Monday, December 3, 2012

ಅಣ್ಣಿಗೇರಿಯಲ್ಲಿ ಪುರಾತತ್ತ್ವ ಉತ್ಖನನ


ಡಾ. ಎಂ.ಎಸ್. ಕೃಷ್ಣಮೂರ್ತಿ, ಡಾ. ಆರ್. ಗೋಪಾಲ್, ಟಿ.ಎಸ್. ಗಂಗಾಧರ್


ಣ್ಣಿಗೇರಿ ಅಥವಾ ಅಣ್ಣಿಗೆರೆ (೧೫ ೨೫೩೪" ಉತ್ತರ ಮತ್ತು ೭೫೨೬೧೭" ಪೂರ್ವ) ಹುಬ್ಬಳ್ಳಿಯಿಂದ ಬೆಳ್ಳಾರಿಗೆ ಹೋಗುವ ಮಾರ್ಗದಲ್ಲಿ, ಸುಮಾರು ೩೫ ಕಿ.ಮೀ. ದೂರದಲ್ಲಿದೆ. ಪ್ರಾಚೀನ ಪ್ರಸಿದ್ಧವಾದ ಈ ಊರು, ಆದಿಕವಿ ಪಂಪನ ಹುಟ್ಟೂರು ಎಂದೂ ಹೆಸರುವಾಸಿಯಾಗಿದೆ. ಅಣ್ಣಿಗೇರಿ ಸನ್ ೨೦೧೦ರ ಸೆಪ್ಟೆಂಬರ್ ಮಾಹೆಯಲ್ಲಿ, ಇದಕ್ಕಿದ್ದಂತೆ ಪ್ರಸಿದ್ಧಿಗೆ ಬಂತು. ಕಾರಣ, ಈ ಊರಿನಲ್ಲಿ, ಚರಂಡಿ ದುರಸ್ತಿ ಕಾರ್ಯದ ಸಮಯದಲ್ಲಿ, ಭೂಮಿಯಿಂದ ಹೊರಕ್ಕೆ ಬಂದ ಅನೇಕ ಮಾನವ ತಲೆ ಬುರುಡೆಗಳು ಮತ್ತು ಅಸ್ಥಿಗಳು. ಕುತೂಹಲಭರಿತರಾದ ಜನರು, ಆಡಳಿತ ವರ್ಗ, ಪತ್ರಕರ್ತರು, ದೃಶ್ಯ-ಶ್ರಾವ್ಯ ಮಾಧ್ಯಮದವರು, ಪುರಾತತ್ತ್ವಜ್ಞರು, ವಿದ್ವಾಂಸರು, ವೈದ್ಯರು ಮುಂತಾದವರು  ಅಣ್ಣಿಗೇರಿಗೆ ಧಾವಿಸಿ ಸ್ಥಳವನ್ನು ಪರೀಕ್ಷಿಸಿದರು, ವಿಸ್ಮಯಗೊಂಡರು, ಸಮಾಧಿಯ ಬಗ್ಗೆ ವಿವಿಧ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಯಂತ್ರದಿಂದ ಚರಂಡಿಯ ಮಣ್ಣನ್ನು ಉತ್ಖನನ ಮಾಡುತ್ತಿದ್ದುದರಿಂದ, ಈ ಸಮಾಧಿಯು ಬಹಳಷ್ಟು ಜಖಂ ಆಗಿತ್ತು. ಸೇರಿದ್ದ ಜನಸಂದಣ ತಮ್ಮಿಷ್ಟ ಬಂದಂತೆ ಬುರುಡೆಗಳನ್ನು ಹೊರತೆಗೆದಿದ್ದರು. ಚರಂಡಿಯ ಕೊಳಚೆಯ ನೀರಿನ ಮಧ್ಯದಲ್ಲಿ ಐವತ್ತಕ್ಕೂ ಹೆಚ್ಚು ಮಾನವ ತಲೆಬುರುಡೆಗಳು ಮೇಲ್ನೋಟಕ್ಕೆ ಕಾಣುತ್ತಿದ್ದವು. ತಲೆ ಬುರುಡೆಗಳನ್ನು, ಮೂಲತಃ ಸಾಲು-ಸಾಲಾಗಿ, ವ್ಯವಸ್ಥಿತವಾಗಿ ಜೋಡಿಸಿ ಸಮಾಧಿ ಮಾಡಲಾಗಿತ್ತು. ಬುರುಡೆಗಳ ಜೋಡಣೆಗೆ ಹೊಂದಿಕೊಂಡಂತೆ ದಕ್ಷಿಣ ತುದಿಯಲ್ಲಿ ಕೈಕಾಲು ಹಾಗೂ ಇನ್ನಿತರ ಮೂಳೆಗಳನ್ನು ರಾಶಿ ಸುರಿದಿದ್ದರು.
ಇಂತಹ ಪರಿಸ್ಥಿತಿಯಲ್ಲಿದ್ದ ಅಸ್ಥಿ ಅವಶೇಷಗಳನ್ನು ಮೇಲ್ನೋಟದಲ್ಲಿ ಪರಿಶೀಲಿಸಿದ ತಜ್ಞರು ವಿವಿಧವಾದ ಅಭಿಪ್ರಾಯಗಳನ್ನು ಸೂಚಿಸಿದ್ದರು. ಅವುಗಳಲ್ಲಿ ಮುಖ್ಯವಾದವುಗಳೆಂದರೆ:
          ಇಲ್ಲಿ ಹೂಳಲಾದ ಮನುಷ್ಯರ ತಲೆಬುರುಡೆಗಳನ್ನು ದೇಹದಿಂದ ಪ್ರತ್ಯೇಕಮಾಡಿ ಹೂತಿರುವುದರಿಂದ, ಈ ದೇಹಗಳು ಯಾವುದೋ ನರಹತ್ಯೆಯಲ್ಲಿ ಶಿರಚ್ಛೇದನವಾದ ಮನುಷ್ಯರ ಅಸ್ಥಿ ಅವಶೇಷಗಳು ಆಗಿರಬೇಕು. ಈ ಸಮಾಧಿ ರಾಜದ್ರೋಹಿಗಳದ್ದಾಗಿರಬಹುದು ಅಥವಾ ಯುದ್ಧ ಖೈದಿಗಳದ್ದಾಗಿರಬಹುದು, ಈ ನರಮೇಧ ಧರ್ಮದ್ವೇಷಿ ಗಳಿಂದಾಗಿರಬಹುದು ಅಥವಾ ೧೮೫೭ರಲ್ಲಿ ಸಂಭವಿಸಿದ ನರಗುಂದ ಬಂಡಾಯದಲ್ಲಿ ನಡೆದಿರಬಹುದಾದ ನರಹತ್ಯೆಯ ಭಾಗವಾಗಿರಬಹುದು. ಅಸ್ಥಿ ಅವಶೇಷಗಳು ಸಾಕಷ್ಟು ಗಟ್ಟಿಯಾಗಿದ್ದುದರಿಂದ ಈ ಸಮಾಧಿ ಸುಮಾರು ಇನ್ನೂರು ವರ್ಷಗಳಷ್ಟು ಹಳೆಯದಿರಬಹುದೆಂದೂ ಸೂಚಿಸಲಾಗಿತ್ತು.
          ಹುಬ್ಬಳ್ಳಿಯ ಕಿಮ್ಸ್ (ಏIS) ಸಂಸ್ಥೆಯಿಂದ ಬಂದು ಸ್ಥಳ ಪರಿಶೀಲಿಸಿದ ವೈದ್ಯರ ತಂಡವೊಂದು, ಈ ಸಮಾಧಿಯಿಂದ ಮೂರು ತಲೆಬುರುಡೆ ಮಾದರಿಗಳನ್ನು ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗಾಗಿ ಕೊಂಡೊಯ್ದಿತ್ತು. ವೈದ್ಯರ ವರದಿಯ ಪ್ರಕಾರ, ಆ ಮೂರು ತಲೆಬುರುಡೆಗಳಲ್ಲಿ ಎರಡು ಪುರುಷರ ತಲೆಬುರುಡೆಗಳು, ಒಂದು ಸ್ತ್ರೀ ತಲೆಬರುಡೆಯೆಂದು ತಿಳಿಸಲಾಯಿತು. ಅಲ್ಲದೆ ಈ ಬುರುಡೆಗಳು ಸುಮಾರು ೩೦-೪೦ ವರ್ಷ ವಯಸ್ಸಿನ ವ್ಯಕ್ತಿಗಳದ್ದೆಂದೂ ಸಹ ವರದಿ ತಿಳಿಸಿತು. ಆಶ್ಚರ್ಯದ ಸಂಗತಿಯೆಂದರೆ ಸಮಾಧಿಯಲ್ಲಿ ಮೇಲ್ನೋಟಕ್ಕೆ ಕಾಣುತ್ತಿದ್ದ ಬುರುಡೆಗಳಿಗೂ, ಹಾಗೂ ವೈದ್ಯರ ಪರಿಶೀಲಿಸಿದ ತಲೆಬುರುಡೆಗಳೂ ಈ ಎರಡಕ್ಕೂ ಕೆಳದವಡೆ ಕಾಣೆಯಾಗಿತ್ತು. ಜೊತೆಗೆ ತಲೆ ಬುರುಡೆಯ ಕೆಳಭಾಗದಲ್ಲಿ ಬಲವಾಗಿ ಕಚ್ಚಿಕೊಂಡಿರುವಂತಹ ಮೊದಲನೆಯ ಕಶೇರುಮಣಿಯೂ ಸಹ ಕಾಣದಾಗಿತ್ತು.
ವಿದ್ವಾಂಸರ ವಿವಿಧ ಅಭಿಪ್ರಾಯಗಳ ಹಾಗೂ ವೈದ್ಯರ ವರದಿಯ ಹಿನ್ನೆಲೆಯಲ್ಲಿ ರಾಜ್ಯ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯವು, ಪುರಾತತ್ತ್ವ ಉತ್ಖನನವನ್ನು ಅಣ್ಣಿಗೇರಿಯಲ್ಲಿ ಪ್ರಾರಂಭಿಸಿತು. ಡಾ| ಎಂ.ಎಸ್. ಕೃಷ್ಣಮೂರ್ತಿ, ಪ್ರೊಫೆಸರ್ ಎಮೆರಿಟಸ್, ಮೈಸೂರು ವಿಶ್ವವಿದ್ಯಾನಿಲಯ; ಡಾ| ಆರ್. ಗೋಪಾಲ್, ನಿರ್ದೇಶಕರು; ಶ್ರೀ ಟಿ.ಎಸ್. ಗಂಗಾಧರ್, ಉಪ-ನಿರ್ದೇಶಕರು, ಇವರುಗಳ ನೇತೃತ್ವದಲ್ಲಿ ಉತ್ಖನನವು ನಡೆಯಿತು. ಉತ್ಖನನ ೨೦೧೧ನೆಯ ಸಾಲಿನ ಫೆಬ್ರವರಿ-ಮಾರ್ಚ್ ತಿಂಗಳುಗಳಲ್ಲಿ, ಐವತ್ತು ದಿನಗಳ ಕಾಲ ನಡೆಯಿತು. ಇದರ ಫಲವಾಗಿ ಬಹಳ ಸ್ವಾರಸ್ಯಕರವಾದ ವಿಷಯಗಳು, ಸಮಾಧಿಯ ಬಗ್ಗೆ ಹೊರಬಂದವು.
ತಲೆಬುರುಡೆಗಳ ಸಮಾಧಿ ಇದ್ದ ಸ್ಥಳ, ಕೊಳಚೆ ನೀರಿನ ಚರಂಡಿಯ ತಳಮಟ್ಟದಲ್ಲಿತ್ತು. ಇದರಿಂದಾಗಿ ಇಡೀ ಸಮಾಧಿಸ್ಥಳ ಕೊಳಚೆಗುಂಡಿಯಂತೆಯೇ ಇತ್ತು. ಬಹಳ ವಿಚಕ್ಷಣೆಯಿಂದ ಇಡೀ ಜಾಗವನ್ನು ಜೌಗು ರಹಿತವನ್ನಾಗಿ ಮಾಡಿ, ವ್ಶೆಜ್ಞಾನಿಕವಾಗಿ ಉತ್ಖನನವನ್ನು ನಡೆಸಲಾಯಿತು. ಉತ್ಖನನದಿಂದ ಹೊರಬಂದ ಪ್ರಮುಖ ವಿಷಯಗಳೆಂದರೆ:
೧.       ಈ ಸಮಾಧಿಯನ್ನು ಎಲ್ಲಿಂದಲೋ ಸಂಗ್ರಹಿಸಲಾದ ತಲೆಬುರುಡೆಗಳು ಮತ್ತು ಮೂಳೆಗಳಿಗಾಗಿ ಮಾಡಲಾಗಿದೆ.
೨.       ಬುರುಡೆಗಳು ಮತ್ತು ಮೂಳೆಗಳ ಸ್ಥಿತಿಯನ್ನು ಗಮನಿಸಿದಾಗ ಅವುಗಳು ಸಮಾಧಿಗೆ ಮುಂಚೆ ಕನಿಷ್ಟ ಆರು ತಿಂಗಳಿಗೂ ಹೆಚ್ಚುಸಮಯ ಬಯಲಿನಲ್ಲಿ, ಕಾಲ ಮತ್ತು ನಿಸರ್ಗದ ವಿಕೋಪಕ್ಕೆ ತುತ್ತಾಗಿವೆ ಎಂದು ಎನಿಸುತ್ತದೆ.
೩.       ಈ ರೀತಿ ನಿಸರ್ಗದ ವಿಕೋಪಕ್ಕೆ ತುತ್ತಾಗಿರುವುದರಿಂದ ತಲೆಬುರುಡೆಗೆ ಭದ್ರವಾಗಿ ಅಂಟಿಕೊಂಡಿರುವ ಕೆಳದವಡೆ ಮತ್ತು ಮೊದಲ ಕಶೇರು ಮಣಿಗಳು ಈಗ ಬುರುಡೆಗಳಿಂದ ಬೇರ್ಪಟ್ಟಿವೆ.
೪.       ಅಸ್ಥಿ ರಾಶಿಯಲ್ಲಿ ಹೆಚ್ಚಾಗಿ ದೊಡ್ಡ-ದೊಡ್ಡ ಮೂಳೆಗಳು ಮಾತ್ರ ಇವೆ. ಇವುಗಳೂ ಸಹ ಕೀಲುಗಳಲ್ಲಿ ಬೇರ್ಪಟ್ಟಿವೆ, ಕೆಲವು ಮುರಿದಿವೆ, ಕೆಲವು ಸೀಳಿವೆ, ಕೆಲವು ಜಜ್ಜಿಹೋಗಿವೆ.
೫.       ಸಮಾಧಿಯಲ್ಲಿ, ಸುಸ್ಥಿತಿಯಲ್ಲಿರುವ, ಒಡೆದಿರುವ, ಜಜ್ಜಿರುವ, ಪುಡಿಯಾಗಿರುವ ಹಾಗೂ ಚರಂಡಿಯ ಅಗೆತದಿಂದ ನಾಶವಾಗಿರಬಹುದಾದ ಎಲ್ಲಾ ಬುರುಡೆಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ, ಈ ಸಮಾಧಿಯಲ್ಲಿ ಮೂಲತಃ ಸುಮಾರು ಆರುನೂರು ತಲೆ ಬುರುಡೆಗಳು ಇದ್ದಿರಬಹುದೆಂದು ಹೇಳಬಹುದು.
೬.       ಇಷ್ಟು ಅಗಾಧವಾದ ಬುರುಡೆಗಳ ಸಂಖ್ಯೆಗೆ ಹೋಲಿಸಿದರೆ, ಸಮಾಧಿಯಲ್ಲಿ ದೊರೆತಿರುವ ಮೂಳೆಗಳ ಪ್ರಮಾಣ ಬಹಳ ಕಡಿಮೆಯೆನ್ನಬಹುದು.
೭.       ಇಲ್ಲಿ ಸಮಾಧಿಗೆ ಅಗೆದಿರುವ ಗುಂಡಿ ಹೆಚ್ಚೆಂದರೆ ೧೫ ಸೆಂ.ಮೀ. ಆಳವಾಗಿದೆ.
೮.       ಆಳವಲ್ಲದ ಈ ರೀತಿಯ ಗುಂಡಿ, ಈ ಸಮಾಧಿ, ಕೇವಲ ಒಣಗಿದ ಮೂಳೆಗಳಿಗೆ ಮಾಡಲಾಗಿದೆ ಎನಿಸುತ್ತದೆ.
೯.       ಹಾಗೆಯೇ ಸಮಾಧಿಯ ಮೇಲೆ ಮುಚ್ಚಿದ್ದ ಮಣ್ಣೂ ಸಹ ಸುಮಾರು ೧೫ ಸೆಂ.ಮೀ. ಗಾತ್ರದ ತೆಳು ಪದರವಾಗಿತ್ತು.
೧೦.     ಅಸ್ಥಿ ಅವಶೇಷಗಳ ಗಟ್ಟಿತನ, ದೃಢತೆಯನ್ನು ಪರಿಶೀಲಿಸಿ ದಾಗ ಅವುಗಳು ಸುಮಾರು ೨೦೦ ವರ್ಷಗಳಷ್ಟು ಹಳೆಯವು ಎಂದು ಹೇಳಬಹುದು.
೧೧.     ಮೇಲೆ ಉಲ್ಲೇಖವಾದ ಅಂಶಗಳಿಂದಾಗಿ ಈ ಸಮಾಧಿ ಬಹುಕಾಲ ಬಯಲಿನಲ್ಲಿ, ನಿಸರ್ಗದ ವಿಕೋಪಕ್ಕೆ ಗುರಿಯಾದ ಅಸ್ಥಿಗಳಿಗೆ ಮಾಡಲಾಗಿತ್ತೇ ವಿನಃ ರಕ್ತ ಮಾಂಸಗಳಿಂದ ಕೂಡಿದ್ದ ದೇಹಗಳಿಗೆ ಈ ಸಮಾಧಿಯನ್ನು ಮಾಡಲಾಗಿರಲಿಲ್ಲ ಎನ್ನಬಹುದು.
೧೨.     ಈ ಸಮಾಧಿಯ ತಲೆಬುರುಡೆಗಳು, ಅಸ್ಥಿಗಳು ಅವುಗಳ ಕೀಲುಗಳಿಂದ ಬೇರೆಯಾಗಿರುವುದು ಸಹಜವಾಗಿ, ಕಾಲಪುರುಷನ ಹಾವಳಿಯಿಂದಲೇ ಹೊರತು, ಅವುಗಳನ್ನು ಕತ್ತರಿಸಿ ಬೇರ್ಪಡಿಸಿದಂತೆ ತೋರುವುದಿಲ್ಲ್ಲ.
೧೩.     ಈ ಸಮಾಧಿಯ ಹಲವಾರು ತಲೆಬುರುಡೆಗಳನ್ನು ಉತ್ಖನನಾನಂತರ ಪರೀಕ್ಷೆ ಮಾಡಿದ ತಜ್ಞರು ಈ ಬುರುಡೆಗಳ ಸಮೂಹದಲ್ಲಿ ವಿವಿಧ ವಯಸ್ಸಿನ ಪುರುಷರ, ಸ್ತ್ರೀಯರ ಮತ್ತು ಮಕ್ಕಳ, ಜನರ ತಲೆಬುರುಡೆಗಳು ಇವೆ ಎಂದು ವರದಿ ನೀಡಿದ್ದಾರೆ.
ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ, ಇಷ್ಟು ಅಗಾಧ ಸಂಖ್ಯೆಯಲ್ಲಿ ಏಕಕಾಲದಲ್ಲಿ ಆಗಿರುವ ಜನರ ಸಾವಿಗೆ ಕಾರಣ, ಈ ಮುಂಚೆ ಊಹಿಸಿದಂತೆ ರಾಜದ್ರೋಹಿಗಳ ಶಿರಚ್ಛೇದನವಲ್ಲ, ಯುದ್ಧದಲ್ಲಿ ಸೈನಿಕರ ಹತ್ಯೆಯಲ್ಲ, ಧರ್ಮದ್ವೇಷದಿಂದ ಮಾಡಿದ ಹತ್ಯೆಯಲ್ಲ, ಅಥವಾ ರೋಗ-ರುಜಿನ ಮಾರಿಗಳಲ್ಲ. ಇಂತಹ ಸಂದರ್ಭಗಳಲ್ಲಿ ಸತ್ತವರ ಹೆಣವನ್ನು ಇಡಿಯಾಗಿ ಹೂತಿರುತ್ತಾರೆ. ಅಂಗಾಂಗಗಳನ್ನು ಕತ್ತರಿಸಿ ಅಥವಾ ಶಿರಚ್ಛೇದನವನ್ನು ಮಾಡಿ ಹೂಳುವುದಿಲ್ಲ. ಹೆಣಗಳನ್ನು ಕೂಡಲೇ ಪೂರ್ಣವಾಗಿ ಹೂಳುತ್ತಾರೆ. ಅನೇಕ ದಿನಗಳ ಕಾಲ ಕೊಳೆತು ನಾರುವುದಕ್ಕೆ ಅಂಗಗಳನ್ನು ಬೇರ್ಪಡಿಸುವುದಕ್ಕೆ ಬಿಡುವುದಿಲ್ಲ. ಹೀಗಾಗಿ ಪ್ರಸ್ತುತ ಸಮಾಧಿಯಲ್ಲಿ ಹೂಳಲ್ಪಟ್ಟಿರುವ ತಲೆಬುರುಡೆಗಳ, ಅಸ್ಥಿಗಳ ಜನರ ಸಾವಿಗೆ ಕಾರಣ ಬೇರೇನೋ ಇರಬೇಕು ಎನಿಸುತ್ತದೆ.
ಇತಿಹಾಸದ ಪುಟಗಳನ್ನು ತಿರುವಿದಾಗ ನಮಗೆ ತಿಳಿದುಬರುವ ಅಂಶವೆಂದರೆ, ಒಂದು ಘೋರವಾದ ನೈಸರ್ಗಿಕ ಪ್ರಕೋಪದ ಫಲವಿದು. ಅದೆಂದರೇ, ಇಂದಿಗೆ ೨೨೨ ವರ್ಷಗಳ ಹಿಂದೆ, ದಖನ್ನಿನಲ್ಲಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ತಲೆದೋರಿದ (ಸಂಭವಿಸಿದ) ಡವಗಿಬರ ಅಥವಾ ಬುರುಡೆಬರ(ಇಟಿಜಟಿoes) ಈ ಡವಗಿಬರ ಇಂದಿಗೂ ಉತ್ತರ ಕರ್ನಾಟಕದ ಜನಪದದಲ್ಲಿ ಮಸಕು ಮಸಕಾಗಿ ನೆನಪಿನಲ್ಲಿದೆ. ಡವಿಗೆ/ಡವುಗೆ/ಡವಗಿ (ಆಡುಭಾಷೆ) ಎಂದರೆ ತಲೆಬುರುಡೆ. ನಿನ್ನ ಡವಗಿ ಸೀಳುತ್ತೇನೆ ನೋಡು ಎಂಬುದು ಈಗಲೂ ಸಹ ಬಳಸುವ ಒಂದು ಸಾಮಾನ್ಯ ನುಡಿ (ನುಡಿಗಟ್ಟು).
ಡವಗಿಬರ ಅಥವಾ ಬುರುಡೆಬರ ೧೭೮೯-೯೨ ರ ನಡುವೆ ಸಂಭವಿಸಿತ್ತು. ಈ ಬರ ಅಥವಾ ಕ್ಷಾಮದಿಂದಾಗಿ ಲಕ್ಷಾಂತರ ಜನರು ಅಸುನೀಗಿದರು. ಆ ಕಾಲದ ಬ್ರಿಟಿಷ್ ಆಡಳಿತ ವರದಿಗಳಲ್ಲಿ ಈ ಕ್ಷಾಮವನ್ನು ಡೊಂಗಿಬುರ ಅಥವಾ ಸ್ಕಲ್ ಫ್ಯಾಮೈನ್ (Suಟಟ-ಈಚಿmiಟಿe) ಎಂದು ದಾಖಲಿಸಿದ್ದಾರೆ. ಈ ಬರದ ಭೀಕರತೆ ಬ್ರಿಟಿಷ್ ದಾಖಲೆಗಳಲ್ಲಿ ಮತ್ತು ನಂತರದ ಕೆಲವು ಗ್ಯಾಜ಼ೆಟಿಯರ್‌ಗಳಲ್ಲಿ ಪ್ರಕಟವಾಗಿದೆ. ಡವಗಿಬರದ ಭೀಕರತೆ ಎಷ್ಟಿತ್ತೆಂದರೇ, ಹಸಿವು, ನೀರಡಿಕೆಗಳಿಂದ ಸತ್ತು ಗತಿಗಾಣದೆ ಬಿದ್ದಿದ್ದವರ ಶವಗಳು, ಮೂಳೆಗಳು ಮತ್ತು ತಲೆಬುರುಡೆಗಳು, ಚೆಲ್ಲಾಪಿಲ್ಲಿಯಾಗಿ ರಸ್ತೆಗಳು ಮತ್ತು ಪಕ್ಕದ ಬಯಲುಗಳನ್ನೆಲ್ಲಾ ಬಿಳುಪು ಮಾಡಿದ್ದವು ಎಂದು ಹೇಳಲಾಗಿದೆ. ಬಿಜಾಪುರ ಜಿಲ್ಲೆಯಲ್ಲಿ ಎಲ್ಲಾ ಪ್ರದೇಶಗಳೂ ಗತಿಗಾಣದೆ ಬಿದ್ದಿದ್ದ ತಲೆ ಬುರುಡೆಗಳಿಂದ ಆವೃತವಾಗಿತ್ತು ಎನ್ನಲಾಗಿದೆ. ಸ್ಥಳೀಯ ಜನಪದದ ಪ್ರಕಾರ ಕ್ಷಾಮಪೀಡಿತವಾಗಿದ್ದ ಪ್ರದೇಶಗಳಲ್ಲೆಲ್ಲಾ ತಲೆ ಬುರುಡೆಗಳೇ ಕಾಣುತ್ತಿದ್ದವು. ಹಸಿವು-ಬಾಯಾರಿಕೆಗಳಿಂದ ಸತ್ತು ಗತಿಗಾಣದೆ ಬಿದ್ದಿದ್ದವರ ಮೂಳೆ/ಬುರುಡೆಗಳಿಂದಾಗಿ ಈ ಬರವನ್ನು ಡವಗಿಬರ ಅಥವಾ ಬುರುಡೆಬರ ಎಂದೇ ಜನರು ನೆನಪಿಸಿಕೊಳ್ಳುತ್ತಾರೆ. ಗೋಕಾಕಿನಲ್ಲಿ ಹೆಂಗಸೊಬ್ಬಳು ಹಸಿವು ನೀಗಿಸಿಕೊಳ್ಳಲು ತನ್ನ ಮಕ್ಕಳನ್ನೇ ಕೊಂದು ತಿಂದಳಂತೆ. ಅದಕ್ಕಾಗಿ ಜನರು ಅವಳನ್ನು ಎಮ್ಮ್ಮೆಯ ಕಾಲಿನಿಂದ ತುಳಿಸಿ ಸಾಯಿಸಿದರಂತೆ ಎಂದು ದಾಖಲೆಗಳು ಹೇಳುತ್ತವೆ.
ಧಾರವಾಡ, ಬೆಳಗಾವಿ, ರಾಯಚೂರು, ಬಿಜಾಪುರ ಜಿಲ್ಲೆಗಳು ಡವಗಿಬರದಿಂದ ಹೆಚ್ಚು ಸಂಕಷ್ಟಕ್ಕೀಡಾದ ಪ್ರದೇಶಗಳು. ಬಹಳಷ್ಟು ಜನ ತಮ್ಮ ಊರುಗಳನ್ನು ತೊರೆದು ಬೇರೆಡೆಗೆ ವಲಸೆ ಹೋದರು. ಕ್ಷಾಮಕಾಲದ ಮೂರನೇ ವರ್ಷ ಇನ್ನೂ ಹೆಚ್ಚು ಭಯಂಕರವಾಗಿತ್ತು. ರೋಗ-ರುಜಿನಗಳು ಹರಡಿ ಇನ್ನೂ ಹೆಚ್ಚು ಸಾವು-ನೋವುಗಳುಂಟಾದವು. ಸತ್ತವರ ಸಂಸ್ಕಾರಕ್ಕೆ ಜನಗಳೇ ಇರಲ್ಲಿಲ್ಲ. ರಸ್ತೆ-ರಸ್ತೆಗಳಲ್ಲಿ ಜನರು ಸತ್ತು ಬಿದ್ದಿದ್ದರು. ಪ್ರಾಣಿ-ಪಕ್ಷಿಗಳು ಹೆಣಗಳನ್ನು ಹರಿದು ತಿಂದವು. ಅಳಿದುಳಿದ ಬುರುಡೆಗಳು, ಮೂಳೆಗಳು ರಸ್ತೆ ಬಯಲುಗಳಲ್ಲೆಲ್ಲಾ ಹರಡಿ ಬಿದ್ದಿದ್ದವು.
ಕ್ಷಾಮ ಕಳೆದ ಮೇಲೆ ಸ್ವಸ್ಥಳಕ್ಕೆ ಹಿಂದಿರುಗಿದ ಅಣ್ಣಿಗೇರಿಯ ಜನರು ತಮ್ಮ ಊರಿನ ಸುತ್ತ-ಮುತ್ತ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ಬುರುಡೆ/ಮೂಳೆಗಳನ್ನು ಸಂಗ್ರಹಿಸಿ ಅವುಗಳಿಗೆ ಸೂಕ್ತ ರೀತಿಯಲ್ಲಿ ಸಮಾಧಿ ಮಾಡಿದಂತೆ ತೋರುತ್ತದೆ. ಈ ಎಲ್ಲಾ ತಲೆಬುರುಡೆಗಳಿಗೆ ಕೆಳದವಡೆ ಮತ್ತು ಮೊದಲ ಕಶೇರು ಮಣಿ ಕಳಚಿಕೊಂಡಿದ್ದವು. ಮೂಳೆಗಳು ಕೀಲುಗಳಿಂದ ಕಳಚಿಕೊಂಡಿದ್ದವು, ಮುರಿದಿದ್ದವು, ಜಜ್ಜಿದ್ದವು, ಸೀಳಿದ್ದವು, ಜಖಂ ಆಗಿದ್ದವು. ಸಮಾಧಿ ಮಾಡುವಾಗ ತಲೆ ಭಾಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದು ವಾಡಿಕೆ. ಹೀಗಾಗಿ, ಸಂಗ್ರಹಿಸಿದ ತಲೆಬುರುಡೆಗಳನ್ನು ವ್ಯವಸ್ಥಿತವಾಗಿ ಜೋಡಿಸಿ ಸಮಾಧಿ ಮಾಡಿದ್ದಾರೆ. ಪ್ರಾಣಿ-ಪಕ್ಷಿಗಳು ತಿಂದ ನಂತರ ಉಳಿದಿದ್ದ ದೊಡ್ಡ ದೊಡ್ಡ ಮೂಳೆಗಳನ್ನು ಸಂಗ್ರಹಿಸಿ ರಾಶಿಯಾಗಿ ಒಂದು ತುದಿಯಲ್ಲಿ ಸುರಿದಿದ್ದಾರೆ. ಈ ಮೂಳೆಗಳ ರಾಶಿಯಲ್ಲಿ ಸಂಗ್ರಹಿಸಲಾದ ಕೆಳದವಡೆಗಳು, ಮುರಿದ-ಚೂರಾದ ತಲೆಬುರುಡೆಗಳು, ಬೆನ್ನು ಮೂಳೆಗಳು ಜೊತೆಗೆ ಒಂದು ಪೂರ್ಣ ಅಸ್ಥಿಪಂಜರ, ಎಲ್ಲವು ಕಂಡುಬಂದಿವೆ.
ಉತ್ಖನನದಲ್ಲಿ ದೊರೆತ ಈ ಎಲ್ಲಾ ಅಂಶಗಳೂ, ಈ ಸಮಾಧಿ, ಡವಗಿಬರಕ್ಕೆ ಬಲಿಯಾದ ಮನುಷ್ಯರ ಮೂಳೆಗಳಿಗಾಗಿ ಮಾಡಿದ್ದು ಎಂದು ಹೇಳುವುದಕ್ಕೆ ಪುಷ್ಟಿ ನೀಡುತ್ತವೆ. ಮೂಳೆಯ ಗಟ್ಟಿತನದ ಆಧಾರದ ಮೇಲೆ ನೀಡಿರುವ ಕಾಲಮಾನ, ಹಾಗೂ ಪದರಶಾಸ್ತ್ರದ ಮುಖಾಂತರ ನೀಡಬಹುದಾದ ಕಾಲವೂ ಸಹ ಈ ಮೂಳೆಗಳು ಸುಮಾರು ೨೦೦ ವರ್ಷಗಳಷ್ಟು ಹಳೆಯವು ಎಂಬ ಅನುಮಾನಕ್ಕೆ ಪುಷ್ಟಿ ನೀಡುತ್ತವೆ. ಆದ್ದರಿಂದ ೧೭೮೯-೯೨ರಲ್ಲಿ ಸಂಭವಿಸಿದ ಡವಗಿಬರದಲ್ಲಿ ಅಸುನೀಗಿದವರ ಅಸ್ಥಿಗಳಿಗಾಗಿ ಈ ಸಮಾಧಿಯನ್ನು ಅಣ್ಣಿಗೇರಿಯ ಮಹಾಜನರು ಮಾಡಿದ್ದಾರೆ ಎಂದು ಹೇಳಬಹುದು. ಹೀಗಾಗಿ ಈ ಬುರುಡೆಯ ಸಮಾಧಿಯ ಬಗ್ಗೆ ಈ ಮುಂಚೆ ಹೇಳಲಾಗಿರುವ ಅಭಿಪ್ರಾಯಗಳನ್ನು, ಈಗ ಲಭ್ಯವಾಗಿರುವ ಪುರಾತತ್ತ್ವದ ಆಧಾರದ ಮೇಲೆ, ಎಲುಬು ವಿಜ್ಞಾನದ ಆಧಾರದ ಮೇಲೆ ಮತ್ತು ಬ್ರಿಟಿಷ್ ಆಡಳಿತದ ದಾಖಲೆಗಳ ಆಧಾರಗಳ ಮೇಲೆ ಸಮಂಜಸವಲ್ಲವೆಂದು ತಿರಸ್ಕರಿಸಬಹುದು.
ಕೊನೆಯಲ್ಲಿ ಈ ಸಮಾಧಿಯ ಬಗ್ಗೆ ಹೇಳಬಹುದಾದ ಕೆಲವು ಮುಖ್ಯ ತೀರ್ಮಾನಗಳೆಂದರೆ: ಈ ರೀತಿಯಲ್ಲಿ ನೂರಾರು ಮಾನವ ತಲೆಬುರುಡೆಗಳನ್ನು ವ್ಯವಸ್ಥಿತವಾಗಿ ಜೋಡಿಸಿಟ್ಟು ಮತ್ತು ಅದಕ್ಕೆ ಸಂಬಂಧಿಸಿದ ಅಸ್ಥಿಗಳನ್ನು ಒಂದೇ ಸ್ಥಳದಲ್ಲಿ, ಒಂದೇ ಸಮಯದಲ್ಲಿ ಹೂತಿರುವ ಸನ್ನಿವೇಶ ಭಾರತೀಯ ಪುರಾತತ್ವ ಇತಿಹಾಸದಲ್ಲೇ ಪ್ರಪ್ರಥಮವೂ, ವಿಶಿಷ್ಟವೂ ಆದದ್ದು. ಈ ಸಮಾಧಿ ನೈಸರ್ಗಿಕ/ಹವಾಮಾನ ಪ್ರಕೋಪದಿಂದ ಸಾವಿಗೀಡಾದ ದುರ್ದೈವಿಗಳದ್ದು ಎಂಬುದು ಮತ್ತೊಂದು ಹೊಸ ವಿಷಯ. ಜಾತಿ, ಮತ, ವರ್ಗ, ಲಿಂಗ ಭೇದವಿಲ್ಲದೆ ಅಸ್ಥಿಗಳನ್ನು ಕೂಡಿಸಿ ಮಾಡಿದ ಸಮೂಹ ಸಮಾಧಿಯಿದು. ಆ ಕಾಲದ ಅಣ್ಣಿಗೇರಿಯ ಮಹಾಜನರ ಸಜ್ಜನಿಕೆಯ ಪ್ರತೀಕವಾಗಿ ನಿರ್ಮಾಣವಾದ ಸಮಾಧಿ ಇದಾಗಿದೆ. ಇದುವರೆಗೆ ನಮಗೆ ಡವಗಿಬರದ ಭೀಕರತೆಯು ಇತಿಹಾಸದಿಂದ, ಜಾನಪದದಿಂದ ಮಾತ್ರ ತಿಳಿದಿತ್ತು. ಆದರೆ ಈಗ ಡವಗಿಬರದ ಭಯಂಕರ ಭೌತಿಕ ಪರಿಚಯ ನಮಗೆ ಈ ಸಮಾಧಿಯಿಂದ ಆಗಿದೆ.  
ಉತ್ಖನಿತ ಪುರಾತತ್ವಿಕ ಮಾಹಿತಿಗಳು, ಅಸ್ಥಿ ವಿಜ್ಞಾನ ವಿಶ್ಲೇಷಣೆ ಹಾಗೂ ಬ್ರಿಟಿಷ್ ಸರ್ಕಾರದ ಆಡಳಿತದ ದಾಖಲೆಗಳು, ಇವೆಲ್ಲವುಗಳನ್ನೂ ಕೂಲಂಕಷವಾಗಿ ಅಧ್ಯಯನ ಮಾಡಿ, ಅಣ್ಣಿಗೇರಿಯ ತಲೆಬುರುಡೆ ಸಮಾಧಿಯು ಕ್ರಿ.ಶ.೧೭೮೯-೯೨ರ ನಡುವೆ ಸಂಭವಿಸಿದ ಭೀಕರ ಕ್ಷಾಮದಲ್ಲಿ (ಡವಗಿಬರ) ಮೃತರಾದವರಿಗೆ, ಸಾವು ಸಂಭವಿಸಿದ ಕೆಲವಾರು ವರ್ಷಗಳ ನಂತರ, ಅಣ್ಣಿಗೇರಿಯ ಸತ್ಪ್ರಜೆಗಳು ಮಾಡಿದ ಶವ (ಅಸ್ಥಿ) ಸಂಸ್ಕಾರದ ಕ್ರಿಯೆ ಎಂದು ಹೇಳಿದ್ದೇವೆ. ಆದರೇ, ಪುರಾತತ್ವ ಶಾಸ್ತ್ರಜ್ಞರು ಸಮಾಧಿಯ ಮೂಳೆಗಳ ಬಗ್ಗೆ ನೀಡಿರುವ ಈ ಕಾಲಮಾನ ಎಷ್ಟರ ಮಟ್ಟಿಗೆ ಸರಿ ಎಂಬ ಅನುಮಾನ ಬರುವುದು ಸಹಜ. ಇದರಿಂದಾಗಿ ಅಣ್ಣಿಗೇರಿಯ ಬುರುಡೆಗಳ ತುಣುಕುಗಳನ್ನು ಮತ್ತು ಹಲ್ಲುಗಳನ್ನು ವೈಜ್ಞಾನಿಕ ಪ್ರಯೋಗಾಲಯ ಪರೀಕ್ಷೆಗಾಗಿ ಅಮೇರಿಕಾ ಸಂಯುಕ್ತ ಸಂಸ್ಥಾನದ (USಂ) ಮಿಯಾಮಿ, ಫ್ಲಾರಿಡಾದಲ್ಲಿರುವ ಬೀಟಾ ಅನಾಲಿಟಿಕ್ ಇನ್‌ಕಾರ್ಪೂರೇಷನ್ ಸಂಸ್ಥೆಯ ಪ್ರಯೋಗಾಲಯಕ್ಕೆ, ವೈಜ್ಞಾನಿಕ ಕಾಲನಿರ್ಣಯಕ್ಕಾಗಿ ಕಳುಹಿಸಲಾಯಿತು. ವೈಜ್ಞಾನಿಕ ಪರೀಕ್ಷಾ ವರದಿ ನೀಡಿರುವ ಅಲ್ಲಿಯ ತಜ್ಞರು ಈ ಮೂಳೆಗಳು ಮತ್ತು ಹಲ್ಲುಗಳು ಸುಮಾರು ೧೮೦-೨೦೦ ವರ್ಷಗಳಷ್ಟು ಮಾತ್ರ ಹಳೆಯವು ಎಂದು ತೀರ್ಮಾನಿಸಿದ್ದಾರೆ. ಪುರಾತತ್ವವಿದರು ನೀಡಿರುವ ಕಾಲಮಾನಕ್ಕೆ (೨೨೦ ವರ್ಷಗಳು) ಹೆಚ್ಚು-ಕಡಿಮೆ ವೈಜ್ಞಾನಿಕ ವಿಶ್ಲೇಷಣೆಯ ಕಾಲಮಾನವೂ ಸರಿಹೊಂದುತ್ತದೆ. ಹೀಗಾಗಿ ಅಣ್ಣಿಗೇರಿಯ ತಲೆಬುರುಡೆ ಸಮಾಧಿಯು ಕ್ರಿ.ಶ.೧೭೮೯-೯೨ರಲ್ಲಿ ಸಂಭವಿಸಿದ ಡವಗಿಬರಕ್ಕೆ ಆಹುತಿಯಾದವರ ತಲೆಬುರುಡೆಗಳು ಮತ್ತು ಮೂಳೆಗಳಿಗಾಗಿ ಮಾಡಿದ್ದಾಗಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದು.
ಅಣ್ಣಿಗೇರಿಯ ತಲೆಬುರುಡೆ ಸಮಾಧಿಯ ಬಗ್ಗೆ ಡಾ| ಎಂ.ಎಂ. ಕಲ್ಬುರ್ಗಿಯವರೂ ಸಹ ತಮ್ಮ ಅಭಿಪ್ರಾಯವನ್ನು ಕೆಲವಾರು ಪತ್ರಿಕಾ ಮಾಧ್ಯಮಗಳಲ್ಲಿ ವ್ಯಕ್ತಪಡಿಸಿದ್ದಾರೆ. ಅವರು ಈ ತಲೆಬುರುಡೆಗಳ ಸಮಾಧಿ, ಮಾಹೇಶ್ವರರೆಂದು ಕರೆಯಲ್ಪಡುವ ಪರಮ ಶಿವಭಕ್ತರ ಸ್ವಯಂಛೇದಿತ (ಆತ್ಮಾಹುತಿ ಮಾಡಿಕೊಂಡ) ಶಿರಗಳದ್ದೆಂದು ಹೇಳಿದ್ದಾರೆ. ಅವರ ವಾದಕ್ಕೆ ಪೋಷಕವಾಗಿ ಮನುಷ್ಯರ ತಲೆಗಳನ್ನು ಪಕ್ಕಪಕ್ಕದಲ್ಲಿ, ವ್ಯವಸ್ಥಿತವಾಗಿ ಜೋಡಿಸಿಟ್ಟಿರುವುದನ್ನು ಬಿಂಬಿಸುವ ಉಬ್ಬುಶಿಲ್ಪದ, ಶ್ರೀಶೈಲದ, ಪ್ರಾಚೀನ ಶಿಲಾಫಲಕವನ್ನು ಉಲ್ಲೇಖಿಸುತ್ತಾರೆ. ಹಾಗೂ ಈ ಸಮಾಧಿ ಸುಮಾರು ಎಂಟುನೂರು ವರ್ಷಗಳಷ್ಟು ಹಳೆಯದಿರಬಹುದೆಂದೂ ಅಭಿಪ್ರಾಯಪಡುತ್ತಾರೆ. ಡಾ| ಕಲ್ಬುರ್ಗಿಯವರು ಕೊಟ್ಟಿರುವ ಶಿಲ್ಪಯುತ ಶಿಲಾಫಲಕ ಅಣ್ಣಿಗೇರಿಯ ಉತ್ಖನಿತ ಬುರುಡೆ ಸಮಾಧಿಯ ಚಿತ್ರವನ್ನು ನೆನಪಿಗೆ ತರಬಹುದು. ಆದರೆ ಕಲ್ಬುರ್ಗಿಯವರ ವಾದವನ್ನು ಅಣ್ಣಿಗೇರಿಯ ತಲೆಬುರುಡೆ ಸಮಾಧಿಯೊಂದಿಗೆ ಸಮೀಕರಿಸಲು ಪುರಾತತ್ತ್ವಿಕ ಮತ್ತು ಅಸ್ಥಿ ವೈಜ್ಞಾನಿಕ ಕುರುಹುಗಳು ಅಡ್ಡಬರುತ್ತವೆ. ಏಕೆಂದರೆ ಅಣ್ಣಿಗೇರಿಯ ಬುರುಡೆಗಳಾವುದಕ್ಕೂ ಕೆಳದವಡೆ ಮತ್ತು ಮೇಲಿನ ಕಶೇರುಮಣಿ ಇರುವುದು ಕಂಡುಬಂದಿಲ್ಲ. ಯಾವುದೇ ಮಾನವ ಶವಸಂಸ್ಕಾರ ಪದ್ಧತಿಯಲ್ಲಿ ಕತ್ತರಿಸಿದ ಶಿರವನ್ನು ಹೂಳುವಾಗ ಕೆಳದವಡೆಯನ್ನು ತಲೆಬುರುಡೆಯಿಂದ ಬೇರ್ಪಡಿಸುವ ಪದ್ದತಿ ಕಂಡಿಲ್ಲ, ಕೇಳಿಲ್ಲ. ಅಂತೆಯೇ ಆ ಶಿರಗಳಿಗೆ ಸಂಬಂಧಿಸಿದ ಇತರ ಭಾಗಗಳನ್ನು ಕತ್ತರಿಸಿ, ಛೇದಿಸಿ ಗುಡ್ಡೆಯಾಗಿ ಹಾಕಿ ಶವಸಂಸ್ಕಾರ ಮಾಡಿರುವ ಅಥವಾ ಮಾಡುವ ಪದ್ದತಿಯಿರಲಿಲ್ಲ. ಇಂತಹ ಶವಗಳ ಸಮಾಧಿಯನ್ನು ಕೇವಲ ಆರು ಇಂಚು ಆಳದ ಗುಂಡಿಯಲ್ಲಿ ಹೂಳುವ ಮತ್ತು ಅದರ ಮೇಲೆ ಕೇವಲ ಆರು ಇಂಚು ದಪ್ಪದ ಮಣ್ಣು ಮುಚ್ಚಿರುವ ಸಂಗತಿ ಅಥವಾ ಅಭ್ಯಾಸ ಇರಲಿಲ್ಲ. ಅಲ್ಲದೇ ಈ ಬುರುಡೆಗಳ ಸಮೂಹದಲ್ಲಿ, ವಿವಿಧ ವಯಸ್ಸಿನ ಸ್ತ್ರೀಯರ, ಪುರುಷರ ಮತ್ತು ಮಕ್ಕಳ ಬುರುಡೆಗಳು ಕಂಡುಬಂದಿವೆ. ಆತ್ಮಾರ್ಪಣೆಯನ್ನು ಮಾಡಿಕೊಳ್ಳುತ್ತಿದ್ದ ಮಾಹೇಶ್ವರರ ಸಮೂಹದಲ್ಲಿ ಸ್ತ್ರೀ-ಬಾಲರು ಇರುತ್ತಿದ್ದರೇ ಎಂಬುದು ಪ್ರಶ್ನಾರ್ಹ. ಮಾನ್ಯ ಕಲ್ಬುರ್ಗಿಯವರು ಅವರ ವಾದವನ್ನು ಮಂಡಿಸುವ ಮುನ್ನ, ಉತ್ಖನನದಲ್ಲಿ ಕಂಡು ಬಂದಿರುವ ಈ ಎಲ್ಲಾ ಅಂಶಗಳಿಗೆ ಸಮರ್ಪಕವಾದ ಉತ್ತರ ನೀಡಬೇಕಾಗಿತ್ತು. ಆದರೆ ಅವರು ಅವುಗಳ ಗೋಜಿಗೆ ಹೋಗಿಲ್ಲ. ಹೀಗಾಗಿ, ಅವರ ವಾದವನ್ನು ಸತ್ಯಕ್ಕೆ ದೂರವಾದ, ಕೇವಲ ವೈಯಕ್ತಿಕ ಅಭಿಪ್ರಾಯವೆಂದು ಪರಿಗಣಿಸಬಹುದು.
[ಈ ಸಂಶೋಧನೆಯನ್ನು ‘ಡವಗಿ ಬರದತ್ತ ಗಮನಹರಿಸಲು ಸಲಹೆ ನೀಡಿದ ಡಾ|| ಶ್ರೀಮತಿ ವಸುಂಧರಾ ಫಿಲಿಯೋಜ ಅವರಿಗೆ ಲೇಖಕರು ಕೃತಜ್ಞರಾಗಿದ್ದಾರೆ.]
ಪ್ರೊಫೆಸರ್ ಎಮೆರಿಟಸ್, ಪುರಾತತ್ತ್ವ ವಿಭಾಗ, ಮಾಸನಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
 ನಿರ್ದೇಶಕರು, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ನಿರ್ದೇಶನಾಲಯ, ಕರ್ನಾಟಕ ಸರ್ಕಾರ, ಮೈಸೂರು.
 ಉಪನಿರ್ದೇಶಕರು, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ನಿರ್ದೇಶನಾಲಯ, ಕರ್ನಾಟಕ ಸರ್ಕಾರ, ಮೈಸೂರು.ಅ





1 comment:

  1. Sir,
    I want to know about the latest Forensic Reports from other countries to whom you have sent the specimen. Is there any outcome for the theory that you have put up. Please enlighten me in this regard.
    Dr.Harihara Sreenivasa Rao.

    ReplyDelete