Wednesday, December 19, 2012

ಕಮ್ಮಾರಗಟ್ಟೆಯ ಪರಿಸರದ ಪ್ರಾಚ್ಯಾವಶೇಷಗಳು



ಕೆ. ಸಿದ್ದಪ್ಪ
ಉಪನ್ಯಾಸಕರು
ಸರ್ಕಾರಿ ಪದವಿ ಪೂರ್ವ ಕಾಲೇಜು
ದಾವಣಗೆರೆ ಜಿಲ್ಲೆ-೫೭೭೨೧೭.



ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನಲ್ಲಿ ಒಂದು ಐತಿಹಾಸಿಕ ನೆಲೆಯಾಗಿರುವ ಕಮ್ಮಾರಗಟ್ಟೆಯು ಹೊನ್ನಾಳಿಯಿಂದ ಬಸವಾಪಟ್ಟಣಕ್ಕೆ ಹೋಗುವ ರಸ್ತೆಯಲ್ಲಿ ೭ ಕಿ.ಮೀ. ದೂರದಲ್ಲಿದೆ. ಕರ್ಮಹರ ಕ್ಷೇತ್ರವೆಂದು ಪ್ರಸಿದ್ದಿ ಪಡೆದಿರುವ ಕಮ್ಮಾರಗಟ್ಟೆಯು ತುಂಗಭದ್ರಾ ನದಿಯ ದಡದಲ್ಲಿದ್ದು, ಅನೇಕ ಪ್ರಾಚ್ಯಾವಶೇಷಗಳನ್ನು ತನ್ನ ಗರ್ಭದಲ್ಲಿ ಅಡಗಿಸಿಟ್ಟುಕೊಂಡು, ಒಂದು ಐತಿಹಾಸಿಕ ನೆಲೆಯೂ ಆಗಿದೆ.
ಹಿಂದೆ ಇಲ್ಲಿ ಬಹುಪಾಲು ಜನ ಕಮ್ಮಾರರು ವಾಸವಾಗಿದ್ದರೆಂದು, ಅವರು ಈ ನಾಡಿನ ಪಾಳೆಗಾರರಿಗೆ ಕತ್ತಿ, ಗುರಾಣಿ, ಭರ್ಜಿ, ಬಾಣ ಮುಂತಾದ ಯುದ್ದ ಸಾಮಗ್ರಿಗಳನ್ನು ತಯಾರಿಸಿ ಕೊಡುತ್ತಿದ್ದುದಾಗಿ ತಿಳಿಯುತ್ತದೆ. ಇದಕ್ಕೆ ಸಾಕ್ಷಿಯಾಗಿ ಪುರಾತನ ಕುಲುಮೆಯ ಅವಶೇಷಗಳನ್ನು ಕಾಣಬಹುದು. ಆದ್ದರಿಂದಲೇ ಕಮ್ಮಾರರ ಕೊಪ್ಪಲು, ಕಮ್ಮಾರಕಟ್ಟಿ, ಕಮ್ಮಾರಗಟ್ಟೆಯಾಗಿರುವುದಾಗಿ ಹೇಳಲಾಗುತ್ತಿದೆ.
ಈ ಗ್ರಾಮದ ಬಗ್ಗೆ ಅನೇಕ ದಂತಕಥೆಗಳಿರುತ್ತವೆ. ಒಂದು ಕಥೆ ಪ್ರಕಾರ - ಹಿಂದೆ ಪರುಶುರಾಮನು ತನ್ನ ತಾಯಿ ರೇಣುಕೆಯ ಶಿರ ಕಡಿದು ಭೂಮಂಡಲದ ಕ್ಷತ್ರಿಯರ ವಧೆಮಾಡಿ, ತನ್ನ ರಕ್ತಸಿಕ್ತವಾದ ಪರಶುವನ್ನು (ಕೊಡಲಿ) ಎಲ್ಲಿ ತೊಳೆದರೂ ಅದರ ರಕ್ತ ಕಲೆ ಹೋಗಿರಲಿಲ್ಲವಾದ್ದರಿಂದಾಗಿ ಅಲೆಯುತ್ತಾ ಬಂದ ಅವನು, ಇಲ್ಲಿನ ತುಂಗಭದ್ರಾ ನದಿಯಲ್ಲಿ ಆ ಕೊಡಲಿಯನ್ನು ತೊಳೆಯಲು ಅದಕ್ಕೆ ಹತ್ತಿದ್ದ ರಕ್ತ ಹೋಗಿ, ಆತನ ಕರ್ಮ ಹರಿದ ಕಾರಣ ಈ ಸ್ಥಳವು ಕರ್ಮಹರ ಕ್ಷೇತ್ರವೆಂದು ಹೆಸರಾಯಿತೆನ್ನುವುದು ಜನ-ಜನಿತವಾಗಿದೆ.
ಮತ್ತೊಂದು ಕಥಾನಕದಂತೆ ತ್ರೇತಾಯುಗದಲ್ಲಿ ಶ್ರೀರಾಮ, ಲಕ್ಷ್ಮಣ, ಸೀತೆಯರು ಹನುಮಂತನೊಂದಿಗೆ ತಿರುಗಾಡುತ್ತಾ ಇಲ್ಲಿಗೆ ಬಂದು ಹಲವು ದಿನ ನೆಲೆಸುತ್ತಾರೆ. ಆ ಸಂದರ್ಭದಲ್ಲಿ ಅಡುಗೆಗೆ ಬೇಕಾದ ಹುಣಸೇಹಣ್ಣನ್ನು ತರಲು ಸೀತಾಮಾತೆಯು ಆಂಜನೇಯನಿಗೆ ಹೇಳಲು, ಹಣ್ಣುತರುವ ಬದಲು ಇಡೀ ಮರವನ್ನೇ ಕಿತ್ತು ತರುತ್ತಾನೆ. ಸೀತಾದೇವಿ ಬೈದು ತನಗೆ ಬೇಕಾಗುವಷ್ಟು ಹಣ್ಣನ್ನು ಕಿತ್ತುಕೊಂಡು ಮರವನ್ನು ಎಸೆಯಲು ಹೇಳುತ್ತಾಳೆ, ಅಲ್ಲಿಂದಲೇ ಹುಣಸೇ ಮರವನ್ನು ಎಸೆದ ಫಲವಾಗಿ ಅದು ಬುಡಮೇಲಾಗಿ ಬಿದ್ದು ಅದು ಹಾಗೇ ಚಿಗುರಿ ಫಲ ಕೊಡುತ್ತಿರುವ ಮರವನ್ನು ಮರವನ್ನು ಇಂದಿಗೂ ಕಾಣಬಹುದಾಗಿದೆ.
೧೭-೧೭ನೇ ಶತಮಾನದ ಮಧ್ಯಕಾಲದಲ್ಲಿದ್ದ ಶರಣೆ, ಅಪರೂಪದ ಮಹಿಳಾ ದಾಸಸಾಹಿತಿ ಹೆಳವನಕಟ್ಟೆ ಗಿರಿಯಮ್ಮ ಈ ಪವಿತ್ರ ಕರ್ಮಹರಿದ ಕ್ಷೇತ್ರದಲ್ಲಿ ಜೀವ ಸಮಾಧಿಯಾಗಲು ಇಚ್ಚಿಸಿ, ನಾಗರಪಂಚಮಿಯಂದು ತುಂಗಭದ್ರಾ ನದಿಯಲ್ಲಿ ದೇಹತ್ಯಾಗ ಮಾಡಿದಳು ಎಂಬುದೇ ಕುತೂಹಲಕಾರಿ ಸಂಗತಿ. ಆ ಸಮಯದಲ್ಲಿ ಗಿರಿಯಮ್ಮನ ದೈವನಾಗಿದ್ದ ಆಂಜನೇಯ ದರ್ಶನ ಕೊಟ್ಟದ್ದರ ಕುರುಹಾಗಿ, ಆಂಜನೇಯನು ಹುಣಸೇಮರವನ್ನು ಕಿತ್ತು ಬುಡಮೇಲು ಹಾಕಿದನೆಂದು ಹೇಳಲಾಗುತ್ತದೆ. ನದಿ ತಟದಲ್ಲಿ ಈಗಲೂ ಮೇಲಿನ ಫೋಟೊದಲ್ಲಿರುವಂತೆ ವಿಚಿತ್ರಕಾರದ ಹುಣಸೇಮರವಿರುವುದನ್ನು ಕಾಣಬಹುದಾಗಿದೆ.
ಹೀಗೆ ಜನಪದ ಮಾತು ಹಾಗೂ ಕತೆಗಳನುಸಾರ ಈ ಗ್ರಾಮವು ಪ್ರಾಚೀನತೆಯ ಸೊಗಡನ್ನು ಹೊಂದಿದ್ದು, ಅದಕ್ಕೆ ಸಾಕ್ಷಿ ಎಂಬಂತೆ ಅನೇಕ ಪ್ರಾಚೀನ ಅವಶೇಷಗಳು ಇಲ್ಲಿ ಕಾಣಸಿಗುತ್ತವೆ. ಅವುಗಳನ್ನು ಸಂಕ್ಷೇಪವಾಗಿ ಅವಲೋಕಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
ಸಿದ್ದೇಶ್ವರ ದೇವಸ್ಥಾನ
ಕಮ್ಮಾರಗಟ್ಟೆಯ ದಕ್ಷಿಣ ದಿಕ್ಕಿಗೆ ತುಂಗಭದ್ರಾ ನದಿಯ ತಟದ ಸ್ವಲ್ಪ ದೂರದಲ್ಲಿ ಎತ್ತರವಾದ ದಿಣ್ಣೆಯೊಂದು ಇದ್ದು, ಅದು ಗಿಡಗಂಟಿಗಳು ಬೆಳೆದು ಮುಚ್ಚಿಹೋಗಿತ್ತು, ಅದರ ಅಡಿಯಲ್ಲಿ ದೇವಾಲಯವಿರುವುದು ತಿಳಿದಿರಲಿಲ್ಲ, ಇದು ನದಿಯ ಪ್ರವಾಹಕ್ಕೆ ಸಿಕ್ಕಿ ಮುಚ್ಚಿರಬೇಕು, ಅಥವಾ ಪರಕೀಯರ ದಾಳಿಯಿಂದ ರಕ್ಷಿಸಲು ಜನರೇ ಮಣ್ಣಿನಿಂದ ಮುಚ್ಚಿರಬಹುದು, ದಿನಗಳೆದಂತೆ ಮಳೆಯ ಸವೆತಕ್ಕೆ ದೇವಾಲಯದ ಮೇಲ್ಬಾಗ ಕಾಣಿಸಿಕೊಂಡಿತು. ದಿಬ್ಬದ ಅಡಿಯಲ್ಲಿ ದೇವಾಲಯ ಇರುವುದನ್ನು ತಿಳಿದ ಗ್ರಾಮಸ್ಥರು ೧೯೯೮-೧೯೯೯ರಲ್ಲಿ ದಿಬ್ಬದ ಮಣ್ಣನ್ನು ತೆರವುಗೊಳಿಸಲು ಆರಂಭಿಸಿದರು, ಆಶ್ಚರ್ಯವೆಂದರೆ ಆ ಉತ್ಖನನದ ಫಲವಾಗಿ ಈ ಸುಂದರ ದೇವಾಲಯ ಕಂಗೊಳಿಸಿತು.
ಕಲ್ಯಾಣ ಚಾಲುಕ್ಯ ಶೈಲಿಯನ್ನು ಹೋಲುವ ಈ ದೇವಸ್ಥಾನ ತುಂಬಾ ಸರಳ ರಚನೆಯಿಂದ ಕೂಡಿದೆ. ಗರ್ಭಗುಡಿ ಹಾಗೂ ಮುಖಮಂಟಪ ಹೊಂದಿದ್ದು ದೇವಾಲಯದ ನಿರ್ಮಾಣಕ್ಕೆ ಬಳಪದ ಕಲ್ಲನ್ನು ಬಳಸಿದ್ದಾರೆ. ಮುಖಮಂಟಪವು ೧೬ ಕಂಬಗಳಿಂದ ಕೂಡಿದ್ದು ೪ ಕಂಬಗಳು ಮಾತ್ರ ತಿರುಗಣೆ ಯಂತ್ರವನ್ನು ಬಳಸಿ ತಯಾರಿಸಲಾಗಿದೆ. ಉಳಿದ ಕಂಬಗಳನ್ನು ಗೋಡೆಗೆ ಹೊಂದಿಸಿ ಆಧಾರವಾಗಿ ನಿಲ್ಲಿಸಲಾಗಿದ್ದು, ಅವುಗಳೂ ಸಹ ಸುಂದರ ಕಲಾತ್ಮಕ ಕೆತ್ತನೆಯಿಂದ ಕೂಡಿದೆ. ಬೋದಿಗೆಗಳ ಮೇಲೆ ತೊಲೆಗಳಿದ್ದು, ಮೇಲೆ ಹಾಸುಗಲ್ಲುಗಳನ್ನು ಹಾಕಲಾಗಿದ್ದು, ಮುಖಮಂಟಪದ ಮಧ್ಯಭಾಗದಲ್ಲಿ ಸರಳ ಭುವನೇಶ್ವರಿಯ ಚಿತ್ರವಿದೆ. ದೇಗುಲದ ಮೇಲೆ ಯಾವುದೇ ಗೋಪರವಿಲ್ಲ ಅಥವಾ ಹಾಳಾಗಿರುವ ಕುರುಹುಗಳು ಇರುವುದಿಲ್ಲ. ದ್ವಾರಬಾಗಿಲು ಮತ್ತು ಗರ್ಭಗುಡಿಯ ಬಾಗಿಲುಗಳ ಪಕ್ಕದಲ್ಲಿ ಜಾಲಂದ್ರಗಳಿದ್ದು ಚೌಕಾಕಾರದಲ್ಲಿ ತುಂಬಾ ಸರಳವಾಗಿ ನಿರ್ಮಿಸಿದ್ದಾರೆ. ಗರ್ಭಗುಡಿಯ ಬಾಗಿಲು ತುಂಬಾ ಸರಳವಾಗಿದ್ದು ಒಂದೇ ಕಲ್ಲಿನಲ್ಲಿ ೫ ಪಟ್ಟಿಕೆಗಳನ್ನು ನಿರ್ಮಿಸಿ, ಅವುಗಳ ಮೇಲೆ ಬಳ್ಳಿ ಕೋನಾಕೃತಿಯ ಚಿತ್ರಗಳನ್ನು ಕೆತ್ತಲಾಗಿದ್ದು, ಕೆಳಗೆ ದ್ವಾರಪಾಲಕರ ಚಿತ್ರಗಳಿವೆ. ಗರ್ಭಗುಡಿಯಲ್ಲಿ ಶಿವಲಿಂಗವಿದ್ದು, ಮುಂಭಾಗದಲ್ಲಿ ನಂದಿಯ ಶಿಲ್ಪವಿದೆ. ದೇವಾಲಯದ ಹೊರಭಾಗದ ತಳವಿನ್ಯಾಸ ಹೊರಚಾಚುಗಳಿಂದ ಕೂಡಿದ್ದು, ಮೇಲ್ಬಾಗದಲ್ಲೂ ಕಲಾತ್ಮಕ ಹೊರಚಾಚು ರಕ್ಷಣೆಗಿದೆ. ದೇವಾಲಯದ ಸುತ್ತಲೂ ಒಂದು ಅಡಿ ವ್ಯಾಸದಲ್ಲಿ ಚೌಕ ಕೋನಾಕೃತಿಯ ಹೂಗಳ ಪಟ್ಟಿಯಿಂದ ಸುತ್ತುವರೆದಿದೆ. ಹಾಗು ಹೊರಭಾಗದಲ್ಲಿ ೩ ದಿಕ್ಕಿಗೆ ೩ ಗೂಡುಗಳಿವೆ. ಗೂಡುಗಳು ಹೊರಚಾಚಿದ ಕಂಬಗಳಿಂದ ಕೂಡಿದ್ದು, ಗೂಡಿನಲ್ಲಿ ಯಾವುದೇ ಮೂರ್ತಿಶಿಲ್ಪವಿಲ್ಲ.
ಗ್ರಾಮಸ್ಥರ ಆಸಕ್ತಿಯಿಂದ ಜೀರ್ಣೋದ್ದಾರಗೊಂಡಿದ್ದು, ದೇವಾಲಯಕ್ಕೆ ಯಾವುದೇ ಧಕ್ಕೆಯನ್ನುಂಟುಮಾಡದಂತೆ ಮೇಲ್ಚಾವಣಿಯನ್ನು ದುರಸ್ತಿಗೊಳಿಸಿ, ದೇವಾಲಯದ ಮುಂಭಾಗದಲ್ಲಿ ಛಾವಣಿಯನ್ನು ನಿರ್ಮಿಸಿದ್ದಾರೆ.
ದೇವಾಲಯದ ಮಣ್ಣನ್ನು ತೆಗೆಯುವಾಗ ಎರಡು ವೀರಗಲ್ಲುಗಳು, ಕಲ್ಲಿನ ಮಣೆ, ಸಪ್ತಮಾತೃಕೆಯರ ಶಿಲ್ಪ, ಜಡೆಮುನಿ, ಪಾಣಿಪೀಠಗಳು, ದೇವಾಲಯ ಕಟ್ಟಡದ ಬೇರೆ ಬೇರೆ ಭಾಗದ ಅಲಂಕೃತ ಪಟ್ಟಿಕೆಗಳು, ಅಧಿಕಶಿಲ್ಪಗಳು ದೊರೆತಿವೆ. ಇವುಗಳನ್ನು ನೋಡಿದರೆ ಇನ್ನೂ ಒಂದು ದೇವಾಲಯವಿದ್ದು ಹಾಳಾಗಿರಬಹುದೆಂಬ ಅನುಮಾನ ಬರುತ್ತದೆ.
ಜಡೆಮುನಿ ಶಿಲ್ಪ: ಸಿದ್ದೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸುಮಾರು ಮೂರು ಅಡಿ ಎತ್ತರದ ಜಡೆಮುನಿ ಶಿಲ್ಪವಿದೆ. ಪದ್ಮಾಸನದಲ್ಲಿ ಕುಳಿತು ಗಡ್ಡಧಾರಿಯಾಗಿದ್ದು, ಕೈಯಲ್ಲಿ ಲಿಂಗವನ್ನು ಹಿಡಿದಿದ್ದು ಇನ್ನೊಂದು ಕೈಯಲ್ಲಿ ರುದ್ರಾಕ್ಷಿಯನ್ನು ಹಿಡಿದು ಜಪಿಸುವಂತಿದ್ದು, ಈ ಕ್ಷೇತ್ರದಲ್ಲಿ ಋಷಿ ಮುನಿಗಳು ವಾಸಿಸುತ್ತಿರುವ ಕುರುಹುವಾಗಿರಬಹುದೆನಿಸುತ್ತದೆ.
ಕೊರಳು, ತೋಳು, ಕೈಗಳು ಹಾಗೂ ಕಿವಿಗಳು ರುದ್ರಾಕ್ಷಿ ಹಾರದಿಂದ ಕಂಗೊಳಿಸುತ್ತಿದೆ. ಶಿರಭಾರ ಪೇಟದಂತೆ ಅಲಂಕೃತವಾಗಿದ್ದು ಉದ್ದನೆಯ ಜಡೆ ಇದೆ, ಆ ಜಡೆಯು ಬಳ್ಳಿಗಳ ಶಿಲ್ಪದಿಂದ ಅಲಂಕೃತವಾಗಿದೆ. ಯೋಗಿಶಿಲ್ಪ ನಗುಮೊಗದ ಏಕಾಗ್ರತೆಯಿಂದ ಕೂಡಿ ಧ್ಯಾನದ ಭಂಗಿಯನ್ನು ಕಾಣಬಹುದು. ಇಲ್ಲಿಗೆ ೧೫ ಕಿ.ಮೀ. ದೂರದ ಕುರುವದಲ್ಲೂ ಇಂತಹ ಶಿಲ್ಪಗಳಿದ್ದು ಈ ಸ್ಥಳವನ್ನು ಶ್ರೀ ರಾಮಭಟ್ಟರವರು ಅಧ್ಯಯನ ನಡೆಸಿ - “ಕುರುವ ಸ್ಥಳವನ್ನು ‘ಕಾಳಮುಖರ ತವರೂರು ಎಂದಿದ್ದಾರೆ. ಇದನ್ನು ಗಮನಿಸಿದಾಗ ಕಮ್ಮಾರಗಟ್ಟೆ ಹಾಗೂ ಇಲ್ಲಿನ ಪಾರ್ಥನಾಥೇಶ್ವರ ದೇವಾಲಯದ ಪರಿಸರವೂ ಕೂಡ ಕಾಳಾಮುಖರ ಪ್ರದೇಶವಾಗಿರಬಹುದೆನಿಸುತ್ತದೆ.
ಮಹಾಸತಿ ಶಿಲ್ಪ
ಕಮ್ಮಾರಗಟ್ಟೆ ಗ್ರಾಮದ ಒಳಗೆ ಸುಮಾರು ೧೭ನೇ ಶತಮಾನಕ್ಕೆ ಸೇರಿದ ಮಹಾಸತಿ ಶಿಲ್ಪವಿದ್ದು, ತಲೆಯ ಹಿಂಭಾಗ ಸುಂದರವಾಗಿ ಅಲಂಕೃತವಾಗಿದ್ದು, ಕೊರಳು, ಸೊಂಟ, ಕೈಗಳು ಆಭರಣಗಳಿಂದ ಶೃಂಗಾರಗೊಂಡಿವೆ. ಒಂದು ಕೈಯನ್ನು ಮೇಲೆ ಎತ್ತಿದ್ದು, ಮತ್ತೊಂದು ಕೈಯಲ್ಲಿ ನಿಂಬೇಹಣ್ಣನ್ನು ಹಿಡಿದಿದ್ದಾಳೆ. ಪಕ್ಕದಲ್ಲಿ ಸಣ್ಣದಾದ ಕೈಮುಗಿದು ನಿಂತ ವ್ಯಕ್ತಿಯ (ಪತಿ) ಚಿತ್ರವಿದೆ.
ವಿಶೇಷವೆಂದರೆ ಈ ಶಿಲ್ಪದ ಎರಡೂ ಬದಿಗೆ ಇಬ್ಬರು ವೀರರ ಶಿಲ್ಪಗಳಿವೆ, ಇಬ್ಬರೂ ಖಡ್ಗಧಾರಿಗಳಾಗಿದ್ದು, ತಲೆ ಮುಡಿಯನ್ನು ಕಟ್ಟಿದ್ದು, ಎರಡೂ ವೀರರ ಪಕ್ಕದಲ್ಲಿ ಅಲಂಕೃತವಾದ ನೀರಿನ ಹೂಜಿಯ ಚಿತ್ರವಿದೆ. ವೀರನ ಶಿಲ್ಪದ ಪಕ್ಕದಲ್ಲಿ ಡಾಂಬಿಕೇಯ (ಡಾಂಬಿಕಯ್ಯ) ಎಂಬ ಬರಹ ಇದೆ. ಈ ಮೂರು ಶಿಲ್ಪಗಳಿಗೂ ಕಲ್ಲುಗಳನ್ನು ನಿಲ್ಲಿಸಿ ಗುಡಿಗಳನ್ನು ಕಟ್ಟಿದ್ದಾರೆ. ಸತಿ ಹೋದವಳು ಇಲ್ಲಿನ ರಾಣಿಯಾಗಿರಬೇಕೆನಿಸುತ್ತದೆ. ಈ ಡಾಂಬಿಕೇಯ ಯಾರು? ಇವರನ್ನು ಸತಿ ಶಿಲ್ಪದ ಪಕ್ಕದಲ್ಲಿ ಏಕೆ ನಿಲ್ಲಿಸಿದ್ದಾರೆ? ಸತಿ ಶಿಲ್ಪಕ್ಕೂ ಈ ವೀರರಿಗೂ ಏನು ಸಂಬಂಧ ಎಂಬುದನ್ನು ಪತ್ತೆ ಮಾಡಬೇಕಿದೆ. ಅಲ್ಲದೇ ಸತಿ ಶಿಲ್ಪಕ್ಕೂ ಮತ್ತು ಇಬ್ಬರು ವೀರರ ಶಿಲ್ಪಗಳು ಕಾಲಮಾನಗಳ ವ್ಯತ್ಯಾಸವೂ ಇದೆ ಎನಿಸುತ್ತದೆ.
ಕಮ್ಮಾರಗಟ್ಟೆಯ ಶಾಲೆಯ ಪಕ್ಕದ ರಸ್ತೆಯಲ್ಲಿ ಐನಾರ ನೀಲಮ್ಮನವರ ಮನೆಯ ಹಿತ್ತಲಲ್ಲಿ ಮೇಲೆ ತಿಳಿಸಿದ ಮಹಾಸತಿ ಶಿಲ್ಪದಿಂದ ಸ್ವಲ್ಪ ದೂರದಲ್ಲಿ ಮತ್ತೊಂದು ಮಹಾಸತಿಯ ಶಿಲ್ಪವಿದೆ. ಇದು ನೆಲೆಮಟ್ಟದಿಂದ ಸುಮಾರು ೫ ಅಡಿ ಎತ್ತರವಿದ್ದು ಬಹಳ ಸುಂದರವಾಗಿದೆ. ತಲೆಯ ಹಿಂಭಾಗ ಕೇದಿಗೆಯಿಂದ ಅಲಂಕೃತವಾಗಿದೆ. ತೋಳು, ಕೈಗಳು, ಮತ್ತು ಸೊಂಟ ಆಭರಣಗಳಿಂದ ಅಲಂಕೃತಗೊಂಡಿದ್ದು, ಸೀರೆಯ ನೆರಿಗೆಗಳನ್ನು ಬಹಳ ಸುಂದರವಾಗಿ ಕೆತ್ತಲಾಗಿದೆ. ಪಕ್ಕದಲ್ಲಿ ಕೈಮುಗಿದು ಕುಳಿತ ವ್ಯಕ್ತಿ (ಪತಿ)ಯ ಚಿತ್ರವಿದೆ.
ಈ ಶಿಲ್ಪದ ಮುಂಭಾಗದಲ್ಲಿ ವಿಶಾಲ ಪಾಳು ಜಾಗವಿದೆ. ಇದು ಸಂಪೂರ್ಣ ಗಿಡಗಂಟಿಗಳಿಂದ ಕೂಡಿದ್ದು ಅದನ್ನು ಅಗ್ನಿಕುಂಡ (ಬೆಂಕಿಕೊಂಡ) ಎಂದು ಕರೆಯುತ್ತಾರೆ. ಬಹುಶಃ ಇದೇ ಸ್ಥಳದಲ್ಲಿ ಚಿತೆಯನ್ನು ಮಾಡಿರ ಬಹುದೆನಿಸುತ್ತದೆ. ಈ ಚಿತೆಗೆ ಹಾರಿ ಪ್ರಾಣ ಕಳೆದುಕೊಂಡ ಸ್ತ್ರೀಯ ಸತಿಕಲ್ಲು ಆಗಿರಬಹುದು.
ಈಶ್ವರ ದೇವಾಲಯ
ಕಮ್ಮಾರಗಟ್ಟೆಯ ಉತ್ತರ ದಿಕ್ಕಿಗೆ ಊರ ಹೊರಗೆ ಮತ್ತೊಂದು ದಿಬ್ಬವಿದ್ದು, ಸುತ್ತಲೂ ಪೆಳೆ, ಗಿಡ, ಮರಗಳಿಂದ ಕೂಡಿದ್ದು, ದೇವಾಲಯ ಸಂಪೂರ್ಣ ನೆಲಸಮವಾಗಿದೆ. ಒಳಗೆ ಹೋಗುವುದು ತುಂಬಾ ಕಷ್ಟ, ಇಲ್ಲಿ ವಷಕ್ಕೊಮ್ಮೆ ವಿಶೇಷ ಸಂದರ್ಭಗಳಲ್ಲಿ ಮಾತ್ರ ಪೂಜೆ ನಡೆಯುತ್ತದೆ. ಇಲ್ಲಿರುವ ಶಿವಲಿಂಗ ಸಂಪೂರ್ಣ ಮಣ್ಣಿನಿಂದ ಮುಚ್ಚಿದ್ದು ಪೀಠದ ಮೇಲ್ಬಾಗ ಮಾತ್ರ ಕಾಣಿಸುತ್ತದೆ.
ಮುಂದೆ ಭಗ್ನಗೊಂಡ ನಂದಿಯ ಶಿಲ್ಪವಿದೆ. ಶಿವಲಿಂಗದ ಹಿಂದೆ (ಸೂರ್ಯ ವಿಗ್ರಹ) ಒಂದು ಮೂರ್ತಿ ಶಿಲ್ಪವಿದ್ದು, ಅದೂ ಸಹ ನೆಲದಲ್ಲಿ ಹೂತಿದೆ. ಈ ಗ್ರಾಮದ ಸುತ್ತಲೂ ೧೦೧ ಲಿಂಗಗಳಿವೆ ಎಂದು ಸ್ಥಳೀಯರು ತಿಳಿಸುತ್ತಾರೆ. ಈ ಸ್ಥಳವನ್ನು ಉತ್ಖನನ ನಡೆಸಿದರೆ ಇನ್ನೂ ಹೆಚ್ಚಿನ ವಿವರಗಳು ಸಿಗುವುದರಲ್ಲಿ ಅನುಮಾನವಿಲ್ಲ.
ಬುರುಜು
ಹೊನ್ನಾಳಿ ತಾಲ್ಲೂಕಿನ ಹೆಚ್ಚಿನ ಹಳ್ಳಿಗಳಲ್ಲಿ ಅನೇಕ ಬುರುಜುಗಳನ್ನು ಕಾಣಬಹುದು. ವಿಜಯನಗರೋತ್ತರ ಕಾಲದಲ್ಲಿ ನಿರ್ಮಿಸಲಾಗಿರುವ ಇಂಥಹ ಬುರುಜುಗಳನ್ನು ಮಾಸಡಿ, ಕೋಟೆಮಲ್ಲೂರು, ಕಮ್ಮಾರಗಟ್ಟೆ, ಗೊವೀನಕೋವಿ, ಹಿರೇಗೊಣೆಗೆರೆ, ಉಜ್ಜಿನಿಪುರ, ಮುಂತಾದ ಸ್ಥಳಗಳಲ್ಲಿ ಕಾಣಬಹುದು.
ಕಮ್ಮಾರಗಟ್ಟೆಯ ಈ ಬುರುಜು ಉತ್ತಮ ಸ್ಥಿತಿಯಲ್ಲಿದ್ದು, ತಳಹಂತದಲ್ಲಿ ತಳಪಾಯಕ್ಕೆ ದೊಡ್ಡ ದೊಡ್ಡ ಕಲ್ಲುಗಳನ್ನು ಬಳಸಿದ್ದಾರೆ. ತಳವಿನ್ಯಾಸದಿಂದ ಮೇಲೆ ಬಹಳಷ್ಟು ಸಣ್ಣ ಸಣ್ಣ ಕಲ್ಲು ಮತ್ತು ಮಣ್ಣುಗಳನ್ನು ಬಳಸಿ ವೃತ್ತಾಕಾರವಾಗಿ ನಿರ್ಮಿಸಿದ್ದಾರೆ. ೫೦ ಅಡಿಗಿಂತಲೂ ಹೆಚ್ಚು ಎತ್ತರವಾಗಿದ್ದು, ಮೇಲ್ಬಾಗದಲ್ಲಿ ಸುತ್ತಲೂ ಶತ್ರುಗಳ ವೀಕ್ಷಣೆಗೆ ವೀಕ್ಷಣಾ ಕಿಂಡಿಗಳಿದ್ದು, ರಕ್ಷಣೆಗೆ ಸೂಕ್ತವಾಗಿದೆ. ಸುಮಾರು ೩೦ ಅಡಿ ಎತ್ತರದಲ್ಲಿ ಬುರುಜಿಗೆ ಕಲ್ಲಿನ ಬಾಗಿಲನ್ನು ನಿಲ್ಲಿಸಲಾಗಿದೆ. ಈ ಕಟ್ಟಡದ ಕೌಶಲ್ಯವನ್ನು ನೋಡಿಯೇ ಸವಿಯಬೇಕು, ಇದನ್ನು ಯಾರು, ಯಾವಾಗ ನಿರ್ಮಿಸಿದರೆಂಬುದಕ್ಕೆ ಯಾವುದೇ ಲಿಖಿತ ದಾಖಲೆಗಳು ಇನ್ನೂ ಲಭ್ಯವಾಗಿಲ್ಲ.
ಸುಮಾರು ೩೦೦ ರಿಂದ ೪೦೦ ವರ್ಷದಿಂದ ಮಳೆ, ಗಾಳಿ, ಬಿಸಿಲಿಗೆ ಮೈಯೊಡ್ಡಿದರೂ ಸುರಕ್ಷಿತವಾಗಿಯೇ ಇದೆ. ಆದರೆ ಇಂತಹ ಸುಂದರ ಸ್ಮಾರಕದ ಸುತ್ತಲೂ ಒತ್ತುವರಿ ಮಾಡಿರುವುದರಿಂದ ರಕ್ಷಣೆಗೆ ತೊಂದರೆಯಾಗಿದೆ. ಗ್ರಾಮಸ್ಥರು ಈ ಐತಿಹಾಸಿಕ ಪರಂಪರೆಯ ತಾಣವನ್ನು ರಕ್ಷಿಸುವಲ್ಲಿ ಪ್ರಯತ್ನಿಸುತ್ತಿದ್ದು, ಪುರಾತತ್ವ ಇಲಾಖೆಯ ನೆರವೂ, ಜೊತೆಗೆ ಸ್ಥಳೀಯರ ಆಸಕ್ತಿಯೂ ಬೇಕಿದೆ.
ಮುರುಡ ಬಸವೇಶ್ವರ ದೇವಸ್ಥಾನ
ಕಮ್ಮಾರಗಟ್ಟೆ ಗ್ರಾಮದ ದಕ್ಷಿಣ ದಿಕ್ಕಿಗೆ ತುಂಗಭದ್ರಾ ನದಿಯ ದಡದಲ್ಲಿ ಈ ದೇವಾಲಯವಿದೆ. ಹೊನ್ನಾಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳ ಶ್ರಮದಾನದಿಂದ ಸ್ವಚ್ಚಗೊಳಿಸಿದಾಗ ಈ ಸರಳ ರಚನೆಯ ದೇವಸ್ಥಾನ ಕಂಡುಬಂತು.
ಆರು ಕಂಬಗಳ ಮೇಲೆ ಮೇಲ್ಛಾವಣೆ ಇದ್ದು, ಸುತ್ತಲೂ ಇಳಿಜಾರಿನ ರೀತಿ ಕಲ್ಲುಗಳನ್ನು ಏರಿಸಿ ಗುಮ್ಮಟಾಕಾರವಾಗಿ ದೇವಾಲಯ ನಿರ್ಮಿಸಿದ್ದಾರೆ. ಆರಂಭಿಕ ಕಾಲದ ದೇವಾಲಯದಂತೆ ಕಾಣುತ್ತದೆ. ಯಾವುದೇ ನಾಜೂಕಿನ ಕೆಲಸವಿಲ್ಲ, ಬಾಗಿಲು, ಮೆಟ್ಟಿಲು ಸಂಪೂರ್ಣವಾಗಿ ಹಾಳಾಗಿದ್ದು ಸುಮಾರು ನಾಲ್ಕು ಅಡಿ ಎತ್ತರದ ಎರಡು ನಾಗರಕಲ್ಲುಗಳು ದ್ವಾರಬಾಗಿಲಲ್ಲಿವೆ. ಒಳಗಡೆ ಯಾವುದೇ ವಿಗ್ರಹವಿಲ್ಲ, ಅಥವಾ ಮಣ್ಣಲ್ಲಿ ಮುಚ್ಚಿರಬಹುದು. ಇದು ಮುರುಡ ಬಸವೇಶ್ವರ ದೇವಾಲಯ, ಮೊದಲು ಇಲ್ಲಿ ದನಕರುಗಳಿಗೆ ಉಣ್ಣೆಯಾದರೆ ತೆಂಗಿನಕಾಯಿ ಉರುಳಿಬಿಡುತ್ತಿದ್ದುದಾಗಿ ಸ್ಥಳಿಯರು ತಿಳಿಸುತ್ತಾರೆ.
ಸೂರ್ಯನ ವಿಗ್ರಹ
ಸುಮಾರು ಮೂರು ಅಡಿ ಎತ್ತರದ ಸೂರ್ಯನ ವಿಗ್ರಹ ಮುರುಡ ಬಸವೇಶ್ವರ ದೇವಸ್ಥಾನದ ಬಳಿ ಪಾಯ ತೆಗೆಯುವಾಗ ಸಿಕ್ಕಿದೆ.
ಈ ಮೂರ್ತಿಯ ಬಹಳಷ್ಟು ಭಾಗ ಭಗ್ನಗೊಂಡಿದ್ದು, ಕಿರೀಟ ಆಭರಣಗಳಿಂದ ಸರ್ವಾಂಗ ಸುಂದರವಾಗಿ ಅಲಂಕೃತವಾಗಿದೆ. ಈ ಭಾಗದಲ್ಲಿ ಎರಡು ಸೂರ್ಯನ ವಿಗ್ರಹಗಳು ಪತ್ತೆಯಾದಂತಾಗಿವೆ.
ಹೀಗೆ ಈ ಕಮ್ಮಾರಗಟ್ಟೆ ಪರಿಸರ ಅಪಾರವಾದ ಪ್ರಾಚ್ಯಾವಶೇಷಗಳ ಸಂಪತ್ತನ್ನು ತನ್ನ ಮಡಿಲಲ್ಲಿ ಅಡಗಿಸಿಟ್ಟುಕೊಂಡಿದ್ದು, ಅಪಾರ ಐತಿಹಾಸಿಕ ಮಾಹಿತಿಗಳನ್ನು ಒದಗಿಸುವ ನೆಲೆಯಾಗಿದೆ ಎಂದು ಹೇಳಬಹುದು.

[ಈ ಲೇಖನ ಬರೆಯಲು ಸಹಕಾರ, ಮಾರ್ಗದರ್ಶನ ನೀಡಿದ. ಶ್ರೀ ಬುರುಡೇಕಟ್ಟೆ ಮಂಜಪ್ಪ, ಶ್ರೀ ಯು.ಎನ್. ಸಂಗನಾಳ್ ಮಠ.
ಡಾ|| ಕೊಟ್ರೇಶ್ ಉತ್ತಂಗಿ. ಶ್ರೀ ದೇವರಕೊಂಡಾರೆಡ್ಡಿ, ವಿನಾಯಕ ಶೆಟ್ರು, ಹಾಗೂ ಒಂದು ವಾರಗಳ ಕಾಲ ಕ್ಷೇತ್ರಕಾರ್ಯದಲ್ಲಿ ನೆರವಾದ ಹೊನ್ನಾಳಿ ಸರ್ಕಾರಿ ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗೆ ಮತ್ತು ಕಮ್ಮಾರಗಟ್ಟೆಯ ಜನತೆಗೆ ಧನ್ಯವಾದಗಳು.]

ಆಧಾರಸೂಚಿ
೧.         ಕಾಳಾಮುಖ ದರ್ಶನ, ಎಸ್.ಎಸ್. ಹಿರೇಮಠ, ಸಮತಾ ಪ್ರಕಾಶನ, ಹರಪನಹಳ್ಳಿ, ೨೦೦೪.
೨.         ಕರ್ನಾಟಕದ ವೀರಗಲ್ಲುಗಳು, ಡಾ|| ಆರ್. ಶೇಷಶಾಸ್ತ್ರಿ, ಕನ್ನಡ ಸಾಹಿತ್ಯ ಪರಿಷತತು, ೧೯೮೨.
೩.         ಹೊನ್ನಲೆಗಳು, ಡಾ|| ನಾ. ಕೊಟ್ರೇಶ್ ಉತ್ತಂಗಿ, ಸಹನಾದ್ರಿ ಪ್ರಕಾಶನ, ಹೊನ್ನಾಳಿ, ೨೦೦೪.
೪.         ಅಪರೂಪದ ಮಹಿಳಾ ದಾಸ ಸಾಹಿತಿ      , ಪ್ರಜಾವಾಣಿ ಲೇಖನ, ಲೇ: ಎಂ. ನಟರಾಜನ್
೫.         ಐತಿಹಾಸಿಕ ಹಿನ್ನೆಲೆಯ ಹೆಳವನಕಟ್ಟೆ       , ಕರ್ಮವೀರ ಲೇಖನ, ಲೇ: ರಾಮಚಂದ್ರ ನಾಡಿಗ್.




No comments:

Post a Comment