Thursday, August 22, 2013

ಕಾರ್ಕಳದ ತಾಲೂಕಿನ ಮದ್ಮಲ್ ಪಾದೆ ಶಿಲಾಯುಗದ ಸಮಾಧಿ ಶೋಧ.


ಪ್ರೊ. ಮುರುಗೇಶಿ





ಬೃಹತ್ ಶಿಲಾಯುಗದ ಕಂಡಿ ಕೋಣೆ ಸಮಾಧಿ ನೆಲೆ ಪತ್ತೆ


ಪ್ರೊ. ಟಿ. ಮುರುಗೇಶಿ
ಪ್ರಾಚೀನಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗ,
ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜು
 ಶಿರ್ವ; Ph: ೯೪೮೨೫೨೦೯೩೩   

          ದಕ್ಷಿಣ ಭಾರತದಾದ್ಯಂತ ಪಾಂಡವರ ಕಲ್ಲು, ಮೋರಿಯರ ಮನೆ, ಮೋರಿಯರ ದಿಬ್ಬ, ಪಾಣಾರ ಅರೆ ಕಲ್ಲು, ತೂಂತ್ ಕಲ್ಲು, ಮಂಚಕಲ್ಲು, ಕಲ್ಮಂಚ, ಕಲ್ಮನೆ ಎಂಬಿತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ಬೃಹತ್ ಶಿಲಾಯುಗದ ಕಂಡಿ ಕೋಣೆ (ತೂತು ಅಥವಾ ರಂಧ್ರವನ್ನು ಹೊಂದಿರುವ)  ಸಮಾಧಿ ನೆಲೆಯನ್ನು, ಉಡುಪಿ ಜಿಲ್ಲೆ, ಕಾರ್ಕಳ ತಾಲೂಕಿನ ಪಳ್ಳಿಯ ಸಮೀಪದಲ್ಲಿ ಮದ್ಮಲ್ ಪಾದೆ ಎಂಬ ಸ್ಥಳದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಅಂತಿಮ ಬಿ. ಎ. ವಿದ್ಯಾರ್ಥಿಗಳು ಮತ್ತು ಪ್ರೊ. ಟಿ. ಮುರುಗೇಶಿಯವರು ಸಂಶೋಧಿಸಿದ್ದಾರೆಂದು ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕರಾದ ಪ್ರೊ. ಟಿ. ಮುರುಗೇಶಿಯವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಬೃಹತ್ ಶಿಲಾಯುಗ ಸಂಸ್ಕೃತಿ, ಕರಾವಳಿ ಕರ್ನಾಟಕದ ಮೂಲ ಸಂಸ್ಕೃತಿಯಾಗಿದ್ದು, ಈ ಸಂಸ್ಕೃತಿ ತನ್ನ ವೈವಿಧ್ಯಮಯ ಸಮಾಧಿ ರಚನೆಗಳ ಮೂಲಕ, ದಕ್ಷಿಣ ಭಾರತಾದ್ಯಂತ ಚಿರಪರಿಚಿತವಾಗಿದೆ. ನಿಲಿಸು ಗಲ್ಲು ಸಮಾಧಿ (ಮೆನ್ ಹಿರ‍್ಸ್), ಶಿಲಾ ವರ್ತುಲ ಸಮಾಧಿ (ಸ್ಟೋನ್ ಸರ್ಕಲ್ಸ್), ಕಲ್ಗುಪ್ಪೆ ಸಮಾಧಿ (ಕೇರ್ನ್ಸ್), ಕುಂಭ ಸಮಾಧಿ (ಅರ್ನ್ ಬರಿಯಲ್ಸ್), ಶವ ಪಟ್ಟಿಗೆ ಮಾದರಿ ಸಮಾಧಿ (ಸಾರ್ಕೋಪೆಗಿಸ್), ಕಂಡಿ ಕೋಣೆ ಸಮಾಧಿಗಳು (ಡಾಲ್ಮೆನ್ಸ್), ಹೀಗೆ ಹತ್ತು ಹಲವು ರೀತಿಯ ಸಮಾಧಿಗಳು ದಕ್ಷಿಣ ಭಾರತದಾದ್ಯಂತ ಕಂಡು ಬರುತ್ತವೆ. ಆದರೆ, ದಕ್ಷಿಣ ಭಾರತದ ಪಶ್ಚಿಮ ಕರಾವಳಿಯಲ್ಲಿ ಮಾತ್ರ ಅತ್ಯಂತ ವಿಶೇಷವಾದ ಗುಹಾ ಸಮಾಧಿ (ರಾಕ್ ಕಟ್ ಕೇವ್ಸ್), ಟೋಪಿ ಕಲ್ಸ್, ಎಂಬ ವಿಶಿಷ್ಠ ಬಗೆಯ ಬೃಹತ್ ಶಿಲಾಯುಗದ ಸಮಾಧಿಗಳು ಕಂಡು ಬರುತ್ತವೆ.
ಬೃಹತ್ ಶಿಲಾಯುಗದ ವೈವಿಧ್ಯಮಯ ಸಮಾಧಿಗಳು, ಆ ಜನರ ಮರಣೋತ್ತರ ಬದುಕಿನ ಗಾಢವಾದ ನಂಬಿಕೆಯನ್ನು ಅಭಿವ್ಯಕ್ತಗೊಳಿಸುತ್ತವೆ. ಕಂಡಿ ಕೋಣೆ (ಡಾಲ್ಮೆನ್ಸ್) ಸಮಾಧಿಗಳೆಂದರೆ, ಭಾರಿ ಗಾತ್ರದ ಕಲ್ಲು ಚಪ್ಪಡಿಗಳನ್ನು ಗಡಿಯಾರದ ಅನುಕ್ರಮದಲ್ಲಿ, ಜೋಡಿಸಿ ಒಂದು ಆಯತ ಇಲ್ಲವೆ ಚೌಕಾಕಾರದ ಕೋಣೆಯನ್ನು ರಚಿಸಲಾಗುತ್ತದೆ. ಇದರ ಒಳ ಭಾಗದಲ್ಲಿ ಶವ ಅಥವಾ ಅಸ್ಥಿ ಅವಶೇಷಗಳನ್ನು ಹಾಗೂ ಮಡಿಕೆ-ಕುಡಿಕೆಗಳನ್ನು ಇಟ್ಟು, ನಂತರ ಅದರ ಮೇಲ್ಭಾಗವನ್ನು ಒಂದು ಮುಚ್ಚುಗೆಯ ದೊಡ್ಡ ಚಪ್ಪಡಿಯಿಂದ ಮುಚ್ಚಲಾಗುತ್ತದೆ. ಈ ಕೋಣೆಯ ಪೂರ್ವ ಅಥವಾ ಪಶ್ಚಿಮ ದಿಕ್ಕಿನ ಚಪ್ಪಡಿಯಲ್ಲಿ ಸುಮಾರು ಎರಡೂವರೆ ಅಡಿ ಸುತ್ತಳತೆಯ ಒಂದು ಕಂಡಿ (ತೂತು/ರಂಧ್ರ) ಯನ್ನು ರಚಿಸಲಾಗಿರುತ್ತದೆ. ಇವುಗಳನ್ನು ಸ್ಥಳೀಯವಾಗಿ ಪಾಂಡವರ ಕಲ್ಲು, ಪಾಂಡವರ ಅರೆಕಲ್ಲು, ತೂಂತ್ ಕಲ್ಲು ಎಂದು ತುಳುನಾಡಿನಲ್ಲಿ ಕರೆಯಲಾಗುತ್ತದೆ. 
ಮೊದಲನೇ ಸಮಾಧಿಯ ಒಳಭಾಗದಲ್ಲಿ ಮಣ್ಣು ತುಂಬಿ ನೆಲಗಟ್ಟನ್ನು ಮಾಡಲಾಗಿದೆ ಇದರ ಪೂರ್ವದಿಕ್ಕಿನ ಕಲ್ಲು ಚಪ್ಪಡಿ ೭೫ ಸೆ.ಮೀ ಅಗಲ ಮತ್ತು ೬೪ ಸೆ.ಮೀ ಎತ್ತರವಿದೆ. ಅದೇ ಚಪ್ಪಡಿಯಲ್ಲಿ ಪೂರ್ವಾಭಿಮುಖವಾಗಿ ೧೬ ಸೆ.ಮೀ ಸುತ್ತಳತೆಯ ರಂಧ್ರವನ್ನು ಮಾಡಲಾಗಿದೆ. ಉತ್ತರ ದಿಕ್ಕಿನಲ್ಲಿರುವ ಕಲ್ಲು ಚಪ್ಪಡಿ ೯೩ ಸೆ.ಮೀ ಅಗಲ, ೫೨ ಸೆ.ಮೀ ಎತ್ತರವಿದೆ. ದಕ್ಷಿಣದ ಕಲ್ಲು ಚಪ್ಪಡಿ ೭೫ ಸೆ.ಮೀ ಅಗಲ, ೬೮ ಸೆ.ಮೀ ಎತ್ತರವಿದೆ. ಪಶ್ಚಿಮದ ಕಲ್ಲು ಚಪ್ಪಡಿ ೬೯ ಸೆ.ಮೀ ಅಗಲ, ೫೮ ಸೆ.ಮೀ ಎತ್ತರವಿದೆ. ಮುಚ್ಚಿಗೆ ಕಲ್ಲು ೧೩೪ ಸೆ.ಮೀ ಉದ್ದ ಮತ್ತು ೧೦೨ ಸೆ.ಮೀ ಅಗಲವಿದೆ.
ಪೊದೆಯೊಂದರಲ್ಲಿ ಮುಚ್ಚಿ ಹೋಗಿದ್ದ ೨ನೇ ಸಮಾಧಿ ಸಂಪೂರ್ಣ ಹಾಳಾಗಿದ್ದು, ಕೇವಲ ಭೂ ಮಟ್ಟದಲ್ಲಿ  ಕಲ್ಲು ಚಪ್ಪಡಿಯ ಒಡೆದ ತುಂಡುಗಳು ಕಾಣಸಿಗುತ್ತವೆ. ಉತ್ತರದ ಕಲ್ಲು ಚಪ್ಪಡಿ ೮೧ ಸೆ.ಮೀ ಉದ್ದವಿದೆ. ದಕ್ಷಿಣದ ಕಲ್ಲು ಚಪ್ಪಡಿ ಪೂರ್ಣ ಕಾಣೆಯಾಗಿದೆ. ಪಶ್ಚಿಮದ ಕಲ್ಲು ಚಪ್ಪಡಿ ೬೫ ಸೆ.ಮೀ ಉದ್ದವಿದೆ. ಪೂರ್ವದ ಕಲ್ಲು ಚಪ್ಪಡಿ ೯೭.೭ ಸೆ.ಮೀ ಉದ್ದವಿದ್ದು, ತುಂಡಾದ ರಂಧ್ರದ ಭಾಗವನ್ನು ಈಗಲೂ ಗುರುತಿಸ ಬಹುದಾಗಿದೆ.
ಈ ಸಮಾಧಿಯ ವೈಷ್ಟ್ಯವೆಂದರೆ, ಸಮಾಧಿಯ ಒಳಭಾಗದಲ್ಲಿ ೯೪ ಸೆ.ಮೀ ಉದ್ದ ಮತ್ತು ೯೦ ಸೆ.ಮೀ ಅಗಲದ ಕಲ್ಲು ಚಪ್ಪಡಿಯನ್ನು ಹಾಸಲಾಗಿದೆ.
೨ನೇ ಸಮಾಧಿಯಿಂದ ಸುಮಾರು ೫ ಅಡಿ ಅಂತರದಲ್ಲಿ ಇನ್ನೂ ಎರಡು ಕಂಡಿ ಕೋಣೆ ಸಮಾಧಿಯ ಅವಶೇಷಗಳಿವೆ. ಒಂದು ಬ್ರಹ್ಮಸ್ಥಾನದ ಒಳಭಾಗದಲ್ಲಿದ್ದು, ಅದನ್ನೇ ಬ್ರಹ್ಮರಗುಂಡ ಎಂದು ಕರೆದು ಪೂಜಿಸಲಾಗುತ್ತಿದೆ. ಇದೊಂದು ಅಪರೂಪದ ಪ್ರಕರಣವಾಗಿದ್ದು, ಬೃಹತ್‌ಶಿಲಾ ಸಮಾಧಿ ನೆಲೆಗಳೆ ಬ್ರಹ್ಮಸ್ಥಾನಗಳಾಗಿ ಪರಿವರ್ತನೆಗೊಂಡವೆ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು ಈ ಬಗ್ಗೆ ಇನ್ನೂ ಪರಿಶೀಲಿಸಬೇಕಿದೆ. ಇದರ ಸಮೀಪದಲ್ಲೆ ಇನ್ನೊಂದು ಸಮಾಧಿಯ ಅವಶೇಷಗಳಿವೆ. ಒಟ್ಟಾರೆ ಪಳ್ಳಿಯ ಈ ನಿವೇಶನ ತುಳುನಾಡಿನ ಒಂದು ಪ್ರಮುಖ ಕಂಡಿಕೋಣೆ ಸಮಾಧಿಗಳ ಒಂದು ಪ್ರಮುಖ ನಿವೇಶನವಾಗಿದ್ದು ಆ ನೆಲೆಯಲ್ಲಿ ಅನ್ವೇಷಣೆಯನ್ನು ಮುಂದುವರೆಸಲಾಗಿದೆ.

ಕಾಲಮಾನ:
 ಕಾಲಮಾನದ ದೃಷ್ಠಿಯಿಂದ ಇಲ್ಲಿನ ಸಮಾಧಿಗಳು ಶೈಲಿ ಮತ್ತು ರಚನೆಯಲ್ಲಿ ಕರ್ನಾಟಕದ ರಾಜನಕೂಳೂರು ಮತ್ತು ಕಾರ್ಕಳ ತಾಲೂಕಿನ ಬೋರ್ಕಟ್ಟೆಯ ಸಮಾಧಿಗಳನ್ನು ಹೋಲುತ್ತವೆ. ಆದ್ದರಿಂದ ಈ ಸಮಾಧಿಗಳ ಕಾಲವನ್ನು ಕ್ರಿ. ಪೂ. ೮೦೦ ಕ್ಕೆ ಅನ್ವಯಿಸಬಹುದಾಗಿದೆ, ಈ ಹಿನ್ನೆಲೆಯಲ್ಲಿ ಇವು ಏನಿಲ್ಲವೆಂದರೂ ಸಮಾರು ೨೮೦೦ ವರ್ಷಗಳಷ್ಟು ಪ್ರಾಚೀನ ಸಮಾಧಿಗಳೆನ್ನುವುದರಲ್ಲಿ ಯಾವುದೇ ಅನುಮಾನಗಳಿಲ್ಲ.
ಈ ಸಮಾಧಿ ನೆಲೆಯ ಶೋಧನೆಯಲ್ಲಿ ಸಹಕರಿಸಿದ ಸ್ಥಳಿಯರಾದ ವಿಲ್ಸನ್ ಲೋಬೋ, ಕುಮಾರ ಸ್ವಾಮಿ, ನಾಗಭೂಷಣ್, ನನ್ನ ವಿದ್ಯಾರ್ಥಿಗಳಾದ ಕು. ಉಷಾ ನಾಯಕ್ ಮತ್ತು ಭರತ್ ರವರಿಗೆ ಹಾಗೆಯೆ ಈ ಅನ್ವೇಷಣೆಗೆ ಬೇಕಾದ ಸವಲತ್ತುಗಳನ್ನು ಒದಗಿಸಿಕೊಟ್ಟ ಕು. ಅಶ್ವಿನಿ ಶೆಟ್ಟಿಯವರಿಗೆ ಮತ್ತು ಅಂತಿಮ ಬಿ.ಎ. ಪುರಾತತ್ವ ವಿದ್ಯಾರ್ಥಿಗಳಿಗೆ ನಾನು ಅಭಾರಿಯಾಗಿದ್ದೇನೆ.

ಪ್ರೊ. ಟಿ. ಮುರುಗೇಶಿ
ಪ್ರಾಚೀನಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗ,
ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜು
 ಶಿರ್ವ; Ph: ೯೪೮೨೫೨೦೯೩೩   
  






No comments:

Post a Comment