Sunday, December 16, 2012

ಬುಕ್ಕಾಪಟ್ಟಣ ಪರಿಸರದಲ್ಲಿ ಬೃಹತ್ ಶಿಲಾಗೋರಿಗಳ ನೆಲೆ


ಪದ್ಮ ಬಿ.ಎಸ್.* ಚಿರಂಜೀವಿ ಎನ್.ಟಿ.
 ಸಂಶೋಧನಾರ್ಥಿ
ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ಅಧ್ಯಯನ ವಿಭಾಗ,
ಕನ್ನಡ ವಿಶ್ವವಿದ್ಯಾಲಯ, ಹಂಪಿವಿದ್ಯಾರಣ್ಯ-೫೮೩೨೭

ರ್ನಾಟಕ ಭೂಪ್ರದೇಶವು ಪ್ರಾಗೈತಿಹಾಸ ಹಾಗೂ ಇತಿಹಾಸ ಕಾಲದ ಘಟನೆಗಳ ಪ್ರಮುಖ ತಾಣವಾಗಿದ್ದು, ತನ್ನ ಒಡಲಲ್ಲಿ ಅನೇಕ ಪುರಾತತ್ವ ಅವಶೇಷಗಳನ್ನು ಇರಿಸಿಕೊಂಡಿದೆ. ಕರ್ನಾಟಕದಲ್ಲಿ ಪ್ರಾಗಿತಿಹಾಸಕ್ಕೆ ಸಂಬಂಧಿಸಿ ದಂತೆ ಹಳೇಶಿಲಾಯುಗ, ನೂತನಶಿಲಾಯುಗ, ಸೂಕ್ಷ್ಮ ಶಿಲಾಯುಗದ ಅವಶೇಷಗಳ ಜೊತೆಗೆ ನೂರಾರು ಸಂಖ್ಯೆಯ ಬೃಹತ್ ಶಿಲಾಯುಗ ಸಂಸ್ಕೃತಿಯ ನೆಲೆ ಹಾಗೂ ಗೋರಿಗಳನ್ನು ಕಾಣಬಹುದು. ಬೃಹತ್‌ಶಿಲಾಯುಗದ ನೆಲೆಗಳು ಕರ್ನಾಟಕದ ಎಲ್ಲಾ ಜಿಲ್ಲೆಯಲ್ಲಿ ಕಂಡುಬಂದಿವೆ. ತುಮಕೂರು ಜಿಲ್ಲೆಯಲ್ಲಿಯೂ ಸಹ ಬೃಹತ್‌ಶಿಲಾಗೋರಿಗಳು ದೊರೆತಿವೆ. ಈ ಜಿಲ್ಲೆಯ ಹತ್ತು ತಾಲ್ಲೂಕುಗಳಲ್ಲಿ ಶಿರಾ ತಾಲ್ಲೂಕು ಒಂದಾಗಿದೆ. ಈ ತಾಲ್ಲೂಕಿನಲ್ಲಿ ಪ್ರಾಗಿತಿಹಾಸದ ವಿವಿಧ ನೆಲೆಗಳು, ಅವಶೇಷಗಳು ಕಂಡುಬಂದಿವೆ. ಶಿರಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ಐದು ಹೋಬಳಿಗಳು ಇದ್ದು, ಅದರಲ್ಲಿ ಬುಕ್ಕಾಪಟ್ಟಣ ಹೋಬಳಿಯೂ ಒಂದು. ಈ ಪ್ರದೇಶದಲ್ಲಿ ನವಶಿಲಾಯುಗದ ಉಪಕರಣಗಳು, ಬೃಹತ್ ಶಿಲಾಯುಗದ ವಸತಿ ನೆಲೆ, ಕಪ್ಪು-ಕೆಂಪು ಮಡಕೆ ಭಾಗಗಳು ಹಾಗೂ ಇತಿಹಾಸ ಆರಂಭ ಕಾಲಕ್ಕೆ ಸಂಬಂಧಿಸಿದ ಕಪ್ಪು-ಕೆಂಪು, ಮಡಕೆ ಅವಶೇಷಗಳ ಬಗ್ಗೆ ಈ ಹಿಂದೆ ಪುರಾತತ್ವಶಾಸ್ತ್ರಜ್ಞರು ಸಂಶೋಧಿಸಿ ಪ್ರಕಟಿಸಿದ್ದಾರೆ.
ಬುಕ್ಕಾಪಟ್ಟಣ ಹೋಬಳಿಗೆ ಸೇರಿದಂತೆ ೯೭ ಗ್ರಾಮಗಳಿವೆ. ಈ ಗ್ರಾಮಗಳಲ್ಲಿ ೯೦ ಗ್ರಾಮಗಳು ಜನವಸತಿ ಹೊಂದಿದ ಗ್ರಾಮಗಳಾಗಿವೆ. ಆದರೆ ಬೊರೆನಾಳು, ಸೂಲದಾಳು, ಕಂಬದಾಳು, ವೆಂಕಟಾಪುರ, ಮರಿದಾಸರಹಳ್ಳಿ, ಕಣಿವೆರಾಂಪುರ ಹಾಗೂ ಮಾದನಹಳ್ಳಿ ಬೇಚೆರಾಕ್ ಗ್ರಾಮಗಳು ಅರಣ್ಯ ಪ್ರದೇಶದಲ್ಲಿ  ಇದ್ದು, ಅಲ್ಲಿ ಜನವಸತಿ ಇರುವುದಿಲ್ಲ. ಬುಕ್ಕಾಪಟ್ಟಣ ಪರಿಸರದ ಸುತ್ತಲೂ ಅರಣ್ಯಪ್ರದೇಶವು ಆವರಿಸಿದ್ದು, ಅರಣ್ಯದಲ್ಲಿ ವನ್ಯಮೃಗಗಳಾದ ಕರಡಿ, ಚಿರತೆಗಳು ಇವೆ. ಇವಲ್ಲದೆ ನರಿ, ತೋಳ, ಮೊಲ, ನವಿಲು, ಕೋಗಿಲೆ ಮುಂತಾದ ಪಶುಪಕ್ಷಿಗಳ ಜೊತೆಗೆ ಸರೀಸೃಪಗಳೂ ಕಂಡುಬಂದಿವೆ. ಈ ಅರಣ್ಯ ಪ್ರದೇಶದ ಪೂರ್ವ-ಪಶ್ಚಿಮದ ಕಡೆಗೆ ಬೆಟ್ಟ ಗುಡ್ಡಗಳ ಸಾಲು ಹಬ್ಬಿದೆ. ಅಲ್ಲಲ್ಲಿ ಚಿಕ್ಕ ಮತ್ತು ದೊಡ್ಡಹಳ್ಳಗಳು ಇದು, ಸರ್ವ ಋತುಗಳಲ್ಲಿಯೂ ನೀರಿನ ವ್ಯವಸ್ಥೆ ಇರುವುದು ಕಂಡುಬಂದಿದೆ. ಈ ಭೌಗೋಳಿಕ ಪರಿಸರವು ಪ್ರಾಗಿತಿಹಾಸ ಕಾಲದ ಜನರು ವಾಸಿಸಲು ಯೋಗ್ಯವಾಗಿತ್ತು. ನಾವು ಅರಣ್ಯ ಪ್ರದೇಶದಲ್ಲಿ ಕ್ಷೇತ್ರಕಾರ್ಯವನ್ನು ಕೈಗೊಂಡಾಗ ಬೃಹತ್ ಶಿಲಾಯುಗದ ಸುಮಾರು ೧೪ ಶಿಲಾವೃತ್ತ ಸಮಾಧಿಗಳು ಕಂಡುಬಂದಿವೆ. ಈ ರೀತಿಯ ಗೋರಿಗಳು ಶಿರಾ ತಾಲ್ಲೂಕಿನಲ್ಲಿ ಇಲ್ಲಿಯವರೆಗೆ ಕಂಡುಬಂದಿಲ್ಲ. ತುಮಕೂರು ಜಿಲ್ಲೆಯ ಗೌಡನಕಟ್ಟೆ, ಚಿನವಾರ, ಬೆಳ್ಳಿಬಟ್ಟಲಹಳ್ಳಿ ಹಾಗೂ ಪಾವಗಡ ತಾಲ್ಲೂಕಿನ ಕಣಿಕಲ ಬಂಡೆ, ಕತ್ತಿಕ್ಯಾತರಹಳ್ಳಿ, ನಿಡುಗಲ್ಲು, ಪಳವಳ್ಳಿ, ಬೂದಿಬೆಟ್ಟ ಇನ್ನೂ ಮುಂತಾದ ಪ್ರದೇಶಗಳಲ್ಲಿ ಬೃಹತ್ ಶಿಲಾಯುಗದ ಸಮಾಧಿಗಳನ್ನು ಪುರಾತತ್ತ್ವ ಶಾಸ್ತ್ರಜ್ಞರು  ಗುರುತಿಸಿದ್ದಾರೆ.
ಬೃಹತ್ ಶಿಲಾಯುಗದ ಗೋರಿ ನೆಲೆಯ ಶೋಧನೆ
          ಬೃಹತ್ ಶಿಲಾಯುಗದ ಸಮಾಧಿಗಳಿರುವ ನೆಲೆಯು ತುಮಕೂರು ಜಿಲ್ಲೆಯ ಶಿರಾತಾಲ್ಲೂಕಿನಿಂದ ೨೬ ಕಿ.ಮೀ ದೂರದ ಬುಕ್ಕಾಪಟ್ಟಣ ಪರಿಸರಕ್ಕೆ ಸೇರಿದ್ದು, ರಾಜ್ಯ ಅರಣ್ಯ ಪ್ರದೇಶದಲ್ಲಿ ಕಂಡುಬಂದಿದೆ. ಈ ನೆಲೆಯು ಇತಿಹಾಸ ಪೂರ್ವಕಾಲದ ಬೃಹತ್ ಶಿಲಾ ಸಂಸ್ಕೃತಿಗೆ ಸೇರಿದ ಪ್ರದೇಶವಾಗಿದೆ. ನೆಲೆಯನ್ನು ತಲುಪಲು ಯಾವುದೇ ರೀತಿ ಮುಖ್ಯ ರಸ್ತೆಗಳಲ್ಲದೆ, ಕಾಲುದಾರಿ (ಕಿರುದಾರಿ)ಯ ಮೂಲಕ ಹೋಗಬಹುದು. ಬುಕ್ಕಾಪಟ್ಟಣದಿಂದ ಹುಳಿಯಾರು ಮಾರ್ಗವಾಗಿ ಹೋಗುವ ಮುಖ್ಯ ರಸ್ತೆಯಲ್ಲಿರುವ ಶನಿಮಹಾತ್ಮ ದೇವಾಲಯದ ಬಲಕ್ಕೆ ಇರುವ ಗಣೇಶ ದೇವಸ್ಥಾನ ಮುಂಭಾಗದ ಕಾಲುದಾರಿಯ ಮೂಲಕ ಈ ನೆಲೆಯನ್ನು ತಲುಪಬಹುದು. ಬುಕ್ಕಾಪಟ್ಟಣದ ಸ್ಥಳೀಯ ಜನರು, ನೆಲೆ ಇರುವ ಸ್ಥಳವನ್ನು ಮರಿದಾಸರಹಳ್ಳಿ ಅಥವಾ ಮರಿದಾಸನಹಳ್ಳಿ ಎಂದು ಕರೆಯುತ್ತಾರೆ. ಈ ಪ್ರದೇಶದಲ್ಲಿ ಹಳ್ಳಕ್ಕೆ ಒಂದು ಕಟ್ಟೆ ನಿರ್ಮಿಸಿದ್ದಾರೆ. ಅರಣ್ಯ ಇಲಾಖೆಯವರು ಈ ಕಟ್ಟೆಗೆ ಒಂದು ಚಕ್‌ಡ್ಯಾಮ್ ಕಟ್ಟಿದ್ದಾರೆ. ಕಟ್ಟೆ ಪರಿಸರದ ಸುಮಾರು ೨೦೦ ಮೀ. ಅಂತರದಲ್ಲಿ ಬೃಹತ್ ಶಿಲಾ ವೃತ್ತಗೋರಿಗಳು ವ್ಯಾಪಿಸಿವೆ. ನೆಲೆಯ ಮಣ್ಣು ಬೂದು ಮತ್ತು ಕಪ್ಪು ಬಣ್ಣದ್ದಾಗಿದ್ದು, ಅರಣ್ಯ ಇಲಾಖೆಯವರು ಗಿಡ ಮರಗಳನ್ನು ಹೆಚ್ಚಾಗಿ ಬೆಳೆಸಿರುವುದರಿಂದ ಛಾಯಾಚಿತ್ರವನ್ನು ತೆಗೆದರೂ ಸ್ಪಷ್ಟ ರೂಪದಲ್ಲಿ ಕಾಣುವುದಿಲ್ಲ.
ಬೃಹತ್ ಶಿಲಾಸಂಸ್ಕೃತಿಯ ಶಿಲಾಗೋರಿಗಳ ನೆಲೆಯು ತುಮಕೂರಿನಿಂದ ೭೬ ಕಿ.ಮೀ. ಶಿರಾದಿಂದ ೨೬ ಕಿ.ಮೀ. ಹಾಗೂ ಬುಕ್ಕಾಪಟ್ಟಣದಿಂದ ೬ ಕಿ.ಮೀ. ಅಂತರದಲ್ಲಿ ಇದೆ. ನೆಲೆಯು ಸುಮಾರು ೧೪ ಗೋರಿಗಳನ್ನು ಹೊಂದಿದ್ದು, ಸರಾಸರಿ ಉತ್ತರ ದಕ್ಷಿಣಕ್ಕೆ ೨೧ ಅಡಿ, ಪೂರ್ವ ಮತ್ತು ಪಶ್ಚಿಮಕ್ಕೆ ೨೦ ಅಡಿ ಅಂತರವನ್ನು ಹೊಂದಿದ್ದು, ಸಮಾಧಿಯ ಸುತ್ತಲೂ ಸಣ್ಣ ಬಂಡೆಗಳನ್ನು ನೆಲ ಮಟ್ಟದಲ್ಲಿ ವೃತ್ತಾಕಾರವಾಗಿ ಜೋಡಿಸಿರುತ್ತಾರೆ. ಒಂದು ಸಮಾಧಿಗೆ ಒಂದು ಕಲ್ಲು ವೃತ್ತವಿದ್ದು, ಸಮಾಧಿಯ ಮಧ್ಯದಲ್ಲಿ ಸಣ್ಣ ಸಣ್ಣ ಕಲ್ಲುಗಳನ್ನು ಹಾಕಲಾಗಿದೆ, ಕಲ್ಲು ಗೋರಿಗಳ ವಿನ್ಯಾಸ ರಚನೆ ವಿಶಿಷ್ಟವಾಗಿದೆ. ಈ ಸ್ಥಳಗಳಲ್ಲಿ ಅನ್ವೇssssಷಣೆ ಮಾಡಿದಂತೆ ಇನ್ನೂ ಹೆಚ್ಚು ಹೆಚ್ಚು ಅವಶೇಷಗಳು ಸಿಗುವ ಸಾಧ್ಯತೆ ಇದೆ.
ನೆಲೆಯು ಅರಣ್ಯ ಪ್ರದೇಶದಲ್ಲಿ ಇರುವುದರಿಂದ ಅರಣ್ಯ ಇಲಾಖೆಯವರು ಈಗಾಗಲೇ ಅವುಗಳು ಕಾಣದಂತೆ ಗಿಡ ಮರಗಳನ್ನು ಹಾಕಿದ್ದಾರೆ. ಅವು ಕಾಲಕ್ರಮೇಣ ಸಂಪೂರ್ಣವಾಗಿ ಕಾಲಗರ್ಭದಲ್ಲಿ ಹುದುಗಿ ಕಣ್ಮರೆಯಾಗುವ ಮುನ್ನ ಅವುಗಳ ರಕ್ಷಣೆ ದಾಖಲಾತಿ ಅಗತ್ಯವಾಗಿರುತ್ತದೆ.

ಆಧಾರಸೂಚಿ ಮತ್ತು ಟಿಪ್ಪಣಿಗಳು
೧.         ನರಸಿಂಹಮೂರ್ತಿ ಎ.ವಿ., ೧೯೭೯, ಕರ್ನಾಟಕ ಪುರಾತತ್ತ್ವ್ವ ಶೋಧನೆ, ಐಬಿಎಚ್ ಪ್ರಕಾಶನ, ಗಾಂಧಿನಗರ, ಬೆಂಗಳೂರು.
೨.         ಶಿವತಾರಕ್ ಕೆ.ಬಿ., ೨೦೦೧, ಕರ್ನಾಟಕ ಪುರಾತತ್ತ್ವ ನೆಲೆಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪು. ೩೧೩.
೩.         ನಂದೀಶ್ವರ ಎನ್., ೨೦೦೮, ಸಿರಾ ತಾಲ್ಲೂಕು ದರ್ಶನ, ಪೂರ್ಣಚಂದ್ರ ತೇಜಸ್ವಿ ಪ್ರಕಾಶನ, ಬಾಲಾಜಿನಗರ, ಶಿರಾ, ತುಮಕೂರು, ಪು. ೩೫೨.
೪.         ಸುಂದರ ಅ., ೧೯೭೦, ಇತಿಹಾಸ ಪೂರ‍್ವ ಕರ್ನಾಟಕ ಅಥವಾ ಕರ್ನಾಟಕ ಪ್ರಾಗೈತಿಹಾಸ, ಇಂಡಿಯಾ ಬುಕ್ ಹೌಸ್, ಬೆಂಗಳೂರು.
೫.       Shrinivas  M.V., 2011, Studies in Karnataka History and Culture, vol. x, Karnataka History Congress, p.115.
6.    Gururaja Rao B.K., 1971, Megalithic Culture in South India, Mysore University, Mysore.






No comments:

Post a Comment