Friday, August 23, 2013

ಇಳಕಲ್ಲು ಬೆಟ್ಟ.-ಡಾ.ಶ್ಯಾಮಲಾರತ್ನಕುಮಾರಿ

ಬಟವಾಡೆ ಶಾಸನೋಕ್ತ ಯಿಳಕಲ್ಲು ಬೆಟ್ಟ
              --------------------
 
        ತುಮಕೂರು ನಾಲ್ಕರ ವಿಭಾಗಕ್ಕೆ ಸೇರಿದ ಬಟವಾಡೆ ಗ್ರಾಮದ ಚೌಡೇಶ್ವರೀ ದೇವಾಲಯದ ಮುಂದಿರುವ ಶಾಸನದ ವಿವರಗಳನ್ನು ಇತಿಹಾಸ ದರ್ಶನ ಸಂಪುಟ ೨೧ರಲ್ಲಿ ಈಗಾಗಲೇ ನೀಡಿದ್ದು ಪ್ರಸ್ತುತ ಬಟವಾಡೆ ಶಾಸನದಲ್ಲಿ ಉಲ್ಲೇಖಗೊಂಡಿರುವ ಯಿಳಕಲ್ಲು ಬೆಟ್ಟದ ಐತಿಹಾಸಿಕ ಅವಶೇಷಗಳ ವೀಕ್ಷಣಾ ಕಾರ್ಯದ ವಿವರಗಳನ್ನು ಈ ಲೇಖನದಲ್ಲಿ ದಾಖಲಿಸುವ ಯತ್ನವನ್ನು ಮಾಡಲಾಗಿದೆ.

        ಬಟವಾಡೆ ಶಾಸನದಲ್ಲಿ ದೇವರಾಯಪಟ್ಟಣದ ತಿಂಮಣನಾಯ್ಕರ ಮಗ ಕೆಂಪಸೋಮಂಣನಾಯ್ಕನು ಯಿಳಕಲ್ಲ ಬೆಟ್ಟದ ರಾಮೇಶ್ವರ ದೇವರ ಅಂಗರಂಗವೈಭೋಗಕ್ಕಾಗಿ ಬಟವಾಡೆ ಗ್ರಾಮವನ್ನು ಪುರದಗ್ರವಾಗಿ ದಾನ ಕೊಟ್ಟದ್ದನ್ನು ಉಲ್ಲೇಖಿಸಲಾಗಿದೆ.

        ಕ್ಯಾತ್ಸಂದ್ರದಿಂದ ಮೈದಾಳಕ್ಕೆ ಹೋಗುವ ರಸ್ತೆಯಲ್ಲಿ ಎಡಬದಿಗೆ ಸಿಕ್ಕುವ ಬೂರುಗಮರದಪಾಳ್ಯ ಗ್ರಾಮದ ರಸ್ತೆಯಲ್ಲಿ ಒಂದು ಕಿ.ಮೀ.ದೂರ ಒಳನಡೆದರೆ ತೋಪಿನ ನಡುವೆ ಸ್ವಲ್ಪ ದೂರದಲ್ಲಿ ಯಿಳಕಲ್(ಇಳಿಜಾರಾದ ಬಂಡೆ) ಬೆಟ್ಟ ಕಾಣುತ್ತದೆ. ದನಗಾಹಿಗಳ ಕಾಲುದಾರಿಯನ್ನನುಸರಿಸಿ ಐದಾರು ಕಿ.ಮೀ. ದೂರ ಅಲ್ಲಲ್ಲಿ ಮುಳ್ಳುಪೊದೆಗಳನ್ನು ಹಾದು, ಬಂಡೆಗಳ ಕೊರಕಲಿನಲ್ಲಿ ಪ್ರಯಾಸದಿಂದ ಏರುತ್ತಾ ಹೋದರೆ ಬೆಟ್ಟದ ಮೇಲಕ್ಕೆ ತಲುಪಬಹುದು. ಚಾರಣಪ್ರಿಯ ಸಾಹಸಿಗಳಿಗೆ ಇದೊಂದು ಪ್ರಮುಖ ತಾಣವೆಂದು ಹೇಳಬಹುದಾಗಿದೆ.

        ಬೆಟ್ಟದ ಮೇಲೆ ಕಲ್ಲುತುಂಡುಗಳಿಂದ ನಿರ್ಮಿಸಲ್ಪಟ್ಟ ಎರಡುಸುತ್ತಿನ ಕೋಟೆ ಹಾಗೂ ಒಂದೆರಡು ಬತೇರಿಗಳು ಕಾಣ ಸಿಗುತ್ತವೆ. ವರ್ತುಲಾಕಾರವಾಗಿರುವ ಒಳಸುತ್ತಿನ ಕೋಟೆಯಲ್ಲಿ ಪಾಳುಸ್ಥಿತಿಯಲ್ಲಿರುವ ಚಿಕ್ಕದಾದ ಈಶ್ವರ ದೇವಾಲಯ ಕಂಡು ಬರುತ್ತದೆ. ದೇವಾಲಯವು ಅಧಿಷ್ಠಾನದಿಂದ ಪ್ರಸ್ತರದವರೆಗೆ ಶಿಲಾಮಯವಾಗಿದ್ದು ವಿಮಾನ ಗೋಪುರವು ಇಟ್ಟಿಗೆ ಗಾರೆಗಳಿಂದ ನಿರ್ಮಾಣಗೊಂಡಿದ್ದು ಪೂರ್ತಿಯಾಗಿ ಕುಸಿದಿದೆ. ಗರ್ಭಗುಡಿಯಲ್ಲಿ ಲಿಂಗವಿಲ್ಲ. ಅದರೆ ಬಸವನ ವಿಗ್ರಹವಿದೆ. ನವರಂಗದ ಕಂಬಗಳು ಚತುರಸ್ರ, ವರ್ತುಲ, ಅಷ್ಟಪೈಲ ಮುಂತಾದ ವಿಭಿನ್ನ ವಿನ್ಯಾಸದ ವಾಸ್ತುವಿಭಾಗಗಳನ್ನು ಹೊಂದಿದೆ. ಒಳಛತ್ತಿನಲ್ಲಿ ವಿಕಸಿತ ಪುಷ್ಪದ ಶಿಲ್ಪಾಲಂಕರಣವಿದೆ. ಕಂಭಗಳ ಮೇಲಾಗಲೀ, ಭಿತ್ತಿಭಾಗ, ಪ್ರಸ್ತರ ಮತ್ತು ಅಧಿಷ್ಠಾನಗಳು ಯಾವ ಕೆತ್ತನೆಯೂ ಇಲ್ಲದೆ ಸರಳವಾಗಿ ಇವೆ. ಅಧಿಷ್ಠಾನವು ಕಪೋತ, ವೇದಿ ಭಾಗಗಳನ್ನು ಹೊಂದಿದ್ದು ಮಂಚಬಂಧ ವಿನ್ಯಾಸವನ್ನು ಪ್ರತಿನಿಧಿಸುತ್ತದೆ ಎಂದು ಹೇಳಬಹುದಾಗಿದೆ. ಈ ದೇವಾಲಯದ ಒಟ್ಟು ವಾಸ್ತುವಿನ್ಯಾಸದ ಆಧಾರದಿಂದ ಪ್ರಾಯಶಃ ಇದು ಗಂಗರ ದೇವಾಲಯಶೈಲಿಗೆ ಸೇರುತ್ತದೆ ಎಂದು ಭಾವಿಸಬಹುದಾಗಿದೆ. ಇದೇ ಬಟವಾಡೆ ಶಾಸನೋಕ್ತ ಯಿಳಕಲ್ ಬೆಟ್ಟದ ರಾಮೇಶ್ವರ ದೇವಾಲಯವಾಗಿದೆ.

        ಈ ದೇವಾಲಯಕ್ಕೆ ಅನತಿ ದೂರದಲ್ಲಿ ಶಿಲಾಸ್ತಂಭ ಮಂಟಪವಿದೆ. ದೇವಾಲಯದ ಹಿಂಭಾಗದಲ್ಲಿ ವರ್ತುಲಾಕಾರದ ಕಟ್ಟಡ ಮತ್ತು ಚೌಕಾಕರದ ಕಟ್ಟಡದ ಅವಶೇಷಗಳ ಜೊತೆಗೆ ಒಂದು ಅಗೇವು ಕಾಣಸಿಗುತ್ತದೆ. ಈ ಒಳ ಆವರಣದಿಂದ ಹೊರ ಕೋಟೆಗೆ ಬರಲು ಈಗ ಎರಡು ಬಾಂಡುಕಲ್ಲುಗಳನ್ನು ನಿಲ್ಲಿಸಿ ದ್ವಾರದ ರೀತಿ ಪ್ರವೇಶ ಕಲ್ಪಿಸಲಾಗಿದೆ. ಹೊರಕೋಟೆಯ ಮುಂಭಾಗ ದಲ್ಲಿರುವ ದೊಡ್ಡ ಕೊಳ ಕೆಂದಾವರೆ ಹೂಗಳಿಂದ ಕೂಡಿದ್ದು ನಮ್ಮ ಕಣ್ಮನಗಳನ್ನು ತಣಿಸುತ್ತದೆ.

        ಒಳಕೋಟೆಯಲ್ಲಿನ ದೇವಾಲಯದ ಮುಂಭಾಗದಲ್ಲಿ ಹೊರಕೋಟೆಗೆ  ಸೇರಿದಂತೆ ಬಂಡೆಯೊಂದರ ಮೇಲೆ ಬಸವನ ಪ್ರಾಚೀನ ಶಿಲ್ಪ, ಎರಡು ಪಾದಚಿಹ್ನೆಗಳೂ ಕಂಡುಬರುತ್ತವೆ. ಬಸವನ ಶಿಲ್ಪವನ್ನು ಬೇರೆಡೆಯಿಂದ ಇಲ್ಲಿ ತಂದಿಟ್ಟಿದ್ದಾರೆನಿಸುತ್ತದೆ. ಈ ಬಂಡೆಯ ಮೇಲಿರುವ ಪಾದಚಿಹ್ನೆಗಳು ರಾಮಸೀತೆಯರದೆಂದು ಜನರ ನಂಬಿಕೆ. ಒಳಕೋಟೆಯಲ್ಲಿರುವ ಶಿವದೇವಾಲಯದಲ್ಲಿರುವ ಲಿಂಗವನ್ನ ರಾಮನೇ ಪ್ರತಿಷ್ಠೆ ಮಾಡಿದ್ದಾನೆಂದೂ ಆದುದರಿಂದಲೇ ಇದನ್ನು ರಾಮೇಶ್ವರ ದೇವಾಲಯವೆಂದು ಕರೆಯಲಾಗಿದೆಯಂತೆ. ಹಾಗೂ ಬೆಟ್ಟದ ಒಂದು ಭಾಗದಲ್ಲಿ ಕಣಶಿಲೆಯ ಜೊತೆಗೇ ಕಪ್ಪು ಬೆಣಚುಕಲ್ಲಿನ ಪದರವೊಂದು ಕೆಳಗೆ ಹಾಸಿದಂತೆ ಕಾಣುತ್ತದೆ. ಅದನ್ನು ಸ್ಥಳೀಯರು ಸೀತೆಯು ಸ್ನಾನ ಮಾಡುತ್ತಿದ್ದಾಗ ಯಾರೋ ಅಲ್ಲಿಗೆ ಬಂದರೆಂದು ಆಗ ಗಾಬರಿಯಿಂದೆದ್ದು ಸೀರೆಯನ್ನು ಸುತ್ತಿ ಕೊಳ್ಳುತ್ತಿದ್ದಾಗ ಸೀರೆಯ ಸೆರಗು ಬಂಡೆಯ ಮೇಲೆ ಜಾರಿತೆಂದೂ ಹಾಗಾಗಿ ಆ ಕಪ್ಪು ಬೆಣಚುಕಲ್ಲಿನ ಭಾಗವನ್ನು ‘ಸೀತೆಯ ಸೆರಗು’ ಎಂದು ಕರೆಯುತ್ತಾರೆ. ಅಲ್ಲಿಂದ ಮುಂದೆ ಬಲಕ್ಕೆ ತಿರುಗಿ ಮುಂದುವರೆದರೆ ಜನರು ಸಿದ್ಧಪ್ಪನ ಗವಿಯೆಂದು ಕರೆಯುವ ಭಾಗವು ಸಿಗುತ್ತದೆ.  ಈ ಗವಿಯಲ್ಲಿ  ಒಂದು ಚಿಕ್ಕ ಶಿವಲಿಂಗ ಮತ್ತು ಬಸವನ ಶಿಲ್ಪಗಳನ್ನು ಒಂದು ಬಂಡೆಯ ಮೇಲೆ ತಂದಿಡಲಾಗಿದೆ. ಅದರ ಪಕ್ಕದಲ್ಲಿ ಐದು ಚಿಕ್ಕ ತುಂಡುಕಲ್ಲುಗಳನ್ನು ಇಟ್ಟು ಪೂಜೆ ಮಾಡಲಾಗಿದೆ. ಈ ಐದು ಕಲ್ಲುಗಳ ಹಿಂದೆ ಇತ್ತೀಚೆಗೆ ಯಾರೋ ದೊಡ್ಡ ಪಟ್ಟಾಭಿರಾಮನ ಚಿತ್ರಪಟವನ್ನೂ ತಂದಿರಿಸಿದ್ದಾರೆ. ಗವಿಯ ಎಡಮೂಲೆಯಲ್ಲಿ ಬಾವಿಯೊಂದಿದ್ದು ಅದರ ಅಂಚು ಮೂಲೆ  ಗಳಲ್ಲಿ ಬಾಂಡುಗಳನ್ನು ಅಳವಡಿಸಲಾಗಿದೆ. ಇದನ್ನು ಸ್ಥಳೀಯರು ಕಲ್ಯಾಣಿ ಎಂದು ಕರೆಯುತ್ತಾರೆ. ಇಲ್ಲಿರುವ ಕಲ್ಯಾಣಿಯಲ್ಲಿ ನೀರು ತೀರಾ ಕೆಳಗೆ ಹೋಗಿದೆ. ಇವೆಲ್ಲವನ್ನೂ ಗಮನಿಸಿದರೆ ಇಲ್ಲಿ ರಸಸಿದ್ಧರು ನೆಲೆಸಿ ಶಿವನ ಆರಾಧನೆ ಮಾಡುತ್ತಾ ರಸಬಾವಿಯಿಂದ ರಸ ಸಿದ್ಧಿ ಸಾಧನೆ ಮಾಡುತ್ತಿದ್ದಿರಬಹುದೆಂದು ಊಹಿಸಬಹುದಾಗಿದೆ. ಈ ಬೆಟ್ಟದ ಸಮೀಪವೇ ಪ್ರಸಿದ್ಧವಾದ ಸಿದ್ಧಗಂಗಾಕ್ಷೇತ್ರ ಇರುವುದರಿಂದ ಈ ಊಹೆಗೆ ಪುಷ್ಟಿಯು ದೊರೆಯುತ್ತದೆ.

        ಈ ಮೇಲಿನ ಎಲ್ಲ ವಿಷಯಗಳನ್ನೂ ಅವಶೇಷಗಳನ್ನೂ ಪರಿಶೀಲಿಸಿದ ಪರಿಣಾಮವಾಗಿ ಈ ಯಿಳಕಲ್ ಬೆಟ್ಟವು ಪೌರಾಣಿಕ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವವನ್ನು ಪಡೆದಿದೆ ಎಂದು ದೃಢವಾಗಿ ಹೇಳಬಹುದಾಗಿದೆ.

        ಆದರೆ ಈಗ ಬೆಟ್ಟದ ಮಾರ್ಗವು ಮುಚ್ಚಿಹೋಗಿದೆ. ವರ್ಷಕ್ಕೊಮ್ಮೆ ಕೆಲವು ಕುಟುಂಬಗಳವರು ತಮ್ಮ ಮನೆದೇವರಾದ ಯಿಳಕಲ್ ರಾಮೇಶ್ವರನಿಗೆ ಪೂಜಾದಿಗಳನ್ನು ಸಲ್ಲಿಸಲು ಪ್ರಾಯಶಃ ರಥಸಪ್ತಮಿ ವೇಳೆಗೆ ಬೆಟ್ಟದ ಮೇಲೆ ಹೋಗುವುದಿದೆಯಂತೆ.  ಕೆಲವು ವೇಳೆ ಸಾಹಸಿ ಯುವಕರು, ಬಾಲಕರು ಬೆಟ್ಟ ಹತ್ತುವುದಕ್ಕೆ ವಿನೋದಾರ್ಥವಾಗಿ ಇಲ್ಲಿಗೆ ಬರುತ್ತಾರೆ. ಇದು ಬಿಟ್ಟರೆ ದನ ಗಾಹಿಗಳು ದನಗಳಿಗೆ ಹುಲ್ಲು ಮೇಯಿಸಲು ಮಳೆಗಾಲದಲ್ಲಿ ಮಾತ್ರ ಇಲ್ಲಿಗೆ ಬರುತ್ತಾರೆ. ಇತರ ಸಮಯಗಳಲ್ಲಿ ನಿರ್ಜನವಾಗಿರು ತ್ತದೆ. ಬೆಟ್ಟದ ಬುಡದಲ್ಲಿ ದಟ್ಟವಾದ ಅರಣ್ಯವಿದೆ. ಇತ್ತೀಚೆಗೆ ಬೆಟ್ಟದ ಬುಡದಲ್ಲಿರುವ ಬೂರುಗಮರದಪಾಳ್ಯ ಗ್ರಾಮದ ಹೊರ ಅಂಚಿನಲ್ಲಿ ನೀಲಗಿರಿ ಮರಗಳನ್ನು ಸ್ವಲ್ಪದೂರದವರೆಗೆ ಸಾಲಾಗಿ ನೆಡಲಾಗಿದೆ. ಕಾಡುಕಿರುಬ, ಮೊಲ, ನರಿಗಳು ಇಲ್ಲಿ ವಾಸವಾಗಿವೆ ಎಂದು ಸ್ಥಳೀಯರು ಹೇಳುತ್ತಾರೆ. ಕಿರುಬಗಳ ಭಯದಿಂದ ಜನರು ಬೆಟ್ಟದ ಕಡೆಗೆ ಹೋಗುವುದನ್ನು ನಿಲ್ಲಿಸಿಬಿಟ್ಟಿದ್ದಾರಂತೆ.

       ಈ ಬೆಟ್ಟಕ್ಕೇರಲು ರಸ್ತೆಮಾರ್ಗವನ್ನು ಮಾಡಿದರೆ ತುಮಕೂರಿಗೆ ಬೆಂಗಳೂರಿನಿಂದ ಹೋಗಿ ಬರುವ ಪ್ರಯಾಣಿಕರಿಗೆ ಇಲ್ಲಿಗೆ ಬರಲು ಅವಕಾಶವಾಗುತ್ತದೆ. ಬೂರುಗಮರದಪಾಳ್ಯದಲ್ಲಿ ಒಂದೆರಡು ಚಿಕ್ಕ ಹೋಟೆಲನ್ನು ತೆರೆದರೆ, ಕ್ಯಾತ್ಸಂದ್ರದಿಂದ ಬೆಟ್ಟದ ಮೇಲಕ್ಕೆ  ಹೋಗಲು ಮೈದಾಳದ ಮಾರ್ಗವಾಗಿ ಹೋಗಬೇಕಾಗುತ್ತದೆ. ಮೈದಾಳದ ವೀರಭದ್ರ ದೇವಾಲಯವೂ ಪ್ರಾಚೀನ ಗುಡಿಯಾಗಿದೆ. ಆದುದರಿಂದ ಮೈದಾಳವನ್ನೂ, ಯಿಳಕಲ್ ಬೆಟ್ಟವನ್ನೂ ಸಾಹಸಿಕ ಮತ್ತು ಐತಿಹಾಸಿಕ ಪ್ರವಾಸೀ ತಾಣಗಳನ್ನಾಗಿ ಅಭಿವೃದ್ಧಿಗೊಳಿಸಲು ಸಾಕಷ್ಟು ಅವಕಾಶವಿದೆ.
                         -------------------------------          





No comments:

Post a Comment