Friday, December 14, 2012

ಅರಸೀಕೆರೆ ತಾಲೂಕಿನ ಪ್ರಾಗೈತಿಹಾಸಿಕ ನೆಲೆಗಳು



ಪ್ರವೀಣ್ ಬೆಳ್ತಂಗಡಿ
ಇತಿಹಾಸ ಉಪನ್ಯಾಸಕರು,
ಶ್ರೀ ಗೋಕರ್ಣನಾಥೇಶ್ವರ ಪದವಿಪೂರ್ವ ವಿದ್ಯಾಲಯ,
ಗಾಂಧಿನಗರಮಂಗಳೂರುದಕ್ಷಿಣ ಕನ್ನಡ-೫೭೫೦೦೩.
      
   ಬರವಣಿಗೆಯ ಪೂರ್ವದಲ್ಲಿನ ಮಾನವ ಸಂಸ್ಕೃತಿಯ ಕಾಲವನ್ನು ‘ಪ್ರಾಗೈತಿಹಾಸಿಕ ಕಾಲ ಎಂಬುದಾಗಿ ಗುರುತಿಸಲಾಗಿದೆ. ಹಿಂದೆ ಹಲವು ಆಕಸ್ಮಿಕ ಶೋಧಗಳಿಂದ ದೊರೆತ ಪ್ರಾಗೈತಿಹಾಸಿಕ ಕಾಲದ ನಿವೇಶನಗಳನ್ನು ಮತ್ತು ಅವಶೇಷಗಳನ್ನು ಪ್ರಾಕ್ತನ ಶಾಸ್ತ್ರಜ್ಞರು ಪರೀಕ್ಷಿಸಿ ಮಾನವ ಜೀವನ ಮತ್ತು ಸಂಸ್ಕೃತಿಯ ಪ್ರಾಚೀನತೆ ಮತ್ತು ಬೆಳವಣಿಗೆಯಲ್ಲಿ ಕೆಲವು ಹಂತಗಳನ್ನು ಗುರುತಿಸಿದ್ದಾರೆ. ಕಾಲಾನುಕ್ರಮವಾಗಿ ಹಳೇ ಶಿಲಾಯುಗ, ಹೊಸ ಶಿಲಾಯುಗ, ಕಂಚಿನಯುಗ ಮತ್ತು ಕಬ್ಬಿಣಯುಗ ಅಥವಾ ಬೃಹತ್ ಶಿಲಾಯುಗಗಳೆಂದು ವಿಂಗಡಿಸಬಹುದಾಗಿದೆ.
ಕಬ್ಬಿಣಯುಗದ ಜನರಲ್ಲಿ ಒಂದು ವಿಶಿಷ್ಟ ಪದ್ಧತಿ ಇತ್ತು. ಅದೇನೆಂದರೆ ಬಹುದೊಡ್ಡ ಕಲ್ಲುಚಪ್ಪಡಿಗಳಿಂದ ಸುಮಾರು ಒಂದು ಮೀಟರಿನಷ್ಟು ಉದ್ದ ಅಗಲವುಳ್ಳ, ಅಷ್ಟೇ ಎತ್ತರವುಳ್ಳ ಕೋಣೆಗಳನ್ನು ಕಟ್ಟುವುದು, ಅದರಲ್ಲಿ ಸತ್ತ ಜನರ ಎಲುಬುಗಳನ್ನು ಸಂಗ್ರಹಿಸಿಡುವುದು, ಕಲ್ಲುರಾಶಿಗಳು ಚದುರದ ಹಾಗೆ ಚೌಕಾಕಾರದ ಅಥವಾ ದುಂಡಾದ ಕಟ್ಟೆಯನ್ನು ಕಟ್ಟುವುದು. ಈ ಕಲ್ಲುಚಪ್ಪಡಿಗಳು ಗುಡ್ಡಗಳಲ್ಲಿ ಸಿಗುತ್ತವೆ. ಅವುಗಳನ್ನು ಎಬ್ಬಿಸಿ, ಉಳಿಯಿಂದ ಕೆತ್ತದೆ, ಸುತ್ತಿಗೆಯಿಂದ ಅಲ್ಲಲ್ಲಿ ಸರಿಮಾಡಿಕೊಂಡು ಉಪಯೋಗಿಸುತ್ತಿದ್ದರು. ಕಲ್ಲುಗಳು ಒರಟಾಗಿ ದಪ್ಪ ಹೆಚ್ಚು ಕಡಿಮೆ ಇರುತ್ತಿತ್ತು. ಆದುದರಿಂದ ಇತಿಹಾಸಕಾರರು ಇದನ್ನು ಬೃಹತ್ ಶಿಲಾಯುಗವೆಂಬುದಾಗಿ ಕರೆಯುತ್ತಾರೆ.
ಬೃಹತ್ ಶಿಲಾಯುಗದ ಗೋರಿಗಳು ಒರಟಾದ ದೊಡ್ಡ ದೊಡ್ಡ ಕಲ್ಲುಗಳಿಂದ ಕಟ್ಟಲ್ಪಟ್ಟಿವೆ. ಒಂದೊಂದು ಪ್ರದೇಶದಲ್ಲಿ ಇವು ಬೇರೆ ಬೇರೆಯ ಆಕಾರಗಳಲ್ಲಿ ಬಹಳವಾಗಿ ಇರುತ್ತವೆ. ಆದುದರಿಂದ ಹೇರಳವಾಗಿ ಕಲ್ಲು ಹಲಗೆಗಳು, ತುಂಡು ಕಲ್ಲುಗಳು ಸಿಗುವ ಬೆಟ್ಟಗಳ ಬಯಲುಗಳಲ್ಲಿ, ಬುಡದಲ್ಲಿ ಇಂತಹ ಸ್ಥಳಗಳು ಹೆಚ್ಚಾಗಿ ಕಾಣಸಿಗುವುವು. ಕರ್ನಾಟಕದಲ್ಲಿ ಬೃಹತ್ ಶಿಲಾಯುಗದ ಕಾಲಕ್ಕೆ ಸಂಬಂಧಿಸಿದಂತೆ ಸಂಶೋಧನೆ ನಡೆದಾಗ ಆಧಾರಗಳು ಅಧಿಕ ಪ್ರಮಾಣದಲ್ಲಿ ಕಾಣಬಂದಿವೆ. ಬೃಹತ್ ಶಿಲಾಯುಗದ ಹಂತದಲ್ಲಿ ಕಾಣಬರುವ ಪ್ರಮುಖ ಪ್ರಕಾರಗಳಲ್ಲಿ ಕಲ್ಲುಗೋರಿಗಳು, ನಿಲಸುಗಲ್ಲುಗಳು, ಸಮಾಧಿ ದಿನ್ನೆಗಳು, ಶಿಲಾವೃತ್ತಗಳನ್ನು ಹೆಸರಿಸಬಹುದಾಗಿದೆ. ನಿಲಸುಗಲ್ಲುಗಳು ಪ್ರಾಕ್ಚಾರಿತ್ರಿಕ ಸಮಾಧಿ ಎಡೆಗಳಲ್ಲಿ ಸ್ಥಾಪನೆಗೊಂಡ ನೆನಪಿನ ಶಿಲೆಗಳು.
ಸುತ್ತಲೂ ಬೆಟ್ಟಗುಡ್ಡಗಳು ಹಾಗೂ ಜನವಸತಿಯನ್ನು ಹೊಂದಿರುವ ಅರಸೀಕೆರೆ ಪ್ರದೇಶವನ್ನು, ಶೋಧಗೊಂಡಿರುವ ಹೆಚ್ಚಿನ ಸಂಖ್ಯೆಯ ಕಲ್ಲುಗೋರಿಗಳು ಮತ್ತು ನಿಲಸುಗಲ್ಲುಗಳ ಹಿನ್ನೆಲೆಯಲ್ಲಿ ಗಮನಿಸಿದಾಗ ಈ ಪ್ರದೇಶ ಹಿಂದೆ ಬೃಹತ್ ಶಿಲಾಯುಗದ ಜನರ ಶಾಶ್ವತ ನೆಲೆಯಾಗಿತ್ತು ಎಂದು ಹೇಳಬಹುದಾಗಿದೆ.
ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಬಾಣಾವರ ಹೋಬಳಿಯ ಕಲ್ಲುಸಾದರಹಳ್ಳಿ ಮತ್ತು ಶಾನೆಗೆರೆ, ಬಾಣಾವರ-ಕಣಕಟ್ಟೆ ಗ್ರಾಮಗಳು ರಾಜ್ಯ ಹೆದ್ದಾರಿಯಲ್ಲಿ ಸಾಗುವಾಗ ಕಾಣಸಿಗುತ್ತವೆ. ಕಲ್ಲುಸಾದರಹಳ್ಳಿ ಗ್ರಾಮವು ಸಮುದ್ರಮಟ್ಟದಿಂದ ಸುಮಾರು ೭೯೮ ಮೀಟರ್‌ಗಳಷ್ಟು ಎತ್ತರದಲ್ಲಿರುವ ಭೂಪ್ರದೇಶವಾಗಿದೆ. ಈ ಗ್ರಾಮದ ಪಶ್ಚಿಮಕ್ಕೆ ಗರುಡನಗಿರಿ ಕೋಟೆ ಕಾಣಸಿಗುತ್ತದೆ. ದಕ್ಷಿಣ ಭಾಗದಲ್ಲಿ ಶಾನೆಗೆರೆ ಗ್ರಾಮ ಕಾಣಬರುತ್ತದೆ. ಈ ಪ್ರದೇಶವು ಬಹುತೇಕ ಕೃಷಿ ಪ್ರಧಾನವಾದುದಾಗಿದೆ. ಗ್ರಾಮದ ಸುತ್ತಮುತ್ತಲೂ ಕೃಷಿ ಜಮೀನುಗಳಿದ್ದು, ಪಶ್ಚಿಮ ಭಾಗದಲ್ಲಿ ವ್ಯಾಪಕವಾಗಿ ಚಾಚಿಕೊಂಡಿರುವ ಗರುಡನಗಿರಿ ಬೆಟ್ಟ ಕಾಣಸಿಗುವುದು. ಈ ಪ್ರದೇಶವು ಬೃಹತ್ ಶಿಲಾಯುಗದ ನೆಲೆಯಾಗಿತ್ತೆಂಬುದಕ್ಕೆ ಇಲ್ಲಿನ ಕೃಷಿ ಭೂಮಿಯಲ್ಲಿ ದೊರೆತಿರುವ ಪ್ರಾಗೈತಿಹಾಸಿಕ ಕಾಲದ ಕುರುಹುಗಳೇ ಸಾಕ್ಷಿಯಾಗಿವೆ.
ಪ್ರಸ್ತುತ ಕಲ್ಲುಸಾದರಹಳ್ಳಿಯಲ್ಲಿ ಬೃಹತ್ ಶಿಲಾಯುಗಕ್ಕೆ ಸೇರಿರುವ ನಿಲಸುಗಲ್ಲುಗಳು ಕಾಣಬಂದಿವೆ. ಈ ನಿಲಸುಗಲ್ಲುಗಳ ಮೇಲೆ ಯಾವುದೇ ರೀತಿಯ ಕೆತ್ತನೆ ಇಲ್ಲದೇ ಸ್ವಾಭಾವಿಕ ರೂಪದಲ್ಲಿದೆ. ನಿಲಸುಗಲ್ಲುಗಳು ಸಮೂಹ ಸಮಾಧಿಗಳನ್ನು ಗುರುತಿಸಲು ನೆಟ್ಟಿರುವ ಕಲ್ಲುಗಳು. ಪ್ರಸ್ತುತ ಕಲ್ಲುಸಾದರಹಳ್ಳಿಯಲ್ಲಿ ಜನ ವಾಸ್ತವ್ಯವಿರುವ ಜಾಗದಲ್ಲಿಯೇ ನಿಲಸುಗಲ್ಲುಗಳು ಕಾಣಸಿಗುತ್ತವೆ. ಮೊದಲನೆಯ ನಿಲಸುಗಲ್ಲು ೧೧.೫ ಅಡಿ ಎತ್ತರ, ೮.೫ ಅಡಿ ಅಗಲ, ಹಾಗೂ ೦.೫ ಅಡಿ ದಪ್ಪವಿದೆ. ತ್ರಿಕೋನಾಕಾರದಲ್ಲಿರುವ ಈ ಶಿಲೆಯು ಪೂರ್ವಭಾಗಕ್ಕೆ ವಾಲಿಕೊಂಡಿದ್ದು, ಪಶ್ಚಿಮಾಭಿಮುಖವಾಗಿದೆ. ಈ ಶಿಲೆಯ ಎಡಭಾಗಕ್ಕೆ ಎರಡನೆಯ ನಿಲಸುಗಲ್ಲು ಇದ್ದು ಈ ಶಿಲೆ ೩.೬ ಅಡಿ ಎತ್ತರ, ೩.೪ ಅಡಿ ಅಗಲ, ಮತ್ತು ೦.೫ ಅಡಿ ದಪ್ಪವನ್ನು ಹೊಂದಿದೆ. ಆಯತಾಕಾರದಲ್ಲಿ ಕಾಣಸಿಗುವ ಈ ಶಿಲೆ ಕೂಡಾ ಪೂರ್ವಭಾಗಕ್ಕೆ ವಾಲಿಕೊಂಡಿದ್ದು ಪಶ್ಚಿಮಾಭಿಮುಖವಾಗಿದೆ. ಈ ಎರಡು ನಿಲಸುಗಲ್ಲುಗಳ ಆಗ್ನೇಯ ಭಾಗದಲ್ಲಿ ಇಂತಹ ನಿಲಸುಗಲ್ಲುಗಳ ಅವಶೇಷಗಳು ಕಂಡುಬಂದ್ದಾಗ್ಯೂ ಅವುಗಳು ರಸ್ತೆ ಕಾಮಗಾರಿ ಮತ್ತು ವಿದ್ಯುತ್ ಇಲಾಖೆಯ ಕಾಮಗಾರಿಯಿಂದಾಗಿ ಹಾನಿಗೀಡಾಗಿವೆ.
ಬಾಣಾವರ ಕಣಕಟ್ಟೆ ರಾಜ್ಯ ಹೆದ್ದಾರಿಯಲ್ಲಿ ಸಾಗುವಾಗ ಸಿಗುವ ಮತ್ತೊಂದು ಪ್ರದೇಶವೇ ಶಾನೆಗೆರೆಯಾಗಿದೆ. ಇದು ಕೂಡಾ ಬೃಹತ್ ಶಿಲಾಯುಗದ ಒಂದು ನೆಲೆ ಎಂಬುದಕ್ಕೆ ಇಲ್ಲಿ ದೊರೆತಿರುವ ಕುರುಹುಗಳೇ ಸಾಕ್ಷಿಯಾಗಿವೆ. ಈ ಪ್ರದೇಶ ಸಮುದ್ರ ಮಟ್ಟದಿಂದ ೭೪೯ ಮೀಟರ್‌ಗಳಷ್ಟು ಎತ್ತರದಲ್ಲಿ ಈ ಪ್ರದೇಶವಿದೆ. ಶಾನೆಗೆರೆಯಲ್ಲಿ ಬೃಹತ್ ಶಿಲಾಯುಗದ ಎರಡು ಪ್ರಕಾರಗಳಾದ ಡಾಲ್ಮೆನ್ಸ್ ಮತ್ತು ಸಮಾಧಿ ದಿನ್ನೆಯು ಕಾಣಸಿಗುತ್ತದೆ. ಶಾನೆಗೆರೆ ಗ್ರಾಮದ ಪ್ರವೇಶ ದ್ವಾರದ ಬಲಭಾಗಕ್ಕೆ ರಾಜ್ಯ ಹೆದ್ದಾರಿಯ ಮಗ್ಗುಲಲ್ಲೇ ಒಂದು ಬೃಹತ್ ಶಿಲಾಯುಗದ ಡಾಲ್ಮೆನ್ಸ್ ಕಾಣಸಿಗುತ್ತದೆ. ಇದರ ಮೂರು ಭಾಗಗಳಲ್ಲಿಯೂ ಕಲ್ಲುಚಪ್ಪಡಿಗಳಿದ್ದು, ಪೂರ್ವದ ಭಾಗವು ತೆರೆದುಕೊಂಡಿದೆ. ಸುಮಾರು ೩.೫ ಎತ್ತರವಿರುವ  ಇದರ ಮೇಲ್ಭಾಗದಲ್ಲಿ ಬೃಹತ್ ಕಲ್ಲುಚಪ್ಪಡಿಯೊಂದನ್ನು ಜೋಡಿಸಲಾಗಿದೆ. ಇದರ ಪಶ್ಚಿಮ ಭಾಗದಲ್ಲಿ ಚಿಕ್ಕ ಕೆರೆಯೊಂದು ಕಾಣಸಿಗುತ್ತದೆ.
ಶಾನೆಗೆರೆಯಿಂದ ಕಣಕಟ್ಟೆಗೆ ಸಾಗುವ ರಾಜ್ಯ ಹೆದ್ದಾರಿಯಲ್ಲಿ ಮುಂದಕ್ಕೆ ಸಾಗುವಾಗ ಗಂಜಿಗೆರೆ ರಸ್ತೆಯು ಎಡಭಾಗದಲ್ಲಿ ಕಾಣಸಿಗುತ್ತದೆ. ಈ ರಸ್ತೆಯ ಬಲಭಾಗದಲ್ಲಿ ಬೃಹತ್ ದಿಬ್ಬವೊಂದು ಕಾಣುತ್ತದೆ. ಇದು ಶಾನೆಗೆರೆ ಗ್ರಾಮದ ವಾಯವ್ಯಕ್ಕೆ ಸುಮಾರು ೨ ಫರ್ಲಾಂಗಗಳಷ್ಟು ದೂರದಲ್ಲಿದೆ. ಸುಮಾರು ಒಂದು ಎಕರೆಯಷ್ಟು ಪ್ರದೇಶದಲ್ಲಿ ಈ ದಿನ್ನೆಯು ವ್ಯಾಪಿಸಿಕೊಂಡಿದೆ. ಸ್ಥಳೀಯರು ಇದನ್ನು ‘ಮಾಲೇದಿಬ್ಬ ಎಂದು ಕರೆಯುತ್ತಾರೆ. ಕೃಷಿ ಜಮೀನಿಗೆ ಬೇಕಾದ ಮಣ್ಣನ್ನು ಈ ದಿಬ್ಬದ ಒಂದು ಪಾರ್ಶ್ವದಿಂದ ಅಗೆಯುವ ಸಂದರ್ಭದಲ್ಲಿ ಇಲ್ಲಿ ಬೃಹತ್ ಪ್ರಮಾಣದ  ಮಡಕೆಯ ಅವಶೇಷಗಳು ಗೋಚರಿಸಲ್ಪಟ್ಟಿವೆ. ಹಾಗಾಗಿ ಮುಂದೆ ಅಗೆತದ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ. ಇಲ್ಲಿ ಅಗೆತಕ್ಕೊಳಗಾದ ಭಾಗದಲ್ಲಿ ಎರಡು ಬೃಹತ್ ಮಡಕೆಗಳ ಅರ್ಧ ಭಾಗ ಮಾತ್ರ ಕಾಣಸಿಗುತ್ತವೆ. ಉಳಿದಂತೆ ಭಾಗಶಃ ಹಾನಿಗೀಡಾಗಿದೆ. ತಳಮಟ್ಟದಿಂದ ಸುಮಾರು ೧೫ ಅಡಿಗಳಷ್ಟು ಎತ್ತರವನ್ನು ದಿಬ್ಬವು ಹೊಂದಿದೆ. ಮಡಕೆಗಳ ಅವಶೇಷಗಳು ನೆಲಮಟ್ಟದಿಂದ ಸುಮಾರು ೫ ಅಡಿಗಳಷ್ಟು ಎತ್ತರದಲ್ಲಿ ಸಮಾನಾಂತರದಲ್ಲಿ ಹೂತುಕೊಂಡಿವೆ. ಅಗೆತಕ್ಕೊಳಗಾದ ಜಾಗದ ಎಲ್ಲೆಡೆ ಮಡಕೆಯ ಚೂರುಗಳು ಹರಡಿಕೊಂಡಿವೆ. ಇಲ್ಲಿ ದೊರೆತಿರುವ ಬಹುತೇಕ ಮಡಕೆ ಚೂರುಗಳು ಕಪ್ಪು ಮತ್ತು ಕಂದು ಮಣ್ಣಿನಿಂದ ತಯಾರಿಸಲ್ಪಟ್ಟಿವೆ. ಕಪ್ಪು ಮಣ್ಣಿನಿಂದ ಆವೃತವಾಗಿರುವ ಈ ದಿಬ್ಬವು ಬೃಹತ್ ಶಿಲಾಯುಗದ ಸಮಾಧಿ  ದಿನ್ನೆ ಆಗಿರಬಹುದೆಂದು ಊಹಿಸಬಹುದಾಗಿದೆ. ಈ ದಿಬ್ಬದ ಆಸುಪಾಸುಗಳಲ್ಲಿ ತೆಂಗಿನ ಮರದ ತೋಪು ಗೋಚರಿಸುತ್ತದೆ. ಪ್ರಸ್ತುತ ಈ ದಿಬ್ಬವಿರುವ ಜಾಗವು ಜಗಣ್ಣ ಎಂಬವರ ಒಡೆತನಕ್ಕೆ ಸೇರಿದ್ದಾಗಿದ್ದು, ಸುತ್ತಲೂ ವ್ಯವಸಾಯ ಪ್ರಧಾನವಾಗಿ ನಡೆಯುತ್ತಲೇ ಇದೆ.
ಹೀಗೆ ಅರಸೀಕೆರೆ ತಾಲ್ಲೂಕಿನ ಬಾಣಾವರ ಹೋಬಳಿಯ ಕಲ್ಲುಸಾದರಹಳ್ಳಿ ಮತ್ತು ಶಾನೆಗೆರೆ ಪ್ರದೇಶಗಳು ಬೃಹತ್ ಶಿಲಾಯುಗದ ನೆಲೆಗಳಾಗಿದ್ದವು ಎಂಬುದಾಗಿ ಹೇಳಬಹುದಾಗಿದೆ. ಆ ಕಾಲದ ಜನತೆಯ ಜೀವನದ ಅಗತ್ಯತೆಗಳನ್ನು ನಿವಾರಿಸುವುದಕ್ಕೆ ಈ ಪ್ರದೇಶಗಳನ್ನು ಬಳಸಿಕೊಂಡಿರುವ ಸಾಧ್ಯತೆಗಳಿವೆ. ಈ ನೆಲೆಯ ಪರಿಸರವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ನೆಲವು ಫಲವತ್ತಾಗಿಯೂ ಹಾಗೂ ಬೆಟ್ಟಗುಡ್ಡಗಳಿಂದ ಸುತ್ತುವರೆದಿರುವುದರಿಂದ ಕೃಷಿಗೆ ಮತ್ತು ಬೇಟೆಗೆ ಬಹಳ ಅನುಕೂಲವಾಗಿದ್ದಂತೆ ಕಾಣಬರುತ್ತದೆ. ಈ ಎರಡೂ ಪ್ರದೇಶದಲ್ಲಿ ಈಗಲೂ ಕೃಷಿ ಪ್ರಧಾನ ಕಸುಬಾಗಿದ್ದು ಜೊತೆಗೆ ಕುರಿ ಸಾಕಾಣಿಕೆ ಹಾಗೂ ಬೇಟೆಗಾರಿಕೆ ಜನರ ಉಪಕಸಬುಗಳಾಗಿವೆ. ಈ ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿದಾಗ ಈ ಪ್ರದೇಶಗಳು ಪ್ರಾಗೈತಿಹಾಸಿಕ ಕಾಲದ ಪ್ರಮುಖ ಜನ ವಾಸ್ತವ್ಯದ ನೆಲೆಗಳಾಗಿದ್ದವೆಂಬುದು ತಿಳಿದುಬರುತ್ತದೆ. ಈ ದಿಕ್ಕಿನಲ್ಲಿ ಅಧ್ಯಯನ ಸಾಗಬೇಕಿದೆ.

[ಕೃತಜ್ಞತೆ : ಈ ಪ್ರಬಂಧವನ್ನು ರಚನೆ ಮಾಡುವಲ್ಲಿ ಸಲಹೆ ಹಾಗೂ ಮಾರ್ಗದರ್ಶನ ನೀಡಿರುವ ನನ್ನ ಗುರುಗಳು ಹಾಗೂ ಸಂಶೋಧನಾ ಮಾರ್ಗದರ್ಶಕರಾಗಿರುವ ಡಾ. ಹನುಮನಾಯಕರವರಿಗೆ ಮತ್ತು ಕ್ಷೇತ್ರಕಾರ್ಯದಲ್ಲಿ ನೆರವಾಗಿರುವ ನನ್ನ ಆತ್ಮೀಯ ಮಿತ್ರರಾದ ಶ್ರೀ ಸಂದೀಪ್ ಕುಮಾರ್ ಶೆಟ್ಟಿ ಹಾಗೂ ಶಾನೆಗೆರೆ-ಕಲ್ಲುಸಾದರಹಳ್ಳಿ ಗ್ರಾಮಸ್ಥರಿಗೂ ನಾನು ಆಭಾರಿಯಾಗಿರುತ್ತೇನೆ.]

ಆಧಾರಸೂಚಿ ಮತ್ತು ಟಿಪ್ಪಣಿಗಳು
೧.         ಡಾ. ಅ. ಸುಂದರ., ಪ್ರಾಚ್ಯವಸ್ತು ಸಂಶೋಧನೆ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೭೨, ಪುಟ ೧೧.
೨.         ಡಾ. ಅ. ಸುಂದರ., ಇತಿಹಾಸಪೂರ್ವ ಕರ್ನಾಟಕ ಅಥವಾ ಕರ್ನಾಟಕ ಪ್ರಾಗೈತಿಹಾಸ, ಇಂಡಿಯಾ ಬುಕ್ ಹೌಸ್, ಬೆಂಗಳೂರು, ೧೯೭೦, ಪುಟ-೮೨.
೩.         ಡಾ. ಅ. ಸುಂದರ., ಪ್ರಾಚ್ಯವಸ್ತು ಸಂಶೋಧನೆ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೭೨, ಪುಟ ೨೩.
೪.         ಲಕ್ಷ್ಮಣ್ ತೆಲಗಾವಿ., ‘ಬಳ್ಳಾರಿ ತಾಲ್ಲೂಕು ಹಳೇನೆಲ್ಲುಡಿ ಗ್ರಾಮದ ಸ್ಮಾರಕಗಳು-ಈಚಿನ ಶೋಧಗಳ ಹಿನ್ನೆಲೆಯಲ್ಲಿ, ಇತಿಹಾಸ ದರ್ಶನ, ಸಂಪುಟ-೧೧, ಬೆಂಗಳೂರು ೧೯೯೬, ಪುಟ ೨೧.
೫.         ಹನುಮನಾಯಕ, ‘ಚೆಲುವನಹಳ್ಳಿಯ ಗವಿಮಠ ಒಂದು ಪ್ರಾಗೈತಿಹಾಸಿಕ ನೆಲೆ, ಇತಿಹಾಸ ದರ್ಶನ, ಸಂಪುಟ ೯, ಬೆಂಗಳೂರು, ೧೯೯೪, ಪುಟ ೬-೮.


ಇತಿಹಾಸ ಉಪನ್ಯಾಸಕರು, ಶ್ರೀ ಗೋಕರ್ಣನಾಥೇಶ್ವರ ಪದವಿಪೂರ್ವ ವಿದ್ಯಾಲಯ, ಗಾಂಧಿನಗರ, ಮಂಗಳೂರು, ದಕ್ಷಿಣ ಕನ್ನಡ-೫೭೫೦೦೩.


No comments:

Post a Comment