Friday, January 25, 2013

ದಕ್ಷಿಣ ಕನ್ನಡಜಿಲ್ಲೆ, ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಪ್ರಾಚ್ಯಾವಶೇಷಗಳು


 ದಕ್ಷಿಣ ಕನ್ನಡಜಿಲ್ಲೆ, ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಪ್ರಾಚ್ಯಾವಶೇಷಗಳು
ಡಾ. ಲಕ್ಷ್ಮಿ ಜಿ. ಪ್ರಸಾದ್
ಕನ್ನಡ ಭಾಷಾ ಉಪನ್ಯಾಸಕರು,
ಸರ್ಕಾರಿ ಪದವಿ ಪೂರ್ವ ಕಾಲೇಜು,
ಬೆಳ್ಳಾರೆ, ಸುಳ್ಯ (ತಾ), ದಕ್ಷಿಣ ಕನ್ನಡ ಜಿಲ್ಲೆ-೫೭೪೨೧೨.
ಬೆಳ್ಳಾರೆ ಸುಳ್ಯ ತಾಲೂಕಿನ ವ್ಯಾಪ್ತಿಗೆ ಸೇರಿದ ಗ್ರಾಮ. ಅದು  ಹಿಂದೆ ಬೆಳ್ಳಾರೆ ಮಾಗಣೆಯಾಗಿದ್ದ ಬಗ್ಗೆ ಇತಿಹಾಸಜ್ಞರು ತಿಳಿಸಿದ್ದಾರೆ. ಬೆಳ್ಳಾರೆಯನ್ನು ಸಾಮಂತ ಬಲ್ಲಾಳ ಅರಸರು ಆಳುತ್ತಿದ್ದರು. ಇವರು ಬೆಳ್ಳಾರೆ, ಮುಂಡೂರು, ಸರ್ವೆ, ಕೆದಂಬಾಡಿ, ಕೆಯ್ಯೂರು, ಕಾಣಿಯೂರು, ಐವರ್ನಾಡು, ಪಾಲ್ತಾಡಿ, ಪುಣ್ಚಪಾಡಿ, ಸವಣೂರು, ಚಾರ್ವಕ, ಪೆರುವಾಜೆ, ಕೆದಿಲ, ಬಾಳಿಲ, ಕಳಂಜ, ಮುಪ್ಪೇರ್ಯ, ಮುರುಳ್ಯ, ಕ್ಯಾಮಣ, ಕುದ್ಮಾರು ಮತ್ತು ಕೊಳ್ತಿಗೆ ಎಂಬ ಇಪ್ಪತ್ತೊಂದು ಗ್ರಾಮಗಳನ್ನು ಆಳುತ್ತಿದ್ದರು. ಬೆಳ್ಳಾರೆಯನ್ನು ಆಳಿದ ಸಾಮಂತರು ಯಾರ ಸಾಮಂತರಾಗಿದ್ದರು ಎಂಬ ಬಗ್ಗೆ ಇದಮಿತ್ಥಂ ಎಂಬ ಮಾಹಿತಿ ಸಿಗುವುದಿಲ್ಲ.
೧೭೬೩ರಲ್ಲಿ ಹೈದರಾಲಿಯ ಬಿದನೂರನ್ನು ವಶಪಡಿಸಿಕೊಂಡಾಗ ತುಳುನಾಡು ಅವನ ವಶವಾಯಿತಾದರೂ, ಕೊಡಗಿನ ಅರಸನೊಂದಿಗೆ ಒಪ್ಪಂದ ಮಾಡಿಕೊಂಡು ಪಂಜ ಮತ್ತು ಕೊಡಗಿನ ಮಾಗಣೆಗಳನ್ನು ಕೊಡಗಿಗೆ ಬಿಟ್ಟುಕೊಟ್ಟನು. ಕ್ರಿ.ಶ.ಆದಿ ಭಾಗದಲ್ಲಿ ಬನವಾಸಿಯ ಕದಂಬ ಚಂದ್ರವರ್ಮನು ಕೊಡಗನ್ನು ಆಳಿಕೊಂಡಿದ್ದನು. ನಂತರ ಕೊಡಗು ಅನೇಕ ವಂಶದವರ ಆಳ್ವಿಕೆಗೆ ಒಳಗಾಯಿತು. ಸುಮಾರು ಕ್ರಿ.ಶ.೧೬೦೦ರಲ್ಲಿ ಇಕ್ಕೇರಿ ನಾಯಕರ ವಂಶದ ಹಾಲೇರಿ ಕುಟುಂಬದ ವೀರರಾಜನು ಕೊಡಗನ್ನು ಆಳ್ವಿಕೆ ಮಾಡಿದ ಬಗ್ಗೆ ರಾಜೇಂದ್ರನಾಮೆಯಲ್ಲಿ ಉಲ್ಲೇಖವಿದೆ. ಕ್ರಿ.ಶ.೧೭೭೫ರಲ್ಲಿ ಅಮರ ಸುಳ್ಯ ಮತ್ತು ಬೆಳ್ಳಾರೆಗಳನ್ನು ಹೈದರಾಲಿ ಪುನಃ ವಶಪಡಿಸಿಕೊಂಡನು. ೧೭೯೧ರಲ್ಲಿ ದೊಡ್ಡ ವೀರರಾಜೇಂದ್ರನು ವಶಪಡಿಸಿಕೊಂಡನು. ೧೭೯೨ರಲ್ಲಿ ಟಿಪ್ಪುಸುಲ್ತಾನನ ಮನವಿಯ ಮೇರೆಗೆ ಬೆಳ್ಳಾರೆ ಮತ್ತು ಪಂಜ ಮಾಗಣೆಗಳನ್ನು ದೊಡ್ಡ ವೀರರಾಜೇಂದ್ರನು ಟಿಪ್ಪು ಸುಲ್ತಾನನಿಗೆ ಬಿಟ್ಟುಕೊಟ್ಟನು.
೧. ಬೆಳ್ಳಾರೆಯ ಕೋಟೆ ಮತ್ತು ಬ್ರಿಟಿಷರ ಖಜಾನೆ: ಟಿಪ್ಪುವಿನ ಮರಣಾನಂತರ ಬೆಳ್ಳಾರೆ ಮಾಗಣೆಯ ೩೭ ಗ್ರಾಮಗಳನ್ನು ದೊಡ್ಡ ವೀರರಾಜೇಂದ್ರನ ವಶಕ್ಕೆ ಬ್ರಿಟಿಷರು ನೀಡಿದ್ದಾರೆ. ಕೊಡಗಿನ ಕೊನೆಯ ಅರಸ ಚಿಕ್ಕವೀರರಾಜೇಂದ್ರನನ್ನು ೧೮೩೪ರಲ್ಲಿ ಬ್ರಿಟಿಷರು ಪದಚ್ಯುತಗೊಳಿಸಿ ಬೆಳ್ಳಾರೆ ಸೇರಿದಂತೆ, ಸುಳ್ಯ, ಪಂಜ ಸೀಮೆಯ ೧೧೦ ಗ್ರಾಮಗಳನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿಸಿದರು. ಕೊಡಗರಸರ ಕಾಲದಲ್ಲಿ ವಸ್ತುರೂಪದಲ್ಲಿ ಭೂಕಂದಾಯವನ್ನು ನಗದು ರೂಪಕ್ಕೆ ಬದಲಾಯಿಸಿದರು. ಇದರ ಪ್ರತಿಫಲವಾಗಿ ಒಂದು ಸ್ವಾತಂತ್ರ್ಯ ಸಂಗ್ರಾಮ ನಡೆಯಿತು. ಅದನ್ನು ಬ್ರಿಟಿಷರು ಕಲ್ಯಾಣಪ್ಪನ ಕಾಟುಕಾಯಿ ಎಂದು ಕರೆದರು. ಸುಳ್ಯದ ರೈತಾಪಿ ಜನರು ಕೆದಂಬಾಡಿ ರಾಮೇಗೌಡ, ಕೂಜುಕೋಡು ಮಲ್ಲಪ್ಪಗೌಡ ಮೊದಲಾದವರ ನೇತೃತ್ವದಲ್ಲಿ ಬ್ರಿಟಿಷರನ್ನು ಹೊಡೆದೋಡಿಸಲು ತೀರ್ಮಾನಿಸಿದರು. ಪುಟ್ಟ ಬಸಪ್ಪನೆಂಬ ಜಂಗಮನನ್ನು ಕಲ್ಯಾಣಸ್ವಾಮಿ ಎಂದು ಕರೆದು ಈತ ಕೊಡಗಿನ ಅರಸರ  ವಂಶದವನು ಎಂದು ಜನರನ್ನು ನಂಬಿಸಿದರು. ಮೊದಲಿಗೆ ಬೆಳ್ಳಾರೆಯ ಕೋಟೆಯ ಒಳಗಿದ್ದ ಬ್ರಿಟಿಷ್ ಖಜಾನೆಯನ್ನು ವಶಪಡಿಸಿಕೊಂಡರು. ಬೆಳ್ಳಾರೆ ಕೋಟೆಯಲ್ಲಿ ಕಲ್ಯಾಣಸ್ವಾಮಿಗೆ ಪಟ್ಟ ಕಟ್ಟಿದರು. ಬ್ರಿಟಿಷರಿಂದ ವಶಪಡಿಸಿಕೊಂಡ ಬೆಳ್ಳಾರೆಯ ಖಜಾನೆ ಮತ್ತು ಕೋಟೆ ಇಂದಿಗೂ ಇದೆ. ಈಗ ಬಂಗ್ಲೆ ಗುಡ್ಡೆ ಎಂದು ಕರೆಯಲ್ಪಡುವ ಕೋಟೆಯ ಮೇಲೆ ಇರುವ ಒಂದು ಕಟ್ಟಡವೇ ಆ ಖಜಾನೆ ಈ ಕಟ್ಟಡದಲ್ಲಿ ಈಗ ವಿಲೇಜ್ ಆಫೀಸ್ ಇದೆ. ಕೋಟೆಯ ಸುತ್ತ ತೋಡಿದ ಕಂದಕದ ಕುರುಹು ಇದೆ. ಈ ಕೋಟೆಯನ್ನು ಕ್ರಿ.ಶ.೧೬೦೧ರಲ್ಲಿ ಇಕ್ಕೇರಿಯ ಅರಸರು ಕಟ್ಟಿಸಿದ್ದಾರೆ.
೨. ಬೆಳ್ಳಾರೆಯ ಮಾಸ್ತಿ ಕಟ್ಟೆ: ಬೆಳ್ಳಾರೆಯ ಮೇಲಿನ ಪೇಟೆಯಲ್ಲಿ ಮಾಸ್ತಿಕಟ್ಟೆ ಎಂಬ ಪ್ರದೇಶ ಇದೆ. ಇಲ್ಲಿ ನಾಲ್ಕು ಶಿಲಾಸ್ತಂಭಗಳನ್ನು ನಾಲ್ಕು ದಿಕ್ಕಿಗೆ ನೆಡಲಾಗಿದ್ದು, ಕೆಳಗೆ ಶಿಲೆಯನ್ನು ಹಾಸಲಾಗಿತ್ತು. ಇಲ್ಲಿ ಒಂದು ಸ್ತ್ರೀಯ ಚಿತ್ರ, ಅವಳ ಎತ್ತಿದ ಕೈಯ ಚಿತ್ರ ಹಾಗೂ ಅರ್ಧಚಂದ್ರನ ಚಿತ್ರವನ್ನು ಕೆತ್ತಿರುವ ಶಿಲೆ ಇತ್ತು. ಎಂದು ಇದನ್ನು ನೋಡಿರುವ ಪುಷ್ಪರಾಜರು ಹೇಳುತ್ತಾರೆ. ಇಲ್ಲಿ ಮಹಾಸತಿಕಲ್ಲು ಇತ್ತೆಂದು ತಿಳಿಯುತ್ತದೆ. ಕಟ್ಟೆ ಕೂಡಾ ಇರುವುದರಿಂದ ಇದನ್ನು ಮಹಾಸತಿಕಟ್ಟೆ ಎಂದಾಗಿದೆ, ಈಗ ಈ ಪ್ರದೇಶವನ್ನು ಸಮತಟ್ಟಾಗಿಸಿದ್ದು, ಮಹಾಸತಿ ಕಟ್ಟೆ ಇದ್ದ ಕುರುಹುಗಳು ಅಳಿಸಿಹೋಗಿದೆ. ೩-೪ ವರ್ಷಗಳ ಹಿಂದಿನ ತನಕ ಮಹಾಸತಿ ಕಟ್ಟೆ ಇತ್ತು, ಸುಮಾರು ೨೦-೨೫ ವರ್ಷಗಳ ಮೊದಲು ಇಲ್ಲಿ ಮಹಾಸತಿ ಕಲ್ಲು ಇದ್ದುದನ್ನು ನೋಡಿದವರಿದ್ದಾರೆ, ತುಳುನಾಡಿನಲ್ಲಿ ಸತಿ ಸಹಗಮನ ಪದ್ಧತಿ ಅಷ್ಟಾಗಿ ಪ್ರಚಲಿತವಿರಲಿಲ್ಲ, ಆದ್ದರಿಂದ ಸಹಗಮನ ಮಾಡಿದವರ ಸಂಖ್ಯೆ ತೀರಾ ಕಡಿಮೆ ಇದೆ. ಉಡುಪಿ, ಕಾಸರಗೋಡು ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೬-೭ ಮಹಾಸತಿ ಕಲ್ಲು/ಕಟ್ಟೆಗಳು ಇವೆ. ಬೆಳ್ಳಾರೆಯಲ್ಲಿ ಮಹಾಸತಿ ಕಲ್ಲು ಹಾಗೂ ಕಟ್ಟೆ ಇದ್ದಿದ್ದರೂ ಕೂಡಾ ಇಲ್ಲಿ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.
೩. ಬೆಳ್ಳಾರೆಯ ಬೀಡು ಮತ್ತು ಪಟ್ಟದ ಚಾವಡಿ: ಬೆಳ್ಳಾರೆಯನ್ನು ಜೈನ ಪಾಳೆಯಗಾರರು ಆಳಿದ್ದಕ್ಕೆ ಕುರುಹಾಗಿ  ಬೆಳ್ಳಾರೆಯ ಕೋಟೆಯ ಹಿಂಭಾಗದಲ್ಲಿ ಬೀಡಿನ ಅವಶೇಷ ಈಗಲೂ ಇದೆ. ಬಲ್ಲಾಳರ ಬೀಡಿನ ಅವಶೇಷದ ವಾಯುವ್ಯ ಭಾಗದಲ್ಲಿ ಬೆಳ್ಳಾರೆಯ ಪ್ರಧಾನದೈವ ಅಡ್ಯಂತಾಯ ಭೂತದ ಚಾವಡಿ ಇದೆ. ಭೂತದ ನೇಮದ ಸಂದರ್ಭದಲ್ಲಿ ಇದು ಪಟ್ಟದ ಚಾವಡಿ ಎಂದು ಕರೆಸಿಕೊಂಡು ಭೂತದ ನುಡಿಯಾಗುತ್ತದೆ. ಇದರಿಂದಾಗಿ ಜೈನ ಪಾಳೆಯಗಾರರಾದ ಬಲ್ಲಾಳರಸರ ಪಟ್ಟಾಭಿಷೇಕ ಇಲ್ಲಿಯೇ ಆಗುತ್ತಿತ್ತೆಂದು ತಿಳಿದು ಬರುತ್ತದೆ. ಅಡ್ಯಂತಾಯ ಭೂತದ ಚಾವಡಿಯ ಗುಡಿಯಲ್ಲಿ ಕಂಚಿನಿಂದ ನಿರ್ಮಿಸಲ್ಪಟ್ಟ ಒಂದು ಸ್ತ್ರೀ ರೂಪದ ಮೂರ್ತಿ, ಒಂದು ಪುರುಷನ ರೂಪದ ಮೂರ್ತಿ. ಹಾಗೂ ಆಯುಧಗಳು ಇವೆ. ಇಲ್ಲಿ ಆರಾಧಿಸಲ್ಪಡುವ ದೈವ ಅಡ್ಯಂತಾಯ ಬೀಡಿನ ಹಿರಿಯ (ಮೂಲ?) ಅರಸನಾಗಿದ್ದು ಪುರುಷಾಕೃತಿಯ ಮೂರ್ತಿ ಆತನದೇ ಇರಬಹುದು, ಈ ಬಗ್ಗೆ ಅಧ್ಯಯನವಾಗಬೇಕಾಗಿದೆ.
೪. ಆನೆ ಕಟ್ಟುವ ಕಲ್ಲು: ಪಟ್ಟದ ಚಾವಡಿಯ ತೆಂಕು ಭಾಗದಲ್ಲಿ ಬೀಡಿನರಮನೆ ಇತ್ತು, ಇದರ ಬಳಿಯೂ ಜೈನ ಬಸದಿ ಕೂಡ ಇತ್ತು. ಕೆಲವರ್ಷಗಳ ಹಿಂದಿನತನಕ ಈ ಬಸದಿಯ ಅವಶೇಷ ಕಾಣಿಸುತ್ತಿತ್ತು. ಈಗ ನೆಲಸಮವಾಗಿ ಕುರುಹುಗಳು ಅಳಿಸಿ ಹೋಗಿವೆ, ಸಮೀಪದಲ್ಲಿ ಆನೆಗಳನ್ನು ಕಟ್ಟಿ ಹಾಕುವ ಕಲ್ಲುಗಳು ಇದ್ದವು. ಅಂಥಹ ಒಂದು ಆನೆ ಕಟ್ಟುವ ಕಲ್ಲನ್ನು ಈಗ ಕೂಡ ಕಾಣಬಹುದು.
೫. ಬಂಡಿ ಮಜಲು:  ಹಿಂದೆ ಬೆಳ್ಳಾರೆ ಪಟ್ಟಣವಾಗಿತ್ತು. ಸರಕು ಸಾಗಾಟ ಎತ್ತಿನ ಬಂಡಿಗಳ ತಂಗುದಾಣ ಆಗಿದ್ದ ಪ್ರದೇಶವನ್ನು ಬಂಡಿ ಮಜಲು ಎಂದು ಕರೆಯುತ್ತಿದ್ದರು, ಬಂಡಿ ಮಜಲು ಎಂಬ ಈ ವಿಶಾಲವಾದ ಬಯಲು ಪ್ರದೇಶ ಬೆಳ್ಳಾರೆ ಪೇಟೆಯಿಂದ ತುಸು ದೂರದಲ್ಲಿ ಈಗ ಕೂಡ ಇದೆ.
೬. ದೈವತ್ವವನ್ನು ಪಡೆದ ಬೆಳ್ಳಾರೆಯ ರಾಜಕುಮಾರ-ನೈದಾಲಪಾಂಡಿ ಭೂತ: ಸಂಪಾಜೆಯಿಂದ ಏಳೆಂಟು ಕಿಲೋಮೀಟರ್ ಒಳಭಾಗದ ಕಾಡಿನಲ್ಲಿ ಅರೆಕಲ್ಲು ಎನ್ನುವ ಸ್ಥಳವಿದೆ. ಇಲ್ಲಿ ಒಂದು ಅಯ್ಯಪ್ಪ ಮತ್ತು ಶಿವನ ಗುಡಿಗಳು ಇವೆ. ಇಲ್ಲಿ ಪೂಜಾ ಕಾರ್ಯಗಳನ್ನು ಕೊಡಗಿನ ಗಾಳಿಬೀಡಿನ ಪಾಂಡೀರ ರಾಜ ವಂಶದವರು ಬಂದು ನಡೆಸುತ್ತಾರೆ. ಇಲ್ಲಿ ಏಳು ವರ್ಷಗಳಿಗೊಮ್ಮೆ ನೈದಾಲ ಪಾಂಡಿ ಎಂಬ ಭೂತಕ್ಕೆ ನೇಮ ನೀಡಿ ಆರಾಧನೆ ಸಲ್ಲಿಸುತ್ತಾರೆ.
ಇದರಲ್ಲಿ ಮೊದಲನೆಯ ಪಾತ್ರಿಯಾಗಿ ಪೂಮಲೆ ಕುಡಿಯರು ಎರಡನೆಯ ಪಾತ್ರಿಗಳಾಗಿ ಪಾಂಡಿ ಮನೆಯವರು  ಭಾಗವಹಿಸುತ್ತಾರೆ. ನೈದಾಲಪಾಂಡಿ ಭೂತವನ್ನು ಪೂಮಲೆ ಕುಡಿಯ ಜನಾಂಗದ ಭೂತ ಪಾತ್ರಿಗಳಲ್ಲಿ ಹಿರಿಯರೊಬ್ಬರಿಗೆ ಹೇಳಿ ಕಟ್ಟಿಸುತ್ತಾರೆ. ನೈದಾಲಪಾಂಡಿ ಭೂತ ಕಟ್ಟಿದವರು ತುಸುಕಾಲದಲ್ಲಿಯೇ ಮರಣವನ್ನಪ್ಪುತ್ತಾರೆ ಎಂಬ ನಂಬಿಕೆ ಪ್ರಚಲಿತವಿರುವುದರಿಂದ ವಯಸ್ಸಾದ ವೃದ್ಧರೇ ನೈದಾಲ ಪಾಂಡಿ ಭೂತವನ್ನು ಕಟ್ಟುತ್ತಾರೆ.
ನೈದಾಲಪಾಂಡಿ ಭೂತಕ್ಕೂ ಬೆಳ್ಳಾರೆಗೂ ಅವಿನಾಭಾವ ಸಂಬಂಧವಿದೆ. ಪಾಂಡಿ ಮನೆಯ ಹಿರಿಯರು ಈ ಬಗ್ಗೆ ಮಾಹಿತಿ ನೀಡಿರುತ್ತಾರೆ.  ಬೆಳ್ಳಾರೆಯನ್ನು ಓರ್ವ ತುಂಡರಸ ಆಳಿಕೊಂಡಿದ್ದನು. ಅವನು ಪಾಂಡು ರೋಗಿಯಾಗಿದ್ದನು.  ಅವನ ನಂತರ ಅವನ ಮಗ ಬೆಳ್ಳಾರೆಯನ್ನು ಆಳಿಕೊಂಡಿದ್ದನು. ಇವನನ್ನು ಶತ್ರುಗಳು ಆಕ್ರಮಿಸಿದಾಗ ಬೆಳ್ಳಾರೆಯಿಂದ ತಪ್ಪಿಸಿಕೊಂಡು ಹೋಗಿ, ಪೂಮಲೆ ಕಾಡಿಗೆ ಹೋಗಿ ಪೂಮಲೆ ಕುಡಿಯರ ಮನೆಯೊಂದರಲ್ಲಿ ಆಶ್ರಯ ಪಡೆಯುತ್ತಾನೆ.  ಅಲ್ಲಿಗೆ ಕೊಡಗರಸರ ತಂಗಿ ಬಂದಾಗ ಬೆಳ್ಳಾರೆಯ ರಾಜಕುಮಾರ ಮತ್ತು ಅವಳ ಪರಿಚಯವಾಗಿ ಅದು ಪ್ರೇಮಕ್ಕೆ  ತಿರುಗುತ್ತದೆ. ನಂತರ ಅವರು ಮದುವೆಯಾಗಿ ಕೊಡಗಿನಲ್ಲಿ ಇರುತ್ತಾರೆ. ಇದು ಬೆಳ್ಳಾರೆಯ ರಾಜನ ಶತ್ರುಗಳಿಗೆ ತಿಳಿದು ಕೊಡಗಿಗೆ ಹೋಗಿ ಅವನ ಮೇಲೆ ಆಕ್ರಮಣ ಮಾಡುತ್ತಾರೆ. ಆಗ ಶತ್ರುಗಳ ಎದುರಿನಿಂದಲೇ ತಪ್ಪಿಸಿಕೊಂಡು ಹೋಗಿ ಅರೆಕಲ್ಲಿಗೆ ಬಂದು ಶಿವನಲ್ಲಿ ಐಕ್ಯನಾಗುತ್ತಾನೆ. ನಂತರ ದೈವತ್ವಕ್ಕೇರಿ ನೈದಾಲಪಾಂಡಿ ಎಂಬ ಹೆಸರಿನ ಭೂತವಾಗಿ ಆರಾಧನೆ ಪಡೆಯುತ್ತಾನೆ.
          ನೈದಾಲಪಾಂಡಿ ಭೂತಕ್ಕೆ ಅರಸು ದೈವಕ್ಕೆ ಕಟ್ಟುವಂತೆ ದೊಡ್ಡದಾದ ಮೀಸೆ, ತಲೆಗೆ ಪಗಡಿ ರೂಪದ ಕಿರೀಟದಂತೆ ಇರುವ ಮುಡಿ ಕಟ್ಟುತ್ತಾರೆ. ಬೆಳ್ಳಾರೆಯ ತುಂಡರಸ ಪಾಂಡುರೋಗಿಯಾಗಿದ್ದರಿಂದ ಅವನ ಮಗನನ್ನು ಪಾಂಡಿ ಎಂದು ಕರೆಯುತ್ತಿದ್ದರು. ಈತ ಪೂಮಲೆಯಲ್ಲಿ ಉಳಿದುಕೊಂಡ ಪ್ರದೇಶದ ಹೆಸರು ನೈದಾಲ್ ಎಂದು. ಎರಡು ವಂಶಗಳನ್ನು ನೆಯ್ದ ಅಂದರೆ ಬೆಸೆದ ಕಾರಣ ಆತನನ್ನು ನೈದಾಲಪಾಂಡಿ ಎಂದು ಕರೆಯುತ್ತಾರೆ ಎಂಬ ಐತಿಹ್ಯವೂ ಇದೆ. ನೈದಾಲಿನ ಪಾಂಡಿ ಎಂಬರ್ಥದಲ್ಲಿ ನೈದಾಲಪಾಂಡಿ ಎಂಬ ಹೆಸರು ಬಂದಿದೆ ಎಂದು ನೈದಾಲಪಾಂಡಿಯ ವಂಶದ ಹಿರಿಯರು ಹೇಳುತ್ತಾರೆ. ನೈದಾಲ ಪಾಂಡಿ ಭೂತದ ನೇಮದ ಸಂದರ್ಭದಲ್ಲಿ ಒಂದು ಹಾಡನ್ನು ಹಾಡುತ್ತಾರೆ. ಅದರಲ್ಲಿ ನೈದಾಲಪಾಂಡಿಯನ್ನು ಅಜ್ಜಯ್ಯ ಎಂದೂ, ಕಾಸರಗೋಡು ಕಾಳೆಯ್ಯ ಎಂದೂ ಕರೆದಿದ್ದಾರೆ. ಗಾಳಿಬೀಡಿನಲ್ಲಿರುವ ನೈದಾಲಪಾಂಡಿಯ ವಂಶದ ಹಿರಿಯರು ನೈದಾಲಪಾಂಡಿಯ ಮೊದಲ ಹೆಸರು ಕಾಳೆಯ್ಯ ಎಂದೂ, ಮದುವೆಯಾದ ಮೇಲೆ ಆತ ಲಿಂಗಾಯತ ಧರ್ಮಕ್ಕೆ ಮತಾಂತರ ಮಾಡಿದನೆಂದೂ ಹೇಳಿದ್ದಾರೆ. ನೈದಾಲಪಾಂಡಿಯ ಕಥಾನಕ ಸುಮಾರು ೧೩೦ ರಿಂದ ೧೮೦ ವರ್ಷಗಳ ಹಿಂದೆ ನಡೆದ ಘಟನೆಯಾಗಿದೆ.

ಆಧಾರಸೂಚಿ
೧.         ಕಾನಕುಡೇಲು, ಗಣಪತಿ ಭಟ್ಟ, ಪಂಜ ಸೀಮಾ ದರ್ಶನ.
೨.         ಎನ್.ಎಸ್. ದೇವಿಪ್ರಸಾದ, ಅಮರಸುಳ್ಯದ ಸ್ವಾತಂತ್ರ್ಯ ಹೋರಾಟ.
೩.         ಡಾ|| ಲಕ್ಷ್ಮೀ ಜಿ. ಪ್ರಸಾದ, ತುಳುನಾಡಿನ ಅಪೂರ್ವ ಭೂತಗಳು.





1 comment:

  1. Ikkeri (Keladi) Nayakas ruled Puttur & Amara Sullia Maganes, which included Bellare, while Alupa Dynasty ruled Coastal Karnataka as Vassal Kings under Vijayanagara Empire. After the disintegration of Vijayanagara Empire Both these minor Dynasties became Independent and were striving to enlarge and expand their Rule.
    Ikkeri Sadashiva Nayaka (1530-1566) took complete control of Puttur & Sullia Magnes. Hiriya Venkatappa Nayaka defeated last ruler of Bairarasa of Karkala and other Jain Kings arround 1590 AD.
    There were bloody Religious and Political Conflicts for the control of Temples and cultivable Lands between on the one hand Sheiva Sampradaya, "Pithru Pradhana Santhathi" lead by Ikkeri Nayakas + Shringeri Mutt and on the other hand "Mathru Pradhana Santhathi" of Jain and Vaishnava faiths lead by Alupas - Bunta and Jaina Ballals. Ikkeri Nayaks were keen on preserving their Supply chain for International Trade - Export of Rice, Spices and Import of Horses for their Cavalry and there for exercised their control over this Land of Plenty!! "Astha Ballalthis" were ruling Amara Sullia and Puttur Maganes and eventually these were transferred to Gowdas who were blood related to Ikkeri Nayakas.
    An Inscription of Year 1562 found at Balapa Trishooli Temple near Sullia records the founder of Keladi Nayaka Dynasty Choudappa and Bhadrappa indicating their surname as "Gouda". The inscriptions of the time of KeladiSadashiva Nayaka (1544-1565) also records that "Chouda Goudara Makkalu Sadashiva Nayakru Kukke Subraya Devarige Amrutha Padigagi Imaru Gaddeya Raja Kandaya bakimadi Subhrahamanya Degulakke Dathi Bittide" (Mysore Gazetier No. 347-48). i.e. Sadashiva Nayaka S/o Chouda Gowda Granted Inam Lands for to Lord Subrhamanya of Kukke Subrahamanya for upkeep of Temple.
    Further, In the Year 1700 AD, Ikkeri Somashekara Nayaka, under whose rule fell, Amara Sullia and Puttur Maganes, extending up to Panemangaluru, were gifted to Veeraraju the founder of Haleri Dynasty of Kodagu towards the expenses of Milk & Ghee for the new born child of Veeraraju. Thus Amara Sullia & Puttur Maganes remained part of Greater Kodagu until 1834 AD when Britishers merged them in to Madras Presidency which lead in to Royats Uprising against British.
    For More Details Read my Book "IN PURSUIT OF OUR ROOTS" available through ebay.in. or contact me 9448348440.















    ReplyDelete