Monday, January 21, 2013

ಬಸ್ತಿಕೋಟೆಯ ಜೈನ ಅವಶೇಷಗಳು-ಒಂದು ಅವಲೋಕನ

                                                               ಲಿಂಗರಾಜು
                                                                                               ಇತಿಹಾಸ ಪ್ರಾಧ್ಯಾಪಕರು
                                                                                                 ಸರ್ಕಾರಿ ಮಹಾವಿದ್ಯಾಲಯ
                                                                                                                         ಮಂಡ್ಯ-೫೭೧೪೦೧
ಡ್ಯ ಜಿಲ್ಲೆ ಕರ್ನಾಟಕ ರಾಜ್ಯದ ದಕ್ಷಿಣ ಭಾಗದ ಮಧ್ಯದಲ್ಲಿದೆ. ಮೈಸೂರು ಜಿಲ್ಲೆಗೆ ಸೇರಿದ್ದ ಮಂಡ್ಯ ೧೯೩೯ರ ಜುಲೈ ೧ರಂದು ಸ್ವತಂತ್ರ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿತು. ಜಿಲ್ಲೆಯ ಒಟ್ಟು ವಿಸ್ತೀರ್ಣ ೪೯೬೧ ಚ.ಕಿ.ಮೀ ಸಮುದ್ರ ಮಟ್ಟಕ್ಕಿಂತ ೭೬೨ರಿಂದ ೯೧೪ ಮೀಟರ್ ಎತ್ತರದಲ್ಲಿದೆ. ಜಿಲ್ಲೆಯಲ್ಲಿ ಒಟ್ಟು ಏಳು ತಾಲ್ಲೂಕುಗಳಿವೆ. ಪ್ರಾಚೀನ ಕಾಲದಿಂದಲೂ ಮಂಡ್ಯ ಜಿಲ್ಲೆಯ ನಾನಾ ಕಡೆಗಳಲ್ಲಿ ಜೈನ ಧರ್ಮಕ್ಕೆ ಸಂಬಂಧಿಸಿದ ಬಸದಿಗಳು, ಗೊಮ್ಮಟನ ವಿಗ್ರಹಗಳು, ಸಾಕಷ್ಟು ಸಂಖ್ಯೆಯಲ್ಲಿ ಕಂಡುಬರುತ್ತವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ. ನಾಗಮಂಗಲದ ಕಂಬದಹಳ್ಳಿಯ ಪಂಚಕೂಟ ಬಸದಿ, ಬೆಳ್ಳೂರಿನ ವಿಮಲ ತೀರ್ಥಂಕರ ಬಸದಿ, ಕೆ.ಆರ್. ಪೇಟೆಯ ಹೊಸಹೊಳಲಿನ ಹಾಗೂ ಮುರುಕನಹಳ್ಳಿಯ ಪಾರ್ಶ್ವನಾಥ ಬಸದಿಗಳು, ಬಸ್ತಿಹೊಸಕೋಟೆಯ ಬಸದಿಗಳು ಮತ್ತು ಗೊಮ್ಮಟನ ವಿಗ್ರಹ, ಅರೆತಿಪ್ಪೂರಿನ ಗೊಮ್ಮಟನ ವಿಗ್ರಹ ಪ್ರಮುಖವಾದವು. ಇವುಗಳಲ್ಲಿ ಕೆ.ಆರ್. ಪೇಟೆ ತಾಲ್ಲೂಕಿನ ಬಸ್ತಿಹೊಸಕೋಟೆಯ ಜೈನ ಅವಶೇಷಗಳ ಇಂದಿನ ಸ್ಥಿತಿಗತಿಯ ಬಗ್ಗೆ ಸಂಬಂಧ ಪಟ್ಟ ಇಲಾಖೆಯ, ಅಧಿಕಾರಿಗಳ ಹಾಗೂ ಆಸಕ್ತ ಇತಿಹಾಸ ಸಂಶೋಧಕರ ಗಮನ ಸೆಳೆಯಲು ಪ್ರಯತ್ನಿಸಿದ್ದೇನೆ.
ಬಸ್ತಿಹೊಸಕೋಟೆ: ಬಸ್ತಿ ಹೊಸಕೋಟೆ ಮಂಡ್ಯ ಜಿಲ್ಲೆಯ ತಾಲ್ಲೂಕು ಕೇಂದ್ರವಾದ ಕೆ.ಆರ್. ಪೇಟೆಯಿಂದ ಸು.೨೮ ಕಿ.ಮೀ. ದಕ್ಷಿಣದಲ್ಲಿ ಕೆ.ಆರ್.ಎಸ್. ಹಿನ್ನೀರಿಗೆ ಹೊಂದಿಕೊಂಡಂತಿದೆ. ಮಾವಿನಕೆರೆಗೆ ಎರಡು ಕಿ.ಮೀ. ದೂರದಲ್ಲಿ ಕಣಿವೆ ಪ್ರದೇಶದಿಂದ ಕೂಡಿದೆ. ಬಸ್ತಿಯಲ್ಲಿ ಹಿಂದೆ ಅಧಿಕ ಸಂಖೈಯಲ್ಲಿ ಜೈನರಿದ್ದರು ಆದರೆ ಇಂದಿನ  ಬಸ್ತಿಯಲ್ಲಿ ಕುರುಬ ಜನಾಂಗದವರು ಅಧಿಕ ಸಂಖೈಯಲ್ಲಿರುವುದರಿಂದ ಕುರುಬರ ಬಸ್ತಿಯೆಂದು ಕರೆಯುತ್ತಿದ್ದಾರೆ. ಇಂದಿನ ಬಸ್ತಿ ಹೊಸಕೋಟೆಯಲ್ಲಿ ಹರಿಜನರು ಅಧಿಕ ಸಂಖೈಯಲ್ಲಿರುವುದರಿಂದ ಎ.ಕೆ. ಬಸ್ತಿ ಎಂದು ಕರೆಯುತ್ತಿದ್ದಾರೆ. ಹರಿಜನರು ತಮಗೆ ಸಮೀಪದ ಬಸ್ತಿಯನ್ನು ಒಕ್ಕಲಗೇರಿ ಎಂದೇ ಕರೆದುಕೊಳ್ಳುತ್ತಾರೆ.೧ ಈ ಎರಡು ಗ್ರಾಮಗಳಿಗೆ ಹೊಂದಿಕೊಂಡಂತೆ ಹಿಂದೆ ಬಸ್ತಿ ಅಥವ ಬಸ್ತಿಹೊಸಕೋಟೆ ಇದ್ದಿತ್ತೆಂದು ಹೇಳಬಹುದು. ಇಂದಿನ ಕುರುಬರ ಬಸ್ತಿ ಹಾಗೂ ಎ.ಕೆ. ಬಸ್ತಿ ಎಂಬ ಗ್ರಾಮಗಳ ಬಳಿಯ ಕೆ.ಆರ್.ಎಸ್. ಹಿನ್ನೀರಿನ ಗುಡ್ಡದಲ್ಲಿ ಗಂಗರಸರ ಹಾಗೂ ಹೊಯ್ಸಳರ ಕಾಲಗಳ ಗೊಮ್ಮಟನ ವಿಗ್ರಹ, ತೀರ್ಥಂಕರರ ಮೂರ್ತಿಶಿಲ್ಪಗಳೂ, ಜೈನ ಬಸದಿಯ ಅವಶೇಷಗಳು, ಹಾಗೂ ಸುಂದರ ಕೆತ್ತನೆಯಿಂದ ಕೂಡಿರುವ ಜೈನ ಅವಶೇಷಗಳ ಕುರುಹುಗಳನ್ನು ಕಾಣಬಹುದು. ಇದು (ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ) ಬಸ್ತಿಹೊಸಕೋಟೆಯು ಹಿಂದೆ ಜೈನ ಧರ್ಮಿಯರ ಪ್ರಮುಖ ಕೇಂದ್ರವಾಗಿತ್ತೆಂದು ಸೂಚಿಸುತ್ತದೆ. ಕಣ್ಣಾಂಬಾಡಿ (ಕನ್ನಾಂಬಾಡಿ) ಅಣೆಕಟ್ಟೆಯ ನಿರ್ಮಾಣದಿಂದ ಹಿನ್ನೀರಿನಲ್ಲಿ ಮುಳುಗಡೆಯಾಗುತ್ತಿದ್ದ ಗೊಮ್ಮಟನ ಪ್ರತಿಮೆಯನ್ನು ಇತರೆ ತೀರ್ಥಂಕರರ ಶಿಲ್ಪಾಕೃತಿಗಳನ್ನು, ಬಸದಿಯ ಸುಂದರ ಕೆತ್ತನೆಯ ಅವಶೇಷಗಳನ್ನು ಕೆ.ಆರ್.ಎಸ್. ಹಿನ್ನೀರಿನಿಂದ ರಕ್ಷಿಸಲು, ಹಿನ್ನೀರಿನ ಗುಡ್ಡಕ್ಕೆ ತಂದು ಸಂರಕ್ಷಿಸಲಾಗಿದೆ ಎಂಬುದು ಕೆಲವರ ಅಭಿಪ್ರಾಯವಾಗಿದೆ. ಈ ಹಿನ್ನೆಲೆಯಲ್ಲಿ ಬಸ್ತಿ ಹೊಸಕೋಟೆಯ ಜೈನ ಅವಶೇಷಗಳಿಗೆ ಸಂಬಂಧಿಸಿದಂತೆ ನನ್ನ ಸಂಶೋಧನಾ ಲೇಖನವನ್ನು ಪುನರ್‌ರಚಿಸಲು ಪ್ರಯತ್ನಿಸಿದ್ದೇನೆ. ಡಾ. ಪಿ.ಎನ್. ನರಸಿಂಹಮೂರ್ತಿ ಅವರ ಜೊತೆ ಬಸ್ತಿಹೊಸಕೋಟೆಗೆ ಕ್ಷೇತ್ರಕಾರ್ಯ ಕೈಗೊಂಡಾಗ ಇಂದು ಅಲ್ಲಿ ಕಂಡುಬಂದ ಜೈನ ಬಸದಿಗಳು, ಗೊಮ್ಮಟನ ವಿಗ್ರಹ ಹಾಗೂ ಇತರ ಅವಶೇಷಗಳು ನಿರ್ಮಾಣಗೊಂಡಿರುವ ಶೈಲಿಯ ಹಿನ್ನೆಲೆಯಲ್ಲಿ, ಹೊಯ್ಸಳರ ಕಾಲದ ಎರಡು ಶಾಸನಗಳು, ಹಾಗೂ ಸ್ಥಳಿಯ ಜನತೆಯ ಮೌಖಿಕ ಆಧಾರಗಳನ್ನು ಬಳಸಿಕೊಂಡು, ಬಸ್ತಿ ಹೊಸಕೋಟೆಯ ಜೈನ ಬಸದಿಗಳು, ಗೊಮ್ಮಟನ ವಿಗ್ರಹ ಹಾಗೂ ಇತರ ಅವಶೇಷಗಳು ಗಂಗರ ಕಾಲಕ್ಕೆ ಸಂಬಂಧಿಸಿದ್ದಾಗಿವೆ ಅಥವಾ ಹೊಯ್ಸಳರ ಕಾಲಕ್ಕೆ ಸಂಬಂಧಿಸಿದ್ದಾಗಿವೆ.
ಬಸ್ತಿಯ ಗೊಮ್ಮಟನ ವಿಗ್ರಹ: ಗೊಮ್ಮಟ ಮೂರ್ತಿಯಿರುವುದು ಮುಳುಗಡೆಯಾಗಿರುವ ಬಸ್ತಿಯ ಕೆ.ಆರ್.ಎಸ್. ಹಿನ್ನೀರಿನ ಗುಡ್ಡದಲ್ಲಿದೆ. ಬಸ್ತಿಯ ಅವಶೇಷಗಳು ಹಾಗೂ ಗೊಮ್ಮಟಮೂರ್ತಿ ಮಾತ್ರ ಹಳೆಯ ಕುರುಹಾಗಿ ಇಂದಿಗೂ ಇವೆ.
ಜೈನ ಸಂಪ್ರದಾಯದಂತೆ ಗೊಮ್ಮಟನ ವಿಗ್ರಹವನ್ನು ಕಾಯೋತ್ಸರ್ಗ ಶೈಲಿಯಲ್ಲಿ (ಸ್ಥಾನಿಕ\ಖಡ್ಗಾಸನ) ನಿರ್ಮಿಸಲಾಗಿದೆ. ಇದೇ ಶೈಲಿಯಲ್ಲಿ ಬಸ್ತಿಯ ಗೊಮ್ಮಟ ಮೂರ್ತಿಯಿದೆ. ಗೊಮ್ಮಟ ಮೂರ್ತಿಯ ಎತ್ತರಕ್ಕೂ ಕಮಾನಿನಾಕಾರದ ಗೂಡಿನಂತಹ ಗುಡಿಯನ್ನು ರಕ್ಷಣೆಗೆ ಕಟ್ಟಲಾಗಿದೆ. ಈ ಗೂಡಿನೊಳಗೆ ಸು.೧೮ ಅಡಿ ಎತ್ತರದ ಸುಂದರವಾದ ಗೊಮ್ಮಟನ ವಿಗ್ರಹ ಪ್ರಮುಖವಾದುದ್ದು. ಇಂದಿಗೂ ಗೊಮ್ಮಟಮೂರ್ತಿ ಸುಸ್ಥಿತಿಯಲ್ಲಿದೆ. ಗೊಮ್ಮಟಮೂರ್ತಿಯ ಮುಖಮುದ್ರೆಯಲ್ಲಿ ಯೋಗಿಯ ಲಕ್ಷಣಗಳಿವೆ. ತಲೆಗೂದಲು ಗುಂಗುರು ಕೂದಲಿನಿಂದ ಕೂಡಿದೆ. ಪಾದದಿಂದ ಮಂಡಿಯವರೆಗೆ ಲತಾಬಳ್ಳಿಗಳು ಹಬ್ಬಿರುವಂತೆ ಸುಂದರವಾಗಿ ಕೆತ್ತಿ ಅಲಂಕರಿಸಲಾಗಿದೆ. ಆದರೆ ಸೂಕ್ಷ್ಮತೆಯಲ್ಲಿ ಶ್ರವಣಬೆಳ್ಗೊಳದ ಬಾಹುಬಲಿ ಶಿಲ್ಪದಲ್ಲಿರುವ ಪ್ರಶಾಂತ ಭಾವವನ್ನಾಗಲೀ, ಪಕ್ಕದ ಹುತ್ತಗಳ ಮೇಲಿನಿಂದ ಬಳ್ಳಿಗಳು ಹಬ್ಬಿ ತೋಳಿನವರೆಗೆ ಹಬ್ಬಿರುವದನ್ನಾಗಲೀ, ಹುತ್ತದಿಂದ ಕುಕ್ಕಟ ಸರ್ಪಗಳು ಹೊರ ಬಂದಿರುವಂತಾಗಲೀ, ವಿಶಾಲವಾದ ಎದೆ, ಬಾಲಮುಗ್ಧ ನಗೆ, ಸಣ್ಣ ನಡುವನ್ನು ಹೊಂದಿರುವ ಪೂರ್ಣ ಶಿಲ್ಪವಾಗಿ ಈ ಗೊಮ್ಮಟ ಮೂರ್ತಿಯನ್ನು ಶಿಲ್ಪಿಗಳು ಕೆತ್ತಿಲ್ಲ. ಆದ್ದರಿಂದ ಶ್ರವಣಬೆಳ್ಗೊಳದ ಬಾಹುಬಲಿ ಶಿಲ್ಪಕ್ಕಿಂತ ಮೊದಲೇ ಈ ಮೂರ್ತಿ ಗಂಗರಸರ ಕಾಲದಲ್ಲಿ ನಿರ್ಮಾಣವಾಗಿದೆಯೆಂದು ಡಾ. ಪಿ.ಎನ್. ನರಸಿಂಹಮೂರ್ತಿ ಅಭಿಪ್ರಾಯಪಡುತ್ತಾರೆ. ಆದರೆ ಅನಂತರಾಮು ಕೆ. ರವರು ತಮ್ಮ ಸಕ್ಕರೆಸೀಮೆ ಕೃತಿಯಲ್ಲಿ ವಿಷ್ಣುವರ್ಧನನ ಮಂತ್ರಿ ಪುಣಿಸಮಯ್ಯ ಬಸದಿಯೊಂದನ್ನು ನಿರ್ಮಿಸಿ, ಈ ಗೊಮ್ಮಟಮೂರ್ತಿಯನ್ನು ನಿರ್ಮಿಸಿರಬಹುದೆಂದು ತಿಳಿದುಬರುತ್ತದೆ ಎಂದು ಉಲ್ಲೇಖಿಸಿದ್ದಾರೆ. ಗೊಮ್ಮಟನ ರಕ್ಷಣೆಗೆ ಗೊಮ್ಮಟನ ಎತ್ತರಕ್ಕೂ ಕಮಾನಿನಾಕಾರದ ಗೂಡಿನಂತಹ ಗುಡಿಯನ್ನು ಇತ್ತೀಚಿಗೆ ಜೈನ ಭಕ್ತರು ನಿರ್ಮಿಸಿರಬಹುದು.
ಬಸ್ತಿಯ ಬಸದಿಗಳು: ಕರ್ನಾಟಕದಲ್ಲಿ ಬಸದಿಯ ಪ್ರಯೋಗ ಮೊದಲು ಕ್ರಿ.ಶ.೮ನೇ ಶತಮಾನದ ಶ್ರವಣಬೆಳ್ಗೊಳದ ಶಾಸನದಲ್ಲಿ ದಾಖಲಿಸಿದೆ. ನಂತರ ಕ್ರಿ.ಶ.೮-೯ನೇ ಶತಮಾನದ ಸಂಪಿಗೆ ಮರದ ಶಾಸನದಲ್ಲಿ ಬಸದಿ ಎಂಬ ಶಬ್ದವಿದೆ.     
ಬಸ್ತಿಹೊಸಕೋಟೆಯಲ್ಲಿ ಇರುವ ಜೈನ ಬಸದಿಗಳ ಸ್ಥಿತಿಗತಿಗಳನ್ನು ಕೆಳಗಿನಂತೆ ಅವಲೋಕಿಸಬಹುದು.
ಗೊಮ್ಮಟನ ಮೂರ್ತಿಯ ಹಿಂಬಾಗ ನಾಲ್ಕು ಸ್ತಂಭಗಳಿಂದ ಕೂಡಿರುವ ಬಸದಿ ಶಿಥಿಲಾವಸ್ಥೆಯಲ್ಲಿರುವುದು ಕಂಡುಬರುತ್ತದೆ. ಈ ಬಸದಿಯ ಗೋಪುರದ ಸ್ಥೂಪಿ ಭಾಗ ಕೆಳಗೆಡೆ ಬಿದ್ದಿದೆ. ದಕ್ಷಿಣ ಭಾಗದ ಸ್ತಂಭಗಳು ತರಂಗ ಬೋಧಿಗೆಯಲ್ಲಿದ್ದರೆ ಉತ್ತರ ಭಾಗದ ಸ್ತಂಭಗಳು ಸಾಮಾನ್ಯ ಶೈಲಿಯಲ್ಲಿವೆ. ಮೇಲ್ಭಾಗದ ತೊಲೆಯ ಛಾವಣಿಯಲ್ಲಿ ವಿವಿಧ ಮಾದರಿಯ ಮೃದಂಗ, ತಾಳ, ಕೊಳಲು, ಶಂಖಗಳನ್ನು ನುಡಿಸುತ್ತಿರುವ ವಿವಿಧ ನೃತ್ಯ ಭಂಗಿಯಲ್ಲಿರುವ ಶಿಲ್ಪಾಕೃತಿಗಳ ಸಾಲು ನೋಡುಗರನ್ನು ಆಕರ್ಷಿಸುತ್ತವೆ.
ಗೊಮ್ಮಟನ ಮೂರ್ತಿಯ ಉತ್ತರ ಭಾಗದಲ್ಲಿ ಪೂರ್ವಕ್ಕೆ ಪ್ರವೇಶದ್ವಾರವಿರುವ ಆರು ಸ್ತಂಭಗಳಿಂದ ಕೂಡಿರುವ ಬಸದಿಯು ಸಹ ಶಿಥಿಲಾವಸ್ಥೆಯಲ್ಲಿರುವುದು ಕಂಡುಬರುತ್ತದೆ.
ಈ ಬಸದಿಯ ತೊಲೆಯಲ್ಲಿರುವ ವೈವಿಧ್ಯಮಯವಾದ ಶಿಲ್ಪಾಕೃತಿಗಳು ನೋಡುಗರನ್ನು ಆಕರ್ಷಿಸುತ್ತವೆ.
ಗೊಮ್ಮಟಮೂರ್ತಿಯ ಉತ್ತರ ಭಾಗದ ಕೆ.ಆರ್.ಎಸ್. ಹಿನ್ನೀರಿನಲ್ಲಿ ಆರು ಸ್ತಂಭಗಳಿಂದ ಕೂಡಿರುವ ಉತ್ತರಕ್ಕೆ ಪ್ರವೇಶದ್ವಾರವಿರುವ ಬಸದಿಯು ಸಹ ಶಿಥಿಲಾವಸ್ಥೆಯಲ್ಲಿದೆ.
ಈ ಬಸದಿಯು ಕೆ.ಆರ್.ಎಸ್.ನ ಹಿನ್ನೀರಿನಿಂದ ಆವೃತವಾಗಿದ್ದರಿಂದ ಬಸದಿಯ ಬಳಿ ಹೋಗಲು ಸಾಧ್ಯವಾಗಲಿಲ್ಲ. ಇದು ಸಹ ಸಾಮಾನ್ಯ ಶೈಲಿಯಲ್ಲಿ ನಿರ್ಮಾಣವಾಗಿದೆ. ಬಹುಶಃ ಈ ಬಸದಿ ಹೊಯ್ಸಳರ ದಂಡನಾಯಕ ಪುಣಿಸಮಯ್ಯನ ಕಾಲದಲ್ಲಿ ನಿರ್ಮಾಣವಾಗಿರಬಹುದು.
ಮತ್ತೆ ಕೆಲವು ಬಸದಿಗಳಿರುವುದಕ್ಕೆ ಸಂಬಂಧಿಸಿದ ಕುರುಹುಗಳು ಕೆ.ಆರ್.ಎಸ್. ಹಿನ್ನೀರಿನ ದಡದಲ್ಲಿ ಬಿದ್ದಿರುವ ಮೇಲ್ಛಾವಣಿಯ ಚಪ್ಪಡಿಗಳ ಕುರುಹುಗಳಿಂದ, ಅಲ್ಲಲ್ಲಿ ಬಿದ್ದಿರುವ ಸ್ತಂಭಗಳು, ಹಾಗೂ ತರಂಗ(ಸ್ತಂಭ) ಬೋದಿಗೆಗಳಿಂದ ತಿಳಿದುಬರುತ್ತದೆ. ಇಲ್ಲಿನ ಬಸದಿಗಳ ಅವಶೇಷಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಸಂಶೋಧನೆಯಾಗಬೇಕಾಗಿದೆ.
ಒಟ್ಟಾರೆ ಈ ಬಸದಿಗಳ ನಿರ್ಮಾಣ ಶೈಲಿ, ಸ್ತಂಭಗಳು, ತರಂಗ(ಸ್ತಂಭ) ಬೋಧಿಗೆಗಳು, ಸ್ಥೂಪಿಗಳ ನಿರ್ಮಾಣ ಶೈಲಿಯನ್ನು ನೋಡಿದರೆ ಇವು ಗಂಗರ ಕಾಲದಲ್ಲಿ ನಿರ್ಮಾಣವಾಗಿವೆಯೆಂದು ಡಾ. ಪಿ.ಎನ್. ನರಸಿಂಹಮೂರ್ತಿರವರು ಅಭಿಪ್ರಾಯಪಡುತ್ತಾರೆ. ಆದರೆ ಕೆ.ಆರ್.ಪೇಟೆ ತಾಲ್ಲೂಕಿನ ಬಸ್ತಿ ಎಂಬ ಗ್ರಾಮದ ಹೊಯ್ಸಳರ ಕಾಲದ ಎರಡು ಶಾಸನಗಳು ಬಸ್ತಿಹೊಸಕೋಟೆಯ ಬಸದಿಯ ಬಗ್ಗೆ ಮಾಹಿತಿ ನೀಡುತ್ತವೆ. ಈ ಶಾಸನಗಳ ಹಿನ್ನೆಲೆಯಲ್ಲಿ ನೋಡಿದಾಗ ಕೆಲವು ಬಸದಿಗಳು ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿರುವುದಕ್ಕೆ ನಿದರ್ಶನಗಳಾಗಿವೆ. ಕೆ.ಆರ್. ಪೇಟೆ ತಾಲ್ಲೂಕಿನ ಬಸ್ತಿಯ ೧೦೭ನೇ ಶಾಸನ ಬಸದಿಯ ಉತ್ತರ ದಿಕ್ಕಿನಲ್ಲಿರುವ ಪಾಳು ಮಂಟಪದ ಪೂರ್ವ ಬಾಗಿಲ ತೊಲೆಕಲ್ಲಿನಲ್ಲಿರುವ ಸ್ವಸ್ತಿ ಶ್ರೀ ಮನ್ಮಹಾಮಂಡಲೇಶ್ವರ ವಿಷ್ಣುವರ್ಧನ ಹೊಯ್ಸಳ ದೇವರು......ತತ್ಪಾದ ಪದ್ಮೋಪಜೀವಿ ಶ್ರೀ ಮನ್ಮಹಾ ಪ್ರಧಾನಂ ದಣ್ಣನಾಯಕ ಪುಣಿಸಮಯ್ಯ ಬಸದಿಯೊಂದನ್ನು ನಿರ್ಮಿಸಿ ಮೊದೂರು ನಾಡಿನ ಮಾಣಿಕ್ಯದೊಡಲೂರು, ಮತ್ತು ಮಾವಿನ ಕೆರೆಗಳನ್ನು ದಾನ ಬಿಟ್ಟ ವಿಷಯವನ್ನು ತಿಳಿಸುತ್ತದೆ. ಬಹುಶಃ ಕೆ.ಆರ್.ಎಸ್.ನ ಹಿನ್ನೀರಿನಿಂದ ಆವೃತವಾಗಿರುವ ಬಸದಿಯು ಈತನನಿಂದ ನಿರ್ಮಿಸಲ್ಪಟ್ಟ ಬಸದಿಯಾಗಿರಬಹುದು.
ಗುರುವಿನ ಅಣತಿಯಂತೆ ಪುಣಿಸಮಯ್ಯನು ಬಸ್ತಿ ಹೊಸಕೋಟೆಯಲ್ಲಿ ವಿಷ್ಣುವರ್ಧನ ಹೊಯ್ಸಳ ಜಿನಾಲಯದ ಮೂಲಸ್ಥಾನ ಬಸದಿಯನ್ನು (ಮತ್ತೊಂದು ಚಾಮರಾಜನಗರದಲ್ಲಿನ ಪಾರ್ಶ್ವನಾಥ ಬಸದಿ) ಅಲ್ಲಿ ಅವನ ಪತ್ನಿ ದಂಡನಾಯಕಿತ್ತಿ ಜಕ್ಕಿಯಬ್ಬೆ ಒಂದು ಶಿಲಾ ಬಸದಿಯನ್ನು ನಿರ್ಮಿಸಿದಳು.
ಕೆ.ಆರ್. ಪೇಟೆ ತಾಲ್ಲೋಕಿನ ಬಸ್ತಿಯ ೧೦೬ನೇ ಶಾಸನ ಜಿನದೇವರ ಬಸದಿಯ ಮುಂದಿರುವ ಮಾನಸ್ತಂಭದ ಮೇಲಿರುವ ಶಾಸನದ ವಿವರ ೧ನೇ ನರಸಿಂಹನ (ವಿಷ್ಣುವರ್ಧನ) ಕಾಲಕ್ಕೆ ಸಂಬಂಧಿಸಿದ ಕ್ರಿ.ಶ.೧೧೬೫ರ ಶಾಸನ ಶ್ರೀಮನ್ಮಹಾಪ್ರಧಾನಂ ಹೆರ್ಗಡೆ ಶಿವರಾಜನ ನಂಬಿಕಸ್ತ ಅಧಿಕಾರಿ ಸೋಮಯ್ಯನು ಮಾಣಿಕ್ಯವೊಳಲಿನ ಹೊಯ್ಸಳ ಜಿನಾಲಯಕ್ಕೆ ಪಾರ್ಥಿವ ಸಂವತ್ಸರದ ಆಷಾಡ ಶುದ್ಧ ಪಾಡಿವ ಆದಿವಾರದಂದು ಮಾಣಿಕ್ಯವೊಳಲಿನಲ್ಲಿ ಗದ್ದೆ ಹಾಗೂ ಮಗ್ಗದೆರೆಗಳನ್ನು ದಾನ ಬಿಟ್ಟ ವಿಷಯವನ್ನು ತಿಳಿಸುತ್ತದೆ..೭ ಹೀಗೆ ಈ ಶಾಸನಗಳಿಂದ ದಿನನಿತ್ಯದ ಪೂಜೆಗಾಗಿ ಪುಣಿಸಮಯ್ಯ ಹಾಗೂ ಸೋಮಯ್ಯ ಬಸದಿಹಳ್ಳಿ, ಮಾಣಿಕ್ಯದೊಡಲೂರು, ಮಾವಿನಕೆರೆ ಗ್ರಾಮಗಳನ್ನು ದತ್ತಿ ಬಿಟ್ಟಿರುವುದನ್ನೂ, ಮತ್ತು ಸೋಮಯ್ಯನು ಈ ಬಸದಿಗಳ ನಿರ್ವಹಣೆಗೆ ಧನಸಹಾಯ ಮಾಡಿರುವುದನ್ನು ತಿಳಿಸುತ್ತವೆ. ಬಹುಶಃ ಈ ಶಾಸನದಲ್ಲಿ ಉಲ್ಲೇಖಿಸಿರುವ ಮಾನಸ್ತಂಭ ಕೆ.ಆರ್.ಎಸ್. ಹಿನ್ನೀರಿನಲ್ಲಿ ಮುಳುಗಡೆಯಾಗಿರಬಹುದು.
ಮೇಲಿನ ಶಾಸನಗಳನ್ನು ಅವಲೋಕಿಸಿದಾಗ ಕ್ರಿ.ಶ.೧೨ನೇ ಶತಮಾನದಲ್ಲಿ ಬಸ್ತಿಹೊಸಕೋಟೆಗೆ ಹಿಂದೆ ಮಾಣಿಕ್ಯದೊಡಲೂರು, ಮಾಣಿಕ್ಯವೊಳಲು ಎಂಬ ಹೆಸರುಗಳಿಂದ ಕರೆಯುತ್ತಿದ್ದರೆಂದು ತಿಳಿದುಬರುತ್ತದೆ.
ಬಸ್ತಿಯ ತೀರ್ಥಂಕರರ ಶಿಲ್ಪಾಕೃತಿಗಳು: ಜೈನ ಭಕ್ತಾದಿಗಳು ಮೂಲ ಗೊಮ್ಮಟನ ಮೂರ್ತಿಯ ಎರಡುಬದಿಯಲ್ಲಿ ಇಟ್ಟಿರುವ ತೀರ್ಥಂಕರರ ಸುಂದರವಾದ ಶಿಲ್ಪಾಕೃತಿಗಳು ಗಮನ ಸೆಳೆದವು. ಇವುಗಳಲ್ಲಿ ಕೆಲವು ಗಂಗರ ಕಾಲಕ್ಕೆ ಸಂಬಂಧಿಸದ್ದಿರುಬಹುದು. ಒಂದು ಸುಂದರವಾದ ತೀರ್ಥಂಕರನ ಶಿಲ್ಪಾಕೃತಿಯ ತಳಭಾಗದಲ್ಲಿ ಸಿಂಹದ ಚಿಹ್ನೆಯಿರುವುದರಿಂದ ಇದು ಮಹಾವೀರನ ಶಿಲ್ಪಕೃತಿಯೆಂದು ತಿಳಿದುಬರುತ್ತದೆ.
ಜೈನ ಧರ್ಮದಲ್ಲಿ ಯಕ್ಷ-ಯಕ್ಷಿಣಿಯರ ಆರಾಧನೆ ರೂಢಿಯಲ್ಲಿತ್ತೆಂಬುದನ್ನು ಮಹಾವೀರನ ಮೂರ್ತಿ ಶಿಲ್ಪದಲ್ಲಿರುವ ಸುಂದರವಾದ ಕೆತ್ತನೆಯಿಂದ ಕೂಡಿರುವ ಯಕ್ಷರ ಶಿಲ್ಪಾಕೃತಿಗಳಿಂದ ತಿಳಿದುಕೊಳ್ಳಬಹುದು. ತೀರ್ಥಂಕರರಿಗೆ ಸಲ್ಲಬೇಕಾದ ಪೂಜೆಯ ಜೊತೆ ಅವನ ಪಕ್ಕದಲ್ಲಿರುತ್ತಿದ್ದ ಯಕ್ಷ-ಯಕ್ಷಿಣಿಯರಿಗೂ ಪೂಜೆ ಸಲ್ಲಿಸಲಾಗುತ್ತಿತ್ತು. ಇದನ್ನೇ ಡಾ|| ದೇಸಾಯಿರವರು ಯಕ್ಷೀ ಆರಾಧನಾ ಎಂದು ಕರೆದಿದ್ದಾರೆ.೧೦ ಇದಲ್ಲದೆ ನಾಲ್ಕು ಜೈನ ತೀರ್ಥಂಕರರ ಶಿಲ್ಪಕೃತಿಗಳು ಕಂಡುಬರುತ್ತವೆ. ಇವುಗಳಲ್ಲಿ ಒಂದು ತೀರ್ಥಂಕರರ ಶಿಲ್ಪಾಕೃತಿಯ ಶಿರದ ಭಾಗ ನಾಶವಾಗಿದ್ದರೆ. ಕಾಯೋತ್ಸರ್ಗ ಹಾಗೂ ಪದ್ಮಾಸನ ಶೈಲಿಯ ತೀರ್ಥಂಕರರ ಶಿಲ್ಪಗಳು ಮುಕ್ಕಾಗಿರುವುದನ್ನು ಕಾಣಬಹುದು.
ಆದರೆ ಈ ತೀರ್ಥಂಕರರ ಶಿಲ್ಪಕೃತಿಗಳು ಯಾವ ತೀರ್ಥಂಕರರಿಗೆ ಸಂಬಂಧಿಸಿದ್ದವು ಎಂಬುದನ್ನು ತಿಳಿಯಲು ಈ ತೀರ್ಥಂಕರರ ತಳಭಾಗದಲ್ಲಿ ಯಾವುದೇ ಚಿಹ್ನೆ ಕಂಡುಬರುವುದಿಲ್ಲ. ಆದರೂ ಈ ಶಿಲ್ಪಾಕೃತಿಗಳನ್ನು ಆದಿನಾಥ, ಶಾಂತಿನಾಥ, ನೇಮಿನಾಥ ತೀರ್ಥಂಕರರಿಗೆ ಸಂಬಂಧಿಸಿರಬಹುದು. ಏಕೆಂದರೆ ೨೪ ಮಂದಿ ತೀರ್ಥಂಕರರ ಶಿಲ್ಪ ವಿಶೇಷತೆಯ ಲಕ್ಷಣಗಳಲ್ಲಿ ವ್ಯತ್ಯಾಸ ಕಂಡುಬರದೆ ಒಂದೇ ತೆರನಾಗಿ ಕಂಡುಬರುವುದರಿಂದ ತೀರ್ಥಂಕರರನ್ನು ಗುರ್ತಿಸುವಾಗ ಪೀಠಭಾಗದಲ್ಲಿರುವ ಲಾಂಛನದಿಂದ ಗುರ್ತಿಸಬೇಕಾಗುತ್ತದೆ. ಅಲ್ಲದೆ ಜೈನ ಪರಂಪರೆಯ ೨೪ ಮಂದಿ ತೀರ್ಥಂಕರರಲ್ಲಿ ೨೧ ಮಂದಿ ತೀರ್ಥಂಕರರು ಕಾಯೋತ್ಸರ್ಗ ಭಂಗಿಯಲ್ಲಿ (ಸ್ಥಾನಿಕ\ಖಡ್ಗಾಸನ) ನಿರ್ಮಾಣವಾಗಿದ್ದರೆ ಉಳಿದ ಮೂವರು ತೀರ್ಥಂಕರರಾದ ಆದಿನಾಥ, ನೇಮಿನಾಥ, ಮಹಾವೀರ ತೀರ್ಥಂಕರರು ಪದ್ಮಾಸನ ಮಾದರಿಯಲ್ಲಿ ಧ್ಯಾನಸಕ್ತರಾಗಿರುವಂತೆ ನಿರ್ಮಿಸಿರುವುದರಿಂದ ಮೇಲಿನಂತೆ ವಿಶ್ಲೇಷಿಸಬಹುದು.೧೧ ಕ್ರಿ.ಶ.೧೧೪೭ರಲ್ಲಿ ಹೊಯ್ಸಳ ದೊರೆ ವಿಷ್ಣುವರ್ಧನನ ಮಹಾಪ್ರಧಾನ ದಂಡನಾಯಕ ಪುಣಿಸಮಯ್ಯನು ಜೈನ ತೀರ್ಥಂಕರರಾದ ಆದಿನಾಥ, ಶಾಂತಿನಾಥ, ನೇಮಿನಾಥ ಹಾಗೂ ಮಹಾವೀರರ ಸುಂದರವಾದ ಶಿಲ್ಪಾಕೃತಿಗಳನ್ನು ಬಳಪದಕಲ್ಲಿನಿಂದ ನಿರ್ಮಿಸಿರುವನೆಂದು ಮೂಲ ಗೊಮ್ಮಟನ ಮೂರ್ತಿಯ ಒಳಭಾಗದಲ್ಲಿ ಶ್ರೀಮಹಾವೀರ ಸಂಘ, ಬೆಂಗಳೂರುರವರು ಹಾಕಿಸಿರುವ ಫಲಕದಿಂದ ತಿಳಿದು ಬರುತ್ತದೆ.
ಭಾರಿ ಗಾತ್ರದ ಯಕ್ಷ-ಯಕ್ಷಿಣಿಯರ ಸುಂದರವಾದ ಶಿಲ್ಪಾಕೃತಿಗಳು ಬಹು ಆಕರ್ಷಣೀಯವಾಗಿವೆ. ಸುಂದರ ಕೆತ್ತನೆಯಿಂದ ಕೂಡಿರುವ ಹಂಸಗಳ ಹಾಗೂ ಇತರೆ ಶಿಲ್ಪಾಕೃತಿಗಳಿಂದ ಕೂಡಿರುವ ಪ್ರವೇಶದ್ವಾರದ ತೊಲೆ, ಸುಂದರವಾಗಿ ಕೆತ್ತಲ್ಪಟ್ಟಿರುವ ಅಷ್ಟದಿಕ್ಪಾಲಕರ ಶಿಲ್ಪಾಕೃತಿಗಳನ್ನೊಳಗೊಂಡ ಮೇಲ್ಛಾವಣಿಯ ಭಾಗದ ಚಪ್ಪಡಿಯ ಭಾಗಗಳನ್ನು ಮೂಲ ಗೊಮ್ಮಟಮೂರ್ತಿಯ ಬದಿಯಲ್ಲಿ ಬೆಂಗಳೂರಿನ ಜೈನ ಭಕ್ತಾದಿಗಳು ಸಂರಕ್ಷಿಟ್ಟಿರುವುದನ್ನು ಕಾಣಬಹುದು.
ಇವುಗಳಲ್ಲದೆ, ಸ್ತಂಭಗಳು, ವಿವಿಧ ಶಿಲ್ಪಾಕೃತಿಗಳು, ತರಂಗ ಬೋಧಿಗೆಗಳು, ಸ್ತಂಭ ಬೋಧಿಗೆಗಳು, ಇಟ್ಟಿಗೆಗಳು, ಎಲ್ಲಿಂದರಲ್ಲಿ ಬಿದ್ದಿರುವುದರಿಂದ ಒಂದು ರೀತಿ ಬಯಲು ವಸ್ತು ಸಂಗ್ರಹಾಲಯದಂತೆ ಗೋಚರಿಸುತ್ತದೆ.೧೨ ಜೈನ ಭಕ್ತಾದಿಗಳು ಇಲ್ಲಿನ ಸ್ತಂಭಗಳಿಗೆ ಬಣ್ಣ ಬಳಿದು ವಿರೂಪಗೊಳಿಸುವುದರ ಮೂಲಕ ಸ್ತಂಭಗಳ ಮೂಲ ಸ್ವರೂಪಕ್ಕೆ ಧಕ್ಕೆಯನ್ನುಂಟು ಮಾಡಲಾಗಿದೆ.
ಉಪಸಂಹಾರ: ಬಸ್ತಿಹೊಸಕೋಟಯಲ್ಲಿ ಕಂಡುಬರುವ ಜೈನ ಅವಶೇಷಗಳಿಂದಾಗಿ ಈ ಪ್ರದೇಶದಲ್ಲಿ ಹಿಂದೆ ಜೈನ ಧರ್ಮದ ಪ್ರಾಬಲ್ಯ ಹೆಚ್ಚಾಗಿತ್ತೆಂದು ತಿಳಿದುಬರುತ್ತದೆ. ಆದರೆ ಇಂದು ಈ ಪ್ರದೇಶದಲ್ಲಿ ಜೈನ ಧರ್ಮಿಯರಾರು ಕಂಡುಬರುವುದಿಲ್ಲ, ಆದರೆ ಮಂಡ್ಯ ಜಿಲ್ಲೆ ಗಂಗರಸರ ಹಾಗೂ ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿದ್ದ ಸಂದರ್ಭದಲ್ಲಿ ಜೈನ ಧರ್ಮೀಯರು ಅಧಿಕ ಸಂಖೈಯಲ್ಲಿ ನೆಲೆಸಿದ್ದರು ಎಂಬುದಕ್ಕೆ ಈ ಪ್ರದೇಶದಲ್ಲಿರುವ ಬಸ್ತಿಪುರ, ಬಸ್ತಿಹಳ್ಳಿ, ಬಸ್ತಿಕಟ್ಟೆ, ಬಸ್ತಿಹೊಸಕೋಟೆಗೆ ಬದಲು ಕುರುಬರಬಸ್ತಿ ಹಾಗೂ ಎ.ಕೆ. ಬಸ್ತಿ ಎಂಬ ಹೆಸರಿನ ಗ್ರಾಮಗಳು ಜೈನ ಬಸದಿಯ ಹೆಸರಿನಲ್ಲಿರುವುದೇ ನಿದರ್ಶನವಾಗಿದೆ. ಈ ಪ್ರದೇಶದಲ್ಲಿದ್ದ ಜೈನ ಧರ್ಮಿಯರು ಕಾಲಾನಂತರ ಯಾವ ಕಾರಣದಿಂದ ಬೇರೆ ಕಡೆ ಹೋಗಿದ್ದಾರೆ ಎಂಬುದನ್ನು ಅರಿಯಲು ಹೆಚ್ಚಿನ ಸಂಶೋಧನೆ ಆಸಕ್ತ ಇತಿಹಾಸಕಾರರಿಂದ ಆಗಬೇಕಾಗಿರುವುದು ಅಗತ್ಯವಿದೆ.

ಆಧಾರಸೂಚಿ ಮತ್ತು ಟಿಪ್ಪಣಿಗಳು
೧.    ಪುಟ ೫೬೫-೫೬೬, ಅನಂತರಾಮು, ಸಕ್ಕರೆಯ ಸೀಮೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು-೨೦೦೪.
೨.    ಪುಟ ೬೪, ಭಟ್‌ಸೂರಿ ಕೆ.ಜಿ. ಹಾಡುವಳ್ಳಿ ಜೈನ ಶಾಸನ ವಾಸ್ತು-ಮೂರ್ತಿಶಿಲ್ಪ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ-೨೦೧೧.
೩.    ಪುಟ ೫೬೭, ಅನಂತರಾಮು, ಸಕ್ಕರೆಯ ಸೀಮೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು-೨೦೦೪.
೪.    ಪುಟ ೧೮, ಭಟ್‌ಸೂರಿ ಕೆ.ಜಿ. ಹಾಡುವಳ್ಳಿ ಜೈನ ಶಾಸನ ವಾಸ್ತು-ಮೂರ್ತಿಶಿಲ್ಪ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ-೨೦೧೧.
೫.    ಪುಟ ೯೬, ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೬, ೧೯೭೭. (ಪರಿಷ್ಕೃತ).
೬.    ಪುಟ ೨೪೫, ಕೃಷ್ಣರಾವ್ ಎಂ.ವಿ., ಕೇಶವ ಭಟ್. ಎಂ. ಕರ್ನಾಟಕ ಇತಿಹಾಸ ದರ್ಶನ, ಕರ್ನಾಟಕ ಸಹಕಾರಿ ಪ್ರಕಾಶನ,ಬೆಂಗಳೂರು,೧೯೭೦.
೭.    ಪುಟ ೯೫, ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೬, ೧೯೭೭, (ಪರಿಷ್ಕೃತ).
೮.    ಪುಟ ೫೬೭, ಕೆ. ಅನಂತರಾಮು, ಸಕ್ಕರೆಯ ಸೀಮೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೨೦೦೪.
೯.    ಪುಟ ೨೩೮, ಗೋಪಾಲ್. ಆರ್. (ಸಂ) ಮಂಡ್ಯ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ತ್ವ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು, ೨೦೦೮.
೧೦.   ಪುಟ ೧೦೦. ಚಿದಾನಂದಮೂರ್ತಿ. ಎಂ. ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಪ್ರಸಾರಾಂಗ, ಮೈಸೂರು ವಿ.ವಿ., ೧೯೬೬.
೧೧.   ಪುಟ ೩೭, ಭಟ್ ಸೂರಿ ಕೆ.ಜಿ. ಹಾಡುವಳ್ಳಿ ಜೈನ ಶಾಸನ ವಾಸ್ತು-ಮೂರ್ತಿಶಿಲ್ಪ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೧೧.
೧೨.   ಪುಟ ೧೭, ತೈಲೂರು ವೆಂಕಟಕೃಷ್ಣ, ಮಂಡ್ಯ ಜಿಲ್ಲೆಯ ದೇವಾಲಯಗಳು ಒಂದು ಅವಲೋಕನ, ಭಾನು ಪ್ರಕಾಶನ, ಮಂಡ್ಯ, ೨೦೧೦.


Ÿ



3 comments:

  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

    ReplyDelete
  2. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

    ReplyDelete