Saturday, March 2, 2013

ಕಸಾಪುರ ಹರೆ ಶಾಸನ


ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಕಸಾಪುರ ಮಿಡಿಗೇಶಿ ಹಾಗೂ ಆಂಧ್ರಪ್ರದೇಶದ ಮಡಕಶಿರಾ ತಾಲ್ಲೂಕಿನ ಕೆಲವು ಅಪ್ರಕಟಿತ ಶಾಸನಗಳು
ಡಾ. ಎನ್. ನಂದೀಶ್ವರ?

ಕಸಾಪುರ ಹರೆ ಶಾಸನ
ಕಸಾಪುರ ಗ್ರಾಮವು ತಾಲ್ಲೂಕು ಕೇಂದ್ರವಾದ ಮಧುಗಿರಿಯಿಂದ ೨೨ ಕಿ.ಮೀ. ದೂರದಲ್ಲಿ, ಜಿಲ್ಲಾ ಕೇಂದ್ರವಾದ ತುಮಕೂರಿನಿಂದ ೬೩ ಕಿ.ಮೀ. ದೂರದಲ್ಲಿದೆ. ಈ ಗ್ರಾಮವು ಪ್ರಾಗೈತಿಹಾಸದ ಕಾಲದಿಂದಲೂ ಬಹಳ ಪ್ರಸಿದ್ಧವಾದ ಗ್ರಾಮವಾಗಿದೆ. ಈ ಕಸಾಪುರ ಗ್ರಾಮದ ಛಲವಾದಿ (ಆದಿದ್ರಾವಿಡರ) ಬಸಣ್ಣನ ಹತ್ತಿರ ಕಂಚಿನ ಹರೆ ಇದೆ. ಈ ಹರೆ ಮಿಡಿಗೇಶಿಯ ಕುಂಚಿಟಿಗರ ಶೆಟ್ಟೇನವರ ಮನೆದೇವರಾದ ಶ್ರೀಲಕ್ಷ್ಮೀ ದೇವರಿಗೆ ಬಡೆಯುವ ಹರೆಯಾಗಿದ್ದು, ಇದರ ಮೇಲೆ ಅಪ್ರಕಟಿತವಾದ ಶಾಸನವಿದೆ. ಶ್ರೀಲಕ್ಷ್ಮೀ ದೇವತೆಗೆ ಹರೆಯನ್ನು ಮಾತ್ರ ಬಡಿಯುತ್ತಾರೆ. ಹರೆಯನ್ನು ೫ ಕಟ್ಟುಗಳಲ್ಲಿ ರಚಿಸಿ, ೪ ಮನೆಗಳನ್ನು ಮಾಡಲಾಗಿದೆ. ಶಾಸನವನ್ನು ೨ ಭಾಗಗಳಲ್ಲಿ ಬರೆಯಲಾಗಿದೆ.
ಶಾಸನದ ಪ್ರಾರಂಭದಲ್ಲಿ ಚಂದ್ರ ಎಡಭಾಗದಲ್ಲಿ ಬರೆದಿದ್ದರೆ, ಬಲಭಾಗದಲ್ಲಿ ಸೂರ್ಯನನ್ನು ಬರೆಯಲಾಗಿದೆ. ಶಾಸನವು ೬ ಸಾಲುಗಳಲ್ಲಿ ಬರೆಯಲ್ಪಟ್ಟಿದೆ. ಶಾಸನವು ಕನ್ನಡ ಭಾಷೆಯಲ್ಲಿ ಬರೆಯಲ್ಪಟ್ಟಿದೆ. ಶಾಸನದ ಕಾಲ ೧೭೮೭ ಜೂನ್ ೨೯ ಗುರುವಾರವಾಗಿರುತ್ತದೆ. ಮಿಡಿಗೇಶಿಯ ಕುಂಚಿಟಿಗ ಜನಾಂಗದ ಶೆಟ್ಟೇನವರ ಕುಲದ ಮನೆದೇವರಾದ ಮಿಡಿಗೇಶಿಯ ಶ್ರೀಲಕ್ಷ್ಮೀ ದೇವರಿಗೆ ಬೆಂಗಳೂರಿನ ಶೆಟಿಪನ ಮಗ ಯಿರ ಚಿಕಂಣನು ಮಾಡಿಸಿಕೊಟ್ಟ ಅರೆ. ಮಿಡಿಗೇಶಿಯ ಶಾನುಭೋಗ ಅರುಣಚಲೈನವರು ಬರೆದ ಬರಹವೆಂದು ಇದೆ. ಈ ಹರೆಯನ್ನು ಬಾಳಮಂಡೆ ಬಸಪನ ಮೊಮ್ಮಗನ ಕೊರಳಿಗೆ ಲಕ್ಷ್ಮೀದೇವರಿಗೆ ದೇವರ ಉತ್ಸವ ಹಬ್ಬ ಹರಿದಿನಗಳಲ್ಲಿ ಬಡಿಯಲು ಹಾಕಿಸಿರುವ ಹರೆಯಾಗಿರುತ್ತದೆ.
ಶಾಸನ ಪಾಠ
೧        ಪ್ಲವಂಗ ಸಂವತ್ಸರದ ಅಷಾಡ ಶು ೧೪ಲ್ಲು ಮಿ
೨        ಡಿಗೇಶಿ ಶ್ರೀ ಲಕ್ಷ್ಮೀ ದೇವತಿಗೆ ಬೆಂಗಳೂರು ಶೆಟೆಪ್ಪನ
೩        ಮಗ ಯಿರ ಚಿಕಂಣ ಮಾಡಿಶಿ ಕೊಟ ಅರ್ರೆ ಮಿಡಿಗೇ
೪        ಶಿ ಶಾನುಬಾಗ ಆರುಣಚಲೈನ ಬರಹ ||
೫ ಯಿ ಹರ್ರೆ ಬಾಳಮಂಡೆ ಬಸಪನ ಮೊಮಗ
೬ ನ ಕೊರಳಿಗೆ ಹಾಕಿದ ಹರೆ ||

ಮಿಡಿಗೇಶಿ ಹರೆ ಶಾಸನ
ಮಿಡಿಗೇಶಿಯ ಆದಿದ್ರಾವಿಡ ಜನಾಂಗದ ಕಾವೇರಪ್ಪನ ಮಗ ಹನುಮಂತರಾಯಪ್ಪನ ಹತ್ತಿರ ಒಂದು ಹರೆ ಇದೆ. ಇದನ್ನು ಗಡಿಭಾಗದ ಆಂಧ್ರಪ್ರದೇಶದ ಗೊಟ್ಟುಗುರಿಕೆಯಿಂದ ತಂದಿಟ್ಟುಕೊಂಡಿರುತ್ತಾರೆ. ಇದನ್ನು ಇಂದು ಎಲ್ಲಾ ದೇವರಿಗೂ ಬಡಿಯುತ್ತಾರೆ. ಇದರ ಮೇಲೆ ಅಪ್ರಕಟಿತವಾದ ಶಾಸನವಿದೆ.
ಹರೆಯನ್ನು ೫ ಕಟ್ಟುಗಳಲ್ಲಿ ರಚಿಸಿ, ೪ ಮನೆಗಳನ್ನು ಮಾಡಲಾಗಿದೆ. ಶಾಸನದ ಪ್ರಾರಂಭದಲ್ಲಿ ಎಡಭಾಗದಲ್ಲಿ ಚಂದ್ರನನ್ನು, ಬಲಭಾಗದಲ್ಲಿ ಸೂರ್ಯನನ್ನು ಬರೆಯಲಾಗಿದೆ. ಶಾಸನವನ್ನು ೨ ಭಾಗಗಳಲ್ಲಿ ಬರೆಯಲಾಗಿದೆ. ಶಾಸನವು ೮ ಸಾಲುಗಳಲ್ಲಿ ಬರೆಯಲ್ಪಟ್ಟಿದೆ. ಶಾಸನವು ಕನ್ನಡ ಭಾಷೆಯಲ್ಲಿ ಬರೆಯಲ್ಪಟ್ಟಿದೆ. ಶಾಸನದ ಕಾಲ ೧೭೭೭ ಏಪ್ರಿಲ್ ೮, ಸೋಮವಾರವಾಗಿರುತ್ತದೆ.
ಗೊಟ್ಟುಗುರಿಕೆ ಏತಂಣನ ಮಗನಾದ ನಲ್ಲನಿಂಗಣ್ಣನು ಶ್ರೀ ಪಾತಪ್ಪದೇವರಿಗೆ ಹರೆ ಬಡಿಯಲು ಭಕ್ತಿಯಿಂದ ಕೊಟ್ಟಿರುವರು. ಇಂದಿಗೂ ಗೊಟ್ಟುಗುರಿಕೆಯಲ್ಲಿ ತೆರೆದ ಅಂಕಣದಲ್ಲಿ ಶ್ರೀಪಾತಪ್ಪ ದೇವಸ್ಥಾನವಿದ್ದು ಇಂದು ನಾಯಕ (ತಳವಾರ) ಜನಾಂಗದವರ ಮನೆದೇವರಾಗಿದೆ. ಈ ದೇವರನ್ನು ಹಬ್ಬಹರಿದಿನಗಳಲ್ಲಿ ವಿಶೇಷವಾದ ಪೂಜೆ ಮಾಡುತ್ತಾರೆ. ನಾಯಕ ಜನಾಂಗದವರೇ ಅರ್ಚಕರಾಗಿರುತ್ತಾರೆ. ಪಕ್ಕ ಕರ್ನಾಟಕದ ಗಡಿಯಲ್ಲಿ ಗ್ರಾಮ ರೆಡ್ಡಿಹಳ್ಳಿ. ಈ ರಡಿಅಳಿ(ರೆಡ್ಡಿಹಳ್ಳಿ)ಯ  ಹಳೆ ಮಗನಾದ ಚೆಲವಾದಿನಾಗನ ಮಗ ನರಸನ ಕೊರಳಿಗೆ ಹಾಕಿಸಿರುವರು. ರತ್ನಗಿರಿಯ ಚಿತ್ರಗಾರ ಪುಟ್ಟಲಿಂಗಪ್ಪ ಶಾಸವನ್ನು ಬರೆದಿರುವನು.
ಶಾಸನ ಪಾಠ
೧ ಶ್ರೀ
೨ ಶ್ರೀ ಹೇವಳಂಬಿ ಸಂಮತ್ಸರದ ಚೈತ್ರ ಶುದ ೧ ಯ
೩ ಲ್ಲು ಶ್ರೀ ಮತು ಗೊಟ್ಟು ಗುರಿಕೆ ಏತಂಣನ ಮಗ
೪ ನಲ್ಲ ನಿಂಗಣ ಶ್ರೀಪಾತಪ್ಪ ದೇವರಿಗೆ ಕೊಡಿಶಿದ
೫ ಆರೆ ಭಕ್ತಿ ಸದರಿ ಆರೆ ಅಳೆ ಮಗನಾದ ರಡಿ
೬ ಅಳಿ ಚೆಲವಾದಿ ನಾಗನ ಮಗ ನರಸನ ಕೊ
೭ ಳಿಗೆ ಆಕಿದ ಅರೆ
|| ರತ್ನಗಿರಿ ಚಿತ್ರಗಾರ
೯ ಪುಟ್ಟಲಿಂಗಪ್ಪ

ಹೇಮಾವತಿಯ ಶಾಸನ
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ ತಾಲ್ಲೂಕಿನ ಹೇಮಾವತಿಯು ನೊಳಂಬರ ರಾಜಧಾನಿಯಾಗಿತ್ತು. ಇಲ್ಲಿನ ಪ್ರಸಿದ್ಧವಾದ ಸಿದ್ದೇಶ್ವರ ದೇವಸ್ಥಾನದ ದ್ವಾರಬಂಧದಲ್ಲಿ ಅಪ್ರಕಟಿತವಾದ ಶಾಸನವಿದೆ. ಬಾಗಿಲುವಾಡಕ್ಕೆ ಹಾಕಿದ್ದ ಬೆಳ್ಳಿಯ ತಗಡನ್ನು ಜೀರ್ಣೋದ್ಧಾರದ ಸಂದರ್ಭದಲ್ಲಿ ತೆಗೆದಿದ್ದರಿಂದ ಈ ಶಾಸನ ಕಂಡುಬಂದಿತು.
ಶಾಸನವು ೨ ಸಾಲುಗಳಲ್ಲಿ ಬರೆಯಲ್ಪಟ್ಟಿದೆ. ಶಾಸನವು ಕನ್ನಡ ಭಾಷೆಯಲ್ಲಿ ಬರೆಯಲ್ಪಟ್ಟಿದೆ. ಲಿಪಿಯು ೧೨ನೇ ಶತಮಾನದ ಲಿಪಿಯನ್ನು ಹೋಲುತ್ತದೆ. ಗರೆಯ ಪಲೆಯ ಎಂಬುವನು ಹೂವಿನ ಕಲ್ಲುದ್ವಾರಬಂಧವನ್ನು ಮಾಡಿಸಿದ ವಿಷಯ ಎಂದು ಊಹಿಸಬಹುದಾಗಿದೆ.
ಶಾಸನ ಪಾಠ
೧        ಶ್ರೀಮತು ಗರೆಯ ಪಲೆಯ ಹುವಿನ ಕಲುದರವಂದ ಮಾ
೨        ಡಿಸಿದ
ಪೇಲುಬಂಡೆಯ ಶಾಸನ
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ ತಾಲ್ಲೂಕಿನ ಹೇಮಾವತಿಗೆ ಹತ್ತಿರದ ಗ್ರಾಮ ಪೇಲುಬಂಡೆ. ಇಲ್ಲಿನ ಪ್ರಸಿದ್ಧವಾದ ರಂಗನಾಥಸ್ವಾಮಿ ದೇವಸ್ಥಾನದ ಯಾಗಶಾಲೆಯ ದ್ವಾರಬಂಧದಲ್ಲಿ ಒಂದು ಅಪ್ರಕಟಿತವಾದ ಶಾಸನವಿದೆ.
ಶಾಸನವು ೩ ಸಾಲುಗಳಲ್ಲಿ, ಕನ್ನಡ ಭಾಷೆಯಲ್ಲಿ ಬರೆಯಲ್ಪಟ್ಟಿದೆ. ಲಿಪಿಯು ೧೮ನೇ ಶತಮಾನದ್ದಾಗಿದೆ. ಶಾಸನವು ನಿಡಗಲ್ಲು ಮಹಾನಾಯಕಾಚಾರ‍್ಯರಾದ ನಿಡಗಲ್ಲು ಇಮ್ಮಡಿ ತಿಮ್ಮಣ್ಣ ನಾಯಕನು ಯಾಗಶಾಲೆಯನ್ನು ಕಟ್ಟಿಸಿದ ವಿಷಯವನ್ನು ತಿಳಿಸುತ್ತದೆ. ಆದರೆ ಈ ಯಾಗಶಾಲೆಯ ಕಂಬಗಳನ್ನು ನೋಡಿದರೆ ಇದು ಇವರ ಕಾಲದಲ್ಲಿ ನಿರ್ಮಿತವಾದಂತೆ ಕಂಡುಬರುವುದಿಲ್ಲ. ಆದರೆ ಈಗಾಗಲೇ ಅಸ್ವಿತ್ವದಲ್ಲಿದ್ದ ಪೇಲುಬಂಡೆಯ ರಂಗನಾಥ ಸ್ವಾಮಿಯ (ನೊಳಂಬರ ಕಾಲದಲ್ಲಿ ರಚನೆ) ಶಿಥಿಲವಾದ ಪಳೆಯುಳಿಕೆ ಉಪಯೋಗಿಸಿ ಅಥವಾ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಉಪಯೋಗಿಸಿ ಉಳಿದ ಕಂಬಗಳಿಂದ ಈ ಯಾಗಶಾಲೆಯನ್ನು ನಿರ್ಮಿಸಿರಬಹುದು. ನಿಡಗಲ್ಲು ನಾಯಕರ ವಂಶಾವಳಿಯಲ್ಲಿ ಹಲವಾರು ಜನ ತಿಮ್ಮಣ್ಣ ನಾಯಕರು ಬಂದರೂ ಹರತಿ ವಂಶಾವಳಿಯ ವೀರತಿಮ್ಮಣ್ಣ ನಾಯಕನೇ ಇರಬಹುದು. ಈತನು ೧೭೫೮ ರಿಂದ ೧೭೮೫ರವರೆಗೆ ಆಳ್ವಿಕೆ ನಡೆಸಿರುವನು.
ಶಾಸನ ಪಾo
೧        ಶುಭಮಸ್ತು ಪಾರ್ಥಿವ ಸಂವತ್ಸರದ ಮಾಘ ಶುಧ ೫ ಲೂ ಶ್ರೀ ಮನ್ಮಹಾನಾಯಕಾಚಾರ‍್ಯರಾದ ನಿಡುಗಲಯಿಮಡಿ ತಿಮಣ್ಣ ನಾಯ
೨        ಕ ಅಯ್ಯನವರ ರಾಯಸದ ರಾಂಂಣನೂ ಕಟ್ಟಿಸಿದ ಪೆಯಲಬಂಡೆ ರಂಗನಾಥನ ಯಾಗಶಾಲೆಯ ಬಾಗಿಲಿ ವಾ
೩        (ವಾ)ಡದ (ಅಂಕಣ ಕ) ಮಂಗಳ ಮಹಾ ಶ್ರೀಶ್ರೀ ರಾಮಚಂದ್ರ ಸಹಾಯ

[ಶಾಸನ ಓದಲು ನೆರವಾದ ಸುಂಕಂ ಗೋವರ್ಧನ, ಡಾ. ಪಿ.ವಿ. ಕೃಷ್ಣಮೂರ್ತಿ ಹಾಗೂ ಡಾ.ಬಿ. ರಾಜಶೇಖರಪ್ಪ ಅವರಿಗೆ ಕೃತಜ್ಞತೆಗಳು.]

? ಪ್ರಾಂಶುಪಾಲರು, ಎಸ್.ಎಮ್.ಆರ್.ಪಿ.ಯು. ಕಾಲೇಜು, ಕಳ್ಳಂಬೆಳ್ಳ, ಸಿರಾ ತಾಲ್ಲೂಕು, ತುಮಕೂರು ಜಿಲ್ಲೆ-೫೭೨೧೨೫.


No comments:

Post a Comment