Monday, December 24, 2012

ಈಸೂರಲ್ಲಿ ಶಾತವಾಹನರ ಕಾಲದ ಇಟ್ಟಿಗೆಗಳು ಮತ್ತು ಪ್ರಾಚ್ಯಾವಶೇಷಗಳು


ಜಯದೇವಪ್ಪ ಜೈನಕೇರಿ
೮೭‘ಶಾಂತಲಾ ಕುವೆಂಪು ರಸ್ತೆಶಿವಮೊಗ್ಗ-೫೭೭೨೦೧.

ಸೂರಿನ ಗಜಪೃಷ್ಠಾಕಾರದ ದೇವಾಲಯ : ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಿಂದ ೧೦ ಕಿ.ಮೀ. ದಕ್ಷಿಣಕ್ಕೆ ಕುಮದ್ವತಿ ನದಿಯ ಬಲದಂಡೆಯ ಮೇಲಿರುವ ಗ್ರಾಮ ಐತಿಹಾಸಿಕ ಪ್ರಸಿದ್ಧ ‘ಈಸೂರು ಕರ್ನಾಟಕ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕನ್ನಡ ನಾಡಿಗೆ ಹೆಮ್ಮೆ ಮತ್ತು ಪ್ರಸಿದ್ಧಿ ಪಡೆದ ಗ್ರಾಮ. ದೇಶದ ಸ್ವಾತಂತ್ರ್ಯಕ್ಕಾಗಿ ೫ ಜನ ದೇಶಭಕ್ತರು ನೇಣಿಗೇರಿದರು. ಮೂವರು ಸ್ತ್ರೀಯರೂ ಸೆರೆಮನೆವಾಸ ಅನುಭವಿಸಿದ ಇತಿಹಾಸ ಪ್ರಸಿದ್ಧ ಊರು ಈಸೂರು. ಐತಿಹಾಸಿಕವಾಗಿಯೂ ಈಸೂರು ಪ್ರಸಿದ್ಧವಾಗಿದ್ದು, ಈ ಮಾತಿಗೆ ಸಾಕ್ಷಿಯಾಗಿ ಗ್ರಾಮದಲ್ಲಿ ಶಾಸನ ಶಿಲ್ಪಗಳು, ವೀರಗಲ್ಲುಗಳು, ಮಹಾಸತಿ ಶಿಲ್ಪಗಳು ಮತ್ತು ಪ್ರಾಚೀನ ಸ್ಮಾರಕಗಳ ಪಳೆಯುಳಿಕೆಗಳು ಕಂಡುಬರುತ್ತಿವೆ. ಗ್ರಾಮದಲ್ಲಿರುವ ವೀರಭದ್ರ ದೇವಾಲಯ ಕಲ್ಯಾಣ ಚಾಳುಕ್ಯರ ಕಾಲದ ಅತ್ಯಂತ ಕಲಾತ್ಮಕ ೪ ಸ್ಥಂಭಗಳಿಂದ ಕೂಡಿದೆ. ಬಾಗಿಲುವಾಡ ಮತ್ತು ಭುವನೇಶ್ವರಿಯಲ್ಲಿ ನವಗ್ರಹ ಶಿಲ್ಪ ಕೆತ್ತನೆ ಸುಂದರವಾಗಿದೆ. ಈಗ ರೂಪಾಂತರಗೊಂಡಿರುವ ಈ ದೇವಾಲಯದ ಗರ್ಭಗುಡಿಯಲ್ಲಿರುವ ಶಿವಲಿಂಗದ ಪೀಠದ ಮೇಲೆ ವೀರಭದ್ರ ಮತ್ತು ಕಾಳೀ ವಿಗ್ರಹಗಳನ್ನು ಸ್ಥಾಪಿಸಿ ಪೂಜಿಸಲಾಗುತ್ತಿದೆ. ಗ್ರಾಮಸ್ಥರು ಕೆಲವು ಸ್ಮಾರಕಗಳನ್ನು ಸಂರಕ್ಷಿಸಿ ಪೂಜಿಸುತ್ತಿದ್ದಾರೆ. ಇನ್ನೂ ಹತ್ತಾರು ಶಾಸನಗಳು ಗ್ರಾಮದಲ್ಲಿದ್ದ ಕೋಟೆಯ ಸುತ್ತ ಅನಾಥವಾಗಿ ಬಿದ್ದಿವೆ. ಹೊಲಗಳಲ್ಲಿ ನದಿ ದಂಡೆಯಲ್ಲಿ ಸಹ ಶಾಸನಗಳಿವೆ. ಪ್ರಾಚೀನ ಮಡಕೆಗಳು ನದಿದಂಡೆಯ ಹೊಲಗಳಲ್ಲಿ ದೊರಕಿವೆ. ಹಲವಾರು ಶಾಸನಗಳು ಈಗಾಗಲೇ ಬಿ.ಎಲ್. ರೈಸ್ ಅವರಿಂದ ಮತ್ತು ಇತರ ವಿದ್ವಾಂಸರಿಂದ ಬೆಳಕಿಗೆ ಬಂದಿವೆ. ೧೨ನೇ ಶತಮಾನದ ಶರಣೆ ಆಯ್ದಕ್ಕಿ ಲಕ್ಕಮ್ಮನ ಸಮಾಧಿ ಎಂದು ಸ್ಥಳೀಯ ಜಯಪ್ಪನವರು ಹೇಳುವ ಸ್ಮಾರಕ ಈಗ ಹಾಳಾಗಿದ್ದು, ಶಿವಲಿಂಗ, ಬಸವಣ್ಣ ಮೂರ್ತಿಗಳು ಬಯಲಿನಲ್ಲಿ ಅನಾಥವಾಗಿ ಬಿದ್ದಿವೆ.
‘ಈಸವೂರು (ಈಸೂರು) ಎಂಬ ಉಲ್ಲೇಖವಿರುವ ನಾಣ್ಯವನ್ನು ಶ್ರೀ ನಿತ್ಯಾನಂದ ಪೈ ಗುರುತಿಸಿದ್ದಾರೆ. ಗ್ರಾಮದಲ್ಲಿರುವ ರಾಮೇಶ್ವರ ದೇವಾಲಯದ ಅಧಿಷ್ಠಾನ ಗಜಪೃಷ್ಠಾಕೃತಿಯಲ್ಲಿದ್ದು ಹೊಯ್ಸಳ ವಾಸ್ತುಶೈಲಿಯಲ್ಲಿದೆ. ಮೇಲಿನ ದೇವಾಲಯ ಪೂರ್ಣ ನಾಶವಾಗಿದೆ. ಸುಮಾರು ೮-೯ನೇ ಶತಮಾನದ ಶಿವಲಿಂಗದ ಪೀಠವಿದೆ. ಗಣಪತಿ, ಶಿವ, ವಿಷ್ಣು, ಅನಂತಶಯನ ವಿಗ್ರಹಗಳು ಭಗ್ನಗೊಂಡಿವೆ. ಇನ್ನೂ ಹಲವಾರು ದೇವಾಲಯದ ಭಾಗಗಳು ಅಲ್ಲಲ್ಲಿ ಅನಾಥವಾಗಿವೆ. ಇತ್ತೀಚೆಗೆ ಗ್ರಾಮಸ್ಥರು ಈ ಅಧಿಷ್ಠಾನದ ಮೇಲೆ ದೇವಾಲಯ ನಿರ್ಮಿಸಲು ಗುಂಡಿ ತೆಗೆಯುವಾಗ ದೊಡ್ಡ ಅಳತೆಯ ೨೨ x ೧೧ x/ ದಪ್ಪದ ಸುಟ್ಟ ಇಟ್ಟಿಗೆ ಅಧಿಷ್ಠಾನ ದೊರಕಿರುವುದು ಬೆಳಕಿಗೆ ಬಂದಿದೆ. ಈ ಇಟ್ಟಿಗೆಗಳು ಶಾತವಾಹನ ಕಾಲಕ್ಕೆ ಅಂದರೆ ಕ್ರಿ.ಶ.೨ನೇ ಶತಮಾನಕ್ಕೆ ಸೇರಿವೆ. ಇದೇ ಮಾದರಿಯ ಇಟ್ಟಿಗೆ ಕಟ್ಟಡಗಳು ಬಳ್ಳಿಗಾವಿ, ತಾಳಗುಂದ, ಹರಿಷಿ, ಬನವಾಸಿ ಮುಂತಾದ ಕಡೆ ದೊರೆತಿವೆ.
ಇತ್ತೀಚೆಗೆ ಸ್ಥಳೀಯರು ಈ ದೇವಾಲಯಕ್ಕೆ ಜೀರ್ಣೋದ್ಧಾರ ಮಾಡಬೇಕೆಂದು ಒಂದು ನಕಾಶೆಯನ್ನು ತಯಾರಿಸಿ ಅದರ ಪ್ರಕಾರ ಕಾರ್ಯವನ್ನು ಆರಂಭಿಸಿದರು. ದೊಡ್ಡ ದೊಡ್ಡ ಕಾಂಕ್ರೀಟು ಕಂಬಗಳನ್ನು ಇಡಲು ಗುಂಡಿಗಳನ್ನು ತೋಡಿದಾಗ ಈ ಶಿಲಾ ದೇವಾಲಯದ ಸುಮಾರು ಒಂದು ಮೀಟರ್ ಕೆಳಗೆ ಇಟ್ಟಿಗೆ ಕಟ್ಟಡವೊಂದು ಗೋಚರಿಸಿತು. ಕಂಭಗಳಿಗೋಸ್ಕರ ತೆಗೆದ ಗುಂಡಿಗಳಲೆಲ್ಲ ಇಟ್ಟಿಗೆ ಗೋಡೆ ಕಾಣಿಸಿತು. ಈ ರೀತಿ ಕಾಣಿಸಿಕೊಂಡ ಇಟ್ಟಿಗೆ ಗೋಡೆ ಬಗ್ಗೆ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಸಣ್ಣ ವರದಿ ಪ್ರಕಟವಾಯಿತು. ಇದನ್ನು ಗಮನಿಸಿ ದಿನಾಂಕ ೧೪-೦೮-೨೦೧೧ರಂದು ಡಾ. ಅ. ಸುಂದರ, ಪ್ರಾಧ್ಯಾಪಕರು (ನಿವೃತ್ತ) ಮತ್ತು ಪುರಾತತ್ತ್ವಜ್ಞ, ಶ್ರೀ ಜಯದೇವಪ್ಪ ಜೈನಕೇರಿ, ಶಿವಮೊಗ್ಗ ಸೇರಿ ಈ ಸ್ಥಳ ಪರಿಶೀಲಿಸಿದರು. ಈ ಪರಿಶೀಲನೆಯಲ್ಲಿ ಆ ಇಟ್ಟಿಗೆ ಕಟ್ಟಡವು ಒಂದು ದೊಡ್ಡ ಗಜಪೃಷ್ಠಾಕಾರದ ದೇವಾಲಯವಾಗಿ ಕಾಣಿಸುತ್ತದೆ ಇದರಿಂದ ಸುಮಾರು ಒಂದು ಮೀಟರ್ ಮೇಲೆ ಇದ್ದ ರಾಮೇಶ್ವರ ದೇವಾಲಯ ಗಜಪೃಷ್ಠಾಕಾರದಲ್ಲಿದೆ. ಈ ದೇವಾಲಯ ಹೊಯ್ಸಳ ಕಾಲದ್ದಾಗಿದ್ದು ತುಂಬಾ ದುಸ್ಥಿತಿಯಲ್ಲಿದೆ. ಕೇವಲ ಇದರ ಅಧಿಷ್ಠಾನದ ಕೆಲವು ಭಾಗಗಳು ಅಲ್ಲಲ್ಲಿ ಇದೆ.
ಈ ಇಟ್ಟಿಗೆ ಕಟ್ಟಡವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಇಟ್ಟಿಗೆಗಳ ಅಳತೆ ಮತ್ತು ಮಾಡಿದ ತಂತ್ರವನ್ನು ನೋಡಿದಾಗ ಈ ಕಟ್ಟಡವು ಶಾತವಾಹನರ ಕಾಲದ್ದು ಎಂದು ಖಚಿತವಾಯಿತು. ಈ ದೇವಾಲಯ ಕಾಲಕ್ರಮೇಣ ದುಸ್ಥಿತಿಗೆ ಬಂದಿದೆ. ಅದೇ ವಿನ್ಯಾಸದಲ್ಲಿ ಹೊಯ್ಸಳರ ಕಾಲದಲ್ಲಿ ಶಿಲಾ ದೇವಾಲಯವನ್ನು ನಿರ್ಮಿಸಲಾಗಿದೆ. ಅಂದರೆ ಈಗಿರುವ ರಾಮೇಶ್ವರ ದೇವಾಲಯ ಸುಮಾರು ಮೂಲದಲ್ಲಿ ೨೦೦೦ ವರ್ಷ ಪ್ರಾಚೀನ ದೇವಾಲಯ, ಜೀರ್ಣೋದ್ಧಾರ ಹೊಂದುತ್ತಾ ಇವತ್ತಿಗೂ ಉಳಿದುಕೊಂಡಿರುವುದು ಇತಿಹಾಸದ ಮಹತ್ವದ ಸಂಗತಿ. ಈ ಸ್ಥಳವು ಹೊಯ್ಸಳ ದೊರೆ ವಿಷ್ಣುವರ್ಧನ ಪಟ್ಟದ ರಾಣಿ ಶಾಂತಲೆಯ ಹುಟ್ಟೂರು ಆಗಿದ್ದಂತೆ ತೋರುತ್ತದೆ. ಇಲ್ಲಿಯ ಸನಿಹದ ಬಳ್ಳಿಗಾವೆಯಲ್ಲಿ ಆಕೆಯ ವಿದ್ಯಾಭ್ಯಾಸ ಆಗಿದೆ. ಆಕೆಯು ತನ್ನ ಹುಟ್ಟೂರಿನ ಹೆಸರನ್ನೊಳಗೊಂಡ ‘ಈಸಪುರ ನಾಣ್ಯವನ್ನು ಹೊರಡಿಸಿದ್ದಾಳೆ. ಅಲ್ಲದೇ ಬಾದಾಮಿ ಚಾಲುಕ್ಯರ ಕಾಲದ ಶಾಸನವೊಂದರ ಶಾಪಾಶಯ ಭಾಗದಲ್ಲಿ ಸಾಗರ ತಾಲೂಕಿನ ಗೌಜ, ಶಿಕಾರಿಪುರ ತಾಲೂಕಿನ ಬಂದಳಿಕೆ ಮತ್ತು ಈಸವೂರು ಮತ್ತು ಪ್ರಾಯಶಃ ಬಾದಾಮಿಯನ್ನು ಹೆಸರಿಸಿದೆ. ಈ ವಿವರಗಳು ಈಸೂರಿಗೆ ಇರುವ ಪ್ರಾಮುಖ್ಯತೆಯನ್ನು ಮನದಟ್ಟು ಮಾಡಿಕೊಡುತ್ತವೆ. ಅಲ್ಲದೆ ಐತಿಹಾಸಿಕವಾಗಿ ಮಹತ್ವ ಪಡೆದಿತ್ತೆಂದು ತೋರುತ್ತದೆ.
ಅಷ್ಟೇ ಪ್ರಾಚೀನ ದೇವಾಲಯ ನಿರ್ಮಾಣದಲ್ಲಿ ಇದು ಒಂದು ವಿನ್ಯಾಸದ ಪ್ರಕಾರ ಮೌರ್ಯ ಚಕ್ರವರ್ತಿ ಅಶೋಕನ ಕಾಲದಿಂದ ಈ ವಿನ್ಯಾಸದಲ್ಲಿ ಬೌದ್ಧಗುಹಾಲಯಗಳು ರಚನೆಯಾಗುತ್ತಾ ಬಂದಿವೆ. ಅದರಂತೆ ಕೊನೆಯ ಪಕ್ಷ ಎರಡನೆಯ ಶತಮಾನದಲ್ಲಿ ಈ ಭಾಗದಲ್ಲಿ ಅಲ್ಲಲ್ಲಿ ಈ ವಿನ್ಯಾಸದ ದೇವಾಲಯಗಳು ಉತ್ಖನನದಲ್ಲಿ ಕಂಡುಬಂದಿವೆ. ಉದಾಹರಣೆಗೆ ಮಥುರಾ, ನಾಗಾರ್ಜುನಕೊಂಡ, ಬನವಾಸಿ, ಇತ್ತೀಚೆಗೆ ರಾಜಘಟ್ಟ. ಎಂಟನೆಯ ಶತಮಾನದ ನಂತರ ಶಿಲಾ ದೇವಾಲಯಗಳಾಗಲೀ ಇಟ್ಟಿಗೆ ದೇವಾಲಯಗಳಾಗಲೀ ಈ ವಿನ್ಯಾಸದಲ್ಲಿ ಇರುವುದು ನಮಗೆ ತಿಳಿದ ಮಟ್ಟಿಗೆ ಕಂಡುಬಂದಿಲ್ಲ. ಆದರೆ ಇದಕ್ಕೆ ಕರಾವಳಿ ಪ್ರದೇಶ ಅಪವಾದವಾಗಿದೆ. ಗೋಕರ್ಣದಲ್ಲಿ ಪರಶುರಾಮೇಶ್ವರ ದೇವಾಲಯ, ಹಿರೇಗುತ್ತಿಯಲ್ಲಿ ಸುಮಾರು ೧೦-೧೧ನೆಯ ಶತಮಾನದ ಈ ವಿನ್ಯಾಸದ ದೇವಾಲಯಗಳಿವೆ. ಇಲ್ಲಿಂದ ಕೇರಳದ ತಿರುವನಂತಪುರದವರೆಗೆ ಬಹಳಷ್ಟು ಶಿಲಾ ದೇವಾಲಯಗಳು ಈ ವಿನ್ಯಾಸದಲ್ಲಿರುವುದು ಕುತೂಹಲಕಾರಿಯಾಗಿದೆ.
ಕರ್ನಾಟಕದಲ್ಲಿ ಬೃಹತ್ ಶಿಲಾಯುಗದ ಕಾಲದಿಂದಲೂ ಗಜಪೃಷ್ಠಾಕಾರದ ಕಟ್ಟಡಗಳು ನಿರ್ಮಾಣವಾಗುತ್ತಿರುವುದನ್ನು ಎಚ್.ಎಸ್. ಗೋಪಾಲರಾಯರು ಗುರುತಿಸಿದ್ದಾರೆ.  ದೇವಾಲಯಗಳ ಅಧಿಷ್ಠಾನದ ವಿನ್ಯಾಸವನ್ನು ಆಧರಿಸಿ ನಾಲ್ಕು ವಿಧಗಳು ಕಂಡುಬರುತ್ತವೆ. ಅವುಗಳನ್ನು ೧. ಚಚ್ಚೌಕ, ೨. ಆಯತ, ೩. ವೃತ್ತ ಮತ್ತು ೪. ಗಜಪೃಷ್ಠಗಳೆಂದು ಗುರುತಿಸಲಾಗಿದೆ. ಐಹೊಳೆಯಲ್ಲಿ ಕ್ರಿ.ಶ.೧೮೬೬ರಲ್ಲಿ ಬೆಳಕಿಗೆ ಬಂದ ದುರ್ಗಾ ದೇವಾಲಯದ ಹಿನ್ನೆಲೆಯಲ್ಲಿ ಕೆ.ಆರ್. ಶ್ರೀನಿವಾಸನ್ ಅವರು ಗಜಪೃಷ್ಠಾಕಾರದ ದೇವಾಲಯಗಳ ಮೂಲವನ್ನು ಚರ್ಚಿಸಿದ್ದಾರೆ. ಪಾಶ್ಚಾತ್ಯ ವಿದ್ವಾಂಸರು ಇದರ ಮೂಲವನ್ನು ಬೌದ್ಧರ ಚೈತ್ಯಗಳಲ್ಲಿ ಗುರುತಿಸುವ ಪ್ರಯತ್ನ ಮಾಡಿದ್ದಾರೆ. ಬನವಾಸಿ ಸಮೀಪ ನಡೆದ ಉತ್ಖನನದಲ್ಲಿ ಗಜಪೃಷ್ಠಾಕಾರದ ಕಟ್ಟಡದ ಅವಶೇಷಗಳನ್ನು ಕೇಂದ್ರ ಪುರಾತತ್ವ ಇಲಾಖೆ ಪತ್ತೆ ಮಾಡಿದೆ. ಚಿತ್ರದುರ್ಗ ಸಮೀಪ ಚಂದ್ರವಳ್ಳಿಯ ಉತ್ಖನನದಲ್ಲಿಯೂ ಗಜಪೃಷ್ಠಾಕಾರದ ಅವಶೇಷಗಳು ಪತ್ತೆಯಾಗಿವೆ. ಇವುಗಳು ಸಹ ಬೌದ್ಧ ಅಥವಾ ಶಿವ ದೇವಾಲಯಗಳಾಗಿರಬಹುದೆಂದು ಊಹಿಸಲಾಗಿದೆ. ಬೆಳಗಾವಿ ಸಮೀಪದ ವಡಗಾವ್ ಮಾಧವಪುರದಲ್ಲಿ ಸಹ ಇಂತಹುದೇ ನಿವೇಶನ ಪತ್ತೆಯಾಗಿದೆ. ಬೃಹತ್ ಶಿಲಾಯುಗದ ಕೆಲವು ಸಮಾಧಿಗಳು ಚೈತ್ಯವನ್ನು ಹೋಲುತ್ತವೆ. ಬನವಾಸಿ ಸಮೀಪ ಗುಡ್ನಾಪುರದಲ್ಲಿ ಮತ್ತು ರಾಜಘಟ್ಟದಲ್ಲಿ ನಡೆದ ಉತ್ಖನನದಲ್ಲಿ ಶಾತವಾಹನರ ಕಾಲದ ಚೈತ್ಯಾಲಯವೊಂದು ಬೆಳಕಿಗೆ ಬಂದಿವೆ. ಸುಟ್ಟ ಇಟ್ಟಿಗೆಗಳಿಂದ ಕ್ರಿ.ಶ. ಸು.೪ರಿಂದ ೬ನೇ ಶತಮಾನದಲ್ಲಿ ಶಾತವಾಹನರ, ಕದಂಬರ ಮತ್ತು ದಕ್ಷಿಣದಲ್ಲಿ ಗಂಗರ ಆಳ್ವಿಕೆಯಿದ್ದ ಸಂದರ್ಭದಲ್ಲಿ ಬನವಾಸಿ ಮತ್ತು ರಾಜಘಟ್ಟಗಳಲ್ಲಿ ಗಜಪೃಷ್ಠಾಕಾರದ ಚೈತ್ಯಾಲಯಗಳು ನಿರ್ಮಾಣವಾಗಿವೆ.
ಐಹೊಳೆಯ ದುರ್ಗಾ ದೇವಾಲಯ ಅತ್ಯಂತ ಪ್ರಾಚೀನ ಸಂರಕ್ಷಿತ ದೇವಾಲಯವಾಗಿ ಇಂದಿಗೂ ಮಾದರಿಯಾಗಿದೆ. ಸಮೀಪದ ಮಹಾಕೂಟದಲ್ಲಿಯೂ ಕ್ರಿ.ಶ.೫ನೇ ಶತಮಾನಕ್ಕೆ ಸೇರಿದ ಗಜಪೃಷ್ಠಾಕಾರದ ಗರ್ಭಗೃಹವಿರುವ ಶಿವ ದೇವಾಲಯವಿದೆ. ಪಶ್ಚಿಮ ಕರಾವಳಿ ಭಾಗದಲ್ಲಿ ಸುಮಾರು ೭ ರಿಂದ ೧೧ನೇ ಶತಮಾನದವರೆಗೆ ನಿರ್ಮಾಣವಾಗಿರುವ ಸುಮಾರು ೨೦ ಗಜಪೃಷ್ಠಾಕಾರದ ದೇವಾಲಯಗಳನ್ನು ಪಿ. ಗುರುರಾಜ ಭಟ್ಟರು ಗುರುತಿಸಿದ್ದಾರೆ ಉಡುಪಿ ಶ್ರೀಕೃಷ್ಣ ಮಠದ ಸಮೀಪ ಇರುವ ಅನಂತೇಶ್ವರ ದೇವಾಲಯ ಗಜಪೃಷ್ಠಾಕಾರದ ದೇವಾಲಯದ ಉತ್ತಮ ಮಾದರಿಯಾಗಿದೆ. ಬಹುತೇಕ ಎಲ್ಲ ಗಜಪೃಷ್ಠಾಕಾರದ ಗರ್ಭಗೃಹಗಳಿರುವ ದೇವಾಲಯಗಳೂ ಶಿವ-ಶಕ್ತಿಯರ ದೇವಾಲಯಗಳೇ ಆಗಿರುವುದು ವಿಶೇಷ. ೧೧ನೇ ಶತಮಾನದ ನಂತರ ಹೊಯ್ಸಳ ವಾಸ್ತು ವಿನ್ಯಾಸಕಾರರು ಪ್ರಯೋಗಗಳ ಮೂಲಕ ಗಜಪೃಷ್ಠಾಕಾರದ ಗರ್ಭಗೃಹ ವಿನ್ಯಾಸವು ನಕ್ಷತ್ರಕಾರಕ್ಕೆ ತಿರುಗಿರುವ ಸಾಧ್ಯತೆಗಳನ್ನು ಡಾ. ಎಚ್.ಎಸ್. ಗೋಪಾಲರಾವ್ ಗುರುತಿಸಿದ್ದಾರೆ.

ಆಧಾರಸೂಚಿ
೧.        ಗುಣಮಧುರ, (ಡಾ. ದೇವರಕೊಂಡಾರೆಡ್ಡಿ ಅಭಿನಂದನ ಗ್ರಂಥ), ಸಂ. ಡಾ. ಪಿ.ವಿ. ಕೃಷ್ಣಮೂರ್ತಿ ಮತ್ತು ಇತರರು, ಬೆಂಗಳೂರು, ೨೦೧೦.

೮೭, ‘ಶಾಂತಲಾ ಕುವೆಂಪು ರಸ್ತೆ, ಶಿವಮೊಗ್ಗ-೫೭೭೨೦೧.


1 comment: