Saturday, March 23, 2013

ಬಾಸ್ಲಾಪುರದ ನವಶೋಧಿತ ಶಾಸನ



ಗದಗ ಜಿಲ್ಲೆ ರೋಣ ತಾಲ್ಲೂಕಿನ ಬಾಸ್ಲಾಪುರದ ನವಶೋಧಿತ ಶಾಸನ
ಡಾ. ಎಸ್.ಕೆ. ಮೇಲಕಾರ                                           ಡಾ. ಆರ್.ಎಂ. ಷಡಕ್ಷರಯ್ಯ
ಮ್ಯೂಜಿಯಂ ಮೇಲ್ವಿಚಾರಕರು,                                                                 ಇತಿಹಾಸ ಮತ್ತು ಪುರಾತತ್ವ ಪ್ರಾಧ್ಯಾಪಕರು,
ಕನ್ನಡ ಸಂಶೋಧನ ಸಂಸ್ಥೆ,                                                                                                                   ನಿರ್ದೇಶಕ (ಪ್ರ), ಕನ್ನಡ ಸಂಶೋಧನ ಸಂಸ್ಥೆ,
 ಕರ್ನಾಟಕ ವಿಶ್ವವಿದ್ಯಾಲಯ,    ಧಾರವಾಡ-೫೮೦೦೦೩                              ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ-೫೮೦೦೦೩                                                              
                                            
ದಗ ಜಿಲ್ಲೆಯ ರೋಣ ತಾಲ್ಲೂಕಿನ ಒಂದು ಸಣ್ಣ ಹಳ್ಳಿ ಬಾಸ್ಲಾಪುರ ಗ್ರಾಮ. ಇದು ನವಲಗುಂದದಿಂದ ರೋಣಕ್ಕೆ ಹೋಗುವ ಮಾರ್ಗದಲ್ಲಿ ರೋಣದಿಂದ ೭ ಕಿ.ಮೀ. ದೂರದಲ್ಲಿರುತ್ತದೆ.ಗ್ರಾಮದಲ್ಲಿ ಪುರಾತನ ಕಾಲದಿಂದ ಹಿಡಿದು ಆಧುನಿಕ ಕಾಲದವರೆಗಿನ ಇತಿಹಾಸದ ಕುರುಹುಗಳು ಇಲ್ಲಿ ಕಂಡುಬರುತ್ತವೆ. ಪ್ರಾಚೀನ ಕಾಲದ ಪುಲಗೇರಿ ೩೦೦ಕ್ಕೆ ಸೇರಿದ ರೋಣ ತಾಲ್ಲೂಕು ಈ ಗ್ರಾಮದ ಹತ್ತಿರದಲ್ಲಿಯೇ ಇದ್ದು ಅಲ್ಲಿ ರಾಷ್ಟ್ರಕೂಟ, ಕಲ್ಯಾಣದ ಚಾಳುಕ್ಯರು, ಕಲಚೂರಿಗಳ ಕಾಲಕ್ಕೆ ಸೇರಿದ ಅಪಾರ ಶಾಸನ, ದೇವಾಲಯಗಳು ಮೂರ್ತಿ ಶಿಲ್ಪಗಳು ಬಸದಿಗಳು, ಕೆರೆ, ಬಾವಿಗಳು ಈ ಪ್ರದೇಶದ ಇತಿಹಾಸವನ್ನು ಸ್ಪಷ್ಟಪಡಿಸುತ್ತವೆ.
ಬಾಸ್ಲಾಪುರ ಗ್ರಾಮದ ವೀರಭದ್ರ ದೇವಾಲಯದ ಈರಣ್ಣನ ಮೂರ್ತಿಯ ಹಿಂದೆ ಬರೆದ ಶಾಸನ ಇತ್ತೀಚಿಗೆ ಶೋಧಿಸಿದ್ದು, ಮೊದಲು ಇದು ಶಾಸನ ಕಲ್ಲಾಗಿದ್ದು, ನಂತರ ಕಾಲದಲ್ಲಿ ಈರಣ್ಣ ದೇವರ ಮೂರ್ತಿಯನ್ನು ಮಾಡಿಸಿ ಕಳೆದ ಎರಡು ನೂರು ವರ್ಷಗಳ ಹಿಂದೆ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿರುತ್ತಾರೆ. ಅದರ ಎದುರಿಗೆಯೇ ಈಗ ಮತ್ತೊಂದು ಹೊಸ ಗುಡಿ ಕಟ್ಟಿಸುತ್ತಿದ್ದಾರೆ. ಆ ದೇವರಭಕ್ತರೊಬ್ಬರು ಮೂರ್ತಿಯ ಹಿಂದೆ ಶಾಸನದ ಅಕ್ಷರಗಳಿರುವ ಸುಳಿವು ನಮಗೆ ನೀಡಿದರು. ಅವರ ವಿನಂತಿ ಮೇರೆಗೆ ಹೋಗಿ ನೋಡಲಾಗಿ ಶಾಸನ ಇರುವುದು ನಮಗೆ ಸ್ಪಷ್ಟವಾಯಿತು. ಆಗ ಸ್ಥಳೀಯ ಜನರ ಸಹಕಾರದಿಂದ ಮೂರ್ತಿಯ ಹಿಂದೆ ಕಟ್ಟಿಸಲ್ಪಟ್ಟ ಗದ್ದುಗೆಯನ್ನು ಕೂಲಿ ಆಳುಗಳಿಂದ ಒಡೆಯಿಸಿ ಸಿಮೆಂಟಿನಿಂದ ಮೆತ್ತಿದ ಪಾಲಿಷ್ಯನ್ನು ಸ್ವಚ್ಛಗೊಳಿಸಿ ನಂತರ ಶಾಸನ ಪ್ರತಿ ಹಾಗೂ ಛಾಯಾಚಿತ್ರ ತೆಗೆದುಕೊಳ್ಳಲಾಯಿತು.
ಈ ಶಾಸನ ಕಲ್ಲು ನಾಲ್ಕು ಪೂಟು ಎತ್ತರವಿದ್ದು ಎರಡುವರೆ ಪುಟ ಅಗಲ, ನಾಲ್ಕು ಇಂಚು ದಪ್ಪವಾಗಿರುತ್ತದೆ. ಕರಿಕಲ್ಲಿನಲ್ಲಿ ಬರೆಯಲ್ಪಟ್ಟ ಈ ಶಾಸನದ ಶಿರೋಭಾಗದಲ್ಲಿ ಸೂರ್ಯಚಂದ್ರ ಮಧ್ಯ ಲಿಂಗ ಹಾಗೂ ಕರು-ಆಕಳ ಹಾಲನ್ನು ಕುಡಿಯುತ್ತಿರುವ ಉಬ್ಬು ಚಿತ್ರಗಳನ್ನು ಕೆತ್ತಲಾಗಿರುತ್ತದೆ. ಕೆಳಗಡೆ ೧೫ ಸಾಲುಗಳುಳ್ಳ ಶಾಸನ ಬರೆಯಲಾಗಿದ್ದು, ಅಕ್ಷರಗಳನ್ನು ದುಂಡಾಗಿ ಆಳವಾಗಿ ಕೊರೆಯಲಾಗಿದೆ. ಲಿಪಿಯ ಬೆಳವಣಿಗೆಯ ದೃಷ್ಟಿಯಿಂದ ಇದು ಕ್ರಿ.ಶ.೧೨ನೆಯ ಶತಮಾನದ ಆದಿಭಾಗವೆಂದು ಗುರ್ತಿಸಲಾಗಿರುತ್ತದೆ.
ಶಾಸನದ ಪಾಠ ಹೀಗಿರುತ್ತದೆ.
೧        ಸ್ವಸ್ತಿ ಶ್ರೀ . ಖರಾ [ಸ್ವಂಮ್] ಸಂವತ್ಸರದ ಪ್ರವರ್ಧಮಾನೆ
೨        ರೇ ಪುಸ್ಸ್ಯಾನಕ್ಷತ್ರದೊಳು ಬ್ರಹಸ್ಪತಿವಾರದ
೩        ನ್ದು . . . ತ್ರೈವೇಶ್ವರ (ತ್ರೈಲೋಕೇಶ್ವರ) (ಯ) . .
೪        . . ಇದ ವಸಾ . . . . . ತಿಲೊ . . ನಿ
೫        ಶ್ರೀಮತು . . ಪ್ಪಾಯ್ಯಾರ್ತಿ . . . . . . ಹಿರ್ಗು . . .
೬        ನೈವೇದ್ಯಕ್ಕೆ . . ಮನ್ನೀಯಮ್ ಶ್ರೀ ಇಂದ್ರರೆಬಿಟ್ಟಕ್ಕೇ
೭        ಯ್ಯ ಮತ್ತರೈ ಐವತ್ತು ವಿದ್ಯಾಧಾನಕ್ಕೆ ಬಿಟ್ಟಕ್ಕೇಯ್ಯಮತ್ತ
೮        ರೈ ವತ್ತು ೧೧/- ವೈರ(ದ) . ನ . ಗೊ ನವಿಜಪ್ಪಾರಣೊಯ್ದು
೯        ವೆಕ್ಕೆಂಟಪ್ಪಾ . . . ನೆನುರಾನ . . . ಇ . . . ಜಮಾ
೧೦     ಹತ್ತನೇ ಸಾಲಿನಲ್ಲಿ ಅಕ್ಷರಗಳು ಕಾಣದಂತೆ ಹಾಳಾಗಿವೆ.
೧೧     ಇಂತೀ ಧರ್ಮಮಂ . . . . ರಕ್ಷಿಸದವರು ವಾರಣಾಸಿಯ ಲೊಂದು ಕೋಟಿ ಕವಿಲೆ ಯಮನ ನಿಬರು ವೇದ ಪಾರಗರಪ್ಪ ಬ್ರಾಹ್ಮಣರ್ಗ್ಗೆ ದಾನಂಗೊಟ್ಟ . . . . . . .  . . . . . . ಕವಿ ಲೆಯಮನಯಮ ಬ್ರಾಹ್ಮಣರು ಮನಳಿದ ದೋಷ ಮನೆಯ್ಯವರು . . ಮಂಗಳ ಮಹಾಶ್ರೀ
ಶಾಸನದ ಮುಂದಿನ ಭಾಗದಲ್ಲಿ ಈರಣ್ಣನ ಮೂರ್ತಿ ಮಾಡಿದ್ದರಿಂದ ಬಹಳಷ್ಟು ಅಕ್ಷರಗಳು ಹಾಳಾಗಿದ್ದರೆ ಇನ್ನು ಕೆಲವು ಅಕ್ಷರಗಳು ಸಿಮೆಂಟ ಮೆತ್ತನೆಯಿಂದಾಗಿ ಅಸ್ಪಷ್ಟವಾಗಿವೆ. ಹೀಗಾಗಿ ಶಾಸನದಲ್ಲಿ ಉಲ್ಲೇಖಿಸಲ್ಪಟ್ಟ ಅರಸನ ಹೆಸರು ಮತ್ತು ಪ್ರಶಸ್ತಿಯ ಕೆಲ ಭಾಗವು ಮತ್ತು ಕಾಲಮಾನದ ಕೆಲವು ವಿವರಗಳಿಲ್ಲ. ಶಾಸನೋಕ್ತ ಬೃಹಸ್ಪತಿವಾರ ಮತ್ತು ಪುಷ್ಯ ತಿಂಗಳ ಉಲ್ಲೇಖವಿದೆ. ಶಾಸನದ ಮೇಲೆ ಕೆತ್ತಲಾದ ಶಿವಲಿಂಗ, ಆಕಳು ಮತ್ತು ಕರು ಹಾಗೂ ಕುಳಿತ ನಂದಿಯ ಉಬ್ಬು ಚಿತ್ರಗಳ ಕೆಳಗಡೆ ವೃತ್ತಾಕಾರದ ಶಿವಲಿಂಗವನ್ನು ಕೆತ್ತಲಾಗಿದೆ. ಅದರ ಬದಿಗಳಲ್ಲಿ ಆಯತಾಕಾರದ ರಂಧ್ರಗಳಿವೆ. ಕೊನೆಯಲ್ಲಿ ಶಾಪಾಶಯದ ಶ್ಲೋಕವಿರುವುದು. ಈ ಶಾಸನದ ಅಕ್ಷರ ಮತ್ತು ಕಲ್ಲಿನ ಬಳಕೆ ಇಲ್ಲಿ ದೊರೆತಿರುವ ಇನ್ನಿತರ ಪ್ರಾಚ್ಯಾವಶೇಷಗಳ ಆಧಾರದ ಮೇಲೆ ಇದರ ಕಾಲಮಾನ ಕ್ರಿ.ಶ.೧೧-೧೨ನೇ ಶತಮಾನವೆಂದು ನಿರ್ಧರಿಸಲಾಗಿದೆ.
ಬಾಸ್ಲಾಪುರ ಗ್ರಾಮದ ವೀರಭದ್ರ ದೇವಾಲಯದ ಪಕ್ಕದಲ್ಲಿ ೧೨ನೇ ಶತಮಾನದ ನಾಗಶಿಲ್ಪ ಮತ್ತು ಲಿಂಗಮುದ್ರೆ ಕಲ್ಲುಗಳು ಇರುತ್ತವೆ. ಗುಡಿಯ ಮುಂದಿನ ಭಾಗದ ಗೋಡೆಗೆ ತಾಗಿಸಿ ಇಡಲ್ಪಟ್ಟ ಹನುಮಾನ ಮೂರ್ತಿ ೬ ಫೂಟು ಎತ್ತರವಾಗಿದ್ದು, ಅದು ವಿಜಯನಗರ ಕಾಲದ್ದಾಗಿದೆ. ಹಾಗೆಯೇ ೧೭-೧೮ನೇ ಶತಮಾನದ್ದೆನ್ನಲಾದ ದ್ಯಾಮವ್ವನ ಗುಡಿಯ ಮರದ ಬಾಗಿಲು ಬಿದ್ದುಕೊಂಡಿರುತ್ತದೆ. ಈ ಪ್ರಾಚ್ಯವಸ್ತುಗಳಿರುವ ಸ್ಥಳದಿಂದ ೨೫ ಮೀಟರ್ ದೂರದಲ್ಲಿ ೧೮ನೇ ಶತಮಾನದ ಭಾವಿ ಕೂಡ ಇದ್ದಿರುತ್ತದೆ.
ಇವೆಲ್ಲ ಪ್ರಾಚ್ಯಾವಶೇಷಗಳ ಆಧಾರದಿಂದ ಬಾಸ್ಲಾಪುರ ಗ್ರಾಮದ ಪ್ರಾಚೀನತೆ ಹಾಗೂ ಇತಿಹಾಸವನ್ನು ಗುರುತಿಸುವಲ್ಲಿ ಇತಿಹಾಸಕಾರರಿಗೆ ಸಹಾಯಕಾರಿಯಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

[ಈ ಶಾಸನ ಓದಲು ಸಹಾಯ ಮಾಡಿದ ಬಾಸ್ಲಾಪುರ ಗ್ರಾಮದ ಈರಣ್ಣಾ ದೇವರ ಭಕ್ತರಾದ ಶ್ರೀಮತಿ ಸರಸ್ವತಿ ಮತ್ತು ಊರಿನ ಪ್ರಮುಖರಾದ ಶ್ರೀ ಫಾಲಾಕ್ಷಯ್ಯ ಹಿರೇಮಠ, ಶ್ರೀ ವೀರಭದ್ರಪ್ಪ ಹೂಗಾರ, ಶ್ರೀ ರುದ್ರಗೌಡ ಇವರಿಗೆ ಕೃತಜ್ಞತೆಗಳು ಸಲ್ಲಿಸದೆ ಇರಲಾರೆ. ಕ್ಷೇತ್ರಕಾರ್ಯದಲ್ಲಿ ಸಹಾಯ ಮಾಡಿದ ಧರ್ಮಪತ್ನಿ ರಮಾ. ಜಿ. ಇವರಿಗೂ ವಂದನೆಗಳು.]

ಆಧಾರಸೂಚಿ
೧.         ಸೂರ್ಯನಾಥ. ಯು. ಕಾಮತ್, ೧೯೯೫ (ಸಂ), ಕರ್ನಾಟಕ ರಾಜ್ಯ ಗ್ಯಾಸೆಟಿಯರ್, ಧಾರವಾಡ ಜಿಲ್ಲೆ ಗ್ಯಾಸೆಟಿಯರ್, ಕರ್ನಾಟಕ ಸರಕಾರ ಬೆಂಗಳೂರು, ಪುಟ ೧೦೦೨-೦೩.
೨.         ಡಾ. ಜಯಮ್ಮ, ೨೦೧೧, ಧಾರವಾಡ ಜಿಲ್ಲೆಯ ಪುರಾತತ್ತ  ಅಧ್ಯಯನ, ಕರ್ನಾಟಕ ವಿಶ್ವವಿವದ್ಯಾಲಯ, ಧಾರವಾಡ.
೩.         ಡಾ. ಆರ್. ಗೋಪಾಲ (ಸಂ), ೨೦೦೮, ಧಾರವಾಡ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ತ , ಕರ್ನಾಟಕ ರಾಜ್ಯ ಸರಕಾರದ ಪುರಾತತ್ತ  ಇಲಾಖೆ, ಮೈಸೂರು.
೪.         ಇತಿಹಾಸ ದರ್ಶನ ಸಂಪುಟಗಳು, ಕರ್ನಾಟಕ ಇತಿಹಾಸ ಅಕಾಡೆಮಿ, ಬೆಂಗಳೂರು.


                 


No comments:

Post a Comment