಷ್ಟ ಐತಿಹಾಸಿಕ ಕುರುಹುಗಳ ಇತಿಹಾಸ. ಇದುವರೆವಿಗೆ ಹಲ್ಮಿಡಿ ಶಾಸನವೇ ಕನ್ನಡದ ಪ್ರಾಚೀನ ಶಾಸನವೆಂದು ತಿಳಿದಿದ್ದೆವು. ಇತ್ತೀಚೆಗೆ ಇದಕ್ಕಿಂತಲೂ ೫೦ ವರ್ಷ ಹಿಂದಕ್ಕೆ ಹೋಗಬಹುದಾದ ಕನ್ನಡ ಶಾಸನದ ಭಾಗವೊಂದು ಪತ್ತೆಯಾಗಿದೆ. ಇದು ಕದಂಬರ ಆರಂಭಕಾಲಕ್ಕೆ ಸೇರಬಹುದಾದ ಶಾಸನ. ಹೀಗಾಗಿ ಇದುವರೆವಿಗೆ ಇದ್ದ ಪ್ರಾಚೀನ ಉಪಲಬ್ದ ಶಾಸನದ ಕಾಲವನ್ನು ನಾವು ಕ್ರಿ.ಶ.೩೭೫ಕ್ಕೆ ಕೊಂಡೊಯ್ಯಬಹುದಾಗಿದೆ. ಚಿತ್ರದುರ್ಗದ ಬೆಟ್ಟದಲ್ಲಿ ಸಿಕ್ಕಿ ಪ್ರಕಟವಾಗಿರುವ ಮೂರು ಅಕ್ಷರದ ಶಾಸನ ಮಯಮ ಎಂಬುದನ್ನು ಕನ್ನಡದ ಹೆಸರೆಂದು ಪರಿಗಣಿಸಿದಲ್ಲಿ ಕನ್ನಡ ಭಾಷೆಯ ಶಾಸನದ ಅಸ್ತಿತ್ವವನ್ನು ಕ್ರಿ.ಶ.೨೫೦ರಷ್ಟು ಹಿಂದಕ್ಕೆ ಕೊಂಡೊಯ್ಯಬಹುದಾಗಿದೆ.
               ಕನ್ನಡ ಭಾಷೆ ಹಾಗೂ ಸಾಹಿತ್ಯದ ಇತಿಹಾಸವನ್ನು ಅಧ್ಯಯನ ಮಾಡುವಾಗ ನಮಗೆ ಒಂದು ಸ್ಪಷ್ಟ ಕಾಲಾನುಕ್ರಮಣಿಕೆ ದೊರೆಯುತ್ತದೆ. ಇಂತಹ ಅಧ್ಯಯನವನ್ನು ಕನ್ನಡ ಭಾಷಾ ಅಧ್ಯಯನಕಾರರು ವೈಜ್ಞಾನಿಕವಾಗಿ ನಡೆಸುತ್ತಾ ಬಂದಿದ್ದಾರೆ. ಕನ್ನಡ ಸಾಹಿತ್ಯ ಚರಿತ್ರೆ ರಚಿಸುವಲ್ಲಿ ಯಾವುದಾದರೂ ಗ್ರಂಥದ ಕಾಲನಿರ್ಣಯ ಮಾಡಬೇಕಾದರೆ ಕಾಲದ ಉಲ್ಲೇಖವಿಲ್ಲದಿದ್ದಲ್ಲಿ ಅದರ ಅಧ್ಯಯನದಿಂದ ದೊರಕುವ ಆಂತರಿಕ ಆಧಾರಗಳಿಂದ ಅದರ ಕಾಲವನ್ನು ಸರಿಸುಮಾರಾಗಿ ಹತ್ತಿರಕ್ಕೆ ಕೊಂಡೊಯ್ಯಲು ಸಾಧ್ಯವಿದೆ. ಇಂತಹ ಅನುಕೂಲ ದಕ್ಷಿಣ ಭಾರತದ ಭಾಷೆಗಳಲ್ಲಿ ಕನ್ನಡ ಭಾಷೆಗಿರುವ ವೈಶಿಷ್ಟ್ಯ. ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಪ್ರತಿ ಶತಮಾನದಲ್ಲಿ ಕಾಣಬರುವ ಬದಲಾವಣೆಗಳು, ಅಕ್ಷರಪಲ್ಲಟ ಅಸಗ>ಅಗಸ, ಕಾರಕ್ಕೆ ಕಾರ, ಕಾರ ಕಾರವಾಗಿದ್ದು, ಪರಕೆ>ಹರಕೆ, , ಱಗಳ ಬಳಕೆ ಹಾಗೂ ಕೈಬಿಡುವಿಕೆ, ಕಾಲದಿಂದ ಕಾಲಕ್ಕೆ ಸೇರ್ಪಡೆಯಾದ ಅನ್ಯಭಾಷಾ ಪದಗಳು ಮೊದಲಾದ ಆಧಾರದಿಂದ ವೈಜ್ಞಾನಿಕವಾದ ಅಧ್ಯಯನ ಸಾಧ್ಯವಾಗಿದೆ. ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ, ಯಾವುದೇ ಶಾಸನವನ್ನಾಗಲೀ, ಕೃತಿಯನ್ನಾಗಲೀ ಇತರೆ ಭಾಷೆಗಳಂತೆ ಶತಮಾನಗಳ ಅಂತರದಿಂದ ಕಾಲವನ್ನು ಎಳೆದಾಡುವ ಪರಿಸ್ಥಿತಿ ಬಂದಿಲ್ಲ.
ಬೆಂಗಳೂರಿಗೆ ವಲಸೆ: ಇದೊಂದು ಸೂಕ್ಷ್ಮವಾದ ಪ್ರಶ್ನೆ. ವಲಸೆ ಎಂಬುದು ಮಾನವ ಜನ್ಮತಳೆದಾಗಿನಿಂದ ನಡೆದ, ನಡೆಯುತ್ತಿರುವ ನಿರಂತರ ಪ್ರಕ್ರಿಯೆ. ಹೊಟ್ಟೆಪಾಡಿಗಾಗಿ, ನೆಮ್ಮದಿಗಾಗಿ, ರಕ್ಷಣೆಗಾಗಿ, ಬೇರೆಯವರ ದಾಳಿಗಳಿಂದ ರಕ್ಷಿಸಿಕೊಳ್ಳಲು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಮಾನವ ವಲಸೆ ಹೋಗುತ್ತಲೇ ಇದ್ದಾನೆ. ಇದು ಭಾರತ, ಭಾರತದಲ್ಲಿ ಅಂತರ‍್ಗತವಾಗಿರುವ ಕರ್ನಾಟಕ, ಕರ್ನಾಟಕದ ವಿವಿಧ ಪ್ರದೇಶಗಳಿಂದ ಇನ್ನೊಂದು ಪ್ರದೇಶಕ್ಕೆ ಈ ವಲಸೆ ನಡೆಯುತ್ತಲೇ ಇದೆ. ಇದು ನಿರಂತರ ಪ್ರಕ್ರಿಯೆ. ಗ್ರಾಮದಿಂದ ಪಟ್ಟಣಕ್ಕೆ, ಪಟ್ಟಣದಿಂದ ನಗರಗಳಿಗೆ, ನಗರಗಳಿಂದ ಬೇರೆ ಬೇರೆ ದೇಶಗಳಿಗೆ ಖಂಡಾಂತರಗಳಿಗೆ ಈ ವಲಸೆ ನಡೆಯುತ್ತಲೇ ಇದೆ. ಬೆಂಗಳೂರಿಗೂ ಇದು ತಪ್ಪಿದ್ದಲ್ಲ. ಇತಿಹಾಸದಲ್ಲಿ ಉಲ್ಲೇಖವಾಗಿರುವ ರಾಜಮನೆತನಗಳು ಅನೇಕವು ಇಲ್ಲಿನವಲ್ಲ. ಶಾತವಾಹನರು, ಪಲ್ಲವರು, ಚುಟುಕುಲದವರು, ರಾಷ್ಟ್ರಕೂಟರು, ಯಾದವ ವಂಶದ ಅರಸರು, ಅನೇಕ ಪಾಳೆಯಗಾರರು ಹೊರಗಿನವರೇ ಆಗಿದ್ದಾರೆ.
ಬೆಂಗಳೂರಿನ ಈ ಪ್ರದೇಶಕ್ಕೆ ಸಮೀಪವಾಗಿರುವ ಬೇಗೂರನ್ನು ೯-೧೦ನೆಯ ಶತಮಾನದಲ್ಲಿ ಆಳುತ್ತಿದ್ದ ನಾಗತ್ತರ ಎಂಬ ಅರಸ ಮಹಾಬಲಿ ವಂಶದವನು. ಈ ವಂಶದವರು ಕರ್ನಾಟಕದ ಪೂರ್ವಕ್ಕೆ ಈಗಿನ ಉತ್ತರ ತಮಿಳುನಾಡು ಹಾಗೂ ದಕ್ಷಿಣ ಆಂಧ್ರಪ್ರದೇಶದಲ್ಲಿ ಆಳ್ವಿಕೆ ನಡೆಸಿದವರು. ಈ ಮಹಾಬಲಿ ಅಥವಾ ಬಾಣವಂಶದ ಅನೇಕ ಮಾಂಡಳಿಕರು ಬೇಗೂರು ಪ್ರದೇಶದಲ್ಲಿದ್ದರು. ಹೀಗಾಗಿ ಈ ಪ್ರದೇಶ ಅಂದಿಗೇ ನೆರೆಯ ಪ್ರಾಂತ್ಯಗಳೊಂದಿಗೆ ಸಂಪರ್ಕ, ಸಂಬಂಧವನ್ನು ಹೊಂದಿತ್ತು. ಈ ಶಾಸನೋಕ್ತ ಹೆಸರುಗಳಾದ ಇರುಗ, ನಾಗತ್ತರ, ಪೆಗೂರ ಮೊದಲಾದವು ಕನ್ನಡ ಜಾಯಮಾನದ ಹೆಸರುಗಳಲ್ಲ. ಇವರ ನಂತರ ಕರ್ನಾಟಕವನ್ನು ಪ್ರವೇಶಿಸಿದ ಚೋಳರು, ನಂತರ ಹೊಯ್ಸಳರು ಕಾರಣದಿಂದ ಬಂದ ಮಧ್ಯ ತಮಿಳುನಾಡಿನ ತಮಿಳು ಪಂಡಿತರು ಮತ್ತು ಆಡಳಿತಗಾರರು, ವಿಜಯನಗರ ಕಾಲಕ್ಕೆ ಬಂದ ತೆಲುಗು ಮಾತನಾಡುವ ಪಂಡಿತ, ಆಡಳಿತಗಾರ, ಸೈನಿಕ ಮುಂತಾದವರು ಮುಸಲ್ಮಾನ ಅರಸರ ಕಾಲದಲ್ಲಿ ಮುಸಲ್ಮಾನರು, ಮರಾಠರ ಆಡಳಿತ ಕಾಲದಲ್ಲಿ ಮರಾಠರು, ಬ್ರಿಟಿಷರ ಕಾಲದಲ್ಲಿ ವಿದೇಶೀಯರು ಈ ಬೆಂಗಳೂರಿಗೆ ಬಂದಿದ್ದಾರೆ.
ಈ ಪ್ರದೇಶದ ಕನ್ನಡ ಭಾಷೆಯ ಮೇಲೆ ಹೀಗೆ ವಲಸೆ ಬಂದವರ ಪ್ರಭಾವವನ್ನು ನಿಚ್ಚಳವಾಗಿ ಕಾಣಬಹುದು. ಸಾಮಾನ್ಯವಾಗಿ ಮೊದಲ ತಲೆಮಾರಿನ ಸಾಮಾನ್ಯ ಜನ ಸ್ಥಳೀಯರೊಂದಿಗೆ ಹೊಂದಿಕೊಳ್ಳುವುದರಲ್ಲಿ ಸ್ವಲ್ಪ ಸಮಯ ತೆಗೆದುಕೊಂಡರೂ ಅವರ ಮುಂದಿನ ತಲೆಮಾರಿನ ಜನ ಸ್ಥಳೀಯರೇ ಆಗಿಬಿಡುವುದು ವಲಸೆಯ ವಿಶೇಷ. ಪ್ರತ್ಯೇಕತೆ ಕಂಡುಬರುವುದು ಧರ್ಮಗಳಲ್ಲಿ ಮಾತ್ರ. ಒಂದೇ ಧರ್ಮದ ಜನ ಒಂದೆಡೆ ಇದ್ದಲ್ಲಿ ಹೊಂದಾಣಿಕೆಯಲ್ಲಿ ಸುಲಭವಿರುತ್ತದೆ. ಉಳಿದಂತೆ ಕಷ್ಟಕರವಾಗಿರುತ್ತದೆ.
ಬೆಂಗಳೂರಿನ ಬೆಳವಣಿಗೆ : ಕ್ರಿ.ಶ. ೯ನೆಯ ಶತಮಾನದಲ್ಲಿ ಅಂದರೆ ಸುಮಾರು ೧೧೦೦ ವರ್ಷಗಳ ಹಿಂದೆಯೇ ಅಸ್ತಿತ್ವದಲ್ಲಿದ್ದ ಬೆಂಗಳೂರು ಪ್ರದೇಶವು ಕಾಲದಿಂದ ಕಾಲಕ್ಕೆ ಅಲ್ಪ ಸ್ವಲ್ಪ ಬೆಳವಣಿಗೆಯನ್ನು ತೋರಿಸುತ್ತ ಬಂದಿದೆ. ೧೧೦೦ ವರ್ಷಗಳ ಹಿಂದೆಯೇ ಈ ಊರಿಗೆ ಕೋಟೆ ಇತ್ತೆಂಬ ವಿಷಯ ತಿಳಿಯುವುದರಿಂದ ಇದೊಂದು ಪ್ರಮುಖ ಪಟ್ಟಣವಾಗಿತ್ತೆಂಬುದರಲ್ಲಿ ಸಂದೇಹವಿಲ್ಲ. ವ್ಯವಸಾಯ ಕೇಂದ್ರಿತಪ್ರದೇಶವಾಗಿದ್ದ ಈ ಗ್ರಾಮವು ವಾಣಿಜ್ಯ ಕೇಂದ್ರಿತವಾದದ್ದೇ ೧೬ನೆಯ ಶತಮಾನದಿಂದ ಯಲಹಂಕ ನಾಡಪ್ರಭುಗಳ ಕಾಲದಲ್ಲಿ. ಈ ವಾಣಿಜ್ಯ ಹಾಗೂ ಗೃಹಕೈಗಾರಿಕಾ ಕೇಂದ್ರವಾಗಿದ್ದ ಈ ನಗರ ಟಿಪ್ಪು ಮತ್ತು ಬ್ರಿಟಿಷರ ಕಾಲದಲ್ಲಿ ಮಿಲಿಟರಿ ಚಟುವಟಿಕೆಯ ಕೇಂದ್ರವಾಗಿಯೂ ಮಾರ್ಪಡುತ್ತದೆ. ಶ್ರೀರಂಗಪಟ್ಟಣವನ್ನು ಬ್ರಿಟಿಷರು ಗೆದ್ದ ಮೇಲೆ ಮುಂದೆ ಬ್ರಿಟಿಷ್ ಸೈನ್ಯ ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಇಲ್ಲಿಯೇ ಸೈನಿಕಠಾಣೆಯನ್ನು ಸ್ಥಾಪಿಸುತ್ತದೆ. ಬ್ರಿಟಿಷರ ಸೈನ್ಯವು ಮದರಾಸು ಪ್ರಾಂತ್ಯದಿಂದ ಬಂದದ್ದರಿಂದ ಬಹಳಷ್ಟು ತಮಿಳು ಸೈನಿಕರು ಇದ್ದರು. ಇವರ ದೈನಂದಿನ ಕಾರ್ಯಗಳಲ್ಲಿ ಸಹಾಯ ಮಾಡಲು ಚಾಕರಿ ಜನಗಳೂ ಬಂದು ನೆಲೆಸಿದರು. ಇದಕ್ಕೆ ಪೂರಕವಾಗಿ ರೈಲು ಮಾರ್ಗವೂ ಸಹಕರಿಸಿತು. ಹೀಗೆ ಬೆಂಗಳೂರಿನ ಪೂರ್ವಭಾಗ ತಮಿಳುಜನರಿಂದ ತುಂಬಲು ಕಾರಣವಾಯಿತು. ಮಿಲಿಟರಿಯ ಜೊತೆಯಲ್ಲಿ ಮೊದಲು ಬಂದವರು ಮಧ್ಯಮವರ್ಗದ ತಮಿಳುಜನರಾದರೆ ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯಾನಂತರ ಬಂದವರು ಬಡ ಕೂಲಿಕಾರ್ಮಿಕರು. ಇವರು ಬಂದಿದ್ದು ಕೊಂಗುನಾಡಿನಿಂದ. ಹಾಗೆಯೇ ಪೂರ್ವ ಕರ್ನಾಟಕಕ್ಕೆ ಬಂದ ಇನ್ನೊಂದು ವಲಸೆ ಕೆಂಪೇಗೌಡರ ಕಾಲದ್ದು. ಪೆನಗೊಂಡೆ ವಿಜಯನಗರದ ರಾಜಧಾನಿಯಾಗಿದ್ದಾಗ ಪೆನಗೊಂಡೆಗೆ ಹೋಗುತ್ತಿದ್ದ ಕೆಂಪೇಗೌಡರ ಅಲ್ಲಿನ ಅನೇಕ ವ್ಯಾಪಾರಿಗಳನ್ನು ಕರೆತಂದು ಬೆಂಗಳೂರಿನಲ್ಲಿ ನೆಲೆಸಲು ಅನುಕೂಲಗಳನ್ನು ನೀಡಿದ. ಆತನೇ ಹೇಳಿದಂತೆ ಪೆನುಗೊಂಡೆ, ರತ್ನಗಿರಿ, ರಾಯಕೋಟೆ, ಧಾರಾಪುರಿ, ಕೃಷ್ಣಗಿರಿಗಳಿಂದ ವರ್ತಕರನ್ನು ಕರೆಸಿದ್ದ. ಹೀಗೆ ತೆಲುಗು ವ್ಯಾಪಾರಿಗಳು, ಅವರೊಡನೆ ಬಂದ ರೈತರು ಈ ಪ್ರದೇಶದಲ್ಲಿ ನೆಲೆಗೊಂಡರು.
ಭಾಷೆಯ ಸ್ಥಿತಿಗತಿ : ಭಾಷೆ ಉಳಿಯಬೇಕಾದರೆ ಜನರ ಬಳಕೆ ಅತ್ಯಗತ್ಯ. ಕನ್ನಡ ಭಾಷೆಯನ್ನು ಕಾಲದಿಂದ ಕಾಲಕ್ಕೆ ಹಿಡಿದಿಡುವ ಪ್ರಯತ್ನಗಳು ನಡೆಯುತ್ತಲೇ ಬಂದಿದೆ. ೧೨೦೦ ವರ್ಷಗಳ ಹಿಂದೆ ಕವಿರಾಜಮಾರ್ಗ ಬರೆದ ಶ್ರೀವಿಜಯನ ಕಾಲದಲ್ಲಿಯೇ ಕನ್ನಡ, ತಿರುಳ್ಗನ್ನಡದ ಬಗ್ಗೆ ಚರ್ಚೆ ಆರಂಭವಾಗಿತ್ತು. ಪರ್ಷಿಯಾ ಹಾಗೂ ಅರಬ್ಬೀ ವ್ಯಾಪಾರಿಗಳಿಂದ ೯ನೆಯ ಶತಮಾನಕ್ಕಾಗಲೇ ಪರ್ಷಿಯಾ ಶಬ್ದಗಳು ಕನ್ನಡದಲ್ಲಿ ಬಳಕೆಗೆ ಬಂದಿದ್ದವು. ಅಂದು ಆರಂಭವಾದ ಚರ್ಚೆ ಇಂದಿಗೂ ನಡೆಯುತ್ತಲೇ ಇರುವುದು ಈ ಭಾಷೆಯ ಜೀವಂತಿಕೆಗೆ ಸಾಕ್ಷಿ. ಇತ್ತೀಚಿನ ದಿನಗಳಲ್ಲಿ ಬಳಕೆಯಾಗುತ್ತಿರುವ ಈಒ ರೇಡಿಯೋ ಕನ್ನಡ, ಸಿನಿಮಾ ಕನ್ನಡ, ಕಾನ್ವೆಂಟ್ ಕನ್ನಡ, ಟಿವಿಗಳಲ್ಲಿ, ಸಂದರ್ಶನಗಳಲ್ಲಿ, ಅಡುಗೆ ಮುಂತಾದ ಪ್ರಾತ್ಯಕ್ಷಿಕೆಗಳಲ್ಲಿ ಬಳಕೆಯಾಗುವ ಕನ್ನಡದ ಬಗ್ಗೆ ತೀವ್ರವಾದ ಚರ್ಚೆಗಳು ಹಾಗೂ ಕೆಲವೊಮ್ಮೆ ಪ್ರತಿಭಟನೆಗಳು ನಡೆದಿವೆ. ಹೀಗಾಗಿ ಕವಿರಾಜಮಾರ್ಗಕಾರ ಹೇಳುವಂತೆ ಇಂದಿನ ತಿರುಳ್ಗನ್ನಡ ಯಾವುದೆಂಬ ಬಗ್ಗೆ ಈಗಿನ ಪರಿಸ್ಥಿತಿಯಲ್ಲಿಯೂ ಚರ್ಚೆ ನಡೆಯುತ್ತಿರುವುದು ಜೀವಂತ ಭಾಷೆಯ ಲಕ್ಷಣವೆಂದೇ ಹೇಳಬೇಕು.
ಭಾಷೆಯನ್ನು ನಾವು ನಿರ್ದಿಷ್ಟ ಚೌಕಟ್ಟಿನಲ್ಲಿ ಹಿಡಿದಿಡಲು ಎಂದಿಗೂ ಸಾಧ್ಯವಿಲ್ಲ. ಹಾಗೆ ಹಿಡಿದಿಟ್ಟಲ್ಲಿ ಅದು ಬಳಕೆಯಲ್ಲಿ ಜೀವಂತವಾಗಿರಲು ಸಾಧ್ಯವಾಗಲಾರದು. ಹಾಗೆಯೇ ಇಂದಿಗೂ, ಹಿಂದೆಯೂ ಗ್ರಾಂಥಿಕ ಭಾಷೆ ಹಾಗೂ ಬಳಕೆಯ ಭಾಷೆ ಎರಡೂ ಬೇರೆ ಬೇರೆಯಾಗಿಯೇ ಇದ್ದವು. ಹೊಸ ಪದಗಳನ್ನು ಬಳಸಿ ಸೇರಿಸಿಕೊಳ್ಳುವುದು, ತನ್ನದೇ ಕೆಲವು ಪದಗಳನ್ನು ಬಿಡುವುದು ಎಲ್ಲ ಕಾಲದಲ್ಲಿ ಭಾಷೆಯಲ್ಲಿ ನಡೆದ ಪ್ರಕ್ರಿಯೆ. ಕನ್ನಡವೂ ಈ ನಿಯಮಕ್ಕೆ ಹೊರತಾಗಿಲ್ಲ. ಹಾಗೆಂದು ಸಿಕ್ಕ ಸಿಕ್ಕ ಪದಗಳನ್ನು ಭಾಷೆ ಸ್ವೀಕರಿಸುವುದಿಲ್ಲ. ತನ್ನ ಜಾಯಮಾನಕ್ಕೆ ಒಗ್ಗುವ ಪದಗಳನ್ನು ಮಾತ್ರ ಅದು ಸ್ವೀಕರಿಸುತ್ತದೆ.
ಕುವೆಂಪು ನಗರ ಪ್ರದೇಶವು ಬಹುಭಾಷಿಕರು ನೆಲೆಗೊಂಡಿರುವ ಪ್ರದೇಶ. ಕನ್ನಡ, ತಮಿಳು, ತೆಲುಗು, ಮಲೆಯಾಳ, ಉರ್ದು, ಹಿಂದಿ ಮತ್ತಿತರ ಭಾಷಿಕರು ಈ ಪ್ರದೇಶದಲ್ಲಿ ನೆಲೆಸಿದ್ದಾರೆ. ಇವರಲ್ಲಿ ಕೆಲವರು ಇಲ್ಲಿಯ ಮೂಲ ನಿವಾಸಿಗಳೂ ಆಗಿದ್ದಾರೆ. ಇಡೀ ಪ್ರದೇಶ ಮಿನಿಭಾರತವಿದ್ದಂತೆ. ಈ ಪ್ರದೇಶದಲ್ಲಿ ಈಗ ಇರುವಷ್ಟು ಪೇಯಿಂಗ್ ಗೆಸ್ಟ್, ಹಾಸ್ಟೆಲ್‌ಗಳು ಬೆಂಗಳೂರಿನಲ್ಲಿ ಎಲ್ಲಿಯೂ ಇಲ್ಲ. ಹೀಗಾಗಿ ಐಟಿ, ಬಿಟಿ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಬಂದವರಿಗೆ ಒಂದು ಬಗೆಯ ಆಶ್ರಯಸ್ಥಾನವಾಗಿ ಇದು ಪರಿಣಮಿಸಿದೆ. ಇಂತಹ ಪ್ರದೇಶದಲ್ಲಿ ಕನ್ನಡದ ವಾತಾವರಣವನ್ನು ಸ್ಥಾಪಿಸುವುದು. ಹಾಗೂ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸುವುದು ಪ್ರಯಾಸದ ಕೆಲಸವೇ ಸರಿ. ಇಲ್ಲಿ ಪೇಯಿಂಗ್ ಗೆಸ್ಟ್, ಹಾಸ್ಟೆಲ್‌ಗಳಲ್ಲಿ ವಾಸವಾಗಿರುವವರು ಹಾಗೂ ಪ್ರತಿದಿನವೂ ಬಂದು ಹೋಗುವ ಹೊರಗಿನ ಜನರಿಂದ ಈ ಪ್ರದೇಶ ಕೂಡಿದೆ. ಇವರು ಕನ್ನಡ ಭಾಷೆ ಕಲಿಯಬೇಕೆಂದರೂ ಬೇಕಾದ ಅನುಕೂಲಗಳಿಲ್ಲ. ಸುಲಭವಾಗಿ ಕನ್ನಡ ಕಲಿಸುವ ಪಠ್ಯಪುಸ್ತಕಗಳಿಲ್ಲ. ಕರ್ನಾಟಕದ ಬಗ್ಗೆ ಹಾಗೂ ಕರ್ನಾಟಕ ಸಂಸ್ಕೃತಿಯ ಬಗ್ಗೆ ತಿಳಿ ಹೇಳುವ ಸಂಸ್ಥೆಗಳಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೆಲವೊಮ್ಮೆ ಕನ್ನಡ ಕಣ್ಮರೆಯಾಗುತ್ತಿದೆಯೆಂದು ಅನೇಕ ಸಲ ಅನ್ನಿಸದೆ ಇರದು. ಇದಕ್ಕೆ ಪರಿಹಾರವಾಗಿ ಕೆಲವೊಂದು ಕಾರ್ಯಗಳನ್ನು ಇಂತಹ ಕನ್ನಡ ಘಟಕಗಳು ಕೈಗೆತ್ತಿಗೊಳ್ಳಬೇಕಾಗಿದೆ.
೧.            ಕನ್ನಡ ಸಾಹಿತ್ಯ ಪರಿಷತ್ತಿನ ಚಿಕ್ಕ ಘಟಕಗಳಿಗೆ ಕಟ್ಟಡ ಸೌಲಭ್ಯ ಸರ್ಕಾರ ಒದಗಿಸುವುದು.
೨.            ಸ್ಥಳೀಯ ಸಾಹಿತ್ಯ ಚಟುವಟಿಕೆಗಳ ಜೊತೆಗೆ ಬಡಾವಣೆಯ ಬೇರೆ ಬೇರೆ ಕಡೆಗಳಲ್ಲಿ ಕರ್ನಾಟಕ ಸಂಸ್ಕೃತಿಯನ್ನು ಪರಿಚಯಿಸುವ ಕವಿಗಳ-ಕ್ಷೇತ್ರಗಳ ಸಾಕ್ಷ್ಯಚಿತ್ರ / ಚಿತ್ರ ಪ್ರದರ್ಶನ. ಆಯ್ದ ಶಾಲೆಗಳಲ್ಲಿ ತಿಂಗಳಿಗೆ ಒಮ್ಮೆ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು.
೩.            ಅಂತರಭಾಷಾ ಕವಿಗೋಷ್ಠಿಗಳನ್ನು ನಡೆಸುವ ಮೂಲಕ ಇತರ ಭಾಷಿಕರನ್ನು ಕನ್ನಡದ ಕಡೆಗೆ ಸೆಳೆಯುವುದು.
೪.            ಆಸಕ್ತ ಕನ್ನಡೇತರರಿಗೆ ಕನ್ನಡ ಆಡುನುಡಿ ಕಲಿಸುವುದು. ಇದಕ್ಕಾಗಿ ಒಂದು ಕೇಂದ್ರವನ್ನು ತೆರೆಯುವುದು.
ಈ ಕೆಲವು ಕ್ರಮಗಳಿಂದ ಕನ್ನಡ ಭಾಷೆ / ಸಂಸ್ಕೃತಿಯನ್ನು ಜಾಗೃತವಾಗಿಡಬಹುದಾಗಿದೆ.
ಮಾನ್ಯರೇ,
ಇದುವರೆಗೆ ನನ್ನ ಕೆಲವು ಹೃದಯಾಂತರಾಳದ ಮಾತುಗಳನ್ನು ಆಲಿಸಿದ ತಮಗೆಲ್ಲರಿಗೂ ವಂದಿಸಿ, ನನ್ನ ಮಾತುಗಳನ್ನು ಮುಗಿಸುತ್ತೇನೆ.
ಜೈ ಕರ್ನಾಟಕ
ಜೈ ಹಿಂದ್






No comments:

Post a Comment