Friday, May 3, 2013

ಅಮ್ಮಿನಭಾವಿ ಶಾಸನೋಕ್ತ ಷಟ್ಪದ

 ಅಮ್ಮಿನಬಾವಿ ಶಾಸನೋಕ್ತ ಅಂಶಗಣ ಷಟ್ಪದದ ಸರಿಯಾದ ಪಾಠ ಆದರೆ ವಾಸ್ತವ ವಿಭಿನ್ನ

ಎಸ್. ಕಾರ‍್ತಿಕ್
# ೬೫ [೧ ಮಹಡಿ], ೩ ನೆಯ ಅಡ್ಡರಸ್ತೆ, ಶಿಕ್ಷಕರ ಬಡಾವಣೆ, ೧ ನೆಯ ಹಂತ, ಜೆ.ಪಿ.ನಗರ ಅಂಚೆ , ಬೆಂಗಳೂರು-೭೮

    ಕರ್ನಾಟಕ ರಾಜ್ಯದ ಧಾರವಾಡ ಜಿಲ್ಲೆ ಮತ್ತು ತಾಲ್ಲೂಕಿನಲ್ಲಿರುವ ಕ್ರಿ.ಶ. ೧೦೭೧-೭೨ ರ ಅಮ್ಮಿನಬಾವಿ ಶಾಸನೋಕ್ತ ಅಂಶಗಣ ಷಟ್ಪದಕ್ಕೆ ಕನ್ನಡ ಷಟ್ಪದಿ ಛಂದಸ್ಸಿನ ಇತಿಹಾಸದಲ್ಲಿ ಪ್ರಮುಖ ಸ್ಥಾನವಿದೆ. ಶಾಸನದಲ್ಲಿಯೇ ಷಟ್ಪದ ಎಂಬ ಸೂಚನೆಯಿರುವುದು ಗಮನಾರ್ಹ ಅಂಶವಾಗಿದೆ. ಇದರ ಬಗೆಗೆ ಹಲವಾರು ವಿಚಾರ ವಿಮರ್ಶೆಗಳು ನಡೆದಿವೆ. ಆದರೆ ಷಟ್ಪದದ ಸರಿಯಾದ ಪಾಠದ ಕಡೆಗೆ ಯಾರೊಬ್ಬರೂ ಗಮನ ಹರಿಸಿದಂತಿಲ್ಲ. ಇದರ ಪಾಠವನ್ನು ಮೊದಲು ಸಂಶೋಧಕರ ಗಮನಕ್ಕೆ ತಂದವರು ಪಿ. ಬಿ. ದೇಸಾಯಿ ಅವರು (ಕನ್ನಡ ನುಡಿ ೧೫-೨, ೧೯೫೨ ಪುಟ ೪೮). ಇವರು ಅನೇಕ ಚರ್ಚೆಗಳಾದ ನಂತರ ನೀಡಿರುವ ಪುನರ್ ವಿಮರ್ಶಿತ ಪಾಠವನ್ನೇ (ಕನ್ನಡ ನುಡಿ ೧೫-೧೧, ಪುಟ ೩೦೭-೩೧೧) ತೀ. ನಂ. ಶ್ರೀಕಂಠಯ್ಯ, ಟಿ.ವಿ. ವೆಂಕಟಾಚಲ ಶಾಸ್ತ್ರೀ ಮೊದಲಾದ ವಿದ್ವಾಂಸರು ಸಾಮಾನ್ಯವಾಗಿ ಒಪ್ಪಿಕೊಂಡು ವಿಮರ್ಶೆಗಳನ್ನು ಮಾಡಿದ್ದಾರೆ {ಇದರ ಬಗೆಗಿನ ಸಮಗ್ರ ಚರ್ಚೆಗೆ ನೋಡಿ : (ಅ) ಅಪೂರ್ವ ಷಟ್ಪದಿಯ ಲಕ್ಷಣ-ತೀ. ನಂ. ಶ್ರೀಕಂಠಯ್ಯ, ತೀ.ನಂ.ಶ್ರೀ ಸಮಗ್ರ ಗದ್ಯಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು-೨೦೦೬, ಪುಟ ೫೫೯-೫೬೮ (ಆ) ಕನ್ನಡ ಛಂದಃಸ್ವರೂಪ-ಟಿ.ವಿ. ವೆಂಕಟಾಚಲ ಶಾಸ್ತ್ರೀ, ಡಿ.ವಿ.ಕೆ. ಮೂರ್ತಿ, ಮೈಸೂರು-೧೯೭೮, ಪುಟ ೪೯೭-೪೯೮ ; ದ್ವಿತೀಯ ಮುದ್ರಣ-೧೯೯೬, ಪುಟ ೪೪೨-೪೪೩ (ಇ) ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಛಂದಸ್ಸಿನ ಚರಿತ್ರೆ, ಸಂಪುಟ-೨ (ಸಂ) ಸಿ. ಪಿ. ಕೃಷ್ಣಕುಮಾರ್, ೧೯೮೦, ಪುಟ ೧೬೩-೧೬೪ (ಈ) ಷಟ್ಪದಿ, ಲಕ್ಷಣ, ಪ್ರಭೇದ, ಇತಿಹಾಸ-ಟಿ.ವಿ. ವೆಂಕಟಾಚಲ ಶಾಸ್ತ್ರೀ, ಶಾಸ್ತ್ರೀಯ-೨, ಸಪ್ನ ಬುಕ್ ಹೌಸ್, ಬೆಂಗಳೂರು-೧೯೯೯, ಪುಟ ೩೭೬-೩೭೭} ಪಿ. ಬಿ. ದೇಸಾಯಿ ಅವರು ನೀಡಿರುವ ಪುನರ್ ವಿಮರ್ಶಿತ ಪಾಠ ಇಂತಿದೆ :

ಹರಪಾದಾಂಬುಜ ಭೃಂಗಂ
ಪರನಾರೀಜನದೂರಂ
. . . . . . . . . . . . . . . .
[ಸರಸನೂರ್ಜಿ]ತರೂಪಂ
ಸರಸತಿಗಣಭಕ್ತ
ನರಸಮಂ ನೆಗರ್ದನೀ ಧರೆಗೆಲ್ಲಂ

ಇದನ್ನು  ಎಂ. ಎಂ. ಕಲಬುರ್ಗಿ ಅವರು ಕೆಳಗಿನಂತೆ (ಧಾರವಾಡ ತಾಲ್ಲೂಕಿನ ಶಾಸನಗಳು, ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ-೧೯೭೬, ಪ್ರಸ್ತಾವನೆ, ಪುಟ xxiii ಮತ್ತು ಪುಟ ೨) ದಾಖಲಿಸಿದ್ದಾರೆ : 

ಹರಪಾದಾಂಬುಜ ಭೃಂಗಂ
ಪರನಾರೀಜನದೂರಂ
[   -  -    -  -] ಜಾತರೂಪಂ
ಸರಸತಿಗಣಭಕ್ತಂ
ನರಸಂಮಂ ನೆಗರ್ದ್ಧನೀ
ಧರೆಗೆಲ್ಲಂ ಸಲೆ ಸ [-    -  -]
ಈ ಶಾಸನದ ಪಾಠವನ್ನು ಎಂ. ಎಂ. ಕಲಬುರ್ಗಿ ಅವರು ಸೌತ್ ಇಂಡಿಯನ್ ಇನ್ಸ್ಕ್ರಿಪ್ಷನ್ಸ್‌ನಲ್ಲಿ ಪ್ರಕಟವಾಗಿರುವಂತೆಯೇ ನೀಡಿದ್ದಾರೆ. ಸೌತ್ ಇಂಡಿಯನ್ ಇನ್ಸ್ಕ್ರಿಪ್ಷನ್ಸ್, ಸಂಪುಟ-೧೧, ಭಾಗ-೨ ರಲ್ಲಿ {ombಚಿಥಿ ಏಚಿಡಿಟಿಚಿಣಚಿಞ Iಟಿsಛಿಡಿiಠಿಣioಟಿs, ಗಿoume-, Pಚಿಡಿಣ-೨, (ಸಂ) ಎನ್. ಲಕ್ಷ್ಮೀನಾರಾಯಣರಾವ್ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ, ದೆಹಲಿ-೧೯೮೬ ರ ಮರುಮುದ್ರಣ, ಶಾಸನ ಸಂಖ್ಯೆ-೧೨೧, ಪುಟ ೧೪೦, ಸಾಲು ೨೩-೨೫} ಪ್ರಕೃತ ಷಟ್ಪದವು ಕೆಳಗಿನಂತೆ ಅಚ್ಚಾಗಿದೆ.

               ೨೩ . . . . . . ಧರ್ಮ್ಮಜ್ಞರ್ || ಷಟ್ಪದ|| ಹರಪಾದಾಂಬುಜ ಭೃಂಗಂ ಪರನಾರೀಜನದೂರಂ . . .
               ೨೪ . . . . . . ಜಾತರೂಪಂ ಸರಸತಿಗಣಭಕ್ತ ನರಸ[ಂ]ಮ್ಮಂ ನೆಗರ್ದ್ಧನೀ ಧರೆಗೆಲ್ಲಂ ಸಲಿ ಸ .
               ೨೫ . . . .  ಸಂಸಾರಂ

ಈ ಷಟ್ಪದವನ್ನು ಪಾದಗಳಾಗಿ ವಿಂಗಡಿಸಿ ಬರೆದರೆ ಅದರ ಸ್ವರೂಪ ಕೆಳಗಿನಂತಿರುತ್ತದೆ. ಇದೇ ಸರಿಯಾದ ಪಾಠವಾಗಿದ್ದು ಅಂಶಗಣ ಷಟ್ಪದದ ಲಕ್ಷಣಕ್ಕೆ ಸರಿಯಾಗಿದೆ. ಆದರೆ ಸ್ವಲ್ಪಮಟ್ಟಿಗೆ ಪದ್ಯ ತ್ರುಟಿತವಾಗಿರುವುದು ವಿಷಾದಕರ ಅಂಶ.
ಹರಪಾದಾಂಬುಜ ಭೃಂಗಂ
ಪರನಾರೀಜನದೂರಂ
. . . . . . . . .  ಜಾತರೂಪಂ
ಸರಸತಿಗಣಭಕ್ತ
ನರಸ[ಂ]ಮ್ಮಂ ನೆಗರ್ದ್ಧನೀ
ಧರೆಗೆಲ್ಲಂ ಸಲಿ ಸ . . . . .

 ಮೇಲಿನ ವಿಶ್ಲೇಷಣೆಯಿಂದ ತಿಳಿದು ಬರುವ ಪ್ರಮುಖ ಅಂಶವೆಂದರೆ ಕಲಬುರ್ಗಿ ಅವರು ಅಂಗೀಕರಿಸಿರುವ, ಸೌತ್ ಇಂಡಿಯನ್ ಇನ್ಸ್ಕ್ರಿಷನ್ಸ್‌ನಲ್ಲಿನ ಪಾಠವೇ ಸರಿಯಾಗಿದ್ದು {ಒಂದೆರಡು ಕಡೆ ಕಲಬುರ್ಗಿ ಅವರು ನೀಡಿರುವ ಪಾಠದಲ್ಲಿ ಬಹುಶಃ ಮುದ್ರಣ ದೋಷಗಳಿವೆ} ಪಿ. ಬಿ. ದೇಸಾಯಿ ಅವರು ನೀಡಿರುವ ಪಾಠವನ್ನೇ ನಂತರದ ಸಂಶೋಧಕರು ಅನುಸರಿಸಿರುವ ಕಾರಣ ಪ್ರಕೃತ ಅಂಶಗಣ ಷಟ್ಪದದ ಪಾಠ ದೋಷಗಳಿಂದ ಕೂಡಿವೆ. ಬಹುಶಃ ಶಾಸನ ಮೂಲವನ್ನು ನೋಡದ ಕಾರಣ ಈ ದೋಷಗಳು ಸಂಭವಿಸಿವೆ. ಇದು ಸಮರ್ಥನೀ ಯವಲ್ಲ. ಪರನಾರೀ ಜನದೂರಂ ಆದ ಮೇಲೆ ಒಂಬತ್ತು ಅಕ್ಷರಗಳು ಮಾತ್ರ ತ್ರುಟಿತವಾಗಿವೆ. ಸೌತ್ ಇಂಡಿಯನ್ ಇನ್ಸ್ಕ್ರಿಪ್ಷನ್ಸ್ ಸಂಪುಟ ಗಳಲ್ಲಿ ತ್ರುಟಿತವಾಗಿರುವ ಅಕ್ಷರಗಳ ಸಂಖ್ಯೆಯನ್ನು ಖಚಿತವಾಗಿ ಚುಕ್ಕೆಗಳನ್ನು ಇಡುವುದರ ಮೂಲಕ ಸೂಚಿಸುತ್ತಾರೆ. ನರಸ[ಂ]ಮ್ಮಂ ಎಂಬಲ್ಲಿ ಸ ನಂತರ ಚೌಕಕಂಸದೊಳಗಿರುವ ಅನುಸ್ವಾರ ಸಂಪಾದಕರ ಸೇರ್ಪಡೆಯೆಂದು ತೋರುತ್ತದೆ. ಇದರ ಅಗತ್ಯವಿರಲಿಲ್ಲ.  ಪಿ. ಬಿ. ದೇಸಾಯಿಯವರು ಶಾಸನಪಾಠದ ಪಡಿಯಚ್ಚಿನ ನೆರವಿನಿಂದ ತಮ್ಮ ಪಾಠವನ್ನು ನೀಡಿರುತ್ತಾರೆ. ಆದರೆ ದೇಸಾಯಿಯವರು ನೀಡಿರುವ ಪಾಠಕ್ಕೆ ಯಾವುದೇ ಸಮರ್ಥನೆಯಿಲ್ಲ. ಇಲ್ಲಿ ಮೂರನೆಯ ಸಾಲಿನ ತ್ರುಟಿತ ಭಾಗ [   -,  -  ,  -  -] ಎಂಬ ವಿನ್ಯಾಸದ ವಿಷ್ಣುಗಣವಾಗಿ ಇರಬೇಕೆಂದು ಕಲಬುರ್ಗಿ ಅವರು  ದಾಖಲಿಸಿದ್ದಾರೆ. ಇದು ಅಂಶಗಣ ಛಂದಸ್ಸಾದ ಕಾರಣ [-  - -,      -  -] , [     -  --  - -] , [    ] ಈ ವಿನ್ಯಾಸಗಳ ವಿಷ್ಣುಗಣಗಳಲ್ಲಿಯೂ ತ್ರುಟಿತ ಶಾಸನ ಪಾಠ ಇರಬಹುದಾದ ಸಾಧ್ಯತೆಯಿದೆ. ಆರನೆಯ ಸಾಲಿನ ತ್ರುಟಿತ ಭಾಗಕ್ಕೂ ಇದೇ ಮಾತು ಅನ್ವಯಿಸುತ್ತದೆ. ಈ ಕಾರಣದಿಂದ ಕಲಬುರ್ಗಿ ಅವರು ದಾಖಲಿಸಿರುವ ರೀತಿಯನ್ನು ಒಪ್ಪುವುದು ಕಷ್ಟ.

   ಇಂತಹ ಕಾರಣಗಳಿಂದ ಸೌತ್ ಇಂಡಿಯನ್ ಇನ್ಸ್ಕ್ರಿಪ್ಷನ್ಸ್‌ನಲ್ಲಿ ಪ್ರಕಟವಾಗಿರುವ ಪಾಠವನ್ನೇ ಅವಲಂಬಿಸುವುದು ಸೂಕ್ತವಾದು ದಾಗಿದೆ. ಪ್ರಕೃತ ವಿವೇಚನೆಯ ಹಿನ್ನೆಲೆಯಲ್ಲಿ ಮುಂದೆ ಶಾಸನಪಾಠದ ಮಾಹಿತಿಗಳು ವಸ್ತುನಿಷ್ಠವಾಗಿ ಪುನರ್ ವಿಮರ್ಶೆಗೆ ಒಳಪಡ ಬೇಕಿದೆ.


* * *


No comments:

Post a Comment