Wednesday, January 2, 2013

ಹಾಸನಜಿಲ್ಲೆ ಹೊಳೇನರಸೀಪುರ ತಾಲ್ಲೂಕು ಗುಬ್ಬಿ ಗ್ರಾಮದ ತಾಮ್ರಶಾಸನದ ಪ್ರಕಟಿತ ನಕಲು ಪ್ರತಿಯ ನೈಜತೆ - ಕಿರು ಟಿಪ್ಪಣಿ





  







ಎಸ್. ಕಾರ್ತಿಕ್‌
# ೬೫ [೧ ಮಹಡಿ], ೩ ನೆಯ ಅಡ್ಡರಸ್ತೆ ,
ಶಿಕ್ಷಕರ ಬಡಾವಣೆ, ೧ ನೆಯ ಹಂತ,
ಜೆ.ಪಿ.ನಗರ ಅಂಚೆ , ಬೆಂಗಳೂರು-೭೮

      ಕರ್ನಾಟಕ ರಾಜ್ಯದ ಹಾಸನ ಜಿಲ್ಲೆ ಹೊಳೇನರಸೀಪುರ ತಾಲ್ಲೂಕಿನ ದೊಡ್ಡಕಾಡನೂರು ಹೋಬಳಿಯ ಗುಬ್ಬಿ ಗ್ರಾಮದಲ್ಲಿದ್ದ ಮೈಸೂರು ಪುಟ್ಟಪ್ಪನವರ ಮಗ ಶ್ರೀಕಂಠಯ್ಯನವರ ವಶದಲ್ಲಿದ್ದ ತಾಮ್ರಶಾಸನದ ನಕಲು ಪ್ರತಿ ಮೊದಲ ಬಾರಿಗೆ ಎಪಿಗ್ರಾಫಿಯಾ ಕರ್ಣಾಟಿಕಾ, ಸಂಪುಟ-೧೫, ಹಾಸನ ಜಿಲ್ಲೆಯ ಪುರವಣಿ ಸಂಪುಟದಲ್ಲಿ ಪ್ರಕಟವಾಗಿದೆ (Published by M. H. Krishna, ಮೈಸೂರು ಪುರಾತತ್ತ್ವ ಇಲಾಖೆ-೧೯೪೩, ಹೊಳೇನರಸೀಪುರ-೧೨೩, ಪುಟ ೧೪೯-೧೫೧). ಇಲ್ಲಿನ ಪ್ರಕಟನೆಗೆ ಮೊದಲೇ ೧೯೧೩ ರ ಮೈಸೂರು ಪುರಾತತ್ತ್ವ ಇಲಾಖೆಯ ವಾರ್ಷಿಕ ವರದಿಯಲ್ಲಿ ಸಾರಾಂಶ ಮಾತ್ರವಾಗಿ ದಾಖಲಾಗಿದೆ. ಇದು ತಾಮ್ರಶಾಸನದ ನಕಲು ಪ್ರತಿಯಾದ ಕಾರಣ ಪರಿಷ್ಕೃತ ಎಪಿಗ್ರಾಫಿಯ ಕರ್ನಾಟಿಕ ಹಾಸನ ಜಿಲ್ಲೆಯ ಸಂಪುಟಗಳಲ್ಲಿ ಹಾಗೂ ಇತರ ಯಾವುದೇ ವಿಜಯನಗರ ಶಾಸನಸಂಪುಟಗಳಲ್ಲಿ ಸೇರ್ಪಡೆಯಾಗಿಲ್ಲ. ಈ ಶಾಸನವು ವಿಜಯನಗರ ಸಾಮ್ರಾಜ್ಯದ ದೊರೆಯಾಗಿದ್ದ ಸಂಗಮ ವಂಶದ ಇಮ್ಮಡಿ ಹರಿಹರನದ್ದಾಗಿದ್ದು ಸಂಸ್ಕೃತ ಮತ್ತು ಕನ್ನಡ ಭಾಷೆಯಲ್ಲಿ ರಚಿತವಾದ ಒಂದು ದಾನಶಾಸನವಾಗಿದೆ. ಆದರೆ ಸಂಸ್ಕೃತ ಭಾಷೆಯು ತುಂಬಾ ಸ್ಖಾಲಿತ್ಯಗಳಿಂದ ಕೂಡಿದೆ. ಈ ಶಾಸನವು ಕೆಲವು ಅಂಶಗಳಲ್ಲಿ ಕುತೂಹಲಕಾರಿಯಾದುದಾಗಿದ್ದು ಕೂಟ ಶಾಸನವೆಂದು ಸಂದೇಹಿಸಲು ಆಸ್ಪದವಿದೆ. ಇದರ ಬಗೆಗೆ ಈ ಮೊದಲೇ ಬಾ. ರಾ. ಗೋಪಾಲ ಅವರು ಹೇಳಿದ್ದರೂ ಸಮರ್ಪಕವಾಗಿ ವಿವರಣೆ ನೀಡಿರುವುದಿಲ್ಲ. ಆದ ಕಾರಣ ಪ್ರಕೃತ ಲೇಖನದಲ್ಲಿ ಶಾಸನೋಕ್ತ ವಿವರಗಳ ಬಗೆಗೆ ವಿವೇಚಿಸದೆ ಈ ತಾಮ್ರಶಾಸನದ ನಕಲು ಪ್ರತಿಯ ನೈಜತೆಯನ್ನು ಕುರಿತು ಮಾತ್ರ ಯಥಾಮತಿಯಾಗಿ ಕಿರಿದಾಗಿ ವಿಚಾರ ಮಾಡಲಾಗಿದೆ. [ಶಾಸನೋಕ್ತ ವಿವರಗಳ ಬಗೆಗೆ ಹೆಚ್ಚಿನ ಮಾಹಿತಿಗೆ ೧೯೧೩ ರ ಮೈಸೂರು ಪುರಾತತ್ತ್ವ ಇಲಾಖೆಯ ವಾರ್ಷಿಕ ವರದಿಯನ್ನು (ಪುಟ ೪೩) ಗಮನಿಸ ಬಹುದಾಗಿದೆ]
ಶಾಸನದ ಕಾಲ ಮತ್ತು ಇತರ ಅಂಶಗಳು: ಈ ಶಾಸನದಲ್ಲಿ ಕಾಲವನ್ನು ಕಟಪಯಾದಿ ವಿಧಾನ ಮತ್ತು ಅಂಕೆಗಳೆರಡರಲ್ಲಿಯೂ ಸ್ವಸ್ತಿ ಶ್ರೀಗಂಗಾಖ್ಯೇ ೧೩೩೨ ಶಕಾಬ್ದೇ ದುರ್ಮತಿಸಂವತ್ಸರೇ ವೈಶಾಖೇ ಶುಕ್ಲಪ್ರತಿಪದಿ ಭಾರ್ಗವವಾಸರೇ ಎಂದು ಶಕವರ್ಷದಲ್ಲಿ ಸೂಚಿಸಲಾಗಿದೆ. ಶುಕ್ಲ ಪ್ರತಿಪದಿ ಎಂದರೆ ಶುಕ್ಲಪಕ್ಷದ ಪಾಡ್ಯಮೀ ಎಂದು. ಭಾರ್ಗವವಾಸರೇ ಎಂದರೆ ಶುಕ್ರವಾರ. ಇಲ್ಲಿ ಶ್ರೀಗಂಗಾಖ್ಯೇ ಎಂಬುದು ಕಟಪಯಾದಿ ಸಂಖ್ಯಾವಾಚಕ ಶಬ್ದವಾಗಿದೆ. ಇವುಗಳನ್ನು ಕೆಳಗೆ ವಿವೇಚಿಸಲಾಗಿದೆ.

೧.       ಶಕ ೧೩೩೨ (=ಕ್ರಿ.ಶ. ೧೪೧೦-೧೪೧೧) ದುರ್ಮತಿ ಸಂವತ್ಸರವೇ ಇರುವುದಿಲ್ಲ. ಬದಲಾಗಿ ವಿಕೃತಿ ಸಂವತ್ಸರ ಇರುತ್ತದೆ. ಜೊತೆಗೆ ಕಟಪಯಾದಿ ಸಂಖ್ಯಾವಾಚಕ ಮತ್ತು ಅಂಕೆಗಳಲ್ಲಿ ಸೂಚಿಸಿರುವ ಶಕ ೧೩೩೨ ರಲ್ಲಿ ಇಮ್ಮಡಿ ಹರಿಹರನ (ಕ್ರಿ.ಶ. ೧೩೭೭-೧೪೦೪) ಆಳ್ವಿಕೆ ಮುಗಿದು ಅವನ ಮಗನಾದ ಒಂದನೆಯ ದೇವರಾಯನು (ಕ್ರಿ.ಶ.೧೪೦೬-೧೪೨೨) ರಾಜ್ಯಭಾರ ಮಾಡುತ್ತಿರುತ್ತಾನೆ. ಈ ಕಾರಣಕ್ಕಾಗಿಯೇ ೧೯೧೩ ರ ಮೈಸೂರು ಪುರಾತತ್ತ್ವ ಇಲಾಖೆಯ ವಾರ್ಷಿಕ ವರದಿಯಲ್ಲಿ (ಪುಟ ೪೩) ಕಾಲ ತಪ್ಪಾಗಿ ಲಿಖಿತವಾಗಿದೆ ಎಂದು ಸೂಚಿಸಿ ಕ್ರಿ.ಶ. ೧೩೮೧ ಎಂದು ಶಾಸನದ ಕಾಲವನ್ನು  ಹೇಳಲಾಗಿದೆ. ಇದನ್ನು ಗಮನಿಸಿಯೇ ಎಪಿಗ್ರಾಫಿಯಾ ಕರ್ಣಾಟಿಕಾ, ಸಂಪುಟ-೧೫ ರಲ್ಲಿ ಕ್ರಿ.ಶ. ೧೩೮೧ ಎಂದು  ದಾಖಲಿಸಲಾಗಿದೆ (ಪುಟ ೧೬, ಸಾರಾಂಶಗಳ ಭಾಗ)

೨.  ಕ್ರಿ.ಶ. ೧೩೮೧ ದುರ್ಮತಿ ಸಂವತ್ಸರ ವೈಶಾಖ ಶುದ್ಧ ಪಾಡ್ಯ, ಶುಕ್ರವಾರ ಎಂದು ಗ್ರಹಿಸಿದರೆ ಜೂಲಿಯನ್ ಪಂಚಾಂಗದಂತೆ ಕ್ರಿ.ಶ. ೨೬-  ೪-೧೩೮೧, ಶುಕ್ರವಾರ, ರೋಹಿಣೀ ನಕ್ಷತ್ರಕ್ಕೆ ಸರಿಹೊಂದುತ್ತದೆ. ಗ್ರೆಗೋರಿಯನ್ ಪಂಚಾಂಗದಂತೆ ೪-೫-೧೩೮೧, ಗುರುವಾರ   ರೋಹಿಣೀ ನಕ್ಷತ್ರಕ್ಕೆ ಸರಿಹೊಂದುತ್ತದೆ. ಆದರೆ ಶಾಸನದಲ್ಲಿ ಸ್ಪಷ್ಟವಾಗಿ ಕಟಪಯಾದಿ ಮತ್ತು ಅಂಕೆಗಳಲ್ಲಿ ಕಾಲವನ್ನು ಸೂಚಿಸಿರುವುದರಿಂದ

    ಕ್ರಿ.ಶ. ೧೩೮೧ ಗ್ರಹಿಸುವುದು ಕಷ್ಟಸಾಧ್ಯ. ಶಾಸನೋಕ್ತ ಕಾಲವನ್ನು ಶಕ ೧೩೩೨ ವೈಶಾಖ ಶುದ್ಧ ಪಾಡ್ಯ, ಶುಕ್ರವಾರ ಎಂದು ಮಾತ್ರ ಗ್ರಹಿಸಿದರೆ ಜೂಲಿಯನ್ ಪಂಚಾಂಗದಂತೆ ಕ್ರಿ.ಶ. ೫-೪-೧೪೧೦, ಶುಕ್ರವಾರಕ್ಕೆ ಸರಿಹೊಂದುತ್ತದೆ. ಆದರೆ ರಾಜನ ಆಳ್ವಿಕೆಯ ಕಾಲ   ಹೊಂದಿಕೆಯಾಗುವುದಿಲ್ಲ. ಆದರೂ ಇದನ್ನು ಖಚಿತವೆಂದು ಗ್ರಹಿಸಲು ತೊಡಕಿದೆ.

೨.       ಈ ಶಾಸನದಲ್ಲಿ ಬರುವ ಕಂಠೀರಾಯಿ ಹುಟ್ಟುವಳಿ ಗದ್ಯಾಣ  ಎಂಬುದು ಕ್ರಿ.ಶ. ೧೩೮೧ ಅಥವಾ ೧೪೧೦ ರ ಸುಮಾರಿಗೆ ಇದ್ದಿರಲೇ ಇಲ್ಲ.

    ಈಗ ದೊರಕುತ್ತಿರುವ ಅಧಿಕೃತ ಮಾಹಿತಿಯ ಪ್ರಕಾರ ಕಂಠೀರವ ಎಂಬ ಹೆಸರಿನಲ್ಲಿ ನಾಣ್ಯಗಳನ್ನು ಮೊದಲು ಟಂಕಿಸಿದವರು ಮೈಸೂರು ಒಡೆಯರ್ ವಂಶದ ರಣಧೀರ ಕಂಠೀರವ ನರಸರಾಜ ಒಡೆಯರು. ಇವರ ಕಾಲ ಕ್ರಿ.ಶ. ೧೬೩೮-೧೬೫೯. ಈ ನಾಣ್ಯಗಳು ಕಂಠೀರಾಯಿ  ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದವು. ವಸ್ತುಸ್ಥಿತಿ ಈ ರೀತಿಯಿರುವಾಗ ಶಾಸನದ ಕಾಲವು ಕ್ರಿ.ಶ. ಸು ೧೬೫೦ ರ ನಂತರವೇ ಇರಬೇಕು.

    (ಕಂಠೀರಾಯಿ ನಾಣ್ಯದ ಬಗೆಗೆ ಹೆಚ್ಚಿನ ಮಾಹಿತಿಗೆ ನೋಡಿ :Coins & Currency System in Karnataka- A.V. NarasimhaMurthy, Directorate of Archaeology and Museums in karnataka, Mysore-1997, page 379-385  

 ; ಕರ್ನಾಟಕ ನಾಣ್ಯಪರಂಪರೆ-ಎ.ವಿ. ನರಸಿಂಹಮೂರ‍್ತಿ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು-೨೦೦೩, ಪುಟ ೨೯೩-೩೦೦
(A.D. 1399-1799) -C. Hayavadana Rao, Bangalore-1943, Appendix- IV, page 541-543)
೪.       ಕಂಠೀರಾಯಿ ವರಹದ ಹೆಸರಿನ ಹಿನ್ನೆಲೆಯಲ್ಲಿ ಗಮನಿಸಿದಾಗ ಈ ಸಮಯಕ್ಕೆ ಹೊಂದುವಂತೆ ಬರುವ ದುರ್ಮತಿ ಸಂವತ್ಸರವನ್ನು ಗ್ರಹಿಸಿದರೆ ಶಾಸನೋಕ್ತ ಕಾಲದ ವಿವರಗಳು ಸ್ಪಷ್ಟವಾಗಿ ಜೂಲಿಯನ್ ಪಂಚಾಂಗದಂತೆ ಕ್ರಿ.ಶ. ೯-೪-೧೬೮೧, ಶುಕ್ರವಾರ, ಭರಣೀ ನಕ್ಷತ್ರಕ್ಕೆ (=ಶಾಲಿವಾಹನ ಶಕ ೧೬೦೩) ಸರಿಹೊಂದುತ್ತದೆ. ಆದ ಕಾರಣ ಈ ಶಾಸನವು ವಿಜಯನಗರ ಕಾಲದ್ದಂತೂ ಅಲ್ಲ ಎಂದು ಖಚಿತವಾಗಿ ಹೇಳಬಹುದಾಗಿದೆ. [ಇದು ಕ್ರಿ.ಶ. ೧೬೮೧ ರ ಕಾಲದ್ದೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಕ್ರಿ.ಶ. ೧೬೮೧ ರ ನಂತರದ ಕಾಲದ್ದಾಗಿರಲೂಬಹುದು]

೫.       ಬಾ. ರಾ. ಗೋಪಾಲ್ ಅವರು ಕಂಠೀರಾಯಿ ಹೆಸರನ್ನು ಗಮನಿಸಿ ಮತ್ತು ಶಾಸನೋಕ್ತ ಕಾಲ ಸಮರ್ಪಕವಾಗಿ ಹೊಂದುತ್ತಿಲ್ಲವಾದ ಕಾರಣ ಇದೊಂದು ಕೂಟ ಶಾಸನವೆಂದು ಮೊದಲೇ ಹೇಳಿರುತ್ತಾರೆ (ನೋಡಿ :Vijaynagara Inscriptions, Vol.-2, (Ed) B.R.Gopal, Diof Archaeology and Museums, rectorate Mysore-1986, page 185, No-842).ಜೊತೆಗೆ ಶಾಸನೋಕ್ತ ಕಾಲ ಬೇರೆ ಯಾವ ಸಮಯಕ್ಕೆ ಹೊಂದುವ ಸಾಧ್ಯತೆ ಇದೆ ಎಂದು ಕೂಡ ವಿವೇಚಿಸಿದ್ದರೂ ಕಂಠೀರಾಯಿ ನಾಣ್ಯದ ಕಾಲದ ಆಧಾರದ ಮೇಲೆ ವಿವೇಚಿಸಿಲ್ಲ. ಆದರೆ ಕಂಠೀರಾಯಿ ವರಹದ ಉಲ್ಲೇಖದಿಂದ ಕೂಟ ಶಾಸನ ಎಂದು ಹೇಳಿ ಕಂಠೀರಾಯಿ ವರಹ ಬಳಕೆಗೆ ಬಂದ ಕಾಲದ ವಿವರಗಳನ್ನು ಏಕೆ ಗಮನಿಸಿ ನೀಡಿಲ್ಲವೋ ತಿಳಿಯದು. ಈ ಶಾಸನದಲ್ಲಿ ಕಟಪಯಾದಿ ಸಂಖ್ಯಾವಾಚಕ ಮತ್ತು ಅಂಕೆಗಳೆರಡರಲ್ಲೂ ಕಾಲವನ್ನು ಹೇಳಲಾಗಿದೆ ಎಂಬ ಅಂಶವನ್ನೂ ದಾಖಲಿಸಿಲ್ಲ. ನಾಗರೀ ಲಿಪಿಯ ಶಾಸನವಿರಬಹುದೆಂದು ಸೂಚಿಸಿ ಪ್ರಶ್ನಚಿಹ್ನೆ ಹಾಕಿದ್ದಾರೆ. ಇದಕ್ಕೂ ಯಾವುದೇ ಆಧಾರಗಳನ್ನು ಸೂಚಿಸಿಲ್ಲ. ಈ ಕಾರಣದಿಂದ ಗೋಪಾಲ್ ಅವರು ನೀಡಿರುವ ವಿವರಗಳು ಅಸ್ಪಷ್ಟತೆಯಿಂದ ಕೂಡಿವೆ ಎಂದು ಹೇಳಬೇಕಾಗಿದೆ.

ಈ ಶಾಸನದಲ್ಲಿ ಹೊಯ್ಸಳದೇಶದ ಕೊಂಗುನಾಡಿಗೆ ಸೇರಿದ {ಕೊಂಗುನಾಡು ವೆಂಠೆಯದ} ಗುಬ್ಬಿ ಎಂಬ ಗ್ರಾಮವನ್ನು  ಇಮ್ಮಡಿ ಹರಿಹರನು ತನ್ನ ತಂದೆಯಾದ ಬುಕ್ಕರಾಜನ ಹೆಸರಿನಲ್ಲಿ ಬುಕ್ಕರಾಜೇಶ್ವರಪುರವೆಂಬ ಪ್ರತಿನಾಮದಿಂದ ಕರೆದು ನಲವತ್ತು ವೃತ್ತಿಗಳಾಗಿ ಮಾಡಿ ವಿರೂಪಾಕ್ಷನ ಸನ್ನಿಧಿಯಲ್ಲಿ (= ಹಂಪೆಯ ವಿರೂಪಾಕ್ಷ ದೇವರ ಸನ್ನಿಧಿಯಲ್ಲಿ) ನಾನಾಗೋತ್ರದ, ನಾನಾ ಶಾಖೆಯ, ನಾನಾ ಹೆಸರಿನ ೩೯ ಜನ ಬ್ರಾಹ್ಮಣರಿಗೆ ದಾನಮಾಡಿರುತ್ತಾನೆ. ಈ ಬ್ರಾಹ್ಮಣರ ಗೋತ್ರಗಳು ಮತ್ತು ಹೆಸರುಗಳನ್ನು ಕೂಡ ಪೂರ್ಣವಾಗಿ ದಾಖಲಿಸಲಾಗಿದೆ. ಇದು ಆ ಕಾಲದ ಬ್ರಾಹ್ಮಣರ ಗೋತ್ರಗಳು, ಮನೆತನಗಳ ಹೆಸರುಗಳು, ಅವರು ವಲಸೆ ಬಂದ ಕಾಲದ ವಿವರಗಳು ಮುಂತಾದ ಮಾಹಿತಿಗಳ ಅಧ್ಯಯನಕ್ಕೆ ಉತ್ತಮ ಆಕರವಾಗಿದೆ. ನಂತರ ಚತುಸ್ಸೀಮೆಗಳ ಗಡಿಗಳನ್ನು ಅತ್ಯಂತ ವಿಸ್ತಾರವಾಗಿ ಹೇಳಿದೆ. ಗಡಿಗಳನ್ನು ಹೇಳಿರುವ ಭಾಗ ಭೌಗೋಳಿಕ ದೃಷ್ಟಿಯಿಂದ ಅಧ್ಯಯನಕ್ಕೆ ತಕ್ಕುದಾಗಿದೆ. ಆದರೆ ಕಾಲದ ಹಿನ್ನೆಲೆಯಲ್ಲಿ ಈ ಶಾಸನವನ್ನು ಅಧ್ಯಯನ ಮಾಡಬೇಕು. ಈ ಶಾಸನವು ದಾನ ಪಡೆಯಲು ಸೃಷ್ಟಿಸಲಾದ ದಾಖಲೆಯೆಂದು ಹೇಳಲು ಬಲವಾದ ಆಧಾರ ಕಂಠೀರಾಯಿ ಎಂಬ ಹೆಸರಿನ ಬಳಕೆಯೇ ಆಗಿದೆ. ವಿಜಯನಗರ ಕಾಲದ ಶಾಸನವೆಂದು ಎಷ್ಟೇ ಎಚ್ಚರಿಕೆಯಿಂದ ನಕಲನ್ನು ಸೃಷ್ಟಿಸಿದರೂ ತನ್ನ ಕಾಲದ ವಿವರಗಳು ಯಾವ ರೀತಿ ನುಸುಳಿರುತ್ತವೆ ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ. ಇದೇ ರೀತಿಯಾಗಿ ಶಾಸನಪಾಠಗಳನ್ನು ಆಳವಾಗಿ ಗಮನಿಸಿದರೆ ಪ್ರಕೃತ ಶಾಸನದಂತಹ ಅನೇಕ ಶಾಸನಗಳು ದೊರಕಬಹುದು. ಜೊತೆಗೆ ಕೂಟ ಶಾಸನಗಳೆಂದು ಹೇಳುವ ಮೊದಲು ಅವುಗಳಿಗಿರುವ ಮಾನದಂಡಗಳನ್ನು, ಅದಕ್ಕೆ ಸಮರ್ಪಕ ವೆನ್ನಿಸುವಂತಹ ಕಾರಣಗಳನ್ನು ಸ್ಪಷ್ಟವಾಗಿ ಸೂಚಿಸಬೇಕು. ಇದರಿಂದ ಎಷ್ಟೋ ನೈಜ ಶಾಸನಗಳಿಗೆ ಅನ್ಯಾಯವಾಗುವುದು ತಪ್ಪುತ್ತದೆ. ಕೂಟ ಶಾಸನಗಳಲ್ಲಿಯೂ ಇತಿಹಾಸಕ್ಕೆ ಸಂಬಂಧಿಸಿದ ವಿವರಗಳು ಇರುತ್ತವೆ. ಬೇರೆ ಆಧಾರಗಳಿಂದ ಅವುಗಳ ದಾಖಲಾತಿಗೆ ಬೆಂಬಲ ಇದ್ದರೆ ಆಯಾ ಸಂಗತಿಗಳನ್ನು ಸ್ವೀಕರಿಸಬಹುದು. ಜೊತೆಗೆ ಈ ಶಾಸನವು ಮೂಲತಃ ವಿಜಯನಗರ ಕಾಲದ್ದೇ ಆಗಿದ್ದು ನಕಲು ಮಾಡುವಾಗ ಕಂಠೀರಾಯಿ ವರಹದ ಉಲ್ಲೇಖವನ್ನು ಸೇರ್ಪಡೆ ಮಾಡಿದ್ದರೆ ಯಾವ ರೀತಿ ವಿಶ್ಲೇಷಣೆಗೆ ಅವಕಾಶವಿದೆ ಎಂಬ ಅಂಶ ವಿಚಾರಾರ್ಹ. ಒಟ್ಟಾರೆಯಾದ ಮಥಿತಾರ್ಥವೆಂದರೆ ಪ್ರಕೃತ ಶಾಸನ ಸ್ಪಷ್ಟವಾಗಿ ಕೂಟಶಾಸನ ಎಂದೇ ಹೇಳಬಹುದು. ಪ್ರಕೃತ ಬರಹದಲ್ಲಿ ನಮ್ಮ ಗಮನಕ್ಕೆ ಬಂದಂತೆ ಶಾಸನದ ನೈಜತೆಯ ಬಗೆಗೆ ವಿವೇಚಿಸಲಾಗಿದೆ. ಕೂಟ ಶಾಸನಗಳನ್ನು ಗುರುತಿಸಲು ನಾಣ್ಯಗಳು ಕೂಡ ಎಷ್ಟರ ಮಟ್ಟಿಗೆ ನೆರವು ನೀಡುತ್ತದೆ ಎಂಬ ಅಂಶ ಪ್ರಕೃತ ಲೇಖನದಿಂದ ವಿದಿತವಾಗುತ್ತದೆ. ಬೇರೆ ಬೇರೆ ಆಯಾಮಗಳಲ್ಲಿ ಕೂಡ ವಿಶ್ಲೇಷಿಸಲು ಸಾಧ್ಯವಿರುವ ಸಂಗತಿಯನ್ನು ಸಂಶೋಧಕರು ನಿರ್ಧರಿಸಿ ಹೇಳಬಹುದು.



No comments:

Post a Comment