Tuesday, July 22, 2014

ರೇವಣಸಿದ್ಧೇಶ್ವರ ಮಠಗಳು

ಬಳ್ಳಾರಿ ಜಿಲ್ಲೆಯ ರೇವಣಸಿದ್ಧೇಶ್ವರ ಮಠಗಳು

ಶ್ರೀಮತಿ ಹನುಮಂತಮ್ಮ ಎಂ.
ಕರ್ನಾಟಕದ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಬಹುಮುಖ್ಯವಾದ ಹೆಸರು ರೇವಣಸಿದ್ಧನದು. ಕುರುಬ ಮತ್ತು ವೀರಶೈವ ಸಮಾಜಗಳೆರಡಕ್ಕೂ ಈತ ಅಗ್ರಗಣ್ಯನಾಗಿದ್ದಾನೆ. ಇದಕ್ಕೆ ಸಾಕ್ಷಿ ಎನ್ನುವಂತೆ ಕರ್ನಾಟಕದಾದ್ಯಂತ ಮಠಮಂದಿರಗಳಿವೆ. ಇವುಗಳಿಗೆ ಕುರುಬ ಒಡೆಯರು ಗುರುಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಗಾದಿಗನೂರು, ವಿಠಲಾಪುರ, ದೇವಲಾಪುರ, ಓಬಲಾಪುರ, ಬಳ್ಳಾರಿ ಮುಂತಾದೆಡೆ ಈತನ ಹೆಸರಿನಲ್ಲಿರುವ ಮಠಗಳ ಸಾಂಸ್ಕøತಿಕ ಮಹತ್ವವನ್ನು ಈ ಸಂಪ್ರಬಂಧದಲ್ಲಿ ಚರ್ಚಿಸಲಾಗಿದೆ.
ರೇವಣಸಿದ್ಧನನ್ನು ಕುರಿತು `ರೇವಣ ಸಾಂಗತ್ಯ’, `ರೇವಣ ಸಿದ್ಧೇಶ್ವರ ರಗಳೆ’ ಮುಂತಾದ ಕೃತಿಗಳಲ್ಲದೆ, `ಜನಪದ ಹಾಲುಮತ ಪುರಾಣ’ ಕೃತಿಗಳು ರಚನೆಯಾಗಿವೆ. ಇತ್ತೀಚೆಗೆ ರೇವಣಸಿದ್ಧ ಸಂಪ್ರದಾಯವನ್ನು ತಿಳಿಸುವ `ಟಗರ ಪವಾಡ’ ಕೃತಿಯು ಪ್ರಕಟವಾಗಿದೆ. ಈ ಎಲ್ಲಾ ಕೃತಿಗಳ ಹಿನ್ನೆಲೆಯಲ್ಲಿ ರೇವಣಸಿದ್ಧ ಕುರುಬ ಸಮಾಜದ ಶಿವಸಿದ್ಧ ಸಂಪ್ರದಾಯಕ್ಕೆ ಸೇರಿದವನು. ಈತನ ಕಾಲಾನಂತರದಲ್ಲಿ ಈ ಪರಂಪರೆಯ ಮಠಗಳು ಕಂಡುಬರುತ್ತವೆ.
ಹಾಲುಮತದ ಮುದ್ದುಗೊಂಡ ಮತ್ತು ಮುದ್ದವ್ವ ದಂಪತಿಗಳ ಏಳು ಜನ ಮಕ್ಕಳಲ್ಲಿ ಕೊನೆಯವನು ಉಂಡಾಡು ಪದ್ಮಗೊಂಡ. ಇವನು ಕುರುಬರ ಮೂಲಪುರುಷ. ಇವನ ಮೊದಲ ಹೆಂಡತಿ ಜಿಂಕಾದೇವಿಯಲ್ಲಿ ಜಗ್ಗಲಿ ಮುತ್ತಯ್ಯ ಸಹಾಯ ಮುತ್ತಯ್ಯ, ಸೋಹ ಮುತ್ತಯ್ಯ, ಶಾಂತಿಮಯ ಮುತ್ತಯ್ಯ ಮತ್ತು ದೇವರಾಜ ಎಂಬ ಐದು ಮಕ್ಕಳು ಜನಿಸುತ್ತಾರೆ. ಇವರಲ್ಲಿ ನಾಲ್ಕನೇ ಮಗನಾದ ಶಾಂತಿಮಯ ಮುತ್ತಯ್ಯನ ಮಗನೇ ರೇವಣಸಿದ್ಧ.1
ಇವನು ಪ್ರಾಚೀನ ಕಾಲದಿಂದಲೂ ಕುರುಬ ಜನಾಂಗದಲ್ಲಿ ಬೆಳೆದು ಬಂದಿರುವುದರಿಂದ ಕೊಲ್ಲಿಪಾಕಿ ಕ್ರಿ.ಶ.1110ರಲ್ಲಿ ಜನಿಸಿ ಕ್ರಿ.ಶ.1217ರಲ್ಲಿ ನಿಧನರಾದರೆಂದು ತಿಳಿದುಬರುತ್ತದೆ.2 ಈತನನ್ನು ಕುರಿತು ಮೊಟ್ಟಮೊದಲ ಬಾರಿಗೆ ಕಾವ್ಯವನ್ನು ಬರೆದಂತವನು ಮಹಾಕವಿ ಹರಿಹರ. ಈತನು ತನ್ನ ರೇವಣಸಿದ್ಧೇಶ್ವರ ರಗಳೆಯಲ್ಲಿ ರೇವಣಸಿದ್ಧರ ಜನಪದ ಪ್ರಸಂಗವನ್ನು ಪೌರಾಣಿಕ ಹಿನ್ನೆಲೆಯಲ್ಲಿಟ್ಟುಕೊಂಡು ಅಭಿವ್ಯಕ್ತಪಡಿಸಿದ್ದಾನೆ. ರತ್ನಗಿರಿಯ ಶಿವನ ಸಭೆಯಲ್ಲಿ ನಂದೀಶ, ವೀರಭದ್ರ ನಾಯಕ, ರೇಣುಕ ಮುಂತಾದ ದೇವಾನುದೇವತೆಗಳು ಕುಳಿತುಕೊಂಡಿರುವಾಗ ರೇಣುಕನ ಮುಖವನ್ನು ನೋಡಿ ಶಿವನು ತಾಂಬೂಲವನ್ನು ತಂದುಕೊಡು ಎನ್ನುತ್ತಾನೆ. ರೇಣುಕನು ತಾಂಬೂಲವನ್ನು ತೆಗೆದುಕೊಂಡು ಬರುವಾಗ ದಾರುಕನೆಂಬುವವನನ್ನು ದಾಟಿದ ಪರಿಣಾಮದಿಂದ ನಿನಗೆ ನರಜನ್ಮ ಪ್ರಾಪ್ತವಾಗಲೆಂದು ಶಿವನು ಶಾಪವನ್ನು ಕೊಡುತ್ತಾನೆ. ಆಗ ರೇಣುಕನು ಭಯದಿಂದ ಕೈಮುಗಿದು, ತನ್ನ ತಪ್ಪನ್ನು ಮನ್ನಿಸಿ ವಿಶಾಪವನ್ನು ಕರುಣಿಸೆಂದು ಬೇಡಿಕೊಳ್ಳುತ್ತಾನೆ. ಆಗ ಶಿವನು, ಕರುಣೆಗೊಂಡು ಭೂಲೋಕದಲ್ಲಿ ಸೋಮೇಶ್ವರಲಿಂಗದಲ್ಲಿ ಹುಟ್ಟಿ ಸುಖ, ದುಃಖಗಳನ್ನು ಅನುಭವಿಸಿ ಬರಬೇಕೆನ್ನುತ್ತಾನೆ. ಅದೇ ರೀತಿಯಾಗಿ ಕೊಲ್ಲಿಪಾಕಿ ಸೋಮೇಶ್ವರಲಿಂಗದಲ್ಲಿ ರೇಣುಕನು ಹುಟ್ಟುತ್ತಾನೆ.3 ಹೀಗೆ ಕೊಲ್ಲಿಪಾಕಿ ಸೋಮನಾಥಲಿಂಗದಲ್ಲಿ ರೇವಣಸಿದ್ಧರು ಹುಟ್ಟಿದರು ಎಂದು ಕವಿಗಳು ಮತ್ತು ಪುರಾಣಕರ್ತರ ಅಭಿಪ್ರಾಯ. ಹಾಗೆಯೇ ಇವನು ಮೂಲತಃ ಕುರುಬಮೂಲದಿಂದ ಬಂದವನೆಂದು ಜನಪದರ ಮಾತಾಗಿದೆ.
ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರೂರು ಗ್ರಾಮದಲ್ಲಿ ಶಾಂತಮಯ ಮುತ್ತಯ್ಯ ಶಿವಯೋಗಿಯಾಗಿ ಸಂಸಾರಿಯಾಗಿ ತನ್ನ ಪತ್ನಿ ಮಹಾದೇವಿ ಮತ್ತು ಗುರುಭಕ್ತರೊಡನೆ ಸಂಚಾರಿಯಾಗಿದ್ದ ಸಮಯದಲ್ಲಿ ಇಂದಿನ ಆಂಧ್ರಪ್ರದೇಶದ ನಲ್ಗೊಂಡ ಜಿಲ್ಲೆಯ ಭುವನಗಿರಿ ತಾಲ್ಲೂಕಿನ ಕೊಲ್ಲಿಪಾಕಿ ಗ್ರಾಮದಲ್ಲಿ ಕೆಲವು ಸಮಯ ವಾಸವಾಗಿದ್ದಾಗ ರೇವಣಸಿದ್ಧರು ಜನಿಸಿದರು. ಯಾವುದೋ ಒಂದು ಸಂದರ್ಭದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡಿದ್ದ ಇವನನ್ನು ನಾಥಪಂಥೀಯ ಸಾಧುಗಳು ಸಾಕಿದರೆಂದು ನವನಾಥದಿಂದ ತಿಳಿದುಬರುತ್ತದೆ. ಇವರ ಪಾಲನೆಯಲ್ಲಿ ಬೆಳೆದ ರೇವಣಸಿದ್ಧರು ಕೂಡ ನಾಥಸಿದ್ಧರಾದರು. ಉತ್ತರ ಭಾರತದಲ್ಲೆಲ್ಲಾ ಸಂಚರಿಸಿ ಗೂಢವಿದ್ಯೆಗಳನ್ನೆಲ್ಲಾ ಕಲಿತುಕೊಂಡು ಶ್ರೇಷ್ಠನಾಥರೆಂದು ಕರೆಯಿಸಿಕೊಂಡರು. ಇಲ್ಲಿ ವ್ಯಕ್ತವಾಗಿರುವ ನಾಥ ಸಿದ್ಧರೆಂದರೆ:
1.ಗೋರಕ್ಷನಾಥ, 2. ಜಾಲಂಧರ ನಾಥ,
3. ಕಾನಿಪನಾಥ, 4. ಗಹನಿ ನಾಥ, 5. ರೇವಣನಾಥ,
6. ನಾಗನಾಥ, 7. ಭರ್ತರಿನಾಥ, 8. ಚರ್ಪಟಿ ನಾಥ,
9. ಮತ್ಸ್ಯೇಂದ್ರನಾಥ
ಹೀಗೆ ರೇವಣನಾಥರು ನವನಾಥ ಸಿದ್ಧರ ಸಾಲಿನಲ್ಲಿ ಶೈವಮತ ಸ್ವೀಕರಿಸಿರುವುದರಿಂದ ಇವರು ಸೋಮನಾಥಲಿಂಗದಲ್ಲಿ ಜನಿಸಿದರು ಹಾಗೂ ರೇವಣಸಿದ್ಧರು `ಬಂಧುಲ’ ಗ್ರಾಮದಲ್ಲಿ ಅನ್ನಛತ್ರವನ್ನಿಟ್ಟು ನಡೆಸುತ್ತಿದ್ದರು ಎಂದು ಈ ಗ್ರಂಥದಿಂದ ತಿಳಿದುಬರುತ್ತದೆ.
ಡಾ. ಎಂ.ಎಂ. ಕಲಬುರ್ಗಿಯವರು ರೇವಣಸಿದ್ಧ ಕಲ್ಯಾಣ ಚಾಳುಕ್ಯ ವಿಕ್ರಮಾದಿತ್ಯ (1026-1126) ಮೂರನೆಯ ಸೋಮೇಶ್ವರ, ಕಲಚೂರಿ ತೈಲಪ ಬಿಜ್ಜಳನ ಕಾಲದವರೆಗೆ ಬಾಳಿದ ವಿವರಗಳನ್ನು ಶಾಸನ ಮತ್ತು ಪದ್ಯಗಳಿಂದ ಸ್ಪಷ್ಟಪಡಿಸಿದ್ದಾರೆ.4 ರೇವಣಸಿದ್ಧ ಜೀವಂತವಿರುವಾಗಲೇ (1172 ಕುಕ್ಕೇರಿ ಶಾಸನ) ಅವನ ಸಿದ್ಧ ಸಂಪ್ರದಾಯವು ಲಾಕುಳ ಶೈವದಲ್ಲಿ ಆರಂಭಿಸಿದ್ದಿತೆಂದು ಹೇಳಬಹುದಾಗಿದೆ.5
ಕಲಬುರ್ಗಿ ಅವರ `ರೇವಣಸಿದ್ಧ ಚರಿತ್ರೆಯ ಎರಡು ಸಂಪ್ರದಾಯಗಳು’ ಎಂಬ ಲೇಖನದಲ್ಲಿ ಹೀಗೆ ಅಭಿಪ್ರಾಯಪಟ್ಟಿದ್ದಾರೆ. “ರೇವಣಸಿದ್ಧ ಮತ್ತು ಸಿದ್ಧರಾಮರು” ಮೂಲತಃ ಜಾತಿಯಿಂದ ಕುರುಬ ಪಂಥಸಿದ್ಧರು. ಸಿದ್ಧರಾಮನು ದೀಕ್ಷೆಯನ್ನು ಪಡೆದುಕೊಂಡು ಶರಣ ಧರ್ಮವನ್ನು ಸೇರಿದ. ಇಂತಹ ಸಮಯದಲ್ಲಿ ವಯೋವೃದ್ಧನಾಗಿದ್ದ ರೇವಣಸಿದ್ಧನನ್ನು ಅವನ ಸಿದ್ಧಿ ಪಂಥೀಯರು ಭಕ್ತಿ ಪ್ರಜ್ಞೆಯಿಂದ ಶುದ್ಧ ಶೈವರು ಆಚಾರ್ಯ ಪ್ರಜ್ಞೆಯಿಂದ ಚಿತ್ರಿಸುವ ಪ್ರಯತ್ನ ನಡೆಸಿದರು.
ಸಿದ್ಧ ಮತ್ತು ಆಚಾರ್ಯ ಸಂಪ್ರದಾಯದ ರೇವಣಸಿದ್ಧ ಭಕ್ತಿ ಪ್ರಜ್ಞೆಯಲ್ಲಿ ಮಲ್ಲಣ ಕವಿಯು ರೇವಣಸಿದ್ಧ ಕಾವ್ಯವನ್ನು ಚರ್ಚೆಗೆ ಒಳಪಡಿಸಿ ತೌಲನಿಕವಾಗಿ ಹರಿಹರ ಕವಿಯ ಕೊಲ್ಲಿಪಾಕಿಯ ಲಿಂಗೋದ್ಭವ, ಅಗಸ್ತ್ಯನ ದರ್ಶನ ಮೊದಲಾದ ಪ್ರಸಂಗಗಳನ್ನು ಮಲ್ಲಣ್ಣ ಕವಿ ಕಾಣದ ವಿಷಯಗಳನ್ನು ಚರ್ಚೆಗೆ ಒಳಪಡಿಸಿದ್ದಾರೆ. ಇವರ ಇನ್ನೊಂದು ಲೇಖನ ಸಿದ್ಧರಾಮನು ಶಿವಯೋಗಿಯಾಗಿರುವಂತಹ ರೇವಣಸಿದ್ಧರನ್ನು ಶಿವಾಚಾರ್ಯ =ರನ್ನಾಗಿ ಮಾಡಿದ ಅನೇಕ ವಿಷಯಗಳನ್ನು ಹೊರಹಾಕುತ್ತದೆ.
ಸಿದ್ಧಮಂಕೆ ಚರಿತೆಗೆ ಸೊಲ್ಲಾಪುರ ಸಿದ್ಧರಾಮ ಚರಿತ್ರೆಯೆಂದು ಟಗರ ಪವಾಡ ಕೃತಿಗೆ ರೇವಣಸಿದ್ಧೇಶ್ವರ ಪುರಾಣವೆಂದು ಕರೆದುದು ಇವರಿಬ್ಬರ ಕುರುಬ ಜಾತಿಯನ್ನು ದೃಢಪಡಿಸುತ್ತದೆ. ಇದಲ್ಲದೆ ಚಿಕ್ಕನಾಯಕನಹಳ್ಳಿಯಲ್ಲಿರುವ ಸಿದ್ಧರಾಮನ ಶಿಷ್ಯನಾದ ಸಿದ್ಧಮಂಕನ ಮಠಕ್ಕೆ ಲಿಂಗಾಯಿತರು ಮತ್ತು ರೇವಣಸಿದ್ಧನ ಮಠಕ್ಕೆ ಕುರುಬರು ಪೂಜಾರಿಗಳಾಗಿದ್ದಾರೆ. ಹೀಗೆ ಸಿದ್ಧರಾಮನು ಕೊನೆಗೆ ನಾಥಪಂಥ ಮತ್ತು ಕುರುಬ ಜಾತಿಯನ್ನು ತ್ಯಜಿಸಿ ಲಿಂಗವಂತನಾದನು. ರೇವಣಸಿದ್ಧನು ಕೊನೆಯವರೆಗೂ ನಾಥಪಂಥೀಯ ಕುರುಬನಾಗಿಯೇ ಉಳಿದುದು ಕಾರಣವಾಗಿರಬಹುದೆಂದು ಊಹಿಸಿದ್ದಾರೆ. ರೇವಣಸಿದ್ಧನ ಇತಿವೃತ್ತ ವಿಚಾರ, ಭೌಗೋಳಿಕ ನೆಲೆ, ಅಲಿಖಿತ ಆಕರಗಳಲ್ಲಿ ಮೂಡಿಬಂದ ರೇವಣಸಿದ್ಧನ ಚಿತ್ರಣ ವಿಷಯವಾಗಿ ಕುರುಬರ ಕುಲಗುರು ರೇವಣಸಿದ್ಧನನ್ನೇ 14-15ನೆಯ ಶತಮಾನದ ಹೊತ್ತಿಗೆ ರೇಣುಕಾಚಾರ್ಯರನ್ನಾಗಿ ಮಾಡಿರುವುದನ್ನು ಎಂ.ಎಂ. ಕಲಬುರ್ಗಿ ಅವರು ಸಕಾರಣವಾಗಿ ಗುರುತಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ರೇವಣಸಿದ್ಧೇಶ್ವರ ಮಠಗಳು
1. ಗಾದಿಗನೂರು : ಇದು ಹೊಸಪೇಟೆ ಬಳ್ಳಾರಿ ಮುಖ್ಯರಸ್ತೆಯಲ್ಲಿ ಹೊಸಪೇಟೆಯಿಂದ ಮೂವತ್ತು ಕಿ.ಮೀ. ದೂರದಲ್ಲಿದೆ. ಇಲ್ಲಿ ಸರೂರು ರೇವಣಸಿದ್ಧೇಶ್ವರ ಮಠದ ಶಾಖಾಮಠವಿದೆ. ಈ ಮಠಕ್ಕೆ 1872ರಲ್ಲಿ ಗುರುಗಳಾಗಿದ್ದವರು ಒಡೆಯ ಸಣ್ಣಸಿದ್ಧಯ್ಯನವರು. ಇವರು ಮೂಲತಃ ದೇವಲಾಪುರದವರು ನಂತರ ಶ್ರೀ ಸಿದ್ಧಯ್ಯಸ್ವಾಮಿ ಒಡೆಯರು ಎಂಬುವವರು ಈ ಮಠಕ್ಕೆ ಗುರುಗಳಾಗಿದ್ದರು. ಈಗ ರೆಡ್ಡಿ ಕುಲದವರನ್ನು (ಗೌಡಕಿ ಮನೆತನದವರನ್ನು) ಊರಿನ ಜನ ಮುಖಂಡರು ಸೇರಿ ಆರ್ಚಕರನ್ನಾಗಿ ಮಾಡಿದ್ದಾರೆ. ಮೂಲತಃ ದೇವಲಾಪುರದ ಮಠಾಧಿಪತಿಗಳು ಊರಿನ ಹಬ್ಬ, ಹರಿದಿನ, ಮದುವೆ, ಮುಂಜೆ ಇತ್ಯಾದಿ ಕಾರ್ಯಕ್ರಮಕ್ಕೆ ಬಂದು ಹೋಗುತ್ತಾರೆ. ಈ ಊರಲ್ಲಿ ಪುರಾತನ ಕಾಲದ ಹಾಳುಬಿದ್ದ ರೇವಣಸಿದ್ಧನ ಮಠವಿದೆ. “ಈ ಮಠದಲ್ಲಿ ಒಂದು ದೊಡ್ಡದಾದ ಹುತ್ತ ಬೆಳೆದು ಇದರಲ್ಲಿ ತುಂಬಾ ವರ್ಷಗಳಿಂದ ಹಾವೊಂದು ವಾಸವಾಗಿದೆ. ಇದಕ್ಕೆ ಉದ್ದವಾದ ಕೂದಲುಗಳು ಬೆಳೆದಿವೆ ಎಂದು ಈಗಿನ ಆರ್ಚಕರಾದ ಗಿರಿಜಮ್ಮಜ್ಜಿ ಹೇಳುತ್ತಾರೆ. ಈ ಮಠವನ್ನು ಕೆಡವಿ ನೂತನ ಮಠವನ್ನು ಕಟ್ಟಿದರಾಯಿತು ಎಂದು ಮಾತನಾಡಿಕೊಂಡರೆ, ಈ ಹಾವು ಒಬ್ಬ ಹೆಣ್ಣು ಮಗಳ ಕನಸಿನಲ್ಲಿ ಬಂದು ನೀವು ಕಟ್ಟುವುದಾದರೆ ಮೂರು ಗುಡ್ಡದಕಲ್ಲು ಮತ್ತು ಮೂರು ಹೊಳೆ ನೀರು ತಂದು ಒಂದೇ ದಿನದಲ್ಲಿ ಕಟ್ಟಬೇಕು ಎಂದು ಹೇಳಿತಂತೆ.” ಒಂದೇ ದಿನದಲ್ಲಿ ಮಠವನ್ನು ಕಟ್ಟಲು ಆಗದೆ ಮೂಲ ಮಠದ ಪಕ್ಕದಲ್ಲಿ ನೂತನವಾದ ರೇವಣಸಿದ್ಧನ ಮಠವನ್ನು ಕಟ್ಟಿದ್ದಾರೆ. ಇದು ಸುಮಾರು 30-35 ವರ್ಷ ಆಗಿರಬಹುದು. ಈ ನೂತನ ಮಠಕ್ಕೆ ಗೌಡಕಿ ಮನೆತನದವರು ದಿನಕ್ಕೆ ಒಂದು ಸಲ ಮಾತ್ರ ಪೂಜೆ ಮಾಡುತ್ತಾರೆ. ಸಂಜೆ ದೀಪ ಮಾತ್ರ ಹಚ್ಚುತ್ತಾರೆ. ವಾರದ ಪೂಜೆ ಸೋಮವಾರ. ಆ ದಿನ ಊರಿನ ಜನರೆಲ್ಲಾ ನಡೆದುಕೊಳ್ಳುತ್ತಾರೆ. ಶಿವರಾತ್ರಿಯ ದಿವಸ ಜನರೆಲ್ಲ ಕಾಳು ಗುಗ್ಗುರಿ ನೈವೇದ್ಯ ಮಾಡಿ, ಡೊಳ್ಳು ವಾದ್ಯ ಭಜನೆಯೊಂದಿಗೆ ಜಾಗರಣೆ ಮಾಡುತ್ತಾರೆ. ಶಿವರಾತ್ರಿ ಆಗಿ ಐದು ದಿನಕ್ಕೆ ಪಂಚಮಿ ನಕ್ಷತ್ರವೆಂದು ಸಾಯಂಕಾಲ ಆರು ಗಂಟೆಗೆ ರಥ ಎಳೆಯುತ್ತಾರೆ. ನಂತರ ರೇವಣಸಿದ್ಧನ ಶಿಷ್ಯ ಗಾದಿಲಿಂಗನ ರಥ ಹಿಂದಾಗಿ ಎಳೆಯುತ್ತಾರೆ. ಈ ಮಠದಲ್ಲಿ ಮದುವೆಗಳು ನಡೆಯುತ್ತವೆ. ಮುಖ್ಯವಾಗಿ ಈ ಊರಿನಲ್ಲಿ ಅಧಿಕವಾಗಿ ಕುರುಬರೇ ಕಂಡುಬರುತ್ತಾರೆ. ಆದರೆ ಒಂದು ಮನೆಯೂ ಸಹ ಒಡೆಯರದಿಲ್ಲ. ಮೇಲಾಗಿ ಈ ಮೂಲ ಮಠವನ್ನೇ ಹಿಂದಕ್ಕೆ ತಳ್ಳಿದ್ದಾರೆಂದು ಹೇಳಬಹುದು. ಈ ಮಠಕ್ಕೆ ಮೂವತ್ಮೂರು ಹಳ್ಳಿ ಭಕ್ತರಿದ್ದಾರೆ.
2. ದೇವಲಾಪುರ : ಕಂಪ್ಲಿ ಬಳ್ಳಾರಿ ಮುಖ್ಯರಸ್ತೆಯಲ್ಲಿ ಕಂಪ್ಲಿಯಿಂದ 15 ಕಿ.ಮೀ. ದೂರದಲ್ಲಿ ಈ ಗ್ರಾಮವಿದೆ. ಈ ಊರಿನಲ್ಲಿ ರೇವಣಸಿದ್ಧೇಶ್ವರ ಮಠ 17-6-1999ರಲ್ಲಿ ಸ್ಥಾಪನೆ ಆಗಿದೆ. ಈ ಮಠಕ್ಕೆ ಕುರುಬರ ಗುರು ಒಡೆಯರ ರೋಹಿತಸ್ವಾಮಿ ಪೂಜೆ ಮಾಡುತ್ತಾರೆ. ದಿನಕ್ಕೆ ಎರಡು ಸಲ ಪೂಜೆ. ವಾರದ ಪೂಜೆ ಸೋಮವಾರ. ಅಮವಾಸ್ಯೆ ಹುಣ್ಣಿಮೆಯ ದಿನಕ್ಕೆ ಭಕ್ತರು ಅಭಿಷೇಕ ಮಾಡಿಸುತ್ತಾರೆ. ಶಿವರಾತ್ರಿ ಆಗಿ ಐದು ದಿನಕ್ಕೆ ರೇವಣಸಿದ್ಧನ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಭಜನೆ, ಡೊಳ್ಳು, ನಂದಿಕೋಲು, ಕೋಲಾಟ ಇತ್ಯಾದಿ ವಾದ್ಯಗಳ ಮೂಲಕ ಮಾಡುತ್ತಾರೆ. ಬಸವಜಯಂತಿ ದಿವಸ ಪುರಾಣ, 9 ಅಥವಾ 11 ದಿವಸಗಳ ಕಾಲ ನಡೆಯುತ್ತದೆ. ಸಾಮೂಹಿಕ ವಿವಾಹಗಳು ನಡೆಯುತ್ತವೆ. ಈ ಗ್ರಾಮದಲ್ಲಿ ಕುರುಬರ ಸಂಖ್ಯೆ ಹನ್ನೊಂದು ಸಾವಿರ ಮತ್ತು ಒಡೆಯರ ಮನೆಗಳು ಇಪ್ಪತ್ತೈದು ಇರುವುದು ಕಂಡುಬರುತ್ತವೆ.
ಈ ಊರಿನಲ್ಲಿ `ಶ್ರೀ ಸಿದ್ಧಯ್ಯಸ್ವಾಮಿ ಒಡೆಯ’ ಎಂಬುವರ ಮನೆಯಲ್ಲಿ ಮೂರು ತಾಮ್ರಪತ್ರ ಹಾಗೂ ಎರಡು ತಾಮ್ರದ ಬಿಲ್ಲೆಗಳು ಇರುವುದು ಕಂಡುಬಂದಿದೆ. ಅವುಗಳನ್ನು ಸಮೀಕ್ಷೆ ಮಾಡಿದಾಗ ಕುರುಬರ ಗುರು ಪರಂಪರೆಗೆ ಒಡೆಯರು ಮತ್ತು ಕುರುಬರ ಮಧ್ಯೆ ನಡೆದ ವಾದವಿವಾದಗಳ ವಿವರ, ಒಡೆಯರಿಗೆ ದಾನ ನೀಡಿದ ಬಗ್ಗೆ ಇಂತಿಷ್ಟು ಕಾಣಿಕೆಯನ್ನು ಸಲ್ಲಿಸಬೇಕೆಂಬ ಕರಾರುಗಳನ್ನು ಹಾಗೂ ಇನ್ನಿತರ ಅನೇಕ ವಿಷಯಗಳನ್ನು ಈ ತಾಮ್ರಪತ್ರದಲ್ಲಿ ದಾಖಲಿಸಲಾಗಿದೆ.
3. ವಿಠಲಾಪುರ : ಈ ಗ್ರಾಮವು ಹೊಸಪೇಟೆ ಬಳ್ಳಾರಿ ಮುಖ್ಯರಸ್ತೆಯಲ್ಲಿ ಬರುವ ಕುಡುತಿನಿಯಿಂದ 23 ಕಿ.ಮೀ. ದೂರದಲ್ಲಿ ಸೊಂಡೂರು ತಾಲ್ಲೂಕಿನಲ್ಲಿದೆ. ಈ ಮಠ ಶ್ರೀ ಸಿದ್ಧಯ್ಯಸ್ವಾಮಿ ಒಡೆಯರು ಕಟ್ಟಿಸಿದ್ದು. ಸುಮಾರು 50 ವರ್ಷ ಆಗಿರಬಹುದು. ಈ ಮಠದ ಪಕ್ಕದಲ್ಲಿ ಅವರ ಜೀವಂತ ಸಮಾಧಿ ಇರುವುದು ಕಂಡುಬರುತ್ತದೆ. ಈ ಮಠದ ಪೂಜೆ ಆಚಾರ, ವಿಚಾರವನ್ನು ಒಡೆಯರು ಮಾಡುತ್ತಿದ್ದರು. ಇವರು ಕಾಲವಾದ ಮೇಲೆ ನಂತರದಲ್ಲಿ ವಂಶಜರು ಪಟ್ಟಣವನ್ನು ಸೇರಿದ್ದಾರೆ. ಈಗ ಕೆಲವು ವರ್ಷಗಳಿಂದ ಶ್ರೀಶೈಲದಿಂದ ಬಂದ ಜಂಗಮ `ಮಲ್ಲಿಕಾರ್ಜುನ ಸ್ವಾಮಿ’ ಅವರನ್ನು ನೇಮಿಸಿದ್ದಾರೆ. ಅವರು ಈ ಮಠಕ್ಕೆ ದಿನಕ್ಕೆರಡು ಬಾರಿ ಪೂಜೆ ಮತ್ತು ಸೋಮವಾರ ವಾರದ ಪೂಜೆ ಮಾಡುತ್ತಾರೆ. ಅಮವಾಸೆ, ಹುಣ್ಣಿಮೆಗೆ ಅನ್ನದಾಸೋಹ ಊರಿನ ಜನರು ನಡೆಸುತ್ತಾರೆ. ಈ ಮಠದ ಜಾತ್ರೆ ಉತ್ಸವ ಯುಗಾದಿ ಅಮವಾಸೆ ಆಗಿ ಒಂಭತ್ತು ದಿನಕ್ಕೆ ರಾಮನವಮಿ ದಿವಸ ನಡೆಯುತ್ತದೆ. ವಿವಾಹ ಸಹ ನಡೆಯುತ್ತದೆ. ರೇವಣಸಿದ್ಧನ ಮೂರ್ತಿಯ ಮುಂದೆ ನೂತನವಾಗಿ 2012ರಲ್ಲಿ ಲಿಂಗವನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಈ ಊರಿನಲ್ಲಿ ಕುರುಬರ ಜನಸಂಖ್ಯೆ ನಾಲ್ಕು ಸಾವಿರ ಇದ್ದರೆ, ಒಡೆಯರ ಮನೆಗಳು ಕೇವಲ ಮೂರಿವೆ.
4. ಬಳ್ಳಾರಿ : ಈ ಊರಿನ ರೇವಣಸಿದ್ಧೇಶ್ವರ ಮಠ ಮಿಲ್ಲಾರ್‍ಪೇಟೆಯಲ್ಲಿದೆ. 22.5.1969ರಲ್ಲಿ ಸ್ಥಾಪನೆಯಾಗಿದೆ. ಈ ಮಠದ ಅಧಿಪತಿಯನ್ನು ಕುರುಬರ ಗುರು ಒಡೆಯರ ಶರಣಯ್ಯ ಸ್ವಾಮಿಗಳು ವಂಶಪರಂಪರೆಯಾಗಿ ನಡೆಯುತ್ತಾ ಬಂದಿದ್ದಾರೆ. ಈ ಮಠದಲ್ಲಿ ದಿನಕ್ಕೆ ಎರಡು ಸಲ ಪೂಜೆ, ವಾರದ ಪೂಜೆ ಸೋಮವಾರದಂದು ಭಜನೆ ನಡೆಯುತ್ತದೆ. ಪ್ರತಿ ಶ್ರಾವಣ ಮಾಸದಲ್ಲಿ ದಿನನಿತ್ಯ ಅಭಿಷೇಕ ಕೊನೆಗೆ ಅಖಂಡ ಭಜನೆ (ಬೆಳಗ್ಗೆ ಆರಂಭವಾದದ್ದು ಮರುದಿನ ಬೆಳಗ್ಗೆ ಮುಕ್ತಾಯವಾಗುತ್ತದೆ)ಯೊಂದಿಗೆ ಮುಗಿಯುತ್ತದೆ. ನಂತರ ಅನ್ನ ಗಣರಾಧನೆ ನಡೆಯುತ್ತವೆ. ವಿಜಯದಶಮಿಯಂದು ಪಲ್ಲಕಿ ಉತ್ಸವ, ಕಾರ್ತಿಕ ಮಾಸದಲ್ಲಿ ಸೋಮವಾರ ಕಾರ್ತಿಕೋತ್ಸವ ನಡೆಸುತ್ತಾರೆ.
ಫಾಲ್ಗುಣ ಶುದ್ಧ ಮಾಸ ತ್ರಯೋದಶಿ ರೇವಣಸಿದ್ಧರ ಹುಟ್ಟಿದ ದಿವಸ ಜಾತ್ರಾ ಉತ್ಸವ ಪುರಬೀದಿಗಳಲ್ಲಿ ಮೆರವಣಿಗೆ ನಡೆಯುತ್ತವೆ. ಸದ್ಭಕ್ತರೆಲ್ಲರೂ ತಮ್ಮ ತಮ್ಮ ಕಳಸಗಳ ಸಮೇತ ಉತ್ಸವದಲ್ಲಿ ಪಾಲ್ಗೊಂಡು ಶ್ರೀ ಸ್ವಾಮಿಯ ತೀರ್ಥ ಪ್ರಸಾದ ಸ್ವೀಕರಿಸಿ ಶ್ರೀಗುರು ರೇವಣಸಿದ್ಧನ ಕೃಪಾರ್ಶೀವಾದಕ್ಕೆ ಪಾತ್ರರಾಗುತ್ತಾರೆ.
5. ಓಬಳಾಪುರ : ಈ ಗ್ರಾಮ ಬಳ್ಳಾರಿಯಿಂದ ಸುಮಾರು 15 ಕಿ.ಮೀ. ಅಂತರದಲ್ಲಿದೆ. ಈ ಊರಿನಲ್ಲಿ ರೇವಣಸಿದ್ಧನ ಮೂರ್ತಿಯನ್ನು ವಂಶಪಾರಂಪರ್ಯವಾಗಿ ವಿರೂಪಾಕ್ಷಯ್ಯನವರ ಮನೆಯಲ್ಲಿಯೇ ಪೂಜಿಸುತ್ತಾ ಬಂದಿದ್ದರು. ಆದರೆ ಯಾವುದೋ ಕಾರಣದಿಂದ ತಮ್ಮ ತಮ್ಮಲ್ಲಿಯೇ ಕಲಹವುಂಟಾಗಿ ರೇವಣಸಿದ್ಧನಿಗೆ ಪ್ರತ್ಯೇಕವಾದ ಮಠವನ್ನು 2012ರ ಜನವರಿ 26ರಂದು ಸ್ಥಾಪನೆ ಮಾಡಿದ್ದಾರೆ. ಈ ಮಠಕ್ಕೆ ಒಬ್ಬ ಜಂಗಮನನ್ನು ತಿಂಗಳಿಗೆ ಮೂರು ಸಾವಿರ ಸಂಬಳ ಮಾತನಾಡಿ ಒಂದು ಮನೆಯನ್ನು ಕೊಟ್ಟು ಇರಿಸಿದ್ದಾರೆ. ಇವರು ಈ ಮಠದ ಪೂಜೆ ದಿನಕ್ಕೆ ಎರಡು ಸಲ, ವಾರದ ಪೂಜೆ ಸೋಮವಾರ ಮತ್ತು ಶುಕ್ರವಾರದಂದು ನಡೆಯುತ್ತದೆ. ಸೋಮವಾರ, ಅಮವಾಸೆ, ಹುಣ್ಣಿಮೆಗೆ ಭಜನೆ ನಡೆಯುತ್ತದೆ. ಶ್ರಾವಣಮಾಸದಲ್ಲಿ ಎಷ್ಟು ಸೋಮವಾರ ಬರುತ್ತವೆ ಅಷ್ಟು ವಾರ ಅಭಿಷೇಕ, ಮಹಾಮಂಗಳಾರತಿ, ಅನ್ನದಾನ ನಡೆಯುತ್ತದೆ. ಕಾರ್ತಿಕ ಮಾಸದಲ್ಲಿ ಕಾರ್ತಿಕೋತ್ಸವ, ವಿಜಯದಶಮಿಯ ದಿವಸ ಪಲ್ಲಕ್ಕಿ ಉತ್ಸವವನ್ನು ಊರು ತುಂಬಾ ಮೆರವಣಿಗೆಯ ಸಮೇತ ಬನ್ನಿಗಿಡಕ್ಕೆ ಹೋಗಿ ಮಂಗಳಾರತಿ ಮಾಡಿ  ಬರುತ್ತಾರೆ. ಈ ಊರಿನಲ್ಲಿರುವ ಕುರುಬರ ಮನೆಗಳು 120, ಒಡೆಯರ ಮನೆಗಳು 40. ಬಳ್ಳಾರಿ ಜಿಲ್ಲೆಯ ರೇವಣಸಿದ್ಧೇಶ್ವರ ಮಠಗಳನ್ನು ಸಮೀಕ್ಷೆ ಮಾಡಿದಾಗ ಕುರುಬರು ವಾಸಿಸುವಂತಹ ಗ್ರಾಮಗಳಲ್ಲಿ ಸಾಮಾನ್ಯವಾಗಿ ರೇವಣಸಿದ್ಧನ ಮಠಗಳು ಕಂಡುಬರುತ್ತವೆ. ಇದಕ್ಕೆ ಪೂರಕವಾಗಿ ಈ ಕೆಳಗಿನ ಜನಪದ ಹಾಡು ಸ್ಪಷ್ಟಪಡಿಸುತ್ತದೆ.
ನಾಗುಳೊನ್ನೀಗೆ ಆದವು ಗುರುಮಠ | ನ್ಯಾಯಗಾರರು ಕುರುಬರು
ನ್ಯಾಯಗಾರರು ಕುರುಬರ ಕೇರ್ಯಾಗಿ | ಆದಾವು ರೇವಣ್ಣರ ಗುರುಮಠ
ಹೀಗೆ ಕುರುಬರ ಕೇರಿಗಳಲ್ಲಿ ಇರುವ ರೇವಣಸ್ವಾಮಿಯ ಮೇಲೆ ಕುರುಬರಿಗೂ ಮತ್ತು ಒಡೆಯರುಗಳಿಗೂ ಎಲ್ಲಿಲ್ಲದ ಭಕ್ತಿ ಭಾವ ಮತ್ತು ಶ್ರದ್ಧೆ. ಈ ದೈವದ ಮೇಲೆ ಅವರಿಗಿರುವ ಹಂಬಲವನ್ನು ಜನಪದರು ಈ ರೀತಿ ಹೇಳಿಕೊಂಡಿದ್ದಾರೆ.
ಈ ಮಠಗಳ ಒಡೆತನ ಕುರುಬರಿಗೆ ಸೇರಿದೆ. ಕುರುಬರ ಗುರುಗಳಾದ ಒಡೆಯರು ಈ ಮಠಗಳ ಅಧಿಪತಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಕುರುಬರ ನಾಮಕರಣ, ದೀಕ್ಷೆ ಮದುವೆ, ಜಾತ್ರೆ, ಉತ್ಸವಗಳಂಥ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಈ ಒಡೆಯರು ಪೌರೋಹಿತ್ಯವನ್ನು ವಹಿಸುವರು. ಒಡೆಯರು ನಿಧನರಾದ ನಂತರ ಆ ಒಡೆಯರ ಹೆಂಡಂದಿರಿಗೆ ಗುರುತನ ಬರುವುದು. ಅವಳಿಗೆ ಒಡೆಯರಮ್ಮ. ಅಮ್ಮನೋರು ಎಂದು ಕರೆಯುವರು. ಮುತ್ತೈದೆಯ ಸಂಕೇತಗಳಾದ ಕರಿಮಣಿಸರ, ಕುಂಕುಮ ತೆಗೆಯುವುದಿಲ್ಲ. ಕೊರಳಲ್ಲಿ ಲಿಂಗವನ್ನು ಧರಿಸುತ್ತಾರೆ. ಕುರುಬರ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಆಕೆ ಗುರುಸ್ಥಾನದಲ್ಲಿ ನಿಂತು ಮುನ್ನಡೆಸುವುದು ಕಂಡುಬಂದಿದೆ. ಇದು ರೇವಣಸಿದ್ಧ ಹಾಕಿಕೊಟ್ಟ ಆಚರಣೆಗಳು, ಸಂಪ್ರದಾಯಗಳು. ಎಷ್ಟೊಂದು ಔಚಿತ್ಯಪೂರ್ಣವಾಗಿದ್ದವು ಎಂಬುದನ್ನು ಗಮನಿಸಬಹುದು.
ಆದರೆ ಕೊಲ್ಲಿಪಾಕಿ ಶಿವಲಿಂಗದಲ್ಲಿ ಉದ್ಭವವಾದಂತೆ ವಿನ್ಯಾಸಗೊಂಡಿರುವ ರೇವಣಸಿದ್ಧನ ಪ್ರಾಚೀನ ಶಿಲ್ಪ ಒಂದೂ ಕಂಡುಬಂದಿಲ್ಲ. ಡಾ. ಎಂ.ಎಂ. ಕಲಬುರ್ಗಿ ಅವರು ಹೇಳುವಂತೆ ಬಹುಶಃ 19ನೆಯ ಶತಮಾನದಲ್ಲಿ ಮುದ್ರಿತ ಪುಸ್ತಕಗಳ ಮೂಲಕ ಶಿವಲಿಂಗದಲ್ಲಿ ಉದ್ಭವವಾದಂಥ ಚಿತ್ರವನ್ನು ಪ್ರಚಾರಕ್ಕೆ ತಂದು 20ನೆಯ ಶತಮಾನದಲ್ಲಿ ಪಂಚಾಚಾರ್ಯರ ಪವಾಡದಿಂದ ಹಳೆಯ ದೇವಾಲಯಗಳಲ್ಲಿ ಹೊಸ ಬಿಳಿಕಲ್ಲಿನ ಶಿಲ್ಪವನ್ನು ಸ್ಥಾಪಿಸುತ್ತ ನಡೆದಿದ್ದಾರೆ. ಹೀಗಾಗಿ ನಿಜರೇವಣಸಿದ್ಧನ ಶಿಲ್ಪ 13ನೆಯ ಶತಮಾನದಷ್ಟು ಪ್ರಾಚೀನ. 20ನೆಯ ಶತಮಾನದಷ್ಟು ಆಧುನಿಕ ಎಂದು ಹೇಳಬಹುದು. ಇದಕ್ಕಾಗಿ ಕೃತಕ ರೇವಣಸಿದ್ಧನ ಶಿಲ್ಪಗಳು ನಮಗೆ ಅಧಿಕ ಪ್ರಮಾಣದಲ್ಲಿ ಕಾಣಸಿಗುತ್ತವೆ.
ವೀರಶೈವ ಸಾಮ್ರಾಜ್ಯದ ಚಕ್ರವರ್ತಿ ಎನಿಸಿದಂತಹ ರೇಣುಕಾಚಾರ್ಯನು ಕೊಲ್ಲಿಪಾಕಿ ಸೋಮನಾಥ ಲಿಂಗದಲ್ಲಿ ಉದ್ಭವಿಸಿ, ಭೂಲೋಕದಲ್ಲಿ 1400 ವರ್ಷಗಳವರೆಗೆ ಇದ್ದು, 700 ವರ್ಷ ಮನುಷ್ಯನ ರೂಪದಲ್ಲಿ ಮತ್ತು 700 ವರ್ಷಮೂರ್ತಿ ದೇವರಾಗಿ ಲೀಲೆಗಳನ್ನು ಮಾಡಿದ್ದಾರೆ. ಕೈಲಾಸದ ರೇಣುಕನೇ ದ್ವಾಪರಯುಗದಲ್ಲಿ ರೇಣುಕಾಚಾರ್ಯರೆಂದು, ಕಲಿಯುಗದಲ್ಲಿ ಶ್ರೀ ರೇವಣಸಿದ್ಧನೆಂದು ಅವತರಿಸಿದ್ದರು ಎಂಬುದು ತಿಳಿದಿರುವ ಸಂಗತಿ.

ಆಧಾರಸೂಚಿ ಮತ್ತು ಟಿಪ್ಪಣಿಗಳು
1. ಕುರುಬರ ಗುರು ಒಡೆಯರು ಸಾಂಸ್ಕøತಿಕ ಅಧ್ಯಯನ, ಲೇ. ಡಾ. ಬಿ.ಜಿ. ಬಿರಾದಾರ, ಪುಟ 193.
2. ಅದೇ., ಪುಟ 192.
3. ಹರಿಹರನ ರಗಳೆ ರೇವಣಸಿದ್ಧೇಶ್ವರ ರಗಳೆ, (ಸಂ) ಎಂ.ಎಂ. ಕಲಬುರ್ಗಿ, ಪುಟ 289.
4. ಮಾರ್ಗ ಸಂಪುಟ 4, (ಲೇ) ಎಂ.ಎಂ. ಕಲಬುರ್ಗಿ, ರೇವಣಸಿದ್ಧರ ಲೇಖನ, 2004, ಪುಟ 356.
5. ಅದೇ., ಪುಟ 356.
6. ಸಿದ್ಧರಾಮ ಶಿವಯೋಗಿಯಾದಿ ರೇವಣಸಿದ್ಧನನ್ನು ಶಿವಾಚಾರ್ಯ ಮಾಡಿದುದು, (ಲೇ) ಎಂ.ಎಂ. ಕಲಬುರ್ಗಿ, ಲಿಂಗಾಯ ಜೈಲೈ 1, 2006, ಪುಟ 3-5.

 3ನೇ ವಾರ್ಡ್, ಮರಿಯಮ್ಮನಹಳ್ಳಿ, ಹೊಸಪೇಟೆ, ತಾಲ್ಲೂಕು, ಬಳ್ಳಾರಿ-583 222. ಮೊಬೈಲ್ 99024 93435.

2 comments:

  1. ದಯವಿಟ್ಟು "ಸಿದ್ದಾಂತ ಶಿಖಾಮಣಿ" ಯ ಕಾಲಮಾನವನ್ನು ತಿಳಿಸಿಕೊಡಬೇಕು.
    ಇಲ್ಲಿ ತಿಳಿಸಿರುವ ಪೌರಾಣಿಕ ಹಿನ್ನೆಲೆಯ ರೇವಣಸಿದ್ದರಗಳೆಯ ಶಿವನ ಒಡ್ಡೋಲಗದ ಕಥೆ, ಸಿದ್ದಾಂತ ಶಿಖಾಮಣಿಯ ಮೊದಲ ಭಾಗದಲ್ಲೇ ಹೇಳಲಾಗಿದೆ.
    ಇದು ಹರಿಹರ ಕವಿಯ ಪೂರ್ವಕಾಲದ ಸಂಸ್ಕೃತ ಕೃತಿ.
    - Sampath Kumar (kcsampath@gmail.com)

    ReplyDelete