Sunday, July 21, 2013

ಕುರುಬರಪ್ರಸಾದ ನಿಲಯಗಳು-ಚಾರಿತ್ರಿಕ ನೋಟ

ಕುರುಬರ ಪ್ರಸಾದ ನಿಲಯಗಳು :
ಒಂದು ಚಾರಿತ್ರಿಕ ನೋಟ

ಡಾ. ಅನ್ನಪೂರ್ಣ ಗೋಸ್ವಾಳ
ಮುಂದುವರಿದ ಜನಾಂಗಗಳು ಶಿಕ್ಷಣಕ್ಕೆ ಪ್ರಾಮುಖ್ಯತೆಯನ್ನು ನೀಡಿದ್ದವು. ವೈದಿಕ ವೀರಶೈವ ಸಮಾಜದಲ್ಲಿ ಹೆಚ್ಚಿನ ಕಾಳಜಿ ತಳೆಯಲಾಗಿತ್ತು. ಹಿಂದುಳಿದ ಸಮಾಜಗಳು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಯ ಕೊರತೆಯಿಂದಾಗಿ ಅಂಧಕಾರದಲ್ಲಿ ಮುಳುಗಿದ್ದವು. ಇಂಥ ಸಂದರ್ಭದಲ್ಲಿ ಶಿಕ್ಷಣದ ಸೂಕ್ಷ್ಮಗಾಳಿ ಬೀಸತೊಡಗಿತು.
ಕಳೆದ ಶತಮಾನದ ಆರಂಭದಲ್ಲಿ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ಜನಜಾಗೃತಿಗಾಗಿ ಅನೇಕ ವಿದಾಯಕ ಕಾರ‍್ಯಕ್ರಮಗಳು ಹುಟ್ಟಿಕೊಂಡವು. ಆಯಾ ಸಮುದಾಯಗಳ ಧಾರ್ಮಿಕ, ಸಾಮಾಜಿಕ, ಆರ್ಥಿಕ ಪ್ರಗತಿಗಾಗಿ ಮಹಾಸಭೆ ಸಮ್ಮೇಳನಗಳನ್ನು ಆಯೋಜಿಸಿ, ಅನೇಕ ಸಂಘ, ಸಂಸ್ಥೆ ಪ್ರಸಾದ ನಿಲಯಗಳನ್ನು ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಸ್ಥಾಪನೆ ಮಾಡಿದುದನ್ನು ಕಾಣುತ್ತೇವೆ.
ಹಾಲುಮತ ಸಮುದಾಯದ ಜಾಗೃತಿಯು ೨೦ನೆಯ ಶತಮಾನದಿಂದ ಆದಿಯಾಯಿತೆಂದು ಹೇಳಬಹುದು. ೧೯೧೦ರಲ್ಲಿ ಲಕ್ಷ್ಮೇಶ್ವರದಲ್ಲಿ ಹಾಲುಮತ ಧಾರ್ಮಿಕ ಹಾಗೂ ವಿದ್ಯಾವರ್ಧಕ ೧ನೆಯ ಮಹಾಸಭೆಯನ್ನು ನೆರವೇರಿಸಿ ಸಮಾಜದಲ್ಲಿ ಒಂದು ರೀತಿಯ ಕ್ರಾಂತಿಯನ್ನು ಆರಂಭಿಸಲಾಯಿತು. ೧೯೨೦ರಲ್ಲಿ ನಲವಡಿಯಲ್ಲಿ ಕರ್ನಾಟಕ ಕುರುಬರ ೧ನೆಯ ಪರಿಷತ್ತು ನಡೆದು ಕರ್ನಾಟಕ ಕುರುಬರ ಸಂಘ ಮತ್ತು ಮುಂಬಯಿ ಕರ್ನಾಟಕ ಹಾಲುಮತ ಸಹಕಾರಿ ಸಂಘಗಳು ಸ್ಥಾಪಿಸಲ್ಪಟ್ಟವು. ಇದರಿಂದ ಸಮಾಜ ಸುಧಾರಣೆಯ ಕಾರ್ಯವು ತೀವ್ರತೆಯಿಂದ ನಡೆಯಿತು. ೧೯೨೦ ನವಂಬರಿನಲ್ಲಿ ಜೇವೂರಿ ಕ್ಷೇತ್ರದಲ್ಲಿ ಅಖಿಲ ಭಾರತ ಕುರುಬರ ೧ನೆಯ ಪರಿಷತ್ತು, ೧೯೨೨ರಲ್ಲಿ ಅಮಳನೇರದಲ್ಲಿ (ಖಾನದೇಶ) ಅಖಿಲ ಭಾರತ ಕುರುಬರ ೨ನೆಯ ಪರಿಷತ್ತು, ೧೯೨೩ ಏಪ್ರಿಲ್‌ನಲ್ಲಿ ಹುಲ್ಲೂರಿನಲ್ಲಿ ೨ನೆಯ ಹಾಲುಮತ ಧಾರ್ಮಿಕ ಹಾಗೂ ವಿದ್ಯಾವರ್ಧಕ ಮಹಾಸಭೆ, ೧೯೨೪ರಲ್ಲಿ ಬಂಕಾಪುರದಲ್ಲಿ ಕರ್ನಾಟಕ ಕುರುಬರ ೨ನೆಯ ಪರಿಷತ್ತು ನಡೆದವು. ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿಯಲ್ಲಿ ಕುರುಬರ ಸಂಘದ ಸ್ಥಾಪನೆಗಾಗಿ ಕುರುಬರ ಸಂಘದ ಜನರಲ್ ಸೆಕ್ರೆಟರಿಯಾಗಿದ್ದ ನೀಲಗಿರಿ ಸಂಜೀವಯ್ಯನವರ ಅಧ್ಯಕ್ಷತೆಯಲ್ಲಿ ೧೯೨೫ ಮೇ ೧೩ರಂದು ಪೂರ್ವಭಾವಿಯಾಗಿ ಸಭೆಯನ್ನು ಆಯೋಜಿಸಲಾಗಿತ್ತು. ಇವುಗಳಿಂದ ಜಾಗೃತಗೊಂಡು ಹಾಲುಮತ ಸಮಾಜದ ಕಲ್ಪನೆ, ಸಮಾಜಿಕ ಪರಿಸ್ಥಿತಿಗಳು ಪರಿಚಯಗೊಂಡು ಸಭೆಗಳಲ್ಲಿ ಹಾಲುಮತ ಬೋರ್ಡಿಂಗ್ ಸ್ಥಾಪಿಸಬೇಕೆಂಬ ಠರಾವುಗಳಾದವು.
ಈ ಹಿನ್ನೆಲೆಯಲ್ಲಿ ಶೈಕ್ಷಣಿಕ ಅಭಿವೃದ್ಧಿಗಾಗಿ ವಿದ್ಯಾರ್ಥಿಗಳ ಜ್ಞಾನರ್ಜನೆಗಾಗಿ ಪ್ರಸಾದ ನಿಲಯಗಳು ಪ್ರಾರಂಭಗೊಂಡವು. ೧೯೨೫ರಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನಲ್ಲಿ ಅಮೋಘಸಿದ್ಧಾರ್ಯ ಕುರುಬರ ಬೋರ್ಡಿಂಗ್, ೧೯೩೦ರಲ್ಲಿ ಬೆಂಗಳೂರಿನಲ್ಲಿ ಕುರುಬರ ವಿದ್ಯಾರ್ಥಿ ನಿಲಯ, ೧೯೪೦ರಲ್ಲಿ ನಂಜನಗೂಡಿನಲ್ಲಿ ಶ್ರೀ ಕನಕದಾಸ ಸಾರ್ವಜನಿಕ ವಿದ್ಯಾರ್ಥಿ ನಿಲಯ, ೧೯೪೫ರಲ್ಲಿ ಬೆಳಗಾವಿಯ ಅಖಿಲ ಕರ್ನಾಟಕ ಕುರುಬರ ಫ್ರೀ ಬೋರ್ಡಿಂಗ್, ೧೯೪೭ರಲ್ಲಿ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬಟ್ಟೂರು ಗ್ರಾಮದ ಕುರುಬ ವಿದ್ಯಾರ್ಥಿಗಳ ಧರ್ಮಾರ್ಥ ಬೋರ್ಡಿಂಗ್, ಹೀಗೆ ನಾಡಿನಾದ್ಯಂತ ಪ್ರಸಾದ ನಿಲಯಗಳು ಆರಂಭಗೊಂಡವು. ಇಂಥ ಕುರುಬರ ಪ್ರಸಾದ ನಿಲಯಗಳ ಚರಿತ್ರೆಯನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.
ಅಮೋಘಸಿದ್ಧಾರ್ಯ ಕುರುಬರ ಬೋರ್ಡಿಂಗ (೧೯೨೫)
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ೧೯೨೫ ಜೂನ್ ೬ರಂದು ‘ಅಮೋಘಸಿದ್ಧಾರ್ಯ ಕುರುಬರ ಬೋರ್ಡಿಂಗ್ ಸ್ಥಾಪನೆಯಾಯಿತು. ಇದು ಹಾಲುಮತದ ಮೊಟ್ಟ ಮೊದಲ ಪ್ರಸಾದ ನಿಲಯವಾಗಿದೆ. ಬೇರೆ ಬೇರೆ ಸ್ಥಳಗಳಿಂದ ಸಮಾಜ ಬಾಂಧವರು, ತರುಣರು, ಆಸಕ್ತರು, ಉತ್ಸಾಹಿಗಳು ಸೇರಿದ್ದರು. ವೇ ಸಿದ್ಧಯ್ಯನವರ ಅಮೋಗಿ ಹುಲ್ಲೂರು ಹಸ್ತದಿಂದ ಬೋರ್ಡಿಂಗ್ ಪ್ರಾರಂಭದ ಸಮಾರಂಭ ವಿಜೃಂಭಣೆಯಿಂದ ನಡೆಯಿತು. ಅವರು ಅಂದಿನ ತಮ್ಮ ದೀರ್ಘವಾದ ಭಾಷಣದಲ್ಲಿ ಕಾಡಾಗಿದ್ದ ಹಾಲುಮತ ಸಮಾಜದ ಮನೋಭೂಮಿಕೆಯನ್ನು ಬಹು ದಿವಸಗಳಿಂದ ಹದಮಾಡಿ ಬಿತ್ತಿದ ಫಲವು ಈಗ ದೊರೆಯಹತ್ತಿದ್ದನ್ನು ನೋಡಿದರೆ ಯಾರಿಗೆ ಆನಂದವಾಗಲಿಕ್ಕಿಲ್ಲ? ಯಾರು ಧನ್ಯವಾದಗಳನ್ನು ಮಾಡಲಿಕ್ಕಿಲ್ಲ? ಅಂತೇ ಈ ದಿವಸವು ಹಾಲುಮತ ಇತಿಹಾಸದಲ್ಲಿ ಮಹತ್ವದ್ದಾಗಿದೆಯೆಂದು ನಾನು ಅಭಿಮಾನದಿಂದ ಹೇಳುವೆನು. ನಮಗೂ ಜ್ಞಾನವುಂಟು, ಧರ್ಮವುಂಟು, ಇತಿಹಾಸವುಂಟು, ವಾಙ್ಮಯವುಂಟು, ಶಕ್ತಿಯುಂಟು, ಸಂಘಟನೆಯುಂಟು, ನಮ್ಮ ಪೂರ್ವಜರು ಮಹಾಮಹಾಕಾರ್ಯಗಳನ್ನು ಮಾಡಿ ನಮ್ಮ ಸಮಾಜದ ಗೌರವ ಕಾಯ್ದಿರುವರು.... ಜನಾಂಗವು ಮುಂದುವರಿಯ ಬೇಕಾದರೆ ಶಿಕ್ಷಣವೇ ತಳಹದಿಯಾಗಿರುವುದು.... ಪ್ರತಿಯೊಬ್ಬರಲ್ಲಿ ಸಮಾಜಾಭಿಮಾನವು ಉಕ್ಕುತ್ತಿರಲೆಂದೂ ಈ ಕಾರ್ಯದಲ್ಲಿ ಶ್ರೀ ರೇವಣಸಿದ್ದೇಶ್ವರರ ಪೂರ್ಣ ಅನುಗ್ರಹವಿರಲೆಂದು ಆಶಿಸಿ ಈ ನನ್ನ ಭಾಷಣ ಮುಗಿಸುವೆನು ಎಂದು ಜನಾಂಗದ ಏಳುಬೀಳುಗಳ ಕುರಿತು ಮಾತನಾಡಿದರು.
ಹೀಗೆ ಪ್ರಾರಂಭವಾದ ಪ್ರಸಾದ ನಿಲಯದಲ್ಲಿ ಇಂಗ್ಲಿಷ್ ಕಲಿಯುವ ಹಾಗೂ ತಲಾಠಿ ಕುಲಕರ್ಣಿ ಪರೀಕ್ಷೆಗಾಗಿ ಸಮುದಾಯದ ವಿದ್ಯಾರ್ಥಿಗಳಲ್ಲದೆ ಇನ್ನಿತರ ಕಬ್ಬೇರ ತಳವಾದ ಮೊದಲಾದ ಹಿಂದುಳಿದ ಬಡವಿದ್ಯಾರ್ಥಿಗಳ ಕಲಿಕೆ ಹಾಗೂ ವಸತಿ ವ್ಯವಸ್ಥೆಗೆ ಅವಕಾಶ ಕಲ್ಪಿಸಿದ್ದನ್ನು ಡಾ. ಎಫ್.ಟಿ. ಹಳ್ಳಿಕೇರಿ ಅವರು ಶೋಧಿಸಿದ ವರದಿಯಿಂದ ತಿಳಿಯಬಹುದು. ಅಲ್ಲದೆ ಲಿಂಗಾಪುರ ಗ್ರಾಮಗಳ ಕುರುಬ ಸಮಾಜದವರು  ದವಸ-ಧಾನ್ಯ, ಹಣದ ರೂಪದಲ್ಲಿ ಈ ಬೋರ್ಡಿಂಗ್‌ಗೆ ದಾನ ನೀಡಿದ ವಿವರಗಳು ಕುತೂಹಲಕಾರಿಯಾಗಿವೆ. ಹಣ ಮತ್ತು ಭತ್ತ ನೀಡಿದ ಮಹನೀಯರ ಸಹಕಾರವನ್ನು ವರದಿಗಳಲ್ಲಿ ಸ್ಮರಿಸಲಾಗಿದೆ.
ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗಾಗಿ ಬೋರ್ಡಿಂಗ್‌ನಲ್ಲಿ ಪ್ರತಿಭಾನುವಾರ ಮತ್ತು ಹಬ್ಬದ ದಿನಗಳಂದು ವಿದ್ಯಾರ್ಥಿಗಳು ಸಾಮಾಜಿಕ ವಿಷಯ ಕುರಿತು ಸಭೆ, ಚರ್ಚೆ, ವ್ಯಾಖ್ಯಾನ ಕೊಡುವದು, ಹಾಲುಮತ ವಿಷಯವಾಗಿ ಪೌರಾಣಿಕ ಹಾಗೂ ಐತಿಹಾಸಿಕ ಸಂಗತಿ ತಿಳಿಯುವ, ಪ್ರಸಿದ್ಧ ಪುರುಷರ ಚರಿತ್ರೆ ಓದುವ, ಸ್ಫೂರ್ತಿದಾಯಕ ಸಾಮಾಜಿಕ ವಿಷಯಗಳ ಲೇಖನಗಳನ್ನು ಬರೆದು ಸಂಸ್ಥೆಗೆ ಕಳುಹಿಸುವಂಥಹ ವಿಭಿನ್ನ ವಿಚಾರಗಳ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ಪ್ರಗತಿ ಸಾಧಿಸಲು ಪ್ರಯತ್ನಿಸಲಾಗುತ್ತಿತ್ತು.
ಕುರುಬರ ಸಂಘ (೧೯೩೦)
ಬೆಂಗಳೂರಿನಲ್ಲಿ ೧೯೩೦ರಲ್ಲಿ ಕುರುಬರ ವಿದ್ಯಾರ್ಥಿ ನಿಲಯ ಪ್ರಾರಂಭವಾಯಿತು. ೫೦ ಜನರ ಕಾರ್ಯಕಾರಿ ಸಮಿತಿ ರಚಿಸಲಾಗಿತ್ತು. ಚಾಮರಾಜಪೇಟೆಯ ೧ನೆಯ ರಸ್ತೆಯ ಒಂದು ಬಾಡಿಗೆ ಕಟ್ಟಡದಲ್ಲಿ ವಿದ್ಯಾರ್ಥಿನಿಲಯವನ್ನು ಆರಂಭಿಸಲಾಯಿತು. ಈ ಕಟ್ಟಡಕ್ಕಾಗಿ ಅನೇಕ ದಾನಿಗಳು ಆಗಿನ ಕಾಲದಲ್ಲೇ ಸಾವಿರ ರೂಪಾಯಿಗಳಂತೆ ಹಣವನ್ನು ಕೊಟ್ಟಿದ್ದಾರೆ. ೧೯೩೭ರಲ್ಲಿ ಕಲಾಸಿಪಾಳ್ಯದಿಂದ ವಿದ್ಯಾರ್ಥಿ ನಿಲಯವನ್ನು ಗಾಂಧಿನಗರದ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಈ ಬಾಡಿಗೆ ಕಟ್ಟಡವೇ ಇಂದಿನ ಸಂಘದ ಭವ್ಯಕಟ್ಟಡ ನಿರ್ಮಾಣಕ್ಕೆ ನಾಂದಿಯಾಗಿದೆ. ೧೧.೧೧.೧೯೪೦ರಲ್ಲಿ ಅಂದಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್‌ರ ಸಿಫಾರಸಿನ ಮೇರೆಗೆ ಸಂಘಕ್ಕೆ ನಿವೇಶನ ಮಂಜೂರಾಯಿತು. ೧೯೪೧ ರಂದು ಕಟ್ಟಡ ನಿರ್ಮಾಣದ ಉಪಸಮಿತಿಯನ್ನು ರಚಿಸಿ ೧೯೪೨ರಲ್ಲಿ ದಿವಾನ ಮಾಧವರಾವ ಅವರಿಂದ ಕಟ್ಟಡದ ಶಂಕಸ್ಥಾಪನೆ ಮಾಡಲಾಯಿತು. ೧೫.೧೦.೧೯೫೬ರಂದು ನಂಜನಗೂಡಿನಲ್ಲಿ ಸಂಘದ ಸರ್ವಸದಸ್ಯರ ಸಭೆಯನ್ನು ಕರೆದು ಕುರುಬರ ಸಂಘದ ಹೆಸರನ್ನು ಮೈಸೂರು ಪ್ರದೇಶದ ಕುರುಬರ ಸಂಘ ಎಂದು ಪರಿವರ್ತಿಸಲಾಯಿತು. ಬಡ ಹಾಗೂ ಪ್ರತಿಭಾವಂತ ಜನಾಂಗದ ವಿದ್ಯಾರ್ಥಿಗಳಿಗೆ ೧೯೫೮-೫೯ರ ಸಾಲಿನಲ್ಲಿ ೫೦೦ ರೂ. ಸಹಾಯಧನ ಕೊಡಲು ಆರಂಭಿಸಿದರು. ಅದು ಇಂದು ೮-೧೦ ಸಾವಿರಕ್ಕೆ ಏರಿದೆ. ಹಲವಾರು ಕಾರಣಗಳಿಂದ ವಿದ್ಯಾರ್ಥಿ ನಿಲಯದ ಬಡ ವಿದ್ಯಾರ್ಥಿಗಳಿಗೆ ಪೂರ್ಣವಾಗಿ ಉಚಿತ ಭೋಜನ ವ್ಯವಸ್ಥೆ ಮಾಡುವ ಗುರಿಯನ್ನು ಮುಟ್ಟಲಾಗಿಲ್ಲ. ನಾಡಗೌಡರ ಸಮಿತಿ ವರದಿ ಪ್ರಕಾರ ಈ ಜನಾಂಗದ ವಿದ್ಯಾಭ್ಯಾಸ ೧೯೬೨ರಲ್ಲಿ ಶೇಕಡಾ ಐದರಷ್ಟಿತ್ತು. ಇದು ಮತದ ಶೈಕ್ಷಣಿಕ ಪ್ರಗತಿಯ ನಿಧಾನಗತಿಯನ್ನು ಸೂಚಿಸುತ್ತದೆ. ಈ ಸಂಘಕ್ಕೆ ಆರ್. ನಾಗನಗೌಡರು, ಟಿ. ಮರಿಯಪ್ಪ ಮೊದಲಾದ ಅನೇಕ ಗಣ್ಯರು ದುಡಿದು ಅದರ ಕೀರ್ತಿ, ಸೇವಾಕ್ಷೇತ್ರಗಳನ್ನು ವಿಸ್ತರಿಸಲು ಕಾರಣರಾಗಿದ್ದಾರೆ.
ಜಾತಿ-ಭೇದಗಳಿಲ್ಲದೆ ಎಲ್ಲ ಜನಾಂಗಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲಿನಲ್ಲಿ ಅವಕಾಶ ಕೊಟ್ಟು ವಿದ್ಯಾಭ್ಯಾಸ ಹರಡುವ ಮತ್ತು ಇತರ ಜನಾಂಗಗಳೊಂದಿಗೆ ಸೋದರತೆ ಮತ್ತು ಐಕ್ಯತೆಯನ್ನು ಸಾಧಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ.
ಶ್ರೀ ಕನಕದಾಸ ಸಾರ್ವಜನಿಕ ವಿದ್ಯಾರ್ಥಿ ನಿಲಯ (೧೯೪೦)
ಶ್ರೀ ಕನಕದಾಸ ಸಾರ್ವಜನಿಕ ವಿದ್ಯಾರ್ಥಿ ನಿಲಯ ನಂಜನಗೂಡಿನಲ್ಲಿ ೧೯೪೦ರಲ್ಲಿ ಎನ್. ರಾಚಯ್ಯನವರಿಂದ ಆರಂಭಗೊಂಡಿತ್ತು. ಹಳ್ಳಿಯ ಮಕ್ಕಳು ಪ್ರೌಢಶಾಲೆ ಕಲಿಯಲು ನಂಜನಗೂಡಿಗೆ ಬರಬೇಕಿತ್ತು. ಕೆಲವು ವಿದ್ಯಾರ್ಥಿಗಳು ಮಧ್ಯಾಹ್ನದ ಊಟದ ಡಬ್ಬಿಗಳನ್ನು ರಾಚಯ್ಯನವರ ಬಾಳೆಹಣ್ಣಿನ ಅಂಗಡಿಯಲ್ಲಿ ಇಡುತ್ತಿದ್ದರು. ಮಕ್ಕಳು ವಿದ್ಯಾರ್ಜನೆಗಾಗಿ ಪಡುತ್ತಿದ್ದ ಬವಣೆಯನ್ನು ಗಮನಿಸಿ ದೃಢ ಸಂಕಲ್ಪ ಮಾಡಿ ೧೦ ವಿದ್ಯಾರ್ಥಿಗಳಿಗೆ ಊಟ ವಸತಿ ಸೌಲಭ್ಯ ಕಲ್ಪಿಸಿದರು.
ಹೀಗೆ ಕನಕದಾಸ ವಿದ್ಯಾರ್ಥಿ ನಿಲಯ ಸ್ಥಾಪನೆಗೊಂಡಿತು. ಅದೇ ನಿಲಯ ನಂತರ ನೂರಾರು ವಿದ್ಯಾರ್ಥಿಗಳಿಗೆ ಆಶ್ರಯ ತಾಣವಾಯಿತು. ೧೯೫೨ ಅಕ್ಟೋಬರ ೧೦ರ ಬೆಳಗಿನ ಜಾವ ರಾಚಯ್ಯನವರು ಕಂಡ ಕನಸಿನಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರುರವರಿಗೆ ೨೦,೦೦೦ ರೂ.ಗಳನ್ನು ವಿದ್ಯಾರ್ಥಿ ನಿಲಯದ ಅಭಿವೃದ್ಧಿಗಾಗಿ ಕಾಣಿಕೆ ನೀಡುವ ಮಾತು ಕೊಟ್ಟಿದ್ದರು. ಅಂದೇ ಬೆಳಿಗ್ಗೆ ತಮ್ಮ ಮಾತನ್ನು ಅನುಷ್ಠಾನಕ್ಕೆ ತಂದು ತಮ್ಮ ಕನಸಿನ ವಾಗ್ದಾನದಂತೆ ನಡೆದುಕೊಂಡರು. ಹೀಗೆ ರಾಚಯ್ಯನವರ ಹೆಮ್ಮೆಯ ಕನಕದಾಸ ವಿದ್ಯಾರ್ಥಿ ನಿಲಯ ನಿರ್ಮಾಣ ವಾಯಿತು. ಅಲ್ಲದೇ ಅದು ಗ್ರಾಮಾಂತರದಿಂದ ಬರುತ್ತಿದ್ದ ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ನ್ಯಾಯಾಲಯವಾಯಿತು. ಅದರ ಸರ್ವತೋಮುಖ ಬೆಳವಣಿಗೆಗಾಗಿ ೧೯೫೨ರಲ್ಲಿ ಶ್ರೀ ಕನಕದಾಸ ಸಾರ್ವಜನಿಕ ವಿದ್ಯಾರ್ಥಿನಿಲಯ ಟ್ರಸ್ಟನ್ನು ಸ್ಥಾಪಿಸಲಾಯಿತು. ನಿಲಯದಲ್ಲಿ ಶಿಸ್ತು, ನೀತಿ, ನಿಯಮಗಳಿಂದ ದಿನಚರಿಯನ್ನು ರೂಪಿಸಲಾಗಿತ್ತು. ಅಂದು ನಂಜನಗೂಡು ಪಟ್ಟಣದಲ್ಲಿ ಸಾರ್ವಜನಿಕ ವಾಚನಾಲಯ ಇರಲಿಲ್ಲ. ಕಾರಣ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಇತರರಿಗೂ ಅದು ಜ್ಞಾನಮಂದಿರವಾಯಿತು. ನಿಲಯದಲ್ಲಿ ಮಾಧ್ಯಮಿಕ ಮತ್ತು ಪ್ರೌಢಶಾಲೆಗಳನ್ನು ಪ್ರಾರಂಭಿಸಿದರು. ಹೀಗೆ ಗ್ರಾಮಾಂತರ ಮತ್ತು ಪಟ್ಟಣಗಳ ಮಕ್ಕಳಿಗೆ ಊಟ ವಸತಿ ಶಿಕ್ಷಣ ಎಲ್ಲವೂ ಒಂದೇ ನೆಲೆಯಲ್ಲಿ ದೊರಕುವಂತಾಯಿತು. ನಂತರ ಶಾಲೆಯ ನಿರ್ವಹಣೆಗಾಗಿ ಕನಕದಾಸ ವಿದ್ಯಾರ್ಥಿ ನಿಲಯದ ಟ್ರಸ್ಟಿನ ಅಂಗ ಸಂಸ್ಥೆಯಾಗಿ ಕನಕದಾಸ ವಿದ್ಯಾ ಸಂಸ್ಥೆಯು ರಚನೆಯಾಯಿತು. ವಿದ್ಯಾರ್ಥಿ ನಿಲಯ ಸುಗಮವಾಗಿ ನಡೆಯಲು ಮತ್ತು ಜನಾಂಗ ಸಂಘಟನೆಯ ಉದ್ದೇಶದಿಂದ ೧೯೬೯ರಲ್ಲಿ ಕುರುಬರ ಸಂಘವನ್ನು ಸ್ಥಾಪಿಸಲಾಯಿತು.
೪. ದಿ ಅಖಿಲ ಕರ್ನಾಟಕ ಫ್ರೀ ಬೋರ್ಡಿಂಗ್ (೧೯೪೫)
ಬೆಳಗಾವಿ ಜಿಲ್ಲೆಯ ಅಕ್ಕೋಳ ಗ್ರಾಮದಲ್ಲಿ ಹಾಲುಮತ ಸಮಾಜದ ಘನೋದ್ದೇಶ ಮತ್ತು ಸಮಾಜ ಬಾಂಧವರ ಸತತ ಆರು ತಿಂಗಳ ಪ್ರಯತ್ನದ ಫಲವಾಗಿ ೧.೮.೧೯೪೫ರಂದು ಬೆಳಗಾವಿಯ ಅಖಿಲ ಕರ್ನಾಟಕ ಫ್ರೀ ಬೋರ್ಡಿಂಗ್ ಎಂಬ ಪ್ರಸಾದ ನಿಲಯವನ್ನು ಮಲ್ಲಪ್ಪ ಸಿದ್ದಪ್ಪ ಖಿಲಾರಿ ಅವರ ಅಮೃತಹಸ್ತದಿಂದ ಸ್ಥಾಪನೆ  ಮಾಡಲಾಯಿತು. ಗ್ರಾಮಾಂತರ ಪ್ರದೇಶದ ಮಕ್ಕಳ ಉಚ್ಚಮಟ್ಟದ ವ್ಯಾಸಂಗಕ್ಕಾಗಿ ಊಟ ವಸತಿಯ ಸೌಕರ್ಯವನ್ನು ಉಚಿತವಾಗಿ ಒದಗಿಸಲಾಗುತ್ತಿತ್ತು. ಈ ಬೋರ್ಡಿಂಗ್ ೧೮.೯.೧೯೫೨ರಂದು ವಿಜಯನಗರ ವಿದ್ಯಾರ್ಥಿಗಳ ಪ್ರಸಾದ ನಿಲಯ ಎಂಬ ಹೆಸರಿನಿಂದ ಪುನಃ ಕರೆಯಲಾಯಿತು. ವಿದ್ಯಾರ್ಥಿ ನಿಲಯದ ಟ್ರಸ್ಟ ಕಾರ್ಯಕಾರಿ ಮಂಡಳಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ, ವಕೀಲ ಎನ್.ಬಿ. ದಳವಾಯಿ ಅವರು ಅಧ್ಯಕ್ಷರಾಗಿ, ಜಿ.ಎಸ್.ಬೆಳವಡಿ ಹಿರೆಕುಂಬಿ ಉಪಾಧ್ಯಕ್ಷರಾಗಿದ್ದರು. ಹೀಗೆ ಅನೇಕ ದೇಶಾಭಿಮಾನಿಗಳು, ಶಿಕ್ಷಣಾಭಿಮಾನಿಗಳು ಈ ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ಅಹೋರಾತ್ರಿ ದುಡಿದು ಈ ಪ್ರಸಾದ ನಿಲಯಕ್ಕೆ ಒಂದು ಮೂರ್ತ ಸ್ವರೂಪವನ್ನು ತಂದುಕೊಟ್ಟರು.
ಕಡಿದಾಳ ಮಂಜಪ್ಪ, ಬಿ.ಡಿ.ಜತ್ತಿ, ಕೆ.ಎಫ್.ಪಾಟೀಲ, ಟಿ.ಮರಿಯಪ್ಪ ಮತ್ತು ಬೆಳಗಾವಿಯ ಡೆಪ್ಯುಟಿ ಕಮೀಷನರ ಸಚ್ಚಿದಾನಂದಮೂರ್ತಿ ಮೊದಲಾದವರ ಸಹಕಾರದಿಂದ ೧೯೬೦ರಲ್ಲಿ ಉಳವಿಯ ಚೆನ್ನಬಸವಣ್ಣದ ಜಾತ್ರೆಯ ಸಂದರ್ಭದಲ್ಲಿ ಸದಸ್ಯರಿಂದ ನಿರ್ಣಯ ತೆಗೆದುಕೊಳ್ಳಲಾಯಿತು. ೧೬೯೧ರಲ್ಲಿ ೫ ಎಕರೆ ಜಮೀನನ್ನು ಕಡಿಮೆ ಬೆಲೆಯಲ್ಲಿ ಖರೀದಿಸಿದರು. ೬.೪.೧೯೬೨ರಂದು ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾದ ಎಸ್.ಆರ್. ಕಂಠಿ ಅವರ ಅಮೃತಹಸ್ತದಿಂದ ವೆಂಕಟರೆಡ್ಡಿ ಹುಲಿ ಅವರ ಅಧ್ಯಕ್ಷತೆಯಲ್ಲಿ ಕಟ್ಟಡದ ಅಡಿಪಾಯ ಹಾಕಲಾಯಿತು. ಈ ಸಂಸ್ಥೆ ೧೯೬೩ರ ವರೆಗೆ ಬಾಡಿಗೆ ಕಟ್ಟಡದಲ್ಲಿ ನಡೆದು ನಂತರ ಸ್ವಂತ ಕಟ್ಟಡವನ್ನು ಹೊಂದಿತು. ಈ ಸಂಸ್ಥೆಗಾಗಿ ವಕೀಲ ಎನ್.ಬಿ.ದಳವಾಯಿ ಅವರ ಅಧ್ಯಕ್ಷತೆಯಲ್ಲಿ ಸರಕಾರದಿಂದ ೧,೬೫,೦೦೦ ರೂ.ಗಳಷ್ಟು ಅನುದಾನ ಸಂಗ್ರಹಿಸಲಾಯಿತು.
ಒಟ್ಟಾರೆ ೧೯೪೫ರಿಂದ ೧೯೫೨ರವರೆಗೆ ಈ ಸಂಸ್ಥೆಯ ಲಾಲನೆ, ಪಾಲನೆ, ಪೋಷ ಮಾಡಿ ಬೆಳಸಿ ಸರ್ವತೋಮುಖ ಬೆಳವಣಿಗೆಗೆ ಪ್ರಾರಂಭದಲ್ಲಿ ಕಾರಣರಾದ ಎನ್.ಬಿ.ದಳವಾಯಿ ಅವರನ್ನು ಈ ಸಂಸ್ಥೆ ಮರೆಯಲಾರದು. ಹೀಗೆ ಅಂದು ಸಸಿಯಾಗಿ ನೆಟ್ಟಿದ್ದು ಇಂದು ಹೆಮ್ಮರವಾಗಿ ಬೆಳೆದಿದೆ. ಅನೇಕ ವಿದ್ಯಾರ್ಥಿಗಳಿಗೆ ಆಶ್ರಯ ತಾಣವಾಗಿದೆ.
೫. ಕುರುಬ ವಿದ್ಯಾರ್ಥಿಗಳ ಧರ್ಮಾರ್ಥ ಬೋರ್ಡಿಂಗ್ (೧೯೪೭)
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬಟ್ಟೂರ ಗ್ರಾಮದಲ್ಲಿ ೧೯೪೭ರಲ್ಲಿ ಕುರುಬರ ಬಡ ಆಸಕ್ತ ಅನಾಥ ವಿದ್ಯಾರ್ಥಿಗಳಿಗಾಗಿ ಪ್ರಸಾದ ನಿಲಯ ಆರಂಭವಾಯಿತು. ಬಟ್ಟೂರಿನ ಪ್ರಾಥಮಿಕ ಶಾಲೆಯಲ್ಲಿ ೨೦ ವಿದ್ಯಾರ್ಥಿಗಳು ಮತ್ತು ಲಕ್ಷ್ಮೇಶ್ವರದ ಹೈಸ್ಕೂಲಿನ ೫ ವಿದ್ಯಾರ್ಥಿಗಳು ಪ್ರಾರಂಭದಲ್ಲಿ ಸೌಲಭ್ಯ ಪಡೆದರು. ಈ ಬೋರ್ಡಿಂಗಗಾಗಿ ಅನೇಕ ಮಹನೀಯರು ಧಾನ್ಯದ ರೂಪದಲ್ಲಿ ಸೇವೆ ಸಲ್ಲಿಸಿದರು. ಪ್ರಸಾದ ನಿಲಯದಲ್ಲಿ ವಾಚನಾಲಯ, ಔಷಧೋಪಚಾರ, ಉಪನ್ಯಾಸಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿತ್ತು. ಹೀಗೆ ಪ್ರಸಾದ ನಿಲಯಗಳಲ್ಲಿ ಕಲಿತ ಅನೇಕರು ಇಂದು ಸಾಹಿತ್ಯಿಕ, ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಎತ್ತರದ ಸಾಧನೆ ಮಾಡಿದ್ದಾರೆ.
[ಆಕರಗಳನ್ನು ನೀಡಿ ಸಹಕರಿಸಿದ ಡಾ. ಎಫ್.ಟಿ. ಹಳ್ಳಿಕೇರಿ ಅವರಿಗೆ ಕೃತಜ್ಞತೆಗಳು.]
ಆಧಾರಸೂಚಿ
೧.         ಹಾಲುಮತ ಮಹಾಸಭೆ ಭಾಷಣಗಳು ಮತ್ತು ವರದಿಗಳು, ಡಾ. ಎಫ್.ಟಿ. ಹಳ್ಳಿಕೇರಿ, ೨೦೦೯.
೨.         ದಾಸೋಹ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ.
೩.         ಪಾವನ, ಶ್ರೀ ಕಾಗಿನೆಲೆ ಮಹಾಸಂಸ್ಥಾನ, ಕನಕ ಗುರು ಪೀಠದ ಸ್ಥಾಪನೆಯ ಸಂಸ್ಮರಣ ಸಂಚಿಕೆ, ಪುಟ ೧೧೯, ೧೯೯೨.
೪.         ದಳವಾಯಿ, ಪ್ರೊ. ಸಿದ್ದಣ್ಣ ಬಿ. ಉತ್ನಾಳ
೫.         ಕವಲುದಾರಿಯಲ್ಲಿ ಕರ್ನಾಟಕದ ಕುರುಬ ಜನಾಂಗ, ಪುಟ ೧೨೭, ಪ್ರೊ. ಒಡೆಯರ್ ಡಿ. ಹೆಗ್ಗಡೆ, ೨೦೦೩.

? ಅ/o ರೇವಣ್ಣ ಸಿದ್ದೇಶ್ವರ ಜನರಲ್ ಸ್ಟೋರ್ಸ್, ರಾಮಾ ಟಾಕೀಸ್ ಹತ್ತಿರ, ಹೊಸಪೇಟೆ, ಬಳ್ಳಾರಿ ಜಿಲ್ಲೆ-೫೮೩೨೦೧.




No comments:

Post a Comment