Thursday, March 14, 2013

ಪಾಂಡ್ಯರ ಗದ್ಯಾಣ


ಉಚ್ಚಂಗಿ ಪಾಂಡ್ಯರ ಅಪರೂಪದ ಗದ್ಯಾಣ
ಮಂದರ್ಕೆ ನಿತ್ಯಾನಂದ ಪೈ
ಗಣೇಶ್ ಎಂಟರ್‌ಪ್ರೈಸಸ್,
ಹಳೇ ಬಸ್ ನಿಲ್ದಾಣ,
ಮೂಡುಬಿದ್ರೆ-೫೭೪೨೨೭.


ಮುಂಭಾಗದಲ್ಲಿ ಕುಳಿತಿರುವ ನಂದಿಯ ಚಿತ್ರವಿರುವ ೨ ಗದ್ಯಾಣಗಳು ಲಭ್ಯವಾಗಿದ್ದು ಅವುಗಳ ವಿವರ ಹೀಗಿವೆ.
ಗದ್ಯಾಣ : ೧.
ಲೋಹ : ಚಿನ್ನ, ವ್ಯಾಸ : ೧೫ ಮಿ.ಮೀ., ತೂಕ : ೩.೭ ಗ್ರಾಂ.
ಮುಂಭಾಗ
ಬಲಗಡೆಗೆ ಮುಖಮಾಡಿ ಪೀಠದ ಮೇಲೆ ಕುಳಿತಿರುವ ನಂದಿಯಿದ್ದು ಮೇಲೆ ಸೂರ್ಯ ಚಂದ್ರರಿದ್ದಾರೆ.
ಹಿಂಭಾಗ
ಹೂವಿನ ವಿನ್ಯಾಸದ ನಡುವೆ ಒಂದು ಸಾಲಿನ ೧೧-೧೨ನೇ ಶತಮಾನದ ಕನ್ನಡ ಲಿಪಿಯಲ್ಲಿ “ಶ್ರೀ ಪರಿಚ್ಚೇದಿ ಗನ್ಡ’’ ಎಂಬ ಬರಹವಿದೆ. ಈ ಬರಹದ ಕೆಲ ಅಕ್ಷರಗಳು ಸ್ವಲ್ಪ ಮಟ್ಟಿಗೆ ಶಿಥಿಲವಾಗಿರುವುದರಿಂದ ನಾಣ್ಯ ತಜ್ಞರು ಈ ಲಿಪಿಯನ್ನು “ಶ್ರೀ ಪರಿಜ್ವಲ ಗನ್ಡ’’ ಎಂದು ಓದಿ ಈ ನಾಣ್ಯವನ್ನು ಕ್ರಿ.ಶ.೮೯೭-೯೩೩ರ ನೊಳಂಬ ದೊರೆ ಒಂದನೇ ಅಯ್ಯಪ್ಪ ದೇವನೆಂದು ಹೇಳಿದ್ದರು. ಆದರೆ ಪರಿಜ್ವಲ ಗಂಡ ಎಂಬ ಬಿರುದು ನೊಳಂಬರಿಗೆ ಇಲ್ಲದೇ ಇರುವುದರಿಂದ ಈ ನಾಣ್ಯವು ಖಂಡಿತವಾಗಿಯೂ ಒಂದನೇ ಅಯ್ಯಪ್ಪ ದೇವನದೆಂದು ಹೇಳಲಾಗುವುದಿಲ್ಲ.
ಗದ್ಯಾಣ : ೨.
ಲೋಹ : ಚಿನ್ನ, ವ್ಯಾಸ : ೧೫ ಮಿ.ಮೀ. ತೂಕ : ೩.೮ ಗ್ರಾಂ.
ಕೆಲವೊಂದು ಮಾರ್ಪಾಡಿನೊಂದಿಗೆ ಈ ನಾಣ್ಯವು ಮೊದಲಿನ ನಾಣ್ಯದಂತೆ ಇದೆ.
ಮುಂಭಾಗ
ಬಲಗಡೆಗೆ ಮುಖಮಾಡಿ ಪೀಠದ ಮೇಲೆ ಕುಳಿತಿರುವ ನಂದಿಯ ಚಿತ್ರವಿದ್ದು ನಂದಿಯ ಎದುರು ಭಾಗದಲ್ಲಿ ಚಾಮರವಿದೆ. ಚಾಮರದ ಮೇಲೆ ‘ಮೀನಿನ ಚಿತ್ರವಿರುವುದು ವಿಶೇಷವಾಗಿದೆ. ಈ ನಾಣ್ಯದ ಮೇಲಿರುವ ನಂದಿಯ ಮೊದಲನೆಯ ನಾಣ್ಯದಲ್ಲಿರುವ ನಂದಿಗಿಂತಲೂ ಹೆಚ್ಚಾಗಿ ಅಲಂಕೃತವಾಗಿದೆ. ನಂದಿಯ ಮೇಲ್ಭಾಗದಲ್ಲಿ ಸೂರ್ಯ ಚಂದ್ರರಿದ್ದು, ನಾಣ್ಯದ ಮೇಲ್ಭಾಗದ ಅಂಚಿನಿಂದ ಸಣ್ಣ ಸಣ್ಣ ಗಂಟೆಗಳನ್ನು ನೇತಾಡಿಸಿದ್ದಂತೆ ಚಿತ್ರಣ ಕಂಡುಬರುತ್ತದೆ.
ಹಿಂಭಾಗ
ಹಿಂಬದಿಯ ಹೂವಿನ ವಿನ್ಯಾಸ ಮೊದಲನೆಯ ನಾಣ್ಯಕ್ಕಿಂತ ಸ್ವಲ್ಪ ಭಿನ್ನವಾಗಿದ್ದು ನಾಣ್ಯದ ಮಧ್ಯಭಾಗದಲ್ಲಿ ೧೧-೧೨ನೇ ಶತಮಾನದ ಕನ್ನಡ ಲಿಪಿಯಲ್ಲಿ “ಶ್ರೀ ಪರಿಚ್ಛೇದಿ ಗನ್ಡ’’ ಎಂಬ ಒಂದು ಸಾಲಿನ ಬರಹ ಇದೆ.
ನೊಳಂಬರ ಅವನತಿಯ ನಂತರ ಅವರ ಉತ್ತರಾಧಿಕಾರಿಯಂತೆ ಉಚ್ಚಂಗಿ ಪಾಂಡ್ಯರು ನೊಳಂಬರ ಕೆಲವು ಪ್ರಾಂತ್ಯಗಳನ್ನು ಆಳಿಕೊಂಡಿದ್ದರು. ಯದುವಂಶಜರೆಂದು ಹೇಳಿಕೊಳ್ಳುವ ಉಚ್ಚಂಗಿ ಪಾಂಡ್ಯರು ಕಲ್ಯಾಣ ಚಾಳುಕ್ಯರ ಸಾಮಂತರಾಗಿ ಕ್ರಿ.ಶ.೧೧-೧೨ನೇ ಶತಮಾನದಲ್ಲಿ ಚಿತ್ರದುರ್ಗ ಜಿಲ್ಲೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವನ್ನು ಒಳಗೊಂಡ ನೊಳಂಬವಾಡಿ ೩೨೦೦೦ವನ್ನು ಆಳಿಕೊಂಡಿದ್ದರು. ಮಹಾಮಂಡಲೇಶ್ವರ, ಕಾಂಚೀಪುರವರಾಧೀಶ್ವರ ಮುಂತಾದ ಪಲ್ಲವ, ನೊಳಂಬರ ಬಿರುದುಗಳನ್ನು ಧರಿಸಿಕೊಂಡು ಉಚ್ಚಂಗಿಯಿಂದ ಆಳ್ವಿಕೆ ಮಾಡಿಕೊಂಡಿದ್ದರು.
ಆದಿತ್ಯದೇವ ಅಥವಾ ಮಂಗಯ್ಯ ಈ ರಾಜ್ಯದ ಸ್ಥಾಪಕ. ತದನಂತರ ಆಳಿದ ಕೆಲರಾಜರ ಹೆಸರುಗಳು ತಮಿಳು ಮೂಲದ ಪಲಮಾಂದ ಪಾಂಡ್ಯ, ಇರುಕ್ಕವೇಲ್, ಪಲಿಂದ ಪಾಂಡ್ಯ ಎಂದು ಇರುವುದರಿಂದ ಇವರು ತಮಿಳು ನಾಡಿನಿಂದ ಬಂದಿರಬೇಕೆಂದು ಊಹೆಯು ಸಹ ಇದೆ.
ಕಲ್ಯಾಣ ಚಾಲುಕ್ಯ ಚಕ್ರವರ್ತಿ ತ್ರಿಭುವನಮಲ್ಲ ಆರನೇ ವಿಕ್ರಮಾದಿತ್ಯನ (ಕ್ರಿ.ಶ.೧೦೭೬-೧೧೨೬) ಸಾಮಂತ ಉಚ್ಚಂಗಿ ದೊರೆ ತ್ರಿಭುವನಮಲ್ಲ ಪಾಂಡ್ಯನು ನೊಳಂಬವಾಡಿ ೩೨೦೦೦ವನ್ನು ಆಳುತ್ತಿದ್ದ. ನಂತರ ದೊರೆ ‘ತ್ರಿಭುವನಮಲ್ಲ ರಾಯಪಾಂಡ್ಯ ಇವನು ದಾವಣಗೆರೆಯ ಸಮೀಪದ ಬೆಳತೂರಿನಿಂದ ಆಳ್ವಿಕೆ ಮಾಡುತ್ತಿದ್ದು ಕಳಿಂಗ, ಸಿಂಹಳ, ಸಿಂಗ ಮತ್ತು ಕಲುತ ದೊರೆಗಳನ್ನು ಸೋಲಿಸಿದ್ದ ಎಂದು ಶಾಸನಗಳು ತಿಳಿಸುತ್ತವೆ. ಇವನ ಎರಡನೆಯ ಮಗ ‘ವೀರಪಾಂಡ್ಯನ ಕಾಲದಲ್ಲಿ ಉಚ್ಚಂಗಿ ಇವರ ರಾಜಧಾನಿಯಾಗಿತ್ತು. ಇವನಿಗೆ ಚಾಳುಕ್ಯ ರಾಜಕುಮಾರನ ಬಲಭಾಗದಲ್ಲಿ ನಿಲ್ಲುವ ಅಧಿಕಾರವಿತ್ತೆಂದು ಶಾಸನಗಳು ಹೇಳುತ್ತವೆ.
ನಂತರ ದೊರೆ ‘ವಿಜಯಪಾಂಡ್ಯ ಅಥವಾ ಕಾಮದೇವ. ಈತ ಬಹು ಪರಾಕ್ರಮಿಯಾಗಿದ್ದು ಈತನ ಕಿರೀಟಾಗ್ರ ದೊಡ್ಡ ನೀಲಮಣಿಗಳಿಂದ ನಿರ್ಮಿತವಾಗಿತ್ತೆಂದು ಈತನ ಬಾಹುಗಳು ಸುವರ್ಣ ತೋಳು ಬಂಧಿಗಳಿಂದ ಅಲಂಕೃತವಾಗಿತ್ತೆಂದು ಕನಕ ಪರ್ವತದಲ್ಲಿ ಈತ ‘ಮತ್ಸ್ಯಲಾಂಛನದ ವಿಜಯಸ್ತಂಭವನ್ನು ಸ್ಥಾಪಿಸಿದನೆಂದು ಇವನ ಖಜಾನೆಯು ರತ್ನಗಳಿಂದ ಸಂಪತ್ಭರಿತವಾಗಿತ್ತೆಂದು ಈತನ ಕೆಳಗೃಹ ಮಲಯ ಪರ್ವತದ ಚಂದನ ವೃಕ್ಷಗಳ ಸಮೂಹದಲ್ಲಿತ್ತೆಂದು ಶಾಸನಗಳು ಹೊಗಳುತ್ತವೆ. ಕ್ರಿ.ಶ.೧೧೮೪ರ ಸುಮಾರಿಗೆ ಇವನು ಸ್ವತಂತ್ರವಾಗಿ ಆಳ್ವಿಕೆ ನಡೆಸಿರಬೇಕು. ಆ ಕಾಲದ ಶಾಸನದಲ್ಲಿ ಕಲ್ಯಾಣ ಚಾಳುಕ್ಯರ ಹೆಸರು ಇಲ್ಲದೇ ಇರುವುದು ಇದನ್ನು ಸೂಚಿಸುತ್ತದೆ. ಏಕೆಂದರೆ ಈ ಸಮಯ ಕಲ್ಯಾಣ ಚಾಳುಕ್ಯರ ಅವನತಿಯ ಸಮಯವಾಗಿತ್ತು.
ಪ್ರಸ್ತುತ ನಾಣ್ಯದ ಮೇಲಿರುವ ‘ಶ್ರೀ ಪರಿಚ್ಚೇದಿ ಗಂಡ ಎಂಬ ಬಿರುದು ‘ತ್ರಿಭುವನಮಲ್ಲ ರಾಯಪಾಂಡ್ಯ ಮತ್ತು ‘ವಿಜಯಪಾಂಡ್ಯನ ಶಾಸನಗಳಲ್ಲಿ ಮಾತ್ರ ಕಂಡುಬರುತ್ತದೆ. ‘ಪರಿಚ್ಚೇದಿ ಗಂಟ ಎಂದರೆ ಸುತ್ತಲೂ ಆಕ್ರಮಿಸಿದ ಶತ್ರುಗಳನ್ನು ಕತ್ತರಿಸುವವನು? ಎಂದಾಗುತ್ತದೆ. (ಂ ಅhಚಿmಠಿiಚಿಟಿ ಅuಣಣiಟಿg oಟಿ boh Sies) ದಾವಣಗೆರೆಯ ಮುಸಾಫಿರ ಬಂಗಲೆಯ ಬಳಿ ೭ ’’ x ’’ ಗಾತ್ರದ ೪೮ ಸಾಲಿನ ಕಲ್ಯಾಣ ಚಾಳುಕ್ಯ ದೊರೆ ಆರನೇ ವಿಕ್ರಮಾದಿತ್ಯನ ಶಾಸನವಿದೆ. ಇದರ ಕಾಲ ಚಾಳುಕ್ಯ ವಿಕ್ರಮ ವರ್ಷ ೪೮ ಅಂದರೆ ಕ್ರಿ.ಶ.೧೧೨೩. ಈ ಶಾಸನದ ೧೮, ೧೯, ೨೦, ೨೧ನೇ ಸಾಲಿನಲ್ಲಿ ಸ್ವಸ್ತಿ ಸಮಧಿಗತ ಪಂಚಮಹಾಸಬ್ದ ಮಹಾಮಂಡಲೇಶ್ವರ, ಕಾಂಚೀಪುರವರಾಧೀಶ್ವರಂ ಯದುವಂಸಾಬರ ದ್ಯುಮಣಿ ಸುಭಟ ಚೂಡಾಮಣಿ ನಿಜಕುಳ ಕಮಳ ಮಾರ್ತ್ತಂಡಂ ಪರಿಚ್ಚೇದಿ ಗಣ್ಡಂ ರಾಜಿಜೋಳ ಮನೋಭಗಂ ಶ್ರೀಮತ್ತ್ರಿಭುವನಮಲ್ಲದೇವ ಪಾದಾಬ್ಜ ಭೃಂಗಂ ಶ್ರೀಮನ್ಮಮಹಾ ಮಹಾಮಂಡಳೇಶ್ವರ ತ್ರಿಭುವನ ಮಲ್ಲರಾಯ ಪಾಂಡ್ಯದೇವರು ನೊಳಂಬವಾಡಿ ಮೂಮತ್ತಿರ್ಚ್ಚಾಸಿರಮು....ಹಾಗೆಯೇ ಶಾಸನದ ೩೨ನೇ ಸಾಲಿನಲ್ಲಿಯೂ ಸಹಾ ‘ಪರಿಚ್ಛೇದಿ ಗಂಡ ಪಲ್ಲವರಾಯ ಪಡೆವೀಡಿನೊಳ....ಎಂದಿದೆ.
ದಾವಣಗೆರೆಯ ಇನ್ನೊಂದು ೬’’ x ಗಾತ್ರದ ೬೨ ಸಾಲಿನ ಉಚ್ಚಂಗಿ ದೊರೆ ‘ವಿಜಯಪಾಂಡ್ಯನ ಶಾಸನವಿದೆ. ಚಾಳುಕ್ಯ ವಿಕ್ರಮಶಕೆ ಬದಲು ಶಾಲಿವಾಹನ ಶಕ ೧೦೯೩ ಅಂದರೆ ಕ್ರಿ.ಶ.೧೧೭೧ ಕಾಲದ ಶಾಸನ ಇದಾಗಿದೆ. ಇಲ್ಲಿ ಚಾಳುಕ್ಯ ಚಕ್ರವರ್ತಿಯ ಹೆಸರಿಲ್ಲಾ ಈ ಸಮಯ ಚಾಳುಕ್ಯರ ಅವನತಿಯ ಕಾಲ ಮತ್ತು ಕಲಚೂರಿಯರ ಉನ್ನತಿಯ ಕಾಲವಾಗಿತ್ತು. ಅಂದರೆ ವಿಜಯಪಾಂಡ್ಯನು ಸ್ವತಂತ್ರವಾಗಿ ಆಳ್ವಿಕೆ ನಡೆಸಿರಬೇಕು. ಈ ಶಾಸನದ ೪, , , , , ೮ನೇ ಸಾಲಿನಲ್ಲಿ ಸ್ವಸ್ತಿ ಸಮಧಿಗತ ಮಹಾಶಬ್ದ ಮಹಾಮಂಡಳೇಶ್ವರಂ ಕಾಂಚಿಪುರವರಾಧೀಶ್ವರಂ ಯದು ವಂಶಾಂಬರ ದ್ಯುಮಣಿ ಸುಭಟ ಚೂಡಾಮಣಿ.... ಪಾಂಡ್ಯ ಕುಳ ಕಮಳ ಮಾರ್ತ್ತಂಡಂ ‘ಪರಿಚ್ಛೇದಿ ಗಂಡಂ ರಾಜಿಗಚೋಳ ಮನೋಭಂಗಂ....ಶ್ರೀ ಮದ್ವಿಜಯ ಪಾಂಡ್ಯದೇವ ವಿಜಯ ರಾಜ್ಯಂ....ಎಂದು ಮುಂದುವರಿಯುತ್ತದೆ.
ಅದರಿಂದ ‘ಪರಿಚ್ಛೇದಿ ಗಂಡ ಎಂಬ ಬಿರುದು ಇರುವ ನೊಳಂಬರ ಯಾವುದೇ ಶಾಸನಗಳು ಲಭ್ಯವಿಲ್ಲದಿರುವುದರಿಂದ ಈ ನಾಣ್ಯಗಳನ್ನು ಕೇವಲ ಮುಂಭಾಗದಲ್ಲಿರುವ ‘ನಂದಿ ಲಾಂಛನದ ಆಧಾರದಿಂದ ನೊಳಂಬರದ್ದೆಂದು ಹೇಳುವುದು ಕಷ್ಟ. ಅಲ್ಲದೇ ನಂದಿಯ ಎದುರು ಉಚ್ಚಂಗಿ ಪಾಂಡ್ಯರ ಲಾಂಛನವಾದ ‘ಮೀನು (ಉಚ್ಚಂಗಿ ಪಾಂಡ್ಯರು ಪಾಠೀನ ಲಾಂಛನರು, ಅಂದರೆ ಮೀನ ಲಾಂಛನರು) ಇರುವುದರಿಂದ ಮತ್ತು ‘ಪರಿಚ್ಚೇದಿ ಗಂಡ ಎಂಬ ಬಿರುದು ಉಚ್ಚಂಗಿ ಪಾಂಡ್ಯ ರಾಜರುಗಳಾದ ‘ರಾಯಪಾಂಡ್ಯ ಮತ್ತು ವಿಜಯಪಾಂಡ್ಯರಿಗೆ ಇರುವುದರಿಂದ ಈ ನಾಣ್ಯವು ಉಚ್ಚಂಗಿ ಪಾಂಡ್ಯರದ್ದೆಂದು ಖಂಡಿತವಾಗಿಯು ಹೇಳಬಹುದು. ಮಾತ್ರವಲ್ಲದೇ ಈ ನಾಣ್ಯವನ್ನು ಉಚ್ಚಂಗಿ ಪಾಂಡ್ಯರಲ್ಲಿ ಪರಾಕ್ರಮಿ ಹಾಗೂ ಕಲ್ಯಾಣ ಚಾಳುಕ್ಯರಿಂದ ಸ್ವತಂತ್ರವಾಗಿ ಆಳ್ವಿಕೆ ಮಾಡಿದ ಉಚ್ಚಂಗಿ ದೊರೆ ವಿಜಯಪಾಂಡ್ಯದೇವನು ಟಂಕಿಸಿರಬಹುದೆಂದು ಊಹಿಸಬಹುದು.
ನೊಳಂಬರ ಅವನತಿಯ ನಂತರ ಅವರ ಪ್ರಾಂತ್ಯವನ್ನು ನೊಳಂಬರ ಉತ್ತರಾಧಿಕಾರಿಯಂತೆ ಆಳಿದ ಪಾಂಡ್ಯರ ಈ ಗದ್ಯಾಣವು ಒಂದು ಮಹತ್ತ್ವದ ಹೊಸ ಶೋಧವಾಗಿದೆ.

[ಈ ಪ್ರಬಂಧವನ್ನು ಮಂಡಿಸಲು ಶಾಸನಗಳ ವಿವರಗಳನ್ನು ಕೊಟ್ಟು ಬಹುವಾಗಿ ಸಹಕರಿಸಿದ ಶ್ರೀ ಟಿ.ಎಸ್. ಗಂಗಾಧರ, ಸಹಾಯಕ ನಿರ್ದೇಶಕರು ಕರ್ನಾಟಕ ಸರಕಾರದ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ ಮೈಸೂರು ಇವರಿಗೆ ಮತ್ತು ಮಾಹಿತಿಗಳನ್ನು ನೀಡಿದ ಡಾ. ಬಿ. ರಾಜಶೇಖರಪ್ಪ, ಚಿತ್ರದುರ್ಗ ಇವರಿಗೆ ತುಂಬು ಹೃದಯದ ಕೃತಜ್ಞತೆಗಳು.]

ಆಧಾರಸೂಚಿ
೧.         ಡಾ. ಬಿ. ರಾಜಶೇಖರಪ್ಪ ಇವರು ಪರಿಚ್ಛೇದಿ ಗಂಡ ಎಂಬ ಬಿರುದು ಮೊದಲಿಗೆ ನೊಳಂಬರಿಗೆ ಇದ್ದಿರಬಹುದೇ ಎಂದು ಸಂದೇಹ ವ್ಯಕ್ತಪಡಿಸಿದರಾದರೂ ಅದಕ್ಕೆ ಪೂರಕವಾಗಿ ಯಾವುದೇ ಶಾಸನಗಳು ಸಿಕ್ಕಿಲ್ಲ. ನೊಳಂಬರ ಈ ಬಿರಿದಿರುವ ಶಾಸನಗಳು ಸಿಕ್ಕಿದ್ದರೆ ಮೊದಲಿನ ನಾಣ್ಯ ಅಂದರೆ ನಂದಿಯ ಎದುರು ಮೀನಿನ ಚಿತ್ರ ಇಲ್ಲದಿರುವ ನಾಣ್ಯವನ್ನು ನೊಳಂಬರಿಗೆ ಸೇರಿದ್ದೆಂದು ಹೇಳಬಯಸುತ್ತೇನೆ.

೨.         ಕರ್ನಾಟಕದ ಕಿರು ಅರಸು ಮನೆತನಗಳು.




No comments:

Post a Comment