Monday, November 26, 2012




ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಕ್ಯಾಸವಾರ ಗ್ರಾಮದ ಅಪ್ರಕಟಿತ ಶಿಲಾಶಾಸನ ಮತ್ತು ವಿಷ್ಣುಶಿಲ್ಪ

                                                                                      

                                                                    
                                                   ಡಾ. ಪಿ.ವಿ.ಕೃಷ್ಣಮೂರ್ತಿ                                                       
         
       ಎಸ್. ಕಾರ್ತಿಕ್‌                                                                                                                                         

   ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕು ಹೊಳವನಹಳ್ಳಿ ಹೋಬಳಿಗೆ ಸೇರಿರುವ ಕ್ಯಾಸವಾರ (ಕೇಶವಾರ) ಗ್ರಾಮವು ಸುಮಾರು ೬೯೭ ಎಕರೆ ವಿಸ್ತೀರ್ಣದಿಂದ ಕೂಡಿದೆ. ಈ ಗ್ರಾಮದ ಶ್ರೀಯುತ ವೆಂಕಟರಾವ್ ಅವರ ಮೊಮ್ಮಗ ಶ್ರೀಯುತ ನರೇಂದ್ರ ಅವರ ಹೊಲದಲ್ಲಿ ಪ್ರಕೃತ ಪ್ರಕಟವಾಗುತ್ತಿರುವ, ನಮ್ಮ ಗಮನಕ್ಕೆ ಬಂದಂತೆ ಇದುವರೆಗೂ ಅಪ್ರಕಟಿತವಾಗಿರುವ ಶಾಸನವಿದೆ (ಚಿತ್ರ-೧). ಪ್ರಕಟನೆಗಾಗಿ ಈ ಶಾಸನದ ಛಾಯಾಚಿತ್ರವನ್ನು ಹಾಗೂ ಶಾಸನವಿರುವ ಸ್ಥಳದ ಭೌಗೋಳಿಕ ವಿವರಗಳನ್ನು ನಮಗೆ ನೀಡಿದ ಕೇಶವಾರದವರೇ ಆದ ಕಥೆಗಾರ ಶ್ರೀ ನಾರಾಯಣ ಭಗವಾನ್ ಅವರಿಗೆ ನಮ್ಮ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಈ ಪ್ರದೇಶಕ್ಕೆ ಸ್ವತಃ ಹೋಗಿ ಕ್ಷೇತ್ರಕಾರ‍್ಯವನ್ನು ಮಾಡಲು ಈ ಸಂದರ್ಭದಲ್ಲಿ ನಮಗೆ ಸಾಧ್ಯವಾಗಲಿಲ್ಲ.

 ಈ ಶಾಸನವಿರುವ ಸ್ಥಳ ಜಯಮಂಗಲಿ, ಸುವರ್ಣಮುಖೀ ನದಿಗಳ ಸಂಗಮದಿಂದ ಅರ್ಧಕಿಲೋಮೀಟರ್ ದೂರ ಪಶ್ಚಿಮಕ್ಕಿದೆ. ಜೊತೆಗೆ ಶಾಸನವಿರುವ ಸ್ಥಳದಿಂದ ೨೦೦ ಮೀಟರ್ ಹಿಂದೆ ಮೊದಲು ಕೆರೆ ಇದ್ದಿತೆಂದು ತಿಳಿದುಬರುತ್ತದೆ. ಕೆರೆ ಇದ್ದ ಕುರುಹಾಗಿ ಈಗ ಕಟ್ಟೆ ಮಾತ್ರ ಕಂಡುಬರುತ್ತದೆ. ಇಲ್ಲಿಯೇ ಭಗ್ನವಾಗಿರುವ ಕೇಶವನ ಶಿಲ್ಪವೂ ಇದೆ (ಚಿತ್ರ-೨). ಶಾಸನದಲ್ಲಿ ವಿಷ್ಣುವಿನ ದೀಪಕ್ಕಾಗಿ ದಾನವನ್ನು ನೀಡಿರುವ ವಿಚಾರವನ್ನು ಹೇಳಿರುವುದರಿಂದ ಈ ಸ್ಥಳದಲ್ಲಿ ಕೇಶವ ದೇವಾಲಯವಿದ್ದಿರಬಹುದಾದ ಸಾಧ್ಯತೆಯಿದೆ. ಈ ಪ್ರದೇಶದಲ್ಲಿ ಉತ್ಖನನ ಹಾಗೂ ಕ್ಷೇತ್ರಕಾರ‍್ಯ ನಡೆದರೆ ಹೆಚ್ಚಿನ ಕುರುಹುಗಳು ದೊರಕಬಹುದಾಗಿದೆ. ಜೊತೆಗೆ ಪ್ರಕೃತ ಶಾಸನವಿರುವ ಗ್ರಾಮದ ಹೆಸರು ಕ್ಯಾಸವಾರ ಅಥವಾ ಕೇಶವಾರ ಎಂದಿರುವುದು ಗಮನಾರ್ಹ. ಇದರ ಮೂಲ ರೂಪ ಬಹುಶಃ ಕೇಶವಪುರ ಎಂದಿರಬಹುದೆಂದು ಕಾಣುತ್ತದೆ.

    ಶಾಸನಪಾಠವು ಸಂಸ್ಕೃತ ಭಾಷೆಯಲ್ಲಿ, ಕನ್ನಡ ಲಿಪಿಯಲ್ಲಿ ರಚಿತವಾಗಿದೆ. ಶಾಸನದಲ್ಲಿ ಕಾಲವನ್ನು ಸೂಚಿಸಿಲ್ಲ. ಆದರೂ ಲಿಪಿಯ ಆಧಾರದಿಂದ ಕ್ರಿ.ಶ. ಸುಮಾರು ೮ ನೆಯ ಶತಮಾನವೆಂದು ಹೇಳಬಹುದಾಗಿದೆ. ಶಾಸನದ ಮೊದಲನೆಯ ಸಾಲಿನಲ್ಲಿ ಸ್ವಸ್ತಿ ಮತ್ತು ಶ್ರೀ ಅಕ್ಷರಗಳ ನಡುವೆ ಸುದರ್ಶನ ಚಕ್ರವನ್ನು ಕೆತ್ತಲಾಗಿದೆ. ಈ ಚಕ್ರವನ್ನು ಗಡಿಗಲ್ಲೆಂದು ಭಾವಿಸಬಹುದೇ ? ವಿಚಾರಣೀಯ. ಏಕೆಂದರೆ ಅನೇಕ ದತ್ತಿಯ ಶಾಸನಗಳಲ್ಲಿ ಗಡಿಗಳನ್ನು ಸೂಚಿಸುವಾಗ ಈ ರೀತಿ ಚಕ್ರವನ್ನು ಕೆತ್ತಲಾಗಿದೆ. ಆದ ಕಾರಣ ಇವುಗಳನ್ನು ಚಕ್ರಕಲ್ಲು ಶಾಸನಗಳೆಂದು ಕರೆಯುವ ರೂಢಿಯುಂಟು. ಪ್ರಕೃತ ಶಾಸನವನ್ನೂ ಇದೇ ಗುಂಪಿಗೆ ಸೇರಿಸಬಹುದೇ ? ಎಂಬುದು ವಿಚಾರಾರ್ಹ. ಆದರೆ ಶಾಸನವು ವಿಷ್ಣುವಿನ ದೀಪಕ್ಕೆ ದಾನವನ್ನು ನೀಡಿರುವ ವಿವರವನ್ನು ದಾಖಲಿಸಿರುವ ಕಾರಣ ಇದನ್ನು ಸುದರ್ಶನ ಚಕ್ರವೆಂದು ಕೂಡ ಹೇಳಬಹುದಾಗಿದೆ. ಇದನ್ನು ಗಡಿಗಲ್ಲು ಶಾಸನವೆಂದೇ ಪರಿಗಣಿಸಿದರೆ ಕ್ರಿ.ಶ. ಸುಮಾರು ಎಂಟನೆಯ ಶತಮಾನದಲ್ಲಿ ಈ ಶಾಸನ ದೊರಕಿರುವುದು ಕಾಲದ ದೃಷ್ಟಿಯಿಂದ ಮಹತ್ತ್ವದೆನ್ನಿಸುತ್ತದೆ. ಮೊದಲು ಶಾಸನ ಪಾಠವನ್ನು ಯಥಾವತ್ತಾಗಿ ದಾಖಲಿಸಲಾಗಿದೆ.

ಶಾಸನಪಾಠ

೧ ಸ್ವಸ್ತಿ                  ಶ್ರೀ
೨ ವಿಷ್ಣವೇ ದೀಪಾಯ
೩ ಶಿವಶಮ್ಮಣಾ ಭೂ
೪ ಮಿರಿಯಮ್ ದತ್ತಾ
{ತ್ತಾರ್ಯ್ಯ}ರಿಯಮ್ ಧರ್ಮ್ಮರಕ್ಷ
೬ ಣೀಯಃ

ಶಾಸನಪಾಠದ ಅನ್ವಯ : ಸ್ವಸ್ತಿ. ಶಿವಶರ‍್ಮಣಾ ಇಯಂ ಭೂಮಿಃ ವಿಷ್ಣವೇ ದೀಪಾಯ ದತ್ತಾ. ಇಯಂ ಧರ‍್ಮೋ ರಕ್ಷಣೀಯಃ

ಶಾಸನಪಾಠದ ಅರ್ಥ : ಸ್ವಸ್ತಿ. ಶಿವಶರ‍್ಮನಿಂದ ವಿಷ್ಣುದೇವರ ದೀಪಕ್ಕಾಗಿ ಈ ಭೂಮಿಯು ಕೊಡಲ್ಪಟ್ಟಿದೆ.  ಈ ಧರ‍್ಮವು
                       ರಕ್ಷಿಸಲ್ಪಡಬೇಕು.
ಮೇಲ್ಕಂಡ ಶಾಸನದಲ್ಲಿ ಅಕ್ಷರಗಳನ್ನು ಆಳವಾಗಿ ಸ್ಪಷ್ಟವಾಗಿ ಕಂಡರಿಸಲಾಗಿದ್ದರೂ ಅಕ್ಷರಗಳ ಕಂಡರಣೆ ಒಂದೇ ಗಾತ್ರದಲ್ಲಿ ಮೂಡಿಲ್ಲ. ಇದರಿಂದಾಗಿ ಒಂದೆರಡು ಕಡೆ ಅಸ್ಪಷ್ಟತೆಯಿದೆ. ಮೂರನೆಯ ಸಾಲಿನಲ್ಲಿ ಶಿವಶಮ್ಮಣಾ ಎಂದಿರುವುದು ಪ್ರಾಕೃತ ಭಾಷೆಯ ರೂಪವಾಗಿದೆ. ಪುಷ್ಪಾವರಣವನ್ನು ಹಾಕಿರುವ ಐದನೆಯ ಸಾಲಿನ ಮೊದಲ ಎರಡು ಅಕ್ಷರಗಳನ್ನು ತೀರಾ ಒತ್ತಾಗಿ ಕಂಡರಿಸಿರುವ ಕಾರಣ ಸ್ಪಷ್ಟವಾಗಿ ಓದಲು ಸಾಧ್ಯವಾಗುತ್ತಿಲ್ಲ. ಈ ಭಾಗದ ಪಾಠ ಕೆಟ್ಟಿದೆ. ಇದನ್ನು ಶಾಸನದ ಒಟ್ಟು ಅರ್ಥದ ದೃಷ್ಟಿಯಿಂದ ಗಮನಿಸಿ ತಾತ್ಕಾಲಿಕವಾಗಿ ಹೇಳಬಹುದಾದರೆ ಅನಗತ್ಯ ಪಾಠ ಎಂದು ಭಾವಿಸಬಹುದು.  ಇದರ ಅರ್ಥವನ್ನು ಸ್ಥೂಲವಾಗಿ ಬರೆಯಲಾಗಿದೆ. ಇದಕ್ಕಿಂತ ಹೆಚ್ಚಿಗೆ ಇದನ್ನು ಅರ್ಥೈಸಲು ಸದ್ಯದಲ್ಲಿ ಸಾಧ್ಯವಾಗುತ್ತಿಲ್ಲ. ಆರನೆಯ ಸಾಲಿನಲ್ಲಿ ಕೆಲವು ಅಕ್ಷರಗಳು ಇರುವಂತೆ ಕಾಣುತ್ತದೆಯಾದರೂ ಅವು ಸಂಪೂರ್ಣ ವಾಗಿ ಸವೆದುಹೋಗಿವೆ.

ಇದೇ ಸ್ಥಳದ ಸಮೀಪದಲ್ಲಿಯೇ ಕರಿಯ ಕಲ್ಲಿನಲ್ಲಿ ಕೆತ್ತಲಾಗಿರುವ ಈಗ ಭಗ್ನವಾಗಿರುವ ಚತುರ್ಭುಜನಾದ ವಿಷ್ಣುವಿನ ಶಿಲ್ಪವೂ ದೊರೆತಿದ್ದು ಸ್ಥೂಲವಾಗಿ ಅದರ ಮೂರ್ತಿ ಲಕ್ಷಣಗಳಿಂತಿದೆ.

೧.       ಈ ಮೂರ್ತಿಯ ಹಣೆ, ಕಣ್ಣು, ಕಿರೀಟಗಳ ಭಾಗ ಭಿನ್ನವಾಗಿದೆ. ಮಕರ ಕುಂಡಲ, ಕಂಠಾಭರಣ, ಕೇಯೂರ  
ಕಂಕಣಗಳು, ದಪ್ಪ ಯಜ್ಞೋಪವೀತ, ಉದರಬಂಧ ಹಾಗೂ ಕಟಿಬಂಧಗಳು ಕಂಡುಬರುತ್ತವೆ. ಭಗ್ನ ವಾಗಿದ್ದರೂ ಕ್ರಿ.ಶ.ಸುಮಾರು ೮ ನೆಯ ಶತಮಾನದ ತಲಕಾಡು ಗಂಗ-ನೊಳಂಬ ಶೈಲಿಯ ಶಿಲ್ಪಲಕ್ಷಣಗಳನ್ನು ಹೊಂದಿದೆ. ಮೂರ್ತಿಯು ಸಮಭಂಗದಲ್ಲಿ ನಿಂತಿದ್ದು ಕಟಿಪ್ರದೇಶದಿಂದ ಕೆಳಗೆ ಹೂತುಹೋಗಿದ್ದು ಬಹುಶಃ ಗದೆ, ಕಾಲು ಮತ್ತು ಪೀಠವಿರುವ ಭಾಗ ಕೂಡ ಹೂತು ಹೋಗಿರುವಂತೆ ಕಂಡುಬರುತ್ತದೆ.

೨.       ಮೂರ್ತಿಯ ಮೇಲಿನ ಬಲಗೈಯಲ್ಲಿ ಚಕ್ರ, ಮೂರ್ತಿಯ ಕೆಳಗಿನ ಬಲಗೈಯಲ್ಲಿ ಅಭಯ /ಪದ್ಮ
ಮೂರ್ತಿಯ ಮೇಲಿನ ಎಡಗೈಯಲ್ಲಿ ಶಂಖ, ಮೂರ್ತಿಯ ಕೆಳಗಿನ ಎಡಗೈಯಲ್ಲಿ ಗದೆ (?)

೩.       ಸ್ಥೂಲವಾಗಿ ಹೇಳಬಹುದಾದರೆ ಈ ಶಿಲ್ಪವು ಸುಮಾರು ೧.೨ ಮೀಟರ್ ಎತ್ತರ, ೬೫ ರಿಂದ ೭೦ ಸೆಂ.ಮೀಟರ್ ಅಗಲವಿದೆ ಹಾಗೂ ಎದೆಯ ಭಾಗವು ಸುಮಾರು ೩೦ ಸೆಂ.ಮೀಟರ್ ದಪ್ಪವಿದೆ.

ಮೇಲಿನ ಲಕ್ಷಣಗಳಿಂದ ಕೂಡಿರುವ ಇದನ್ನು ಜನಾರ್ದನ ಮೂರ್ತಿಯ ಶಿಲ್ಪವೆಂದು ಹೇಳಬಹುದು. ಜನಾರ್ದನ ಮೂರ್ತಿಯ ಲಕ್ಷಣವನ್ನು ಪಾಂಚರಾತ್ರ ಕ್ರಿಯಾಪಾದದಲ್ಲಿರುವಂತೆಯೇ ಮುಮ್ಮಡಿ ಕೃಷ್ಣರಾಜರ (ಕ್ರಿ.ಶ. ೧೭೯೪-೧೮೬೮) ಶ್ರೀತತ್ತ್ವನಿಧಿಯಲ್ಲಿ {ಶ್ರೀತತ್ತ್ವನಿಧಿ (ದ್ವಿತೀಯ ಸಂಪುಟ, ವಿಷ್ಣುನಿಧಿ), ಪ್ರಾಚ್ಯವಿದ್ಯಾ ಸಂಶೋಧನಾಲಯ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು-೨೦೦೨, ಪುಟ ೩೩} ದಾಖಲಿಸಿದ್ದು ಸಂಬಂಧಿಸಿದ ಪಠ್ಯವಿಂತಿದೆ.

ಜನಾರ್ದನೋ ರಕ್ತವರ್ಣಶ್ಚಕ್ರಶಙ್ಖಗದಾಭೃತ್
ವಾಮೋರ್ಧ್ವಕರೇ ಶಙ್ಖಃ | ವಾಮಾಧಃ ಕರೇ ಗದಾ | ದಕ್ಷಾಧಃ ಕರೇ ಪದ್ಮಮ್ | ದಕ್ಷೋರ್ಧ್ವಕರೇ ಚಕ್ರಮ್

ಮೇಲಿನ ವಿಶ್ಲೇಷಣೆಯಿಂದ ಹೇಳಬಹುದಾದರೇ ಇಲ್ಲಿ ಜನಾರ್ದನ ದೇವಾಲಯವಿದ್ದಿತು. ಈ ಸ್ಥಳವನ್ನು ಉತ್ಖನನಕ್ಕೆ ಒಳಪಡಿಸಿದರೆ ಹೆಚ್ಚಿನ ಮಾಹಿತಿ ಲಭ್ಯವಾಗುವುದರಲ್ಲಿ ಸಂದೇಹವೇನಿಲ್ಲ. ಆದರೆ ಕ್ರಿ.ಶ. ೮ ನೆಯ ಶತಮಾನಕ್ಕೆ ಸೇರುವ ಈ ಮೂರ್ತಿಯ ವಿವರಗಳು ಮತ್ತು ಶಾಸನೋಕ್ತ ವಿವರಗಳ ಬಗೆಗೆ ವಿಶ್ಲೇಷಣೆ ನಡೆಯಬೇಕು. ಇಲ್ಲಿ ಯಾವ ರೀತಿ ವಿಷ್ಣುವಿನ ಆರಾಧನೆ ನಡೆಯುತ್ತಿದ್ದಿತು, ಅದು ಯಾವ ರೂಪದಲ್ಲಿ ಮುಂತಾದ ವಿವರಗಳನ್ನೆಲ್ಲಾ ವಿಮರ್ಶಿಸಿದರೆ ಈ ಪ್ರದೇಶದ ವಿಷ್ಣುವಿನ ಆರಾಧನೆಯ ಒಂದು ಮಜಲನ್ನು ಚಿತ್ರಿಸಬಹುದು. ಕೇಶವನ ಆರಾಧನೆ ಪ್ರಚಲಿತವಾದದ್ದು ಸಾಮಾನ್ಯವಾಗಿ ಕ್ರಿ.ಶ. ಹನ್ನೊಂದನೆಯ ಶತಮಾನದ ಸುಮಾರಿಗೆ. ಕ್ಯಾಸವಾರ ಅಥವಾ ಕೇಶವಾರದ ಮೂಲ ಹೆಸರು ಕೇಶವಪುರವೆಂದು ಇದ್ದಿರಬಹುದು ಎಂಬ ಅಂಶವನ್ನು ಮೇಲೆ ಹೇಳಿದ್ದರೂ ಪ್ರಕೃತ ಶಾಸನದ ಕಾಲದಲ್ಲಿ ಅಂದರೆ ಕ್ರಿ.ಶ. ಎಂಟನೆಯ ಶತಮಾನದ ಸುಮಾರಿಗೆ ಈ ಪ್ರದೇಶದ ಹೆಸರು ಏನಿತ್ತು ಎಂಬುದರ ಬಗೆಗೂ ಅಧ್ಯಯನ ನಡೆಯಬೇಕಿದೆ.

ಪ್ರಕೃತ ಶಾಸನದಂತೆಯೇ ಪ್ರತಿಯೊಂದು ಜಿಲ್ಲೆ ಮತ್ತು ತಾಲ್ಲೂಕಿನ ಗ್ರಾಮಗಳಲ್ಲಿಯೂ ಅನೇಕ ಅಪ್ರಕಟಿತ ಶಾಸನಗಳು ಕಂಡುಬರುವ ಸಾಧ್ಯತೆ ಬಹಳವಾಗಿದೆ. ಇವೆಲ್ಲವುಗಳನ್ನು ಕ್ಷೇತ್ರಕಾರ‍್ಯದ ಮೂಲಕ ಪತ್ತೆಮಾಡಿ ಪ್ರಕಟಿಸಬೇಕು. ಇದರಿಂದ ಹೆಚ್ಚಿನ ಅಧ್ಯಯನ ಸಾಧ್ಯವಾಗುತ್ತದೆ. ಈ ಕಾರ‍್ಯ ನಿರಂತರವಾಗಿ ನಡೆಯಲೆಂದು ಹಾರೈಸುತ್ತೇವೆ.

[ಈ ಶಾಸನ ಪಾಠವನ್ನು ಮತ್ತು ವಿಷ್ಣುವಿನ ಶಿಲ್ಪದ ಬಗೆಗಿನ ವಿವರಗಳನ್ನು ಬರೆಯುವಲ್ಲಿ ಮೈಸೂರು ಪ್ರಾಚ್ಯವಿದ್ಯಾ ಸಂಶೋಧನಾಲಯದ ಸಂಶೋಧಕ ವಿದ್ವಾಂಸರಾದ ಎಸ್. ಜಗನ್ನಾಥ ಅವರೂ, ಭಾರತೀಯ ಪುರಾತತ್ತ್ವ ಸರ್ವೇಕ್ಷಣ, ಬೆಂಗಳೂರು ವಲಯದ ನಿವೃತ್ತ ಉಪ ಆಧೀಕ್ಷಕ ಪುರಾತತ್ತ್ವವಿದರಾದ ಎಂ.ವಿ. ವಿಶ್ವೇಶ್ವರ ಅವರೂ ಬಹಳವಾಗಿ ನೆರವು ನೀಡಿದ್ದಾರೆ. ಇವರುಗಳಿಗೆ ನಮ್ಮ ಕೃತಜ್ಞತೆಗಳನ್ನು ಸೂಚಿಸುತ್ತೇವೆ]


    
       
* * *







No comments:

Post a Comment