Wednesday, December 19, 2012

ಕರ್ನಾಟಕದಲ್ಲಿ ಇತಿಹಾಸ ಪೂರ್ವ ಕಾಲದ ಪ್ರಮುಖ ಕಲ್ಲಿನ ಆಯುಧಗಳು ಮತ್ತು ವೃತ್ತಿ : ಒಂದು ಅಧ್ಯಯನರೋಹಿತ್ ಎಮ್
ಇತಿಹಾಸ ಉಪನ್ಯಾಸಕರು,
ರೊಜಾರಿಯೊ ಪದವಿ ಪೂರ್ವ ವಿದ್ಯಾಲಯ,
ಪಾಂಡೇಶ್ವರಮಂಗಳೂರುದಕ್ಷಿಣ ಕನ್ನಡ-೫೭೫೦೦೧.ಧುನಿಕ ಯುಗದಲ್ಲಿ ಇತಿಹಾಸದ ಅಧ್ಯಯನವು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. ಗತಕಾಲದ ಘಟನೆಗೊಳನ್ನೊಳಗೊಂಡಂತೆ ಇತಿಹಾಸದ ವಿವಿಧ ಆಯಾಮಗಳು ಗಟ್ಟಿಗೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಇತಿಹಾಸದ ಪ್ರಾರಂಭಿಕ ಅವಧಿಯು ಗಮನಾರ್ಹವಾದುದಾಗಿದೆ. ಬರಹ ರೂಪವು ಆರಂಭವಾಗುವುದಕ್ಕಿಂತ ಪೂರ್ವಕಾಲದ ಇತಿಹಾಸದ ಅಧ್ಯಯನಕ್ಕೆ ನೆರವಾಗುವ ಆಕರಗಳು ವಿಶಿಷ್ಟವಾಗಿವೆ.
ಈ ದಿಸೆಯಲ್ಲಿ ನಾವು ಇತಿಹಾಸಪೂರ್ವ ಕಾಲದ ವಿವಿಧ ಅವಧಿಗಳು ಮತ್ತು ಆಕರಗಳನ್ನು ಪರಿಶೀಲಿಸಿದಾಗ ವ್ಯತ್ಯಾಸವು ತಿಳಿಯುತ್ತದೆ. ಮುಖ್ಯವಾಗಿ ಇತಿಹಾಸಪೂರ್ವ ಕಾಲದಲ್ಲಿ ಕಾಣಬರುವ ಹಳೇ ಶಿಲಾಯುಗ ಮತ್ತು ಸೂಕ್ಷ್ಮ ಶಿಲಾಯುಗದ ಕಾಲಘಟ್ಟಗಳಲ್ಲಿ ಕಾಣಸಿಗುವ ಆಕರಗಳು ಮತ್ತು ಆಯುಧಗಳ ವಿನ್ಯಾಸಗಳಲ್ಲಿ ಬದಲಾವಣೆಗಳನ್ನು ಸ್ಪಷ್ಟವಾಗಿ ಗಮನಿಸಬಹುದು.
ಭೌಗೋಳಿಕವಾಗಿ ಕರ್ನಾಟಕವು ಪ್ರಾಚೀನ ಭಾರತದ ಒಂದು ಭಾಗವಾಗಿದ್ದು, ದಖ್ಖನ್ ಪ್ರದೇಶದಲ್ಲಿದೆ. ಈ ಪ್ರದೇಶದ ಜನರ ಜೀವನದ ನಡತೆಯು ಪ್ರಾದೇಶಿಕ ಭೌಗೋಳಿಕತೆಯ ಲಕ್ಷಣಗಳನ್ನು ಆಧರಿಸಿಕೊಂಡಿದೆ. ಕರ್ನಾಟಕದಲ್ಲಿ ಇತಿಹಾಸ ಪೂರ್ವದ ಅವಧಿಯು ಸಾಕಷ್ಟು ವಿಕಾಸ ಹೊಂದಿರುವುದನ್ನು ನಾವು ಗಮನಿಸಬಹುದಾಗಿದೆ. ಇತಿಹಾಸಪೂರ್ವ ಕಾಲದ ಜೀವನ ಪ್ರಕೃತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಯತ್ನವಾಗಿದ್ದಿತು. ಅವರು ಗುಹೆಗಳಲ್ಲಿ ವಾಸ ಮಾಡುತ್ತಿದ್ದು, ಕಲ್ಲಿನ ಆಯುಧಗಳು ಮತ್ತು ಮೂಲ ಸಾಧನಗಳನ್ನು ಬಳಕೆ ಮಾಡುತ್ತಿದ್ದರು. ಕಾಲಕ್ರಮೇಣ ಈ ಜನತೆಯು ಅಭಿವೃದ್ಧಿಯತ್ತ ಸಾಗತೊಡಗಿ ಕೃಷಿಯ ಕಲೆ ಮತ್ತು ಒಂದೆಡೆ ಸ್ಥಿರ ನೆಲೆಸುವಿಕೆಯ ಜೀವನವನ್ನು ಮಾಡತೊಡಗಿದರು.
ಕರ್ನಾಟಕದ ಇತಿಹಾಸಪೂರ್ವ ಕಾಲದ ಬಗೆಗೆ ಅಧ್ಯಯನ ನಡೆಸಿರುವ ವಿದ್ವಾಂಸರುಗಳ ಕೃತಿಗಳನ್ನು ಗಮನಿಸಿದಾಗ ಇಲ್ಲಿನ ಹಳೇ ಶಿಲಾಯುಗ, ನವ ಶಿಲಾಯುಗ ಮತ್ತು ಬೃಹತ್ ಶಿಲಾಯುಗದ ನೆಲೆಗಳನ್ನು ಹಾಗೂ ಆ ಜನತೆ ಬಳಸಿರುವ ವಿವಿಧ ಬಗೆಯ ವಸ್ತುಗಳಾದ ಮಣಿಗಳು, ಬಳೆಗಳು, ಮಡಿಕೆ-ಕುಡಿಕೆಗಳು, ಕಬ್ಬಿಣದ ವಸ್ತುಗಳು ಕಲ್ಲಿನ ಆಯುಧಗಳು ಮತ್ತು ಅವರ ಕರಕುಶಲತೆಯ ಬಗೆಗೆ ವಿಶೇಷ ಗಮನಹರಿಸಲಾಗಿದೆ ಎನ್ನಬಹುದು. ಬಿ.ಕೆ. ಗುರುರಾಜರಾವ್ ಅವರ ಪ್ರಕಾರ, ಕರ್ನಾಟಕದಲ್ಲಿ ಹಳೇ ಶಿಲಾಯುಗಕ್ಕೆ ಸೇರಿರುವ ಪ್ರಮುಖ ನೆಲೆಗಳು ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ಬಳ್ಳಾರಿ, ಗುಲ್ಬರ್ಗ, ಬಿಜಾಪುರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿವೆ. ಈ ಎಲ್ಲಾ ಪ್ರದೇಶಗಳಲ್ಲಿ ಆದಿಮಾನವನು ಬಳಸಿರುವ ಕೈಕೊಡಲಿಗಳು, ಕೈಗತ್ತಿಗಳು ಮತ್ತು ತೆಳುಪದರದ ಆಯುಧಗಳು ಸಂಶೋಧನೆಗೊಳಪಟ್ಟಿವೆ. ಈ ಅವಧಿಯಲ್ಲಿ ಪ್ರಾಣಿಗಳ ಬೇಟೆಯಾಡುವಿಕೆಗಾಗಿ ಅವರು ಬಳಸುತ್ತಿದ್ದ ಆಯುಧಗಳು ಕೂಡ ವ್ಯತ್ಯಾಸವನ್ನು ಹೊಂದಿವೆ. ಭರ್ಜಿಗಳು ಮತ್ತು ಈಟಿಗಳನ್ನು ಹರಿತವಾದ ಮೊನೆಗಳುಳ್ಳ ಕಲ್ಲು ಹಾಗೂ ಮೂಳೆಗಳಿಂದ ರಚಿಸುತ್ತಿದ್ದರು. ಕೈಕೊಡಲಿಗಳು ಮತ್ತು ತೆಳುಪದರದ ಕಲ್ಲಿನ ಆಯುಧಗಳನ್ನು ಮಾಂಸವನ್ನು ಕತ್ತರಿಸಲು ಹಾಗೂ ತಾತ್ಕಾಲಿಕ ವಾಸಸ್ಥಾನಗಳ ರಚನೆಗಾಗಿ ಮರಗಳನ್ನು ಕತ್ತರಿಸಲು ಬಳಕೆ ಮಾಡುತ್ತಿದ್ದರು. ಬೇಟೆಗಾರಿಕೆಯ ಜನರ ಜೀವನದ ಮುಖ್ಯ ಭಾಗವಾಗಿದ್ದು ಸಾಮಾಜಿಕ ಜೀವನ ಮತ್ತು ಆರ್ಥಿಕತೆಯ ಒಂದು ಬಗೆಯಾಗಿತ್ತು ಎಂದು ಹೇಳಬಹುದಾಗಿದೆ.
ಹಳೇ ಶಿಲಾಯುಗದ ನೆಲೆಗಳು ಮತ್ತು ಆಯುಧಗಳು
ಹಳೇ ಶಿಲಾಯುಗದ ನೆಲೆಯಾಗಿರುವ ತುಮಕೂರಿನ ಬಾಣಸಂದ್ರ ಬೆಟ್ಟ ಪ್ರದೇಶವನ್ನು ಡಾ. ಎಮ್. ಶೇಷಾದ್ರಿ ಅವರು ಪತ್ತೆಹಚ್ಚಿದ್ದರು. ಬಾಗಲಕೋಟೆ ಜಿಲ್ಲೆಯ ನಂದಿಕೇಶ್ವರದಲ್ಲಿನ ನೆಲೆಯನ್ನು ಎಮ್.ಎನ್. ದೇಶಪಾಂಡೆ ಅವರು ಪತ್ತೆಹಚ್ಚಿದ್ದಾರೆ. ಇಲ್ಲಿ ಮುಖ್ಯವಾಗಿ ದೊರೆತಿರುವ ಆಯುಧಗಳೆಂದರೆ ಕೈ ಕೊಡಲಿಗಳು, ಕೈಗತ್ತಿಗಳು ಮತ್ತು ಬೆಣಚುಕಲ್ಲಿನ ಮಚ್ಚುಕತ್ತಿಗಳೇ ಆಗಿವೆ. ಧಾರವಾಡ ಜಿಲ್ಲೆಯ ಚೆನ್ನಾಪುರ ಬಳಿಯಲ್ಲಿನ ನೆಲೆಯಿಂದ ಎಮ್.ಎಸ್. ನಾಗರಾಜರಾವ್ ಅವರು ಅವಶೇಷಗಳನ್ನು ಸಂಗ್ರಹಿಸಿದ್ದಾರೆ.
ಶ್ರೀ ಆರ್.ಎಸ್. ಪಪ್ಪುರವರು ಹಳೇ ಶಿಲಾಯುಗದ ಆಯುಧಗಳಾದ ಕೈಕೊಡಲಿಗಳು, ಕೈಗತ್ತಿಗಳು, ಮಂಡಲಾಕೃತಿಯ ಆಯುಧ, ತೆಳು ಪದರಗಳುಳ್ಳ ಆಯುಧಗಳು, ತಿರುಳು ಆಯುಧಗಳು ಮತ್ತು ಬೆಣಚುಕಲ್ಲಿನ ಆಯುಧಗಳನ್ನು ಬೆಳಗಾವಿ, ಬಿಜಾಪುರ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ಪತ್ತೆಹಚ್ಚಿದ್ದಾರೆ. ಡಾ. ಕೆ. ಪದ್ದಯ್ಯ ಅವರು ಮಧ್ಯಶಿಲಾಯುಗದ ಆಯುಧಗಳಾದ ನಯಗೊಳಿಸಿದ ಕಲ್ಲು, ರಂಧ್ರ ಕೊರೆಯುವ ಆಯುಧಗಳು ಹಾಗೂ ಮೊನೆಯುಳ್ಳ ಆಯುಧಗಳನ್ನು ಹುಣಸಗಿ, ಇಸಾಂಪುರ, ಮಚ್ಚನಾಡು, ವನಹಳ್ಳಿ ಮತ್ತು ಸಾಲಗೊಂದಿಗಳಲ್ಲಿ ಸಂಶೋಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಹಳೇ ಶಿಲಾಯುಗದ ಕಾಲದ ಮಚ್ಚುಗತ್ತಿಗಳನ್ನು ಪಿ. ರಾಜೇಂದ್ರನ್ ಸಂಶೋಧಿಸಿದ್ದಾರೆ.
ಈ ಮೇಲಿನ ಎಲ್ಲಾ ನೆಲೆಗಳನ್ನು ಮತ್ತು ದೊರಕಿರುವ ಆಯುಧಗಳನ್ನು ಗಮನಿಸಿದಾಗ ಕರ್ನಾಟಕದಲ್ಲಿ ಹಳೇ ಶಿಲಾಯುಗದ ಜನತೆ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿನ ಆಯುಧಗಳನ್ನು ಬಳಕೆ ಮಾಡಿರುವುದು ಗೋಚರಿಸುತ್ತದೆ. ಅಲ್ಲದೇ ಅವರು ಬೇಟೆಗಾರಿಕೆ ಮತ್ತು ಆಹಾರ ಸಂಗ್ರಹಣೆಯ ಸಂಸ್ಕೃತಿಯನ್ನು ರೂಢಿಸಿಕೊಂಡಿರುವುದು ಸ್ಪಷ್ಟಗೊಳ್ಳುತ್ತದೆ. ಬೇಟೆಗಾರಿಕೆಯು ಅವರ ಪ್ರಧಾನ ವೃತ್ತಿಯಾಗಿತ್ತು. ಹಾಗಾಗಿ ಅವರು ಕಲ್ಲಿನಿಂದ ರಚಿಸಲ್ಪಟ್ಟ ಆಯುಧಗಳಾದ ಭರ್ಜಿಗಳು, ಕಲ್ಲಿನ ಅಥವಾ ಮೂಳೆಯ ಹರಿತವಾದ ಮೊನೆಗಳುಳ್ಳ ಈಟಿಗಳು, ಕೈಕೊಡಲಿಗಳನ್ನು ವ್ಯಾಪಕವಾಗಿ ಬಳಸುತ್ತಿದ್ದರು. ಮಾಂಸ ಕತ್ತರಿಸಲು ಬಳಸುವ ನಯಗೊಳಿಸಿದ ಕಲ್ಲಿನ ಆಯುಧಗಳು ಹಾಗೂ ಮರಗಳ ರೆಂಬೆ ಮತ್ತು ಕೊಂಬೆಗಳನ್ನು ಕತ್ತರಿಸಲು ಬಳಸಿರುವ ಆಯುಧಗಳನ್ನು ಪತ್ತೆಹಚ್ಚಲಾಗಿದೆ.
ಮಧ್ಯಶಿಲಾಯುಗದ ಅವಧಿಯಲ್ಲಿ ರಚಿಸಲ್ಪಟ್ಟಿರುವ ಆಯುಧಗಳಲ್ಲಿಯೂ ಸಾಕಷ್ಟು ಕೌಶಲ್ಯವು ಕಾಣಸಿಗುತ್ತದೆ. ಈ ಕಾಲದ ಆಯುಧಗಳು ಮತ್ತು ವಿಧಾನಗಳನ್ನು ಕರ್ನಾಟಕದಲ್ಲಿ ಹಲವೆಡೆ ಸಂಶೋಧನೆಯ ವೇಳೆಯಲ್ಲಿ ಪತ್ತೆಹಚ್ಚಲಾಗಿದೆ. ಮುಖ್ಯವಾಗಿ ಈ ಕಾಲದಲ್ಲಿ ಬಳಕೆಯಾಗಿರುವ ಸಲಕರಣೆಗಳಲ್ಲಿ ಬೆಣಚುಕಲ್ಲಿನ ಆಯುಧಗಳು, ಹರಳುಕಲ್ಲುಗಳು ಅತ್ಯಂತ ಸೂಕ್ಷ್ಮ ಗಾತ್ರದಲ್ಲಿದ್ದು ಇವುಗಳ ರಚನೆಯಲ್ಲಿ ಸೂಕ್ಷ್ಮ ಕೌಶಲ್ಯತೆಯನ್ನು ಕಾಣಬಹುದು. ಈ ಕಾಲದ ಆಯುಧಗಳು ಮತ್ತು ಸಾಧನಗಳನ್ನು ಮರದ ಬೇರಿನ ಅಗೆತಕ್ಕಾಗಿ, ಮರಗಳ ಕಡಿಯುವಿಕೆ ಮತ್ತು ಪ್ರಾಣಿಗಳ ಕೊಲ್ಲುವಿಕೆಗಾಗಿ ಬಳಸಿರುವುದು ಸ್ಪಷ್ಟವಾಗುತ್ತದೆ.
ಸೂಕ್ಷ್ಮ ಶಿಲಾಯುಗದ ನೆಲೆಗಳು ಮತ್ತು ಆಯುಧಗಳು
ಕರ್ನಾಟಕದ ವಿವಿಧ ಭಾಗಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸೂಕ್ಷ್ಮ ಶಿಲಾಯುಗದ ನೆಲೆಗಳು ಪತ್ತೆಯಾಗಿವೆ. ಈ ಜನರು ಪ್ರಮುಖವಾಗಿ ಮೀನುಗಾರಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿರುವುದು ಗಮನಾರ್ಹವಾದುದು. ಈ ಕಾಲದ ಜನತೆಯು ಜಲಚರಗಳಾದ ಮೀನು ಮತ್ತು ಏಡಿಯ ಹಿಡಿಯುವಿಕೆಯ ಕಲೆಯಲ್ಲಿ ಪರಿಣಿತರಾಗಿದ್ದು ಆಹಾರ ಉತ್ಪಾದನೆಯ ಹಾದಿಯಲ್ಲಿ ಮುಂದುವರಿದಿರುವುದು ಸ್ಪಷ್ಟಗೊಳ್ಳುತ್ತದೆ. ಅರ್ಧಚಂದ್ರಾಕೃತಿಯ ಮೊನೆಗಳುಳ್ಳ ಆಯುಧಗಳು, ದಬ್ಬಣಗಳು, ಉಜ್ಜುವ ಸಾಧನಗಳು, ಮೀನು ಹಿಡಿಯಲು ಬಳಸಿರುವ ಗಾಳ ಹಾಗೂ ಬಲೆಗಳು ಪ್ರಮುಖವಾದ ಸಾಧನಗಳಾಗಿವೆ.
ಈ ಕಾಲದ ಪ್ರಮುಖ ನೆಲೆಗಳು ಬೆಂಗಳೂರಿನ ಆಸುಪಾಸಿನಲ್ಲಿರುವ ಜಾಲಹಳ್ಳಿ, ಎಚ್.ಎ.ಎಲ್. ವಿಮಾನ ನಿಲ್ದಾಣ ವಲಯದಲ್ಲಿ ಇರುವ ಸೂಡಸಂದ್ರ ಮತ್ತು ಸಿದ್ದಾಪುರ, ತುಮಕೂರು ಬಳಿಯ ಕಿಬ್ಬನಹಳ್ಳಿ, ಗುಲ್ಬರ್ಗದ ಕೋವಳ್ಳಿ ಮತ್ತು ಶೋರಾಪುರ ದೋ ಅಬ್ ಹಾಗೂ ಬಿಜಾಪುರ ಜಿಲ್ಲೆಯಲ್ಲಿ ಕಾಣಸಿಕ್ಕಿವೆ.
ಎಮ್.ಎಸ್. ನಾಗರಾಜರಾವ್ ಅವರು ಧಾರವಾಡ ಜಿಲ್ಲೆಯ ನಲ್ವಗಾಲ್ ಮತ್ತು ನದಿಹರಳ ಹಳ್ಳಿಯಲ್ಲಿ ಈ ಯುಗದ ನೆಲೆಗಳನ್ನು ಸಂಶೋಧಿಸಿದ್ದಾರೆ. ಇದೇ ಜಿಲ್ಲೆಯ ಹಳ್ಳಿಗಳಲ್ಲಿ ಸೂಕ್ಷ್ಮ ಶಿಲಾಯುಗದ ಕಲ್ಲಿನ ಅಲಗು ತಯಾರಿಕಾ ಪ್ರದೇಶವನ್ನು ಪತ್ತೆಹಚ್ಚಲಾಗಿದೆ. ಬಿಜಾಪುರ ಜಿಲ್ಲೆಯ ತೇರದಾಳದಲ್ಲಿ ಬಹುಸಂಖ್ಯೆಯ ಸೂಕ್ಷ್ಮಶಿಲೆಗಳು, ರಂಧ್ರ ಕೊರೆಯುವ ಸಾಧನಗಳು ಅರ್ಧಚಂದ್ರಾಕೃತಿಯ ಸಾಧನಗಳು ಎರಡು ಬದಿಯಲ್ಲಿಯೂ ಅಲಗುಗಳುಳ್ಳ ವಿನ್ಯಾಸಗಳನ್ನು ಸಂಶೋಧಿಸಲಾಗಿದೆ೧೦. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲವೊಂದು ಸೂಕ್ಷ್ಮ ಶಿಲಾಯುಗ ಕಾಲದ ನೆಲೆಗಳು ಹಾಗೂ ಆಯುಧಗಳು ಪತ್ತೆಯಾಗಿವೆ. ಮುಖ್ಯವಾಗಿ ಸ್ಪರ್ಶಶಿಲೆ, ನಯಗೊಳಿಸಿದ ಕಲ್ಲಿನ ಆಯುಧಗಳು, ಮೊನೆಗಳು, ಅಲಗುಗಳು ಮತ್ತು ತೆಳುಪದರಗಳುಳ್ಳ ಆಯುಧಗಳು ಪತ್ತೆಯಾಗಿವೆ೧೧.
ಬಿಜಾಪುರ ಜಿಲ್ಲೆಯ ತಾಳಿಕೋಟೆಯ ಬಳಿಯ ಸಾಲ್ವಡಗಿಯಲ್ಲಿ ದೊರೆತಿರುವ ಆಯುಧಗಳ ಗುಂಪು ವಿಶೇಷತೆಯನ್ನು ಹೊಂದಿದೆ. ಮುಖ್ಯವಾಗಿ ಇಲ್ಲಿ ಚೂರಿಯಾಕಾರದ ಅಲಗುಗಳು, ರಂಧ್ರ ಕೊರೆಯುವ ಸಾಧನಗಳು ಮತ್ತು ನಯಗೊಳಿಸಿರುವ ಕಲ್ಲಿನ ಆಯುಧಗಳು ಲಭ್ಯವಾಗಿವೆ೧೨. ಬ್ರಹ್ಮಗಿರಿಯಲ್ಲಿಯೂ ಕಲ್ಲಿನ ಆಯುಧಗಳು ಮತ್ತು ಸೂಕ್ಷ್ಮ ಶಿಲಾಯುಗದ ಸಲಕರಣೆಗಳು ಪತ್ತೆಯಾಗಿವೆ೧೩.
ಹೀಗೆ ಇತಿಹಾಸಪೂರ‍್ವ ಕಾಲದಲ್ಲಿ ರಚನೆಯಾಗಿರುವ ಕಲ್ಲಿನ ಆಯುಧಗಳು ಮತ್ತು ಅವಶೇಷಗಳ ಹಿನ್ನೆಲೆಯಲ್ಲಿ ಅವಲೋಕಿಸಿದಾಗ ಅವರ ಕೌಶ್ಯಲತೆ, ನಿಪುಣತೆ ಮತ್ತು ಪರಿಣತಿಗಳಲ್ಲಿ ವ್ಯತ್ಯಾಸಗಳನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಮಾನವ ಜೀವನದಲ್ಲಿನ  ಬದಲಾವಣೆ ವಿಕಾಸವಾಗಿರುವುದು ಇದರಿಂದ ಖಚಿತವಾಗುತ್ತದೆ. ಹಳೇ ಶಿಲಾಯುಗದ ಜನತೆಯು ಜೀವನ ನಡೆಸುವ ಹಾದಿಯಲ್ಲಿ ಬಳಸಿರುವ ಆಯುಧಗಳು ಮತ್ತು ಸಲಕರಣೆಗಳ ರಚನೆಯಲ್ಲಿ ಕೌಶಲ್ಯ ಕಂಡುಬರುತ್ತದೆ. ವಿಶೇಷವಾಗಿ ಈ ಕಾಲದಲ್ಲಿ ಆಯುಧಗಳ ರಚನೆಯಲ್ಲಿ ಕೌಶಲ್ಯ ಹೊಂದಿದ ವರ್ಗ ಭಾಗಿಯಾಗಿರುವುದು ಸ್ಪಷ್ಟವಾಗುತ್ತದೆ. ಬಹುತೇಕವಾಗಿ ದೊರೆತಿರುವ ಎಲ್ಲಾ ಆಯುಧಗಳನ್ನು ಪರಿಶೀಲಿಸಿದಾಗ ಈ ಅಂಶ ಗೋಚರಿಸುತ್ತದೆ. ಮಾನವನ ವಿಕಾಸದ ಹಾದಿಯಲ್ಲಿ ಕಾಣಸಿಗುವ ಮತ್ತೊಂದು ಕಾಲವೇ ಮಧ್ಯಶಿಲಾಯುಗ. ಈ ಯುಗದಲ್ಲಿ ರಚನೆಗೊಂಡಿರುವ ಆಯುಧಗಳು ಮತ್ತು ಸಾಧನಗಳು ಹಾಗೂ ಜನರ ಜೀವನ ಪದ್ಧತಿಯನ್ನು ಅವಲೋಕಿಸಿದಾಗ ಖಚಿತವಾದ ಬದಲಾವಣೆಯು ಕಾಣಸಿಗುವುದು. ಇಲ್ಲಿಯೂ ಕಾಣಸಿಗುವ ಆಯುಧಗಳ ರಚನೆಯಲ್ಲಿ ಕಲ್ಲುಕುಟಿಗ ವರ್ಗದ ಪರಿಶ್ರಮ ಮತ್ತು ನಿಪುಣತೆ ಗೋಚರಿಸುತ್ತದೆ.
ಮಾನವ ಜೀವನದ ವಿಕಾಸದ ಮುಂದಿನ ಹಾದಿಯಲ್ಲಿ ಸೂಕ್ಷ್ಮ ಶಿಲಾಯುಗವು ಕಂಡುಬರುವುದು. ಈ ಯುಗ ದಲ್ಲಿಯೂ ಮನುಷ್ಯನ ಬುದ್ಧಿಶಕ್ತಿಯ ಬೆಳವಣಿಗೆಯಾಗಿದ್ದು ಮಾತ್ರವಲ್ಲದೇ, ತನ್ನ ಜೀವನೋಪಾಯಕ್ಕೆ ಬಳಕೆಯಾಗುವ ಆಯುಧಗಳು ಮತ್ತು ಉಪಕರಣಗಳಲ್ಲಿ ಬದಲಾವಣೆ ಮಾಡಿರುವುದು ಗೋಚರಿಸುತ್ತದೆ. ಒಟ್ಟಾರೆಯಾಗಿ ಕರ್ನಾಟಕದ ಪೂರ್ವ ಇತಿಹಾಸ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಕರಕುಶಲಕರ್ಮಿಗಳು ಅಂದರೆ ಕಲ್ಲಿನ ಕೆಲಸಗಳಲ್ಲಿ ನಿಪುಣತೆಯನ್ನು ಹೊಂದಿರುವ ವರ್ಗ ನಿರ್ವಹಿಸಿರುವ ಪಾತ್ರಗಳನ್ನು ನಾವು ಅಲ್ಲಗಳೆಯುವಂತಿಲ್ಲ.
ಈ ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿದಾಗ ಕರ್ನಾಟಕದ ಇತಿಹಾಸ ಪೂರ್ವ ಕಾಲದಲ್ಲಿನ ಸಾಮಾಜಿಕ ವ್ಯವಸ್ಥೆಯಲ್ಲಿ ಕಲ್ಲುಕುಟಿಗ ವರ್ಗದ ನಿಪುಣತೆ ಪ್ರಧಾನವಾಗಿ ಗೋಚರಿಸುತ್ತದೆ. ಲಭ್ಯವಾಗಿರುವ ಕಲ್ಲಿನ ಆಯುಧಗಳು, ಸಾಧನೋಪಕರಣಗಳು ಹಾಗೂ ಇವುಗಳ ನೆಲೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಈ ವಿಚಾರವು ಸ್ಪಷ್ಟಗೊಳ್ಳುತ್ತದೆ. ಇತಿಹಾಸ ಉಪನ್ಯಾಸಕರು,
ರೊಜಾರಿಯೊ ಪದವಿ ಪೂರ್ವ ವಿದ್ಯಾಲಯ,
ಪಾಂಡೇಶ್ವರ, ಮಂಗಳೂರು, ದಕ್ಷಿಣ ಕನ್ನಡ-೫೭೫೦೦೧.
No comments:

Post a Comment