Tuesday, March 26, 2013


ಅನಂತಶಯನ ಶಿಲ್ಪಗಳು
ಡಾ. ಕೆ. ವಸಂತಲಕ್ಷ್ಮಿ
೧೬೭೬, ೫ನೇ ‘ಎ ಅಡ್ಡರಸ್ತೆ,
೧೦ನೇ ಮುಖ್ಯರಸ್ತೆ, ಬನಶಂಕರಿ ಮೊದಲನೇ ಹಂತ,
ಬೆಂಗಳೂರು-೫೦.

ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ವೈಷ್ಣವ ಧರ್ಮವು ಪ್ರಚಲಿತದಲ್ಲಿದೆ. ವೈದಿಕ ಪರಂಪರೆಯ ದೇವತೆಗಳ ಅರ್ಚನಾ ಮೂರ್ತಿಗಳಲ್ಲಿ ಶಯನಭಂಗಿಯಲ್ಲಿ ಕಾಣಸಿಗುವುದು ವಿಷ್ಣುವಿನ ಮೂರ್ತಿಗಳು ಮಾತ್ರ. ವಿಷ್ಣುವಿನ ಶಯನಭಂಗಿಯ ಮೂರ್ತಿಯನ್ನು ಜಲಶಾಯಿ, ಶೇಷಶಾಯಿ, ರಂಗನಾಥ, ಅನಂತಪದ್ಮನಾಭ, ಅನಂತಶಯನ ಮೂರ್ತಿ ಮುಂತಾದ ಹೆಸರುಗಳಿಂದ ಪೂಜಿಸುತ್ತಾರೆ. ಪುರಾಣಗಳು ತಿಳಿಸುವಂತೆ ವಿಷ್ಣುವಿನ ಪೂರ್ಣರೂಪದ ಶಕ್ತಿಯು ಅನಂತಶಯನ ರೂಪದಲ್ಲಿ ಶಾಶ್ವತವಾಗಿರುತ್ತದೆ ಎಂದು ತಿಳಿಸಿದೆ. ಪರಮಶ್ರೇಷ್ಠರೂಪವಾದ ಈ ಸ್ವರೂಪದ ಬಿಂಬವನ್ನು ಪೂಜಿಸುವುದರಿಂದ ಪರಮಪದವನ್ನು ಪಡೆಯುವರೆಂಬ ನಂಬಿಕೆ ಇದೆ. ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ದಶಿಯಂದು ‘ಅನಂತಪದ್ಮನಾಭನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಅನಂತ ಪದ್ಮನಾಭ ದೇವರ ಸಾಂಕೇತಿಕವಾಗಿ ‘ಅನಂತಪದ್ಮನಾಭ ವ್ರತಾಚರಣೆಯಲ್ಲೂ ಗಂಗಾಯಮುನೆಯರನ್ನು ‘ಕಲಶ ರೂಪದಲ್ಲಿ ಪೂಜಿಸಲಾಗುತ್ತದೆ. ವಿಷ್ಣುವು ಪವಡಿಸಿದ್ದ ಅನಂತ ಅಥವಾ ಶೇಷನ ಸಂಕೇತವಾಗಿ ದರ್ಬೆಯಲ್ಲಿ ‘ಶೇಷನ ರೂಪವನ್ನು ಹೆಣೆದು ಆ ಕಲಶಗಳೊಂದಿಗೆ ಇಟ್ಟು ಪೂಜಿಸಲಾಗುತ್ತದೆ. ಈ ಹೆಣಿಗೆಯಲ್ಲೂ, ಅನಂತರ ‘ನಿಮಿತ್ತ ಕಟ್ಟಿಕೊಳ್ಳುವ ದಾರದಲ್ಲಿ ಹದಿನಾಲ್ಕು ಗಂಟುಗಳನ್ನು ಹಾಕಿದ್ದು, ಇದು ‘ಚತುರ್ದಶಿಯ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ. ಈ ಅನಂತಪದ್ಮನಾಭ ವ್ರತವನ್ನು, ಪೂಜೆಯನ್ನು ಮಾಡುವುದರಿಂದ ‘ಅನಂತಾನಂತ ಫಲಗಳು ದೊರೆಯುವುದೆಂದು ತಿಳಿಸಲಾಗಿದೆ. ಅನಂತನಾರಾಧನೆಯು ಕರ್ನಾಟಕದಲ್ಲಿ ಪ್ರಾಚೀನ ಕಾಲದಿಂದಲೂ ನಡೆದುಬಂದಿದ್ದು, ಈ ಪ್ರಬಂಧದಲ್ಲಿ ಕೆಲವು ಅನಂತಶಯನ ಶಿಲ್ಪಗಳನ್ನಾಧರಿಸಿ ವಿಷ್ಣುವಿನ ಈ ಸ್ವರೂಪದ ಆರಾಧನೆಯ ಬಗೆಗೆ ಬೆಳಕು ಚೆಲ್ಲಲು ಯತ್ನಿಸಲಾಗಿದೆ.
ವಿಷ್ಣುವು ಈ ಸ್ವರೂಪದಲ್ಲಿದ್ದಾಗ, ಅದರ ವಿಶೇಷತೆಯನ್ನು ಪುರಾಣಗಳು ಹೀಗೆ ತಿಳಿಸಿದೆ. (ಕಲ್ಪಾಂತ್ಯದಲ್ಲಿ ಜಗತ್ ಪ್ರಳಯವಾಗುವಾಗ ಜಗನ್ನಾಥನಾದ ವಿಷ್ಣುವು ಯೋಗನಿದ್ರೆಗೆ ಒಳಗಾಗುತ್ತಾನೆ) ಮಹಾಪ್ರಳಯದ ಕಾಲದಲ್ಲಿ ಕ್ಷೀರಸಾಗರದ ನಡುವೆ ಭೂಮಿಗೆ ಆಧಾರಭೂತವಾಗಿರುವ ಆದಿಶೇಷನನ್ನು ಪರ್ಯಂಕವಾಗಿಸಿಕೊಂಡು ಅದರ ಮೇಲೆ ಪವಡಿಸುತ್ತಾನೆ. ಆದಿಶೇಷನನ್ನು ‘ಅನಂತನೆಂದೂ ಕರೆಯುವರು. ಅನಂತನ ಮೇಲೆ ಶಯನಿಸಿದ ವಿಷ್ಣುವಿನ ರೂಪವು ‘ಅನಂತಶಯನ, ‘ಶೇಷಶಾಯಿಯೆಂದೂ ಸಾಗರದ ನಡುವೆ ನೆಲೆಸುವನಾದ್ದರಿಂದ ‘ಜಲಶಾಯಿ ಎಂದೂ ಕರೆಯುವರು. ಸಕಲ ಕಾರ‍್ಯಕಾರಣ, ಜಗದೀಶನಾದ ವಿಷ್ಣುವು ಯೋಗನಿದ್ರೆಗೆ ತೊಡಗಿದರೆ, ಇಡೀ ಬ್ರಹ್ಮಾಂಡವೇ ಶೂನ್ಯವಾಗುತ್ತದೆ. ಘೋರವಾದ ತಮಾಂಧಕಾರದಲ್ಲಿ ಮುಳುಗುತ್ತದೆ. ಸೂರ‍್ಯ ಚಂದ್ರರು, ಚೇತೋಹೀನರಾಗಿ, ಪ್ರಕೃತಿ ವಿಕೋಪಕ್ಕೆ ಒಳಗಾಗುತ್ತದೆ. ಸೃಷ್ಟಿಕ್ರಿಯೆ ಸ್ತಬ್ಧವಾಗಲು ಭೂಭಾರವು ಅಧಿಕವಾಗಿ ಭೂದೇವಿಯು ಸಂಕಟಕ್ಕೀಡಾಗುತ್ತಾಳೆ. ರಕ್ಕಸರ ಶಕ್ತಿ ಪ್ರತಾಪ ಹೆಚ್ಚಿ ಮೇರೆ ಮೀರುತ್ತದೆ. ಆಗ ಜಗತ್ತಿನ ರಕ್ಷಣೆಯ ಹೊಣೆ ಹೊತ್ತ ವಿಷ್ಣುವು ತಾನೇ ತಿಳಿಸಿರುವಂತೆ:
ಪರಿತ್ರಾಣಾಯ ಸಾಧೂನಾಂ ವಿನಾಶಯ ಚ ದುಷ್ಕೃತಾಂ
ಧರ್ಮ ಸಂಸ್ಥಾಪನಾರ್ಥಯಾ ಸಂಭವಾಮಿ ಯುಗೇ ಯುಗೇ||
ಎನ್ನುವಂತೆ ಮತ್ತೆ ಜಗತ್‌ಸೃಷ್ಟಿಗೆ ಆರಂಭವಾಗುತ್ತದೆ. ವಿಷ್ಣುವು ‘ಪದ್ಮನಾಭನೆನಿಸುತ್ತಾನೆ. ಅನಂತನ ಮೇಲೆ ಪವಡಿಸಿದ ಪದ್ಮನಾಭನು ‘ಅನಂತಪದ್ಮನಾಭನಾಗಿದ್ದಾನೆ. ಸರ್ವಸೃಷ್ಟಿಗೆ ಕಾರಣ ಲೋಕದ ರಕ್ಷಕನಾದ ವಿಷ್ಣುವನ್ನು ದೇವಾನುದೇವತೆಗಳು, ಮುನಿಗಳು, ಕಿನ್ನರರು, ಕಿಂಪುರುಷರಾದಿಯಾಗಿ ಸ್ತುತಿಸುತ್ತಾರೆ. ಹೀಗಾಗಿ ‘ಅನಂತಪದ್ಮನಾಭನ ಸ್ವರೂಪದಲ್ಲಿ ವಿಷ್ಣುವು ಕ್ಷೀರಸಾಗರದ ಮಧ್ಯದಲ್ಲಿ ಆದಿಶೇಷನ (ಅನಂತನ) ಶರೀರದ ಮೇಲೆ ನಿದ್ರಾವೃತನಾಗಿ ಯೋಗಿಯಂತೆ ಸ್ಥಿರಚಿತ್ತನಾಗಿ ಪವಡಿಸಿರುತ್ತಾನೆ. ತಪೋನಿರತನಂತೆ ಯೋಗನಿದ್ರೆಯಲ್ಲಿ ತಲ್ಲೀನನಾದ ವಿಷ್ಣುವನ್ನು ಸ್ತುತಿಸುತ್ತಿರುವಂತೆ ಶಿಲ್ಪಗಳಲ್ಲಿ ಚಿತ್ರಿಸಬೇಕೆಂದು ಶಾಸ್ತ್ರಗ್ರಂಥಗಳು ತಿಳಿಸಿವೆ.
[ಆಷಾಢದಿಂದ ಕಾರ್ತಿಕದವರೆಗಿನ ಮಾಸಗಳನ್ನು ಒಟ್ಟಾರೆ ಚಾತುರ್ಮಾಸವೆಂದು ಕರೆದಿದ್ದು ಈ ನಾಲ್ಕು ತಿಂಗಳ ಅವಧಿಯು ವೈಷ್ಣವರಿಗೆ ಪವಿತ್ರವೆನ್ನಿಸಿದೆ. ಆಷಾಢ ಶುದ್ಧ ಏಕಾದಶಿಯಿಂದ ವಿಷ್ಣುವು ‘ಯೋಗನಿದ್ರೆಗೆ ಹೋಗುವನಲ್ಲದೇ, ಕಾರ್ತೀಕ ಶುದ್ಧ ದ್ವಾದಶಿಯಂದು ಏಳುವನು. ಕೆಲವು ಗ್ರಂಥಗಳು, ಅವನು ಹುಣ್ಣಿಮೆಯಂದು ಮಲಗುವನೆಂದು ತಿಳಿಸಿವೆ. (೧೪೦ ಆ.ಗಿ.I. ಠಿ. ೧೧೨] ಅವನು ಏಳುವ ದ್ವಾದಶಿಯನ್ನು ಉತ್ಥಾನ ದ್ವಾದಶಿ ಎನ್ನುವರು. ದೇವರು ಮಲಗಿರುವುದರಿಂದ ಯಾವುದೇ ‘ನೈಮಿತ್ತಿಕ ‘ಕಾಮ್ಯಗಳನ್ನು ಈ ದಿನಗಳಲ್ಲಿ ಆಚರಿಸಬಾರದೆಂಬ ನಿಯಮವಿದೆ ಎಂದೂ ಹೇಳಲಾಗಿದೆ. (ಂSIಗಿ, ಠಿ. ೩೯೪) ಈ ೪ ತಿಂಗಳು ಮಳೆಗಾಲವಾಗಿದ್ದು ಯಾಗ ಯಜ್ಞಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಈ ನಂಬಿಕೆ ಮೂಡಿರಬೇಕು].
ವೈಖಾನಸ ಆಗಮ ಗ್ರಂಥವು ವಿಷ್ಣುವಿನ ಶಯನ ರೂಪದ ಮೂರ್ತಿಗಳಲ್ಲಿ ನಾಲ್ಕು ವಿಧದ ಮೂರ್ತಿಗಳನ್ನು ತಿಳಿಸಿದೆ. ಅವೆಂದರೆ: () ಯೋಗಶಯನಮೂರ್ತಿ, ೨) ಭೋಗಶಯನಮೂರ್ತಿ, ೩) ವೀರಶಯನಮೂರ್ತಿ ಮತ್ತು ೪) ಅಭಿಚಾರಿಕ ಶಯನಮೂರ್ತಿಗಳು ಈ ವಿಧದ ಶಿಲ್ಪಗಳನ್ನು ರಚಿಸುವಲ್ಲಿಯೂ ಶಿಲ್ಪ ಲಕ್ಷಣಗಳಿಗನುಗುಣವಾಗಿ ಅವುಗಳಲ್ಲಿ ಉತ್ತಮ ವರ್ಗದಶಿಲ್ಪ ಮಧ್ಯಮ ವರ್ಗದಶಿಲ್ಪ ಮತ್ತು ಅಧಮ ವರ್ಗದಶಿಲ್ಪವೆಂದು ಮೂರು ವಿಧಗಳನ್ನು ಗುರುತಿಸಲಾಗಿದೆ. ಆದರೆ ಎಲ್ಲೆಡೆ ಈ ಶಿಲ್ಪಶಾಸ್ತ್ರದ ಲಕ್ಷಣಗಳಿಗನುಗುಣವಾಗಿಯೇ ನಿರ‍್ಮಿಸಿರದೆ ಕೆಲವೆಡೆ ಅಲ್ಪಸ್ವಲ್ಪ ವ್ಯತ್ಯಾಸಗಳುಳ್ಳ ಶಿಲ್ಪಗಳನ್ನು ಕಾಣುತ್ತೇವೆ.
ಕರ್ನಾಟಕದಲ್ಲಿ ದೊರೆತಿರುವ ಅನಂತಶಯನ ಶಿಲ್ಪಗಳ ಅಧ್ಯಯನಕ್ಕೆ ತೊಡಗಿದಾಗ ಶಿಲ್ಪಶಾಸ್ತ್ರ ಗ್ರಂಥಗಳ ರಚನೆಗೆ ಮೊದಲೇ ಅಂದರೆ ಬಾದಾಮಿ ಚಾಲುಕ್ಯರ ಕಾಲದಿಂದ (ಸು. ೭ನೇ ಶತ) ಈ ರೂಪದ ಶಿಲ್ಪಗಳು ರಚನೆಯಾಗಿವೆ. ಈ ದಿಸೆಯಲ್ಲಿ ಗಮನಿಸಿದಾಗ ಸು. ೬-೭ನೇ ಶತಮಾನದ ಜನರು ವಿಶೇಷವಾಗಿ ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಜಗತ್ ಸೃಷ್ಠಿಯ ಕಾಲಚಕ್ರಕ್ಕೆ ಕಾರಣರಾಗಿದ್ದು ಬ್ರಹ್ಮನು ವಿಶ್ವವನ್ನು ಸೃಷ್ಠಿಸುವನು. ವಿಷ್ಣುವು ಅದರ ರಕ್ಷಕನಾದರೆ, ಮಹೇಶ್ವರನು ಸೃಷ್ಠಿಯ ಲಯಕರ್ತನಾಗಿದ್ದು, ಈ ಮೂವರಿಂದ ಜಗತ್ತಿನ ಸರ್ವ ವ್ಯವಹಾರಗಳು ಸಾಗುತ್ತಿವೆ ಎಂದು ಭಾವಿಸಿ ‘ತ್ರೈಪುರುಷರನ್ನು ಆರಾಧಿಸುತ್ತಿದ್ದರೆಂದು ತಿಳಿದುಬರುತ್ತದೆ. ಈ ಹಿನ್ನೆಲೆಯಲ್ಲೇ ಬಾದಾಮಿ ಚಾಲುಕ್ಯರ ಕಾಲ ಜಂಬುಕೇಶ್ವರದೇವ ತ್ರಿಕೂಟಾಚಲವಾಗಿ ಮೊದಲು ತ್ರೈಪುರುಷದ್ದಾಗಿದೆ. ಈ ದೇವಾಲಯದ ವಿತಾನದ ಶೇಷಶಾಯಿ ವಿಷ್ಣುವಿನ ಬಿಂಬವಿರುವುದನ್ನು ಗಮನಿಸಬಹುದು. ಕರ್ನಾಟಕದಾದ್ಯಂತ ಗಮನಿಸಿದರೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ರಂಗನಾಥ ಶಿಲ್ಪಗಳು ದೊರೆಯುತ್ತಿದ್ದು ನಾನಿಲ್ಲಿ ಪ್ರಮುಖವಾದ ಆರು ಶಿಲ್ಪಗಳನ್ನು ಆಧರಿಸಿ ಶಿಲ್ಪದ ವೈಶಿಷ್ಟ್ಯವನ್ನು ಗುರುತಿಸಲು ಯತ್ನಿಸಿದ್ದೇನೆ.
ಕ್ರಿ.ಶ.೮ನೇ ಶತಮಾನದಲ್ಲಿ ನಿರ್ಮಿಸಿರುವ ಐಹೊಳೆಯ ಕೊಂತಿ ಗುಂಡಿ ಸಮೂಹದ ಗುಡಿಯೊಂದರ ವಿತಾನದಲ್ಲಿ ಸುಂದರವಾದ ಅನಂತಶಯನ ಶಿಲ್ಪವಿದೆ. ಈ ಶಿಲ್ಪವನ್ನು ಗಮನಿಸಿದರೆ ಕ್ಷೀರಸಾಗರದ ನಡುವೆ ಆದಿಶೇಷನ ಮೇಲೆ ವಿಷ್ಣುವು ಪವಡಿಸಿದ್ದಾನೆ. ವಿತಾನಶಿಲ್ಪವಾದ ಈ ಶಿಲ್ಪ ವಿಷ್ಣುವಿನ ಶರೀರವು ಪೂರ್ಣವಾಗಿ ನಾಗಶಯನದ ಮೇಲೆ ಅಂಗಾತನಾಗಿ ಮಲಗಿದಂತಿದೆ. ವಿಷ್ಣುವಿನ ಶಿರವು ಅಲ್ಲಿನ ಮಕುಟವನ್ನು ಧರಿಸಿದ್ದು, ಶಿರದ ಹಿಂಭಾಗದಲ್ಲಿ ಸಪ್ತಫಣಿಗಳನ್ನು ಪ್ರಭಾವಳಿಯಂತೆ ಬಿಡಿಸಲಾಗಿದೆ. ಫಣಿ ಪ್ರಭಾವಳಿಯ ಪಕ್ಕದಲ್ಲಿ ಬಲಗಡೆ ಚಕ್ರ, ಎಡಗಡೆ ಶಂಖವನ್ನು ಬಿಡಿಸಿದೆ. ಚತುರ್ಭುಜಧಾರಿ ವಿಷ್ಣುವಿನ ಬಲಗೈಯು ಪಲ್ಲಂಗದ ಮೇಲೆ ವಿರಮಿಸಿದೆ. ಮತ್ತೊಂದಕ್ಕೆ ಲೋಲಹಸ್ತವಾಗಿ ಕೆಳ ಚಾಚಿದೆ. ವಿಷ್ಣುವಿನ ಮೇಲಿನ ಎಡಗೈ ತಲೆ ಆಸರೆಯಾಗಿದೆ. ಕೆಳ ಎಡಗೈ ಕಟೀಹಸ್ತದ ಕೆಳಚಾಚಿದೆ. ಮಲಗಿರುವ ವಿಷ್ಣುವಿನ ಕೊರಳಿನಲ್ಲಿ ಕಂಠಿಕೆ, ಪದಕದ ಹಾರವನ್ನು ಬಿಡಿಸಿದ್ದು, ದಪ್ಪದಾದ ಯಜ್ಞೋಪವೀತವನ್ನು ಬಿಡಿಸಿದೆ. ಕಾಲುಗಳು ಕರ್ತರಿ ಭಂಗಿಯಲ್ಲಿವೆ. ಸಪರಿವಾರವಿರುವ ವಿಷ್ಣುವಿನೊಂದಿಗೆ ಬಲಗಡೆ ಪಾದದ ಬಳಿ ಭೂದೇವಿಯ ಅಂಜಲಿಬದ್ಧಳಾಗಿದ್ದಾಳೆ. ಇವಳ ಮೇಲೆ ಶಿಶುವಿನಂತಿರುವ ಸನತ್ಕುಮಾರನ ಮೇಲೆ ಎಡಗೈಯನ್ನು ಪಲ್ಲಂಕದ ಮೇಲೆ ಇಲ್ಲಿನ ಲಕ್ಷ್ಮಿದೇವಿಯು ಇದ್ದಾರೆ. ಇವಳ ಮೇಲ್ಭಾಗದಲ್ಲಿ ತುಂಬುರರನ್ನು ಬಿಡಿಸಿದೆ. ಇದರಂತೆ ಎಡಭಾಗದಲ್ಲಿ ವಿಷ್ಣುವಿನ ತಲೆಯ ಪಕ್ಕದ ಕೈಮುಗಿದು ನಿಂತಿರುವ ಮಾರ್ಕಾಂಡೇಯ ಮುನಿ. ನಂತರ ಸನಕ, ನಂತರ ಚಾಮರಧಾರಿಣಿಯ ಶಿಲ್ಪ, ಎಡಗಡೆ ವಿಷ್ಣು ಪಾದಗಳ ಪಕ್ಕದಲ್ಲಿ ಮಧುಕೈಟಬರು, ಗದೆ, ಗುರಾಣಿಯನ್ನು ಹಿಡಿದು ಆಲೀಢಭಂಗಿಯಲ್ಲಿ ಉತ್ಸಾಹಭರಿತರಾಗಿರುವಂತೆ ಬಿಡಿಸಿವೆ. ಈ ಶಿಲ್ಪವು ಸುಮಾರು ೮ನೇ ಶತಮಾನದಲ್ಲಿ ನಿರ‍್ಮಿಸಿದ್ದ ಶಿಲ್ಪವಾಗಿದ್ದು ಈ ಸುಮಾರಿಗೆ ಪುರಾಣಗಳು ಪ್ರಚಲಿತವಿದ್ದು, ಅದರ ಪ್ರಭಾವದಿಂದ ನಿರ‍್ಮಿಸಿದ ಶಿಲ್ಪ ಇದಾಗಿದೆ. [ಒಂದು ಕೈಯಲ್ಲಿ ಗದೆ ಇದ್ದು ಆಯುಧ ಪುರುಷನಂತೆ ಬಿಡಿಸಿದೆ ಎಂದು ಎಸ್. ರಾಜಶೇಖರ್ ತಿಳಿಸಿದ್ದಾರೆ. ಆದರೆ ಇದು ಮಧುಕೈಟಭರ ಯುದ್ಧಕ್ಕೆ ತೊಡಗಿರುವಂತೆ ಬಿಡಿಸಿರುವ ಶಿಲ್ಪವಾಗಿದೆ.] ಇಂತಹದೇ ಮತ್ತೊಂದು ಸುಂದರವಾದ ಅನಂತಶಯನ ಶಿಲ್ಪವನ್ನು ಐಹೊಳೆಯ ಚಿಕ್ಕಗುಡಿಯ ವಿತಾನವೊಂದರಲ್ಲಿ ಕಾಣಬಹುದಾಗಿದೆ. ಉತ್ತಮ ವರ್ಗದ ಯೋಗಶಯಮೂರ್ತಿ.
ಬಾದಾಮಿಯ ಭೂತನಾಥ ದೇವಾಲಯದ ದಕ್ಷಿಣಕ್ಕಿರುವ ಬಂಡೆಯ ಮೇಲಿನ ಶಿಲ್ಪವೊಂದು ಗಮನಾರ್ಹವಾಗಿದೆ. ಈ ಶಿಲ್ಪವು ಕಲ್ಯಾಣ ಚಾಲುಕ್ಯರ ಶೈಲಿಯ ಶಿಲ್ಪವಾಗಿದ್ದು ಸುಮಾರು ೧೧ನೇ ಶತಮಾನ. ಈ ಶಿಲ್ಪದಲ್ಲಿ ಶಿಲ್ಪಿಯು ಉತ್ತಮ ವರ್ಗದ ಯೋಗಶಯನಮೂರ್ತಿಯ ಲಕ್ಷಣಗಳೆಲ್ಲವನ್ನೂ ಬಿಡಿಸಿದ್ದು, ಶಿಲ್ಪವು ಗಮನಾರ್ಹವಾಗಿದೆ. ಶಿಲ್ಪವನ್ನು ಸರ್ಪಶಯನದ ಮೇಲೆ ಪವಡಿಸಿರುವ ವಿಷ್ಣುವಿನ ಶಿರದ ಹಿಂದೆ ಸಪ್ತಫಣಾವಳಿಯನ್ನು ಬಿಡಿಸಿದೆ. ಫಣಾವಳಿಯಲ್ಲಿನ ಹಾವಿನ ಹೆಡೆಗಳು ಸ್ವಲ್ಪ ಮೇಲೆತ್ತಿರುವುದನ್ನು ಗಮನಿಸಿ. ಇದರಂತೆ, ವಿಷ್ಣುವಿನ ಶರೀರವು ಪೂರ್ಣವಾಗಿ ಪರ್ಯಂಕದ ಮೇಲೆ ಮಲಗಿರದೆ ಕಟಿವರೆಗೆ ಭಾಗ ಆಧರಿಸಿ ವಕ್ಷಸ್ಥಲದಿಂದ ಮೇಲ್ಭಾಗವು ಸ್ವಲ್ಪ ಮೇಲೆತ್ತಿದೆ. ಶಿರವು ಎತ್ತರವಾದ ಕಿರೀಟ ಮಕುಟ ಧರಿಸಿದ್ದ ಬಲಗೈಯೊಂದು ತಲೆಗೆ ಆಸರೆಯಾಗಿದೆ. ಮತ್ತೊಂದು ಬಲಗೈ ಸಂತಾನ ಮಂಜರಿಯನ್ನು ಹಿಡಿದಿದೆ. ವಿಷ್ಣುವು ಬಲಗಾಲನ್ನು ನೇರವಾಗಿ ಚಾಚಿದ್ದು ಪಾದವು ಲಕ್ಷ್ಮಿದೇವಿಯ ತೊಡೆ ಮೇಲಿದೆ. ಲಕ್ಷ್ಮಿ ಪಾದಸೇವೆಯಲ್ಲಿ ತೊಡಗಿದ್ದಾಳೆ. ಎಡಗಾಲು ವಕ್ರವಾಗಿ ಬಾಗಿದ್ದು ಪಲ್ಲಂಕದ ಮೇಲೆ ಭೂಪಾದವಾಗಿದೆ. ಎಡಗೈಯು ಲೋಲಹಸ್ತವಾಗಿ ತೊಡೆಯ ಮೆಲೆ ವಿರಮಿಸಿದೆ. ಪಾದದ ಬಳಿ ಮಾರ್ಕಂಡೇಯ ಮುನಿ ಅಂಜಲೀಬದ್ಧನಾಗಿದ್ದಾನೆ. ವಿಷ್ಣುವಿನ ನಾಭಿಯಿಂದ ಹೊರಟ ಪದ್ಮದಲ್ಲಿ ಚತುರ್ಮುಖ ಬ್ರಹ್ಮನನ್ನು ಬಿಡಿಸಿದೆಯಲ್ಲದೆ ಬ್ರಹ್ಮನೊಂದಿಗೆ ಈ ವಿಷ್ಣುವಿನ ದಶಾವತಾರದ ಶಿಲ್ಪಗಳನ್ನು ಬಿಡಿಸಲಾಗಿದೆ. ವಿಷ್ಣುವಿನ ಮತ್ತೊಂದು ಎಡಗೈಯಲ್ಲಿ ಕಮಲವನ್ನು ಧರಿಸಿದೆ. ಬಲಭಾಗದಲ್ಲಿ ಶಂಖ ಚಕ್ರಗಳಿದ್ದು ಪರ್ಯಂಕದ ಪದ್ಮ ಉದ್ದವಾಗಿ ಗದೆ ಬಿಡಿಸಿವೆ. ದಶಾವತಾರ ಶಿಲ್ಪಗಳಲ್ಲಿ ಮತ್ಸ, ಕೂರ್ಮಗಳನ್ನು ಪ್ರಾಣಿಗಳ ರೂಪದಲ್ಲಿ ವರಾಹ, ನರಸಿಂಹರನ್ನು ಮಾನವ ಅಥವಾ ಪ್ರಾಣಿ ಮುಖದಂತೆ ಬ್ರಹ್ಮನ ಎಡಭಾಗಕ್ಕಿರುವ ಶಿಲ್ಪಗಳು ಮಾನವಾಕಾರದಲ್ಲಿವೆ. ಬ್ರಹ್ಮನ ಪದ್ಮದ ದಂಟಿನ ಸುರುಳಿಯಲ್ಲಿ ಸನತ್ಕುಮಾರ ಗರುಡರ ಚಿಕಣಿ ಶಿಲ್ಪಗಳಾಗಿ ಬಿಡಿಸಿದೆ. ಇದು ಸುಮಾರು ೧೧ನೇ ಶತಮಾನದ ಶಿಲ್ಪವಾಗಿದೆ.
ಸುಮಾರು ಕ್ರಿ.ಶ.೧೨ನೇ ಶತಮಾನದ ಹೊತ್ತಿಗೆ ಕರ್ನಾಟಕದ ಹೊಯ್ಸಳನಾಡಿನಲ್ಲಿ ಶ್ರೀವೈಷ್ಣವರ ಗುರುಗಳಾದ ಶ್ರೀ ರಾಮಾನುಜಾಚಾರ‍್ಯರು ಪ್ರವೇಶಿಸಿದರು. ಮೊದಲು ಇವರು ‘ಶ್ರೀರಂಗಂನಲ್ಲಿ ನೆಲೆಸಿದ್ದು, ಶ್ರೀರಂಗನಾಥನ ಪರಮಭಕ್ತರಾಗಿದ್ದರು. ಇವರು ರಚಿಸಿದ ‘ಶ್ರೀರಂಗರಾಜಸ್ತವ ಪ್ರಸಿದ್ಧವಾದ ಜನಪ್ರಿಯವಾದ ಸ್ತೋತ್ರವಾಗಿದೆ. ಇವರ ಪ್ರಭಾವದಿಂದ ಹೊಯ್ಸಳನಾಡಿನಲ್ಲಿ ಕಾವೇರಿ ತೀರದಲ್ಲಿರುವ ಶ್ರೀರಂಗಪಟ್ಟಣ ಮತ್ತು ಶಿವನ ಸಮುದ್ರಗಳಲ್ಲಿ ಶ್ರೀರಂಗನಾಥ ದೇವಾಲಯಗಳು ನಿರ್ಮಾಣಗೊಂಡವು. ೧೨ನೇ ಶತಮಾನದಲ್ಲಿ ನಿರ‍್ಮಿಸಲಾದ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿಯ ಶಿಲ್ಪವು ಪುರಾಣ ಶಾಸ್ತ್ರಗ್ರಂಥಗಳು ತಿಳಿಸುವ ಲಕ್ಷಣಗಳಿಗಿಂತ ತೀರ ಭಿನ್ನವಾಗಿದೆ. ಕಾರಣ ಶ್ರೀ ರಾಮಾನುಜರ ವೈಷ್ಣವಪಂಥವು “ಸಕಲ ಜನರನ್ನು (ನಾರಾಯಣನ ಕಿಂಕರರನ್ನಾಗಿ ತಿರು ದಾಸರನ್ನಾಗಿಸಿ) ಶ್ರೀವೈಷ್ಣವ ಪಂಥಕ್ಕೆ ಸೇರದ ಭಕ್ತನು ಕೇವಲ ದೇವ ದರ್ಶನದಿಂದಲೊ, ದೇವಾಲಯ ಕೈಂಕರ‍್ಯಗಳನ್ನು ನಡೆಸುವುದರಿಂದ ಮುಕ್ತಿಗಳಿಸಲು ಸಾಧ್ಯವೆಂದು ಸಾರಿತು. ಶ್ರೀವೈಷ್ಣವರಾದ ಎಲ್ಲರಿಗೂ ಮುಕ್ತ ಪ್ರವೇಶ ನೀಡಿತು. ಈ ಧಾರ್ಮಿಕ ಹಿನ್ನೆಲೆಯ ಪ್ರಭಾವದಿಂದ ಶಿಲ್ಪಿಗಳ ರಚನೆಯಲ್ಲೂ ಬದಲಾವಣೆಗಳಾಗಿದ್ದು ಶ್ರೀರಂಗಪಟ್ಟಣದ ಶಿಲ್ಪವು ಕೇವಲ ರಂಗನಾಥನು ಪಂಚಫಣಾವಳಿಯುಳ್ಳ ಸರ್ಪ ಪರ್ಯಂಕರನು ಮೇಲೆ ಪವಡಿಸಿರುವಂತೆ ಬಿಡಿಸಿದೆ. ವಿಷ್ಣುವಿನ ದೇಹದ ಶಿರೋಭಾಗವು ಮಾತ್ರ ಸ್ವಲ್ಪ ಮೇಲೆತ್ತಿದ್ದು, ಬಲಗೈಯೊಂದು ತಲೆಗೆ ದಿಂಬಿನಂತೆ ಆಸರೆಯಾಗಿದೆ. ಸರ್ವಾಲಂಕಾರ ಭೂಷಿತನಾದ ವಿಷ್ಣುವಿನ ಪಾದದ ಬಳಿ ಲಕ್ಷ್ಮಿಯು ಪಾದಸೇವೆಯಲ್ಲಿ ತೊಡಗಿರುವಂತೆ ಇದೆ. ಸರ್ಪ ಪರ್ಯಂಕವು ೮ ಸುತ್ತಿನದೆಂಬುದು ಇಲ್ಲಿ ಗಮನಾರ್ಹ. ಅದರಂತೆ ವಿಷ್ಣುವಿನ ನಾಭಿಯಿಂದ ಉದ್ಭವಿಸಬೇಕಾದ ಬ್ರಹ್ಮನ ಶಿಲ್ಪವು ಇಲ್ಲಿಲ್ಲ. ಮತ್ತು ಈ ಶಿಲ್ಪದಲ್ಲಿ ವಿಷ್ಣುವಿನ ಪರಿವಾರವನ್ನು ಬಿಡಿಸಿಲ್ಲ.
ರಂಗಸ್ಥಳದ ರಂಗನಾಥ ದೇವಾಲಯದ ಶಿಲ್ಪವನ್ನು ಗಮನಿಸಿದರೆ, ಸಪ್ತಫಣಾವಳಿಯುಳ್ಳ ಆದಿಶೇಷನ ಮೇಲೆ ರಂಗನಾಥನು ಪವಡಿಸಿದ್ದಾನೆ. ಮೂರು ಸುತ್ತಿನ ಆವೃತ್ತಿಯುಳ್ಳ ಪರ್ಯಂಕದ ಮೇಲೆ ಮಲಗಿರುವ ವಿಷ್ಣುವಿನ ನೀಳಕಾಯವು ಕಂಠದವರೆಗೆ ಪವಡಿಸಿದ್ದು ಶಿರವನ್ನು ಮಾತ್ರ ಕೊಂಚ ಮೇಲೆತ್ತಿದೆ. ಕಾಲುಗಳು ಎರಡು ಸಮವಾಗಿವೆ. ಎಡಗೈ ಲಕ್ಷ್ಮಿ ಪಾದಸೇವೆಯಲ್ಲಿ ನಿರತಳಾಗಿರುವಂತೆ ಬಿಡಿಸಿದೆ. ಪಾದದ ಬಳಿ ಶ್ರೀದೇವಿ ಭೂದೇವಿಯರಿಬ್ಬರೂ ಇದ್ದಾರೆ. ದೇವರ ಹಿಂಭಾಗದ ಭಿತ್ತಿಯ ಪಟ್ಟಿಕೆಯಲ್ಲಿ ಸಪ್ತಋಷಿ, ಶಂಖ, ಚಕ್ರ, ಗದಾ, ಅಪ್ಸರೆಯರು, ಅಷ್ಟದಿಕ್ಪಾಲಕರು ಮುಂತಾದವರ ಉಬ್ಬುಶಿಲ್ಪಗಳಿವೆ. ಈ ಶಿಲ್ಪದ ಲಕ್ಷಣಗಳನ್ನು ಗಮನಿಸಿದಾಗ ದೇವಾಲಯದ ನಿರ‍್ಮಾಣದ ಕಾಲ ಖಚಿತವಿರದೆ ಮತ್ತು ಶಿಲ್ಪವನ್ನು ವಿಜಯನಗರ ಕಾಲದ್ದೆಂದು ಹೇಳಬಹುದಾಗಿದೆ. ಸಾಮಾನ್ಯವಾಗಿ ವಿಜಯನಗರ ಕಾಲದ ರಂಗನಾಥ ಶಿಲ್ಪಗಳಿಗಿಂತ ಸ್ವಲ್ಪ ಹಿಂದಿನ ಕಾಲ ಶಿಲ್ಪದಂತಿದೆ.
ಹಳೇಬಿಡಿನ ರಂಗನಾಥ ದೇವಾಲಯದ ಗರ್ಭಗೃಹದ ಶಿಲ್ಪದಲ್ಲಿ ಸಪ್ತಫಣಾವಳಿಯುಳ್ಳ ಪಯಂಕದ ಮೇಲೆ ವಿಷ್ಣುವು ಮಲಗಿದ್ದಾನೆ. ವಿಷ್ಣುವಿನ ಪಾದದ ಬಳಿ ಲಕ್ಷ್ಮಿ ಕುಳಿತಿದ್ದರೆ ಭೂದೇವಿಯು ಶಿರದ ಬಳಿ ಇದ್ದಾಳೆ. ವಿಷ್ಣುವಿನ ಎಡಗೈಯೊಂದು ಕಟಿಹಸ್ತವಾಗಿವೆ. ಬಲಗೈ ತಲೆಗೆ ಆಸರೆಯಾಗಿದೆ. ಇಲ್ಲಿ ಆಯುಧಗಳನ್ನು ಬಿಡಿಸಿಲ್ಲ. ಶಿರದ ಬಳಿ ಮಾರ್ಕಾಂಡೇಯನ ಚಿಕ್ಕ ಬಿಂಬವಿದೆ. ವಿಷ್ಣುವಿಗೆ ಕಮಾನಿನಂಥ ಪ್ರಭಾವಳಿ ರಚಿಸಿ ಇಲ್ಲಿ ದಶಾವತಾರ ಶಿಲ್ಪಗಳಿವೆ. ವಿಷ್ಣುವಿನ ಪಾದದ ಬಳಿ ಗರುಡನು ಅಂಜಲೀ ಬದ್ಧನಾಗಿದ್ದಾನೆ. ಇದು ರೂಪಮಂಡಣದಲ್ಲಿ ತಿಳಿಸಿರುವ ಲಕ್ಷಣಗಳಿಗೆ ಅನ್ವಯಿಸಿ ಕೆತ್ತಿರುವ ಶಿಲ್ಪವಾಗಿದೆ. ಇಂಥ ಸುಂದರವಾದ ಶಿಲ್ಪವೊಂದನ್ನು ಬೆಂಗಳೂರಿನ ರಂಗನಾಥಸ್ವಾಮಿ ಗುಡಿಯಲ್ಲಿ ಕಾಣಬಹುದು.
ವಿಜಯನಗರ ಕಾಲದ ರಂಗನಾಥನ ಶಿಲ್ಪಗಳಿಗೆ ಕಾರ್ಕಳ ಅನಂತಪದ್ಮನಾಭ ದೇವಾಲಯದ ಶಿಲ್ಪವನ್ನು ಗಮನಿಸಬಹುದು. ಇಲ್ಲಿ ಮೂರು ಸುತ್ತಿನ ಸಪ್ತ ಫಣಾವಳಿಯ ಆದಿಶೇಷನ ಮೇಲೆ ವಿಷ್ಣುವು ಪವಡಿಸಿದ್ದಾನೆ. ವಿಷ್ಣುವಿನ ದೇಹವು ಕಟಿಯವರೆಗೆ ಪರ್ಯಂಕಧಾರವಾಗಿ ವಕ್ಷಸ್ಥಲದಿಂದ ಮೇಲಕ್ಕೆ ಎತ್ತಿದಂತಿದೆ. ಶಿರವು ಸಾಕಷ್ಟು ಮೇಲೆತ್ತಿದೆ. ಚತುರ್ಭುಜನಾದ ವಿಷ್ಣುವಿನ ಬಲಗೈ ಶಂಖವನ್ನು, ಎಡಗೈ ಚಕ್ರವನ್ನು ಧರಿಸಿದ್ದು, ಮುಂದಿನ ಬಲಗೈ ತಲೆಗೆ ಆಸರೆಯಾಗಿದೆ. ಮುಂದಿನ ಎಡಗೈ ಜುರುವಿನ ಮೇಲೆ ವಿರಮಿಸಿದೆ. ನಾಭಿಯಿಂದ ಅರಳಿದ ಪದ್ಮದ ಮೇಲೆ ಬ್ರಹ್ಮನು ಅಂಜಲಿಬದ್ಧನಾಗಿ ಕುಳಿತಿದ್ದಾನೆ. ಪಾದದ ಬಳಿ ಶ್ರೀದೇವಿ ಭೂದೇವಿಯರಿಬ್ಬರನ್ನು ಬಿಡಿಸಿ ಲಕ್ಷ್ಮಿಯು ಪಾದವನ್ನೊತ್ತು ತ್ತಿದ್ದಾಳೆ. ಶಿಲ್ಪದ ಅಂಗಸೌಷ್ಠವ ಆಭರಣದ ವಿನ್ಯಾಸಗಳು ಸರ್ಪದ ಪ್ರಭಾವಳಿಯ ವಿನ್ಯಾಸ ಮುಂತಾದವು ಶಿಲ್ಪವನ್ನು ವಿಜಯನಗರ ಕಾಲದ್ದೆಂದು ಸೂಚಿಸುತ್ತಿವೆ. ಇದು ಸುಮಾರು ೧೫ನೇ ಶತಮಾನದ ಶಿಲ್ಪಗಳಾಗಿದ್ದು, ಈ ಶಿಲ್ಪಗಳನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಕರ್ನಾಟಕದ್ದಲ್ಲವಾದರೂ ಶ್ರೀರಂಗದ ಶ್ರೀರಂಗನಾಥನ ಶಿಲ್ಪವನ್ನು ಗಮನಿಸಲೇ ಬೇಕಾಗುತ್ತದೆ. ಈ ರಂಗನಾಥನ ಶಿಲ್ಪವು ಪಂಚಫಣಾವಳಿ ಮೂರು ಸುತ್ತಿನ ಪರ್ಯಂಕದ ಮೇಲೆ ವಿಷ್ಣುವು ಪವಡಿಸಿರುವಂತೆ ದ್ವಿಭುಜನಾದ ವಿಷ್ಣುವಿನ ಬಲಗೈ ಅಭಯ ಮುದ್ರೆಯಲ್ಲಿದ್ದು ತಲೆಗೆ ಆಸರೆಯಾದರೆ ಎಡಗೈ ಸಮಾನಾಂತರವಾಗಿ ಚಾಚಿದೆ. ಪದ್ಮಪೀಠದಲ್ಲಿರುವ ಪಾದದ ಬಳಿ ಯಾವ ಶಿಲ್ಪವೂ ಇಲ್ಲ. ಸಪರಿವಾರವಿರದ ಈ ಶಿಲ್ಪವು ಅಭಿಚಾರಿಕಾ ವರ್ಗದ ಶಿಲ್ಪವಾಗಿದ್ದು ಮುಕ್ತರಾಗಿ ಸಕಲ ಜನರಿಂದ ಮುಕ್ತ ರೀತಿಯ ಪೂಜಾರಾಧನೆಗೆ ಒಳಪಟ್ಟ ಶಿಲ್ಪವಾಗಿದೆ.
ಇತ್ತೀಚಿಗೆ ಎಲ್ಲರ ಗಮನ ಸೆಳೆದಿರುವ ೧೮ ಉದ್ದದ ತಿರುವನಂತಪುರದ ಅನಂತಶಯನ ಶಿಲ್ಪವು ಇದರಂತೆ ರಚಿಸಲಾದ ಶಿಲ್ಪವಾಗಿದ್ದು, ಇದರ ನಾಭಿಯಿಂದರಳಿದ ಪದ್ಮದಲ್ಲಿ ಆಸೀನ ಬ್ರಹ್ಮನನ್ನು ಬಿಡಿಸಲಾಗಿದೆ. ಪರಿವಾರ ರಹಿತವಾದ ಈ ಶಿಲ್ಪವು ಶ್ರೀರಂಗದ ಶಿಲ್ಪದಂತೆ ರಚಿತವಾಗಿರುವ ೧೮ನೇ ಶತಮಾನದ ಶಿಲ್ಪವಾಗಿವೆ.
ಶಿಲ್ಪಶಾಸ್ತ್ರ ಗ್ರಂಥಗಳಿಗೆ ಅನುಗುಣವಾಗಿ ಚಿತ್ರಿಸಲಾಗಿರುವ ವರ್ಣಚಿತ್ರವೊಂದರ ಛಾಯಾಚಿತ್ರ ರಂಗನಾಥ ಶಿಲ್ಪದ ವೈಶಿಷ್ಟ್ಯವನ್ನು ಸ್ಪಷ್ಟಪಡಿಸಿದೆ. ಒಟ್ಟಿನಲ್ಲಿ ಈ ಅಧ್ಯಯನದಿಂದ ತಿಳಿದು ಬರುವ ಅಂಶಗಳೆಂದರೆ :
೧.       ಈ ಸ್ವರೂಪವೊಂದು ‘ಸಮನ್ವಯ ಶಿಲ್ಪವಾಗಿದ್ದು, ತ್ರಿಮೂರ್ತಿಗಳೆಲ್ಲರನ್ನೂ ಒಟ್ಟಾಗಿ ಪೂಜಿಸುವುದರಿಂದ ಮೋಕ್ಷಕಾರಕವಾದ ಈ ಶಿಲ್ಪದ ಆರಾಧನೆ ಅತ್ಯಂತ ಶ್ರೇಷ್ಠವೆನ್ನಿಸಿದೆ.
೨.       ಶ್ರೀವೈಷ್ಣವ ಧರ್ಮದ ಪ್ರಭಾವದಿಂದ ಈ ಆರಾಧನೆ ಹೆಚ್ಚು ಪ್ರಚಲಿತವಾಗಿರುವುದನ್ನು ಗಮನಿಸಬಹುದು.
೩.       ಇಂದಿಗೂ ವೆಂಕಟೇಶ್ವರ ದೇವಾಲಯದ ಆವರಣದಲ್ಲಿ ‘ಗೋವಿಂದರಾಜನೆಂಬ ಹೆಸರಿನಲ್ಲಿ ಸುಂದರವಾದ ರಂಗನಾಥಶಿಲ್ಪಗಳು ಮೂಡಿಬರುತ್ತವೆ. ಬೆಂಗಳೂರಿನ ರಾಜಾಜಿನಗರದ ವೆಂಕಟೇಶ್ವರ ದೇವಾಲಯದ ಆವರಣದಲ್ಲಿ ೧೪ ಉದ್ದದ ಭವ್ಯವಾದ ರಂಗನಾಥನ ಶಿಲ್ಪ ಗಮನಾರ್ಹವಾದುದಾಗಿದೆ.




No comments:

Post a Comment