Tuesday, December 25, 2012

ಚಳ್ಳಕೆರೆ ತಾಲ್ಲೂಕು ಭೋಗನಹಳ್ಳಿಯ ಪ್ರಾಚ್ಯಾವಶೇಷಗಳು



ಬಿ. ಪರಮೇಶ್

ಇತಿಹಾಸ ಉಪನ್ಯಾಸಕರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಚಳ್ಳಕೆರೆ-೫೭೭೫೨೨.



ಭೋಗನಹಳ್ಳಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನಲ್ಲಿರುವ ಒಂದು ಗ್ರಾಮ ಇದು ಚಳ್ಳಕೆರೆಗೆ ೨೮ ಕಿ.ಮೀ. ದೂರದಲ್ಲಿದೆ. ಚಳ್ಳಕೆರೆಯಿಂದ ಈಶಾನ್ಯ ದಿಕ್ಕಿಗೆ ಇರುವ ಗ್ರಾಮವಾಗಿದೆ. ಈ ಗ್ರಾಮಕ್ಕೆ ಭೋಗನಹಳ್ಳಿ, ಭೋಗನಪಲ್ಲಿ ಎಂದು ಕರೆಯುತ್ತಾರೆ. ಈ ಗ್ರಾಮವು ಪ್ರಾಚೀನ ಗ್ರಾಮವಾಗಿದ್ದು ವೇದಾವತಿ ನದಿ ಎಡದಂಡೆಯ ಮೇಲಿದ್ದು ಪ್ರಾಕ್‌ಚಾರಿತ್ರಿಕ ಮಹತ್ವ ಪಡೆದುಕೊಂಡಿದೆ. ವಿಶೇಷವಾಗಿ ಕರ್ನಾಟಕ ಹಾಗೂ ಆಂಧ್ರ ಪ್ರದೇಶದ ಗಡಿಭಾಗದಲ್ಲಿರುವ ಈ ಗ್ರಾಮವು ಭೌಗೋಳಿಕವಾಗಿ ಸಂಪತ್‌ಭರಿತವಾಗಿದೆ. ಈ ಗ್ರಾಮಕ್ಕಿರುವ ಹೊಸಕೆರೆ ಮತ್ತು ಹಳೆ ಕೆರೆಗಳಲ್ಲದೆ, ಪಕ್ಕದಲ್ಲಿರುವ ವೇದಾವತಿ ನದಿಯ ಪರಿಸರವು ಸಹಜವಾಗಿಯೇ ಪ್ರಾಚೀನ ಮಾನವನು ನೆಲೆಸಲು ಅವಕಾಶ ಕಲ್ಪಿಸಿದಂತಿದೆ ಎಂಬುದು ಗಮನಾರ್ಹವಾಗಿದೆ.
ಭೋಗನಹಳ್ಳಿಯು ಜಿನಗಿಹಳ್ಳ ಮತ್ತು ವೇದಾವತಿ ನದಿಗಳು ಈ ಗ್ರಾಮವನ್ನು ಸುತ್ತುವರಿದು ಮುಂದೆ ಸಂಧಿಸುತ್ತವೆ. ಜಿನಗಿಹಳ್ಳ ಮತ್ತು ವೇದಾವತಿ ನದಿಯ ಎಡ ಹಾಗೂ ಬಲದಂಡೆಗಳ ಮೇಲೆ ಪ್ರಾಚೀನ ಮಾನವನ ನೆಲೆಗಳು ಪತ್ತೆಯಾಗಿರುವುದನ್ನು ವಿದ್ವಾಂಸರು ಈಗಾಗಲೇ ದಾಖಲಿಸಿದ್ದಾರೆ. ಮುಖ್ಯವಾಗಿ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಭೋಗನಹಳ್ಳಿಯ ಪರಿಸರ ಹಾಗೂ ಗ್ರಾಮದಲ್ಲಿರುವ ಪ್ರಾಚ್ಯಾವಶೇಷಗಳು ಮತ್ತು ಸ್ಮಾರಕಗಳಿಂದ ಪ್ರಾಚೀನ ಕಾಲದಿಂದಲೂ ತನ್ನದೇ ಆದಂತಹ ಪಾತ್ರವನ್ನು ವಹಿಸುವ ಮೂಲಕ ಇತಿಹಾಸಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಈ ಗ್ರಾಮವು ಇತಿಹಾಸ ಪ್ರಸಿದ್ಧ ಬ್ರಹ್ಮಗಿರಿಯಿಂದ ೬೦ ಕಿ.ಮೀ. ಚಂದ್ರವಳ್ಳಿಯಿಂದ ೬೫ ಕಿ.ಮೀ. ದೂರದಲ್ಲಿದೆ. ಈ ಗ್ರಾಮದ ಪೂರ್ವಕ್ಕೆ ನಾಯಕನಹಟ್ಟಿ ಕಡೆಯಿಂದ ಜಿನಗಿಹಳ್ಳ ಹರಿದು ಬಿ.ಟಿ.ಪಿ. ಡ್ಯಾಮ್‌ಗೆ ಸೇರುತ್ತದೆ ಹಾಗೂ ವೇದಾವತಿ ನದಿ ದಕ್ಷಿಣದಿಂದ ಉತ್ತರಕ್ಕೆ ಹರಿಯುತ್ತದೆ. ಜಿನಗಿಹಳ್ಳ ಮತ್ತು ವೇದಾವತಿ ನದಿಗಳು ಸಂಧಿಸುವ ಜಾಗದ ಪಶ್ಚಿಮ ಮತ್ತು ಉತ್ತರದ ಮಧ್ಯ ಇರುವ ಗ್ರಾಮವೇ ಭೋಗನಹಳ್ಳಿ. ಗೌರಸಮುದ್ರ ಮಾರಮ್ಮನ ಜಾತ್ರೆಯಾದ ತಿಂಗಳ ನಂತರ, ಜಾತ್ರೆಯಾದ ಮರುದಿನ ಮಾರಮ್ಮನ ನೆರೆಯನ್ನು ಮಾಡುತ್ತಾರೆ. ಈ ಗ್ರಾಮದಲ್ಲಿ ಈಶ್ವರ ದೇವಾಲಯ, ಹನುಮಂತ ದೇವಾಲಯ, ತಿಮ್ಮಪ್ಪನ ಗುಡಿ, ಬುರುಜು ಮಾರಮ್ಮ, ಹೊರಮಠ, ಕೋಟೆ ಗೋಡೆ, ಪುಷ್ಕರಣಿ, ಸಭಾಮಂಟಪ, ಮುಂತಾದಂತಹ ಸ್ಮಾರಕಗಳಿವೆ. ಗ್ರಾಮದೊಳಗಿರುವ ವೀರಗಲ್ಲುಗಳು ಇಂದಿಗೂ ಅಳಿದುಳಿದುಕೊಂಡಿರುವ ಕೋಟೆ ಕೊತ್ತಲಗಳ ಅವಶೇಷಗಳು ಈ ಗ್ರಾಮಕ್ಕಿರುವ ಐತಿಹಾಸಿಕ ಹಿನ್ನೆಲೆಯನ್ನು ಸಾರುತ್ತವೆ. ಅಂದಿನ ಬದುಕಿನ ವಿವಿಧ ಮಜಲುಗಳನ್ನು ಸಾರುವ ಇಂತಹ ಸಾಂಸ್ಕೃತಿಕ ಹಾಗೂ ಪ್ರಾಕ್‌ಚಾರಿತ್ರಿಕ ಅವಶೇಷಗಳು ಕಾಲದ ದವಡೆಗೆ ಸಿಕ್ಕಿ ಹೇಳಹೆಸರಿಲ್ಲದೆ ಕಣ್ಮರೆಯಾಗುತ್ತಿರುವುದು ವಿಷಾದಕರ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಭೋಗನಹಳ್ಳಿಯ ಅನೇಕ ಸ್ಮಾರಕಗಳು ಈಗಾಗಲೇ ವಿನಾಶದ ಅಂಚನ್ನು ತಲುಪಿವೆ. ಹಿಂದಿನ ಘಟನೆಗಳನ್ನು ಬದುಕಿನ ವೈವಿಧ್ಯತೆಗಳನ್ನು ಅಕ್ಷರಸ್ಥ ಹಾಗೂ ಅನಕ್ಷರಸ್ಥ ಸಮಾಜಕ್ಕಲ್ಲದೆ, ಭವಿಷ್ಯಕ್ಕೆ ಪಾಠ ಹೇಳುವ ಇಂತಹ ಅಪರೂಪದ ಸ್ಮಾರಕಗಳನ್ನು ಕುರಿತು ಇತಿಹಾಸದಲ್ಲಿ ದಾಖಲಿಸುವುದು ಈ ಲೇಖನದ ಆಶಯವಾಗಿದೆ.
೧. ಈಶ್ವರ ದೇವಾಲಯ ಅಥವಾ ವಿರೂಪಾಕ್ಷ ದೇವಾಲಯ:
ಈ ಗ್ರಾಮದ ಮಧ್ಯಭಾಗದಲ್ಲಿ ಪೂರ್ವಾಭಿಮುಖವಾಗಿ ಈ ದೇವಾಲಯವಿದೆ ಗರ್ಭಗುಡಿ, ಸಭಾಮಂಟಪಗಳನ್ನು ಒಳಗೊಂಡಿರುವ ಈ ದೇವಾಲಯವನ್ನು ಇತ್ತೀಚೆಗೆ ಜೀರ್ಣೋದ್ಧಾರಗೊಳಿಸಿದ್ದಾರೆ. ಗರ್ಭಗುಡಿಯು ಪೂರ್ವ ಪಶ್ಚಿಮ ೬.೫ ಅಡಿ ಉತ್ತರ ದಕ್ಷಿಣ ೬.೫ ಅಡಿ ವಿಸ್ತೀರ್ಣ ಹೊಂದಿದೆ. ಗರ್ಭಗುಡಿಯಲ್ಲಿ ಸುಂದರವಾದ ಕಪ್ಪು ಶಿಲೆಯ ೨ ಅಡಿಯ ಎತ್ತರದ ಶಿವಲಿಂಗವಿದೆ. ಆದರೆ ಸಭಾಮಂಟಪದಲ್ಲಿರುವ ನಾಲ್ಕು ಸುಂದರವಾದ ಕಂಬಗಳು ವಿಜಯನಗರೋತ್ತರ ರಚನೆಯನ್ನು ಹೋಲುತ್ತವೆ. ಕಂಬಗಳ ಮೇಲೆ ಅನೇಕ ಉಬ್ಬುಶಿಲ್ಪಗಳಿವೆ. ನವಿಲು, ಹನುಮಂತ, ಭಕ್ತರು, ಬೇಡರ ಕಣ್ಣಪ್ಪ, ವಿನಾಯಕ, ನಾರದ, ಭುವನೇಶ್ವರಿ, ನಂದಿ, ಶಿವಲಿಂಗ, ಪದ್ಮ, ನಾಗಬಂಧ, ಗರುಡ ಮುಂತಾದ ಉಬ್ಬುಶಿಲ್ಪಗಳಿವೆ. ದೇವಾಲಯದ ಹೊರಭಾಗದ ಭಿತ್ತಿಯಲ್ಲಿ ಮೀನು, ಹಾವು, ಮೊಸಳೆ, ಆಮೆ ಮುಂತಾದ ಉಬ್ಬುಶಿಲ್ಪಗಳಿವೆ. ಸಭಾಮಂಟಪದಲ್ಲಿ ನಂದಿ ಶಿಲ್ಪವಿದೆ. ಇದರ ಅಲಂಕಾರ ಸೊಗಸಾಗಿದ್ದು ಕೊರಳಲ್ಲಿ ಗೆಜ್ಜೆ, ಗಂಟೆಸರ, ಕೊರಳಪಟ್ಟಿಯ, ಅಲಂಕಾರಗಳಿವೆ. ಈ ದೇವಾಲಯದ ಗರ್ಭಗೃಹದ ಬಾಗಿಲ ಚೌಕಟ್ಟುಗಳು ಕಲ್ಲಿನಿಂದ ನಿರ್ಮಿತವಾಗಿದೆ. ಎಡ ಮತ್ತು ಬಲ ಭಾಗದಲ್ಲಿ ದ್ವಾರಪಾಲಕರ ಚಿತ್ರವಿದೆ. ಮೇಲೆ ಹಣೆ ಪಟ್ಟಿಕೆಯಲ್ಲಿ ಗಣಪತಿ ಶಿಲ್ಪವಿದೆ. ಗಾಳಿ ಮತ್ತು ಬೆಳಕಿನ ವ್ಯವಸ್ಥೆಯಿಲ್ಲ. ಈ ದೇವಾಲಯದ ಸುತ್ತಲು ತೆರೆದ ಕಲ್ಲುಗೋಡೆಯಿಂದ ಸುತ್ತುವರಿದ ಪ್ರದಕ್ಷಿಣಾ ಪಥವಿದೆ.
೨. ಬುರುಜು ಮಾರಮ್ಮ
ಈ ದೇವಾಲಯವು ಕೋಟೆ ಗೋಡೆಯ ವಾಯವ್ಯ ಭಾಗದಲ್ಲಿದೆ. ಕೋಟೆ ಗೋಡೆಯ ಬುರುಜಿನ ಮೇಲೆ ನಿರ್ಮಾಣ ಮಾಡಿದ್ದಾರೆ. ಈಗ ಜೀರ್ಣೋದ್ಧಾರಗೊಳಿಸಿದ್ದಾರೆ ಇದರ ದ್ವಾರ-ಬಾಗಿಲು ಅಗ್ನಿ ದಿಕ್ಕಿಗೆ ಮುಖ ಮಾಡಿರುವುದು ವಿಶೇಷವಾಗಿದೆ. ಇದು ಊರಿನ ಗ್ರಾಮದೇವತೆಯು ಇದು ಪ್ರತಿ ಮಂಗಳವಾರ ಪೂಜೆ ನಡೆಯುತ್ತದೆ.
೩. ಹನುಮಂತ ದೇವಾಲಯ
ಈ ದೇವಾಲಯವು ಕೋಟೆಯ ಪ್ರವೇಶದ್ವಾರವಿರುವ ಉತ್ತರ ಭಾಗದಲ್ಲಿದ್ದು ಈಗ ಬಿದ್ದು ಹಾಳಾಗಿದೆ. ಪ್ರಸ್ತುತ ದೀಪಸ್ಥಂಬ ಮಾತ್ರ ಇದ್ದು ಅವಶೇಷಗಳು ಉಳಿದಿವೆ. ಹನುಮಂತನ ಉಬ್ಬು ಶಿಲ್ಪವಿದ್ದು ಈ ಶಿಲ್ಪದಲ್ಲಿ ಹನುಮಂತನ ಬಾಲವು ತಲೆಯ ಭಾಗದವರೆಗೂ ಇರುವುದು ವಿಶೇಷ. ಪ್ರತಿ ಶನಿವಾರ ಪೂಜೆ ನಡೆಯುತ್ತದೆ. ಈಗ ಈ ದೇವಾಲಯವನ್ನು ಊರಿನ ಹೊರಗಡೆ ಕಟ್ಟಿಸಿದ್ದಾರೆ.
೪. ತಿಮ್ಮಪ್ಪನ ಗುಡಿ
ಇದು ಕೋಟೆಯ ಉತ್ತರ ದಿಕ್ಕಿನಲ್ಲಿದ್ದು ಹನುಮಂತ ದೇವಾಲಯದ ಪಶ್ಚಿಮದಲ್ಲಿದೆ. ಈ ದೇವಾಲಯವು ಈಗ ಸಂಪೂರ್ಣವಾಗಿ ಹಾಳಾಗಿದ್ದು ಅವಶೇಷಗಳು ಮಾತ್ರ ಉಳಿದಿವೆ.
೫. ಕೋಟೆ
ಇದನ್ನು ಈಶ್ವರ ದೇವಾಲಯದ ಸುತ್ತಲು ನಿರ್ಮಾಣ ಮಾಡಿದ್ದು ಊರಿನ ರಕ್ಷಣೆಗೆ ನಿರ್ಮಿಸಿದ್ದಾರೆ. ನಾಲ್ಕು ಮೂಲೆಗಳಲ್ಲಿ ನಾಲ್ಕು ಬುರುಜುಗಳಿವೆ ಕೆಂಪು ಮತ್ತು ಕಪ್ಪು ಕಲ್ಲುಗಳನ್ನು ಜೋಡಿಸಿ ಕೋಟೆಯನ್ನು ನಿರ್ಮಿಸಲಾಗಿದೆ. ಈ ಕೋಟೆ ೧೫ ಅಡಿ ಎತ್ತರವಿದೆ. ಪ್ರಸ್ತುತ ಹಾಳಾಗಿದ್ದು ಅಲ್ಪಸ್ವಲ್ಪ ಕೋಟೆ ಸಾಲು ಮಾತ್ರ ಇದೆ. ಕೋಟೆಯ ಸುತ್ತಲು ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ಕಂದಕವನ್ನು ನಿರ್ಮಿಸಿದ್ದಾರೆ. ಶತ್ರುಗಳ ಹಾವಳಿಯನ್ನು ತಪ್ಪಿಸಲು ಕಂದಕದಲ್ಲಿ ನೀರು ಮತ್ತು ಪಾಪಸ್‌ಕಳ್ಳಿಯನ್ನು ಹಾಕುತ್ತಿದ್ದರು, ಈ ಕೋಟೆಯ ಬುರುಜುಗಳ ಮೇಲೆ ಕಾವಲುಗಾರರು ಇರುತ್ತಿದ್ದರೆಂದು ಊರಿನ ಹಿರಿಯರ ಅಭಿಪ್ರಾಯ.
೬. ವೀರಗಲ್ಲು
ಇದು ೨ ಪಟ್ಟಿಕೆಗಳಿಂದ ಕೂಡಿದ ವೀರಗಲ್ಲು ೭ / ಅಡಿ ಎತ್ತರ ೨ / ಅಗಲ ಇದ್ದು ೯ ಇಂಚು ದಪ್ಪವಿರುವ ಉಬ್ಬುಶಿಲ್ಪಗಳಿರುವ ವೀರಗಲ್ಲು ಇದಾಗಿದ್ದು, ವೀರನು ಬೇಟೆಯಾಡಿ ಮರಣ ಹೊಂದಿದ ನೆನಪಿಗೋಸ್ಕರ ನೆಡಲಾಗಿದೆ. ಇದು ಬೂದಿಹಳ್ಳಿ ಪೂಜಾರಿ ಪಾಲಜ್ಜನ ಜಮೀನಿನಲ್ಲಿದ್ದು ಹಾಗೂ ಬಿ.ಟಿ.ಪಿ ಡ್ಯಾಮ್‌ನ ಹಿನ್ನೀರು ಈ ಜಮೀನಿನವರೆಗೂ ನಿಲ್ಲುತ್ತವೆ. ಮೇಲಿನ ಭಾಗದಲ್ಲಿ ವೀರನು ಕುಳಿತ ಶಿಲ್ಪ ಪಕ್ಕದಲ್ಲಿ ಸ್ತ್ರೀಯರು ನಿಂತಿರುವ ಉಬ್ಬುಶಿಲ್ಪಗಳಿವೆ. ಕೆಳಭಾಗದಲ್ಲಿ ವೀರ ಹುಲಿಯನ್ನು ಬೇಟೆಯಾಡುತ್ತಿರುವ ಚೂಪಾದ ಆಯುಧದಿಂದ ಹುಲಿಗೆ ತಿವಿಯುತ್ತಿರುವ ಶಿಲ್ಪವಿದೆ. ವೀರನ ಹಿಂದೆ ಸ್ತ್ರೀ ಶಿಲ್ಪವಿದೆ.
೭. ಇತರೆ ಸ್ಮಾರಕಗಳು
ಹಳೇ ಮಠ: ಇದು ಈಶ್ವರ ದೇವಾಲಯದ ಮಾದರಿಯಲ್ಲಿದ್ದು ಇದು ಊರಿನ ಪಶ್ಚಿಮ ದಿಕ್ಕಿಗೆ ಇದೆ. ಯತಿಗಳು ವಾಸ ಮಾಡುತ್ತಿರುವ ಮಠವಾಗಿದೆ. ಪಕ್ಕದಲ್ಲಿ ಈ ಮಂಟಪಕ್ಕೆ ಹೊಂದಿಕೊಂಡಿರುವ ಮಜ್ಜನ ಬಾವಿ ಇದೆ. ಈ ಮಠವು ಚಿಕ್ಕದಾದ ಗರ್ಭಗೃಹ ಹೊಂದಿದ್ದು, ಶಿವಲಿಂಗವಿದೆ. ಈಗ ಪೀಠ ಮಾತ್ರವಿದೆ. ನಾಲ್ಕು ಕಂಬಗಳಿರುವ ಒಂದೇ ಸಾಲಿನ ಸಭಾಮಂಟಪವಿದೆ. ಈ ಸಭಾಮಂಟಪದಲ್ಲಿ ಚಿಕ್ಕದಾದ ನಂದಿ ಇದ್ದು, ಪಶ್ಚಿಮ ದಿಕ್ಕಿಗೆ ಮುಖ ಮಾಡಿರುವ ಶಿಲ್ಪವಿದೆ. ಕೊರಳಲ್ಲಿ ಹಾರ, ಹಣೆಪಟ್ಟಿ ಇದೆ, ಕಾಲಿನಲ್ಲಿ ಕಡಗವಿದೆ, ಬೆನ್ನಿನ ಮೇಲೆ ಯಾವುದೇ ಅಲಂಕಾರ ಇಲ್ಲ. ಈ ದೇವಾಲಯದ ವಿಶೇಷ ಎಂದರೆ ನೆಲಮಟ್ಟದಿಂದ ಕೆಳಗಡೆ ಇದೆ.
೮. ಮಜ್ಜನ ಬಾವಿ
ಇದು ಊರಿನ ಪಶ್ಚಿಮ ಭಾಗದಲ್ಲಿದೆ. ಇದರ ಪಕ್ಕದಲ್ಲಿ ಹೊರಮಠ ಮಂಟಪವಿದೆ. ಇಲ್ಲಿ ಋಷಿಗಳು, ಯತಿಗಳು ಸ್ನಾನ ಮಾಡಿ ಮಂಟಪದಲ್ಲಿ ವಾಸ ಮಾಡುತ್ತಿದ್ದರೆಂದು ಊರಿನ ಹಿರಿಯರ ಅಭಿಪ್ರಾಯವಾಗಿದೆ.
೯. ಪೊಲೀಸ್ ಠಾಣೆ
ಇದು ಈಶ್ವರ ದೇವಾಲಯದ ಉತ್ತರ ಭಾಗದ ಕೋಟೆ ಗೊಡೆಗೆ ಹೊಂದಿಕೊಂಡಿದೆ. ಉತ್ತರದ ಕಡೆ ಬಾಗಿಲು ಇದೆ ಇದು ಕಲ್ಲಿನ ಕಂಬಗಳ ಮಂಟಪವಾಗಿದೆ. ಈಗ ಬಿದ್ದು ಹಾಳಾಗಿದ್ದು ೩ ಕಂಬಗಳು ಮೇಲೆ ಹಾಸು ಬಂಡೆಯಿರುವ ಸ್ಮಾರಕ ಈಗಲೂ ಇದೆ. ಇದು ಗಡಿ ಗ್ರಾಮವಾಗಿದ್ದರಿಂದ ಪೊಲೀಸ್ ಠಾಣೆ ಇತ್ತೆಂದು ದಾಖಲೆಗಳು ಹೇಳುತ್ತವೆ. ತಳುಕು ಹೋಬಳಿ ಬಿಟ್ಟರೆ ಇದು ಎರಡನೇ ಉಪಠಾಣೆಯಾಗಿದೆ. ಈಗ ಇದನ್ನು ಜಾಜೂರಿಗೆ ವರ್ಗಾಯಿಸಲಾಗಿದೆ.
೧೦. ಸೇದುವ ಬಾವಿ
ಇದು ಈಶ್ವರ ದೇವಾಲಯ ಹಾಗೂ ಪೊಲೀಸ್ ಠಾಣೆಯ ಉತ್ತರ ಭಾಗದಲ್ಲಿದೆ ಈ ಬಾವಿ ತುಂಬಾ ಆಳವಾಗಿದ್ದು, ಈ ಬಾವಿಗೆ ನಿಲ್ಲಿಸಿರುವ ಬಂಡೆಗಲ್ಲುಗಳ ಒಂದು ಬಂಡೆಯಲ್ಲಿ ಶಾಸನವಿದೆ. ಅದರಲ್ಲಿ ಶ್ರೀರಸ್ತು ಮಾತ್ರ. ಕಾಣುತ್ತದೆ ಕೆಳಕಡೆ ಅಕ್ಷರಗಳು ಸರಿಯಾಗಿ ಕಾಣುತ್ತಿಲ್ಲ.

[ನಾನು ಕ್ಷೇತ್ರಕಾರ್ಯಕ್ಕೆ ಹೋದಾಗ ನನಗೆ ಸಲಹೆ ಸೂಚನೆ ನೀಡಿದ ಡಾ|| ಎಸ್. ತಿಪ್ಪೇಸ್ವಾಮಿ, ಪಿ. ಪಾಲಣ್ಣ ಇಂಗ್ಲಿಷ್ ಉಪನ್ಯಾಸಕರು ಕ್ಷೇತ್ರಕಾರ್ಯಕ್ಕೆ ಸಹಕರಿಸಿದ ಪೂಜಾರಿ ಅಜ್ಜಪ್ಪ, ಮಲ್ಲಜ್ಜ, ವೀರಭದ್ರ ಗೌಡ, ವಿ. ಶೋಭ, ಮೇಘನ. ಪಿ. ಅವರನ್ನು ನಾನು ಈ ಸಂದರ್ಭದಲ್ಲಿ ನೆನೆಯುತ್ತೇನೆ.]

ಆಧಾರಸೂಚಿ ಮತ್ತು ಟಿಪ್ಪಣಿಗಳು
೧.         ಕರ್ನಾಟಕ ಕನ್ನಡ ವಿಷಯ ವಿಶ್ವಕೋಶ.
೨.         ಚಿತ್ರದುರ್ಗ ಜಿಲ್ಲಾ ದರ್ಶಿನಿ, ಟಿ. ಗಿರಿಜ.
೩.         ಕರ್ನಾಟಕದ ಪರಂಪರೆ, ಭಾಗ-೧, ಮೈಸೂರು ರಾಜ್ಯ ಸರ್ಕಾರ, ೧೯೭೦.
೪.         ಎಪಿಗ್ರಾಫಿಯ ಕರ್ನಾಟಕ, ಸಂಪುಟ-೧೧, ಚಿತ್ರದುರ್ಗ ಜಿಲ್ಲೆ (ರೈಸ್ ಆವೃತ್ತಿ).
೫.         ಕರ್ನಾಟಕದ ವೀರಗಲ್ಲುಗಳು, ಡಾ. ಆರ್. ಶೇಷಶಾಸ್ತ್ರಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು-೧೯೮೨, ೨೦೦೪.
೬.         ಇತಿಹಾಸ ದರ್ಶನ, ಸಂಪುಟ-೨೧, ೨೦೦೬, ಕರ್ನಾಟಕ ಇತಿಹಾಸ ಅಕಾದೆಮಿ, ಬೆಂಗಳೂರು.
೭.         ಕ್ಷೇತ್ರಾಧಾರಿತ ವರದಿ.
೮.         ಮೌಖಿಕ ಸಂದರ್ಶನದ ವರದಿ.




No comments:

Post a Comment