Sunday, July 20, 2014

ಐರಣಿ ಸಾಂಸ್ಕøತಿಕ ಅವಲೋಕನ


ಐರಣಿ ಸಾಂಸ್ಕøತಿಕ ಅವಲೋಕನ ಮತ್ತು ಇತಿಹಾಸ


ಐರಣಿ ಹನುಮಂತಪ್ಪ

ಇದು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಿಂದ 22 ಕಿ.ಮೀ. ಹರಿಹರದಿಂದ 15 ಕಿ.ಮೀ. ಅಂತರದಲ್ಲಿದೆ. `ಐರಣಿ’ ಪದಕ್ಕೆ ತೊರವೆ ರಾಮಾಯಣದಲ್ಲಿ `ವಿವಾಹಗಳಲ್ಲಿ ಮಂಗಳ ಸೂಚಕವಾದ ಬಣ್ಣದಿಂದ ಬರೆದಿಡುವ ಕುಂಭ ಅಥವಾ ಗಡಿಗೆ ಎಂಬ ಅರ್ಥವಿದೆ. ಆದರೆ ಈ ಗ್ರಾಮಕ್ಕೆ ಆ ಹೆಸರು ಹೇಗೆ ಬಂತು ಎಂಬುದು ನಿಖರವಾಗಿ ತಿಳಿಯದು. ಆದರೆ ಕೌಟಿಲ್ಯನ ಅರ್ಥಶಾಸ್ತ್ರ, ಕಾಮಂದಕನ ನೀತಿಶಾಸ್ತ್ರ ಮತ್ತು ಶುಕ್ರನ ನೀತಿಸಾರದಲ್ಲಿ  `ಐರಣಿ’ಯೆಂಬುದು ಒಂದು ರೀತಿಯ ತಾಂತ್ರಿಕತೆಯನ್ನು ಅಳವಡಿಸಿ ಕಟ್ಟುವ ಒಂದು ವಿಧವಾದ ಕೋಟೆಯಾಗಿದ್ದು ಈ ಸ್ಥಳದಲ್ಲಿ ನಿರ್ಮಿಸಿರುವುದರಿಂದ ಕೋಟೆಯೊಂದಿಗೆ ಗ್ರಾಮ ಸ್ಥಾಪನೆಯಾದ ಈ  ಊರಿಗೆ ಐರಣಿಯೆಂಬ ನಿರ್ದಿಷ್ಟ ನಿರ್ಮಾಣವಾಚಿ ಬಂದಿದೆ. ಇದಕ್ಕೆ ಐರಾವತ ಕ್ಷೇತ್ರ ಎಂಬ ಹೆಸರಿದೆ.
ಪುರಾತನ ದೇವಾಲಯ: ಐರಾವತ ಕ್ಷೇತ್ರದಲ್ಲಿರುವ ಗುಹಾರಣ್ಯದಲ್ಲಿ ಪುರಾತನ ಹರಿಹರೇಶ್ವರ ಮತ್ತು ಅನಂತಶಯನ ದ್ವಿಕೂಟಾಚಲ ದೇವಾಲಯ ಬೇರೆ ಬೇರೆ ರೀತಿಯ ವಿಮಾನ ಗೋಪುರವುಳ್ಳ ದೇವಾಲಯ ನಾಲ್ಕು ಅಡಿ ಎತ್ತರವುಳ್ಳ ತಲ ನಲವತ್ತು ಅಡಿ ಉದ್ದ ಹನ್ನೆರಡು ಅಡಿ ಅಗಲವುಳ್ಳ ಸಾಮಾನ್ಯ ಸಭಾಮಂಟಪ, (ನವರಂಗವಿದ್ದು), ಗರ್ಭಗುಡಿಗಳು ಪ್ರತ್ಯೇಕವಾಗಿದ್ದು, ತೆರೆದ ಒಂದೇ ಸಭಾಮಂಟಪವಿದೆ. ಉತ್ತರ ದಿಕ್ಕಿನ ಗರ್ಭಗುಡಿಯಲ್ಲಿ ಒಂದೇ ಪೀಠ ಪ್ರಣಾಲದ ಮೇಲೆ ದ್ವಿಲಿಂಗವಿದೆ. ಗರ್ಭಗುಡಿಯಲ್ಲಿ ಗೂಢ ಮಂಟಪವಿದೆ. ಸಭಾಮಂಟಪದಲ್ಲಿ ಸುಂದರ ಕೆತ್ತನೆಯ ನಂದಿ ಇದ್ದು, ಮೇಲೆ ಕುಂಭಾಕಾರದ ವಿಮಾನ ಗೋಪುರವಿದೆ. ಬಾಗಿಲವಾಡದ ದ್ವಾರಬಂಧದ ಲಲಾಟಬಿಂಬದ ಮಧ್ಯದಲ್ಲಿ ಗಜಲಕ್ಷ್ಮಿ ಸಹಿತ ಎಡಬಲದಲ್ಲಿ ಕೆಳಮುಖ ವಾದ ಕಮಲದ ಮೊಗ್ಗು ಇದೆ. ದ್ವಾರಬಂಧದ ತೋಳುಗಳ ಎರಡು ಬದಿಗಳಲ್ಲಿ ಗಂಡಭೇರುಂಡ ಪಕ್ಷಿಗಳ ಮೇಲೆ ಋಷಿ ಚಿತ್ರವಿದ್ದು, ತೋಳುಗಳಲ್ಲಿ ಲತಾಬಳ್ಳಿ ತಳದಲ್ಲಿ ಶೈವ ಮತ್ತು ವೈಷ್ಣವ ದ್ವಾರಪಾಲಕ ಉಬ್ಬು ಚಿತ್ರಗಳು ಇವೆ.
ದಕ್ಷಿಣ ದಿಕ್ಕಿನ ಗರ್ಭಗೃಹದಲ್ಲಿ ಗೂಢಮಂಟಪ, ಗರ್ಭಗೃಹದ ಮಧ್ಯದಲ್ಲಿ ಪ್ರತ್ಯೇಕವಾದ ಚೌಕಾಕಾರದ ಶಿಲೆಯಲ್ಲಿ ಐದು ಹೆಡೆ ನಾಗನ ಮೇಲೆ ಪವಡಿಸಿದ ಅನಂತಶಯನ ಮೂರ್ತಿ ಹಾಗೂ ಲಕ್ಷ್ಮೀ ಸರಸ್ವತಿ ಸೇವೆ ಸಲ್ಲಿಸುತ್ತಿರುವ ಚಿತ್ರಗಳನ್ನು ಚಿತ್ರಿಸಿ ಅಧಿಷ್ಠಾನ ಮೇಲೆ ನಿಲ್ಲಿಸಲಾಗಿದೆ. ದ್ವಾರಬಂಧದ ಮೇಲೆ ಖಲ್ವ (ಹಿಂಚಾಚಿರುವ ಪಟ್ಟಿಯಲ್ಲಿ) ಚಿತ್ರಪಟವಿದ್ದು, ಅವುಗಳನ್ನು ಸರಿಯಾಗಿ ಗುರುತಿಸಲಾಗುವುದಿಲ್ಲ. ಬಾಗಿಲವಾಡದ ದ್ವಾರಬಂಧದ ತೋಳುಗಳಲ್ಲಿ ಮತ್ಸ್ಯ, ಕೂರ್ಮ, ವರಾಹ, ನಾರಸಿಂಹ, ಆಯುಧ ಹಿಡಿದ ವಾಹನ, ಪರಶುರಾಮ, ಬಲರಾಮ ಶ್ರೀರಾಮ, ಕೃಷ್ಣವತಾರ ಮೂರ್ತಿ, ಜೈನ ದಿಗಂಬರ ಮೂರ್ತಿ, ವಾಹನ ಏರಿ ಹೊರಟ ಕಲ್ಕಿ ಉಬ್ಬು ಚಿತ್ರಗಳಿವೆ. ತಳದಲ್ಲಿ ವೈಷ್ಣವ ದ್ವಾರಪಾಲಕರು ಬಾಗಿಲುವಾಡದ ಮತ್ತೊಂದು ತೋಳುಪಟ್ಟಿಯಲ್ಲಿ ಹೂವಿನ ಚಿತ್ರಗಳಿವೆ. ದೇವಾಲಯ ನವರಂಗ ಐದು ಅಂಕಣದಲ್ಲಿ ಸುಮಾರು 40 ಅಡಿ ಉದ್ದ 12 ಅಡಿ ಅಗಲದ ತಳದ ಮೇಲೆ ಎರಡು ಗರ್ಭಗುಡಿ ಬಾಗಿಲುಗಳು, ಮೂರು ದೇವಕೋಷ್ಠಕಗಳಲ್ಲಿ ಉತ್ತರದ ಕೋಷ್ಟದಲ್ಲಿ ಪಾರ್ವತಿ, ಮಧ್ಯದ ಕೋಷ್ಟದಲ್ಲಿ ಪಾಂಡುರಂಗನ ಮೂರ್ತಿ, ಅದು ಸ್ಥಳಾಂತರ ಮಾಡಿರಬಹುದಾಗಿದೆ. ದಕ್ಷಿಣ ಕೋಷ್ಟದಲ್ಲಿ ವಿನಾಯಕ ಮೂರ್ತಿಗಳಿವೆ. ಸುತ್ತಲೂ ಗಚ್ಚು ಗಾರೆಗಳಿಂದ ಲೇಪಿತವಾದ ದೇವಾಲಯ ಬಹಳ ಸುಂದರವಾಗಿದ್ದು, ದೇವಾಲಯದ ಪೂರ್ವದಿಕ್ಕಿನಲ್ಲಿ ಸುಮಾರು 150 ಅಡಿ ಅಂತರದಲ್ಲಿ ತುಂಗಭದ್ರೆ ಉತ್ತರಾಭಿಮುಖವಾಗಿ ಹರಿಯುತ್ತಿದ್ದು, ಸಾಮಾನ್ಯ ನದಿ ಪಾತಳಿಯ ದಡದಲ್ಲಿ ಎರಡು ಕಲ್ಲು ಮಂಟಪಗಳು ಮೇಲೆ ಚಕ್ರವಿನ್ಯಾಸದ ಐದು ಸ್ಥಾವರದ ಮೆಟ್ಟಿಲು ಕಲ್ಲು ಮತ್ತು ಗಚ್ಚುಗಾರೆ ರಚನೆ ಮೇಲೆ ಕುಂಭ ಎರಡರಲ್ಲಿ ಒಂದು ಕಿರಿದಾದದ್ದು ಮತ್ತೊಂದು ಎತ್ತರವಾದದ್ದು ಭದ್ರಬುನಾದಿ ಕಲ್ಲು ಹಾಸುಗೆ ಕಂಬ ಬೊದಿಗೆಗಳು ಮಂಟಪ ಪ್ರವಾಹ ಹೆಚ್ಚಿದಾಗ ನದಿಯಲ್ಲಿ ಮುಳುಗುತ್ತವೆ. ದೇವಸ್ಥಾನದ ಪ್ರಾಂಗಣದಿಂದ ನದಿ ತಟದವರೆಗೂ 120-150 ಅಡಿ ಅಗಲವಾಗಿ ಪಾವಟಿಗಳು ಇದ್ದವು. ಇತ್ತಿತ್ತಲಾಗಿ ಅವು ನಿರ್ಲಕ್ಷತನದಿಂದಾಗಿ ಕಾಣೆಯಾಗಿವೆ. ದ್ವಿಕೂಟಾಚಲ ದೇವಾಲಯದ ಅನತಿ ಸಮೀಪದಲ್ಲಿ ಬ್ರಾಹ್ಮಣರ ಅಗ್ರಹಾರವಿದ್ದು ಅದು ಸಹ ಈಗ ಉಳಿದಿಲ್ಲ. ಅದು ಕೃಷಿ ಭೂಮಿಯಾಗಿದೆ.
ರಕ್ಷಣಾ ಕೋಟೆ: ವಿಜಯನಗರ ಅರಸ ಒಂದನೇ ದೇವರಾಯನ ಕಾಲಕ್ಕೆ (ಕ್ರಿ.ಶ.1406-1422) ಬಂಕಾಪುರ ಯುದ್ಧದಲ್ಲಿ ಬಹಮನಿ ಅರಸರಿಂದ ಸೋಲುಂಡ ಕಹಿ ನೆನಪು ಅವನಿಗೆ ಬಾಧಿಸುತ್ತಿತ್ತು. ಅದಕ್ಕೆ ಈ ಭಾಗದಲ್ಲಿ ರಕ್ಷಣಾ ಮತ್ತು ಶೇಖರಣಾ ಕೋಟೆ ಅವಶ್ಯಕವಾಗಿತ್ತು. ಅದಕ್ಕಾಗಿ ಈ ಸ್ಥಳ ಸೂಕ್ತವೆಂದು ಭಾವಿಸಿ ರಕ್ಷಣಾ ಕೋಟೆ ನಿರ್ಮಿಸಿರಬಹುದಾಗಿದೆ. ಹೊನ್ನಾವರ, ಬನವಾಸಿ, ಬಂಕಾಪುರ, ರಾಣೇಬೆನ್ನೂರು ಹರಪನಹಳ್ಳಿಗಳಿಂದ ವಿಜಯನಗರದವರೆಗೆ ರಾಜಮಾರ್ಗವಿದ್ದು ಇತಿಹಾಸದಿಂದ ತಿಳಿದುಬರುತ್ತದೆ. ಆ ಮಾರ್ಗ ಐರಾವತ ಕ್ಷೇತ್ರ ಗುಹಾರಣ್ಯ ಮೂಲಕ ತುಂಗಭದ್ರಾ ನದಿ ದಾಟಲು ಸೂಕ್ತವಾಗಿದ್ದು ಅಲ್ಲಿ ಕಡವು ಎಂಬ ಸ್ಥಳವಿದ್ದು, ನದಿ ದಾಟಲು ದೋಣಿ ಹರಿಗೋಲು ತೆಪ್ಪದಿಂದ ಸೈನಿಕರನ್ನು ಸಾಮಗ್ರಿಗಳನ್ನು ಸಾಗಿಸುತ್ತಿದ್ದುದು ತಿಳಿದುಬರುತ್ತದೆ. (ಬಳ್ಳಾರಿ ಜಿಲ್ಲಾ ಸಾಂಸ್ಕøತಿಕ ಅಧ್ಯಯನ ಪುಟ 51, ಕುಂಬಾಸ) ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಬೇರ್ಪಡಿಸುವ ತುಂಗಭದ್ರೆ ದಡದಲ್ಲಿ ನಿರ್ಮಿಸಲಾಗಿದೆ. ಎತ್ತರವಾದ ಗುಡ್ಡಗಳುಳ್ಳ ದಟ್ಟ ಅಡವಿ, ತುಂಗಭದ್ರೆ ಅತಿ ವೇಗವಾಗಿ ಹರಿವ ಪ್ರವಾಹ ಕೋಟೆ ಸುತ್ತಲೂ ನಿಸರ್ಗದತ್ತವಾದಂತಹ ತಗ್ಗುಪ್ರದೇಶ ನದಿಯಲ್ಲಿ ಪ್ರವಾಹ ಹೆಚ್ಚಾದಾಗ ಕೋಟೆ ದ್ವೀಪವಾಗಿ ಪರಿಣಮಿಸುವಂತಹ ಈ ಒಂದು ಸ್ಥಳ ಆಯ್ಕೆ ಮಾಡಿ ಇಂಡೋ ಇಸ್ಲಾಮಿಕ್ ಶೈಲಿಯಲ್ಲಿ 15ರಿಂದ 20 ಎಕರೆ ಪ್ರದೇಶಗಳಲ್ಲಿ ಕೋಟೆ ನಿರ್ಮಾಣವಾಗಿದೆ. ಆದರೆ ಯಾವಾಗ, ಎಂದು, ಯಾರಿಂದ ನಿರ್ಮಾಣವಾಯಿತೆಂಬುದಕ್ಕೆ ಆಧಾರಗಳಿಲ್ಲ.
ಕೋಟೆ ರಚನಾ ವಿವರ: ಪೂರ್ವದಲ್ಲಿ ಉತ್ತರಣವಾಹಿನಿಯಾಗಿ ತುಂಗಭದ್ರೆ ನದಿ ಹರಿವ ಎತ್ತರದ ದಿಣ್ಣೆ ಅಥವಾ ಸಣ್ಣಗುಡ್ಡ ಉತ್ತರ ಪಶ್ಚಿಮ ಮತ್ತು ದಕ್ಷಿಣದಲ್ಲಿ ಒತ್ತೊತ್ತಾಗೆ ಬೆಳೆದ ಗಿಡಗಂಟಿಗಳಿಂದ ಕೂಡಿದ ತಗ್ಗುಪ್ರದೇಶ ಮಳೆಗಾಲದಲ್ಲಿ ನದಿ ಪ್ರವಾಹ ಸುತ್ತುವರಿಯುವುದು. ಬೇಸಿಗೆಯಲ್ಲಿಯೂ ಕೆಸರುಯುಕ್ತ ಭೂಮಿ. ಹೀಗೆ ನೈಸರ್ಗಿಕ ರಕ್ಷಣೆ ಹೊಂದಿರುವ ಗುಡ್ಡ ಒಳಮಾಡಿಕೊಂಡು 15.20 ಎಕರೆ ಪ್ರದೇಶದಲ್ಲಿ ಮೂರು ಸುತ್ತಿನ ಕೋಟೆ ನಿರ್ಮಿಸಲಾಗಿದೆ. ಮೊದಲ ಹೊರಸುತ್ತು ಕೋಟೆ ನದಿತಟಕದಲ್ಲಿಯ ಒಂದು ಕೊತ್ತಳದಿಂದ ದಿಣೆ ಸುತ್ತುವರಿದು ಪುನಃ ನದಿ ತಟಾಕದಲ್ಲಿರುವ ಕೊತ್ತಳದವರೆಗೆ ಸ್ಥಳೀಯ ಕಲ್ಲು ಮಣ್ಣು ಮತ್ತು ಕಂದಕ ತೋಡಿ ಹೊರಹಾಕಿದ ಪರಿಕರಗಳಿಂದ ಸುಮಾರು ತಳದಲ್ಲಿ 10-12 ಅಗಲ ಮೇಲೆ ಹೋದಂತೆ ಅಗಲ ಕಿರಿದಾಗುವಂತೆ ಸುಮಾರು 2500 ಅಡಿ ಉದ್ದ ನಿರ್ಮಿಸಿದ್ದು ಅದು ಸ್ಥಳೀಯರಿಂದ ಇತ್ತಿತ್ತಲಾಗಿ ನಾಶವಾಗಿ ದಿಬ್ಬಿ ಉಳಿದಿದೆ. ಅದರ ಒಳಸುತ್ತು ಕಂದಕ ಸುಮಾರು 60 ಅಡಿಗಿಂತ ಹೆಚ್ಚು ಅಗಲ 25-30 ಅಡಿ ಆಳ ಕಂದಕ ನದಿ ಪಾತಳಿಯಿಂದ ಪ್ರಾರಂಭವಾಗಿ ಪುನಃ ನದಿಯವರೆಗೆ ಸದಾ ನೀರು ಹರಿವಂತೆ ಕಂದಕವಿದ್ದು, ಕಂದಕಕ್ಕೆ ನೈಸರ್ಗಿಕವಾಗಿ ನೀರು ಹರಿಯುವಂತೆ ನದಿಯಲ್ಲಿ ಸುಮಾರು 50 ಅಡಿ ಉದ್ದ 10 ಅಡಿ ಅಗಲ 25-30 ಅಡಿ ಎತ್ತರದ ಅತೀ ಭಾರವಾದ ಶಿಲೆಗಾರೆಗಚ್ಚು ಉಪಯೋಗಿಸಿ ತಡೆಗೋಡೆ ನಿರ್ಮಿಸಲಾಗಿದ್ದು ಇಂದಿಗೂ ಭದ್ರವಾಗಿ ಉಳಿದಿದೆ. ಕಂದಕ ಅನುಸರಿಸಿ ಮತ್ತೊಂದು ಬದಿಗೆ ಮತ್ತೊಂದು ಮಧ್ಯದ 3ನೇ ಕೋಟೆ ಗೋಡೆ ಸ್ಥಳೀಯ ಪರಿಕರಗಳಿಂದ ನಿರ್ಮಿಸಲಾಗಿದ್ದು, ಅದು ಹಾಳಾಗಿದೆ. ಆದರೆ 2ನೇ ಒಳಸುತ್ತು ಕೋಟೆ ಗೋಡೆ ಅಳುವೇರಿ ಭಾರವಾದ ದೊಡ್ಡ ಗಾತ್ರದ ಕಲ್ಲುಗಚ್ಚು ಗಾರೆಯಿಂದ ಗುಡ್ಡ ದಿಣ್ಣೆ ಸುತ್ತಲೂ ನದಿದಂಡೆ ಸಹಿತ ಆಯಾತಾಕಾರದಲ್ಲಿ ನಿರ್ಮಿಸಲಾಗಿದೆ. ಸಾಮಾನ್ಯವಾಗಿ ಇತರೆ ಕೋಟೆ ದಿಡ್ಡಿ ಬಾಗಿಲುಗಳಿಗಿಂತ ಉತ್ತರ ದಿಶೆ ದಿಡ್ಡಿ ಬಾಗಿಲು ಎತ್ತರದಲ್ಲಿ ಅಗಲದಲ್ಲಿ ದೊಡ್ಡದಾಗಿದ್ದು, ಪುಲಿಯೋಗ ಎತ್ತರ, ಅಗಲದಲ್ಲಿ ದೊಡ್ಡದಾಗಿದ್ದು ದಕ್ಷಿಣ ಆಸೆ ಬಾಗಿಲು ಎಲ್ಲಾ ಕೋಟೆ ಬಾಗಿಲಿನಂತಿದೆ. ಈ ಸುತ್ತಾ ಕೋಟೆಗೆ ಆರು ಕೊತ್ತಲುಗಳು ಉಬ್ಬು ಅರ್ಧ ಚಂದ್ರಾಕೃತಿ ಯಲ್ಲಿವೆ. ಈ ಕೋಟೆಗೋಡೆಗಳ ಮೇಲೆ ಬಟ್ಟದೆನೆ ಅವುಗಳ ಮೇಲೆ ಅಂಬಗಂಡಿ ಬಟ್ಟದೆನೆಯಲ್ಲಿ ವಿವಿಧೆಡೆ ಗುರಿಯಿಟ್ಟು ಶಸ್ತ್ರಾಸ್ತ್ರ ಮದ್ದುಗುಂಡು ಉಪಯೋಗಕ್ಕಾಗಿ ಕಿಂಡಿಗಳನ್ನು ನಿರ್ಮಿಸಲಾಗಿದೆ. ಕೋಟೆಯ ಮಧ್ಯದಲ್ಲಿ ತಲ ಅಂತಸ್ತು ಮತ್ತು ಮೇಲಂತಸ್ತಿನ ಅರಮನೆ ಕಟ್ಟಿಗೆ ಕಂಬ ತೊಲೆಗಳು ಕಲ್ಲು ಹಾಸಿಗೆ, ಗಾರೆ ಗಚ್ಚು ಲೇಪನ ಮಾಡಲಾಗಿವೆ. ಆದರೆ ಅವು ಸ್ಥಳೀಯರಿಂದ ಕಟ್ಟಡ ಸಾಮಗ್ರಿಗಳು ಸ್ಥಳಾಂತರಗೊಂಡು ಹಾಳಾಗಿದೆ. ಗೋಡೆಗಳು ಇನ್ನು ಉಳಿದಿವೆ ಆದರೂ ಸಹ ಮೇಲ್ಮಹಡಿಗೆ ಹೋಗಲು ಪ್ರತ್ಯೇಕ ವ್ಯವಸ್ಥೆಯಿದ್ದು ಮೆಟ್ಟಿಲುಗಳುಳ್ಳ ಅಂಕುಡೊಂಕಾದ ಗೂಡಿನಂತಹ ಪ್ರತ್ಯೇಕ ಮನೆ ಇದ್ದು ಅರಮನೆಗಿಂತ ಎತ್ತರವಾಗಿದೆ ಇದರಲ್ಲಿ ಮೇಲೆ ಹೋಗಿ ಸುತ್ತಲೂ ವೀಕ್ಷಿಸಿದಾಗ 10-15 ಕಿ.ಮೀ. ಸುತ್ತಣ ಪ್ರದೇಶ ಕಾಣಿಸುತ್ತದೆ. ಈಗಲೂ ನದಿ ಪ್ರವಾಹ ನೋಡಲು ಜನರು ಅದನ್ನು ಹತ್ತಿ ವೀಕ್ಷಿಸುತ್ತಾರೆ. ಅರಮನೆ ಪಕ್ಕದಲ್ಲಿ ಶಸ್ತ್ರಾಗಾರ, ಮದ್ದುಗುಂಡು ಅರೆವ ಒರಳು, ಕಲ್ಲುಗಳುಳ್ಳ ದೊಡ್ಡದಾರ ಮನೆ, ಕಾಳು ಕಣಜಗಳು ಇವೆ ಆದರೆ ಸೈನಿಕ ವಸತಿಗಾಗಿ ನಿವೇಶನಗಳಿಲ್ಲ ನೀರಿಗಾಗಿ ಸೈನಿಕರಿಗೆ, ಆನೆ ಕುದುರೆಗಳಿಗೆ ನದಿ ತಟದಲ್ಲಿ ತಡೆಗೋಡೆ ಪಕ್ಕದಲ್ಲಿ ಒಂದು ಬಾಂಡ್ಲಿ ತರಹದ ಬಾವಿ ಇದ್ದು ಅಲ್ಲಿ ನೀರು ಕುಡಿದು ಬರಲು ಕೋಟೆಯಲ್ಲಿ ಪ್ರತ್ಯೇಕ ಬಾಗಿಲುಗಳಿವೆ. ಕಾವಲು ಸೈನಿಕರಿಗಾಗಿ ಬೇರೆ ಕಡೆಯಿಂದ ರಜಪೂತ ಆರೇರು (ಮರಾಠ) ಸೈನಿಕರನ್ನು ನೇಮಿಸಿದ್ದು, ಅವರಿಗೆ ಕೋಟೆ ಹೊರಗಡೆ ವಸತಿ ಕಲ್ಪಿಸಿದ್ದು, ಕೋಟೆ ಪಕ್ಕದಲ್ಲಿ ಹೊಸವೂರು (ಐರಣಿ) ಮತ್ತು ಅರೇಮಲ್ಲಾಪುರ ಗ್ರಾಮಗಳಾಗಿ ಪರಿವರ್ತಿತವಾಗಿವೆ.
ರಾಜಕೀಯ ಚರಿತ್ರೆ: ಕೋಟೆ ಕಟ್ಟುವವರೆಗೆ ಈ ಪ್ರದೇಶ ಅರಣ್ಯಮಯ ವಾಗಿದ್ದು ಗ್ರಾಮವಿರಲಿಲ್ಲ. ಕದಂಬರ ಬಂಧುಗಳು ಗುಪ್ತ ಸಾಮ್ರಾಟರ ವಂಶಜರು ಆದ ಗುತ್ತವೊಳಲಗುತ್ತರು ತಮ್ಮನ್ನು ಉಜ್ಜೈನಿ ಸಾಮ್ರಾಟ ಚಂದ್ರಗುಪ್ತನ ವಂಶಜರೆಂದು ಹೇಳಿಕೊಂಡಿದ್ದು ಬನವಾಸಿ 12000ದ ಉತ್ತರದಲ್ಲಿ ಹಾವೇರಿ ರಾಣೆಬೆನ್ನೂರು ತಾಲ್ಲೂಕುಗಳ ಕೆಲಭಾಗ ಸೇರಿಸಿ ತುಂಗಭದ್ರಾ ನದಿವರೆಗಿನ ಪ್ರದೇಶದಲ್ಲಿ ಪುಟ್ಟ ರಾಜ್ಯ ಕಟ್ಟಿಕೊಂಡು (ಕೆಲಕಾಲ ವ್ಯಾಪ್ತಿ ಮೀರಿ ಆಡಳಿತ ಮಾಡಿದ್ದಾರೆ) ಆಳಿದ್ದು ಅದಕ್ಕೆ ಗುತ್ತವೊಳಲು ರಾಜ್ಯವೆಂದು ಹೆಸರಿದ್ದು ಕ್ರಿ.ಶ.7ನೇ ಶತಮಾನದಿಂದ 13ನೇ ಶತಮಾನದವರೆಗೆ ರಾಜ್ಯವಾಳಿದ್ದಾರೆ. ಈ ಪರಿಸರದ ಐರಾವತ ಕ್ಷೇತ್ರ ಗುತ್ತಳ ರಾಜ್ಯ ಮತ್ತು ಬನವಾಸಿ 12000ರ ಗಡಿಯಾಗಿ ಅರಣ್ಯವಿದ್ದಿತು. ಈ ಅರಣ್ಯ ಗುತ್ತವೊಳಲ ರಾಜ್ಯದಲ್ಲಿಯ ಪ್ರದೇಶವಾಗಿತ್ತು ಎಂಬುದು ಈ ಪ್ರದೇಶ ವ್ಯಾಪ್ತಿಯ ಗ್ರಾಮ ರಾಣೆಬೆನ್ನೂರು ತಾಲ್ಲೂಕು, ಹಿರೇಬಿದರಿಯ 7ನೇ ಶತಮಾನದ ಬಾದಾಮಿ ಚಲುಕ್ಯರ ವಿನಯಾದಿತ್ಯ ಕಾಲದ ಶತಮಾನ, ರಾಷ್ಟ್ರಕೂಟ ಶುಂಭತುಂಗ (2ನೇ ಕೃಷ್ಣ ಕಾಲದ ಕ್ರಿ.ಶ.878-79 ಶಾಸನ ಮತ್ತು ಸೇವುಣ ರಾಮಚಂದ್ರನ ಕಾಲದ ಕ್ರಿ.ಶ.1283 ಶಾಸನದಿಂದ ಗುತ್ತರ ಆಳ್ವಿಕೆ ಬಗ್ಗೆ ತಿಳಿದುಬರುತ್ತದೆ. ಗುತ್ತರು ಅಧೀನರಾಜರಾಗಿ ಕೆಲಕಾಲ ಸ್ವತಂತ್ರವಾಗಿ ಅಧಿಕಾರ ನಡೆಸಿದ್ದು ಮುಂದೆ ಕ್ರಿ.ಶ. 1296ರ  ಅಲ್ಲಾವುದ್ದೀನ ಖಿಲ್ಜಿ ದಾಳಿಯಿಂದಾಗಿ ಆ ವಂಶದ ಆಳ್ವಿಕೆ ಕೊನೆಗೊಂಡು ಕುಮ್ಮಟದುರ್ಗದ ಸಿಂಗೇಯನಾಯಕನು ಆಳಿದ್ದು, ದೆಹಲಿ ಸುಲ್ತಾನರು ದಾಳಿಯಿಂದಾಗಿ ಆ ವಂಶ ನಾಶವಾಗಿ ಮುಂದೆ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಗಿ ಬಂಕಾಪುರ ಉಪರಾಜಧಾನಿ ಅಧೀನದಲ್ಲಿ (ಹಾವನೂರು) ಭುಜಂಗನಗರ ಗುತ್ತಲ ನಾಡಿನಲ್ಲಿ ಗುತ್ತಳ ದೇಸಾಯಿ ಆಡಳಿತದಲ್ಲಿ ಮುಂದುವರೆದು ವಿಜಯನಗರ ಸಾಮ್ರಾಜ್ಯ ಪತನವಾದ ನಂತರ ವಿಜಾಪುರ ಆದಿಲ್‍ಶಾಹಿ ವಂಶಜರ ಆಡಳಿತದಲ್ಲಿ ವಿಜಾಪುರ ಸುಲ್ತಾನರು ಅವರ ವಂಶಜನಾದ ಸಿಕಂದರ ಸುಲ್ತಾನ ಕಾಲಕ್ಕೆ ಕ್ರಿ.ಶ.1686ರಲ್ಲಿ ಔರಂಗಜೇಬ ವಿಜಾಪುರ ವಶಪಡಿಸಿಕೊಂಡು ಸುಲ್ತಾನರ ಸಮಸ್ತ ಅಧಿಕಾರವನ್ನು ವಿಜಾಪುರ ಸುಲ್ತಾನನ ಅಧಿಕಾರಿಯಾಗಿದ್ದ ಅಬ್ದುಲ್ ರವೂಪಾನನಿಗೆ ಕೊಟ್ಟು ಕರ್ನಾಟಕ ಸುಬಾ (ಪ್ರಾಂತ)ದ ಮುನಸುಬಾದರಿನನ್ನಾಗಿ ಮಾಡಿದೆ, ಕರ್ನಾಟಕ ಸುಭ (ಪ್ರಾಂತ) ಬಿಜಾಪುರ ಸುಲ್ತಾನ ಎರಡನೇ ಆದಿಲ್‍ಷಾನು ಆಡಳಿತ ಸುಧಾರಣೆಗಾಗಿ ಕರ್ನಾಟಕ ಸುಭಾ ಎಂದು ಮೂರು ಸರ್ಕಾರ ಹಾಗೂ 22 ಮಹಲು ಮಹಲುಗಳನ್ನೊಳಗೊಂಡ ಸುಭಾ ರಚಿಸಿದ್ದ ಅದಕ್ಕೆ ಬಂಕಾಪುರ ಆಡಳಿತ ಕೇಂದ್ರವಾಗಿದ್ದು ಆ 22 ಮಹಲುಗಳಲ್ಲಿ 1 ದುಮಾಳ + 17 ಗ್ರಾಮ ಒಟ್ಟು 18 ಗ್ರಾಮಗಳನ್ನೊಳಗೊಂಡ ಮಹಲು (ಚಿಕ್ಕ ಆಡಳಿತ ಕೇಂದ್ರ ದೇಹಾತ್ ಖಿಲಾ ಐರಣಿ ಒಂದಾಗಿತ್ತು. ಕ್ರಿ.ಶ.1707ರಲ್ಲಿ ಔರಂಗಜೇಬ ತೀರಿಕೊಂಡ ನಂತರ ಮೊಗಲ್ ಸಾಮ್ರಾಜ್ಯ ಪತನವಾಗಿ ರವೂಫಖಾನ ಸ್ವತಂತ್ರನಾಗಿ ಅಲ್ಲಿಂದ ಸವಣೂರ ನವಾಬರ ಅಧೀನದಲ್ಲಿ ಉಳಿದು ಮರಾಠ ಪೇಶ್ವೆ ನವಾಬರ ಸಹ ಆಡಳಿತ ಸುಮಾರು ಕ್ರಿ.ಶ.1800ರವರೆಗೆ ಮುಂದುವರೆಯಿತು. ದೋಂಡಿಯ ವಾಘನನ್ನು ಗಲ್ಲಿಗೇರಿಸಿದ ನಂತರ ಬ್ರಿಟಿಷರ ಆಡಳಿತ ಪ್ರಾರಂಭವಾಗಿ ಸ್ವಾತಂತ್ರದವರೆಗೆ ಬ್ರಿಟಿಷ್ ಮುಂಬೈ ಸರಕಾರದಲ್ಲಿ ಮುಂದುವರಿದು 1947ರಲ್ಲಿ ಸ್ವತಂತ್ರವಾದ ನಂತರ ಮುಂಬೈ ರಾಜ್ಯದಲ್ಲಿ ಸೇರ್ಪಡೆಯಾಗಿ ಭಾಷಾವಾರು ಪ್ರಾಂತ್ಯ ರಚನೆಯಾದ ನಂತರ ಕ್ರಿ.ಶ.1956 ನವೆಂಬರ್ 2 ರಿಂದ ಮೈಸೂರು/ಕರ್ನಾಟಕ ರಾಜ್ಯದಲ್ಲಿ ಹಳೇ ಧಾರವಾಡ ಜಿಲ್ಲೆ ಪುನರಚನೆ ನಂತರ ಹಾವೇರಿ ಜಿಲ್ಲಾ ರಾಣೆಬೆನ್ನೂರು ತಾಲ್ಲೂಕಿನಲ್ಲಿ ಒಂದು ಗ್ರಾಮ ಪಂಚಾಯ್ತಿ ಕೇಂದ್ರವಾಗಿ ಮುಂದುವರೆದಿದೆ.

 ವಕೀಲರು, ದೇವರಾಜ ಅರಸ್ ಬಡಾವಣೆ, `ಬಿ’ ಬ್ಲಾಕ್, 10ನೇ ಕ್ರಾಸ್, ನಂ. 300, ದಾವಣಗೆರೆ-577006.

No comments:

Post a Comment