Wednesday, November 21, 2012

ಇತಿಹಾಸ ಕಾರರು ಸರಣಿ-೨



  







           ಎಚ್‌... ಶೇಷಗಿರಿರಾವ್‌
          ೫/೧. ೨ನೇ ಮುಖ್ಯ ರಸ್ತ, ಎನ್‌ಆರ್‌ ಕಾಲನಿ
        ಬೆಂಗಳೂರು-೧೯.ದೂರವಾಣಿ-೯೪೪೮೪೪೨೩೨೩
          appaaji@gmail.com

ಶಾಸನ ಮತ್ತು ಸಾಹಿತ್ಯ ಕ್ಷೇತ್ರದ ಸವ್ಯಸಾಚಿ -ಆರ್‌. ನರಸಿಂಹಾಚಾರ್ಯ
ಕನ್ನಡ ನಾಡಿನ  ಶಾಸನ ಲೋಕದಲ್ಲಿ ಬಿ .ಎಲ್‌. ರೈಸ್‌  ಬೆಳಗಿದ ಜ್ಯೋತಿಯನ್ನು ಪ್ರಜ್ವಲಗೊಳಿಸಿದ ಸಶಕ್ತ   ಉತ್ತರಾಧಿಕಾರಿ ಮತ್ತು .  ಕನ್ನಡ ಭಾಷೆ ಮತ್ತು ಕಾವ್ಯದ ಅಧ್ಯಯನಕ್ಕೆ ಆರಂಭ ಮಾಡಿದರೆ ಕವಿ ಕಾವ್ಯದ ಬಗ್ಗೆ ಯಾವುದೇ ಮಾಹಿತಿ ಬೇಕಾದರೆ ಇಂದಿಗೂ ನಮಗೆ ಅತಿ ಮುಖ್ಯ ಆಕರ ಗ್ರಂಥವಾದ  ಕರ್ನಾಟಕ ಕವಿ ಚರಿತ್ರೆಯ ಕೊಡುಗೆ ನೀಡಿದ,ಶಾಸನ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸವ್ಯಸಾಚಿಯಾಗಿ   ಕನ್ನಡಮ್ಮನ ಸೇವೆಗೆ ಕಟಿಬದ್ಧನಾದ ಮೊದಲ ದೇಶೀಯ ವ್ಯಕ್ತಿ ರಾಮಾನುಜಾಪುರಂ ನರಸಿಂಹಾಚಾರ್ಯರು
 ಆರ್‌ ನರಸಿಂಹಾಚಾರ್ಯರರ ಜನನ ಮಂಡ್ಯ ಜಿಲ್ಲೆಯ, ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಬಳಿಯ ಕೊಪ್ಪಲು ಗ್ರಾಮದಲ್ಲಿ. ತಂದೆ ತಿರುನಾರಾಯಣ ಪೆರುಮಾಳ್‌ ಮತ್ತು ತಾಯಿ ಶಿಂಗಮ್ಮಾಳ್‌ .ಅವರ ಜನನ ೧೮೬೦ ರ ಏಪ್ರಿಲ್‌ ತಿಂಗಳಲ್ಲಿಅವರದು ಸಂಪ್ರದಾಯಸ್ಥ ಮನೆತನ. ಅವರ ಮೊದಲ ಅಕ್ಷರಾಭ್ಯಾಸ ಹಳ್ಳಿಯಲ್ಲಿ. ಅಲ್ಲಿ ಕನ್ನಡ ಕಲಿತರೆ ಮನೆಯಲ್ಲಿ ತಂದೆಯಿಂದ ಸಂಸ್ಕೃತ ಅಧ್ಯಯನ.. ನಂತರ ಮದ್ರಾಸಿನ ಪ್ರಸಿಡೆನ್ಸಿ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸಿ ತಮಿಳುಭಾಷೆಯಲ್ಲಿ ಮೆಟ್ರಿಕ್ಯುಲೇಷನ್‌ ಮುಗಿಸಿದರು. ಅವರು ಪದವಿ ಶಿಕ್ಷಣ ಪಡೆದುದು ಬೆಂಗಳೂರಿನ ಸೆಂಟ್ರಲ್‌ಕಾಲೇಜಿನಲ್ಲಿ.  ವಿದ್ಯಾರ್ಥಿಯಿದ್ದಾಗಲೇ  ವಿವಾಹವಾಯಿತು. ಳೆಯವಯಸ್ಸಿನಲ್ಲೆ ಸಂಸಾರದ ನಿರ್ವಹಣೆಯ ಹೊಣೆ. ಬಿಎ. ಪದವಿ ಪಡೆದ ನಂತರ ಪ್ರೌಢಶಾಲೆಯಲ್ಲಿ ಅಧ್ಯಾಪನ.  ಅನೇಕ ಊರುಗಳಲ್ಲಿ ಕೆಲಸ ನಿರ್ವಹಣೆ.  ಆದರೆ  ಅವರದು  ಇಂಗದ ಜ್ಞಾನದಾಹ. ಗಳಿಕೆಯ ಜೊತೆ ಕಲಿಕೆ ಅವರ ಮಂತ್ರ. ಅವರ ಅನವರತ  ಅಧ್ಯಯನದ ಫಲವಾಗಿ. ಮದ್ರಾಸ್‌ ವಿಶ್ವವಿದ್ಯಾನಿಲಯದಿಂದ ೧೮೯೪ ರಲ್ಲಿ ಎಂ ಎ ಪದವಿ ಪಡೆದರು... ನಂತರ  ವಿದ್ಯಾಇಲಾಖೆಯಲ್ಲಿ ಭಾಷಾಂತರಕಾರನೆಂದು ನೇಮಕವಾಯಿತು. ಅಲ್ಲಿ ಐದುವರ್ಷ ಸೇವೆ ಮಾಡಿದರು.. ಆಗಲೇ ಸಾಹಿತ್ಯಾಸಕ್ತಿಯು ಅವರನ್ನು ಕೃತಿ ರಚನೆಗೆ ಪ್ರೇರಣೆ ನೀಡಿತು. ಇವರ ಪ್ರೌಢಿಮೆ ಗಮನಿಸಿ ಪ್ರಾಚ್ಯವಸ್ತು ಇಲಾಖೆಯಲ್ಲಿ ಬಿ. ಎಲ್‌. ರೈಸರಿಗೆ ಸಹಾಯಕರಾಗಿ ನೇಮಕವಾಯಿತು. 


ಏಳು ವರ್ಷಗಳಕಾಲ ರೈಸ್‌ರ ಶಾಸನ ಸಂಬಂಧಿ ಕೆಲಸಗಳಲ್ಲಿ ಬಲಗೈ ಬಂಟರಾಗಿ ದುಡಿದರು. ಆ ಅವಧಿಯಲ್ಲಿ ರೈಸ್‌ರವರ ಎಲ್ಲ ಪ್ರಾಚ್ಯವಸ್ತು ಸಂಗ್ರಹಣೆ ಮತ್ತು ಸಂಪಾದನೆಯಲ್ಲಿ ಇವರದು ಸಿಂಹಪಾಲು. ರೈಸ್‌ ಅವರಿಗೆ ನಿವೃತ್ತಿಯಾದ ನಂತರ ನಿರ್ದೇಶಕರ ಹುದ್ದೆಗೆ ಬೇರೊಬ್ಬರನ್ನು ಹುಡುಕುವ ಅಗತ್ಯವೇ ಇರಲಿಲ್ಲ ಅವರ ಉತ್ತರಾಧಿಕಾರಿಯಾಗಲು ಆಚಾರ್ಯರೇ ಸೂಕ್ತ ವ್ಯಕ್ತಿಯಾಗಿದ್ದರು. ಅವರಿಗೆ ನಿರ್ದೇಶಕರಾಗಿ ನೇಮಕಾತಿ ಆಯಿತು.. ನಿರ್ದೇಶಕರಾದ ಮೇಲೆ ಶಾಸನಗಳ ಸಂಶೋಧನೆ ಭರದಿಂದ ಸಾಗಿತು. ಹಳ್ಳಿಹಳ್ಳಿಗಳಿಗೆ ಸಂಚರಿಸಿ ಸರಿ ಸುಮಾರು ೫೦೦೦ ಶಾಸನಗಳ ಸಂಗ್ರಹಮಾಡಿದರು. ಅವರು ಸಂಗ್ರಹಿಸಿದ ವಸ್ತುಗಳನ್ನು ಕುರಿತು  ಸಿದ್ಧಪಡಿಸಿದ ವಾರ್ಷಿಕ ವರದಿಗಳು ಸಮಗ್ರವಾಗಿರುತಿದ್ದವು. ಹೊಸದಾಗಿ ಸಂಗ್ರಹಿಸಿದ ಶಾಸನಗಳನ್ನು ಎಪಿಗ್ರಾಫಿಯಾ ಕರ್ಣಾಟಿಕದ ಪುರವಣಿಗಳಾಗಿ ಪ್ರಕಟಿಸಿಸಲು ಸಿದ್ಧ ಮಾಡಿದರು.ಎಪಿಗ್ರಾಫಿಕಯಾ ಕರ್ಣಾಟಿಕ ಮತ್ತು ಎಂ.ಎ. ಆರ್‌ಗಳ ಅಕಾರಾದಿ ಶಬ್ದ ಸೂಚಿಯನ್ನು ಸಿದ್ಧ ಮಾಡಿದರು. ಶ್ರವಣಬೆಳಗೊಳದ ಶಾಸನ ಸಂಪುಟವನ್ನು ಆಮೂಲಾಗ್ರವಾಗಿ ಪರಿಷ್ಕರಿಸಿದರು.

ಬಿ ಎಲ್‌ ರೈಸ್‌ರವರು ಸಂಪಾದಿಸಿದ  ೨ನೇ ಸಂಪುಟದಲ್ಲಿ ಶ್ರವಣ ಬೆಳಗೊಳದ  ೧೪೪ ಶಾಸನಗಳು ಮಾತ್ರ ಇದ್ದವು.ಆಚಾರ್ಯರ ಪರಿಷ್ಕರಣೆಯಲ್ಲಿ ಅವುಗಳ ಸಂಖ್ಯೆ ೫೦೦ಕ್ಕೆ ಏರಿತ್ತು. ಶ್ರವಣಬೆಳಗೊಳದ ಬಸದಿಗಳ ವಾಸ್ತುಶಿಲ್ಪಕುರಿತಾದ ಅವರ ಬರಹಗಳು ಇತೀಚಿನ ಹೊಸ ಪರಿಷ್ಕೃತ ಸಂಪುಟಗಳು ಬಂದಮೇಲೂ ಅತಿಮುಖ್ಯ ಆಕರ ಸಾಮಗ್ರಿಯಾಗಿ ಉಳಿದಿವೆ.
ನರಸಿಂಹಾಚಾರ್ಯರ ಸಾಹಿತ್ಯ ರಚನೆಯು ವಿದ್ಯಾ ಇಲಾಖೆಯಲ್ಲಿ ಇದ್ದಾಗಲೇ ಮೊದಲಾಗಿತ್ತು. ಪಂಪಭಾರತವನ್ನು ರೈಸ್‌ ಪರಿಷ್ಕರಿಸುವಾಗ ಬಹಳಷ್ಟು ಸಹಾಯ ಮಾಡಿದ್ದರು. ಬರಿ ಶಾಸನ ಲೋಕದಲ್ಲಿ ಮಾತ್ರವಲ್ಲದೆ ಕನ್ನಡದ ಕಾವ್ಯ ಲೋಕಕ್ಕೂ ಅವರ ಕೊಡುಗೆ ಅಪಾರ.  ಲಕ್ಷಣ ಶಾಸ್ತ್ರ ಕುರಿತಾದ ’ಕಾವ್ಯಾವಲೋಕನ’,  ಭಾಷಾ ಭೂಣ ಮತ್ತು ಶಬ್ದಾನುಶಾಸನ” ಗ್ರಂಥಗಳನ್ನು ತುಂಬ ಸಮರ್ಥವಾಗಿ ಸಂಪಾದಿಸಿದರು. ಕನ್ನಡದಲ್ಲಿ ಅವರ ಕೀರ್ತಿಯನ್ನು ಕೊನೆಯ ತನಕ ಉಳಿಸಿರುವುದು  ಅವರ ಸ್ವತಂತ್ರ ಕೃತಿ.  ’ ಕರ್ನಾಟಕ ಕವಿಚರಿತ್ರೆ” ಯಂಥಹ ಬೃಹತ್‌ ಕೃತಿಯನ್ನು ಮೂರು ಸಂಪುಟಗಳಲ್ಲಿ ಪ್ರಕಟಿಸಿದರು ಒಂದು ಸಂಸ್ಥೆಯಲ್ಲಿ ಹತ್ತಾರು ಜನರತಂಡ ಹಲವಾರು ವರ್ಷಗಳಲ್ಲಿ ಮಾಡಬಹುದಾದ ಕೆಲಸವನ್ನು ಅವರು ಏಕಾಂಗಿಯಾಗಿ ಮಾಡಿರುವುದು ಅವರ ದಣಿವರಿಯದ ದುಡಿಮೆ,ಸತತ ಪರಿಶ್ರಮ ಅದ್ಭುತ ವಿದ್ವತ್‌ ಮತ್ತು ಸಂಯಮಶೀಲ ಶ್ರದ್ಧೆಗಳಿಗೆ ಸಾಕ್ಷಿಯಾಗಿದೆ. ಕನ್ನಡದ ಯಾವುದೇ ಕವಿಯಬಗ್ಗೆ ತಿಳಿದುಕೊಳ್ಳಲು ಮೊರೆ ಹೋಗಬೇಕಾದದ್ದು ಅವರ ಈ ಕೃತಿಗೆ.  ಕನ್ನಡಸಾಹಿತ್ಯ ಇತಿಹಾಸದಲ್ಲಿ ಅವರ ಸಾಧನೆ ಒಂದು ಮೈಲಿಗಲ್ಲು
 ನರಸಿಂಹಾಚಾರ್ಯರ ಕನ್ನಡ ನಾಡು, ನುಡಿಯ  ಸೇವೆಯ ಮಹತ್ವವನ್ನು  ವಿದ್ವತ್‌ಲೋಕ ಗುರುತಿಸಿತು. ಅವರಿಗೆ ೧೯೦೭ರಲ್ಲಿ ಎಂಆರ್‌ ಎ .ಎಸ್‌ ಸದಸ್ಯತ್ವ ಲಭಿಸಿತು.  ’ಪ್ರಾಕ್ತನ ವಿಮರ್ಶ ವಿಚಕ್ಷಣ’  ಮತ್ತು ’ರಾವ್‌ಬಹದ್ದೂರ್‌’ ಪ್ರಶಸ್ತಿಗಳನ್ನು ಕೊಡಲಾಯಿತು. ಅವರ ಸಾಹಿತ್ಯ ಸೇವೆಗಾಗಿ  ೧೯೧೮ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ೪ನೇ ಸಮ್ಮೇಳನದ ಅಧ್ಯಕ್ಷ ಪದವಿ ನೀಡಿ ಗೌರವಿಸಲಾಯಿತು. ಪ್ರಾಚ್ಯಸಂಶೋಧನಾ ಕಾರ್ಯದ ಮಹತ್ವ  ಗುರುತಿಸಿ ’ಕರ್ನಾಟಕ ಪ್ರಾಚ್ಯ ವಿದ್ಯಾವೈಭವ ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ರಾಷ್ಟ್ರೀಯ ಮಟ್ಟದಲ್ಲೂ ಅವರ ಸಾಧನೆಯನ್ನು ಮನ್ನಿಸಿ  ಭಾರತ ಸರ್ಕಾರವು ಕೂಡಾ ಅವರಿಗೆ “ ಮಹಾಮಹೋಪಾಧ್ಯಾಯ” ಪ್ರಶಸ್ತಿನೀಡಿ ಗೌರವ ಸಲ್ಲಸಿತು
ಅವರು ಕನ್ನಡ ಕಾವ್ಯ ಮತ್ತು ಕರ್ನಾಟಕಇತಿಹಾಸದ ಅಧ್ಯಯನಕ್ಕೆ ಶಾಸ್ತ್ರೀಯ ಅಡಿಪಾಯ ಹಾಕಿದ ಮಹನೀಯರು . ತಮ್ಮ ಇಳಿವಯಸ್ಸಿನಲ್ಲೂ ಅವರ ಕನ್ನಡ ಸೇವೆ ಕಾರ್ಯ ಸ್ಥಗಿತವಾಗಲಿಲ್ಲ. ಅವರು ತಮ್ಮ ೭೭ನೇ ವಯಸ್ಸಿನಲ್ಲಿ ಇಹಲೋಕ ತೊರೆಯುವ ತನಕ ಕನ್ನಡಕ್ಕಾಗಿ ದುಡಿದರು..ಅವರು ಕಾಲವಾದರೂ  ಕನ್ನಡಿಗರ ಮನ ಮಾನಸದಲ್ಲಿ ಶಾಶ್ವತವಾಗಿ ನೆಲಸಿರುವರು. ಅಂದಿಗೂ ಇಂದಿಗೂ ಕನ್ನಡದ ’ಮಹಾಮಹೋಪಾಧ್ಯಾಯರೆಂದರೆ  ಆರ್‌ ನರಸಿಂಹಾಚಾರ್ಯರೊಬ್ಬರೇ.

No comments:

Post a Comment