Friday, December 21, 2012

ಬದನಗುಪ್ಪೆ ಪರಿಸರದ ಪ್ರಾಚ್ಯಾವಶೇಷಗಳ ಶೋಧನೆ



ಡಾ. ಬಿ. ಬಸವರಾಜು ತಗರಪು
೩೧೩ತಗರಪುರತಿಲಕವಾಡಿ ಅಂಚೆ
ಕೊಳ್ಳೇಗಾಲ ತಾಲ್ಲೂಕುಚಾಮರಾಜನಗರ ಜಿಲ್ಲೆ-೫೭೧೪೪೦.
ದನಗುಪ್ಪೆಯು ಚಾಮರಾಜನಗರದ ಪಶ್ಚಿಮ ದಿಕ್ಕಿಗೆ ಸುಮಾರು ೧೦ ಕಿಲೋಮೀಟರ್ ದೂರದಲ್ಲಿದೆ. ಈ ಗ್ರಾಮದಲ್ಲಿ ಇಲ್ಲಿಯ ತನಕ ಎಲ್ಲಿಯೂ ಪ್ರಕಟಗೊಳ್ಳದ ಪ್ರಾಚ್ಯಾವಶೇಷಗಳು ಕಂಡುಬರುತ್ತವೆ. ಅವುಗಳು ಈ ಕೆಳಕಂಡಂತೆ ಕಂಡುಬರುತ್ತವೆ.
೧)       ಬೃಹತ್ ಶಿಲಾಸಮಾಧಿಯ ಮಾದರಿಯ ಗುಡಿ.
೨)       ಬೃಹತ್ ಶಿಲಾಸಮಾಧಿಯ ಗುಡಿ ಒಳಗೆ ರಾವಳೇಶ್ವರ ಶಿಲ್ಪ.
೩)       ಬೃಹತ್ ಶಿಲಾಸಮಾಧಿಗೆ ಬಳಸಿರುವ ಚಪ್ಪಡಿಗಳು.
೪)       ಕಾಳೇಶ್ವರ ದೇವಾಲಯದಲ್ಲಿ ರಾವಳೇಶ್ವರ ಶಿಲ್ಪ.
೫)       ಊರಿನ ಹೊರ ಭಾಗದಲ್ಲಿ ಸಂಪೂರ್ಣವಾಗಿ ದುಃಸ್ಥಿತಿ ಹೊಂದಿರುವ ಶಿವ ದೇವಾಲಯ.
೬)       ಕೆಲವು ವೀರಗಲ್ಲುಗಳು.
೧. ಬೃಹತ್ ಶಿಲಾ ಸಮಾಧಿ
ಭಾರತದಲ್ಲಿ ಆದಿ ಹಳೆಯ ಶಿಲಾಯುಗ ಸಂಸ್ಕೃತಿಯ ಅವಶೇಷಗಳು ೧೮೬೩ರ ಸಂದರ್ಭದಲ್ಲಿಯೇ ಬೆಳಕಿಗೆ ಬಂದಿದೆ. ಆದಿ ಹಳೆಯ ಶಿಲಾಯುಗ ಸಂಸ್ಕೃತಿಯ ನೆಲೆಗಳು ರಾಜ್ಯದ ಕಂಡುಬಂದಿದ್ದರೂ ಈ ನೆಲೆಯಲ್ಲಿ ಯಾರೂ ಗುರುತಿಸಿರಲಿಲ್ಲ.
ಬದನಗುಪ್ಪೆ ಗ್ರಾಮದಲ್ಲಿ ದೊರೆತಿರುವ ಬೃಹತ್ ಶಿಲಾಸಮಾಧಿಯ ಕುರುಹುಗಳಿಂದ ಈ ಸ್ಥಳದ ಸಂಸ್ಕೃತಿಯನ್ನು ಕ್ರಿ.ಪೂರ್ವದ ಕಾಲಕ್ಕೆ ಕೊಂಡೊಯ್ಯಬಹುದಾಗಿದೆ. ಈ ಭಾಗದಲ್ಲಿ ಶಿಲಾಯುಗ ಸಂಸ್ಕೃತಿ ಇರಲು ಕಾರಣವೇನೆಂದರೆ ಈ ಗ್ರಾಮವು ವ್ಯವಸಾಯಕ್ಕೆ ಯೋಗ್ಯ ಪ್ರದೇಶವಾಗಿದ್ದು, ಅಲ್ಲದೆ ಶಿಲಾಗೋರಿ ನಿರ್ಮಿಸಲು ಯೋಗ್ಯ ಭೂಮಿಯೆಂದು ಈ ಸ್ಥಳದಲ್ಲಿ ಬೃಹತ್ ಶಿಲಾ ಸಮಾಧಿಯನ್ನು ಬಳಸಿರಬೇಕೆಂದು ಸೂಕ್ಷ್ಮವಾಗಿ ಹೇಳಬಹುದಾಗಿದೆ. ಈ ಸಮಾಧಿಗೆ ಬಳಸಿರುವ ಚಪ್ಪಡಿಗಳು ಆಯಾತಕಾರವಾಗಿವೆ. ಚಪ್ಪಡಿಗಳು ಸುಮಾರು ೧೦ ಅಡಿ ಉದ್ದ ೫ ಅಡಿ ಎತ್ತರವನ್ನು ಹೊಂದಿರುತ್ತದೆ. ಹೀಗೆ ನೋಡಿದರೆ ಒಂದು ಕಡೆ ಚಪ್ಪಡಿಯನ್ನು ಮುಚ್ಚಿಲ್ಲ. ಉಳಿದ ಎಲ್ಲಾ ಕಡೆ ಚಪ್ಪಡಿಗಳಿದ್ದು, ಮೇಲೆ ಬಲವಾದ ಚಪ್ಪಡಿಯನ್ನು ಮುಚ್ಚಲಾಗಿದೆ.
೨. ಬೃಹತ್ ಶಿಲಾ ಸಮಾಧಿಯ ಗುಡಿಯ ಒಳಗೆ ರಾವಳೇಶ್ವರ ಶಿಲ್ಪ
ಸಮಾಧಿ ಒಳಗೆ ಒಂದು ರಾವಳೇಶ್ವರನ ಶಿಲ್ಪವನ್ನು ಇಡಲಾಗಿದ್ದು, ಈಗ ಇದನ್ನು ದೇವರ ಗುಡಿಯೆಂದು ಕರೆಯುವ ವಾಡಿಕೆ ಇದೆ. ಪ್ರಾಯಶಃ ಈ ಭಾಗದಲ್ಲಿ ರಾವಳೇಶ್ವರ ಶಿಲ್ಪಗಳು ಸಾಕಷ್ಟು ಸಂಖ್ಯೆಯಲ್ಲಿ ಕಂಡುಬರುತ್ತವೆ. ಈ ಶಿಲ್ಪಗಳು ಕಂಡುಬರುವ ಎಲ್ಲಾ ಊರಿನಲ್ಲಿ ಶಿಲ್ಪವನ್ನು ರಾಜ ಎಂದು ಗುರುತಿಸಿ ಪ್ರತ್ಯೇಕ ದೇವತಾ ಎಂದು ಕರೆಯುತ್ತಾರೆ.
ರಾವಳೇಶ್ವರ ಶಿಲ್ಪವು ಎರಡೂವರೆ ಅಡಿ ಎತ್ತರ, ಒಂದೂವರೆ ಅಡಿ ಅಗಲ ಇದೆ. ರಾವಳೇಶ್ವರನಿಗೆ ಒಂದು ತಲೆ ಇದ್ದು ನಾಲ್ಕು ಕೈಗಳು ಇರುವುದರಿಂದ ಸಾಮಾನ್ಯವಾಗಿ ದೇವರು ಎಂಬುದಾಗಿ ಕರೆಯುವ ವಾಡಿಕೆ ಇದೆ. ಇದರಲ್ಲೂ ಉಬ್ಬುಶಿಲ್ಪ ರಚನೆ ಇದೆ. ರಾವಳೇಶ್ವರನ ಬಲಗೈಯಲ್ಲಿ ಚಕ್ರ, ಮೇಲಿನ ಎಡಗೈಯಲ್ಲಿ ಬಿಲ್ಲು, ಕೆಳಗಿನ ಎಡ ಕೈಯಲ್ಲಿ ಶಾಂತಮುದ್ರೆಯಿಂದ ಕೂಡಿದ ಗದೆ ಇದೆ. ಮತ್ತೊಂದು ಕೈಯಲ್ಲಿ ವೀರ (ರಾಜ) ಗಾಂಭೀರ‍್ಯದಿಂದ ಇಳಿಬಿಟ್ಟ ಖಡ್ಗ, ಕೈಸೊಂಟದ ಮೇಲ್ಭಾಗದಲ್ಲಿದೆ. ವೇಷಭೂಷಣಗಳನ್ನು ರಾಜನಂತೆಯೇ ಇದೆ. ಕಾಲುಗಳಲ್ಲಿ ಪಾದುಕೆ ಧರಿಸಿರುವುದು ಕಂಡುಬರುತ್ತದೆ. ಪೀಠದಲ್ಲಿ ಹೋರಾಟದ ಟಗರುಗಳು ಇವೆ. ಈ ರೀತಿಯ ಶಿಲ್ಪಗಳನ್ನು ಸೂಕ್ಷ್ಮವಾಗಿ ಅಭ್ಯಾಸಿಸಿದರೆ ಶಿಲ್ಪ ಬೇರೆ ಬೇರೆ ಸಂದರ್ಭಕ್ಕೆ ಕಥೆಯನ್ನು ಹೇಳಬಹುದು. ಕೆಲವು ವಿದ್ವಾಂಸರು ಈ ರೀತಿಯ ಶಿಲ್ಪಗಳನ್ನು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಿರುತ್ತಾರೆ.
ಖ್ಯಾತ ಸಂಶೋಧಕರಾದ ಡಾ. ಸೂರ್ಯನಾಥ ಕಾಮತ್‌ರವರು ಈ ಪ್ರಬಂಧವನ್ನು ಮಂಡಿಸುವ ಸಂದರ್ಭದಲ್ಲಿ ಇದು ಸಮಾಧಿಯಲ್ಲ ಎಂದು ತಿಳಿಸಿರುತ್ತಾರೆ. ಆದರೆ ಇಂತಹ ಸಮಾಧಿಯನ್ನು ತೆಗೆದು ನೋಡಿದಾಗ ಭೂಮಿಯಲ್ಲಿ ತಲೆ ಬುರುಡೆ, ಕೈಕಾಲು, ಮೂಳೆಗಳು ಕಂಡುಬಂದಿರುವುದುಂಟು. ಉದಾಹರಣೆಗೆ ಕೊಳ್ಳೇಗಾಲ ತಾಲ್ಲೂಕು ತಗರಪುರ ಗ್ರಾಮದಲ್ಲಿ ಲಿಂಗಾಯಿತ ಬೀದಿಯ ಬಸವಣ್ಣ ಗುಡಿಯ ಪಕ್ಕದಲ್ಲಿ ಭೂಮಿಯನ್ನು ಅಗೆಯುವಾಗ ಮಾನವನಿಗೆ ಸೇರಿದ ತಲೆ ಬುರುಡೆಗಳು ದೊರೆತವು. ಈಗಲೂ ಸಹ ಅಲ್ಲಿ ಈ ರೀತಿಯ ಸಮಾಧಿಯಿದ್ದು, ಸಮಾಧಿಯ ಒಳಗೆ ಸುಮಾರು ವೀರಗಲ್ಲುಗಳನ್ನು ನಿಲ್ಲಿಸಿರುವುದನ್ನು ಕಾಣಬಹುದಾಗಿದೆ. ಈ ಎಲ್ಲಾ ಹಿನ್ನೆಲೆಯಿಂದ ಬದನಗುಪ್ಪೆಯ ಈ ಅವಶೇಷವನ್ನು ಸಮಾಧಿ ಎಂದು ಗುರುತಿಸಲಾಗಿದೆ.
೩. ಬೃಹತ್ ಶಿಲಾಸಮಾಧಿಗೆ ಬಳಸಿರುವ ಚಪ್ಪಡಿಗಳು
ಬದನಗುಪ್ಪೆ ಕೊಳದ ದಂಡೆಯಲ್ಲಿ ಬೃಹತ್ ಶಿಲಾಸಮಾಧಿಗೆ ಬಳಸಿರುವ ಚಪ್ಪಡಿಗಳು ಕಂಡುಬಂದಿವೆ. ಈಗಾಗಲೇ ಹಲವಾರು ಸಂಶೋಧಕರು ಬೃಹತ್ ಶಿಲಾಸಂಸ್ಕೃತಿಯ ಬಗ್ಗೆ ಸಂಶೋಧನೆ ನಡೆಸಿ ಬೃಹತ್ ಶಿಲಾಸಂಸ್ಕೃತಿಗೆ ಪೂರಕವಾದ ಸಮಾಧಿಗಳನ್ನು ಗುರುತಿಸಿದ್ದಾರೆ. ಅವರ ಒಂದು ಸಂಶೋಧನೆಯ ಆಧಾರದ ಮೇಲೆ ನೋಡುವುದಾದರೆ ಇಲ್ಲಿಯು ಸಹ ಅದೇ ಮಾದರಿಯ ಚಪ್ಪಡಿಗಳು ದೊರೆತಿರುವುದರಿಂದ, ಅಲ್ಲದೆ ಈಗಾಗಲೇ ಮೇಲೆ ಚರ್ಚಿಸಿರುವ ಆಧಾರದ ಮೇಲೆ ದೊರಕಿರುವ ಚಪ್ಪಡಿಗಳನ್ನು ಬೃಹತ್ ಶಿಲಾಸಮಾಧಿಗೆ ಬಳಸಿರುವ ಚಪ್ಪಡಿಗಳು ಎಂದು ಗುರುತಿಸಲಾಗಿದೆ. ಈ ಎಲ್ಲಾ ಆಧಾರಗಳಿಂದ ಬದನಗುಪ್ಪೆ ಗ್ರಾಮದ ಪರಿಸರದಲ್ಲಿ ಪ್ರಾಚೀನ ಕಾಲದಲ್ಲಿ ಬೃಹತ್ ಶಿಲಾಸಮಾಧಿಗಳು ನಿರ್ಮಿತಗೊಂಡಿದ್ದವು ಎಂಬುದು ಗೋಚರವಾಗುತ್ತದೆ.
೪. ಕಾಳೇಶ್ವರ ದೇವಾಲಯದಲ್ಲಿ ರಾವಳೇಶ್ವರ ಶಿಲ್ಪ
ಬದನಗುಪ್ಪೆಯ ಕೊಳದ ಪಕ್ಕದಲ್ಲಿ ಅಂದರೆ ಬೃಹತ್ ಶಿಲಾಸಮಾಧಿಯ ಪಕ್ಕದಲ್ಲಿ ಪೂರ್ವಾಭಿಮುಖವಾಗಿ ಕಾಳೇಶ್ವರ ದೇವಾಲಯ ನಿರ್ಮಾಣಗೊಂಡಿದೆ. ಇದು ಪ್ರಾಚೀನ ದೇವಾಲಯವಾಗಿದ್ದರೂ ಕೂಡ ಇತ್ತೀಚಿನ ವರ್ಷಗಳಲ್ಲಿ ಪುನರ್ ನಿರ್ಮಾಣಗೊಂಡಿದೆ. ಈ ದೇವಾಲಯವನ್ನು ಈಗ ಕಾಳೇಶ್ವರ ದೇವಾಲಯ ಎಂದು ಕರೆಯಲಾಗುತ್ತದೆ.
ರಾವಳೇಶ್ವರನನ್ನು ರಾವಳೇಶ್ವರ, ರಾವಣೇಶ್ವರ, ಕಾಳರಾಯ, ಕಂದಗಾರಪ್ಪ, ಬೆಂದಗಾಳರಾಯ, ಕಾಮರಾಯ, ರಾವಳಪ್ಪ, ಹೊನ್ನಸಿದ್ಧೇಶ್ವರ, ಮಹಾಲಿಂಗೇಶ್ವರ, ಬ್ರಹ್ಮೇಶ್ವರ, ವೀರಪ್ಪ, ವೈದ್ಯನಾಥೇಶ್ವರ, ಕಥಗಾರಯ್ಯ, ಕಾಳಮಂಟರಾಯ, ಕರ್ಪಸ್ವಾಮಿ ಇನ್ನೂ ಮೊದಲಾದ ಹೆಸರುಗಳಿಂದ ಕರೆಯುತ್ತಾರೆ. ಈ ದೇವಾಲಯದ ಒಳಗೆ ಇರುವ ಶಿಲ್ಪ ಅಲ್ಲದೆ ಬೃಹತ್ ಶಿಲಾಸಮಾಧಿ ಒಳಗೆ ಇರುವ ಶಿಲ್ಪವೂ ಒಂದೇ ರೀತಿ ಇರುವುದರಿಂದ ಈ ಶಿಲ್ಪದ ಬಗ್ಗೆ ವಿವರಣೆಯನ್ನು ನೀಡಲಾಗಿಲ್ಲ.
ಈ ದೇವಾಲಯವು ೧೫ x ೧೫ ಅಡಿ ಚದರ ಸುತ್ತಳತೆಯಿಂದ ನಿರ್ಮಿತವಾಗಿದ್ದು, ಶುದ್ಧ ದ್ರಾವಿಡ ಶೈಲಿಯನ್ನು ಹೊಂದಿದ್ದು, ದೇವಾಲಯದ ವಿಮಾನದ ಸುತ್ತಲೂ ವಿವಿಧ ರೀತಿಯ ಶೈವ ಪರಂಪರೆಯ ಗಾರೆ ಶಿಲ್ಪಗಳನ್ನು ಕಡೆಯಲಾಗಿದೆ. ಪ್ರಾಯಶಃ ಇದು ಸಹ ಅಂದು ಸಮಾಧಿಯಾಗಿರಬಹುದು. ಆದರೆ ಇತ್ತೀಚಿನ ವರ್ಷಗಳಲ್ಲಿ ದೇವಾಲಯವನ್ನು ಮಾಡಿರಬಹುದೆಂದು ಹೇಳಬಹುದು. ಏಕೆಂದರೆ ಈ ಊರಿನ ಹೊರಭಾಗದ ಕೊಳದ ದಂಡೆಯಲ್ಲಿ ಬೃಹತ್ ಶಿಲಾ ಗೋರಿಗೆ ಸಂಬಂಧಿಸಿದಂತೆ ಚಪ್ಪಡಿಗಳು ದೊರಕುವುದರಿಂದ ಇದು ಸಹ ಬೃಹತ್ ಶಿಲಾ ಸಮಾಧಿಯಾಗಿರಬಹುದೆಂದು ಹೇಳಬಯಸುತ್ತೇನೆ.
೫. ಊರಿನ ಹೊಸ ಭಾಗದಲ್ಲಿ ಸಂಪೂರ್ಣವಾಗಿ ದುಸ್ಥಿತಿ ಹೊಂದಿರುವ ಶಿವ ದೇವಾಲಯ
ಶಿವದೇವಾಲಯವು ಬದನಗುಪ್ಪೆಯ ಪಶ್ಚಿಮ ದಿಕ್ಕಿಗೆ ಹಾಗೂ ಪಣ್ಯದಹುಂಡಿಯ ದಿಕ್ಕಿಗೆ ಊರಿನ ಹೊರಭಾಗದ ರೈಲ್ವೆ ಹಳಿಯ ಪಕ್ಕದಲ್ಲಿ ಕಂಡುಬರುತ್ತದೆ. ಈ ದೇವಾಲಯವು ಪೂರ್ವಾಭಿಮುಖವಾಗಿದ್ದು ಸಂಪೂರ್ಣವಾಗಿ ದುಸ್ಥಿತಿ ಹೊಂದಿದೆ. ಆದರೆ ಈ ದೇವಾಲಯ ಯಾವ ಶತಮಾನದಲ್ಲಿ ನಿರ್ಮಾಣಗೊಂಡಿದೆ ಎಂದು ಹೇಳುವುದಕ್ಕೆ ಯಾವುದೇ ಆಧಾರಗಳಿಲ್ಲ. ಆದರೂ ಸಹ ಈ ದೇವಾಲಯದ ಗರ್ಭಗೃಹದಲ್ಲಿ ಶಿವಲಿಂಗವಿರುವುದರಿಂದ ಇದೊಂದು ಶಿವದೇವಾಲಯವಾಗಿತ್ತೆಂದು ಮಾತ್ರ ಹೇಳಲು ಸಾಧ್ಯ.
೬. ಕೆಲವು ವೀರಗಲ್ಲು
ಬದನಗುಪ್ಪೆಯ ಪಶ್ಚಿಮ ದಿಕ್ಕಿಗೆ ಮತ್ತು ಪಣ್ಯದ ಹುಂಡಿಯ ಪೂರ್ವ ದಿಕ್ಕಿಗೆ ಇರುವ ಒಂದು ಹೊಲದಲ್ಲಿ ವೀರಗಲ್ಲುಗಳಿವೆ. ಹೊಲದಲ್ಲಿ ದೊರೆತಿರುವ ವೀರಗಲ್ಲನ್ನು ಗಮನಿಸಿದರೆ ಇದು ಮೂರು ಅಂತಸ್ತಿನಿಂದ ಕೂಡಿದ್ದು, ಕೆಳಭಾಗದ ಅಂತಸ್ತಿನಲ್ಲಿ ಇಬ್ಬರು ಯೋಧರು ವೀರಾವೇಶದಿಂದ ಹೋರಾಡುತ್ತಿರುವ ದೃಶ್ಯಾವಳಿಯನ್ನು ಮನೋಜ್ಞವಾಗಿ ಶಿಲ್ಪದಲ್ಲಿ ಕೆತ್ತಲಾಗಿದೆ. ಈ ಶಿಲ್ಪವನ್ನು ನೋಡಿದರೆ ರಾಜನೇ ಹೋರಾಟ ಮಾಡುತ್ತಿರುವ ದೃಶ್ಯ ಕಂಡುಬರುತ್ತದೆ. ಏಕೆಂದರೆ ರಾಜನ ವೇಷ-ಭೂಷಣಗಳನ್ನು ಹೊಂದಿರುವ ಒಬ್ಬ ರಾಜ ಸೊಂಟದಲ್ಲಿ ಖಡ್ಗವನ್ನು ಕಟ್ಟಿಕೊಂಡಿದ್ದು, ಮತ್ತೊಂದು ಕೈಯಲ್ಲಿ ಖಡ್ಗ ಗುರಾಣಿಯನ್ನು ಹಿಡಿದುಕೊಂಡಿರುವುದು ಕಂಡುಬರುತ್ತದೆ.
ಇದರ ಮೇಲಿನ ಹಂತದಲ್ಲಿ ಮೂರು ಜನ ವ್ಯಕ್ತಿಗಳ ಉಬ್ಬುಶಿಲ್ಪಗಳು, ಮಡಿದವರನ್ನು ಸ್ವರ್ಗಕ್ಕೆ ಕೊಂಡೊಯ್ಯುತ್ತಿರುವ ದೃಶ್ಯಾವಳಿಯನ್ನು ಸೂಕ್ಷ್ಮವಾಗಿ ಕೆತ್ತಲಾಗಿವೆ. ಇದರ ಮೇಲಿನ ಭಾಗ ೩ನೇ ಅಂತಸ್ತಿನದಾಗಿದ್ದು, ಇಲ್ಲಿ ನಂದಿಯ ಶಿಲ್ಪವಿದ್ದು, ಭಕ್ತಿಪೂರ್ವಕವಾಗಿ ಕೈಮುಗಿಯುತ್ತಿರುವ ಶಿಲ್ಪ ಸುಂದರವಾಗಿ ಮೂಡಿಬಂದಿದೆ. ಈ ಮೇಲಿನ ಎಲ್ಲಾ ಆಧಾರಗಳಿಂದ ಮಾನವನ ಸಾಂಸ್ಕೃತಿಕ ಬೆಳವಣಿಗೆಯ ಚರಿತ್ರೆಯಲ್ಲಿ ಕಂಡುಬರುವ ಹಲವಾರು ಮಹತ್ವದ ಸಾಧನೆಗಳಲ್ಲಿ ಒಂದು ಎಂದು ಹೇಳಬಹುದು. ಅಲ್ಲದೆ ಪ್ರಾಗೈತಿಹಾಸಿಕ ಕಾಲದಲ್ಲಿ ಮಾನವನು ಜೀವನ ನಡೆಸುತ್ತಿರುವಾಗ ತನ್ನ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಪ್ರಕೃತಿಯತ್ತ ವಿಶೇಷ ಗಮನಹರಿಸತೊಡಗಿದನು. ಜೀವಿಗಳ ಜನನ-ಮರಣಗಳು ಪ್ರಕೃತಿಯ ಅದ್ಭುತ ದೃಷ್ಟಿ ವಿಶೇಷ ಪರಿಣಾಮಕಾರಿ ಪ್ರಸಂಗಗಳು ಇವನ್ನೆಲ್ಲ ಹಲವು ಕಾಲಗಳ ಸತತ ಗಮನಿಸುವಿಕೆಯಿಂದ ಮಾನವನು ಕಂಡುಕೊಂಡನು. ಆತ ಪ್ರಕೃತಿಯು ತನಗಿಂತಲೂ ಅಧಿಕ ಶಕ್ತಿಯುಳ್ಳದ್ದೆಂದೂ ಅದರಲ್ಲಿಯೇ ಜನನ-ಜೀವನ-ಮರಣವೆಂದೂ ಅರಿತು ಅದನ್ನು ಗೌರವ ಮತ್ತು ಭಯ ಭಕ್ತಿಯಿಂದ ಕಾಣತೊಡಗಿದನು. ಈ ಹಿನ್ನೆಲೆಯಿಂದ ಅಂದು ಮಾನವನು ತನ್ನ ರಾಜನನ್ನು, ಯಜಮಾನರನ್ನು, ಪ್ರಮುಖರನ್ನು, ಯೋಧರನ್ನು, ಮರಣ ಹೊಂದಿದ ನಂತರ ಸುಂದರವಾದ ಕಲ್ಲಿನಿಂದ ನಿರ್ಮಿತಗೊಂಡ ಸಮಾಧಿಯನ್ನು ನಿರ್ಮಿಸಿ ಶವ ಸಂಸ್ಕಾರವನ್ನು ಮಾಡುತ್ತಿದ್ದರು. ಅದು ಬದನಗುಪ್ಪೆಯ ಪರಿಸರದಲ್ಲೂ ಕಂಡುಬಂದಿರುವುದನ್ನು ಪ್ರಸ್ತುತ ಈ ಪ್ರಬಂಧದಲ್ಲಿ ಪ್ರಸ್ತುತಪಡಿಸಲಾಗಿದೆ.

ಆಧಾರಸೂಚಿ
೧.         ಬಿ.ಎಲ್. ರೈಸ್., ಮೈಸೂರ್ ಅಂಡ್ ಕೂರ್ಗ್ ಫ್ರಂ ಇನ್ಸ್‌ಕ್ರಿಪ್‌ಷನ್ಸ್, 
೨.         ಮಲೆಯೂರು ಗುರುಸ್ವಾಮಿ, ಹೊನ್ನಹೊಳೆ, ಬಿ.ಎನ್. ನಾಗರತ್ನ., ಸಾಂಸ್ಕೃತಿಕ ರಾಜಧಾನಿ ತೆರಕಣಾಂಬಿ, ಚಾಮರಾಜನಗರ, ೨೦೦೭.
೩.         ಪಿ.ಬಿ. ದೇಸಾಯಿ ಮತ್ತು ಇತರರು., ಹಿಸ್ಟರಿ ಆಫ್ ಕರ್ನಾಟಕ, ಕನ್ನಡ ಸಂಶೋಧನ ಸಂಸ್ಥೆ, ಕರ್ನಾಟಕ ವಿ.ವಿ. ಧಾರವಾಡ, ೧೯೭೦.
೪.         ಎಚ್. ತಿಪ್ಪೇರುದ್ರಸ್ವಾಮಿ., ಕರ್ಣಾಟಕ ಸಂಸ್ಕೃತಿ ಸಮೀಕ್ಷೆ.
೫.         ಎಸ್. ಶ್ರೀಕಂಠಶಾಸ್ತ್ರಿ., ಪುರಾತತ್ತ್ವ ಶೋಧನೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, ೧೯೬೦, ೧೯೭೫.
೬.         ಕೆ.ಬಿ. ಶಿವತಾರಕ್., ಕರ್ನಾಟಕದ ಪುರಾತತ್ತ್ವ ನೆಲೆಗಳು, ಹಂಪಿ, ಕನ್ನಡ ವಿವಿ. ೨೦೧೧.

 ೩೧೩, ತಗರಪುರ, ತಿಲಕವಾಡಿ ಅಂಚೆ, ಕೊಳ್ಳೇಗಾಲ ತಾಲ್ಲೂಕು, ಚಾಮರಾಜನಗರ ಜಿಲ್ಲೆ-೫೭೧೪೪೦.



1 comment:

  1. nimma presetation chennagide. hosa vishayagalannu tilisuva namma akadamiya ee blognalli neevu modala leekhakaraagiruvudakkagi haardika shubhaashayagalu.Illiya neerina nelegalabgege nimae enaadroo maahiti iddare bareyiri. Dr.Harihara Sreenivaasa Rao. nanna email address. hariharasreenivasarao @gmail.com cell No.9900682197

    ReplyDelete