Saturday, July 5, 2014

ಲಿಬರ್ಟಿ ಬೆಲ್‌

ಲಿಬರ್ಟಿ ಬೆಲ್‌

ಬಿಡುಗಡೆಯ ಸಂಕೇತವಾದ ಗಂಟೆ.

ಎಲ್ಲ ದೇಶಗಳಲ್ಲೂ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜಾರೋಹಣವನ್ನು ದೇಶದ ಪ್ರಮುಖರು ಮಾಡುವುದು ಸಾಮಾನ್ಯ ಆಚರಣೆ. ಅಮೇರಿಕಾದ ಸ್ವಾತಂತ್ರ್ಯ ದಿನ ಜೂಲೈ ೪  ರಂದು. ಅಲ್ಲಿ ಎಲ್ಲರಂತೆ ಸಂಭ್ರಮದಿಂದ ಆಚರಿಸುವ ಜೊತೆಗೆ ಸ್ವಾತಂತ್ರ್ಯ ಬಂದ ಮೊದಲ ದಶಕದಲ್ಲಿ ರಾಜಧಾನಿಯಾಗಿದ್ದ ಫಿಲೆಡೆಲ್ಫಿಯಾದಲ್ಲಿ   ಹದಿಮೂರು ಯುವಜನರು ಶತಮಾನಗಳ ಇತಿಹಾಸವಿರುವ ಬೃಹತ್‌ ಗಂಟೆಯೊಂದನ್ನು ಸಾಂಕೇತಿಕವಾಗಿ ಬಾರಿಸುವರು. ಅಂದರೆ ಹತ್ತಿಯ ಬಿಳಿ ಕೈಗವಸು ಹಾಕಿದ ಕೈ ಬೆರಳುಗಳಿಂದ ಮೃದುವಾಗಿ ತಟ್ಟುತ್ತಾರೆ. ಇದು 1776 ರಿಂದ ಸತತವಾಗಿ ನಡೆದುಕೊಂಡುಬಂದ ಸಂಪ್ರದಾಯ. ಕಾರಣ ಅಮೇರಿಕಾ ಸ್ವತಂತ್ರಪಡೆದಾಗ ಮೊದಲು ಒಕ್ಕೂಟದಲ್ಲಿದ್ದ ಹದಿಮೂರು ರಾಜ್ಯಗಳ ಪ್ರತಿನಿಧಿಗಳು   ಆ ಘೋಷಣೆಗೆ ಸಹಿ ಹಾಕಿದ್ದರು. ಅವರ ವಂಶಸ್ಥರು  ಈ ಸಮಾರಂಭದಲ್ಲಿ ತಪ್ಪದೇ ಭಾಗವಹಿಸುತ್ತಾರೆ. ಇದು ನೂರಾರು ವರ್ಷಗಳಿಂದ ನಡೆದು ಕೊಂಡು ಬಂದ ಸಂಪ್ರದಾಯ. ಆದೂ ಅತಿಂಥಹ ಗಂಟೆಯಲ್ಲ. ಅಮೇರಿಕಾದ ಜನರ ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ನೀಡಿದ ನಂತರ ಸಮಾನತೆಯ ಸಂಕೇತವಾದ ಅಮೇರಿಕಾದಲ್ಲಿ ಮೂರು ದೊಡ್ಡ ಚಳುವಳಿಗಳಿಗೆ ಸ್ಪೂರ್ತಿಯಾದ ಹಾಗೂ ಜಗತ್ತಿನಾದ್ಯಂತದ ದಮನಿತರ ದನಿಯಾದ ಜಗತ್‌ಪ್ರಸಿದ್ದವಾದ ಲಿಬರ್ಟಿ ಬೆಲ್‌ .
ಲಿಬರ್ಟಿ ಬೆಲ್‌
. ಲಿಬರ್ಟಿಬೆಲ್‌ ನಿರ್ಮಾಣವಾದದ್ದು  ಅಮೇರಿಕಾ ಇನ್ನೂ ಬ್ರಿಟನ್‌ನ ವಸಾಹತುವಾಗಿದ್ದಾಗಲೇ. ಅಮೇರಿಕಾದಲ್ಲಿ ಪೆನ್ಸಿಲ್ವೇ‌ನಿಯಾ ಪ್ರಾಂತ್ಯದ ರಾಜಧಾನಿ ಫಿಲೆಡೆಲ್ಫಿಯಾದಲ್ಲಿ. ಈ ವಸಾಹ
ತು ಸ್ಥಾಪಿಸಿದವನು ಇಂಗ್ಲೆಂಡಿನ ವಿಲಿಯಂ ಪೆನ್‌. ಅವನು ಈ ಪ್ರದೇಶದಲ್ಲಿ ಆಡಳಿತ ಮತ್ತು ಕಾನೂನು ರಚನೆಯಲ್ಲಿ  ಜನಸಾಮಾನ್ಯರು ಪಾಲುಗೊಳ್ಳಲು ಹಾಗೂ  ಮುಕ್ತವಾದ ಧಾರ್ಮಿಕ ಆಚರಣೆಯ ಹಕ್ಕನ್ನು   ಅಮೇರಿಕಾ ಮೂಲನಿವಾಸಿಗಳೂ  ಸೇರಿದಂತೆ ಎಲ್ಲ ಜನರಿಗೂ ಅವಕಾಶ ನೀಡಿದ ಉದಾರವಾದಿ. ಅವನು ಸ್ಟೇಟ್‌ ಅಸೆಂಬ್ಲಿ ಸ್ಥಾಪಿಸಿದ್ದನು. ಅದಕ್ಕಾಗಿ 1701  ರಲ್ಲಿ ಒಂದು ಚಾರ್ಟರ್‌ ನ್ನು  ಹೊರಡಿಸಿದ್ದನು. ಅಲ್ಲಿನ ಪ್ರಾಂತೀಯ ಅಸೆಂಬ್ಲಿಯು 1751 ರಲ್ಲಿ   ಪೆನ್‌ನ ಚಾರ್ಟರ್‌ನ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಅವನಿಗೆ ಗೌರವ ಸಲ್ಲಿಸಲು ಒಂದು ಸ್ಮಾರಕ ನಿರ್ಮಿಸಲು ನಿರ್ಧರಿಸಿತು. ಅದಕ್ಕಾಗಿ ಒಂದು ಬೃಹತ್‌ ಗಂಟೆಯ ನಿರ್ಮಾಣಕ್ಕಾಗಿ ಇಂಗ್ಲಂಡಿನ ವೈಟ್‌ಚಾಪೆಲ್‌ ಫೌಂಡ್ರಿಗೆ ಆದೇಶ ನೀಡಿದರು. ಗಂಟೆಯ ಮೇಲೆ Proclaim liberty throughout the land  unto  all  the inhabitants thereof “ ಎಂಬ ಬೈಬಲ್ಲಿನ ಒಂದು ವಾಕ್ಯವನ್ನು ಬರೆಸಲು ನಿರ್ಧರಿಸಿದರು. ಪ್ರಜಾತಂತ್ರವಾದಿ ವಿಲಿಯಂ ಪೆನ್‌ನಿಗೆ  ಈ ಬರಹವುಳ್ಳ  ಗಂಟೆ ಸೂಕ್ತವಾದ  ಸ್ಮಾರವಾಗಿತ್ತು. ಇಂಗ್ಲೆಂಡಿನಿಂದ1752ರಲ್ಲಿಯೇ ಗಂಟೆ ಬಂದರೂ ಅದನ್ನು  ಒಂದು ವರ್ಷದ ನಂತರ  ಅಸೆಂಬ್ಲಿ ಹಾಲ್‌ನ ಗೋಪುರದಲ್ಲಿ ಅಳವಡಿಸಲು ಯೋಚಿಸಿದ್ದರು ಅದನ್ನು 1753ರ ಮಾರ್ಚನಲ್ಲಿ ಮೊದಲ ಸಲ ಬಾರಿಸಿದಾಗಲೇ ಅದರ ನಾದ ಹಿತವಾಗಿಲ್ಲದಿರುವುದ ಕಂಡುಬಂದಿತು. ಅದರಲ್ಲಿ ಚಿಕ್ಕ ಸೀಳು ಕಾಣಿಸಿಕೊಂಡಿತ್ತು. ಅದು ತಯಾರಿಕೆಯ  ಅಥವ ಲೋಹಮಿಶ್ರಣದ ದೋಷ  ಇರಬಹುದೆಂದು ಕೊಂಡರು. ಅದನ್ನುಕರಗಿಸಿ ಮತ್ತೆ ಎರಕ ಹೊಯ್ಯಲು ಸ್ಥಳೀಯ ಕಂಚುಗಾರರಿಗೆ ನೀಡಿದರು. ಅದರ ಪೆಡಸುತನ ಕಡಿಮೆ ಮಾಡಲು ತುಸು ತಾಮ್ರ  ಸೇರಿಸಿ ಗಂಟೆ ತಯಾರಿಸಲಾಯಿತು. ಅದರ ನಾದವೂ ಹಿತವಾಗಿರಲಿಲ್ಲ. ಮತ್ತೆ ಅದನ್ನು ಕರಗಿಸಿ ಹೊಸದಾಗಿ ೨೦೮೦ ಪೌಂಡ್‌ ತೂಕದ  ಗಂಟೆ ನಿರ್ಮಿಸಿದರೂ  ತೃಪ್ತಿಕರವೆನಿಸಲಿಲ್ಲ. ಅದನ್ನೇ ಅಸೆಂಬ್ಲಿಯ ಗೋಪುರಕ್ಕೆ ಅಳವಡಿಸಿದರು.  ಹೊಸದೊಂದು ಗಂಟೆಯ ನಿರ್ಮಾಣ  ಮಾಡಿಸಿದರೂ ಅದರ ನಾದವೂ ಅಷ್ಟೇನೂ ತೃಪ್ತಿಕರವಾಗಿಲಿಲ್ಲ . ಈ ಗಂಟೆಯನ್ನು ಅಸೆಂಬ್ಲಿ ಹಾಲ್‌ಗಂಟೆ ಎನ್ನುತಿದ್ದರು. ಅದನ್ನು ಅಸೆಂಬ್ಲಿಯನ್ನು ಕರೆಯಲು,ವಿಶೇಷ  ಕಾನೂನು ರಚನೆ ಮಾಡುವಾಗ ಜನರನ್ನು ಸೇರಿಸಿ ಅಭಿಪ್ರಾಯ ಪಡೆಯಲು ಮತ್ತು ಅತಿಮುಖ್ಯ ಘೋಷಣೆ ಮಾಡುವಾಗ ಬಾರಿಸಲಾಗುತಿತ್ತು.
ಗಂಟೆಯ ಸದ್ದಿನಿಂದ ತೊಂದರೆಯಾಗುವುದೆಂದು ಆ ಪ್ರದೇಶಗಳ ಜನ ದೂರು ನೀಡಿದರೂ ಘಂಟಾವಾದನ ಮುಂದುವರಿದಿತ್ತು. ಬೆಂಜಮಿನ್‌ಫ್ರಾಂಕ್ಲಿನ್‌ ವಸಾಹತಿನ ಜನರ ಸಂಕಷ್ಟವನ್ನು ಪಾರ್ಲಿಮೆಂಟ್‌ಮುಂದೆ ನಿವೇದಿಸಲು ಬ್ರಿಟನ್‌ಗೆ ಹೋದಾಗ, ಆರನೆಯ ಜಾರ್ಜ ಸಿಂಹಾಸನವೇರಿದಾಗ, ಅತಿಮುಖ್ಯ ಕಾನೂನುಗಳಾದ ಶುಗರ್‌ ಆಕ್ಟ್‌ 1764  ಮತ್ತು   ಸ್ಟಾಂಪ್‌ಆಕ್ಟ್‌ 1765 ಜಾರಿಯಾಗುವ ಮುನ್ನ  ಗಂಟೆ ಬಾರಿಸಿದ್ದರು.
 ಅಮೇರಿಕಾದ ಸ್ವತಾಂತ್ರ್ಯಕ್ಕಾಗಿ ಹೋರಾಟ ನಡೆಸುವಾಗಲೂ. ಈ ಬೆಲ್‌ನ  ಪಾತ್ರ ಬಹಳ ಹಿರಿದು ಅದನ್ನು ಹೋರಾಟದ ಒಂದು ಪ್ರಮುಖ ಸಂಕೇತವಾಗಿ ಬಳಸಲಾಗಿತ್ತು.ಅಂತಿಮವಾಗಿ ಹೋರಟಕ್ಕೆ ಜಯ ಸಿಕ್ಕಿತು. ಸ್ವಾತಂತ್ರ್ಯ ಘೋಷಣೆಯನ್ನು 1776 ಜೂಲೈ 4 ರಂದು ಫಿಲೆಡೆಲ್ಫಿಯಾದಲ್ಲಿಯೇ ಮಾಡಲಾಯಿತು. ಆಗಲೂ ಗಂಟೆ ಬಾರಿಸಿ ಜನಸಮೂಹವನ್ನು ಸೇರಿಸಲಾಗಿತ್ತು. 
ಸ್ವಾತಂತ್ರ್ಯ ಘೋಷಣೆಗೆ ಸಹಿಹಾಕಿದ ಹದಿಮೂರುರಾಜ್ಯ ಪ್ರತಿನಿಧಿಗಳ ವಂಶಸ್ಥರು


ಸ್ವಾತಂತ್ರ್ಯ ಘೋಷಣೆಯ ದಾಖಲೆಗೆ ಅಂದು ಸಹಿಮಾಡಿದವರು ಹದಿಮೂರು ರಾಜ್ಯಗಳ ಪ್ರತಿನಿಧಿಗಳು. ಆ ಪ್ರಕ್ರಿಯೆಯನ್ನು ಪ್ರತಿ ವರ್ಷ ಪುನಾರವರ್ತಿಸಿ ಆಚರಿಸಲಾಗುತ್ತಿದೆ. ಅದರಲ್ಲಿ ಆಗ ಸಹಿ ಮಾಡಿದ 13 ಪ್ರತಿನಿಧಿಗಳ  ವಂಶಕ್ಕೆ ಸೇರಿದವರು ತಪ್ಪದೇ ಭಾಗವಹಿಸುವರು. ಅದರ ಜೊತೆಯಲ್ಲಿ ಮೊದಲ ಅಧ್ಯಕ್ಷ ಜಾರ್ಜ ವಾಷಿಂಗ್‌ಟನ್‌ ಜನ್ಮದಿನದಂದೂ ಗಂಟೆ ಬಾರಿಸುವ ಸಂಪ್ರದಾಯವಿತ್ತು. ಇದು ಕೊನೆಗೊಂಡುದುದು 1840 ರಲ್ಲಿ. ಅಂದು ಗಂಟೆಯನ್ನು ಬಾರಿಸಿದಾಗ ದೊಡ್ಡ ಸೀಳು ಬಿಟ್ಟು ದನಿ ಹೊರಡದಂತಾಯಿತು.  ಅಂದಿನಿಂದ ಅದನ್ನು  ಜತನವಾಗಿ ಇಡಲಾಗಿದೆ.
ಆದರೆ ಸೀಳು ಬಿಟ್ಟ ಮೇಲೆ ಅದರ ಪ್ರಾಧಾನ್ಯತೆ ಇನ್ನೂ ಹೆಚ್ಚಾಯಿತು. ಅಮೇರಿಕಾಕ್ಕೆ ಸ್ವಾತಂತ್ರ್ಯ ಬಂದರೂ ಸಮಾನತೆ ಇರಲಿಲ್ಲ. ವರ್ಣಬೇಧ ನೀತಿ ಯಿಂದಾಗಿ ಕಪ್ಪು  ಜನರು ಗುಲಾಮರಾಗಿದ್ದರು ಬಿಳಿ ಮತ್ತು ಕಪ್ಪು ಜನರ ಸಮಾಜದ ನಡುವಿನ ಅಪಾರ ಅಂತರದ ಸಂಕೇತ ಅದಾಗಿತ್ತು. ಗುಲಾಮಗಿರಿ ರದ್ದತಿಗಾಗಿ ಹೋರಾಡುವವರು ( 1861-1865 )ಗಂಟೆಯನ್ನು ಸಂಕೇತವಾಗಿ ಮಾಡಿಕೊಂಡರು. ಅದನ್ನು ಮೊದಲ ಬಾರಿಗೆ ಅದನ್ನು ಲಿಬರ್ಟಿ ಬೆಲ್‌ ಎಂದು ಕರೆದರು. ಅದೇ ಹೆಸರು ಶಾಶ್ವತವಾಗಿ ಉಳಿಯಿತು.
ಅಂತರ್‌ ಯುದ್ದದಲ್ಲಿ ಸಮಾನತೆ ಸಂಕೇತವಾದ ಗಂಟೆ





ಅಬ್ರಾಹಂ ಲಿಂಕನ್‌ಅಧ್ಯಕ್ಷರಾದ ಮೇಲೆ ಅಮಾನವಿಯ  ಗುಲಾಮಗಿರಿ ನಿರ್ಮೂಲನಾ ಕಾನೂನು ಜಾರಿಗೆ ತಂದರು. ಅದನ್ನು ವಿರೋಧಿಸಿವರು ದಕ್ಷಿಣದ  ರಾಜ್ಯಗಳು. ಅಲ್ಲಿನ ಬೃಹತ್‌ ಕಬ್ಬು, ತಮಬಾಕು,ಮತ್ತು ಹತ್ತಿಯ ಹೊಲಗಳಲ್ಲಿ ಕಪ್ಪುಜನರನ್ನು ಗುಲಾಮರಾಗಿ ದುಡಿಸಿಕೊಳ್ಳುತಿದ್ದರು. ಅವರು ಸ್ವತಂತ್ರರಾದರೆ ತಮ್ಮ ಹಿತಾಸಕ್ತಿಗೆ ಧಕ್ಕೆ ಬರುವುದೆಂದು  ಅವರು ಒಕ್ಕೂಟದಿಂದ ಬೇರೆಯಾದರು.ದೇಶದ ಐಕ್ಯತೆಗಾಗಿ ಯುದ್ಧ ಅನಿವಾರ್ಯವಾಯಿತು. ಆಗ ನಡೆದ ಅಂತರ್‌ಯುದ್ದದಲ್ಲಿ ಕೊನೆಗೆ ಉತ್ತರದವರು ಜಯಗಳಿಸಿದರು, ಗುಲಾಮಗಿರಿ ನಿರ್ಮೂಲವಾಯಿತು. ಅಮೇರಿಕಾದ ಜನತೆ ಪೂರ್ಣಅರ್ಥದಲ್ಲಿ ಸ್ವತಂತ್ರರಾದರು. ಆದರೆ ಅಂತರ್‌ ಯುದ್ಧದ  ಪರಿಣಾಮವಾಗಿ ಜನರ ಮನದಲ್ಲಿ ಕಹಿಭಾವನೆ ಉಳಿದಿತ್ತು ಅದರ ನಿವಾರಣೆಗಾಗಿ ಮತ್ತು ರಾಷ್ಟ್ರದ ಐಕ್ಯತೆಗಾಗಿ ಲಿಬರ್ಟಿ ಬೆಲ್‌ ರಾಷ್ಟ್ರಾದ್ಯಂತ ಸಂಚಾರ ಪ್ರಾಂಭಿಸಿತು.ಅದು1880ರ ಆದಿಭಾಗದಿಂದ ರಾಷ್ಟ್ರಾದ್ಯಂತ ಪ್ರದರ್ಶಿತವಾಗಿ ಐಕ್ಯತೆ ಮತ್ತು ಸಮಗ್ರತೆಯ ಸಂದೇಶ ಸಾರಿತು .ಎಲ್ಲ ದೊಡ್ಡ ನಗರಗಳಲ್ಲೂ ಲಿಬರ್ಟಿಬೆಲ್‌ ಪ್ರದರ್ಶಿಸಲಾಯಿತು. ನಂತರ ಲಿಬರ್ಟಿ ಹಾಲ್‌ನಲ್ಲಿ ಇಡಲಾಯಿತು.ಇದೂ ರಾಷ್ಟ್ರ ಧ್ವಜದಂತೆ ಐಕ್ಯತೆ, ಸಮಗ್ರತೆ ಮತ್ತು ಸ್ವಾತಂತ್ರ್ಯದ ಸಂಕೇತವಾಯಿತು..
ಲಿಬರ್ಟಿಬೆಲ್‌ನ ಪ್ರಭಾವ ಎಷ್ಟಾಯಿತೆಂದರೆ ಎಲ್ಲ ಹೋರಾಟಗಳಿಗೆ ಅದು ಸ್ಪೂರ್ತಿಯಾಯಿತು. ಅಮೇರಿಕಾ1776, ಜೂಲೈ4 ರಲ್ಲಿಯೇ ಸ್ವತಂತ್ರವಾದರೂ ಅನೇಕ ಶತಮಾನಗಳ ವರೆಗೆ ಮಹಿಳೆಯರಿಗೆ ಮತದಾನದ  ಹಕ್ಕುಇರಲಿಲ್ಲ. ಅವರ ಪಾತ್ರ ಅಡಿಗೆಮನೆಗೆ ಮೀಸಲು ಭಾವಿಸಲಾಗಿತ್ತು.ರಾಜಕೀಯ ಮತ್ತು ಸಾಮಾಜಿಕ ರಂಗದಲ್ಲಿ ಅವರನ್ನು ದೂರ ಇಡಲಾಗಿತ್ತು. ಅವರು ಒಂದು ರೀತಿಯಲ್ಲಿ ಎರಡನೆಯ ದರ್ಜೆಯಪ್ರಜೆಯಾಗಿದ್ದರು. ಈ ಅಸಮಾನತೆಯ ವಿರುದ್ಧ ಮಹಿಳೆಯರು 1915 ರಲ್ಲಿ  ಧನಿ ಎತ್ತಿದರು. ಅವರು ತೀವ್ರವಾಗಿ ಪ್ರತಿಭಟಿಸಿ  .ಚಳುವಳಿಗಿಳಿದರು. ಆಗಲೂ ಅವರಿಗೆ ಸ್ಪೂರ್ತಿ ನೀಡಿದ್ದು  ಲಿಬರ್ಟಿ ಬೆಲ್‌.
ಮಹಿಳಾಮತದಾನದ ಚಳುವಳಿಯಲ್ಲಿ ಬಳಕೆಯಾದ ಸದ್ದು ಮಾಡದ ಗಂಟೆ

 ಅದರ ಪ್ರತಿರೂಪ ಒಂದನ್ನು ನಿರ್ಮಿಸಿ ಗಂಟೆಯ ನಾಲಿಗೆಯನ್ನು ಸರಪಳಿಯಿಂದ ಒಂದು ಬದಿಗೆ ಬಂಧಿಸಿ ಚಳುವಳಿಯಲ್ಲಿ  ಸಾಂಕೇತಿಕವಾಗಿ ಬಳಸಲಾಯಿತು. ಕೊನೆಗೆ 1920ರಲ್ಲಿ ಸಂವಿಧಾನದ ೧೯ನೆಯ ತಿದ್ಮದುಪಡಿಯ ಮೂಲಕ ಮಹಿಳೆಯರಿಗೂ ಮತದಾನದ ಹಕ್ಕು ದೊರೆತಾಗ ಮತ್ತೆ ಗಂಟೆಯನ್ನು ಫಿಲೆಡೆಲ್ಫಿಯಾದಲ್ಲಿ ಮೊಳಗಿಸಲಾಯಿತು. ಹೀಗೆ ಅಮೇರಿಕಾದಲ್ಲಿ ದಬ್ಬಾಳಿಕೆಯವಿರುದ್ಧ ದನಿ ಎತ್ತುವ , ಬಿಡುಗಡೆ ಬೇಡುವ  ಎಲ್ಲ ಹೋರಾಟಗಳ ಸಂಕೇತವಾದ ಇದನ್ನು ಸ್ವಾತಂತ್ರ್ಯದ ಗಂಟೆ ಎಂದು ಅರ್ಥ ಪೂರ್ಣವಾಗಿ ಕರೆಯಲಾಗಿದೆ. ಇದನ್ನು ಅಲ್ಲಿನ ಲಿಬರ್ಟಿ ಹಾಲಿನಲ್ಲಿ ಸಂರಕ್ಷಿಸಿ ಇಡಲಾಗಿದೆ. ಅಮೇರಿಕಾದಲ್ಲಿ ಕಾನೂನಿನ ಹೊರತಾಗಿಯೂ ಜಾರಿಯಲ್ಲಿದ್ದ ವರ್ಣವಿಬೇಧ ನೀತಿಯ ನಿವಾರಣೆಗಾಗಿ ಹೋರಾಡಿದವರು, ಮಾರ್ಟಿನ್‌ಲೂಥರ್‌ ಕಿಂಗ್‌. ಅದಕ್ಕಾಗಿ ಅವರ ಜನ್ಮದಿನದಂದು ಕೂಡಾ 1986 ರಿಂದ ಗಂಟೆಯನ್ನು ಮೊಳಗಿಸಲಾಗುವುದು. ಇದೂ ಬರಿ ಅಮೇರಿಕಾಕ್ಕೆ ಮಾತ್ರ ಅಲ್ಲ ವಿಶ್ವದದ ಎಲ್ಲ ದಮನಿತರ ದನಿಯಾಗಿ ಹೊರ ಹೊಮ್ಮಿದೆ. ಜಗತ್ತಿನಾದ್ಯಂತದ  ತುಳಿತಕ್ಕೆ ಒಳಗಾದವರೆಲ್ಲರೂ ಇಲ್ಲಿಗೆ ಬಂದು ಲಿಬರ್ಟಿ ಬೆಲ್‌ ಸಾನಿಧ್ಯದಲ್ಲಿ ಸ್ಪೂರ್ತಿ ಪಡೆಯುತಿದ್ದಾರೆ.ಅದಕ್ಕೇ ಸ್ವಾತಂತ್ರ್ಯ ದಿನದಂದು  ಲಿಬರ್ಟಿ ಬೆಲ್‌ ಬಾರಿಸುವ ಸಾಂಕೇತಿಕ ಆಚರಣೆ ಪ್ರಮುಖ ಆಕರ್ಷಣೆಯಾಗಿದೆ.
( ಚಿತ್ರ ಕೃಪೆ ಅಂತರ್‌ಜಾಲ)

No comments:

Post a Comment