Wednesday, May 15, 2013

ಗ್ರಾಮವೈವಿಧ್ಯ-ಡಾ. ಕೂ.ಸ. ಅಪರ್ಣ


ಗ್ರಂಥೋಕ್ತ ಗ್ರಾಮವೈವಿಧ್ಯ
ಡಾ. ಕೂ.ಸ. ಅಪರ್ಣ
ಗ್ರಾ, ನಗರ, ಖೇಡ, ಖರ್ವಟ ಇತ್ಯಾದಿಗಳನ್ನು ನಾವು ಶಾಸನ ಮತ್ತು ಸಾಹಿತ್ಯಗಳಲ್ಲಿ ಕಾಣುತ್ತೇವೆ. ಜೈನ ಸನ್ಯಾಸಿಗಳು ವಿವಿಧೆಡೆ ಸಂಚಾರ ಮಾಡುವ ಸಂದರ್ಭವನ್ನು ಹೇಳುವಾಗ, ‘ಗ್ರಾಮೇಕರಾತ್ರಂ ನಗರೇ ಪಂಚರಾತ್ರಂ ಅಟವ್ಯಾಂ ದಶರಾತ್ರಂ ಎಂಬೀ ನ್ಯಾಯದಿಂ ಗ್ರಾಮ ನಗರ ಖೇಡ ಖರ್ವಡ ಮಡಂಬ ಪಟ್ಟಣ ದ್ರೋಣಾಮುಖಂಗಳಲ್ಲಿ ಎಂಬ ಒಕ್ಕಣೆಯು ದೊರೆಯುತ್ತದೆ.ಅಂತೇ, ಶಾಸನದಲ್ಲೂ ಇದೇ ರೀತಿಯಾಗಿ ‘ಗ್ರಾಮಪುರ ಖೇಡ ಖರ್ವಡ ದ್ರೋಣಾಮುಖಗಳ ಉಲ್ಲೇಖವಿದೆ.ಮೇಲುನೋಟಕ್ಕೆ ಇವು ಸಾಮಾನ್ಯವಾಗಿ ಬಳಸುವ ಪದಗಳೇ ಎನಿಸುವುವಾದರೂ, ಇವುಗಳು ಪಾರಿಭಾಷಿಕ ಪದಗಳಾಗಿದ್ದು, ಗ್ರಂಥಗಳು ಈ ಬಗ್ಗೆ ಅನೇಕ ವಿವರಗಳನ್ನು ನೀಡಿವೆ.
‘ಗ್ರಾಮವೆಂಬುದು ಸಾಮಾನ್ಯ ಶಬ್ದ ಮಾತ್ರವಲ್ಲದೆ, ಪಾರಿಭಾಷಿಕ ಶಬ್ದವೂ ಆಗಿದೆ. ಈ ಗ್ರಾಮಗಳ ಬಗ್ಗೆ ಹೇಳುವ ಗ್ರಂಥಗಳು, ಅವುಗಳ ವಿಸ್ತಾರ, ಅಲ್ಲಿರುವ ಜನತೆ, ಬೀದಿಗಳು, ವಾಸ್ತುಮಂಡಲ, ಆಕಾರ ಇವುಗಳನ್ನು ಮಾತ್ರವಲ್ಲದೆ, ಗ್ರಾಮಗಳಲ್ಲಿರಬೇಕಾದ ಮುಖ್ಯದ್ವಾರಗಳು, ವಸತಿ ವ್ಯವಸ್ಥೆ, ದೇವಾಲಯಗಳ ಸ್ಥಾನ - ಇತ್ಯಾದಿಗಳನ್ನೂ ತಿಳಿಸಿವೆ. ಈ ಬಗ್ಗೆ ಮಯಮತ, ಮಾನಸಾರ ಮುಂತಾದ ಗ್ರಂಥಗಳಲ್ಲಿ ದೊರೆತಿರುವ ವಿವರಗಳನ್ನು ಕೆಲಮಟ್ಟಿಗೆ ನೀಡುವುದೇ ಈ ಲೇಖನದ ಉದ್ದೇಶ.
ಆಕಾರ: ಗ್ರಾಮದ ಭೂಮಿಯು ಚತುರಶ್ರ, ಆಯತ, ತ್ರಿಕೋಣ, ವರ್ತುಲಾಕಾರ ಅಥವಾ ಮರ್ದಲಾಕಾರವಾಗಿದ್ದರೆ ಪ್ರಶಸ್ತವಾದುದೆಂದು ವಿಶ್ವಕರ‍್ಮ ವಾಸ್ತುಶಾಸ್ತ್ರವು ಹೇಳಿದೆ.ಹಾಗಿಲ್ಲದೆ, ಮೇಲೆ ಕೆಳಗೆ ಇರುವ (ಅಂದರೆ ಸಮತಟ್ಟಾಗಿರದ) ಭೂಮಿ, ಶಿಖರ ಹೀನ / ಶಿರೋಹೀನ ಭೂಮಿ ಹಾಗೂ ವಕ್ರಾಕೃತಿಯಲ್ಲಿರುವ ಭೂಮಿಯು ವರ್ಜ್ಯವಾದುದು ಎಂದು ಅದೇ ಗ್ರಂಥವು ಹೇಳಿದೆ.
ನಕ್ಷೆ: ಗ್ರಾಮನಕ್ಷೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಬೆಸಸಂಖ್ಯೆಯ ಅಥವಾ ಸಮಸಂಖ್ಯೆ ವಾಸ್ತುಮಂಡಲವನ್ನು ಇದಕ್ಕೆ ಬಳಸಬಹುದಾಗಿದೆ.ಇದಕ್ಕಾಗಿ ಸಕಲ, ಆಸನ ಯಾವುದೇ ನಕ್ಷೆಯೂ ಸೂಕ್ತವೆನಿಸಿದ್ದು, ಇವು ಕ್ರಮವಾಗಿ ಒಂದು ಮತ್ತು ನೂರು ಪದಸಂಖ್ಯೆಯ ನಕ್ಷೆಗಳಾಗಿವೆ.ಕೆಲವೆಡೆ, ಆಯಾ ಗ್ರಾಮದ ಆಕಾರ / ಪ್ರಕಾರಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ವಿಧದ ವಸ್ತುನಕ್ಷೆಯನ್ನು ಹೇಳಲಾಗಿದೆ. ಇದರಂತೆ ಚಂಡಿತ / ಮಂಡೂಕ ಅಥವಾ ಸ್ಥಂಡಿಲ, ಪರಮಶಾಯಿಕಾ, ಪೇಚಕ / ಪೀಠ ಮುಂತಾದ ನಕ್ಷೆ / ವಾಸ್ತುಮಂಡಲವನ್ನು ಗ್ರಂಥಗಳು ಉಲ್ಲೇಖಿಸಿವೆ. ಈ ನಕ್ಷೆಗಳ ಮಧ್ಯದ ಸ್ಥಾನವು ಬ್ರಹ್ಮನ ಸ್ಥಾನವಾಗಿದ್ದರೆ, ಇದರ ನಂತರ, ಸುತ್ತ ಒಂದಾದ ಮೇಲೊಂದರಂತೆ ಕ್ರಮವಾಗಿ ದೈವಕ, ಮಾನುಷ ಮತ್ತು ಪೈಶಾಚ ಸ್ಥಾನಗಳು ಇರುತ್ತವೆ.
ಅಳತೆ: ಗ್ರಾಮ, ನಗರ, ಖೇಟ, ಖರ್ವಟ ಇತ್ಯಾದಿಗಳನ್ನು ‘ದಂಡದಿಂದ (Poes) ಅಳೆಯಬೇಕೆಂದೂ, ಅದನ್ನು ‘ಧನುರ್ಗ್ರಹ ಎಂದು ‘ದಂಡದಿಂದ (ಅಳೆಯಬೇಕೆಂದು) ಗ್ರಂಥಗಳೂ ಹೇಳಿವೆ. ಒಂದು ಹಸ್ತವು ಕಿಷ್ಕು (ubi) ಎನಿಸಿದ್ದು, ೪ ಹಸ್ತವು ಒಂದು ‘ದಂಡ ಎನಿಸುತ್ತದೆ. ಅಂಗುಲವೆಂದರೆ ಒಂದು ಕಿಷ್ಕು (ಹಸ್ತ) ಎಂದೂ, ‘ಚತುರ್ಗುಣ ವೆಂದಾಗ, ಒಂದು ದಂಡವೆಂದೂ ವಿಮಾನಾರ್ಚನ ಕಲ್ಪದಲ್ಲಿದೆ.೧೦ ಆದರೆ, ಇದರಲ್ಲಿ ‘ಗುಣದ ಅಳತೆಯ ಬಗ್ಗೆ ಹೇಳಿಲ್ಲ. ಕೌಟಿಲ್ಯನ ಅರ್ಥಶಾಸ್ತ್ರದಲ್ಲೂ ೮ ಕಂಸ/ಕಿಷ್ಕು ಅಥವಾ ೮ ಪ್ರಾಜಾಪತ್ಯಹಸ್ತವು (=೬೪ ಅಂಗುಲದ ಹಸ್ತ) ಒಂದು ದಂಡಕ್ಕೆ ಸಮ ಎಂದಿದೆ. (ಇದನ್ನು ಬ್ರಾಹ್ಮಣರಿಗೆ ಬಿಡುವ ಭೂಮಿಯ ಅಳತೆಗೆ ಬಳಸಿ ಎಂದಿದೆ)೧೧. ಇದೇ ಕೃತಿಯ ಅಡಿಟಿಪ್ಪಣಿಯಲ್ಲಿ ಒಂದೆಡೆ, ೪೨ ಅಂಗುಲವೆಂದರೆ ಒಂದು ಹಸ್ತ ಮತ್ತು ೪ ಹಸ್ತವೆಂದರೆ ಒಂದು ದಂಡ (=೧೬೮ ಅಂಗುಲ) ಎಂದೂ ಸ್ಪಷ್ಟಪಡಿಸಿದೆ೧೨. ಇದರಲ್ಲಿ ಒಂದು ‘ಧನುರ್ಗ್ರಹ ಅಥವಾ ೨೮ ಅಂಗುಲದ ಹಸ್ತವು, ದನ ಮೇಯಲು ಬಿಡುವ ಭೂಮಿಯ ಅಳತೆಗೆ ಬಳಸಬೇಕು೧೩ ಎಂದಿದೆಯೇ ಹೊರತು ಗ್ರಾಮದ ಅಳತೆಗೆ ಹೇಳಿಲ್ಲ. ಧನುರ್ಗ್ರಹ ದಂಡದಲ್ಲಿ ೨೭ ಅಂಗುಲಗಳಿರುವುದಾಗಿ ಒಂದೆಡೆ ಹೇಳಿದೆ೧೪. ಹೀಗಿದ್ದರೂ, ವಿವರಣೆ ನೀಡುವಾಗ ಗ್ರಂಥಗಳು ‘ದಂಡದಿಂದ ಅಳೆಯಬೇಕೆಂದಷ್ಟೇ ಹೇಳಿದ್ದು, ಕೆಲವೆಡೆ ‘ಧನುರ್ಗ್ರಹ ದಂಡದಿಂದ ಗ್ರಾಮವನ್ನು ಅಳೆಯಬೇಕೆಂದು ಸ್ಪಷ್ಟವಾಗಿದೆ೧೫.
ವಿಸ್ತಾರ: ಮಯಮತದಂತೆ, ದೊಡ್ಡ ಗ್ರಾಮವೆಂದರೆ, ಒಂದು ಲಕ್ಷದಂಡದಷ್ಟು ವಿಸ್ತಾರವಾಗಿರುವುದು.೧೬ ಇದರ ಆರಂಭದ ಚಿಕ್ಕ ಅಳತೆಯು ೨೦೦೦ ದಂಡ ಆಗಿದ್ದು, ೨೦೦೦೦ ದಂಡ ಅಳತೆಯನ್ನು ೫ ಬಾರಿ ಹೆಚ್ಚಿಸಿಕೊಂಡು  ಹೋಗುವುದರಿಂದ ೫ ರೀತಿಯ ವಿಸ್ತಾರವು ಬರುತ್ತದೆ. ಗ್ರಾಮದ ಚಿಕ್ಕ ಅಳತೆಯೆಂದರೆ, ೫೦೦ ದಂಡ ವಿಸ್ತಾರವಾಗಿರುವುದು, ಈ ಆರಂಭದ ಅಳತೆಯಿಂದ ೫೦೦ ದಂಡ ಹೆಚ್ಚಿಸಿಕೊಂಡು ಹೋಗುವುದರಿಂದ ೨೦೦೦೦ ದಂಡದವರೆಗೆ ೪೦ ರೀತಿಯ ವಿಸ್ತಾರವು ಬರುತ್ತದೆ೧೭. ಇದೇ ಗ್ರಂಥದಲ್ಲಿ ಇನ್ನೊಂದೆಡೆ, ಇನ್ನೂ ಚಿಕ್ಕದಾದ ೨೦೦೦ ದಂಡದಿಂದ ೩೦೦ ದಂಡ ವಿಸ್ತಾರವುಳ್ಳ ಗ್ರಾಮದ ಬಗ್ಗೆ ಹೇಳಿದೆ೧೮. ‘ಕುಟುಂಬಾವನಿಯ ಭಾಗವು ಗ್ರಾಮದ ೧/೨೦ನೇ ಭಾಗವಾಗಿರುತ್ತದೆ, ಅಂದರೆ, ೨೫೬೦ ದಂಡ ವಿಸ್ತಾರದ್ದಾಗಿದ್ದು, ಇದು ಗ್ರಾಮದಲ್ಲಿನ ಕುಟುಂಬ ನಿವೇಶನಕ್ಕೆ ಸೂಕ್ತವಾಗಿರುತ್ತದೆ೧೯. ಇವುಗಳಲ್ಲಿ ನಿಯಮದಂತೆ ದಂಡವನ್ನು ಹೆಚ್ಚಿಸಿಕೊಂಡು ಹೋಗುವುದರಿಂದ ವಿವಿಧ ವಿಸ್ತಾರದ ಗ್ರಾಮವನ್ನು ನಿರ‍್ಮಿಸಬಹುದು೨೦. ಅಂತೇ ನಗರದ ದೊಡ್ಡ ವಿಸ್ತಾರವೆಂದರೆ, ಎಂಟು ಸಾವಿರ ದಂಡ೨೧, ಚಿಕ್ಕದೆಂದರೆ ಎರಡು ಸಾವಿರ ಇದರಲ್ಲಿ ೨೦೦೦ ದಂಡವನ್ನು ಇಳಿಸುತ್ತಾ ಹೋದಲ್ಲಿ, ನಗರದ ೪ ರೀತಿಯ ವಿಸ್ತಾರವನ್ನು ಪಡೆಯಬಹುದು೨೨.
ವಿಸ್ತಾರ ಮತ್ತು ವಿವಿಧ ಪ್ರಕಾರಗಳು
ಮಯಮತದಲ್ಲಿ, ಗ್ರಾಮ, ಖೇಟ, ಖರ್ವಡ, ದುರ್ಗ, ನಗರಗಳನ್ನು ವಿಸ್ತಾರದ ಆಧಾರದಿಂದ ಬೇರೆ ಬೇರೆ ರೀತಿಯಾಗಿ ಹೇಳಿದೆ೨೩. ಇವುಗಳಲ್ಲಿ ಒಂದೊಂದರಲ್ಲೂ ಕ್ಷುದ್ರ, ಮಧ್ಯಮ, ಉತ್ತಮ ಎಂದು ಮರು ವಿಂಗಡಣೆ ಇದೆ. ಅದರಂತೆ ‘ಗ್ರಾಮಗಳಲ್ಲಿ ‘ಕ್ಷುದ್ರಗ್ರಾಮದ ವಿಸ್ತಾರವು ೬೪ ದಂಡ ಮತ್ತು ಮಧ್ಯಮ ಗ್ರಾಮದ ವಿಸ್ತಾರವು ೧೨೮ ದಂಡ ಇರುತ್ತದೆ. ಮತ್ತು ಉತ್ತಮ ಗ್ರಾಮದ ವಿಸ್ತಾರವು ೧೯೨ ದಂಡ ಇರುವುದು. ಅಂದರೆ, ಕ್ಷುದ್ರ ಗ್ರಾಮದ ಎರಡರಷ್ಟು ಮತ್ತು ಮೂರರಷ್ಟು ವಿಸ್ತಾರವಾಗಿರುವುದು. ‘ಖೇಟ ರೀತಿಯ ಗ್ರಾಮದ ವಿಸ್ತಾರವು ಕ್ರಮವಾಗಿ ೨೫೬,೨೪ ೩೨೦ ಮತ್ತು ೩೮೪ ದಂಡ ಇದ್ದು, ಅವು ಇವೇ ‘ದಂಡಗಳ ಆಧಾರದಿಂದ ಕ್ಷುದ್ರ, ಮಧ್ಯಮ, ಹಾಗೂ ಉತ್ತಮ ರೀತಿಗೆ ಕ್ರಮವಾಗಿ ಸೇರುತ್ತವೆ.  ‘ಖರ್ವಡದಲ್ಲಿ ಚಿಕ್ಕದು ೪೪೮ ‘ದಂಡದಷ್ಟೂ  ಮಧ್ಯಮದ್ದು ೫೧೨ ದಂಡದಷ್ಟು ಹಾಗೂ ವಿಸ್ತಾರವಾಗಿರುತ್ತದೆ. ‘ದುರ್ಗ ರೀತಿಯ ಗ್ರಾಮದಲ್ಲಿ ವಿಸ್ತಾರವು ೬೪೦,೭೦೪,೭೬೮ ದಂಡಗಳು ಕ್ರಮವಾಗಿ ಇರುತ್ತವೆ. ಅಂತೇ, ನಗರ ರೀತಿಯ ಗ್ರಾಮದ ವಿಸ್ತಾರವು ಕ್ಷುದ್ರಗ್ರಾಮವಾದಲ್ಲಿ ೮೩೨ ದಂಡಗಳೂ, ‘ಮಧ್ಯಮದಲ್ಲಿ ೮೯೬ ದಂಡಗಳೂ, ಉತ್ತಮ ಗ್ರಾಮದಲ್ಲಿ ೯೬೦ ದಂಡಗಳೂ ಇರುತ್ತವೆ೨೫. ಈ ಎಲ್ಲ ರೀತಿಗಳಲ್ಲಿ ಒಂದೊಂದರ ನಡುವೆಯೂ ೬೪ ದಂಡಗಳ ವ್ಯತ್ಯಾಸವಿರುವುದನ್ನಿಲ್ಲಿ ಗಮನಿಸಬಹುದು. ಇದರಲ್ಲೇ ೬೪ರ ಬದಲು ೧೬ ದಂಡ ಹೆಚ್ಚಿಸುತ್ತಾ ಹೋದರೆ, ಪ್ರತಿಯೊಂದಕ್ಕೂ ಇನ್ನೂ ೯ ರೀತಿಯ ಅಳತೆಯು ದೊರೆಯವುದೆಂದೂ ಇದರಲ್ಲಿದೆ೨೬. ಇವುಗಳ ಉದ್ದವು ವಿಸ್ತಾರದ ಎರಡರಷ್ಟು, ಮುಕ್ಕಾಲೂ ಅರ್ಧ ಅಥವಾ ಕಾಲುಭಾಗದಷ್ಟು ಹೆಚ್ಚಾಗಿರಬೇಕು ಅಥವಾ ೬/೮ನೇ ಅಷ್ಟು ಹೆಚ್ಚಾಗಿರಬಹುದು ಅಥವಾ ಅದು ಚೌಕಾಕಾರವಾಗಿದ್ದು, ಉದ್ದವು ಅಗಲಕ್ಕೆ ಸಮನಾಗಿರಬಹುದು. ಇವುಗಳಲ್ಲಿ, ಉದ್ದ ಮತ್ತು ಅಗಲದ ಅಳತೆಯನ್ನು ಬೆಸಸಂಖ್ಯೆಯ ದಂಡಗಳಿಂದ ಗುರುತಿಸಲಾಗುತ್ತದೆ, ನಂತರ ಉಳಿದದ್ದು ನಿರ್ಮಾಣ ರಹಿತವಾಗಿರಬೇಕು. ಈ ಕ್ರಮವು ಗ್ರಾಮ ಇತ್ಯಾದಿ ಎಲ್ಲಾ ನಿವೇಶನಗಳಿಗೂ ಅನ್ವಯಿಸುವುದು. ಗ್ರಾಮವಾಗಲೀ, ಗೃಹವಾಗಲೀ ‘ದಂಡದ ಪೂರ್ನ ಸಂಖ್ಯೆಯನ್ನು ಉಪಯೋಗಿಸಬೇಕು (೧೬, ೬೪, ೭೦೪ ಇ.); ಛೇದಿಸಬಾರದು ಎಂದೂ ಮಯಮತದಲ್ಲಿದೆ೨೭.
ಬ್ರಾಹ್ಮಣರ ಸಂಖ್ಯೆ ಮತ್ತು ವಿವಿಧ ಪ್ರಕಾರಗಳು
ಗ್ರಾಮದಲ್ಲಿರುವ ಬ್ರಾಹ್ಮಣರ ಸಂಖ್ಯೆಯ ಆಧಾರದಿಂದ ವಿವಿಧ ಪ್ರಕಾರದ ಗ್ರಾಮಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಉತ್ತಮ, ಮಧ್ಯಮ ಮತ್ತು ಅಧಮ ಎಂದು ೩ ಪ್ರಕಾರಗಳಿದ್ದು, ಅವುಗಳೊಂದೊಂದರಲ್ಲೂ ಉಪ ಪ್ರಕಾರಗಳಿವೆ. ಮಯಮತದಂತೆ, ‘ಉತ್ತಮೋತ್ತಮ ಗ್ರಾಮದಲ್ಲಿ ೧೨೦೦೦ ಬ್ರಾಹ್ಮಣರೂ, ಅದೇ ಮಧ್ಯಮ ಗ್ರಾಮದಲ್ಲಿ ೧೦೦೦೦ ಬ್ರಾಹ್ಮಣರೂ, ‘ಅಧಮ ಗ್ರಾಮದಲ್ಲಿ ೮೦೦೦ ಬ್ರಾಹ್ಮಣರೂ ಇರುತ್ತಾರೆ. ಅಂತೇ, ೭೦೦೦ ಬ್ರಾಹ್ಮಣರಿರುವ ಗ್ರಾಮವನ್ನು ‘ಮಧ್ಯಮೋತ್ತಮವೆಂದೂ, ಅದೇ ೬೦೦೦ ಬ್ರಾಹ್ಮಣರಿರುವ ಗ್ರಾಮವನ್ನು ‘ಮಧ್ಯಮವೆಂದೂ, ೫೦೦೦ ಬ್ರಾಹ್ಮಣರಿರುವ ಗ್ರಾಮವನ್ನು ‘ಅಧಮವೆಂದೂ ಕರೆದಿದೆ. ಇದೇ ರೀತಿ ೪೦೦೦ ಬ್ರಾಹ್ಮಣರಿರುವ ಗ್ರಾಮವನ್ನು ‘ಅಧಮೋತ್ತಮ ಎಂದೂ ೩೦೦೦ ಬ್ರಾಹ್ಮಣರಿದ್ದರೆ ‘ಅಧಮ ಸಮ ಗ್ರಾಮವೆಂದೂ ೨೦೦೦ ಬ್ರಾಹ್ಮಣರಿದ್ದರೆ ಅದಕ್ಕೆ ‘ಅಧಮಾಧಮ ಗ್ರಾಮ ಎಂದೂ ಹೆಸರಿಸಿದೆ. ಇದರೊಂದಿಗೆ, ೧೦೦೦ ಬ್ರಾಹ್ಮಣರಿರುವ ಗ್ರಾಮವು ‘ನೀಚೋತ್ತಮ; ೭೦೦ ಬ್ರಾಹ್ಮಣರಿರುವ ಗ್ರಾಮವು ‘ಅಧಮ ಮಧ್ಯಮ ಹಾಗೂ ೫೦೦ ಬ್ರಾಹ್ಮಣರಿರುವ ಗ್ರಾಮವು ‘ನೀಚಾಲ್ಪ ಗ್ರಾಮ ಎನಿಸುತ್ತದೆ೨೮. ಇಲ್ಲಿ ‘ಉತ್ತಮ ಪ್ರಕಾರದಲ್ಲಿನ ಮೂರು ಉಪಪ್ರಕಾರಗಳ ನಡುವೆ ೨೦೦೦ ಬ್ರಾಹ್ಮಣ ಸಂಖ್ಯೆಯ ವ್ಯತ್ಯಾಸವಿದೆ, ‘ಮಧ್ಯಮ ಮತ್ತು ‘ಅಧಮ ರೀತಿಗಳ ಮೂರು ಉಪಪ್ರಕಾರಗಳ, ನಡುವೆ ೧೦೦೦ ಬ್ರಾಹ್ಮಣ ಸಂಖ್ಯೆಯ ವ್ಯತ್ಯಾಸವಿದೆ; ಅಂತೇ, ‘ನೀಚ ರೀತಿಯ ಉಪಪ್ರಕಾರಗಳ ನಡುವೆ ಕ್ರಮವಾಗಿ ೩೦೦ ಮತ್ತು ೨೦೦ ಸಂಖ್ಯೆಯ ವ್ಯತ್ಯಾಸವಿದೆ.
ಇನ್ನೂ ಹತ್ತು ರೀತಿಯ ಸಣ್ಣ ಗ್ರಾಮಗಳನ್ನು ಮಯಮತವು ಗುರುತಿಸಿದೆ. ಇಂತಹ ಗ್ರಾಮಗಳಲ್ಲಿ ಬ್ರಾಹ್ಮಣರ ಮನೆಗಳು ಕ್ರಮವಾಗಿ ೩೨೪, ೨೧೬, ೧೦೮, ೮೪, ೬೪, ೫೦, ೩೨, ೨೪, ೧೬ ಹಾಗೂ ೧೨ ಕ್ರಮವಾಗಿ ಇರುವುವು೨೯. ಯಾವ ಗ್ರಾಮದಲ್ಲಿ ಒಂದೇ ಒಂದು ಬ್ರಾಹ್ಮಣರ ಮನೆ ಇರುವುದೋ ಅದಕ್ಕೇ ‘ಕುಟಿಕ ಅಥವಾ ‘ಏಕಭೋಗ ಎಂದು ಹೆಸರು೩೦ ಬೇರೆ ಏನೂ ಸಾಧ್ಯವಿಲ್ಲವಾದರೆ, ೧ರಿಂದ ೧೦ ಬ್ರಾಹ್ಮಣರಿಗೆ ಭೂದಾನ ಮಾಡಬಹುದು೩೧.
ಕಾಮಿಕಾಗಮದಲ್ಲೂ ಈ ಬಗ್ಗೆ ವಿವರವಿದೆ. ಇದರಂತೆ ಗ್ರಾಮಗಳಲ್ಲಿ, ಜ್ಯೇಷ್ಠ, ಮಧ್ಯ, ಕನಿಷ್ಠ ಮತ್ತು ಕ್ಷುದ್ರ ಎಂದು ನಾಲ್ಕು ವಿಧಗಳಿವೆ. ಈ ಒಂದೊಂದರಲ್ಲೂ ಬ್ರಾಹ್ಮಣ ವರ್ಗದ ಪ್ರಮಾಣ ಅನುಸರಿಸಿ ೯ ರೀತಿಗಳಿವೆ:
ಬ್ರಾಹ್ಮಣರ ಸಂಖ್ಯೆ ೧೪೦೦೦ದಿಂದ ೬೦೦೦ ದವರೆಗಿರುತ್ತದೆ. ‘ಜ್ಯೇಷ್ಠ ರೀತಿಯಲ್ಲಿ ಬ್ರಾಹ್ಮಣರ ಸಂಖ್ಯೆ ೫೦೦೦ದಿಂದ ೧೦೦೦ದವರೆಗಿರುತ್ತದೆ. ಕೊನೆಯದು ಸಹಸ್ರಹೀನವಾಗಿರುತ್ತದೆ. ‘ಮಧ್ಯಮದಲ್ಲಿ ೯೦೦ರಿಂದ ೫೦ರವರೆಗೆ ಬ್ರಾಹ್ಮಣರಿರುತ್ತಾರೆ. ಕೊನೆಯದಾದ ೯ನೇ ವಿಧದ ಗ್ರಾಮದಲ್ಲಿ ೫೦ ಬ್ರಾಹ್ಮಣರಿರುತ್ತಾರೆ. ೫೦ಕ್ಕಿಂತ ಕಡಿಮೆ ಸಂಖ್ಯೆಯ ಬ್ರಾಹ್ಮಣರಿದ್ದಲ್ಲಿ ಆ ಗ್ರಾಮವು ‘ಕನಿಷ್ಠ ಮತ್ತು ‘ಕ್ಷುದ್ರ ಪ್ರಕಾರಕ್ಕೆ ಸೇರುತ್ತದೆ. ೧೦೮ರಿಂದ ಆರಂಭಿಸಿ ೧೦ರಂತೆ ಹೆಚ್ಚಿಸುತ್ತಿರಬಹುದು(?)೩೨ ೫ರಂತೆ ಹೆಚ್ಚಿಸುತ್ತಿರಬಹುದು, ಆದರೆ ಅದು ೧೦ರಲ್ಲಿ ಕೊನೆಯಾಗಬೇಕು. ೩೨, ೨೪, ೧೬, ೧೨, ಅಥವಾ ೪, , ೧೦ - ಹೀಗೂ ಇರಬಹುದು೩೩.
ಗ್ರಾಮಗಳ ವಿಶೇಷ ವರ್ಗಿಕರಣ: (ಗ್ರಾಮಭೇದಾ) ಇನ್ನೊಂದು ರೀತಿಯ ವರ್ಗೀಕರಣದಂತೆ, ಗ್ರಾಮದಲ್ಲಿ ಬ್ರಾಹ್ಮಣರ ಮನೆಗಳು ಮಾತ್ರವೇ ಇದ್ದರೆ, (ದ್ವಿಜಕುಲ ಪರಿಪೂರ್ಣ) ಅದಕ್ಕೆ ‘ಮಂಗಲ ಎಂದು ಹೆಸರು, ರಾಜ ಮತ್ತು ವ್ಯಾಪಾರಿಗಳು ಅಲ್ಲಿದ್ದರೆ - ಅದಕ್ಕೆ ‘ಪುರ ಎಂದು ಹೆಸರು, ಬೇರೆ ಬೇರೆ ಜನಗಳಿಂದ ಕೂಡಿದ್ದರೆ ಅದಕ್ಕೆ ‘ಗ್ರಾಮ ಎಂದು ಹೆಸರು; ಸನ್ಯಾಸಿಗಳಿರುವುದು. ‘ಮಠ೩೪ ಇಲ್ಲಿ ‘ಮಠ ಎಂದಾಗ, ಪೂರ್ತಿ ಊರನ್ನೇ ಹೇಳಿದಂತಾಗಿದೆ.
ಕಾಮಿಕಾಗಮದಲ್ಲಿ ಉದ್ದೇಶಪೂರಿತವಾಗಿ ಕರೆತಂದ ವೇದವಿದರಾದ ಬ್ರಾಹ್ಮಣರು ಅನುಭವಿಸುವ ಗ್ರಾಮವೇ ‘ಮಂಗಲ ಅಥವಾ ‘ಅಗ್ರಹಾರ ಎಂದಿದೆ, ಅಲ್ಲಿ ವಿಪ್ರರು ಮತ್ತು ಬೇರೆ ವರ್ಣದವರೂ ಇದ್ದರೆ, ಅದು ‘ಗ್ರಾಮ ಒಂದು ಬ್ರಾಹ್ಮಣರ ಮನೆ ಮಾತ್ರವಿದ್ದು, ಪರಿಚಾರಕರೂ ಇದ್ದರೆ, ಅದು ‘ಕುಟಿಕ ಅಥವಾ ‘ಏಕಭೋಗ ಜನಗಳಿಂದ ತುಂಬಿದ್ದು, ಕ್ರಯ-ವಿಕ್ರಯಗಳಿಂದ ಕೂಡಿದ್ದು, ಕರ್ಮಚಾರಿಗಳಿದ್ದು, ಸರ್ವದೇವತೆಗಳಿಂದ ಕೂಡಿದ್ದರೆ, ಅದು - ನಗರ, ಅರಣ್ಯ ಸರೋವರದ ಹತ್ತಿರವಿದ್ದು, ವ್ಯಾಪಾರ ನಡೆಯುತ್ತಿದ್ದು, ಹೊರ ದೇಶದಿಂದ ಜನ/ವಸ್ತು ಬರುತ್ತಿದ್ದರೆ, ಅದು ‘ಪಟ್ಟಣ ಎಂದೂ ಅದು ಹೇಳಿದೆ.೩೫ ಬ್ರಾಹ್ಮಣರಿಗೆ ಯುಕ್ತವಾದ ‘ದಂಡಕ ಪ್ರಕಾರದ ಗ್ರಾಮದ ಬಗ್ಗೆ ಹೇಳುವಾಗ ಮಾನಸಾರದಲ್ಲಿ ೨೪ ಯತಿಗಳಿಂದ ಕೂಡಿದ್ದರೆ, ಅದು ‘ಗ್ರಾಮ  ನದೀ ದಂಡೆಯ ಮೇಲಿದ್ದರೆ - ಅದು ‘ಪುರ; ೫೦ ದೀಕ್ಷಿತರಿದ್ದರೆ ಅದು ‘ನಗರ ೫೮ ಬ್ರಾಹ್ಮಣರ ಮನೆಗಳಿದ್ದರೆ ಅದು ‘ಮಂಗಲ ಹಾಗೂ ನೂರು ಬ್ರಾಹ್ಮಣರ ಮನೆಗಳಿದ್ದರೆ ಅದು ‘ಕೋಷ್ಠ; ಬೇರೆ ಬ್ರಾಹ್ಮಣರ ಸಮೂಹವಿದ್ದರೆ, ಅವರಿಗೆ ಬೇಕಾದಂತೆ ಹೆಸರಿಡಬಹುದು ಎಂದು ಹೇಳಿದ್ದು, ಇಲ್ಲಿ ಹೇಳದೇ ಇರುವುದನ್ನು ಶಾಸ್ತ್ರದ ನಿಯಮದಂತೆ (ಸ್ಥಳೀಯ ಪದ್ಧತಿಯಂತೆ) ಮಾಡಬೇಕೆಂದೂ ಹೇಳಲಾಗಿದೆ೩೬. ಅಂತೇ, (ನಂದ್ಯಾವರ್ತ ಪ್ರಕಾರದ ಗ್ರಾಮದಲ್ಲಿ) ಬ್ರಾಹ್ಮಣರೋ ಇದ್ದರೆ ಆದು ‘ಮಂಗಲ ಕ್ಷತ್ರಿಯ, ವೈಶ್ಯ, ಶೂದ್ರರಿದ್ದರೆ ‘ಪುರ ವೈಶ್ಯ, ಶೂದ್ರರಿದ್ದರೆ (ಬ್ರಾಹ್ಮಣರೊಂದಿಗೆ?) ‘ಅಗ್ರಹಾರ ಎನಿಸುವುದು.೩೭
ವಿಮಾನಾರ್ಚನ ಕಲ್ಪದ ವಿವರಣೆಗಳು ಇಂತಿವೆ
ಬ್ರಾಹ್ಮಣರು, ಸೇವಕರುಗಳಿದ್ದರೆ ‘ಗ್ರಾಮ; ಬ್ರಾಹ್ಮಣರು ಹೆಚ್ಚಾಗಿ ಮುಖ್ಯವಾಗಿ ಇದ್ದರೆ ‘ಅಗ್ರಹಾರ ಅನೇಕ ಜನ... ಇದ್ದು ಅನೇಕ ಶಿಲ್ಪಿಗಳೂ ಇದ್ದು, ಕ್ರಮವಿಕ್ರಯಗಳು ನಡೆಯುತ್ತಿದ್ದು, ಎಲ್ಲಾ ದೇವತೆಗಳಿಂದ ಕೂಡಿದ್ದರೆ, ಅದು ‘ನಗರ’; ಬೇರೆ ಬೇರೆ ದ್ವೀಪಗಳಿಂದ, ಬಂದ ವಸ್ತುಗಳನ್ನು ಕೊಳ್ಳುವುದು ಮಾರುವುದು ಇದ್ದಲ್ಲಿ ಅದು ‘ಪಟ್ಟಣ; ಬ್ರಾಹ್ಮಣರ ಒಂದು ಪರಿವಾರ ಮಾತ್ರವೇ ಇದ್ದರೆ, ಅದು ‘ಕುಟಕ೩೮.
ಇವಿಷ್ಟೇ ಅಲ್ಲದೆ, ಗ್ರಾಮದಲ್ಲಿನ ವಿವಿಧ ಮಾರ್ಗಗಳ ಸಂಖ್ಯೆ ಮತ್ತು ದಿಕ್ಕು, ಗ್ರಾಮದ ವಸತಿ ವ್ಯವಸ್ಥೆ, ವೃತ್ತಿಪರರ ಸ್ಥಳ, ದೇವಾಲಯಗಳ ಸ್ಥಾನ ಇತ್ಯಾದಿಗಳ ಪೂರ್ಣ ವಿವರಗಳನ್ನೊಳಗೊಂಡ, ಗ್ರಾಮಗಳ ಪ್ರಧಾನ ಪ್ರಕಾರಗಳನ್ನೂ ಗ್ರಂಥಗಳು, ವಿಶೇಷವಾಗಿ ಮಾನಸಾರವು, ಗುರುತಿಸಿ, ವಿವರ ನೀಡಿದೆ. ಬಹುಶಃ ಈ ಕಾರಣವಾಗಿಯೇ ಮಾನಸಾರದಲ್ಲಿ ಗ್ರಾಮಗಳ ಕೆಲವು ಸಾಮಾನ್ಯ ವಿಷಯಗಳು, ಇತರ ಗ್ರಂಥಗಳಂತೆ ಪ್ರತ್ಯೇಕ್ಷವಾಗಿ ದೊರೆಯುವುದಿಲ್ಲ. ಉದಾ: ಗೆ, ಮೇಲೆ ಹೇಳಿದಂತೆ ದಂಡಕ ನಂದ್ಯಾವರ್ತ ಪ್ರಕಾರದ ಗ್ರಾಮದ ಬಗ್ಗೆ ಹೇಳುವಾಗ, ಗ್ರಾಮಗಳ ವಿಶೇಷ ವರ್ಗೀಕರಣ (ಗ್ರಾಮಭೇದಾಃ)ವನ್ನು ಹೇಳಿದೆ; ಗ್ರಾಮಗಳಲ್ಲಿನ ಬ್ರಾಹ್ಮಣರ ಸಂಖ್ಯೆಯ ಬಗ್ಗೆಯೂ ಅವೇ ಸಂದರ್ಭಗಳಲ್ಲಿ ಹೇಳಿದೆ.೩೯
ಶಾಸನಗಳಲ್ಲಿರುವ ವಿವಿಧ ರೀತಿಯ ಉಲ್ಲೇಖಗಳನ್ನು ಗಮನಿಸಿದರೆ, ಗ್ರಂಥಗಳಿಂದ ಇನ್ನೂ ಹೆಚ್ಚಿನ ವಿವರಗಳ ಅವಶ್ಯಕತೆ ಇದೆ ಎನಿಸುತ್ತದೆ. ಶಾಸನಗಳಲ್ಲಿ ದೊರೆಯುವ ಮಂಗಲ, ಅಗ್ರಹಾರ, ಪುರ ಇತ್ಯಾದಿಗಳ ಬಗ್ಗೆ ಗ್ರಂಥಗಳ ಹಿನ್ನೆಲೆಯಲ್ಲಿ ಇನ್ನೂ ಅಧ್ಯಯನ ನಡೆಯಬೇಕಾಗಿದೆ.
 ಡಾ.ಕೂ.ಸ ಅಪರ್ಣ
 ೧೬೭೬, ೫ನೇ ‘ಎ ಅಡ್ಡರಸ್ತೆ,
೧೦ನೇ ಮುಖ್ಯರಸ್ತೆ, ಬನಶಂಕರಿ ಮೊದಲನೇ ಹಂತ
ಬೆಂಗಳೂರು-೫೬೦೦೫೦.

ಆಧಾರಸೂಚಿ ಮತ್ತು ಟಿಪ್ಪಣಿಗಳು
೧.           ವಡ್ಡರಾಧನೆ (ಉದ್ಧೃತ) ಎಂ. ಚಿದಾನಂದಮೂರ್ತಿ, ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಪುಟ ೧೪೪.
೨.         ಎ.ಕ., Iಘಿ, ಬೆಂಗಳೂರು-೯೫ (ರೈಸ್ ಆವೃತ್ತಿ), ಸುಮಾರು ಕ್ರಿ.ಶ. ೯೫೦.
೩.         ೭.೩, ಪಿ.ಕೆ. ಆಚಾರ‍್ಯ., ಮಾನಸಾರ (ಮಾನ) ಸಂ. ೩, , ೩-೪.
೪.         ಅದೇ ೭.೪.
೫.         ಮಯ - ೯.೩೨ - ೩೫.
೬.         ಅದೇ ೯-೫೪b - ೫೫ ವಿವರಗಳಿಗೆ ನೋಡಿ ಕೂ.ಸ. ಅಪರ್ಣ ‘ಪದನಿರ್ಣಯ ಅಥವಾ ವಾಸ್ತುಮಂಡಲ, ಇತಿಹಾಸ ದರ್ಶನ, ಸಂ. ೨೨;            ಕರ್ನಾಟಕ ಇತಿಹಾಸ ಅಕಾದೆಮಿ, ಬೆಂಗಳೂರು, ೨೦೦೭, ಪು ೩೨-೪೦.
೭.         ಮಾನ ೯-೧೬೧.
೮.         ಮಯ ೯- ೬೧b.
೯.         ಮಯ ೫.೮b.
೧೦.      ಅ. ೩. ಪುಟ ೧೫.
೧೧.      ಕೆ. ಕೃಷ್ಣಭಟ್ಟ., (ಅನು), ಕೌಟಿಲ್ಯನ ಅರ್ಥಶಾಸ್ತ್ರ, III. ೨೦ (ಕ), ಪುಟ ೧೫೫.
೧೨.      ಅದೇ II. (ಕ), ಪುಟ ೯೪.
೧೩.      ಅದೇ II. ೨೦ (ಕ), ಪುಟ ೧೫೪.
೧೪.      ಮಾನ ೯.೫.
೧೫.      ಮಯ ೫.೭ ಮಯಮತದಲ್ಲಿ ಈ ಸಂದರ್ಭದಲ್ಲಿ, ವಿವಿಧ ಅಳತೆಗಳ ಬಗ್ಗೆ ವಿವರವಿದೆ. (೯. ೧b-೪ಚಿ).
೧೬.      ಮಯ ೯.೪b - ೭ಚಿ.
೧೭.      ಮಯ ೯.೭b - ೮ಚಿ.
೧೮.      ‘ಗ್ರಾಮಕುಟುಂಬಾವನಿಯ ವ್ಯವಸಾಯದ ಭೂಮಿಯೇ ಹೊರತು ತಮ್ಮವರು ವಾಸವಾಗಿರುವ ವಸತಿಯ ಭಾಗವಲ್ಲ ಎಂದು ತಿಳಿದುಬರುತ್ತದೆ. (ಉದ್ಧೃತ - ಮಯ q , P.೫೯).
೧೯.      ಮಯ ೯.೪b - ೭ಚಿ.
೨೦.      ಮಯ ೯. ೮b, ೯ಚಿ.
೨೧.      ಅದೇ.
೨೨.      ಇದನ್ನೇ ಇನ್ನೊಂದೆಡೆ, ‘ನಗರದ ಬಗ್ಗೆ ಹೇಳುವಾಗ ಬೇರೆ ರೀತಿಯಾಗಿ ಹೇಳಿದೆ.
೨೩.      ಶ್ಲೋಕದ ಅನುವಾದದಲ್ಲಿ ಹೇಳಿರುವಂತೆ ಇದು ೨೬೬ ಅಲ್ಲ, ೨೫೬.
೨೪.      ಮಯ ೯.೧೦-೧೫.
೨೫.      ಮಯ ೯.೧೬ ಚಿ.
೨೬.      ಮಯ ೯ .೧೭b, ೧೮.ಚಿ ಮತ್ತು ಈಶಾನಶಿವಗುರು ದೇವಪದ್ಧತಿ, ಕ್ರಿಯಾ ೨೫.೨೮ b -೨೯ಚಿ (ಉದ್ಧೃತ ಮಯ q.೧೦,P೬೧).
೨೭.      ಮಯ ೯.೫೫.
೨೮.      ಮಯ ೯.೨೫-೨೮.
೨೯.      ಮಯ ೯.೨೯-೩೦.
೩೦.      ಮಯ ೯.೩೧; ಕಾಮಿಕಾಗಮ (ಪೂರ್ವಭಾಗ) - I. ೨೦. ೪; ಈಶಾನಶಿವಗುರು ದೇವಪದ್ಧತಿ, ಕ್ರಿಯಾ. ೨೫.೪೬ ಇಲ್ಲಿ ‘ಸುಖಾಲಯ ರೀತಿಯ ಮನೆ ಕಟ್ಟಬೇಕೆಂದು ಮಯಮತವು ಹೇಳಿದೆ.
೩೧.      ಮಯ - ೯.೨೯-೩೦.
೩೨.      ಇದರ ಅರ್ಥ ಅಸ್ಪಷ್ಟವಾಗಿದೆ. ಬಹುಶಃ ಬ್ರಾಹ್ಮಣರ ಸಂಖ್ಯೆ ೧೦ರಂತೆ ಜಾಸ್ತಿಯಾಗುತ್ತಾ ಇದ್ದರೆ, ಆ ಗ್ರಾಮವು ಬೇರೆ ಬೇರೆ ವಿಧಕ್ಕೆ ಸೇರಬೇಕೆಂದು ಇದರ ಅರ್ಥವಿರಬಹುದು.
೩೩.      ಕಾಮಿಕಾ - I. ೨೭.೧-೮.
೩೪.      ಮಯ ೯.೪೦.
೩೫.      ಕಾಮಿಕಾ I. ೨೦. ೩-೧೦; ಖೇಟ, ಖರ್ವಡ ಇತ್ಯಾದಿ ವಿವರಗಳೂ ಇವೆ.
೩೬.      ಮಾನ ೯.೬೦-೬೩.
೩೭.      ಮಾನ ೯.೧೦೭-೧೦೮.
೩೮.      ವಿಮಾನಾರ್ಚನಕಲ್ಪ, , , ಪುಟ೧೫-೧೬ ಇದರಲ್ಲೂ ಖರ್ವಡ, ಸೇನಾಮುಖ ಇತ್ಯಾದಿ ವಿವರಗಳಿವೆ.
೩೯.      ಅದರಂತೆ, ‘ನಂದ್ಯಾವರ್ತ ಗ್ರಾಮದಲ್ಲಿನ ಬ್ರಾಹ್ಮಣರ ಸಂಖ್ಯೆಯು -೫೮, ೧೮೦, ೩೦೦, ೧೦೦೮, ೩೦೦೦ ಅಥವಾ ೪೦೦೦, ಅದೇ ‘ದಂಡಕ ಗ್ರಾಮ ಪ್ರಕಾರದಲ್ಲಿ ಮನೆಗಳೂ ಅಥವಾ ಯತಿಗಳ ೧೨ ಮನೆಗಳೂ ಇರುತ್ತದೆ. (ಮಾನ - ೯.೧೦೫-೧೦೯).

ಗ್ರಂಥಋಣ
Bruno bagels (Ed & Tr.) Mayamatam; An Indian Treatise on Housing Architecture & Iconography, Indira Gandhi National center for the arts, New Delhi,1985.
Acharya, P.K (Ed & Tr) Manasara series Vol. III & iv, Munshiram Manoharlal Publishers, Pvt. Ltd., New Delhi, 1995 & 1994
ರಘುನಾಥ ಚಕ್ರವರ್ತಿ ಭಟ್ಟಾಚಾರ‍್ಯ (ಸಂ) ವಿಮಾನಾರ್ಚನಕಲ್ಪ, ಮದ್ರಾಸು, ೧೯೨೬.
ಸ್ವಾಮಿ ಶಿವಾಚಾರ್ಯಜಿ (ಸಂ) ಕಾಮಿಕಾಗಮ (ಪೂರ್ವಭಾಗ) ಮದ್ರಾಸು ೧೯೭೫.
ಕೆ.ಕೃಷ್ಣಭಟ್ಟ (ಅನು) ಕೌಟಿಲ್ಯನ ಅರ್ಥಶಾಸ್ತ್ರ - ಸಮಾಜ ಪುಸ್ತಕಾಲಯ, ಧಾರವಾಡ, ೨೦೦೦.
P.V. Kane, History of Dharmashastra, Vol III, Bhandarkar Oriental research  Institute, Poona, 1993,
D.C. Sircar, Indian Epigraphy, Motilal Banarasidas Publishers, Pvt. Ltd., Delhi, 1996.


P.

No comments:

Post a Comment