Thursday, January 3, 2013

ಮಾದನಭಾವಿ ಗ್ರಾಮದಲ್ಲಿ ದೊರೆತ ಸುಂದರ ಶಿಲ್ಪ ಹಾಗೂ ಸುತ್ತಮುತ್ತಲಿನ ಪ್ರಾಚ್ಯಾವಶೇಷಗಳು


ಡಾ. ಎಸ್. ಚಲವಾದಿ                                              ಡಾ. ಎಸ್. ಮೇಲಕಾರ
ಕನ್ನಡ ಸಂಶೋಧನ ಸಂಸ್ಥೆ,                                                                                                      ಸಹಾಯಕ ಪ್ರಾಧ್ಯಾಪಕರು,
 ಕರ್ನಾಟಕ ವಿಶ್ವವಿದ್ಯಾಲಯ,                                                                                                     ಕರ್ನಾಟಕ ವಿಶ್ವವಿದ್ಯಾಲಯ
ಧಾರವಾಡ-೫೮೦೦೩.                                                                                                            ಧಾರವಾಡ-೫೮೦೦೩

                                ಧಾರವಾಡ ಜಿಲ್ಲೆ ಸಾಂಸ್ಕೃತಿಕ ಮತ್ತು ಐತಿಹಾಸಿಕವಾಗಿ ಮಹತ್ವವನ್ನು ಪಡೆದ ಪ್ರದೇಶವಾಗಿದೆ. ಈ ಜಿಲ್ಲೆಯಲ್ಲಿ ಶಿಲಾ ಸಂಸ್ಕೃತಿಯಿಂದ ಹಿಡಿದು ಶಾತವಾಹನ, ಕದಂಬರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಕಲಚೂರಿಗಳು, ವಿಜಯನಗರ, ಬಹಮನಿ, ಆದಿಲ್‌ಶಾಹಿ ಹಾಗೂ ಬ್ರಿಟೀಷರ ಆಳ್ವಿಕೆಗೆ ಸಂಬಂಧಿಸಿದ ಶಾಸನ, ಮೂರ್ತಿ ಶಿಲ್ಪ, ದೇವಾಲಯ, ಕೋಟೆ, ಕೊತ್ತಳ ಇತ್ಯಾದಿ ಪ್ರಾಚ್ಯಾವಶೇಷಗಳು, ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲಿ ಕಂಡುಬರುತ್ತವೆ.
ಧಾರವಾಡ ತಾಲೂಕಿನ ಕೇಂದ್ರ ಸ್ಥಳದಿಂದ ಸು.೨೨ ಕಿ.ಮೀ. ದೂರದ ಮಾದನಭಾವಿ ಗ್ರಾಮದಲ್ಲಿ ಅತ್ಯಂತ ಸುಂದರವಾದ ಶಿಲ್ಪ ಇತ್ತೀಚೆಗೆ ನೆಲ ಅಗೆಯುವಾಗ ಪತ್ತೆಯಾಗಿರುತ್ತದೆ. ಇದು ಸುಮಾರು ೭೦೦ ವರ್ಷಗಳ ಹಿಂದಿನದ್ದು, ಅಂದರೆ ೧೩ನೇ ಶತಮಾನದ ಒಬ್ಬ ಅಧಿಕಾರಿಯ ಸುಂದರ ಶಿಲ್ಪವಾಗಿದೆ. ಕೇಂದ್ರ ಸರಕಾರದ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ತೆಂಗಿನ ಸಸಿ ನೇಡಲು ಗ್ರಾಮದ ಶ್ರೀ ಲಕ್ಷ್ಮಣ್ಣ ದೊಡವಾಡ ಇವರ ಮನೆಯ ಹಿತ್ತಲದಲ್ಲಿ ತಗ್ಗು ತೊಡುವಾಗ ಮೂರು ಫೂಟು ಆಳದ ಭೂಮಿಯಲ್ಲಿ ಈ ಸುಂದರ ಶಿಲ್ಪವೊಂದು ಪತ್ತೆಯಾಗಿದೆ. ಇದೊಂದು ಉಬ್ಬುಶಿಲ್ಪವಾಗಿದ್ದು, ಮೈಮೇಲೆ ವಸ್ತ್ರಾಭರಣಗಳನ್ನು ಧರಿಸಿ ಪದ್ಮಾಸನದಲ್ಲಿ ಕುಳಿತಿದ್ದಾನೆ. ಕೈಗಳು ಅಂಜಲಿ ಮುದ್ರೆಯಲ್ಲಿವೆ. (ಅಂದರೆ ಕೈ ಮುಗಿದು ಕುಳಿತ್ತಿರುವುದು) ತಲೆಯ ಕೂದಲನ್ನು ಮೇಲೆ ಸಿಂಬಿಯನ್ನು ಕಟ್ಟಿದ್ದಾನೆ. ಮುಖದ ಭಾವದಲ್ಲಿ ಶಾಂತತೆಯಿದೆ. ಕಿವಿಗಳಲ್ಲಿ ಕುಂಡಲಗಳಿವೆ. ಕೊರಳಲ್ಲಿ ಮಣಿ ಮುತ್ತಿನ ಹಾರವಿದೆ. ಕೈಗಳಲ್ಲಿ ಬಳೆಗಳಿವೆ. ಸೊಂಟಕ್ಕೆ ವಸ್ತ್ರವನ್ನು ಸುತ್ತಿಕಟ್ಟಿದ್ದಾನೆ. ಅದರ ನಿರಗಿಯನ್ನು ಮುಂದೆ ಇಳಿಬಿಟ್ಟಿದ್ದಾನೆ. ಈತನನ್ನೇ ಅಲಂಕಾರ ಯುಕ್ತ ಸ್ತಂಭ ತೋರಣದ ಮಧ್ಯ ಖಂಡರಿಸಲಾಗಿದೆ. ಶಿಲ್ಪದ ತೋರಣದ ಒಳಸುತ್ತಿನಲ್ಲಿ ಮಣಿಗಳ ಅಲಂಕಾರವಿದೆ. ಕುಂಭಗಳ ಮೇಲೆ ಲತಾ ಸುರುಳಿ ಪಟ್ಟಿಗಳಿವೆ. ಈತನ ದೇಹಾಂಗ ವಸ್ತ್ರಾಭರಣ ಸ್ತಂಭತೋರಣದ  ಕಲಾಲಕ್ಷಣದಿಂದ ಈ ಮೂರ್ತಿ ಕ್ರಿ.ಶ.೧೩ನೇ ಶತಮಾನದ್ದೆಂದು ಗುರ್ತಿಸಲಾಗಿದೆ. ಕೈಮುಗಿದು ಕುಳಿತಿರುವುದನ್ನು ನೋಡಿದರೆ ಈ ಶಿಲ್ಪ ಒಬ್ಬ ಅಧಿಕಾರಿಯದ್ದಾಗಿರಬೇಕು. ಇಲ್ಲವೇ ದೇವಾಲಯವನ್ನು ಸ್ಥಾಪಿಸಿರುವ ಒಬ್ಬ ಅಧಿಕಾರಿಯದ್ದಾಗಿರುವ ಸಾಧ್ಯತೆ ಕಂಡುಬರುತ್ತದೆ. ಆದರೆ ಈತನು ಯಾವ ಧರ್ಮದ ಭಕ್ತನೆಂದು ತಿಳಿದುಬರುವುದಿಲ್ಲ. ಈ ಶಿಲ್ಪವನ್ನು ಶಿಸ್ಟ್ ಶಿಲೆಯಿಂದ ಖಂಡರಿಸಲಾಗಿದೆ. ದೇಹಾಂಗ ನುಣುಪಾಗಿ ಇರುವುದರಿಂದ ಇದು ನೋಡಲು  ತುಂಬಾ ಆಕರ್ಷಣೀಯವಾಗಿದೆ. ಶಿಸ್ಟ್ ಶಿಲೆಯನ್ನು ಬಳಸಿ ತಯಾರಿಸಿದ ಶಿಲ್ಪಗಳು ಈ ಭಾಗದಲ್ಲಿ ಸಿಗುವುದು ತುಂಬಾ ವಿರಳವೆಂದು ಡಾ. ಆರ್.ಎಂ. ಷಡಕ್ಷರಯ್ಯನವರು ಅಭಿಪ್ರಾಯಪಟ್ಟಿದ್ದಾರೆ.
ಅದೇ ರೀತಿ ಹತ್ತು ವರ್ಷದ ಹಿಂದೆ ಡಾ. ಎಸ್.ಕೆ. ಮೇಲಕಾರವರು ಇದೇ ಗ್ರಾಮದಲ್ಲಿ ಕ್ರಿ.ಶ.೧೨ನೇ ಶತಮಾನದ ಸರಸ್ವತಿ ವಿಗ್ರಹವನ್ನು ಶೋಧಿಸಿ ಬೆಳಕಿಗೆ ತಂದಿರುತ್ತಾರೆ. ಮಾದನಭಾವಿ ಗ್ರಾಮದಲ್ಲಿ ಗೋವೆಯ ಕದಂಬ ಅರಸ ೨ನೇ ಜಯಕೇಶಿಯ ಕಾಲದ ಕ್ರಿ.ಶ.೧೧೩೪ರ ಶಾಸನವಿದ್ದು, ಅದರಲ್ಲಿ ಜಯಕೇಶಿ ಯುವರಾಜ ಪೆರ್ಮಾಡಿ ಕುಮಾರ ವಿಜಯಾದಿತ್ಯರೊಡನೆ ರಾಣಿ ಮೈಳಲಾದೇವಿ ಮಂದೂರ ಕಲಿದೇವಸ್ವಾಮಿಗೆ ಆರು ಮತ್ತರು ಭೂಮಿ ಇತ್ಯಾದಿ ದಾನದತ್ತಿಗಳು ನೀಡಿದ ವಿಷಯವನ್ನೊಳಗೊಂಡಿದೆ.
ಕಳೆದ ೯ ತಿಂಗಳ ಹಿಂದೆ ನಾವು ಮತ್ತು ಸ್ನೇಹಿತರಾದ ಡಾ. ಎಸ್.ಜಿ. ಚಲವಾದಿಯವರು, ಶ್ರೀ ಎಸ್.ಬಿ. ದೇಸನೂರವರು ಬಸವರಾಜ ದೊಡವಾಡ, ಡಾ. ಬಿ.ಆರ್. ರಾಠೋಡ ಇವರೊಂದಿಗೆ ಹೊಸದಾಗಿ ಶೋಧವಾದ ಸುಂದರ ಮೂರ್ತಿ ನೋಡಲು ಹೋದಾಗ ಮಾದನಭಾವಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಶೈವ ದೇವಾಲಯಗಳು ಭಿನ್ನವಾದ ಗಣಪತಿ ಶಿಲ್ಪ, ಹನುಮಾನ್ ಶಿಲ್ಪ, ನಂದಿ ಶಿಲ್ಪಗಳು, ಶಿವಲಿಂಗಗಳು ಹುಲಿಯೊಂದಿಗೆ ಹೋರಾಡುತ್ತಿರುವ ವೀರಗಲ್ಲು, ಕತ್ತೆಯ ಉಬ್ಬುಚಿತ್ರವಿರುವ ಶಿಲ್ಪ, ಗಜಲಕ್ಷ್ಮಿ ಶಿಲ್ಪ, ದೇವಾಲಯದ ಕಂಬಗಳು ಊರ ಗ್ರಾಮದಲ್ಲಿ ಮತ್ತು ಧಾರವಾಡಕ್ಕೆ ಬರುವ ಮಾರ್ಗದಲ್ಲಿ ಹೊಲಗಳಲ್ಲಿ ಚದುರಿಕೊಂಡು ಅನಾಥವಾಗಿ ಬಿದ್ದುಕೊಂಡಿವೆ. ಅವೆಲ್ಲವುಗಳು ಸಾಮಾನ್ಯವಾಗಿ ೧೦ ರಿಂದ ೧೧-೧೨ನೇ ಶತಮಾನದ ವರೆಗಿನ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಪ್ರಾಚ್ಯಾವಶೇಷಗಳಾಗಿವೆ. ಇವೆಲ್ಲವುಗಳನ್ನು ಒಂದೆಡೆ ದಾಖಲಿಸಲು ಇಲ್ಲಿ ಪ್ರಯತ್ನಿಸಲಾಗಿದೆ.

[ಮೂರ್ತಿಶಿಲ್ಪಗಳನ್ನು ಗುರ್ತಿಸಲು ಮತ್ತು ಅಧ್ಯಯನವನ್ನು ಮಾಡಲು ಸಹಾಯ ಮಾಡಿದ ಡಾ. ಆರ್.ಎಂ. ಷಡಕ್ಷರಯ್ಯ ಅವರಿಗೂ, ಶ್ರೀ ಎಸ್.ಬಿ. ದೇಸನೂರು, ಡಾ. ಬಿ.ಆರ್. ರಾಠೋಡ, ಶ್ರೀ ಬಸವರಾಜ, ದೊಡವಾಡ ಹಾಗೂ ಮಾದನಭಾವಿ ಗ್ರಾಮದ ಹಿರಿಯರಿಗೆ ಕೃತಜ್ಞತೆಗಳು.]




No comments:

Post a Comment