Sunday, August 25, 2013

ವೀರ ಸೋಮೇಶ್ವರ ದೇವಾಲಯ- ಡಾ.ಬಾಲಕೃಷ್ಣ ಹೆಗಡೆ

  

ಡಾ.ಬಾಲಕೃಷ್ಣ ಹೆಗಡೆ





ಗುರುಪುರ (ಪುರಲೆ) ವೀರಸೋಮೇಶ್ವರ ದೇವಾಲಯ-ಒಂದು ಟಿಪ್ಪಣಿ
                                             
     ಶಿವಮೊಗ್ಗ ಕರ್ನಾಟಕದಲ್ಲಿ ಪ್ರಾಚೀನ ದೇವಾಲಯಗಳ ಶ್ರೀಮಂತಿಕೆಯನ್ನು ಹೊಂದಿದ ಪ್ರಮುಖ ಪ್ರದೇಶಗಳಲ್ಲೊಂದು. ಈ ಪ್ರದೇಶವು ಸುಮಾರು ಚಾಲುಕ್ಯ ಕಾಲದಿಂದಲೂ ಬೇರೆ ಬೇರೆ ರಾಜ ಸಂತತಿಗಳ ಆಳ್ವಿಕೆಗಳ ವಿವಿಧ ವಾಸ್ತು ಶೈಲಿಗಳನ್ನೊಳಗೊಂಡ ಅನೇಕ ದೇವಾಲಯಗಳನ್ನು ಹೊಂದಿದ ಪ್ರದೇಶವಾಗಿದೆ. ಕೆಲ ದೇವಾಲಯಗಳು ಸ್ವತ: ಆಳರಸರಿಂದಲೇ ನಿರ್ಮಿತವಾಗಿದ್ದರೆ ಇನ್ನು ಕೆಲವು ಅವರ ಸಾಮಂತರ, ಮಾಂಡಲೀಕರ, ಅಂದಿನ ಕಾಲದ ವರ್ತಕರ ಮತ್ತು ವ್ಯಕ್ತಿಗತವಾಗಿ ಧರ್ಮದ ಬಗ್ಗೆ ಶ್ರದ್ಧಾ-ಭಕ್ತಿಯುಳ್ಳವರಿಂದ ನಿರ್ಮಿತ ದೇವಾಲಯಗಳು ಈ ಪ್ರದೇಶದಲ್ಲಿವೆ. ಇವುಗಳಲ್ಲಿ ಹೆಚ್ಚಿನವು ಜೈನ, ಶೈವ, ವೀರಶೈವ ಹಾಗೂ ಅಪರೂಪಕ್ಕೆ ಶಾಕ್ತ ದೇವಾಲಯಗಳು ಕಂಡುಬರುತ್ತವೆ.
     ಬಹುತೇಕ ಜೈನ ಬಸದಿಗಳು, ವೈಷ್ಣವ ದೇವಾಲಯಗಳು ಕಾಲಾನಂತರದಲ್ಲಿ ಅಂದಿನ ಪ್ರಸಿದ್ಧ ಅರಸರು, ಅವರ ಅಧಿಕಾರಿಗಳ ಪ್ರಭಾವಗಳಿಂದ ಶೈವ ದೇವಾಲಯಗಳಾಗಿ ಮಾರ್ಪಟ್ಟಿದ್ದನ್ನೂ ಇಲ್ಲಿ ಕಾಣುತ್ತೇವೆ. ಇಂಥಹ ದೇವಾಲಯಗಳ ವಾಸ್ತು ಶೈಲಿಯನ್ನು, ಅಲ್ಲಿ ಕಂಡುಬರುವ ವಾಸ್ತು ಲಕ್ಷಣಗಳನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸಿದಾಗ ಮಾತ್ರ  ಆ ದೇವಾಲಯಗಳ ಮೂಲಗಳ ಕುರಿತು ಮಾಹಿತಿ ದೊರಕುತ್ತದೆ.
     ವಾಸ್ತು ವಿನ್ಯಾಸದ ಪ್ರಕಾರ, ದೇವಾಲಯಗಳ ತಲವಿನ್ಯಾಸ, ಸಾಮಾನ್ಯವಾಗಿ ಎಲಿವೇಶನಲ್ ಸಂಗತಿಗಳು, ಬೇರೆ ಬೇರೆ ಪಂಥಗಳಿಗೆ ಸಂಬಂಧಿಸಿದ ದೇವಾಲಯಗಳು, ಬೇರೆ ಬೇರೆ ಕಾಲಘಟ್ಟಕ್ಕೆ ಸೇರಿದವುಗಳು ಹೆಚ್ಚು ಕಡಿಮೆ ಒಂದೇ ತೆರನಾಗಿ ಕಂಡುಬರುತ್ತವೆ. ಮಾರ್ಪಾಡುಗೊಂಡ ದೇವಾಲಯಗಳ ಭಿತ್ತಿಗಳ ಮೇಲಿರುವ ಕೇವಲ ಶಿಲ್ಪಗಳ ಅಭಿವ್ಯಕ್ತಿ, ದ್ವಾರಪಾಲಕರ ಕೆತ್ತನೆಗಳು, ಲಲಾಟಬಿಂಬಗಳಲ್ಲಿನ ಚಿಕಣಿ ಶಿಲ್ಪಗಳುಮೊದಲಾದವು ಆ ದೇವಾಲಯ ಮೂಲತ: ಯಾವ ಪಂಥಕ್ಕೆ ಅಥವಾ ಧರ್ಮಕ್ಕೆ ಸೇರಿದ್ದು ಎಂಬುದನ್ನು ತಿಳಿಸುವುದೂ ವಿಶೇಷವಾಗಿದೆ.
     ಶಿವಮೊಗ್ಗ ಪ್ರದೇಶದಲ್ಲಿ ಅಂಥ ಲಕ್ಷಣಗಳನ್ನು ಹೊಂದಿದ ಕೆಲ ಜೈನ ಬಸದಿಗಳಿವೆ. ವಾಸ್ತು ಶೈಲಿಯ ಪ್ರಕಾರ ಅವು ತಮ್ಮದೇ ಆದ ಕೆಲ ವೈಶಿಷ್ಟ್ಯತೆಗಳನ್ನು ಹೊಂದಿವೆ.  ಒಂದು ಕಾಲದಲ್ಲಿ ದೇವಾಲಯ ವಾಸ್ತು ಶೈಲಿಯ ಬೆಳವಣಿಗೆಗೆ ಈ ಜೈನ ದೇವಾಲಯಗಳು ಮಹತ್ತರ ಕೊಡುಗೆ ನೀಡಿದ್ದೂ ಕಂಡುಬರುತ್ತದೆ. ಅಂಥಹ ದೇವಾಲಯಗಳಲ್ಲಿ ಶಿವಮೊಗ್ಗ ಗುರುಪುರ (ಪುರಲೆ)ದಲ್ಲಿರುವ ಶ್ರೀ ವೀರಸೋಮೇಶ್ವರ ದೇವಾಲಯ ಒಂದು.
     ಈ ದೇವಾಲಯದ ವಾಸ್ತು ಶೈಲಿ, ಅದರಲ್ಲಿನ ಮೂಲ ಕೆತ್ತನೆ ಇತ್ಯಾದಿಗಳನ್ನು ಅವಲೋಕಿಸಿದಾಗ ಮೂಲತ: ಇದೊಂದು ಜೈನ ಬಸದಿಯಾದ್ದು ಹೊಯ್ಸಳ ಕಾಲಕ್ಕೆ ಸೇರಿದ್ದಾಗಿರುವುದಾಗಿ ತಿಳಿದು ಬರುತ್ತದೆ. ದೇವಾಲಯದ ಗರ್ಭಗೃಹದಲ್ಲಿರುವ ಕಪ್ಪು ಶಿಲೆಯ ಉದ್ದನೆ ಪಾಣಿ ಪೀಠದ ಆಕಾರ ಬಹುಷ: ಅದು ಜೈನ ವಿಗ್ರಹವನ್ನು ಪ್ರತಿಷ್ಠಾಪಿಸಲು ಮಾಡಿದ್ದಿರಬಹುದೆಂದು ಕಂಡುಬರುತ್ತದೆ. ಸಾಮಾನ್ಯವಾಗಿ ಇಂಥ ಪೀಠಗಳು ಶಿವಲಿಂಗ ಸ್ಥಾಪಿಸಲು ಬಳಸಲಾಗುವುದಿಲ್ಲ ಎಂಬ ಪ್ರತೀತಿ ಇದೆ. ಈ ಪೀಠದ ಈ ಪೀಠದ ಮೇಲೆ ಹತ್ತು ಸಾಲಿನ ಶಾಸನವಿದ್ದು ಕ್ರಿ.ಶ.೧೧-೧೨ನೇ ಶತಮಾನದ ಹಳೆಗನ್ನಡ ಭಾಷೆಯಲ್ಲಿದೆ.
     ಈ ಶಾಸನದಲ್ಲಿ ವೀರ ಬಲ್ಲಾಳ, ನೀಮಿಚಂದ್ರ ಭಟ್ಟಾರಕ ದೇವರಿಗೆ, ನಾಲು ಪ್ರಭು ಇತ್ಯಾದಿ ಶಬ್ದಗಳು ಗಮನ ಸೆಳೆಯುತ್ತವೆ. ಹೊಯ್ಸಳ ಅರಸು ತ್ರಿಭುವನಮಲ್ಲ ಎಂಬ ಬಿರುದನ್ನು ಹೊಂದಿದ ವೀರ ಬಲ್ಲಾಳ ಜೈನ ದೇವಾಲಯಗಳಿಗೆ ಹೆಚ್ಚಿನ ದಾನ ನೀಡಿದ್ದನ್ನು ಉಲ್ಲೇಖಿಸಬಹುದು. ಈತ ಕೇವಲ ತನ್ನ ರಾಜಧಾನಿಯಲ್ಲಷ್ಟೇ ಅಲ್ಲ ರಾಜಧಾನಿಯ ಹೊರಗೂ ಅನೇಕ ಜೈನ ದೇವಾಲಯಗಳನ್ನು ನಿರ್ಮಿಸಿದ್ದ.
     ಈ ದೇವಾಲಯದ ಇನ್ನೊಂದು ವೈಶಿಷ್ಟ್ಯವೆಂದರೆ ದೇವಾಲಯದ ಅಧಿಷ್ಠನದಲ್ಲಿ ಹೊಯ್ಸಳ ವಾಸ್ತು ಶೈಲಿಯಲ್ಲಿ ಕಂಡುಬರುವ ಭದ್ರ ಕರಣಗಳು ಕಂಡುಬರುತ್ತವೆ. ದೇವಾಲಯ ಚೌಕಾಕಾರದ ಗರ್ಭಗೃಹ ಹೊಂದಿದ್ದು ಚೌಕಾಕರದ ಅಂತರಾಳವನ್ನೂ ಹೊಂದಿದೆ. ಮೊದಲು ದೇವಾಲಯಕ್ಕೆ ಮುಖ ಮಂಟಪವಿತ್ತು. ಆದರೆ ಈಗ ಅದು ಇಲ್ಲ. ಮುಖಮಂಟಪದ ಕಂಬ ಇತ್ಯಾದಿಗಳನ್ನು ಶಿವಮೊಗ್ಗ ಕೋಟೆ ಆಚಿಜನೇಯ ದೇವಸ್ಥಾನಕ್ಕೆ ಸ್ಥಳಾಂತರಿಸಿ ಅಲ್ಲಿ ಮುಖ ಮಂಟಪ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ.
     ಅಲ್ಲಿನ ತಿರುಗುಣಿ ಸ್ಥಂಭವೊಂದರ ಪೀಠದಲ್ಲಿರುವ ಶಾಸನವನ್ನು ಡಾ.ಎಚ್.ಆರ್.ರಘುನಾಥ ಭಟ್ಟ ಅವರು ಓದಿದ್ದು ಅದು ಹೊಯ್ಸಳ ಕಾಲಕ್ಕೆ ಸೇರಿದ್ದೆಂದೂ ಜೈನ ಧರ್ಮದ ಬಗ್ಗೆ ಮಾಹಿತಿ ಇದೆ ಎಂದೂ ತಮ್ಮ ವರದಿಯಲ್ಲಿ ಪ್ರಕಟಿಸಿದ್ದಾರೆ. ಕೆಳದಿ ಅರಸರು ಶೈವ ಧರ್ಮಾವಲಂಬಿಗಳಾಗಿದ್ದು  ಪುರಲೆಯಲ್ಲಿದ್ದ ಈ ತಿರುಗುಣಿ (ಐಚಿಣheಜ) ಕಂಬಗಳನ್ನು ಕೋಟೆ ಆಂಜನೇಯ ದೇವಸ್ಥಾನದಲ್ಲಿ ತಂದಿರಿಸಿದ್ದಿರಬಹುದೆಂದು ನಂಬಲಾಗಿದೆ.
     ಪುರಲೆ ದೇವಾಲಯದ ಈಗಿನ ಅಂತರಾಳದ ಲಲಾಟಬಿಂಬದಲ್ಲಿನ ಚಿತ್ರಗಳು ಜೈನದಿಂದ ಶೈವಕ್ಕೆ ಮಾರ್ಪಾಟು ಹೊಂದಿದ್ದನ್ನು ಕಾಣುತ್ತೇವೆ. ಕುಳಿತ ಭಂಗಿಯಲ್ಲಿನ ಜೈನ ತೀರ್ಥಂಕರ ವಿಗ್ರಹವನ್ನು ಪರಿವರ್ತಿಸಿ ನಾಗ ಲಿಂಗ ಶಿಲ್ಪವನ್ನಾಗಿಸಿದ್ದಾರೆ. ಗರ್ಭಗೃಹದ ಪಾಣಿ ಪೀಠದಲ್ಲಿ ಶಿವ ಲಿಂಗ ಪ್ರತಿಷ್ಠಾಪಿಸಲಾಗಿದೆ. ಕೋಟೆ ಶ್ರೀ ಆಂಜನೇಯ ದೇವಾಲಯದ ಗರ್ಭಗೃಹದ ಲಲಾಟಬಿಂಬದಲ್ಲೂ ಜೈನ ತೀರ್ಥಂಕರ ವಿಗ್ರಹದ ಜಾಗದಲ್ಲಿ ಶಿವ ಲಿಂಗ ಕಾಣುತ್ತೇವೆ.
     ವೀರ ಸೋಮೇಶ್ವರ ದೇವಾಲಯದ ಹಿಂಭಾಗದಲ್ಲಿ ನಿಂತ ಭಂಗಿಯಲ್ಲಿರುವ ಸಾಬೂನು ಶಿಲೆಯ ಮೂರು ಭಗ್ನ ಜೈನ ವಿಗ್ರಹಗಳಿವೆ. ಇವು ಹೊಯ್ಸಳ ಶಿಲ್ಪಕಾರರಿಂದ ಕೆತ್ತಲ್ಪಟ್ಟಿವೆ. ದೇವಾಲಯದ ಮುಂಭಾಗದಲ್ಲಿ ಕಪ್ಪು ಶಿಲೆಯ ಪಾರ್ಶ್ವನಾಥ ವಿಗ್ರಹವೊಂದಿದೆ.  ಕಾಲ ಕಾಲದಲ್ಲಿ ಈ ದೇವಾಲಯ ನಿರ್ಮಾಣದಲ್ಲಿ ಬದಲಾವಣೆಯಾಗಿದ್ದನ್ನೂ ಕಾಣುತ್ತೇವೆ.
ಹೊಸ ಶಾಸನ ಶೋಧ :

     ಈ ದೇವಾಲಯಕ್ಕೆ ಸಂಬಂಧಿಸಿದ ಪ್ರಮುಖ ವಿಷಯವೆಂದೆ ನನ್ನ ಕ್ಷೇತ್ರ ಕಾರ್ಯದಲ್ಲಿ ಪತ್ತೆ ಮಾಡಿದ ಜಾಲಂದ್ರ ಶಾಸನ. ದೇವಾಲಯದ ಅಂತರಾಳದ ಬಲ ಭಾಗದ ಕಿಟಕಿಯ ಮೇಲ್ಗಡೆ ಇರುವ  ಮೂರು ಸಾಲಿನ, ಒಂದು ಅಡಿ ಉದ್ದದ ಚಿಕ್ಕ ಶಾಸನ ಇದು.  ಅಂತರಾಳದ ಎಡ ಭಾಗದಲ್ಲೂ ಒಂದು ಶಾಸನವಿದ್ದು ಸಂಪೂರ್ಣ ತ್ರುಟಿತಗೊಂಡಿದೆ. ಬಲ ಭಾಗದಲ್ಲಿರುವ ಜಾಲಂದ್ರದಲ್ಲಿರುವ ಶಾಸನದ ಪಾಠ ಇಂತಿದೆ:
೧.     ...ರರಚ್ಚರಮಿಳಕಳತ ಪ್ರವೀಣ.ಕೆಗೆ..ನಾದ
೨.     ರ‍್ವಸಳ.ಗ್ರ ವರ.ತ್ಯಾ ಸತ್ಯವಾದಿನ..ಪ್ರ
೩.     ದೆ
ಇಲ್ಲಿ ಉದ್ಭವಿಸಿರುವ ಪ್ರಶ್ನೆಗಳು:
೧.     ಈ ದೇವಾಲಯ ಹೊಯ್ಸಳ ತ್ರಿಕೂಟಾಚಲ ದೇವಾಲಯವಾಗಿತ್ತೆ?
೨.     ಈ ದೇವಾಲಯದ ಮುಂಭಾಗದಲ್ಲಿ ತೆರೆದ ಅಂಗಳದಲ್ಲಿರಿಸಲಾಗಿರುವ ಕಪ್ಪು ಶಿಲೆಯ ಏಳು ಹೆಡೆ ಸರ್ಪ ಹೊಂದಿರುವ ಸುಪಾರ್ಶ್ವನಾಥ? ವಿಗ್ರಹ ದೇವಾಲಯದ ಗರ್ಭಗೃಹದಲ್ಲಿರುವ ಕಪ್ಪು ಶಿಲಿಯ ಪಾಣಿ ಪೀಠದಲ್ಲಿ ಪ್ರತಿಷ್ಠಾಪಿಸಲಾಗಿತ್ತೆ?
೩.     ಶಾಸನದಲ್ಲಿ ಉಕ್ತವಾಗಿರುವ ಪ್ರವೀಣ ಎಂಬ ಪದ ಶಿಲ್ಪಿಯದೆ?ಅಥವಾ ದೇವಾಲಯದ ವಾಸ್ತು ಶಿಲ್ಪಕಾರನದ್ದಾಗಿರಬಹುದೆ? ಕೊನೆಯದಾಗಿ
೪.     ಶಾಸನದ ಕೊನೆಯ ಪದ ನಾದ ಪದ ಯಾವುದಾದರೂ ಗಣಗಳಾಗಿದ್ದಿರಬಹುದೆ? ಇತ್ಯಾದಿ.
     ಒಟ್ಟಿನಲ್ಲಿ ಈ ದೇವಾಲಯದ ಸಮಗ್ರ ಮಾಹಿತಿಯನ್ನು ಅರಿಯಲು ಇದಕ್ಕೆ ಸಂಬಂಧಿಸಿದಂತೆ ಇನ್ನ ಷ್ಟು ಹೆಚ್ಚಿನ ಅಧ್ಯಯನ ಆಗಬೇಕಿದೆ. ಈ ಶಾಸನವನ್ನು ಓದಲು ಸಹಕರಿಸಿದ ಕರ್ನಾಟಕ ಸರ್ಕಾರದ ಪರಂಪರೆ, ಪುರಾತತ್ವ ಇಲಾಖೆಯ ಇಂಜಿನೀಯರ್ ಡಾ.ಜಗದೀಶ ಅಗಸೆಬಾಗಿಲವರ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ಆಧಾರ ಗ್ರಂಥಗಳು:
೧.ಡಾ.ಅ.ಸುಂದರ, ಸಮ್ ಜೈನ ಟೆಂಪಲ್ಸ್ ಇನ್ ನಾರ್ಥ ಕರ್ನಾಟಕ ಆಂಡ್ ಇಟ್ಸ್ ಡಿಸ್ಟಿಂಕ್ಟಿವ್ ಫೀಚರ‍್ಸ.
೨. ಎಫಿಗ್ರಾಫಿಯಾ ಕರ್ನಾಟಿಕಾ ಸಂ.೧. ಐ, ಮೈಸೂರು ಆರ್ಕಿಯಾಲಾಜಿಕಲ್ ಸೀರಿಸ್.
೩. ನನ್ನ ಕ್ಷೇತ್ರ ಕಾರ್ಯ ಹಾಗೂ ಡಾ.ಜಗದೀಶ್ ಅಗಸೆಬಾಗಿಲವರ ಅವರ ಜತೆ ಚರ್ಚೆ.
------------------------------------------
ಡಾ.ಬಾಲಕೃಷ್ಣ ಹೆಗಡೆ, ಇತಿಹಾಸ ವಿಭಾಗ, ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜು,
ಶಿವಮೊಗ್ಗ-೫೭೭ ೨೦೧, ಮೊ.೦೯೪೪೮೧೮೧೪೯೨, ಮೇಲ್: ಜಡಿ.bಚಿಟಚಿಞಡಿishಟಿಚಿhege@gmಚಿiಟ.ಛಿom





No comments:

Post a Comment