Thursday, July 17, 2014

ವೆಂಗಿಮಂಡಳ


`ವೆಂಗಿವಿಷಯ, ವೆಂಗಿಮಂಡಳ, ವೆಂಗಿಪಳು’ :
ಒಂದು ವಿಚಾರ
ಶಾಶ್ವತಸ್ವಾಮಿ ಮುಕ್ಕುಂದಿಮಠ
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹಾಗೂ ಕರ್ನಾಟಕ ಇತಿಹಾಸದಲ್ಲಿ `ವೆಂಗಿಲಮಂಡಲ’ದ ವಿಚಾರ ಹಲವಾರು ಬಾರಿ ಪ್ರಸ್ತಾಪವಾಗುತ್ತದೆ.1 ಹತ್ತನೆಯ ಶತಮಾನದ ಕೆಲವು ಕವಿಗಳ ಸ್ಥಳ ವೆಂಗಿಯಾಗಿತ್ತು. ಆದಿಕವಿ ಪಂಪ, ನಾಗವರ್ಮ, ದುರ್ಗಸಿಂಹ ಮೊದಲಾದ ಕವಿಗಳು ವೆಂಗಿಮಂಡಲದವರೆಂದು ಅದರ ಕಾವ್ಯದಿಂದ ತಿಳಿದುಬರುತ್ತದೆ. ಈ ವೆಂಗಿಮಂಡಳವು 7ನೆಯ ಶತಮಾನದಿಂದ 12ನೆಯ ಶತಮಾನದವರೆಗೆ ಆರು ಶತಮಾನಗಳ ಕಾಲ ಕನ್ನಡರಸರು ಆಳಿದ ಪ್ರದೇಶ. ಅಲ್ಲಿ ಕನ್ನಡ ರಾಜರು ನಿರಂತರವಾಗಿ ಸಾಮ್ರಾಜ್ಯವನ್ನು ಸ್ಥಾಪಿಸಿ, ಕನ್ನಡದ ಪ್ರಭುತ್ವವನ್ನು ಸಾಧಿಸಿದ್ದು ಇತಿಹಾಸದಿಂದ ಗೊತ್ತಾಗುತ್ತವೆ. ದಕ್ಷಿಣ ಭಾರತದ ಇತಿಹಾಸದಲ್ಲಿ ವೆಂಗಿಮಂಡಳ ಪ್ರಮುಖ ಆಡಳಿತ ಭಾಗವಾಗಿತ್ತು. ಇದರ ಮೇಲೆ ತಮ್ಮ ಸಾರ್ವಭೌಮತ್ವವನ್ನು ಸಾಧಿಸಲು ದಕ್ಷಿಣ ಭಾರತದಲ್ಲಿದ್ದ ಕಂಚಿಯ ಪಲ್ಲವರು ಮತ್ತು ತಂಜಾವೂರಿನ ಚೋಳರು ಚಾಳುಕ್ಯರ ಮೇಲೆ ಕೆಲವು ಸಲ ಯುದ್ಧ ಮಾಡಿದ ವಿಚಾರ ಇತಿಹಾಸದಲ್ಲಿ ಉಲ್ಲೇಖವಾಗಿದೆ.2 ಇಷ್ಟೊಂದು ಚಾರಿತ್ರ್ಯಿಕ ಮಹತ್ತ್ವ ಹೊಂದಿದ ವೆಂಗಿವಿಷಯ ಮಂಡಲವು ಇದ್ದ ಪ್ರದೇಶದ ಮೇರೆ, ವಿಸ್ತಾರ ಇತ್ಯಾದಿ ವಿಚಾರಗಳ ಬಗೆಗೆ ಸ್ಪಷ್ಟವಾಗಿ ತಿಳಿದುಬರುವುದಿಲ್ಲ. ಇತಿಹಾಸ ಕಾರರಲ್ಲಿಯೂ ಒಮ್ಮತದ ಅಭಿಪ್ರಾಯ ಕಂಡುಬರುವುದಿಲ್ಲ. ಕನ್ನಡ ಕಾವ್ಯ, ಶಾಸನ ಹಾಗೂ ಇತಿಹಾಸಗಳು ನೀಡುವ ಆಧಾರದ ಮೇಲೆ ದಕ್ಷಿಣ ಭಾರತದಲ್ಲಿ ಕಳಿಂಗದಿಂದ ಪಶ್ಚಿಮಕ್ಕೆ ಮತ್ತು ಕನ್ನಡನಾಡಿನ ಪೂರ್ವಕ್ಕೆ ಹಬ್ಬಿಕೊಂಡ ವಿಶಾಲವಾದ ಪ್ರದೇಶ ವೆಂಗಿವಿಷಯವಾಗಿತ್ತು ಎಂದು ತಿಳಿದುಬರುತ್ತದೆ. ದಕ್ಷಿಣದ ಕೃಷ್ಣಾನದಿ ಉತ್ತರದ ಗೋದಾವರಿ ನದಿಗಳು ಇದರ ಪೂರ್ವೋತ್ತರ ಗಡಿಯಾಗಿದ್ದವು. ಆದರೆ ಈ ಸೀಮೆ ರಾಜಕೀಯ ಬದಲಾವಣೆಯೊಂದಿಗೆ ಬದಲಾಗುತ್ತ ಬಂದಿರುವುದು ತಿಳಿದುಬರುತ್ತದೆ.
ವೆಂಗಿ ಚರಿತ್ರೆ : ಶಾತವಾಹನರ (ಕ್ರಿ.ಶ.1-3 ಶತಮಾನ) ಆಳ್ವಿಕೆಯ ಕಾಲದಲ್ಲಿ ವೆಂಗಿ ಮತ್ತು ಕಳಿಂಗ ದೇಶಗಳು ಅವರ ಪ್ರಭುತ್ವಕ್ಕೆ ಒಳಪಟ್ಟಿದ್ದವು. ಆ ಕಾಲದಲ್ಲಿ ವೆಂಗಿ ಮತ್ತು ಕಳಿಂಗದ ಭಾಷೆ ತೆಲುಗು ಭಾಷೆಯಾಗಿತ್ತಲ್ಲದೆ ವೆಂಗಿಮಂಡಳ ಕಳಿಂಗ ದೇಶದಲ್ಲಿ ಅಂತರ್ಗವಾಗಿತ್ತೆಂದು ಇತಿಹಾಸ ಹೇಳುತ್ತವೆ.3 `ಆಂಧ್ರಭೃತ್ಯರು’ ಎಂದು ಕರೆದುಕೊಂಡ ಚಟುಕಲಾನಾಂದ ಹೆಸರಿನ ಒಂದು ವಂಶ ಶಾತವಾಹನರ ಕೈಕೆಳಗಿನ ಪಂಗಡವರು ಆಂಧ್ರಭಾಷೆಯ ಮೂಲಪುರುಷರೆಂದು ಡಿ.ವಿ. ಕೃಷ್ಣರಾವ್ ಅಭಿಪ್ರಾಯಪಡುತ್ತಾರೆ.4 ನಂತರ ಮಧುರೆಯ ಪಾಂಡ್ಯರು (ಕ್ರಿ.ಶ.5-6ನೆಯ ಶತಮಾನ) ದಕ್ಷಿಣಭಾರತದಲ್ಲಿ ತಮ್ಮ ರಾಜ್ಯವನ್ನು ವಿಸ್ತರಿಸಿ, ಬಲಾಢ್ಯ ರಾಜ್ಯವಾಗಿ ಆಳುತ್ತಿರುವ ಕಾಲದಲ್ಲಿ ವೆಂಗಿ ಪಲ್ಲವ ರಾಜ್ಯದ ಒಂದು ಮಂಡಲವಾಗಿತ್ತು. ತರುವಾಯ ಬಾದಾಮಿಯ ಚಾಳುಕ್ಯರು (ಕ್ರಿ.ಶ.450-735) ಪಲ್ಲವರನ್ನು ಯುದ್ಧಲ್ಲಿ ಸೋಲಿಸಿ ದಕ್ಷಿಣ ಭಾರತದಲ್ಲಿ ರಾಜ್ಯ ಪ್ರಭುತ್ವವನ್ನು ಸ್ಥಾಪಿಸಿದರು. ಆಗ ವೆಂಗಿ ಬಾದಾಮಿ ಚಾಳುಕ್ಯರ ವಶವಾಯಿತು. ಅಂದಿನಿಂದ ಆರು ಶತಮಾನಗಳ ದೀರ್ಘಕಾಲ (ಕ್ರಿ.ಶ.630-1140) ವೆಂಗಿ ಕನ್ನಡ ಅರಸು ಮನೆತನಗಳ ನಿರಂತರ ಆಡಳಿತಕ್ಕೆ ಒಳಪಟ್ಟಿತ್ತು. ಬಾದಾಮಿ ಚಾಳುಕ್ಯರು, ಮಳಖೇಡದ ರಾಷ್ಟ್ರಕೂಟರು ಹಾಗೂ ಕಲ್ಯಾಣದ ಚಾಳುಕ್ಯ ಮನೆತನಗಳು ನಿರಂತರವಾಗಿ ವೆಂಗಿಯ ಮೇಲೆ ತಮ್ಮ ಪ್ರಭುತ್ವವನ್ನು ಸಾಧಿಸಿದವು. ಅಷ್ಟು ಸುದೀರ್ಘ ಕಾಲಾವಧಿಯಲ್ಲಿ ದಕ್ಷಿಣ ಭಾರತದಲ್ಲಿ ಆಳಿದ ಮತ್ತಾವ ರಾಜಮನೆತನಗಳು ಕನ್ನಡ ಅರಸುಮನೆತನಗಳ ವಶದಲ್ಲಿದ್ದ ವೆಂಗಿಮಂಡಲವನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲವೆಂಬುದು ಮಹತ್ತ್ವದ ಸಂಗತಿ. 10ನೆಯ ಶತಮಾನದ ಪ್ರಾರಂಭದಲ್ಲಿ ತಂಜಾವೂರಿನ ಚೋಳರು ವೆಂಗಿಯ ಮೇಲೆ ತಮ್ಮ ಪ್ರಭುತ್ವವನ್ನು ಸ್ಥಾಪಿಸಲು ಒಂದೆರಡು ಸಲ ಪ್ರಯತ್ನಪಟ್ಟದ್ದು ಗೊತ್ತಾಗುತ್ತದೆ.
ಒಂದನೆಯ ಪರಾಂತಕ ಚೋಳ (ಕ್ರಿ.ಶ.907-953) ರಾಷ್ಟ್ರಕೂಟ ಮೂರನೆಯ ಕೃಷ್ಣ (ಕ್ರಿ.ಶ.939-967)ನೊಂದಿಗೆ ಮಾಡಿದ `ತಕ್ಕೊಲಂ’ ಕಾಳಗದಲ್ಲಿ ಚೋಳಪರಾಂತಕನು ಸಂಪೂರ್ಣ ಸೋತುಹೋದನು. ಕೃಷ್ಣನ ಸಹೋದರಿಯ ಗಂಡನಾದ ಗಂಗರ ಬೂತುಗನು ಈ ಯುದ್ಧದಲ್ಲಿ ಪರಾಕ್ರಮವನ್ನು ಮೆರೆದು ರಾಷ್ಟ್ರಕೂಟರಿಗೆ ವಿಜಯವನ್ನು ಸಂಪಾದಿಸಿಕೊಟ್ಟನು. ಕನ್ನಡ ಅರಸರು ಚೋಳರನ್ನು ಸೋಲಿಸಿ ಹಿಮ್ಮೆಟ್ಟಿಸಿದ `ತಕ್ಕೊಲಂ’ ಕಾಳಗ ದಕ್ಷಿಣ ಭಾರತದ ಇತಿಹಾಸದಲ್ಲಿ ಪ್ರಸಿದ್ಧಿ ಪಡೆಯಿತು. ಕ್ರಿ.ಶ.1118ರಲ್ಲಿ ಒಮ್ಮೆ ವೆಂಗಿ ಚೋಳರ ವಶವಾಗುತ್ತದೆ. ಕ್ರಿ.ಶ.1126ರಲ್ಲಿ ವೆಂಗಿಯನ್ನು ಚೋಳರಿಂದ ಕಲ್ಯಾಣ ಚಾಳುಕ್ಯರು ತಮ್ಮ ಅಧೀನಕ್ಕೆ ತೆಗೆದುಕೊಂಡರು.5 ಅಲ್ಲಿಗೆ ವೆಂಗಿಯ ರೋಚಕ ಇತಿಹಾಸ ಮುಕ್ತಾಯವಾಗುತ್ತದೆ.
ವೆಂಗಿಯ ಪೂರ್ವ ಚಾಳುಕ್ಯ ಮನೆತನ: ವೆಂಗಿಯನ್ನು ವಿಷಯ ಮಂಡಲವೆಂದು ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲು ಗುರುತಿಸಿ ಕಾಣಿಸಿ ಅದಕ್ಕೆ ಸ್ಥಾನ-ಮಾನವನ್ನು ಗಳಿಸಿಕೊಟ್ಟವರು ಬಾದಾಮಿ ಚಾಲುಕ್ಯರು. ಬಾದಾಮಿ ಚಾಲುಕ್ಯರ ಮನೆತನವೊಂದು ವೆಂಗಿಮಂಡಲದಲ್ಲಿ `ಪೂರ್ವ ಚಾಳುಕ್ಯ’ ಹೆಸರಿನಿಂದ ರಾಜ್ಯಭಾರ ಮಾಡಿತು. ಇದೇ ಹೆಸರಿನ ಮನೆತನ ಆರು ಶತಮಾನಗಳ ಕಾಲ ವೆಂಗಿಯಲ್ಲಿ ನಿರಂತರ ಆಳ್ವಿಕೆ ಮಾಡಿ ಪ್ರಸಿದ್ಧವಾಯಿತು.6
ಬಾದಾಮಿ ಚಾಲುಕ್ಯರ ಪ್ರಸಿದ್ಧ ಅರಸು ದಕ್ಷಿಣಪಥ್ಯೇಶ್ವರ, ಪರಮೇಶ್ವರ ಮುಂತಾದ ಬಿರುದುಗಳನ್ನು ಪಡೆದ ಪ್ರಸಿದ್ಧ ಇಮ್ಮಡಿ ಪುಲಕೇಶಿಯು (ಕ್ರಿ.ಶ.6002-642) ದಕ್ಷಿಣ ಭಾರತವನ್ನು ಗೆದ್ದು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡನು. ವೆಂಗಿ ಆತನ ಸ್ವಾಧೀನವಾಯಿತು. ದಕ್ಷಿಣ ಭಾರತದ ಮೇಲೆ ತನ್ನ ರಾಜ್ಯಪ್ರಭುತ್ವವನ್ನು ನಿಯಂತ್ರಿಸಲು ಪುಲಿಕೇಶಿಯು ಆಯಕಟ್ಟಿನ ಸ್ಥಳವಾದ ವೆಂಗಿಯನ್ನು ತನ್ನ ಸಾಮ್ರಾಜ್ಯದ ಉಪ ಆಡಳಿತ ವಿಭಾಗವಾಗಿ ಮಾಡಿ, ಅಲ್ಲಿ ತನ್ನ ತಮ್ಮ ಕುಬ್ಜ ವಿಷ್ಣುವರ್ಧನನನ್ನು ರಾಜಪ್ರತಿನಿಧಿಯಾಗಿ ನೇಮಿಸಿದನು. ಉತ್ತಮ ಆಡಳಿತಗಾರನಾಗಿದ್ದ ಆತನು ವೆಂಗಿಯಲ್ಲಿ `ಪೂರ್ವಚಾಳುಕ್ಯ’ ಮನೆತನಕ್ಕೆ ಆಸ್ತಿಭಾರ ಹಾಕಿದನು.7 ವೆಂಗಿ ಪೂರ್ವ ಚಾಳುಕ್ಯ ಮನೆತನವು 12ನೆಯ ಶತಮಾನದವರೆಗೆ ನಿರಂತರ ರಾಜ್ಯಭಾರ ಮಾಡಿತು. ರಾಜಕೀಯ ಸ್ಥಿತ್ಯಂತರಗಳಿಂದ ರಾಜಮನೆತನಗಳ ಆಡಳಿತದ ಹಸ್ತಾಂತರವಾದರೂ ವೆಂಗಿಯಲ್ಲಿ ಚಾಳುಕ್ಯರ ಅಧಿಕಾರಕ್ಕೆ ಯಾವ ಬಾಧಕವಾಗಲಿಲ್ಲ. ಬಾದಾಮಿಯ ಚಾಲುಕ್ಯರ ನಂತರ ಆಳಿದ ಮಳೇಖೇಡದ ರಾಷ್ಟ್ರಕೂಟ ಮನೆತನದ ಅಧಿಕಾರದಲ್ಲಿ (ಕ್ರಿ.ಶ.735-933) ವೆಂಗಿಯ ಚಾಳುಕ್ಯರು ರಾಷ್ಟ್ರಕೂಟರ ಸಾಮಂತರಾಗಿ ರಾಜ್ಯಭಾರ ಮಾಡುತ್ತಿದ್ದರು.
ಇದೇ ಕಾಲಾವಧಿಯಲ್ಲಿ ಪಂಪಕವಿಯ ಆಶ್ರಯ ದೊರೆ ಎರಡನೆಯ ಅರಿಕೇಸರಿ (ಕ್ರಿ.ಶ.927-962) ರಾಷ್ಟ್ರಕೂಟರ ಸಾಮಂತ ಅರಸನಾಗಿದ್ದ. ಈತ ವೇಮುಲವಾಡ ಶಾಸನವನ್ನು (ಕ್ರಿ.ಶ.927) ಸಂಸ್ಕøತದಲ್ಲಿ ಬರೆಯಿಸಿದನು. ಈತನ ಕಾಲದಲ್ಲಿ ಪಂಪಕವಿಯ ತಮ್ಮ ಜಿನವಲ್ಲಭನು ಬೊಮ್ಮಲಮ್ಮನಗುಡ್ಡದಲ್ಲಿ ಪಂಪನ ಹೆಸರಿನ ಕನ್ನಡ ಶಿಲಾಶಾಸನವೊಂದನ್ನು (ಕ್ರಿ.ಶ.945) ಬರೆಯಿಸಿದನು. ಅದು ಗಂಗಾಧರಂ ಶಾಸನವೆಂದು ಹೆಸರು ಪಡೆಯಿತು. ಈತನ ನಂತರ ಮೂರನೆಯ ಅರಿಕೇಸರಿ (ಕ್ರಿ.ಶ.963-976) ರಾಷ್ಟ್ರಕೂಟರ ಸಾಮಂತನಾಗಿ ಆಡಳಿತ ಮಾಡಿದನು. ಈತನನ್ನು ಕುರಿತ ಪರಭಣಿ ಸಂಸ್ಕøತ ಶಾಸನ (ಕ್ರಿ.ಶ.966) ಉತ್ತೀರ್ಣಗೊಂಡಿತು. ಆಗಲೇ ಒಂದನೆಯ ಅರಿಕೇಸರಿಯು ಕೋಲಪಾಕ (ಕ್ರಿ.ಶ.790)ರಲ್ಲಿ ಸಂಸ್ಕøತ ಶಾಸನವನ್ನು ಬರೆಯಿಸಿದನು. ರಾಷ್ಟ್ರಕೂಟರ ನಂತರ ಕಲ್ಯಾಣ ಚಾಳುಕ್ಯರು (ಕ್ರಿ.ಶ.933-1140) ನಾಡಿನ ರಾಜ್ಯಸೂತ್ರವನ್ನು ಹಿಡಿದರು. ಇವರ ಕಾಲದಲ್ಲಿ ವೆಂಗಿಯಲ್ಲಿ ಆಳುತ್ತಿದ್ದ ರಾಜಮನೆತನ ಸಾಮಂತ ಅರಸೊತ್ತಗಿಯನ್ನು ಕಿತ್ತೊಗೆದು ಸ್ವತಂತ್ರವಾಗಿ ಕಲ್ಯಾಣ ಚಾಳುಕ್ಯರ ರಾಜಪ್ರತಿನಿಧಿಗಳಾಗಿ ರಾಜ್ಯಭಾರ ಮಾಡಿದರು. ಕಲ್ಯಾಣದಲ್ಲಿ ತ್ರಿಭುವನಮಲ್ಲ ಜಯಸಿಂಹನು (ಕ್ರಿ.ಶ.1004-1016) ಆಳುತ್ತಿದ್ದಾಗ ವೆಂಗಿಯಲ್ಲಿ ವಿನಯಾದಿತ್ಯ ಚಾಳುಕ್ಯನು ಚಾಳುಕ್ಯರ ರಾಜಪ್ರತಿನಿಧಿಯಾಗಿದ್ದನು. ಇದೇ ಸಮಯದಲ್ಲಿ ರಾಜರಾಜ ಚೋಳನು (ಕ್ರಿ.ಶ.925-1014) ಚಾಳುಕ್ಯರ ಮೇಲೆ ಯುದ್ಧ ಸಾರಿದನು. ಈ ಯುದ್ಧದಲ್ಲಿ ಜಯಸಿಂಹನಿಗೆ ಸೋಲಾಯಿತು. ಉಭಯರಲ್ಲಿ ಒಪ್ಪಂದ ಏರ್ಪಟ್ಟು ಎರಡು ರಾಜ್ಯಗಳ ಗಡಿ ತುಂಗಭದ್ರಾ ನದಿಯೆಂದು ನಿರ್ಣಯ ವಾಯಿತು.8 ರಾಜರಾಜ ಚೋಳನು ವೆಂಗಿಯನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಳ್ಳುವ ಸಂಬಂಧವಾಗಿ ಕಲ್ಯಾಣ ಚಾಳುಕ್ಯ ಜಯಸಿಂಹನಿಗೂ ಮತ್ತು ವೆಂಗಿಯ ವಿನಯಾದಿತ್ಯನಿಗೂ ನಡುವೆ ವೈಮನಸ್ಸು ಹುಟ್ಟಿಸಲು ರಾಜರಾಜ ಚೋಳನು ವೆಂಗಿಯ ವಿಜಯಾದಿತ್ಯನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದನು. ಇದರಿಂದ ವಿನಯಾದಿತ್ಯನು ಚೋಳರಿಗೆ ನಿಷ್ಠನಾಗಿ ನಡೆದುಕೊಂಡನು.9
ರಾಜೇಂದ್ರಚೋಳನ ಮಗ ರಾಜರಾಜಚೋಳನಿಗೂ ಮತ್ತು ಚಾಳುಕ್ಯರ ಒಂದನೆಯ ಸೋಮೇಶ್ವರನಿಗೂ (ಕ್ರಿ.ಶ.1040-1060) ನಡೆದ `ಕುಪ್ಪಂ’ ಯುದ್ಧದಲ್ಲಿ ರಾಜರಾಜ ಚೋಳನು ಸೋತು ಮರಣ ಹೊಂದಿದನು. ಕಲ್ಯಾಣ ಚಾಳುಕ್ಯರ ಬಗೆಗೆ ವೆಂಗಿ ಚಾಳುಕ್ಯರಲ್ಲಿ ಹೊಗೆಯಾಡುತ್ತಿದ್ದ ಅಸಮಾಧಾನವನ್ನು ನಿವಾರಿಸಲು ಸೋಮೇಶ್ವರನು ವಿಜಯಾದಿತ್ಯನ ಮಗ ಶಕ್ತಿವರ್ಮನಿಗೆ ವೆಂಗಿಯ ಪಟ್ಟ ಕಟ್ಟಿದನು.10 ಆದರೆ ಈ ಸಮಾಧಾನ ತಾತ್ಕಾಲಿಕವಾಗಿತ್ತು. ಶಕ್ತಿವರ್ಮನ ನಿಷ್ಠೆ ಚೋಳರ ಪರವಾಗಿದ್ದುದರಿಂದ ವೆಂಗಿ ಮತ್ತು ಕಲ್ಯಾಣ ಚಾಳುಕ್ಯ ನಡುವಿನ ಬಾಂಧವ್ಯ ಹಳಸಿ ಮುರಿದು ಬಿದ್ದಿತು. ಸ್ವಲ್ಪ ಕಾಲದಲ್ಲಿ ವೆಂಗಿ ಚೋಳರ ವಶವಾಗಿತ್ತು. ಕಲ್ಯಾಣ ಚಾಳುಕ್ಯರ 6ನೆಯ ವಿಕ್ರಮಾದಿತ್ಯನು (ಕ್ರಿ.ಶ.1070-1126) ಚೋಳರ ಒಂದನೆಯ ಕುಲತ್ತುಂಗನೊಂದಿಗೆ ಯುದ್ಧ ಮಾಡಿದ. ಆ ಯುದ್ಧದಲ್ಲಿ ಕುಲತ್ತುಂಗ ಚೋಳನು ಸಂಪೂರ್ಣವಾಗಿ ಸೋತನು. ವಿಕ್ರಮಾದಿತ್ಯನು ವೆಂಗಿಮಂಡಲವನ್ನು ಮತ್ತೆ ಚೋಳರಿಂದ ಕಸಿದುಕೊಂಡು ಚಾಳುಕ್ಯರಾಜ್ಯಕ್ಕೆ ಸೇರಿಸಿದನು.11
ಕ್ರಿ.ಶ.1183ರಲ್ಲಿ ಕಲ್ಯಾಣ ಚಾಳುಕ್ಯ ಸಾಮ್ರಾಜ್ಯ ಪತನವಾಗುತ್ತಿದ್ದಂತೆ ವೆಂಗಿಮಂಡಲದಲ್ಲಿ ಕನ್ನಡ ಅರಸರ ಅಧಿಪತ್ಯ ಮುಕ್ತಾಯವಾಯಿತು. ಕನ್ನಡ ಭಾಷೆಯ ಪ್ರಭಾವ ಕಡಿಮೆಯಾಗುತ್ತಾ ನಡೆಯಿತು. ಮುಂದೆ ವಾರಂಗಲ್ಲಿನ ಕಾಕತೀಯರಿಂದಾಗಿ ವೆಂಗಿಯಲ್ಲಿ ತೆಲುಗು ಭಾಷೆಯ ಪ್ರಭಾವ ಸಹಜವಾಗಿಯೇ ಹೆಚ್ಚಿತು. ಅದೇ ಕಾಲದಲ್ಲಿ ದಕ್ಷಿಣ ಭಾರತದ ಮೇಲೆ ಮುಸ್ಲಿಂರ ದಾಳಿಯ (ಕ್ರಿ.ಶ.1310) ಪರಿಣಾಮ ವೆಂಗಿಯ ಸ್ವರೂಪ ಮತ್ತು ಅದರ ಗಡಿಗಳಲ್ಲಿ ಬದಲಾವಣೆಗಳಾದವು. ಕಾಲಕ್ರಮೇಣ ತೆಲುಗು ಭಾಷೆ ಅಲ್ಲಿ ತನ್ನ ಪ್ರಭಾವ ಬೀರಿತು. ವಿಜಯನಗರ ಸಾಮ್ರಾಜ್ಯ (ಕ್ರಿ.ಶ.1336-1565) ದಕ್ಷಿಣ ಭಾರತದಲ್ಲಿ ವ್ಯಾಪಿಸಿಕೊಂಡಾಗ ವೆಂಗಿ ಮಂಡಳ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಅದೃಶ್ಯವಾಯಿತು. ಇಲ್ಲಿಗೆ ಅದರ ಇತಿಹಾಸವೂ ಮುಗಿದಂತಾಯಿತು.
ವೆಂಗಿಮಂಡಳದ ಗಡಿಸೀಮೆ-ಪರಿಕಲ್ಪನೆ: ಅಂದಿನ ವೆಂಗಿಮಂಡಳದ ಗಡಿಸೀಮೆಯನ್ನು ಗುರುತಿಸುವುದು ಈಗ ಕಷ್ಟದ ಕೆಲಸ. ಅದರ ವಿಸ್ತಾರ, ವ್ಯಾಪ್ತಿ ಕಾಲಕಾಲಕ್ಕೆ ಬದಲಾಗುತ್ತ ಹೋಗುತ್ತಿರುದ್ದುದು ಇದಕ್ಕೆ ಕಾರಣ. ಈ ಹಿಂದೆ ವಿವರಿಸಿದ ಇತಿಹಾಸ ಹಾಗೂ ಕನ್ನಡ ಕಾವ್ಯಗಳಲ್ಲಿ ಉಲ್ಲೇಖವಾಗಿರುವ ವಿವರಗಳು ಹಾಗೂ ಶಾಸನಗಳ ಉಲ್ಲೇಖಗಳನ್ನು ಆಧಾರವಾಗಿಟ್ಟುಕೊಂಡು ಕನ್ನಡ ಅರಸರು ಆಳಿದ ವೆಂಗಿಯ ಗಡಿ ಸೀಮೆಯನ್ನು ಗುರುತಿಸಲು ಇಲ್ಲಿ ಪ್ರಯತ್ನಿಸಲಾಗಿದೆ.
ಆದಿಕವಿ ಪಂಪ ವಿಕ್ರಮಾರ್ಜುನ ವಿಜಯಕಾವ್ಯದಲ್ಲಿ ವೆಂಗಿಯನ್ನು ವರ್ಣಿಸಿದ ಪದ್ಯ ಹೀಗಿದೆ :
ಆಮಲಯಾಚಲ ಹಿಮಗಿರಿ
ಸೀಮಾವನಿತಳ (ಕೆ) ವೆಂಗಿಮಂಡಳದೊಳ್ ಚೆ |
ಲ್ವಮಾಗೆಯೆ ತನಗೊಂದೂರು
ನಾಮದೊಳಂ ವೆಂಗಿಪಳು ಕರಂ ಸೊಗಯಿಸುಗಂ ||12
``ಮಲಯಾಚಲ ಮೊದಲುಗೊಂಡು ಹಿಮಗಿರಿ ಸೀಮೆಯ ಭೂಭಾಗದವರೆಗಿನ ವೆಂಗಿಮಂಡಳದೊಳಗೆ ತನಗೆ ಯಾವ ಪ್ರಾಂತದಲ್ಲಿಯೂ `ಚಲ್ವು’ ಪಸರಿಸುತ್ತಿರುವ ವೆಂಗಿಪಳು ಶೋಭಿಸುತ್ತದೆ’ ಎಂಬುದು ಈ ಕಂದಪದ್ಯದ ಭಾವಾರ್ಥ. ದಕ್ಷಿಣದ ಮಲಯಪರ್ವತ ಮತ್ತು ಉತ್ತರದ ಹಿಮಾಲಯ ಪರ್ವತಗಳು ವೆಂಗಿಮಂಡಲದ ಗಡಿಗಳೆಂದೂ ಅದು ಅಲ್ಲಿಯವರೆಗೆ ವಿಸ್ತಾರವಾಗಿ ಹಬ್ಬಿದ ವಿಶಾಲವಾದ ಪ್ರದೇಶವಾಗಿತ್ತೆಂದೂ ಭಾವಿಸಬೇಕಾಗುತ್ತದೆ. ಕೇರಳದ ಕರಾವಳಿಯಿಂದ ಉತ್ತರದ ಹಿಮಾಲಯದವರೆಗೆ ವ್ಯಾಪಿಸಿದ ಈ ಪ್ರದೇಶ ಭರತಖಂಡದಲ್ಲಿ ಬಹುವಿಸ್ತಾರ ಪ್ರದೇಶವೆಂದೆನಿಸುತ್ತದೆ. ಆದರೆ ಇದು ಇತಿಹಾಸಕಾರರಿಗೆ, ವಿದ್ವಾಂಸರಿಗೆ ನಂಬಿಕೆಯುಂಟಾಗುವುದು ಕಷ್ಟವೆಂದು ಮುಳಿಯ ತಿಮ್ಮಪ್ಪಯನವರು ಪಡುವ  ಸಂದೇಹ ಒಪ್ಪುವಂತಹದ್ದು.13
ಪಂಪಕವಿಯು ವರ್ಣಿಸಿದ ಪದ್ಯದ ಅರ್ಥವನ್ನು ಕೊಡುವ ಅದೇ ಕಾಲದಲ್ಲಿ ಬರೆಯಿಸಿದ ಎರಡನೆಯ ಅರಿಕೇಸರಿಯ ವೇಮುಲವಾಡ ಶಾಸನ (ಕ್ರಿ.ಶ.927) ನಮ್ಮ ಗಮನ ಸೆಳೆಯುತ್ತದೆ.
ತಸ್ಯಾತ್ಮಜೋ ದಕ್ಷಿಣ ಬಾಹುದಂಡ
ಚಂಡಸಿಧಾರಹತ ವೈರಿಷಂಡಃ |
ಒಳದೃಹಿತಾಖಿಳ ವೆಂಗಿದೇಶಃ
ಪಾತಿ ಸ್ಮಪೃಥ್ವೀಮರಿಕೇಸರೀಶಃ ||14
‘ಒಳದ್ಗ್ಯಹಿತಾಖಿಳ ವೆಂಗಿದೇಶಃ’ ಎಂಬ ವಾಕ್ಯವು ಪಂಪಕವಿಯ ‘ಅವನೀತಳಕೆ ವೆಂಗಿಮಂಡಳದೊಳ್ ಚೆಲ್ವುಮಾಗೆ’ ಎಂಬ ಪದ್ಯವಾಕ್ಯಕ್ಕೆ ಸಮನಾಂತರ ಅರ್ಥ ಸ್ಪುರಿಸುತ್ತದೆ. ಪಂಪಕವಿಯ ಆಶ್ರಯ ದೊರೆ ಅರಿಕೇಸರಿ ಬರೆಯಿಸಿದ ಈ ಸಂಸ್ಕøತ ಶಾಸನ ಹಾಗೂ ಪಂಪಕವಿಯ ಮೇಲಿನ ಪದ್ಯಗಳಿಂದ ವೆಂಗಿಮಂಡಲದ ಸ್ಥಾನ ಹಾಗೂ ಅದರ ಮೇರೆಯ ಗುರುತನ್ನು ಅರಿಯಲು ಪ್ರಮುಖ ಸಾಧನವಾಗಿದೆ. ಅಂತಹದ್ದೇ ಮತ್ತೊಂದು ಅತಿ ಪ್ರಮುಖ ಶಾಸನ ಪಂಪನ ತಮ್ಮ ಜಿನವಲ್ಲಭನು ಕ್ರಿ.ಶ.945 ಬರೆಯಿಸಿದ ಶಾಸನ15. ಪಂಪಕವಿಯ ಪ್ರಶಸ್ತಿಗಾಗಿ ಬರೆಯಿಸಿದ್ದು. ಪಂಪಕವಿ ನಿಧನನಾದ ಕೆಲವು ದಿನಗಳಲ್ಲಿ ಈ ಶಾಸನ ಬರೆಯಿಸಿದಂತೆ ಕಾಣುತ್ತದೆ. ಕವಿಯ ತಾಯಿ ಅಪ್ಪಣ್ಣಬ್ಬೆ, ಆಕೆಯ ತಂದೆ ಜೋಯಿಸರ ಸಿಂಗ, ಊರು ಅಣ್ಣಿಗೆರೆ, ಕಮ್ಮೆಬ್ರಾಹ್ಮಣ, ವತ್ಸಗೋತ್ರ ಇತ್ಯಾದಿ ಪಂಪನ ವಿಚಾರಗಳು ಇಲ್ಲಿ ತಿಳಿಯುತ್ತದೆ. ``ಸ್ವಸ್ತಿ ಸಕಳಕಳಾಪ ಪ್ರವೀಣಂ ಭವ್ಯರತ್ನಾಕರಂ ಗುಣಪಕ್ಷ ಪಾತಿ ವೆಂಗಿನಾಡ ಸಪ್ತಗ್ರಾಮಗಳೊಳಗಣ ವೆಂಗಿಪಳು ಕಮ್ಮೆ ಬ್ರಾಹ್ಮಣಂ ಜಮದಗ್ನಿ ಪಂಚಾರ್ಷೇಯಂ ಶ್ರೀಮದ್ವತ್ಸಗೋತ್ರ’’ ಎಂದು ಶಾಸನ ಉಲ್ಲೇಖಿಸುತ್ತದೆ.16 `ಗಂಗಾಧಂ’ ಶಾಸನವು ವೇಮುಲವಾಡು ವೆಂಬುಳಪಾಟ ಸಮೀಪದಲ್ಲಿಯ ಬೊಮ್ಮಲಮ್ಮನ ಗುಡ್ಡದ ಮೇಲಿದೆ. ಈ ವೇಮುಲವಾಡು ಮತ್ತು ಬೊಮ್ಮಲಮ್ಮನ ಗುಡ್ಡಗಳು ಈಗ ಆಂಧ್ರಪ್ರದೇಶದ ಕರಿಂನಗರ ಜಿಲ್ಲೆಯ ಬೋಧನಸ್ಥಳದಲ್ಲಿವೆ. ಅಂದು ಇವು ವೆಂಗಿಮಂಡಲದಲ್ಲಿದ್ದವು.
`ವೆಂಗಿ’ನಾಡ ಸಪ್ತಗ್ರಾಮಗಳೊಳಗಣ ವೆಂಗಿಪಳು ಎಂಬ ಶಾಸನೋಕ್ತ ಸಪ್ರಗ್ರಾಮಗಳಲ್ಲಿ ವೆಂಗಿಪಳು ಎಂಬುದು ಒಂದು ಸ್ಥಳವಾಗಿತ್ತು. ಬಹುಶಃ ಇದು ವೆಂಗಿನಾಡಿನ ರಾಜಧಾನಿಯಾಗಿತ್ತೆಂದು ಕಾಣುತ್ತದೆ. ಈ ವೆಂಗಿಪಳು ಈಗ ಎಲ್ಲಿದೆ ಯೆಂದು ತಿಳಿಯುವುದು ಕಷ್ಟ. ಈಗಿನ ವಿಜಯವಾಡ ಕೃಷ್ಣಾ ಜಿಲ್ಲೆಯಲ್ಲಿ ಪರ್ರ’ ಹೆಸರಿನ ಗ್ರಾಮವಿದೆ. ಇದೇ `ವೆಂಗಿಪಳು’ ಆಗಿತ್ತು ಎಂದು ಖ್ಯಾತ ಶಾಸನ ವಿಶಾರದ ಶ್ರೀ ಸೀತಾರಾಮ ಜಾಗೀರದಾರ್ ಅವರು ಅಭಿಪ್ರಾಯಪಡುತ್ತಾರೆ17. ಕ್ರಿ.ಶ.950ರಲ್ಲಿ ಮೂರನೆಯ ಅರಿಕೇಸರಿ ಬರೆಯಿಸಿದ ಪರಭಣಿ ಶಾಸನವು18 ವೆಂಗಿಯ ಸ್ಥಳ ನಿರ್ದೇಶನ ಮಾಡುವ ಅತಿ ಮಹತ್ತ್ವದ ಶಾಸನವಾಗಿದೆ.
ಸ ಕಲಿಂಗತ್ರಯಾಂ ವೆಂಗಿಂ ಯೋಶವತಿ ಸ್ಮ ಪರಾಕ್ರಮಾತ್
ಪುತ್ರೋಜಯಶ್ರಿಯಃ ಪಾತ್ರಂ ತಸ್ಕಾಸೀದರಿಕೇಸರೀ
ಎಂಬ ಶಾಸನೋಕ್ತ `ಸಕಲಿಂಗತ್ರಯ’ ಪದ ಕಳಿಂಗದೇಶವನ್ನು ಸೂಚಿಸುತ್ತದೆ. ಈಗಾಗಲೇ ಕಳಿಂಗ ಮತ್ತು ವೆಂಗಿಗಳು ಪ್ರತ್ಯೇಕ ವಾಗಿ ವೆಂಗಿ ಸ್ವತಂತ್ರ ಆಡಳಿತಭಾಗವಾದುದು ವೇದ್ಯವಾಗಿದೆ. ಶಾತವಾಹನರ ಕಾಲದಲ್ಲಿ ವೆಂಗಿ ಮಂಡಳ ಕಳಿಂಗನಾಡಿನಲ್ಲಿ ವಿಲೀನವಾಗಿತ್ತು. ಅದು 7ನೆಯ ಶತಮಾನದಲ್ಲಿ ಕಳಿಂಗದಿಂದ ಬೇರ್ಪಟ್ಟಿರುವುದು ಇಲ್ಲಿ ಸ್ಪಷ್ಟವಾಗುತ್ತದೆ. ಬಾದಾಮಿಯ ಚಾಲುಕ್ಯರು ವೆಂಗಿಮಂಡಲವನ್ನು ಸ್ವಾಧೀನಪಡಿಸಿಕೊಂಡು ಅದನ್ನು ತಮ್ಮ ಆಡಳಿತದ ಒಂದು ಭಾಗವಾಗಿ ಮಾರ್ಪಡಿಸಿದ್ದರೆಂದು ಇತಿಹಾಸದಿಂದ ತಿಳಿಯುತ್ತದೆ. ಇದರಿಂದ ವೆಂಗಿಮಂಡಲವು ಕಳಿಂಗದೇಶದ ಗಡಿಗೆ ಹೊಂದಿಕೊಂಡಿದ್ದುದು ಗೊತ್ತಾಗುತ್ತದೆ. ಕಳಿಂಗವು ದಕ್ಷಿಣಭಾರತದ ಪೂರ್ವ-ಉತ್ತರದಿಕ್ಕಿಗೆ ಹಬ್ಬಿಕೊಂಡ ದೇಶ. ಈಗಿನ ಓಡಿಸಾ (ಓಢ್ರಾದೇಶ) ಅಂದಿನ ಕಲಿಂಗದೇಶವೆಂದು ಭಾವಿಸಲಾಗುತ್ತದೆ. ಓಡಿಸಾ ರಾಜ್ಯದ ಪಶ್ಚಿಮದಿಕ್ಕಿನ ಗಡಿಗೆ ಹೊಂದಿಕೊಂಡು ವೆಂಗಿಮಂಡಲ ವಿಶಾಲವಾಗಿ ಹಬ್ಬಿತು. ಅದು ಇಂದಿನ ಆಂಧ್ರಪ್ರದೇಶವಾಗಿತ್ತೆಂದು ಗುರುತಿಸಲು ಸಾಧ್ಯತೆಗಳಿವೆ.
ವೆಂಗಿಮಂಡಳ ಮತ್ತು ಕನ್ನಡನಾಡು : ವೆಂಗಿಮಂಡಳ ಎಂದೂ ಕನ್ನಡನಾಡಿನ ಭಾಗವಾಗಿರಲಿಲ್ಲವೆಂಬುದು ಸ್ಪಷ್ಟ. ಕ್ರಿ.ಶ.9ನೆಯ ಶತಮಾನದ ಕವಿರಾಜಮಾರ್ಗಕಾರ ಹೇಳುವ
ಕಾವೇರಿಯಿಂದ ಮಾ ಹೋ |
ದಾವರಿ ವರಟುರ್ದ ನಾಡದಾ ಕನ್ನಡದೊಳ್ ||
ಭಾವಿಸಿದ ಜನಪದಂ ವಸು |
ಧಾವಲತು ವಿಲೀನ ವಿಶದ ವಿಷಯ ವಿಶೇಷಂ ||19
ಕನ್ನಡನಾಡಿನ ವಿಸ್ತಾರ ಸೀಮೆಯ ವಿಷಯಗಳಲ್ಲಿ ವೆಂಗಿ ವಿಷಯವನ್ನು ಪ್ರಸ್ತಾಪಿಸದೆ ಇರುವುದರಿಂದ ವೆಂಗಿ ಕನ್ನಡ ನಾಡಿನ ವಿಲೀನ ಪ್ರದೇಶವಾಗಿರಲಿಲ್ಲವೆಂದು ಗೊತ್ತಾಗುತ್ತದೆ. ಆದರೆ ವೆಂಗಿ ಪ್ರತ್ಯೇಕವಾದ ಒಂದು ಪ್ರದೇಶವಾಗಿದ್ದರೂ ಕನ್ನಡ ಅರಸುಮನೆತನಗಳು ಇಲ್ಲಿ ನಿರಂತರವಾಗಿ ಆರು ಶತಮಾನ ಗಳ ಕಾಲ ಆಳಿದ್ದರಿಂದ ವೆಂಗಿ ಕನ್ನಡದ ವಸಾಹತು ಪ್ರದೇಶವಾಗಿ ಮೆರೆಯಿತು. ಇದರಿಂದ ಇಲ್ಲಿ ಕನ್ನಡ ಭಾಷೆ ಸಾಹಿತ್ಯ ಸಂಸ್ಕøತಿ ಕಲೆಗಳು ಗಾಢವಾಗಿ ಪರಿಣಾಮ ಬೀರಿದವು. ಇಲ್ಲಿ ತೆಲುಗು ಸಾಮಾನ್ಯ ಜನರಾಡುವ ಭಾಷೆಯಾದರೂ ಕನ್ನಡ ರಾಜಭಾಷೆಯಾಗಿ ಜನರ ಮೇಲೆ ವಿಜೃಂಭಿಸಿತು. ಅನೇಕ ಕನ್ನಡ ಕುಟುಂಬಗಳು ನೆಲೆಯೂರಿದವು. ಕನ್ನಡದ ವಾತಾವರಣ ನಿರ್ಮಾಣವಾಯಿತು. ಕನ್ನಡಿಗರ ವಾಸಸ್ಥಳಗಳು, ಅಗ್ರಹಾರಗಳು ನೆಲೆನಿಂತವು. ಎಲ್ಲಿ ನೋಡಿದರೂ ಕನ್ನಡದ ಪ್ರಭಾವ ಕಾಣುವಂತಾಯಿತು. ತೆಲುಗುಭಾಷೆಯ ವೆಂಗಿ ಮಂಡಳವು ಕನ್ನಡ ಭಾಷೆ-ಸಂಸ್ಕøತಿಗಳ ಪ್ರಭಾವದಿಂದ ಕರ್ನಾಟಕ ಭೂಮಂಡಲದ ತಿಲಕದಂತೆ ಶೋಭಿಸುತ್ತಿತ್ತು ಎಂದು ಕನ್ನಡ ಕವಿಗಳು ಅಭಿಮಾನದಿಂದ ವರ್ಣಿಸಿದ್ದಾರೆ. ಕನ್ನಡ ಪ್ರಭಾವಕ್ಕೆ ವಶವಾದ ವೆಂಗಿಯು ಹಲವು ಕವಿಗಳಿಗೆ ಆಶ್ರಯವಾಯಿತು. ಪಂಪಕವಿ, ನಾಗವರ್ಮ ದುರ್ಗಸಿಂಹ ಮೊದಲಾದ ಕವಿಗಳು ವೆಂಗಿಪ್ರದೇಶದವರು. ಪೆÇನ್ನಕವಿ ತನ್ನನ್ನೂ ವೆಂಗಿ ವಿಷಯ ನಾಡಿನವನೆಂದು ಹೇಳಿಕೊಂಡಿದ್ದಾನೆ.20 ಇಲ್ಲಿಯ ಕಿಸುಕಾಡು, ಅಗ್ರಹಾರ, ಸೈವಡಿ ಪ್ರದೇಶಗಳು ಅಚ್ಚಗನ್ನಡದ ಪ್ರದೇಶಗಳಾಗಿದ್ದವು. ಅಂತೆಯೆ, ದುರ್ಗಸಿಂಹ ತನ್ನ `ಕರ್ನಾಟಕ ಪಂಚತಂತ್ರಂ’ ಕಾವ್ಯದಲ್ಲಿ ವೆಂಗಿಮಂಡಲವನ್ನು `ಕರ್ಣಾಟಕ ಧಾತ್ರೀ ತಿಳಕಮಖಿಲ ಜನವಿಖ್ಯಾತಂ ಕಿಸುಕಾಡುನಾಡು ಆ ನಾಡೊಳ್ ಅಗ್ರಹಾರಂ ಸೈವಡಿ’ ಎಂದು ವರ್ಣಿಸಿರುವುದು ವೆಂಗಿ ಕನ್ನಡಮಯವಾಗಿದ್ದ ಬಗೆಗೆ ನಮಗೆ ತಿಳಿಯುತ್ತದೆ. ಪಂಪಕವಿ ತನ್ನ `ವಿಕ್ರಮಾರ್ಜುನ ವಿಜಯಂ’ ಮಹಾಕಾವ್ಯವನ್ನು ವೆಂಗಿಯಲ್ಲಿಯೇ ರಚಿಸಿದ ವಿಷಯ ರೋಮಾಂಚನಗಳಿಸುತ್ತದೆ. ಆಂಧ್ರ ಸಾಹಿತ್ಯಚರಿತ್ರೆರಾದರೂ ಪಂಪನ ಕುಟುಂಬವನ್ನು ಆಂಧ್ರ ಬ್ರಾಹ್ಮಣರೆಂದು ಅಭಿಮಾನದಿಂದ ಹೇಳುತ್ತಾರೆ. ಆದರೆ ಪಂಪನ ಕುಟುಂಬ ಎಂದೂ ಆಂಧ್ರ ಬ್ರಾಹ್ಮಣರಾಗಿರಲಿಲ್ಲವೆಂಬುದು ಸತ್ಯ.21
ವೆಂಗಿಮಂಡಳದ ಕನ್ನಡ ಕವಿಗಳಿಗೆ ಆಂಧ್ರಭಾಷೆ ಮತ್ತು ಸಂಸ್ಕøತಿಯ ಪರಿಚಯವಿತ್ತೆಂದು ಕಾಣುತ್ತದೆ. ಅವರ ಕಾವ್ಯಗಳಲ್ಲಿ ಆಂಧ್ರಸಂಸ್ಕøತಿಯ ಸೊಗಡು ವ್ಯಕ್ತವಾಗಿವೆ. ಆಂಧ್ರದ ಪ್ರಮದೆಯರ ಶೃಂಗಾರ ವರ್ಣನೆಗಳನ್ನು ಅವರ ಕಾವ್ಯಗಳು ಬಹುಸ್ವಾರಸ್ಯಕರವಾಗಿ ವರ್ಣಿಸಿವೆ. ಪಂಪಕವಿ ತನ್ನ ಭಾರತದಲ್ಲಿ ಆಂಧ್ರ ಸ್ತ್ರೀಯರ ಯೌವನ ಶೃಂಗಾರವನ್ನು `ಆಂಧ್ರ ನಿರೀಂದ್ರಿಯರ್’ ಎಂದು ವರ್ಣಿಸಿದ್ದಾನೆ. ಆ ಕಾಲದ ತೆಲುಗು ಕವಿಗಳ ಮೇಲೆ ಕನ್ನಡ ಕವಿಗಳ ಪ್ರಭಾವವಾಯಿತೆಂದು ಕವಿಚರಿತ್ರೆಕಾರರು ಹೇಳುತ್ತಾರೆ. ತೆಲುಗು ಮಹಾಭಾರತಂ ಕಾವ್ಯ ರಚಿಸಿದ ನನ್ನಯ ಭಟ್ಟನ ಕಾವ್ಯದ ಮೇಲೆ ಪಂಪಕವಿಯ ಕಾವ್ಯ ಪ್ರಭಾವವಾಗಿದೆಯೆಂದು ಪರಿಭಾವಿಸುತ್ತಾರೆ. ವೆಂಗಿಮಂಡಳದ ಕನ್ನಡದ ಪ್ರಭಾವ ಆಂಧ್ರ ಸಾಹಿತ್ಯದ ಮೇಲೆ ಎಷ್ಟು ಪರಿಣಾಮ ಬೀರಿದೆಯೆಂದರೆ `ಆಂಧ್ರಸಾಹಿತ್ಯ ಚರಿತ್ರೆ’ಯ ವಿಭಾಗ ಕ್ರಮದಲ್ಲಿ ತೆಲುಗು ಸಾಹಿತ್ಯದ ಆರಂಭವು ಚಾಳುಕ್ಯ ರಾಜಯುಗದಿಂದ ಪ್ರಾರಂಭವಾಗುತ್ತದೆ22 ಚಾಳುಕ್ಯರ ಕಾಲ ಆಂಧ್ರಸಾಹಿತ್ಯ ಚರಿತ್ರೆಯಲ್ಲಿ ಬಹು ಪ್ರಮುಖ ಘಟ್ಟ.
ಇಂದಿನ ದಕ್ಷಿಣಭಾರತ ಭೂಪಟದಲ್ಲಿ ವೆಂಗಿಮಂಡಲದ ರೂಪರೇಷೆ: ಇಲ್ಲಿಯವರೆಗೂ ವೆಂಗಿವಿಷಯ ಮಂಡಲದ ಬಗೆಗೆ ವಿಶದವಾಗಿ ಚರ್ಚಿಸಿದ ಆಧಾರದ ಮೇಲೆ ಇಂದಿನ ಭಾರತದ ಭೂಪಟದಲ್ಲಿ ವೆಂಗಿಪ್ರದೇಶವನ್ನು ಗುರುತಿಸುವುದು ಈ ಲೇಖನದ ಮುಖ್ಯ ಉದ್ದೇಶ. ಕಳಿಂಗದ ಉತ್ತರಕ್ಕೆ ಮಹೇಂದ್ರಗಿರಿ, ದಕ್ಷಿಣಕ್ಕೆ ಗೋದಾವರಿನದಿ ನಾಡುಗಳ ನಡುವೆ ಹಬ್ಬಿದ ಕಳಿಂಗದ ಸೀಮೆಗೆ ಹೊಂದಿದ ವೆಂಗಿಮಂಡಳ, ದಕ್ಷಿಣಕ್ಕೆ ಕೃಷ್ಣಾನದಿ ಮತ್ತು ಉತ್ತರಕ್ಕೆ ಗೋದಾವರಿ ನದಿಗಳು ಗಡಿಯಾಗುತ್ತವೆ. ಇವೆರಡು ನದಿಗಳ ನಡುವಣ ಪ್ರದೇಶ ವೆಂಗಿವಿಷಯ, ಮಂಡಲ ಮತ್ತು ಪಳು ಎಂದು ಈಗಾಗಲೇ ಪರಿಭಾಷಿಸಲಾಗಿದೆ. ಬಾದಾಮಿಯ ಪಶ್ಚಿಮ ಚಾಳುಕ್ಯರ ಆಳ್ವಿಕೆಗೆ ಒಳಪಟ್ಟ ವೆಂಗಿಯಲ್ಲಿ ಅವರ ಶಾಸನಗಳು ಆಡಳಿತದ ಕುರುಹುಗಳು ವೆಂಗಿಪ್ರದೇಶದ ಗುರುತಿಸಲು ಸಾಧನವಾಗಿವೆ. ಒಂದನೆಯ ಅರಿಕೇಸರಿಯ ಪರಭಣಿ ಶಾಸನ, ಎರಡನೆಯ ಅರಿಕೇಸರಿಯ ವೇಮುಲವಾಡು (ವೆಂಬುಳಪಾಡು) ಶಾಸನ, ಮೂರನೆಯ ಅರಿಕೇಸರಿಯ ಕೋಲಿಪಾರ (ಕೊಲ್ಲಿಪಾಕ) ಶಾಸನ ಮತ್ತು ಜಿನವಲ್ಲಭನ ಗಂಗಾಧರಂ ಶಾಸನಗಳಿರುವ ಸ್ಥಳಗಳು ಇಂದಿನ ಆಂಧ್ರಪ್ರದೇಶದಲ್ಲಿವೆ ವೇಮುಲವಾಡು ಮತ್ತು ಗಂಗಾಧರಂ ಬೊಮ್ಮಲಮ್ಮನ ಕುರಿಕ್ಯಾಲ ಸ್ಥಳಗಳು ಈಗಿನ ಕರೀನಗರ ಜಿಲ್ಲೆಗಳಲ್ಲಿವೆ. ಕೋಲಪಾರ ಸ್ಥಳ ನಲಗೊಂಡ ಜಿಲ್ಲೆಯಲ್ಲಿದೆ. ವೆಂಗಿಪಳು ಇಂದಿನ ಕೃಷ್ಣಾ ಜಿಲ್ಲೆ ಎಂದು ಗುರುತಿಸಲಾಗಿದೆ. ಪರಭಣಿಕೆಯು ಇಂದು ಮಹಾರಾಷ್ಟ್ರಕ್ಕೆ ಸೇರಿದರೂ ಹತ್ತನೆಯ ಶತಮಾನದಲ್ಲಿ ಮಹಾರಾಷ್ಟ್ರದ ದಕ್ಷಿಣ ಪೂರ್ವ ಭಾಗಗಳ ವೆಂಗಿಮಂಡಲ ವಾಗಿತ್ತು. ಮರಾಠಿ ಭಾಷೆಯ ಪ್ರಭಾವವಿಲ್ಲದೆ ಈ ಪ್ರದೇಶ ಕನ್ನಡವೇ ಆಗಿತ್ತು. `ಫರಭಣಿ’ಯನ್ನು ಯಾವ ಹೆಸರಿನಿಂದ ಕರೆಯುತ್ತಿದ್ದರೋ ತಿಳಿದುಬರುವುದಿಲ್ಲ. ಅಂದು ಫರಭಣಿ ಹೆಸರನ್ನು ಬೇರೆ ಹೆಸರಿನಿಂದ ಕರೆಯುತ್ತಿರಬೇಕು.
ಹೀಗೆ ದಕ್ಷಿಣದ ಕೃಷ್ಣಾನದಿಯಿಂದ ಉತ್ತರದ ಗೋದಾವರಿ ನದಿಯ ದಂಡೆಗೆ ದಕ್ಷಿಣೋತ್ತರ ದಿಕ್ಕಿನವರೆಗೆ ಹಾಗೂ ಪಶ್ಚಿಮದ ಕಡಪ ಕರ್ನೂಲ ಜಿಲ್ಲೆಗಳಿಂದ ಪೂರ್ವದ ನಲಗೊಂಡ ಕೋಲಪಾಕರದವರೆಗಿನ ಪಶ್ಚಿಮ-ಪೂರ್ವ ದಿಕ್ಕಿನವರೆಗೆ ವೆಂಗಿಮಂಡಲ ಹಬ್ಬಿತ್ತೆಂದು ಪರಿಭಾವಿಸಲಾಗಿದೆ. ಈ ವೆಂಗಿಮಂಡಳವನ್ನು `ತೆಲುಗುದೇಶ’ ಎಂದು ಕರೆಯಲಾಗುತ್ತಿತ್ತು. ಕೃಷ್ಣ ನದಿಯ ದಕ್ಷಿಣಕ್ಕೆ ಚಾಚಿದ ಪ್ರದೇಶ ಆಂಧ್ರನಾಡು ಎಂದೆನಿಸಿತ್ತು. ವೆಂಗಿಯ ಪಶ್ಚಿಮ ಗಡಿ ಇಂದಿನ ಕರ್ನಾಟಕ ರಾಜ್ಯವಾಗಿತ್ತು. ಇದರ ಪೂರ್ವದ ಗಡಿ ಇಂದಿನ ವಿಜಯವಾಡ ಗುಂಟೂರು ಜಿಲ್ಲೆಗಳು.
ಇಂದಿನ ಆಂಧ್ರಪ್ರದೇಶದಲ್ಲಿ ವೆಂಗಿಮಂಡಲದ ಜಿಲ್ಲಾ ಪ್ರದೇಶಗಳೂ ಇಂದಿಗೂ ಕನ್ನಡಮಯ. ಕನ್ನಡಿಗರು ವಾಸಿಸುವ ತಾಣ. ಇಲ್ಲಿ ಕನ್ನಡ ಸಾಹಿತ್ಯ ಸಂಸ್ಕøತಿಗಳನ್ನು ಗಾಢವಾಗಿ ಪ್ರಭಾವ ಬಿಂಬಿಸುವ ಪ್ರದೇಶ. ಕರ್ನಾಟಕದ ಪೂರ್ವ ದಿಕ್ಕಿನಲ್ಲಿರುವ ಆಂಧ್ರಪ್ರದೇಶದ ಕಡಪ, ಕರ್ನೂಲ, ಅನಂತಪುರ, ಮೆಹಬೂಬ್‍ನಗರ, ಕರೀಂನಗರ, ಹೈದ್ರಾಬಾದ, ಆದಿಲಾಬಾದ್ ಜಿಲ್ಲೆಗಳಲ್ಲಿ ಕನ್ನಡ ಭಾಷಿಕರು ಗಣನೆಯ ಸಂಖ್ಯೆಯಲ್ಲಿದ್ದಾರೆ. ಅಲ್ಲಿ ಕನ್ನಡ ಭಾಷೆ ಸಾಕಷ್ಟು ಪ್ರಮಾಣದಲ್ಲಿ ಜನಬಳಕೆಯಲ್ಲಿದೆ. ಕನ್ನಡ ಸಾಹಿತ್ಯ ಸಂಸ್ಕøತಿಗಳು ನಡೆಯುತ್ತವೆ. ಇಲ್ಲಿಯ ಕನ್ನಡಿಗರು ಕನ್ನಡ ಭಾಷೆಯನ್ನು ಮರೆತಿಲ್ಲ. ದಾಸಸಾಹಿತ್ಯದ ಬಯಲಾಟಗಳು ಪ್ರಭಾವ ಬೀರಿವೆ. ಇಲ್ಲಿ ವಿಶೇಷವಾಗಿ ದಾಸಸಾಹಿತ್ಯದ ರಚನೆಯಾಗಿರುವುದು ವಿಶೇಷ. ಮೆಹಬೂಬ್ ನಗರ ಮತ್ತು ಕರ್ನೂಲ್ ಜಿಲ್ಲೆಗಳು ಕನ್ನಡದ ಪ್ರಭಾವಕ್ಕೆ ಒಳಗಾದ ಪ್ರದೇಶಗಳು. ಮೆಹಬೂಬ್‍ನಗರ ಜಿಲ್ಲೆಯಲ್ಲಿರುವ ಗದ್ವಾಲ ಮತ್ತು ಆಲಂಪೂರ ತಾಲ್ಲೂಕುಗಳಲ್ಲಿ ಇಂದಿಗೂ ಕನ್ನಡದ ಪ್ರಭಾವವನ್ನು ಕಾಣುತ್ತೇವೆ. ವಿಶೇಷವಾಗಿ ಗದ್ವಾಲ ತಾಲ್ಲೂಕಿನ ಐಜಿ, ವೇಣಿ ಸೋಮಪುರ, ಐಕೂರು, ಮೊದಲಕಲ್, ದರೂರು ಮುಂತಾದವು ಕನ್ನಡ ಸಾಹಿತ್ಯ ಸಂಸ್ಕøತಿಗಳ ಆಗರಸ್ಥಳ. ಇಲ್ಲಿ ಮೂರನೆಯ ಹಂತದ ದಾಸಸಾಹಿತ್ಯ ಬಹು ಹುಲುಸಾಗಿ ರಚನೆಯಾಗಿದೆ. ಗೋಪಾಲದಾಸರು, ಮೊದಲಕಲ್ ಶೇಷದಾಸರು ಮೊದಲಾಗಿ ಶ್ರೇಷ್ಠ ಹರಿದಾಸರು ಇಲ್ಲಿ ಆಗಿಹೋದರು. ಕನ್ನಡದ ಬಯಲಾಟಗಳು ಇಂದಿಗೂ ಜನಪ್ರಿಯ ಮನರಂಜನೆಯ ಕಲೆಗಳಾಗಿವೆ. ಆಲಂಪೂರಿನಲ್ಲಿ ಬಾದಾಮಿ ಚಾಲುಕ್ಯರು ನಿರ್ಮಿಸಿದ 8ನೆಯ ಶತಮಾನದ ದೇವಾಲಯಗಳಿವೆ.
ಹಾಗೆಯೆ, ಕಡಪ ಕರ್ನೂಲ ಜಿಲ್ಲೆಯ ಆದವಾನಿ, ಆಲೂರು ತಾಲ್ಲೂಕಿನಲ್ಲಿ ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ದ್ದಾರೆ. ಕನ್ನಡ ಶಾಲೆಗಳು ಗಣನೀಯ ಸಂಖ್ಯೆಯಲ್ಲಿವೆ. ಹೊಳಗುಂದಿ, ಗೂಳ್ಯಂ, ಹಾಲರವಿ (ಹಾಲವಿ) ಹರಿವಾಣ, ಕೌತಾಳಂ, ಬದನೆಹಾಳು ಮುಂತಾದ ಊರುಗಳಲ್ಲಿ ಕನ್ನಡ ಶಾಲೆಗಳಿದ್ದು, ಕನ್ನಡ ಭಾಷೆ ಸಂಸ್ಕøತಿಗಳು ಇಂದಿಗೂ ಪ್ರಬುದ್ಧವಾಗಿದೆ. ಕನ್ನಡ ಉತ್ಸವಗಳು ಸಂಭ್ರಮದಿಂದ ನಡೆಯುತ್ತವೆ. ಇಲ್ಲಿ ಪ್ರಸಿದ್ಧ ಮತ್ತು ಯೋಗಿಗಳು ಅವರಿಸಿ ಈ ಭೂಮಿಯನ್ನು ಪವಿತ್ರಗೊಳಿಸಿದ್ದಾರೆ. ಶ್ರೀದೇವಿ ಪುರಾಣ, ಜ್ಞಾನಸಿಂಧು ಮುಂತಾದ ಹಲವು ಗದ್ಯ-ಕಾವ್ಯಗಳನ್ನು ರಚಿಸಿದ ಯೋಗಿ ಚಿದಾನಂದ ಅವಧೂತರು ಹಿರಿಯ ಹರಿವಾಣದವರು. ಅದರಂತೆ, ಅನಂತಪುರ ಜಿಲ್ಲೆಯ ರಾಯದುರ್ಗ, ಗುತ್ತಿಗಳಲ್ಲಿ ಕನ್ನಡ ಪ್ರಭಾವವಿದೆ. ಪ್ರಸಿದ್ಧ ಸಾಯಿಬಾಬಾರ ಸುಕ್ಷೇತ್ರವಾದ ಪುಟಪರ್ತಿ ಕನ್ನಡ ಪ್ರಭಾವಿತ ಸ್ಥಳ.
ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀಶೈಲಂ ಕ್ಷೇತ್ರ ವೆಂಗಿಮಂಡಲದಲ್ಲಿದ್ದ ದೊಡ್ಡ ಕ್ಷೇತ್ರ. ಮಂತ್ರಾಲಯಂ, ಹಾಲವಿಗಳಲ್ಲಿರುವ ಧಾರ್ಮಿಕ ಮಠಗಳು ಇದೇ ಪ್ರದೇಶಕ್ಕೆ ಸಂಬಂಧಿಸಿವೆ. ನಲಗೊಂಡ ಜಿಲ್ಲೆಯ (ಕೋಲಪಾರ) ಕೊಲ್ಲಿಪಾಕ 11ನೆಯ ಶತಮಾನದಲ್ಲಿ ಚಾಳುಕ್ಯರ ಒಂದನೆಯ ಸೋಮೇಶ್ವರನ ರಾಜಧಾನಿಯಾಗಿತ್ತು. ವೆಂಗಿಮಂಡಳದಲ್ಲಿರುವ ಹಲವು ದೇವಾಲಯಗಳು, ಪುಣ್ಯಕ್ಷೇತ್ರಗಳು, ಯಾತ್ರಾಸ್ಥಳಗಳು ಆಂಧ್ರಪ್ರದೇಶದ ಕೊಡುಗೆಗಳು.
ಇಂದಿನ ಆಂಧ್ರಪ್ರದೇಶದಲ್ಲಿ ವೆಂಗಿಮಂಡಲವು ರಾಯಲಸೀಮಾ ಮತ್ತು ತೆಲಂಗಾಣದಲ್ಲಿ ಹಂಚಿಹೋಗಿದೆ. ವೆಂಗಿಪ್ರದೇಶದ ಬಹುಭಾಗ ತೆಲಂಗಾಣದಲ್ಲಿ ವಿಲೀನವಾಗಿದೆ. ಇಂದಿನ ಈಶಾನ್ಯ ಕರ್ನಾಟಕ (ಹೈದರಾಬಾದ ಕರ್ನಾಟಕ) ಜಿಲ್ಲೆಗಳು ವೆಂಗಿಮಂಡಲದ ಪ್ರದೇಶವಾಗಿದ್ದವು. ಈ ಲೇಖನದಲ್ಲಿ ಪರಿಭಾವಿಸಿದ ವೆಂಗಿವಿಷಯ, ವೆಂಗಿಮಂಡಳ, ವೆಂಗಿಪಳು ನನ್ನ ಪರಿಕಲ್ಪನೆಯ ರೂಪಸೂತ್ರ. ಈ ಪರಿಕಲ್ಪನೆಯಲ್ಲಿ ಕೆಲವು ಬಿಟ್ಟುಹೋಗಿರಬಹುದು; ಕೆಲವು ಸೇರಿಸಲು ಆಗಿರಲಿಕ್ಕಿಲ್ಲ; ಮತ್ತೆ ಕೆಲವನ್ನು ತಪ್ಪಾಗಿ ಸೇರಿರಬಹುದು.
ಆಂಧ್ರಪ್ರದೇಶವನ್ನು ಬಹುಭಾಗ ವ್ಯಾಪಿಸಿಕೊಂಡಿದ್ದ, ಕನ್ನಡದ ವಸಾಹತುವಾಗಿದ್ದ ನನ್ನನ್ನು ಸದಾ ಕಾಡುತ್ತಿದ್ದ, ವಿದ್ವಾಂಸರ, ಚರಿತ್ರೆಕಾರರಿಗೆ ಜಿಜ್ಞಾಸೆಯ ವಿಷಯವಾಗಿದ್ದು, `ವೆಂಗಿ’ ಮಂಡಲದ ಒಂದು ಸ್ವರೂಪವನ್ನು ತಂದುಕೊಡುವುದು ನನ್ನ ಈ ಲೇಖನ ಮೊದಲ ಪ್ರಯತ್ನ.
[ಈ ಲೇಖನದಲ್ಲಿ ಪ್ರತಿಪಾದಿಸಲಾದ ಎಲ್ಲ ಅಂಶಗಳೂ ಈಗಾಗಲೇ  ಜಿ.ಎಸ್. ಗಾಯಿ, ಎನ್. ಲಕ್ಷ್ಮೀನಾರಾಯಣರಾವ್, ಮುಳಿಯ ತಿಮ್ಮಪ್ಪಯ್ಯ, ಸೀತಾರಾಮ ಜಾಗೀರ್‍ದಾರ್ ಮುಂತಾದ ವಿದ್ವಾಂಸರ ಬರಹಗಳಲ್ಲಿ ಚರ್ಚಿತವಾಗಿದ್ದು ಈ ಲೇಖನದಲ್ಲಿನ ಹಲವಾರು ಮಾಹಿತಿಗಳು ದೋಷಗಳಿಂದ ಕೂಡಿವೆ. -ಸಂ.]
ಆಧಾರಸೂಚಿ ಮತ್ತು ಟಿಪ್ಪಣಿಗಳು
1. ಕರ್ನಾಟಕ ಇತಿಹಾಸ, ಆರ್.ಎಸ್. ಪಂಚಮುಖಿ, ಕರ್ನಾಟಕ ಇತಿಹಾಸ ಸಂಶೋಧನಾ ಮಂಡಳ, ಧಾರವಾಡ.
2. ಅದೇ.,
3. ಪ್ರಾಚೀನ ಭಾರತದ ಇತಿಹಾಸ, ಎಂ.ಎಚ್. ಕೃಷ್ಣ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.
4. ಇಚಿಡಿಟಥಿ ಊisಣoಡಿಥಿ oಜಿ ಂಟಿಜhಡಿಚಿ Pಡಿಚಿಜesh, ಆ.ಗಿ. ಏಡಿishಟಿಚಿಡಿಚಿo.
5. ಕರ್ನಾಟಕ ಇತಿಹಾಸ, ಆರ್.ಎಸ್. ಪಂಚಮುಖಿ.
6. ಅದೇ.,
7. ಅದೇ.,
8. ಅದೇ.,
9. ಪ್ರಾಚೀನ ಭಾರತದ ಇತಿಹಾಸ, ಎಂ.ಎಚ್. ಕೃಷ್ಣ.
10. ಅದೇ.,
11. ಅದೇ.,
12. ಪಂಪನ ವಿಕ್ರಮಾರ್ಜುನ ವಿಜಯಂ, ಮೈಸೂರು ವಿಶ್ವವಿದ್ಯಾಲಯ, 14-40.
13. ನಾಡೋಜ ಪಂಪ, ಮುಳಿಯ ತಿಮ್ಮಪ್ಪಯ್ಯ, ಕನ್ನಡ ಮತ್ತು ಸಂಸ್ಕøತ ಇಲಾಖೆ.
14. ಎouಡಿಟಿಚಿಟ oಜಿ ಣhe ಂಟಿಜhಡಿಚಿ ಊisಣoಡಿiಛಿಚಿಟ ಖeseಚಿಡಿಛಿh Soಛಿieಣಥಿ, ಗಿo 1,  ಗಿI ಠಿಚಿಡಿಣ 3-4 ಠಿಠಿ 11.
15. ಪ್ರಬುದ್ಧ ಕರ್ನಾಟಕ, ಡಾ. ಜಿ.ಎಸ್. ಗಾಯಿ, ಸಂಪುಟ 50, ಸಂಚಿಕೆ-2, ಪುಟ 80-83.
16. ಜಿನವಲ್ಲಭನ ಗಂಗಾಧರಂ ಶಾಸನ.
17. ದೂರವಾಣಿಯ ಮೂಲಕ ನನಗೆ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
18. ಎouಡಿಟಿಚಿಟ oಜಿ ಣhe ಂಟಿಜhಡಿಚಿ ಊisಣoಡಿiಛಿಚಿಟ ಖeseಚಿಡಿಛಿh Soಛಿieಣಥಿ, ಗಿo 1, ಗಿI ಠಿಚಿಡಿಣ 3-4 ಠಿಠಿ 11.
19. ಕವಿರಾಜಮಾರ್ಗಂ, ಎಂ.ವಿ. ಸೀತಾರಾಮಯ್ಯ, ಕರ್ನಾಟಕ ಸಂಘ, ಸರಕಾರದ ಆಟ್ರ್ಸ್ ಮತ್ತು ಸೈನ್ಸ್ ಕಾಲೇಜು, ಬೆಂಗಳೂರು, 1-36.
20. ಶಾಂತಿಪುರಾಣಂ, ಪೆÇನ್ನ.
21. ನಾಡೋಜ ಪಂಪ, ಮುಳಿಯ ತಿಮ್ಮಪ್ಪಯ್ಯ.
22. ಆಂಧ್ರ ಸಾಹಿತ್ಯ ಚರಿತ್ರಮು, ಕಂದೂರಿ ವೀರೇಶಲಿಂಗಂ ಪಂತಲು.

 ವಿಶ್ರಾಂತ ಪ್ರಾಂಶುಪಾಲರು, ಪಟೇಲವಾಡಿ, ಸಿಂಧನೂರು-584 128.

No comments:

Post a Comment