Friday, July 19, 2013

ಬೆಂಗಳೂರು ಅಭಿವೃದ್ಧಿಗೆ ಜಾಧವ್ ಕೊಡುಗೆ

ಬೆಂಗಳೂರಿನ ಬಡಾವಣೆಯ ಅಭಿವೃದ್ಧಿಗೆ
ಆರ್. ಜೈಮುನಿರಾವ್ ಜಾದವ್ ಕೊಡುಗೆ
ಡಾ. ಎಚ್. ಜಯಮ್ಮ ಕರಿಯಣ್ಣ
ಬೆಂಗಳೂರು ನಿರ್ಮಾಪಕ ಹಿರಿಯ ಕೆಂಪೇಗೌಡರನ್ನು ಕರ್ನಾಟಕದ ರಾಜಧಾನಿ ಬೆಂಗಳೂರಿನ ಜನತೆ ಎಂದೂ ಮರೆಯಲಾರರು. ಬೆಂಗಳೂರು ನಗರ ವಿಸ್ತಾರವಾಗುತ್ತಾ ಹಲವಾರು ಬಡಾವಣೆಗಳು ಬೆಳದವು. ಆಯಾ ಬಡಾವಣೆಗಳ ಅಭಿವೃದ್ಧಿಗೆ ಶ್ರಮಿಸಿದ ಹಲವಾರು ಜನರಿದ್ದಾರೆ. ಇಪ್ಪತ್ತನೆಯ ಶತಮಾನದಲ್ಲಿ ಮೈಸೂರರಸರ ದಿವಾನರ ಕಾಲದಲ್ಲಿ ದಾಸರ ಹಳ್ಳಿಯಲ್ಲಿ ನೆಲಸಿ ಆ ಬಡಾವಣೆಯ ಅಭಿವೃದ್ಧಿಗೆ ಶ್ರಮಿಸಿದ ಶ್ರೀ ಜೈಮುನಿರಾವ್ ಬಡಕುಟುಂಬದಲ್ಲಿ ಜನಿಸಿ ಸ್ವತಃ ಕ್ರಿಯಾಶೀಲ ಉದಮಿಯಾಗಿ ಇಂದಿಗೂ ತಮ್ಮ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಿ ಹೋಗಿದ್ದಾರೆ.
ಬಾಲ್ಯದಲ್ಲಿಯೇ ಧರ್ಮಾಸಕ್ತಿ
 ಶ್ರೀರಾಣೋಜಿರಾವ್ ಜಾದವ್ ಮತ್ತು ತುಳಜಾಬಾಯಿ ದಂಪತಿಗಳು ಬೆಂಗಳೂರು ನಗರಕ್ಕೆ ಸೇರಿದ ನೆಲಮಂಗಲದಲ್ಲಿ ನೆಲೆಸಿ ಮರಗೆಲಸ ಮಾಡಿ ಬದುಕುತ್ತಿದ್ದರು. ಇವರಿಗೆ ಮನ್ನೂಬಾಯಿ ಎಂಬ ಮಗಳಿದ್ದಳು. ಮನೆದೇವರಾದ ಶ್ರೀಲಕ್ಷ್ಮೀನರಸಿಂಹಸ್ವಾಮಿ ಮತ್ತು ಎಲ್ಲಮ್ಮದೇವಿಯ ಕೃಪೆಯಿಂದ ಶ್ರೀ ವಿಕಾರಿನಾಮ ಸಂವತ್ಸರದ ಜ್ಯೇಷ್ಠ ಶುಕ್ಲ ಪೂರ್ಣಿಮೆ ಬುಧವಾರದ ದಿನ (ಅಂದರೆ ಕ್ರಿ.ಶ. ೧೯೦೧) ಗಂಡುಮಗು ಜನಿಸಿತು. ಆ ಮಗುವಿಗೆ ಹುಟ್ಟಿದ ಹನ್ನೊಂದನೆಯ ದಿನ ಜೈಮುನಿರಾವ್ ಜಾದವ್ ಎಂದು ನಾಮಕರಣ ಮಾಡಿದರು.
ಮಗುವಿನ ಶಿಕ್ಷಣಕ್ಕಾಗಿ ನೆಲಮಂಗಲವನ್ನು ಬಿಟ್ಟು ಬೆಂಗಳೂರಿನಲ್ಲಿಯೇ ಮನೆ ಮಾಡಿ ನೆಲೆಸಿದರು. ನೆಲಮಂಗಲದಲ್ಲಿ ಮಾಡುತ್ತಿದ್ದ ಮರಗೆಲಸದ ಉದ್ಯೋಗವನ್ನು ಇಲ್ಲಿಯೂ ಮುಂದುವರಿಸಿಕೊಂಡು ಬಂದರು. ಬಾಲಕ ಜೈಮುನಿಯನ್ನು ಮನೆಗೆ ಹತ್ತಿರವಿದ್ದ ಜನೋಪಕಾರಿ ದೊಡ್ಡಣ್ಣಶೆಟ್ಟರ ಧರ್ಮಸಂಸ್ಥೆಯ ಪ್ರಾಥಮಿಕ ಶಾಲೆಗೆ ಸೇರಿಸಿದರು. ಬಹಳ ಚೂಟಿಯಾಗಿದ್ದ ಬಾಲಕ ಜೈಮುನಿಗೆ ಗುರುಹಿರಿಯರ ಮೇಲೆ ಅಪಾರ ಪ್ರೀತಿ ಮತ್ತು ಗೌರವ ಹಾಗು ದೈವಭಕ್ತಿ. ಶಾಲೆಯಿಂದ ಬಂದಮೇಲೆ ತನ್ನ ಜೊತೆ ಮಕ್ಕಳನ್ನು ಕೂಡಿಕೊಂಡು ಮನೆಗೆ ಹತ್ತಿರವಿದ್ದ ಕಾಶಿ ವಿಶ್ವೇಶರ ದೇವಸ್ಥಾನಕ್ಕೆ ಹೋಗುತ್ತಿದ್ದ. ಸಂಜೆ ಹೊತ್ತು ಅಲ್ಲಲ್ಲಿ ನಡೆಯುತ್ತಿದ್ದ ಭಜನೆಯಲ್ಲಿ ಭಾಗವಹಿಸಿ ಮನೆಗೆ ಬರುತ್ತಿದ್ದ.
ಕಾರ್ತಿಕ ಮಾಸದಲ್ಲಿ ಬೆಳಗ್ಗೆ ೫ ಗಂಟೆಗೆ ಎದ್ದು ತಣ್ಣೀರಿನಲ್ಲಿ ಮಿಂದು ಹಿಂದಿನ ದಿನ ಸಂಜೆ ಗೆಳೆಯರ ಜೊತೆ ಸೇರಿ ಬಿಡಿಸಿ ತಂದಿದ್ದ ತುಂಬೆ ಹೂವಿನ ಜೊತೆ ಪೂಜಾರಿಯು ಬರುವ ಮೊದಲೇ ದೇವಾಲಯದ ಬಾಗಿಲಲ್ಲಿ ಕುಳಿತು ದೇವರ ಸ್ತೋತ್ರಗಳನ್ನು ಹೇಳಿಕೊಳ್ಳುತ್ತಿದ್ದ ಜೈಮುನಿಯನ್ನು ಪೂಜಾರಿ ನೋಡಿ, ಮಗು ಇದೇನು ಇಷ್ಟು ಬೇಗ ಬಂದಿರುವೆ ಎಂದು ಕೇಳಿದರೆ ನಾನು ತಂದ ತುಂಬೆ ಹೂವನ್ನು ಈಶ್ವರನ ತಲೆಯ ಮೇಲೆ ಮೊದಲು ಇರಿಸಬೇಕು ಅಂತ ತಂದಿದ್ದೇನೆ. ಆಮೇಲೆ ಬಂದರೆ ಹೂವನ್ನು ದೇವರ ಪಾದದ ಮೇಲೆ ಹಾಕುತ್ತೀರ. ಪೂಜೆ ಅಭಿಷೇಕ ಆಗುವವರೆಗೆ ಇಲ್ಲಿಯೇ ಕುಳಿತು ದೇವರ ದರ್ಶನ ಮಾಡುತ್ತೇನೆ ಎನ್ನುತ್ತಿದ್ದ. ಇದು ಜೈಮುನಿಗೆ ಮತ್ತು ಪೂಜಾರಿಗೆ ಕಾರ್ತಿಕಮಾಸದಲ್ಲಿ ದಿನನಿತ್ಯದ ಅಭ್ಯಾಸವಾಗಿತ್ತು.
ವೃತ್ತಿಪರತೆ ಮತ್ತು ಸೇವಾಮನೋಭಾವ
ದೇವಾಲಯದ ಅಂಗಳದಲ್ಲಿ ಮತ್ತು ಹೊರಗಡೆ ಸುತ್ತಲೂ ಬೆಳೆದು ನಿಂತಿದ್ದ ಗಿಡಗಂಟೆಗಳು ಹಾಗೂ ಕಸಕಡ್ಡಿಗಳಿಂದ ತುಂಬಿದ್ದ ಆವರಣವನ್ನು ಸ್ವಚ್ಚ ಮಾಡಲು ಯೋಚಿಸಿದ. ಆ ಕೆಲಸ ಕೈಗೊಳ್ಳಬೇಕಾದರೆ ಹಣದ ಅವಶ್ಯಕತೆ ಇತ್ತು. ಬಡತನದಲ್ಲಿದ್ದ ತಂದೆತಾಯಿಯ ಬಳಿ ಹಣ ಕೇಳುವಂತಿರಲಿಲ್ಲ. ಜೈಮುನಿ ಹಣದ ಸಂಪಾದನೆಗೆ ಉಪಾಯ ಮಾಡಿದ. ಒಂದು ಮರದ ಚೌಕಟ್ಟಿನಲ್ಲಿ ಗಡಿಯಾರವನ್ನು ಮಾಡಿ ಅದರೊಳಗೆ ಗರಗರ ತಿರುಗುವ ಎರಡು ಕಡ್ಡಿಗಳನ್ನು ಇರಿಸಿ ೧ರಿಂದ ೧೨ರವರೆಗೆ ಅಂಕಿಗಳನ್ನು ಬರೆದನು. ದೇವಾಲಯದ ಬಾಗಿಲಲ್ಲಿ ಕುಳಿತು ಅಲ್ಲಿ ಬರುವ ಹುಡುಗರ ಮುಂದೆ ಅವನು ತಾನೇ ಸಿದ್ಧಪಡಿಸಿದ ಗಡಿಯಾರವನ್ನು ಇಟ್ಟು ಹೇಳಿದನು. ನೀವು ಈ ಗಡಿಯಾರದ ಮುಳ್ಳನ್ನು ತಿರುಗಿಸಿದರೆ ಆ ಮುಳ್ಳು ಯಾವ ಅಂಕಿಯ ಮೇಲೆ ನಿಲ್ಲುತ್ತದೆಯೋ ಅಷ್ಟು ಪೆಪ್ಪರ್‌ಮೆಂಟುಗಳನ್ನು ಕೊಡುತ್ತೇನೆ. ಅದಕ್ಕೆ ನಿಗದಿಪಡಿಸಿದ ಹಣ ಒಂದುಕಾಸು. ಆ ಕಾಲದಲ್ಲಿ ೧೨ ಪೆಪ್ಪರ್‌ಮೆಂಟಿಗೆ ಒಂದು ಕಾಸು. ಅಂದು ನಿಂಬೆಹುಳಿ ಪೆಪ್ಪರ್‌ಮೆಂಟನ್ನು ಮಕ್ಕಳು ತುಂಬಾ ಇಷ್ಟಪಡುತ್ತಿದ್ದರು. ಹೀಗೆ ಆಟದ ಮೂಲಕ ಹಣದ ಸಂಪಾದನೆ ಮಾಡಿ ಆ ಹಣದಲ್ಲಿ ಪೊರಕೆ, ಬ್ರಷ್, ಸೋಪು ಮೊದಲಾದವುಗಳನ್ನು ತಂದು ಒಂದು ಭಾನುವಾರ ತನ್ನ ಗೆಳೆಯರನ್ನೆಲ್ಲಾ ಸೇರಿಸಿ ಬಾವಿಯಿಂದ ನೀರುತಂದು ದೇವಾಲಯದ ಆವರಣದಲ್ಲಿದ್ದ ಕಲ್ಲುಮುಳ್ಳುಗಳನ್ನು ತೆಗೆದು ಒಳಗೆ ಮತ್ತು ಹೊರಗೆ ಹಾಸಿದ್ದ ಕಲ್ಲುಗಳನ್ನೆಲ್ಲಾ ಬೆಳ್ಳಗೆ ತೊಳೆದು ಶುಚಿಗೊಳಿಸಿದರ. ಮರುದಿನ ಬಂದು ನೋಡಿದ ಪೂಜಾರಿ ಮೆಚ್ಚುಗೆಯಿಂದ ವಿಷಯ ತಿಳಿದು ಜೈಮುನಿಯನ್ನು ಕಂಡು ನಿನ್ನ ವೃತ್ತಿಪರತೆ ಹಾಗೂ ಸೇವಾಪ್ರವೃತ್ತಿಯನ್ನು ಮೆಚ್ಚಿದೆ. ನೀನೊಬ್ಬ ದೈವಾಂಶ ಪುರುಷ, ಎಲ್ಲರಿಗೂ ಈ ಬುದ್ದಿ ಬರುವುದಿಲ್ಲವೆಂದು ಹೇಳಿ, ಸೋಮವಾರ ಒಳ್ಳೆಯ ಊಟ ಹಾಕಿಸಿ ಸಂತೋಷಪಡಿಸಿದರು.
ಭಜನಾಸಕ್ತಿ ಮತ್ತು ಸಾಹಿತ್ಯಪ್ರೇಮ
ಸ್ವಾತಂತ್ರ್ಯ ಪೂರ್ವದಲ್ಲಿ ಕೀರ್ತನಕಾರರಿಂದ ದೇವಸ್ಥಾನಗಳಲ್ಲಿ ಹರಿಕಥೆ ಮಾಡಿಸುತ್ತಿದ್ದರು. ಸಂಗೀತಗಾರರಿಂದ ಸಂಗೀತ ಕಚೇರಿಯೂ ನಡೆಯುತ್ತಿದ್ದವು. ಹಾಗೆ ಪ್ರತಿವಾರವೂ ಸೋಮವಾರ, ಗುರುವಾರ ಮತ್ತು ಶನಿವಾರದಂದು ಭಜನೆಗಳೂ ನಡೆಯುತ್ತಿದ್ದವು. ಇಂತಹ ಭಜನೆಮಂದಿರಗಳಿಗೆ ತಪ್ಪದೆ ಹೋಗುತ್ತಿದ್ದ ಬಾಲಕ ಜೈಮುನಿಗೆ ಅವರ ತಾಯಿ ತಮಗೆ ತಿಳಿದಿದ್ದ ಶಿವಾಜಿ, ಸಮರ್ಥ ರಾಮದಾಸ್, ಸಂತ ತುಕಾರಾಂ ಏಕನಾಥ ಮೊದಲಾದ ಸಾಧು ಸಂತರ ಜೀವನ ಕಥೆಗಳನ್ನು ಹೇಳುತ್ತಿದ್ದರು. ಈ ಎಲ್ಲವನ್ನು ಕೇಳುತ್ತಾ ಭಕ್ತಿ ಶ್ರದ್ಧೆಗಳು ಅವನಲ್ಲಿ ಬೆಳೆದಿತ್ತು. ದೇವಸ್ಥಾನವನ್ನು ಶುಚಿಗೊಳಿಸಿದ ಸಂತೋಷಕ್ಕೆ ಊಟ ಹಾಕಿಸುವ ಸೋಮವಾರದ ದಿನ ಭಜನೆ ಮಂಡಳಿಯೊಂದನ್ನು ಕರೆಸಿ ಭಜನೆ ಕಾರ್ಯಕ್ರಮವನ್ನು ಏರ್ಪಡಿಸಿದಾಗ ಅವರೊಂದಿಗೆ ದನಿ ಸೇರಿಸಿ ಶೃತಿಬದ್ದವಾಗಿ ಶ್ರದ್ಧಾಭಕ್ತಿ ಮಾಧುರ್ಯದಿಂದ ಹಾಡುತ್ತಿದ್ದ ಜೈಮುನಿಯನ್ನು ಗಮನಿಸಿಮಗೂ ನೀನೇ ಒಂದು ಹಾಡನ್ನು ಹಾಡುತ್ತೀಯಾ? ಎಂದರು. ಆಗ ತಾನು ಕಲಿತಿದ್ದ-
ಓಂ ನಮಶ್ಶಿವಾಯ ಎಂಬುವ ಮಂತ್ರ
ವೈರಿಯ ಹರಿಸುವುದು ಈ ಮಂತ್ರ
ಸನ್ಮತಿ ಗೈಯುವ ಭಿನ್ನ ಕಾರದ ಮಂತ್ರ
ಉನ್ಮನ ತೋರುವುದೀ ಮಂತ್ರ-ಇತ್ಯಾದಿಯಾಗಿ ಹಾಡಿದ ಹಾಡನ್ನು ಕೇಳಿ ಎಲ್ಲರೂ ಸಂತೋಷದಿಂದ ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿ - ನೀನು ನಮ್ಮ ಭಜನಾಮಂಡಳಿಗೆ ಸೇರಿಕೋ, ಪ್ರತಿವಾರ ನಾವು ನಡೆಸುವ ಭಜನೆಗಳಲ್ಲಿ ನೀನು ಪಾಲ್ಗೊಂಡು ಹಾಡಬಹುದು ಎಂದು ಕರೆದರು. ಭಜನೆಮಂದಿರಗಳಲ್ಲಿ ರಚಿಸಿ ಹಾಡಲು ಪ್ರಾರಂಭಿಸಿದ. ಇವನು ಶತಿಬದ್ದವಾಗಿ ಸುಶ್ರಾವ್ಯವಾಗಿ ಹಾಡುವುದನ್ನು ಕಂಡು ಹಾರ್ಮೋನಿಯಂ ಮತ್ತು ತಬಲ ನುಡಿಸುತ್ತಿದ್ದವರು ಜೈಮುನಿಗೆ ಈ ವಾದ್ಯಗಳನ್ನು ನುಡಿಸುವುದನ್ನು ಸಹ ಕಲಿಸಿದರು. ಚೆನ್ನಾಗಿ ನುಡಿಸುವುದನ್ನು ಕಲಿತ ಮೇಲೆ ಜೈಮುನಿ ಭಜನಾಮಂಡಳಿಗೆ ವಾದ್ಯಗಳನ್ನು ನುಡಿಸುತ್ತಿದ್ದುದಲ್ಲದೆ ನಾಟಕ ಮತ್ತಿತರ ಕಾರ್ಯಕ್ರಮಗಳಲ್ಲಿ ವಾದ್ಯಗಾರನಾಗಿ ಭಾಗವಹಿಸುತ್ತಿದ್ದ. ಗೆಳೆಯರ ಜೊತೆ ಸೇರಿ ಕೆಂಪಾಬುಧಿ ಕೆರೆಯಲ್ಲಿ ಈಜುವುದನ್ನು ಕಲಿತ.
ಆಟಪಾಠಗಳಲ್ಲಿ ಚುರುಕು ವಿದ್ಯಾರ್ಥಿಯಾಗಿದ್ದ ಜೈಮುನಿಯು ಅನಿವಾರ್ಯವಾಗಿ ಶಾಲೆಯನ್ನು ಬಿಡಬೇಕಾಗಿ ಬಂತು. ಮನೆಯಲ್ಲಿ ಸದಾ ನೆಂಟರಿಷ್ಟರಿಂದ ತುಂಬಿರುತ್ತಿದ್ದ ದೊಡ್ಡ ಕುಟುಂಬದ ಖರ್ಚುವೆಚ್ಚಗಳನ್ನು, ತಂದೆಯ ಮರಗೆಲಸದಿಂದ ಸಂಪಾದಿಸುತ್ತಿದ್ದ ಹಣ ಯಾವ ಮೂಲೆಗೂ ಸಾಕಾಗುತ್ತಿರಲಿಲ್ಲ. ಹಾಗಾಗಿ ಓದುವುದನ್ನು ಬಿಟ್ಟು ತಂದೆಯ ಜೊತೆ ದುಡಿಯುವತ್ತ ಜೈಮುನಿ ಕೈ ಜೋಡಿಸಬೇಕಾಯಿತು. ತಂದೆಯ ಜೊತೆಯಲ್ಲಿ ಮರಗೆಲಸದ ಕೆಲಸವನ್ನು ಚೆನ್ನಾಗಿ ಕಲಿತು ಸ್ವತಂತ್ರವಾಗಿ ಕೆಲಸ ಮಾಡುವಷ್ಟು ನಿಪುಣನಾದನು.
ತಂದೆ ರಾಣೋಜಿರಾವ್ ಜಾದವ್ ಅವರು ವಯಸ್ಸಿಗೆ ಬಂದ ಮಗ ಜೈಮುನಿಗೆ ಸದ್ವಂಶ ಹಾಗೂ ವಿದ್ಯಾವಂತರು ಆಗಿದ್ದ ಈಶ್ವರರಾವ್ ಸೂರ್ಯವಂಶೆ ಮತ್ತು ರುಕುಮಾಬಾಯಿ ಅವರ ಮಗಳನ್ನು ತಂದು ವಿವಾಹ ಮಾಡಿದರು. ಮುಂದೆ ಕೆಲವು ದಿನಗಳಲ್ಲಿ ತಂದೆ ರಾಣೋಜಿರಾಯರು ೧೯೨೨ರಂದು ನಿಧನರಾದರು. ಹಾಗಾಗಿ ಸಂಸಾರದ ಪೂರ್ಣ ಜವಾಬ್ದಾರಿ ೨೨ ವಯಸ್ಸಿನ ಜೈಮುನಿಯ ಮೇಲೆ ಬಿತ್ತು.
ಹೀಗಿರುವಾಗ ಬಂಧುಗಳಾಗಿದ್ದ ಧರ್ಮಪ್ರಕಾಶ ಎಸ್. ಸಜ್ಜನರಾವ್ ಅವರು ವಿಶ್ವೇಶ್ವರಪುರದಲ್ಲಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನವನ್ನು ಕಟ್ಟಿಸುತ್ತಿದ್ದರು. ಆಗ ಅವರ ಮನೆಯಲ್ಲಿ ಎಲ್ಲಾ ಗೃಹಕಾರ್ಯಗಳಲ್ಲಿ ಸಹಕರಿಸಲು ಜೈಮುನಿರಾಯರು ನಿಯೋಜಿತರಾದರು. ಒಂದು ದಿನ ಸಜ್ಜನರಾಯರ ಪತ್ನಿ ತಾವು ಸ್ನಾನ ಮಾಡುವಾಗ ಕೊರಳಿನಲ್ಲಿದ್ದ ಆಭರಣವನ್ನು ಪ್ರತಿದಿನದಂತೆ ತೆಗೆದಿಟ್ಟು ಸ್ನಾನ ಮಾಡಿ ಬಂದು ಒಡವೆ ಕಾಣದೆ, ಜೈಮುನಿಯನ್ನು ಅನುಮಾನದಿಂದ ನೋಡಿ ಒಡವೆ ಇಲ್ಲಿಟ್ಟಿದ್ದೆ ನೋಡಿದೆಯಾ? ಎಂದು ಕೇಳಿದರು.ಇಲ್ಲಾ ನಾ ನೋಡಲಿಲ್ಲ ಎನ್ನಲು, ಅವರು ಮನೆಯ ಎಲ್ಲಾ ಕಡೆಯಲ್ಲಿ ಓಡಾಡುವವನು ನೀನೊಬ್ಬನೆ, ನೀನಲ್ಲದೆ ಕಳ್ಳತನ ಮಾಡಲು ಬೇರೆ ಯಾರು ಇಲ್ಲಿಗೆ ಬರುವುದಿಲ್ಲ. ನೀನು ತೆಗೆದುಕೊಂಡಿದ್ದರೆ ಒಡವೆಯನ್ನು ಕೊಟ್ಟು ಬಿಡು ಎಂದು ಕಳ್ಳತನದ ಆಪಾದನೆ ಮಾಡಿದರು. ನನ್ನ ಸತ್ಯಸಂಧತೆಯ ಬಗ್ಗೆ ಅನುಮಾನ ಪಟ್ಟರಲ್ಲ ಎಂಬ ನೋವಿನಿಂದ ಕೆಲಸ ಮುಗಿಸಿ ಮನೆಗೆ ಬಂದು ತಾಯಿಗೆ ಎಲ್ಲಾ ವಿವರಗಳನ್ನು ಹೇಳಿ ಅತ್ತುಕೊಂಡು, ಇನ್ನು ಮುಂದೆ ಅವರ ಮನೆ ಕೆಲಸಕ್ಕೆ ಹೋಗುವುದಿಲ್ಲವೆಂದು ಹೇಳಿ ಬೇರೆ ಕಡೆ ಕೆಲಸ ಹುಡುಕಲು ಪ್ರಯತ್ನಿಸುತ್ತೇನೆ ಎಂದ.
ಇದಾದ ನಾಲ್ಕೈದು ದಿನಗಳ ನಂತರ ಅಂದು ಒಡವೆ ಇಟ್ಟಿದ್ದ ಬಟ್ಟಲ ಮೇಲೆ ದೇವರ ಪ್ರಸಾದಕ್ಕೆಂದು ತರಿಸಿದ್ದ ಕಲ್ಲುಸಕ್ಕರೆ ಪೊಟ್ಟಣವಿಟ್ಟು ಮರೆತಿದ್ದರು. ಮತ್ತೊಂದು ದಿನ ಕಲ್ಲುಸಕ್ಕರೆ ಪೊಟ್ಟಣ ತೆಗೆದಾಗ ತನ್ನ ಒಡವೆ ಅಲ್ಲಿಯೇ ಇರುವುದನ್ನು ನೋಡಿ ಆಕೆ ಜೈಮುನಿಯನ್ನು ಆಪಾದಿತನ್ನಾಗಿ ಮಾಡಿದ್ದಕ್ಕೆ ಬೇಜಾರಿನಿಂದ ಪತಿಗೆ ಹೇಳಿದರು. ನಂತರ ದಂಪತಿಗಳು ಜೈಮುನಿರಾಯರ ಮನೆಗೆ ಬಂದು ಜೈಮುನಿಯನ್ನು ವಿಚಾರಿಸಲಾಗಿ ಅವನ ತಾಯಿ ಕೆಲಸ ಹುಡುಕಲು ಹೋಗಿರುವುದಾಗಿ ತಿಳಿಸಿದರು. ಆಗ ಸತ್ಯ ಘಟನೆ ಹೇಳಿ ತಮ್ಮಿಂದಾದ ತಪ್ಪಿಗೆ ಕ್ಷಮೆ ಕೇಳಿ ಮತ್ತೆ ತಮ್ಮ ಮನೆಗೆ ಕೆಲಸಕ್ಕೆ ಬರಲು ತಿಳಿಸಿದರು. ಜೈಮುನಿಯ ತಾಯಿ ತನ್ನ ಮಗ ಅಪರಾಧಿ ಅಲ್ಲವೆಂದು ಸಾಬೀತಾಯಿತಲ್ಲ. ಪುನಃ ನಿಮ್ಮ ಮನೆಯಲ್ಲಿ ಕೆಲಸ ಮಾಡಲು ಇಷ್ಟಪಡುವುದಿಲ್ಲವೆಂದು ಹೇಳಿ ಕಳಿಸುತ್ತಾರೆ.
ಒಂದು ದಿನ ಸಾಯಂಕಾಲ ಸಜ್ಜನರಾಯರು ಜೈಮುನಿಯ ಮನೆಗೆ ಬಂದ ತುಳಜಾಬಾಯಿಯನ್ನು ಜೈಮುನಿ ಎಲ್ಲಿ ಕೆಲಸ ಮಾಡುತ್ತಿದ್ದಾನೆಂದು ವಿಚಾರಿಸುತ್ತಾರೆ. ಈಗ ಜೈಮುನಿಯು ಮನೆಯಲ್ಲಿಯೆ ಬೆಂಚುಗಳನ್ನು ಮಾಡಿ ಮಾರಾಟ ಮಾಡುವ ಉದ್ಯೋಗ ಪ್ರಾರಂಭಿಸಿದ್ದಾನೆ ಅವನು ಎಲ್ಲೂ ಕೆಲಸಕ್ಕೆ ಹೋಗುತ್ತಿಲ್ಲ ಎಂದರು. ಆಗ ಒಳಗಿನಿಂದ ಬಂದ ಜೈಮುನಿಯನ್ನು ಕುರಿತು ಸಜ್ಜನರಾಯರು ಮರಗೆಲಸವನ್ನು ನೀನು ನಿನ್ನ ತಂದೆಯವರ ಹಾಗೆ ತುಂಬಾ ಸೊಗಸಾಗಿ ಮಾಡುತ್ತಿಯೆ. ನಾನು ವಿಶ್ವೇಶ್ವರಪುರದಲ್ಲಿ ಕಟ್ಟಿಸುತ್ತಿರುವ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಬಾಗಿಲು ಕಿಟಕಿ ಮುಂತಾದ ಕೆಲಸಗಳನ್ನು ನಮ್ಮವನಾದ ನಿನ್ನಿಂದಲೇ ಮಾಡಿಸಬೇಕೆಂದು ನಿನ್ನನ್ನು ಕರೆಯಲು ಬಂದಿದ್ದೇನೆ. ಅದಕ್ಕೆ ಬೇಕಾದ ಮರದ ದಿಮ್ಮಿಗಳನ್ನು ಹುಣಸೂರಿಗೆ ಹೋಗಿ ಖರೀದಿ ಮಾಡಿಕೊಂಡು ಬಂದು ದೇವಸ್ಥಾನದ ಕೆಲಸವನ್ನು ಪ್ರಾರಂಭಿಸಿ ಬಿಡು ಎಂದು ಹೇಳಿ ಸಂಬಂಧಿಸಿದ ಮರಗೆಲಸದ ನಕ್ಷೆ ಮತ್ತು ಇತರ ವಿವರಗಳನ್ನೊಳಗೊಂಡ ಪುಸ್ತಕವನ್ನು ಅವನ ಕೈಗೆ ಕೊಟ್ಟರು. ಕೆಲಸ ಒಪ್ಪಿಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದ ಮಗನಿಗೆ ದೇವಸ್ಥಾನದ ಕೆಲಸವಾದ್ದರಿಂದ ಬೇಡವೆನ್ನಬಾರದು ಒಪ್ಪಿಕೊಳ್ಳಲು ತಾಯಿ ಹೇಳಿದಾಗ ಜೈಮುನಿಯು ನಾಳೆಯಿಂದ ದೇವಸ್ಥಾನದ ಕೆಲಸಕ್ಕೆ ಬರುತ್ತೇನೆಂದು ಹೇಳಿ ಕಳಿಸಿದನು. ಅದರಂತೆ ದೇವಸ್ಥಾನದ ಬಾಗಿಲು ಕಿಟಕಿಗಳ ಮರಗೆಲಸವನ್ನಷ್ಟೇ ಅಲ್ಲದೆ ಗೋಪುರದ ಕೆಲಸ ಮತ್ತು ಅದರ ಮೇಲೆ ಒಂಬತ್ತು ಚಿನ್ನದ ಕಳಶಗಳ ಸ್ಥಾಪನೆಯ ಜೊತೆ ಇಂದಿಗೂ ಸುಬ್ರಹ್ಮಣ್ಯ ಷಷ್ಠಿಯ ದಿನ ಬೆಂಗಳೂರಿನ ಜನರನ್ನು ಆಕರ್ಷಿಸುತ್ತಿರುವ ಬೆಳ್ಳಿರಥವನ್ನು ನಿರ್ಮಿಸುವ ಕೆಲಸದಲ್ಲಿ ಮುಖ್ಯ ಪಾತ್ರ ವಹಿಸಿದ್ದನು.
ಕೈಗಾರಿಕೋದ್ಯಮಿ ಮತ್ತು ಸಂಶೋಧಕ
ಚಿಕ್ಕಂದಿನಿಂದಲೇ ಭಜನೆಗಳಲ್ಲಿ ಹಾಡುವ ಆಸಕ್ತಿ ಇದ್ದ ಜೈಮುನಿಗೆ ಹಾರ್ಮೋನಿಯಂ ಬಗ್ಗೆ ವಿಶೇಷವಾದ ಆಕರ್ಷಣೆ ಇತ್ತು. ದೇವಸ್ಥಾನದ ಕೆಲಸ ಮುಗಿದ ಮೇಲೆ ಜೈಮುನಿರಾಯರು ಸ್ವಂತ ಉದ್ಯೋಗ ಮಾಡಲು ನಿಶ್ಚಯಿಸಿದರು. ತಾಯಿ ತುಳಜಾ ಬಾಯಿಗೂ ಮಗ ಸ್ವತಂತ್ರವಾಗಿ ಉದ್ಯೋಗ ಮಾಡಬೇಕೆಂಬ ಬಯಕೆ ಇತ್ತು. ಅವರು ತಮ್ಮ ಬಿಡುವಿನ ವೇಳೆಯಲ್ಲಿ ರೇಷ್ಮೆದಾರ ತೆಗೆದು ಮಗನ ಕೈಲಿ ಮಾರವಾಡಿಗಳಿಗೆ ಒಂದು ಕೇಜಿಗೆ ೨೦ ರೂ.ಗಳಂತೆ ಮಾರಿಸುತ್ತಿದ್ದರ. ಹಾಗೇ ಸಂಗ್ರಹಿಸಿದ ಹಣವನ್ನು ಒಗ್ಗೂಡಿಸಿಕೊಂಡು ಸುಪ್ರಸಿದ್ಧ ವ್ಯಾಪಾರಿಗಳಾದ ಎಂ. ರಾಮಚಂದ್ರರಾವ್ ಸಿಂಧ್ಯ ಅವರ ನೆರವಿನಿಂದ ಅರಳೇಪೇಟೆಯಲ್ಲಿ ಜೈಮುನಿರಾಯರು ಶ್ರೀ ಶಿವಾಜಿ ಹಾರ್ಮೋನಿಯಂ ವರ್ಕ್ಸ್ ಎಂಬ ಅಂಗಡಿಯನ್ನು ಪ್ರಾರಂಭಿಸಿ ಅಲ್ಲಿ ಹಾರ್ಮೋನಿಯಂ ತಯಾರಿಕೆ ಮತ್ತು ಫರ್ನಿಜರ್ ತಯಾರಿಕೆ ಕೆಲಸಗಳ ವ್ಯಾಪಾರ ಶುರು ಮಾಡಿದರು.
ಜೈಮುನಿರಾಯರ ಕಾರ್ಯಕ್ಷೇತ್ರ ಸಾಕಷ್ಟು ವಿಶಾಲವಾಯಿತು. ತಮ್ಮ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ರೂಪಿಸಲು ಸ್ವಂತ ನೆಲೆ ಬೇಕಾಯಿತು. ಆಗ ಅಗ್ರಹಾರ ದಾಸರಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿ ತಮ್ಮ ಕಾರ್ಯ ಚಟುವಟಿಕೆ ಮುಂದುವರಿಸಿದರು. ಮುಂದೆ ತಾವು ವಾಸ ಮಾಡುತ್ತಿದ್ದ ಅದೇ ಮನೆಯನ್ನು ಖರೀದಿಗೆ ಕೊಂಡು ಮನೆಗೆ ಹತ್ತಿರವಿದ್ದ ಖಾಲಿ ಜಾಗವನ್ನು ಬಾಡಿಗೆಗೆ ಪಡೆದು ಅಲ್ಲಿ ಹೆಂಚು ಮತ್ತು ಇಟ್ಟಿಗೆ ತಯಾರಿಸುವ ಪುಟ್ಟ ಕಾರ್ಖಾನೆ ಪ್ರಾರಂಭಿಸಿದರು. ತಯಾರಿಕೆ ಹೆಚ್ಚಿದಂತೆಲ್ಲ ಕೆಲಸಗಾರರು ಹೆಚ್ಚಾದರು. ಬಡವರೇ ಅಧಿಕವಾಗಿದ್ದ ಕೆಲಸಗಾರರಿಗೆ ಆಶ್ರಯ ಮತ್ತು ಪ್ರೋತ್ಸಾಹ ನೀಡುತ್ತಾ ಅವರ ಮಕ್ಕಳಿಗೂ ಹಾಗೂ ತಮ್ಮ ಮಕ್ಕಳಿಗೂ ತರಬೇತಿ ನೀಡಿ ಶಿಕ್ಷಣಕ್ಕೂ ಮಾರ್ಗದರ್ಶಕರಾದರು.
ಜೈಮುನಿಯವರು ತಮ್ಮ ಕಾರ್ಖಾನೆಯಲ್ಲಿ ಹೆಂಚು, ಇಟ್ಟಿಗೆ ತಯಾರಿಕೆಗೆ ಪ್ರಾಮುಖ್ಯತೆ ಕೊಟ್ಟಂತೆ ಇತರ ಕರಕುಶಲ ವಸ್ತುಗಳ ತಯಾರಿಕೆಗಳಿಗೂ ಪ್ರಾಮುಖ್ಯ ಕೊಡುತ್ತಿದ್ದರು. ನೀರು ತುಂಬುವ ಮಣ್ಣಿನ ಹೂಜಿಗೆ ನಲ್ಲಿಯನ್ನು ಜೋಡಿಸುತ್ತಿದ್ದರು. ಕಂಚಿನ ಗಂಟೆಯಂತೆ ಶಬ್ದ ಬರುವ ಮಣ್ಣಿನಗಂಟೆ ಹಾಗೂ ಇತರ ಪ್ರಮುಖ ಗೃಹೋಪಯೋಗಿ ಸುಂದರ ವಸ್ತುಗಳನ್ನು ತಯಾರಿಸಿ ಮಾರಾಟಕ್ಕಿಡುತ್ತಿದ್ದರು. ಈ ಎಲ್ಲಾ ವಸ್ತುಗಳನ್ನು ಮೈಸೂರಿನಲ್ಲಿ ನಡೆಯುತ್ತಿದ್ದ ವಸ್ತುಪ್ರದರ್ಶನದಲ್ಲಿ ಗ್ರಾಹಕರ ಕಣ್ಮನ ಸೆಳೆಯುವಂತೆ ಜೋಡಿಸಿಡುತ್ತಿದ್ದರು. ಅಲ್ಲದೆ ಇವರ ಮಳಿಗೆ ಪ್ರವೇಶದ್ವಾರದ ಬಳಿ ಅವು ಇದ್ದು ಅಲ್ಲಿಗೆ ಬರುವ ಎಲ್ಲರ ಗಮನವನ್ನು ಸೆಳೆಯುತ್ತಿದ್ದವು. ಹಾಗೆ ಹೆಚ್ಚಿನ ಮಾರಾಟವು ಆಗುತ್ತಿತ್ತು. ಅರಮನೆಯಿಂದ ಮಹಾರಾಣಿಯವರು ಸಹ ಭೇಟಿಕೊಡುತ್ತಿದ್ದರು. ಹಾಗೆ ಬಂದಾಗ ಅಲ್ಲಿ ತಮಗೆ ಮೆಚ್ಚಿಕೆಯಾದ ಸುಂದರ ವಸ್ತುಗಳನ್ನು ಕೊಂಡು ಅರಮನೆಯಲ್ಲಿ ಅಲಂಕರಿಸುತ್ತಿದ್ದರು. ಇಂದಿಗೂ ಅವು ಜಗನ್ಮೋಹನ ಅರಮನೆಯಲ್ಲಿರುವುದನ್ನು ನೋಡಬಹುದು. ಇವರಲ್ಲದೆ ಮೈಸೂರಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರು ಮಳಿಗೆಗೆ ಬಂದು ಅಂದವಾಗಿ ಜೋಡಿಸಿದ್ದ ವಸ್ತುಗಳನ್ನು ಒಂದೊಂದಾಗಿ ನೋಡುತ್ತಾ ನೀರು ತುಂಬುವ ಮಣ್ಣಿನ ಹೂಜಿಗೆ ನಲ್ಲಿ ಜೋಡಿಸಿರುವುದನ್ನು ಮತ್ತು ಮಣ್ಣಿನ ಗಂಟೆಯನ್ನು ನೋಡಿ, ಕೈಲಿ ಹಿಡಿದು ಆಡಿಸಿದಾಗ ಕಂಚಿನ ಗಂಟೆಯ ನಾದವನ್ನು ಕೇಳಿ ಕುತೂಹಲದಿಂದ ಈ ಮಣ್ಣಿನ ಗಂಟೆಯಲ್ಲಿ ಕಂಚಿನ ನಾದ ಬರಲು ಏನು ಮಾಡಿದ್ದೀರಿ? ಎಂದು ಕೇಳಿದಾಗ ಜೈಮುನಿಯವರು ಆವಿ ಮಣ್ಣನ್ನು ಸುಡುವಾಗ ಅದರೊಳಗೆ ಉಕ್ಕನ್ನು ಸೇರಿಸುತ್ತೇವೆ. ಅದರಿಂದ ಈ ನಾದ ಬರುತ್ತದೆ ಎಂದರು. ಇವುಗಳನ್ನು ಎಲ್ಲಿ ತಯಾರಿಸಲಾಗುತ್ತದೆ? ಎಂದಾಗ ನಾವೇ ತಯಾರು ಮಾಡುತ್ತೇವೆ. ಬೆಂಗಳೂರಿನ ದಾಸರಹಳ್ಳಿಯಲ್ಲಿ ಒಂದು ಚಿಕ್ಕ ಬಾಡಿಗೆ ಜಾಗದಲ್ಲಿ ಎತ್ತಿನ ಗಾಣದಿಂದ ಮಣ್ಣನ್ನು ರುಬ್ಬಿ ಹದಮಾಡಿ ಈ ಎಲ್ಲಾ ವಸ್ತುಗಳನ್ನು ತಯಾರಿಸುತ್ತೇವೆ ಎಂದಾಗ ದಿವಾನರು ಶಭಾಸ್ ಎಂದು ಮೆಚ್ಚಿಗೆ ಸೂಚಿಸಿ, ಬೆಂಗಳೂರಿಗೆ ಬಂದು ನನ್ನನ್ನು ಭೇಟಿ ಮಾಡುವಂತೆ ತಿಳಿಸಿ ಮುಂದಕ್ಕೆ ಹೋದರು. ಇದು ಮೈಸೂರು ದಿವಾನ್ ಮಿರ್ಜಾಸಾಹೇಬರ ಮೊದಲ ಭೇಟಿ.
ಜೈಮುನಿಯವರು ವಸ್ತುಪ್ರದರ್ಶನದಿಂದ ಬೆಂಗಳೂರಿಗೆ ಬಂದ ಮೇಲೆ ದಿವಾನರು ಹೇಳಿದ್ದಂತೆ ಒಂದು ದಿನ ಮಗಳು ಮೀರಾ ಜೊತೆ ಮಿರ್ಜಾ ಸಾಹೇಬರನ್ನು ನೋಡಲು ಹೊರಟರು. ದೊಡ್ಡವರನ್ನು ನೋಡಲು ಹೋಗುವಾಗ ಬರಿಗೈಲಿ ಹೋಗಬಾರದೆಂಬುವ ಸಂಪ್ರದಾಯದಂತೆ ಬಣ್ಣದ ಹೂಜಿಗಳನ್ನು ಮತ್ತು ಕೆಲವು ಸುಂದರ ವಸ್ತುಗಳನ್ನು ತೆಗೆದುಕೊಂಡು ಮಿರ್ಜಾ ಅವರ ಮನೆಗೆ ಹೋದರು. ಮಿರ್ಜಾ ಅವರು ಜೈಮುನಿಯವರನ್ನು ಒಳಗೆ ಕರೆದು ಕೂಡಿಸಿ, ಕಾರ್ಖಾನೆಗೆ ಸಂಬಂಧಿಸಿದ ವಿವರಗಳನ್ನು ಪಡೆದು ಸೋಮವಾರ ತಾವು ಖುದ್ದಾಗಿ ಬಂದು ಪರಿಶೀಲಿಸಿ ಸರ್ಕಾರದಿಂದ ಸಾಲ ಮಂಜೂರು ಮಾಡುವುದಾಗಿ ಅಭಯವನ್ನಿತ್ತು ಉಪಚರಿಸಿ ಕಳಿಸಿದರು. ಮಿರ್ಜಾ ಅವರು ಮಾತು ಕೊಟ್ಟಿದ್ದಂತೆ ದಾಸರಹಳ್ಳಿಗೆ ಜೈಮುನಿರಾಯರನ್ನು ನೋಡಲು ಸೋಮವಾರ ಸರಿಯಾದ ಸಮಯಕ್ಕೆ ಬಂದ ಅವರನ್ನು ಉಪಚರಿಸಿ ಕಾರ್ಖಾನೆ ತೋರಿಸಲು ಕರೆದುಕೊಂಡು ಹೋದರು. ಹೋಗುವಾಗ ದಾರಿಯಲ್ಲಿದ್ದ ದೊಡ್ಡ ಬಂಡೆಯನ್ನು ನೋಡಿ ಮಿರ್ಜಾ ಅವರು ಇದನ್ನು ಒಡೆಸಿ ಆ ಕಲ್ಲಿನಿಂದ ಏನಾದರೂ ಉಪಯುಕ್ತ ಕೆಲಸ ಮಾಡಲು ಸಲಹೆ ಇತ್ತರು. ಹಾಗು ಜೈಮುನಿಯವರ ಕಾರ್ಖಾನೆ ಇದ್ದ ಜಾಗವನ್ನು ನೋಡಿ ಇದು ಜೋಡಿಗ್ರಾಮವೆಂದು ಹೇಳುತ್ತಿದ್ದೀರ, ಈಗ ಬರುತ್ತಿರುವ ಕಾನೂನಿನ ಪ್ರಕಾರ ಜೋಡಿಗ್ರಾಮಗಳನ್ನು ರದ್ದುಪಡಿಸಲಾಗುತ್ತದೆ. ನೀವು ಈ ಜಾಗವನ್ನು ಖರೀದಿಸಿ. ನಾವು ನಿಮಗೆ ರಿಜರ್ವ್ ಬ್ಯಾಂಕಿನಿಂದ ಸಾಲ ಕೊಡಿಸುತ್ತೇವೆ ಎಂದರು.
ಎಲ್ಲವನ್ನು ಪರಿಶೀಲಿಸಿ ಹೊರಟ ಮಿರ್ಜಾ ಅವರನ್ನು ಅಲ್ಲಿಯೇ ಊಟಕ್ಕೆ ನಿಲ್ಲಿಸಿಕೊಂಡರು. ಆ ಊರಿನ (ದಾಸರಹಳ್ಳಿ) ಪಟೇಲರು, ಶಾನುಭೋಗರು, ಗೌಡ ಹಾಗೂ ಅಲ್ಲಿನ ಪ್ರಮುಖ ಹಿರಿಯರು ಸೇರಿ ಊಟ ಮಾಡಿದರು. ಊಟ ಮಾಡುತ್ತಿರುವಾಗ ಮಿರ್ಜಾ ಅವರು ಶಾನುಭೋಗರಿಗೆ ಜೋಡಿದಾರರಿಂದ ಖಾಲಿ ಜಾಗವನ್ನು ಜೈಮುನಿ ಅವರ ಹೆಸರಿಗೆ ಮಾಡಿಸಿ ಕೊಡುವಂತೆ ಹೇಳಿದರು. ಮತ್ತು ಕಾನೂನಿನ ಬಗ್ಗೆಯೂ ತಿಳಿಸಿದರು. ಆ ಪ್ರದೇಶದಲ್ಲಿ ಒಂದು ಸ್ಕೂಲು ಕಟ್ಟಿಸಿ ಎಂದರು. ಆಗ ಪಟೇಲರು ಈಗಾಗಲೇ ಜೈಮುನಿಯವರು ಇಲ್ಲಿ ಕೂಲಿ ಮಠದಂತೆ ಸ್ಕೂಲು ಮಾಡಿ ಮನೆಮನೆಗೆ ಹೋಗಿ ಹುಡುಗರನ್ನು ಬರಮಾಡಿಕೊಂಡು ಶಾಲೆಯ ಮೇಷ್ಟ್ರಿಗೆ ತಮ್ಮ ಕೈಯಿಂದ ಸಂಬಳ ಕೊಡುತ್ತಿರುವುದಾಗಿ ತಿಳಿಸಿದರು. ಇದನ್ನು ಕೇಳಿ ಮತ್ತಷ್ಟು ಸಂತಸಗೊಂಡ ಮಿರ್ಜಾ ಅವರು ಜೈಮುನಿ ಅವರ ಮಕ್ಕಳು ಹಾಗೂ ಆ ಊರಿನ ಪ್ರಮುಖರಿಂದ ಬೀಳ್ಕೊಳ್ಳುವಾಗ ಜೈಮುನಿಯವರಿಗೆ ಒಂದು ಚೀಟಿಯನ್ನು ಕೊಟ್ಟು ಇದನ್ನು ರಿಜರ್ವ್ ಬ್ಯಾಂಕ್‌ನಲ್ಲಿ ಕೊಟ್ಟರೆ ಅವರು ೫೦,೦೦೦/ ರೂಪಾಯಿಗಳ ಸಾಲ ಕೊಡುವುದಾಗಿ ಹೇಳಿ ಹೋದರು.
ಮಿರ್ಜಾ ಅವರು ನೀಡಿದ್ದ ಚೀಟಿಯನ್ನು ಬ್ಯಾಂಕಿನವರಿಗೆ ಕೊಟ್ಟಾಗ ಬ್ಯಾಂಕಿನವರಿಗೆ ನಂಬಿಕೆ ಬಾರದೆ ಸಾಲ ಮಂಜೂರು ಮಾಡಲಿಲ್ಲ. ಆಗ ವಿಧಿ ಇಲ್ಲದೆ ತಂದೆ ಮಗ ಇಬ್ಬರೂ ಮಿರ್ಜಾ ಅವರ ಮನೆಗೆ ಹೋಗಿ ವಿಷಯ ತಿಳಿಸಿದರು. ಮಿರ್ಜಾ ಅವರು, ತಂದೆ ಮಗನನ್ನು ಸತ್ಕರಿಸಿ ನಾವೇ ಹೋಗೋಣ ಎಂದು ಹೇಳಿ ಅವರನ್ನು ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿ ನಿಂತು ರೂ. ೫೦,೦೦೦/- ಸಾಲ ಮಂಜೂರು ಮಾಡಿಸಿ ಬೆನ್ನುತಟ್ಟಿ ಹೋದರು. ಈ ಪ್ರಕರಣದಿಂದ ಅನೇಕರಿಗೆ ಜೈಮುನಿರಾಯರ ಬಗ್ಗೆ ಇದ್ದ ಗೌರವ ಅಭಿಮಾನಗಳು ಇನ್ನೂ ಹೆಚ್ಚಾದವು.
ಜನರಿಗೆಲ್ಲಾ ಪ್ರಯೋಜನವಾಗಲೆಂದು ಉಪಕಾರ ಬುದ್ಧಿಯಿಂದ ಬಹಳ ಅಗಲವಾದ ಬಾವಿಯನ್ನು ತೆಗೆಸಿದರು. ನೀರು ಬಂದ ತಕ್ಷಣ ಪೂಜೆ ಮಾಡಿ ಸಂತೋಷದಿಂದ ಎಲ್ಲರಗೂ ಸಿಹಿ ಹಂಚಿದರು. ದೊಡ್ಡಪ್ಪ ರಾಮಚಂದ್ರರಾಯರ ನೆರವಿನಿಂದ ಬಾವಿಗೆ ಕರೆಂಟ್ ಪಂಪ್ ಹಾಕಿಸಿದರು. ರಸ್ತೆಗಳಲ್ಲಿ ಸಿಮೆಂಟ್ ತೊಟ್ಟಿಗಳನ್ನು ಕಟ್ಟಿಸಿ ಅದರಲ್ಲಿ ನೀರು ಬಿಡುತ್ತಿದ್ದರು. ದನಕರುಗಳು ಬಂದು ನೀರು ಕುಡಿದು ಹೋಗುತ್ತಿದ್ದವು. ಊರಿನ ರೈತಾಪಿ ಜನರ ಅಗತ್ಯಗಳಿಗೆ ಬಾವಿ ನೀರನ್ನು ಬಳಸಿಕೊಳ್ಳಲು ಅವಕಾಶ ಮಾಡಿ ಕೊಟ್ಟು ಅವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದರು.
ಅಲ್ಲಿದ್ದ ದೊಡ್ಡ ಕಲ್ಲುಬಂಡೆಯನ್ನು ಒಡೆದು ಬಹಳ ದಿನಗಳಿಂದ ಕನವರಿಸುತ್ತಿದ್ದ ಆಂಜನೇಯಸ್ವಾಮಿ ದೇವಸ್ಥಾನವನ್ನು ಕಟ್ಟಿಸಿದರು. ಅಲ್ಲಿ ದೊಡ್ಡದೊಂದು ಸಭಾಂಗಣ ನಿರ್ಮಾಣ ಮಾಡಿಸಿ ಅಲ್ಲಿ ಶಾಲೆ ಪ್ರಾರಂಭಿಸಿದರು. ಶಾಲೆಗೆ ಬರುವ ಪ್ರತಿಯೊಂದು ಮಗುವಿಗೂ ಬಿಳಿ ಷರಟು, ನೀಲಿ ನಿಕ್ಕರ್, ಬಿಳಿಯ ಟೋಪಿ, ಪುಸ್ತಕ, ಪೆನ್ಸಿಲ್‌ಗಳನ್ನು ಕೊಟ್ಟು ಮಕ್ಕಳು ಸಾಲೆಗೆ ಬರುವಂತೆ ಮಾಡಿದರು. ಶಾಲೆಗೆ ಬರುತ್ತಿದ್ದ ಮಕ್ಕಳಿಗೆ ತಾವೇ ರಚಿಸಿದ ಪ್ರಾರ್ಥನೆ, ಗುರುರ್ ಬ್ರಹ್ಮ ಗುರುರ್ ವಿಷ್ಣು ಹೇಳಿಸಿ ಜನಗಣಮನ ಅಧಿನಾಯಕ ಜಯಹೇ ಹೇಳಿಕೊಟ್ಟು ಮನೆಗೆ ಬರುತ್ತಿದ್ದರು. (ಈ ಶಾಲೆಗೆ ಗ್ರಾಮದ ಪಟೇಲ ಮತ್ತು ಭದ್ರಯ್ಯ ಎಂಬುವರು ಅವರ ತಂದೆ ಮುನಿತಿಮ್ಮಯ್ಯನವರ ಜ್ಞಾಪಕಾರ್ಥವಾಗಿ ೧೨೫೦/-ರೂಗಳನ್ನು ಕೊಟ್ಟಿರುವುದನ್ನು ದಾಖಲಿಸಿದ್ದಾರೆ.) ಅಂದು ೨೫ ವಿದ್ಯಾರ್ಥಿಗಳಿಂದ ಪ್ರಾರಂಭವಾದ ಕೂಲಿಮಠವು ಈಗ ಪೌರಾಡಳಿತಕ್ಕೆ ಒಳಪಟ್ಟು ಭವ್ಯಕಟ್ಟಡ ಮತ್ತು ೮೦೦ಕ್ಕೂ ಮೇಲ್ಪಟ್ಟ ವಿದ್ಯಾರ್ಥಿಗಳಿಂದ ಬೃಹತ್ ಸಂಸ್ಥೆಯಾಗಿ ಬೆಳೆದಿದೆ. ಅದರೊಂದಿಗೆ ಹೆಂಚು ಮತ್ತು ಇಟ್ಟಿಗೆಗಳನ್ನು ಮಾಡುವ ಮಿಶನ್, ಮಣ್ಣು ಕಲಸುವ ಮಿಶನ್‌ಗಳನ್ನು ತರಿಸಿ ಕಾರ್ಖಾನೆಯ ಕೆಲಸವನ್ನು ಅಭಿವೃದ್ಧಿಪಡಿಸಿ ಆ ಊರಿನ ಬಡ ಜನರಿಗೆ ಕೆಲಸ ಕೊಟ್ಟು ಬದುಕಲು ಅವಕಾಶ ಕಲ್ಪಿಸಿದರು. ಊರಿನಲ್ಲಿ ರಾಗಿಹಿಟ್ಟು ಬೀಸುವ ಮಿಶನ್ ಇಲ್ಲದೆ ಊರಿನ ಜನರು ಬೇರೆ ಕಡೆಗೆ ಹೋಗಿ ಹಿಟ್ಟು ಮಾಡಿಸಿ ತರುತ್ತಿದ್ದರು. ಊರಿಗೆ ರಾಗಿ ಮಿಶನ್ ಬಂದರೆ ಜನರಿಗೂ ಸಹಾಯವಾಗುತ್ತದೆ ಅಲ್ಲದೆ ಸಂಪಾದನೆಗೂ ದಾರಿ ಎಂದು ರಾಗಿ ಮಿಶನ್ ಒಂದನ್ನು ತರಿಸಿ ಸ್ಥಾಪಿಸಿದರು.
ಆಂಜನೇಯಸ್ವಾಮಿ ಗುಡಿ ಪ್ರತಿಷ್ಠಾಪನೆಯಾದ ಮೇಲೆ ಸರ್ ಮಿರ್ಜಾ ಅವರಿಂದ ಕರೆ ಬಂದು ಭೇಟಿ ಮಾಡಲು ಹೋದಾಗ ಕುಶಲಪ್ರಶ್ನೆಗಳ ನಂತರ ನೀವು ತೆಗೆದುಕೊಂಡಿದ್ದ ಸಾಲ ತೀರಿತೆ? ಎಂದು ಕೇಳಿದರು. ಇಲ್ಲಾ ಇನ್ನು ಸ್ವಲ್ಪ ಬಾಕಿ ಇದೆ ಎಂಬುದನ್ನು ಕೇಳಿ ನೋಡಿ ಈಗ ನಿಮಗೆ ಇನ್ನೂ ಹೆಚ್ಚಿನ ಸಾಲ ಕೊಡಿಸುತ್ತೇನೆ ಆ ಹಣದಲ್ಲಿ ಉಳಿದ ಸಾಲವನ್ನು ತೀರಿಸಿ ನಿಮ್ಮೂರಿನ ಜೋಡಿಗ್ರಾಮವನ್ನು ಕೊಂಡು ಪತ್ರ ಸಹಿ ಮಾಡಿಸಿಟ್ಟುಕೊಳ್ಳಿ ಮೂಕರಾಗಿ ನಿಂತಿದ್ದ ಜೈಮುನಿಯವರಿಗೆ, ಹೆದರುವುದು ಬೇಡ ಜೋಡಿಗ್ರಾಮಗಳನ್ನು ತೆಗೆದುಹಾಕಲು ಸರ್ಕಾರದಿಂದ ರೂಲ್ಸ್ ಬಂದಿದೆ ಎಂದು ಧೈರ್ಯ ತುಂಬಿ ಕಳಿಸಿದರು.
ಜೋಡಿಗ್ರಾಮವನ್ನು ಕೊಳ್ಳುವುದಕ್ಕೆ ಹೋದಾಗ ಜೋಡಿದಾರರು ಅದು ನಮ್ಮ ಪಿತ್ರಾರ್ಜಿತ ಆಸ್ತಿ ನಾನು ಮಾರುವುದಿಲ್ಲವೆಂದು ಹಟ ಹಿಡಿದರು. ಆಗ ಸರ್ಕಾರದ ನಿಯಮವನ್ನು ತಿಳಿಸಿ, ಮಾರಿದರೆ ಹಣವಾದರೂ ಸಿಕ್ಕುತ್ತದೆ. ಇಲ್ಲವಾದರೆ ಹಣವೂ ಇಲ್ಲ, ಆಸ್ತಿಯೂ ನಮ್ಮ ಕೈ ಬಿಟ್ಟು ಸರ್ಕಾರಕ್ಕೆ ಸೇರಿ ಹೋಗುತ್ತದೆ ಎಂದು ಅವರ ಮಕ್ಕಳು ಮನವರಿಕೆ ಮಾಡಿದ ಮೇಲೆ ಜೋಡಿಗ್ರಾಮದ ೩೮೦ ಎಕರೆ ಜಮೀನನ್ನು ಸರ್ಕಾರದ ರೇಟಿನಂತೆ ಬೆಲೆ ಪಡೆದು ಜೈಮುನಿರಾಯರಿಗೆ ಮಾರುತ್ತಾರೆ.
ಚಿಕ್ಕ ಹುಡುಗ ಜೈಮುನಿ ಆಟವಾಡುತ್ತಿದ್ದಾಗ ಒಂದು ಕಪ್ಪಗಿರುವ ನಾಣ್ಯ ಸಿಕ್ಕಿದ್ದನ್ನು ತಾಯಿಯ ಕೈಗೆ ತಂದು ಕೊಟ್ಟಿದ್ದ. ಅದನ್ನು ತಾಯಿ ಅಕ್ಕಸಾಲಿಯ ಬಳಿ ತೋರಿಸಿದಾಗ ಅದನ್ನು ಉಜ್ಜಿ ತೊಳೆದಮೇಲೆ ಅದೊಂದು ಬೆಳ್ಳಿ ನಾಣ್ಯ. ಒಂದು ಕಡೆ ದಶರಥನ ಮೂವರು ಪತ್ನಿಯರಿರುವ ಚಿತ್ರ ಮತ್ತೊಂದು ಕಡೆ ರಾಮ, ಲಕ್ಷ್ಮಣ, ಸೀತಾ, ಮಾರುತಿಗಳಿಂದ ಕೂಡಿದ ಶ್ರೀರಾಮನ ಪಟ್ಟಾಭಿಷೇಕದ ಚಿತ್ರವಿರುವುದನ್ನು ನೋಡಿದ ಆಚಾರಿ ಇದು ರಾಮಟಂಕೀ  ನಾಣ್ಯ. ಇದು ಎಲ್ಲರಿಗೂ ಸಿಕ್ಕುವುದಿಲ್ಲ, ಯೋಗಬೇಕು, ಇದನ್ನು ನಿಮ್ಮ ದೇವರ ಮನೆಯಲ್ಲಿಟ್ಟು ಪೂಜೆ ಮಾಡಿ. ನಿಮ್ಮ ಮಗ ದೊಡ್ಡ ವ್ಯಕ್ತಿಯಾಗುತ್ತಾನೆ, ಅವನಿಗೆ ದೇವಸ್ಥ್ತಾನ ಕಟ್ಟುವ ಯೋಗವಿದೆ ಎಂದು ಹೇಳಿದ್ದ. ಅದರಂತೆ ನೀನು ದೇವಸ್ಥಾನವನ್ನು ಕಟ್ಟಿಸಿ ಪರೋಪಕಾರಿಯಾಗಿರುವುದನ್ನು ತಿಳಿಸಿದ ತಾಯಿಯನ್ನು, ಆ ನಾಣ್ಯವನ್ನು ತೋರಿಸುವಂತೆ ಜೈಮುನಿ ಕೇಳಿದಾಗ ಹಾಗೆ ನೋಡಬಾರದು. ನವರಾತ್ರಿಯಲ್ಲಿ ಆಯುಧಪೂಜೆ ಮಾಡಿ, ದೇವರ ಮೆರವಣಿಗೆ ಮಾಡಿಸಿ ದೇವಾಲಯದ ಅಶ್ವತ್ಥಕಟ್ಟೆಯಲ್ಲಿ ಎರಡು ಬನ್ನಿಮರಗಳನ್ನು ನೆಟ್ಟು ಪೂಜಿಸು ಎಂದು ಹೇಳಿದರು. ತಾಯಿ ಹೇಳಿದಂತೆ ಮಾಡಿ ಬನ್ನಿ ಮರ ನೆಟ್ಟು ಪೂಜಿಸಿದ ನಂತರ ಆ ನಾಣ್ಯವನ್ನು ರಾಯರು ಭಕ್ತಿಯಿಂದ ಪೂಜಿಸಿದರು.
ರಾಯರು ತಮ್ಮಲ್ಲಿದ್ದ ಒಂದು ದೂಡ್ಡ ನಿವೇಶನದಲ್ಲಿ ೫೦ ಸೈಟುಗಳನ್ನು ಮಾಡಿ ಮನೆಯಿಲ್ಲದ ಬಡ ಕುಟುಂಬದವರಿಗೆ ಸುಲಭ ಬೆಲೆಗೆ ಕೊಟ್ಟು ಅವರಿಗೆ ಮನೆ ಕಟ್ಟಿಕೊಳ್ಳಲು ನೆರವಾದರು.
ಸುಂದರ ಸರ್ಕಲ್ ನಿರ್ಮಾಣ
ಸರ್ ಮಿರ್ಜಾ ಅವರ ಅಪ್ಪಣೆಯಂತೆ ದಾಸರಹಳ್ಳಿ ಮುಖ್ಯ ರಸ್ತೆಯಲ್ಲಿ ಒಂದು ಸರ್ಕಲ್ ನಿರ್ಮಿಸಿ ಅದಕ್ಕೆ ಜೈಮುನಿರಾವ್ ಜಾದವ್ ಸರ್ಕಲ್ ಎಂದು ಕಲ್ಲಿನಲ್ಲಿ ಕೆತ್ತಿಸಿದರು. ರಾಜ್ಯದ ರಸ್ತೆಗೆ ಸೇರುವಂತೆ ಎರಡು ಹೊಸ ರಸ್ತೆಗಳನ್ನು ನಿರ್ಮಿಸಿ ಆ ಸರ್ಕಲ್ಲಿಗೆ ಸೇರುವಂತೆ ಮಾಡಿದರು. ಆ ರಸ್ತೆ ಇಕ್ಕೆಲಗಳಲ್ಲಿ ಸಾಲುಮರಗಳನ್ನು ನೆಟ್ಟರು. ಈಗ ಅವು ಹೆಮ್ಮರಗಳಾಗಿವೆ. ಸರ್ಕಲ್‌ನ ಸುತ್ತಲೂ ನಾಲ್ಕು ಕಲ್ಲು ಬೆಂಚುಗಳನ್ನು ಹಾಕಿಸಿದರು. ಆ ಸರ್ಕಲ್ಲಿನ ನಾಲ್ಕು ದಿಕ್ಕುಗಳಲ್ಲಿ ಕಂಬಗಳನ್ನು ನಿಲ್ಲಿಸಿ ಅವುಗಳ ಮೇಲೆ ದೇಶಭಕ್ತರ, ಮಹಾತ್ಮರ ಹೆಸರುಗಳನ್ನು ಕೆತ್ತಿಸಿದರು. ಪೂರ್ವದ್ವಾರಗಳಲ್ಲಿರುವ ಎರಡು ಕಂಬಗಳಲ್ಲಿ ಮಹಾತ್ಮ ಗಾಂಧಿ, ನೆಹರು, ಛತ್ರಪತಿ ಶಿವಾಜಿ, ಸಮರ್ಥ ರಾಮದಾಸರ ಹೆಸರುಗಳನ್ನೂ, ಪಶ್ಚಿಮ ದ್ವಾರದ ಎರಡು ಕಂಬಗಳಲ್ಲಿ ಮಾಗಡಿ ಕೆಂಪೇಗೌಡ, ರಂಗನಾಥಸ್ವಾಮಿ, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರ ಹೆಸರುಗಳನ್ನು ಉತ್ತರ ದ್ವಾರದ ಎರಡು ಕಂಬಗಳಲ್ಲಿ ತಂದೆ ರಾಣೋಜಿರಾವ್ ಜಾದವ್, ತಾಯಿ ತುಳಜಾಬಾಯಿ ಜಾದವ್, ಶ್ರೀಕೋದಂಡರಾಮ, ಭಕ್ತ ಆಂಜನೇಯಸ್ವಾಮಿ ಹಾಗೂ ದಕ್ಷಿಣ ದ್ವಾರದ ಎರಡು ಕಂಬಗಳಲ್ಲಿ ಶ್ರೀ ಕೃಷ್ಣರಾಜೇಂದ್ರ ಒಡೆಯರು, ಶ್ರೀ ಜಯಚಾಮರಾಜ ಒಡೆಯರು, ಶ್ರೀ ಶಂಕರಾಚಾರ್ಯರು ಮತ್ತು ಶ್ರೀ ಲವಂಗ ಭಾರತೀ ಸ್ವಾಮಿಗಳ ಹೆಸರುಗಳನ್ನು ಕೆತ್ತಿಸಿದರು.
ಈ ಎಲ್ಲಾ ಹೆಸರುಗಳನ್ನು ಕೆತ್ತುವ ಮೊದಲು ತಾವೇ ಸ್ವತಃ ಕಲ್ಲುಗಳನ್ನು ನಯವಾಗಿ ಉಜ್ಜಿ ತೊಳೆದು ಸೀಮೆಸುಣ್ಣದಿಂದ ಬರೆದು ಚಿಕ್ಕ ಉಳಿಯಿಂದ ಕೆತ್ತಿ ಆನಂತರ ದೊಡ್ಡ ಕಲ್ಲುಗಳಲ್ಲಿ ಸಿಮೆಂಟಿನಿಂದ ಕೂರಿಸುತ್ತಿದ್ದರು. ಆ ಕಲ್ಲುಕಂಬಗಳು ನೋಡಲು ಸುಂದರವಾಗಿ ಕಂಗೊಳಿಸುತ್ತಿದ್ದವು. ಕುಳಿತುಕೊಳ್ಳಲು ಹಾಕಿದ್ದ ಕಲ್ಲು ಬೆಂಚುಗಳ ಬಳಿ ನೆಟ್ಟು ಬೆಳಸಿದ ಗಿಡಗಳು, ಅವುಗಳ ಹಿಂದೆ ಕಲ್ಲಿನ ಕಟ್ಟಡ ಆ ಕಟ್ಟಡದ ಕಲ್ಲಿನಲ್ಲಿ ರಂದ್ರ ಮಾಡಿ ಅಂದಗೊಳಿಸಿದ್ದರು. ಊರಿನ ಜನ, ಪಟೇಲ ಮತ್ತಿತರರು ಅವರ ಕಾರ್ಯವನ್ನು ಮೆಚ್ಚಿ ಹೊಗಳುತ್ತಿದ್ದರು.
ಜೈಮುನಿರಾಯರು ಅಲ್ಲಿ ಒಂದು ತೋಟವನ್ನು ಮಾಡಿ ಓಡಿಯಾಡಲು ರಸ್ತೆಗಳನ್ನು ನಿರ್ಮಿಸಿದರು. ಕೆಂಪು ಇಟ್ಟಿಗೆಗಳಿಂದ ದೊಡ್ಡ ಮತ್ತು ಎತ್ತರವಾದ ಕಾಂಪೌಂಡ್ ಕಟ್ಟಿಸಿ ಅವರ ಹೆಸರನ್ನು ಹಾಕಿಸಿ ಕೆಳಭಾಗದಲ್ಲಿ ಮಣ್ಣಿನಲ್ಲಿ ಆನೆಗಳನ್ನು ಮಾಡಿ ಅಲಂಕರಿಸಿದರು. ಹೆಸರಿನ ಮೇಲೆ ಎರಡು ವಿದ್ಯುತ್ ದೀಪಗಳನ್ನು ಹಾಕಿಸಿದರು. ತೋಟದಲ್ಲಿ ಸುಂದರವಾದ ಈಜುಕೊಳವನ್ನು ಮಾಡಿಸಿದರು. ಸಿಟಿಯಿಂದ ಟೋಲ್ಗೇಟಿಗೆ ಬರುತ್ತಿದ್ದಂತೆ ಎರಡು ಫರ್ಲಾಂಗ್ ದೂರಕ್ಕೆ ಈ ತೋಟ ಕಾಣುತ್ತಿತ್ತು. ರಸ್ತೆ ಪಕ್ಕದಲ್ಲಿ ಸಾಲು ಗಿಡಗಳನ್ನು ನೆಡಿಸಿ ಅಚ್ಚುಕಟ್ಟಾದ ಅತಿಥಿಗೃಹವನ್ನು ಕಟ್ಟಿಸಿದರು. ತೋಟದಲ್ಲಿ ಬೆಳೆದ ಹಣ್ಣು ಹಂಪಲುಗಳಿಂದ ಅತಿಥಿ ಅಭ್ಯಾಗತರನ್ನು ಸತ್ಕರಿಸುತ್ತಿದ್ದರು. ಹಾಗೆ ಅಲ್ಲಿ ಬೆಳೆದ ಹಣ್ಣು ಹೂವುಗಳನ್ನು ತಪ್ಪದೇ ದೇವಸ್ಥಾನಕ್ಕೆ ಕಳಿಸುತ್ತಿದ್ದರು ಮತ್ತು ಹೂವಿನೊಂದಿಗೆ ಎಣ್ಣೆ ಮತ್ತು ದಿನಸಿಗಳನ್ನು ಪೂಜಾರಿಯ ಮನೆಗೂ ಕಳಿಸುತ್ತಿದ್ದರು. ರಾಯರ ಮನೆಯಲ್ಲಿ ಲಕ್ಷ್ಮಿ ನಲಿದಾಡುತ್ತಿದ್ದಳು.
ಜೈಮುನಿರಾವ್ ಸರ್ಕಲ್ಲಿನ ನಿರ್ಮಾಣಕ್ಕೆ ಕಾರಣರಾದ ಸರ್ ಮಿರ್ಜಾ ಅವರಿಂದ ಅನಾವರಣ ಮಾಡಿಸಲು ಮೈಸೂರಿಗೆ ಹೋಗಿ ಅವರನ್ನು ಕರೆದು ಬಂದರು. ಮಿರ್ಜಾ ಅವರು ಆಹ್ವಾನವನ್ನು ಸ್ವೀಕರಿಸಿ ತಾವು ಬರುವ ದಿನಾಂಕವನ್ನು ಬರೆದು ತಿಳಿಸಿದರು. ಊರಿನ ಪ್ರಮುಖರು, ಹಿರಿಯರು, ಪಟೇಲರು, ಜೋಡಿದಾರರು ಸೇರಿ ಸಂತಸ ಮತ್ತು ಸಂಭ್ರಮಗಳಿಂದ ಹಾರ ಹಾಕಿ, ಬೊಂಬಾಯಿಯಿಂದ ತಂದಿದ್ದ ಶಾಲನ್ನು ಹೊದಿಸಿ ಮಿರ್ಜಾ ಅವರನ್ನು ಸ್ವಾಗತಿಸಿ, ಸತ್ಕರಿಸಿ ಗೌರವಿಸಿದರು. ರಾಯರು ಊರಿನ ಪ್ರಮುಖರೆಲ್ಲರ ಪರಿಚಯ ಮಾಡಿಸಿದರು. ಜೋಡಿದಾರರ ಮಗ ನಾಗರಾಜ, ಪಟೇಲರು, ಗೌಡ, ಶಾನುಭೋಗ ಇವರೆಲ್ಲ ಹೂವು ಹಣ್ಣುಗಳನ್ನಿತ್ತು ಕೃತಜ್ಞತೆ ಸಲ್ಲಿಸಿದರು. ರಾಯರ ತಾಯಿ ತಮಗೆ ಕಣ್ಣು ಕಾಣಿಸದು ಎಂದು ಮಿರ್ಜಾರಿಗೆ ಕೈಮುಗಿದರು. ಎಲ್ಲರೂ ನಿಂಬೆಹಣ್ಣಿನ ಪಾನಕ ಸೇವಿಸಿದ ನಂತರ ಸರ್ಕಲ್ ವೀಕ್ಷಣೆಗೆ ಹೊರಟರು.
ಸರ್ಕಲ್‌ನಲ್ಲಿ ನೆಡಿಸಿರುವ ಕಂಬಗಳು ಅವುಗಳ ಮೇಲೆ ಬರೆಸಿರುವ ಮಹನೀಯರ ಹೆಸರುಗಳು, ರಸ್ತೆ ಬದಿಯಲ್ಲಿನ ಸಾಲು ಮರಗಳು, ಕುಳಿತುಕೊಳ್ಳಲು ಮಾಡಿರುವ ಕಲ್ಲು ಬೆಂಚುಗಳ ಸೊಗಸು ನೋಡಿ ಸಂತಸಪಟ್ಟು ಬೆಂಚಿನ ಮೇಲೆ ಕುಳಿತರು. ತಕ್ಷಣ ಅಲ್ಲೇ ನಿಂತಿದ್ದ ತೋಟಿ ತಮಟೆ ಬಾರಿಸಿದ. ಈ ಶಬ್ದ ಕೇಳುತ್ತಿದ್ದಂತೆ ದೂರದಲ್ಲಿ ಆಟವಾಡುತ್ತಿದ್ದ ಮಕ್ಕಳು ಓಡಿ ಬಂದು ತಮಟೆಯ ತಾಳಕ್ಕೆ ಕುಣಿಯಲಾರಂಬಿಸಿದರು. ಮಕ್ಕಳೆಲ್ಲಾ ಪಟಾಕಿಯನ್ನು ಹಚ್ಚಿ ಸಂಭ್ರಮಿಸಿದರು. ಜೈಮುನಿಯವರು ಮಕ್ಕಳಿಗೆಲ್ಲಾ ಸಿಹಿ ಬೂಂದಿಯನ್ನು ತರಿಸಿ ಮಿರ್ಜಾ ಅವರ ಕೈಯಿಂದ ಹಂಚಿಸಿ ಆನಂದಿಸಿದರು.
ಸರ್ಕಲ್ ಉದ್ಘಾಟನೆ
ಅಲ್ಲಿಂದ ಮಿರ್ಜಾ ಅವರನ್ನು ಶಾಲೆ ಮತ್ತು ಆಂಜನೇಯಸ್ವಾಮಿ ದೇವಸ್ಥಾನಗಳನ್ನು ತೋರಿಸಲು ಕರೆದುಕೊಂಡು ಹೋದರು. ಪೂಜಾರಿ ಮಿರ್ಜಾ ಅವರಿಗೆ ಹಾರ ಹಾಕಿ ದೇವರಿಗೆ ಮಂಗಳಾರತಿ ಮಾಡಿ ತೀರ್ಥಪ್ರಸಾದಗಳನ್ನು ನೀಡಿದನು. ಮನೆಗೆ ಹಿಂದಿರುಗಿ ಬಂದ ಎಲ್ಲರಿಗೂ ಪುಷ್ಕಳ ಭೋಜನದ ಆತಿಥ್ಯ ನೀಡಿದರು. ಊಟವಾದ ನಂತರ ಫಲ ತಾಂಬೂಲವನ್ನು ಮೆಲ್ಲುತ್ತಾ ಮಿರ್ಜಾ ಅವರು ಹಲವಾರು ವಿಷಯಗಳ ಬಗ್ಗೆ ತಿಳಿದು ಮೆಚ್ಚುಗೆಯಿಂದ ನಿಮ್ಮ ಈ ಎಲ್ಲ ನಿಸ್ವಾರ್ಥ ಕೆಲಸಗಳನ್ನು ನಾನೇ ಹೋಗಿ ಮಹಾರಾಜರಿಗೆ ತಿಳಿಸುತ್ತೇನೆ.  ಈಗ ಹೇಗೂ ಮಾಗಡಿ ರಂಗನಾಥಸ್ವಾಮಿಯ ಪೂಜೆ, ಉತ್ಸವ, ಜಾತ್ರೆ ಇದೆಯಲ್ಲ ಆಗ ಮಹಾರಾಜರು ಇದೇ ದಾರಿಯಲ್ಲಿ ಬರುತ್ತಾರೆ. ಆಗ ಅವರನ್ನು ಸರ್ಕಲ್ಲಿನಲ್ಲಿ ನಿಲ್ಲಿಸಿ ರಾಜಮರ್ಯಾದೆಗಳನ್ನು ಮಾಡಿ ನಿಮ್ಮ ಹೆಸರು ರಿಜಿಸ್ಟರಿನಲ್ಲಿ ದಾಖಲೆಯಾಗಿ ಸ್ಟಾಂಪ್ ಹಾಕುತ್ತಾರೆ. ನಿಮ್ಮ ಹೆಸರು ಶಾಶ್ವತವಾಗಿ ಉಳಿಯುತ್ತದೆ. ನಾನು ಡೆಲ್ಲಿಗೆ ಕಾಗದ ಬರೆಯುತ್ತೇನೆ. ಅಲ್ಲಿಯೂ ನಿಮ್ಮ ಹೆಸರು ನೋಂದಾಯಿಸಿಕೊಂಡು ಮುದ್ರೆ ಹಾಕುತ್ತಾರೆ, ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಹೊರಟರು.
ಮಹಾರಾಜರು ಜೈಮುನಿರಾವ್ ಸರ್ಕಲ್ ಮೂಲಕ ಹಾದು ಹೋಗುವ ಬಗ್ಗೆ ಅವರನ್ನು ಸ್ವಾಗತಿಸುವ ಮತ್ತು ಸತ್ಕರಿಸುವ ಬಗ್ಗೆ ಊರಿನವರೆಲ್ಲಾ ಸೇರಿ ಮಹಾರಾಜರು ಹಾದು ಹೋಗುವ ಪೂರ್ವ-ಪಶ್ಚಿಮ ಭಾಗಗಲ್ಲಿದ್ದ ಮೂರು ಫರ್ಲಾಂಗ್ ಉದ್ದಕ್ಕೂ ಇರುವ ಮರಗಳಿಗೆ ಮಧ್ಯದಲ್ಲಿ ಎರಡು ಸುಣ್ಣದ ಬಿಳಿ ಪಟ್ಟೆಗಳ ನಡುವೆ ಕೆಮ್ಮಣ್ಣಿನ ಪಟ್ಟೆ ಬಳಿಸಿದರು. ಊರನ್ನು ಅಲಂಕರಿಸುವ ಕೆಲಸದಲ್ಲಿ ಊರಿನವರು, ಶಾಲಾಮಕ್ಕಳು, ನೆಂಟರಿಷ್ಟರು, ಬಂಧು-ಬಾಂಧವರು ಕೈ ಜೋಡಿಸುವುದರ ಜೊತೆ ಮಹಾರಾಜರನ್ನು ಹತ್ತಿರದಿಂದ ಕಾಣುವ ಅವಕಾಶದ ಸಂಭ್ರಮದಲ್ಲಿದ್ದರು. ಮಿರ್ಜಾರವರು ಪತ್ರ ಬರೆದು ಮಹಾರಾಜರು ಬರುವ ದಿನ ಮತ್ತು ವೇಳೆಗಳನ್ನು ತಿಳಿಸಿದರು. ಊರನ್ನು ಮತ್ತು ಊರ ಹೆಬ್ಬಾಗಿಲನ್ನು ತಳಿರು ತೋರಣಗಳಿಂದ ಬಣ್ಣ ಬಣ್ಣ ಬಾವುಟಗಳಿಂದ ಅಲಂಕರಿಸಿದರು.
 ಮಹಾರಾಜರನ್ನು ಹತ್ತಿರದಿಂದ ನೋಡಬಹುದೆಂಬ ಆಸೆಯಿಂದ ನೂರಾರು ಜನರು ಅಲ್ಲಿ ನೆರೆದಿದ್ದರು. ಅಲ್ಲಿ ಮಹಾರಾಜರ ಫೋಟೋ, ಗಾಂಧೀಜಿ, ನೆಹರು ಫೋಟೋಗಳನ್ನಿಟ್ಟು ಹೂವಿನಿಂದ ಅಲಂಕರಿಸಿ ದೀಪ ದೂಪ, ಕರ್ಪೂರವನ್ನು ಹಚ್ಚಿಟ್ಟು, ವಾತಾವರಣವನ್ನು ಆಹ್ಲಾದಕರವನ್ನಾಗಿಸಿದ್ದರು. ಸರಿಯಾದ ಸಮಯಕ್ಕೆ ಮಹಾರಾಜರು ಬಂದು ಕಾರಿನಿಂದ ಇಳಿಯುತ್ತಿದ್ದಂತೆ ಮಂಗಳವಾದ್ಯಗಳು ಮೊಳಗಿದವು. ಚಪ್ಪಾಳೆಯೊಂದಿಗೆ ಹೂವಿನ ಹಾರ ಹಾಕಿ ಸ್ವಾಗತಿಸಿದರು. ರಾಜರು ಮುಂದೆ ಮುಂದೆ ಸಾಗುತ್ತಾ ಅದೇನಾ ದೇವಸ್ಥಾನ? ಅದೇನಾ ಹೊಸ ರಸ್ತೆ? ಅದೇನಾ ಶಾಲೆ?ಎಂದು ಹಲವಾರು ಪ್ರಶ್ನೆಗಳನ್ನು ಕೇಳುತ್ತಾ ನೋಡಿ ನಗುತ್ತಾ ಎಲ್ಲರಿಗೂ ಕೈ ಮುಗಿದರು. ವಾದ್ಯಘೋಷಗಳು ಮುಗಿಲು ಮುಟ್ಟುತ್ತಿರುವ ಹರ್ಷೋದ್ಗಾರಗಳೊಂದಿಗೆ ರಾಜರು ತಮ್ಮ ಕಾರಲ್ಲಿ ಕುಳಿತರು. ಹಣ್ಣು, ಹೂವಿನ ಬುಟ್ಟಿಯನ್ನು ಮಹಾರಾಜರ ಕಾರಿನಲ್ಲಿ ಚಾಲಕನ ಹತ್ತಿರ ಇಟ್ಟರು. ಮಕ್ಕಳು ಮರಿಗಳಾದಿಯಾಗಿ ಬಹು ಪರಾಕ್ ಬಹು ಪರಾಕ್ ಎಂದು ಹೇಳುತ್ತಿದ್ದಂತೆ ಕಾರು ಮುಂದೆ ಹೊರಟಿತು.
ಜೈಮುನಿರಾಯರ ಕಾರ್ಯ ಸಾಧನೆಗಳಿಂದ ತಾವೆಲ್ಲರೂ ಇಷ್ಟು ಹತ್ತಿರದಿಂದ ರಾಜರ ದರ್ಶನ ಪಡೆಯಲು ಸಾಧ್ಯವಾಯಿತೆಂದು ಅಲ್ಲಿ ನೆರೆದಿದ್ದ ಜನರೆಲ್ಲರೂ ರಾಯರನ್ನು ಅಭಿನಂದಿಸಿದರು. ಅಂದು ಊರಿನವರೆಲ್ಲಾ ತಮ್ಮ ತಮ್ಮ ಮನೆಗಳಲ್ಲಿ ಹೋಳಿಗೆಯ ಹಬ್ಬದೂಟ ಮಾಡಿ ನೆಂಟರಿಷ್ಟರೊಂದಿಗೆ ಸಂತೋಷಪಟ್ಟರು.
ಕಳ್ಳರ ಬಗ್ಗೆ ಉದಾರಭಾವ
ರಾಯರ ಕೌಟುಂಬಿಕ ಜೀವನದ ಬಗ್ಗೆ ಹೇಳುವ ಕೆಲವು ಮುಖ್ಯ ವಿಷಯಗಳಿವೆ. ರಾಯರು ನಾಲ್ಕು ಗಂಡು ಮತ್ತು ಐದು ಹೆಣ್ಣು ಮಕ್ಕಳ ತಂದೆಯಾಗಿದ್ದರು. ಎಂದೂ ತಮ್ಮ ಕುಟುಂಬದ ಬಗ್ಗೆ ಚಿಂತಿಸಲಿಲ್ಲ. ತಮ್ಮ ಸುತ್ತಮುತ್ತಲಿದ್ದ ಜನರ ನೆಮ್ಮದಿ ಸುಖ ಸಂತೋಷಗಳು ಅವರಿಗೆ ಮುಖ್ಯವಾಗಿತ್ತು. ಹೆಂಡತಿ ಮಕ್ಕಳ ಗೊಣಗಾಟದ ಬಗ್ಗೆ ಎಂದೂ ಯೋಚಿಸಲಿಲ್ಲ. ಹೀಗಾಗಿ ಮಕ್ಕಳು ಸ್ವತಂತ್ರವಾಗಿ ಬಿಸಿನೆಸ್ ಮಾಡಲು ಹೋಗಿ ಸಾಕಷ್ಟು ಹಣ ಕಳೆದುಕೊಂಡರು. ಸಾಲದೆ ಇರುವುದಕ್ಕೆ ಮಧ್ಯರಾತ್ರಿ ಅವರ ಮನೆಗೆ ಕಳ್ಳರು ನುಗ್ಗಿ ಧಾಳಿ ಮಾಡಿದಾಗ ರಾಯರು ಧೈರ್ಯವಾಗಿ ಹೋರಾಡಿದರೂ ಅದು ವ್ಯರ್ಥವಾಗಿ ತಲೆಗೆ ಮತ್ತು ಎಡಗಾಲಿಗೆ ಪೆಟ್ಟುಬಿದ್ದು ಪ್ರಜ್ಞೆತಪ್ಪಿ ಬಿದ್ದರು.  ಸಹಾಯಕ್ಕೆ ಬಂದ ಹೆಂಡತಿಗೆ ಹೊರಗಿನಿಂದ ಸಹಾಯಕ್ಕೆ ಬಂದ ಮೇಷ್ಟ್ರರಿಗೂ ಪೆಟ್ಟು ಬಿದ್ದು ಅವರುಗಳೂ ಸ್ಮರಣೆ ತಪ್ಪಿದರು. ಗಲಾಟೆಯಿಂದ ಎಚ್ಚರಗೊಂಡ ಅಕ್ಕಪಕ್ಕದವರು ನೆರವಿಗೆ ಬಂದಾಗ ಕಳ್ಳರು ಪರಾರಿಯಾದರು. ರಾಯರ ಕಾಲಿನ ಮೂಳೆ ಮುರಿದು ೨-೩ ತಿಂಗಳು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ಹೀಗೆ ರಾಯರ ಮೇಲೆ ಬಿದ್ದ ಕಷ್ಟಗಳ ಪರಂಪರೆಯಿಂದ ಮೇಲೆದ್ದು ಬರಲು ಹಲವು ಕಾಲವೇ ಬೇಕಾಯಿತು. ಸಾಲ ಕೊಟ್ಟವರ ಹಿಂಸೆಯಿಂದ ನೊಂದು ಕಾರ್ಖಾನೆಯನ್ನು ಪುನರಾರಂಭ ಮಾಡಲು ಪ್ರಯತ್ನ ಮಾಡಿದರು. ಉದ್ಯಮವಿಲ್ಲದೆ ಬದುಕಲೇಬೇಕಾದ ಅನಿವಾರ್ಯ ಕಷ್ಟದ ಸಂದರ್ಭದಲ್ಲಿ ಸೌದೆ ಮಾರಾಟ ಮಾಡುವ ಕೆಲಸವನ್ನು ಕಿರಿಯ ಮಗಳು ಮೀರಾ ಹೊತ್ತು ಕೊಂಡಳು.
ಹೀಗೆ ರಾಯರ ಹಳಿ ತಪ್ಪಿದ ಬದುಕು ಒಂದು ಹಂತ ತಲುಪುತ್ತಿರುವಂತೆ, ಒಂದು ದಿನ ಇದ್ದಕ್ಕಿದ್ದಂತೆಯೇ ಹೇಗೆ ನಡೆಯುತ್ತಿದೆ ನಿಮ್ಮ ಕಾರ್ಖಾನೆ ಎನ್ನುತ್ತಾ ಕೆಂಗಲ್ ಹನುಮಂತಯ್ಯನವರು ಕಾರ್ಖಾನೆಗೆ ಬಂದರು. ಅನಿರೀಕ್ಷಿತವಾಗಿ ಬಂದ ಅವರನ್ನು ಮಜ್ಜಿಗೆ ಕೊಟ್ಟು ಸತ್ಕರಿಸಿದರು. ಹುನುಮಂತಯ್ಯನವರು ತಾವು ಬಂದ ಕಾರಣವನ್ನು ಹೇಳಿ ಈಗ ವಿಧಾನಸೌಧ ಕಟ್ಟಿಸಬೇಕೆಂದಿದ್ದೇನೆ. ನೀವು ಚದರಬಿಲ್ಲೆ ಲೆಕ್ಕದಲ್ಲಿ ಇಟ್ಟಿಗೆಯನ್ನು ಮಾಡಿಕೊಡುವಂತೆ ಆರ್ಡರ್ ಕೊಡಿಸಬೇಕೆಂದಿದ್ದೇನೆ ಎಂದರು. ಆದರೆ ತಮ್ಮಲ್ಲಿ ಚದರಬಿಲ್ಲೆ ಅಚ್ಚು ಇಲ್ಲವೆಂದಾಗ, ಅದನ್ನು ಮಾಡಿಸಿ ಅದರ ಖರ್ಚು ಕೊಡುತ್ತೇವೆಂದು ಹೇಳಿ ಹನುಮಂತಯ್ಯನವರು ಹೋದರು. ಅದರಂತೆ ಇಟ್ಟಿಗೆ ಸರಬರಾಜು ಮಾಡಿ ಬಂದ ಹಣವನ್ನು ಕೂಡಿಸಿಟ್ಟು ಮಾಡಿದ್ದ ಸಾಲವನ್ನು ತೀರಿಸುತ್ತಾ ಬಂದರು. ಅಲ್ಲದೆ ಅನಾಥ ಬಾಲಕಿಯ ವಿವಾಹ ಮಾಡಿದರು. ಕಳ್ಳತನ ಮಾಡಿದ ಕಳ್ಳರನ್ನು ಪೊಲೀಸರು ರಾಯರ ಎದುರು ಕರೆತಂದು ಗುರುತಿಸಲು ಕೇಳಿದರೆ, ಕತ್ತಲಾಗಿತ್ತು, ಅದರಿಂದ ಕಳ್ಳರನ್ನು ಗುರುತಿಸಲು ಸಾಧ್ಯವಾಗದು ಎಂದು ಕೋರ್ಟಿನಲ್ಲಿ ಸಾಕ್ಷಿ ಹೇಳದೆ ಮಾನವೀಯತೆಯನ್ನು ಮೆರೆದು ಮನೆಗೆ ಬಂದ ರಾಯರನ್ನು ಕಳ್ಳರ ಬಗ್ಗೆ ಸಾಕ್ಷಿ ಹೇಳಬೇಕಾಗಿತ್ತು ಎಂದು ಕೋಪದಿಂದ ನುಡಿದ ಹೆಂಡತಿಯನ್ನು ಸಮಾಧಾನಿಸಿದರು.
ಕಡೆಯದಾಗಿ ಕೆಂಚೇನಹಳ್ಳಿಯಲ್ಲಿರುವ ರಾಜರಾಜೆಶ್ವರಿ ದೇವಸ್ಥಾನಕ್ಕೆ ಜಾಗವನ್ನು ಕೊಟ್ಟವರು ರಾಯರ ಹೆಂಡತಿ ಉಮಾಬಾಯಿವರು. ಅವರ ತಂದೆ ತಮ್ಮ ಐದು ಜನ ಹೆಣ್ಣು ಮಕ್ಕಳಿಗೆ ಎರಡೆರಡು ಎಕರೆ ಜಮೀನು ಕೊಟ್ಟಿದ್ದರು. ಉಮಾಬಾಯಿಯವರು ತಮಗೆ ಕೊಟ್ಟಿದ್ದ ಎರಡು ಎಕರೆ ಜಮೀನನ್ನು ತಿರುಚ್ಚಿ ಸ್ವಾಮಿಯವರು ದೇವಸ್ಥಾನವನ್ನು ಕಟ್ಟುವುದಕ್ಕೆ ಆ ಜಾಗ ಬೇಕೆಂದು ಕೇಳಿದಾಗ ಪತ್ರಕ್ಕೆ ಸಹಿ ಹಾಕಿ ಕೊಟ್ಟು ಬಂದರು. ತಿರುಚ್ಚಿಸ್ವಾಮಿಗಳು ಒಂದು ಎಕರೆಗೆ ೧೩,೦೦೦ ಸಾವಿರದಂತೆ ಎರಡು ಎಕರೆಗೆ ೨೬,೦೦೦ ರೂಗಳನ್ನು ಉಮಾಬಾಯಿಯ ತಂಗಿ ಧರ್ಮಾಬಾಯಿ ಕೈಲಿ ಕೊಟ್ಟರು. ಆದರೆ ಆ ಹಣ ಉಮಾಬಾಯಿಗೆ ಸೇರಲಿಲ್ಲ. ೧೯೭೦ರಲ್ಲಿ ಪ್ರಾರಂಭವಾದ ಈ ದೇವಸ್ಥಾನ ಇಂದು ಬೃಹತ್ತಾಗಿ ಬೆಳೆದು ಭಕ್ತರಿಂದ ಪೂಜೆಗೊಳ್ಳುತ್ತಿದೆ. ಅಂದಿನ ಕೆಂಚೇನಹಳ್ಳಿ ಇಂದು ರಾಜರಾಜೇಶ್ವರಿ ನಗರವಾಗಿ ರೂಪುಗೊಂಡಿದೆ. ಉಮಾಬಾಯಿ ಇದನ್ನು ನೋಡಿ ಸಂತೋಷಪಡುತ್ತಿದ್ದರು. ದೇವಸ್ಥಾನಕ್ಕೆ ಪ್ರತಿ ತಿಂಗಳು ಜೈಮುನಿರಾಯರು ತಪ್ಪದೆ ಒಂದು ಪಲ್ಲ ಅಕ್ಕಿಯನ್ನು ಕಳಿಸುತ್ತಿದ್ದರು. ಆಂಜನೇಯಸ್ವಾಮಿ ಪೂಜಾ ಕಾರ್ಯಗಳಿಗೆ ತಿಂಗಳೊಂದಕ್ಕೆ ಸುಮಾರು ೭೮ ರೂಪಾಯಿಗಳ ವರಮಾನ ಬರುವಂತೆ ಮಾಡಿರುವರು. ಲವಂಗಭಾರತಿಸ್ವಾಮಿ ಮಠಕ್ಕೆ ಆರಾಧನೆಗೆ ತರಕಾರಿ ಹಣ್ಣುಗಳನ್ನು, ರಾಮಕೃಷ್ಣಾಶ್ರಮಕ್ಕೆ ತಿಂಗಳಿಗೆ ಒಂದು ಪಲ್ಲ ಅಕ್ಕಿಯನ್ನು, ಹೀಗೆ ಹತ್ತು ಹಲವಾರು ಸೇವಾಕಾರ್ಯಗಳನ್ನು ಮಾಡುತ್ತಾ ಕೆರೆಯ ನೀರನು ಕೆರೆಗೆ ಚೆಲ್ಲುವಂತೆ ತಾವು ಶ್ರಮಪಟ್ಟು ಸಂಪಾದಿಸಿದ್ದನ್ನು ದಾನ ಮತ್ತು ಧರ್ಮ ಕಾರ್ಯಗಳಿಗೆ ಬಳಸಿ ಸಾರ್ಥಕ ಜೀವನ ನಡೆಸಿದರು. ಮನಾಜೆ ಶ್ಲೋಕಗಳನ್ನು ರಚಿಸಿ ಸಾಹಿತ್ಯ ಸೇವೆ ಮಾಡಿದ ರಾಯರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಂದಿನ ಅಧ್ಯಕ್ಷರಾದ ಶ್ರೀ ಬಿ. ಶಿವಮೂರ್ತಿಶಾಸ್ತ್ರಿಗಳು ಕೊಂಡಾಡಿದ್ದಾರೆ. ರಾಯರಿಗೆ ೭೦ ವರ್ಷ ತುಂಬಿದ ಸಂದರ್ಭದಲ್ಲಿ, ೧೯೬೯ರಲ್ಲಿ ದಾಸರಹಳ್ಳಿಯ ಗ್ರಾಮಸ್ಥರು, ಹಳ್ಳಿಯ ಪ್ರಮುಖರು, ಸ್ನೇಹಿತರು, ಮಠಾಧೀಶರು, ಹಿರಿಯರು, ಕಿರಿಯರು ಸೇರಿ ಸತ್ಕಾರ ಸಮಾರಂಭವನ್ನು ಏರ್ಪಡಿಸಿ ಈ ಸಮಾರಂಭಕ್ಕೆ ಶ್ರೀ ಕೆಂಗಲ್ ಹನುಮಂತಯ್ಯನವರನ್ನು ಕರೆಸಿ ಅವರಿಂದ ಪರೋಪಕಾರಿ ಆರ್. ಜೈಮುನಿರಾವ್ ಜಾದವ್ ಎಂದು ಹೆಸರಿಸಿದ ಬಿನ್ನವತ್ತಳೆಯನ್ನು ಅರ್ಪಿಸಿ ಗೌರವಿಸಿದರು. ಉತ್ತರ ಭಾರತ ಯಾತ್ರೆ ಮುಗಿಸಿ ಬಂದ ರಾಯರು ತಮ್ಮ ಅನುಭವಗಳನ್ನು ಕಥಾರೂಪದಲ್ಲಿ ತಮ್ಮ ಅಭಿಮಾನಿಗಳಿಗೆ ಉಣಬಡಿಸಿದ್ದಾರೆ. ಜೀವನದಲ್ಲಿ ಇನ್ನೂ ಹಲವಾರು ಸೇವಾ ಕಾರ್ಯಗಳ ಕನಸುಗಳು ಸಾಧ್ಯವಾಗಲಿಲ್ಲವೆಂದು ಹೇಳಿಕೊಂಡಿದ್ದಾರೆ. ತಮ್ಮ ತಾಯಿ ಹೇಳಿದ್ದಂತೆ ಆಸ್ತಿಯೆಲ್ಲವನ್ನು ಮಕ್ಕಳಿಗೆ ಹಂಚಿಕೊಟ್ಟು ಮನೆಯಿಂದ ಹೊರನಡೆದಿದ್ದ ಗಂಡುಮಕ್ಕಳನ್ನು ಮನೆಗೆ ಕರೆತಂದು ನೆಮ್ಮದಿಯಿಂದ ಬದುಕುತ್ತಿದ್ದ ರಾಯರು ಅವರ ೮೨ನೆಯ ವಯಸ್ಸಿನಲ್ಲಿ ೧೯೮೧ ಮೇ ೩೦ರ ಶನಿವಾರ ಬೆಳಗ್ಗೆ ೧೧.೩೦ಕ್ಕೆ ಭಗವಂತನಲ್ಲಿ ಲೀನವಾದರು.
ಬಡತನದಲ್ಲಿ ಬೆಳೆದು ಸ್ವಂತ ಪರಿಶ್ರಮದಲ್ಲಿ ಪ್ರಾಮಾಣಿಕ ದುಡಿಮೆಯಿಂದ ಬಂದ ಆದಾಯವನ್ನು ತಮ್ಮ ಜೀವನ ನಿರ್ವಹಣೆಗೆ ಎಷ್ಟು ಬೇಕೊ ಅಷ್ಟನ್ನು ಬಿಟ್ಟು ಉದ್ಯಮದ ಆದಾಯವನ್ನೆಲ್ಲಾ ಜನಸೇವೆಗಾಗಿ ಮೀಸಲಿಟ್ಟರು. ಕುಶಲಕರ್ಮಿಗಳು ಮತ್ತು ದೈವಭಕ್ತರಾದ, ಜನಸೇವಾ ಪರಾಯಣರೂ ಆದ ಜೈಮುನಿರಾಯರು ಶಾಲೆ, ದೇವಸ್ಥಾನ. ಜೈಮುನಿ ಆಶ್ರಮ, ಸಾರ್ವಜನಿಕ ರಸ್ತೆಗಳನ್ನು ನಿರ್ಮಿಸಿದರು. ದಾಸರಹಳ್ಳಿಗೆ ಬೀದಿ ದೀಪ ಹಾಕಿಸಿದರು. ಸಿಟಿ ಮಾರ್ಕೆಟ್‌ನಿಂದ ಜೈಮುನಿರಾವ್ ಸರ್ಕಲ್‌ವರೆಗೆ ಬಿಟಿಎಸ್ ಬಸ್ ಬರುವಂತೆ ವ್ಯವಸ್ಥೆ ಮಾಡಿದರು. ಬಡವರಿಗೆ ಆಶ್ರಯ ನೀಡಿದರು. ಅಗ್ರಹಾರ ದಾಸರಹಳ್ಳಿಯ ಅಭಿವೃದ್ಧಿಗೆ ಮತ್ತು ಅಲ್ಲಿಯ ಜನರ ಪ್ರಗತಿಗೆ ಶ್ರಮಿಸಿದರು. ಅಂದಿನ ಅಗ್ರಹಾರ ದಾಸರಹಳ್ಳಿಯ ಪ್ರವೇಶದ್ವಾರಕ್ಕೆ ಅವರ ನೆನಪಿಗಾಗಿ ನಗರ ಸಭೆ ಜೈಮುನಿರಾಯರ ಸರ್ಕಲ್ ಎಂಬ ಹೆಸರನ್ನು ಇರಿಸಿದೆ.
[ಸಲಹೆ, ಸೂಚನೆ ನೀಡಿದ ಪ್ರೊ. ಜಿ. ಅಶ್ವತ್ಥನಾರಾಯಣ ಅವರಿಗೆ ಕೃತಜ್ಞತೆಗಳು.]

ಆಧಾರಸೂಚಿ
೧.       ಜನಸೇವಾ ಪಾರಾಯಣ ಆರ್. ಜೈಮುನಿರಾವ್ ಜಾದವ್, ಲೇಖಕಿ ಎನ್. ಮೀರಾಬಾಯಿ, ಪ್ರ. ಮೀರಾ ಪ್ರಕಾಶನ, ಬೆಂ. ೨೦೧೧.

? ಆಶೀರ್ವಾದ, # ೨೯೩೩, ೧೩ನೇ ಮುಖ್ಯರಸ್ತೆ, ವಿಜಯನಗರ, ೨ನೇ ಹಂತ, ಬೆಂಗಳೂರು-೫೬೦೦೪೦.














No comments:

Post a Comment