Wednesday, September 11, 2013

ಡಾ. ದೇವರಕೊಂಡಾರೆಡ್ಡಿ
















ಡಾ. ದೇವರಕೊಂಡಾ ರೆಡ್ಡಿ

ಮರೆತುಹೋದ ಸಾಮ್ರಾಜ್ಯದ ರಾಜಧಾನಿಯ ಭಾಗವಾಗಿದ್ದ ಊರಿನಿಂದ ಬಂದ ನನಗೆ ಚಿಕ್ಕಂದಿನಿಂದಲೂ ಹಾಳು ಹಂಪೆಯಲ್ಲಿ ಸುತ್ತುವಾಗ ಅಲ್ಲಿಲ್ಲಿ ಬಿದ್ದಿರುವ ಶಿಲಾಶಾಸನಗಳು ಕುತೂಹಲ ಹುಟ್ಟಿಸುತ್ತಿದ್ದವು. ದಕ್ಷಿಣ ಕರ್ನಾಟಕದ ಶಾಸನಗಳ ಸಮಗ್ರ ಅಧ್ಯಯನಕ್ಕೆ ಓಂಕಾರ ಹಾಕಿದುದು ಬಿ.ಎಲ್‌.ರೈಸ್‌ ಅವರು ಎಂದು ಗೊತ್ತಿತ್ತು. ಆದರೆ  ನಮ್ಮ ಬಳ್ಳಾರಿ ಮತ್ತು ಆಸುಪಾಸಿನ ಜಿಲ್ಲೆಗಳ  ಪ್ರಕಟಿತ, ಅಪ್ರಕಟಿತ ಶಾಸನಗಳ ಮತ್ತು ಐತಿಹಾಸಿಕ ದಾಖಲೆಗಳನ್ನು ಒಳಗೊಂಡ ಸಮಗ್ರ ಸಂಪುಟದ ಕೊರತೆ ಇತ್ತು.   ಅದನ್ನುಆಗಮಾಡಿದ ನಮ್ಮಪಾಲಿನ ಅಭಿನವ ರೈಸ್ ಹತ್ತಿರದ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲೆ ಇದ್ದು ಕ್ಷೇತ್ರ ಕಾರ್ಯಮಾಡಿದರೂ ನನಗೆ ಅವರ ಪರಿಚಯವಾದದ್ದು ದೂರದ ಬೆಂಗಳೂರಿನಲ್ಲಿ.  ವೃತ್ತಿ ನಿಮಿತ್ತ ಕರ್ನಾಟಕ ರಾಜ್ಯವನ್ನೆಲ್ಲ ಸುತ್ತಿ ನಿವೃತ್ತಿಯನಂತರ  ಬೆಂಗಳೂರಿಗೆ ಬಂದಾಗ ಪಕ್ಕದ ರಸ್ತೆಯ ಇತಿಹಾಸ ಅಕಾದಮಿ ಸಂಪರ್ಕ ಬಂದಿತು. ಆ ಮಾತು ಈ ಮಾತು ಆಡುತ್ತಾ ನಾನು ಮಲಪನಗುಡಿಯವನು ಎಂದಾಗ ನಮ್ಮ ಊರಿನಲ್ಲಿನ ಶಾಸನದ ವಿವರ ನೀಡಿ ನನ್ನನ್ನು ಚಕಿತ ಗೊಳಿಸಿದರು. ಆಗ ನನಗೆ  ಗೊತ್ತಾಯಿತು ಡಾ. ದೇವರ ಕೊಂಡಾರೆಡ್ಡಿಯವರು ಹಂಪಿಯ ಕನ್ನಡ ಯುನಿವರ್ಸಿಟಿಯಲ್ಲಿ ಶಾಸನ ವಿಭಾಗದ ಪ್ರಾಧ್ಯಾಪಕರಾಗಿ ಉತ್ತರ ಕರ್ನಾಟಕದ ಶಿಲಾಲಿಖಿತ ದಾಖಲೆಗೆಳು ಬೆಳಕಿಗೆ ಬರಲು  ಕಾರಣ ಎಂದು.



ಅಲ್ಲಿಂದ ಘನೀಭೂತವಾಯಿತು ನಮ್ಮ ಪರಿಚಯ. ಇತಿಹಾಸ ಅಕಾದೆಮಿಯ  ಬ್ಲಾಗ್‌ತೆರೆಯುವ ವಿಷಯ  ಪ್ರಸ್ತಾಪ ಮಾಡಿದಾಗ ಮುಕ್ತ ಮನಸಿನ ಅಧ್ಯಕ್ಷರು ಹತ್ತಿರವಾದರು. ಹಮ್ಮು ಬಿಮ್ಮು ಇಲ್ಲದೆ ಮನೆಗೆಬಂದು ಬ್ಲಾಗ್‌ ನೋಡಿದರು. ತಕ್ಷಣವೆ ಅಂತರ್‌ಜಾಲದ ವ್ಯಾಪ್ತಿಯನ್ನು ಮನಗಂಡು. ತಾವು ಈ ವಿಷಯದಲ್ಲಿ ಪರಿಣಿತರಲ್ಲದಿದ್ದರೂ ಇತಿಹಾಸದ ದಾಖಲೆ ಉಳಿಸಲು ಮತ್ತು ಜನರನ್ನು ಹೆಚ್ಚು ಹೆಚ್ಚು ತಲುಪಲು ಇರುವ ಸಾಧ್ಯತೆಯನ್ನು ಮನಗಂಡರು . ಶೃಂಗೇರಿಯಲ್ಲಿ ನಡೆದ ೨೬ನೇ ಕರ್ಣಾಟಕ ಇತಿಹಾಸ ಸಮ್ಮೇಳನದ ಸಾಮಾನ್ಯಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲು ಅವಕಾಶಕೊಟ್ಟರು. ಅಲ್ಲಿ ನೆರೆದವರೆಲ್ಲ ಹಿರಿಯ ತಲೆಗಳು.. ಕಂಟ, ತಾಳಪತ್ರ, ಶಿಲಾಶಾಸನಗಳ ಲೋಕದಲ್ಲಿ ತೇಲಿ ಮುಳುಗಿದವರು.ಆದರೆ ಅವರೂ  ಹೊಸತನಕ್ಕೆ ತೆರೆದುಕೊಂಡರು. ಇದರ ಫಲವಾಗಿ ಅಲ್ಲಿನ ಎಲ್ಲ ಕಾರ್ಯಕ್ರಮಗಳು ವಿದ್ಯುನ್ಮಾನಮಾಧ್ಯಮದಲ್ಲಿ ತಡವಿಲ್ಲದೆ ದಾಖಲಾದವು.
ಪ್ರಾಚೀನ ಸಂಗತಿಗಳ ಪರಿಚಯವನ್ನು ಆರ್ವಾಚೀನ ಸಾಧನೆಯಿಂದ ಸಂರಕ್ಷಿಸುವ ಮತ್ತು ತಲುಪಿಸುವ ನಿರ್ಧಾರವನ್ನು ಬಹುತೇಕ ವಿದ್ವಾಂಸರಿಗೆ ಇ- ಮೇಲ್‌ ಖಾತೆಯೇ ಇಲ್ಲದಿರುವಾಗ ತೆಗೆದುಕೊಳ್ಳುವುದು ಬಹುಪ್ರಗತಿಪರ ಹೆಜ್ಜೆ. ಇದಕ್ಕೆ ಮುಂದಾದ ಡಾ.ರೆಡ್ಡಿಯವರು ಬಂದದ್ದೂ ಅಪ್ಪಟ ಗ್ರಾಮೀಣ ಪರಿಸರದಿಂದ.  ಅವರ ಜನನ ೧೯೪೮ರಲ್ಲಿ,ಬೆಂಗಳೂರು ಜಿಲ್ಲೆಯ ಆನೆಕಲ್ಲು ತಾಲೂಕಿನ ಮಣಕನಹಳ್ಳಿಯ ರೈತ ಕುಟುಂಬ ಅವರದು.ಮಳೆಯಾಧಾರಿತ ಜಮೀನು ಜೀವನಾಧಾರ.ತಂದೆ ಮುನಿಸ್ವಾಮಪ್ಪ ತಾಯಿ ತಿಮ್ಮಕ್ಕ. ಅವರು ಎರಡನೆ ಹೆಂಡತಿ .ಮೂವರು ದೊಡ್ಡತಾಯಿಯ ಮಕ್ಕಳೂ ಸೇರಿದಂತೆ ಒಟ್ಟು ಏಳು ಜನ ಸೋದರರು ಮತ್ತು ಒಬ್ಬಳು ಸೋದರಿ ಇರುವ ದೊಡ್ಡ ಕುಟುಂಬ. ತಂದೆ ಕೃಷಿಯ ಜತೆ ಎತ್ತುಗಳ ವ್ಯಾಪಾರಮಾಡಿ ಸಂಸಾರ ಸಾಕುತಿದ್ದರು  ಅವರು ಅಕಾಲದಲ್ಲೆ ಕಾಲವಶ. ಶ್ರಮ ಜೀವಿ ತಾತ ಮತ್ತು ದಣಿವರಿಯದೆ ದುಡಿವ  ತಾಯಿಯ ಕಣ್ಣಾಸರೆಯಲ್ಲೆ ಇವರ ಬಾಲ್ಯ. . ಹೊಟ್ಟೆ ತುಂಬ ಹಿಟ್ಟು ಬಾಯಿತುಂಬ ಅನ್ನ “ ಎಂಬ ಪರಿಸ್ಥಿತಿಯಲ್ಲಿ ಅವರ ಬಾಲ್ಯ.
‌ಐದನೆ ವರ್ಷಶಾಲೆಗೆ ಸೇರಲು ಹೋದಾಗ ಅವರ ಅಣ್ಣ ತಮ್ಮನ ಹೆಸರು ದೇವರಕೊಂಡ ಮೇಷ್ಟ್ರಿಗೆ ಹೇಳಿದಾಗ ಅದು ಯಾರು ಎಂದು ಅಕ್ಕಪಕ್ಕ ನೋಡಿದ ಮುಗ್ದ ಬಾಲಕ. ಕಾರಣ ಅಪ್ಪೋಜಿ ಎಂದು ಮುದ್ದಿನಿಂದ ಕರೆಯುತಿದ್ದ ಬಾಲಕನಿಗೆ  ತನ್ನ ಹೆಸರು ದೇವರ ಕೊಂಡ  ಎಂದು ಗೊತ್ತಿರಲೇ ಇಲ್ಲ. ಮನೆಗ ಮಾತ್ರವಲ್ಲ ಕೊನೆತನಕ ಊರಿನವರೆಲ್ಲರಿಗೂ ಅಪ್ಪಾಜಿ ಎಂದೆ ಜನಪ್ರಿಯ. ಕಾರಣ ಹೆಸರಿಗೆ ತಕ್ಕಂತೆ ಎಲ್ಲರ ಬಗ್ಗೆ ತೋರುವ ಅವರ ಕಳಕಳಿ, ನೆಂಟರಿಷ್ಟರ ಮತ್ತು  ಗೆಳೆಯರ ಕುರಿತಾದ ಪ್ರೀತಿ ಮತ್ತು ಕಾಳಜಿ
ಪ್ರಾಥಮಿಕ ಶಿಕ್ಷಣ ಊರಿನಲ್ಲಿಯೆ. ಅಲ್ಲಿ ತ್ರಿಮೂರ್ತಿಗಳೆಂದು ಕರೆಯುತಿದ್ದ ಸೀತಾರಾಮಯ್ಯಂಗಾರ್‌,ನರಸಿಂಹ ಮೂರ್ತಿ ಮತ್ತು ನಾರಾಯಣ ಮೂರ್ತಿಗಳು ಗುರುಗಳು. ಬರಿ ಅಕ್ಷರ ಮಾತ್ರವಲ್ಲ ಸಂಸ್ಕಾರವನ್ನು ಕಲಿಸುವವರು.ನಾಟಿ ವೈದ್ಯ,ಗಮಕ ಸಂಗೀತದ ಪರಿಚಯವೂ ಅವರಿಂದ ಆಯಿತು.ಇಂಥ ಮೇಷ್ಟ್ರ ಸಂತತಿ ಸಾವಿರವಾಗಲಿ ಎನಿಸಿಕೊಳ್ಳುವರಿಂದ ಪಾಠ ಕಲಿವ ಭಾಗ್ಯ ಲಭಿಸಿತು
ಹೈಸ್ಕೂಲಿನ ಶಿಕ್ಷಣ ಆನೆಕಲ್‌ನಲ್ಲಿ.ನಿತ್ಯ ಸುಮಾರು ಆರು ಕಿಲೋಮೀಟರ್‌ ನಡಗೆ. ಹಳ್ಳಿಯಿಂದ ಬೆಳಗ್ಗೆ ತಿಂದು ಹೋದವರಿಗೆ ರಾತ್ರಿಯ ತನಕ ಹಸಿದ ಹೊಟ್ಟೆ. ಹೈಸ್ಕೂಲಿನಲ್ಲಿನ ಕೆಲವು ಉಪಾಧ್ಯಾಯರು ಮಾನವಿತೆಯಿಂದ ಮಾಡಿದ್ದ  ಲಘು ಉಪಹಾರ ವ್ಯವಸ್ಥೆಯಿಂದ ತುಸು ಆಸರೆ. ಇವರ ಆಯ್ಕೆ  ಕನ್ನಡ ಮಾಧ್ಯಮ. ಜೊತೆಗೆ ಇಂಗ್ಲಿಷ್‌ ಬೋಧಕರ ಕೊರತೆ.ಮೊದಲೆ ಹಳ್ಳಿ ಹುಡುರು, ಹೀಗಾಗಿ ಇಂಗ್ಲಿಷ್‌ ಕೊನೆಯವರೆಗೂ ಬೆಂಬಿಡದ ಭೂತವಾಗಿ ಕಾಡಿತು. ಒಂಬತ್ತನೆ ತರಗತಿಯಲ್ಲಿ ಚರಿತ್ರೆ, ಭೂಗೋಲ ಮತ್ತು ಹಿಂದಿಯನ್ನು ಐಚ್ಛಿಕ  ವಿಷಯವಾಗಿ ಆಯ್ಕೆ ಮಾಡಿಕೊಂಡರು.. ಎಸ್‌ಎಸ್ ಎಲ್‌ಸಿ ಯಲ್ಲಿ ಆರಾಮಾಗಿ ಪಾಸು. ಮುಂದೆ ಓದಬೇಕೆಂಬ ಅವರ ಹಟಕ್ಕೆ ಮಣಿದರು ಮನೆಯವರು. ನೋಡದ ಬೆಂಗಳೂರಿನ ಸೆಂಟ್‌ಜೋಸೆಫ್ ಕಾಲೇಜಿನಲ್ಲಿ ಪಿಯುಸಿಗೆ ಪ್ರವೇಶ ದೊರೆಯಿತು. ಕಾರ್ಪೊರೇಷನ್‌ ಹತ್ತಿರದ ಸಂಪನ್ನಪ್ಪ ಉಚಿತ ಹಾಸ್ಟೆಲ್‌ನಲ್ಲಿ ವಾಸ. ಕಾಲೇಜಿನಲ್ಲಿ ಬಹುತೇಕರು ಸಿರಿವಂತರ ಮಕ್ಕಳು. ಕಾನ್ವೆಂಟ್‌ನಲ್ಲಿ ಕಲಿತವರು ಅಲ್ಲಿನ ವಾತಾವರಣ ಹಳ್ಳಿಯ ಹುಡುಗನಿಗೆ ಗಾಬರಿ ಹುಟ್ಟಿಸಿತು. ಬಾರದ ಇಂಗ್ಲಿಷ್‌ನಲ್ಲಿಯೇ ಮಾತನಾಡಬೇಕು. ಕೇಳುವ ಎಲ್ಲ ಪಾಠ ಇಂಗ್ಲಿಷ್‌ನಲ್ಲಿ. ಹಾಸ್ಟೆಲ್ಲಿನಲ್ಲಿ ಮುದ್ದೆ ತಿಂದು ನಡೆದೆ ಕಾಲೇಜಿಗೆ ಹೋದಾಗ ತರಗತಿಯಲ್ಲಿ ಆಯಾಸದಿಂದ ಲಘುನಿದ್ದೆ ಬರುತಿತ್ತು. ತರಗತಿಗೆ ತೊಂದರೆಯಾಗದ್ದರಿಂದ ಏನೂ ಅನ್ನತ್ತಿರಲಿಲ್ಲ.
ಪರೀಕ್ಷೆಯಲ್ಲಿ ಫೇಲಾಯಿತು.ಹಾಸ್ಟೆಲಿನಲ್ಲಿ ಸೀಟು ಹೋಯಿತು.ತಿಗಳರ ಪೇಟೆಯಲ್ಲಿನ ಧರ್ಮರಾಯನ ಗುಡಿಯ ಛತ್ರದ ಹಾಲಿನಲ್ಲಿ ಬಟ್ಟೆಯಪರದೆ ಹಾಕಿ ಮಾಡಿದ ವಿಭಾಗದಲ್ಲಿ ವಾಸ ಮತ್ತು ಸ್ವಯಂ ಪಾಕ. ಅಂತೂ ಹೇಗೋ ಪಿಯುಸಿ ಪಾಸು ಮಾಡಿ ಕೊಂಡರು.ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಿ.ಎ. ಗೆ ದಾಖಲಾಯಿತು. ಉಪನ್ಯಾಸಕರ ಒತ್ತಾಸೆಯಿಂದ ಐಚ್ಛಿಕ ಕನ್ನಡ ಇತಿಹಾಸ ಮತ್ತು ಸಂಸ್ಕೃತ ವಿಷಯತೆಗೆದು ಕೊಂಡರು. ಪದವಿಯಲ್ಲಿ ಎಂ.ವಿ ಸೀತಾರಾಮಯ್ಯ, ಎಂ.ಎಚ್‌.ಕೃಷ್ಣಯ್ಯ, ಹಂಪಾನಾ, ಲಲಿತಮ್ಮ ಮೊದಲಾದವರ ಪಾಠ ಸ್ನಾತಕೋತ್ತರ ಹಂತದಲ್ಲೂ ದೊರೆಯದಷ್ಟು ಅಮೂಲ್ಯ ಮತ್ತು ರಸಭರಿತ.ಕೆ.ಟಿ. ಪಾಂಡುರಂಗಿ ಸಂಸ್ಕೃತ ಉಪನ್ಯಾಸಕರು.ಸತ್ಯನಾರಾಯಣ ರಾವ್‌ ಇತಿಹಾಸ ಬೋಧಕರು  ಅವರಿಗೆ ಏಕವಚನದಲ್ಲಿ ಮಾತನಾಡುವಷ್ಟು ಆತ್ಮೀಯತೆ, ಯಥಾರೀತಿ ಇಂಗ್ಲಿಷ್‌ ಕಬ್ಬಿಣದ ಕಡಲೆ.ಅಂತಿಮ ವರ್ಷ ಇತಿಹಾಸವನ್ನೂ ಇಂಗ್ಲಿಷ್‌ನಲ್ಲಿಯೆ ಬರೆಯಬೇಕೆಂದಾಗ ಸಂಕಟ ಶುರುವಾಯಿತು.. ವಿಷಯ ಗೊತ್ತು. ಭಾಷೆ ಬರದು.ಅದಕ್ಕಾಗಿ ಉಪಕುಲಪತಿಗಳಾದ ಗೋಕಾಕರನ್ನು ಭೇಟಿ ಮಾಡಿ ಕನ್ನಡದಲ್ಲಿ ಬರೆಯಲು ಅನುಮತಿ ನೀಡಲು ಮನ ಒಲಿಸಿದರು. ನೋಟ್ಸ  ಇದ್ದದು ಇಂಗ್ಲಿಷ್‌ನಲ್ಲಿ ಅದರಿಂದ ಒಬ್ಬರು ಇಂಗ್ಲಿಷ್‌ನಲ್ಲಿನ ನೋಟ್ಸ ಓದುವುದು ಎರಡೂ ಭಾಷೆ ಬಲ್ಲವರು ಅದನ್ನು ಕನ್ನಡದಲ್ಲಿ ಹೇಳುವುದು. ಉಳಿದವರು ಕೇಳುವುದ ಹೀಗೆ ನಡೆಯಿತು ಕನ್ನಡ ಮಾಧ್ಯಮದಲ್ಲಿ ಬರೆದ  ಪದವಿಯ ಮೊದಲ ತಂಡ ಅವರದು. ಅಂತೂ ಎಲ್ಲರೂ ಪಾಸಾದರು ಇವರಿಗೆ ದ್ವಿತೀಯ ದರ್ಜೆ ಲಭ್ಯ. 
ಮಂದೆ ಓದುದವುದು ಮತ್ತೆ ಸಮಸ್ಯೆ. ಮನೆಯಲ್ಲಿ ಅನುಕೂಲವಿಲ್ಲ. ಆಗ  ತಾತನ ಮಾತಿನಂತೆ ಸೋದರತ್ತೆಯ ಮಗಳ ಜೊತೆ ಮದುವೆಗೆ ಒಪ್ಪಿದಾಗ ಅವರಿಂದ ಎಂ ಎ. ಓದಲು ಸಹಕಾರ ದೊರೆಯಿತು. ಬರಗೂರು ರಾಮಚಂದ್ರಪ್ಪ, ಚಿ. ಶ್ರೀನಿವಾಸ ರಾಜು, ಕೆ.ಆರ್‌ ಗಣೆಶ್‌, ಶೇಷ ಶಾಸ್ತ್ರಿ ಅವರ ಗೆಳೆತನ.ಶಾಸನ ಅಧ್ಯಯನದ  ಒಲವಿನಿಂದ  ಅದನ್ನೆ ಐಚ್ಛಿಕ ವಿಷಯವಾಗಿ ಆಯ್ದುಕೊಂಡು ಚಿದಾನಂದ ಮೂರ್ತಿಗಳ ವಿದ್ಯಾರ್ಥಿಯಾದರು. ಪ್ರತಿ ಶನಿವಾರ ಸೆಮಿನಾರು ವಿಷಯ ಮಂಡನೆಗೆ ಅವಕಾಶ ಒದಗಿಸಿತು. ಸಂಶೋಧನಾ ಲೇಖನಗಳು ವಿಶ್ವವಿದ್ಯಾನಿಲಯದ ನಿಯತ ಕಾಲಿಕದಲ್ಲಿ ಪ್ರಕಟವಾಗ ತೊಡಗಿದವು..
ನಂತರ ಪ್ರಾಂಭವಾಯಿತು ನಿರುದ್ಯೋಗಪರ್ವ..ಬೆಂಗಳೂರಿನ ಆಸುಪಾಸು ಕಾಲೇಜಿನಲ್ಲಿ ಕೆಲಸಕ್ಕೆ ಸೇರುವ ಪ್ರಯತ್ನಕೈಗೂಡಲಿಲ್ಲ. . ಗುಂಡ್ಲು ಪೆಟೆಯಲ್ಲಿ ಸ್ಥಳೀಯ ಅಭ್ಯರ್ಥಿಯಾಗಿ ಆಗಿ ಉಪನ್ಯಾಸಕ ಹುದ್ದೆ ದೊರಕಿತು.  ಉತ್ತಮ ಗೆಳೆಯರೂ ದೊರಕಿದರು ಆಗಲೇ ಸುತ್ತಮುತ್ತಲ ಊರು ಸುತ್ತುತ್ತಾ ಗುಡಿ ದೇಗುಲ ನೋಡುತ್ತಾ ಮಾಹಿತಿ ಸಂಗ್ರಹಣೆಗೆ ತೊಡಗಿದರು. ೧೯೭೩ ರಲ್ಲಿ ಮಾತುಕೊಟ್ಟಂತೆ ಸೋದರತ್ತೆಯ ಮಗಳು ರತ್ನ ಮಡದಿಯಾದಳು. ನವವಿವಾಹಿತ ಮಡದಿಯೊಂದಿಗೆ ಮನೆ ಮಾಡಿದರು. ತೆಲಗು ಭಾಷೆ ಬಿಟ್ಟು ಬೇರೇನೂ ತಿಳಿಯದ ಮುಗ್ದ ಹೆಂಡತಿಯನ್ನು ತಿದ್ದಿತೀಡುವ ಕೆಲಸವೂ ಅವರಿಗೆ ಬಂದಿತು. ಅದು ಅವರ ಮಧುರ ಮಾತಿಗೆ,ಮನಸಿಗೆ ತಡೆಯಾಗಲಿಲ್ಲ.ಹೆಚ್ಚಿನ ವಿದ್ಯ ಇಲ್ಲದಿದ್ದರೂ ಸುಸಂಸ್ಕೃತಳಾದ ಹೆಂಡತಿ ಅವರ ಏಳಿಗೆಗೆ ಬೆನ್ನೆಲುಬಾದರು.ತನ್ನ ಮಾವನ ಆಸಕ್ತಿಯನ್ನರಿತು ಅವರ ಅಧ್ಯಯನ,ಅಧ್ಯಾಪನಕ್ಕೆ ಅಡ್ಡಿಮಾಡಲಿಲ್ಲ.  ಜೊತೆಗೆ ಮನೆವಾರ್ತೆಯ ಹೊಣೆಯನ್ನು ಪೂರ್ಣಹೊತ್ತು ಬಡತನದ ಬಿಸಿ ಗಂಡನಿಗೆ ತಗುಲದಂತೆ ಎಚ್ಚರ ವಹಿಸಿದರು.ಅಷ್ಟೆಅಲ್ಲ ತಮ್ಮ ವ್ಯವಹಾರಿಕ ಜಾಣ್ಮೆಯಿಂದ ಪತಿಯ ಅವಿಭಕ್ತ ಕುಟಂಬದ ಎಲ್ಲ ಸದಸ್ಯರ ಏಳಿಗೆಗೆ ಶ್ರಮಿಸಿದರು.ರೆಡ್ಡಿ ಮೇಷ್ಟ್ರು ೧೯೭೫ ರವರೆಗೆ ಗುಂಡ್ಲು ಪೇಟೆಯ ಕಾಲೇಜಿನಲ್ಲಿ ತಮ್ಮ ಅಧ್ಯಯನಶೀಲತೆಯಿಂದ ಅನೇಕ ಸಂಶೋಧನಾ ಲೇಖಗಳನ್ನು ವಿದ್ವತ್‌ ಪತ್ರಿಕೆಗಳಲ್ಲಿ ಪ್ರಕಟಿಸಿದರು ೧೯೭೫ರಲ್ಲಿ ಲೋಕಲ್ ಅಭ್ಯರ್ಥಿಗಳನ್ನು ತೆಗೆದುಹಾಕಿ ಕೆಪಿಎಸ್‌ಸಿಯಂದ ನೇಮಕವಾಯಿತು.ಅವಕಾಶ ಸಿಗಲಿಲ್ಲ.
ಮತ್ತೆ ಉದ್ಯೋಗಕ್ಕೆ ಅಲೆದಾಟ ಶುರುವಾಯಿತು. ಆಗಲೇ ಒಂದು ಮಗುವೂ ಆಗಿತ್ತು. ನಿತ್ಯ ಸಾಹಿತ್ಯ ಪರಿಷತ್ತಿಗೆ ಭೇಟಿ. ಶಾಸನ ವಿಭಾಗದ ಅಣ್ಣಿಗೇರಿಯವರು ಕಣ್ಣಿನ ಸಮಸ್ಯೆಯಿಂದ ಕೆಲಸ ಬಿಟ್ಟರು. ಶೇಷಶಾಸ್ತ್ರಿಯವರ ಒತ್ತಾಸೆಯಿಂದಕೆಲಸ ದೊರೆಯಿತು. ಒಂದೂವರೆ ವರ್ಷದ ವನವಾಸ ಕೊನೆಯಾಯಿತು.ಹಿಂದೆ ಮಾಡಿದ ಕೆಲಸ ಸಹಕಾರಿಯಾಯಿತು.ಶಾಸನಗಳ ಟಿಪ್ಪಣಿ,, ಅಲ್ಲಿರುವ ಗ್ರಂಥಗಳ ಸತತಅಧ್ಯಯನ, ಕ್ಷೇತ್ರಕಾರ್ಯ, ಶಾಸನಗಳ ಪ್ರತಿ ಮಾಡುವುದು ಅವ್ಯವಸ್ಥವಾಗಿ ಹರಡಿದ್ದ ತಾಳೆಯೋಲೆಗಳನ್ನು ಸ್ವತಃ ಶುದ್ಧಿ ಮಾಡಿ ಕ್ಯಾಟಲಾಗು ಮಾಡುವುದು ಹೀಗೆ ಎಲ್ಲ ಕೆಲಸದಲ್ಲಿ ತೊಡಗಿದರು. ಶಿಥಿಲಹಸ್ತ ಪ್ರತಿಗಳಿಂದ ತಗುಲಿದ ಅಲೆರ್ಜಿಕ್‌ಅಸ್ತಮಾ ಜೀವನಸಂಗಾತಿ ಆಯಿತು. ಸಾಹಿತ್ಯಪರಿಷತ್ತಿನ ಕೆಲಸ ಅನೇಕ ವಿದ್ವಾಂಸರನ್ನು ಹತ್ತಿರ ತಂದಿತು. ಕಮಲೇಶ್,ಶೇಷಾದ್ರಿಗವಾಯಿ, ಬಿ.ಜಿ.ಎಲ್‌.ಸ್ವಾಮಿ ಶಿವಣ್ಣ. ಕೆ.ಆರ್‌.ಗಣೇಶ್‌ ಅವರೊಡನೆ ನಿತ್ಯ ಸಾಹಿತ್ಯ, ಶಾಸನ ಕುರಿತ ಚರ್ಚೆಯಿಂದ ಮಾರ್ಗದರ್ಶನ ದೊರೆಯಿತು. ಜೊತೆಗೆ ಶಾಸನ ಸಂಶೋಧನೆ, ಲೇಖನ ನಡೆದೇ ಇತ್ತು. ಅಖಿಲಭಾರತ ಶಾಸನ ಸಮ್ಮೇಳನ ಮಿಥಿಕ್‌ ಸೊಸೈಟಿಯಲ್ಲಿ ನಡೆದಾಗ ಹಿರಿಯ ವಿದ್ವಾಂಸರಾದ ಎಸ್‌.ಆರ್‌.ರಾವ್‌, ಜೆಡ್‌.ಎ ದೇಸಾಯಿ ಮೊದಲಾದವರು ಪರಿಷತ್ತಿನ ಶಾಸನ ತರಗತಿಗೆ ಭೇಟಿ ನೀಡಿ ಭಾರತದಲ್ಲಿನ ಏಕಮೇವ ಶಾಸನಕುರಿತ ಕಾರ್ಯಕ್ರಮವೆಂದು ಅಭಿನಂದಿಸಿದರು.ಜೊತೆಗೆ ಸಹಾಯಧನದ ಭರವಸೆಯನ್ನೂ ನೀಡಿದರು.

ಪಿಎಚ್‌.ಡಿ ಮಾಡುವ ಆಸ್ಥೆ ಇದ್ದೇ ಇತ್ತು. ಶಾಸನತಜ್ಞರಾದ ಚಿದಾನಂದಮೂರ್ತಿಯವರಲ್ಲಿ ಅವಕಾಶ ಸಿಗಲಿಲ್ಲ. ಸೀತಾರಾಮಯ್ಯನವರು ಮಾರ್ಗದರ್ಶಕರಾಗಲು ಒಪ್ಪಿದರು. ”ತಲಕಾಡಿನ ಗಂಗ ದೇವಾಲಯಗಳು-ಒಂದುಅಧ್ಯಯನ’ ವಿಷಯದ ಮೇಲೆ ಆಯ್ಕೆಯಾಯಿತು.ಅವರ ಅಕಾಲ ನಿಧನದಿಂದ  ಗೈಡ್‌ ಬದಲಾದರೂ ಕೊನೆಗೂ ಪಿಎಚ್‌.ಡಿ ದೊರೆಯಿತು.
ಶಿಕ್ಷಣ ಇಲಾಖೆಯಲ್ಲಿ ೧೯೮೨ರಲ್ಲಿ ಪ್ರೌಢಶಾಲಾ ಶಿಕ್ಷಕನ ಹುದ್ದಗೆ ಆಯ್ಕೆಯಾಗಿ ತಿಂಗಳುಗಟ್ಟಲೆ ಅಲೆದಮೇಲೆ ಕೊನೆಗೆ ಗುಂಡ್ಲು ಪೇಟೆಯ ಜೂನಿಯರ್‌ಕಾಲೇಜಿನಲ್ಲಿ ಕೆಲಸಕ್ಕೆ ವರದಿ ಮಾಡಿಕೊಂಡರು. ಬಹಶಃ ಪಿಎಚ್‌.ಡಿ ಗೆ ಅಧ್ಯಯನ ಮಾಡುತ್ತಿದ್ದ ಅತಿ ವಿರಳ ಹೈಸ್ಕೂಲು ಶಿಕ್ಷಕರಲ್ಲಿ ಇವರೂ ಒಬ್ಬರು. ಆದರೂ ಶಾಸನ ತರಗತಿಗಳ ಸಂಪರ್ಕ ಬಿಡಲಿಲ್ಲ. ಪ್ರತಿಶನಿವಾರ ಸಾಹಿತ್ಯ ಪರಿಷತ್ತಿಗೆ ಧಾವಿಸುತಿದ್ದರು. ಬೋಧನೆ ಜೊತೆಗೆ ಅಲ್ಲಿನ ವಿದ್ವಾಂಸರೊಂದಿಗೆ ಚರ್ಚೆ ಮುಂದುವರಿಯಿತು..ಗಂಡ್ಲುಪೇಟೆಯಲ್ಲಿ ಇರುವಾಗ ಮಾಡಿದ ಕ್ಷೇತ್ರಕಾರ್ಯದಿಂದ ಬಹಳ ಅನುಕೂಲವಾಯಿತು. ಇದೇ ಸಮಯದಲ್ಲಿ ಡಾ. ಸೂರ್ಯನಾಥಕಾಮತ್‌  ಅವರುಅನ್ವೇಷಕನಾಗಿ ಗೆಜೆಟಿಯರ್‌ ಇಲಾಖೆಗೆ ನಿಯೋಜನೆಯ ಮೇಲೆ ೧೯೮೩ರಲ್ಲಿ ತೆಗೆದುಕೊಂಡರು.  ಶೇಷ ಶಾಸ್ತ್ರಿಗಳು ಸಂಪಾದಕರಾಗಿ ಬಂದರು. ನಂತರ ಲಕ್ಷ್ಮಣ ತೆಲಗಾವಿಯವರೂ ಸಂಪಾದಕರಾದರು ಜೊತೆಗೆ ಗೆಳೆಯ ಲಕ್ಷ್ಮಿ ನರಸಿಂಹ ಇದ್ದರು ಮತ್ತೆ ಮನೆ ಮಠ ಮರೆತು ಕೆಲಸ ಶುರುಮಾಡಿದರು. ಸೇರಿದರು ಅವರದು ತಲಸ್ಪರ್ಶಿ ಕೆಲಸ. ಮುಖ್ಯ ಸಂಪಾದಕರಾದ  ಸೂರ್ಯನಾಥ ಕಾಮತರ ಜೊತೆ ಕ್ಷೇತ್ರಕಾರ್ಯ ಮಾಡುವುದೆ ವಿಶಿಷ್ಟ ಅನುಭವ. ಉತ್ತರ ಕನ್ನಡ ಜಿಲ್ಲೆಯಲ್ಲಿ  ಎಲ್ಲಿಯೇ ಹೋದರು ಅವರ ಪರಿಚಿತರು ಮತ್ತು ಆದರದ ಆತಿಥ್ಯ.. ಅಲ್ಲಿರುವಾಗಲೆ ಉತ್ತರ ಕನ್ನಡ , ಬೆಳಗಾವಿ, ಬೆಂಗಳೂರುನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಸಂಪುಟಗಳು ಹೊರಬಂದವು . ವಿಶೇಷವಾಗಿ ಮೈಸೂರು,ಜಿಲ್ಲೆಯ ಸಂಪುಟದ ಕೆಲಸ ಪಿಎಚ್‌ಡಿ . ಅಧ್ಯಯನಕ್ಕೆ ಬಹಳ ಸಹಕಾರಿಯಾಯಿತು.
ಗೆಜೆಟಿಯರ್‌ನಲ್ಲಿ ಕಾರ್ಯನಿರ್ವಹಿಸುವಾಗಲೇ ಕರ್ನಾಟಕ ಇತಿಹಾಸ ಅಕಾದೆಮಿ ಹುಟ್ಟು ಹಾಕಿದರು.ವರ್ಷಕೊಮ್ಮೆ ಸಮ್ಮೇಳನ ನೆಡಸಿ ವಿದ್ವಾಂಸರು ಮತ್ತು ಆಸಕ್ತರನ್ನೂ ಒಂದೇ ವೇದಿಕೆಯಲ್ಲಿ ತರಲಾಯಿತು. ಪ್ರತಿವರ್ಷ ಸಂಶೋಧನಾ ಲೇಖನಗಳನ್ನು ಒಳಗೊಂಡ ಇತಿಹಾಸದರ್ಶನ ಸಂಪುಟವನ್ನು ಪ್ರಕಟಿಸಲಾಗುತ್ತಿದೆ. ಮೊದಲ ಹತ್ತು ವರ್ಷ ಸಂಪಾದನಾ ಹೊಣೆ ಡಾ. ಸೂರ್ಯನಾಥ ಕಾಮತ್‌ ರೊಡನೆ ಜೊತೆಯಾಗಿ ನಿರ್ವಹಿಸಲಾಯಿತು. ನಂತರ ಡಾ.ಲಕ್ಷ್ಮಣ ತೆಲಗಾವಿ, ಡಾ.ಜಿಎಂನಾಗರಾಜ್‌ ಮತ್ತು ಡಾ.ಪಿ.ವಿ.ಕೃಷ್ಣ ಮೂರ್ತಿ ನಿರ್ವಹಿಸುತ್ತಿರುವರು.ಇದರ ಫಲಸೃತಿ ಎಂದರೆ ಯುವಿದ್ವಾಂಸರಿಗೆ ವೇದಿಕೆ. ಅವರುಸಂಶೋಧನೆ ಮಾಡಲು ಮಾರ್ಗದರ್ಶನ ಮತ್ತು ಉತ್ತೇಜನ. ಪ್ರತಿವರ್ಷ ನೂರಾರು ಸಂಪ್ರಬಂಧಗಳು ನಾಡಿನಾದ್ಯಂತ ಇರುವ ಐತಿಹಾಸಿಕ ವಿಷಯಗಳ ಮೇಲೆ ಬೆಳಕು ಚೆಲ್ಲಲು ಅನುಕೂಲವಾಯಿತು.
ಈಗಾಗಲೆ ಮೂವರು ಕಾಲೇಜಿನಲ್ಲಿ ಓದುವ ಮಕ್ಕಳು. ಬೆಂಗಳೂರಲ್ಲಿ ಮನೆ ಕಟ್ಟಿಸಲು ಶುರು ಮಾಡಿದ್ದರು. ಸಂಸಾರದ ಹೊಣೆ ಹೊತ್ತರು,ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದಲ್ಲಿ ಉಪನ್ಯಾಸಕ ಹುದ್ದೆಗೆ ಅವಕಾಶ ಸಿಕ್ಕಾಗ ಎರಡನೆ ಯೋಚನೆ ಮಾಡದೆ ಹೊರಟರು ಮಡದಿ ಸಂಸಾರದ ಹೊಣೆ ಹೊತ್ತರು ೧೯೯೬  ರಿಂದ ೨೦೦೭ರ ವರೆಗ ವಿವಿಧ ಹುದ್ದೆ ನಿರ್ವಹಿಸಿ ಕೊನೆಗೆ ಸಂದರ್ಶಕ  ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದರು.  ಅಲ್ಲಿನ ಕೆಲಸಮಾಡಿದ ಅವಧಿ ಬಹು ಫಲಪ್ರದ ಸೇವೆ. ಇವರಿಂದಾಗಿ ಸುಮಾರು ೧೩ ಶಾಸನ ಸಂಪುಟಗಳು ಬೆಳಕಿಗೆ ಬರಲು ಸಾಧ್ಯವಾಯಿತು.ಸಾಂಸ್ಕೃತಿಕವಾಗಿ ಶ್ರೀಮಂತವಾದ ಉತ್ತರ ಕರ್ನಾಟಕದ ಜಿಲ್ಲಾವಾರು, ತಾಲೂಕುವಾರು ಗ್ರಾಮವಾರು ಶಾಸನಗಳು ಲಭ್ಯವಿಲ್ಲದೆ ಸಮಗ್ರ ಅಧ್ಯಯನಕ್ಕೆ ತೊಡಕಾಗುತಿತ್ತು.ಮೊದಲಲ್ಲಿ ಒಬ್ಬರೆ ಇದ್ದ ವಿಭಾಗದಲ್ಲಿ ನಾಲ್ವರು ಬಂದರು.  ಕುಲಪತಿ ಕಂಬಾರರ  ಆಸಕ್ತಿಯಫಲವಾಗಿ ವಿವಿಧ ಯೋಜನೆಗಳ ಅಡಿಯಲ್ಲಿ ಬೃಹತ್‌ಕಾರ್ಯ ಮೊದಲಾಯಿತು  ಆ ಪ್ರದೇಶಗಳ ಶಾಸನಗಳ ಜೊತೆಗೆ  ದೇವಾಲಯ, ಶಿಲ್ಪಗಳ ಸಮೀಕ್ಷೆಗೂ ಇತರೆ ವಿದ್ವಾಂಸರನ್ನು ತೊಡಗಿಸಿಕೊಳ್ಳಲಾಯಿತು.ಒಟ್ಟು ೧೩ ಸಂಪುಟಗಳು ಹೊರಬಂದವು.
ರೆಡ್ಡಿಯವರ ಬಾರಾ ಗೋಪಾಲ್‌ಪ್ರಶಸ್ತಿ ಮತ್ತು  ಅವರ ಲಿಪಿಯ ಹುಟ್ಟು ಮತ್ತು ಬೆಳವಣಿಗೆಗೆ ರಾಜ್ಯ ಸಾಹಿತ್ಯ ಅಕಾದೆಮಿಯ ಬಹುಮಾನ ಸಂದಿವೆ.ಕಳೆದ ಮೂರುದಶಕಗಳಲ್ಲಿ  ಅವರ ಸಂಶೋಧನಾಲೇಖನಗಳು ಇಲ್ಲದ ನಾಡಿನ ವಿದ್ವತ್‌ಪತ್ರಿಕೆಗಳು ,ಸ್ಮರಣಸಂಚಿಕೆಗಳು,ಅಭಿನಂದನಾಗ್ರಂಥಗಳು ,ಪ್ರಕಟನೆಗಳು ಇಲ್ಲವೆಂದರೆ ಅವರ ಸಂಶೋಧನಾ ವ್ಯಾಪ್ತಿಯನ್ನು ಅರಿಯಬಹುದು.

ಲಕ್ಕಪ್ಪಗೌಡರ ಉಪಕುಲಪತಿಗಳಾದಾಗ ಇವರ ಕೃಷಿ ಹಿನ್ನೆಲೆ ಮತ್ತು ಪರಿಸರದ ಪ್ರೇಮ ಅರಿತು ವಿಶ್ವವಿದ್ಯಾಲಯದ ಮರಗಿಡಗಳ  ಯೋಗಕ್ಷೇಮದ ಹೊಣೆ ಹೊರಸಿದರು. ಅಲ್ಲಿನ ’ ವಿದ್ಯಾರಣ್ಯ’ ಕುರುಚಲು ಕಾಡುಇದ್ದ ಜಾಗ.ಅದುರ ಹಸುರೀಕರಣಕ್ಕೆ ಕಾರಣ ಇವರು. ಅದರೊಂದು ಭಾಗಗಕ್ಕೆ ಇವರ ಹಸರಿಟ್ಟು ಕಾಯಕ ಗೌರವಿಸಬಹುದು, ಎನ್ನುವ ಮಟ್ಟಿಗೆ ಪ್ರಕೃತಿಮಾತೆಯ ಸೇವೆ ಮಾಡಿದ ಫಲವಾಗಿ ನಳನಳಿಸುವ ಉದ್ಯಾನವನ ಎದ್ದು ನಿಂತಿದೆ.
ಅವರ ತಾಯಿಯ ಮಾತಿನಲ್ಲಿ ಹೇಳ ಬೇಕೆಂದರೆ ಅಪ್ಪೋಜಿ ನೆರಳಿಗೆ ಬಂದವರಿಗೆಲ್ಲಾ ಆಶ್ರಯ ನೀಡುವ ಆಲದ ಮರ.  ಪತ್ನಿಯ ಪ್ರಾರ್ಥನೆ  ಏಳೇಳು ಜನ್ಮದಲ್ಲೂ ಇವರೇ ಪತಿಯಾಗಿರಲಿ ಎಂದು, ಮಗಳಿಗೆ,ಸ್ನೇಹ ಜೀವಿ, ವಾತ್ಸಲ್ಯಮಯಿ,ಕಷ್ಟ ಜೀವಿ, ಕ್ರಿಯಾ ಶೀಲ,ಪ್ರಾಣಿಪ್ರಿಯ,ಲಿಂಗ ತಾರತಮ್ಯವಿಲ್ಲದ ಎಲ್ಲರನ್ನೂ ಸಮನಾಗಿ ಕಾಣುವ ಸಮತಾವಾದಿ. ಸಹನಶೀಲತೆಯನ್ನು ಹೇಡಿತನ ಎಂದುಕೊಂಡವರ ಪಾಲಿಗೆ ಉಗ್ರ ನರಸಿಂಹ,ಊರಜನಕ್ಕೆ ದೇವರಂಥ ಮನುಷ್ಯ.ಗೆಳೆಯರಿಗೆ ಸಜ್ಜನಿಕೆಯ ಸೋಗಿಲ್ಲದ ಸ್ನೇಹಿತ, ಅದಕ್ಕೆ ದೇಹಕ್ಕೆ ಮುಪ್ಪುಬಂದರೂ ಗೆಳೆತನಕ್ಕೆ ಮುಪ್ಪಿಲ್ಲ ಎನ್ನುವರು ಇವರ ಮಿತ್ರವೃಂದ.ತಮ್ಮ ಶಿಷ್ಯಬಳಗಕ್ಕೆ ಪಾಠ ಹೇಳಿ ಮರೆಯುವ ಜನ ಅಲ್ಲ.ಅವರು ಸಂಶೋಧನೆಯಲ್ಲಿ ಮುಂದುವರಿಯಲು ಮಾರ್ಗದರ್ಶನ ನೀಡುವರು. ಇವರ ಮಾರ್ಗದರ್ಶನದಲ್ಲಿ ಐವರು ಪಿಎಚ್‌.ಡಿ ಪಡೆದಿರುವರು.ಹಣದ ಹಿಂದೆ ಹೋಗಲಿಲ್ಲ. ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಲಿಲ್ಲ. ಪ್ರಾಚೀನ ಪ್ರಪಂಚವನ್ನು ಬೆಳಕಿಗೆ ತರುವುದೊಂದೆ ಅವರ ಗುರಿ.  ಸಂಪರ್ಕಕ್ಕೆ ಬಂದವರಿಗೆ ಸಂತೋಷ ಕೊಡುವ ಗುಣ ಅವರದು.ಅದಕ್ಕೆ ಅವರಿಗೆ ಸಲ್ಲಿಸಿದ ಅಭಿನಂದನ ಗ್ರಂಥ “ ಗುಣಮಧುರ” ನಿವೃತ್ತಿಯನಂತರ ಮರಳಿ ಮಣ್ಣಿಗೆ ಹೋಗುವ ಹಂಬಲವಿದ್ದರೂ ಕರ್ನಾಟಕ ಇತಿಹಾಸ ಅಕಾದಮಿಯ ಪೂರ್ಣ ಬೆಳವಣಿಗೆಗ ದಣಿವರಿಯದ ದುಡಿಮೆ . ಶಿಥಿಲವಾದ ಐತಿಹಾಸಿಕ ಸ್ಮಾರಕಗಳ,  ದೇವಸ್ಥಾನಗಳ ಪುನರುತ್ಥಾನದ ಯೋಜಯಲ್ಲಿ ಸಲಹೆ ಮತ್ತು ಸಕ್ರಿಯ ಸಹಕಾರ.ಲಿಪಿ ಮತ್ತು ಶಾಸನ ಸಮ್ಮೇಳನಗಳಲ್ಲಿ ಮಾರ್ಗದರ್ಶನ ನೀಡಲು ಹತ್ತಾರು ಕಡೆ ಓಡಾಟ. ಈಗ ಕರ್ನಾಟಕ ಇತಿಹಾಸದ ಅನನ್ಯತೆಯನ್ನು ಜಗತ್ತಿನ ಗಮನಕ್ಕೆ ತರಲು ಅಂತರ್‌ಜಾಲ ನಿರ್ಮಾಣ ಮಾಡಿ ಅದಕ್ಕೆ ಹೂರಣ ತುಂಬಲು ವಿರಳ ಚಿತ್ರ ಮತ್ತು ವಿಶೇಷ ಮಾಹಿತಿ ಪೂರೈಕೆಯಲ್ಲಿ ತೊಡಗಿಸಿಕೊಂಡಿರುವರು.ಅದರಿಂದ ನಿವೃತ್ತಿ ಎಂದರೆ ಎಲ್ಲರಿಗೂ ವಿಶ್ರಾಂತಿ ಜೀವನವಾದರೆ ರೆಡ್ಡಿ ಮಾಷ್ಟರಿಗೆ  ಮಾತ್ರ ಅವಿಶ್ರಾಂತ ಕೆಲಸ.



2 comments:

  1. ಅದ್ಭುತ ಲೇಖನ ! ಸರಳ, ವಿನಯ , ಸಜ್ಜನ , ಸ್ನೇಹಪರ ವ್ಯಕ್ತಿತ್ವ ದ ರೆಡ್ಡಿ ಸರ್ ರವರ ಜೀವನ ದರ್ಶನ ಮಾಡಿಸಿದ್ದಕ್ಕಾಗಿ ತಮಗೆ ಅಭಿನಂದನೆಗಳು.. ಕನ್ನಡ ತಾಯಿಯ ಅರ್ಥಪೂರ್ಣ ಸೇವೆಯನ್ನು ಮಾಡುತ್ತಿರುವ ತಮ್ಮಗಳ ಪರಿಚಯ, ಸಹವಾಸ ನನ್ನ ಭಾಗ್ಯ ವೇ ಸರಿ.

    ReplyDelete
  2. ನಮ್ಮ ಗುರುಗಳುು ನಮಗೆ ನಿರಂತರ ಮಾದರಿ

    ReplyDelete