Wednesday, July 3, 2013

ಪಾಳೆಗಾರರ ಆಡಳಿತದ ಒಂದು ನೋಟ

ಪೂರ್ವಕರ್ನಾಟಕದ ಪಾಳೇಗಾರರ ಆಡಳಿತ ಒಂದು ನೋಟ
ಡಾ. ಸಿ.ಆರ್. ಶ್ಯಾಮಲ
೧೦೫ಲಭಸೃಷ್ಟಿ
ವಲ್ಲಭ ರಸ್ತೆವಿಲೆಪಲೇ (ಪಶ್ಚಿಮ)
ಮುಂಬೈ-೪೦೦೦೭೬.

ಡಳಿತ ಕ್ರಮವು ಒಂದು ರಾಜ್ಯದ ಮುಖ್ಯಾಂಶವಾಗಿದೆ. ರಾಜ್ಯದ ಮತ್ತು ಪ್ರಜೆಗಳ ಏಳ್ಗೆಯು ಆ ರಾಜ್ಯದ ಆಡಳಿತ ಕ್ರಮವನ್ನು ಅನುಸರಿಸುತ್ತದೆ. ಕರ್ನಾಟಕದ ಪೂರ್ವಭಾಗವಾದ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರುಗಳಲ್ಲಿ, ಇನ್ನೂರು ಮುನ್ನೂರು ವರ್ಷಗಳವರೆಗೆ ಪಾಳೆಯಗಾರರು ಆಡಳಿತ ಮಾಡಿರುವುದು ತಿಳಿದ ವಿಷಯವೇ. ಕೆಲವು ಪಾಳೆಯಪಟ್ಟುಗಳಲ್ಲಿ ಬೇರೆ ಬೇರೆ ಮನೆತನಗಳು ಬಂದು, ಅಷ್ಟು ವರ್ಷಗಳವರೆಗೆ ಆಳಿದರೂ, ರಾಜ್ಯಡಳಿತದ ಮೂಲ ತತ್ವವು ಒಂದೇ ಆಗಿದ್ದಿತು. ಕಾಲಕ್ಕೆ ತಕ್ಕಂತೆ, ತಮಗೆ ಅನುಕೂಲವಾಗುವಂತೆ ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದರು.
ಕೆಲವು ಪಾಳೆಯಪಟ್ಟುಗಳು ವಿಜಯನಗರದ ಅರಸರ ಕಾಲದಲ್ಲಿಯೇ ಅಸ್ತಿತ್ವದಲ್ಲಿತ್ತೆಂದು ತಿಳಿದಿದೆಯಷ್ಟೇ. ಕೆಲವು ಪೂರ್ವಪಾಳೆಯಪಟ್ಟುಗಳು ಚಿತ್ರದುರ್ಗ, ಹಾಗಲವಾಡಿ, ಬಳ್ಳಾರಿ, ಹರಪನಹಳ್ಳಿ, ಬಿಜ್ಜಾವರ (ಮಧುಗಿರಿ), ಹರತಿ - ಕೃಷ್ಣದೇವರಾಯನ ಕಾಲದ ಮುಂಚೆಯೇ ಅಸ್ತಿತ್ವಕ್ಕೆ ಬಂದಿದ್ದವು. ಅವು ವಿಜಯನಗರ ಸಾಮ್ರಾಜ್ಯದ ಒಂದು ಭಾಗವಾಗಿತ್ತು. ಇವರೆಲ್ಲಾ ವಿಜಯನಗರ ಸಾಮ್ರಾಜ್ಯದ ಅಮರನಾಯಕರಾಗಿದ್ದರು.
ಪೂರ್ವಕರ್ನಾಟಕ ಎಲ್ಲಾ ಪಾಳೆಯಗಾರರು ವಿಜಯನಗರದ ಅರಸರ ಆದರ್ಶಗಳನ್ನೂ ಮಾದರಿಗಳನ್ನೂ ಅನುಸರಿಸುತ್ತಿದ್ದರು. ವಿಜಯನಗರ ಸಾಮ್ರಾಜ್ಯವು ವಿಕೇಂದ್ರೀಕೃತ ಹಾಗೂ ಊಳಿಗಮಾನ್ಯ ಅಂಶಗಳನ್ನು ಒಳಗೊಂಡಿದ್ದಿತು. ಈ ಪದ್ಧತಿಯನ್ನು ‘ನಾಯಕ ಪದ್ಧತಿಯೆಂದು ಕರೆಯುತ್ತಿದ್ದರು. ಇವರು ವಿಜಯನಗರದ ಅರಸರಿಗೆ ಕಪ್ಪವನ್ನೂ, ಯುದ್ಧದ ಸಮಯದಲ್ಲಿ ಸೈನ್ಯವನ್ನೂ ಒದಗಿಸುತ್ತ, ವಿಧೇಯರಾಗಿದ್ದು, ಅವರ ಆಡಳಿತ ಪದ್ಧತಿಯನ್ನು ಅನುಸರಿಸಿದರು.
ಇವರು ‘ಸಪ್ತಾಂಗ ಸೂತ್ರದ ಪದ್ಧತಿಯ ಮೇರೆಗೆ ಆಡಳಿತ ನಡೆಸುತ್ತಿದ್ದರು (ರಾಜ, ಮಂತ್ರಿಮಂಡಲ, ಪ್ರಾಂತಾಡಳಿತ, ಕೋಶ, ಬಲ, ದುರ್ಗ ಮತ್ತು ನ್ಯಾಯಾಂಗ.) ತಮ್ಮ ಆಡಳಿತ ಕ್ರಮ ಸುಲಭವಾಗಲು ಕೇಂದ್ರಾಡಳಿತ, ರಾಜ್ಯಾಡಳಿತ, ಊರಾಡಳಿತ ಮತ್ತು ಗ್ರಾಮಾಡಳಿತವೆಂದು ಮಾಡಿಕೊಂಡಿದ್ದರು. ಗ್ರಾಮಾಧಿಕಾರಿಗಳು ಊರಧಿಕಾರಿಗಳಿಗೂ, ಅವರು ರಾಜ್ಯಾಧಿಕಾರಿಗಳಿಗೂ, ಅವರು ಕೇಂದ್ರಾಧಿಕಾರಿಗಳಿಗೂ ಉತ್ತರಿಸಬೇಕಾಗಿತ್ತು. ಕೇಂದ್ರಾಡಳಿತದಲ್ಲಿ ಪಾಳೆಯಗಾರನೇ ಸರ್ವಾಧಿಕಾರಿ. ತಮ್ಮನ್ನು ರಾಜ, ಅರಸು, ಒಡೆಯ, ನಾಯಕ, ಗೌಡ ಎಂದು ಕರೆದುಕೊಳ್ಳುತ್ತಿದ್ದರು. ತಮ್ಮ ಪ್ರಜೆಗಳನ್ನು ಒಳಗಿನ ಮತ್ತು ಹೊರಗಿನ ಶತ್ರುಗಳಿಂದ, ವ್ಯಾಧಿಗಳಿಂದ, ಕ್ಷಾಮ, ಅತಿವರ್ಷ-ಪ್ರವಾಹಗಳಿಂದ ಉಂಟಾಗುವ ಅನಾಹುತಗಳಿಂದ ರಕ್ಷಿಸಿದ್ದಾರೆ. ರಾಜನ ಕರ್ತವ್ಯಗಳನ್ನು ಸಮರ್ಥವಾಗಿ ನಡೆಸಿಕೊಂಡು ಬಂದಿದ್ದಾರೆ.
ಇತರೇ ಪಾಳೆಯಗಾರರಿರಲಿ, ಇವರೂ ತಮ್ಮತಮ್ಮಲ್ಲೇ ಯುದ್ಧ ಮಾಡಿ ಒಬ್ಬರಿಗೊಬ್ಬರು ಶತ್ರುಗಳಾಗಿದ್ದರು. ಇವರು ಒಬ್ಬರಿಗೊಬ್ಬರು ಒಳಶತ್ರುಗಳಾದರೆ, ಮೊಗಲರು, ಬಿಜಾಪುರದವರು, ಹೈದರಲಿ, ಟಿಪ್ಪೂಸುಲ್ತಾನರು, ಮರಾಠರು, ಬ್ರಿಟಿಷ ಹೊರಗಿನ ಶತ್ರುಗಳು. ಇವರುಗಳಿಂದ ತಮ್ಮ ಪಾಳೆಯಪಟ್ಟುಗಳನ್ನೂ ಪ್ರಜೆಗಳನ್ನೂ ರಕ್ಷಿಸಿದ್ದಾರೆ. ಶರಣು ಬಂದವರನ್ನು ತಮ್ಮ ಪ್ರಾಣ ಒತ್ತೆಯಿಟ್ಟು ಹೇಗೆ ಕಾಪಾಡುತ್ತಿದ್ದರೆಂಬುದಕ್ಕೆ ನಿದರ್ಶನಗಳಿವೆ. ಅವರು ಚುರುಕಾಗಿಯೂ ತೀಕ್ಷ್ಣಮತಿಗಳಾಗಿಯೂ ಇದ್ದರು. ಶಕ್ತಿಯಿಂದಾಗದಿದ್ದರೆ ಯುಕ್ತಿಯಿಂದ ಶತ್ರುಗಳನ್ನು ಗೆಲ್ಲುತ್ತಿದ್ದರು. ಸಮಾಜದ ಶತ್ರುಗಳನ್ನು, ದುಷ್ಟರನ್ನು ಅತಿ ಕಠಿಣವಾಗಿ ಶಿಕ್ಷಿಸುತ್ತಿದ್ದರು. ಇವರು ಸಮಾನ ಧರ್ಮೀಯರಾಗಿದ್ದು, ಎಲ್ಲಾ ಧರ್ಮ, ಮತ, ಪಂಥಗಳನ್ನು ಸಮಾನತೆಯಿಂದ ಕಾಣುತ್ತಿದ್ದುದಲ್ಲದೆ, ಉದಾರವಾಗಿ ದಾನ ದತ್ತಿಗಳನ್ನೂ ಬಿಟ್ಟುಕೊಡುತ್ತಿದ್ದರು. ಪ್ರಜೆಗಳ ಆರ್ಥಿಕ ಸ್ಥಿತಿ ಉತ್ತಮಗೊಳ್ಳುವಂತೆ, ಯುದ್ಧದಲ್ಲಿ ಮಡಿದವರಿಗೆ, ಸಂತೋಷದ ಸುದ್ದಿ ತಂದವರಿಗೆ, ದೇವಸ್ಥಾನ-ಕೆರೆ-ಬಾವಿ-ಗ್ರಾಮಗಳನ್ನು ಜೀರ್ಣೋದ್ಧಾರ ಮಾಡಿದವರಿಗೆ ಉದಾರವಾಗಿ ದಾನ-ದತ್ತಿಗಳನ್ನು ಕೊಟ್ಟಿದ್ದಾರೆ. ಹೀಗೆ ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ಪಾಲಿಸುತ್ತಾ ‘ರಾಜಾ ಎಂಬ ಹೆಸರನ್ನು ಸಾರ್ಥಕ ಪಡಿಸಿಕೊಂಡಿದ್ದರು.
ಇವರ ಅರಸೊತ್ತಿಗೆ ಆನುವಂಶಿಕವಾಗಿದ್ದು, ಮೊದಲನೆಯ ಮಗನೇ ಉತ್ತರಾಧಿಕಾರಿಯಾಗಿ, ‘ಯುವರಾಜನಾಗುತ್ತಿದ್ದನು. ಇವನನ್ನು ‘ಸಾಹೇಬ್ ಜಾದೆ, ‘ಪಟ್ಟದ ಕುಮಾರ ಎಂದೂ ಕರೆಯುತ್ತಿದ್ದರು. ಮೊದಲನೆಯ ಮಗನು ದೈಹಿಕವಾಗಿ ಅಥವಾ ಮಾನಸಿಕವಾಗಿ ಯೋಗ್ಯನಲ್ಲದಿದ್ದರೆ ಅಥವಾ ಅಕಾಲಮರಣ ಹೊಂದಿದ್ದರೆ, ಆತನ ತಮ್ಮನಿಗೆ ಪಟ್ಟಕಟ್ಟಿದ ಉದಾಹರಣೆಗಳಿವೆ. ಪಾಳೆಯಗಾರರಿಗೆ ಮಕ್ಕಳಿಲ್ಲದಿದ್ದರೆ ಅಥವಾ ಬಾಲಕನಾಗಿದ್ದರೆ, ಪಾಳೆಯಗಾರನ ಸಹೋದರರು ಪಟ್ಟಕ್ಕೆ ಬಂದಿದ್ದಾರೆ. ಕೆಲವು ಕಡೆ ಮೊಮ್ಮಗ ಅಥವಾ ಸಹೋದರ ಮಕ್ಕಳು ಪಟ್ಟವೇರಿದ್ದಾರೆ. ಪಾಳೆಯಗಾರನಿಗೆ ಹತ್ತಿರದ ಸಂಬಂಧಿಗಳ್ಯಾರೂ ಇಲ್ಲದಿದ್ದರೆ, ದೂರದ ಸಂಬಂಧಿಕರ ಮಕ್ಕಳನ್ನು ದತ್ತು ತೆಗೆದುಕೊಂಡು ಪಟ್ಟ ಕಟ್ಟಿದ್ದಾರೆ. ಕೆಲವೊಮ್ಮೆ ಹೆಚ್ಚು ಮಕ್ಕಳಿದ್ದರೆ, ಸಂಸ್ಥಾನದ ರಕ್ಷಣೆಯ ದೃಷ್ಟಿಯಿಂದ, ಪಾಳೆಯಗಾರರು ಇತರೇ ಮಕ್ಕಳಿಗೆ ರಾಜ್ಯದ ಬೇರೆಬೇರೆ ದಿಕ್ಕುಗಳಲ್ಲಿ ಅಥವಾ ಗಡಿ ಪ್ರದೇಶಗಳಲ್ಲಿ ಆಳುವ ಹಕ್ಕನ್ನು ಕೊಟ್ಟಿರುವರು. ಹೀಗೆ ಹಂಚಿಕೊಡುವುದರಿಂದ ಒಳ ಜಗಳಗಳಾಗದೆ, ಹೊರಗಿನ ಶತ್ರುಗಳ ಕಡೆಗೂ ಗಮನವಿಟ್ಟಂತಾಗಿ, ಅವರಿಗೆ ಸ್ವಾತಂತ್ರ್ಯ ಕೊಟ್ಟಂತೆಯೂ, ತಮ್ಮ ಹಕ್ಕಿನೊಳಗಿಟ್ಟುಕೊಂಡಂತೆಯೂ ಇರುತ್ತಿತ್ತು.
ಇವರು ಬಹುಪತ್ನಿತ್ವ ಪದ್ಧತಿಯನ್ನು ಅನುಸರಿಸುತ್ತಿದ್ದರು. ಯುದ್ಧದಲ್ಲಿ ಸೋತ ಪಾಳೆಯಗಾರನು, ತನ್ನ ರಾಜಕೀಯ ಭದ್ರತೆಗಾಗಿ, ತನ್ನ ಸಹೋದರಿಯನ್ನೋ ಮಗಳನ್ನೋ ಆತನಿಗೆ ಮದುವೆ ಮಾಡಿಕೊಡುತ್ತಿದ್ದರು. ಇವರನ್ನು ‘ನಾಗತಿಯರೆಂದು ಕರೆಯುತ್ತಿದ್ದರು. ಇದರಿಂದ ಪಾಳೆಯಗಾರನ ಶೌರ್ಯ ಹಾಗೂ ರಾಜ್ಯದ ವಿಸ್ತಾರ ತಿಳಿಯುತ್ತಿತ್ತು. ಅದೊಂದು ವೈಭವದ ಸಂಕೇತವಾಗಿತ್ತು. ಪೂ.ಕ.ಪಾ.ರಿಗೆ ಇಬ್ಬರಿಗಿಂತ ಹೆಚ್ಚು ಪತ್ನಿಯರಿದ್ದರು. ಚಿತ್ರದುರ್ಗದ ಪಾಳೆಯಗಾರರಿಗೆ ನಾಲ್ಕರಿಂದ ಮೂವತ್ತಕ್ಕೂ ಹೆಚ್ಚು ಪತ್ನಿಯರಿದ್ದರು. ಈ ನಾಗತಿಯರಲ್ಲಿ ಕೆಲವರು ಸಕ್ರಿಯ ಪಾತ್ರವನ್ನು ವಹಿಸಿದ್ದಾರೆ. ಇನ್ನು ಕೆಲವರು ರಾಜ್ಯದಾಡಳಿತದಲ್ಲಿ ಪರೋಕ್ಷವಾಗಿಯೋ ಅಪರೋಕ್ಷವಾಗಿಯೋ ಭಾಗವಹಿಸಿದ್ದಾರೆ. ಇವರು ಸಹಗಮನ ಪದ್ಧತಿಯನ್ನು ಅನುಸರಿಸುತ್ತಿದ್ದರು.
ಚಿತ್ರದುರ್ಗದ ಪಾಳೆಯಗಾರರಿಗೆ ಮುದ್ರಾಂಕಿತಗಳನ್ನಿಟ್ಟು ಕೊಳ್ಳುವ ಹಕ್ಕಿತ್ತು. ಅವರ ಮುದ್ರಾಂಕಿತ ವರ್ತುಳವಾಗಿದ್ದು, ಒಳಗೆ ಸೂರ್ಯಚಂದ್ರರಿದ್ದು, ಆಳುತ್ತಿದ್ದ ಪಾಳೆಯಗಾರನ ಹೆಸರಿರುತ್ತಿತ್ತು. ಇಂತಹ ಒಂದು ಮುದ್ರಾಂಕಿತ ಶ್ರೀ ಬಿ. ರಾಜಶೇಖರಪ್ಪನವರ ಹತ್ತಿರವಿದೆಯೆಂದು ತಿಳಿದುಬಂದಿದೆ. ಇನ್ನು, ಎಲ್ಲಾ ಪಾಳೆಯಗಾರರ ಧ್ವಜ ಒಂದೇ ‘ಹನುಮದ್ಗರುಡ. ಇವರಿಗಿದ್ದ ಬಿರುದುಗಳಿಂದ, ಇವರ ಪರಾಕ್ರಮ, ಯುದ್ಧ ವ್ಯವಸ್ಥೆ, ಶೌರ್ಯಗಳು ತಿಳಿದುಬರುತ್ತವೆ. ಕೇಂದ್ರಾಡಳಿತದಲ್ಲಿ ಪಾಳೆಯಗಾರನ ಅಗತ್ಯಕ್ಕನುಗುಣವಾಗಿ ಮಂತ್ರಿಮಂಡಲದ ಕ್ರಮವಿತ್ತು. ಇವರ ಶಾಸನಗಳಲ್ಲಿ ಅಮಾತ್ಯ, ಸಚಿವ, ಪ್ರಧಾನಿ ಎಂಬ ಪದಗಳನ್ನು ಕಾಣುತ್ತೇವೆ. ಬೇರೆ ಬೇರೆ ಖಾತೆಗಳಿಗೆ ಬೇರೆ ಬೇರೆ ಮಂತ್ರಿಗಳಿದ್ದರು.
ಇವರ ಸಂಸ್ಥಾನಗಳಲ್ಲಿ ಗುರುಗಳಿಗೆ ಮುಖ್ಯ ಸ್ಥಾನವಿತ್ತು. ಇವರು ಪಾಳೆಯಗಾರನ ಹಿತೈಷಿಯಾಗಿ, ಸಮಯೋಚಿತವಾಗಿ ಸಲಹೆಯನ್ನು ಕೊಡುತ್ತಿದ್ದರು. ಕೆಲವೊಮ್ಮೆ ಪುರೋಹಿತರಾಗಿಯೂ, ಧರ್ಮಾಧಿಕಾರಿಯಾಗಿಯೂ ಕೆಲಸ ಮಾಡಬೇಕಾಗುತ್ತಿತ್ತು.
ಹಿಂದೆಯೇ ಹೇಳಿರುವಂತೆ, ಒಳ ಹಾಗೂ ಹೊರ ಶತ್ರುಗಳ ಉಪಟಳ ಯಾವಾಗಲೂ ಇರುತ್ತಿದ್ದುದರಿಂದ, ಸುರಕ್ಷೆ ಹಾಗೂ ರಕ್ಷಣೆಗಾಗಿ ಸೈನ್ಯದ ಅಗತ್ಯವಿರುತ್ತಿತ್ತು. ಆದ್ದರಿಂದ ಮಂತ್ರಿಮಂಡಲದಲ್ಲಿ ಸೇನಾಪತಿಗೆ ಮುಖ್ಯ ಸ್ಥಾನವಿತ್ತು. ಇವನ ಕೈಕೆಳಗೆ ಅನೇಕ ಸೇನಾಪತಿಗಳಿರುತ್ತಿದ್ದರು. ಇವರನ್ನು ‘ದಳವಾಯಿ ಎಂದೂ ಕರೆಯುತ್ತಿದ್ದರು. ಇವರು ವ್ಯವಸ್ಥಿತವಾದ, ಅತ್ಯುನ್ನತವಾದ, ಶಿಸ್ತುಬದ್ಧವಾದ ಸೈನ್ಯವನ್ನು ಹೊಂದಿದ್ದರು. ಇವರು ತಮ್ಮ ಸೈನಿಕ ಪಡೆಯನ್ನು ನಾಲ್ಕು ವಿಭಾಗಗಳನ್ನಾಗಿ ಮಾಡಿದ್ದರು. ಕಾಲ್ದಳ (ಪದಾತಿ), ಕುದುರೆದಳ, ಗಜಸೇನೆ ಮತ್ತು ಗೋಲಂದಾಜು (ಫಿರಂಗಿದಳ). ಚಿತ್ರದುರ್ಗದ ಸೈನ್ಯದಲ್ಲಿ ಬೇಡರ ಪಡೆಯೂ ಇತ್ತು. ಇವರು ಸ್ವಾಮಿಭಕ್ತರೂ, ಪರಾಕ್ರಮಿಗಳೂ, ವಿಶ್ವಾಸಿಗಳೂ ಮತ್ತು ಶತ್ರುಗಳಿಗೆ ಕ್ರೂರಿಗಳೂ ಆಗಿದ್ದರು. ಸೈನ್ಯದಲ್ಲಿ ಇತರ ಜಾತಿಗಳೊಡನೆ ಬ್ರಾಹ್ಮಣರೂ, ಮುಸ್ಲಿಮರೂ ಮರಾಠರೂ ಇದ್ದರು. ಪೂ.ಕ.ಪಾ. ತುರುಕಾಳಗ, ಬಯಲುಕಾಳಗ, ಗಡಿಯುದ್ಧ ಮತ್ತು ಕೋಟೆಕಾಳಗಗಳನ್ನು ಮಾಡುತ್ತಿದ್ದರು. ಕೋಟೆಗಳನ್ನು ರಕ್ಷಿಸಿದವರಿಗೆ ‘ಕೋಟೆಮಾನ್ಯ, ಮಡಿದ ಸೈನಿಕರ ಹೆಸರಿನಲ್ಲಿ ‘ನೆತ್ತರಕೊಡುಗೆ, ಗೆದ್ದು ಬಂದವರಿಗೆ ‘ಬಾಳ್ಗಳ್ಚು ಎಂಬ ದತ್ತಿಗಳನ್ನೂ ಬಿರುದುಗಳನ್ನೂ ಕೊಡುತ್ತಿದ್ದರು. ಹೇಡಿಯಂತೆ ಯುದ್ಧ ಭೂಮಿಯಿಂದ ಓಡಿ ಹೋದವರಿಗೆ ಕಠಿಣ ಶಿಕ್ಷೆಯನ್ನು ಕೊಡುತ್ತಿದ್ದರು. ಇವರು ತಮ್ಮ ಸೈನಿಕರ ಅನುಕೂಲದ ಕಡೆಗೆ ಹೆಚ್ಚು ಗಮನವಿಟ್ಟರು. ಅವರಿಗೆ ಇನಾಮು, ಜಹಗೀರಿಗಳನ್ನು ಕೊಡುತ್ತಿದ್ದರು. ಯುದ್ಧದಲ್ಲಿ ಮಡಿದ ಸೈನಿಕರ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು. ಅವರ ಸಂರಕ್ಷಣೆಗಾಗಿ ಹಾಲು-ಬೆಣ್ಣೆ-ಹಣವೆಂದು ಬಾಲ್ಯಾವಸ್ಥೆ ತೀರುವವರೆಗೂ ಸಂಬಳದಂತೆ ಕೊಡುತ್ತಿದ್ದರು. ದೊಡ್ಡವರಾದ ಮೇಲೆ ಸೈನ್ಯದಲ್ಲಿ ಚಾಕರಿಯನ್ನು ಕೊಡುತ್ತಿದ್ದರು.
ಅವರ ಸೈನ್ಯದಲ್ಲಿದ್ದ ಪಡೆಗಳ ಬೇರೆ ಬೇರೆ ಹೆಸರುಗಳನ್ನೂ, ಯುದ್ಧಕ್ಕೆ ಹೊರಟಾಗ ಉಪಯೋಗಿಸುತ್ತಿದ್ದ ಆಯುಧಗಳ ಹಾಗೂ ವಾದ್ಯಗಳ ಹೆಸರುಗಳನ್ನೂ ನಾವು ತಿಳಿಯಬಹುದು.
ಸಂಧಿವಿಗ್ರಹಿಯ ಕರ್ತವ್ಯ ಶತ್ರುಗಳೊಡನೆ ಸಂಧಿಯನ್ನೋ ಒಪ್ಪಂದವನ್ನೋ ಶಾಂತಿಯನ್ನೋ ಮಾಡಿಸುವುದು. ಈತನನ್ನು ‘ವಕೀಲ ಎಂದೂ ಕರೆಯುತ್ತಿದ್ದರು. ‘ವಕೀಲ ಎಂಬ ಪದವನ್ನು ಚಿತ್ರದುರ್ಗ ಸಂಸ್ಥಾನದಲ್ಲಿ ಮಾತ್ರ ಕೇಳುತ್ತೇವೆ. ದ್ವಾರನಾಯಕನಿಗೆ ಮತ್ತೊಂದು ಹೆಸರು ‘ಪ್ರತೀಹಾರಿ. ಈತನು ನಿಪುಣನೂ ಕರ್ತವ್ಯನಿಷ್ಠನೂ ಆಗಿರುತ್ತಿದ್ದನು. ಬೂದಿಹಾಳಿನ ಮೂಲಪುರುಷನು ಮೊದಲನೆಯ ಪ್ರೌಢದೇವರಾಯನ ದ್ವಾರನಾಯಕನಾಗಿದ್ದನು. ಪಾಳೆಯಗಾರರ ರಕ್ಷಣೆಯ ಹೊಣೆ ಅಂಗರಕ್ಷಕನದು.
ಕೆಲವು ಕಾಗದ ಪತ್ರಗಳಿಂದ ಪೂ.ಕ.ಪಾ.ರ ನ್ಯಾಯ ತೀರ್ಮಾನದ ರೀತಿಯನ್ನು ತಿಳಿಯಬಹುದು. ಕೆಲವೊಮ್ಮೆ ನ್ಯಾಯದ ತೀರ್ಪನ್ನು ಕೊಡುವ ಮೊದಲು ಪಾಳೆಯಗಾರರು ದ್ವಾರಪಾಲಕರ, ದೂತರ, ತಳವಾರರ ಸಹಾಯವನ್ನು ಪಡೆಯುತ್ತಿದ್ದರು. ಸಾಧಾರಣ ತಪ್ಪಿಗೆ ಹಣದ ರೂಪದಲ್ಲೋ ಮುಟ್ಟುಗೋಲೊ ಶಿಕ್ಷೆ. ದೊಡ್ಡ ತಪ್ಪು ಮಾಡಿದವರಿಗೆ ರಾಜ್ಯದಿಂದ ಬಹಿಷ್ಕಾರ. ಸ್ವಾಮಿದ್ರೋಹ ಅಥವಾ ರಾಜ್ಯದ್ರೋಹ ಮಾಡಿದವರಿಗೆ ಮರಣ ದಂಡನೆ. ನ್ಯಾಯ ತೀರ್ಮಾನಿಸಿದಾಗ ಕೆಲವು ಕಡೆ ‘ದೃಷ್ಟಿ ದೀವಿಗೆ, ‘ಮುದ್ದೆ ತುಪ್ಪದ ಪ್ರಮಾಣ, ‘ವಿಘ್ನೇಶ್ವರ ಶಾಸ್ತ್ರ ಓದಿಸುವುದು ಮುಂತಾದ ಪದಗಳು ಬರುತ್ತವೆ. ‘ದೃಷ್ಟಿ ದೀವಿಗೆ ‘ಮುದ್ದೆ ತುಪ್ಪದ ಪ್ರಮಾಣ ಇವುಗಳ ಅರ್ಥವಾಗಲೀ ಕ್ರಮವಾಗಲೀ ತಿಳಿದು ಬಂದಿಲ್ಲ. ದೈವಕ್ಕೆ ಹೆದರಿ ಸತ್ಯವನ್ನು ಒಪ್ಪಿಕೊಳ್ಳುತ್ತಿದ್ದರೆಂಬುದು ಸತ್ಯ. ಇನ್ನು ‘ವಿಘ್ನೇಶ್ವರ ಶಾಸ್ತ್ರ ಓದಿಸುವುದು ಇದರ ಅರ್ಥ ಮೊನ್ನೆಮೊನ್ನೆ ಡಾ. ಬಿ. ರಾಜಶೇಖರಪ್ಪನವರಿಂದ ತಿಳಿದುಬಂದಿತು. ದಿನ ಹೋದಂತೆ ‘ವಿಜ್ಞಾನೇಶ್ವರ ಜನರ ಬಾಯಲ್ಲಿ ‘ವಿಘ್ನೇಶ್ವರ ಆಯಿತು. ವಿಜ್ಞಾನೇಶ್ವರ ಎಂಬಾತನು ಆರನೇ ವಿಕ್ರಮಾದಿತ್ಯನ ಕಾಲದ ಆಸ್ಥಾನ ಕವಿ. ‘ಮಿತಾಕ್ಷರ ಸಂಹಿತ ಎಂಬುದು ಆತನ ಕೃತಿ. ಇದು ಶ್ರೇಷ್ಠ ಹಿಂದೂ ನ್ಯಾಯ ಗ್ರಂಥ. ಈ ಗ್ರಂಥ ಅಖಿಲ ಭಾರತ ಮಾನ್ಯವಾಗಿತ್ತೆಂದೂ, ಆ ಶಾಸ್ತ್ರ ಗ್ರಂಥವನ್ನು ಓದಿಸಿ ಅದರಂತೆ ನಡೆಯುತ್ತಿದ್ದರೆಂದೂ ಹೇಳಿದರು.
ಪ್ರಾಂತಾಡಳಿತವನ್ನು ನಾಡಾಳಿತವೆಂದೂ ರಾಜ್ಯಾಡಳಿತವೆಂದೂ ಹೇಳಬಹುದು. ಇವರು ತಮ್ಮ ಸಂಸ್ಥಾನವನ್ನು ವಿಭಾಗ, ಉಪವಿಭಾಗಗಳನ್ನಾಗಿ ಮಾಡಿ ಸುವ್ಯವಸ್ಥಿತವಾಗಿ ಆಳಿದ್ದಾರೆ. ರಾಷ್ಟ್ರ, ವೇಂಠೆ, ನಾಡು, ದೇಶ, ಸೀಮೆ, ರಾಜ್ಯ, ವಳಿತ ಎಂದು ಉಪಭಾಗಗಳನ್ನಾಗಿ ಮಾಡಿ, ಅವುಗಳಿಗೆ ಪ್ರತ್ಯೇಕವಾದ ಅಧಿಕಾರಿಗಳನ್ನು ನೇಮಿಸಿದ್ದರು.
ತಮ್ಮ ಆಡಳಿತ ಘಟಕಗಳಲ್ಲಿ ಶಾಂತಿ, ಕಾನೂನು ವ್ಯವಸ್ಥೆಯನ್ನು ನೋಡಿಕೊಳ್ಳುವುದು, ಕೇಂದ್ರಾಡಳಿತದ ಆದೇಶಗಳನ್ನು ಸಮರ್ಪಕವಾಗಿ ಜಾರಿಗೆ ತರುವುದು, ಸ್ಥಳೀಯ ವ್ಯಾಜ್ಯಗಳನ್ನು ಪರಿಹರಿಸುವುದು, ತೆರಿಗೆ ಕಂದಾಯಗಳನ್ನು ಸಂಗ್ರಹಿಸುವುದು, ಯುದ್ಧ ಸಮಯದಲ್ಲಿ ಕೇಂದ್ರಕ್ಕೆ ಸೈನ್ಯವನ್ನು ಒದಗಿಸುವುದು, ಇವರ ಮುಖ್ಯ ಕರ್ತವ್ಯಗಳು.
ಆಯಗಾರ ಪದ್ಧತಿ ಗ್ರಾಮಾಡಳಿತದ ಪ್ರಧಾನವಾದ ವ್ಯವಸ್ಥೆ. ಇದಕ್ಕೆ ಬಾರಾಬಲೂತಿ ಪದ್ಧತಿ ಅಥವಾ ಕೈವಾಡದವರೆಂದು ಹೇಳುತ್ತಿದ್ದರು. ಇದರಲ್ಲಿ ಸಮಾಜದ ಪ್ರತಿಯೊಂದು ವೃತ್ತಿಯ ಮುಖ್ಯಸ್ಥರಿದ್ದು, ಗ್ರಾಮಾಡಳಿತವನ್ನು ನಡೆಸುತ್ತಿದ್ದರು.
ಗೌಡ, ಶಾನುಭೋಗರ ಅಧಿಕಾರವು ಆನುವಂಶಿಕವಾಗಿರುತ್ತಿತ್ತು. ಗೌಡನ ಇತರೆ ಕರ್ತವ್ಯಗಳಲ್ಲಿ ರೈತರಿಂದ ಕಂದಾಯ, ತೆರಿಗೆಗಳನ್ನು ವಸೂಲಿ ಮಾಡಿ ಪಾರುಪತ್ಯಗಾರನಿಗೆ ಮುಟ್ಟಿಸುವುದು ಮತ್ತು ಸರಕಾರದ ಪರವಾಗಿ ಕೆಲಸಗಳನ್ನು ನೋಡಿಕೊಳ್ಳುವುದು. ಇನ್ನು ಶಾನುಭೋಗನ ಕರ್ತವ್ಯಗಳಲ್ಲಿ ಲೆಕ್ಕಪತ್ರಗಳನ್ನು ನೋಡಿಕೊಳ್ಳುವುದು ಮುಖ್ಯವಾಗಿತ್ತು. ಇತರೆ ಆಯಗಾರರು ತಮ್ಮ ಜನರ ಕಷ್ಟನಷ್ಟಗಳನ್ನು, ಅವರ ಅನುಕೂಲ ಅನಾನುಕೂಲಗಳನ್ನು ಸಭೆಯಲ್ಲಿ ನಿವೇದಿಸಿಕೊಂಡಾಗ, ಇತರರು ಚರ್ಚಿಸಿ ಒಂದು ಒಪ್ಪಂದಕ್ಕೆ ಬರುತ್ತಿದ್ದರು. ಹೀಗಾಗಿ, ಗ್ರಾಮಾಡಳಿತವು ಸುಸೂತ್ರವಾಗಿ ಸಾಗುತ್ತಿತ್ತು. ನಾಡಿನ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಕೆಲವು ಅಧಿಕಾರಿಗಳಿದ್ದರು. ಅವರುಗಳು ಗ್ರಾಮದ ಸುಧಾರಣೆಗಾಗಿ ಕಾಯಿದೆಗಳನ್ನು ರಚಿಸುತ್ತಿದ್ದರು. ಆದಾಯದ ಮೊತ್ತ, ವಿವಿಧ ರೀತಿಯ ಸುಂಕಗಳ ತೆರಿಗೆಗಳ ಮೊತ್ತಗಳನ್ನು ನಿಶ್ಚಯಿಸುವುದು, ಗಡಿಗಳನ್ನು ನಿಶ್ಚಯಿಸಿ ಲಿಂಗಮುದ್ರೆ ಅಥವಾ ವಾಮನಮುದ್ರೆಗಳಿರುವ ಕಲ್ಲುಗಳನ್ನು ನಡೆಸುವುದು ಅವರ ಆದ್ಯ ಕರ್ತವ್ಯಗಳಾಗಿತ್ತು.
ದುರ್ಗವು ಬಹಳ ಮುಖ್ಯವಾದುದು. ಗಿರಿದುರ್ಗ, ವನದುರ್ಗ ಮತ್ತು ಜಲದುರ್ಗವೆಂಬ ಪ್ರಕಾರಗಳಿವೆ. ಇವರ ದುರ್ಗಗಳೆಲ್ಲಾ ಗಿರಿದುರ್ಗಗಳು. ಚಿತ್ರದುರ್ಗದ ಕೋಟೆ ಮಾತ್ರ ಮೂರೂ ಪ್ರಕಾರದ ದುರ್ಗವಾಗಿ ಜಯಿಸಲು ಬಹಳ ಕಠಿಣವಾಗಿತ್ತು.
ಹೀಗೆ ಪೂರ್ವ ಕರ್ನಾಟಕದ ಪಾಳೆಯಗಾರರ ಆಡಳಿತ ಕ್ರಮವನ್ನು ವೀಕ್ಷಿಸಿದಾಗ, ತಮ್ಮ ಸಂಸ್ಥಾನದ ಎಲ್ಲಾ ಆಡಳಿತ ಘಟಕಗಳಲ್ಲಿ ದಕ್ಷರಾದ, ನಿಷ್ಠರಾದ ಅಧಿಕಾರಿಗಳನ್ನು ನೇಮಿಸಿ, ಪ್ರಜೆಗಳ ಅನಾನುಕೂಲದ ಕಡೆಗೆ ಲಕ್ಷ್ಯವಿಟ್ಟು, ಜನಮನ್ನಣೆಯನ್ನು ಪಡೆದುಕೊಂಡಿದ್ದರೆಂದು ತಿಳಿದುಬರುತ್ತದೆ.




3 comments:

  1. ಪಾಳೆಯಗಾರರ ಕುರಿತ ಈ ಕಿರು ಪಂಬಂಧವು ಉತ್ತಮವಾಗಿ ಮೂಡಿಬಂದಿದೆ. ಈ ವಿಚಾರವಾಗಿ ಮತ್ತಷ್ಟು ಲೇಖನಗಳು ತಮ್ಮಿಂದ ಮೂಡಿಬರಲಿ ಎಂದು ಆಶಿಸುತ್ತೇವೆ...ವಂದನೆಗಳು.

    ReplyDelete
  2. Give more information about this

    ReplyDelete
  3. ಪಾಳೆಯಗಾರರ ಕುರಿತ ಈ ಲೇಖನದಲ್ಲಿ ಬೆಂಗಳೂರು ಕೋಲಾರ ಭಾಗದ ವಿಷಯ ಬಂದಿರಬಹುದು ಅಂದುಕೊಂಡಿದ್ದೆ. ಒಟ್ಟಾರೆ ಇತಿಹಾಸದ ವಿದ್ಯಾರ್ಥಿಗಳಿಗೆ ರೆಪರೆನ್ನ್ ಪುಸ್ತಕದ ರೀತಿ ಇದೆ.ಎಷ್ಟು ಬಾರಿ ಓದಿದರೂ ಓದಬೇಕೆನಿಸುತ್ತದೆ.

    ReplyDelete