Sunday, July 27, 2014

ಕರ್ನಾಟಕ ಇತಿಹಾಸ ಅಕಾದೆಮಿ ಕಾರ್ಯಕ್ರಮ



ಐತಿಹಾಸಿಕ ಪರಂಪರೆ ಉಳಿಸಿ
ಎಚ್‌.ಶೇಷಗಿರಿರಾವ್
appaaji@gmail.com

ಕರ್ನಾಟಕ ಇತಿಹಾಸ ಅಕಾದೆಮಿಯು ಇತಿಹಾಸ ಸಂಶೋಧಕರ ಮತ್ತು ಆಸಕ್ತರ ರಾಜ್ಯ ಮಟ್ಟದ ಸಂಘಟನೆಯಾಗಿದೆ. ಖ್ಯಾತ ಇತಿಹಾಸತಜ್ಞ ಡಾ. ಸೂರ್ಯನಾಥಕಾಮತ್ ರಿಂದ ೧೯೮೬ ರಲ್ಲಿ ಸ್ಥಾಪಿತವಾದ ಅಕಾದೆಮಿ ಯುವ ಸಂಶೋದಕರಿಗೆ ಉತ್ತಮ ವೇದಿಕೆಯಾಗಿದೆ. ಇದನ್ನು ಈಗ ಡಾ. ದೇವರಕೊಂಡಾರೆಡ್ಡಿ ಮುನ್ನೆಡಸುತಿದ್ದಾರೆ.ಪ್ರತಿವರ್ಷ ಸಮ್ಮೇಳನ ನಡೆಸಿ ನಾಡಿನಾದ್ಯಂತದ ಇತಿಹಾಸ ಸಂಶೋಧಕರಿಗೆ ಆ ಸಂದರ್ಭದಲ್ಲಿ ತಮ್ಮ ಸಂಶೋಧನಾ ಪ್ರಬಂಧವನ್ನು ಮಂಡಿಸಲು ಅವಕಾಶ ನೀಡುವುದು. ನಂತರ ಅದನ್ನು ಸ್ಮರಣ ಸಂಚಿಕೆಯ ಮೂಲಕ ಹೊರತರುವುದು. ಒಂದು ಪ್ರಮುಖ ಕಾರ್ಯ.

ಇದರಿಂದ ನಾಡಿನ ಮೂಲೆ ಮೂಲೆಯಲ್ಲಿರುವ ಶಾಸನ, ಹಸ್ತಪ್ರತಿ ,ಸ್ಮಾರಕ, ಪ್ರಾಗೈತಿಹಾಸಿಕ ಸ್ಥಳ, ಕೋಟೆ ಕೊತ್ತಳಗಳ ಮಾಹಿತಿಯನ್ನು ಆಸಕ್ತಿವಹಿಸಿ ಸದಸ್ಯರುಗಳು ಬೆಳಕಿಗೆ ತರತಿದ್ದಾರೆ, ಈ ಎಲ್ಲ ಕಾರ್ಯವನ್ನೂ ಸ್ವಇಚ್ಛೆಯಿಂದ ಮಾಡಲಾಗುತ್ತಿದೆ. ಸರ್ಕಾರದ ಅನುದಾನಕ್ಕೆ ಕೈ ಚಾಚುತ್ತಿಲ್ಲ. ಮತ್ತು ಇತಿಹಾಸ ಪ್ರಜ್ಞೆಯನ್ನು ಜಾಗೃತಗೊಳಿಸಲು ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ವಾರ್ಷಿಕ ಆಚರಣೆಯು ಯುವಜನರಲ್ಲಿ ಇತಿಹಾಸ ಪ್ರೇಮ ಬೆಳಸಲು ಸಹಕಾರಿಯಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಘಟಕಗಳನ್ನು ಹೊಂದಿರುವ ಅಕಾದೆಮಿ ಪ್ರತಿವರ್ಷ ಜೂಲೈ ತಿಂಗಳಲ್ಲಿ ಪ್ರೌಢಶಾಲೆ, ಪಿಯುಸಿ ಮತ್ತು ಪದವಿಕಾಲೇಜುಗಳಲ್ಲಿ ಮತ್ತು ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಐತಿಹಾಸಿಕ ಪರಂಪರೆಯ ತಿಳಿವು ನೀಡುವ ಭಿತ್ತಿ ಚಿತ್ರಗಳನ್ನು ಪ್ರದರ್ಶಿಸಿಸುವ ವ್ಯವಸ್ಥೆಯನ್ನು ಜಿಲ್ಲಾಘಟಕಗಳ ಮೂಲಕ ಮಾಡುತ್ತಿದೆ 

ಹಾಗೂ ವಿದ್ಯಾರ್ಥಿಗಳಿಗೆ ಐತಿಹಾಸಿಕ ವಿ‍ಷಯಗಳ ಮೇಲೆ ಪ್ರಬಂಧ ಮತ್ತು ಭಾಷಣ ಸ್ಪರ್ಧೆ ಏರ್ಪಡಿಸಿ ವಿವಿಧ ಹಂತದಲ್ಲಿ ವಿಜೇತರಿಗೆ ಪ್ರಶಸ್ತಿ ನೀಡುವುದು. ಮತ್ತು ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರ ನೀಡಿ ಉತ್ತೇಜನ ನೀಡುವುದು.
ಈ ವ‍ರ್ಷ ಇತಿಹಾಸ ಅಕಾದೆಮಿಯ ಬೆಂಗಳೂರು ನಗರ ಜಿಲ್ಲಾ ಘಟಕವು ಅಧ್ಯಕ್ಷ್ಯೆ ಶ್ರೀಮತಿ ಇಂದಿರಾ ಹೆಗಡೆಯವರ ನೇತೃತ್ವದಲ್ಲಿ ಜೂಲೈ ೨೭ ನೆಯ ಭಾನುವಾರದಂದು ಪರಂಪರೆ ಉಳಿಸಿ ಕಾರ್ಯಕ್ರಮ ಸಂಘಟಿಸಿತು. ಜಯನಗರ ನ್ಯಾಷನಲ್‌ ಪದವಿ ಕಾಲೇಜಿನಲ್ಲಿ ವಿವಿಧ ಕಾಲೇಜುಗಳಿಂದ ಬಂದ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹೈಸ್ಕೂಲು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆಗೆ ಬೆಂಗಳೂರಿನ ಹೆಮ್ಮೆಯ ತೋಟ ' ಲಾಲ್‌ಬಾಗ್‌' ವಿಷಯ ನೀಡಲಾಗಿತ್ತು. ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ "ಬೆಂಗಳೂರು ಉತ್ಸವಗಳಲ್ಲಿ ಕರಗ" , ಪದವಿ ವಿದ್ಯಾರ್ಥಿಗಳಿಗೆ ಬೆಂಗಳೂರು ಅಭಿವೃದ್ದಿಯಲ್ಲಿ ಮಾರ್ಕ‌ ಕಬ್ಬನ್ ಪಾತ್ರ' ಭಾಷಣದ ವಿಷಯವಾಗಿತ್ತು.

ಪ್ರಬಂಧ ಸ್ಪರ್ಧೆಗೆ ಹೈಸ್ಕೂಲುವಿದ್ಯಾರ್ಥಿಗಳಿಗೆ "ಬೆಂಗಳೂರಿನ ಒಂದು ಪ್ರಾಚ್ಯ ಕ್ಷೇತ್ರ",. ಪದವಿ ಪೂರ್ವ ಕಾಲೇಜಿನವರಿಗೆ "ಪ್ರಾಚ್ಯ ವಸ್ತು ಸಂಗ್ರಾಹಾಲಯ" ಮತ್ತು ಪದವಿ ವಿದ್ಯಾರ್ಥಿಗಳಿಗೆ "ಬೆಂಗಳೂರಿನಲ್ಲಿ ಯುದ್ಧ ಸ್ಮಾರಕಗಳು" ವಿ‍ಷಯದ ಬಗ್ಗೆ ಒಂದು ಗಂಟೆಯಲ್ಲಿ ಪ್ರಬಂಧ ಬರೆಯ ಬೇಕಿತ್ತು. ಕನ್ನಡದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಇಂಗ್ಲಿಷ್‌ ಮಾಧ್ಯಮದ ವಿದ್ಯಾರ್ಥಿಗಳೂ ಬಂದು ತಮಗೂ ಇಂಗ್ಲಿಷ್‌ನಲ್ಲಿ ಬರೆಯಲು ಅವಕಾಶ ಕಲ್ಪಿಸಲು ಮನವಿ ಮಾಡಿದ್ದು ವಿಶೇಷವಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಬಂದರೆ ಮುಂದಿನ ವರ್ಷ ಪರಿಶೀಲಿಸಲಾಗುವುದೆಂಬ ಭರವಸೆ ನೀಡಲಾಯಿತು.
'ಸುಮಾರು ೨೦ ಪ್ರೌಢಶಾಲೆಗಳು ಮತ್ತು ೧೫ ಕಾಲೇಜು ಮತ್ತು ೧೦ಕ್ಕೂ ಅಧಿಕ ಪದವಿ ಕಾಲೇಜುಗಳು ಭಾಗವಹಿಸಿದ್ದವು. ಯುವ ಜನರ ಸಂಶೋಧನಾ ಪ್ರವೃತ್ತಿ ಮತ್ತು ವಿಷಯ ಸಂಗ್ರಹಣಾ ಶಕ್ತಿ ಅವರ ಭಾಷಣದಲ್ಲಿ ಮತ್ತು ಬರಹಗಳಲ್ಲಿ ಎದ್ದು ಕಂಡಿತು. ಪ್ರಬಂಧ ಸ್ಪರ್ಧೆಯಲ್ಲಂತೂ ಹಲವು ವಿದ್ಯಾರ್ಥಿಗಳು ಬೆಂಗಳೂರು ವಿಷಯವನ್ನು ಕುರಿತಾದ ಚಿತ್ರಗಳ ಪ್ರಿಂಟ್‌ ಔಟ್‌ ಅನ್ನು ಪ್ರಬಂಧದ ಜೊತೆ ಲಗತ್ತಿಸಿರುವುದು ವಿಶೇಷವಾಗಿತ್ತು ಇದರಿಂದಾಗಿ ಯುವಜನರಲ್ಲಿ ಇತಿಹಾಸ ಕುರಿತಾದ ಕುತೂಹಲ ಮೂಡಿಸುವಲ್ಲಿ ಈ ಕಾರ್ಯಕ್ರಮ ಯಶಗಳಿಸಿರುವುದು ಸಾಬೀತಾಯಿತು.

ರಾಜ್ಯಾಧ್ಯಕ್ಷರಾದ ಡಾ. ದೇವರಕೊಂಡಾರೆಡ್ಡಿ, ಕಾರ್ಯದರ್ಶಿಗಳಾದ ಡಾ.ಜಿ.ಕೆ. ದೇವರಾಜ ಸ್ವಾಮಿ , ಇತಿಹಾಸ ತಜ್ಞರಾದ ಡಾ. ಜಯಮ್ಮ ಕರಿಯಣ್ಣ, ಗುಜ್ಜಾರಪ್ಪ, ಡಾ. ಹರಿಹರ ಶ್ರೀನಿವಾಸರಾವ್‌. ಭಾಗವಹಿಸಿದ್ದರು. ಎಲ್ಲ ರಿಗೂ ಮಧ್ಯಾಹ್ನ ಲಘು ಉಪಹಾರ ನೀಡಲಾಯಿತು. ಜಿಲ್ಲಾಘಟಕದ ಕಾರ್ಯದರ್ಶಿ ಶ್ರೀ ಬಿ.ಎಸ್‌ ಗುರುಪ್ರಸಾದರ ಪರಿಶ್ರಮ ಮತ್ತು ಸಂಘಟನಾ ಚಾತುರ್ಯ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು. ಶ್ರೀಮತಿ ಸೀತಾಲಕ್ಷ್ಮಿ ರಾವ್, ಶ್ರೀ ಆದೆಪ್ಪ ಪಾಸೋಡಿ, ಡಾ. ಅನಂತಪದ್ಮನಾಭ, ವೇಮಗಲ್ ಮೂರ್ತಿ, ವೇಮಗಲ್ ಸೋಮಶೇಖರ, ಶ್ರೀನರಸಿಂಹಮೂರ್ತಿ ಹಾಗೂ ಅನೇಕ ಸ್ವಯಂ ಸೇವಕರುಗಳು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. ಭಾನುವಾರವಾದರೂ ನ್ಯಾಷನಲ್‌ ಕಾಲೇಜಿನ ಆವರಣ ಜನರಿಂದ ಗಿಜುಗುಡುತ್ತಿರುವುದು ಇತಿಹಾಸ ಪ್ರಜ್ಞೆಯು ಜಾಗೃತವಾಗಿರುವುದರ ಸಂಕೇತವಾಗಿತ್ತು .










No comments:

Post a Comment