Sunday, March 31, 2013

ರಾಯಚೂರು ಹನುಮಾನ ಮಂದಿರದ ಭಿತ್ರಿಚಿತ್ರಗಳು

 ಕಾಲಗರ್ಭದಲ್ಲಿ ಲೀನವಾದ ರಾಯಚೂರು
ಹನುಮಾನ ಮಂದಿರದ ಭಿತ್ರಿಚಿತ್ರಗಳು
ಡಾ. ಮಲ್ಲಿಕಾರ್ಜುನ ಸಿ. ಬಾಗೋಡಿ
 ಅಧ್ಯಾಪಕರು, ದೃಶ್ಯಕಲಾ ಅಧ್ಯಯನ ವಿಭಾಗ,
 ಗುಲಬರ್ಗಾ ವಿಶ್ವವಿದ್ಯಾಲಯ, ಗುಲಬರ್ಗಾ-೫೮೫೭೦೬.


ರಾಯಚೂರು; ಹೈದರಾಬಾದ ನಿಜಾಮ್ ರಾಜ್ಯದ ಆಡಳಿತಕ್ಕೂ ಒಳಪಟ್ಟ ಈ ನಗರದಲ್ಲಿ ಅದೆಷ್ಟೋ ಸ್ಮಾರಕಗಳು (ಮಠ-ಮಂದಿರ ಹಾಗೂ ಶ್ರೀಮಂತರ ಮನೆಗಳು) ನಿರ್ಮಿಸಲ್ಪಟ್ಟವು. ಕೆಲವೊಂದು ಸ್ಮಾರಕಗಳಲ್ಲಿ ಚಿತ್ರರಚನೆ ಮಾಡಲಾಗಿದ್ದರಿಂದ ಇವು ಕರ್ನಾಟಕದ ಪ್ರಾಚೀನ ಭಿತ್ತಿಚಿತ್ರಗಳುಳ್ಳ ನೆಲೆಗಳೆಂದೂ ಗುರುತಿಸಿಕೊಂಡಿವೆ. ಕಿಲ್ಲೆ ಬೃಹನ್ಮಠ, ಮಡ್ಡಿಪೇಟೆಯ ಶ್ರೀ ಹನುಮಾನ ಮಂದಿರ ಹಾಗೂ ಶ್ರೀ ಖಾಜನಗೌಡರ ಮನೆಗಳನ್ನು ಇಲ್ಲಿ ಪ್ರಮುಖವಾಗಿ ಹೆಸರಿಸಬಹುದು.  
ರಾಯಚೂರು ನಗರದ ಹೃದಯಭಾಗವಾದ ಸೋಮವಾರಪೇಟೆಯ (ಈ ಸ್ಥಳವನ್ನು ಮಡ್ಡಿಪೇಟೆ ಎಂತಲೂ ಕರೆಯಲಾಗುತ್ತದೆ) ಖಾಜನಗೌಡರ ಮನೆಯ ಹತ್ತಿರದಲ್ಲೇ ಹನುಮಾನ ಮಂದಿರವಿರುವುದು. ಖಾಜನಗೌಡರ ಮನೆ ನಿರ್ಮಾಣದ ನಂತರದಲ್ಲಿ ಕಟ್ಟಲ್ಪಟ್ಟದ್ದೆಂದು ಹೇಳಲಾಗುವ ಈ ದೇವಾಲಯದ ಒಳಮಾಳಿಗೆ, ಭುವನೇಶ್ವರಿ ಹಾಗೂ ಕಲ್ಲಿನ ತೊಲೆಗಳ ಮೇಲೆ ರಾಮಾಯಣ, ಮಹಾಭಾರತ ಸನ್ನಿವೇಶದ ಚಿತ್ರಗಳೊಂದಿಗೆ ಪ್ರಾಣಿ-ಪಕ್ಷಿಗಳು, ಅಲಂಕಾರಿಕ ವಿನ್ಯಾಸಗಳು ಚಿತ್ರಣಗೊಂಡಿವೆ. ಒಂದೊಮ್ಮೆ ದೇವಾಲಯದ ಗೋಡೆಗಳ ಮೇಲೂ ಚಿತ್ರಗಳಿದ್ದವೆಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.
ಎತ್ತರವಾದ ಕಟ್ಟೆಯ ಮೇಲೆ ಕಟ್ಟಲ್ಪಟ್ಟ ಈ ದೇವಾಲಯ ದಕ್ಷಿಣಾಭಿಮುಖವಾಗಿದ್ದು, ಮುಖಮಂಟಪ ಹಾಗೂ ಗರ್ಭಗೃಹ ಹೊಂದಿದೆ. ಮುಖಮಂಟಪದ ನಡುವೆ ನಾಲ್ಕು ಕಂಬಗಳುಳ್ಳ ಅಂಕಣವಿದೆ. ಈ ಅಂಕಣದಲ್ಲಿನ ನಾಲ್ಕು ಕಂಬಗಳು ಹಾಗೂ ಗೋಡೆಗಳಲ್ಲಿನ ಕಂಬಗಳು ಸೇರಿದಂತೆ ಒಟ್ಟು ಹದಿನಾರು ಕಂಬಗಳನ್ನು ಈ ಮುಖಮಂಟಪ ಹೊಂದಿದೆ. ಈ ಕಂಬಗಳಲ್ಲಿ ಯಾವುದೇ ರೀತಿಯ ಕುಸುರಿ ಕೆತ್ತನೆಯು ಕಂಡುಬರುವುದಿಲ್ಲ. ಒಂದು ಕಂಬದಿಂದ ಇನ್ನೊಂದು ಕಂಬಕ್ಕೆ ಆಸರೆಯಾಗಿ ಒಟ್ಟು ಇಪ್ಪತ್ನಾಲ್ಕು ತೊಲೆಗಳನ್ನು ಜೋಡಿಸಿದೆ. ಹಾಗಾಗಿ ಈ ತೊಲೆಗಳು ಮುಖಮಂಟಪವನ್ನು ಒಟ್ಟು ಒಂಭತ್ತು ಅಂಕಣಗಳಂತೆ ವಿಭಾಗಿಸುತ್ತದೆ.
ಪ್ರತಿಯೊಂದು ಅಂಕಣದಲ್ಲಿ ಹಾಗೂ ತೊಲೆಗಳ ಮೂರೂ ಬದಿಯಲ್ಲಿ ವರ್ಣಚಿತ್ರಗಳಿವೆ. ಮಧ್ಯದ ಅಂಕಣ ಹಾಗೂ ನಾಲ್ಕೂ ಮೂಲೆಗಳಲ್ಲಿನ ಅಂಕಣಗಳ ಮಧ್ಯೆ ಸುಂದರವಾದ ಭುವನೇಶ್ವರಿಯ ಕೆತ್ತನೆಯಿದ್ದು, ಈ ಕೆತ್ತನೆಯ ಮೇಲೆ ಹಳದಿ ವರ್ಣದ ಹಿನ್ನೆಲೆಯಲ್ಲಿ ಹಸಿರು, ಕೆಂಪು ಹಾಗೂ ನೀಲಿ ವರ್ಣಗಳಿಂದ ನವಿಲು, ಗಿಳಿ-ಗೊರವಂಕ ಇತ್ಯಾದಿ ಪಕ್ಷಿಗಳ ಚಿತ್ರಗಳೊಂದಿಗೆ ಸುಂದರವಾದ ನಕ್ಷಾಚಿತ್ರಗಳನ್ನು ಬಿಡಿಸಿದೆ. ಇನ್ನುಳಿದ ಅಂಕಣಗಳಲ್ಲಿ ಭುವನೇಶ್ವರಿಯ ಕೆತ್ತನೆ ಕಂಡುಬರುವುದಿಲ್ಲವಾದರೂ, ನೀಲಿ, ಹಳದಿ ಹಾಗೂ ಕೆಂಪು ವರ್ಣಗಳ ನಕ್ಷಾವಿನ್ಯಾಸದ (ಸುರಪುರ ಚಿತ್ರಕಲೆಯ ಭಾವಚಿತ್ರ ರಚನೆಯಲ್ಲಿ ಕಂಡುಬರುವ ನೆಲಹಾಸು ವಿನ್ಯಾಸವನ್ನು ಹೋಲುತ್ತದೆ) ಚಿತ್ರಣವಿದೆ. ಹಾಗೆಯೇ ಕಲ್ಲಿನ ತೊಲೆಗಳ ಮೂರೂ ಬದಿಯಲ್ಲಿ ಸಮುದ್ರ ಮಂಥನ, ಅಶ್ವಮೇಧಯಾಗ ಕುದುರೆಯನ್ನು ಕಟ್ಟಿ ಹಾಕುವುದು, ಸೀತಾ ಸ್ವಯಂವರ, ಲವ-ಕುಶ, ಯುದ್ಧದ ಸನ್ನಿವೇಶ ಮೊದಲಾದ ಚಿತ್ರಗಳಿವೆ. ಪ್ರತಿಯೊಂದು ವಿಷಯದ ಚಿತ್ರಗಳಲ್ಲಿ ದೇವತಾಪುರುಷರನ್ನು ತೆಲುಗು ಅಕ್ಷರಗಳಲ್ಲಿ ಬರೆಯಲಾಗಿದ್ದು ವಿಶೇಷ. 
ಈ ದೇವಾಲಯದ ಗರ್ಭಗೃಹದಲ್ಲಿನ ಆಂಜನೇಯ ಸ್ವಾಮಿ ವಿಗ್ರಹವು (ಶಿಲಾ ಮಾಧ್ಯಮದ) ಐದು ಅಡಿ ಎತ್ತರದಲ್ಲಿದ್ದು, ಸುಂದರವಾಗಿದೆ. ಗರ್ಭಗೃಹ ದ್ವಾರದ ಮೇಲಿನ ಶಿಲಾಪಟ್ಟಿಕೆಯಲ್ಲಿ ಏಳು ಹೆಡೆಗಳುಳ್ಳ ಆದಿಶೇಷನ ಮೇಲೆ ವಿಷ್ಣು ಪವಡಿಸಿದ್ದಾನೆ. ಶ್ರೀದೇವಿ ಹಾಗೂ ಭೂದೇವಿಯರು ವಿಷ್ಣುವಿನ ಪಾದಸೇವೆಯಲ್ಲಿ ನಿರತರಾಗಿದ್ದಾರೆ. ವಿಷ್ಣುವಿನ ನಾಭಿಯಿಂದ ಜನಿಸಿದ ಬ್ರಹ್ಮನು ಕಮಲದಲ್ಲಿ ವಿರಾಜಮಾನನಾಗಿದ್ದಾನೆ. ಶೇಷಶಾಯಿ ವಿಷ್ಣುವಿನ ಎರಡೂ ಕಡೆ ಗರುಡ ಹಾಗೂ ಆಂಜನೇಯರು ಕೈಮುಗಿಯುತ್ತ ನಿಂತಿರುವರು. ಇದೊಂದು ಉಬ್ಬುಮಾದರಿಯ ಕೆತ್ತನೆಯಾಗಿದ್ದು, ಈ ಕೆತ್ತನೆಯ ಮೇಲೆ ವರ್ಣಲೇಪನ ಮಾಡಲಾಗಿದೆ. ಹಾಗೆಯೇ ಈ ಶಿಲಾಪಟ್ಟಿಕೆಯ ಮೇಲ್ಭಾಗದಲ್ಲಿ ಸೂರ್ಯ ಹಾಗೂ ಚಂದ್ರರನ್ನು ವರ್ಣದಿಂದ ಚಿತ್ರಿಸಿದೆ. ಇದಿಷ್ಟು ದೇವಾಲಯದೊಳಗಿನ ವಿನ್ಯಾಸದ ಚಿತ್ರಣ. ಈ ದೇವಾಲಯ ಮುಖಮಂಟಪದ ಹೊರಭಾಗದ ಮೇಲ್ಬದಿಯಲ್ಲಿ, ಎದುರಿಗೆ ಸುಂದರವಾದ ಕಮಾನಿನ ವಿನ್ಯಾಸವಿದ್ದು, ಈ ಕಮಾನಿನೊಳಗೆ ರಾಮ-ಸೀತೆ, ಲಕ್ಷಣ ಹಾಗೂ ಆಂಜನೇಯನ ಗಾರೆಶಿಲ್ಪಗಳಿವೆ. ಈ ಶಿಲ್ಪಗಳ ಮೇಲೂ ವರ್ಣಲೇಪನ ಮಾಡಲಾಗಿದೆ.   
ಶ್ರೀ ಹನುಮಾನ ಮಂದಿರದ ಕಟ್ಟಡ ನಿರ್ಮಾಣ ಹಾಗೂ ಅಲ್ಲಿನ ಚಿತ್ರಗಳ ರಚನೆ ಕುರಿತಂತೆ ಐತಿಹಾಸಿಕ ಹಿನ್ನೆಲೆ ಮತ್ತು ಸ್ಥಳೀಯರ ಅಭಿಪ್ರಾಯಗಳಿವೆ. ಕ್ರಿ.ಶ.೧೮೫೭-೫೮ರ ಸ್ವಾತಂತ್ರ್ಯ ಸಂಗ್ರಾಮದ ಬಳಿಕ ನಾಡಿನ ವಿವಿಧ ಸಂಸ್ಥಾನಿಕರ ಆಶ್ರಯದಲ್ಲಿದ್ದ ಕಲಾವಿದ ಕುಟುಂಬಗಳು ನಿರಾಶ್ರಿತರಾದವು. ಈ ವೇಳೆ ಕೆಲವೊಂದು ಕುಟುಂಬಗಳು ಶ್ರೀಮಂತ ವ್ಯಕ್ತಿಗಳು ಇಲ್ಲವೆ ಮಠಾಧೀಶರ ಆಶ್ರಯ ಪಡೆಯು ವುದರ ಮೂಲಕ ತಮ್ಮ ನೆಲೆಯನ್ನು ಕಂಡು ಕೊಳ್ಳುತ್ತವೆ. ಈ ಹಂತದಲ್ಲೇ ಪ್ರಸ್ತುತ ಹನುಮಾನ ಮಂದಿರದಲ್ಲಿ ಚಿತ್ರಗಳನ್ನು ಬರೆಯಿಸಲಾಗಿದೆ ಎಂದು ಹೇಳಲಾಗುತ್ತದೆ. ಶಿಷ್ಟ ಸಂಪ್ರದಾಯದ ಈ ಚಿತ್ರಗಳನ್ನು ಖಾಜನಗೌಡರೇ ಬರೆಯಿಸಿದ್ದಾರೆಂದು ಇಲ್ಲಿನ ಜನರ ಅಂಬೋಣ. ಅಷ್ಟು ಮಾತ್ರವಲ್ಲ ಹನುಮಾನ ಮಂದಿರ ನಿರ್ಮಾಣಗೊಳ್ಳಲೂ ಖಾಜನಗೌಡರೇ ಕಾರಣ ಎಂದು ಹೇಳಲಾಗುತ್ತದೆ. ಬಹುಶಃ ಖಾಜನಗೌಡರ ಮನೆಯಲ್ಲೂ ಸಾಕಷ್ಟು ಭಿತ್ತಿಚಿತ್ರಗಳಿರುವ ಕಾರಣ ಈ ಮೇಲಿನ ಅಭಿಪ್ರಾಯ ಮೂಡಿರಲು ಸಾಧ್ಯ ಎಂದು ತರ್ಕಿಸಲು ಇಲ್ಲಿ ಅವಕಾಶವಿದೆ. ಖಾಜನಗೌಡರ ಮನೆಯಲ್ಲಿನ ಕರ್ಣಾರ್ಜುನರ ಕಾಳಗ, ರಾಮ-ಸೀತೆಯರ ದರ್ಶನ ಹಾಗೂ ಚಿತ್ರಿತ ಪಟ್ಟಿಕೆಗಳ ಸುತ್ತಲೂ ಬರೆಯಲಾದ ವಿನ್ಯಾಸಗಳ ಹೋಲಿಕೆ ಹನುಮಾನ ಮಂದಿರದಲ್ಲಿನ ಚಿತ್ರಗಳಲ್ಲಿ ಕಾಣಸಿಗುವುದು ಈ ಮೇಲಿನ ಮಾತಿಗೆ ಅನುಮಾನ ಹುಟ್ಟಿಸುತ್ತದೆ. ಖಾಜನಗೌಡರ ಮನೆಯಲ್ಲಿನ ಭಿತ್ತಿಚಿತ್ರಗಳು ಬೇರೆ ಬೇರೆ ಕಲಾವಿದರಿಂದ ರಚನೆಗೊಂಡಿರುವುದು ಮಾತ್ರವಲ್ಲ ಸುರಪುರ ಆಸ್ಥಾನ ಕಲಾವಿದರಾದ ಗರುಡಾದ್ರಿಯವರ ಪಾಲೂ ಇಲ್ಲಿನ ಚಿತ್ರಗಳಲ್ಲಿದೆ ಎಂದು ಬೇರೆ ಬೇರೆ ಸಂದರ್ಭಗಳಲ್ಲಿ ಚರ್ಚಿಸಿಯಾಗಿದೆ.   
ಕ್ರಿ.ಶ.೧೮೫೭-೫೮ರ ಸಂದರ್ಭದಲ್ಲೇ ಸುರಪುರ ಸಂಸ್ಥಾನ ಪತನವಾದ ವಿಷಯ ಎಲ್ಲರಿಗೂ ತಿಳಿದೇ ಇದೆ. ಈ ವೇಳೆ ಅಲ್ಲಿನ ಆಸ್ಥಾನ ಕಲಾವಿದ ವಂಶಸ್ಥರು ರಾಯಚೂರಿಗೆ ಬಂದು ನೆಲೆನಿಂತರೆಂದು ಹೇಳಲಾಗುತ್ತದೆ. ಇವರು ಚಿತ್ರರಚನೆ ಮಾಡುವುದಲ್ಲದೇ, ಅವುಗಳನ್ನು ಮಾರಿತಂದ ಹಣದಲ್ಲಿ ಜೀವನ ನಡೆಸಿದ ಮಾಹಿತಿಯೂ ಗರುಡಾದ್ರಿ ವಂಶಸ್ಥರಿಂದ ತಿಳಿದುಬಂದಿದೆ. ರಾಯಚೂರಿನ ಹಳೆಯ ತಲೆಮಾರಿನ ಮನೆಗಳಲ್ಲದೇ ಕಿಲ್ಲೇ ಮಠದಲ್ಲಿ ಗರುಡಾದ್ರಿಯವರು ಚಿತ್ರಿಸಿದ ವರ್ಣಚಿತ್ರಗಳಿವೆ. ಒಂದೊಮ್ಮೆ ರಾಯಚೂರಿನ ಖಾಜನಗೌಡರ ಆಸರೆಯನ್ನೂ ಈ ಕಲಾವಿದ ವಂಶಸ್ಥರು ಪಡೆದದ್ದಿದೆ. ಈ ಮೇಲಿನ ಎಲ್ಲ ಸಂದರ್ಭಗಳನ್ನು ಅವಲೋಕಿಸಿದರೆ ಬಹುಶಃ ಹನುಮಾನ ಮಂದಿರದಲ್ಲಿನ ಭಿತ್ತಿಚಿತ್ರಗಳಲ್ಲಿ ಗರುಡಾದ್ರಿಯವರ ಪಾತ್ರವಿರುವುದು ಸ್ಪಷ್ಟವಾಗುತ್ತದೆ. ಇದಿಷ್ಟು ದೇವಾಲಯ ನಿರ್ಮಾಣ ಹಾಗೂ ಅಲ್ಲಿನ ಚಿತ್ರರಚನೆ ಕುರಿತಾದ ಹಿನ್ನೆಲೆ.
ಕಳೆದೊಂದು ದಶಕದ ಹಿಂದೆ ಮಡ್ಡಿಪೇಟೆಯ ಆಸಕ್ತರೆಲ್ಲರೂ ಸೇರಿ ಆಂಜನೇಯಸ್ವಾಮಿ ದೇವಾಲಯ ಸಮಿತಿಯನ್ನು ಮಾಡಿಕೊಂಡಿದ್ದು, ಪ್ರತಿವರ್ಷ ಹನುಮಾನ ಜಯಂತಿ ಮತ್ತಿತರ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಮಾಡಿಕೊಂಡು ಬರಲಾಗುತ್ತಿದೆ. ಹಾಗೆ ನೋಡಿದರೆ ಬಹಳ ಹಿಂದಿನಿಂದಲೇ ಇಲ್ಲಿ ಪ್ರತಿನಿತ್ಯ ಶ್ರೀ ಆಂಜನೇಯಸ್ವಾಮಿಯ ಪೂಜಾಕಾರ್ಯಗಳನ್ನು ವಿಧಿವತ್ತಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈ ಪೂಜಾಕಾರ್ಯಗಳಿಗೆಂದೇ ಅರ್ಚಕರನ್ನು ನೇಮಿಸಿದ್ದು, ಇವರಿಗೆ ಒಂದಿಷ್ಟು ಭೂಮಿಯನ್ನೂ ನೀಡಿದ ಮಾಹಿತಿ ದಾಖಲೆಗಳಲ್ಲಿ ಸಿಗುತ್ತದೆ. ಮಾತ್ರವಲ್ಲ ಆಂಜನೇಯಸ್ವಾಮಿ ದೇವಾಲಯಕ್ಕೆ ಹೊಂದಿಕೊಂಡೇ ಅರ್ಚಕರಿಗೆಂದು ಚಿಕ್ಕದಾದ, ಪ್ರತ್ಯೇಕ ಮನೆಯೊಂದರ ವ್ಯವಸ್ಥೆ ಮಾಡಲಾಗಿದೆ.
ಚಿತ್ರಗಳನ್ನು ಪ್ರಾಚೀನ ಚಿತ್ರರಚನಾ ಪದ್ಧತಿಯಲ್ಲೇ ಚಿತ್ರಿಸಿರುವ ಕಾರಣ, ಚಿತ್ರಿತ ಪ್ರತಿಯೊಂದು ಪಟ್ಟಿಕೆಗಳಲ್ಲಿನ ಆಕೃತಿಗಳು ಮತ್ತು ವರ್ಣಗಳ ಛಾಯೆ ಎಣ್ಣೆ ಕಲೆಗಳಂತೆ ಸುಣ್ಣದ ಪದರಿನ ಮೇಲೂ ಕಾಣಿಸುತ್ತಿದ್ದವು. ಇದರೊಂದಿಗೆ ನೂರಾರು ವರ್ಷ ಇತಿಹಾಸವಿರುವ ಭಿತ್ತಿಚಿತ್ರಗಳ ನೆಲೆಯೊಂದು ನಮ್ಮ ಕಣ್ಮುಂದೇ ವಿನಾಶವಾಗುತ್ತಿದೆ.
ಈ ಚಿತ್ರಿತ ನೆಲೆಗಳು ಒಂದು ನಾಡಿನ ಪರಂಪರೆಯನ್ನು ಪ್ರತಿನಿಧಿಸುತ್ತವೆ ಮಾತ್ರವಲ್ಲ ಸಾಂಸ್ಕೃತಿಕ ಕೊಂಡಿಗಳಾಗಿಯೂ ಚರಿತ್ರೆಯಲ್ಲಿ ಗುರುತಿಸಿಕೊಳ್ಳುತ್ತವೆ. ಕಾಲನ ತುಳಿತಕ್ಕೆ ಸಿಕ್ಕು ಇಲ್ಲವೆ ಮಾನವನ ಅಜ್ಞಾನದಿಂದಾಗಿ ವಿನಾಶ ಹೊಂದುವ ಮುಂಚೆಯೇ ಈ ಚಿತ್ರಿತ ನೆಲೆಗಳ ಕುರಿತಾದ ಅಧ್ಯಯನಗಳು ಆದಷ್ಟು ತೀವ್ರಗತಿಯಲ್ಲಿ ಆಗಬೇಕಾದ ಅವಶ್ಯಕತೆಯೂ ಇದೆ.
ಟಿಪ್ಪಣಿಗಳು
೧.         ರಾಯಚೂರು ನಗರದ ಹೃದಯಭಾಗದಲ್ಲಿರುವ ಕಿಲ್ಲೇ ಬೃಹನ್ಮಠವು ಕರ್ನಾಟಕದ ಅತ್ಯಂತ ಪ್ರಾಚೀನ ಮಠಗಳಲ್ಲೊಂದು. ಮಾತ್ರವಲ್ಲ ರಂಭಾಪುರಿಯ ಶಾಖಾ ಮಠವೂ ಹೌದು. ಕ್ರಿ.ಶ.೧೮೫೭-೫೮ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಳಿಕ ರಾಜಾಶ್ರಯ ಕಳೆದುಕೊಂಡ ಕೆಲ ಕಲಾವಿದ ಕುಟುಂಬಗಳಿಗೆ ಆಶ್ರಯವನ್ನೂ ನೀಡಿತ್ತು. ಇದರಿಂದಾಗಿ ಈ ಮಠದ ಪೂಜ್ಯರ ಸಾಕಷ್ಟು ಭಾವಚಿತ್ರಗಳೂ ಚಿತ್ರಿಸಲ್ಪಟ್ಟವು. ಇಂದಿಗೂ ಈ ಮಠದಲ್ಲಿ ನಾವು ಆ ಕಾಲದ ಚಿತ್ರಗಳನ್ನು ನೋಡಬಹುದು.
೨.         ಗರ್ಭಗೃಹ ದ್ವಾರದ ಮೇಲಿನ ಶಿಲಾಪಟ್ಟಿಕೆಯಲ್ಲಿನ ಕೆತ್ತನೆ ಹಾಗೂ ಹೊರಬದಿಯ ಮೇಲ್ಭಾಗದ ಕಮಾನಿನೊಳಗಿನ ಗಾರೆ ಶಿಲ್ಪಗಳ ಮೇಲೆ ಬಹಳ ಹಿಂದೆಯೇ ನೈಸರ್ಗಿಕ ಮೂಲದ ವರ್ಣಲೇಪನವನ್ನು ಮಾಡಲಾಗಿತ್ತು. ಇದೀಗ ಮಂದಿರದ ನವೀಕರಣ ಸಂದರ್ಭದಲ್ಲಿ ಈ ಶಿಲ್ಪಕೆತ್ತನೆಗಳ ಮೇಲೆ ರಾಸಾಯನಿಕ (ಆಧುನಿಕ) ವರ್ಣಲೇಪನ ಮಾಡಲಾಗಿದೆ.





No comments:

Post a Comment