Wednesday, August 7, 2013

ವಡ್ಡುರಾಳ ತೆರಿಗೆ-ಡ. ಜಗದೀಶ್‌

ವಡ್ಡರಾವುಳ ಮತ್ತು ಹೆರ್ಜ್ಜುಂಕ ತೆರಿಗೆ-ಒಂದು ಟಿಪ್ಪಣಿ
ಡಾ. ಜಗದೀಶ
ಪ್ರಾಚೀನ ಕರ್ನಾಟಕದಲ್ಲಿ ಅನೇಕ ತೆರಿಗೆಗಳನ್ನು ವಸೂಲು ಮಾಡಲಾಗುತ್ತಿತ್ತು. ಅವುಗಳಲ್ಲಿ ವಡ್ಡರಾವುಳ ಒಂದು ಶಾಸನಗಳಲ್ಲಿ ಒಟ್ಟೊಟ್ಟಾಗಿ ಸಾಮಾನ್ಯವ ಆಗಿ ವಡ್ಡರಾವುಳ, ಹೆರ್ಜ್ಜಂಕ ಮತ್ತು ಬಿಲ್ಕೊಡೆ ಕಾಣಿಸಿಕೊಳ್ಳುತ್ತವೆ. ಡಾ|| ಶ್ರೀನಿವಾಸ ರಿತ್ತಿ ತಮ್ಮ ಪ್ರಾಚೀನ ಕರ್ನಾಟಕದ ಆಡಳಿತ ಪರಿಭಾಷಾ ಕೋಶದಲ್ಲಿ ವಡ್ಡರಾವುಳ ವೃದ್ಧರಾಜಕುಲ ಎಂಬ ಸಂಸ್ಕೃತ ಪದದಿಂದ ಬಂದ ಶಬ್ದವೆಂದೂ ರಾಜ ಮನೆತನದ ವೃದ್ಧರ ಪೋಷಣೆಗಾಗಿ ಈ ಕರವನ್ನು ಹಾಕಲಾಗುತ್ತಿತ್ತೆಂದು ಹೇಳಿರು ತ್ತಾರೆ. ಆದರೆ ಈ ವಿವರಣೆ ಸಂದರ್ಭಕ್ಕೆ ಹೊಂದುವುದಿಲ್ಲ. ಬಹುಶಃ ನಗದು ವ್ಯಾಪಾರಕ್ಕೆ ಸಂಬಂಧಿಸಿದ ದೊಡ್ಡ ಮೊತ್ತದ ಕರವಿರಬೇಕು ಎಂದು ತಿಳಿಸುತ್ತಾರೆ. ಹೆರ್ಜ್ಜುಂಕ ಕುರಿತಾಗಿ ಹಿರಿದಾದ ಸುಂಕ, ಯಾವುದೊಂದು ಊರಿನ ಅಥವಾ ಪ್ರದೇಶದ ಒಟ್ಟು ಸುಂಕ, ಹೆಚ್ಚು ಆದಾಯ ತರುವ ಸುಂಕ ಎಂಬ ವಿವರಣೆ ಇದೆ.
ಸಾಮಾನ್ಯವಾಗಿ ವಡ್ಡರಾವುಳ ಮತ್ತು ಹೆರ್ಜ್ಜುಂಕವನ್ನು ಒಟ್ಟಾಗಿ ಎರಡು ಶಾಸನಗಳಲ್ಲಿ ನಮೂದಿಸಿರುವುದನ್ನು ಕಾಣಬಹುದು. ಈ ಎರಡು ಸುಂಕಗಳಲ್ಲಿ ಬಿಲ್ಕೊಡೆ ಸಹ ಕಾಣಿಸಿಕೊಳ್ಳುತ್ತದೆ. ಇದು ಮಾರಾಟದ ಸರಕುಗಳ ಮೇಲಿನ ಕರ ಎಂಬ ವಿವರಣೆ ಇದೆ.
ಬಿ.ಆರ್. ಗೋಪಾಲರು ತಮ್ಮ ದಿ. ಚಾಲುಕ್ಯಾಸ್ ಅಂಡ್ ದಿ ಕಲಚೂರಿಸ್ ಕೃತಿಯಲ್ಲಿ ಬನವಾಸಿ ಪ್ರದೇಶದಲ್ಲಿ ಇರುವ ಆಡಳಿತಾಧಿಕಾರಿಗಳನ್ನು ಬದಲಿಸುವ ನೀತಿ ಇತ್ತೆಂದು ಮತ್ತು ಈ ನೀತಿಯು ಅಧಿಕಾರಿಗಳು ಪ್ರಬಲರಾಗುವುದನ್ನು ತಪ್ಪಿಸುತ್ತಿತ್ತೆಂದು ಭಾವಿಸಲಾಗಿತ್ತು ಎಂದು ಶಾಸನಾಧಾರಗಳನ್ನು ನೀಡಿದ್ದಾರೆ. ಚಟ್ಟಯ್ಯ ಕ್ರಿ.ಶ ೯೯೧-೯೯೩ ಮತ್ತು ೧೦೦೬-೧೦೧೨ ಹೀಗೆ ಎರಡು ಅವಧಿಯಲ್ಲಿ ಬನವಾಸಿಯಲ್ಲಿ ಆಳುತ್ತಿದ್ದನು, ಈ ಮಧ್ಯದ ಅವಧಿ ೧೦೦೨-೧೦೦೩ರಲ್ಲಿ ಭೀಮರಸನು ಆಳುತ್ತಿದ್ದನು.   ಅದೇ ರೀತಿ ಗುಂಣ್ಡಮರಸನು ಬನವಾಸಿಯಲ್ಲಿ ೧೦೮೦ರಲ್ಲಿ ಮತ್ತು  ತರ್ದ್ದವಾಡಿ ನಾಡಿನಲ್ಲಿ ೧೦೮೩ ರಲ್ಲಿರುತ್ತಾನೆ. ಅನಂತಪಾಲ ದಂಡನಾಯಕನು ಬನವಾಸಿ ಪ್ರಾಂತ್ಯವನ್ನಾಳುತ್ತ ಬೆಳ್ವೊಲ ಮತ್ತು ಪುರಿಗೆರೆ ೩೦೦ ವಿಭಾಗಗಳ ಆಡಳಿತವನ್ನು ಕ್ರಿ.ಶ. ೧೧೦೩-೧೧೦೭ ಅವಧಿಯಲ್ಲಿ ಆಳುತ್ತಿದ್ದಾನೆ.
ಈ ಆಧಿಕಾರಿಗಳಲ್ಲಿ ಗುಂಣ್ಡಮರಸ ಹಾಗೂ ಅನಂತಪಾಲ ವಡ್ಡರಾವುಳ ಮತ್ತು ಪೆರ್ಜ್ಜುಂಕ ಹಾಗೂ ಬಿಲ್ಕೊಡೆಯ ಸುಂಕವನ್ನು ಆಳುತ್ತಿರುವುದನ್ನು ಈ ಕೆಳಗಿನ ಶಾಸನಗಳಿಂದ ನೋಡಬಹುದು.
ಗವರೇಶ್ವರ ದೇವರ ಅಂಗಭೋಗಕ್ಕವಲ್ಲಿಯ ಖಂಡ ಸ್ಫುಟಿತ ಜೀರ್ಣ್ಣೋಧಾರಕಂ ಕೊಟ್ಟ ಧಂರ್ಮ್ಮಾಯಂ ಶ್ರೀನಗರಂಗಳಂಡಿಗಳಲು ವರ್ಷಕ್ಕೆ ಪ್ರತ್ಯೇಕ ವೀಸಂ ಹತ್ತು, ಚಿಂನ ಗೆಯಿಕದ ಬೆವಹಾರಿಗರು ಪ್ರತ್ಯೇಕ ವರ್ಷಕೆ ವೀಸಂ ಹತ್ತು, ಸ್ಥಳದ ಗವಱೆಗಳು ವರ್ಷಕೆ ಹಸುಂಬೆಗೆ ಪಣವೊಂದು, ನಾನಾದೇಶಿಗವಱೆಗಳು ವರ್ಷಕ್ಕೆ ದಸುಂದಗೆ ಹಾಗವೊಂದು, ಕರ್ಪೂರ ಕಸ್ತೂರಿ ಕುಂಕುಮ ಶ್ರೀಖಂಡ ಮುತ್ತೊಳಗಾಗಿ ಸಮಸ್ತ ತೂಕದ ಭಂಡವತಕ್ಕಂ ಪೊಂಗೆ ಕಾಣಿ ಎರಡು, ಸ್ಥಳದ ದೂಸಿಗ ವ್ಯವಹಾರಿಗಳಲುಂ ನಾನಾದೇಶಿದೂಸಿಗ ವ್ಯವಹಾರಿಗಳಲುಂ  ಪೊಂಗೆ ಕಾಣಿ ಎರಡು, ಮೆಳಸು ಜೀರಗೆ ಸಾಸವಿ ಸದಹುಗೆವೋವ ಕೊತ್ತುಂಬಲಿ ಯೊಳಗಾಗಿ ಪೊಂಗೆ ವೀಸವೊಂದು, ಸಖ್ಖರೆ ಯಿಂಗು ಸೂಂಠಿ ಹಿಪ್ಪಲಿ ಏಲೆಯಕ್ಕಿ ಯಲ್ಲ ವರಿಸಿನಾರು ಪೇರು ಸಮಸ್ತ ತೂಕದ ಭಂಡಕ್ಕೆ ಪೊಂಗೆ ವೀಸವೊಂದು, ಹೆಜ್ಜುಂಕ ವಡ್ಡರಾವುಳಕೆ ನಡವ ದಂಡನಾಯಕರು ಹತ್ತಕೊಂದ ಹೇಱನ ಸುಂಕವಂ ಬಿಟ್ಟುಕೊಟ್ಟರು ಸ್ಥಳದ ಹೇಱುವ ಬಂಣಂಜಿಗರು ಹೊಱಗಣಿಂದ ಬಂದ ಸಮಸ್ತ ಬಣಂಜಿಗರು ಹೇಱಂಗೆ ಮಾನವೊಂದು ಮಾಲಗಾಱ ನಾಲ್ವೊತ್ತೊಕಲಲು ತಂಮ ಕರಂಡಗೆಗಳಲು ಪ್ರತ್ಯೇಕ ಹೂವಿನ ಸರವೊಂದು ತಂಬುಲಿ ಗರು ಸಾಸಿರ್ಬ್ಬರಲು ಚೈತ್ರ ಪವಿತ್ರ ಪರ್ವ್ವ ಬಿಯಕ್ಕೆ ವೊಕ್ಕಲಲು ಎಲೆ ಸಾಯಿರ ವೊಂದುಮ ತೆಲ್ಲಿಗಯ್ವತ್ತೊಕ್ಕಲಲುಂ ದೇವರ ನಂದಾದೀವಿಗೆಗೆ ಗಾಣಂಗಳಲು ಪ್ರತ್ಯೇಕ ಎಣ್ಣೆ ಸೊಂಟಿಗೆ ವೊಂದು ಜಿಡ್ಡುಳಿಗೆ ಯೆಪ್ಪತ್ತಱ ಮಂನೆಯ ಎಕ್ಕಲರಸಂ ಮುಖ್ಯವಾಗಿ . . .  ಎಂದು ಶಿಕಾರಿಪುರ ಶಾಸನ ಉಲ್ಲೇಖಿ ಸುತ್ತದೆ.
ಇನ್ತು ದಯಾತ್ಯ ದಣ್ಡಾಧಿಪತಿ ಬನವಾಸೆ ಪನ್ನಿರ್ಚ್ಛಾಸಿರ ಮುಮಂ ಶಾನ್ತಳಿಗೆ ಸಾಯಿರಮುಮಂ ಪದಿನೆಂಟು ಭತ್ತ ಗ್ರಾಮಗಳಂ ಮೇಲ್ವಟ್ಟೆಯ ವಡ್ಡರಾವುಳದ ಸುಂಕಮುಮಂ ಸುಖಸಂಕಥಾವಿನೋದದಿಂ . . . . ಮಠದ ಸೊಡರೆಂಣ್ನೆಗಂ ವಡ್ಡರಾವುಳಂ ಪೆರ್ಜ್ಜುಂಕ ಎರಡು ಬಿಲ್ಕೊಡೆ ಅನ್ತು ನಾಲ್ಕು ಸುಂಕಮುಮಂ ಎಂದು ಸೊರಬ ಶಾಸನ ಉಲ್ಲೇಖಿಸುತ್ತದೆ. 
ಸಮಧಿಗತ ಪಂಚಮಹಾಶಬ್ದ ಮಹಾಸಾಮನ್ತಾಧಿಪತಿ ಮಹಾಪ್ರಧಾನ ದಂಣ್ಡನಾಯಕ ಮನೆವೆರ್ಗ್ಗೆಡೆ ದಂಣ್ಡನಾಯಕಂ ಗುಂಣ್ಡಮರಸರು ಬನವಸೆ ನಾಡೊಳಗಣ ಕಂಪಣ ಮಗ್ರಹಾರಂ ವಡ್ಡರಾವುಳಂ ಹೆಜ್ಜುಂಕ ಯೆರಡುಂ ಬಿಲ್ಕೊಡೆಯ ಮನಾಳುತ್ತಿರೆ  ಯಿವರ ವಂಶದೊಳಗೆ ಜ್ಯೇಷ್ಠನುದಿತ್ಯಕೃಷ್ಟನು ಮೆನಿಸಿದ ಸಮಧಿಗತ ಪಂಚಮಹಾಶಬ್ದ ಮಹಾಸಾಮನ್ತಾಧಿ ಪತಿ ಮಹಾಪ್ರಷಣ್ಡ ದಣ್ಡನಾಯಕಂ ವಿಬುಧ ಪ್ರದಾಯಕಂ ಹಯವತ್ಸರಾಜಂ ರೂಪ ಮನೋಜಂ ಪರಾರ್ತ್ಥ ಜೀಮೂತವಾಹನ ಯರಿತಟಭೈರವಂ ಗುಣ್ಪನಸಂನ್ನಾಹ ಸಮಸ್ತ ನಾಮಾವಸೀ ಸಮೇತರಪ್ಪ ಜೆಕ್ಕಮರಸನುಂ ಎಂದು ಶಿಕಾರಿಪುರ ಮತ್ತೊಂದು ಶಾಸನ ಉಲ್ಲೇಖಿಸುತ್ತದೆ.
ಸಮಸ್ತ ಪ್ರಶಸ್ತಿ ಸಹಿತಂ ಸ್ರೀಮದ್ದಂಡನಾ ಸ್ರೀಧರ ಯ್ಯಂಗಳು ಮೇಲ್ವಟ್ಟೆಯ ವಡ್ಡರಾವುಳ ಎರಡುಂ ಬಿಲ್ಕೊಡೆಯ ನಾಳುತ್ತಮಿರೆ   . . . . . ಸಮಸ್ತ ಪ್ರಶಸ್ತಿ ಸಹಿತಂ ಶ್ರೀಮತ್ಪೆರ್ಗ್ಗಡೆ ಚಂಗಮಯ್ಯಂಗಳೆ ಬನವಾಸೆ ಪನ್ನಿರ್ಚ್ಛಾಸಿರದ ದವಸಾಯದ ಸುಮಕಮಂ ವಡರಾವುಳ ಡರಡುಂ ಬಿ  . . ಕಡೆಯ ಮನಾಳುತ್ತಂ ಚಾಳುಕ್ಯ ವಿಕ್ರಮಕಾಲದ ೧೩ ನೆಯ . . . ಎಂದು ಸಒರಬದ ಎಲೆವಾಳ ಶಾಸನ ಉಲ್ಲೇಖವಿದೆ.
ಶಿಕಾರಿಪುರ ತಾಲೂಕಿನ ಮತ್ತೊಂದು ಶಾಸನದಲ್ಲಿ ಹೀಗೆ ಉಲ್ಲೇಖವಿದೆ. ಸಮಧಿಗತ ಪಞ್ಚಮಹಾಶಬ್ದ ಮಹಾಸಾಮನ್ತಾಧಿಪತಿ ಮಹಾಪ್ರಚಣ್ಡ ದಣ್ಡನಾಯಕನ ನನ್ತ ಪಾಳನಾ ಬೆಸದಿಂ ಬನವಾಸಿ ಪರ್ಚ್ಚಾಸಿದರ ವಡ್ಡರಾವುಳದ ಸುಂಕದಧಿಷ್ಠಾಯಕಂ ಶ್ರೀಮದ್ದಣ್ಡನಾಯಕಂ ಮಾದಿರಾಜಂ ಚಾಳುಕ್ಯ ವಿಕ್ರಮ ವರ್ಷದ ೨೨ ನೆಯ ಈಶ್ವರ ಸಂವತ್ಸರದ ಪೌಷ್ಯ ಸುದ್ಧ ೧೦ ಆದಿತ್ಯವಾರದನುತ್ತರಾಯಣ ಸಂಕ್ರಮಣ ನಿಮಿತ್ತಂ ಶ್ರೀಮದಗ್ರಹಾರ ಮಾರಸಿಂಗನ ಬೇಗೂರ ವಿಷ್ಣುದೇವರಿರ್ಗ್ಗೆ ಧಾರಾಪೂರ್ವ್ವಕ . .  ಡಿ ಆಗ್ರಾಮದ ಅಡಕೆಯ ವಡ್ಡರಾವುಳದ ಸುಂಕದೊಳಗೆ ಮೂ . . . ಲಕ್ಕಡಕೆಯ ಸುಂಕಮುನುಂ ಮತ್ತಂ ತಮಗೆ ನಡೆವ ಕಿಱುಕುಳ ಸುಂಕದೊಳಗೆ ಬಿಲ್ಕಡೆಯ ಎಲೆಯ ಹೇಱಂಗೆ ದಸವನ್ದ ಮುಮಂ ಮತ್ತಂ ಕ . . ಭೂಮಿಂಗೆ ಸುಂಕ ವೀಸಮುಮಂ| ದವಸಾಯದೊಳಗೆ . . . ನಮುಂ ಬಿಟ್ಟು ||
ಶ್ರೀಮದ್ದಣ್ಡನಾಯಕ ಗೋವಿನ್ದರಸರ್ ಮೇಲ್ವಟ್ಟೆಯ ವಡ್ಡರಾವುಳ ಮುಮೆರಡುಂ ಬಿಲ್ಕೊಡೆಯಯಂ ಪೆರ್ಜ್ಜುಂಮುಂ ಪಡೆದು ಸುಖಸಂಕಥಾವಿನೋದದಿಂ ಪ್ರತಿಪಾಳಿಸುತ್ತಮಿರೆ || . . . . . . . .ಶ್ರೀಮತ್ಕೇದಾರೇಶ್ವರ ದೇವರ ಧೂಪ ದೋಪ ನಿವೇದ್ಯಕ್ಕೆಂದು| ಅವಾಗರದೋಳ್ಪಿಡಿವಲ್ಲಿ ಮಾಱುವಡಮೆಱಡು ಲಕ್ಕವಡಕೆಗೆ ಪೆರ್ಜ್ಜುಂಕಮುಮಂ ವಡ್ಡರಾವುಳಮುಮೆರಡುಂ ಬಿಲ್ಕೊಡೆಯುಂ ಸರ್ವ್ವ ನಮಸ್ಯೆಮೆಂದು ಬಿಟ್ಟರ್ || ಹಾಗೂ ಧಾರಾಪೂರ್ವ್ವಕಂ ಮಾಡಿ ಜಿಡ್ಡುಳಿಗೆ ನಾಡೊಳಗಣ ತದವಣಲೆಯುಮ ನಾಡೊಳಗೆ ಸ್ಥಳವೃತ್ತಿಯಾಗಿ ಹಕ್ಕಲೆಯ ಹೊಲನುಮಂ ತ್ರಿಭೋಗಾಭ್ಯನ್ತರವಾಗಿ ಕೊಟ್ಟು ಮತ್ತ ವಲೆಯಡಕೆ ಧಾನ್ಯವೆಂಬೀ ವಸ್ತುಗಳು ಮೊದಲಾಗಿ ಕ್ರಯವಿಕ್ರಯ ಯೋಗ್ಯಂಗಳಪ್ಪುವರ್ಕ್ಕೆಲ್ಲಂ ವಡ್ಡರಾವುಳಂ ಹೆರ್ಜ್ಜುಂಕಮೆಂಬಿವು ಮೊದಲಾಗಿ ಯುಳ್ಳನ್ತಪ್ಪ ಸುಂಕ ಗಳೆಲ್ಲಮಂ ಬಿಟ್ಟುಕೊಟ್ಟ ಸರ್ವ್ವನಮಸ್ಯವಾಗಿ ಕೊಟ್ಟಾಗಳ್ ||  ಎಂದು ಶಿಕಾರಿಪುರ ತಾಲೂಕಿನ ಶಾಸನದಲ್ಲಿ ಉಲ್ಲೇಖವಿದೆ.
ಶ್ರೀಕೇದಾರೇಶ್ವರದೇವರ ತೋಂಟದಲು ಪುಟ್ಟುವಾವು ದಂನ್ನದ ಗೋಂಟಡಕೆಯ ವಡ್ಡರಾವುಳ ಹೆಜ್ಜುಂಕ ವೆರಡುಂ ಬಿಲ್ಕೊಡೆಯ ಸುಂಕವತುಮಂ ಮತ್ತವಾ ತೋಂಟದೆಲೆಯ ಪಂನ್ನಾಯದೆಲ್ಲಾ ಸುಂಕಮುಮಂ ಸರ್ವ್ವಾಭಾಧಾ ಪರಿಹಾರ ವಾಗಿ ನಡವಂತಾಗಿರಲು ಬಿಟ್ಟುಕೊಟ್ಟ || ಎಂದು ಮತ್ತೊಂದು ಶಿಕಾರಿಪುರ ತಾಲೂಕಿನ ಶಾಸನ ಉಲ್ಲೇಖಿಸಿದೆ.೧೦
ಬಾದಾಮಿಯ ಬೊಮ್ಮನಾಯಕ ನೆರಡುನೂಱಱ ಹೆರ್ಜ್ಜುಂಮನಾಳುತ್ತ ದೇವರ ಚೈತ್ರ ಪವಿತ್ರದಂದು ಕುಕ್ಕನೂರ ಮೂವತ್ತಱೊಳಗೆಲ್ಲಯಾದೊಡಂ ಗುಡಿಯ ಬೀಡಿಗಂ ಅಡಕೆ ಮೆಣಸು ಧಸರಿಯ ಮಳವೆ ಸೀರೆಯ ಮಳವೆ ಹದವಿನ ಮಳವೆ ಅರಸಿನದ ಮಳವೆ ಅಲ್ಲದ ಮಳವೆ ಲಯ ಕೊಡ ಎತ್ತಿನಲು ಕತ್ತೆಯಲು ಕೋಣನಲು ಏನ ಹೇಱ ಬಂದಡಂ ಹೆರ್ಜ್ಜುಂಕ ಬೀರವಣ ವಡ್ಡಲಾವುಳ ಸಹಿತ ಹತ್ತಕೊಂದು  ದಸವಂದಮಾಗಿ ಚಾಳುಕ್ಯ ವಿಕ್ರಮ ಕಾಲದ ೫೦ನೆಯ . . . . ಎಂಬ ಉಲ್ಲೇಖ ಯಲಬುರ್ಗಾ ತಾಲೂಕಿನ ಶಾಸನದಲ್ಲಿದೆ. ೧೧
|| ಭರತಂ ಮುನ್ನಂ ರಾಜ್ಯದ ಭರಮಂ ತಾಳ್ದಿೞ್ದು ಸುಂಕಮಂ ಮಾರ್ಪ್ಪಂದಾದರದಿಂ ಗೌಡದ ಗೌತಮೇಶ್ವ ದೇವಂಗಿತ್ತ ನೆರೆಡು ಸುಂಕದ ತೆಱೆಯ || ಪಿರಿಯ ತೆಱೆ ವಡ್ಡರಾವುಳ ವರಸರ ಸಾಮಂತ ಭುಕ್ತಿ ಪೆರ್ಜ್ಜುಂಕಂ ದೇವರಿ ಗಿಂತು ಸರ್ಬ್ಬಭಾಧಾ ಪರಿಹಾರಂ ಭರತಂದೆವತ್ತಿಸಿ ನಡೆಗುಂ ಇಂತೀ ಧರ್ಮ್ಮಮಂ  ಸವಿಸ್ತರಂ ಕೇಳ್ದು ದೇವರ ದೇವಂಗೆ ನಾಲ್ಕು ಲಕ್ಕವಡಕೆಯ ವಡ್ಡರಾವುಳದ ಸುಂಕಮುಮಂ ಪೆರ್ಜ್ಜುಂಕಮುಮತಾವುಂ ಭಾಸ್ಕರಯ್ಯನುಂ ಧಾರಾಪೂರ್ಬ್ಬಕಂ ಬಿಟ್ಟು ಕೊಟ್ಟರಿಂತೀ ಧರ್ಮ್ಮಮಂ ಪ್ರತಿಪಾಳಿಸಿದಾತಂಗೆ ಕುರುಕ್ಷೇತ್ರ . . . . ಎಂಬ ಉಲ್ಲೇಖವು ಶಿಕಾರಿಪುರ ತಾಲೂಕಿನ ಶಾಸನದಲ್ಲಿದೆ. ೧೨
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಎರಡು ರೀತಿಯ ಮಾರ್ಗ ಸುಂಕಗಳಿವೆ. ಮೇಲ್ವಟ್ಟೆ ಮತ್ತು ಕೀಳ್ವಟ್ಟೆ. ಮೇಲ್ವಟ್ಟೆಯು ಹೆದ್ದಾರಿಗಳ ಸುಂಕವಾದರೆ, ಕೀಳ್ವಟ್ಟೆಯು ಗ್ರಾಮಗಳಿಗೆ ಹೋಗುವ ಚಿಕ್ಕ ರಸ್ತೆಗಳ ಮೇಲೆ ಸಾಗಿಸುವ ಮಾರಾಟದ ಸರಕುಗಳ ಮೇಲಿನ ಸುಂಕ. ಬೀರವಣವು ಸಾರಿಗೆ ಸುಂಕ. ಗೌಜ ಗ್ರಾಮದ ಶಾಸನವು ಹಿಂದೆ ಭರತನು ಗೌತಮೇಶ್ವರ ದೇವರಿಗೆ ಬಿಟ್ಟ ಎರಡು ತೆರಿಗೆಗಳನ್ನು ಪ್ರಸ್ತಾಪಿಸುತ್ತದೆ. ಈ ಎರಡು ತೆರಿಗೆಗಳ ವಿವರ ಹೀಗಿದೆ, ಪಿರಿಯ ತೆರೆ ವಡ್ಡರಾವುಳ ಮತ್ತು ಅರಸರ ಸಾಮಂತ ಭುಕ್ತಿ ಪೆರ್ಜ್ಜುಂಕ. ಕೆಲವು ಅಧಿಕಾರಿಗಳು ಮೇಲ್ವಟ್ಟೆಯ ವಡ್ಡರಾವುಳ ಮತ್ತು ಪೆರ್ಜ್ಜುಂಕ ಆಳುತ್ತಿರುವುದನ್ನು ಕಾಣಬಹುದು. ಪ್ರಾಯಶಃ ಇದರಿಂದ ಮುಖ್ಯ ಮಾರ್ಗಗಳಲ್ಲಿ ಇರುವ ಠಾಣೆಗಳಲ್ಲಿ ಸಂಕಲಿಸಲಾಗುತ್ತಿದ್ದ (ವಸೂಲಾಗುತ್ತಿದ್ದ) ಸುಂಕವು ಸಾಮ್ರಾಟರಿಗೆ ಸಲ್ಲುತ್ತಿತ್ತು. ಇದನ್ನು ಅರಸರ ಸಾಮಂತರು ನೀಡುತ್ತಿದ್ದರು ಮತ್ತು ಮೇಲ್ವಿಚಾರಣೆಗಾಗಿ ಅಧಿಕಾರಿಗಳನ್ನು ನೇಮಿಸಲಾಗುತ್ತಿತ್ತು. ಬಿಲ್ಕೊಡೆ ಅಥವಾ ಬೀರವಣವು ಸಾಗಣೆ ಸಮಯದಲ್ಲಿ ಕಳ್ಳಕಾಕರಿಂದ ರಕ್ಷಣೆಗೆ ನೀಡುವ ಸಲುವಾಗಿ ಪಡೆಯುತ್ತಿದ್ದ ಸುಂಕ ಆಗಿತ್ತೆಂದು ತೋರುತ್ತದೆ.

ಆಧಾರಸೂಚಿ ಮತ್ತು ಟಿಪ್ಪಣಿಗಳು
೧.         ಡಾ|| ಶ್ರೀನಿವಾಸ ರಿತ್ತಿ, ೨೦೦೦, ಪ್ರಾಚೀನ ಕರ್ನಾಟಕದ ಆಡಳಿತ ಪರಿಭಾಷಾಕೋಶ, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು.
೨.         ಡಾ|| ಬಿ.ಆರ್. ಗೋಪಾಲ್, ೧೯೮೧, ದಿ ಚಾಲುಕ್ಯಾಸ್ ಅಂಡ್ ದಿ ಕಲಚೂರಿಸ್, ಕರ್ನಾಟಕ ವಿಶ್ವವಿದ್ಯಾಲಯ, ಪುಟ ೭೯.
೩.         ಅದೇ ಪುಟ ೨೭೩.
೪.         ಎ.ಕ.೭, (ರೈಸ್ ಆವೃತ್ತಿ), ಶಿಕಾರಿಪುರ ತಾಲೂಕು ನಂ ೧೧೮, ಸೋಮೇಶ್ವರ ದೇವಸ್ಥಾನದ ಬಾಗಲಿನ ಬಲಭಾಗದಲ್ಲಿ ನೆಟ್ಟಕಲ್ಲು, ಬೆಳಗಾಮಿ ಕ್ರಿ.ಶ ೧೦೫೪.
೫.         ಎ.ಕ.೮, (ರೈಸ್ ಆವೃತ್ತಿ), ಸೊರಬ ತಾಲೂಕು, ನಂ ೨೯೯, ತೊರೆವಂದ ಗ್ರಾಮದ ಬಯಲ ಬಸವನ ಗುಡಿ ಬಳಿ ನೆಟ್ಟ ೨ನೆಯ ಕಲ್ಲು ಕ್ರಿ.ಶ ೧೦೭೪.
೬.         ಎ.ಕ. ೭, (ರೈಸ್ ಆವೃತ್ತಿ), ಶಿಕಾರಿಪುರ ತಾಲೂಕು ನಂ ೧೦೦, ವಿರಕ್ತ ಮಠದ ತುಂಬೋ ಹೊಂಡದ ಏರೀ ಮೇಲಿರುವ ಕಲ್ಲು, ಬೆಳಗಾಮಿ ಕ್ರಿ.ಶ ೧೦೮೦.
೭.         ಎ.ಕ. ೮, (ರೈಸ್ ಆವೃತ್ತಿ), ಸೊರಬ ತಾಲೂಕು, ಎಲೆವಾಳ ನಂ ೩೮೮, ಬಸವಣ್ಣನ ಗುಡಿ ಮುಂದೆ ನೆಟ್ಟ ನಾಲ್ಕನೆಯ ಕಲ್ಲು, ಕ್ರಿ.ಶ ೧೦೮೯
೮.         ಎ.ಕ. ೭, (ರೈಸ್ ಆವೃತ್ತಿ), ಶಿಕಾರಿಪುರ ತಾಲ್ಲೂಕು, ನಂ. ೧೩, ಬೇಗೂರು ಮಲ್ಲಿಕಾರ್ಜುನ ದೇವಾಲಯಕ್ಕೆ ಆಗ್ನೇಯದಲ್ಲಿ ಅಶ್ವತ್ಥ ಮರದ ಬುಡದಲ್ಲಿ ಕ್ರಿ.ಶ ೧೦೯೮.
೯.         ಎ.ಕ. ೭, (ರೈಸ್ ಆವೃತ್ತಿ), ಶಿಕಾರಿಪುರ ತಾಲ್ಲೂಕು, ನಂ. ೯೮ ಮತ್ತು ೧೦೦, ಕೇದಾರೇಶ್ವರ ದೇವಾಲಯ ೭ನೆಯ ಕಲ್ಲು ಮತ್ತು ೯ನೆಯ ಕಲ್ಲು  ಬೆಳಗಾಮಿ ಕ್ರಿ.ಶ. ೧೧೦೩ ಮತ್ತು  ಕ್ರಿ.ಶ. ೧೧೨೯.
೧೦.      ಎ.ಕ. ೭, (ರೈಸ್ ಆವೃತ್ತಿ), ಶಿಕಾರಿಪುರ ತಾಲೂಕು ನಂ ೧೦೪, ಕೇದಾರೇಶ್ವರ ದೇವಾಲಯ ೧೩ನೆಯ ಕಲ್ಲು, ಬೆಳಗಾಮಿ ಕ್ರಿ.ಶ ೧೧೫೫.
೧೧.      ಕೊಪ್ಪಳ ಜಿಲ್ಲೆ, ಯಲಬುರ್ಗ ತಾಲೂಕು, ಕುಕ್ಕನೂರು ನಂ ೧೭, ಕ್ರಿ.ಶ. ೧೧೫೪, ಕ.ವಿ.ಶಾ.ಸಂ. ೨, ಹಂಪಿ, ಕ.ವಿ.ವಿ.
೧೨.      ಎ.ಕ. ೭, (ರೈಸ್ ಆವೃತ್ತಿ), ಶಿಕಾರಿಪುರ, ನಂ ೪೮, ಗೌಜ, ಗೌತಮೇಶ್ವರ ದೇವರ ಪ್ರಾಕಾರದಲ್ಲಿ ಕ್ರಿ.ಶ. ೧೦೭೬.

? # ೬೬, ಮೊದಲನೆಯ ಅಡ್ಡರಸ್ತೆ, ಹೊಸಮನೆ ಬಡಾವಣೆ, ಶಿವಮೊಗ್ಗ-೫೭೭೨೦೧.



No comments:

Post a Comment