Friday, July 12, 2013

ಕರ್ನಾಟಕದಲ್ಲಿ ಪಾನನಿರೋದ ಚಳುವಳಿ ಅಧ್ಯಯನ

ಕರ್ನಾಟಕದಲ್ಲಿ ಗಾಂಧೀಜಿಯವರ ಪಾನನಿರೋಧ ಚಳುವಳಿ ಒಂದು ಅಧ್ಯಯನ
ಶಿವಕುಮಾರ ಎ.ಮತ್ತು  ಎಸ್. ನಾಗರತ್ನಮ್ಮ
ಗಾಂಧೀಜಿಯವರು ಭಾರತದ ರಾಷ್ಟ್ರೀಯ ಹೋರಾಟ ವೇದಿಕೆಯ ಮೇಲೆ ಕಾಣಿಸಿಕೊಂಡು, ದೇಶವನ್ನು ಪರರ ದಾಸ್ಯದಿಂದ ವಿಮುಕ್ತಿಗೊಳಿಸುವುದಷ್ಟೇ ಅಲ್ಲದೆ, ರಾಷ್ಟ್ರ ನಿರ್ಮಾಣದ ಉದ್ದೇಶವನ್ನು ಹೊಂದಿದ್ದರು. ತಮ್ಮ ಹೋರಾಟದ ಜೊತೆ ಜೊತೆಯಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ಕೈಗೊಂಡು, ಅವುಗಳ ಯಶಸ್ಸಿಗೆ ನಿರಂತರವಾಗಿ ಶ್ರಮಿಸಿದರು. ಮುಂದೆ ಶಾಶ್ವತವಾದ ಹೊಸ ಸಮಾಜವನ್ನು ಕಟ್ಟುವ ವಿಷಯವೇ ಗಾಂಧೀಜಿಯವರ ರಚನಾತ್ಮಕ ಕಾರ್ಯಕ್ರಮಗಳ ಮೂಲ ಉದ್ದೇಶವಾಗಿತ್ತು. ಹಾಗೂ ಹಳ್ಳಿಗಳಲ್ಲಿನ ಬಡಜನರ ಉದ್ದಾರಕ್ಕೋಸ್ಕರ [ಅವರ ದಿನನಿತ್ಯದ ಹಸಿವನ್ನು ನೀಗಿಸುವುದಕ್ಕೋಸ್ಕರ] ಮತ್ತು ಅವರ ಬದುಕನ್ನು ಹಸನಾಗಿಸಲು ಗಾಂಧೀಜಿಯವರು ಈ ರಚನಾತ್ಮಕ ಕಾರ್ಯಕ್ರಮಗಳನ್ನು ಜಾರಿಗೆ ತಂದರು.
ಗಾಂಧೀಜಿಯವರ ಈ ಉದ್ದೇಶವನ್ನು ಅಖಿಲ ಭಾರತ ಕಾಂಗ್ರೆಸ್ ಸಹ ಒಪ್ಪಿಕೊಂಡಿದ್ದಿತು. ಆದ್ದರಿಂದಲೇ ಗಾಂಧೀಜಿಯವರು ಕಾಂಗ್ರೆಸ್‌ನ ಕಾರ್ಯಕ್ರಮಗಳ ಪಟ್ಟಿಯಲ್ಲಿ ಈ ರಚನಾತ್ಮಕ ಕಾರ್ಯಕ್ರಮಗಳನ್ನು ಸೇರಿಸಿದ್ದರು. ಅವುಗಳೆಂದರೆ ಸ್ವದೇಶಿ, ಖಾದಿ ಗ್ರಾಮೋದ್ಯೋಗಗಳು, ಪಾನನಿರೋಧ, ಅಸ್ಪೃಶ್ಯತಾ ನಿವಾರಣೆ, ಗೋಸಂರಕ್ಷಣೆ, ಹಿಂದೂ-ಮುಸ್ಲಿಂ ಐಕ್ಯತೆ, ರಾಷ್ಟ್ರೀಯ ಶಿಕ್ಷಣ, ಮಹಿಳೆಯರ ಏಳಿಗೆ, ಆರೋಗ್ಯ ಮತ್ತು ನೈರ್ಮಲ್ಯ, ಹಿಂದಿ ಪ್ರಚಾರ ಇಂತಹ ದೇಶ ನಿರ್ಮಾಣದ ಕಾರ್ಯಕ್ರಮಗಳನ್ನು ಗಾಂಧೀಜಿಯವರು ರೂಪಿಸಿದರು.
೧೯೧೮ರವರೆಗೂ ಶಾಸನಬದ್ಧ ಚಟುವಟಿಕೆಗಳಲ್ಲಿ ತೊಡಗಿದ್ದ ಕಾಂಗ್ರೆಸ್ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಅಸಹಕಾರ ಚಳುವಳಿಯ ಮಾರ್ಗವನ್ನು ಹಿಡಿಯಿತು. ಕರ್ನಾಟಕದಲ್ಲಿಯೂ ಸಹ ಜನತೆ ಗಾಂಧೀಜಿಯವರ ಪ್ರಭಾವಕ್ಕೆ ಮಣಿಯಲಾರಂಭಿಸಿದರು. ೧೯೨೦ರ ನಾಗಪುರ ಕಾಂಗ್ರೆಸ್ ಅಧಿವೇಶನ ದೇಶದಾದ್ಯಂತ ಬ್ರಿಟಿಷರ ವಿರುದ್ಧ ಅಸಹಕಾರ ಚಳುವಳಿಗೆ ತನ್ನ ಒಪ್ಪಿಗೆಯನ್ನಿತ್ತು, ಅಸಹಕಾರ ಚಳುವಳಿಯ ಭಾಗವಾಗಿ ರಚನಾತ್ಮಕ ಕಾರ್ಯಕ್ರಮಗಳನ್ನು ಕೈಗೊಳ್ಳಲು ಕರೆ ನೀಡಿತು.
ಯಾವ ಮನುಷ್ಯ ಇಂದು ತನಗೆ ದಿಕ್ಕು ದೆಸೆಯಿಲ್ಲದೆ ಸಮಾಜದ ಕೊನೆಯಲ್ಲಿ ಉಳಿದಿದ್ದಾನೆಯೋ ಆತನ ಬಗ್ಗೆ ನಾವು ಯೋಚಿಸದ ಹೊರತು ನಮ್ಮ ಸಮಾಜದಲ್ಲಿ ಸರಿಸಮಾನತ್ವವನ್ನು ಕಾಣಲು ಸಾಧ್ಯವಿಲ್ಲ. ಆದ್ದರಿಂದ ನಾವುಗಳು ಈ ಸಮಾಜದಲ್ಲಿರುವ ಅಂಗವಿಕಲರೂ ಹಾಗೂ ಅಸಹಾಯಕರ ಪುರೋಭಿವೃದ್ಧಿಯವರೆಗೂ ಯೋಚನೆ ಮಾಡಬೇಕಾಗಿದೆ. ಸಮಾಜದ ಇಂತಹ ಕಟ್ಟಕಡೆಯ ಮನುಷ್ಯರ ಉದ್ದಾರವಾಗುವುದೇ ನಮ್ಮ ಗುಡಿಯಾಗಿರಬೇಕು. ಅದು ನಮ್ಮ ಧ್ಯೇಯವು ಸಹ ಆಗಿರಬೇಕು. ಕೇವಲ ಶಕ್ತಿವಂತರು ಮಾತ್ರ ಉದ್ಧಾರವಾಗದೆ ಬಲಹೀನರು ಮತ್ತು ದುರ್ಬಲರನ್ನು ಸಹ ಶಕ್ತಿವಂತರು ತಮ್ಮ ಜೊತೆಯಲ್ಲಿ ಸೇರಿಸಿಕೊಳ್ಳಬೇಕಾಗಿದೆ. ಆದ್ದರಿಂದ ಅಖಿಲ ಭಾರತ ಕಾಂಗ್ರೆಸ್ ಸಂಘಟನೆಯೆಂಬುದು ಜನತಾ ಸಂಘಟನೆಯಾಗಬೇಕೆಂಬುದು ಗಾಂಧೀಜಿಯವರ ಮಹದಾಸೆಯಾಗಿತ್ತು. ಈ ಮಹದಾಸೆಯ ಕಾರ್ಯಗತಕ್ಕಾಗಿ ರಚನಾತ್ಮಕ ಕಾರ್ಯಕ್ರಮಗಳನ್ನನುಸರಿಸಲು ಜನತೆಗೆ ಕರೆ ನೀಡಿದರು ಎಂದರೆ ತಪ್ಪಾಗಲಾರದು.
ಒಂದು ಉನ್ನತ ನಾಗರೀಕತೆಯನ್ನು ಸ್ಥಾಪನೆ ಮಾಡಬೇಕಾದರೆ ನೂರಾರು ವರ್ಷಗಳಾಗುತ್ತದೆ ಎನ್ನಬಹುದು. ಗಾಂಧೀಜಿಯವರು ಹೇಳಿದ ಎಲ್ಲಾ ರಚನಾತ್ಮಕ ಕಾರ್ಯಕ್ರಮಗಳು ಇಂದಿಗೂ ಕಾರ್ಯಗತವಾಗುತ್ತವೆ ಎಂದು ನಾವು ಹೇಳಲಾಗದು. ಇಂದು ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳು ವಿಪರೀತವಾಗಿರಬಹುದು. ಆದರೆ ನಾವು ಈ ವಿಚಾರವನ್ನು ಆದಷ್ಟು ಅಭ್ಯಾಸ ಮಾಡುತ್ತಾ ನಮ್ಮ ಜನಗಳನ್ನು ವಿಕಾಸಗೊಳಿಸುತ್ತಾ ಗಾಂಧೀಜಿಯವರ ಈ ರಚನಾತ್ಮಕ ಕಾರ್ಯಕ್ರಮಗಳನ್ನು ಬೆಳೆಸಬೇಕು. ಅವುಗಳು ಇಂದಿನ ದಿನಗಳಲ್ಲಿ ಅಷ್ಟೊಂದು ಪ್ರಗತಿದಾಯಕವಾಗಿ ನಡೆಯುತ್ತಿಲ್ಲವಾದರೂ ಇಂದಿಲ್ಲಾ ನಾಳೆಯಾದರೂ ಒಂದು ಒಳ್ಳೆಯ ಸಮಾಜ ಸೃಷ್ಟಿಯಾಗುವುದಕ್ಕೋಸ್ಕರ ಮನುಷ್ಯ ಆ ಪ್ರಯತ್ನ ಮಾಡುತ್ತಾನೆ. ಅದಕ್ಕಾಗಿ ಗಾಂಧೀಜಿಯಂತಹ ಅನೇಕರು ಬಂದು ಮಾರ್ಗದರ್ಶನ ಕೊಡಬಹುದು. ಈ ದೃಷ್ಟಿಯಿಂದ ನಾವು ಆದಷ್ಟು ಮಟ್ಟಿಗೆ ಗಾಂಧೀಜಿಯವರು ಹಾಕಿಕೊಟ್ಟಂತಹ ಈ ರಚನಾತ್ಮಕ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗಲು ಪ್ರಯತ್ನಿಸಬೇಕು.
ಪಾನನಿರೋಧ ಚಳುವಳಿ: ಗಾಂಧೀಜಿಯವರು “ಅಸ್ಪೃಶ್ಯತೆಯ ಆಚರಣೆ ಮತ್ತು ಮದ್ಯಪಾನ ಸೇವನೆ ಒಂದು ರಾಷ್ಟ್ರದ ಅಭಿವೃದ್ದಿಗೆ ಇರುವ ಮಹಾ ತಡೆಗೋಡೆಗಳು’’ ಎಂದು ಅಭಿಪ್ರಾಯಪಟ್ಟಿದ್ದಾರೆ. ಪಾನನಿರೋಧವು ರಚನಾತ್ಮಕ ಕಾರ್ಯಕ್ರಮಗಳಲ್ಲಿ ಬಹಳ ಪ್ರಮುಖವಾದದ್ದು, ಇದು ಭಾರತದ ದುಷ್ಟ ಪದ್ಧತಿಗಳಲ್ಲಿ ಒಂದು ಎಂದು ಹೇಳಬಹುದು. ಗಾಂಧೀಜಿಯವರ ದೃಷ್ಟಿಯಲ್ಲಿ ‘ಮದ್ಯಪಾನ ಸೇವನೆಯು ವ್ಯಭಿಚಾರಕ್ಕಿಂತಲೂ ಹೇಯವಾದದ್ದು, ಮದ್ಯಪಾನ ವ್ಯಸನಕ್ಕೆ ತುತ್ತಾದ ರಾಷ್ಟ್ರಕ್ಕೆ ಆತ್ಮ ನಾಶವಲ್ಲದೆ ಅನ್ಯಗತಿ ಇಲ್ಲ. ಮದ್ಯ ಮತ್ತು ಮಾದಕ ಪದಾರ್ಥಗಳು ಪಿಶಾಚಿಯ ಎರಡು ಕೈಗಳು. ಇವುಗಳು ಮನುಷ್ಯನನ್ನು ಅಸಹಾಯಕ, ಗುಲಾಮನನ್ನಾಗಿ, ಬುದ್ಧಿ ಭ್ರಷ್ಟರನ್ನಾಗಿ ಮತ್ತು ಪ್ರಜ್ಞಾಹೀನರನ್ನಾಗಿಯೂ ಮಾಡುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಇದರ ಸಂಪೂರ್ಣ ನಿರ್ಮೂಲನೆಗೆ ಕಾರ್ಯಪ್ರವೃತ್ತರಾದರು.
ಪಾನನಿರೋಧದಿಂದ ಒಂದು ಬಲಿಷ್ಠ ಸದೃಢ ಸಮಾಜವನ್ನು ನಿರ್ಮಿಸಬಹುದು. ಹರಿಜನರ ಅಭಿವೃದ್ಧಿಯಲ್ಲಿ ಪಾನನಿರೋಧ ಬಹಳ ಪ್ರಮುಖವಾದ ಅಂಶವಾಗಿದೆ. ಇವರುಗಳು ತಮ್ಮ ದುಡಿತದ ಬಹಳಷ್ಟು ಹಣವನ್ನು ಮದ್ಯಸೇವನೆಗೆ ವೆಚ್ಚ ಮಾಡುತ್ತಾರೆ. ಮಿಲಿಯನ್‌ಗಟ್ಟಲೆ ಜನ ಹಸಿವು, ಬಡತನದ ಜೀವನವನ್ನು ಅನುಭವಿಸುತ್ತಾರೆ. ಈ ಕಾರಣಕ್ಕಾಗಿ ಗಾಂಧೀಜಿಯವರು ಪಾನನಿರೋಧ ಜಾರಿಗೆ ತರುವಂತೆ ಕಾಂಗ್ರೆಸ್‌ಅನ್ನು ಒತ್ತಾಯಿಸುತ್ತಿದ್ದರು. ಈ ಕಾರಣದಿಂದ ಕಾಂಗ್ರೆಸ್ ಪಾನನಿರೋಧವನ್ನು ತನ್ನ ಕಾರ್ಯಕ್ರಮಗಳಲ್ಲಿ ಸೇರಿಸಿಕೊಂಡಿತು. ೧೯೨೧-೨೨ರ ಅಸಹಕಾರ ಚಳುವಳಿ ಸಂದರ್ಭಕ್ಕೆ ಪಾನನಿರೋಧದ ಪರ ತೀವ್ರತರ ಹೋರಾಟಗಳು ನಡೆದವು. ಮದ್ಯಪಾನದಿಂದ ಸರ್ಕಾರಕ್ಕೆ ದೊರೆಯುವ ಆದಾಯ ಅತ್ಯಂತ ಕೀಳುಮಟ್ಟದ ಆದಾಯವಾಗಿರುತ್ತದೆ. ಅಂತಹ ಆದಾಯದಿಂದ ರಾಷ್ಟ್ರದ ಪ್ರಗತಿಗೆ ಮತ್ತು ರಾಷ್ಟ್ರದ ಶಿಕ್ಷಣಕ್ಕೆ ಇದರಿಂದ ಬಂದಂತಹ ಹಣವನ್ನು ತೊಡಗಿಸುವುದು ಬಹಳ ಕೀಳುಮಟ್ಟದ ರಾಜಕಾರಣವಾಗುತ್ತದೆ ಹಾಗೂ ಅದು ಅಷ್ಟೊಂದು ಸೂಕ್ತವಲ್ಲ ಎಂಬುದು ಗಾಂಧೀಜಿಯವರ ಅಭಿಪ್ರಾಯವಾಗಿದೆ.
ಯುವ ಜನಾಂಗ ಅತ್ಯಂತ ಅತಂತ್ರ ಸ್ಥಿತಿ ತಲುಪುತ್ತಿರುವುದಕ್ಕೆ ಮದ್ಯಪಾನವೇ ಕಾರಣವಾಗಿದೆ ಎಂದು ತಿಳಿದ ಕಾಂಗ್ರೆಸ್‌ನ ಕಾರ್ಯಕರ್ತರು ಪಾನನಿರೋಧ ಪೂರ್ವಕಾಲದಲ್ಲೇ ತಿಲಕರು ಕರ್ನಾಟಕದ ಬೆಳಗಾವಿಯಲ್ಲಿ ಪಾನನಿರೋಧಕ್ಕೆ ಕರೆ ನೀಡಿದಾಗ, ಗೋವಿಂದರಾವ್ ಯಾಳಗಿ ಮತ್ತು ಜೋಷಿ ಕರ್ನಾಟಕದಲ್ಲಿ ಪ್ರಥಮವಾಗಿ ಪಾನನಿರೋಧ ಚಳುವಳಿಯನ್ನು ನಡೆಸಿ, ದಂಡ ಕೊಡದೆ ಜೈಲು ಶಿಕ್ಷೆಯನ್ನು ಅನುಭವಿಸಿದರು.
ಅನಂತರ ಕರ್ನಾಟಕದಲ್ಲಿ ಪಾನನಿರೋಧ ಚಳುವಳಿಯ ಚಟುವಟಿಕೆಗಳನ್ನು ವ್ಯಾಪಕವಾಗಿ ಕಾಣಬಹುದು. ಅಸಹಕಾರ ಚಳುವಳಿಯಲ್ಲೇ ಮದ್ಯದ ಅಂಗಡಿಗಳ ಮುಂದೆ ಪಿಕೆಟಿಂಗ್ ಮಾಡುವುದರ ಮೂಲಕ ಪಾನನಿರೋಧ ಚಳುವಳಿಯನ್ನು ಗುರುತಿಸಬಹದು. ತದನಂತರ ೧೯೩೧ರಲ್ಲಿ ಕರ್ನಾಟಕದಲ್ಲಿ ಪಾನನಿರೋಧ ಚಳುವಳಿ ಭರದಿಂದ ಸಾಗಿತು. ಕಾರಣ ಮದ್ಯಸೇವನೆಯಿಂದ ಮಾನವನ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಜೀವನದ ಪ್ರಗತಿಯನ್ನು ಕಾಣುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ಮೈಸೂರಿನ ಎಂ. ನಂಜುಂಡಪ್ಪ, ಸಿ. ಲಿಂಗೇಗೌಡ, ಬಸಪ್ಪಶೆಟ್ಟಿ ಮತ್ತು ದೊಡ್ಡಯ್ಯ ಮತ್ತಿತರರು ಪಾನನಿರೋಧವನ್ನು ಜಾರಿಗೆ ತರಲು ಮೈಸೂರು ಸರ್ಕಾರವನ್ನು ಒತ್ತಾಯಿಸುತ್ತಿದ್ದರು. ೧೯೨೬ರ ನಂತರ ಅಸೆಂಬ್ಲಿ ಮತ್ತು ಕೌನ್ಸಿಲ್‌ಗಳಲ್ಲಿ ಪಾನನಿರೋಧ ಪ್ರಶ್ನೆಯು ಚರ್ಚೆಯ ವಿಷಯವಾಯಿತು. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ದಿವಾನರು ‘ಸಾರ್ವಜನಿಕರು ಮದ್ಯಸೇವನೆಯನ್ನು ತ್ಯಜಿಸಲು ಸಿದ್ದರಾಗಿದ್ದರೆ, ಸರ್ಕಾರಕ್ಕೆ ಅದರಿಂದ ಎಷ್ಟೇ ಆದಾಯ ಇದ್ದರೂ ಕಳೆದುಕೊಳ್ಳಲು ಸಿದ್ದವಾಗಿದೆ. ಎಂಬುದನ್ನು ತಿಳಿಸುವುದರ ಮೂಲಕ ಪಾನನಿರೋಧಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ೧೯೨೯ರಲ್ಲಿ ‘ಮದ್ಯ ನಿಷೇದ ಸಮಿತಿ ಪ್ರಾರಂಭವಾಗಿ ಟೇಕೂರು ಸುಬ್ರಮಣ್ಯಂ ಅವರು ಇದರ ಕಾರ್ಯದರ್ಶಿಯಾಗಿದ್ದರು. ಇವರು ಸಂಸ್ಥೆಯ ಮೂಲಕ ಅಮಲು ವಸ್ತುಗಳ ನಿಷೇಧ ಚಳುವಳಿಯನ್ನು ನಡೆಸಿದರು. ಪಾನ ಪ್ರತಿಬಂಧಕ ಆಂದೋಲನದಲ್ಲಿ ಮುಂಚೂಣಿಯಲ್ಲಿದ್ದ ಅಂದಿನ ಮದ್ರಾಸ್ ಸರ್ಕಾರವು ಈ ಮದ್ಯನಿಷೇಧ ಸಮಿತಿಗೆ ಧನಸಹಾಯವನ್ನು ಸಹ ನೀಡಿತು.
ಟಿ.ಬಿ. ಕೇಶವರಾಯರು ಸಹ ಹರಪ್ಪನಹಳ್ಳಿಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಪಾನನಿರೋಧ ಚಳುವಳಿಯನ್ನು ಹಮ್ಮಿಕೊಂಡರು.೧೦ ಅಲ್ಲಿನ ನೆರೆಹೊರೆಯ ಮದ್ಯದ ಅಂಗಡಿಗಳನ್ನು ಮುಚ್ಚಿಸಿದರು. ಈ ಚಳುವಳಿಯು ೧೯೩೦ರ ಸಂದರ್ಭದಲ್ಲಿ ಸೇಂದಿ ಗಿಡ ಅಥವಾ ಈಚಲು ಗಿಡಗಳನ್ನು ಕಡಿಯುವ ಮೂಲಕ ಅರಣ್ಯ ಸತ್ಯಾಗ್ರಹವನ್ನು ನಡೆಸಿ ಆ ಮೂಲಕ ಚಳುವಳಿಯು ತೀವ್ರ ಸ್ವರೂಪವನ್ನು ಪಡೆಯುವಂತೆ ಮಾಡಿದರು. ಈ ಚಳುವಳಿಯು ಮೊದಲು ಬಾಂಬೆ-ಕರ್ನಾಟಕದಲ್ಲಿ ಪ್ರಾರಂಭವಾಗಿ, ಬಳ್ಳಾರಿ, ಬಿಜಾಪುರ, ಬೆಳಗಾಂ ಮತ್ತು ಧಾರವಾಡ ಮತ್ತಿತರ ಸ್ಥಳಗಳಲ್ಲಿ ವ್ಯಾಪಕವಾಗಿ ಹರಡಿತು.೧೧
ಏಪ್ರಿಲ್ ೧೯೩೧ರಲ್ಲಿ ಸರ್ಕಾರವು ಬೆಂಗಳೂರಿನ ಟಿಪ್ಪು ಅರಮನೆಯಲ್ಲಿ ಸೇಂದಿ ಗುತ್ತಿಗೆಗೆ ಹರಾಜನ್ನು ಏರ್ಪಡಿಸಿದಾಗ, ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಮತ್ತು ಮೈಸೂರಿನ ಪಾನನಿರೋಧ ಸಂಘ, ಅರಮನೆಯ ಮುಂದೆ ಪಿಕೆಟಿಂಗ್ ನಡೆಸಲು ಮುಂದಾದಾಗ, ಸರ್ಕಾರ ಬಿಗಿಬಂದೋಬಸ್ತ್‌ನ್ನು ಮಾಡಿತು.೧೨
೧೯೩೧ರಲ್ಲಿ ತುಮಕೂರು ಜಿಲ್ಲೆಯಲ್ಲಿ ನಡೆದ ಪಾನನಿರೋಧ ಚಳುವಳಿಯು ಮೈಸೂರು ಸಂಸ್ಥಾನದಲ್ಲಿಯೇ ಒಂದ ಮೈಲಿಗಲ್ಲಾಗಿದೆ. ತುಮಕೂರು ಹತ್ತಿರದ ಎಲ್ಲಾಪುರದ ಹೆಂಡದಂಗಡಿಯ ಮುಂದೆ ಕಾಂಗ್ರೆಸ್ ಪ್ರಮುಖರಾದ ಬಿ.ಸಿ. ನಂಜುಂಡಯ್ಯ ಮತ್ತು ಎಂ.ಎನ್. ವಿಠೋಬರಾವ್ ಮುಂತಾದವರು ಪಿಕೆಟಿಂಗ್ ಮಾಡುವುದರ ಮೂಲಕ ಕುಡಿಯುವವರ ಸಂಖ್ಯೆಯನ್ನು ಕಡಿಮೆಗೊಳಿಸಿದರು. ಇದರ ಪ್ರತಿಫಲವಾಗಿ ಸತ್ಯಾಗ್ರಹಿಗಳು ಅಂಗಡಿಯ ಮಾಲೀಕರಿಂದ ಹಲವು ರೀತಿಯ ತೊಂದರೆಯನ್ನು ಅನುಭವಿಸ ಬೇಕಾಯಿತು.೧೩
ಜಿಲ್ಲಾ ಕಾಂಗ್ರೆಸ್ ಕಮಿಟಿಗಳು ಸಾರ್ವಜನಿಕ ಸಭೆಗಳನ್ನು ವ್ಯವಸ್ಥೆ ಮಾಡಿ, ಕೆಲವು ಪ್ರಮುಖ ಕಾಂಗ್ರೆಸ್ಸಿಗರನ್ನು ಆಹ್ವಾನಿಸಿ ಮದ್ಯಪಾನ ಕುರಿತು ಉಪನ್ಯಾಸಗಳನ್ನು ಏರ್ಪಡಿಸುತ್ತಿದ್ದರು. ಇಂತಹ ಹಲವು ಸಂದರ್ಭಗಳಲ್ಲಿ, ಮದ್ಯ ಗುತ್ತಿಗೆದಾರರ ವಿರೋಧವನ್ನು ಎದುರಿಸಬೇಕಾಯಿತು. ಈ ಚಳುವಳಿಯು ಸಹ ಇತರ ರಚನಾತ್ಮಕ ಕಾರ್ಯಗಳಂತೆ ಕ್ಲಿಷ್ಟವಾದ ಕಾರ್ಯವೆಂದೇ ಹೇಳಬಹುದು.
೧೯೩೦ರ ಸಂದರ್ಭದಲ್ಲಿ ಕೊಡಗಿನಲ್ಲಿಯೂ ಪಾನನಿರೋಧ ಚಳುವಳಿ ತೀವ್ರವಾಯಿತು. ವಿರಾಜಪೇಟೆಯಲ್ಲಿ ಸತ್ಯಾಗ್ರಹ ಶಿಬಿರವನ್ನು ಸಂಘಟಿಸಿದರು.೧೪ ಪೊನ್ನಪ್ಪನವರ ಅಧ್ಯಕ್ಷತೆಯಲ್ಲಿ, ಮಡಿಕೇರಿಯಲ್ಲಿ ಸಭೆಯಾಗಿ, ಪಾನನಿರೋಧ ಚಳುವಳಿಗೆ ಚಾಲನೆ ದೊರೆಯಿತು. ಹಾಗೆಯೇ ಬೆಳ್ಳಿಯಪ್ಪ, ಹೆಚ್.ಆರ್. ಕೃಷ್ಣಯ್ಯ, ಕೋಳಿವಾಡ ಕರುಂಬಯ್ಯ, ಕೆ.ಪಿ. ಚಿಣ್ಣಪ್ಪ ಮತ್ತು ಅಬ್ದುಲ್ ಗಫಾರ್ ಖಾನ್ ಮುಂತಾದವರ ಮುಂದಾಳತ್ವದಲ್ಲಿ ಪ್ರಚಾರ ಸಭೆಗಳಾದವು.೧೫ ದಿನಾಂಕ ೩೦-೫-೧೯೩೦ರಂದು ಬೆಳ್ಳಿಯಪ್ಪ ಕೊಡಗಿನ ಜಿಲ್ಲಾ ಕಮೀಷನರ್‌ಗೆ ಮದ್ಯಪಾನದಿಂದ ಆಗುವ ಮಾರಕ ಪರಿಸ್ಥಿತಿಯ ಬಗ್ಗೆ ಕೋರಿಕೆ ಪತ್ರವನ್ನು ಸಲ್ಲಿಸಿದರು. ಆದರೆ ಸರ್ಕಾರ ಈ ಪತ್ರದ ಕಡೆ ಗಮನ ಹರಿಸಲಿಲ್ಲ. ಆದಕಾರಣ ಪೊನ್ನಂಪೇಟೆಯಲ್ಲಿ ದಿನಾಂಕ ೧೦-೬-೧೯೩೦ರಂದು ಬೆಳ್ಳಿಯಪ್ಪನವರ ನೇತೃತ್ವದಲ್ಲಿ ಈ ಚಳುವಳಿಯನ್ನು ಹಮ್ಮಿಕೊಳ್ಳಲಾಯಿತು.೧೬ ಅಮ್ಮತಿ, ಶ್ರೀಮಂಗಲ, ಕುಟ್ಟಿ ಮತ್ತು ಹುದಿಕೇರಿಗಳಲ್ಲಿ ಶಿಬಿರಗಳನ್ನು ಪ್ರಾರಂಭಿಸಿ, ಮದ್ಯದಂಗಡಿಗಳ ಮುಂದೆ ಪಿಕೆಟಿಂಗ್ ಮಾಡಲಾಯಿತು. ಬೆಳ್ಳಿಯಪ್ಪ ತಮ್ಮ ದಸ್ತಗಿರಿ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮುಷ್ಕರ ಪ್ರಾರಂಭಿಸಲು ಕರೆ ನೀಡಿದರು.೧೭ ಇದರಿಂದಾಗಿ ಕ್ರಮೇಣ ಕೊಡಗಿನಲ್ಲಿ ಮದ್ಯ ಸೇವಿಸುವವರ ಪ್ರಮಾಣ ಕಡಿಮೆಯಾಯಿತು.೧೮
ಮೈಸೂರು ಡಿಸ್ಟ್ರಿಕ್ಟ್ ಕಾಂಗ್ರೆಸ್ ಕಮಿಟಿಯ ದಿನಾಂಕ ೧೦ ಜುಲೈ ೧೯೩೦ರಂದು ಚಾಮರಾಜಪೇಟೆಯಲ್ಲಿ ಸಾರ್ವಜನಿಕ ಸಭೆಗಳನ್ನು ಏರ್ಪಡಿಸಿತ್ತು. ಸಭೆಗೆ ಆಗಮಿಸಿದ್ದ ಹೆಚ್.ಸಿ. ದಾಸಪ್ಪನವರು ಕುಡಿತಕ್ಕೆ ಹೆಚ್ಚು ಹೆಚ್ಚು ಹಣ ಖರ್ಚು ಮಾಡಿ ಪೋಲು ಮಾಡುವುದರಿಂದ ಬಹಳ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ.೧೯ ಈಗ ಮದ್ಯಪಾನವನ್ನು ನಾಶಪಡಿಸುವುದು ಒಂದೇ ಮಾರ್ಗ ಎಂದು ಮಾತನಾಡಿದರು. ಬೆಂಗಳೂರು ನಗರ ಕಾಂಗ್ರೆಸ್ ದಿನಾಂಕ ೨೭ ಸೆಪ್ಟೆಂಬರ್ ೧೯೩೮ರಂದು ‘ಮದ್ಯಪಾನ ವಿರೋಧ ದಿನವನ್ನು ಆಚರಿಸಿತು.
ಮೈಸೂರು ಕಾಂಗ್ರೆಸ್ ಅಧಿವೇಶನದಲ್ಲಿ ಅಂಗೀಕೃತವಾದ ನಿಣ್ಯಗಳನ್ನು ಕಾರ್ಯರೂಪಕ್ಕೆ ತರಲು ರಾಜ್ಯದಾದ್ಯಂತ ದಿನಾಂಕ ೧೭-೫-೧೯೩೯ರಿಂದ ೨೩-೫-೧೯೩೯ರ ವರೆಗೂ ಮೈಸೂರು ಕಾಂಗ್ರೆಸ್ ಸಪ್ತಾಹವನ್ನು ಆಚರಿಸ ಬೇಕೆಂದು ಕಾಂಗ್ರೆಸ್ ನಿರ್ಧರಿಸಿತು.೨೦ ಈ ನಿರ್ಧಾರದಂತೆ ಮೇ ೨೨, ೧೯೩೯ರಂದು ‘ಕರ್ನಾಟಕದಾದ್ಯಂತ ಪಾನನಿರೋಧ ಚಳುವಳಿಯನ್ನು ಹಮ್ಮಿಕೊಳ್ಳಲಾಯಿತು. ಪಾನನಿರೋಧಕ್ಕೆ ಹರಿಜನರನ್ನು ಸಹಕರಿಸುವಂತೆ ಕೋರಿ, ಕೆಲವೆಡೆ ಅವರಿಂದ ಮದ್ಯಪಾನ ಮಾಡದಿರುವ ಹಾಗೆ ಪ್ರತಿಜ್ಞೆಯನ್ನು ಮಾಡಿಸಿದರು.೨೧
ಮೈಸೂರು ಸರ್ಕಾರವು ಪ್ರಯೋಗಾತ್ಮಕವಾಗಿ ಅಫೀಮು ಮತ್ತು ಮದ್ಯ ನಿಷೇಧವನ್ನು ಜಾರಿಗೆ ತಂದಿತು. ಚನ್ನಪಟ್ಟಣದಲ್ಲಿ ಮದ್ಯದ ಅಂಗಡಿಗಳನ್ನಾಗಲಿ ಅಥವಾ ಅಫೀಮು ಅಂಗಡಿಗಳನ್ನಾಗಲಿ ತೆರೆಯುವಂತಿರಲಿಲ್ಲ. ಎಂದು ಸರ್ಕಾರ ಜುಲೈ ೧-೧೯೪೧ರಂದು ಆಜ್ಞೆಯನ್ನು ಹೊರಡಿಸಿತು.೨೨ ಹೀಗೆ ಸರ್ಕಾರದ ಪ್ರಯತ್ನಗಳು, ಪ್ರಯೋಗಾತ್ಮಕ ವಾಗಿದ್ದವೆ ಹೊರತು ಪರಿಣಾಮಕಾರಿಯಾಗಿರಲಿಲ್ಲ. ಸರ್ಕಾರವೇ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಯಿತು.
ಕಾಲಕ್ರಮೇಣ ಪಾನನಿರೋಧ ಬಿಗಿಯಿಂದಾಗಿ ಸರ್ಕಾರದ ಆದಾಯದಲ್ಲಿ ಬಹಳಷ್ಟು ಏರುಪೇರಾಯಿತು. ಅದೇ ಸಂದರ್ಭದಲ್ಲಿ ಕಳ್ಳಭಟ್ಟಿಯ ಉತ್ಪಾದನೆ ಹೆಚ್ಚಾಯಿತು. ಇದರಿಂದಾಗಿ ಸರ್ಕಾರಕ್ಕೆ ಬರುವ ಆದಾಯ ಕಡಿಮೆಯಾಯಿತೇ ಹೊರತು ಕುಡಿಯುವವರ ಸಂಖ್ಯೆ ಕಡಿಮೆಯಾಗಲಿಲ್ಲ.
ಇದನ್ನು ಗಮನಕ್ಕೆ ತೆಗೆದುಕೊಂಡ ಸರ್ಕಾರ ‘ಕರ್ನಾಟಕ ಪಾನನಿರೋಧ ಅಧಿನಿಯಮವನ್ನು ಸಡಿಲಗೊಳಿಸಿತು. ೧೯೭೧ರಲ್ಲಿ ಕರ್ನಾಟಕ ಸರ್ಕಾರವು ‘ಪಾನ ಸಂಯಮ ಮಂಡಳಿಯನ್ನು ಸ್ಥಾಪಿಸಿತು. ‘ಈ ಸಂಸ್ಥೆಯು ಕುಡಿತ ದಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿಷಯಗಳನ್ನು ಸೇರಿಸಿ, ವಿದ್ಯಾರ್ಥಿ ದೆಸೆಯಿಂದಲೇ ಅರಿವು ಮೂಡಿಸಿ, ಈ ದುಷ್ಪರಿಣಾಮಗಳನ್ನು ಮೊಳಕೆಯಲ್ಲೇ ಚಿವುಟುವಂತಹ ಪ್ರಯತ್ನಗಳನ್ನು ಮಾಡುವ ಉದ್ದೇಶದಿಂದ ಕಾರ್ಯ ನಿರ್ವಹಿಸಿತು.
ಆಧಾರಸೂಚಿ ಮತ್ತು ಟಿಪ್ಪಣಿಗಳು
೧.         ಮೌಲಾನಾ ಅಬ್ದುಲ್ ಕಲಾಂ ಆಜಾದ್ (ಸಂ), ಗಾಂಧಿಯನ್ ಔಟ್‌ಲುಕ್ ಅಂಡ್ ಟೆಕ್ನಿಕ್ಸ್ (ದೆಹಲಿ, ೧೯೫೩), ಪುಟ ೩೫೯.
೨.         ಮೋ.ಕ. ಗಾಂಧಿ, ಖಾದಿ ಗ್ರಾಮೋದ್ಯೋಗ, (ಅನು) ವಿ.ಟಿ. ಭಟ್ಟ, (ಬೆಂಗಳೂರು-೧೯೬೮), ಪುಟ ೫೧.
೩.         ಮೋ.ಕ. ಗಾಂಧಿ, ಕನ್‌ಸ್ಟ್ರಕ್ಟೀವ್ ಪ್ರೋಗ್ರಾಮ್ಸ್ ಇಟ್ಸ್ ಮೀನಿಂಗ್ ಅಂಡ್ ಪ್ಲೇಸ್ (ಅಹಮದಾಬಾದ್, ೧೯೬೩), ಪುಟ ೧೨೬.
೪.         ಸಿದ್ದವ್ವನಹಳ್ಳಿ ಕೃಷ್ಣಶರ್ಮ, ಸಂ. ಗಾಂಧಿ ಮತ್ತು ಕರ್ನಾಟಕ, ಮೈಸೂರು-೧೯೬೮, ಪುಟ ೩೬.
೫.         ಸಂಯುಕ್ತ ಕರ್ನಾಟಕ, ಗಾಂಧಿ ಶತಾಬ್ಧ ಸಂಚಿಕೆ, ಅಕ್ಟೋಬರ್, ೧೯೬೯.
೬.         ಭರತನ ಕುಮಾರಪ್ಪ ವೈ. ಪ್ರಾಹಿಭಿಷನ್, ಅಹಮದಾಬಾದ್, ೧೯೫೨, ಪುಟ ೨೫.
೭.         ಜಿ.ಒ. ನಂ. ೨೧೯೬, ದಿನಾಂಕ : ೫-೯-೧೯೩೮, ಡೆವಲಪ್‌ಮೆಂಟ್ ರಿಪೋರ್ಟ್ ಬಿ.ಎನ್.ಎ.
೮.         ಆರ್ನಲ್ಡ್ ಡಿ. ಕಾಂಗೆಸ್ ಇನ್ ತಮಿಳುನಾಡು ಎ ನ್ಯಾಷನಾಲಿಸ್ಟ್ ಪಾಲಿಟಿಕ್ಸ್ ಇನ್ ಸೌತ್ ಇಂಡಿಯಾ ೧೯೧೯-೧೯೩೭, ನ್ಯೂ ಡೆಲ್ಲಿ-೧೯೭೭, ಪುಟ ೬೮.
೯.         ಸೂರ್ಯನಾಥ ಕಾಮತ್, ಸಂ. ಭಾರತದ ಗ್ಯಾಸೆಟಿಯರ್, ಧಾರವಾಡ ಜಿಲ್ಲೆ, ಬೆಂಗಳೂರು, ೧೯೯೫, ಪುಟ ೨೦.
೧೦.      ವಿಶ್ವ ಕರ್ನಾಟಕ ೨೭, ಅಕ್ಟೋಬರ್ ೧೯೨೯, ಕ.ರಾ.ಪ. ಬೆಂಗಳೂರು.
೧೧.      ಹಿರೇಮಠ ವೀರಭದ್ರಯ್ಯ, ಹರಪ್ಪನಹಳ್ಳಿ ತಾಲ್ಲೂಕು ಸ್ವಾತಂತ್ರ್ಯ ಹೋರಾಟಗಾರರು, ಹರಪ್ಪನಹಳ್ಳಿ-೧೯೯೮, ಪುಟ ೬೨.
೧೨.      ಟಿ.ಬಿ. ಕೇಶವರಾವ್, ಸಂಗ್ರಹ : ಫೈಲ್ ನಂ. ೧೧, ಕ.ರಾ.ಪ. ಬೆಂಗಳೂರು, ಬಳ್ಳಾರಿ ಜಿಲ್ಲೆಯಲ್ಲಿ ೮೦,೦೦೦ ಸೇಂದಿ ಗಿಡಗಳನ್ನು, ಬಿಜಾಪುರ ಜಿಲ್ಲೆಯಲ್ಲಿ ೧೦,೦೦೦, ಧಾರವಾಡದಲ್ಲಿ ೭೦,೦೦೦ ಸೇಂದಿ ಗಿಡಗಳನ್ನು ಕತ್ತರಿಸಲಾಯಿತು.
೧೩.      ವಿಶ್ವ ಕರ್ನಾಟಕ, ೧೭ ಏಪ್ರಿಲ್, ೧೯೩೧, ಕ.ರಾ.ಪ., ಬೆಂಗಳೂರು.
೧೪.      ವಿಶ್ವ ಕರ್ನಾಟಕ, ೨೫ ಮೇ, ೧೯೩೧, ಕ.ರಾ.ಪ., ಬೆಂಗಳೂರು.
೧೫.      ಸೂರ್ಯನಾಥ ಕಾಮತ್, ಸಂ, ಭಾರತದ ಗ್ಯಾಸೆಟಿಯರ್, ಕೊಡಗು, ಬೆಂಗಳೂರು-೧೯೯೫, ಪುಟ ೧೧೬.
೧೬.      ಮುತ್ತಣ್ಣ ಎಂ.ಎಂ. ಸಂಗ್ರಹ, ಕ.ರಾ.ಪ., ಬೆಂಗಳೂರು.
೧೭.      ಗಣಪತಿ ಬಿ.ಡಿ., ಸ್ವಾತಂತ್ರ್ಯದ ಹೋರಾಟ, ಕೊಡಗಿನ ಕಥೆ, ಪುಟ ೪೨.
೧೮.      ಲೋಕಪಾವನಿ, ಮಡಿಕೇರಿ, ೨೩-೯-೧೯೩೦, ಕೊಡಗು ಪತ್ರಿಕೆ ವರದಿಯಂತೆ ೧೯೨೯ರಲ್ಲಿ ೨೭೪೨ ಗ್ಯಾಲನ್ ಸಾರಾಯಿ ಖರ್ಚಾಗಿದ್ದರೆ ೧೯೩೦ರಲ್ಲಿ ಕೇವಲ ೨೨೯ ಗ್ಯಾಲನ್‌ಗಳಿಗೆ ಇಳಿಮುಖವಾಗಿತ್ತು.
೧೯.      ಮೈಸೂರು ಜಿಲ್ಲಾ ಕಾಂಗ್ರೆಸ್ ಕಮಿಟಿ, ದಿನಾಂಕ: ೧೦-೭-೧೯೩೮ ರಿಂದ ೧-೧೦-೧೯೩೮.
೨೦.      ಶಂಕರ ಎನ್.ಡಿ. ಸಂಗ್ರಹ, ಕ.ರಾ.ಪ., ಬೆಂಗಳೂರು.
೨೧.      ಮೈಸೂರು ಕಾಂಗ್ರೆಸ್ ಸಪ್ತಾಹ ವರದಿ, ಮೈಸೂರು ಕಾಂಗ್ರೆಸ್, ದಿನಾಂಕ: ೨-೧-೧೯೩೯ ರಿಂದ ೨೯-೬-೧೯೩೯, ಕ.ರಾ.ಪ., ಬೆಂಗಳೂರು.
೨೨.      ಕಂಠೀರವ ದಿನಪತ್ರಿಕೆ, ದಿನಾಂಕ: ೨೮-೩-೧೯೪೧, ಕ.ರಾ.ಪ., ಬೆಂಗಳೂರು.
೨೩.      ನವಜೀವನ, ದಿನಾಂಕ: ೮-೧೦-೧೯೫೧, ಕ.ರಾ.ಪ., ಬೆಂಗಳೂರು, ಪುಟ ೫.

 ಸಂಶೋಧನಾ ವಿದ್ಯಾರ್ಥಿ, ಇತಿಹಾಸ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ-೫೬೦೦೫೬.
 ಸಹ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ-೫೬೦೦೫೬.




No comments:

Post a Comment