Wednesday, May 22, 2013

ನಾಗಾವಿಯ ಕೋಡಿ ಬಸವಣ್ಣ ದೇವಾಲಯ


ಸಾಂಸ್ಕೃತಿಕ ಕೇಂದ್ರವಾಗಿ ನಾಗಾವಿಯ ಕೋಡಿ ಬಸವಣ್ಣ ದೇವಾಲಯ

ಡಾ. ಎಂ.ಎಸ್. ನರೇಗಲ್ಲ
ಮುಖ್ಯಸ್ಥರು ಇತಿಹಾಸ ವಿಭಾಗ ,
ಕೆ.ಎಸ್.ಎಸ್. ಮಹಾವಿದ್ಯಾಲಯ
, ಗದಗ-೫೮೨೧೦೧.



ದಗದಿಂದ ದಕ್ಷಿಣ-ಪೂರ್ವ ಭಾಗ ಅಂದರೆ ಆಗ್ನೇಯ ದಿಕ್ಕಿನ ದಾರಿಯಲ್ಲಿ ಮೊದಲಿಗೆ ಬರುವ ಗ್ರಾಮವೇ ಕಳಸಾಪೂರ. ಅಲ್ಲಿಂದ ಮುಂದೆ ತಿರುವು ಮುರುವುಗಳಿಂದ ಸಾಗಿದರೆ ನಮಗೆ ಕಾಣುವುದು ನಾಗಾವಿ ಗ್ರಾಮ. ಈ ದಾರಿಯ ತಿರುವಿನಲ್ಲಿ ಎಡಗಡೆ ಗುಡ್ಡದ ಅಡಿಯಲ್ಲಿ ಕಾಣುವುದೆ ಬಸವಣ್ಣನ ದೇವಾಲಯ. ಇದಕ್ಕೆ ಸ್ಥಳೀಯರು ಕೋಡಿ ಬಸವಣ್ಣನ ದೇವಾಲಯವೆಂದು ಕರೆಯುತ್ತಾರೆ. ಕೋಡಿ ಎಂದರೆ ಒಂದು ವಿಶಾಲವಾದ ಕೆರೆಯಲ್ಲಿ ಪೂರ್ಣ ಪ್ರಮಾಣದ ನೀರು ತುಂಬಿದ ನಂತರ ಅದರ ರಕ್ಷಣಾತ್ಮಕವಾಗಿ ಕೋಡಿ ಮೂಲಕ ನೀರು ಹೊರಹಾಕಲಾಗುತ್ತದೆ. ಇದೊಂದು ಕೆರೆಗಳಿಗೆ ಸೇಪ್ಟಿವಾಲ್ ಇದ್ದಂತೆ. ಈ ಸ್ಥಳದ ಪಕ್ಕಕ್ಕೆ ನಿರ್ಮಿಸಿದ ದೇವಾಲಯವೇ ಕೋಡಿ ಬಸವೇಶ್ವರ ದೇವಾಲಯ. ಆದರೆ ಈ ದೇವಾಲಯದಲ್ಲಿನ ಯಾವುದೇ ಶಾಸನದಲ್ಲಿ ಈ ಹೆಸರು ಉಲ್ಲೇಖವಿಲ್ಲ. ಅದರ ಬದಲಾಗಿ ಕೋಡಿ ಮಹಾಬಳೇಶ್ವರ ದೇವಾಲಯ ಎಂದು ಉಲ್ಲೇಖವಿದೆ. ಈ ದೇವಾಲಯವು ಕಲ್ಯಾಣ ಚಾಲುಕ್ಯರ ಪತನದ ನಂತರ ಅಧಿಕಾರಕ್ಕೆ ಬಂದ ಯಾದವ ದೊರೆಗಳ ಕಾಲದಲ್ಲಿ ನಿರ್ಮಾಣವಾಗಿದೆ.
ಕಲ್ಯಾಣ ಚಾಲುಕ್ಯ ಮತ್ತು ಕಳಚೂರಿ ವಂಶಗಳ ಅವಸಾನವು ಕರ್ನಾಟಕದಲ್ಲಿ ಅನೇಕ ಸಣ್ಣಪುಟ್ಟ ರಾಜವಂಶಗಳ ಉಗಮಕ್ಕೆ ದಾರಿಯಾಯಿತು. ಇವರಲ್ಲಿ ಸೇವುಣರು ಪ್ರಮುಖರು. ಇವರನ್ನು ದೇವಗಿರಿ ಯಾದವರೆಂದೂ ಕರೆಯಲಾಗುತ್ತದೆ. ಇವರು ನೆಲೆಸಿದ ನಾಡಿಗೆ ಸೇವುಣ ದೇಶವೆಂದು ಕರೆಯಲಾಯಿತು. ಇಂತಹ ಸೇವುಣರು ೧೨ನೇ ಶತಮಾನದ ಕೊನೆಯಿಂದ ೧೩ನೇ ಶತಮಾನದ ಕೊನೆಯವರೆಗೆ ಆಡಳಿತ ನಡೆಸಿದರು. ೧೩ನೇ ಶತಮಾನದ ವೇಳೆಗೆ ಯಾದವರ (ಸೇವುಣರು) ಹೊಯ್ಸಳರ ಹಾಗೂ ಮುಸ್ಲಿಂ ಅರಸರ ಮಧ್ಯ ಘರ್ಷಣೆಗಳು ಆರಂಭವಾಗಿ ದಕ್ಷಿಣ ಭಾರತ ಅರಸೊತ್ತಿಗೆ ದುರ್ಬಲವಾಯಿತು. ಉತ್ತರ ಭಾರತದ ಮುಸ್ಲಿಂ ದಾಳಿಕೋರರು ದಕ್ಷಿಣಕ್ಕೆ ತಮ್ಮ ಗಮನ ಹರಿಸಿದರು. ಇದರ ಪ್ರತಿಫಲವಾಗಿ ಕ್ರಿ.ಶ.೧೨೯೬ರಲ್ಲಿ ಅಲ್ಲಾವುದ್ದೀನ ಖಿಲ್ಜಿ ದೇವಗಿರಿಯನ್ನು ಲೂಟಿ ಮಾಡಿದನು. ಕ್ರಿ.ಶ.೧೩೦೭ರಲ್ಲಿ ಮಲ್ಲಿಕಾಪುರ್ ದೇವಗಿರಿ ಸಂಪತ್ತನ್ನು ದೋಚಿ ಅಲ್ಲಿನ ದೊರೆ ರಾಮಚಂದ್ರದೇವನನ್ನು ದೆಹಲಿಗೆ ಒಯ್ದನು. ಮುಂದೆ ಮಲ್ಲಿಕಾಪುರ್ ಕ್ರಿ.ಶ.೧೩೧೩ರಲ್ಲಿ ರಾಮಚಂದ್ರದೇವನ ಮಗ ಶಂಕರದೇವನನ್ನು ಕೊಂದನು. ಹೀಗೆ ದಕ್ಷಿಣದ ದೇವಗಿರಿ ಮುಸ್ಲಿಂ ರಾಜ್ಯವಾಯಿತು.
ಗದಗ ಪ್ರದೇಶವನ್ನು ಯಾದವರು ಆಳಿದ ಬಗ್ಗೆ ಹಲವಾರು ಶಾಸನಗಳು ಹಾಗೂ ಅರಸರು ಕಟ್ಟಿಸಿದ ದೇವಾಲಯಗಳು ಇಂದಿಗೂ ಈ ಭಾಗದಲ್ಲಿ ಕಂಡುಬರುತ್ತವೆ. ಅಂತಹ ದೇವಾಲಯಗಳಲ್ಲಿ ವಿನಾಶದ ಅಂಚಿನಲ್ಲಿರುವ ನಾಗಾವಿಯ ಕೋಡಿ ಬಸವೇಶ್ವರ ದೇವಾಲಯ.
ಈ ದೇವಾಲಯದ ಮುಂಭಾಗದ ಮುಖಮಂಟಪದ ನಾಲ್ಕು ಕಂಬಗಳ ಅಡಿಯಲ್ಲಿ ನಾಲ್ಕು ಯಾದವ ದೊರೆಗಳ ಶಾಸನಗಳಿವೆ. ಇವು ಈಗಾಗಲೇ ಪ್ರಕಟಗೊಂಡ ಶಾಸನಗಳಾಗಿವೆ. ಈ ನಾಲ್ಕೂ ಶಾಸನಗಳು ಯಾದವ ದೊರೆ ಸಿಂಘಣದೇವನ ಕಾಲಕ್ಕೆ ಸಂಬಂಧಿಸಿದವುಗಳಾಗಿವೆ. ಕ್ರಿ.ಶ.೧೨೦೦ರಿಂದ ೧೨೪೬ರ ಅವಧಿಯಲ್ಲಿ ಗದಗ ಪ್ರದೇಶವು ಸಿಂಘಣನ ಆಳ್ವಿಕೆಗೆ ಒಳಪಟ್ಟಿತ್ತು.
ಮೊದಲನೇ ಶಾಸನವು ೮ ಸಾಲುಗಳಿಂದ ಕೂಡಿದ್ದು, ಇದರಲ್ಲಿ ಯಾದವ ದೊರೆ ಸಿಂಘಣದೇವನ ಆಳ್ವಿಕೆಯ ೫ನೇ ವರ್ಷದಲ್ಲಿ ಅಂದರೆ ಕ್ರಿ.ಶ.೧೨೧೫ರ ಯುವಸಂವತ್ಸರ ಚೈತ್ರ ಅಷ್ಟಮಿ ಸೋಮವಾರದಂದು ನಾಗಾವಿಯ ಮಹಾಬಳೇಶ್ವರ ದೇವರಿಗೆ (ಈಗಿನ ಕೋಡಿ ಬಸವೇಶ್ವರ ದೇವಾಲಯ) ನಾಗಾವಿ ಗ್ರಾಮದ ಕಮ್ಮಾರ ವೃತ್ತಿ ಮಾಡುವ ಬಮ್ಮೋಜ ಎಂಬುವನು ತಾನು ತಯಾರಿಸಿದ ಕಬ್ಬಿಣ ಸಲಕರಣೆಗಳ ಮೇಲಿನ ಸುಂಕವನ್ನು ದೇವಾಲಯದ ಅರ್ಚಕ ಸೋಮೇಶ್ವರದೇವರ ಪಾದ ತೊಳೆದು ದಾನ ನೀಡಿದನೆಂದು ತಿಳಿದುಬರುತ್ತದೆ.
೨ನೇ ಶಾಸನವು ಕ್ರಿ.ಶ.೧೨೪೪ರಲ್ಲಿ ಕೆತ್ತಲಾಗಿದ್ದು ಇದು ೨೩ ಸಾಲುಗಳಿಂದ ಕೂಡಿದೆ. ಈ ಶಾಸನವೊಂದರಲ್ಲಿ ಮಾತ್ರ ಈ ದೇವಾಲಯವನ್ನು ಕೊಡಿ ಮಹಾಬಳ ದೇವರ್ಗೆ ಎಂದು ಕರೆಯಲಾಗಿದೆ. ಇದೇ ಹೆಸರು ಮುಂದೆ ಸ್ಥಳೀಯರಲ್ಲಿ ಕೋಡಿ ಬಸವಣ್ಣ ಎಂದು ರೂಢಿಯಲ್ಲಿದೆ. ಆದರೆ ಬಸವಣ್ಣ ದೇವರು ಎಂದು ಯಾವುದೇ ಶಾಸನದಲ್ಲಿ ಉಲ್ಲೇಖವಿಲ್ಲ. ಶಾಸನದಲ್ಲಿ ನಾಗಾವಿಯ ೧೦೪ ಮಹಾಜನರು ಈ ದೇವಾಲಯಕ್ಕೆ ಭೂಮಿ ದಾನ ನೀಡಿದ ಉಲ್ಲೇಖವಿದೆ.
೩ನೇ ಶಾಸನವು ಕ್ರಿ.ಶ.೧೨೪೬-೪೭ ರಲ್ಲಿ ರಚನೆಯಾಗಿದೆ. ಇದು ೧೪ ಸಾಲುಗಳಿಂದ ಕೂಡಿದೆ. ನಾಗಾವಿಯ ತೆರಿಗೆ ಅಧಿಕಾರಿಯೊಬ್ಬನು ದೇವಾಲಯಕ್ಕೆ ತೆರಿಗೆಯಿಂದ ಬಂದ ಹಣವನ್ನು ದಾನ ನೀಡಿದ ಉಲ್ಲೇಖವಿದೆ.
೪ನೇ ಕಂಬದ ಕೊನೆಯ ಶಾಸನ ೧೯ ಸಾಲುಗಳಿಂದ ಕೂಡಿದ್ದು ಸಿಂಘಣನ ನಂತರ ಅಧಿಕಾರಕ್ಕೆ ಬಂದ ಕೃಷ್ಣನ ಕಾಲದಲ್ಲಿ ಅಂದರೆ ೧೨೫೫ರಲ್ಲಿ ಇದನ್ನು ರಚಿಸಲಾಗಿದೆ. ಇದರಲ್ಲಿ ಶ್ರೀ ಕೋಡಿ ಮಹಾಬಳೇಶ್ವರ ದೇವರಿಗೆ ಲಾಳಗೌಸಟ ನಾಯಕನು ಭೂಮಿಯನ್ನು ದಾನ ನೀಡಿದನೆಂದು ತಿಳಿದುಬರುತ್ತದೆ. ಇವನು ದಾನ ನೀಡಿದ ಭೂಮಿಯನ್ನು ಕಾಲಡಿ ಎಂಬ ಗ್ರಾಮದಿಂದ ಖರೀದಿಸಿದ್ದನೆಂದು ತಿಳಿದುಬರುತ್ತದೆ. ಕಾಲಡಿ ಎಂಬುದು ಇಂದಿನ ಕದಡಿ ಗ್ರಾಮವಿರಬಹುದು.
ಹೀಗೆ ನಾಲ್ಕು ಶಾಸನಗಳ ಈ ದೇವಾಲಯ ನಮ್ಮ ಪರಂಪರೆಯನ್ನು ಬಿಂಬಿಸುತ್ತದೆ. ಈ ದೇವಾಲಯದ ಗರ್ಭಗುಡಿಯಲ್ಲಿ ಶಿವಲಿಂಗವಿದೆ. ಅದರ ಬಲಭಾಗದಲ್ಲಿ ಗೋಡೆಗೆ ಹೊಂದಿಕೊಂಡು ದೊಡ್ಡದಾದ ತಗ್ಗು ಕಂಡುಬಂದಿದೆ. ಬಹುಶಃ ವಿಗ್ರಹಚೋರರು ವಿಗ್ರಹದ ಪಕ್ಕದಲ್ಲಿ ಸಂಪತ್ತು ಇರಬಹುದೆಂದು ಈ ಕೆಲಸವನ್ನು ಮಾಡಿರಬಹುದು. ಈ ಗರ್ಭಗೃಹ ಇಂದು ಅವಸಾನದ ಅಂಚಿನಲ್ಲಿದೆ. ಇದರ ಬಾಗಿಲು ತೋರಣದ ಭಾಗದಲ್ಲಿ ಸುಂದರವಾದ ಕೆತ್ತನೆ ಇದೆ. ದೇವಾಲಯದ ಕಂಬಗಳು ಕಲ್ಯಾಣ ಚಾಲುಕ್ಯರ ವಾಸ್ತು ಶಿಲ್ಪದ ಅಂಶಗಳನ್ನು ಬಿಂಬಿಸುತ್ತವೆ.
ದೇವಾಲಯದ ಪೂರ್ವ ಮತ್ತು ಪಶ್ಚಿಮದ ಗೋಡೆಗಳು ಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಬೀಳುವ ಹಂತದಲ್ಲಿವೆ. ಗೋಡೆಯ ರಕ್ಷಣೆಗೆ ತಾತ್ಕಾಲಿಕವಾಗಿ ಕಲ್ಲಿನ ತಡೆಗೋಡೆಗಳನ್ನು ಸ್ಥಳೀಯರು ನಿರ್ಮಿಸಿದ್ದಾರೆ. ದೇವಾಲಯದ ಶಿಖರವು ದ್ರಾವಿಡ ಶೈಲಿಯಲ್ಲಿ ಉತ್ಕೃಷ್ಟ ಕುಸುರಿನ ಕೆಲಸದೊಂದಿಗೆ ನಿರ್ಮಿಸಲಾಗಿದೆ. ಇದೂ ಕೂಡ ಶಿಥಿಲಾವಸ್ಥೆಯಲ್ಲಿದೆ. ಸುಂದರವಾದ ಕೆತ್ತನೆಯಿಂದ ಕೂಡಿದ ಶಿಖರದ ಮೇಲೆ ಗಿಡ-ಗಂಟೆಗಳು ಬೆಳೆದು ಬೀಳುವ ಸ್ಥಿತಿಯಲ್ಲಿದೆ. ಶಿಖರದ ತುದಿಯ ಕಲ್ಲು (ಆಮಲಕ) ಕೆಳಗೆ ಬಿದ್ದು ಒಡೆದುಹೋಗಿದೆ. ಈ ದೇವಾಲಯದಲ್ಲಿ ವರ್ಷಕ್ಕೊಮ್ಮೆ ಸಾಂಪ್ರದಾಯಕವಾಗಿ ಜಾತ್ರೆ ನಡೆಯುತ್ತದೆ. ಎನ್ನುವುದು ಸ್ಥಳೀಯರ ಅಭಿಪ್ರಾಯ. ಆದರೆ ಜಾತ್ರೆ ಎಂದರೆ ಕೇವಲ ದೇವರ ಪೂಜೆ ಮಾಡಿ ಕಲ್ಲಿನ ದೇವರಿಗೆ ನೈವೇದ್ಯ ಮಾಡುವುದಲ್ಲ, ಆ ದೇವಾಲಯದ ಸ್ಥಿತಿ-ಗತಿಯನ್ನು ಗಮನಿಸಿ ಅದರ ರಕ್ಷಣೆಗೆ ನಮ್ಮ ಅಳಿಲು ಸೇವೆಯನ್ನು ಸಲ್ಲಿಸುವುದೇ ನಿಜವಾದ ಜಾತ್ರೆ.
ಒಟ್ಟಿನಲ್ಲಿ ಈ ಕೋಡಿ ಬಸವಣ್ಣ ದೇವಾಲಯವು ನಾಗಾವಿ ಗ್ರಾಮದ ಧಾರ್ಮಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿ ಇಂದಿಗೂ ಸ್ಥಳೀಯ ಜನರು ಈ ದೇವಾಲಯದ ಜೊತೆ ಅವಿನಾಭಾವ ಸಂಬಂಧವನ್ನು ಹೊಂದಿದ್ದು, ಊರಿನ ಆರಾಧ್ಯ ದೇವರೆಂದು ಪೂಜಿಸುತ್ತಿದ್ದರು.






No comments:

Post a Comment