Monday, December 17, 2012

ರೋಣದ ಇಂದ್ರೋತ್ಸವ, ಒಂದು ಟಿಪ್ಪಣೆ


                     
                     
           ಗದಗ ಜಿಲ್ಲೆಯು ಪುರಾತನ ಕಾಲದಲ್ಲಿ ಜೈನ ಧರ್ಮದ ತವರು ಮನೆಯೆನಿಸಿತ್ತು. ಈ ಜಿಲ್ಲೆಯಲ್ಲಿ ಮತ್ತು ಇದರ ಸನಿಹದಲ್ಲಿರುವ ಊರುಗಳಲ್ಲಿ ಇರುವಷ್ಟು ಪ್ರಾಚೀನ ಜೈನ ಕೇಂದ್ರಗಳು ಕರ್ನಾಟಕದ ಬೇರೆ ಯಾವ ಜಿಲ್ಲೆಗಳಲ್ಲಿಯೂ ಕಂಡುಬರುವುದಿಲ್ಲ.ರೋಣ ತಾಲೂಕಿನ ಕೆಲವು ಊರುಗಳು ಹಾಗೂ ನರಗುಂದ, ಲಕ್ಕುಂಡಿ, ಅಸುಂಡಿ, ಕಲಕೇರಿ, ಕೋಳಿವಾಡ, ಬೆಟಗೇರಿ, ಮುಳಗುಂದ, ಲಕ್ಷ್ಮೇಶ್ವರ, ಶಿರೋಳ, ಸೊರಟೂರುಗಳು ಜೈನ ಧರ್ಮದ ನೆಲೆವೀಡುಗಳಾಗಿದ್ದವು.ಅಲ್ಲಿರುವ ಶಾಸನ,ಗುಡಿಗಳು ಜೈನ ಧರ್ಮದ ಇತಿಹಾಸವನ್ನು ಹೇಳುತ್ತವೆ.ಗದಗ ಜಿಲ್ಲೆಯ ರೋಣ ತಾಲೂಕಿನ ರೋಣ, ಅಬ್ಬಿಗೇರಿ, ಜಕ್ಕಲಿ,ಸೂಡಿ, ನಿಡಗುಂದಿ, ಸವಡಿ, ನರೇಗಲ್ಲ,ಸೂಡಿ, ಸವಡಿ,ಕೋಟುಮಚಗಿ ಎಂಬ ಗ್ರಾಮಗಳು ಅಂದು ಹೆಸರಾಂತ ಜೈನ ಧರ್ಮದ ನೆಲೆವೀಡುಗಳಾಗಿದ್ದವು. ರೋಣ ನಗರದ ಪೂರ್ವಕ್ಕಿರುವ ಸೂಡಿಯಲ್ಲಿ ಗಂಗರ ಮಾಂಡಲೀಕ ಇಮ್ಮಡಿ ಬೂತುಗನ(೯೩೬-೯೬೧) ನಾಲ್ಕು ಜನ ಹೆಂಡರಲ್ಲಿ ಒಬ್ಬಳಾದ ದೀವಳಾಂಬಾ ಎಂಬಾಕೆಯು ಕ್ರಿ.ಶ.೯೩೮ ರಲ್ಲಿ ಒಂದು ಜೈನ ಬಸದಿಯನ್ನು ಕಟ್ಟಿಸಿದಳೆಂದು ಶಾಸನಗಳು ಹೇಳುತ್ತವೆ.
  ರೋಣ ನಗರವು ಕೂಡಾ ಸಾವಿರಾರು ವರ್ಷಗಳ ಜೈನ ಇತಿಹಾಸವನ್ನು ಹೊಂದಿ, ಸರ್ವ ಧರ್ಮಿಯರ ತವರು ಮನೆಯಾಗಿತ್ತು. ಇಲ್ಲಿರುವ ಎಲ್ಲ ಧರ್ಮಿಯರ ಗುಡಿಗಳೇ ಇದಕ್ಕೆ ಸಾಕ್ಷಿಯಾಗಿವೆ. ಇಲ್ಲಿ ಜೈನ ಧರ್ಮದ ೧೬ನೆಯ ತೀರ್ಥಂಕರರಾದ ಪಾರ್ಶ್ವನಾಥನ ಬಸದಿಯು ರಾಷ್ಟ್ರಕೂಟರ ಕಾಲದಲ್ಲಿ ಕಟ್ಟಿದ್ದಾದರೂ, ಅದು ಬೆಳಕಿಗೆ ಬರುವುದು ಕ್ರಿ.ಶ.೧೦೦೦ ರಲ್ಲಿ ಕಲ್ಯಾಣ ಚಾಲುಕ್ಯರ ಎರಡನೆಯ ಚಕ್ರವರ್ತಿ ಸತ್ಯಾಶ್ರಯ ಇರಿವಬೆಡಂಗನ ಕಾಲದಲ್ಲಿ, ಈ ಬಸದಿಯು ಐಹೊಳೆ ಮತ್ತು ಶ್ರವಣಬೆಳಗೊಳದ ಚಂದ್ರಗುಪ್ತ ಬಸದಿಯಂತಿರುವದು ವಿಶೇಷವಾಗಿದೆ ಇದನ್ನು ಗಮನಿಸಿದರೆ ಇಲ್ಲಿ ಜೈನಧರ್ಮವು ಆಗ ಉನ್ನತ ಸ್ಥಿತಿಯಲ್ಲಿತೆಂದು ಇದರಿಂದ ಗೊತ್ತಾಗುತ್ತದೆ.
   ರೋಣದಲ್ಲಿರುವ  ದ್ರೋಣಾಚಾರ‍್ಯರದೆಂದು ಹೇಳುವ ಗುಡಿಯಲ್ಲಿ ಕ್ರಿ.ಶ.೧೧೧೧ ರ ಶಾಸನವೊಂದಿದೆ. ಅದರಲ್ಲಿ ಕೆಲವು ವಿಷಯಗಳು ಜೈನ ಧರ್ಮದ ಬಗ್ಗೆ ಬೆಳಕನ್ನು ಚಲ್ಲುತ್ತವೆ.ಈ ಶಾಸನವು ಆರನೆಯ ವಿಕ್ರಮಾದಿತ್ಯನ ಕಾಲಕ್ಕೆ ಸೇರಿದೆ. ಹೈಂಗಕುಲದ ನಾಗವಿಷ್ಣುಮಯ್ಯ ಎಂಬವನು ಕಪ್ಪೆಯಗೇರಿಯ ೫೧ ಮಹಾಜನರಿಂದ ಅನುಮತಿಯನ್ನು ಪಡೆದು ಅದೇ ಕಪ್ಪೆಯಗೇರಿಯಲ್ಲಿ ಸಭಾ ಮಂಟಪ ಸತ್ರಗಳನ್ನು ನಿರ್ಮಿಸಿ, ಆ ಸಂದರ್ಭದಲ್ಲಿ ಹಲವು ಭಟ್ಟಿ ವೃತ್ತಿಗಳನ್ನು ದಾನವಾಗಿ ನೀಡುತ್ತಾನೆಂದು ವಿವರಣೆಯನ್ನು ನೀಡುತ್ತದೆ. ಪ್ರೌಢ ವಿದ್ಯಾರ್ಥಿಗಳಿಗೆ, ವಿದ್ಯೆಯನ್ನು ನೀಡುವ ಉಪಾಧ್ಯಾಯರಿಗೆ ಈ ರೀತಿಯಲ್ಲಿ ಭಟ್ಟಿ ವೃತ್ತಿಗಳನ್ನು ನೀಡುವ ಬಗ್ಗೆ  ಶಾಸನಗಳು ವರ್ಣಿಸುತ್ತವೆ. ಈ ಭಟ್ಟಿವೃತ್ತಿಯು ಋಗ್ವೇದ, ಯಜುರ್ವೇದಗಳನ್ನು ಭೋಧಿಸುವ ವಿದ್ವಾಂಸ ಉಪಾಧ್ಯಾಯರಿಗೆ ಭೋಧಿಸಲು ಅನುವಾಗುವಂತೆ ಅವರಿಗೆ ಭಟ್ಟಿವೃತ್ತಿಯನ್ನು ರೋಣದ ನಾಗವಿಷ್ಣುಮಯ್ಯ ಈ ಅಗ್ರಹಾರಕ್ಕೆ ಬಿಡುತ್ತಾನೆ. ವಿದ್ವಾಂಸರು ತರ್ಕ ಪಾಂಡಿತ್ಯವನ್ನು ಪಡೆಯಲೆಂದು ತರ್ಕದ ಅಭ್ಯಾಸಕ್ಕೆ ಮತ್ತು ಅಧ್ಯಾಪನಕ್ಕಾಗಿ ಒಂದು ವ್ಯಾಖ್ಯಾನ(ವಕ್ಖಣ)ಶಾಲೆಯನ್ನು ರೋಣದಲ್ಲಿ ಕಟ್ಟಿಸುತ್ತಾನೆ.ಈ ಶಾಸನವು ಮುಂದುವರಿದು ಆ ಶಾಲೆಯಲ್ಲಿ ಅದೇ ದಿವಸ ಅರಿವರ ದೇಚಿಮಯ್ಯಂಗೆ ಐಂದ್ರೋತ್ಸವ ಪೂಜೆ, ಸರಸ್ವತಿಯ ಭೋಜನಕ್ಕೆ ೨೦೦ ಗದ್ಯಾಣವನ್ನು  ಬಿಟ್ಟನೆಂದು  ವಿವರಣೆಯನ್ನು ನೀಡುತ್ತದೆ.
   ಇಂದ್ರನ ಸಲುವಾಗಿ ಮಾರ್ಗಶಿರ ಮತ್ತು ಪುಷ್ಯ ಮಾಸಗಳ ಕೃಷ್ಟ ಪಕ್ಷದ ಅಷ್ಟಮಿಯಂದು ನಡೆಯುವ ಉತ್ಸವಕ್ಕೆ ಐಂದ್ರೋತ್ಸವವೆನ್ನುತ್ತಾರೆ. ರೋಣದಲ್ಲಿ ಈ ಉತ್ಸವಕ್ಕಾಗಿ ದತ್ತಿ ಬಿಟ್ಟಾಗ ಆ. ದಾನವನ್ನು ಸ್ವೀಕರಿಸಿದ ದೇಚಿಮಯ್ಯನು ಈ ದೇವಾಲಯಗಳ ಉಸ್ತುವಾರಿಯನ್ನು ಮಾಡುತ್ತಿರಬಹುದು..ಒಂದು ಕಾಲದಲ್ಲಿ ಬೇರೆ ಕಡೆ ನಡೆಯುವಂತೆ


ಕರ್ನಾಟಕದಲ್ಲಿಯೂ ಐಂದ್ರೋತ್ಸವ ನೆಡೆಯುತ್ತಿತ್ತು. ಅದರಲ್ಲಿ ರೋಣದಲ್ಲಿ ಕೂಡಾ, ಇದು ಆ ಕಾಲದಲ್ಲಿ ಒಬ್ಬ ಅರಸನು ದಾನ ನೀಡುವ ಮಟ್ಟದ್ದಿರಬೇಕಾದರೆ ತುಂಬಾ ವೈಭವದಿಂದ ಇಲ್ಲಿ ಐಂದ್ರೋತ್ಸವ ಜರುಗುತ್ತಿರಬೇಕು. ಈ ದಾನವನ್ನು ನೀಡಿ, ಸಭಾ ಮಂಟಪ ಸತ್ರಗಳನ್ನು ನಿರ್ಮಿಸಿದ ಕಪ್ಪೆಯಗೇರಿ ಎಂದರೆ ಯಾವುದು? ಎಂಬುದನ್ನು ಈಗ ಶೋಧಿಸಬೇಕಾಗಿದೆ.        

                                            - ಡಾ. ಮಲ್ಲಿಕಾರ್ಜುನ ಕುಂಬಾರ




 ಡಾ.ಮಲ್ಲಿಕಾರ್ಜುನ ಕುಂಬಾರ.
          ‘’ವಚನ’’
      ರಾಜೂರ-೫೮೨೨೩೦
      ತಾ;ರೋಣ, ಜಿ;ಗದಗ
ದೂರವಾಣಿ; [೦೮೩೮೧] ೨೬೨೯೨೫, (ಸನಿಹವಾಣಿ::- ೯೭೩೯೩೪೧೭೨೬)





No comments:

Post a Comment