Thursday, August 1, 2013

ಎಂ ಶ್ರೀನಿವಾಸ ಅಯ್ಯಂಗಾರ್ ಮತ್ತು ಪತ್ರಿಕೊಧ್ಯಮ

ಎಮ್. ಶ್ರೀನಿವಾಸ ಅಯ್ಯಂಗಾರ್ ಮತ್ತು ಪತ್ರಿಕೋದ್ಯಮ
ಡಾ. ಲಕ್ಷ್ಮಿದೇವಿ ಎಸ್.
‘ಭಾರತದಲ್ಲಿ ಪತ್ರಿಕೋದ್ಯಮ ಹುಟ್ಟಿದ ಅನೇಕ ದಶಕಗಳ ನಂತರ ಕರ್ನಾಟಕದಲ್ಲಿ ಪತ್ರಿಕೋದ್ಯಮ ಜನ್ಮತಾಳಿತು. ಕರ್ನಾಟಕದ ಪತ್ರಿಕೋದ್ಯಮಕ್ಕೆ ೧೬೯ ವರ್ಷಗಳ ಸುದೀರ್ಘ ಇತಿಹಾಸವಿದೆ. ಪ್ರಥಮದಲ್ಲಿ ಧರ್ಮ ಪ್ರಚಾರ, ಆನಂತರ ಕನ್ನಡ ನಾಡು ಮತ್ತು ನುಡಿಯ ಏಳ್ಗೆ - ಈ ಉದ್ಧೇಶಗಳನ್ನಿಟ್ಟುಕೊಂಡು ಪತ್ರಿಕೆಗಳು ಪ್ರಾರಂಭವಾದವು. ಕರ್ನಾಟಕದ ಪತ್ರಿಕೆಗಳು ಭಾರತದ ಇತರ ಭಾಷೆಗಳ ಪತ್ರಿಕೆಗಳಂತೆಯೇ ಇಲ್ಲಿಯ ಜನಜೀವನದ ವಿವಿಧ ಮುಖಗಳ ಪ್ರತಿಬಿಂಬವಾಗಿವೆ.
ಮಂಗಳೂರಿನಲ್ಲಿ ೧೮೪೩ ಜುಲೈ ೧ರಂದು ಪ್ರಕಟ ವಾದ ‘ಮಂಗಳೂರು ಸಮಾಚಾರ’ ಎಂಬುದೇ ಪ್ರಥಮ ಕನ್ನಡ ಪತ್ರಿಕೆ. ಕ್ರೈಸ್ತಮತ ಪ್ರಚಾರ ಈ ಪತ್ರಿಕೆಯ ಮುಖ್ಯೋದ್ದೇಶ; ಹರ್ಮನ್ ಮೋಗ್ಲಿಂಗ್ ಇದರ ಸಂಪಾದಕ. ೧೮೬೦ರ ದಶಕದ ಕೊನೆಯ ಸರಿಸುಮಾರಿಗೆ ಕರ್ನಾಟಕದಲ್ಲಿ ಹೊಸ ರೀತಿಯ ಪತ್ರಿಕೋದ್ಯಮ ಚಟುವಟಿಕೆ ಕಾಣಿಸಿಕೊಂಡಿತು. ಪತ್ರಿಕೆಗಳು, ಸಾರ್ವಜನಿಕ ವಿಷಯಗಳ ಬಗ್ಗೆ ಅದರಲ್ಲೂ ವಿಶೇಷವಾಗಿ ರಾಷ್ಟ್ರೀಯ ರಾಜಕೀಯ ಘಟನಾವಳಿಗಳ ಬಗ್ಗೆ ವಿಶ್ಲೇಷಣೆ ಮಾಡುವುದನ್ನು ಆರಂಭಿಸಿದವು. ಕೆಲ ಪತ್ರಿಕೆಗಳು ನಿರ್ಭಯವಾದ ಧೋರಣೆಯಿಂದ ಆಗಿನ ಸರ್ಕಾರದ ರೀತಿ ನೀತಿಗಳನ್ನು ಟೀಕಿಸುತ್ತಿದ್ದರಲ್ಲದೆ ಜನಾಭಿಪ್ರಾಯವನ್ನು ರೂಪಿಸುವಲ್ಲಿ ಪತ್ರಿಕೆಯನ್ನು ಒಂದು ಪ್ರಧಾನ ಮಾಧ್ಯಮವಾಗಿ ಬಳಸಿದರು. ಮೈಸೂರಿನಲ್ಲಿ ಮೈಸೂರೇತರರಿಗೆ ಹೆಚ್ಚಿನ ಉದ್ಯೋಗಾವಕಾಶಗಳಿದ್ದುದನ್ನು ವಿರೋಧಿಸಿ, ಮೈಸೂರಿಗರ ಪರವಾಗಿ ಹೋರಾಟ ನಡೆಸಿದುದಲ್ಲದೆ, ಜನಸಾಮಾನ್ಯರ ಒಳಿತಿಗೆ ಸಂಬಂಧಿಸಿದಂತೆ ನಾನಾ ವಿಚಾರಗಳನ್ನು ಪ್ರಕಟಿಸುತ್ತಿದ್ದು, ಅನೇಕ ಪತ್ರಿಕೆಗಳ ಲೇಖನಗಳು ಆಗ ಪ್ರಭಾವಶಾಲಿಯಾಗಿದ್ದವು. ದೇಶದ ಬೇರೆ ಬೇರೆ ಭಾಗಗಳಲ್ಲಿ ಪ್ರಾರಂಭವಾಗುತ್ತಿದ್ದ ಕಾಲದಲ್ಲೆ ಕರ್ನಾಟಕದಲ್ಲಿ ರಾಷ್ಟ್ರವಾದಿ ರಾಜಕೀಯ ಪತ್ರಿಕೋದ್ಯಮ ಆರಂಭವಾಯಿತೆನ್ನಬಹುದು.
ಹಿತಬೋಧಿನಿ, ವಿದ್ಯಾದಾಯಿನಿ, ಸಾಧ್ವಿ, ಸಂಪದಭ್ಯುದಯ, ಗ್ರಾಮ ಜೀವನ ಮುಂತಾದ ಕನ್ನಡ ಪತ್ರಿಕೆಗಳನ್ನು ವೆಲ್ತ್ ಆಫ್ ಮೈಸೂರು, ಮೈಸೂರ್ ಪೇಟ್ರಿಯೇಟ್, ನೇಚರ್ ಕೇರ್ ಮುಂತಾದ ಇಂಗ್ಲೀಷ್ ಪತ್ರಿಕೆಗಳನ್ನು ನಡೆಸಿದ್ದ ಅತ್ಯಂತ ಮಹತ್ವಾಕಾಂಕ್ಷೆಯ ಪತ್ರಕೋದ್ಯಮಿ ಆಗಿದ್ದ ಎಮ್. ವೆಂಕಟಕೃಷ್ಣಯ್ಯ (೧೮೪೪ - ೧೯೩೩) ನವರು ಪಳಗಿಸಿದ ಇಬ್ಬರು ತರುಣ ಸಹೋದರರೇ ಎಮ್. ಗೋಪಾಲ ಅಯ್ಯಂಗಾರ್ ಮತ್ತು ಎಮ್. ಶ್ರೀನಿವಾಸ ಅಯ್ಯಂಗಾರ್.
ಶ್ರೀ ಎಮ್. ಶ್ರೀನಿವಾಸ ಅಯ್ಯಂಗಾರರು ಒಬ್ಬ ದೊಡ್ಡ ಪತ್ರಿಕೋದ್ಯಮಿ, ಮೈಸೂರಿನ ಒಬ್ಬ ದೊಡ್ಡ ದೇಶಭಕ್ತರಾಗಿದ್ದರು. ಉತ್ತಮ ತತ್ವ ಮತ್ತು ಅತ್ಯುತ್ತಮ ಗುಣಮಟ್ಟದ ಪತ್ರಿಕೋದ್ಯಮಿ. ತಮ್ಮ ಲೇಖನಿಯನ್ನು ಕೌಶಲ್ಯ ಮತ್ತು ಹರಿತವಾಗಿ ಬಳಸಿ, ಉದಾತ್ತ ಸೇವೆಗಾಗಿ ಮೀಸಲಿಟ್ಟವರು. ‘ವಿಕ್ಟೋರಿಯಾ - ಕ್ರಾಸ್’ ಎಂಬ ಪದವಿಯನ್ನು ಹೆಗಲೇರಿಸಿಕೊಂಡವರು. ಒಂದು ದಶಕಕ್ಕೂ ಹೆಚ್ಚು ಕಾಲ ಮೈಸೂರಿನ ಮಣ್ಣಿನ ಮಗನಾಗಿ ಎರಡು ನಿಯ ಕಾಲಿಕೆಗಳನ್ನು ಅಸಾಧಾರಣ ಸ್ವಾತಂತ್ರ್ಯ ಮತ್ತು ದಕ್ಷತೆಯಿಂದ ನಡೆಸಿದ್ದರು. ಇವರು ನಡೆಸುತ್ತಿದ್ದ ಸಾಪ್ತಾಹಿಕ ಪತ್ರಿಕೆ, ‘ಮೈಸೂರ್ ಸ್ಟ್ಯಾಂಡರ್ಡ್’ ಮತ್ತು ಕನ್ನಡದ ಸಾಪ್ತಾಹಿಕ ಪತ್ರಿಕೆ ‘ನಡೆಗನ್ನಡಿ’ (೧೮೯೫ರಲ್ಲಿ) ಆರಂಭವಾದದ್ದು) ಜನಪ್ರಿಯತೆ ಮತ್ತು ಶಕ್ತಿಯಲ್ಲಿ ಇವುಗಳಲ್ಲಿ ಪ್ರತಿಸ್ಫರ್ಧಿಯಾಗುವ ಯಾವ ಪತ್ರಿಕೆಗಳು ಇರಲಿಲ್ಲ.
ಶ್ರೀನಿವಾಸ ಅಯ್ಯಂಗಾರರ ದೇಶಾಭಿಮಾನ, ಭಾಷಾಶುದ್ಧಿ, ಸಾಹಿತ್ಯದ ಗುಣ, ಸುದ್ದಿಯ ಪ್ರಾಶಸ್ತ್ಯ, ವಿಚಾರ ಪೂರ್ಣ ಲೇಖನ, ಕಥೆ, ವ್ಯಂಗ್ಯ ಮುಂತಾದವನ್ನೆಲ್ಲ ಒಳಗೊಂಡು ಹೊರಬರುತ್ತಿದ್ದ ಇವರ ಪತ್ರಿಕೆಗಳು ಅದ್ಭುತವಾದವುಗಳು. ಸುದ್ಧಿಯ ನಿಖರ ನಿರೂಪಣೆ, ವಿಚಾರ ವೈವಿಧ್ಯ, ಜ್ಞಾನ ಪ್ರಸಾರ ಜೊತೆಗೆ ಸಾಹಿತ್ಯ ಪೆಷಣೆ, ಹೇಗೆಂದರೆ ಕನ್ನಡ ನಡೆಗನ್ನಡಿ-ಕನ್ನಡದ ಗದ್ಯಭಾಗವನ್ನು ಪ್ರಕಟಿಸಿ, ಐತಿಹಾಸಿಕ ಪ್ರಜ್ಞೆ ಜನರಲ್ಲಿ ಉಂಟುಮಾಡುವಲ್ಲಿ ಹೆಸರುವಾಸಿಯಾಯಿತು. ಇವರ ಪತ್ರಿಕೆಗಳು ಆಧುನಿಕ ಕಾಲದ ಅಗತ್ಯಕ್ಕೆ ಭಾರತೀಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಿಂತನೆಗಳನ್ನು ಅಳವಡಿಸಲು ಪ್ರಯತ್ನಿಸಿದವು.
ಅಲ್ಲದೆ ಇವರ ಪತ್ರಿಕೆಗಳು ಜನರ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನದಲ್ಲೂ ಪ್ರಮುಖ ಪಾತ್ರವಹಿಸಿವೆ. ಈ ಪತ್ರಿಕೆಗಳು ಸ್ವಾತಂತ್ರ ಚಳುವಳಿಗೆ ತಮ್ಮ ಸಂಪೂರ್ಣ ಬೆಂಬಲ ನೀಡಿದ್ದಲ್ಲದೆ, ಕರ್ನಾಟಕದಲ್ಲಿ ಭಾವನಾತ್ಮಕ ಅಖಂಡತೆಗೆ ಪ್ರೋತ್ಸಾಹ ನೀಡಿತು. ಜೊತೆಗೆ ಪ್ರಗತಿಪರ ಚಿಂತನೆಗಳನ್ನು ಪ್ರಸಾರ ಮಾಡುವಲ್ಲಿ ಇವುಗಳ ಪಾತ್ರ ಬಹುಮುಖ್ಯ.
ದೇಶಿಯ ರಾಜರುಗಳ ಮೇಲೆ ಈಸ್ಟ್ ಇಂಡಿಯಾ ಕಂಪೆನಿ ತನ್ನ ಸಾರ್ವಭೌಮತ್ವವನ್ನು ಸ್ಥಾಪಿಸಿದ ಬಳಿಕ ಪರಮಾಧಿಕಾರವೆಂಬ ಪರಿಭಾಷೆ ಜಾರಿಗೆ ತಂದರು. ಕಾರಣ ಪೂರ್ವಕ ಚಿಂತನೆಯ ಫಲವಾಗಿ ಇದು ಮೂಡಿಬರದೆ, ರಾಜಕೀಯ ಅಗತ್ಯ ಹಾಗೂ ಆಡಳಿತಾತ್ಮಕ ಅನಿವಾರ‍್ಯತೆಯ ಫಲವಾಗಿ ಹುಟ್ಟಿದ್ದುದಾಗಿದೆ.
ನೇರವಾದ ಬ್ರಿಟೀಷ್ ಆಡಳಿತಕ್ಕೆ ಸಂಬಂಧಿಸಿದ ವಲಯಗಳಲ್ಲಿನ ವೃತ್ತ ಪತ್ರಿಕೆಗಳು ಬ್ರಿಟೀಷ್ ಭಾರತೀಯ ಕಾನೂನು ಪದ್ಧತಿಗೆ ಒಳಪಟ್ಟರೆ, ಮೈಸೂರು ಸಂಸ್ಥಾನದಲ್ಲಿ ಮಾತ್ರ ದ್ವಂದ್ವ ಪರಿಶೀಲನೆಯಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಒದಗಿತ್ತು. ರಾಜ್ಯದಲ್ಲಿ ರೂಪುಗೊಂಡಿದ್ದ ನಿಯಮಗಳು ಹಾಗೂ ಈ ರಾಜ್ಯಕ್ಕೆಂದೇ ವಿಶೇಷವಾಗಿ ಸಿದ್ದವಾದ ಹಾಗೂ ಬ್ರಿಟೀಷ್ ಭಾರತೀಯ ನಿಯಮಗಳು ಎರಡೂ ಸೇರಿ ಪತ್ರಿಕಾ ಸ್ವಾತಂತ್ರ್ಯವನ್ನು ಕಡಿತಗೊಳಿಸಿತ್ತು.
ಮೈಸೂರಿನ ಶಾಸನಾತ್ಮಕ ಮಂಡಳಿಯ ಮೊದಲ ಸದಸ್ಯರಾದ ಟಿ. ಆನಂದರಾವ್ ಆಗಸ್ಟ್ ೫, ೧೯೦೮ರಲ್ಲಿ ಸರ್ಕಾರ ಜಾರಿಗೆ ತರುವ ಕಾಯ್ದೆಯ ಉದ್ದೇಶವನ್ನು ಬಹಿರಂಗಗೊಳಿಸಿದರು. ಈ ಹಿಂದೆ ಪತ್ರಿಕೆಗಳು ಸರ್ಕಾರದ ಕಾರ್ಯವನ್ನು ತಪ್ಪು ವರದಿ ಮಾಡುವುದರ ಮೂಲಕ ಗಣನೀಯ ಹಾನಿವುಂಟು ಮಾಡಿದ್ದು, ಅಂತಹ ಪತ್ರಿಕೆಗಳ ಪ್ರಕಟನೆಯನ್ನು ನಿಯಂತ್ರಣಕ್ಕೆ ತರುವುದೇ ಸರ್ಕಾರದ ಉದ್ದೇಶವೆಂದರು.
ಈ ೧೯೦೮ ಕಾಯ್ದೆ ಅಪರಾಧವನ್ನು ಶಿಕ್ಷಾತ್ಮಕ ನಿಟ್ಟಿನಲ್ಲಿ ಬಿಟ್ಟು, ನಿವಾರಣೆ ನಿಟ್ಟಿಗೆ ವ್ಯಾಖ್ಯಾನ ನೀಡಿದಂತಿದೆ. ಮೈಸೂರಿನ ಪತ್ರಿನಿಧಿ ಸಭೆಯಲ್ಲಿ ಜಮೀನ್ದಾರಿ ಕುಲೀನರನ್ನು ಪ್ರತಿನಿಧಿಸುವ ಗ್ರಾಮೀಣ ಮೈಸೂರಿನ ಅನೇಕ ಸದಸ್ಯರು ಮಹಾರಾಜ ಮತ್ತು ದಿವಾನರನ್ನು ಅನುಮೋದಿಸುತ್ತಿದ್ದರು. ಸಾಮಾನ್ಯ ರೈತರಿಗೂ ಈ ವಿಷಯದಲ್ಲಿ ದೂರು ಇರಲಿಲ್ಲ. ಇದಕ್ಕೆ ವಿರುದ್ಧವಾಗಿ ನಗರ ಪ್ರದೇಶಗಳಾದ ಬೆಂಗಳೂರು, ಶಿವಮೊಗ್ಗ, ಮೈಸೂರಿನ ಸದಸ್ಯರುಗಳು, ಕಾನೂನು ವೃತ್ತಿಯಲ್ಲಿದ್ದವರು, ವಿಚಾರಣೆಯಲ್ಲಿ, ನ್ಯಾಯ ನೀಡುವಲ್ಲಿ ಸ್ವಾಭಾವಿಕ ಅಪಾಯಗಳು ಎದುರಾಗಬಹುದೆಂದರು. ಬೆಂಗಳೂರಿನ ಸುಬ್ಬಣ್ಣ, ಶಿವಮೊಗ್ಗದ ಸೀತಾರಾಮಯ್ಯ, ಕೋಲಾರದ ಭೀಮ್‌ರಾವ್ ಮುಂತಾದ ವಕೀಲರು ಈ ಕಾಯ್ದೆಯನ್ನು ಹಿಂತೆಗೆದುಕೊಳ್ಳುವಂತೆ ಕೇಳಿದರು. ಆದರೆ ಇವರ ಸಂಖ್ಯೆ ಕಡಿಮೆ ಇದ್ದಿತ್ತು. ಹಾಗಾಗಿ ಈ ಕಠೋರವಾದ ಡ್ರಾಕೋನಿಯನ್ ಕಾಯ್ದೆ ೧೧ನೇ ಅಕ್ಟೋಬರ್ ೧೯೦೮ರಲ್ಲಿ ಜಾರಿಗೆ ಬಂದಿತು. ಹಾಗಾಗಿ ಮೈಸೂರು ಪ್ರತಿನಿಧಿ ಸಭೆಯ ಚರಿತ್ರೆಯಲ್ಲಿ ಈ ದಿನ ಕರಾಳದಿನವಾಗಿ ಮಾರ್ಪಟ್ಟಿತ್ತು. ಈ ಕಾಯ್ದೆಯ ಸ್ವರೂಪ ನೋಡಿದಲ್ಲಿ ಕೇವಲ ಮುನ್ನೆಚ್ಚರಿಕೆಯ ಸ್ವರೂಪ ಹೊಂದಿದ್ದು, ಸ್ವತಂತ್ರ ಪತ್ರಿಕೋದ್ಯಮ ಬೆಳವಣಿಗೆಯನ್ನು ಅವಸರದಲ್ಲಿ ಮೊಟಕುಗೊಳಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ ಎನ್ನಬಹುದು.
ಅಧಿಕೃತವಾದ ಚರ್ಚೆ ಮತ್ತು ಚಿಂತನೆಯ ಮೂಲಕ ಈ ಬಗೆಯ ದೋಷಪೂರಿತ ಪತ್ರಿಕಾ ಕಾನೂನುಗಳು ಅನುಷ್ಠಾನಕ್ಕೆ ತಂದ ಉದ್ದೇಶವೆಂದರೆ ಮೈಸೂರು ಪತ್ರಿಕೆಗಳು ಪರಮಾಧಿಕಾರಕ್ಕೆ ಅವಿಧೇಯ ರೀತಿಯಲ್ಲಿ ಬರೆಯ ತೊಡಗಿದ್ದು, ಪರಮಾಧಿಕಾರದ ಒತ್ತಡದಿಂದಾಗಿಯೇ ಈ ಕಾನೂನನ್ನು ಜಾರಿಗೊಳಿಸಲಾಗಿತ್ತು.
‘ಭಾರತಿ’, ‘ದಿ ಮೈಸೂರು ಹೆರಾಲ್ಡ್’, ‘ವೃತ್ತಾಂತ ಚಿಂತಾಮಣಿ’, ‘ಮೈಸೂರು ಸ್ಟಾಂಡರ್ಡ್’, ‘ನಡೆಗನ್ನಡಿ’ ಮುಂತಾದ ಅನೇಕ ಪತ್ರಿಕೆಗಳು ಈ ಕಾನೂನನ್ನು ಪ್ರತಿಭಟಿಸಿದವು. ಅದರಲ್ಲೂ ಶ್ರೀನಿವಾಸ ಅಯ್ಯಂಗಾರರ ‘ನಡೆಗನ್ನಡಿ’ ಇದರ ಮೂಲಕ ಪತ್ರಿಕೋದ್ಯಮವನ್ನು ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡು ಇವರು ನಡೆಸತೊಡಗಿದ ಪತ್ರಿಕೆ ಜನಹಿತ ಪ್ರತಿಪಾದನೆ ಮಾಡಿದ ತಪ್ಪಿಗಾಗಿ ಸರ್ಕಾರದ ಆಗ್ರಹಕ್ಕೆ ತುತ್ತಾಯಿತು. ೧೯೦೮ರ ಈ ಕಾಯ್ದೆಯಿಂದಾಗಿ ಪತ್ರಿಕೆಗಳಿಗೆ ಈ ಹಿಂದೆ ಇದ್ದ ಅಷ್ಟಿಷ್ಟು ಸ್ವಾತಂತ್ರ್ಯವೂ ಇಲ್ಲವಾಯಿತು. ಈ ಕಾಲದಲ್ಲಿ ಆರಂಭವಾದ ಅನೇಕ ಪತ್ರಿಕೆಗಳು ಪ್ರೋತ್ಸಾಹದ ಅಭಾವದಿಂದಲೂ, ಕಾಯ್ದೆಯ ಫಲವಾಗಿಯೂ ಬಾಲಾರಿಷ್ಟಕ್ಕೆ ತುತ್ತಾದವು.
ಈ ಕಾಯ್ದೆಯ ಮೊದಲ ಬಲಿಪಶುವಾದವರು ಚನ್ನಪಟ್ಟಣದ ಸುಭಾಶಿನಿ ಪತ್ರಿಕೆಯ ಎಸ್.ಎಸ್. ಶರ್ಮನ್ ಎಂಬುವರು. ನಡೆಗನ್ನಡಿಯ ಎಮ್. ಶ್ರೀನಿವಾಸ್ ಅಯ್ಯಂಗಾರ್ ಗಡಿಪಾರಾದ ಮತ್ತೋರ್ವ ಬಲಿಪಶು. ಮಹಾರಾಜರ ಹಾಜರಿಯಲ್ಲಿ ಜನರು ರಾಷ್ಟ್ರೀಯ ರಾಜಕೀಯದತ್ತ ಚಿಂತನೆ ನಡೆಸುವುದಕ್ಕೆ ಪ್ರೋತ್ಸಾಹ ದೊರಕಲಿಲ್ಲ. ಈ ಕಾಯ್ದೆ ಜಾರಿ ಬಂದ ನಂತರ ೨೯/೮/೧೯೦೮ ರಂದು ತಮ್ಮ ಪತ್ರಿಕೆಯಲ್ಲಿ ಈ ರೀತಿ ಹೇಳಿಕೆಕೊಟ್ಟರು “ಹೊಸ ವೃತ್ತ ಪತ್ರಿಕಾ ಶಾಸನ ಆಚರಣೆಗೆ ಬಂತು. ಮೈಸೂರು ದೇಶದಲ್ಲಿ ಪ್ರಾಮಾಣಿಕತೆಯಿಂದ, ಆತ್ಮಗೌರವದಿಂದ ಪತ್ರಿಕೆಗಳನ್ನು ಇನ್ನು ಮುಂದುವರೆಸುವುದು ಸಾಧ್ಯವಿಲ್ಲ. ಪತ್ರಿಕೆಗಳು ಸುಖಜೀವನ ನಡೆಸಬೇಕಾದರೆ ರಾಜಕೀಯ ವಿಚಾರಗಳ ಚರ್ಚೆಯ ಗೋಜಿಗೆ ಹೋಗಬಾರದು, ಇಲ್ಲವೇ ಸರ್ಕಾರದ ಅಧಿಕಾರಿಗಳ ಮುಖಸ್ತೋತ್ರ ಮಾಡುತ್ತಿರಬೇಕು. ಈಗಿನ ಪರಿಸ್ಥಿತಿಯಲ್ಲಿ ಪತ್ರಿಕೆಗಳ ಮೂಲಕ ಜನರಿಗೆ ರಾಜಕೀಯ ವಿಚಾರಗಳಲ್ಲಿ ಶಿಕ್ಷಣವಾಗಬೇಕು ಇದೇ ಮುಖ್ಯವಾದ ಸಾಧನ. ರಾಜಕೀಯ ವಿಚಾರಗಳ ಚರ್ಚೆ ಮಾಡದ ಪತ್ರಿಕೆಯಿಂದೇನೂ ಪ್ರಯೋಜನವಿಲ್ಲ. ದೀರ್ಘ ಕಾಲದಿಂದ ನಡೆದು ಬರುತ್ತಿರುವ ಹೆರಾಲ್ಡ್ ಮತ್ತು ಚಿಂತಾಮಣಿ ಪತ್ರಿಕೆಗಳನ್ನು ನಿಲ್ಲಿಸಬೇಕಾದ ಅವಶ್ಯಕತೆ ಕಂಡುಬಂದಾಗ ‘ನಡೆಗನ್ನಡಿ’ ಮುಂದುವರೆಸಿದ ಸಾಹಸ ಮಾಡುವುದಿಲ್ಲ.”
ಇದು ಏನೇ ಇದ್ದಾಗ್ಯು ಶ್ರೀನಿವಾಸ ಅಯ್ಯಂಗಾರ್‌ರು ಸದಾ ಸಾರ್ವಜನಿಕ ಹಿತಾಸಕ್ತಿಯ ಜಾಗರೂಕತನದ ಮತ್ತು ದಿಟ್ಟತನದ ಸರ್ವ ಶ್ರೇಷ್ಠ ವ್ಯಕ್ತಿ, ಅಧಿಕಾರಗಳ ಪ್ರೇರಣೆಗೆ ಒಳಗಾದವರಲ್ಲ. ಸ್ವಾತಂತ್ರ್ಯದ ಪ್ರೀತಿಯನ್ನು ಪತ್ರಿಕೆಯನ್ನು ರದ್ದುಗೊಳಿಸುವುದರ ಮೂಲಕ ತೋರಿಸಿದರು. ತಮಗೆ ತಾವೇ ಆತ್ಮಬಲಿ ಮಾಡಿಕೊಂಡಿದ್ದು ಇವರ ಪತ್ರಿಕೆಗಳು. ಆನಂತರ ಲಾಹೋರಿಗೆ ಪಯಣಿಸಿ ಅಲ್ಲಿನ ಟ್ರಿಬ್ಯುನಲ್ ಪತ್ರಿಕೆಯ ಕಛೇರಿಯಲ್ಲಿ ಆಶ್ರಯ ಪಡೆದರು. ಇವರಿಗೆ ಪಂಜಾಬ್ ಮತ್ತು ಅಲ್ಲಿನ ಜನ, ಸಂಪ್ರದಾಯ ಬಹಳ ಮೆಚ್ಚುಗೆ. ಇವರ ಧೃಡ ನಿಲವು ಮೆಚ್ಚುವಂತಹುದು. ಟ್ರಿಬ್ಯುನಲ್ ಪತ್ರಿಕೆಗೂ, ಅದರ ಮುಖ್ಯಸ್ಥ ಕಾಳಿನಾಥರಾಯ್‌ರಿಗೂ ಇವರು ವಿಧೇಯತೆ, ಉತ್ಸಾಹ, ಸ್ಥಿಮಿತತೆಯ (ಸೊಬಿರಿಟಿ) ಮೌಲ್ಯ ನೀಡಿದರು.
ಇವರು ಒಬ್ಬ ಉತ್ತಮ, ಉನ್ನತ ರಾಜಕೀಯ ಪತ್ರಿಕೋದ್ಯಮಿ, ಅಲ್ಲದೆ ಸಾಮಾಜಿಕ ಸುಧಾರಕರು ಆಗಿದ್ದರು.  ಜಾನ್ ಸ್ಟಾರ್ಟ್ ಮಿಲ್ ರ ವಿದ್ಯಾರ್ಥಿ. ಮಿಲ್‌ರ “ಎಸ್‌ಎ ಆನ್ ಲಿಬರ್ಟಿ” ಮೇಲೆ ಸಂಪಾದಕೀಯ ಮಾಡಿದ್ದರು. ನಮ್ಮ ದೇಶದ ಸಾಮಾಜಿಕ ಮತ್ತು ರಾಷ್ಟ್ರೀಯ ಸಮಸ್ಯೆಗಳಿಗೆ ವೈಚಾರಿಕತೆಯ ಉಪಯೋಗ ತಿಳಿಸಿದರು. ಪ್ರತಿಕೋದ್ಯಮ ಕೇವಲ ಜೀವನ ನಿರ್ವಹಣೆ ಮಾತ್ರವಲ್ಲ ಅದು ಅವರ ಪ್ರತಿಜ್ಞೆ ಮತ್ತು ಜೀವಿತದ ಧ್ಯೇಯವಾಗಿತ್ತು. ಇವರು ಸಾರ್ವಜನಿಕ ವಾಗ್ಮಿಯಲ್ಲ. ಎಲೆಮರೆ ಕಾಯಿಯಂತೆ ಪ್ರಭಾವ ಬೀರಿ, ಸ್ನೇಹಿತರೊಂದಿಗೆ ಬಹಳ ವಿಶ್ವಾಸ ಹೊಂದಿದ್ದರು. ಯುವ ಉತ್ಕಾಂಕ್ಷಿಗಳಿಗೆ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡುತ್ತಿದ್ದರು. ಔದಾರ್ಯ, ವಿನಯಶೀಲತೆಗೂ ಹೆಸರುವಾಸಿ.
ಪ್ರಾಮಾಣಿಕ ನಿಷ್ಠೆಯಿಂದ ನಿರ್ಭಿತ ಸಂಪಾದಕರಾಗಿ ನಿರ್ಭೀತ ಪತ್ರಿಕೆಗೆ ಸೇವೆ ಸಲ್ಲಿಸಿದ್ದರು. ಪತ್ರಿಕೆಗಳನ್ನು ದಕ್ಷ ಮತ್ತು ಸಮರ್ಥ ರೀತಿಯಲ್ಲಿ ಕೊಂಡೊಯ್ದರು. ಒಬ್ಬ ಸುಸಂಸ್ಕೃತ ವ್ಯಕ್ತಿಯಾದ ಇವರು ಸದಾ ಮೈಸೂರಿನ ಅಭಿವೃದ್ದಿ ಮತ್ತು ಪ್ರಗತಿಗಾಗಿ ಹಾತೊರೆಯುತ್ತಿದ್ದರು. ಅನೇಕ ಪ್ರಲೋಭನೆಗಳಿದ್ದಾಗ್ಯೂ, ಇವರು ಪತ್ರಿಕೋದ್ಯಮವನ್ನು ದುರುಪಯೋಗ ಮಾಡಲಿಲ್ಲ. ಲಾಹೋರ್‌ಗೆ ಗಡಿಪಾರಾಗಿ, ಪತ್ರಿಕಾ ವೃತ್ತಿ ಸ್ವಾತಂತ್ರ್ಯ ನಿರ್ಭೀತ ಜೀವನ ನಡೆಸಲು ಹಿತಕರವಾದ ವಾತಾವರಣ ಕಂಡುಕೊಂಡ ಅತ್ಯಂತ ಹೆಸರುವಾಸಿಯಾದ ಪತ್ರಿಕೋದ್ಯಮಿ ಆದರು ಶ್ರೀನಿವಾಸ ಅಯ್ಯಂಗಾರರು.

ಆಧಾರಸ್ರಚಿ
Dr. S. U. Kamat, ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು’¸’ Mysore
 ‘ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು’ ಒಥಿsoಡಿe ಉeeಣhಚಿ ಊouse, ೧೯೮೦.
Mysore Residency - 1891, file No. 269, Karnataka State Archives, Bangalore.

3.    K.R. Iqbal Ahmad, ‘Glimses of Journalism’ ¦¦æAiÀÄzÀ²ð¤ ¸Á»vÀå ¥ÀæPÁ±À£À, , 1992
ಸಾಹಿತ್ಯ ಪ್ರಕಾಶನ, , ೧೯೯೨
೪.      ೧೮-೬-೧೯೦೪, ನಡೆಗನ್ನಡಿ.
೫.      ೨೨-೯-೧೮೯೦, ಕರ್ನಾಟಕ ಪ್ರಕಾಶಿಕ, ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ದಾಖಲೆಗಳು.
೬.      ಕರ್ನಾಟಕ, ಕನ್ನಡ ವಿಷಯ ವಿಶ್ವಕೋಶ ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ೧೯೭೯.

ಲ ಇತಿಹಾಸ ವಿಭಾಗ, ವಿ.ವಿ.ಎನ್. ಕಾಲೇಜು, ಬಸವನಗುಡಿ, ಬೆಂಗಳೂರು-೫೬೦೦೦೪.





No comments:

Post a Comment