Saturday, March 16, 2013


ಕನ್ನಡ ತಾಳೆಯೋಲೆ ಗ್ರಂಥಗಳ ಚಿತ್ರಕಲಾ ವಿನ್ಯಾಸ 

ಕೆ. ವೆಂಕಟೇಶ್    DME MFA
ಕನಾರ್ಟಕದಲ್ಲಿ ದೊರೆಯುವ ತಾಳೆಯೋಲೆ ಹಸ್ತಪ್ರತಿ ಗ್ರಂಥಗಳ ಭಂಡಾರಗಳಲ್ಲಿ- ಲೌಕಿಕ, ಆಗಮಿಕ, ಪಾರಮಾರ್ಥಿಕ, ಸಾಂಸ್ಕೃತಿಕ, ಸಾಹಿತ್ಯ, ಕೃಷಿ, ಕಾವ್ಯ, ಇತಿಹಾಸ, ಜ್ಯೋತಿಷ ಶಾಸ್ತ್ರ, ಶಿಲ್ಪಶಾಸ್ತ್ರ, ನೃತ್ಯಶಾಸ್ತ್ರ, ಸಂಗೀತ, ವೈದ್ಯ, ವ್ಯಾಕರಣ, ಪಂಚಾಂಗ, ಶಬ್ದಾಲಂಕಾರ, ನಾಟಕ, ಧರ್ಮಶಾಸ್ತ್ರ, ವೇದವೇದಾಂಗ, ಪುರಾಣ, ಗಜ ಆಗಮ, ಚಿತ್ರಕರ್ಮ, ಗಣಿತ, ರತ್ನ ಪರೀಕ್ಷೆ, ವಾಸ್ತು, ಮೊದಲಾದ ವ್ಯೆವಿಧ್ಯಮಯವಾದ ಗ್ರಂಥಗಳು ಸಿಗುತ್ತದೆ. ಇವುಗಳು ವ್ಯಕ್ತಿಯಿಂದ ವ್ಯಕ್ತಿಗೆ, ಜನಾಂಗದಿಂದ ಜನಾಂಗಕ್ಕೆ, ತಲೆಮಾರಿನಿಂದ ತಲೆಮಾರಿಗೆ ಬಳುವಳಿಯಾಗಿ - ಧರ್ಮದತ್ತಿಯಾಗಿ ಉಳಿದುಕೊಂಡು ಬಂದಿದೆ. 

ಪ್ರಾಚೀನ ಕಾಲದಿಂದಲೂ ತಾಳೆಗರಿಯ ಮೇಲೆ  ಕಂಟದಿಂದ,  ಕೈವಾರ, ಹಾಗೂ ರೇಖಾಪಟ್ಟಿ ಮುಂತಾದ ಸಾಧನಗಳಿಂದ ಕೊರೆದು, ರೇಖಾಚಿತ್ರ ಬಿಡುಸುತ್ತಿದ್ದುದಕ್ಕೆ 'ಪತ್ರಚ್ಛೇದ' ಎಂಬ ಪರಿಭಾಷೆ ಬಳಿಕೆಯಲ್ಲಿದೆ.  ಹಸ್ತಪ್ರತಿಗಳನ್ನು ಕಲಾಪೂರ್ಣವಾಗಿ ಅಲಂಕರಿಸುತ್ತ ಬಂದಿದ್ದರೂ ನಾವು ಮಾತ್ರ ಅವುಗಳನ್ನು ಕಾವ್ಯ ಇಲ್ಲವೆ ಶಾಸ್ತ್ರದೃಷ್ಟಿಯಿಂದ ನೋಡಿ ಪರಿಶೀಲನೆಮಾಡುತ್ತ ಬಂದೆವೇ ಹೊರತು ಅಲ್ಲಿಯ ಕಲಾಪ್ರಜ್ನೆಯನ್ನು ಪರಿಶೀಲಿಸುವ ಪ್ರಯತ್ನ ನಡೆದಿಲ್ಲ.  ಕಾಲಗರ್ಭದಲ್ಲಿ ಅಡಗಿಹೋದ ಅಸಂಖ್ಯಾತ ಹಸ್ತಪ್ರತಿಗಳೊಡನೆ ಪತ್ರಚ್ಛೇದನ ಕಲೆಯ ಹಲವಾರು ಉತ್ಕೃಷ್ಟ ಮಾದರಿಗಳು ನಶಿಸಿ ಹೋಗಿರಬಹುದು. ಇಂದಿನ ಸಂದರ್ಭದಲ್ಲಿ ವಿದ್ವಾಂಸರ ದೃಷ್ಟಿ ಹಸ್ತಪ್ರತಿಗಳಲ್ಲಿನ ಚಿತ್ರಕಲಾ ಸಂಪತ್ತಿನತ್ತ ಹರಿಯುತ್ತಿರುವುದು ಸ್ವಾಗತಾರ್ಹ. 


ಹಸ್ತಪ್ರತಿ ಚಿತ್ರ ಕಲೆ, ಚಕಣಿ ಚಿತ್ರ, ತಾಳೆಗರಿ - ತಾಡಓಲೆ - ಓಲೆಗರಿ ಚಿತ್ರ, ಉದ್ದರಣೆ ಚಿತ್ರ ಇವೆಲ್ಲವುಗಳ ಅರ್ಥವು ಏಕತ್ರವಾಗಿದ್ದು ಬೇರೆ ಬೇರೆ ಸಂದರ್ಭಗಳಲ್ಲಿ ಬಳಸಲ್ಪಡುತ್ತದೆ.  ಹಸ್ತಪ್ರತಿ ಚಿತ್ರಗಳ ಅದ್ಯಾಯನದಲ್ಲಿ ಚಿತ್ರಗಳು ತನ್ನದೇ ಆದ ಮಹತ್ವ, ವ್ಯಾಪ್ತಿ, ಸ್ವರೂಪ, ಶೈಲಿ, ವಿನ್ಯಾಸ, ಸಂಯೋಜನೆ, ಸೌಂದರ್ಯ, ವರ್ಣಗಳು, ಚಿತ್ರ ಸಾಹಿತ್ಯದ ವೈವಿಧ್ಯತೆ, ಚಿತ್ರ ಚರಿತ್ರೆ ಹಾಗು ಇತರೆ ಮಾಹಿತಿಯನ್ನು ಕಲಾವಿದ ಲಿಪಿಕಾರನು ನಮಗೆ ಓದಗಿಸಿದ್ದಾನೆ.  ಇವುಗಳ ಬಗ್ಗೆ ವಿಷಯ ಸಂಗ್ರಹಿಸುತ್ತಾ ಹೋದಂತೆ, ಬೇರೆ ಬೇರೆ ವಿಭಿನ್ನ ಪಾರಂಪರಿಕ ಶಾಖೆಗಳಿಗೆ ಅನುಗುಣವಾಗಿ ಹಸ್ತಪ್ರತಿಗಳಲ್ಲಿ ಚಿತ್ರಗಳ ಕಲಾವಂತಿಕೆ ನಮಗೆ ಕಂಡುಬರುತ್ತವೆ.

ಹಸ್ತಪ್ರತಿ ಪತ್ರ ಮತ್ತು ಫಲಕಗಳ ಮೇಲಿನ ವರ್ಣಚಿತ್ರಗಳನ್ನು ಸಾಧಾರಣವಾಗಿ ಪರೀಶಿಲಿಸಿವ ಪೂರ್ವದಲ್ಲಿ, ಚಿತ್ರರಚನೆಗೈದ ಚಿತ್ರಕಾರ, ಚಿತ್ರರಚನಾ ವಿಧಾನ, ವರ್ಣಕ್ರಮ ಇತ್ಯಾದಿಗಳ ಬಗೆಗೆ ಮಾಹಿತಿ ಲಭಿಸುತ್ತದೆ.  ಹಸ್ತಪ್ರತಿಗಳಲ್ಲಿ ಅಲಂಕಾರಿಕ ಚಿತ್ರಗಳು ಹಾಗು ಸಾಂದರ್ಭಿಕ ಚಿತ್ರಗಳು ಎಂಬುದಾಗಿ ಎರಡು ಪ್ರಮುಖ ಭಾಗಗಳಿದ್ದು ಅವುಗಳಲ್ಲಿ ಕಟ್ಟು-ರಟ್ಟುಗಳ ಚಿತ್ರಗಳು, ಗರಿ-ಹಾಳೆಗಳ ಚಿತ್ರಗಳು, ಪಠ್ಯ ಕೇಂದ್ರಿತ ಚಿತ್ರಗಳು, ವರ್ಣ ಚಿತ್ರಗಳು ಎಂದು ನಾಲ್ಕು ಬಗೆಯ ಚಿತ್ರಗಳನ್ನಾಗಿ ವಿಂಗಡಿಸಬಹುದು.
ಕಟ್ಟು-ರಟ್ಟುಗಳ ಚಿತ್ರಗಳು : 
ತಾಳೆಯೋಲೆ ಗ್ರಂಥಗಳ ಸುರಕ್ಷತೆಯಸಲುವಾಗಿ ಅವುಗಳ ಮೇಲೆ-ಕೆಳಗೆ,  ತೆಳುವಾದ ಮರದ ಹಲಗೆಯಿಂದ ತಯಾರಿಸಿದ ರಕ್ಷಾಫಲಕಗಳನ್ನು ಅಳವಡಿಸುವದಕ್ಕೆ ಕಾರಣವಾಯಿತು. ಅವುಗಳ ಮೇಲೆ ವರ್ಣರಂಜಿತವಾಗಿ ಅಲಂಕರಣ ಮತ್ತು ವಿವರಣಾತ್ಮಕ, ಚಿತ್ರಗಳು ಕಂಡುಬರುತ್ತವೆ. ಈ ಅಲಂಕರಣದ ಚಿತ್ರಗಳಿಗೂ ಕೃತಿಯ ಪಾಠಕ್ಕೂ ಯಾವುದೆ ಸಂಬಂಧ ಇರುವುದಿಲ್ಲ.
ಗರಿ-ಹಾಳೆಗಳ ರೇಖಾ ಚಿತ್ರಗಳು : 
ಹಸ್ತಪ್ರತಿಗಳನ್ನು ಕಲಾಪೂರ್ಣವಾಗಿ ರಚಿಸಬೇಕೆಂಬ ಅಭಿಲಾಷೆ ಹಾಗು ಬರವಣಿಗೆಗೆ ವಿಶೇಷ ಮೆರುಗನ್ನುಂಟುಮಾಡಲು ಹಸ್ತಪ್ರತಿಯನ್ನೇ ಕಲಾವಸ್ತುವಿನಂತೆ ಚಿತ್ರಿಸುತಿದ್ದರು. ಕಲೆಗಾರರು, ಲಿಪಿಕಾರರು ರೇಖಾ, ಲಾಸ್ಯ, ಲಾಲಿತ್ಯ ವಿನ್ಯಾಸದಿಂದ ಗರಿಗಳನ್ನು ಅಲಂಕರಿಸುತ್ತಿದ್ದರಾದರೂ ಅದನ್ನೇ ಮಾದ್ಯಮವಾಗಿ ಉಪಯೊಗಿಸಿ ಗ್ರಂಥಗಳ ವಸ್ತು ವಿಷಯವನ್ನು ನಿರೂಪಿಸಲು ಚಿತ್ರಮಾದ್ಯಮವನ್ನು ಉಪಯೋಗಿಸಿ ಗ್ರಂಥದ ಮಹತ್ವವನ್ನು ಹೆಚ್ಚಿಸುತಿದ್ದರು.  ಓಲೆ ಗರಿಗಳ ಅಂಚಿನಲ್ಲಿ ದೇವದೇವತೆಯರ ಚಿತ್ರಗಳೋ ಅಥವ ಅಲಂಕೃತ ಶ್ರೀಕಾರ, ವಿವಿಧಾಕಾರದ ಶ್ರೀಕಾರ,  ಪದ್ಮದಾಕೃತಿ, ಶಂಖ, ಚಕ್ರ, ಸ್ವಸ್ತಿಕ, ಸೂರ್ಯ, ಚಂದ್ರ, ನಕ್ಷತ್ರ, ಹೂ, ಪುಷ್ಪಗಳಂತೆ ಸಂಯೋಜಿಸಿದ ಮುತ್ತಿನಾಕೃತಿ, ಲಿಂಗದಾಕೃತಿ, ವಂಕಿಯಾಕೃತಿ, ಅಷ್ಟದಳಾಕೃತಿ, ತರಂಗಿತ ರೇಖೆಗಳು, ಬಳ್ಳಿ ರೇಖೆಗಳು, ಪ್ರಾಣಿ, ಪಕ್ಷಿ ಮುಂತಾದ ಶುಭ  ಚಿನ್ಹೆಗಳ ರೇಖಾಚಿತ್ರಗಳನ್ನು ಇಲ್ಲಿ ಕಾಣಬಹುದು.   ಒಟ್ಟಿನಲ್ಲಿ ಹಸ್ತಪ್ರತಿಗಳಲ್ಲಿ ಬರೆಯದೆ ಉಳಿದ ಸ್ಥಳವನ್ನು ತುಂಬಲು ರಚಿಸಿದವುಗಳನ್ನು 'ಅಗತ್ಯದ ಅಲಂಕಾರ' ಗಳೆಂದೂ ಹಸ್ತಪ್ರತಿಗಳ ಸೌಂದರ್ಯವನ್ನು ಹೆಚ್ಚಿಸುವ ದೃಷ್ಟಿಯಿಂದ ರಚಿಸಲಾದವುಗಳನ್ನು 'ಊದ್ದೆಶಿತ ಅಲಂಕರ'ಗಳೆಂದೂ, ಅಯಾ ಗ್ರಂಥದಲ್ಲಿ ಬರುವ ಸಂದರ್ಭ, ಸನ್ನಿವೇಶಗಳನ್ನು ಇಲ್ಲವೆ ಆ ಗ್ರಂಥದ ವಿಷಯ ನಿರೂಪಣೆಗೆ ಸಹಾಯಕವಾಗುವಂತೆ ರಚಿಸಿದ ಚಿತ್ರಗಳನ್ನು 'ಸಾಂದಭರ್ಕ ಚಿತ್ರ' ಗಳೆಂದೂ ಮತ್ತೆ ವಿಂಗಡಿಸಬಹುದು.

ಪಠ್ಯ ಕೇಂದ್ರಿತ ಚಿತ್ರಗಳು : 
ಧರ್ಮಗಳ ಬೆಳವಣಿಗೆಯ ಹಿನ್ನಲೆಯಲ್ಲಿ ವ್ಯಾಪಕವಾಗಿ ಚಿತ್ರಗಳ ಬಳಕೆ ಮತ್ತು ಮಹತ್ವದ ಬಗ್ಗೆ ಅಧ್ಯಯನ ಎಷ್ಟು ಮುಖ್ಯವಾದುದೆಂದು ನಮಗೆ ಮನವರಿಕೆಯಾಗುತ್ತದೆ.  ಹಲವಾರು ಕಾವ್ಯ ಗ್ರಂಥಗಳ ಸಂದರ್ಭ ಸನ್ನಿವೇಶಗಳನ್ನು ನಿರೂಪಿಸುವ ರೇಖಾ ಚಿತ್ರಗಳು ಹಾಗು ವರ್ಣ ಚಿತ್ರಗಳು ಉಂಟು.  ಚಿತ್ರರಾಮಾಯಣಂ, ಗೀತಗೊವಿಂದ, ಅಶ್ವ ಶಸ್ತ್ರ, ಗಜ ಶಸ್ತ್ರ, ಕಾಮಸೂತ್ರ ಮುಂತಾದ ಪಠ್ಯದಲ್ಲಿ ವಿವರಿಸಲಾಗಿರುವ ಪ್ರಸಂಗ, ಸನ್ನಿವೇಶಗಳನ್ನು ಅಂಶಗಳನ್ನು ರೇಖಾಚಿತ್ರಗಳಲ್ಲಿ ಬಿಡಿಸಲಾಗಿದೆ. ಇಂಥ ಚಿತ್ರರಚನೆಗಳ ನಿದರ್ಶನಗಳು ಕಡಿಮೆ ಸಂಖ್ಯೆಯಲ್ಲಿ ಉಪಲಬ್ದವಿರಬಹುದು, ಯಕೆಂದರೆ ಪ್ರತಿಕಾರನದವನು ಒಂದು ಕೃತಿಯನ್ನು ಬರಹಕ್ಕಿಳಿಸುತ್ತ, ಅದನ್ನಾಸ್ವಾದಿಸುತ್ತ, ಸುಂದರ ಸನ್ನಿವೇಶಗಳನ್ನು ಅಂತರಂಗದಲ್ಲಿ ಪರಿಭಾವಿಸಿಕೊಳ್ಳುತ್ತ ದೃಶ್ಯಮಾಲೆಯನ್ನು ಸೃಸ್ಟಿಸಬೇಕಾದ ಚಿತ್ರಕಲಾ ಪರಿಣತಿಯನ್ನು ಹೊಂದಿರಬೇಕಾಗುತ್ತದೆ. ಧಾರ್ಮಿಕ ಇಲ್ಲವೆ ಮಾಂತ್ರಿಕ ಮಹತ್ವವುಳ್ಳ ಕೆಲವು ಸಂಗತಿಗಳನ್ನು ರಹಸ್ಯವಾಗಿ ಹೇಳಲಾದ ಕೆಲವು ಚಿತ್ರ ಅಥವ ಸಾಂಕೇತಿಕ ಚಿತ್ರಗಳೂ ಶಾಸ್ತ್ರಗಳ ವಿವರಣೆಗಾಗಿ ಕೊಡಮಾಡುವ ಆತೃತಿಗಳು, ಮಂತ್ರ, ತಂತ್ರ, ಯಂತ್ರಾದಿಗಳಲ್ಲಿನ ಚಿತ್ರ ಸಂಕೇತಗಳೂ, ಶಕುನಾದಿಗಳನ್ನು ಕಂಡುಕೊಳ್ಳುವ, ರೋಗಾದಿ ಕಾಟಗಳ ಪರಿಹಾರಸೂಚಿಸುವ ರಹಸ್ಯ ಚಿತ್ರಗಳು ನಮಗೆ ಲಭ್ಯವಿದೆ.
ವರ್ಣ ಚಿತ್ರಗಳು : 
ಕನ್ನಡ ನಾಡಿನ ಹಸ್ತಪ್ರತಿ ಚಿತ್ರಕಾರರು ಬಳಸುತ್ತಿದ್ದ ದೇಶಿಯ ವರ್ಣ ಮತ್ತು ಕುಂಚಗಳನ್ನು ಸ್ವತಃ ತಾವೇ ಸಿದ್ದಪಡಿಸಿಕೊಂಡು ಚಿತ್ರಗಳನ್ನು ರಚಿಸುತ್ತಿದ್ದರು.  ತಮ್ಮ ಸುತ್ತಲಿನ ಪರಿಸದಲ್ಲಿ ಲಭ್ಯವಾಗುತ್ತಿದ್ದ ಸಾಮಗ್ರಿಗಳಿಂದಲೇ ಪ್ರಮುಖವಾದ ಪಂಚವರ್ಣಗಳನ್ನು ( ಅಂದರೆ ಬಿಳಿ, ಕಪ್ಪು, ಕೆಂಪು, ಹಳದಿ, ಹಸಿರು ) ಸಿದ್ಧಪಡಿಸಿಕೊಂಡು, ನಂತರ ಮೂಲ ವರ್ಣಗಳ ಮಿಶ್ರಣದಿಂದ ತಮಗೆ ಬೇಕಾದ ವರ್ಣಶ್ರೇಣಿಯನ್ನು ಸಿದ್ಧಪಡಿಸಿಕೊಳ್ಳುವಲ್ಲಿ ಹಸ್ತಸಿದ್ದರಾಗಿದ್ದರು.


ನಿಯುಕ್ತ, ನೇಮಿತ ಮತ್ತು ಪ್ರವೃತ್ತಿ ಈ ಯಾವುದೇ ವರ್ಣಚಿತ್ರಕಾರರಾಗಿರಲಿ ಅವರು ಚಿತ್ರಬಿಡಿಸಿದ ಹಾಗೂ ವರ್ಣಕ್ರಮಗೈದ ವಿಧಾನಗಳು ಭಿನ್ನ ಭಿನ್ನವಾಗಿರಲಾರವು. ವಿಷ್ಣುಧಮರ್ೋತ್ತರ ಪುರಾಣ, ಚಿತ್ರಸೂತ್ರಾದಿಗಳಲ್ಲಿ ಉಕ್ತವಾದ ವಿಧಾನವನ್ನುನುಸರಿಸಿಯೇ ಚಿತ್ರರಚನೆಗೈಯುತ್ತ ಬಂದಿರಬಹುದಾದರೂ ಚಿತ್ರಕಾರರ ಸುದೀರ್ಘ ಅನುಭವ, ಪ್ರಯೋಗಶೀಲತೆ ಹಾಗೂ ಚಿತ್ರರಚನಾ ಸಾಮಗ್ರಿಗಳ ಲಭ್ಯಾಲಭ್ಯತೆಯನ್ನು ಆಧಅರಿಸಿದ ಅಲ್ಪಸ್ವಲ್ಪ ವ್ಯತ್ಯಾಸಗಳು ಕಂಡುಬರುತ್ತದೆ.


ಸಾಂಪ್ರದಾಯಿಕ ತಲೆಮಾರುಗಳಿಂದ ಉಳಿದುಕೊಂಡು ಬಂದ ಹಾಗೂ ದೊರೆಕುವ ಎಲ್ಲ ಚಿತ್ರಗಳನ್ನೂ ಸಂಗ್ರಹಿಸಿ ವೈವಿಧ್ಯ, ವೈಶಿಷ್ಠ್ಯಪೊರ್ಣವಾದ ತುಲನಾತ್ಮಕವಾದ ಅಧ್ಯಯನ ಮಾಡಿದಲ್ಲಿ ಇವುಗಳ ಸ್ವರೂಪದ ಮೌಲಿಕವಾದ ಅಂಶಗಳು ಬೆಳಕು ಕಾಣಬಹುದು.  
----

No comments:

Post a Comment