Saturday, August 24, 2013

ಅರಗರಾಜ್ಯದ ಭೌಗೋಳಿಕ ವ್ಯಾಪ್ತಿ-ಸುಕಂ ಗೋವರ್ಧನ್‌

ಶಾಸನಗಳ ಹಿನ್ನೆಲೆಯಲ್ಲಿ ಆರಗ ರಾಜ್ಯದ ಭೌಗೋಳಿಕ ವ್ಯಾಪ್ತಿ
ಸುಂಕಂ ಗೋವರ್ಧನ
ವಿಜಯನಗರವು ಅರಸರು ಸಾಮ್ರಾಟರಾಗಿ ಆಡಳಿತ ವನ್ನು ಆರಂಭಿಸಿದ ನಂತರ ತಮ್ಮ ಒಟ್ಟು ಸಾಮ್ರಾಜ್ಯವನ್ನು ಹಲವಾರು ರಾಜ್ಯಗಳಾಗಿ ವಿಂಗಡಿಸಿ ಅಧಿಕಾರದ ವಿಕೇಂದ್ರೀಕರಣವನ್ನು ಮಾಡಿದರು. ವಿಜಯನಗರದ ಆರಂಭದ ಅರಸರಾದ ಸಂಗಮರೇ ಈ ರೀತಿಯ ಪ್ರಕ್ರಿಯೆಗೆ ನಾಂದಿ ಹಾಡಿದವರು. ಐದೂ ಜನ ಸಂಗಮ ಸೋದರರು ವಿವಿಧ ಭಾಗಗಳಲ್ಲಿ ನೆಲೆ ನಿಂತು ವಿಸ್ತಾರವಾದ ಸಾಮ್ರಾಜ್ಯದ ಅಧಿಕಾರವನ್ನು ನೋಡಿಕೊಳ್ಳುತ್ತಿದ್ದರು. ಆಯಾ ಪ್ರದೇಶಗಳ ಭೌಗೋಳಿಕ ಅಂಶಗಳನ್ನು ಸರಿಯಾಗಿ ಗುರುತಿಸಿ ಅದರಂತೆಯೇ ಆಡಳಿತ ಘಟಕಗಳನ್ನು ಏರ್ಪಡಿಸುತ್ತಾ ನಡೆದರು.
ಹೀಗೆ ರೂಪುಗೊಂಡ ರಾಜ್ಯಗಳಲ್ಲಿ ಮಲೆನಾಡಿನ ಭಾಗವನ್ನು ಮಲೆರಾಜ್ಯವೆಂದು ಕರೆದು ಸುತ್ತಮುತ್ತಲ ನಾಡುಗಳನ್ನು ಈ ರಾಜ್ಯದಲ್ಲಿ ಅಂತರ್ಗತಗೊಳಿಸಲಾಯಿತು. ಈ ಮಲೆರಾಜ್ಯವನ್ನು ಆರಗ ರಾಜ್ಯವೆಂದು ಕರೆಯುತ್ತಿದ್ದರು. ಕಾರಣ ಆರಗ ಇದರ ರಾಜಧಾನಿಯಾಗಿತ್ತು. ಸಂಗಮ ದೊರೆಗಳ ಸೋದರರಲ್ಲಿ ಒಬ್ಬನಾದ ಮಾರಪ್ಪ ಒಡೆಯನು ಈ ಆರಗ ರಾಜ್ಯದ ಚುಕ್ಕಾಣಿಯನ್ನು ಹಿಡಿದನು. ಆರಗದ ೧೮ ಕಂಪಣಗಳೂ ಹಾಗೂ ಗುತ್ತಿಯ ೧೮ ಕಂಪಣಗಳನ್ನು ಒಳಗೊಂಡ ಆರಗ-ಗುತ್ತಿ ೩೬ ಕಂಪಣಗಳಿಗೆ ಮಾದಪ್ಪನು ಒಡೆಯನಾಗಿದ್ದನು.
ಆರಗ
ಇಂದಿನ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹೋಬಳಿಕೇಂದ್ರವಾಗಿರುವ ಆಗರವು ಇತಿಹಾಸದಲ್ಲಿ ರಾಜಧಾನಿಯಾಗಿ ಮೆರೆದ ಊರಾಗಿದೆ. ಆರಗವು ಭೌಗೋಳಿಕವಾಗಿ ತುಂಗಾ ನದಿಯ ತೀರದಲ್ಲಿದೆ. ಸಣ್ಣ ತೊರೆಗಳಾದ ಕುಶಾವತಿ ಮತ್ತು ಗೋಪೀನಾಥಗಳು ಆರಗದ ಬಳಿಯೇ ಹರಿಯುತ್ತದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಅತ್ಯಂತ ಸಂಪದ್ಭರಿತ ವನರಾಶಿಯಿಂದಲೂ, ಸಮೃದ್ಧವಾದ ನೀರಿನಿಂದಲೂ ತುಂಬಿರುವ ಆರಗವು ವಿಪುಲವಾದ ಕಾಡಿನಿಂದ ಆವರಿಸಲ್ಪಟ್ಟಿದೆ. ಹೀಗೆ ವಿಪುಲವಾದ ಪ್ರಾಕೃತಿಕ ಸಂಪತ್ತು ಇರುವುದರಿಂದಲೇ ಮಾರುಕಟ್ಟೆ ಬೆಳೆಯನ್ನು ಬೆಳೆಯುವ ಪ್ರದೇಶವಾಗಿದೆ. ಇಲ್ಲಿನ ಸಾಂಬಾರ ಪದಾರ್ಥಗಳಿಗೆ ದೇಶ-ವಿದೇಶಗಳ ಮಾರುಕಟ್ಟೆಗಳಲ್ಲಿ ಉತ್ತಮ ಬೆಲೆಯಿದೆ. ವ್ಯಾಪಾರಕ್ಕೆ ಪೂರಕವಾದ ವಾತಾವರಣವಿರುವುದರಿಂದಲೇ ಇಲ್ಲಿ ದೊಡ್ಡ ಗ್ರಾಮವೊಂದು ಮೂಡಿ ರಾಜಧಾನಿಯಾಗಿ ರೂಪುಗೊಂಡಿತು.
ಆರಗವು ಗಂಗರ ಕಾಲದಲ್ಲಿ ಮಂಡಳಿ ೧೦೦೦ ಎಂಬ ಆಡಳಿತ ವಿಭಾಗದಲ್ಲಿ ಅಂತರ್ಗತವಾಗಿದ್ದ ಒಂದು ಸಣ್ಣ ಗ್ರಾಮವಾಗಿತ್ತು. ಆಗ ಆರಗಕ್ಕೆ ಅಂತಹ ವಿಶೇಷವಾದ ಪ್ರಾಶಸ್ತ್ಯವೇನೂ ಇರಲಿಲ್ಲ. ನಂತರ ಹೊಯ್ಸಳರ ಕಾಲದಲ್ಲಿ ಸಾಂತಳಿಗೆ ನಾಡು ರೂಪುಗೊಂಡಾಗ ಆರಗವು ಈ ಸಾಂತಳಿಗೆ ನಾಡಿನಲ್ಲಿತ್ತು. ಮುಂದೆ ಹೊಂಬುಜವನ್ನು [ಇಂದಿನ ಹುಂಚ] ಕೇಂದ್ರವನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ ಶಾಂತರರು ಇದೇ ಶಾಂತಳಿಗೆ ನಾಡನ್ನು ವಿಸ್ತರಿಸಿ ಸಾಂತಳಿಗೆ ಸಾವಿರ ಎಂಬ ಆಡಳಿತ ಘಟಕವನ್ನು ರೂಪಿಸಿದರು.
ಮುಂದೆ ವಿಜಯನಗರದ ಅರಸರ ಕಾಲದಲ್ಲಿ ತುಂಗಾ ನದಿಯ ತೀರದಲ್ಲಿರುವ ಆರಗಕ್ಕೆ ವಿಶೇಷವಾದ ಸ್ಥಾನಮಾನ ದೊರೆಯುವಂತಾಯಿತು. ಸಮುದ್ರಯಾನದಿಂದ ನಡೆಯುತ್ತಿದ್ದ ವ್ಯಾಪಾರಕ್ಕೆ ಆರಗವು ಮುಖ್ಯ ಹೆಬ್ಬಾಗಿಲಾಗಿತ್ತು. ಆರಗದ ಮೂಲಕ ಸಾಮಾನು-ಸರಂಜಾಮುಗಳು ಸಾಗಣೆಯಾಗುತ್ತಿತ್ತು. ಅದುದರಿಂದ ವಿಸ್ತಾರವಾದ ಮಲೆ ರಾಜ್ಯವನ್ನು ಕಟ್ಟಬೇಕಾದ ಸಂದರ್ಭದಲ್ಲಿ ಆರಗಕ್ಕೆ ಹೆಚ್ಚಿನ ಸ್ಥಾನಮಾನವನ್ನು ನೀಡಿ ಆರಗವನ್ನು ರಾಜ್ಯದ ರಾಜಧಾನಿಯನ್ನಾಗಿ ಮಾಡಲಾಯಿತು.
ಆರಗ ರಾಜ್ಯವನ್ನು ಉಲ್ಲೇಖಿಸುವ ಶಾಸನಗಳು ೧೩೬೨ ರಿಂದ ಆರಂಭವಾಗಿ ವಿಜಯನಗರದ ಕೊನೆಯ ಕಾಲಘಟ್ಟವಾದ ೧೬೬೫ರವರೆಗೆ ಇದೆ. ವಿಜಯನಗರದ ಆಡಳಿತದ ನಂತರವು ಬಹುತೇಕ ಆರಗ ರಾಜ್ಯವು ಕೆಳದಿಯ ಅರಸರ ಆಡಳಿತಕ್ಕೆ ಸಂದು ಕ್ರಿ.ಶ.೧೬೯೫ರವರೆಗೆ ದಾಖಲಾಗಿದೆ. ಈ ಆರಗ ರಾಜ್ಯದಲ್ಲಿ ೧೮ ಕಂಪಣಗಳು ಹಾಗೂ ಮೂರು ಪಟ್ಟಣಗಳು ಇದ್ದವು ಎಂದು ಬಹುತೇಕ ಶಾಸನಗಳು ತಿಳಿಸುತ್ತವೆ. ಒಳಗೋಡಿನ ಕ್ರಿ.ಶ.೧೫೬೦ರ [ತೀರ್ಥಹಳ್ಳಿ ೧೮೦] ಶಾಸನವೊಂದು ಆರಗ ರಾಜ್ಯದಲ್ಲಿ ೫೦ ನಾಡುಗಳು ಅಂತರ್ಗತವಾಗಿದ್ದವು ಎಂದು ತಿಳಿಸುತ್ತದೆ. ಭಾರತೀಪುರ ಹಾಗೂ ಹುಂಚದ ಕಟ್ಟೆಯ ಶಾಸನಗಳು ಆರಗ ರಾಜ್ಯದಲ್ಲಿ ಪ್ರಮುಖವಾದ ೬೦ ಅಗ್ರಹಾರಗಳಿದ್ದವು ಎಂದು ತಿಳಿಸುತ್ತದೆ.
ಕಂಪಣವೆನ್ನುವುದು ಬಹುಶಃ ನಾಡಿನಂತೆಯೇ, ಶಬ್ದಕೋಶವು ಕಂಪಣವನ್ನು ನಾಡಿನ ಒಂದು ಭಾಗವೆಂದು ತಿಳಿಸುತ್ತದೆ. ಆದರೆ ಆರಗ ರಾಜ್ಯದಲ್ಲಿ ೫೦ ನಾಡುಗಳು ಇರುವ ಸೂಚನೆ ಶಾಸನದಲ್ಲಿಯೇ ಇರುವುದರಿಂದ ಕೆಲವು ನಾಡುಗಳ ಆಡಳಿತವು ಒಂದು ಕಂಪಣಕ್ಕೆ ಸಂದು ಇಂತಹ ೧೮ ಕಂಪಣಗಳು ಆರಗ ರಾಜ್ಯದಲ್ಲಿದ್ದವು. ಈ ಆರಗ ೧೮  ಕಂಪಣವನ್ನು ಇಚ್ಛೆ ೯ ಕಂಪಣ ಹಾಗೂ ಈಳೆ ೯ ಕಂಪಣ ಎಂದು ಎರಡು ರೀತಿಯಲ್ಲಿ ವಿಂಗಡಿಸಲಾಗಿತ್ತು.
ಆರಗ ರಾಜ್ಯದಲ್ಲಿ ೫೦ ನಾಡುಗಳಿದ್ದವು ಎನ್ನುವ ಉಲ್ಲೇಖವಿದ್ದರೂ ಅಷ್ಟು ನಾಡುಗಳ ಹೆಸರುಗಳು ನಮಗೆ ದೊರಕುವುದಿಲ್ಲ. ಶಾಸನಾಧಾರಗಳಿಂದ ತಿಳಿಯಬಹುದಾದಷ್ಟು ನಾಡುಗಳನ್ನು ಈ ಮುಂದೆ ವಿವರಿಸಲಾಗಿದೆ.
ಮಧುವಂಕ ನಾಡು
ಆರಗ ಅಥವಾ ತೀರ್ಥಹಳ್ಳಿಯನ್ನು ಕೇಂದ್ರವನ್ನಾಗಿ ಇಟ್ಟುಕೊಂಡು ತನ್ನ ಸುತ್ತಮುತ್ತಲಿನ ಅನೇಕ ಗ್ರಾಮಗಳ ಆಡಳಿತ ಕೇಂದ್ರವಾಗಿ ಮಧುವಂಕನಾಡು ಖ್ಯಾತವಾಗಿತ್ತು. ಆರಗ ರಾಜ್ಯದ ಇತಿಹಾಸದಲ್ಲಿ ಮಧುವಂಕನಾಡಿಗೆ ವಿಶೇಷ ಮಹತ್ವವಿದೆ. ಅತ್ತಿಗಾರು, ಅಲುಗವಳ್ಳಿ, ಬಾಳಗೋಡು, ಮಳಲಿ, ಜಂಬೆ, ಬಸವನ ಕಲ್ಲು, ನೆರಟೂರು, ಹೊರಣಿ, ಶಿವರಾಜಪುರ, ಯಡೆಹಳ್ಳಿ, ಸಾಲೂರು, ಕೊಡಸಗೊಳಿ, ಬಳ್ಳೂರು, ಸೂರಳಿ, ಮರಗಳಲೆ, ಜೆಗಟಿಗಾರೆ, ಮಹಿಷಿ, ಕೂಳೂರು, ಬಿಕ್ಕನೂರು, ಬಸವಾನಿ, ಮತ್ತೂರು ಮುಂತಾದ ಊರುಗಳು ಈ ನಾಡಿನಲ್ಲಿ ಸೇರಿಕೊಂಡಿದ್ದವು.
ಈ ನಾಡಿನ ವಿಶೆಷವೆಂದರೆ ಕೆಲವು ಗ್ರಾಮಗಳ ಸಮುಚ್ಚಯವನ್ನು ‘ಬಾಗೆ ಎಂದು ಕರೆಯುತ್ತಿದ್ದರು. ಈ ಭಾಗೆಗಳೆಂದರೆ ಭಾಗಗಳು ಎಂದೇ ಅರ್ಥ. ಮೇಲುಬಾಗೆಯಲ್ಲಿ ಬೊಂದಿ, ಕಲ್ಲಿನಾಥಪುರ, ತೊರಗಲೆಗಳಿದ್ದವು. ಸಾಲೂರು ಬಾಗೆಯಲ್ಲಿ ಸಿಂಗಪೊಟ್ಟಣ, ಸಾಲೂರು, ಕೋಳೂರುಗಳಿದ್ದವು. ಬೆಳ್ಳುರು ಬಾಗೆಯಲ್ಲಿ ಭಾರತೀಪುರ ಹಾಗೂ ಭಾವರಸನ ಕೊಪ್ಪ ಗ್ರಾಮಗಳಿದ್ದವು.
ಮಧುವಂಕ ನಾಡಿನಲ್ಲಿ ಕೆಲವು ಪಟ್ಟಡಿಗಳಿದ್ದವು. ಈ ಪಟ್ಟಡಿಗಳು ಕಂದಾಯ ವ್ಯವಸ್ಥೆಯ ಕೇಂದ್ರಭಾಗವಾಗಿದ್ದವು. ಕೊಡಸಗೊಳಿ ಪಟ್ಟಡಿಯಲ್ಲಿ ಬೊಬ್ಬಳ್ಳಿ, ವಡದಕೆರೆ ಗ್ರಾಮ, ಹಿಂಡಚವಳ್ಳಿ, ಕುಕ್ಕರಿ ಗ್ರಾಮ, ಮಾವಕೋಡು ಗ್ರಾಮ ಹಾಗೂ ಕೇದಗೆ ಬಯಲು ಗ್ರಾಮಗಳಿದ್ದವು. ಜಂಬೇ ಪಟ್ಟಡಿಯಲ್ಲಿ ಮರಗಳಲೆ, ನಿರಜವಳ್ಳಿ ಹಾಗೂ ಬಸವನಕಲ್ಲು ಗ್ರಾಮಗಳಿದ್ದವು. ವಂಬೀ ಪಟ್ಟಡಿಯಲ್ಲಿ ಬಸವನಕಲ್ಲು ಗ್ರಾಮವಿತ್ತು. ನೆರಟೂರು ಪಟ್ಟಿಡಿಯಲ್ಲಿ ಸೂರಳಿ ಗ್ರಾಮವಿತ್ತು.
ಈ ನಾಡು ಇಂದಿನ ತೀರ್ಥಹಳ್ಳಿ ತಾಲ್ಲೂಕಿನ ಬಹುಭಾಗವನ್ನು ಆವರಿಸಿತ್ತು. ಈ ನಾಡಿನಲ್ಲಿ ಬೊಂಮಾಪುರ ಅಗ್ರಹಾರ, ಚೌಡೇಶ್ವರಿಪುರ, ಅಭಿನವ ಗೋಪೀನಾಥಪುರ, ತೀರ್ಥರಾಜಪುರ, ಮುಕ್ತ ಹರಿಹರಪುರ, ಲಕ್ಷ್ಮಿಗೋವಿಂದಪುರ, ಕಲ್ಲಿನಾಥಪುರ ಮುಂತಾದ ಪ್ರಮುಖ ಅಗ್ರಹಾರಗಳಿದ್ದವು.
ಸಾತಳಿಗೆಯ ನಾಡು
ಮೂಲತಃ ತೀರ್ಥಹಳ್ಳಿಗೆ ಸಮೀಪದ ಶಾಂತವೇರಿ ಎಂಬ ಊರನ್ನು ಕೇಂದ್ರವನ್ನಾಗಿ ಇಟ್ಟುಕೊಂಡು ಶಾಂತಳಿಗೆ ೧೦೦೦ ಎಂಬ ಭೂಪ್ರದೇಶವನ್ನು ಆಳುತ್ತಿದ್ದರು. ೯ನೇ ಶತಮಾನದಿಂದಲೇ ಆರಂಭವಾಗುವ ಈ ನಾಡು ಮೊದಲಿಗೆ ವಿಸ್ತಾರವಾದ ಭೂಭಾಗವಾಗಿತ್ತು. ವಿಜಯನಗರದ ಅರಸರು ಆರಗವನ್ನು ರಾಜ್ಯವನ್ನಾಗಿ ಮಾಡಿಕೊಂಡು ಆಳ್ವಿಕೆಯನ್ನು ಆರಂಭಿಸಿದ ನಂತರ ಸಾತಳಿಗೆಯ ನಾಡು ಸಂಕಬೆಂತ ಗೊಂಡು ಸಾತಳಿಗೆ ೧೦೦೦ ಆಗಿದ್ದ ಭೂಪ್ರದೇಶವು ಸಾತಳಿಗೆ ನಾಡಾಗಿ ರೂಪುಗೊಂಡಿತು. ಈ ಸಾತಳಿಗೆಯ ನಾಡಿನಲ್ಲಿ ಅಭಿನವ ಗೊಂಡಿನಾಥಪುರದ ಆಲಗೇರಿ, ಕೊಳವಳಿಗೆ, ಹಿರಿಯ ಹೊಳಲೂರು ಮುಂತಾದ ಗ್ರಾಮಗಳು ಅಂತರ್ಗತವಾಗಿದ್ದವು.
ರಾವುನಾಡು
ಗಂಗರ ಕಾಲದಿಂದಲೂ ಅಸ್ತಿತ್ವದಲ್ಲಿರುವ ರಾಉನಾಡು ವಿಜಯನಗರ ಅರಸರ ಕಾಲದಲ್ಲಿ ಹೆಚ್ಚು ಅಭಿವೃದ್ಧಿಗೊಂಡಿತು. ಈ ನಾಡಿನಲ್ಲಿ ಯಾವ್ಯಾವ ಊರುಗಳು ಅಂತರ್ಗತವಾಗಿದ್ದವು ಎಂದು ಸ್ಪಷ್ಟವಾಗಿ ತಿಳಿದುಬರುವುದಿಲ್ಲ. ದಾನಶಾಲೆ ಗ್ರಾಮದ ಶಾಸನದಂತೆ ಕ್ರಿ.ಶ.೧೧೦೩ರಷ್ಟು ಹಿಂದೆಯೇ ಈ ನಾಡು ಅಸ್ತಿತ್ವದಲ್ಲಿತ್ತು [ತೀರ್ಥಹಳ್ಳಿ ೧೭೩] ನಂತರ ವಿಜಯನಗರ ಕಾಲದಲ್ಲಿ ೧೪೦೪ರ ಕೌದವಳ್ಳಿ ಶಾಸನದಲ್ಲಿಯೂ [ತೀರ್ಥಹಳ್ಳಿ ೧೩೮] ಈ ನಾಡಿನ ಉಲ್ಲೇಖವಿದ್ದರೂ ಈ ನಾಡಿಗೆ ಸಲ್ಲುವ ಯಾವ ಗ್ರಾಮದ ಹೆಸರೂ ಸಿಗುವುದಿಲ್ಲ. ಅಂದಿಗೆರೆಯ ೧೪೦೪ರ ಶಾಸನವು [ತೀರ್ಥಹಳ್ಳಿ ೧] ರಾಉನಾಡಿನಲ್ಲಿ ನಾಲ್ಕುಮಂದು ಅರವತ್ತು ಹಳ್ಳಿಗಳಿರುವುದನ್ನು ತಿಳಿಸುತ್ತದೆ ೧೫ನೆಯ ಶತಮಾನದ ಹೆಗ್ಗಾರಿನ ಶಾಸನವು [ತೀರ್ಥಹಳ್ಳಿ ೨೩೮] ಈ ನಾಡು ಸ್ಥಳವಾಗಿ ಪರಿವರ್ತನೆಯಾಗಿದ್ದೆಂದು ತಿಳಿಸುತ್ತದೆ.
ಗಂಗಮಂಡಲಿ ನಾಡು
ಗಂಗ, ಹೊಯ್ಸಳರ ಕಾಲದಲ್ಲಿ ವಿಶಾಲವಾಗಿ ಮೆರೆದ ಗಂಗಮಂಡಲಿನಾಡು ವಿಜಯನಗರ ಕಾಲದಲ್ಲಿ ಗಾಜನೂರು ಸ್ಥಳವೆಂದು ಹೆಸರಿಸಲಾಯಿತು. ಆದರೂ ಗಂಗಮಂಡಲಿ ನಾಡು ಎಂಬ ಹೆಸರು ೧೬ ಹಾಗೂ ೧೭ನೆಯ ಶತಮಾನದವರೆಗೂ ಸಮಾನಾಂತರವಾಗಿ ಅಸ್ತಿತ್ವದಲ್ಲಿತ್ತು. ೧೫೨೩ರ ಮತ್ತೂರು ಅಗ್ರಹಾರದ ಶಾಸನವು [ಶಿವಮೊಗ್ಗ-೮೧] ಗಾಜನೂರು ಸ್ಥಳದಲ್ಲಿರುವ ಗಂಗಮಂಡಲಿ ನಾಡಿನಲ್ಲಿ ಊರು ಕಡವೂರು, ಡಣಾಯಕನಹಳ್ಳಿ, ಮತ್ತೂರುಗಳಿದ್ದವು ಎಂದು ತಿಳಿಸುತ್ತದೆ. ೧೬೨೧ರ ಯರಗನಹಾಳು ಅಗ್ರಹಾರದ ಶಾಸನವು [ಶಿವಮೊಗ್ಗ ೮೩] ಆರಗ ವೇಂಠೆಯ ಗಾಜನೂರು ಸೀಮೆಯ ಗಂಗೆ ಮಂಡಲಿನಾಡಿನ ತುಂಗಭದ್ರಾ ನದೀ ತೀರದ ಯರಗ್ಗಹಾಳಿ ಎಂಬ ಮಹಾಗ್ರಾಮ ಹಾಗೂ ಇದರ ಉಪಗ್ರಾಮವಾದ ಕಾಳಿಕೊಪ್ಪವನ್ನು ಹೆಸರಿಸುತ್ತಾರೆ.
ಮದವಳಿಗೆಯ ನಾಡು
ಈ ಮದವಳಿಗೆಯ ನಾಡು ಸಾಂತಳಿಗೆ ನಾಡಿನಲ್ಲಿತ್ತು. ಇದನ್ನು ಸ್ಪಷ್ಟಪಡಿಸುವ ಎರಡು ಶಾಸನಗಳು ಮೇಗರವಳ್ಳಿಯಲ್ಲಿದೆ. ಮೇಗರವಳ್ಳಿಯ ಕ್ರಿ.ಶ.೮-೮-೧೪೧೭ರ ಶಾಸನವು [ತೀರ್ಥಹಳ್ಳಿ ೨೧೨] ಸ್ಪಷ್ಟವಾಗಿ ‘ಆರಗದ ವೇಂಠೆಯದ ಸೀತಳಿಗೆಯ ನಾಡ ಒಳಗಣ ಮದವಳಿಗೆ ನಾಡ ಒಳಗಣ ಮೇಗರವಳ್ಳಿಯ ಗ್ರಾಮ ಎಂದು ತಿಳಿಸುತ್ತದೆ ಹಾಗೂ ಈ ಶಾಸನ ಮುಂದುವರೆದು ಲೊಕುವಳ್ಳಿಯನ್ನು ಹಾಗೂ ಮುಂಟೆಳೆಯನ್ನು ಪ್ರಸ್ತಾಪಿಸುತ್ತದೆ. ಮೇಗರವಳ್ಳಿಯ ಇನ್ನೊಂದು ಶಾಸನವು [ತೀರ್ಥಹಳ್ಳಿ ೨೧೪] ಈ ಮದವಳಿಗೆಯ ನಾಡಿನಲ್ಲಿ ಮಡವಳ್ಳಿ, ಅಣಪವಳ್ಳಿಗಳು ಈ ನಾಡಿನಲ್ಲಿತ್ತು ಎಂದು ತಿಳಿಸುತ್ತದೆ. ಈ ಶಾಸನದ ಕಾಲ ೧೨-೪-೧೪೩೪. ಈ ನಾಡಿನ ಈ ಶಾಸನಗಳಲ್ಲಿ ಈ ನಾಡಿನ ಬೈಚಣ್ಣ ಹೆಗ್ಗಡೆ, ಕೋಟ್ಯಪ್ಪ ಹೆಗ್ಗಡೆ, ಅಳಿಯನ ಹೆಗ್ಗಡೆ, ನಾಗಪ್ಪ ಹೆಗ್ಗಡೆ, ಕಡ ಹೆಗ್ಗಡೆ, ನಾಗಮ್ಮ ಹೆಗ್ಗಡತಿ, ಪೆಲಪ್ಪ ಹೆಗ್ಗಡೆ, ಜಕ್ಕಣ್ಣ ಹೆಗ್ಗಡೆ ಮುಂತಾದವರ ಹೆಸರುಗಳಿವೆ.
ನಿಡುವಲ ನಾಡು
೨೭-೨-೧೩೮೧ರ ಹುಣಸವಳ್ಳಿಯ ಶಾಸನವು ನಿಡುವಲ ನಾಡಿನಲ್ಲಿರುವ ಹುಣಸವಳಿಯ ಅಗ್ರಹಾರದ ಬಗೆಗೆ ತಿಳಿಸುತ್ತದೆ (ತೀರ್ಥಹಳ್ಳಿ ೨೩೨). ೧೬.೮.೧೩೯೪ರ ಕುರುವಳ್ಳಿಯ ಶಾಸನವು (ತೀರ್ಥಹಳ್ಳಿ ೧೨೦) ಕುರುವಳ್ಳಿಯು ಈ ನಾಡಿನಲ್ಲಿದ್ದುದನ್ನು ತಿಳಿಸುತ್ತದೆ. ೧೪೧೫ರ ಗಾಡಿಗ್ಗೆರೆ ಶಾಸನವು (ತೀರ್ಥಹಳ್ಳಿ ೧೩೯) ಕಾಡಿಗೆರೆ ಹಾಗೂ ಕೋಡೂರುಗಳನ್ನು ಈ ನಾಡಿನಲ್ಲಿತ್ತು ಎಂದು ತಿಳಿಸುತ್ತದೆ. ತೀರ್ಥಹಳ್ಳಿಯ ೧೪೨೨ರ ಶಾಸನವು (ತೀರ್ಥಹಳ್ಳಿ ೧೫೨) ನಿಡುವಲ ನಾಡಿನೊಳಗೆ ಬುಕ್ಕರಾಜಪುರ ಅಗ್ರಹಾರವಿರುವುದನ್ನು ತಿಳಿಸಿ ಈ ಅಗ್ರಹಾರದ ಆಡಳಿತಕ್ಕೆ ಹೆಂನಂಗಿಯು ಸೇರಿತ್ತು ಎಂದು ತಿಳಿಸುತ್ತದೆ. ೧೪೨೪ರ ಆರಗದ ಶಾಸನವು (ತೀರ್ಥಹಳ್ಳಿ ೨೧) ಈ ನಾಡಿನಲ್ಲಿದ್ದ ಕಲ್ಲಕೋಟೆ, ಕುರುವಳ್ಳಿಯ ಗ್ರಾಮವನ್ನು ತಿಳಿಸುತ್ತದೆ. ತೀರ್ಥಹಳ್ಳಿಯ ೧೪೬೩ರ ಶಾಸನವು [ತೀರ್ಥಹಳ್ಳಿ ೧೫೫] ನಿಡುವಲನಾಡು ಸಾಂತಳಿಗೆ ಮಾಗಣಿಗೆ ಸೇರಿತ್ತು ಎಂದು ತಿಳಿಸುತ್ತದೆ. ಈ ನಾಡಿನ ಸರಬಳಿಗೆ ಗ್ರಾಮವನ್ನು ಗಜಬೇಟೆ  ದೇವರಾಯಪುರವೆಂಬ ಅಗ್ರಹಾರವನ್ನಾಗಿ ಇಮ್ಮಡಿ ದೇವರಾಯನ ಪರವಾಗಿ ಮಲ್ಲಿಕಾರ್ಜುನನು ಮಾಡುತ್ತಾನೆ. ೧೫೮೩ರ ಕುರುವಳ್ಳಿಯ ಶಾಸನವು (ತೀರ್ಥಹಳ್ಳಿ ೧೧೯) ಹೆಗ್ಗಡತಿ ಕೊಪ್ಪ ಎಂಬ ಗ್ರಾಮವು ಹರಳಿಯ ಪಾಲಿಗೆ ಸೇರಿತ್ತು. ಈ ಹರಳಿಯ ಪಾಲು ನಿಡುವಲನಾಡಿಗೆ ಸೇರಿತ್ತೆಂದು ತಿಳಿಸುತ್ತದೆ. ಮೇಳಿಗೆಯ ೧೬೧೦ರ ಶಾಸನವು [ತೀರ್ಥಹಳ್ಳಿ ೨೧೫] ನಿಡುವಲ ನಾಡಿನಲ್ಲಿ ಕೋದೂರು ಪಾಲು ಇದ್ದುದನ್ನು ಇದರಲ್ಲಿ ಮೇಳಿಗೆಯೆಂಬ ಗ್ರಾಮವಿತ್ತೆಂದು ತಿಳಿಸುತ್ತದೆ. ಈ ನಿಡುವಲ ನಾಡಿಗೆ ಪೂರ್ವದಲ್ಲಿ ಸಿಡಿಯಬೆಕ್ಕನೂರು ಸೀಮೆ, ದಕ್ಷಿಣದಲ್ಲಿ ಕೋಲಾವರದ ಸೀಮೆ, ಪಶ್ಚಿಮಕ್ಕೆ ಬಡವಾನೆ ಸೀಮೆ ಹಾಗೂ ಉತ್ತರಕ್ಕೆ ಹಳಿವಾರ ಸೀಮೆಗಳು ಇದ್ದವು.
ಹೊಂಬುಚ್ಚನಾಡು
ಇಂದಿನ ಹೊಸನಗರ ತಾಲ್ಲೂಕಿನ ಹೊಂಬುಜವನ್ನು ಕೇಂದ್ರವನ್ನಾಗಿ ಮಾಡಿಕೊಂಡು ಸುತ್ತಮುತ್ತಲ ಗ್ರಾಮಗಳನ್ನು ಹೊಂಬುಚ್ಚನಾಡು ಎಂದು ರೂಪಿಸಲಾಯಿತು. ಹಲವನ ಹಳ್ಳಿಯ ೧೩೬೭ರ ಶಾಸನವು [ತೀರ್ಥಹಳ್ಳಿ ೨೨೫] ಈ ಹಲವನಹಳ್ಳಿಯು ಈ ನಾಡಿನಲ್ಲಿತ್ತು ಎಂದು ತಿಳಿಸುತ್ತದೆ. ನಿಟ್ಟೂರಿನ ೧೩೭೯ರ ಶಾಸನವು [ತೀರ್ಥಹಳ್ಳಿ ೧೭೮] ನಿಟ್ಟೂರು ಈ ನಾಡಿನಲ್ಲಿತ್ತು ಎಂದು ತಿಳಿಸುತ್ತದೆ. ೧೪೦೪ರ ಹೊಸಕೊಪ್ಪದ ಶಾಸನವು [ತೀರ್ಥಹಳ್ಳಿ ೨೪೩] ಶಂಕರಹಳ್ಳಿಯು ಈ ನಾಡಿನಲ್ಲಿತ್ತು. ಕಾಳಮ್ಮನಗುಡಿ ಗ್ರಾಮದ ೧೪೨೪ರ ಶಾಸನವು [ತೀರ್ಥಹಳ್ಳಿ ೧೧೫] ಹಲವನ ಹಳ್ಳಿಯು ಈ ನಾಡಿನಲ್ಲಿದ್ದ ಸಂಗತಿಯನ್ನು ತಿಳಿಸುತ್ತದೆ.
ಹೊಂಬುಚ್ಚನಾಡಿನಲ್ಲಿ ಎರಡುಮಂದು ನಾಡು ಹಾಗೂ ನಾಲ್ಕುಮಂದು ನಾಡುಗಳು ಎಂದು ಎರಡು ವಿಭಾಗಗಳಿದ್ದವು.
ಬೆಳುವೆಯ ನಾಡು
ಆರಗ ರಾಜ್ಯದ ಬೆಳುವೆಯ ನಾಡಿನ ಕೇಂದ್ರಸ್ಥಳ ಬೆಳುವೆ ಇದನ್ನು ಹರಿಹರಪುರವಾಗಿ ಬದಲಾಯಿಸಲಾಯಿತು. ಈ ನಾಡಿನಲ್ಲಿ ಕಾದುವಳಿ ಎಂಬ ಗ್ರಾಮವಿರುವುದನ್ನು ಕಾದುವಳ್ಳಿಯ ಶಾಸನವು [ತೀರ್ಥಹಳ್ಳಿ ೧೩೭] ತಿಳಿಸುತ್ತದೆ. ಈ ಕೌದುವಳ್ಳಿಗೆ ವಿರೂಪಾಂಬಿಕಾಪುರ ಎಂಬ ಪ್ರತಿನಾಮಧೇಯವಿರುವುದು ೧೪೦೪ರ ಈ ಶಾಸನದಿಂದ ತಿಳಿಯಬಹುದಾಗಿದೆ.
ಕೂಡಲಿ ನಾಡು
ಶಿವಮೊಗ್ಗ ತಾಲ್ಲೂಕಿನ ಕೂಡ್ಲಿಯಲ್ಲಿರುವ ಅನೇಕ ಶಾಸನಗಳು ಕೊಡಲಿಯು ಕೂಡಲಿ ನಾಡಿನಲ್ಲಿತ್ತು ಎಂದು ತಿಳಿಸುತ್ತದೆ. ಈ ಕೂಡಲಿ ನಾಡು ಆರಗದ ರಾಜ್ಯದಲ್ಲಿತ್ತು ಎಂದು ೧೪೦೯ರ ಶಾಸನವು (ಶಿವಮೊಗ್ಗ ೮೨) ತಿಳಿಸುತ್ತದೆ.
ಹನಗವಾಡಿಯ ನಾಡು
ಆರಗ ರಾಜ್ಯದಲ್ಲಿದ್ದ ಆನೆವೇರಿಯ ನಾಡಿನಲ್ಲಿ ಈ ಹನಗವಾಡಿಯ ನಾಡು ಇತ್ತು. ಈ ಹನಗವಾಡಿಯ ಭಾಗದ ನಾಡನ್ನು ಹಾಗೂ ಹೊಳೆಯ ಹೊನ್ನೂರು ನಾಡನ್ನು ರಾಯಣ್ಣ ಒಡೆಯನು ಸುಸ್ಥಿತಿಯಲ್ಲಿ ಆಳುತ್ತಿದ್ದನು [ಶಿವಮೊಗ್ಗ ೩೩].
ಹೊಳೆಯ ಹೊನ್ನೂರು ನಾಡು
ಭದ್ರಾನದಿಯ ದಂಡೆಯಲ್ಲಿರುವ ಹೊಳೆಹೊನ್ನೂರನ್ನು ಕೇಂದ್ರವನ್ನಾಗಿ ಮಾಡಿಕೊಂಡು ಹೊಯ್ಸಳರ ಕಾಲದಲ್ಲಿ ರೂಪುಗೊಂಡ ಈ ನಾಡು ಕ್ರಮೇಣ ವಿಜಯನಗರದ ಅರಸರ ಕಾಲದಲ್ಲಿ ಪ್ರವರ್ಧಮಾನವಾಗಿ ಬೆಳೆಯಿತು. ಈ ಹೊಳೆಯ ಹೊನ್ನೂರು ನಾಡಿನಲ್ಲಿ ಆನೆವೇರಿನಾಡು, ಹನಗವಾಡಿಯ ನಾಡು, ಎಡತೊರೆನಾಡು, ಗುಡ್ಡಮಲೆನಾಡು, ಬೆಂಕಿಪುರದ ನಾಡುಗಳು ಸಮಾವೇಶಗೊಂಡಿದ್ದವು. ಇಲ್ಲಿನ ಕೋಟೆಯನ್ನು ಮೊದಲು ಹೊಯ್ಸಳರ ವಿನಯಾದಿತ್ಯ ಕಟ್ಟಿಸಿದನು. ವಿಜಯನಗರ, ಕೆಳದಿ ಅರಸರ ಕಾಲದಲ್ಲಿ ಈ ನಾಡು ಅಭಿವೃದ್ಧಿ ಹೊಂದಿತು.
ಆನೆವೇರಿಯ ನಾಡು
ಈ ಆನೆವೇರಿಯ ನಾಡು ಗಂಗರ ಕಾಲದಿಂದಲೂ ಪ್ರಸಿದ್ಧವಾಗಿದ್ದ ನಾಡು. ಗಂಗಮಂಡಲಿನಾಡಿನಲ್ಲಿ ಈ ನಾಡು ಸೇರಿತ್ತು. ಕ್ರಮೇಣ ವಿಜಯನಗರದ ಅರಸರ ಕಾಲದಲ್ಲಿ ಈ ಅನೆವೇರಿಯ ನಾಡನ್ನು ಗಾಜನೂರು ಸ್ಥಳವನ್ನಾಗಿ ಮಾರ್ಪಡಿಸಲಾಯಿತು.
ಸೀಮೆಗಳು
ವಿಜಯನಗರದ ಆಡಳಿತ ಕಾಲದಲ್ಲಿ ನಾಡುಗಳಲ್ಲಿನ ಅಧಿಕಾರದಲ್ಲಿ ವಿಪರೀತ ಜವಾಬ್ದಾರಿಯಿದ್ದುದರಿಂದ ಸೀಮೆಗಳನ್ನು ರೂಪಿಸಲಾಯಿತು. ಈ ಸೀಮೆಯಲ್ಲಿ ಹಲವಾರು ಗ್ರಾಮಗಳು ಅಂತರ್ಗತವಾಗಿದ್ದವು. ಅಂತೆಯೇ ಸ್ಥಳಗಳು ಕೂಡ. ಕೆಲವೊಂದು ಶಾಸನಗಳಲ್ಲಿ ಸ್ಪಷ್ಟವಾಗಿರುವಂತೆ ಒಂದು ರಾಜ್ಯದಲ್ಲಿ ಒಂದು ನಾಡಿರುತ್ತದೆ. ಆ ನಾಡಿನಲ್ಲಿ ಸ್ಥಳವಿರುತ್ತದೆ. ಸ್ಥಳದಲ್ಲಿ ಸೀಮೆಗಳಿರುತ್ತವೆ. ಕೆಲವು ನಾಡುಗಳು ಕ್ರಮೇಣವಾಗಿ ಸೀಮೆಗಳಾಗಿವೆ. ಕೆಲವೊಮ್ಮೆ ನಾಡು ಹಾಗೂ ಸೀಮೆಯನ್ನು ಪರ್ಯಾಯವಾಗಿ ಉಪಯೋಗಿಸಲಾಗಿದೆ.
ಈ ಹಿಂದೆಯೇ ನಾಡುಗಳ ಕೇಂದ್ರವಾಗಿದ್ದ ಹೊಂಬುಜ, ಬೆಳುವೆಗಳು ಕ್ರಮೇಣ ಹೊಂಬುಜ ಸೀಮೆ ಹಾಗೂ ಬೆಳುವೆಯ ಸೀಮೆಗಳಾಗಿ ರೂಪಾಂತರಗೊಂಡಿದೆ. ನಾಶವೆಂದು ನಾಡು, ನಾಸುವಂದು ನಾಡ ಸೀಮೆಯಾಗಿದೆ. ಇನ್ನುಳಿದಂತೆ ಮೊಸರೂರು ಸೀಮೆ, ಮುತ್ತೂರು ಸೀಮೆ, ಮಾಳೂರು ಸೀಮೆ, ಸಿಡಿಯ ಚಿಕ್ಕನೂರು ಸೀಮೆ, ಕೋಲಾವರದ ಸೀಮೆ, ಬಸವಾನೆ ಸೀಮೆ, ಹಳಿವಾರ ಸೀಮೆ, ನೀರೀರಕಲ ಸೀಮೆ, ಹರಿಹರಪುರದ ಸೀಮೆಗಳು ಆರಗ ರಾಜ್ಯದಲ್ಲಿ ಅಂತರ್ಗತವಾಗಿದ್ದವು. ಇದರ ಜೊತೆಗೆ ಮಂಡಗದ್ದೆ ಸೀಮೆ, ಹಣಗೇರಿಸೀಮೆ ಹಾಗೂ ಹಲಸರ ಸೀಮೆಗಳು ಈ ರಾಜ್ಯದಲ್ಲಿ ಸೇರಿಹೋಗಿದ್ದವು.
ಗಾಜನೂರು ಸೀಮೆ
ಆರಗ ರಾಜ್ಯದ ಪ್ರಮುಖ ಆಯಕಟ್ಟಿನ ಪ್ರದೇಶವೆಂದರೆ ಗಾಜನೂರು. ಆನೆವೇರಿಯ ನಾಡು ಎಂದು ಪ್ರಸಿದ್ಧವಾಗಿ ಗಂಗಮಂಡಲಿ ನಾಡಿನಲ್ಲಿದ್ದ ಗಾಜನೂರು ವಿಜಯನಗರದ ಆಡಳಿತದಲ್ಲಿ ಗಾಜನೂರು ಸೀಮೆಯಾಗಿ ಪರಿವರ್ತಿತ ವಾಯಿತು. ಮತ್ತೂರು ಅಗ್ರಹಾರದ ಕ್ರಿ.ಶ.೧೪೪೫ರ [ಶಿವಮೊಗ್ಗ ೮೧] ಶಾಸನದಲ್ಲಿ ಗಾಜನೂರು ಸ್ಥಳ ಎನ್ನುವ ಉಲ್ಲೇಖವಿರುವುದನ್ನು ಬಿಟ್ಟರೆ ಎಲ್ಲ ಕಡೆಯೂ ಗಾಜನೂರು ಸೀಮೆ ಎನ್ನುವ ಆಡಳಿತ ವಿಭಾಗದ ಉಲ್ಲೇಖವೇ ಇದೆ. ಇದಾದ ನಂತರ ೧೪೮೫ರ ಕುಸ್ಕೂರು ಅಗ್ರಹಾರದ ಶಾಸನವು [ಶಿವಮೊಗ್ಗ ೨೪] ಈ ಸೀಮೆಯ ಕಡುಕಲು ಗ್ರಾಮವನ್ನು ಉಲ್ಲೇಖಿಸುತ್ತದೆ. ಶಿವಮೊಗ್ಗದ ೧೬೪೧ರ ಶಾಸನವು [ಶಿವಮೊಗ್ಗ ೯೦] ಗಾಜನೂರು ಸೀಮೆಯಲ್ಲಿದ್ದ ನಂದಿಗೇರಿ, ಕೊಲತಡಿ, ಸಕ್ಕರೆಬಯಲು, ತಟ್ಟಿಕೆರೆ, ಹೆಬ್ಬಯಲು ಎಂಬ ಐದು ಗ್ರಾಮಗಳನ್ನು ಸೇರಿಸಿ ತ್ರಯಂಬಕಪುರವನ್ನಾಗಿ ಮಾಡಿದ ವಿಷಯವನ್ನು ತಿಳಿಸುತ್ತದೆ. ಕವಲೇದುರ್ಗದ ೧೬೪೨ರ ಶಾಸನದಲ್ಲಿ [ತೀರ್ಥಹಳ್ಳಿ ೫೨] ಈ ಸೀಮೆಯಲ್ಲಿ ಪುರದಹಾಳ, ಹೂಲಿಕಟ್ಟ ಗ್ರಾಮಗಳಲ್ಲಿದ್ದುನ್ನು ದಾಖಲಿಸುತ್ತದೆ. ೧೬೨೧ರ ಯರಗನಹಾಳು ಅಗ್ರಹಾರದಲ್ಲಿನ ಶಾಸನವು [ಶಿವಮೊಗ್ಗ ೮೩] ಗಾಜನೂರು ಸೀಮೆಯಲ್ಲಿ ಗಂಗಮಂಡಲಿ ನಾಡಿತ್ತು ಹಾಗೂ ಈ ನಾಡಿನಲ್ಲಿಯ ಯರಗನಹಾಳು ಹಾಗೂ ಕಾಳಿಕೊಪ್ಪ ಗ್ರಾಮಗಳಿದ್ದುದನ್ನು ತಿಳಿಸುತ್ತದೆ.
ಇದಲ್ಲದೆ ಗಾಜನೂರು ಸೀಮೆಯಲ್ಲಿ ಕೊರ್ಲಹಳ್ಳಿ [ಶಿವಮೊಗ್ಗ ೯೧] ಪುರದಹಾಳ, ಹೂಲಿಕಟ್ಟೆ ಗ್ರಾಮ  [ತೀರ್ಥಹಳ್ಳಿ ೫೨], ಎಡೆಹಳ್ಳಿ, ಕುಯರಿ, ಚೋರನಹಾಳ [ತೀಥ್ಹಳ್ಳಿ ೮೮] ಕಡುಕಲು [ಶಿವಮೊಗ್ಗ ೧೨], ಮೀರನಗಟ್ಟಿ, ಸೆಟ್ಟಿಹಳ್ಳಿ, ಕುಂಮರಿ, ಬಳ್ಳಾಪುರ [ತೀರ್ಥಹಳ್ಳಿ ೧೦೬], ಚೆನ್ನಗೊಂಡನಕೊಪ್ಪ, ಸಾವಗೊಂಡನಹಳ್ಳಿ [ಶಿವಮೊಗ್ಗ ೧೦೦], ತ್ರಯಂಬಕಪುರ [ಶಿವಮೊಗ್ಗ ೯೬] ಗ್ರಾಮಗಳ ಈ ಗಾಜನೂರು ಸೀಮೆಯಲ್ಲಿ ಅಂತರ್ಗತವಾಗಿದ್ದವು. ಕ್ರಿ.ಶ.೧೭೧೪ರ ಕಾಶೀಪುರದ ಶಾಸನದಲ್ಲಿ ಗಾಜನೂರು ಸೀಮೆ ಸ್ಥಳ ಎಂದು ಉಲ್ಲೇಖಿತವಾಗಿದೆ.
ಪೇಟೆಗಳು
ಆರಗ ರಾಜ್ಯದಲ್ಲಿನ ಆರ್ಥಿಕ ಚಟುವಟಿಕೆಗಳ ಮೂಲ ಕೇಂದ್ರವಾಗಿದ್ದುದು ಪೇಟೆಗಳು. ಸಮುದ್ರದಿಂದ ಬರುತ್ತಿದ್ದ ಪದಾರ್ಥಗಳಿಗೆ ಆರಗವು ಮುಖ್ಯ ನೆಲೆಯಾಗಿತ್ತು. ಆಂತರಿಕ ವ್ಯಾಪಾರ ಹಾಗೂ ವಿದೇಶಿ ವ್ಯಾಪಾರಗಳಿಗೆ ಇದು ಕೇಂದ್ರವಾಗಿತ್ತು. ಯಥೇಚ್ಛವಾಗಿ ಬೆಳೆಯುತ್ತಿದ್ದ ಮಲೆನಾಡಿನ ಪದಾರ್ಥಗಳಿಗೆ ವಿದೇಶದ ಮಾರುಕಟ್ಟೆಗಳಲ್ಲಿಯೂ ವಿಶೇಷವಾದ ಬೆಲೆಯಿತ್ತು. ಆರಗ ರಾಜ್ಯದಲ್ಲಿ ಇಂತಹ ಎಂಟು ಪೇಟೆಗಳನ್ನು ಶಾಸನಗಳು ಹೆಸರಿಸುತ್ತದೆ. ಇನ್ನೂ ಇದ್ದಿರಬಹುದಾದರೂ ಉಲ್ಲೇಖಗಳಿಲ್ಲ.
ಆರಗದ ವೇಂಟೆಯಲ್ಲಿ ೮ ಪೇಟೆಗಳು ಇದ್ದವು ಕವಲೇದುರ್ಗದ ೧೬೭೪ರ ಶಾಸನವು ಹೀಗೆ ದಾಖಲಿಸುತ್ತದೆ. “ಆರಗದ ವೆಂಟೆಯಕೆ ಸಲುವ ಆರಗ ಕೊಡಲೂರು, ಯೆಡೆಹಳ್ಳಿ, ಅವಿನಹಳ್ಳಿ, ಕಾರುಊರು, ಬಿದರೂರು, ಮೊಸರೂರು ಮಾಳೇನಹಳ್ಳಿ ಸಹಾ ಯಂಟು ಪೇಟೆಗಳಲ್ಲಿ ಅರಮನೆಯ ಸುಂಕಕೆ...’’ ಈ ಎಂಟು ಪೇಟೆಗಳಲ್ಲಿ ನಾನಾ ರೀತಿಯ ತೆರಿಗೆಗಳನ್ನು ಅರಮನೆಯವರಿಗೆ ಕಟ್ಟಬೇಕಾಗಿತ್ತು.
“ಈ ಪೇಟೆಗಳಲ್ಲಿ ಅಡಕೆ, ಮೆಣಸು, ಝಲಿಪಟಿ, ಖೊಬರಿ, ಕವಾಡ ಮುಂತಾದ ಗಡಿಸಿನ ಸರಕು ಹೊರತಾಗಿ ಅಕ್ಕಿ, ಭತ್ತ, ರಾಗಿ, ಯೆಂಣೆ, ತುಪ್ಪ ಕಾಯಿ, ಬೆಲ್ಲ, ವಿದುಳ ಮುಂತಾಗಿ’’ ವಸ್ತುಗಳು ವಿಕ್ರಯವಾಗುತ್ತಿತ್ತು. ಸುಂಕ ವ್ಯವಸ್ಥೆ ಚೆನ್ನಾಗಿತ್ತು. ಈ ಎಲ್ಲ ಗ್ರಾಮಗಳಲ್ಲಿಯೂ ಸುಂಕ ಕೇಂದ್ರಗಳಿದ್ದವು ನಿಯಮಿತವಾಗಿ ವ್ಯಾಪಾರಿಗಳಿಂದ ಹಣ ಸಂಗ್ರಹಿಸಲಾಗುತ್ತಿತ್ತು.
ಪಟ್ಟಡಿಗಳು
ಆರಗ ರಾಜ್ಯದಲ್ಲಿ ಕಂದಾಯ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಲಾಗಿತ್ತು. ಈ ರೀತಿಯ ಕಂದಾಯ ಕೇಂದ್ರಗಳನ್ನು ಪಟ್ಟಡಿಗಳು ಎಂದು ಕರೆಯಲಾಗುತ್ತಿತ್ತು. ಪ್ರತಿಯೊಂದು ನಾಡಿನಲ್ಲಿಯೂ ಹಲವು ರೀತಿಯ ಪಟ್ಟಡಗಳನ್ನು ಸ್ಥಾಪಿಸಿ ಅಲ್ಲಿಂದ ಕಂದಾಯ ವ್ಯವಸ್ಥೆಯನ್ನು ಹದಗೊಳಿಸಲಾಗುತ್ತಿತ್ತು. ಉದಾಹರಣೆಗೆ ಹೇಳುವುದಾದರೆ ಆರಗ ರಾಜ್ಯದಲ್ಲಿ
ಕೊಡಸತೊಳಿ ಪಟ್ಟಡಿ : ಬೊಬ್ಬಳ್ಳಿ, ವಡೆದಕೆರೆ ಗ್ರಾಮ, ಹಿಂಚನಹಳ್ಳಿ, ಕುಕ್ಕರಿ ಗ್ರಾಮ, ಮಾವಕೋಡು ಗ್ರಾಮ, ಕೇದಗೆಬಯಲು ಗ್ರಾಮ.
ಜಂಬೆ ಪಟ್ಟಡಿ : ಮರಗಳಿಲೆ, ನಿರಚಿವಳ್ಳಿ, ಬಸವನಕಲ್ಲು
ವಂಬೀ ಪೆಟ್ಟಡಿ : ಬಸವನಕಲ್ಲು ಗ್ರಾಮ
ನೆರಟೂರು ಪಟ್ಟಡಿ : ಸೂರಳಿ ಗ್ರಾಮ
ಹೀಗೆ ಕಂದಾಯ ವ್ಯವಸ್ಥೆಯ ಕೇಂದ್ರವಾದ ಪಟ್ಟಡಿಗಳಲ್ಲಿ ಹಲವಾರು ಗ್ರಾಮಗಳು ಬರುತ್ತಿದ್ದವು. ಈ ಗ್ರಾಮಗಳ ಜನರು ಈ ಪಟ್ಟಡಿಗಳಲ್ಲಿ ಬಂದು ತಮ್ಮ ಕಂದಾಯವನ್ನು ಕಟ್ಟಬೇಕಿತ್ತು.
ಬಾಗೆಗಳು
ಆರಗ ರಾಜ್ಯದ ವಿಶೇಷತೆಯೆಂದರೆ ಕೆಲವು ಗ್ರಾಮಗಳನ್ನು ಒಳಗೊಂಡ ಬಾಗೆಗಳು ಎಂಬ ಭಾಗ. ಕೇವಲ ಇವು ಭಾಗಗಳೇ ಹೊರತು ಬೇರಲ್ಲ. ಉದಾಹರಣೆಗೆ ಮಧುವಂತನಾಡಿನ ಮೇಲುಬಾಗೆಯಲ್ಲಿ ಬೊಂದಿ, ಕಲ್ಲಿನಾಥಪುರ, ತೊರಗಲೆ ಗ್ರಾಮಗಳು, ಸಾಲೂರು ಬಾಗೆಯಲ್ಲಿ ಸಿಂಗಪೊಟ್ಟಣ, ಕೋಳೂರು, ಬಳ್ಳೂರು ಬಾಗೆಯಲ್ಲಿ ಭಾರತೀಪುರ, ಬಾವರಸನಕೊಪ್ಪ ಗ್ರಾಮಗಳು ಅಸ್ತಿತ್ವದಲ್ಲಿದ್ದವು.
ಈ ಎಲ್ಲ ನಾಡುಗಳು, ಸೀಮೆಗಳು, ಸ್ಥಳಗಳನ್ನು ಗಮನಿಸಿದಾಗ ಆರಗ ರಾಜ್ಯದ ಭೌಗೋಳಿಕ ವ್ಯಾಪ್ತಿಯು ಸ್ಥೂಲವಾಗಿ ಇಂದಿನ ಶಿವಮೊಗ್ಗ ಜಿಲ್ಲೆಯ ಹೊಸನಗರ, ಶಿವಮೊಗ್ಗ, ತೀರ್ಥಹಳ್ಳಿ ತಾಲ್ಲೂಕುಗಳು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ, ನರಸಿಂಹ ರಾಜಪುರ ತಾಲ್ಲೂಕುಗಳ ಕೆಲಭಾಗವು ಆರಗ ರಾಜ್ಯದಲ್ಲಿ ಅಂತರ್ಗತವಾಗಿತ್ತು ಎಂದೆನಿಸುತ್ತದೆ.
[ಈ ಲೇಖನದಾದ್ಯಂತ ಚೌಕ ಕಂಸದಲ್ಲಿ ನೀಡಿರುವ ಶಾಸನ ಸಂಖ್ಯೆಗಳು ಎಪಿಗ್ರಾಫಿಯ ಕರ್ನಾಟಿಕದ ಹದಿಮೂರನೆಯ (ಪರಿಷ್ಕೃತ) ಸಂಪುಟದವು. ಹೆಚ್ಚಿನ ಮಾಹಿತಿಗಾಗಿ ಎಪಿಗ್ರಾಫಿಯ ಕರ್ನಾಟಿಕದ ಪರಿಷ್ಕೃತ ಸಂಪುಟಗಳಾದ ೧೧, ೧೨, ೧೩, ೧೫ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಲೆಕರ್ನಾಟಕದ ಅರಸು ಮನೆತನಗಳು ಎಂಬ ಕೃತಿಗಳನ್ನು ನೋಡಬಹುದು.]
# ೪೬೧/೪, ೭ನೆಯ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು-೫೬೦೧೦೪.



No comments:

Post a Comment