Tuesday, July 30, 2013

ಫುರಾತನ ಶಿಕ್ಷಣ ವ್ಯವಸ್ಥೆ ಡಾ.ಶ್ಯಾಮಲಾರತ್ನಕುಮಾರಿ

ಡಾ. ಶ್ಯಾಮಲಾ ರತ್ನ ಕುಮಾರಿ




’ವಡ್ಡಾರಾಧನೆ’ಯಲ್ಲಿ ಶಿಕ್ಷಣ ವ್ಯವಸ್ಥೆಯ ಚಿತ್ರಣ 

        

  ’ವಡ್ಡಾರಾಧನೆ’ ಶಿವಕೋಟಾಚಾರ್ಯರಿಂದ ಕ್ರಿ.ಶ. ೧೦ನೇ ಶತಮಾನದಲ್ಲಿ ರಚಿಸಲ್ಪಟ್ಟ ಕೃತಿ ಈವರೆಗೆ ನಮಗೆ ಉಪಲಬ್ದ  ವಾಗಿರುವ ಪ್ರಥಮ ಕನ್ನಡ ಗದ್ಯಕೃತಿ ಮೂಲತಃ ಜೈನ ಕೃತಿಯಾದ ಇದರಲ್ಲಿ ೧೯ ಜನ ಮಹಾಪುರುಷರ ಗಾಹೆ(ಗಾದೆ-ಚರಿತೆ)ಗಳನ್ನೊಳಗೊಂಡಿದೆ. ಧಾರ್ಮಿಕ ಹಿನ್ನಲೆಯಲ್ಲಿ ರಚಿತವಾಗಿದ್ದರೂ ಈ ಕೃತಿಯು ಬಗ್ಗೆ ಸಮಕಾಲಿನ ಶಿಕ್ಷಣ ವ್ಯವಸ್ಥೆಯ ಅತ್ಯುಪಯುಕ್ತವಾದ ಮಾಹಿತಿಯನ್ನೊದಗಿಸುತ್ತದೆ.

          ಈ ಕೃತಿಯಲ್ಲಿ ವೈದಿಕರ ವಿದ್ಯಾಭ್ಯಾಸ ಕ್ರಮ ಹಾಗೂ ಜೈನ ವಿದ್ಯಾಭ್ಯಾಸ ಕ್ರಮಗಳೆರಡನ್ನೂ ಸಮಾನವಾಗಿ ಪುರಸ್ಕರಿಸಲಾಗಿದೆ. ಹಾಗೆಯೇ ಲೌಕಿಕ, ಆಧ್ಯಾತ್ಮಿಕ ಶಿಕ್ಷಣಗಳೆರಡಕ್ಕೂ ಮಾನವ ಜೀವನದಲ್ಲಿ ಸ್ಥಾನವನ್ನು ಕಲ್ಪಿಸಲಾಗಿದೆ. ಇವರ ಸುಕುಮಾರ ಸ್ವಾಮಿಯ ಕಥೆ, ಸನತ್ಕುಮಾರ ಚಕ್ರವರ್ತಿಯ ಕಥೆ ವಿದ್ಯುಚ್ಚೋರರಿಸಿಯ ಕಥೆ, ಗುರುದತ್ತ ಭಟಾರರ ಕಥೆ, ಚಿಲಾತಪುತ್ರನ ಕಥೆಗಳಲ್ಲಿ ಶೈಕ್ಷಣಿಕ ಕ್ರಮದ ಬಗ್ಗೆ ಮಹತ್ವಪೂರ್ಣ ಮಾಹಿತಿ ಲಭ್ಯವಾಗುತ್ತದೆ.

          ಸುಕುಮಾರಸ್ವಾಮಿಯ ಕಥೆಯಲ್ಲಿ ವತ್ಸದೇಶದ ಕೌಶಾಂಬಿನಗರದ ರಾಜ ಅತಿಬಳನ ಮಂತ್ರಿ ಸೋಮಶರ್ಮನ ಮಕ್ಕಳಾದ ಅಗ್ನಿಭೂತಿ, ವಾಯುಭೂತಿ ವಿದ್ಯಾವಂತರಲ್ಲ, ಸೋಮಾರಿಗಳು ಹಾಗೂ ಉಂಡಾಡಿಗಳಾಗಿದ್ದರಿಂದ ಸೋಮಶರ್ಮನ ಮರಣಾನಂತರ ಮಂತ್ರಿ ಪದವಿಯನ್ನು ಯೋಗ್ಯತಾ ಆಧಾರದ ಮೇಲೆ ರಾಜನು ಅವರ ದಾಯಾದಿಗೆ ಕೊಡುತ್ತಾನೆ. ಇದರಿಂದ ಅಪಮಾನಗೊಂಡು ತಮ್ಮ ತಾಯಿ ಕಾಶ್ಯಪಿಗೆ ಈ ವಿಷಯನ್ನರುಹಿ ತಾವು ಇನ್ನು ಮುಂದೆ ವಿದ್ಯೆ ಕಲಿಯುವುದರಲ್ಲಿ ಆಸಕ್ತಿ ತೋರುವೆವು ಎಂದು ಹೇಳಲು ತಾಯಿಯು ಅವರಿಬ್ಬರನ್ನೂ ತನ್ನ ಸೋದರ ಮಗಧೆಯ ಮಂತ್ರಿ ಸೂರ್ಯಮಿತ್ರನಲ್ಲಿಗೆ ಕಳುಹುವಳು ಈ ಪ್ರಸಂಗದಿಂದ ವಿದ್ಯಾಭ್ಯಾಸವೇ ಅರ್ಹತೆಯ ಸಾಧನವೆಂದೂ, ಓದದಿರುವವರು ಮೂರ್ಖರಿಂದೂ ಅಂತಹವರಿಗೆ ಉನ್ನತ ಹುದ್ದೆಯನ್ನು ವಂಶ ಪಾರಂಪರ‍್ಯತಾಧಾರ ಮೇಲಾದರೂ ಕೊಡಲಾಗದು, ಯೋಗ್ಯತಾಧಾರದ ಮೇಲೆ ಉನ್ನತಾಧಿಕಾರಿಗಳಿಗೆ ನೇಮಕ ಎಂಬ ಕೃತಿಕಾರನ ಸ್ಪಷ್ಟ ಧೋರಣೆ ಮತ್ತು ಸಾರ್ವತ್ರಿಕ ಅಭಿಪ್ರಾಯ ವ್ಯಕ್ತವಾಗುವುದು.

          ಅಗ್ನಿಭೂತಿ, ವಾಯುಭೂತಿ ಪಂಡಿತನಾದ ತಮ್ಮ ಸೋದರಮಾವ ಸೂರ್ಯಮಿತ್ರನೆಡೆಗೆ ಬಂದಾಗ ಸೂರ್ಯಮಿತ್ರ ಬಾಂಧವ್ಯ ಹಾಗೂ ಸಲಿಗೆ ವಿದ್ಯಾಭ್ಯಾಸಕ್ಕೆ ಹಾನಿಕರವೆಂದು ಭಾವಿಸಿ ಬಂಧುತ್ವವನ್ನು ಮರೆಮಾಚಿ ವಿದ್ಯಾರ್ಥಿಗಳಾಗಿ ತನ್ನ ಬಳಿ ಇರಲು ಅರ್ಹತಾ ನಿಯಮಗಳನ್ನೊಡ್ಡುವನು. ’ವಿದ್ಯಾರ್ಥಿಗಳಾಗಿ ಯೋದಂ ಕಲ್ವೆಮೆಂಬೞ್ತಯೊಳ್ ಬಂದಿರಪ್ಪೊಡೆಬೈಕಂದಿರಿದು ಕಪ್ಪಡಮುಟ್ಟಿರುಳಂ ಪಗಲುಮಲಸದೆ ನಿರ್ಬಂಧದಿಂದೋದಲಾರ್ಪೊಡೆ ನಿಮ್ಮನೋದಿಸಲಕ್ಕುಂ’  ಎಂದು. ಅಂದರೆ ವಿದ್ಯಾರ್ಥಿಗಳು ಓದು ಕಲಿಯಬೇಕೆಂಬ ಶ್ರದ್ಧಾಸಕ್ತಿಗಳನ್ನು ಮೊಟ್ಟಮೊದಲು ಹೊಂದಿರ ಬೇಕು, ಭಿಕ್ಷಾಟನೆಯಿಂದ ತಮ್ಮ ಆಹಾರವನ್ನು ತಾವೇ ಗಳಿಸಿಕೊಳ್ಳಬೇಕು ಹಾಗೂ ವೇಷಭೂಷಣಗಳಲ್ಲಿ ಆಸಕ್ತಿ ತೋರದೆ ನಿಯಮಪೂರ್ವಕವಾಗಿ ಹಗಲು ರಾತ್ರಿಗಳೆಂದೆಣಿಸದೆ ಸೋಮಾರಿತನ ಬಿಟ್ಟು ಕಷ್ಟ ಪಟ್ಟು ಓದಬೇಕು. ಇದೇ ವಿದ್ಯಾರ್ಥಿಗಳ ಲಕ್ಷಣ. ವಿದ್ಯಾರ್ಥಿಗಳಿಗೆ ಹೇಳಿರುವ ಈ ಲಕ್ಷಣಗಳು ಇಂದಿಗೂ ಉಪಯುಕ್ತವಾಗಿವೆ ಹಾಗೂ ಆಚರಣಯೋಗ್ಯವಾಗಿವೆ.

          ವಿದ್ಯಾರ್ಜನೆಗೆ ತೀವ್ರಾಕಾಂಕ್ಷೆ, ಛಲ ಮತ್ತು ತ್ಯಾಗದ ಅವಶ್ಯಕತೆ ಎಷ್ಟಿದೆ ಎಂಬುದು ದೃಷ್ಟಾಂತಪೂರ್ವಕವಾಗಿ ತಿಳಿದು ಬರುತ್ತದೆ. ಸೂರ್ಯಮಿತ್ರನು ಸುಧರ್ಮಾಚಾರ್ಯರಿಂದ ಜ್ಯೋತಿಶ್ಶಾಸ್ತ್ರ ಕಲಿಯಲು ಬಂದ ಸಂಧರ್ಭದಲ್ಲಿ ಸೂರ್ಯಮಿತ್ರ ಸ್ವತಃ ತಾನೇ ಸರ್ವಶಾಸ್ತ್ರ ವಿಶಾರದ ಪಂಡಿತನಾದರೂ ಸುಧರ್ಮಾಚಾರ್ಯರು ತಾನು ಕಳೆದಿದ್ದ ಅರಸನ ಉಂಗುರವನ್ನು ತಮ್ಮ ಜ್ಯೋತಿಷ್ಯ ವಿದ್ಯೆಯಿಂದ ದೊರಕಿಸಿ ಕೊಟ್ಟು ಪ್ರಾಣ ಉಳಿಸಿದ್ದನ್ನು ಕಂಡು ಅಂತಹ ಶಕ್ತಿಯುಳ್ಳ ಜ್ಯೋತಿಷ್ಯ ವಿದ್ಯಯನ್ನು ಕಲಿಯಲಪೇಕ್ಷಿಸಿ ಸುಧರ್ಮಾಚಾರ್ಯರಲ್ಲಿಗೆ ಬಂದು ವಿದ್ಯೆಯನ್ನು ಹೇಳಿಕೊಡಬೇಕೆಂದು ಕೇಳಿಕೊಂಡಾಗ ಸುಧರ್ಮಾಚಾರ್ಯರು ಇಂತೆಂದರು - ’ತಮಾ, ಯಮ್ಮಜೋಯಿಸನೆಂತಪ್ಪ ರೂಪಿದ ಋಷಿಯರ್ಗಲ್ಲದೆ ಪೇೞಲುಂ ಕಲಲುಮಾಗದು’. ಆ ಮೇರೆಗೆ ಸೂರ್ಯಮಿತ್ರನು ಜ್ಯೋತಿಷ್ಯವನ್ನು ಕಲಿಯಲೇಬೇಕೆಂಬ ತೀವ್ರಾಕಾಂಕ್ಷಯಿಂದ ಸುಧರ್ಮಾಚಾರ್ಯರನ್ನು ಬೇಡಿ ಅವರಿಂದ ದೀಕ್ಷೆಯನ್ನು ಪಡೆದು ಸುಧರ್ಮಾಚಾರ್ಯರ ನಿಯಮಗಳಿಗೊಪ್ಪಿ ಪಂಚಮಹಾವ್ರತಗಳು(ಸತ್ಯ, ಅಹಿಂಸೆ, ಅಸ್ತೇಯ, ಅಪರಿಗ್ರಹ ಮತ್ತು ಬ್ರಹ್ಮಚರ್ಯ) ಪರಿಕ್ರಮಣ ನಮಸ್ಕಾರ(ಪಶ್ಚಾತಾಪ, ಪ್ರಕೀರಣಕ ಮತ್ತು ಪಂಚನಮಸ್ಕಾರ) ಗಳನ್ನು ಅನುಷ್ಠಾನ ಮಾಡಿ, ತ್ರಿಷಷ್ಠಿ(೬೩) ಶಲಾಕಾ ಪುರುಷಚರಿತ್ರೆ, ಚರಣಗ್ರಂಥ, ಕರಣಗ್ರಂಥ ಹಾಗೂ ದ್ರವ್ಯಾನುಯೋಗಗಳನ್ನೂ ಅಧ್ಯಯನ ಮಾಡಿದನು. ಅಷ್ಟೇ ಅಲ್ಲದೇ ಕೇವಲ ಜ್ಯೋತಿಷ ವಿದ್ಯೆಯನ್ನು ಕಲಿಯಲು ಸನ್ಯಾಸಿಯಾದವನು ಈಗ ನಿಷ್ಟೆಯಾದ ತಪೋಜೀವನವನ್ನು ಸ್ವ ಇಚ್ಛೆಯಿಂದಲೇ ಕೈಗೊಂಡನು, ತಪಃಶಕ್ತಿಯಿಂದಲೇ ಜ್ಯೋತಿಷ ವಿದ್ಯೆಯು  ಸಾಧಿಸಲ್ಪಟ್ಟಿತು.

          ಅಂದಿನ ವಿದ್ಯಾಭ್ಯಾಸ ವ್ಯವಸ್ಥೆಯಲ್ಲಿ ಬೋಧಿಸಲ್ಪಡುತ್ತಿದ್ದ ವಿಷಯಗಳ ವ್ಯಾಪ್ತಿ ಎಷ್ಟು ವಿಸ್ತ್ರುತವಾಗಿತ್ತೆಂದು ಈ ಕೆಳಗಿನ ಬೋಧನಾ ವಿಷಯಗಳ ಪಟ್ಟಿಯಿಂದ ತಿಳಿದುಬರುತ್ತದೆ. ಸೂರ್ಯಮಿತ್ರನು ತನ್ನ ಶಿಷ್ಯನಾದ ಅಗ್ನಿಭೂತಿಗೆ ಬೋಧಿಸಿದ ವಿಷಯಗಳೆಂದರೆ ಚತುರ್ವೇದಗಳು, ಷಡಂಗಗಳು, ಹದಿನೆಂಟು ಧರ್ಮಶಾಸ್ತ್ರಗಳು(ಮನು, ಗೌತಮ, ವಶಿಷ್ಠ, ಅತ್ರಿ, ದಕ್ಷ, ಅಂಗೀರಸ, ಉಶನಸ್, ವಾಕ್ಪತಿ, ವ್ಯಾಸ, ಆಪಸ್ತಂಭ, ಕಾತ್ಯಾಯನ, ವಿಷ್ಣು, ಯಾಜ್ಞವಲ್ಕ್ಯ, ನಾರದ, ಪರಾಶರ, ಶಂಖ, ಹಾರೀತ - ಇವರಿಂದ ಪ್ರಣೀತವಾದ ಸ್ಮೃತಿಗಳು), ಮೀಮಾಂಸಾ, ನ್ಯಾಯವಿಸ್ತರ(ತರ್ಕಶಾಸ್ತ್ರ), ಪ್ರಮಾಣಂ(ಪ್ರತ್ಯಕ್ಷ, ಅನುಮಾನ, ಶಬ್ದ, ಅನುಪಲಬ್ದಿ, ಅರ್ಥಪತ್ತಿ), ಛಂದಸ್ಸು, ಅಲಂಕಾರ, ನಿಗಂಟು, ಕಾವ್ಯ, ನಾಟಕ, ಚಾಣಕ್ಯ, ಅರ್ಥಶಾಸ್ತ್ರ, ಸಾಮಂತ್ರಿಕ, ಶಾಲಿಹೋತ್ರ(ಶಾಲಿಹೋತ್ರನೆಂಬ ಋಷಿವಿರಚಿತ ಅಶ್ವಶಾಸ್ತ್ರ), ಪಾಳಕಾಪ್ಯ(ಪಾಳಕಾಪ್ಯನೆಂಬ ಋಷಿವಿರಚಿತ ಗಜಶಾಸ್ತ್ರ), ಹಾನಿತಂ, ಚರಕಂ, ಅಶ್ವಿನೀಮತಂ, ಬಾಹಲಾ, ಶುಶ್ರುತಂ, ಕ್ಷಾರಪಾನೀಯಂ ಎಂಬ ಆರು ವೈದ್ಯಪದತ್ತಿಗಳು, ಜ್ಯೋತಿಷ ಹಾಗೂ ಮಂತ್ರವಿದ್ಯೆ. ಈ ಬೋಧನಾ ವಿಷಯಗಳ ಪಟ್ಟಿಯಲ್ಲಿ ವೈದಿಕ, ಧಾರ್ಮಿಕ, ಲೌಕಿಕ, ಪ್ರಾಣಿಕ ಮುಂತಾದ ವೈವಿಧ್ಯಪೂರ್ಣ ವಿಷಯಗಳು ಅಡಕವಾಗಿದ್ದು ಶೈಕ್ಷಣಿಕ ವ್ಯವಸ್ಥೆಯು ಸಮಕಾಲೀನ ಜನಸಮುದಾಯದ ಆವಶ್ಯಕತೆಗಳನ್ನು ಪೂರೈಸುವ ಹಾಗೂ ದೈನಂದಿನ ಜೀವನದಲ್ಲಿ ಸುಲಭವಾಗಿ ಅಳವಡಿಸಬಹುದಾಗಿದ್ದು ಸಮಾಜದಲ್ಲಿ ಮಹತ್ವದ ಸ್ಥಾನವನ್ನು ಶಿಕ್ಷಣಕ್ಕೆ ತಂದಿದ್ದಿತು ಎಂಬುದು ಗಮನಿಸಬೇಕಾದ ಅಂಶ.
         
          ವೈದಿಕ ಶಿಕ್ಷಣ ವ್ಯವಸ್ಥೆಯ ಜೊತೆ ಜೊತೆಗೇ ಜೈನ ಶಿಕ್ಷಣ ಕ್ರಮವು ಈ ಕೃತಿಯಲ್ಲಿ ವಿವೇಚಿಸಲ್ಪಟ್ಟಿದೆ. ಜೈನ ಶೈಕ್ಷಣಿಕ ಕ್ರಮದಲ್ಲಿ ಬೋಧಿಸಲ್ಪಡುತ್ತಿದ್ದ ವಿಷಯಗಳೆಂದರೆ ೧೪ ಪೂರ್ವಗಳು(ಉತ್ಪಾದಪೂರ್ವ, ಆಗ್ರಾಯಣೀಪೂರ್ವ, ನೀರ್ಯಾನುವಾದಪೂರ್ವ, ಅಸ್ತಿ-ನಾಸ್ತಿಪ್ರವಾದಪೂರ್ವ, ಜ್ಞಾನಪ್ರವಾದಪೂರ್ವ, ಸತ್ಯಪ್ರವಾದಪೂರ್ವ, ಆತ್ಮಪ್ರವಾದಪೂರ್ವ, ಕರ್ಮಪ್ರವಾದಪೂರ್ವ, ಪ್ರತ್ಯಾಖ್ಯಾನುವಾದಪೂರ್ವ, ವಿದ್ಯಾನುವಾದಪೂರ್ವ, ಕಲ್ಯಾಣವಾದ ಪೂರ್ವ, ಪ್ರಾಣವಾದ ಪೂರ್ವ, ಕ್ರಿಯಾವಾದ ಪೂರ್ವ, ತ್ರಿಲೋಕಪೂರ್ವ ಬಿಂದುಸಾರ ಪೂರ್ವ), ದ್ವಾದಶಂಗಗಳು(ಆಚಾರಂಗ, ಸೂತ್ರಕೃತಾಂಗ, ಸ್ಥಾನಾಂಗ, ಸಮವಾಯಾಂಗ, ವ್ಯಖ್ಯಾಪ್ರಜ್ಞಪ್ತಿ, ಜ್ಞಾತೃಧರ್ಮ ಕಥಾಂಗ, ಉಪಾಸಕಾಧ್ಯಾಂಗ, ಅಂತಕೃದ್ಧಶಾಂಗ, ಅನುಕ್ತರೋಪಪಾದಕ ದಶಾಂಗ, ಪ್ರಶ್ನವ್ಯಾಕರಣಾಂಗ, ವಿಪಾಕಸೂತ್ರಂಗ, ದೃಷ್ಟಿಪ್ರವಾದಾಂಗ), ಚರಣಗ್ರಂಥ, ಕರಣಗ್ರಂಥ, ದ್ರವ್ಯಾನುಯೋಗ, ತ್ರಿಷಷ್ಠಿ  ಶಲಾಕ ಪುರುಷರ ಚರಿತೆ ಮುಂತಾದವು.

          ಸ್ತ್ರೀ ಶಿಕ್ಷಣಕ್ಕೆ ಸಂಬಂಧಿಸಿದಂತೆ ಈ ಕೃತಿಯು ಕೆಲವು ವಿವರಗಳನ್ನು ನೀಡುತ್ತದೆ. ಸ್ತ್ರೀಯರು ಅಕ್ಷರ ಆಲೇಖ್ಯಗಣಿತ, ಗಾಂಧರ್ವ, ನೃತ್ಯ, ಚಿತ್ರಕರ್ಮ, ಪತ್ಯಚ್ಛೇದ್ಯ ಮುಂತಾದ ಚತುಷ್ಷಷ್ಠಿ(೬೪) ಕಲೆಗಳಲ್ಲಿ ಪರಿಣತಿ ಪಡೆಯುತ್ತಿದ್ದರು ಎಂದು ವಿದ್ಯುಚ್ಚೋರನ ಕಥೆ ತಿಳಿಸುತ್ತದೆ. ಇದೇ ಕಥೆಯಲ್ಲಿ ಚೋರ ವಿದ್ಯೆ - ಕರ್ಪಟ ವಿದ್ಯೆ(ಕರಪಟ್ಟಿ ರಚಿತ ಶಾಸ್ತ್ರ), ಕಳ್ಳತನವನ್ನು ಪತ್ತೆ ಹಚ್ಚುವುದನ್ನು ಪ್ರತಿಪಾದಿಸುವ ಶಾಸ್ತ್ರ(ಸುರಖಶಾಸ್ತ್ರ) ಹಾಗೂ ಚೋರವಿದ್ಯೆಯ ಪ್ರಕಾರಗಳಾದ ಜೃಂಭಿನಿ(ಪ್ರತ್ಯಕ್ಷ, ಮಾಯ), ಸ್ಥಂಭಿನಿ(ಗತಿ ನಿರೋಧ), ಮೋಹಿನಿ(ಮೂರ್ಛೆ), ಸರ್ಷಪಿ(ಚರ್ಮ ರೋಗ ಉಂಟುಮಾಡುವಿಕೆ), ತಾಳ್ತೋದ್ಘಾಟಿನಿ(ಬೀಗ ತೆಗೆಯುವುದು), ಮಂತ್ರ, ಚೂರ್ಣ, ಯೋಗ, ಘುಟಿಕಾ(ಗುಳಿಗೆ) ಮತ್ತು ಅಂಜನಗಳ ಉಲ್ಲೇಖವಿದೆ.

          ಅಧ್ಯಯನ ವಿಧಾನಕ್ಕೆ ಸಂಬಂಧಿಸಿದಂತಯೂ ಮಾಹಿತಿ ದೊರಕುತ್ತದೆ ಈ ಕೃತಿಯಲ್ಲಿ. ಇಲ್ಲಿ ಹೇಳಿರುವ ಶಿಕ್ಕಣ ವಿಧಾನಗಳೆಂದರೇ ಸ್ವಾಧ್ಯಾಯ(ಮನನಪೂರ್ವಕ ಸ್ವತಃ ವಿಷಯಗಳನ್ನು ಗ್ರಹಿಸುವಿಕೆ, ಅರ್ಥೈಸುವಿಕೆ), ವಾದ(ಪರಪಕ್ಷಖಂಡನಪೂರ್ವಕ ಸ್ವಪಕ್ಷ ಮಂಡನೆ), ಗ್ರಂಥಾರ್ಥ ಸ್ವರೂಪಾಧ್ಯಯನ, ವ್ಯಾಖ್ಯಾನ(ಪದವಿಭಾಗ, ಪದಶಃ ಅರ್ಥ, ಅನ್ವಯ, ತಾತ್ಪರ್ಯ, ವಿಮರ್ಶೆ), ವಾಕ್ಯಾರ್ಥ(ಹೇತು ನಿದಿರ್ಷ್ಟವಾಗಿ ಆಂತರಿಕ, ಬಾಹ್ಯ ಪ್ರಮಾಣ ಪೂರ್ವಕ ತರ್ಕಬದ್ಧವಾಗಿ ವಾಕ್ಯವನ್ನು ಅರ್ಥೈಸುವಿಕೆ), ವೇದಾಭ್ಯಾಸದಲ್ಲಿ ಅನುಸರಿಸಬೇಕಾದ ವಿಧಾನವೆಂದರೇ ಮೊದಲು ಪ್ರಣವ(ಓಂಕಾರ)ದ ಉಚ್ಛಾರಣೆ ಸ್ವರ, ವರ್ಣ, ಬೇಧದಿಂದ ಮೊದಲು ೬೪ ಋಕ್ ಸಂಹತಿಗಳನ್ನು, ಪದಕ್ರಮಬೇಧದಿಂದ ಬ್ರಾಹ್ಮಣ ಆರಣ್ಯಕ ಸೂತ್ರಗಳನ್ನು ಓದುವುದು, ಋಗ್ಯಜುಸ್ಸಾಮಾರ್ಥವಣ ವೇದಗಳನ್ನು ಸ್ವರವರ್ಣಬೇಧದಿಂದ ಮಂತ್ರಸಹಿತ ಪಾಠ, ಪದ ಕ್ರಮ, ಜಟೆ, ಘನ ಬೇಧದಿಂದ ಯಥಾಕ್ರಮದಿಂದ ಉಚ್ಛಾರಣೆ, ಮೀಮಾಂಸ, ನ್ಯಾಯಸೂತ್ರಗಳನ್ನು ಓದಿ ಕ್ರಿಯಾಕಾರಕ ಸಂಬಂಧದಿಂದ ವ್ಯಾಖ್ಯಾನ ಮಾಡುವುದು. ಈ ಕಾರ್ಯಕಾರಣ ವಿಧಾನಗಳನ್ನೇ ನಾಗಶ್ರೀ ಅನುಸರಿಸಿ ತನಗಿರುವ ವಿದ್ಯಾ ಪಾಂಡಿತ್ಯವನ್ನು ಚಂದ್ರವಾಹನನೆಂಬ ಅರಸನ ಮತ್ತು ಸೂರ್ಯಮಿತ್ರ, ಅಗ್ನಿಭೂತಿ ಭಟಾರರ ಸಮುಖದಲ್ಲಿ ಪ್ರಕಟಗೊಳಿಸಿದಳೆಂದು ಸುಕುಮಾರಸ್ವಾಮಿಯ ಕಥೆಯಿಂದ ತಿಳಿದುಬರುತ್ತದೆ ಅಲ್ಲದೇ, ಗುರುದತ್ತ ಭಟ್ಟಾರರ ಕಥೆಯಲ್ಲಿ ಹಸ್ತಿನಾಪುರದ ರಾಜ ವಿಜಯದತ್ತನ ಪುತ್ರನಾದ ಗುರುದತ್ತನು ಚಿಂತಾಗತಿಯಂಬ ವಿದ್ಯಾಧರನು ಆಕಾಶಕ್ಕೇರುವ ವಿದ್ಯಾಸಾಧನೆಯಲ್ಲಿ ತೊಡಗಿ ಮಂತ್ರಪಠನಗೈದಾಗ ಅದರಲ್ಲಿದ್ದ ಹೀನಾಧಿಕಾಕ್ಷರ ದೋಷಗಳನ್ನು ತನ್ನ ಮಂತ್ರವ್ಯಾಕರಣಪರಿಣತಿಯಿಂದ ಕಂಡುಹಿಡಿದು ಮಂತ್ರ ಉಚ್ಛಾರಣೆಯನ್ನು ತಿದ್ದಿ ಸಕ್ರಮಗೊಳಿಸಿ ವಿದ್ಯಾಧರನ ವಿದ್ಯಾಸಾಧನೆಗೆ ನೆರಾವಾದನೆಂದು ಹೇಳಿದೆ. ಈ ಪ್ರಸಂಗದಿಂದ ಮಂತ್ರಸಿದ್ಧಿಯಲ್ಲಿ ಹೀನಾಧಿಕಾಕ್ಷರ ಮಹತ್ವ ಎಷ್ಟೆಂಬುದು ವ್ಯಕ್ತವಾಗುತ್ತದೆ. ಅಂತೆಯೇ ಭದ್ರಬಾಹುಭಟಾರರ ಕಥೆಯಲ್ಲಿ ವಾಚಕದ ತಪ್ಪಿನಿಂದ ಎಂಥ ಪ್ರಮಾದವಾಯಿತೆಂದು ಹೇಳಿದೆ. ಅಶೋಕ ಚಕ್ರವರ್ತಿಯು ತಾನು ಯುದ್ಧ ಕೈಗೊಂಡಾಗ ಆ ಪರದೇಶದಿಂದ ತನ್ನ ಮಂತ್ರಿ, ಪುರೋಹಿತ ಮುಂತಾದ ಅಧಿಕಾರಿಗಳಿಗೆ ಓಲೆಯೊಂದನ್ನು ಬರೆಯಿಸಿ ರಾಜಕುಮಾರನ ಕುನಾಲನ ವಿದ್ಯಾಭ್ಯಾಸಕ್ಕೆ ಏರ್ಪಡಿಸಲು "ಉಪಾಧ್ಯಾಯನಂಗೆ ಕೞಮೆಯುಂ ಕೂೞುಂ ತುಪ್ಪಮುಂ ತೊವ್ವೆಯುಮಮುಣನಲ್ಕೊಟ್ಟು ಕುಮಾರನೋದಿಸುಗೆ" ಎಂದು ಆದೇಶ ನೀಡಿದನು. "ಕುಮಾರಂ ಅಧ್ಯಾಪಯೇತ್" ಎಂಬುದನ್ನು ವಾಚಕನು "ಕುಮಾರಮಂಭಾಪಯೇತ್" ಎಂದು ವಿಪರೀತವಾಗಿ ಓದಿದ್ದರಿಂದ ಆದೇಶದ ಮೇರೆಗೆ ಉಪಾಧ್ಯಾಯನಿಗೆ ಅಕ್ಕಿ, ತುಪ್ಪ ಮುಂತಾದವುಗಳನ್ನು ಕೊಟ್ಟು ಕುಮಾರ ಕುನಾಲನ ಕಣ್ಣುಗಳನ್ನು ಕೀಳಿಸಿ ಕುರುಡನನಾಗಿಸಲಾಗುತ್ತದೆ. ಈ ದೃಷ್ಟಾಂತದಿಂದ ಓಲೆಯ ಪಾಠದ ಯಥಾರ್ಥವಾಚನ ಕಲೆಯ ಪ್ರಾಮುಖ್ಯ ಎಷ್ಟೆಂದು ಸ್ಫಷ್ಟವಾಗುತ್ತದೆ.

          ಶಿಕ್ಷಣದ ಅವಧಿಯ ಬಗ್ಗೆ ’ವಡ್ಡಾರಾಧನೆ’ಯು ನೀಡುವ ಮಾಹಿತಿಯು ಇಂತಿದೆ: ’ವೈದಿಕ ವಿದ್ಯಾಭ್ಯಾಸಕ್ಕೆ ಎಂಟು ವರ್ಷಗಳೆಂದೂ, ದೀಕ್ಷಾಪೂರ್ವಕ ಜೈನಧರ್ಮದ ಆಧ್ಯಾತ್ಮಿಕ ಶಿಕ್ಷಣಕ್ಕೆ ಹನ್ನೆರಡು ವರ್ಷಗಳೆಂದೂ ನಿಗದಿಯಾಗಿತ್ತೆಂದು ತಿಳಿಸುತ್ತದೆ. ಶಿಕ್ಷಣ ಪಡೆದ ವಿದ್ಯಾರ್ಥಿಯು ನಗರಕ್ಕೆ ತೆರಳಿ ಪಂಡಿತ ಸಭೆಯಲ್ಲಿ ಪಂಡಿತರೊಂದಿಗೆ ವಾದ ಮಾಡಿ ಗೆದ್ದು ಕೀರ್ತಿವಂತನಾಗುವುದರೊಂದಿಗೆ ಶಿಕ್ಷಣದ ಪರಿಸಮಾಪ್ತಿಯು ಆಗುತ್ತದೆ ಎಂಬುದು ಭದ್ರಬಾಹುಭಟಾರರ ಕಥೆಯಲ್ಲಿ ಹೇಳಿದೆ. ಈ ಮೂಲಕ ಗುರುಕುಲದ ಖ್ಯಾತಿಯು ರಾಜನವರೆಗೂ ತಲುಪಿ ರಾಜನು ಸ್ವತಃ ಗುರುಕುಲದ ನಿರ್ವಹಣೆಗೆ ಮುಂದಾಗುತ್ತಾನೆ. ಹೀಗಾಗಿ ಶಿಕ್ಷಣ ವ್ಯವಸ್ಥೆ ಪ್ರಗತಿಯನ್ನು ಹೊಂದುತ್ತದೆ.

          ಈಗ ಮೇಲೆ ಹೇಳಿದಾದ ’ವಡ್ಡಾರಾಧನೆ’ಯಲ್ಲಿನ ಶಿಕ್ಷಣ ವ್ಯವಸ್ಥೆ ಚಿತ್ರಣವು ಆಧುನಿಕ ಕಾಲದ ಶಿಕ್ಷಣ ವ್ಯವಸ್ಥೆಗೆ ಎಷ್ಟರ ಮಟ್ಟಿಗೆ ಅನ್ವಯಿಸಬಹುದೆಂದು ತುಲಾನಾತ್ಮಕವಾಗಿ ಪರಿಶೀಲಿಸಿ ನೋಡೋಣ. ಶಿಕ್ಷಣವು ವಿದ್ಯಾ ಎಂದರೆ ಜ್ಞಾನ ಹಾಗೂ ದರ್ಶನವನ್ನು ಕಾರ್ಯಗತಗೊಳಿಸುವ ಪ್ರಕ್ರಿಯೆಯೇ ಆಗಿದೆ. ಶಿಕ್ಷಣದ ಮಹತ್ವ ಸಾಮಾಜಿಕ ಜೀವನದ ಸಂಪನ್ನತೆ ಮತ್ತು ಸಂಸ್ಕೃತಿಯ ಪ್ರಗತಿಗಾಗಿ ಎಂದು ಪರಿಗಣಿಸಲಾಗಿತ್ತು. ಶಿಕ್ಷಣವು ಸಾಂಸ್ಕೃತಿಯ ಪರಂಪರೆಗಳನ್ನು ನಿರ್ಮಿಸುವುದರಲ್ಲಿ ಹಾಗೂ ವಿಸ್ತರಣೆಯಲ್ಲಿ ನೆರವು ನೀಡುತ್ತದೆ ಹಾಗೂ ವಿದ್ಯಾರ್ಥಿಗೆ ಸಮಾಜದ ಕಲ್ಯಾಣದಲ್ಲಿ ಭಾಗವಹಿಸಲು, ತನ್ನ ಜವಾಬ್ದಾರಿಗಳನ್ನ ಸಮರ್ಥವಾಗಿ ನಿಭಾಯಿಸಲು ಪ್ರೇರೇಪಿಸುತ್ತದೆ. ವ್ಯಕ್ತಿತ್ವದ ಸಂಪೂರ್ಣ ವಿಕಾಸ, ಸಮಾಜದ ಸಂರಕ್ಷಣೆ, ವ್ಯಕ್ತಿಯ ಸಾಮಾಜಕೀಕರಣ, ಮಾನವ ಸಭ್ಯತೆಯ ನಿರ್ಮಾಣ, ಜ್ಞಾನ ಪ್ರಸಾರ, ಆ ಮೂಲಕ ಚರಿತ್ರೆ ನಿರ್ಮಾಣ - ಇವು ಶಿಕ್ಷಣದ ಪ್ರಮುಖ ಉದ್ದೇಶಗಳು. ಈ ಶೈಕ್ಷಣಿಕ ಉದ್ದೇಶಗಳಿಗನುಗುಣವಾಗಿ ಪಠ್ಯಕ್ರಮ ರೂಪಿತವಾಗುತ್ತದೆ. ಪಠ್ಯಕ್ರಮದಲ್ಲಿನ ವಿಷಯಗಳನ್ನು ಕಲಿಸುವುದರಿಂದಲೇ ಆಯಾ ಕಾಲದ ಶಿಕ್ಷಣದ ದೇಯೋದ್ಧೇಶಗಳು, ಜೀವನ ದರ್ಶನದ ಸಾಕ್ಷಾತ್ಕಾರವು ಈಡೇರುತ್ತದೆ.

          ಈ ಹಿನ್ನಲೆಯಲ್ಲಿ ’ವಡ್ಡಾರಾಧನೆ’ಯಲ್ಲಿ ಉಲ್ಲೇಖಿತವಾಗಿರುವ ಪಠ್ಯಕ್ರಮಸ್ವರೂಪವನ್ನು ವೇಚಿಸಿದಾಗ ವೇದಗಳು, ವೇದಾಂಗಗಳು, ಧರ್ಮಶಾಸ್ತ್ರಗಳು ಅಥವಾ ಸ್ಮೃತಿಗಳು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಜ್ಷಾನದ ನೆಲೆಕಟ್ಟಿನಲ್ಲಿ ವ್ಯಕ್ತಿಯ ಚಾರಿತ್ರ್ಯವನ್ನು ನಿರ್ಮಿಸಿ ಆ ಮೂಲಕ ಮಾನವನ ಪರಮೋಚ್ಛ ಗುರಿಯಾದ ಮೋಕ್ಷದೆಡೆಗೆ ಕರೆದೊಯ್ಯಲು ಸಹಕಾರಿಯಾಗಿರುತ್ತಿದ್ದವು. ಮೀಮಾಂಸಾ - ಕ್ರಿಯಾಶಕ್ತಿಯನ್ನೂ, ನ್ಯಾಯವಿಸ್ತರ - ವಾಕ್ ಶಕ್ತಿಯನ್ನೂ ಪ್ರಮಾಣವು - ಸೂಕ್ಮದರ್ಶಿತ್ವವನ್ನೂ, ಛಂದಸ್ಸು, ಅಲಂಕಾರ, ಕಾವ್ಯ, ನಾಟಕ - ಭಾವನಾತ್ಮಕತೆಯನ್ನೂ ಭಾವಾಭಿವ್ಯಕ್ತಿಯನ್ನು ವ್ಯಕ್ತಿಯಲ್ಲಿ ಪ್ರಚೋದಿಸುತ್ತದ್ದವು. ಪ್ರಾಣಿ ಹಾಗೂ ಮಾನವ ವೈದ್ಯಕೀಯ ಶಾಸ್ತ್ರಗಳುಸಾಮುದ್ರಿಕ, ಜ್ಯೋತಿಷ್ಯ ಹಾಗೂ ಮಂತ್ರವಿದ್ಯೆಗಳು ವ್ಯಕ್ತಿಗಳ ಜೀವನೋಪಾರ್ಜನೆಗೆ ವೃತ್ತಿಶೀಕ್ಷಣ ನೀಡಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತಿದ್ದವು. ’ವಡ್ಡಾರಾಧನೆ’ಯಲ್ಲಿ ಬರುವ ವಿದ್ಯುಚ್ಛೋರನ ಕಥೆಯಲ್ಲಿ ಚೋರ ವಿದ್ಯಾಪ್ರಕಾರಗಳನ್ನು ಹೇಳಿದೆ. ಇದರಿಂದ ಕಳ್ಳತನ ನಡೆದ ಬಗೆಯನ್ನು ತಿಳಿದು, ಕಳ್ಳನನ್ನು ಹಿಡಿಯಲೂ ಹಾಗೂ ಮುಂದೆ ಆ ರೀತಿ ಕಳ್ಳತನ ನಡೆಯದಂತೆ ಏರ್ಪಡಿಸಲು ನೆರವಾಗುತ್ತದೆ. ಇದರಿಂದ ಸ್ಫಷ್ಟವಾಗುವ ಅಂಶವೆಂದರೇ ಚೋರತನವು ಅಂದು ಅತ್ಯಂತ ಹೆಚ್ಚಿನ ಪ್ರಮುಖ್ಯತೆ ಪಡೆದ ಅಪರಾಧವೆಂದು ಪರಿಗಣಿಸಲ್ಪಟ್ಟು ಅದನ್ನು ಪತ್ತೆ ಹಚ್ಚಿ ವಿವಾರಿಸುವ ನಿಟ್ಟಿನಲ್ಲಿ ಕೆಲವು ಗ್ರಂಥಗಳನ್ನೂ ರಚಿಸಿದ್ದರು ಎಂದು. ಅಂತಹ ಗ್ರಂಥಗಳಾದ ಕರ್ಪಟಶಾಸ್ತ್ರ ಮತ್ತು ಸುರಖಶಾಸ್ತ್ರಗಳಲ್ಲಿ ಕಳ್ಳನನ್ನು ವಿಧಾನಗಳನ್ನೂ, ಕಳ್ಳನನ್ನು ಯಾವ ರೀತಿಯ ಶಿಕ್ಷೆಗೆ ಒಳಪಡಿಸಬೇಕೆಂಬ ನಿಯಮಗಳನ್ನೂ ಹೇಳಲಾಗಿದ್ದು ಅವುಗಳನ್ನು ಇಂದೂ ಕಳ್ಳತನವನ್ನು ಪತ್ತೆ ಹಚ್ಚುವ, ಕಳ್ಳತನವನ್ನು ತಡೆಯುವ, ಕಳ್ಳತನಕ್ಕೆ ಸಂಬಂಧಿಸಿದ ಅಪರಾಧ ಕಾಯ್ದೆಗಳನ್ನು ರಚಿಸುವ ಸಂದರ್ಭದಲ್ಲಿ ಈ ಶಾಸ್ತ್ರಗಳಲ್ಲಿ ಹೇಳಿದ ಕೆಲವು ಅಂಶಗಳನ್ನು ಸೇರಿಸಲು ಯೋಗ್ಯವಾಗಿದೆ ಎಂದು ಈ ಬಗ್ಗೆ ಅಧ್ಯಯನ ನಡೆಸುವ ಅವಶ್ಯಕತೆಯಿದೆ.

          ’ವಡ್ಡಾರಾಧನೆ’ ಕೃತಿಯಲ್ಲಿ ಹೇಳಿರುವ ಶೈಕ್ಷಣಿಕ ವಿಧಾನಗಳಾದ ಸ್ವಾಧ್ಯಾಯ, ವಾದ, ವ್ಯಾಖ್ಯಾನ ಹಾಗೂ ವಾಕ್ಯಾರ್ಥಗಳು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲೂ ಮಹತ್ವದ ಸ್ಥಾನ ಪಡೆಯಬಹುದಾಗಿದೆ ಮತ್ತು ಪಡೆಯಬೇಕಾಗಿದೆ. ಇಂದು ಪ್ರಚಲಿತವಾಗಿರುವ ಶಿಕ್ಷಣ ವಿಧಾನಗಳಾದ ಕಥನ, ವಿವರಣೆ, ವರ್ಣನೆ, ಚರ್ಚೆ, ಪ್ರಶ್ನೋತ್ತರ, ನಿರೂಪಣೆ ಮುಂತಾದವುಗಳು ಈ ಮೇಲಿನ ಶಿಕ್ಷಣ ವಿಧಾನಗಳಲ್ಲಿ ಅಡಕವಾಗಿವೆಯಾದರೂ ಸ್ವಾಧ್ಯಾಯ ಹಾಗೂ ಮನನ ವಿಧಾನಗಳನ್ನು ಮತ್ತಷ್ಟು ಪ್ರೋತ್ಸಾಹಿಸುವ ಅಗತ್ಯವಿದೆ.

ಆಧಾರ : ’ವಡ್ಡಾರಾಧನೆ’, ಸಂ: ಡಿ.ಎಲ್.ನರಸಿಂಹಾಚಾರ್

-------------------------



No comments:

Post a Comment